Udyoga Parva: Chapter 144

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೪

ತಂದೆ ಸೂರ್ಯನು ಕುಂತಿಯು ಸತ್ಯವನ್ನು ನುಡಿಯುತ್ತಿದ್ದಾಳೆಂದು ಹೇಳಿದರೂ ಚಂಚಲನಾಗದೇ ಕರ್ಣನು ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯರ ಗೌರವವು ಸಿಗದಂತೆ ಮಾಡಿದ ಅಪರಾಧಿಯೆಂದು ಕುಂತಿಯನ್ನು ನಿಂದಿಸಿ “ಧೃತರಾಷ್ಟ್ರನ ಮಕ್ಕಳಿಗಾಗಿ ನಾನು ನನ್ನ ಬಲ-ಶಕ್ತಿಗಳನ್ನು ಬಳಸಿ ನಿನ್ನ ಮಕ್ಕಳೊಂದಿಗೆ ಹೋರಾಡುತ್ತೇನೆ” ಎಂದೂ ಆದರೆ “ನಿನಗೆ ಐವರಿಗಿಂತ ಕಡಿಮೆ ಮಕ್ಕಳಿರುವುದಿಲ್ಲ. ಅರ್ಜುನನನು ಇಲ್ಲವಾದರೆ ಕರ್ಣನಿರುತ್ತಾನೆ ಅಥವಾ ನಾನು ಹತನಾದರೆ ಅರ್ಜುನನಿರುತ್ತಾನೆ” ಎಂದು ಹೇಳಿದುದು (೧-೨೨). ಹಾಗೆಯೇ ಆಗಲೆಂದು ಹೇಳಿ ಕುಂತಿಯು ಕರ್ಣನನ್ನು ಬಿಗಿದಪ್ಪಿ ಅವನಿಂದ ಬೀಳ್ಕೊಂಡಿದುದು (೨೩-೨೬).

05144001 ವೈಶಂಪಾಯನ ಉವಾಚ|

05144001a ತತಃ ಸೂರ್ಯಾನ್ನಿಶ್ಚರಿತಾಂ ಕರ್ಣಃ ಶುಶ್ರಾವ ಭಾರತೀಂ|

05144001c ದುರತ್ಯಯಾಂ ಪ್ರಣಯಿನೀಂ ಪಿತೃವದ್ಭಾಸ್ಕರೇರಿತಾಂ||

ವೈಶಂಪಾಯನನು ಹೇಳಿದನು: “ಆಗ ಕರ್ಣನು ಸೂರ್ಯಮಂಡಲದಿಂದ ಈ ವಾತ್ಸಲ್ಯಪೂರ್ವಕ ಮಾತನ್ನು ಕೇಳಿದನು. ದೂರದಿಂದ ಬಂದ ಆ ವಾತ್ಸಲ್ಯದ ಮಾತು ತಂದೆ ಭಾಸ್ಕರನದಾಗಿತ್ತು.

05144002a ಸತ್ಯಮಾಹ ಪೃಥಾ ವಾಕ್ಯಂ ಕರ್ಣ ಮಾತೃವಚಃ ಕುರು|

05144002c ಶ್ರೇಯಸ್ತೇ ಸ್ಯಾನ್ನರವ್ಯಾಘ್ರ ಸರ್ವಮಾಚರತಸ್ತಥಾ||

“ಕರ್ಣ! ಪೃಥೆಯು ಸತ್ಯವನ್ನೇ ಹೇಳಿದ್ದಾಳೆ. ತಾಯಿಯ ಮಾತಿನಂತೆ ಮಾಡು. ನರವ್ಯಾಘ್ರ! ಅದರಂತೆ ನಡೆದುಕೊಂಡರೆ ನಿನಗೆ ಎಲ್ಲ ಶ್ರೇಯಸ್ಸಾಗುತ್ತದೆ.”

05144003a ಏವಮುಕ್ತಸ್ಯ ಮಾತ್ರಾ ಚ ಸ್ವಯಂ ಪಿತ್ರಾ ಚ ಭಾನುನಾ|

05144003c ಚಚಾಲ ನೈವ ಕರ್ಣಸ್ಯ ಮತಿಃ ಸತ್ಯಧೃತೇಸ್ತದಾ||

ಹೀಗೆ ತಾಯಿ ಮತ್ತು ತಂದೆ ಸ್ವಯಂಭಾನುವು ಹೇಳಲು ಸತ್ಯಧೃತಿ ಕರ್ಣನ ಮನಸ್ಸು ಚಂಚಲವಾಗಲಿಲ್ಲ.

