Udyoga Parva: Chapter 158

ಉದ್ಯೋಗ ಪರ್ವ: ಉಲೂಕದೂತಾಗಮನ ಪರ್ವ

೧೫೮

ಉಲೂಕನು ಯುಧಿಷ್ಠಿರನಿಗೂ (೧-೨೧), ಅರ್ಜುನನಿಗೂ (೨೨-೪೧) ದುರ್ಯೋಧನನ ಸಂದೇಶವನ್ನು ಹೇಳುವುದು.

05158001 ಸಂಜಯ ಉವಾಚ|

05158001a ಸೇನಾನಿವೇಶಂ ಸಂಪ್ರಾಪ್ಯ ಕೈತವ್ಯಃ ಪಾಂಡವಸ್ಯ ಹ|

05158001c ಸಮಾಗತಃ ಪಾಂಡವೇಯೈರ್ಯುಧಿಷ್ಠಿರಮಭಾಷತ||

ಸಂಜಯನು ಹೇಳಿದನು: “ಪಾಂಡವರ ಸೇನಾನಿವೇಶನವನ್ನು ತಲುಪಿ ಕೈತವ್ಯನು ಪಾಂಡವ ಯುಧಿಷ್ಠಿರನನ್ನು ಭೇಟಿಮಾಡಿ ಹೀಗೆ ಹೇಳಿದನು:

05158002a ಅಭಿಜ್ಞೋ ದೂತವಾಕ್ಯಾನಾಂ ಯಥೋಕ್ತಂ ಬ್ರುವತೋ ಮಮ|

05158002c ದುರ್ಯೋಧನಸಮಾದೇಶಂ ಶ್ರುತ್ವಾ ನ ಕ್ರೋದ್ಧುಮರ್ಹಸಿ||

“ದೂತವಾಕ್ಯವನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿಲ್ಲ. ದುರ್ಯೋಧನನ ಸಂದೇಶವನ್ನು ಹೇಳುತ್ತೇನೆ. ಕೇಳಿ ಕ್ರೋಧಿತನಾಗಬಾರದು.”

05158003 ಯುಧಿಷ್ಠಿರ ಉವಾಚ|

05158003a ಉಲೂಕ ನ ಭಯಂ ತೇಽಸ್ತಿ ಬ್ರೂಹಿ ತ್ವಂ ವಿಗತಜ್ವರಃ|

05158003c ಯನ್ಮತಂ ಧಾರ್ತರಾಷ್ಟ್ರಸ್ಯ ಲುಬ್ಧಸ್ಯಾದೀರ್ಘದರ್ಶಿನಃ||

ಯುಧಿಷ್ಠಿರನು ಹೇಳಿದನು: “ಉಲೂಕ! ನೀನು ಭಯಪಡಬೇಕಾಗಿಲ್ಲ. ಅ ಲುಬ್ಧನೂ ದೂರದೃಷ್ಟಿಯಿಲ್ಲದವನೂ ಆದ ಧಾರ್ತರಾಷ್ಟ್ರನ ಮತವೇನೆನ್ನುವುದನ್ನು ಭಯಪಟ್ಟುಕೊಳ್ಳದೇ ಹೇಳು.””

05158004 ಸಂಜಯ ಉವಾಚ|

05158004a ತತೋ ದ್ಯುತಿಮತಾಂ ಮಧ್ಯೇ ಪಾಂಡವಾನಾಂ ಮಹಾತ್ಮನಾಂ|

05158004c ಸೃಂಜಯಾನಾಂ ಚ ಸರ್ವೇಷಾಂ ಕೃಷ್ಣಸ್ಯ ಚ ಯಶಸ್ವಿನಃ||

05158005a ದ್ರುಪದಸ್ಯ ಸಪುತ್ರಸ್ಯ ವಿರಾಟಸ್ಯ ಚ ಸನ್ನಿಧೌ|

05158005c ಭೂಮಿಪಾನಾಂ ಚ ಸರ್ವೇಷಾಂ ಮಧ್ಯೇ ವಾಕ್ಯಂ ಜಗಾದ ಹ||

ಸಂಜಯನು ಹೇಳಿದನು: “ಆಗ ಮಹಾತ್ಮ ಪಾಂಡವರ, ಸೃಂಜಯರ ಮತ್ತು ಯಶಸ್ವಿ ಕೃಷ್ಣ ಈ ಎಲ್ಲ ದ್ಯುತಿಮತರ ಮಧ್ಯೆ, ಪುತ್ರರೊಂದಿಗಿದ್ದ ದ್ರುಪದ ಮತ್ತು ವಿರಾಟರ ಸನ್ನಿಧಿಯಲ್ಲಿ, ಎಲ್ಲ ಭೂಮಿಪರ ಮಧ್ಯೆ ಅವನು ಈ ಮಾತನ್ನಾಡಿದನು:

05158006a ಇದಂ ತ್ವಾಮಬ್ರವೀದ್ರಾಜಾ ಧಾರ್ತರಾಷ್ಟ್ರೋ ಮಹಾಮನಾಃ|

05158006c ಶೃಣ್ವತಾಂ ಕುರುವೀರಾಣಾಂ ತನ್ನಿಬೋಧ ನರಾಧಿಪ||

“ರಾಜ ಮಹಾಮನಸ್ವಿ ಧಾರ್ತರಾಷ್ಟ್ರನು ಕುರುವೀರರು ಕೇಳಿಸಿಕೊಳ್ಳುವಂತೆ ನಿನಗೆ ಇದನ್ನು ಹೇಳಿದ್ದಾನೆ. ನರಾಧಿಪ! ಕೇಳು!

