Udyoga Parva: Chapter 156

ಉದ್ಯೋಗ ಪರ್ವ: ಭೀಷ್ಮಾಭಿಷೇಚನ ಪರ್ವ

೧೫೬

ಧೃತರಾಷ್ಟ್ರ-ಸಂಜಯರ ಸಂವಾದ

“ದೋಷಗಳೆಲ್ಲವನ್ನೂ ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ” ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದುದು (೧-೧೫).

05156001 ಜನಮೇಜಯ ಉವಾಚ|

05156001a ತಥಾ ವ್ಯೂಢೇಷ್ವನೀಕೇಷು ಕುರುಕ್ಷೇತ್ರೇ ದ್ವಿಜರ್ಷಭ|

05156001c ಕಿಮಕುರ್ವಂತ ಕುರವಃ ಕಾಲೇನಾಭಿಪ್ರಚೋದಿತಾಃ||

ಜನಮೇಜಯನು ಹೇಳಿದನು: “ದ್ವಿಜರ್ಷಭ! ಹೀಗೆ ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಸೇನೆಗಳು ಸೇರಲು ಕಾಲದಿಂದ ಪ್ರಚೋದಿತರಾದ ಕೌರವರು ಏನು ಮಾಡಿದರು?”

05156002 ವೈಶಂಪಾಯನ ಉವಾಚ|

05156002a ತಥಾ ವ್ಯೂಢೇಷ್ವನೀಕೇಷು ಯತ್ತೇಷು ಭರತರ್ಷಭ|

05156002c ಧೃತರಾಷ್ಟ್ರೋ ಮಹಾರಾಜ ಸಂಜಯಂ ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ಭರತರ್ಷಭ! ಹೋರಾಡಲು ಸೇನೆಗಳು ಸೇರಿರಲು ಮಹಾರಾಜ ಧೃತರಾಷ್ಟ್ರನು ಸಂಜಯನಿಗೆ ಹೇಳಿದನು:

05156003a ಏಹಿ ಸಂಜಯ ಮೇ ಸರ್ವಮಾಚಕ್ಷ್ವಾನವಶೇಷತಃ|

05156003c ಸೇನಾನಿವೇಶೇ ಯದ್ವೃತ್ತಂ ಕುರುಪಾಂಡವಸೇನಯೋಃ||

“ಸಂಜಯ! ಬಾ! ಕುರುಪಾಂಡವ ಸೇನೆಗಳಲ್ಲಿ ಸೇನಾ ನಿವೇಶನಗಳಲ್ಲಿ ಏನೆಲ್ಲ ನಡೆಯಿತೋ ಅವೆಲ್ಲವನ್ನೂ ಏನನ್ನೂ ಬಿಡದೇ ನನಗೆ ಹೇಳು.

05156004a ದಿಷ್ಟಮೇವ ಪರಂ ಮನ್ಯೇ ಪೌರುಷಂ ಚಾಪ್ಯನರ್ಥಕಂ|

05156004c ಯದಹಂ ಜಾನಮಾನೋಽಪಿ ಯುದ್ಧದೋಷಾನ್ ಕ್ಷಯೋದಯಾನ್||

ದೈವವೇ ಹೆಚ್ಚಿನದು ಮತ್ತು ಪುರುಷಪ್ರಯತ್ನಗಳು ಅನರ್ಥಕವೆಂದು ತಿಳಿದುಕೊಂಡಿದ್ದೇನೆ. ಕ್ಷಯವನ್ನು ಪ್ರಾರಂಭಿಸುವ ಯುದ್ಧದ ದೋಷಗಳನ್ನೂ ತಿಳಿದುಕೊಂಡಿದ್ದೇನೆ.

05156005a ತಥಾಪಿ ನಿಕೃತಿಪ್ರಜ್ಞಾಂ ಪುತ್ರಂ ದುರ್ದ್ಯೂತದೇವಿನಂ|

05156005c ನ ಶಕ್ನೋಮಿ ನಿಯಂತುಂ ವಾ ಕರ್ತುಂ ವಾ ಹಿತಮಾತ್ಮನಃ||

ಆದರೂ ಕೆಟ್ಟ ಪ್ರಜ್ಞೆಯುಳ್ಳ, ಮೋಸದ ದ್ಯೂತವನ್ನಾಡುವ ಪುತ್ರನನ್ನು ನಿಯಂತ್ರಿಸಲು ಮತ್ತು ನನ್ನ ಹಿತದಲ್ಲಿರುವಂತೆ ಮಾಡಲೂ ಅಶಕ್ತನಾಗಿದ್ದೇನೆ.

