Udyoga Parva: Chapter 146

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೬

ಕೃಷ್ಣನು ಕುರುಸಂಸದಿಯಲ್ಲಿ ದುರ್ಯೋಧನನಿಗೆ ದ್ರೋಣ (೧-೧೬), ವಿದುರ (೧೭-೨೫) ಮತ್ತು ಗಾಂಧಾರಿಯರು ಹೇಳಿದ ಹಿತವಚನಗಳನ್ನು ವರದಿಮಾಡಿದುದು (೨೬-೩೫).

05146001 ವಾಸುದೇವ ಉವಾಚ|

05146001a ಭೀಷ್ಮೇಣೋಕ್ತೇ ತತೋ ದ್ರೋಣೋ ದುರ್ಯೋಧನಮಭಾಷತ|

05146001c ಮಧ್ಯೇ ನೃಪಾಣಾಂ ಭದ್ರಂ ತೇ ವಚನಂ ವಚನಕ್ಷಮಃ||

ವಾಸುದೇವನು ಹೇಳಿದನು: “ಭೀಷ್ಮನು ಹೀಗೆ ಹೇಳಲು ವಚನಕ್ಷಮನಾದ ದ್ರೋಣನು ನೃಪರ ಮಧ್ಯೆ ಆ ದುರ್ಯೋಧನನಿಗೆ, ನಿನಗೆ ಹಿತವಾಗುವ ಈ ಮಾತನ್ನಾಡಿದನು.

05146002a ಪ್ರಾತೀಪಃ ಶಂತನುಸ್ತಾತ ಕುಲಸ್ಯಾರ್ಥೇ ಯಥೋತ್ಥಿತಃ|

05146002c ತಥಾ ದೇವವ್ರತೋ ಭೀಷ್ಮಃ ಕುಲಸ್ಯಾರ್ಥೇ ಸ್ಥಿತೋಽಭವತ್||

“ಅಯ್ಯಾ! ಹೇಗೆ ಪ್ರಾತೀಪ ಶಂತನುವು ಕುಲಕ್ಕಾಗಿ ನಡೆದುಕೊಂಡನೋ ಹಾಗೆ ದೇವವ್ರತ ಭೀಷ್ಮನು ಕುಲಕ್ಕಾಗಿ ನಿಂತಿದ್ದಾನೆ.

05146003a ತತಃ ಪಾಂಡುರ್ನರಪತಿಃ ಸತ್ಯಸಂಧೋ ಜಿತೇಂದ್ರಿಯಃ|

05146003c ರಾಜಾ ಕುರೂಣಾಂ ಧರ್ಮಾತ್ಮಾ ಸುವ್ರತಃ ಸುಸಮಾಹಿತಃ||

ನರಪತಿ, ಸತ್ಯಸಂಧ, ಜಿತೇಂದ್ರಿಯ, ಕುರುಗಳ ರಾಜ, ಧರ್ಮಾತ್ಮ, ಸಮಾಹಿತ ಪಾಂಡುವೂ ಹಾಗೆಯೇ ಇದ್ದನು.

05146004a ಜ್ಯೇಷ್ಠಾಯ ರಾಜ್ಯಮದದಾದ್ಧೃತರಾಷ್ಟ್ರಾಯ ಧೀಮತೇ|

05146004c ಯವೀಯಸಸ್ತಥಾ ಕ್ಷತ್ತುಃ ಕುರುವಂಶವಿವರ್ಧನಃ||

ಆ ಕುರುವಂಶ ವಿವರ್ಧನನು ರಾಜ್ಯವನ್ನು ಹಿರಿಯಣ್ಣ ಧೃತರಾಷ್ಟ್ರನಿಗೆ ಮತ್ತು ಕಿರಿಯ ತಮ್ಮ ಕ್ಷತ್ತನಿಗೆ ಒಪ್ಪಿಸಿದ್ದನು.

05146005a ತತಃ ಸಿಂಹಾಸನೇ ರಾಜನ್ ಸ್ಥಾಪಯಿತ್ವೈನಮಚ್ಯುತಂ|

05146005c ವನಂ ಜಗಾಮ ಕೌರವ್ಯೋ ಭಾರ್ಯಾಭ್ಯಾಂ ಸಹಿತೋಽನಘ||

ರಾಜನ್! ಅನಂತರ ಸಿಂಹಾಸನದಲ್ಲಿ ಈ ಅಚ್ಯುತನನ್ನು ಸ್ಥಾಪಿಸಿ ಆ ಅನಘ ಕೌರವ್ಯನು ಭಾರ್ಯೆಯರೊಡನೆ ವನಕ್ಕೆ ಹೋದನು.

