Udyoga Parva: Chapter 145

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೫

ಕೃಷ್ಣನು ಹಸ್ತಿನಾಪುರದಲ್ಲಾದುದನ್ನು ಯುಧಿಷ್ಠಿರನಿಗೆ ವರದಿ ಮಾಡಿದುದು

ಹಸ್ತಿನಾಪುರದಿಂದ ಉಪಪ್ಲವ್ಯಕ್ಕೆ ಬಂದು ಕೃಷ್ಣನು ಯುದಿಷ್ಠಿರನಿಗೆ ಅಲ್ಲಿ ನಡೆದುದೆಲ್ಲವನ್ನೂ ತಿಳಿಸಲು, ಯುಧಿಷ್ಠಿರನು ಭೀಷ್ಮ-ದ್ರೋಣರು ಏನು ಹೇಳಿದರೆಂದು ಕೃಷ್ಣನನ್ನು ಕೇಳಿದುದು (೧-೧೨). ಭೀಷ್ಮನು ತನ್ನ ಕುಲಕ್ಕೆ ಹಿತವಾದುದನ್ನು ಮಾಡೆಂದು ಶಂತನುವಿನಿಂದ ಪ್ರಾರಂಭಿಸಿ ಕುಲವು ಹೇಗೆ ನಡೆದುಕೊಂಡು ಬಂದಿದೆಯೆಂದು ಹೇಳಿದುದನ್ನು ಕೃಷ್ಣನು ಯುಧಿಷ್ಠಿರನಿಗೆ ವರದಿ ಮಾಡಿದುದು (೧೩-೪೦).

05145001 ವೈಶಂಪಾಯನ ಉವಾಚ|

05145001a ಆಗಮ್ಯ ಹಾಸ್ತಿನಪುರಾದುಪಪ್ಲವ್ಯಮರಿಂದಮಃ|

05145001c ಪಾಂಡವಾನಾಂ ಯಥಾವೃತ್ತಂ ಕೇಶವಃ ಸರ್ವಮುಕ್ತವಾನ್||

ವೈಶಂಪಾಯನನು ಹೇಳಿದನು: “ಹಸ್ತಿನಾಪುರದಿಂದ ಉಪಪ್ಲವ್ಯಕ್ಕೆ ಬಂದು ಅರಿಂದಮ ಕೇಶವನು ಪಾಂಡವರಿಗೆ ಎಲ್ಲವನ್ನೂ ಹೇಳಿದನು.

05145002a ಸಂಭಾಷ್ಯ ಸುಚಿರಂ ಕಾಲಂ ಮಂತ್ರಯಿತ್ವಾ ಪುನಃ ಪುನಃ|

05145002c ಸ್ವಮೇವಾವಸಥಂ ಶೌರಿರ್ವಿಶ್ರಾಮಾರ್ಥಂ ಜಗಾಮ ಹ||

ಬಹಳ ಹೊತ್ತು ಮಾತುಕತೆಯಾಡಿ, ಪುನಃ ಪುನಃ ಮಂತ್ರಾಲೋಚನೆ ಮಾಡಿ ಶೌರಿಯು ವಿಶ್ರಾಮಾರ್ಥವಾಗಿ ತನ್ನ ಬಿಡಾರಕ್ಕೆ ಹೋದನು.

05145003a ವಿಸೃಜ್ಯ ಸರ್ವಾನ್ನೃಪತೀನ್ವಿರಾಟಪ್ರಮುಖಾಂಸ್ತದಾ|

05145003c ಪಾಂಡವಾ ಭ್ರಾತರಃ ಪಂಚ ಭಾನಾವಸ್ತಂಗತೇ ಸತಿ||

ಸೂರ್ಯನು ಮುಳುಗಲು ವಿರಾಟನೇ ಮೊದಲಾದ ಸರ್ವ ಪ್ರಮುಖ ರಾಜರನ್ನು ಕಳುಹಿಸಿ ಐವರು ಪಾಂಡವ ಸಹೋದರರು ಸಂಧ್ಯಾವಂದನೆಯನ್ನು ಪೂರೈಸಿದರು.

05145004a ಸಂಧ್ಯಾಮುಪಾಸ್ಯ ಧ್ಯಾಯಂತಸ್ತಮೇವ ಗತಮಾನಸಾಃ|

05145004c ಆನಾಯ್ಯ ಕೃಷ್ಣಂ ದಾಶಾರ್ಹಂ ಪುನರ್ಮಂತ್ರಮಮಂತ್ರಯನ್||

ಸಂಧ್ಯಾವಂದನೆಯನ್ನು ಮುಗಿಸಿ, ಅದರ ಕುರಿತೇ ಯೋಚಿಸಿ, ಮನಸ್ಸನ್ನು ಕಳೆದುಕೊಂಡ ಅವನು ಪುನಃ ಮಂತ್ರಾಲೋಚಿಸಲು ದಾಶಾರ್ಹ ಕೃಷ್ಣನಿಗೆ ಬರಲು ಕರೆ ಕಳುಹಿಸಿದನು.