05158007a ಪರಾಜಿತೋಽಸಿ ದ್ಯೂತೇನ ಕೃಷ್ಣಾ ಚಾನಾಯಿತಾ ಸಭಾಂ|

05158007c ಶಕ್ಯೋಽಮರ್ಷೋ ಮನುಷ್ಯೇಣ ಕರ್ತುಂ ಪುರುಷಮಾನಿನಾ||

“ದ್ಯೂತದಲ್ಲಿ ನೀನು ಸೋತೆ. ಸಭೆಗೆ ಕೃಷ್ಣೆಯನ್ನು ತರಲಾಯಿತು. ಇಷ್ಟೇ ಮನುಷ್ಯನು, ಪುರುಷ ಮಾನಿನಿಯು ಸಿಟ್ಟಾಗುವಂತೆ ಮಾಡಲು ಶಕ್ಯ.

05158008a ದ್ವಾದಶೈವ ತು ವರ್ಷಾಣಿ ವನೇ ಧಿಷ್ಣ್ಯಾದ್ವಿವಾಸಿತಾಃ|

05158008c ಸಂವತ್ಸರಂ ವಿರಾಟಸ್ಯ ದಾಸ್ಯಮಾಸ್ಥಾಯ ಚೋಷಿತಾಃ||

ಹನ್ನೆರಡು ವರ್ಷಗಳು ಹೊರಗಟ್ಟಲ್ಪಟ್ಟು ವನದಲ್ಲಿ ವಾಸಿಸಿದಿರಿ. ಒಂದು ವರ್ಷವನ್ನು ವಿರಾಟನ ದಾಸರಾಗಿದ್ದುಕೊಂಡು ಕಳೆದಿರಿ.

05158009a ಅಮರ್ಷಂ ರಾಜ್ಯಹರಣಂ ವನವಾಸಂ ಚ ಪಾಂಡವ|

05158009c ದ್ರೌಪದ್ಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ||

ಪಾಂಡವ! ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ.

05158010a ಅಶಕ್ತೇನ ಚ ಯಚ್ಚಪ್ತಂ ಭೀಮಸೇನೇನ ಪಾಂಡವ|

05158010c ದುಃಶಾಸನಸ್ಯ ರುಧಿರಂ ಪೀಯತಾಂ ಯದಿ ಶಕ್ಯತೇ||

ಅಶಕ್ತತೆಯಿಂದ ಶಪಿಸಿದ ಪಾಂಡವ ಭೀಮಸೇನನು ಸಾಧ್ಯವಾದರೆ ದುಃಶಾಸನನ ರಕ್ತವನ್ನು ಕುಡಿಯಲಿ!

05158011a ಲೋಹಾಭಿಹಾರೋ ನಿರ್ವೃತ್ತಃ ಕುರುಕ್ಷೇತ್ರಮಕರ್ದಮಂ|

05158011c ಸಮಃ ಪಂಥಾ ಭೃತಾ ಯೋಧಾಃಽಶ್ವೋ ಯುಧ್ಯಸ್ವ ಸಕೇಶವಃ||

ಆಯುಧಗಳು ಸಿದ್ಧವಾಗಿವೆ, ಕುರುಕ್ಷೇತ್ರವು ಅಕರ್ದಮವಾಗಿದೆ. ರಸ್ತೆಗಳು ಸಮನಾಗಿವೆ, ಯೋಧರೂ-ಕುದುರೆಗಳೂ ಸಿದ್ಧವಾಗಿವೆ. ಕೇಶವನನ್ನೊಡಗೂಡಿ ಯುದ್ಧಮಾಡು.

05158012a ಅಸಮಾಗಮ್ಯ ಭೀಷ್ಮೇಣ ಸಂಯುಗೇ ಕಿಂ ವಿಕತ್ಥಸೇ|

05158012c ಆರುರುಕ್ಷುರ್ಯಥಾ ಮಂದಃ ಪರ್ವತಂ ಗಂಧಮಾದನಂ||

ಯುದ್ಧದಲ್ಲಿ ಬೀಷ್ಮನನ್ನು ಇನ್ನೂ ಎದುರಾಗದೇ, ಗಂಧಮಾದನ ಪರ್ವತವನ್ನು ಏರಬಲ್ಲೆ ಎಂದು ಹೇಳಿಕೊಳ್ಳುವ ಮಂದನಂತೆ ಏಕೆ ಕೊಚ್ಚಿಕೊಳ್ಳುತ್ತಿದ್ದೀಯೆ?

