Udyoga Parva: Chapter 16

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೬

ಬೃಹಸ್ಪತಿಯು ಅಗ್ನಿಯನ್ನು ಸ್ತುತಿಸಲು (೧-೯), ಅಗ್ನಿಯು ಇಂದ್ರನ ಇರುವನ್ನು ಬೃಹಸ್ಪತಿಗೆ ಸೂಚಿಸುವುದು (೧೦-೧೨). ಇಂದ್ರನಿದ್ದಲ್ಲಿಗೆ ಹೋಗಿ ಬೃಹಸ್ಪತಿಯು ಅವನಿಗೆ ನಹುಷನ ಕುರಿತು ಸಂಪೂರ್ಣವಾಗಿ ತಿಳಿಸಿದುದು (೧೩-೨೬). ಕುಬೇರ, ಯಮ, ಸೋಮ ಮತ್ತು ವರುಣರು ಇಂದ್ರನನ್ನು ಭೇಟಿಯಾದುದು (೨೭-೩೪).

05016001 ಬೃಹಸ್ಪತಿರುವಾಚ|

05016001a ತ್ವಮಗ್ನೇ ಸರ್ವದೇವಾನಾಂ ಮುಖಂ ತ್ವಮಸಿ ಹವ್ಯವಾಟ್|

05016001c ತ್ವಮಂತಃ ಸರ್ವಭೂತಾನಾಂ ಗೂಢಶ್ಚರಸಿ ಸಾಕ್ಷಿವತ್||

ಬೃಹಸ್ಪತಿಯು ಹೇಳಿದನು: “ಅಗ್ನೇ! ನೀನು ಎಲ್ಲ ದೇವತೆಗಳ ಬಾಯಿ! ಹವ್ಯಗಳನ್ನು ಕೊಂಡೊಯ್ಯುವವನು. ನೀನು ಸರ್ವಭೂತಗಳ ಅಂತ್ಯ. ಸಾಕ್ಷಿಯಾಗಿ ಗೂಢವಾಗಿ ಸಂಚರಿಸುತ್ತೀಯೆ.

05016002a ತ್ವಾಮಾಹುರೇಕಂ ಕವಯಸ್ತ್ವಾಮಾಹುಸ್ತ್ರಿವಿಧಂ ಪುನಃ|

05016002c ತ್ವಯಾ ತ್ಯಕ್ತಂ ಜಗಚ್ಚೇದಂ ಸದ್ಯೋ ನಶ್ಯೇದ್ಧುತಾಶನ||

ಕವಿಗಳು ನೀನು ಒಬ್ಬನೇ ಎಂದು ಮತ್ತು ಮೂರು ವಿಧಗಳವನೆಂದೂ ಹೇಳುತ್ತಾರೆ. ಹುತಾಶನ! ನೀನು ಹೊರಟುಹೋದರೆ ಈ ಜಗತ್ತು ಸದ್ಯದಲ್ಲಿಯೇ ನಾಶವಾಗುತ್ತದೆ.

05016003a ಕೃತ್ವಾ ತುಭ್ಯಂ ನಮೋ ವಿಪ್ರಾಃ ಸ್ವಕರ್ಮವಿಜಿತಾಂ ಗತಿಂ|

05016003c ಗಚ್ಚಂತಿ ಸಹ ಪತ್ನೀಭಿಃ ಸುತೈರಪಿ ಚ ಶಾಶ್ವತೀಂ||

ನಿನ್ನನ್ನು ನಮಸ್ಕರಿಸಿ ವಿಪ್ರರು ಸ್ವಕರ್ಮಗಳಿಂದ ಗೆದ್ದ ಶಾಶ್ವತ ಗತಿಗಳಿಗೆ ಪತ್ನಿ ಸುತರೊಂದಿಗೆ ಹೋಗುತ್ತಾರೆ.

05016004a ತ್ವಮೇವಾಗ್ನೇ ಹವ್ಯವಾಹಸ್ತ್ವಮೇವ ಪರಮಂ ಹವಿಃ|

05016004c ಯಜಂತಿ ಸತ್ರೈಸ್ತ್ವಾಮೇವ ಯಜ್ಞೈಶ್ಚ ಪರಮಾಧ್ವರೇ||

ಅಗ್ನೇ! ನೀನೇ ಹವ್ಯವಾಹನ! ನೀನೇ ಪರಮ ಹವಿಸ್ಸು. ಸತ್ರಗಳಲ್ಲಿ ನಿನ್ನನ್ನೇ ಯಜಿಸುತ್ತಾರೆ. ನೀನೇ ಯಜ್ಞ ಮತ್ತು ಪರಮ ಅಧ್ವರ.