05144004 ಕರ್ಣ ಉವಾಚ|

05144004a ನ ತೇ ನ ಶ್ರದ್ದಧೇ ವಾಕ್ಯಂ ಕ್ಷತ್ರಿಯೇ ಭಾಷಿತಂ ತ್ವಯಾ|

05144004c ಧರ್ಮದ್ವಾರಂ ಮಮೈತತ್ಸ್ಯಾನ್ನಿಯೋಗಕರಣಂ ತವ||

ಕರ್ಣನು ಹೇಳಿದನು: “ಕ್ಷತ್ರಿಯೇ! ನಿನ್ನ ನಿಯೋಗದಂತೆ ನಡೆದುಕೊಳ್ಳುವುದೇ ನನ್ನ ಧರ್ಮದ ದ್ವಾರ ಎಂದು ನೀನು ಹೇಳಿದುದರಲ್ಲಿ ನನಗೆ ಶ್ರದ್ಧೆಯಿಲ್ಲವೆಂದಲ್ಲ.

05144005a ಅಕರೋನ್ಮಯಿ ಯತ್ಪಾಪಂ ಭವತೀ ಸುಮಹಾತ್ಯಯಂ|

05144005c ಅವಕೀರ್ಣೋಽಸ್ಮಿ ತೇ ತೇನ ತದ್ಯಶಃಕೀರ್ತಿನಾಶನಂ||

ಆದರೆ ನನ್ನನ್ನು ಬಿಸುಟು ನೀನು ಸರಿಪಡಿಸಲಿಕ್ಕಾಗದಂತಹ ಪಾಪವನ್ನು ಮಾಡಿ, ನನಗೆ ದೊರಕಬೇಕಾಗಿದ್ದ ಯಶಸ್ಸು ಕೀರ್ತಿಗಳನ್ನು ನಾಶಪಡಿಸಿದ್ದೀಯೆ.

05144006a ಅಹಂ ಚ ಕ್ಷತ್ರಿಯೋ ಜಾತೋ ನ ಪ್ರಾಪ್ತಃ ಕ್ಷತ್ರಸತ್ಕ್ರಿಯಾಂ|

05144006c ತ್ವತ್ಕೃತೇ ಕಿಂ ನು ಪಾಪೀಯಃ ಶತ್ರುಃ ಕುರ್ಯಾನ್ಮಮಾಹಿತಂ||

ಕ್ಷತ್ರಿಯನಾಗಿ ಹುಟ್ಟಿಯೂ ಕ್ಷತ್ರಿಯರಿಗೆ ಸಲ್ಲಬೇಕಾದ ಗೌರವವನ್ನು ಪಡೆಯಲಿಲ್ಲ. ನೀನು ನನಗೆ ಮಾಡಿದ ಈ ಅಹಿತ ಕಾರ್ಯವನ್ನು ಯಾವ ಶತ್ರುವು ತಾನೇ ಮಾಡಿಯಾನು?

05144007a ಕ್ರಿಯಾಕಾಲೇ ತ್ವನುಕ್ರೋಶಮಕೃತ್ವಾ ತ್ವಮಿಮಂ ಮಮ|

05144007c ಹೀನಸಂಸ್ಕಾರಸಮಯಮದ್ಯ ಮಾಂ ಸಮಚೂಚುದಃ||

ಮಾಡಬೇಕಾದ ಸಮಯದಲ್ಲಿ ನನಗೆ ನೀನು ಈಗ ತೋರಿಸುವ ಅನುಕಂಪವನ್ನು ತೋರಿಸಲಿಲ್ಲ. ಸಂಸ್ಕಾರಗಳಿಂದ ವಂಚಿಸಿದ ನಿನ್ನ ಈ ಮಗನಿಗೆ ಈಗ ಹೀಗೆ ಮಾಡೆಂದು ಹೇಳುತ್ತಿದ್ದೀಯೆ.