05145005 ಯುಧಿಷ್ಠಿರ ಉವಾಚ|

05145005a ತ್ವಯಾ ನಾಗಪುರಂ ಗತ್ವಾ ಸಭಾಯಾಂ ಧೃತರಾಷ್ಟ್ರಜಃ|

05145005c ಕಿಮುಕ್ತಃ ಪುಂಡರೀಕಾಕ್ಷ ತನ್ನಃ ಶಂಸಿತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಪುಂಡರೀಕಾಕ್ಷ! ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ಏನು ಹೇಳಿದೆ ಎನ್ನುವುದನ್ನು ವಿವರಿಸಬೇಕು.”

05145006 ವಾಸುದೇವ ಉವಾಚ|

05145006a ಮಯಾ ನಾಗಪುರಂ ಗತ್ವಾ ಸಭಾಯಾಂ ಧೃತರಾಷ್ಟ್ರಜಃ|

05145006c ತಥ್ಯಂ ಪಥ್ಯಂ ಹಿತಂ ಚೋಕ್ತೋ ನ ಚ ಗೃಹ್ಣಾತಿ ದುರ್ಮತಿಃ||

ವಾಸುದೇವನು ಹೇಳಿದನು: “ನಾನು ನಾಗಪುರದಲ್ಲಿ ಧೃತರಾಷ್ಟ್ರಜನ ಸಭೆಗೆ ಹೋಗಿ ನಿಜವಾದುದನ್ನೂ, ಪಾಲಿಸಬೇಕಾದುದನ್ನೂ ಮತ್ತು ಹಿತವಾದುದನ್ನೂ ಹೇಳಿದೆನು. ಆದರೆ ಆ ದುರ್ಮತಿಯು ಅದನ್ನು ಸ್ವೀಕರಿಸಲಿಲ್ಲ.”

05145007 ಯುಧಿಷ್ಠಿರ ಉವಾಚ|

05145007a ತಸ್ಮಿನ್ನುತ್ಪಥಮಾಪನ್ನೇ ಕುರುವೃದ್ಧಃ ಪಿತಾಮಹಃ|

05145007c ಕಿಮುಕ್ತವಾನ್ ಹೃಷೀಕೇಶ ದುರ್ಯೋಧನಮಮರ್ಷಣಂ||

05145007e ಆಚಾರ್ಯೋ ವಾ ಮಹಾಬಾಹೋ ಭಾರದ್ವಾಜಃ ಕಿಮಬ್ರವೀತ್||

ಯುಧಿಷ್ಠಿರನು ಹೇಳಿದನು: “ಹೃಷೀಕೇಶ! ಕ್ರೂರಿ ದುರ್ಯೋಧನನು ಕೆಟ್ಟ ದಾರಿಯನ್ನು ಹಿಡಿದಾಗ ಕುರುವೃದ್ಧ ಪಿತಾಮಹನು ಏನು ಹೇಳಿದನು? ಮಹಾಬಾಹು ಆಚಾರ್ಯ ಭಾರದ್ವಾಜನು ಏನು ಹೇಳಿದನು?

05145008a ಪಿತಾ ಯವೀಯಾನಸ್ಮಾಕಂ ಕ್ಷತ್ತಾ ಧರ್ಮಭೃತಾಂ ವರಃ|

05145008c ಪುತ್ರಶೋಕಾಭಿಸಂತಪ್ತಃ ಕಿಮಾಹ ಧೃತರಾಷ್ಟ್ರಜಂ||

ನಮ್ಮ ಕಿರಿಯ ತಂದೆಯಾದ, ಧರ್ಮಭೃತರಲ್ಲಿ ಶ್ರೇಷ್ಠನಾದ, ಪುತ್ರಶೋಕದಿಂದ ಸಂತಪ್ತನಾದ ಕ್ಷತ್ತನು ಧೃತರಾಷ್ಟ್ರಜನಿಗೆ ಏನು ಹೇಳಿದನು?

05145009a ಕಿಂ ಚ ಸರ್ವೇ ನೃಪತಯಃ ಸಭಾಯಾಂ ಯೇ ಸಮಾಸತೇ|

05145009c ಉಕ್ತವಂತೋ ಯಥಾತತ್ತ್ವಂ ತದ್ಬ್ರೂಹಿ ತ್ವಂ ಜನಾರ್ದನ||

ಜನಾರ್ದನ! ಅಲ್ಲಿ ಸಭೆಯಲ್ಲಿ ಸೇರಿದ್ದ ಎಲ್ಲ ನೃಪತಿಯರು ಏನು ಹೇಳಿದರು? ಅವರು ಹೇಳಿದುದನ್ನು ಯಥಾತತ್ವವಾಗಿ ಹೇಳು.