05158013a ದ್ರೋಣಂ ಚ ಯುಧ್ಯತಾಂ ಶ್ರೇಷ್ಠಂ ಶಚೀಪತಿಸಮಂ ಯುಧಿ|

05158013c ಅಜಿತ್ವಾ ಸಂಯುಗೇ ಪಾರ್ಥ ರಾಜ್ಯಂ ಕಥಮಿಹೇಚ್ಚಸಿ||

ಪಾರ್ಥ! ಯುದ್ಧದಲ್ಲಿ ಶಚೀಪತಿಯ ಸಮನಾಗಿರುವ ಶ್ರೇಷ್ಠ ದ್ರೋಣನೊಂದಿಗೆ ಯುದ್ಧಮಾಡಿ ಸಂಯುಗದಲ್ಲಿ ಗೆಲ್ಲದೇ ಹೇಗೆ ತಾನೇ ರಾಜ್ಯವನ್ನು ಬಯಸುತ್ತೀಯೆ?

05158014a ಬ್ರಾಹ್ಮೇ ಧನುಷಿ ಚಾಚಾರ್ಯಂ ವೇದಯೋರಂತರಂ ದ್ವಯೋಃ|

05158014c ಯುಧಿ ಧುರ್ಯಮವಿಕ್ಷೋಭ್ಯಮನೀಕಧರಮಚ್ಯುತಂ||

ಬ್ರಹ್ಮ ಮತ್ತು ಧನುರ್ವಿದ್ಯೆ ಇವೆರಡರ ಕೊನೆಯನ್ನೂ ಆಚಾರ್ಯನು ತಲುಪಿದ್ದಾನೆ. ಯುದ್ಧದಲ್ಲಿ ಅವನು ಗೆಲ್ಲಲಸಾಧ್ಯನು, ಅಕ್ಷೋಭ್ಯನು, ಅನೀಕಧರನು ಮತ್ತು ಅಚ್ಯುತನು.

05158015a ದ್ರೋಣಂ ಮೋಹಾದ್ಯುಧಾ ಪಾರ್ಥ ಯಜ್ಜಿಗೀಷಸಿ ತನ್ಮೃಷಾ|

05158015c ನ ಹಿ ಶುಶ್ರುಮ ವಾತೇನ ಮೇರುಮುನ್ಮಥಿತಂ ಗಿರಿಂ||

ಪಾರ್ಥ! ಅಂಥಹ ದ್ರೋಣನನ್ನು ಯುದ್ಧದಲ್ಲಿ ಗೆಲ್ಲುತ್ತೇನೆ ಎನ್ನುವ ಒಣ ಮೋಹವನ್ನು ಹೊಂದಿರುವೆಯಲ್ಲ ಅದಾಗುವುದು ಸುಳ್ಳು. ಗಾಳಿಯಿಂದ ಮೇರುಪರ್ವತವು ಪುಡಿಯಾಯಿತೆಂದು ನಾವು ಕೇಳಿಲ್ಲವಲ್ಲ!

05158016a ಅನಿಲೋ ವಾ ವಹೇನ್ಮೇರುಂ ದ್ಯೌರ್ವಾಪಿ ನಿಪತೇನ್ಮಹೀಂ|

05158016c ಯುಗಂ ವಾ ಪರಿವರ್ತೇತ ಯದ್ಯೇವಂ ಸ್ಯಾದ್ಯಥಾತ್ಥ ಮಾಂ||

ಆದರೆ ನೀನು ಹೇಳುವುದು ಸತ್ಯವಾದರೆ ಗಾಳಿಯೂ ಮೇರುವನ್ನು ಹಾರಿಸಿದ್ದೀತು, ಆಕಾಶವು ಭೂಮಿಯ ಮೇಲೆ ಬಿದ್ದೀತು, ಯುಗವು ಬದಲಾದೀತು.

05158017a ಕೋ ಹ್ಯಾಭ್ಯಾಂ ಜೀವಿತಾಕಾಂಕ್ಷೀ ಪ್ರಾಪ್ಯಾಸ್ತ್ರಮರಿಮರ್ದನಂ|

05158017c ಗಜೋ ವಾಜೀ ನರೋ ವಾಪಿ ಪುನಃ ಸ್ವಸ್ತಿ ಗೃಹಾನ್ವ್ರಜೇತ್||

ಆ ಅಸ್ತ್ರಧಾರೀ ಅರಿಮರ್ದನನನ್ನು ಎದುರಿಸಿ ಜೀವಿತಾಕಾಂಕ್ಷಿಯಾದ ಯಾರು ತಾನೆ, ಆನೆಯಿರಲಿ, ಕುದುರೆಯಾಗಿರಲಿ ಅಥವಾ ಮನುಷ್ಯನಾಗಿರಲೀ ಪುನಃ ಒಳ್ಳೆಯದಾಗಿದ್ದುಕೊಂಡು ಮನೆಗೆ ಹಿಂದಿರುಗುತ್ತಾನೆ?