05016005a ಸೃಷ್ಟ್ವಾ ಲೋಕಾಂಸ್ತ್ರೀನಿಮಾನ್ ಹವ್ಯವಾಹ|

        ಪ್ರಾಪ್ತೇ ಕಾಲೇ ಪಚಸಿ ಪುನಃ ಸಮಿದ್ಧಃ|

05016005c ಸರ್ವಸ್ಯಾಸ್ಯ ಭುವನಸ್ಯ ಪ್ರಸೂತಿಸ್|

        ತ್ವಮೇವಾಗ್ನೇ ಭವಸಿ ಪುನಃ ಪ್ರತಿಷ್ಠಾ||

ಹವ್ಯವಾಹ! ಈ ಮೂರು ಲೋಕಗಳನ್ನು ಸೃಷ್ಟಿಸಿ ಕಾಲವು ಪ್ರಾಪ್ತವಾದಾಗ ಪುನಃ ಇದನ್ನು ಸಮಿದ್ಧವನ್ನಾಗಿ ಜೀರ್ಣಿಸಿಕೊಳ್ಳುತ್ತೀಯೆ. ಈ ಸರ್ವ ಭುವನಗಳು ನಿನ್ನಿಂದ ಹುಟ್ಟಿವೆ. ಅಗ್ನೇ! ನೀನೇ ಇವುಗಳ ಅಂತ್ಯ.

05016006a ತ್ವಾಮಗ್ನೇ ಜಲದಾನಾಹುರ್ವಿದ್ಯುತಶ್ಚ ತ್ವಮೇವ ಹಿ|

05016006c ದಹಂತಿ ಸರ್ವಭೂತಾನಿ ತ್ವತ್ತೋ ನಿಷ್ಕ್ರಮ್ಯ ಹಾಯನಾಃ||

ಅಗ್ನೇ! ನಿನ್ನನ್ನು ಮೋಡವೆಂದೂ ಕರೆಯುತ್ತಾರೆ. ವಿದ್ಯುತ್ತೂ ನೀನೇ. ನಿನ್ನಿಂದ ಹೊರಡುವ ಜ್ವಾಲೆಗಳಿಂದ ಸರ್ವಭೂತಗಳನ್ನು ಸುಡುತ್ತೀಯೆ.

05016007a ತ್ವಯ್ಯಾಪೋ ನಿಹಿತಾಃ ಸರ್ವಾಸ್ತ್ವಯಿ ಸರ್ವಮಿದಂ ಜಗತ್|

05016007c ನ ತೇಽಸ್ತ್ಯವಿದಿತಂ ಕಿಂ ಚಿತ್ತ್ರಿಷು ಲೋಕೇಷು ಪಾವಕ||

ನೀರು ನಿನ್ನಲ್ಲಿಯೇ ತುಂಬಿಕೊಂಡಿದೆ. ಈ ಜಗತ್ತೆಲ್ಲವೂ ನಿನ್ನನ್ನೇ ಅವಲಂಬಿಸಿದೆ. ಪಾವಕ! ಮೂರು ಲೋಕಗಳಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ.

05016008a ಸ್ವಯೋನಿಂ ಭಜತೇ ಸರ್ವೋ ವಿಶಸ್ವಾಪೋಽವಿಶಂಕಿತಃ|

05016008c ಅಹಂ ತ್ವಾಂ ವರ್ಧಯಿಷ್ಯಾಮಿ ಬ್ರಾಹ್ಮೈರ್ಮಂತ್ರೈಃ ಸನಾತನೈಃ||

ತನ್ನಲ್ಲಿ ಹುಟ್ಟಿದವುಗಳನ್ನು ಸರ್ವವೂ ಪ್ರೀತಿಸುತ್ತವೆ. ನೀರನ್ನು ಪ್ರವೇಶಿಸು. ಶಂಕಿಸಬೇಡ! ಸನಾತನ ಬ್ರಾಹ್ಮೀ ಮಂತ್ರಗಳಿಂದ ನಿನ್ನನ್ನು ವೃದ್ಧಿಸುತ್ತೇನೆ.””