05145010a ಉಕ್ತವಾನ್ ಹಿ ಭವಾನ್ಸರ್ವಂ ವಚನಂ ಕುರುಮುಖ್ಯಯೋಃ|

05145010c ಕಾಮಲೋಭಾಭಿಭೂತಸ್ಯ ಮಂದಸ್ಯ ಪ್ರಾಜ್ಞಾಮಾನಿನಃ||

ನೀನು ಈಗಾಗಲೇ ಕುರುಮುಖ್ಯರು ಕಾಮಲೋಭಗಳಿಂದ ತುಂಬಿದ, ಮೂಢನಾಗಿದ್ದರೂ ಪ್ರಾಜ್ಞನೆಂದು ತಿಳಿದುಕೊಂಡಿರುವ ಅವನಿಗೆ ಹೇಳಿದುದೆಲ್ಲವನ್ನೂ ಹೇಳಿದ್ದೀಯೆ.

05145011a ಅಪ್ರಿಯಂ ಹೃದಯೇ ಮಹ್ಯಂ ತನ್ನ ತಿಷ್ಠತಿ ಕೇಶವ|

05145011c ತೇಷಾಂ ವಾಕ್ಯಾನಿ ಗೋವಿಂದ ಶ್ರೋತುಮಿಚ್ಚಾಮ್ಯಹಂ ವಿಭೋ||

ಆದರೆ ಕೇಶವ! ಅಪ್ರಿಯವಾದುದು ನನ್ನ ಹೃದಯದಲ್ಲಿ ನಿಲ್ಲುವುದಿಲ್ಲ. ಗೋವಿಂದ! ವಿಭೋ! ಅವರ ಮಾತುಗಳನ್ನು ಕೇಳಲು ಬಯಸುತ್ತೇನೆ.

05145012a ಯಥಾ ಚ ನಾಭಿಪದ್ಯೇತ ಕಾಲಸ್ತಾತ ತಥಾ ಕುರು|

05145012c ಭವಾನ್ ಹಿ ನೋ ಗತಿಃ ಕೃಷ್ಣ ಭವಾನ್ನಾಥೋ ಭವಾನ್ಗುರುಃ||

ಅಯ್ಯಾ! ಈ ಅವಕಾಶವು ಕಳೆದುಹೋಗದಂತೆ ಮಾಡು. ಕೃಷ್ಣ! ನೀನೇ ನಮಗೆ ಗತಿ. ನೀನೇ ನಾಥ. ನೀನೇ ಗುರು.”

05145013 ವಾಸುದೇವ ಉವಾಚ|

05145013a ಶೃಣು ರಾಜನ್ಯಥಾ ವಾಕ್ಯಮುಕ್ತೋ ರಾಜಾ ಸುಯೋಧನಃ|

05145013c ಮಧ್ಯೇ ಕುರೂಣಾಂ ರಾಜೇಂದ್ರ ಸಭಾಯಾಂ ತನ್ನಿಬೋಧ ಮೇ||

ವಾಸುದೇವನು ಹೇಳಿದನು: “ರಾಜನ್! ರಾಜೇಂದ್ರ! ಕುರುಗಳ ಮಧ್ಯೆ ಸಭೆಯಲ್ಲಿ ರಾಜಾ ಸುಯೋಧನನಿಗೆ ಹೇಳಿದ ಮಾತುಗಳನ್ನು ಕೇಳು. ಅರ್ಥಮಾಡಿಕೋ!

05145014a ಮಯಾ ವೈ ಶ್ರಾವಿತೇ ವಾಕ್ಯೇ ಜಹಾಸ ಧೃತರಾಷ್ಟ್ರಜಃ|

05145014c ಅಥ ಭೀಷ್ಮಃ ಸುಸಂಕ್ರುದ್ಧ ಇದಂ ವಚನಮಬ್ರವೀತ್||

ನನ್ನ ಮಾತನ್ನು ಕೇಳಿ ಧೃತರಾಷ್ಟ್ರಜನು ಜೋರಾಗಿ ನಕ್ಕನು. ಆಗ ಭೀಷ್ಮನು ಸಂಕೃದ್ಧನಾಗಿ ಈ ಮಾತುಗಳನ್ನಾಡಿದನು:

05145015a ದುರ್ಯೋಧನ ನಿಬೋಧೇದಂ ಕುಲಾರ್ಥೇ ಯದ್ಬ್ರವೀಮಿ ತೇ|

05145015c ತಚ್ಚ್ರುತ್ವಾ ರಾಜಶಾರ್ದೂಲ ಸ್ವಕುಲಸ್ಯ ಹಿತಂ ಕುರು||

“ದುರ್ಯೋಧನ! ಕುಲಾರ್ಥಕ್ಕಾಗಿ ನಾನು ಹೇಳುವುದನ್ನು ಅರ್ಥಮಾಡಿಕೋ! ರಾಜಶಾರ್ದೂಲ! ಅದನ್ನು ಕೇಳಿ ನಿನ್ನ ಕುಲಕ್ಕೆ ಹಿತವಾದುದನ್ನು ಮಾಡು.

