Udyoga Parva: Chapter 174

ಉದ್ಯೋಗ ಪರ್ವ: ಅಂಬೋಽಪಾಖ್ಯಾನ ಪರ್ವ

೧೭೪

ಹೋತ್ರವಾಹನ-ಅಂಬಾ ಸಂವಾದ

ತಾಪಸರು ಅಂಬೆಗೆ ತನ್ನ ತಂದೆಯ ಮನೆಗೆ ಹಿಂದಿರುಗಲು ಹಲವಾರು ಕಾರಣಗಳನ್ನಿತ್ತು ಒತ್ತಾಯಿಸಿದರೂ ಅಂಬೆಯು ತಾನು ತಪಸ್ಸನ್ನೇ ತಪಿಸುತ್ತೇನೆ ಎಂದು ಹಠಹಿಡಿದುದು (೧-೧೩). ಅಲ್ಲಿಗೆ ಆಗಮಿಸಿದ್ದ ಅಂಬೆಯ ತಾಯಿಯ ತಂದೆ ರಾಜರ್ಷಿ ಹೋತ್ರವಾಹನನು ಅವಳ ಪರಿಸ್ಥಿತಿಯನ್ನು ತಿಳಿದುಕೊಂಡು ತಂದೆಯಮನೆಗೆ ಹೋಗಬೇಡವೆಂದೂ, ಪರಶುರಾಮನು ಅವಳಿಗೆ ಸಹಾಯಮಾಡುತ್ತಾನೆಂದೂ ಹೇಳಿದುದು (೧೪-೨೬).

05174001 ಭೀಷ್ಮ ಉವಾಚ|

05174001a ತತಸ್ತೇ ತಾಪಸಾಃ ಸರ್ವೇ ಕಾರ್ಯವಂತೋಽಭವಂಸ್ತದಾ|

05174001c ತಾಂ ಕನ್ಯಾಂ ಚಿಂತಯಂತೋ ವೈ ಕಿಂ ಕಾರ್ಯಮಿತಿ ಧರ್ಮಿಣಃ||

ಭೀಷ್ಮನು ಹೇಳಿದನು: “ಆಗ ಆ ಎಲ್ಲ ತಾಪಸರೂ ಆ ಕನ್ಯೆಗೆ ಧರ್ಮವತ್ತಾದ ಯಾವ ಕಾರ್ಯವನ್ನು ಮಾಡಬೇಕೆಂದು ಚಿಂತಿಸುತ್ತಾ ಕಾರ್ಯವಂತರಾದರು.

05174002a ಕೇ ಚಿದಾಹುಃ ಪಿತುರ್ವೇಶ್ಮ ನೀಯತಾಮಿತಿ ತಾಪಸಾಃ|

05174002c ಕೇ ಚಿದಸ್ಮದುಪಾಲಂಭೇ ಮತಿಂ ಚಕ್ರುರ್ದ್ವಿಜೋತ್ತಮಾಃ||

ಕೆಲವು ತಾಪಸರು ಅವಳನ್ನು ತಂದೆಯ ಮನೆಗೆ ಕಳುಹಿಸಬೇಕೆಂದು ಹೇಳಿದರು. ಕೆಲವು ದ್ವಿಜೋತ್ತಮರು ನಮ್ಮನ್ನೇ ದೂರುವ ಮನಸ್ಸುಮಾಡಿದರು.

05174003a ಕೇ ಚಿಚ್ಚಾಲ್ವಪತಿಂ ಗತ್ವಾ ನಿಯೋಜ್ಯಮಿತಿ ಮೇನಿರೇ|

05174003c ನೇತಿ ಕೇ ಚಿದ್ವ್ಯವಸ್ಯಂತಿ ಪ್ರತ್ಯಾಖ್ಯಾತಾ ಹಿ ತೇನ ಸಾ||

ಕೆಲವರು ಶಾಲ್ಪಪತಿಯ ಬಳಿ ಹೋಗಿ ಅವನನ್ನು ಒಪ್ಪಿಸಬೇಕೆಂದು ಅಭಿಪ್ರಾಯಪಟ್ಟರು. ಇನ್ನು ಕೆಲವರು ಅವಳನ್ನು ಅವನು ತ್ಯಜಿಸಿದುದರಿಂದ ಬೇಡ ಎಂದರು.