05016009 ಶಲ್ಯ ಉವಾಚ|

05016009a ಏವಂ ಸ್ತುತೋ ಹವ್ಯವಾಹೋ ಭಗವಾನ್ಕವಿರುತ್ತಮಃ|

05016009c ಬೃಹಸ್ಪತಿಮಥೋವಾಚ ಪ್ರೀತಿಮಾನ್ವಾಕ್ಯಮುತ್ತಮಂ|

05016009e ದರ್ಶಯಿಷ್ಯಾಮಿ ತೇ ಶಕ್ರಂ ಸತ್ಯಮೇತದ್ಬ್ರವೀಮಿ ತೇ||

ಶಲ್ಯನು ಹೇಳಿದನು: “ಭಗವಾನ್ ಉತ್ತಮ ಕವಿಯು ಹೀಗೆ ಹವ್ಯವಾಹನನ್ನು ಸ್ತುತಿಸಲು ಅವನು ಬೃಹಸ್ಪತಿಗೆ ಪ್ರೀತಿಯಿಂದ ಈ ಉತ್ತಮ ಮಾತುಗಳನ್ನಾಡಿದನು: “ನಿನಗೆ ಶಕ್ರನನ್ನು ತೋರಿಸುತ್ತೇನೆ. ಸತ್ಯವನ್ನೇ ನಿನಗೆ ಹೇಳುತ್ತಿದ್ದೇನೆ.”

05016010a ಪ್ರವಿಶ್ಯಾಪಸ್ತತೋ ವಹ್ನಿಃ ಸಸಮುದ್ರಾಃ ಸಪಲ್ವಲಾಃ|

05016010c ಆಜಗಾಮ ಸರಸ್ತಚ್ಚ ಗೂಢೋ ಯತ್ರ ಶತಕ್ರತುಃ||

05016011a ಅಥ ತತ್ರಾಪಿ ಪದ್ಮಾನಿ ವಿಚಿನ್ವನ್ಭರತರ್ಷಭ|

05016011c ಅನ್ವಪಶ್ಯತ್ಸ ದೇವೇಂದ್ರಂ ಬಿಸಮಧ್ಯಗತಂ ಸ್ಥಿತಂ||

ಆಗ ವಹ್ನಿಯು ಸಮುದ್ರ ಮತ್ತು ಚಿಕ್ಕ ಹೊಂಡಗಳನ್ನೂ ಪ್ರವೇಶಿಸಿದನು. ಶತಕ್ರತುವು ಅಡಗಿದ್ದ ಸರೋವರಕ್ಕೂ ಹೋದನು. ಭರತರ್ಷಭ! ಅಲ್ಲಿ ಪದ್ಮಗಳಲ್ಲಿ ಹುಡುಕುತ್ತಿರುವಾಗ ದಂಟಿನ ಮಧ್ಯದಲ್ಲಿದ್ದ ದೇವೇದ್ರನನ್ನು ಕಂಡನು.

05016012a ಆಗತ್ಯ ಚ ತತಸ್ತೂರ್ಣಂ ತಮಾಚಷ್ಟ ಬೃಹಸ್ಪತೇಃ|

05016012c ಅಣುಮಾತ್ರೇಣ ವಪುಷಾ ಪದ್ಮತಂತ್ವಾಶ್ರಿತಂ ಪ್ರಭುಂ||

ತಕ್ಷಣವೇ ಹಿಂದಿರುಗಿ ಹೇಗೆ ಪ್ರಭುವು ಅಣುಮಾತ್ರದ ರೂಪದರಿಸಿ ಕಮಲದ ದಂಟಿನಲ್ಲಿ ನೆಲೆಸಿದ್ದಾನೆ ಎನ್ನುವುದನು ಬೃಹಸ್ಪತಿಗೆ ತಿಳಿಸಿದನು.

05016013a ಗತ್ವಾ ದೇವರ್ಷಿಗಂಧರ್ವೈಃ ಸಹಿತೋಽಥ ಬೃಹಸ್ಪತಿಃ|

05016013c ಪುರಾಣೈಃ ಕರ್ಮಭಿರ್ದೇವಂ ತುಷ್ಟಾವ ಬಲಸೂದನಂ||

ಆಗ ಬೃಹಸ್ಪತಿಯು ದೇವರ್ಷಿ-ಗಂಧರ್ವರೊಡನೆ ಅಲ್ಲಿಗೆ ಹೋಗಿ ಬಲಸೂದನನನ್ನು ಅವನ ಹಿಂದಿನ ಕರ್ಮಗಳನ್ನು ಹೇಳಿ ಸ್ತುತಿಸಿದನು.