05145016a ಮಮ ತಾತ ಪಿತಾ ರಾಜನ್ ಶಂತನುರ್ಲೋಕವಿಶ್ರುತಃ|

05145016c ತಸ್ಯಾಹಮೇಕ ಏವಾಸಂ ಪುತ್ರಃ ಪುತ್ರವತಾಂ ವರಃ||

ರಾಜನ್! ನನ್ನ ತಂದೆಯು ಲೋಕವಿಶ್ರುತ ಶಂತನು. ಆ ಪುತ್ರವಂತರಲ್ಲಿ ಶ್ರೇಷ್ಠನಿಗೆ ನಾನೊಬ್ಬನೇ ಮಗನಾಗಿದ್ದೆನು.

05145017a ತಸ್ಯ ಬುದ್ಧಿಃ ಸಮುತ್ಪನ್ನಾ ದ್ವಿತೀಯಃ ಸ್ಯಾತ್ಕಥಂ ಸುತಃ|

05145017c ಏಕಪುತ್ರಮಪುತ್ರಂ ವೈ ಪ್ರವದಂತಿ ಮನೀಷಿಣಃ||

ಎರಡನೆಯ ಮಗನನ್ನು ಪಡೆಯಬೇಕು ಎಂದು ಅವನ ಬುದ್ಧಿಯಲ್ಲಿ ಯೋಚನೆಯು ಬಂದಿತು. ಏಕೆಂದರೆ ತಿಳಿದವರು ಒಂದೇ ಮಗನೆಂದರೆ ಮಗನೇ ಇಲ್ಲದ ಹಾಗೆ ಎಂದು ಹೇಳುತ್ತಾರೆ.

05145018a ನ ಚೋಚ್ಚೇದಂ ಕುಲಂ ಯಾಯಾದ್ವಿಸ್ತೀರ್ಯೇತ ಕಥಂ ಯಶಃ|

05145018c ತಸ್ಯಾಹಮೀಪ್ಸಿತಂ ಬುದ್ಧ್ವಾ ಕಾಲೀಂ ಮಾತರಮಾವಹಂ||

ಈ ಕುಲವು ನಾಶವಾಗಬಾರದು ಮತ್ತು ನನ್ನ ಯಶಸ್ಸು ಹೇಗೆ ಹರಡಬೇಕು ಎಂದು ಯೋಚಿಸಿದ ಅವನ ಬಯಕೆಯನ್ನು ತಿಳಿದುಕೊಂಡು ನಾನು ಕಾಲಿಯನ್ನು ತಾಯಿಯನ್ನಾಗಿ ಕರೆತಂದೆನು.

05145019a ಪ್ರತಿಜ್ಞಾಂ ದುಷ್ಕರಾಂ ಕೃತ್ವಾ ಪಿತುರರ್ಥೇ ಕುಲಸ್ಯ ಚ|

05145019c ಅರಾಜಾ ಚೋರ್ಧ್ವರೇತಾಶ್ಚ ಯಥಾ ಸುವಿದಿತಂ ತವ|

05145019e ಪ್ರತೀತೋ ನಿವಸಾಮ್ಯೇಷ ಪ್ರತಿಜ್ಞಾಮನುಪಾಲಯನ್||

ತಂದೆಗಾಗಿ ಮತ್ತು ಕುಲಕ್ಕಾಗಿ ಆಗ ನಾನು ರಾಜನಾಗಲಾರೆ ಮತ್ತು ಊರ್ಧ್ವರೇತನಾಗಿರುತ್ತೇನೆ ಎಂಬ ದುಷ್ಕರ ಪ್ರತಿಜ್ಞೆಯನ್ನು ಮಾಡಿದುದು ನಿನಗೆ ತಿಳಿದೇ ಇದೆ. ಆ ಪ್ರತಿಜ್ಞೆಯನ್ನು ಪಾಲಿಸುತ್ತಾ ನಾನು ಸಂತೋಷದಿಂದಿದ್ದೇನೆ. ನೋಡು!

05145020a ತಸ್ಯಾಂ ಜಜ್ಞೇ ಮಹಾಬಾಹುಃ ಶ್ರೀಮಾನ್ಕುರುಕುಲೋದ್ವಹಃ|

05145020c ವಿಚಿತ್ರವೀರ್ಯೋ ಧರ್ಮಾತ್ಮಾ ಕನೀಯಾನ್ಮಮ ಪಾರ್ಥಿವಃ||

ಅವನಲ್ಲಿ ಮಹಾಬಾಹು, ಶ್ರೀಮಾನ್, ಕುರುಕುಲೋದ್ವಹ, ಧರ್ಮಾತ್ಮ, ನನ್ನ ಕಿರಿಯ ರಾಜ ವಿಚಿತ್ರವೀರ್ಯನು ಜನಿಸಿದನು.