05158018a ಕಥಮಾಭ್ಯಾಮಭಿಧ್ಯಾತಃ ಸಂಸೃಷ್ಟೋ ದಾರುಣೇನ ವಾ|

05158018c ರಣೇ ಜೀವನ್ವಿಮುಚ್ಯೇತ ಪದಾ ಭೂಮಿಮುಪಸ್ಪೃಶನ್||

ಭೂಮಿಯ ಮೇಲೆ ನಡೆಯುವ ಯಾರುತಾನೇ ಹೇಗೆ ಅವರಿಬ್ಬರನ್ನೂ ಎದುರಿಸಿ ದಾರುಣವಾದ ರಣದಿಂದ ಜೀವಂತನಾಗಿ ಬಿಡುಗಡೆ ಹೊಂದುತ್ತಾನೆ?

05158019a ಕಿಂ ದರ್ದುರಃ ಕೂಪಶಯೋ ಯಥೇಮಾಂ

         ನ ಬುಧ್ಯಸೇ ರಾಜಚಮೂಂ ಸಮೇತಾಂ|

05158019c ದುರಾಧರ್ಷಾಂ ದೇವಚಮೂಪ್ರಕಾಶಾಂ

         ಗುಪ್ತಾಂ ನರೇಂದ್ರೈಸ್ತ್ರಿದಶೈರಿವ ದ್ಯಾಂ||

ಬಾವಿಯಲ್ಲಿರುವ ಕಪ್ಪೆಯಂತೆ ಏಕೆ ನೀನು ಸೇರಿರುವ ರಾಜರ ಗುಂಪನ್ನು ದುರಾಧರ್ಷರಾದ, ದೇವಸೇನೆಯಂತೆ ಪ್ರಕಾಶಿತರಾದ, ದಿವಿಯಲ್ಲಿ ರಕ್ಷಿಸಲ್ಪಟ್ಟಿರುವ ತ್ರಿದಶರಂತಿರುವ ನರೇಂದ್ರರನ್ನು ಅರ್ಥಮಾಡಿಕೊಳ್ಳುತ್ತಿಲ್ಲ?

05158020a ಪ್ರಾಚ್ಯೈಃ ಪ್ರತೀಚ್ಯೈರಥ ದಾಕ್ಷಿಣಾತ್ಯೈರ್

         ಉದೀಚ್ಯಕಾಂಬೋಜಶಕೈಃ ಖಶೈಶ್ಚ|

05158020c ಶಾಲ್ವೈಃ ಸಮತ್ಸ್ಯೈಃ ಕುರುಮಧ್ಯದೇಶೈರ್

         ಮ್ಲೇಚ್ಚೈಃ ಪುಲಿಂದೈರ್ದ್ರವಿಡಾಂಧ್ರಕಾಂಚ್ಯೈಃ||

ಪೂರ್ವದಿಂದ, ಪಶ್ಚಿಮದಿಂದ, ದಕ್ಷಿಣದಿಂದ, ಉತ್ತರದಿಂದ ಬಂದಿರುವ ಕಾಂಬೋಜರು, ಶಕರು, ಖಶರು, ಶಾಲ್ವರು, ಮತ್ಸ್ಯರು, ಕುರುಗಳು, ಮಧ್ಯದೇಶದವರು, ಮ್ಲೇಚ್ಛರು, ಪುಲಿಂದರು, ದ್ರವಿಡರು, ಆಂದ್ರರು ಮತ್ತು ಕಾಂಚಿಯವರು.

05158021a ನಾನಾಜನೌಘಂ ಯುಧಿ ಸಂಪ್ರವೃದ್ಧಂ

         ಗಾಂಗಂ ಯಥಾ ವೇಗಮವಾರಣೀಯಂ|

05158021c ಮಾಂ ಚ ಸ್ಥಿತಂ ನಾಗಬಲಸ್ಯ ಮಧ್ಯೇ

         ಯುಯುತ್ಸಸೇ ಮಂದ ಕಿಮಲ್ಪಬುದ್ಧೇ||

ಯುದ್ಧದಲ್ಲಿ ಸೊಕ್ಕಿ ಬೆಳೆಯುವ ಈ ನಾನಾ ಜನೌಘವು ವೇಗವಾಗಿ ಹರಿಯುವ ಗಂಗೆಯಂತೆ ದಾಟಲಸಾಧ್ಯವಾದುದು. ಅಲ್ಪಬುದ್ಧೇ! ಮಂದ! ಆನೆಗಳ ಸೇನೆಗಳ ಮಧ್ಯ ನಿಂತಿರುವ ನನ್ನನ್ನು ಹೇಗೆ ಹೋರಾಡುತ್ತೀಯೆ?””