05174004a ಏವಂ ಗತೇ ಕಿಂ ನು ಶಕ್ಯಂ ಭದ್ರೇ ಕರ್ತುಂ ಮನೀಷಿಭಿಃ|

05174004c ಪುನರೂಚುಶ್ಚ ತೇ ಸರ್ವೇ ತಾಪಸಾಃ ಸಂಶಿತವ್ರತಾಃ||

ಹೀಗೆ ಕೆಲ ಸಮಯವು ಕಳೆಯಲು ಎಲ್ಲ ಸಂಶಿತವ್ರತ ತಾಪಸರೂ ಅವಳಿಗೆ ಪುನಃ ಹೇಳಿದರು: “ಭದ್ರೇ! ಮನೀಷಿಗಳು ಈ ವಿಷಯದಲ್ಲಿ ಏನು ತಾನೇ ಮಾಡಬಲ್ಲರು?

05174005a ಅಲಂ ಪ್ರವ್ರಜಿತೇನೇಹ ಭದ್ರೇ ಶೃಣು ಹಿತಂ ವಚಃ|

05174005c ಇತೋ ಗಚ್ಚಸ್ವ ಭದ್ರಂ ತೇ ಪಿತುರೇವ ನಿವೇಶನಂ||

ಭದ್ರೇ! ಈ ರೀತಿ ಅಲೆದಾಡುವುದನ್ನು ಬಿಡು. ಹಿತವಚನವನ್ನು ಕೇಳು. ನಿನ್ನ ತಂದೆಯ ಮನೆಗೆ ಹೋಗುವುದು ನಿನಗೆ ಒಳ್ಳೆಯದು.

05174006a ಪ್ರತಿಪತ್ಸ್ಯತಿ ರಾಜಾ ಸ ಪಿತಾ ತೇ ಯದನಂತರಂ|

05174006c ತತ್ರ ವತ್ಸ್ಯಸಿ ಕಲ್ಯಾಣಿ ಸುಖಂ ಸರ್ವಗುಣಾನ್ವಿತಾ|

05174006e ನ ಚ ತೇಽನ್ಯಾ ಗತಿರ್ನ್ಯಾಯ್ಯಾ ಭವೇದ್ಭದ್ರೇ ಯಥಾ ಪಿತಾ||

ನಿನ್ನ ತಂದೆ ರಾಜನು ಅನಂತರ ಏನು ಮಾಡಬೇಕೋ ಅದನ್ನು ಮಾಡುತ್ತಾನೆ. ಕಲ್ಯಾಣಿ! ಅಲ್ಲಿ ನೀನು ಸರ್ವ ಗುಣಗಳಿಂದ ಸುತ್ತುವರೆಯಲ್ಪಟ್ಟು ಸುಖದಿಂದ ವಾಸಿಸುವೆ. ಭದ್ರೇ! ತಂದೆಯಂತಹ ಗತಿಯು ನಾರಿಗೆ ಬೇರೆ ಯಾರೂ ಇಲ್ಲ.

05174007a ಪತಿರ್ವಾಪಿ ಗತಿರ್ನಾರ್ಯಾಃ ಪಿತಾ ವಾ ವರವರ್ಣಿನಿ|

05174007c ಗತಿಃ ಪತಿಃ ಸಮಸ್ಥಾಯಾ ವಿಷಮೇ ತು ಪಿತಾ ಗತಿಃ||

ವರವರ್ಣಿನೀ! ನಾರಿಗೆ ಪತಿ ಅಥವ ಪಿತರೇ ಗತಿಯು. ಸುಖದಲ್ಲಿರುವಾಗ ಪತಿಯು ಗತಿಯಾದರೆ ಕಷ್ಟದಲ್ಲಿರುವಾಗ ಪಿತನು ಗತಿ.

05174008a ಪ್ರವ್ರಜ್ಯಾ ಹಿ ಸುದುಃಖೇಯಂ ಸುಕುಮಾರ್ಯಾ ವಿಶೇಷತಃ|

05174008c ರಾಜಪುತ್ರ್ಯಾಃ ಪ್ರಕೃತ್ಯಾ ಚ ಕುಮಾರ್ಯಾಸ್ತವ ಭಾಮಿನಿ||

ವಿಶೇಷವಾಗಿ ಸುಕುಮಾರಿಯಾಗಿರುವ ನಿನಗೆ ಪರಿವ್ರಾಜಕತ್ವವು ತುಂಬಾ ದುಃಖಕರವಾದುದು. ಭಾಮಿನಿ! ರಾಜಪುತ್ರಿಯಾಗಿರುವ ನೀನು ಪ್ರಕೃತಿಯಲ್ಲಿಯೇ ಕುಮಾರಿಯಾಗಿರುವೆ.