05145021a ಸ್ವರ್ಯಾತೇಽಹಂ ಪಿತರಿ ತಂ ಸ್ವರಾಜ್ಯೇ ಸಂನ್ಯವೇಶಯಂ|

05145021c ವಿಚಿತ್ರವೀರ್ಯಂ ರಾಜಾನಂ ಭೃತ್ಯೋ ಭೂತ್ವಾ ಹ್ಯಧಶ್ಚರಃ||

ತಂದೆಯ ಮರಣದ ನಂತರ ನನ್ನದಾಗಬೇಕಾಗಿದ್ದ ರಾಜ್ಯದಲ್ಲಿ ನಾನೇ ವಿಚಿತ್ರವೀರ್ಯನನ್ನು ರಾಜನನ್ನಾಗಿ ಸ್ಥಾಪಿಸಿದೆನು. ಮತ್ತು ಅವನ ಕೆಳಗೆ ಸೇವಕನಾಗಿ ನಡೆದುಕೊಂಡೆನು.

05145022a ತಸ್ಯಾಹಂ ಸದೃಶಾನ್ದಾರಾನ್ರಾಜೇಂದ್ರ ಸಮುದಾವಹಂ|

05145022c ಜಿತ್ವಾ ಪಾರ್ಥಿವಸಂಘಾತಮಪಿ ತೇ ಬಹುಶಃ ಶ್ರುತಂ||

ರಾಜೇಂದ್ರ! ಅವನಿಗೆ ಸದೃಶರಾದ ಪತ್ನಿಯರನ್ನು ನಾನು ಸೇರಿದ್ದ ಪಾರ್ಥಿವ ಗುಂಪನ್ನು ಗೆದ್ದು ಕರೆದುಕೊಂಡು ಬಂದೆ. ಅದನ್ನು ನೀನು ಬಹಳ ಸಾರಿ ಕೇಳಿದ್ದೀಯೆ.

05145023a ತತೋ ರಾಮೇಣ ಸಮರೇ ದ್ವಂದ್ವಯುದ್ಧಮುಪಾಗಮಂ|

05145023c ಸ ಹಿ ರಾಮಭಯಾದೇಭಿರ್ನಾಗರೈರ್ವಿಪ್ರವಾಸಿತಃ|

05145023e ದಾರೇಷ್ವತಿಪ್ರಸಕ್ತಶ್ಚ ಯಕ್ಷ್ಮಾಣಂ ಸಮಪದ್ಯತ||

ಆಗ ಸಮರದಲ್ಲಿ ನನಗೆ ರಾಮನೊಂದಿಗೆ ದ್ವಂದ್ವಯುದ್ಧಮಾಡುವ ಸಮಯ ಬಂದೊದಗಿತು. ರಾಮನ ಭಯದಿಂದ ಅವನು ನಾಗಸಾಹ್ವಯವನ್ನು ಬಿಟ್ಟು ಓಡಿ ಹೋಗಿದ್ದ. ಪತ್ನಿಯರಲ್ಲಿ ತುಂಬಾ ತೊಡಗಿದ್ದ ಅವನು ಯಮಸದನವನ್ನು ಸೇರಿದನು.

05145024a ಯದಾ ತ್ವರಾಜಕೇ ರಾಷ್ಟ್ರೇ ನ ವವರ್ಷ ಸುರೇಶ್ವರಃ|

05145024c ತದಾಭ್ಯಧಾವನ್ಮಾಮೇವ ಪ್ರಜಾಃ ಕ್ಷುದ್ಭಯಪೀಡಿತಾಃ||

ಅರಾಜಕತ್ವದಿಂದ ಸುರೇಶ್ವರನು ರಾಷ್ಟ್ರದಲ್ಲಿ ಮಳೆಯನ್ನು ಸುರಿಸಲಿಲ್ಲ. ಆಗ ಹಸಿವು-ಭಯ ಪೀಡಿತರಾದ ಪ್ರಜೆಗಳು ಅವಸರದಲ್ಲಿ ನನ್ನಲ್ಲಿಗೇ ಬಂದರು.

05145025 ಪ್ರಜಾ ಊಚುಃ|

05145025a ಉಪಕ್ಷೀಣಾಃ ಪ್ರಜಾಃ ಸರ್ವಾ ರಾಜಾ ಭವ ಭವಾಯ ನಃ|

05145025c ಈತಯೋ ನುದ ಭದ್ರಂ ತೇ ಶಂತನೋಃ ಕುಲವರ್ಧನ||

ಪ್ರಜೆಗಳು ಹೇಳಿದರು: “ಪ್ರಜೆಗಳೆಲ್ಲರೂ ನಾಶಗೊಳ್ಳುತ್ತಿದ್ದಾರೆ. ನೀನೇ ರಾಜನಾಗು! ಶಂತನುವಿನ ಕುಲವರ್ಧನ! ಈ ಬರಗಾಲವನ್ನು ಇಲ್ಲವಾಗಿಸು. ನಿನಗೆ ಮಂಗಳವಾಗಲಿ!