05144008a ನ ವೈ ಮಮ ಹಿತಂ ಪೂರ್ವಂ ಮಾತೃವಚ್ಚೇಷ್ಟಿತಂ ತ್ವಯಾ|

05144008c ಸಾ ಮಾಂ ಸಂಬೋಧಯಸ್ಯದ್ಯ ಕೇವಲಾತ್ಮಹಿತೈಷಿಣೀ||

ತಾಯಿಯಂತೆ ನೀನು ಎಂದೂ ನನಗೆ ಹಿತವಾಗಿ ನಡೆದುಕೊಳ್ಳಲಿಲ್ಲ. ಈಗ ನೀನು ಕೇವಲ ನಿನ್ನ ಹಿತವನ್ನು ಬಯಸಿ ನನಗೆ ತಿಳಿಸಿ ಹೇಳುತ್ತಿದ್ದೀಯೆ!

05144009a ಕೃಷ್ಣೇನ ಸಹಿತಾತ್ಕೋ ವೈ ನ ವ್ಯಥೇತ ಧನಂಜಯಾತ್|

05144009c ಕೋಽದ್ಯ ಭೀತಂ ನ ಮಾಂ ವಿದ್ಯಾತ್ಪಾರ್ಥಾನಾಂ ಸಮಿತಿಂ ಗತಂ||

ಕೃಷ್ಣನ ಸಹಾಯಪಡೆದಿರುವ ಧನಂಜಯನ ಎದಿರು ಯಾರು ತಾನೇ ನಡುಗುವುದಿಲ್ಲ? ಈಗ ನಾನು ಪಾರ್ಥರನ್ನು ಸೇರಿದರೆ ಭಯದಿಂದ ಹಾಗೆ ಮಾಡಿದೆ ಎಂದು ಯಾರು ತಾನೇ ತಿಳಿದುಕೊಳ್ಳುವುದಿಲ್ಲ?

05144010a ಅಭ್ರಾತಾ ವಿದಿತಃ ಪೂರ್ವಂ ಯುದ್ಧಕಾಲೇ ಪ್ರಕಾಶಿತಃ|

05144010c ಪಾಂಡವಾನ್ಯದಿ ಗಚ್ಚಾಮಿ ಕಿಂ ಮಾಂ ಕ್ಷತ್ರಂ ವದಿಷ್ಯತಿ||

ಇದೂವರೆಗೆ ಅವರ ಅಣ್ಣನೆಂದು ವಿದಿತನಾಗಿರದ ನನಗೆ ಈಗ ಯುದ್ಧದ ಸಮಯದಲ್ಲಿ ಗೊತ್ತಾಗಿದೆ. ಈಗ ಪಾಂಡವರ ಕಡೆ ಹೋದರೆ ಕ್ಷತ್ರಿಯರು ನನ್ನ ಕುರಿತು ಏನು ಹೇಳುತ್ತಾರೆ?

05144011a ಸರ್ವಕಾಮೈಃ ಸಂವಿಭಕ್ತಃ ಪೂಜಿತಶ್ಚ ಸದಾ ಭೃಶಂ|

05144011c ಅಹಂ ವೈ ಧಾರ್ತರಾಷ್ಟ್ರಾಣಾಂ ಕುರ್ಯಾಂ ತದಫಲಂ ಕಥಂ||

ಧಾರ್ತರಾಷ್ಟ್ರರು ಸರ್ವಕಾಮಗಳಿಂದ ಸಂವಿಭಕ್ತರಾಗಿ ಸದಾ ನನ್ನನ್ನು ತುಂಬಾ ಪೂಜಿಸಿದ್ದಾರೆ. ಈಗ ನಾನು ಅದನ್ನು ಹೇಗೆ ನಿಷ್ಫಲವನ್ನಾಗಿ ಮಾಡಲಿ?

05144012a ಉಪನಹ್ಯ ಪರೈರ್ವೈರಂ ಯೇ ಮಾಂ ನಿತ್ಯಮುಪಾಸತೇ|

05144012c ನಮಸ್ಕುರ್ವಂತಿ ಚ ಸದಾ ವಸವೋ ವಾಸವಂ ಯಥಾ||

ಈಗ ಶತ್ರುಗಳೊಂದಿಗೆ ವೈರವನ್ನು ಕಟ್ಟಿಕೊಂಡು ಅವರು ನಿತ್ಯವೂ ನನ್ನನ್ನು ವಸುಗಳು ವಾಸವನನ್ನು ಹೇಗೋ ಹಾಗೆ ಪೂಜಿಸುತ್ತಾರೆ, ನಮಸ್ಕರಿಸುತ್ತಾರೆ.