05016014a ಮಹಾಸುರೋ ಹತಃ ಶಕ್ರ ನಮುಚಿರ್ದಾರುಣಸ್ತ್ವಯಾ|

05016014c ಶಂಬರಶ್ಚ ಬಲಶ್ಚೈವ ತಥೋಭೌ ಘೋರವಿಕ್ರಮೌ||

“ಶಕ್ರ! ದಾರುಣ ಮಹಾಸುರ ನಮುಚಿ, ಮತ್ತು ಹಾಗೆಯೇ ಘೋರವಿಕ್ರಮಿಗಳಾದ ಶಂಬರ ಮತ್ತು ಬಲರೀರ್ವರೂ ನಿನ್ನಿಂದ ಹತನಾದರು.

05016015a ಶತಕ್ರತೋ ವಿವರ್ಧಸ್ವ ಸರ್ವಾಂ ಶತ್ರೂನ್ನಿಷೂದಯ|

05016015c ಉತ್ತಿಷ್ಠ ವಜ್ರಿನ್ಸಂಪಶ್ಯ ದೇವರ್ಷೀಂಶ್ಚ ಸಮಾಗತಾನ್||

ಶತಕ್ರತೋ! ವೃದ್ಧಿಹೊಂದು! ಎಲ್ಲಾ ಶತ್ರುಗಳನ್ನೂ ನಿಷೂದಿಸು. ವಜ್ರಿನ್! ಎದ್ದೇಳು! ಸೇರಿರುವ ದೇವ-ಋಷಿಗಳನ್ನು ನೋಡು.

05016016a ಮಹೇಂದ್ರ ದಾನವಾನ್ ಹತ್ವಾ ಲೋಕಾಸ್ತ್ರಾತಾಸ್ತ್ವಯಾ ವಿಭೋ|

05016016c ಅಪಾಂ ಫೇನಂ ಸಮಾಸಾದ್ಯ ವಿಷ್ಣುತೇಜೋಪಬೃಂಹಿತಂ|

05016016e ತ್ವಯಾ ವೃತ್ರೋ ಹತಃ ಪೂರ್ವಂ ದೇವರಾಜ ಜಗತ್ಪತೇ||

ಮಹೇಂದ್ರ! ವಿಭೋ! ದಾನವರನ್ನು ಸಂಹರಿಸಿ ನೀನು ಲೋಕಗಳನ್ನು ಉದ್ಧರಿಸಿದ್ದೀಯೆ. ದೇವರಾಜ! ಜಗತ್ಪತೇ! ನೀರಿನ ನೊರೆಯನ್ನು ಸೇರಿಸಿ, ವಿಷ್ಣು ತೇಜಸ್ಸಿನಿಂದ ಬಲಿಷ್ಟನಾಗಿ ಹಿಂದೆ ವೃತ್ರನು ನಿನ್ನಿಂದ ಹತನಾದನು.

05016017a ತ್ವಂ ಸರ್ವಭೂತೇಷು ವರೇಣ್ಯ ಈಡ್ಯಃ|

        ತ್ವಯಾ ಸಮಂ ವಿದ್ಯತೇ ನೇಹ ಭೂತಂ|

05016017c ತ್ವಯಾ ಧಾರ್ಯಂತೇ ಸರ್ವಭೂತಾನಿ ಶಕ್ರ|

        ತ್ವಂ ದೇವಾನಾಂ ಮಹಿಮಾನಂ ಚಕರ್ಥ||

ನೀನು ಸರ್ವಭೂತಗಳಲ್ಲಿ ಶ್ರೇಷ್ಠ, ಮತ್ತು ಮೆಚ್ಚಿನವನು. ನಿನ್ನ ಸಮನಾದ ಭೂತಗಳಿರುವುದೇ ಗೊತ್ತಿಲ್ಲ. ಶಕ್ರ! ಸರ್ವಭೂತಗಳೂ ನಿನ್ನನ್ನು ಆಧರಿಸಿವೆ. ನೀನು ದೇವತೆಗಳ ಮಹಿಮೆಯನ್ನು ಹೆಚ್ಚಿಸಿದ್ದೀಯೆ.