05146006a ನೀಚೈಃ ಸ್ಥಿತ್ವಾ ತು ವಿದುರ ಉಪಾಸ್ತೇ ಸ್ಮ ವಿನೀತವತ್|

05146006c ಪ್ರೇಷ್ಯವತ್ ಪುರುಷವ್ಯಾಘ್ರೋ ವಾಲವ್ಯಜನಮುತ್ಕ್ಷಿಪನ್||

ಈ ಪುರುಷವ್ಯಾಘ್ರ ವಿದುರನಾದರೋ ವಿನೀತನಾಗಿ ತಾಳೆಯ ಮರದ ಗರಿಯನ್ನು ಬೀಸುತ್ತಾ ಕೆಳಗೆ ನಿಂತು ದಾಸನಂತೆ ಅವನ ಸೇವೆಗೈದನು.

05146007a ತತಃ ಸರ್ವಾಃ ಪ್ರಜಾಸ್ತಾತ ಧೃತರಾಷ್ಟ್ರಂ ಜನೇಶ್ವರಂ|

05146007c ಅನ್ವಪದ್ಯಂತ ವಿಧಿವದ್ಯಥಾ ಪಾಂಡುನರಾಧಿಪಂ||

ಅಯ್ಯಾ! ಆಗ ಪ್ರಜೆಗಳೆಲ್ಲರೂ ನರಾಧಿಪ ಪಾಂಡುವನ್ನು ಹೇಗೋ ಹಾಗೆ ಜನೇಶ್ವರ ಧೃತರಾಷ್ಟ್ರನನ್ನು ಅನುಸರಿಸಿದರು.

05146008a ವಿಸೃಜ್ಯ ಧೃತರಾಷ್ಟ್ರಾಯ ರಾಜ್ಯಂ ಸ ವಿದುರಾಯ ಚ|

05146008c ಚಚಾರ ಪೃಥಿವೀಂ ಪಾಂಡುಃ ಸರ್ವಾಂ ಪರಪುರಂಜಯಃ||

ಧೃತರಾಷ್ಟ್ರ ಮತ್ತು ವಿದುರರಿಗೆ ರಾಜ್ಯವನ್ನು ಬಿಟ್ಟು ಪರಪುರಂಜಯ ಪಾಂಡುವು ಭೂಮಿಯನ್ನೆಲ್ಲಾ ಸಂಚರಿಸಿದನು.

05146009a ಕೋಶಸಂಜನನೇ ದಾನೇ ಭೃತ್ಯಾನಾಂ ಚಾನ್ವವೇಕ್ಷಣೇ|

05146009c ಭರಣೇ ಚೈವ ಸರ್ವಸ್ಯ ವಿದುರಃ ಸತ್ಯಸಂಗರಃ||

ಸತ್ಯಸಂಗರ ವಿದುರನು ಕೋಶ, ದಾನ, ಸೇವಕರ ಮೇಲ್ವಿಚಾರಣೆ, ಮತ್ತು ಎಲ್ಲರಿಗೂ ಊಟಹಾಕಿಸುವುದು ಇವುಗಳನ್ನು ನೋಡಿಕೊಳ್ಳುತ್ತಿದ್ದನು.

05146010a ಸಂಧಿವಿಗ್ರಹಸಮ್ಯುಕ್ತೋ ರಾಜ್ಞಾಃ ಸಂವಾಹನಕ್ರಿಯಾಃ|

05146010c ಅವೈಕ್ಷತ ಮಹಾತೇಜಾ ಭೀಷ್ಮಃ ಪರಪುರಂಜಯಃ||

ಪರಪುರಂಜಯ ಮಹಾತೇಜಸ್ವಿ ಭೀಷ್ಮನು ರಾಜರೊಂದಿಗೆ ಸಂಧಿ-ಯುದ್ಧಗಳು, ಮತ್ತು ಕಪ್ಪ-ಕಾಣಿಕೆಗಳ ವಿಷಯಗಳನ್ನು ನೋಡಿಕೊಳ್ಳುತ್ತಿದ್ದನು.