05145026a ಪೀಡ್ಯಂತೇ ತೇ ಪ್ರಜಾಃ ಸರ್ವಾ ವ್ಯಾಧಿಭಿರ್ಭೃಶದಾರುಣೈಃ|

05145026c ಅಲ್ಪಾವಶಿಷ್ಟಾ ಗಾಂಗೇಯ ತಾಃ ಪರಿತ್ರಾತುಮರ್ಹಸಿ||

ನಿನ್ನ ಪ್ರಜೆಗಳೆಲ್ಲರೂ ಅತಿ ತೀಕ್ಷ್ಣ ಮತ್ತು ದಾರುಣ ವ್ಯಾಧಿಗಳಿಂದ ಪೀಡಿತರಾಗಿದ್ದಾರೆ. ಕೆಲವರೇ ಉಳಿದುಕೊಂಡಿದ್ದಾರೆ. ಗಾಂಗೇಯ! ಅವರನ್ನು ರಕ್ಷಿಸಬೇಕು.

05145027a ವ್ಯಾಧೀನ್ಪ್ರಣುದ್ಯ ವೀರ ತ್ವಂ ಪ್ರಜಾ ಧರ್ಮೇಣ ಪಾಲಯ|

05145027c ತ್ವಯಿ ಜೀವತಿ ಮಾ ರಾಷ್ಟ್ರಂ ವಿನಾಶಮುಪಗಚ್ಚತು||

ವೀರ! ಈ ವ್ಯಾಧಿಗಳನ್ನು ಹೋಗಲಾಡಿಸು. ಪ್ರಜೆಗಳನ್ನು ಧರ್ಮದಿಂದ ಪಾಲಿಸು. ನೀನು ಜೀವಂತವಿರುವಾಗಲೇ ರಾಷ್ಟ್ರವು ವಿನಾಶಹೊಂದಲು ಬಿಡಬೇಡ!””

05145028 ಭೀಷ್ಮ ಉವಾಚ|

05145028a ಪ್ರಜಾನಾಂ ಕ್ರೋಶತೀನಾಂ ವೈ ನೈವಾಕ್ಷುಭ್ಯತ ಮೇ ಮನಃ|

05145028c ಪ್ರತಿಜ್ಞಾಂ ರಕ್ಷಮಾಣಸ್ಯ ಸದ್ವೃತ್ತಂ ಸ್ಮರತಸ್ತಥಾ||

ಭೀಷ್ಮನು ಹೇಳಿದನು: “ಪ್ರಜೆಗಳ ಈ ಅತೀವ ಕ್ರೋಶವು ನನ್ನ ಮನಸ್ಸನ್ನು ಅಲುಗಾಡಿಸಲಿಲ್ಲ. ಪ್ರತಿಜ್ಞೆಯನ್ನು ನೆನಪಿಸಿಕೊಂಡು ಅದನ್ನು ರಕ್ಷಿಸಲು ನಡೆದುಕೊಂಡೆ.

05145029a ತತಃ ಪೌರಾ ಮಹಾರಾಜ ಮಾತಾ ಕಾಲೀ ಚ ಮೇ ಶುಭಾ|

05145029c ಭೃತ್ಯಾಃ ಪುರೋಹಿತಾಚಾರ್ಯಾ ಬ್ರಾಹ್ಮಣಾಶ್ಚ ಬಹುಶ್ರುತಾಃ|

05145029e ಮಾಮೂಚುರ್ಭೃಶಸಂತಪ್ತಾ ಭವ ರಾಜೇತಿ ಸಂತತಂ||

ಆಗ ಮಹಾರಾಜ! ತುಂಬಾ ಸಂತಪ್ತರಾದ ಪೌರರು, ತಾಯಿ ಶುಭೆ ಕಾಲೀ, ಸೇವಕರು, ಪುರೋಹಿತರು, ಆಚಾರ್ಯರು, ವಿದ್ವಾನ್ ಬ್ರಾಹ್ಮಣರು “ರಾಜನಾಗು!” ಎಂದು ಒತ್ತಾಯಿಸಿದರು.

05145030a ಪ್ರತೀಪರಕ್ಷಿತಂ ರಾಷ್ಟ್ರಂ ತ್ವಾಂ ಪ್ರಾಪ್ಯ ವಿನಶಿಷ್ಯತಿ|

05145030c ಸ ತ್ವಮಸ್ಮದ್ಧಿತಾರ್ಥಂ ವೈ ರಾಜಾ ಭವ ಮಹಾಮತೇ||

“ನಿನ್ನನ್ನು ಪಡೆದ ಈ ಪ್ರತೀಪರಕ್ಷಿತ ರಾಷ್ಟ್ರವು ನಾಶಗೊಳ್ಳುತ್ತಿದೆ. ಮಹಾಮತೇ! ನೀನು ನಮಗಾಗಿಯಾದರೂ ರಾಜನಾಗಿ, ಉದ್ಧರಿಸು!”