05016018a ಪಾಹಿ ದೇವಾನ್ಸಲೋಕಾಂಶ್ಚ ಮಹೇಂದ್ರ ಬಲಮಾಪ್ನುಹಿ|

05016018c ಏವಂ ಸಂಸ್ತೂಯಮಾನಶ್ಚ ಸೋಽವರ್ಧತ ಶನೈಃ ಶನೈಃ||

05016019a ಸ್ವಂ ಚೈವ ವಪುರಾಸ್ಥಾಯ ಬಭೂವ ಸ ಬಲಾನ್ವಿತಃ|

05016019c ಅಬ್ರವೀಚ್ಚ ಗುರುಂ ದೇವೋ ಬೃಹಸ್ಪತಿಮುಪಸ್ಥಿತಂ||

ಮಹೇಂದ್ರ! ಬಲವನ್ನು ಪಡೆದು ದೇವತೆಗಳನ್ನೂ ಎಲ್ಲ ಲೋಕಗಳನ್ನೂ ರಕ್ಷಿಸು.” ಈ ರೀತಿ ಸ್ತುತಿಸಲ್ಪಟ್ಟ ಅವನು ನಿಧಾನವಾಗಿ ವರ್ಧಿಸಿದನು. ತನ್ನದೇ ರೂಪವನ್ನು ತಳೆದು ಬಲಾನ್ವಿತನಾಗಿ ಎದುರಿಗಿದ್ದ ದೇವ ಗುರು ಬೃಹಸ್ಪತಿಗೆ ಹೇಳಿದನು:

05016020a ಕಿಂ ಕಾರ್ಯಮವಶಿಷ್ಟಂ ವೋ ಹತಸ್ತ್ವಾಷ್ಟ್ರೋ ಮಹಾಸುರಃ|

05016020c ವೃತ್ರಶ್ಚ ಸುಮಹಾಕಾಯೋ ಗ್ರಸ್ತುಂ ಲೋಕಾನಿಯೇಷ ಯಃ||

“ತ್ವಷ್ಟ್ರಿಯ ಮಗ ಮಹಾಸುರ ಮತ್ತು ಸುಮಹಾಕಾಯನಾಗಿ ಲೋಕಗಳನ್ನೇ ನುಂಗಲಿದ್ದ ವೃತ್ರನ ಸಂಹಾರವಾದ ನಂತರ ಇನ್ನೇನು ಕಾರ್ಯವು ಉಳಿದುಕೊಂಡಿದೆ?”

05016021 ಬೃಹಸ್ಪತಿರುವಾಚ|

05016021a ಮಾನುಷೋ ನಹುಷೋ ರಾಜಾ ದೇವರ್ಷಿಗಣತೇಜಸಾ|

05016021c ದೇವರಾಜ್ಯಮನುಪ್ರಾಪ್ತಃ ಸರ್ವಾನ್ನೋ ಬಾಧತೇ ಭೃಶಂ||

ಬೃಹಸ್ಪತಿಯು ಹೇಳಿದನು: “ಮನುಷ್ಯರ ರಾಜ ನಹುಷನು ದೇವರ್ಷಿಗಣಗಳ ತೇಜಸ್ಸಿನಿಂದ ದೇವರಾಜ್ಯವನ್ನು ಪಡೆದು ಎಲ್ಲರನ್ನೂ ತುಂಬಾ ಬಾಧಿಸುತ್ತಿದ್ದಾನೆ.”

05016022 ಇಂದ್ರ ಉವಾಚ|

05016022a ಕಥಂ ನು ನಹುಷೋ ರಾಜ್ಯಂ ದೇವಾನಾಂ ಪ್ರಾಪ ದುರ್ಲಭಂ|

05016022c ತಪಸಾ ಕೇನ ವಾ ಯುಕ್ತಃ ಕಿಂವೀರ್ಯೋ ವಾ ಬೃಹಸ್ಪತೇ||

ಇಂದ್ರನು ಹೇಳಿದನು: “ದುರ್ಲಭವಾದ ದೇವತೆಗಳ ರಾಜ್ಯವನ್ನು ನಹುಷನು ಹೇಗೆ ಪಡೆದನು? ಬೃಹಸ್ಪತೇ! ಯಾವ ತಪಸ್ಸನ್ನು ಅವನು ಮಾಡಿದನು? ಅವನ ವೀರ್ಯವೆಷ್ಟು?”