05146011a ಸಿಂಹಾಸನಸ್ಥೋ ನೃಪತಿರ್ಧೃತರಾಷ್ಟ್ರೋ ಮಹಾಬಲಃ|

05146011c ಅನ್ವಾಸ್ಯಮಾನಃ ಸತತಂ ವಿದುರೇಣ ಮಹಾತ್ಮನಾ||

ಸಿಂಹಾಸನಸ್ಥನಾಗಿದ್ದ ನೃಪತಿ ಮಹಾಬಲಿ ಧೃತರಾಷ್ಟ್ರನು ಮಹಾತ್ಮ ವಿದುರನಿಂದ ಸತತವಾಗಿ ಸಲಹೆಗಳನ್ನು ಪಡೆಯುತ್ತಿದ್ದನು.

05146012a ಕಥಂ ತಸ್ಯ ಕುಲೇ ಜಾತಃ ಕುಲಭೇದಂ ವ್ಯವಸ್ಯಸಿ|

05146012c ಸಂಭೂಯ ಭ್ರಾತೃಭಿಃ ಸಾರ್ಧಂ ಭುಂಕ್ಷ್ವ ಭೋಗಾಂ ಜನಾಧಿಪ||

ಜನಾಧಿಪ! ಅವನ ಕುಲದಲ್ಲಿ ಹುಟ್ಟಿ ಏಕೆ ಕುಲವನ್ನು ಒಡೆಯಲು ತೊಡಗಿದ್ದೀಯೆ? ಸಹೋದರರೊಂದಿಗೆ ಒಂದಾಗು. ಒಟ್ಟಿಗೇ ಭೋಗಗಳನ್ನು ಭುಂಜಿಸು.

05146013a ಬ್ರವೀಮ್ಯಹಂ ನ ಕಾರ್ಪಣ್ಯಾನ್ನಾರ್ಥಹೇತೋಃ ಕಥಂ ಚನ|

05146013c ಭೀಷ್ಮೇಣ ದತ್ತಮಶ್ನಾಮಿ ನ ತ್ವಯಾ ರಾಜಸತ್ತಮ||

ನಾನು ಇದನ್ನು ಹೇಡಿತನದಿಂದ ಹೇಳುತ್ತಿಲ್ಲ. ಹಣದ ಕಾರಣಕ್ಕಂತೂ ಅಲ್ಲವೇ ಅಲ್ಲ. ಭೀಷ್ಮನು ಕೊಟ್ಟಿದ್ದುದನ್ನು ತಿನ್ನುತ್ತಿದ್ದೇನೆ. ರಾಜಸತ್ತಮ! ನಿನ್ನಿಂದಲ್ಲ!

05146014a ನಾಹಂ ತ್ವತ್ತೋಽಭಿಕಾಂಕ್ಷಿಷ್ಯೇ ವೃತ್ತ್ಯುಪಾಯಂ ಜನಾಧಿಪ|

05146014c ಯತೋ ಭೀಷ್ಮಸ್ತತೋ ದ್ರೋಣೋ ಯದ್ಭೀಷ್ಮಸ್ತ್ವಾಹ ತತ್ಕುರು||

ಜನಾಧಿಪ! ನಿನ್ನಿಂದ ವೃತ್ತಿ ವೇತನವನ್ನು ಪಡೆಯಲು ಬಯಸುತ್ತಿಲ್ಲ. ಭೀಷ್ಮನು ಎಲ್ಲಿದ್ದಾನೋ ಅಲ್ಲಿ ದ್ರೋಣನು ಇರಲೇಬೇಕು. ಭೀಷ್ಮನು ಹೇಳಿದಂತೆ ಮಾಡು.

05146015a ದೀಯತಾಂ ಪಾಂಡುಪುತ್ರೇಭ್ಯೋ ರಾಜ್ಯಾರ್ಧಮರಿಕರ್ಶನ|

05146015c ಸಮಮಾಚಾರ್ಯಕಂ ತಾತ ತವ ತೇಷಾಂ ಚ ಮೇ ಸದಾ||

ಅರಿಕರ್ಶನ! ಮಗೂ! ಪಾಂಡುಪುತ್ರರಿಗೆ ಅರ್ಧರಾಜ್ಯವನ್ನು ಕೊಡು. ಅವರಿಗೆ ಹೇಗೆ ಆಚಾರ್ಯನೋ ಹಾಗೆ ನಾನು ನಿನಗೂ ಕೂಡ.