05158022a ಇತ್ಯೇವಮುಕ್ತ್ವಾ ರಾಜಾನಂ ಧರ್ಮಪುತ್ರಂ ಯುಧಿಷ್ಠಿರಂ|

05158022c ಅಭ್ಯಾವೃತ್ಯ ಪುನರ್ಜಿಷ್ಣುಮುಲೂಕಃ ಪ್ರತ್ಯಭಾಷತ||

ರಾಜ ಧರ್ಮಪುತ್ರ ಯುಧಿಷ್ಠಿರನಿಗೆ ಹೀಗೆ ಹೇಳಿ ಉಲೂಕನು ಪುನಃ ಜಿಷ್ಣುವಿನ ಕಡೆ ತಿರುಗಿ ಹೇಳಿದನು:

05158023a ಅಕತ್ಥಮಾನೋ ಯುಧ್ಯಸ್ವ ಕತ್ಥಸೇಽರ್ಜುನ ಕಿಂ ಬಹು|

05158023c ಪರ್ಯಾಯಾತ್ಸಿದ್ಧಿರೇತಸ್ಯ ನೈತತ್ಸಿಧ್ಯತಿ ಕತ್ಥನಾತ್||

““ಅರ್ಜುನ! ಕೊಚ್ಚಿಕೊಳ್ಳದೆಯೇ ಯುದ್ಧಮಾಡು! ಅಷ್ಟೇಕೆ ಕೊಚ್ಚಿಕೊಳ್ಳುತ್ತಿದ್ದೀಯೆ? ಉಪಾಯದಿಂದ ಸಿದ್ಧಿ ದೊರೆಯುತ್ತದೆಯೇ ಹೊರತು ಕೊಚ್ಚಿಕೊಳ್ಳುವುದರಿಂದ ಸಿದ್ಧಿಯು ದೊರೆಯುವುದಿಲ್ಲ.

05158024a ಯದೀದಂ ಕತ್ಥನಾತ್ಸಿಧ್ಯೇತ್ಕರ್ಮ ಲೋಕೇ ಧನಂಜಯ|

05158024c ಸರ್ವೇ ಭವೇಯುಃ ಸಿದ್ಧಾರ್ಥಾ ಬಹು ಕತ್ಥೇತ ದುರ್ಗತಃ||

ಧನಂಜಯ! ಜಂಬ ಕೊಚ್ಚಿಕೊಳ್ಳುವುದರಿಂದಲೇ ಲೋಕದಲ್ಲಿ ಕರ್ಮಗಳು ಫಲವನ್ನು ಕೊಡುತ್ತವೆಯಂತಾಗಿದ್ದರೆ ಎಲ್ಲರೂ ಬಹುವಾಗಿ ಕೊಚ್ಚಿಕೊಳ್ಳುವ ಕೆಟ್ಟ ದಾರಿಯಲ್ಲಿ ಹೋಗಿ ಯಶಸ್ವಿಗಳಾಗುತ್ತಿದ್ದರು.

05158025a ಜಾನಾಮಿ ತೇ ವಾಸುದೇವಂ ಸಹಾಯಂ

         ಜಾನಾಮಿ ತೇ ಗಾಂಡಿವಂ ತಾಲಮಾತ್ರಂ|

05158025c ಜಾನಾಮ್ಯೇತತ್ತ್ವಾದೃಶೋ ನಾಸ್ತಿ ಯೋದ್ಧಾ

         ರಾಜ್ಯಂ ಚ ತೇ ಜಾನಮಾನೋ ಹರಾಮಿ||

ನಿನಗೆ ವಾಸುದೇವನ ಸಹಾಯವಿದೆಯೆಂದು ಬಲ್ಲೆ. ನಿನ್ನ ಗಾಂಡೀವವು ಆರು ಅಡಿ ಉದ್ದವಿದೆಯೆಂದು ಬಲ್ಲೆ. ನಿನ್ನ ಸದೃಶನಾದ ಯೋದ್ಧನು ಇಲ್ಲ ಎನ್ನುವುದನ್ನೂ ಬಲ್ಲೆ. ಆದರೂ ನಿನ್ನ ರಾಜ್ಯವನ್ನು ನಿನಗೆ ಅರಿವಿದ್ದಂತೆಯೇ ಅಪಹರಿಸಿಕೊಂಡಿದ್ದೇನೆ!