05016023 ಬೃಹಸ್ಪತಿರುವಾಚ|

05016023a ದೇವಾ ಭೀತಾಃ ಶಕ್ರಮಕಾಮಯಂತ|

        ತ್ವಯಾ ತ್ಯಕ್ತಂ ಮಹದೈಂದ್ರಂ ಪದಂ ತತ್|

05016023c ತದಾ ದೇವಾಃ ಪಿತರೋಽಥರ್ಷಯಶ್ಚ|

        ಗಂಧರ್ವಸಂಘಾಶ್ಚ ಸಮೇತ್ಯ ಸರ್ವೇ||

05016024a ಗತ್ವಾಬ್ರುವನ್ನಹುಷಂ ಶಕ್ರ ತತ್ರ|

        ತ್ವಂ ನೋ ರಾಜಾ ಭವ ಭುವನಸ್ಯ ಗೋಪ್ತಾ|

05016024c ತಾನಬ್ರವೀನ್ನಹುಷೋ ನಾಸ್ಮಿ ಶಕ್ತ|

        ಆಪ್ಯಾಯಧ್ವಂ ತಪಸಾ ತೇಜಸಾ ಚ||

ಬೃಹಸ್ಪತಿಯು ಹೇಳಿದನು: “ನೀನು ಮಹೇಂದ್ರ ಪದವಿಯನ್ನು ತ್ಯಜಿಸಿದಾಗ ಭೀತರಾದ ದೇವತೆಗಳು ಶಕ್ರನನ್ನು ಬಯಸಿದರು. ಶಕ್ರ! ಆಗ ದೇವತೆಗಳು, ಪಿತೃಗಳು ಮತ್ತು ಋಷಿಗಳು ಗಂಧರ್ವಗಣಗಳನ್ನೂ ಕೂಡಿ ಎಲ್ಲರೂ ನಹುಷನಲ್ಲಿಗೆ ಹೋಗಿ “ನೀನು ಭುವನದ ರಾಜನೂ ಗೋಪ್ತನೂ ಆಗು” ಎಂದು ಅಲ್ಲಿ ಹೇಳಿದರು. ಅವರಿಗೆ ನಹುಷನು “ನಾನು ಶಕ್ರನಾಗುವುದಿಲ್ಲ. ನಿಮ್ಮ ತಪಸ್ಸು ಮತ್ತು ತೇಜಸ್ಸನ್ನು ನನ್ನಲ್ಲಿ ತುಂಬಿ.”

05016025a ಏವಮುಕ್ತೈರ್ವರ್ಧಿತಶ್ಚಾಪಿ ದೇವೈ|

        ರಾಜಾಭವನ್ನಹುಷೋ ಘೋರವೀರ್ಯಃ|

05016025c ತ್ರೈಲೋಕ್ಯೇ ಚ ಪ್ರಾಪ್ಯ ರಾಜ್ಯಂ ತಪಸ್ವಿನಃ|

        ಕೃತ್ವಾ ವಾಹಾನ್ಯಾತಿ ಲೋಕಾನ್ದುರಾತ್ಮಾ||

ಹೀಗೆ ಹೇಳಲು ಅವನನ್ನು ದೇವತೆಗಳು ವರ್ಧಿಸಿದರು. ಘೋರವೀರ್ಯದ ನಹುಷನು ರಾಜನಾದನು. ತ್ರೈಲೋಕ್ಯದ ರಾಜ್ಯವನ್ನು ಪಡೆದು ತಪಸ್ವಿಗಳನ್ನು ವಾಹನವನ್ನಾಗಿಟ್ಟುಕೊಂಡು ಆ ದುರಾತ್ಮನು ಲೋಕಗಳಲ್ಲಿ ಸಂಚರಿಸುತ್ತಿದ್ದಾನೆ.

05016026a ತೇಜೋಹರಂ ದೃಷ್ಟಿವಿಷಂ ಸುಘೋರಂ|

        ಮಾ ತ್ವಂ ಪಶ್ಯೇರ್ನಹುಷಂ ವೈ ಕದಾ ಚಿತ್|

05016026c ದೇವಾಶ್ಚ ಸರ್ವೇ ನಹುಷಂ ಭಯಾರ್ತಾ|

        ನ ಪಶ್ಯಂತೋ ಗೂಢರೂಪಾಶ್ಚರಂತಿ||

ತೇಜೋಹರನಾದ, ದೃಷ್ಟಿವಿಷನಾದ, ಸುಘೋರನಾದ ನಹುಷನನ್ನು ನೀನು ಎಂದೂ ನೋಡಬಾರದು. ದೇವತೆಗಳೆಲ್ಲರೂ ನಹುಷನಿಗೆ ಹೆದರಿ ವೇಷಮರೆಸಿಕೊಂಡು ನಡೆಯುತ್ತಾರೆ ಮತ್ತು ಅವನನ್ನು ನೋಡುವುದೇ ಇಲ್ಲ.””