05146016a ಅಶ್ವತ್ಥಾಮಾ ಯಥಾ ಮಹ್ಯಂ ತಥಾ ಶ್ವೇತಹಯೋ ಮಮ|

05146016c ಬಹುನಾ ಕಿಂ ಪ್ರಲಾಪೇನ ಯತೋ ಧರ್ಮಸ್ತತೋ ಜಯಃ||

ನನಗೆ ಅಶ್ವತ್ಥಾಮನು ಹೇಗೋ ಹಾಗೆ ಆ ಶ್ವೇತಹಯನೂ ನನ್ನವನೇ. ಬಹಳಷ್ಟು ಏಕೆ ಪ್ರಲಪಿಸಬೇಕು? ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿದೆ.”

05146017a ಏವಮುಕ್ತೇ ಮಹಾರಾಜ ದ್ರೋಣೇನಾಮಿತತೇಜಸಾ|

05146017c ವ್ಯಾಜಹಾರ ತತೋ ವಾಕ್ಯಂ ವಿದುರಃ ಸತ್ಯಸಂಗರಃ|

05146017e ಪಿತುರ್ವದನಮನ್ವೀಕ್ಷ್ಯ ಪರಿವೃತ್ಯ ಚ ಧರ್ಮವಿತ್||

ಮಹಾರಾಜ! ಅಮಿತತೇಜಸ್ವಿ ದ್ರೋಣನು ಹೀಗೆ ಹೇಳಲು ಸತ್ಯಸಂಗರ ಧರ್ಮವಿದು ವಿದುರನು ಚಿಕ್ಕಪ್ಪ ಭೀಷ್ಮನ ಕಡೆ ತಿರುಗಿ ಅವನ ಮುಖವನ್ನು ನೋಡುತ್ತಾ ಹೇಳಿದನು:

05146018a ದೇವವ್ರತ ನಿಬೋಧೇದಂ ವಚನಂ ಮಮ ಭಾಷತಃ|

05146018c ಪ್ರನಷ್ಟಃ ಕೌರವೋ ವಂಶಸ್ತ್ವಯಾಯಂ ಪುನರುದ್ಧೃತಃ||

“ದೇವವ್ರತ! ನಾನು ಹೇಳುವ ಮಾತನ್ನು ಕೇಳು. ಈ ಕುರುವಂಶವು ಪ್ರನಷ್ಟವಾಗುತ್ತಿದ್ದಾಗ ನೀನು ಪುನಃ ಚೇತರಿಸುವಂತೆ ಮಾಡಿದೆ.

05146019a ತನ್ಮೇ ವಿಲಪಮಾನಸ್ಯ ವಚನಂ ಸಮುಪೇಕ್ಷಸೇ|

05146019c ಕೋಽಯಂ ದುರ್ಯೋಧನೋ ನಾಮ ಕುಲೇಽಸ್ಮಿನ್ಕುಲಪಾಂಸನಃ||

ಇದರಿಂದ ವಿಲಪಿಸುತ್ತಿರುವ ನನ್ನ ಮಾತನ್ನು ನೀನು ಕಡೆಗಾಣುತ್ತಿದ್ದೀಯೆ. ಈ ಕುಲದಲ್ಲಿ ಕುಲಪಾಂಸನನಾಗಿರುವ ದುರ್ಯೋಧನ ಎಂಬ ಹೆಸರಿನವನು ಯಾರು?