05174009a ಭದ್ರೇ ದೋಷಾ ಹಿ ವಿದ್ಯಂತೇ ಬಹವೋ ವರವರ್ಣಿನಿ|

05174009c ಆಶ್ರಮೇ ವೈ ವಸಂತ್ಯಾಸ್ತೇ ನ ಭವೇಯುಃ ಪಿತುರ್ಗೃಹೇ||

ಭದ್ರೇ! ವರವರ್ಣಿನೀ! ಆಶ್ರಮವಾಸದಲ್ಲಿ ಬಹಳ ದೋಷಗಳಿವೆಯೆಂದು ತಿಳಿದಿದ್ದೇವೆ. ಇವ್ಯಾವುದೂ ನಿನ್ನ ತಂದೆಯ ಮನೆಯಲ್ಲಿ ಇರುವುದಿಲ್ಲ.”

05174010a ತತಸ್ತು ತೇಽಬ್ರುವನ್ವಾಕ್ಯಂ ಬ್ರಾಹ್ಮಣಾಸ್ತಾಂ ತಪಸ್ವಿನೀಂ|

05174010c ತ್ವಾಮಿಹೈಕಾಕಿನೀಂ ದೃಷ್ಟ್ವಾ ನಿರ್ಜನೇ ಗಹನೇ ವನೇ|

05174010e ಪ್ರಾರ್ಥಯಿಷ್ಯಂತಿ ರಾಜೇಂದ್ರಾಸ್ತಸ್ಮಾನ್ಮೈವಂ ಮನಃ ಕೃಥಾಃ||

ಆಗ ಆ ಬ್ರಾಹ್ಮಣರು ತಪಸ್ವಿನಿಗೆ ಈ ಮಾತನ್ನೂ ಹೇಳಿದರು: “ನಿರ್ಜನವಾದ ಗಹನ ವನದಲ್ಲಿ ಏಕಾಂಗಿಯಾರುವ ನಿನ್ನನ್ನು ನೋಡಿ ರಾಜೇಂದ್ರರು ನಿನ್ನನ್ನು ಬಯಸುತ್ತಾರೆ. ಆದುದರಿಂದ ಆ ಮಾರ್ಗದಲ್ಲಿ ಹೋಗಲು ಮನಸ್ಸು ಮಾಡಬೇಡ!”

05174011 ಅಂಬೋವಾಚ|

05174011a ನ ಶಕ್ಯಂ ಕಾಶಿನಗರೀಂ ಪುನರ್ಗಂತುಂ ಪಿತುರ್ಗೃಹಾನ್|

05174011c ಅವಜ್ಞಾತಾ ಭವಿಷ್ಯಾಮಿ ಬಾಂಧವಾನಾಂ ನ ಸಂಶಯಃ||

ಅಂಬೆಯು ಹೇಳಿದಳು: “ಕಾಶೀನಗರದಲ್ಲಿ ತಂದೆಯ ಮನೆಗೆ ಪುನಃ ಹೋಗಲು ಶಕ್ಯವಿಲ್ಲ. ಬಾಂಧವರಿಗೆ ನಾನು ಗೊತ್ತಿಲ್ಲದವಳಾಗಿಬಿಟ್ಟಿದ್ದೇನೆ ಎನ್ನುವುದರಲ್ಲಿ ಸಂಶಯವಿಲ್ಲ.

05174012a ಉಷಿತಾ ಹ್ಯನ್ಯಥಾ ಬಾಲ್ಯೇ ಪಿತುರ್ವೇಶ್ಮನಿ ತಾಪಸಾಃ|

05174012c ನಾಹಂ ಗಮಿಷ್ಯೇ ಭದ್ರಂ ವಸ್ತತ್ರ ಯತ್ರ ಪಿತಾ ಮಮ|

05174012e ತಪಸ್ತಪ್ತುಮಭೀಪ್ಸಾಮಿ ತಾಪಸೈಃ ಪರಿಪಾಲಿತಾ||

ತಾಪಸರೇ! ಏಕೆಂದರೆ ನಾನು ಬಾಲ್ಯದಲ್ಲಿ ತಂದೆಯ ಮನೆಯಲ್ಲಿ ವಾಸಿಸಿದ್ದುದು ಬೇರೆಯಾಗಿತ್ತು. ನನ್ನ ತಂದೆಯಿರುವಲ್ಲಿಗೆ ಹೋಗಿ ಅಲ್ಲಿ ವಾಸಿಸುವುದಿಲ್ಲ. ನಿಮಗೆ ಮಂಗಳವಾಗಲಿ. ತಾಪಸರಿಂದ ಪರಿಪಾಲಿತಳಾಗಿ ತಪಸ್ಸನ್ನು ತಪಿಸಲು ಬಯಸುತ್ತೇನೆ.