05016027 ಶಲ್ಯ ಉವಾಚ|

05016027a ಏವಂ ವದತ್ಯಂಗಿರಸಾಂ ವರಿಷ್ಠೇ|

        ಬೃಹಸ್ಪತೌ ಲೋಕಪಾಲಃ ಕುಬೇರಃ|

05016027c ವೈವಸ್ವತಶ್ಚೈವ ಯಮಃ ಪುರಾಣೋ|

        ದೇವಶ್ಚ ಸೋಮೋ ವರುಣಶ್ಚಾಜಗಾಮ||

ಶಲ್ಯನು ಹೇಳಿದನು: “ಈ ರೀತಿಯಾಗಿ ಅಂಗಿರಸರಲ್ಲಿ ಹಿರಿಯವನಾದ ಬೃಹಸ್ಪತಿಯು ಮಾತನಾಡುತ್ತಿರಲು ಅಲ್ಲಿಗೆ ಲೋಕಪಾಲ ಕುಬೇರ, ವೈಚಸ್ವತ ಪುರಾಣ ಯಮ, ದೇವ ಸೋಮ ಮತ್ತು ವರುಣರು ಆಗಮಿಸಿದರು.

05016028a ತೇ ವೈ ಸಮಾಗಮ್ಯ ಮಹೇಂದ್ರಮೂಚುಃ|

        ದಿಷ್ಟ್ಯಾ ತ್ವಾಷ್ಟ್ರೋ ನಿಹತಶ್ಚೈವ ವೃತ್ರಃ|

05016028c ದಿಷ್ಟ್ಯಾ ಚ ತ್ವಾಂ ಕುಶಲಿನಮಕ್ಷತಂ ಚ|

        ಪಶ್ಯಾಮೋ ವೈ ನಿಹತಾರಿಂ ಚ ಶಕ್ರ||

ಅವರು ಅಲ್ಲಿ ಬಂದು ಸೇರಿ ಮಹೇಂದ್ರನಿಗೆ ಹೇಳಿದರು: “ಒಳ್ಳೆಯದಾಯಿತು ತ್ವಷ್ಟನ ಮಗ ಮತ್ತು ವೃತ್ರರು ಹತರಾದರು. ಶಕ್ರ! ಒಳ್ಳೆಯದಾಯಿತು ಅರಿಗಳನ್ನು ಸಂಹರಿಸಿದ ನಿನ್ನನ್ನು ನಾವು ಕುಶಲನಾಗಿರುವುದನ್ನೂ ಕ್ಷಯಿಸದೆ ಇರುವುದನ್ನೂ ನೋಡುತ್ತಿದ್ದೇವೆ.’

05016029a ಸ ತಾನ್ಯಥಾವತ್ಪ್ರತಿಭಾಷ್ಯ ಶಕ್ರಃ|

        ಸಂಚೋದಯನ್ನಹುಷಸ್ಯಾಂತರೇಣ|

05016029c ರಾಜಾ ದೇವಾನಾಂ ನಹುಷೋ ಘೋರರೂಪಃ|

        ತತ್ರ ಸಾಹ್ಯಂ ದೀಯತಾಂ ಮೇ ಭವದ್ಭಿಃ||

ಶಕ್ರನು ಅವರಿಗೆ, ನಹುಷನ ವಿರುದ್ಧವಾಗಿ ಪ್ರತಿಚೋದಿಸಿ ಉತ್ತರಿಸಿದನು: “ಘೋರರೂಪಿ ದೇವತೆಗಳ ರಾಜ ನಹುಷನ ಕುರಿತು ನನಗೆ ನಿಮ್ಮ ಸಹಾಯವನ್ನು ನೀಡಬೇಕು.”

05016030a ತೇ ಚಾಬ್ರುವನ್ನಹುಷೋ ಘೋರರೂಪೋ|

        ದೃಷ್ಟೀವಿಷಸ್ತಸ್ಯ ಬಿಭೀಮ ದೇವ|

05016030c ತ್ವಂ ಚೇದ್ರಾಜನ್ನಹುಷಂ ಪರಾಜಯೇಸ್|

        ತದ್ವೈ ವಯಂ ಭಾಗಮರ್ಹಾಮ ಶಕ್ರ||

ಅವರು ಹೇಳಿದರು: “ಘೋರರೂಪೀ ನಹುಷನ ದೃಷ್ಟಿಯು ವಿಷ. ದೇವ! ನಾವು ಹೆದರಿದ್ದೇವೆ. ಶಕ್ರ! ರಾಜನ್! ನಹುಷನನ್ನು ನೀನು ಪರಾಜಯಗೊಳಿಸಿದರೆ ನಾವು ಹವಿಸ್ಸಿನ ಭಾಗಗಳಿಗೆ ಅರ್ಹರಾಗುತ್ತೇವೆ.”