05146020a ಯಸ್ಯ ಲೋಭಾಭಿಭೂತಸ್ಯ ಮತಿಂ ಸಮನುವರ್ತಸೇ|

05146020c ಅನಾರ್ಯಸ್ಯಾಕೃತಜ್ಞಾಸ್ಯ ಲೋಭೋಪಹತಚೇತಸಃ|

05146020e ಅತಿಕ್ರಾಮತಿ ಯಃ ಶಾಸ್ತ್ರಂ ಪಿತುರ್ಧರ್ಮಾರ್ಥದರ್ಶಿನಃ||

ಲೋಭದಲ್ಲಿ ನೆಲೆಸಿದ, ಅನಾರ್ಯನಾದ, ಅಕೃತಜ್ಞನಾದ, ಲೋಭದಿಂದ ಚೇತನವನ್ನು ಕಳೆದುಕೊಂಡ, ತಂದೆಯ ಧರ್ಮಾರ್ಥದರ್ಶಿನಿ ಶಾಸ್ತ್ರಗಳನ್ನು ಅತಿಕ್ರಮಿಸುವ ಅವನ ಬುದ್ಧಿಯನ್ನು ಅನುಸರಿಸುತ್ತಿರುವೆಯಲ್ಲ!

05146021a ಏತೇ ನಶ್ಯಂತಿ ಕುರವೋ ದುರ್ಯೋಧನಕೃತೇನ ವೈ|

05146021c ಯಥಾ ತೇ ನ ಪ್ರಣಶ್ಯೇಯುರ್ಮಹಾರಾಜ ತಥಾ ಕುರು||

ದುರ್ಯೋಧನನು ಕುರುಗಳು ನಶಿಸುವಂತೆ ಮಾಡುತ್ತಾನೆ! ಮಹಾರಾಜ! ಅವನಿಂದ ನಾಶಹೊಂದದಂತೆ ಮಾಡು.

05146022a ಮಾಂ ಚೈವ ಧೃತರಾಷ್ಟ್ರಂ ಚ ಪೂರ್ವಮೇವ ಮಹಾದ್ಯುತೇ|

05146022c ಚಿತ್ರಕಾರ ಇವಾಲೇಖ್ಯಂ ಕೃತ್ವಾ ಮಾ ಸ್ಮ ವಿನಾಶಯ|

05146022e ಪ್ರಜಾಪತಿಃ ಪ್ರಜಾಃ ಸೃಷ್ಟ್ವಾ ಯಥಾ ಸಂಹರತೇ ತಥಾ||

ಮಹಾದ್ಯುತೇ! ಹಿಂದೆ ನನ್ನನ್ನೂ ಧೃತರಾಷ್ಟ್ರನನ್ನೂ ಓರ್ವ ಚಿತ್ರಕಾರನು ಬರೆದಂತೆ ರೂಪಿಸಿದ್ದೆ. ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿ ಸಂಹರಿಸುವಂತೆ ನೀನು ನಮ್ಮನ್ನು ನಾಶಗೊಳಿಸಬೇಡ!

05146023a ನೋಪೇಕ್ಷಸ್ವ ಮಹಾಬಾಹೋ ಪಶ್ಯಮಾನಃ ಕುಲಕ್ಷಯಂ|

05146023c ಅಥ ತೇಽದ್ಯ ಮತಿರ್ನಷ್ಟಾ ವಿನಾಶೇ ಪ್ರತ್ಯುಪಸ್ಥಿತೇ|

05146023e ವನಂ ಗಚ್ಚ ಮಯಾ ಸಾರ್ಧಂ ಧೃತರಾಷ್ಟ್ರೇಣ ಚೈವ ಹ||

ಮಹಾಬಾಹೋ! ನಿನ್ನ ಕಣ್ಣೆದುರಿಗೇ ನಡೆಯುವ ಈ ಕುಲಕ್ಷಯವನ್ನು ಉಪೇಕ್ಷಿಸಬೇಡ! ಒದಗಿರುವ ವಿನಾಶದಿಂದ ಇಂದು ನಿನ್ನ ಬುದ್ಧಿಯು ನಷ್ಟವಾಗಿದೆಯೆಂದಾದರೆ ಧೃತರಾಷ್ಟ್ರ ಮತ್ತು ನನ್ನೊಂದಿಗೆ ವನಕ್ಕೆ ಹೊರಡು!

