Udyoga Parva: Chapter 161

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ರಥಾಥಿರಥಸಂಖ್ಯ ಪರ್ವ

೧೬೧

ಯುಧಿಷ್ಠಿರನು ಸೇನಾನಾಯಕತ್ವಗಳನ್ನು ನೀಡಿದುದು

ಯುಧಿಷ್ಠಿರನು ಸೇನಾ ನಾಯಕತ್ವವನ್ನು ಧೃಷ್ಟದ್ಯುಮ್ನನಿಗೆ ನೀಡಿದುದು (೧-೪). ತನ್ನ ಸೇನೆಯಲ್ಲಿರುವ ಒಬ್ಬೊಬ್ಬ ರಥಿಗಳಿಗೆ ಕೌರವ ಸೇನೆಯ ರಥಿಗಳನ್ನು ಪ್ರತ್ಯೇಕ ಪ್ರತ್ಯೇಕ ಗುರಿಯಾಗಿ ಗುರುತಿಸಿಕೊಳ್ಳುವುದು (೫-೧೨).

05161001 ಸಂಜಯ ಉವಾಚ|

05161001a ಉಲೂಕಸ್ಯ ವಚಃ ಶ್ರುತ್ವಾ ಕುಂತೀಪುತ್ರೋ ಯುಧಿಷ್ಠಿರಃ|

05161001c ಸೇನಾಂ ನಿರ್ಯಾಪಯಾಮಾಸ ಧೃಷ್ಟದ್ಯುಮ್ನಪುರೋಗಮಾಂ||

ಸಂಜಯನು ಹೇಳಿದನು: “ಉಲೂಕನ ಮಾತನ್ನು ಕೇಳಿ ಕುಂತೀಪುತ್ರ ಯುಧಿಷ್ಠಿರನು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಸೇನೆಯನ್ನು ಹೊರಡಿಸಿದನು.

05161002a ಪದಾತಿನೀಂ ನಾಗವತೀಂ ರಥಿನೀಮಶ್ವವೃಂದಿನೀಂ|

05161002c ಚತುರ್ವಿಧಬಲಾಂ ಭೀಮಾಮಕಂಪ್ಯಾಂ ಪೃಥಿವೀಮಿವ||

ಪದಾತಿಗಳಿಂದ, ಆನೆಗಳಿಂದ, ರಥಗಳಿಂದ, ಅಶ್ವವೃಂದಗಳಿಂದ ಕೂಡಿದ ಚತುರ್ವಿಧ ಬಲವು ಪೃಥ್ವಿಯನ್ನೇ ನಡುಗಿಸುವಂತೆ ಭಯಂಕರವಾಗಿತ್ತು.

05161003a ಭೀಮಸೇನಾದಿಭಿರ್ಗುಪ್ತಾಂ ಸಾರ್ಜುನೈಶ್ಚ ಮಹಾರಥೈಃ|

05161003c ಧೃಷ್ಟದ್ಯುಮ್ನವಶಾಂ ದುರ್ಗಾಂ ಸಾಗರಸ್ತಿಮಿತೋಪಮಾಂ||

ಭೀಮಸೇನನಿಂದ, ಅರ್ಜುನನಿಂದ ಮತ್ತು ಮಹಾರಥಿಗಳಿಂದ ರಕ್ಷಿತವಾದ ಧೃಷ್ಟದ್ಯುಮ್ನನ ವಶದಲ್ಲಿದ್ದ ಆ ಸೇನೆಯು ತಿಮಿಂಗಿಲಗಳಿಂದ ತುಂಬಿದ ಸಾಗರದಂತೆ ಅಸಾಧ್ಯವಾಗಿತ್ತು.

05161004a ತಸ್ಯಾಸ್ತ್ವಗ್ರೇ ಮಹೇಷ್ವಾಸಃ ಪಾಂಚಾಲ್ಯೋ ಯುದ್ಧದುರ್ಮದಃ|

05161004c ದ್ರೋಣಪ್ರೇಪ್ಸುರನೀಕಾನಿ ಧೃಷ್ಟದ್ಯುಮ್ನಃ ಪ್ರಕರ್ಷತಿ||

ಅದರ ಮುಂದೆ ಮಹೇಷ್ವಾಸ, ಯುದ್ಧದುರ್ಮದ, ದ್ರೋಣನನ್ನು ಅರಸುತ್ತಿರುವ ಪಾಂಚಾಲ ಧೃಷ್ಟದ್ಯುಮ್ನನು ಸೇನೆಯನ್ನು ಕರೆದುಕೊಂಡು ಹೋಗುತ್ತಿದ್ದನು.

05161005a ಯಥಾಬಲಂ ಯಥೋತ್ಸಾಹಂ ರಥಿನಃ ಸಮುಪಾದಿಶತ್|

05161005c ಅರ್ಜುನಂ ಸೂತಪುತ್ರಾಯ ಭೀಮಂ ದುರ್ಯೋಧನಾಯ ಚ||

05161006a ಅಶ್ವತ್ಥಾಮ್ನೇ ಚ ನಕುಲಂ ಶೈಬ್ಯಂ ಚ ಕೃತವರ್ಮಣೇ|

05161006c ಸೈಂಧವಾಯ ಚ ವಾರ್ಷ್ಣೇಯಂ ಯುಯುಧಾನಮುಪಾದಿಶತ್||

ಯಥಾಬಲವಾಗಿ, ಉತ್ಸಾಹವಿದ್ದಂತೆ ರಥಿಗಳನ್ನು ಸೂಚಿಸಲಾಗಿತ್ತು: ಸೂತಪುತ್ರನಿಗೆ ಅರ್ಜುನ, ದುರ್ಯೋಧನನಿಗೆ ಭೀಮ, ಅಶ್ವತ್ಥಾಮನಿಗೆ ನಕುಲ, ಕೃತವರ್ಮನಿಗೆ ಶೈಬ್ಯ, ಸೈಂಧವನಿಗೆ ವಾರ್ಷ್ಣೇಯ ಯುಯುಧಾನನನ್ನು ಇಡಲಾಯಿತು.