05016031a ಇಂದ್ರೋಽಬ್ರವೀದ್ಭವತು ಭವಾನಪಾಂ ಪತಿಃ|

        ಯಮಃ ಕುಬೇರಶ್ಚ ಮಹಾಭಿಷೇಕಂ|

05016031c ಸಂಪ್ರಾಪ್ನುವಂತ್ವದ್ಯ ಸಹೈವ ತೇನ|

        ರಿಪುಂ ಜಯಾಮೋ ನಹುಷಂ ಘೋರದೃಷ್ಟಿಂ||

ಇಂದ್ರನು ಹೇಳಿದನು: “ಹಾಗೆಯೇ ಆಗಲಿ! ಇಂದು ನೀನು, ಅಪಾಂಪತಿ, ಯಮ, ಕುಬೇರರು ನನ್ನೊಂದಿಗೆ ಅಭಿಷಿಕ್ತರಾಗೋಣ. ಘೋರದೃಷ್ಟಿಯ ಶತ್ರು ನಹುಷನನ್ನು ಜಯಿಸೋಣ.”

05016032a ತತಃ ಶಕ್ರಂ ಜ್ವಲನೋಽಪ್ಯಾಹ ಭಾಗಂ|

        ಪ್ರಯಚ್ಚ ಮಹ್ಯಂ ತವ ಸಾಹ್ಯಂ ಕರಿಷ್ಯೇ|

05016032c ತಮಾಹ ಶಕ್ರೋ ಭವಿತಾಗ್ನೇ ತವಾಪಿ|

        ಐಂದ್ರಾಗ್ನೋ ವೈ ಭಾಗ ಏಕೋ ಮಹಾಕ್ರತೌ||

ಆಗ ಅಗ್ನಿಯು ಶಕ್ರನಿಗೆ ಹೇಳಿದನು: “ಹವಿಸ್ಸಿನಲ್ಲಿ ನನಗೂ ಭಾಗವನ್ನು ನೀಡು. ನಾನೂ ಕೂಡ ನಿನಗೆ ಸಹಾಯ ಮಾಡುತ್ತೇನೆ.” ಶಕ್ರನು ಅವನಿಗೆ ಹೇಳಿದನು: “ಅಗ್ನೇ! ನೀನು ಕೂಡ ಮಹಾಕ್ರತುಗಳಲ್ಲಿ ಇಂದ್ರ ಮತ್ತು ಅಗ್ನಿಗಳೆಂಬ ಒಂದೇ ಭಾಗಕ್ಕೆ ಅರ್ಹನಾಗುತ್ತೀಯೆ.”

05016033a ಏವಂ ಸಂಚಿಂತ್ಯ ಭಗವಾನ್ಮಹೇಂದ್ರಃ ಪಾಕಶಾಸನಃ|

05016033c ಕುಬೇರಂ ಸರ್ವಯಕ್ಷಾಣಾಂ ಧನಾನಾಂ ಚ ಪ್ರಭುಂ ತಥಾ||

05016034a ವೈವಸ್ವತಂ ಪಿತೄಣಾಂ ಚ ವರುಣಂ ಚಾಪ್ಯಪಾಂ ತಥಾ|

05016034c ಆಧಿಪತ್ಯಂ ದದೌ ಶಕ್ರಃ ಸತ್ಕೃತ್ಯ ವರದಸ್ತದಾ||

ಹೀಗೆ ಸಮಾಲೋಚಿಸಿ ಪಾಕಶಾಸನ ಭಗವಾನ್ ಮಹೇಂದ್ರನು ಕುಬೇರನಿಗೆ ಸರ್ವಯಕ್ಷರ ಮತ್ತು ಧನಗಳ ಪ್ರಭುತ್ವವನ್ನ್ನು, ವೈವಸ್ವತನಿಗೆ ಪಿತೃಗಳ, ವರುಣನಿಗೆ ನೀರುಗಳ ಅಧಿಪತ್ಯವನ್ನು ಕೊಟ್ಟನು. ಶಕ್ರನು ಅವರನ್ನು ಸತ್ಕರಿಸಿ ಹರಸಿದನು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ಇಂದ್ರವರುಣಾದಿಸಂವಾದೇ ಷೋಡಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ಇಂದ್ರವರುಣಾದಿಸಂವಾದದಲ್ಲಿ ಹದಿನಾರನೆಯ ಅಧ್ಯಾಯವು|

Image result for flowers against white background

Comments are closed.