05146024a ಬದ್ಧ್ವಾ ವಾ ನಿಕೃತಿಪ್ರಜ್ಞಾಂ ಧಾರ್ತರಾಷ್ಟ್ರಂ ಸುದುರ್ಮತಿಂ|

05146024c ಸಾಧ್ವಿದಂ ರಾಜ್ಯಮದ್ಯಾಸ್ತು ಪಾಂಡವೈರಭಿರಕ್ಷಿತಂ||

ಸುದುರ್ಮತಿ ಧಾರ್ತರಾಷ್ಟ್ರನನ್ನು ಬಂಧಿಸಿ ಅಥವಾ ಮೂರ್ಛೆಗೊಳಿಸಿ ಈ ರಾಜ್ಯವು ಪಾಂಡವರಿಂದ ಅಭಿರಕ್ಷಿತಗೊಳ್ಳುತ್ತದೆ.

05146025a ಪ್ರಸೀದ ರಾಜಶಾರ್ದೂಲ ವಿನಾಶೋ ದೃಶ್ಯತೇ ಮಹಾನ್|

05146025c ಪಾಂಡವಾನಾಂ ಕುರೂಣಾಂ ಚ ರಾಜ್ಞಾ ಚಾಮಿತತೇಜಸಾಂ||

ರಾಜಶಾರ್ದೂಲ! ಪ್ರಸೀದನಾಗು! ಅಮಿತ ತೇಜಸ್ವಿ ಪಾಂಡವರ, ಕುರುಗಳ ಮತ್ತು ರಾಜರ ಮಹಾ ವಿನಾಶವು ಕಾಣುತ್ತಿದೆ.”

05146026a ವಿರರಾಮೈವಮುಕ್ತ್ವಾ ತು ವಿದುರೋ ದೀನಮಾನಸಃ|

05146026c ಪ್ರಧ್ಯಾಯಮಾನಃ ಸ ತದಾ ನಿಃಶ್ವಸಂಶ್ಚ ಪುನಃ ಪುನಃ||

ಹೀಗೆ ಹೇಳಿ ದೀನಮಾನಸ ವಿದುರನು ಸುಮ್ಮನಾದನು. ಚಿಂತೆಗೊಳಗಾಗಿ ಪುನಃ ಪುನಃ ಸಿಟ್ಟುಸಿರುಬಿಡುತ್ತಿದ್ದನು.

05146027a ತತೋಽಥ ರಾಜ್ಞಾಃ ಸುಬಲಸ್ಯ ಪುತ್ರೀ

         ಧರ್ಮಾರ್ಥಯುಕ್ತಂ ಕುಲನಾಶಭೀತಾ|

05146027c ದುರ್ಯೋಧನಂ ಪಾಪಮತಿಂ ನೃಶಂಸಂ

         ರಾಜ್ಞಾಂ ಸಮಕ್ಷಂ ಸುತಮಾಹ ಕೋಪಾತ್||

ಆಗ ರಾಜ ಸುಬಲನ ಪುತ್ರಿಯು ಕುಲನಾಶನದ ಭೀತಿಯಿಂದ ರಾಜರ ಸಮಕ್ಷಮದಲ್ಲಿ ಕ್ರೂರಿ ಪಾಪಮತಿ ದುರ್ಯೋಧನನಿಗೆ ಕೋಪದಿಂದ ಧರ್ಮಾತ್ಮಯುಕ್ತವಾದ ಈ ಮಾತನ್ನು ಹೇಳಿದಳು.

05146028a ಯೇ ಪಾರ್ಥಿವಾ ರಾಜಸಭಾಂ ಪ್ರವಿಷ್ಟಾ

         ಬ್ರಹ್ಮರ್ಷಯೋ ಯೇ ಚ ಸಭಾಸದೋಽನ್ಯೇ|

05146028c ಶೃಣ್ವಂತು ವಕ್ಷ್ಯಾಮಿ ತವಾಪರಾಧಂ

         ಪಾಪಸ್ಯ ಸಾಮಾತ್ಯಪರಿಚ್ಚದಸ್ಯ||

“ಈ ರಾಜಸಭೆಯನ್ನು ಪ್ರವೇಶಿಸಿದ ಪಾರ್ಥಿವರೇ! ಬ್ರಹ್ಮರ್ಷಿಗಳೇ! ಅನ್ಯ ಸಭಾಸದರೇ! ಕೇಳಿರಿ! ಅಮಾತ್ಯ, ಸೇವಕರೊಂದಿಗೆ ನೀವು ಮಾಡಿದ ಪಾಪ ಮತ್ತು ನಿಮ್ಮ ಅಪರಾಧವನ್ನು ಹೇಳುತ್ತೇನೆ!