05144013a ಮಮ ಪ್ರಾಣೇನ ಯೇ ಶತ್ರೂಂ ಶಕ್ತಾಃ ಪ್ರತಿಸಮಾಸಿತುಂ|

05144013c ಮನ್ಯಂತೇಽದ್ಯ ಕಥಂ ತೇಷಾಮಹಂ ಭಿಂದ್ಯಾಂ ಮನೋರಥಂ||

ನನ್ನ ಶಕ್ತಿಯಿಂದ ಶತ್ರುಗಳ ಶಕ್ತಿಯನ್ನು ಎದುರಿಸಬಲ್ಲರು ಎಂದು ತಿಳಿದುಕೊಂಡಿರುವ ಅವರ ಮನೋರಥವನ್ನು ಇಂದು ನಾನು ಹೇಗೆ ಒಡೆದು ಹಾಕಲಿ?

05144014a ಮಯಾ ಪ್ಲವೇನ ಸಂಗ್ರಾಮಂ ತಿತೀರ್ಷಂತಿ ದುರತ್ಯಯಂ|

05144014c ಅಪಾರೇ ಪಾರಕಾಮಾ ಯೇ ತ್ಯಜೇಯಂ ತಾನಹಂ ಕಥಂ||

ಸಾಧಿಸಲಸಾಧ್ಯವಾದ ಈ ಸಂಗ್ರಾಮವೆಂಬ ಸಾಗರವನ್ನು ದಾಟಿಸಲು ಸಾಧ್ಯಮಾಡಬಲ್ಲ ದೋಣಿಯಂತೆ ನನ್ನನ್ನು ನೋಡುತ್ತಿರುವ ಅವರನ್ನು ನಾನು ಹೇಗೆ ತೊರೆಯಬಲ್ಲೆನು?

05144015a ಅಯಂ ಹಿ ಕಾಲಃ ಸಂಪ್ರಾಪ್ತೋ ಧಾರ್ತರಾಷ್ಟ್ರೋಪಜೀವಿನಾಂ|

05144015c ನಿರ್ವೇಷ್ಟವ್ಯಂ ಮಯಾ ತತ್ರ ಪ್ರಾಣಾನಪರಿರಕ್ಷತಾ||

ಧಾರ್ತರಾಷ್ಟ್ರನನ್ನು ಅವಲಂಬಿಸಿ ಜೀವಿಸುವವರಿಗೆ ಇದೇ ಕಾಲವು ಬಂದಿದೆ. ನನ್ನ ಪ್ರಾಣವನ್ನು ರಕ್ಷಿಸಿಕೊಳ್ಳದೇ ನನ್ನ ಕರ್ತವ್ಯವನ್ನು ಮಾಡಬೇಕು.

05144016a ಕೃತಾರ್ಥಾಃ ಸುಭೃತಾ ಯೇ ಹಿ ಕೃತ್ಯಕಾಲ ಉಪಸ್ಥಿತೇ|

05144016c ಅನವೇಕ್ಷ್ಯ ಕೃತಂ ಪಾಪಾ ವಿಕುರ್ವಂತ್ಯನವಸ್ಥಿತಾಃ||

ಚೆನ್ನಾಗಿ ಪೋಷಿತರಾಗಿ ಕೃತಾರ್ಥರಾಗಿರುವವರು ಅವರಿಗೆ ಮಾಡಿದುದನ್ನು ಕಡೆಗಣಿಸಿ, ಸಮಯ ಬಂದಾಗ ಹಿಂದೆ ಪಡೆದ ಎಲ್ಲ ಲಾಭಗಳನ್ನೂ ಅಲ್ಲಗಳೆಯುವವರು ಪಾಪಿಷ್ಟರು.