05158026a ನ ತು ಪರ್ಯಾಯಧರ್ಮೇಣ ಸಿದ್ಧಿಂ ಪ್ರಾಪ್ನೋತಿ ಭೂಯಸೀಂ|

05158026c ಮನಸೈವ ಹಿ ಭೂತಾನಿ ಧಾತಾ ಪ್ರಕುರುತೇ ವಶೇ||

ಕೇವಲ ಪರ್ಯಾಯಧರ್ಮದಿಂದ ಜೀವಿಗಳು ಸಿದ್ಧಿಯನ್ನು ಪಡೆಯುವುದಿಲ್ಲ. ಧಾತಾರನೇ ಭೂತಗಳ ಮನಸ್ಸನ್ನು ದಾಸನನ್ನಾಗಿ ಅಥವಾ ಒಡೆಯನನ್ನಾಗಿ ಮಾಡುತ್ತಾನೆ.

05158027a ತ್ರಯೋದಶ ಸಮಾ ಭುಕ್ತಂ ರಾಜ್ಯಂ ವಿಲಪತಸ್ತವ|

05158027c ಭೂಯಶ್ಚೈವ ಪ್ರಶಾಸಿಷ್ಯೇ ನಿಹತ್ಯ ತ್ವಾಂ ಸಬಾಂಧವಂ||

ಈ ಹದಿಮೂರು ವರ್ಷಗಳು ನೀನು ಅಳುತ್ತಿರುವಾಗ ನಾನು ರಾಜ್ಯವನ್ನು ಭೋಗಿಸಿದೆ. ಬಾಂಧವರೊಂದಿಗೆ ನಿನ್ನನ್ನು ಸಂಹರಿಸಿ ನಾನು ಮುಂದೆಯೂ ಕೂಡ ಪ್ರಶಾಸನ ಮಾಡುತ್ತೇನೆ.

05158028a ಕ್ವ ತದಾ ಗಾಂಡಿವಂ ತೇಽಭೂದ್ಯತ್ತ್ವಂ ದಾಸಪಣೇ ಜಿತಃ|

05158028c ಕ್ವ ತದಾ ಭೀಮಸೇನಸ್ಯ ಬಲಮಾಸೀಚ್ಚ ಫಲ್ಗುನ||

ಫಲ್ಗುನ! ಪಣದಲ್ಲಿ ಗೆದ್ದು ನಿನ್ನನ್ನು ದಾಸನನ್ನಾಗಿ ಮಾಡಿದಾಗ ನಿನ್ನ ಗಾಂಡೀವವು ಎಲ್ಲಿತ್ತು? ಆಗ ಭೀಮಸೇನನ ಬಲವಾದರೂ ಎಲ್ಲಿತ್ತು?

05158029a ಸಗದಾದ್ಭೀಮಸೇನಾಚ್ಚ ಪಾರ್ಥಾಚ್ಚೈವ ಸಗಾಂಡಿವಾತ್|

05158029c ನ ವೈ ಮೋಕ್ಷಸ್ತದಾ ವೋಽಭೂದ್ವಿನಾ ಕೃಷ್ಣಾಮನಿಂದಿತಾಂ||

ಆಗ ನಿಮಗೆ ಮೋಕ್ಷವು ಭೀಮಸೇನನ ಗದೆಯಿಂದಾಗಲೀ ಪಾರ್ಥನ ಗಾಂಡೀವದಿಂದಾಗಲೀ ದೊರೆಯಲಿಲ್ಲ. ಅನಿಂದಿತೆ ಕೃಷ್ಣೆಯಿಂದಾಯಿತು!

05158030a ಸಾ ವೋ ದಾಸ್ಯಂ ಸಮಾಪನ್ನಾನ್ಮೋಕ್ಷಯಾಮಾಸ ಭಾಮಿನೀ|

05158030c ಅಮಾನುಷ್ಯಸಮಾಯುಕ್ತಾನ್ದಾಸ್ಯಕರ್ಮಣ್ಯವಸ್ಥಿತಾನ್||

ಆ ಭಾಮಿನಿಯು ದಾಸ್ಯಕರ್ಮಗಳಲ್ಲಿ ವ್ಯವಸ್ಥಿತರಾಗಿದ್ದ, ಅಮಾನುಷರಾಗಿದ್ದ ನಿಮ್ಮ ದಾಸತ್ವವನ್ನು ಕೊನೆಗೊಳಿಸಿ ಬಿಡಿಸಿದಳು.

05158031a ಅವೋಚಂ ಯತ್ಷಂಡತಿಲಾನಹಂ ವಸ್ತಥ್ಯಮೇವ ತತ್|

05158031c ಧೃತಾ ಹಿ ವೇಣೀ ಪಾರ್ಥೇನ ವಿರಾಟನಗರೇ ತದಾ||

ಆಗ ನಾನು ನಿಮ್ಮನ್ನು ಷಂಡತಿಲಕ್ಕೆ ಹೋಲಿಸಿ ಮಾತನಾಡಿದ್ದೆ. ಅದರಂತೆಯೇ ಪಾರ್ಥನು ವಿರಾಟನಗರದಲ್ಲಿ ಜಡೆಯನ್ನು ಕಟ್ಟಲಿಲ್ಲವೇ?