05145031a ಇತ್ಯುಕ್ತಃ ಪ್ರಾಂಜಲಿರ್ಭೂತ್ವಾ ದುಃಖಿತೋ ಭೃಶಮಾತುರಃ|

05145031c ತೇಭ್ಯೋ ನ್ಯವೇದಯಂ ಪುತ್ರ ಪ್ರತಿಜ್ಞಾಂ ಪಿತೃಗೌರವಾತ್|

05145031e ಊರ್ಧ್ವರೇತಾ ಹ್ಯರಾಜಾ ಚ ಕುಲಸ್ಯಾರ್ಥೇ ಪುನಃ ಪುನಃ||

ಅವರ ಮಾತನ್ನು ಕೇಳಿ, ಕೈಮುಗಿದು ದುಃಖಿತನಾಗಿ ತುಂಬಾ ಆತುರನಾಗಿ ಅವರಿಗೆ ಪಿತೃಗೌರವಕ್ಕಾಗಿ ಮಗನು ಮಾಡಿದ ಮತ್ತು ಕುಲಕ್ಕಾಗಿ ಮಾಡಿದ ಅರಾಜನಾಗಿರುವ ಮತ್ತು ಊರ್ಧ್ವರೇತನಾಗಿರುವ ಪ್ರತಿಜ್ಞೆಯ ಕುರಿತು ಪುನಃ ಪುನಃ ಹೇಳಿದೆ.

05145032a ತತೋಽಹಂ ಪ್ರಾಂಜಲಿರ್ಭೂತ್ವಾ ಮಾತರಂ ಸಂಪ್ರಸಾದಯಂ|

05145032c ನಾಂಬ ಶಂತನುನಾ ಜಾತಃ ಕೌರವಂ ವಂಶಮುದ್ವಹನ್|

05145032e ಪ್ರತಿಜ್ಞಾಂ ವಿತಥಾಂ ಕುರ್ಯಾಮಿತಿ ರಾಜನ್ಪುನಃ ಪುನಃ||

ರಾಜನ್! ಆಗ ನಾನು ಕೈಮುಗಿದು ತಾಯಿಗೆ “ಅಂಬ! ಶಾಂತನುವಿನಲ್ಲಿ ಹುಟ್ಟಿ, ಕೌರವ ವಂಶವನ್ನು ಬೆಂಬಲಿಸುವ ನಾನು ಪ್ರತಿಜ್ಞೆಯನ್ನು ಸುಳ್ಳಾಗಿ ಮಾಡಲಾರೆ” ಎಂದು ಪುನಃ ಪುನಃ ಹೇಳಿ ಸಮಾಧಾನಗೊಳಿಸಿದೆನು.

05145033a ವಿಶೇಷತಸ್ತ್ವದರ್ಥಂ ಚ ಧುರಿ ಮಾ ಮಾಂ ನಿಯೋಜಯ|

05145033c ಅಹಂ ಪ್ರೇಷ್ಯಶ್ಚ ದಾಸಶ್ಚ ತವಾಂಬ ಸುತವತ್ಸಲೇ||

“ವಿಶೇಷವಾಗಿ ನಿನಗೋಸ್ಕರ ಈ ನೇಗಿಲನ್ನು ನನ್ನ ಮೇಲೆ ಹೊರಿಸಬೇಡ. ಅಂಬೇ! ಸುತವತ್ಸಲೇ! ನಾನು ನಿನ್ನ ದಾಸ ಮತ್ತು ಗುಲಾಮ.”

05145034a ಏವಂ ತಾಮನುನೀಯಾಹಂ ಮಾತರಂ ಜನಮೇವ ಚ|

05145034c ಅಯಾಚಂ ಭ್ರಾತೃದಾರೇಷು ತದಾ ವ್ಯಾಸಂ ಮಹಾಮುನಿಂ||

ಹೀಗೆ ನನ್ನ ತಾಯಿಯನ್ನೂ ಜನರನ್ನೂ ಸಮಾಧಾನಗೊಳಿಸಿ ನನ್ನ ತಮ್ಮನ ಪತ್ನಿಯರಿಗಾಗಿ ಮಹಾಮುನಿ ವ್ಯಾಸನನ್ನು ಬೇಡಿಕೊಂಡೆನು.

05145035a ಸಹ ಮಾತ್ರಾ ಮಹಾರಾಜ ಪ್ರಸಾದ್ಯ ತಮೃಷಿಂ ತದಾ|

05145035c ಅಪತ್ಯಾರ್ಥಮಯಾಚಂ ವೈ ಪ್ರಸಾದಂ ಕೃತವಾಂಶ್ಚ ಸಃ|

05145035e ತ್ರೀನ್ಸ ಪುತ್ರಾನಜನಯತ್ತದಾ ಭರತಸತ್ತಮ||

ಭರತಸತ್ತಮ! ಮಹಾರಾಜ! ತಾಯಿಯೊಂದಿಗೆ ಆ ಋಷಿಯನ್ನು ಪೂಜಿಸಿ ಮಕ್ಕಳನ್ನು ಕೇಳಿದಾಗ ಆ ಕೃತವಂತನು ಪ್ರಸಾದವಾಗಿ ಮೂವರು ಪುತ್ರರನ್ನು ಜನಿಸಿದನು.