05174013a ಯಥಾ ಪರೇಽಪಿ ಮೇ ಲೋಕೇ ನ ಸ್ಯಾದೇವಂ ಮಹಾತ್ಯಯಃ|

05174013c ದೌರ್ಭಾಗ್ಯಂ ಬ್ರಾಹ್ಮಣಶ್ರೇಷ್ಠಾಸ್ತಸ್ಮಾತ್ತಪ್ಸ್ಯಾಮ್ಯಹಂ ತಪಃ||

ಬ್ರಾಹ್ಮಣಶ್ರೇಷ್ಠರೇ! ಇದರ ನಂತರದ ಲೋಕದಲ್ಲಿ ನನಗೆ ಈ ರೀತಿಯ ದೌರ್ಭಾಗ್ಯವಾಗಲೀ ಆಪತ್ತಾಗಲೀ ಬರದಿರಲೆಂದು ನಾನು ತಪಸ್ಸನ್ನು ತಪಿಸುತ್ತೇನೆ.””

05174014 ಭೀಷ್ಮ ಉವಾಚ|

05174014a ಇತ್ಯೇವಂ ತೇಷು ವಿಪ್ರೇಷು ಚಿಂತಯತ್ಸು ತಥಾ ತಥಾ|

05174014c ರಾಜರ್ಷಿಸ್ತದ್ವನಂ ಪ್ರಾಪ್ತಸ್ತಪಸ್ವೀ ಹೋತ್ರವಾಹನಃ||

ಭೀಷ್ಮನು ಹೇಳಿದನು: “ಹೀಗೆ ಆ ವಿಪ್ರರು ಅದು ಇದು ಎಂದು ಯೋಚಿಸುತ್ತಿರುವಾಗ ಆ ವನಕ್ಕೆ ರಾಜರ್ಷಿ ತಪಸ್ವೀ ಹೋತ್ರವಾಹನನು ಆಗಮಿಸಿದನು.

05174015a ತತಸ್ತೇ ತಾಪಸಾಃ ಸರ್ವೇ ಪೂಜಯಂತಿ ಸ್ಮ ತಂ ನೃಪಂ|

05174015c ಪೂಜಾಭಿಃ ಸ್ವಾಗತಾದ್ಯಾಭಿರಾಸನೇನೋದಕೇನ ಚ||

ಆಗ ತಾಪಸರೆಲ್ಲರೂ ಆ ನೃಪನನ್ನು ಪೂಜಿಸಿದರು. ಪೂಜೆ, ಆಸನ, ಉದಕಗಳನ್ನಿತ್ತು ಸ್ವಾಗತಿಸಿದರು.

05174016a ತಸ್ಯೋಪವಿಷ್ಟಸ್ಯ ತತೋ ವಿಶ್ರಾಂತಸ್ಯೋಪಶೃಣ್ವತಃ|

05174016c ಪುನರೇವ ಕಥಾಂ ಚಕ್ರುಃ ಕನ್ಯಾಂ ಪ್ರತಿ ವನೌಕಸಃ||

ಅವನು ಕುಳಿತುಕೊಂಡು ವಿಶ್ರಾಂತಿಯನ್ನು ಪಡೆದು ಪರಸ್ಪರರನ್ನು ಕೇಳಿದ ನಂತರ ವನೌಕಸರು ಮಾತುಕಥೆಯನ್ನು ಪುನಃ ಕನ್ಯೆಯ ಕಡೆ ನಡೆಸಿದರು.

05174017a ಅಂಬಾಯಾಸ್ತಾಂ ಕಥಾಂ ಶ್ರುತ್ವಾ ಕಾಶಿರಾಜ್ಞಾಶ್ಚ ಭಾರತ|

05174017c ಸ ವೇಪಮಾನ ಉತ್ಥಾಯ ಮಾತುರಸ್ಯಾಃ ಪಿತಾ ತದಾ|

05174017e ತಾಂ ಕನ್ಯಾಮಂಕಮಾರೋಪ್ಯ ಪರ್ಯಾಶ್ವಾಸಯತ ಪ್ರಭೋ||

ಭಾರತ! ಪ್ರಭೋ! ಕಾಶೀರಾಜನ ಅಂಬೆಯ ಆ ಕಥೆಯನ್ನು ಕೇಳಿ ಅವಳ ತಾಯಿಯ ತಂದೆಯಾದ ಅವನು ನಡುಗುತ್ತಾ ಮೇಲೆದ್ದು, ಕನ್ಯೆಯನ್ನು ತೊಡೆಯ ಮೇಲೇರಿಸಿಕೊಂಡು ಸಮಾಧಾನಗೊಳಿಸಿದನು.