05158032a ಸೂದಕರ್ಮಣಿ ಚ ಶ್ರಾಂತಂ ವಿರಾಟಸ್ಯ ಮಹಾನಸೇ|

05158032c ಭೀಮಸೇನೇನ ಕೌಂತೇಯ ಯಚ್ಚ ತನ್ಮಮ ಪೌರುಷಂ||

ವಿರಾಟನ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತ ಭೀಮಸೇನನು ಸೋತುಹೋಗಿದ್ದ. ಕೌಂತೇಯ! ಇದೂ ಕೂಡ ನಿನ್ನ ಪೌರುಷವನ್ನು ಎತ್ತಿ ತೋರಿಸುತ್ತದೆ!

05158033a ಏವಮೇವ ಸದಾ ದಂಡಂ ಕ್ಷತ್ರಿಯಾಃ ಕ್ಷತ್ರಿಯೇ ದಧುಃ|

05158033c ಶ್ರೇಣ್ಯಾಂ ಕಕ್ಷ್ಯಾಂ ಚ ವೇಣ್ಯಾಂ ಚ ಸಂಯುಗೇ ಯಃ ಪಲಾಯತೇ||

ಹೋರಾಟದಲ್ಲಿ ಜಡೆಯನ್ನು ಕಟ್ಟಿ, ಸೊಂಟಬಂದಿಯನ್ನು ಕಟ್ಟಿ, ಪಲಾಯನ ಮಾಡಿದ್ದೆಯಲ್ಲ! ಇದೇ ಕ್ಷತ್ರಿಯರು ಕ್ಷತ್ರಿಯರಿಗೆ ಸದಾ ನೀಡುವ ದಂಡ!

05158034a ನ ಭಯಾದ್ವಾಸುದೇವಸ್ಯ ನ ಚಾಪಿ ತವ ಫಲ್ಗುನ|

05158034c ರಾಜ್ಯಂ ಪ್ರತಿಪ್ರದಾಸ್ಯಾಮಿ ಯುಧ್ಯಸ್ವ ಸಹಕೇಶವಃ||

ವಾಸುದೇವನ ಭಯದಿಂದಾಗಲೀ ಫಲ್ಗುನ! ನಿನ್ನ ಭಯದಿಂದಾಗಲೀ ನಾನು ರಾಜ್ಯವನ್ನು ಹಿಂದಿರುಗಿಸುವುದಿಲ್ಲ. ಕೇಶವನೊಂದಿಗೆ ಯುದ್ಧ ಮಾಡು.

05158035a ನ ಮಾಯಾ ಹೀಂದ್ರಜಾಲಂ ವಾ ಕುಹಕಾ ವಾ ವಿಭೀಷಣೀ|

05158035c ಆತ್ತಶಸ್ತ್ರಸ್ಯ ಮೇ ಯುದ್ಧೇ ವಹಂತಿ ಪ್ರತಿಗರ್ಜನಾಃ||

ಮಾಯೆಯಾಗಲೀ, ಇಂದ್ರಜಾಲವಾಗಲೀ ಅಥವಾ ಕುಹಕವಾಗಲೀ ಶಸ್ತ್ರವನ್ನು ಹಿಡಿದು ಯುದ್ಧಮಾಡುವವನನ್ನು ಬೆದರಿಸಲಾರದು. ಅದು ಅವನ ಕೋಪವನ್ನು ಮಾತ್ರ ಹೆಚ್ಚಿಸಬಲ್ಲದು.

05158036a ವಾಸುದೇವಸಹಸ್ರಂ ವಾ ಫಲ್ಗುನಾನಾಂ ಶತಾನಿ ವಾ|

05158036c ಆಸಾದ್ಯ ಮಾಮಮೋಘೇಷುಂ ದ್ರವಿಷ್ಯಂತಿ ದಿಶೋ ದಶ||

ಸಹಸ್ರ ವಾಸುದೇವರಾಗಲೀ ನೂರು ಫಲ್ಗುನಿಗಳಾಗಲೀ ನನ್ನ ರಭಸಕ್ಕೆ ಸಿಲುಕಿ ದಿಕ್ಕು ದಿಕ್ಕುಗಳಲ್ಲಿ ಹಾರಿ ಹೋಗುತ್ತಾರೆ.

05158037a ಸಂಯುಗಂ ಗಚ್ಚ ಭೀಷ್ಮೇಣ ಭಿಂಧಿ ತ್ವಂ ಶಿರಸಾ ಗಿರಿಂ|

05158037c ಪ್ರತರೇಮಂ ಮಹಾಗಾಧಂ ಬಾಹುಭ್ಯಾಂ ಪುರುಷೋದಧಿಂ||

ಯುದ್ದದಲ್ಲಿ ಭೀಷ್ಮನನ್ನು ಎದುರಿಸು. ತಲೆಕುಟ್ಟಿ ಗಿರಿಯನ್ನು ಒಡೆ. ಎರಡು ಬಾಹುಗಳಿಂದ ಮಹಾ ಆಳವಾದ ಪುರುಷರ ಸಾಗರವನ್ನು ದಾಟಲು ಪ್ರಯತ್ನಿಸು.