05146029a ರಾಜ್ಯಂ ಕುರೂಣಾಮನುಪೂರ್ವಭೋಗ್ಯಂ

         ಕ್ರಮಾಗತೋ ನಃ ಕುಲಧರ್ಮ ಏಷಃ|

05146029c ತ್ವಂ ಪಾಪಬುದ್ಧೇಽತಿನೃಶಂಸಕರ್ಮನ್

         ರಾಜ್ಯಂ ಕುರೂಣಾಮನಯಾದ್ವಿಹಂಸಿ||

ಕುರುಗಳ ಈ ರಾಜ್ಯವು ವಂಶಪಾರಂಪರಿಕವಾಗಿ ಭೋಗಿಸಲ್ಪಟ್ಟು ಬಂದಿದೆ. ಇದೇ ಕ್ರಮಾಗತವಾಗಿ ಬಂದಿರುವ ಕುಲಧರ್ಮ. ಕ್ರೂರಕರ್ಮಿಗಳೇ! ನೀವು ಪಾಪಬುದ್ಧಿಯಿಂದ ಕುರುಗಳ ರಾಜ್ಯವನ್ನು ಧ್ವಂಸಿಸುತ್ತಿದ್ದೀರಿ.

05146030a ರಾಜ್ಯೇ ಸ್ಥಿತೋ ಧೃತರಾಷ್ಟ್ರೋ ಮನೀಷೀ

         ತಸ್ಯಾನುಜೋ ವಿದುರೋ ದೀರ್ಘದರ್ಶೀ|

05146030c ಏತಾವತಿಕ್ರಮ್ಯ ಕಥಂ ನೃಪತ್ವಂ

         ದುರ್ಯೋಧನ ಪ್ರಾರ್ಥಯಸೇಽದ್ಯ ಮೋಹಾತ್||

ರಾಜ್ಯದಲ್ಲಿ ನೆಲೆಸಿರುವ ಮನೀಷೀ ಧೃತರಾಷ್ಟ್ರ ಮತ್ತು ಅವನ ತಮ್ಮ ದೀರ್ಘದರ್ಶಿ ವಿದುರನನ್ನು ಅತಿಕ್ರಮಿಸಿ ದುರ್ಯೋಧನ! ನೀನು ಹೇಗೆ ಮೋಹದಿಂದ ಇಂದು ನೃಪತ್ವವನ್ನು ಕೇಳುತ್ತಿದ್ದೀಯೆ?

05146031a ರಾಜಾ ಚ ಕ್ಷತ್ತಾ ಚ ಮಹಾನುಭಾವೌ

         ಭೀಷ್ಮೇ ಸ್ಥಿತೇ ಪರವಂತೌ ಭವೇತಾಂ|

05146031c ಅಯಂ ತು ಧರ್ಮಜ್ಞಾತಯಾ ಮಹಾತ್ಮಾ

         ನ ರಾಜ್ಯಕಾಮೋ ನೃವರೋ ನದೀಜಃ||

ಭೀಷ್ಮನಿರುವಾಗ ರಾಜ ಮತ್ತು ಕ್ಷತ್ತರು ಇಬ್ಬರು ಮಹಾನುಭಾವರೂ ಅವನ ಅಧಿಕಾರದಲ್ಲಿದ್ದಾರೆ. ಆದರೆ ಧರ್ಮವನ್ನು ತಿಳಿದಿರುವ ಮಹಾತ್ಮ ನದೀಜನು ರಾಜ್ಯವನ್ನು ಬಯಸುವುದಿಲ್ಲ.

05146032a ರಾಜ್ಯಂ ತು ಪಾಂಡೋರಿದಮಪ್ರಧೃಷ್ಯಂ

         ತಸ್ಯಾದ್ಯ ಪುತ್ರಾಃ ಪ್ರಭವಂತಿ ನಾನ್ಯೇ|

05146032c ರಾಜ್ಯಂ ತದೇತನ್ನಿಖಿಲಂ ಪಾಂಡವಾನಾಂ

         ಪೈತಾಮಹಂ ಪುತ್ರಪೌತ್ರಾನುಗಾಮಿ||

ಈ ರಾಜ್ಯವು ಅಪ್ರಧೃಷ್ಯವಾಗಿ ಪಾಂಡುವಿನದಾಗಿತ್ತು. ಇಂದು ಅವನ ಪುತ್ರರದ್ದಲ್ಲದೇ ಇತರರಿಗಾಗುವುದಿಲ್ಲ. ಈ ಅಖಿಲ ರಾಜ್ಯವು ಪಾಂಡವರದ್ದು. ಅವರ ಪಿತಾಮಹನಿಂದ ಬಂದಿರುವುದು ಮತ್ತು ಮಕ್ಕಳು ಮೊಮ್ಮಕ್ಕಳಿಗೆ ಹೋಗುವಂಥಹುದು.