05174018a ಸ ತಾಮಪೃಚ್ಚತ್ಕಾರ್ತ್ಸ್ನ್ಯೆನ ವ್ಯಸನೋತ್ಪತ್ತಿಮಾದಿತಃ|

05174018c ಸಾ ಚ ತಸ್ಮೈ ಯಥಾವೃತ್ತಂ ವಿಸ್ತರೇಣ ನ್ಯವೇದಯತ್||

ಅವನು ಅವಳ ವ್ಯಸನದ ಮೂಲವನ್ನು ಸಂಪೂರ್ಣವಾಗಿ ಕೇಳಲು ಅವಳೂ ಕೂಡ ಅವನಿಗೆ ನಡೆದುದೆಲ್ಲವನ್ನೂ ವಿಸ್ತಾರದಿಂದ ನಿವೇದಿಸಿದಳು.

05174019a ತತಃ ಸ ರಾಜರ್ಷಿರಭೂದ್ದುಃಖಶೋಕಸಮನ್ವಿತಃ|

05174019c ಕಾರ್ಯಂ ಚ ಪ್ರತಿಪೇದೇ ತನ್ಮನಸಾ ಸುಮಹಾತಪಾಃ||

ಆಗ ಆ ರಾಜರ್ಷಿಯು ತುಂಬಾ ದುಃಖಶೋಕಸಮನ್ವಿತನಾದನು. ಏನು ಮಾಡಬೇಕೆಂದು ಆ ಸುಮಹಾತಪಸ್ವಿಯು ಯೋಚಿಸಿದನು.

05174020a ಅಬ್ರವೀದ್ವೇಪಮಾನಶ್ಚ ಕನ್ಯಾಮಾರ್ತಾಂ ಸುದುಃಖಿತಃ|

05174020c ಮಾ ಗಾಃ ಪಿತೃಗೃಹಂ ಭದ್ರೇ ಮಾತುಸ್ತೇ ಜನಕೋ ಹ್ಯಹಂ||

ಕಂಪಿಸುತ್ತಾ ಅವನು ಆರ್ತಳೂ ಸುದುಃಖಿತಳೂ ಆಗಿದ್ದ ಕನ್ಯೆಗೆ ಹೇಳಿದನು: “ಭದ್ರೇ! ತಂದೆಯ ಮನೆಗೆ ಹೋಗಬೇಡ! ನಿನ್ನ ತಾಯಿಯ ತಂದೆ ನಾನು.

05174021a ದುಃಖಂ ಚೇತ್ಸ್ಯಾಮಿ ತೇಽಹಂ ವೈ ಮಯಿ ವರ್ತಸ್ವ ಪುತ್ರಿಕೇ|

05174021c ಪರ್ಯಾಪ್ತಂ ತೇ ಮನಃ ಪುತ್ರಿ ಯದೇವಂ ಪರಿಶುಷ್ಯಸಿ||

ನಾನು ನಿನ್ನ ದುಃಖವನ್ನು ಕಳೆಯುತ್ತೇನೆ. ಮಗಳೇ! ನನ್ನಲ್ಲಿ ವಿಶ್ವಾಸವಿಡು. ನಿನ್ನ ಮನಸ್ಸನ್ನು ಒಣಗಿಸುತ್ತಿರುವ ಬಯಕೆಯನ್ನು ನಾನು ಪೂರೈಸಿಕೊಡುತ್ತೇನೆ.