05158038a ಶಾರದ್ವತಮಹೀಮಾನಂ ವಿವಿಂಶತಿಝಷಾಕುಲಂ|

05158038c ಬೃಹದ್ಬಲಸಮುಚ್ಚಾಲಂ ಸೌಮದತ್ತಿತಿಮಿಂಗಿಲಂ||

ಶಾರದ್ವತನು ಅದರ ದೊಡ್ಡ ಮೀನು. ವಿವಿಂಶತಿಯು ಸಣ್ಣ ಮೀನುಗಳ ಸಂಕುಲ. ಬೃಹದ್ಬಲನು ಅಲೆಗಳು. ಮತ್ತು ಸೌಮದತ್ತಿಯು ತಿಮಿಂಗಿಲ.

05158039a ದುಃಶಾಸನೌಘಂ ಶಲಶಲ್ಯಮತ್ಸ್ಯಂ

         ಸುಷೇಣಚಿತ್ರಾಯುಧನಾಗನಕ್ರಂ|

05158039c ಜಯದ್ರಥಾದ್ರಿಂ ಪುರುಮಿತ್ರಗಾಧಂ

         ದುರ್ಮರ್ಷಣೋದಂ ಶಕುನಿಪ್ರಪಾತಂ||

ದುಃಶಾಸನನು ಭಿರುಗಾಳಿ. ಶಲ್ಯನು ಮೀನು. ಚಿತ್ರಾಯುಧಗಳ ಸುಷೇಣನು ನಾಗ. ಜಯದ್ರಥನು ಗಿರಿ. ಪುರುಮಿತ್ರನು ಗಾಧ. ದುರ್ಮರ್ಷಣನು ನೀರು. ಶಕುನಿಯು ಪ್ರಪಾತ.

05158040a ಶಸ್ತ್ರೌಘಮಕ್ಷಯ್ಯಮತಿಪ್ರವೃದ್ಧಂ

         ಯದಾವಗಾಹ್ಯ ಶ್ರಮನಷ್ಟಚೇತಾಃ|

05158040c ಭವಿಷ್ಯಸಿ ತ್ವಂ ಹತಸರ್ವಬಾಂಧವಸ್

         ತದಾ ಮನಸ್ತೇ ಪರಿತಾಪಮೇಷ್ಯತಿ||

ಅಕ್ಷಯ ಶಸ್ತ್ರಗಳ ಭಿರುಗಾಳಿಯಿಂದ ಮೇಲೇಳುವ ಈ ಸಮುದ್ರದಲ್ಲಿ ನೀನು ಬೀಳಲು ಆಯಾಸಗೊಂಡು ಚೇತನವನ್ನು ಕಳೆದುಕೊಳ್ಳುತ್ತೀಯೆ. ಸರ್ವ ಬಾಂಧವರನ್ನೂ ಕಳೆದುಕೊಂಡು ನೀನು ಆಗ ಪರಿತಾಪ ಪಡುತ್ತೀಯೆ.

05158041a ತದಾ ಮನಸ್ತೇ ತ್ರಿದಿವಾದಿವಾಶುಚೇರ್

         ನಿವರ್ತತಾಂ ಪಾರ್ಥ ಮಹೀಪ್ರಶಾಸನಾತ್|

05158041c ರಾಜ್ಯಂ ಪ್ರಶಾಸ್ತುಂ ಹಿ ಸುದುರ್ಲಭಂ ತ್ವಯಾ

         ಬುಭೂಷತಾ ಸ್ವರ್ಗ ಇವಾತಪಸ್ವಿನಾ||

ಆಗ ಅಶುಚಿಯ ಮನಸ್ಸು ತ್ರಿದಿವದಿಂದ ಹೇಗೆ ಹಿಂದೆಸರಿಯುತ್ತದೆಯೋ ಹಾಗೆ ನಿನ್ನ ಮನಸ್ಸು ಭೂಮಿಯನ್ನು ಆಳಬೇಕೆನ್ನುವುದರಿಂದ ಹಿಂದೆ ಸರಿಯುತ್ತದೆ. ತಪಸ್ವಿಯಲ್ಲದವನಿಗೆ ಸ್ವರ್ಗವು ಹೇಗೋ ಹಾಗೆ ರಾಜ್ಯ ಪ್ರಶಾಸನೆಯು ನಿನಗೆ ದುರ್ಲಭವಾಗುತ್ತದೆ.”””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ಉಲೂಕವಾಕ್ಯೇ ಅಷ್ಟಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ಉಲೂಕವಾಕ್ಯದಲ್ಲಿ ನೂರಾಐವತ್ತೆಂಟನೆಯ ಅಧ್ಯಾಯವು.

Image result for flowers against white background"

Comments are closed.