05145036a ಅಂಧಃ ಕರಣಹೀನೇತಿ ನ ವೈ ರಾಜಾ ಪಿತಾ ತವ|

05145036c ರಾಜಾ ತು ಪಾಂಡುರಭವನ್ಮಹಾತ್ಮಾ ಲೋಕವಿಶ್ರುತಃ||

ಅಂಧನೆಂದು ನಿನ್ನ ತಂದೆಯು ರಾಜನಾಗಲಿಲ್ಲ. ಲೋಕವಿಶ್ರುತ ಮಹಾತ್ಮಾ ಪಾಂಡುವು ರಾಜನಾದನು.

05145037a ಸ ರಾಜಾ ತಸ್ಯ ತೇ ಪುತ್ರಾಃ ಪಿತುರ್ದಾಯಾದ್ಯಹಾರಿಣಃ|

05145037c ಮಾ ತಾತ ಕಲಹಂ ಕಾರ್ಷೀ ರಾಜ್ಯಸ್ಯಾರ್ಧಂ ಪ್ರದೀಯತಾಂ||

ಅವನು ರಾಜನಾಗಿದ್ದನು. ಅವನ ಪುತ್ರರು ಅವರ ತಂದೆಗೆ ಆನುವಂಶೀಕರು. ಮಗೂ! ಕಲಹವನ್ನು ಮಾಡಬೇಡ! ಅವರಿಗೆ ಅರ್ಧ ರಾಜ್ಯವನ್ನು ಕೊಟ್ಟುಬಿಡು.

05145038a ಮಯಿ ಜೀವತಿ ರಾಜ್ಯಂ ಕಃ ಸಂಪ್ರಶಾಸೇತ್ಪುಮಾನಿಹ|

05145038c ಮಾವಮಂಸ್ಥಾ ವಚೋ ಮಹ್ಯಂ ಶಮಮಿಚ್ಚಾಮಿ ವಃ ಸದಾ||

ನಾನು ಬದುಕಿರುವಾಗ ಯಾವ ಪುರುಷನು ರಾಜ್ಯವನ್ನಾಳುತ್ತಾನೆ? ನನ್ನ ಮಾತುಗಳನ್ನು ಕಡೆಗಣಿಸಬೇಡ. ನಿನ್ನ ಶಾಂತಿಯು ಸದಾ ನನ್ನ ಮನಸ್ಸಿನಲ್ಲಿದೆ.

05145039a ನ ವಿಶೇಷೋಽಸ್ತಿ ಮೇ ಪುತ್ರ ತ್ವಯಿ ತೇಷು ಚ ಪಾರ್ಥಿವ|

05145039c ಮತಮೇತತ್ಪಿತುಸ್ತುಭ್ಯಂ ಗಾಂಧಾರ್ಯಾ ವಿದುರಸ್ಯ ಚ||

ಪುತ್ರ! ಪಾರ್ಥಿವ! ನಾನು ನಿನ್ನ ಮತ್ತು ಅವರಲ್ಲಿ ಭೇದ ತೋರಿಸುವುದಿಲ್ಲ. ನಿನ್ನ ತಂದೆ, ಗಾಂಧಾರಿ ಮತ್ತು ವಿದುರರ ಮತವೂ ಇದೇ ಆಗಿದೆ.

05145040a ಶ್ರೋತವ್ಯಂ ಯದಿ ವೃದ್ಧಾನಾಂ ಮಾತಿಶಂಕೀರ್ವಚೋ ಮಮ|

05145040c ನಾಶಯಿಷ್ಯಸಿ ಮಾ ಸರ್ವಮಾತ್ಮಾನಂ ಪೃಥಿವೀಂ ತಥಾ||

ವೃದ್ಧರನ್ನು ಕೇಳಬೇಕಾದರೆ ನನ್ನ ಮಾತುಗಳನ್ನು ಶಂಕಿಸಬೇಡ. ಇಲ್ಲವಾದರೆ ಸರ್ವವನ್ನೂ ನಿನ್ನನ್ನೂ ಭೂಮಿಯನ್ನೂ ನಾಶಪಡಿಸುತ್ತೀಯೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಭಗವದ್ವಾಕ್ಯೇ ಪಂಚಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಭಗವದ್ವಾಕ್ಯದಲ್ಲಿ ನೂರಾನಲ್ವತ್ತೈದನೆಯ ಅಧ್ಯಾಯವು.

Image result for indian motifs"

Comments are closed.