05174022a ಗಚ್ಚ ಮದ್ವಚನಾದ್ರಾಮಂ ಜಾಮದಗ್ನ್ಯಂ ತಪಸ್ವಿನಂ|

05174022c ರಾಮಸ್ತವ ಮಹದ್ದುಃಖಂ ಶೋಕಂ ಚಾಪನಯಿಷ್ಯತಿ|

05174022e ಹನಿಷ್ಯತಿ ರಣೇ ಭೀಷ್ಮಂ ನ ಕರಿಷ್ಯತಿ ಚೇದ್ವಚಃ||

ನನ್ನ ಮಾತಿನಂತೆ ಜಾಮದಗ್ನಿ ತಪಸ್ವಿ ರಾಮನಲ್ಲಿಗೆ ಹೋಗು. ರಾಮನು ನಿನ್ನ ಮಹಾ ದುಃಖ-ಶೋಕಗಳನ್ನು ನಿವಾರಿಸುತ್ತಾನೆ. ಅವನ ಮಾತಿನಂತೆ ನಡೆದುಕೊಳ್ಳದೇ ಇದ್ದರೆ ಭೀಷ್ಮನನ್ನು ಅವನು ರಣದಲ್ಲಿ ಕೊಲ್ಲುತ್ತಾನೆ.

05174023a ತಂ ಗಚ್ಚ ಭಾರ್ಗವಶ್ರೇಷ್ಠಂ ಕಾಲಾಗ್ನಿಸಮತೇಜಸಂ|

05174023c ಪ್ರತಿಷ್ಠಾಪಯಿತಾ ಸ ತ್ವಾಂ ಸಮೇ ಪಥಿ ಮಹಾತಪಾಃ||

ಕಾಲಾಗ್ನಿಸಮನಾದ ತೇಜಸ್ಸುಳ್ಳ ಆ ಭಾರ್ಗವಶ್ರೇಷ್ಠನಲ್ಲಿಗೆ ಹೋಗು. ಆ ಮಹಾತಪಸ್ವಿಯು ನಿನ್ನನ್ನು ಸಮ ಮಾರ್ಗದಲ್ಲಿ ನೆಲೆಸುತ್ತಾನೆ.”

05174024a ತತಸ್ತು ಸಸ್ವರಂ ಬಾಷ್ಪಮುತ್ಸೃಜಂತೀ ಪುನಃ ಪುನಃ|

05174024c ಅಬ್ರವೀತ್ಪಿತರಂ ಮಾತುಃ ಸಾ ತದಾ ಹೋತ್ರವಾಹನಂ||

ಆಗ ಒಂದೇಸಮನೆ ಕಣ್ಣೀರು ಸುರಿಸುತ್ತಿದ್ದ ಅವಳು ತನ್ನ ತಾಯಿಯ ತಂದೆ ಹೋತ್ರವಾನನನಿಗೆ ಪುನಃ ಪುನಃ ಹೇಳಿದಳು:

05174025a ಅಭಿವಾದಯಿತ್ವಾ ಶಿರಸಾ ಗಮಿಷ್ಯೇ ತವ ಶಾಸನಾತ್|

05174025c ಅಪಿ ನಾಮಾದ್ಯ ಪಶ್ಯೇಯಮಾರ್ಯಂ ತಂ ಲೋಕವಿಶ್ರುತಂ||

“ತಲೆಬಾಗಿ ನಮಸ್ಕರಿಸಿ ನಿನ್ನ ಶಾಸನದಂತೆ ಹೋಗುತ್ತೇನೆ. ಆದರೆ ಲೋಕವಿಶ್ರುತನಾದ ಆ ಅರ್ಯನನ್ನು ಇಂದು ನಾನು ಕಾಣಬಲ್ಲೆನೇ?

05174026a ಕಥಂ ಚ ತೀವ್ರಂ ದುಃಖಂ ಮೇ ಹನಿಷ್ಯತಿ ಸ ಭಾರ್ಗವಃ|

05174026c ಏತದಿಚ್ಚಾಮ್ಯಹಂ ಶ್ರೋತುಮಥ ಯಾಸ್ಯಾಮಿ ತತ್ರ ವೈ||

ಭಾರ್ಗವನು ಹೇಗೆ ನನ್ನ ಈ ತೀವ್ರ ದುಃಖವನ್ನು ಕೊನೆಗೊಳಿಸಬಲ್ಲನು? ಇದನ್ನು ಕೇಳಲು ಬಯಸುತ್ತೇನೆ. ನಂತರ ಅಲ್ಲಿಗೆ ಹೋಗುತ್ತೇನೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಅಂಬೋಽಪಾಖ್ಯಾನ ಪರ್ವಣಿ ಹೋತ್ರವಾಹನಾಂಬಾಸಂವಾದೇ ಚತುಃಸಪ್ತತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಅಂಬೋಽಪಾಖ್ಯಾನ ಪರ್ವದಲ್ಲಿ ಹೋತ್ರವಾಹನಾಂಬಾಸಂವಾದದಲ್ಲಿ ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.

Image result for flowers against white background"

Comments are closed.