05161007a ಶಿಖಂಡಿನಂ ಚ ಭೀಷ್ಮಾಯ ಪ್ರಮುಖೇ ಸಮಕಲ್ಪಯತ್|

05161007c ಸಹದೇವಂ ಶಕುನಯೇ ಚೇಕಿತಾನಂ ಶಲಾಯ ಚ||

05161008a ಧೃಷ್ಟಕೇತುಂ ಚ ಶಲ್ಯಾಯ ಗೌತಮಾಯೋತ್ತಮೌಜಸಂ|

05161008c ದ್ರೌಪದೇಯಾಂಶ್ಚ ಪಂಚಭ್ಯಸ್ತ್ರಿಗರ್ತೇಭ್ಯಃ ಸಮಾದಿಶತ್||

ಶಿಖಂಡಿಯನ್ನು ಪ್ರಮುಖವಾಗಿ ಭೀಷ್ಮನಿಗೆ, ಸಹದೇವನನ್ನು ಶಕುನಿಗೆ, ಚೇಕಿತಾನನನ್ನು ಶಲನಿಗೆ, ಧೃಷ್ಟಕೇತುವನ್ನು ಶಲ್ಯನಿಗೆ, ಗೌತಮನಿಗೆ ಉತ್ತಮೌಜಸನನ್ನು, ಮತ್ತು ಐವರು ದ್ರೌಪದೇಯರನ್ನು ತ್ರಿಗರ್ತರಿಗೆ ಇಡಲಾಯಿತು.

05161009a ವೃಷಸೇನಾಯ ಸೌಭದ್ರಂ ಶೇಷಾಣಾಂ ಚ ಮಹೀಕ್ಷಿತಾಂ|

05161009c ಸಮರ್ಥಂ ತಂ ಹಿ ಮೇನೇ ವೈ ಪಾರ್ಥಾದಭ್ಯಧಿಕಂ ರಣೇ||

ಸೌಭದ್ರನನ್ನು ವೃಷಸೇನನಿಗೆ ಮತ್ತು ಉಳಿದ ಮಹೀಕ್ಷಿತರಿಗೆ ಇರಿಸಲಾಯಿತು. ಏಕೆಂದರೆ ಅವನನ್ನು ಪಾರ್ಥನಿಗಿಂತಲೂ ಸಮರ್ಥನೆಂದು ತಿಳಿಯಲಾಗಿತ್ತು.

05161010a ಏವಂ ವಿಭಜ್ಯ ಯೋಧಾಂಸ್ತಾನ್ಪೃಥಕ್ಚ ಸಹ ಚೈವ ಹ|

05161010c ಜ್ವಾಲಾವರ್ಣೋ ಮಹೇಷ್ವಾಸೋ ದ್ರೋಣಮಂಶಮಕಲ್ಪಯತ್||

ಈ ರೀತಿ ಯೋಧರನ್ನು ಪ್ರತ್ಯೇಕವಾಗಿ ಅಥವಾ ಒಟ್ಟಿಗೆ ವಿಭಜಿಸಿ ಮಹೇಷ್ವಾಸ ಜ್ವಾಲವರ್ಣಿಯು ದ್ರೋಣನನ್ನು ತನ್ನ ಪಾಲಿಗೆ ಇರಿಸಿಕೊಂಡನು.

05161011a ಧೃಷ್ಟದ್ಯುಮ್ನೋ ಮಹೇಷ್ವಾಸಃ ಸೇನಾಪತಿಪತಿಸ್ತತಃ|

05161011c ವಿಧಿವದ್ವ್ಯೂಹ್ಯ ಮೇಧಾವೀ ಯುದ್ಧಾಯ ಧೃತಮಾನಸಃ||

05161012a ಯಥಾದಿಷ್ಟಾನ್ಯನೀಕಾನಿ ಪಾಂಡವಾನಾಮಯೋಜಯತ್|

05161012c ಜಯಾಯ ಪಾಂಡುಪುತ್ರಾಣಾಂ ಯತ್ತಸ್ತಸ್ಥೌ ರಣಾಜಿರೇ||

ಆಗ ಮಹೇಷ್ವಾಸ ಸೇನಾಪತಿ ಮೇಧಾವೀ ಧೃಷ್ಟದ್ಯುಮ್ನನು ವಿಧಿವತ್ತಾಗಿ ವ್ಯೂಹವನ್ನು ರಚಿಸಿ ಯುದ್ಧಕ್ಕೆ ಧೃತಮನಸ್ಕನಾಗಿ ಯಥಾವತ್ತಾಗಿ ಪಾಂಡವರ ಸೇನೆಯನ್ನು ಆಯೋಜಿಸಿ ಪಾಂಡುಪುತ್ರರ ಜಯಕ್ಕಾಗಿ ರಣವನ್ನು ಸಿದ್ಧಗೊಳಿಸಿ ನಿಂತನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ರಥಾಥಿರಥಸಂಖ್ಯಾನ ಪರ್ವಣಿ ಸೇನಾಪತಿನಿಯೋಗೇ ಏಕಷಷ್ಟ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ರಥಾಥಿರಥಸಂಖ್ಯಾನ ಪರ್ವದಲ್ಲಿ ಸೇನಾಪತಿನಿಯೋಗದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.

Image result for indian motifs

Comments are closed.