05146033a ಯದ್ವೈ ಬ್ರೂತೇ ಕುರುಮುಖ್ಯೋ ಮಹಾತ್ಮಾ

         ದೇವವ್ರತಃ ಸತ್ಯಸಂಧೋ ಮನೀಷೀ|

05146033c ಸರ್ವಂ ತದಸ್ಮಾಭಿರಹತ್ಯ ಧರ್ಮಂ

         ಗ್ರಾಹ್ಯಂ ಸ್ವಧರ್ಮಂ ಪರಿಪಾಲಯದ್ಭಿಃ||

ಕುರುಮುಖ್ಯ, ಮಹಾತ್ಮ, ಸತ್ಯಸಂಧ, ಮನೀಷೀ ದೇವವ್ರತನು ಏನು ಹೇಳುತ್ತಾನೋ ಅದನ್ನು ನಾವೆಲ್ಲರೂ ನಾಶಗೊಳ್ಳದ ಧರ್ಮವೆಂದು ಸ್ವೀಕರಿಸಿ, ಸ್ವಧರ್ಮವೆಂದು ಪರಿಪಾಲಿಸಬೇಕು.

05146034a ಅನುಜ್ಞಾಯಾ ಚಾಥ ಮಹಾವ್ರತಸ್ಯ

         ಬ್ರೂಯಾನ್ನೃಪೋ ಯದ್ವಿದುರಸ್ತಥೈವ|

05146034c ಕಾರ್ಯಂ ಭವೇತ್ತತ್ಸುಹೃದ್ಭಿರ್ನಿಯುಜ್ಯ

         ಧರ್ಮಂ ಪುರಸ್ಕೃತ್ಯ ಸುದೀರ್ಘಕಾಲಂ||

ಈ ಮಹಾವ್ರತನ ಅನುಜ್ಞೆಯಂತೆ ನೃಪ ಮತ್ತು ವಿದುರರು ಹೇಳಲಿ. ನಮ್ಮ ಸುಹೃದಯಿಗಳು ಧರ್ಮವನ್ನು ಮುಂದಿಟ್ಟುಕೊಂಡು ದೀರ್ಘಕಾಲದವರೆಗೆ ಅದರಂತೆಯೇ ಮಾಡಲಿ.

05146035a ನ್ಯಾಯಾಗತಂ ರಾಜ್ಯಮಿದಂ ಕುರೂಣಾಂ

         ಯುಧಿಷ್ಠಿರಃ ಶಾಸ್ತು ವೈ ಧರ್ಮಪುತ್ರಃ|

05146035c ಪ್ರಚೋದಿತೋ ಧೃತರಾಷ್ಟ್ರೇಣ ರಾಜ್ಞಾ

         ಪುರಸ್ಕೃತಃ ಶಾಂತನವೇನ ಚೈವ||

ನ್ಯಾಯಗತವಾಗಿರುವ ಕುರುಗಳ ಈ ರಾಜ್ಯವನ್ನು ಧರ್ಮಪುತ್ರ ಯುಧಿಷ್ಠಿರನು, ರಾಜಾ ಧೃತರಾಷ್ಟ್ರನಿಂದ ಪ್ರಚೋದಿತನಾಗಿ, ಶಾಂತನವನನ್ನು ಮುಂದಿಟ್ಟುಕೊಂಡು ಆಳಲಿ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಕೃಷ್ಣವಾಕ್ಯೇ ಷಟ್‌ಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಕೃಷ್ಣವಾಕ್ಯದಲ್ಲಿ ನೂರಾನಲ್ವತ್ತಾರನೆಯ ಅಧ್ಯಾಯವು.

Image result for flowers against white background

Comments are closed.