05156006a ಭವತ್ಯೇವ ಹಿ ಮೇ ಸೂತ ಬುದ್ಧಿರ್ದೋಷಾನುದರ್ಶಿನೀ|

05156006c ದುರ್ಯೋಧನಂ ಸಮಾಸಾದ್ಯ ಪುನಃ ಸಾ ಪರಿವರ್ತತೇ||

ಸೂತ! ದುರ್ಯೋಧನನ ಬಳಿಯಿರುವಾಗ ನನ್ನ ಬುದ್ಧಿಯು ದೋಷಗಳನ್ನು ಕಾಣುವುದಿಲ್ಲ. ಆದರೆ ಅವನಿಲ್ಲದಿರುವಾಗ ಪುನಃ ಅದು ಹಿಂದಿನ ಸ್ಥಿತಿಗೆ ಬರುತ್ತದೆ.

05156007a ಏವಂ ಗತೇ ವೈ ಯದ್ಭಾವಿ ತದ್ಭವಿಷ್ಯತಿ ಸಂಜಯ|

05156007c ಕ್ಷತ್ರಧರ್ಮಃ ಕಿಲ ರಣೇ ತನುತ್ಯಾಗೋಽಭಿಪೂಜಿತಃ||

ಸಂಜಯ! ಆಗಬೇಕಾದುದು ಆಗಿಯೇ ಆಗುತ್ತದೆ. ಹಾಗಿರುವಾಗ ರಣದಲ್ಲಿ ದೇಹವನ್ನು ತ್ಯಾಗಿಸುವುದು ಪೂಜಿತವಾದ ಕ್ಷತ್ರಿಯಧರ್ಮವಲ್ಲವೇ?”

05156008 ಸಂಜಯ ಉವಾಚ|

05156008a ತ್ವದ್ಯುಕ್ತೋಽಯಮನುಪ್ರಶ್ನೋ ಮಹಾರಾಜ ಯಥಾರ್ಹಸಿ|

05156008c ನ ತು ದುರ್ಯೋಧನೇ ದೋಷಮಿಮಮಾಸಕ್ತುಮರ್ಹಸಿ|

05156008e ಶೃಣುಷ್ವಾನವಶೇಷೇಣ ವದತೋ ಮಮ ಪಾರ್ಥಿವ||

ಸಂಜಯನು ಹೇಳಿದನು: “ಮಹಾರಾಜ! ನೀನು ಕೇಳಿರುವ ಈ ಪ್ರಶ್ನೆಯು ಯುಕ್ತವಾದುದೇ. ನಿನಗೆ ತಕ್ಕುದೇ ಆಗಿದೆ. ಆದರೆ ದೋಷಗಳನ್ನೆಲ್ಲವನ್ನೂ ದುರ್ಯೋಧನನ ಮೇಲೆ ಹಾಕುವುದು ಸರಿಯಲ್ಲ. ಪಾರ್ಥಿವ! ಇದರ ಕುರಿತು ನಾನು ಹೇಳುವ ಮಾತುಗಳನ್ನು ಸಂಪೂರ್ಣವಾಗಿ ಕೇಳು.

05156009a ಯ ಆತ್ಮನೋ ದುಶ್ಚರಿತಾದಶುಭಂ ಪ್ರಾಪ್ನುಯಾನ್ನರ|

05156009c ಏನಸಾ ನ ಸ ದೈವಂ ವಾ ಕಾಲಂ ವಾ ಗಂತುಮರ್ಹತಿ||

ತನ್ನದೇ ಕೆಟ್ಟ ನಡತೆಯಿಂದ ಅಶುಭವನ್ನು ಪಡೆದ ನರನು ದೈವವನ್ನಾಗಲೀ ಕಾಲವನ್ನಾಗಲೀ ನಿಂದಿಸುವುದು ಸರಿಯಲ್ಲ.

05156010a ಮಹಾರಾಜ ಮನುಷ್ಯೇಷು ನಿಂದ್ಯಂ ಯಃ ಸರ್ವಮಾಚರೇತ್|

05156010c ಸ ವಧ್ಯಃ ಸರ್ವಲೋಕಸ್ಯ ನಿಂದಿತಾನಿ ಸಮಾಚರನ್||

ಮಹಾರಾಜ! ಸರ್ವ ದುಷ್ಟಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗುವ ಮನುಷ್ಯನನ್ನು ನಿಂದನೀಯವಾದುಗಳನ್ನು ಮುಂದುವರೆಸಿಕೊಂಡು ಹೋಗಿದ್ದುದಕ್ಕೆ ಸರ್ವಲೋಕದಲ್ಲಿಯೂ ವಧ್ಯನಾಗುತ್ತಾನೆ.

05156011a ನಿಕಾರಾ ಮನುಜಶ್ರೇಷ್ಠ ಪಾಂಡವೈಸ್ತ್ವತ್ಪ್ರತೀಕ್ಷಯಾ|

05156011c ಅನುಭೂತಾಃ ಸಹಾಮಾತ್ಯೈರ್ನಿಕೃತೈರಧಿದೇವನೇ||

ಮನುಜಶ್ರೇಷ್ಠ! ಮೋಸದಿಂದ ದ್ಯೂತದಲ್ಲಿ ಸೋಲಿಸಲ್ಪಟ್ಟ ಪಾಂಡವರು ಅಮಾತ್ಯರೊಂದಿಗೆ ನಿನ್ನ ಮುಖವನ್ನೇ ನೋಡಿಕೊಂಡು ಎಲ್ಲ ದುಃಖಗಳನ್ನೂ ಸಹಿಸಿಕೊಂಡರು.

05156012a ಹಯಾನಾಂ ಚ ಗಜಾನಾಂ ಚ ರಾಜ್ಞಾಂ ಚಾಮಿತತೇಜಸಾಂ|

05156012c ವೈಶಸಂ ಸಮರೇ ವೃತ್ತಂ ಯತ್ತನ್ಮೇ ಶೃಣು ಸರ್ವಶಃ||

ಸಮರದಲ್ಲಿ ಕುದುರೆಗಳ, ಆನೆಗಳ, ಅಮಿತತೇಜಸ ರಾಜರ ಸಂಹಾರವು ನಡೆಯುವುದೆಲ್ಲವನ್ನೂ ನನ್ನಿಂದ ಕೇಳು.

05156013a ಸ್ಥಿರೋ ಭೂತ್ವಾ ಮಹಾರಾಜ ಸರ್ವಲೋಕಕ್ಷಯೋದಯಂ|

05156013c ಯಥಾಭೂತಂ ಮಹಾಯುದ್ಧೇ ಶ್ರುತ್ವಾ ಮಾ ವಿಮನಾ ಭವ||

ಮಹಾರಾಜ! ಸ್ಥಿರವಾಗಿದ್ದುಕೊಂಡು ಸರ್ವಲೋಕಗಳ ಕ್ಷಯವನ್ನು ತರುವ ಮಹಾಯುದ್ಧವು ಹೇಗೆ ನಡೆಯಿತೆನ್ನುವುದನ್ನು ನನ್ನಿಂದ ಕೇಳಿ ವಿಮನಸ್ಕನಾಗು.

05156014a ನ ಹ್ಯೇವ ಕರ್ತಾ ಪುರುಷಃ ಕರ್ಮಣೋಃ ಶುಭಪಾಪಯೋಃ|

05156014c ಅಸ್ವತಂತ್ರೋ ಹಿ ಪುರುಷಃ ಕಾರ್ಯತೇ ದಾರುಯಂತ್ರವತ್||

ಪುರುಷನು ಶುಭ ಅಥವಾ ಅಶುಭ ಯಾವ ಕರ್ಮಗಳ ಕರ್ತಾರನೂ ಅಲ್ಲ. ಅಸ್ವತಂತ್ರನಾಗಿರುವ ಪುರುಷನು ದಾರಕ್ಕೆ ಕಟ್ಟಿದ ಯಂತ್ರದಂತೆ ಕರ್ಮಗಳನ್ನು ಮಾಡುತ್ತಾನೆ.

05156015a ಕೇ ಚಿದೀಶ್ವರನಿರ್ದಿಷ್ಟಾಃ ಕೇ ಚಿದೇವ ಯದೃಚ್ಚಯಾ|

05156015c ಪೂರ್ವಕರ್ಮಭಿರಪ್ಯನ್ಯೇ ತ್ರೈಧಮೇತದ್ವಿಕೃಷ್ಯತೇ||

ಕೆಲವರು ಈಶ್ವರನು ನಿರ್ಧರಿಸುತ್ತಾನೆ ಎಂದೂ ಕೆಲವರು ನಡೆಯುವುದೆಲ್ಲವೂ ನಮ್ಮ ಸ್ವ-ಇಚ್ಛೆಯಿಂದ ಆಗುವುದೆಂದೂ ಮತ್ತು ಅನ್ಯರು ಪೂರ್ವಕರ್ಮಗಳಿಂದ ಎಲ್ಲವೂ ನಡೆಯುವವೆಂದು - ಹೀಗೆ ಮೂರು ರೀತಿಯ ಅಭಿಪ್ರಾಯಗಳಿವೆ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಣಿ ಸಂಜಯವಾಕ್ಯೇ ಷಟ್‌ಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವದಲ್ಲಿ ಸಂಜಯವಾಕ್ಯದಲ್ಲಿ ನೂರಾಐವತ್ತಾರನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭೀಷ್ಮಾಭಿಷೇಚನ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭೀಷ್ಮಾಭಿಷೇಚನ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೪/೧೮, ಉಪಪರ್ವಗಳು-೫೭/೧೦೦, ಅಧ್ಯಾಯಗಳು-೮೧೯/೧೯೯೫, ಶ್ಲೋಕಗಳು-೨೬೬೮೭/೭೩೭೮೪

Image result for flowers against white background"

Comments are closed.