05144017a ರಾಜಕಿಲ್ಬಿಷಿಣಾಂ ತೇಷಾಂ ಭರ್ತೃಪಿಂಡಾಪಹಾರಿಣಾಂ|

05144017c ನೈವಾಯಂ ನ ಪರೋ ಲೋಕೋ ವಿದ್ಯತೇ ಪಾಪಕರ್ಮಣಾಂ||

ರಾಜರನ್ನು ದುರ್ಬಲಗೊಳಿಸುವ ಆ ಭರ್ತೃಪಿಂಡಾಪಹಾರಿ ಪಾಪಕರ್ಮಿಗಳಿಗೆ ಈ ಲೋಕದಲ್ಲಿಯಾಗಲೀ ಪರಲೋಕದಲ್ಲಿಯಾಗಲೀ ಒಳ್ಳೆಯದಾಗುವುದಿಲ್ಲ.

05144018a ಧೃತರಾಷ್ಟ್ರಸ್ಯ ಪುತ್ರಾಣಾಮರ್ಥೇ ಯೋತ್ಸ್ಯಾಮಿ ತೇ ಸುತೈಃ|

05144018c ಬಲಂ ಚ ಶಕ್ತಿಂ ಚಾಸ್ಥಾಯ ನ ವೈ ತ್ವಯ್ಯನೃತಂ ವದೇ||

ಧೃತರಾಷ್ಟ್ರನ ಮಕ್ಕಳಿಗಾಗಿ ನಾನು ನನ್ನ ಬಲ ಶಕ್ತಿಗಳನ್ನು ಬಳಸಿ ನಿನ್ನ ಮಕ್ಕಳೊಂದಿಗೆ ಹೋರಾಡುತ್ತೇನೆ. ನಿನಗೆ ಸುಳ್ಳನ್ನು ಹೇಳುತ್ತಿಲ್ಲ.

05144019a ಆನೃಶಂಸ್ಯಮಥೋ ವೃತ್ತಂ ರಕ್ಷನ್ಸತ್ಪುರುಷೋಚಿತಂ|

05144019c ಅತೋಽರ್ಥಕರಮಪ್ಯೇತನ್ನ ಕರೋಮ್ಯದ್ಯ ತೇ ವಚಃ||

ಸತ್ಪುರುಷರಿಗೆ ಉಚಿತವಾದ ಮಾನವೀಯ ನಡತೆಯನ್ನು ರಕ್ಷಿಸಿ, ನನಗೆ ಒಳ್ಳೆಯದಾಗದಿದ್ದರೂ ಇಂದು ನಿನ್ನ ಮಾತಿನಂತೆ ಮಾಡುವುದಿಲ್ಲ.

05144020a ನ ತು ತೇಽಯಂ ಸಮಾರಂಭೋ ಮಯಿ ಮೋಘೋ ಭವಿಷ್ಯತಿ|

05144020c ವಧ್ಯಾನ್ವಿಷಹ್ಯಾನ್ಸಂಗ್ರಾಮೇ ನ ಹನಿಷ್ಯಾಮಿ ತೇ ಸುತಾನ್|

05144020e ಯುಧಿಷ್ಠಿರಂ ಚ ಭೀಮಂ ಚ ಯಮೌ ಚೈವಾರ್ಜುನಾದೃತೇ||

ಆದರೂ ನನ್ನೊಡನೆ ನೀನು ನಡೆಸಿದ ಈ ಪ್ರಯತ್ನವು ನಿಷ್ಫಲವಾಗುವುದಿಲ್ಲ. ಅವರನ್ನು ಎದುರಿಸಿ ಕೊಲ್ಲಬಲ್ಲೆನಾದರೂ ನಾನು ಯುದ್ಧದಲ್ಲಿ ನಿನ್ನ ಮಕ್ಕಳನ್ನು ಅರ್ಜುನನನ್ನು ಬಿಟ್ಟು, ಯುಧಿಷ್ಠಿರ, ಭೀಮ, ಮತ್ತು ಯಮಳರನ್ನು ಕೊಲ್ಲುವುದಿಲ್ಲ.

05144021a ಅರ್ಜುನೇನ ಸಮಂ ಯುದ್ಧಂ ಮಮ ಯೌಧಿಷ್ಠಿರೇ ಬಲೇ|

05144021c ಅರ್ಜುನಂ ಹಿ ನಿಹತ್ಯಾಜೌ ಸಂಪ್ರಾಪ್ತಂ ಸ್ಯಾತ್ಫಲಂ ಮಯಾ|

05144021e ಯಶಸಾ ಚಾಪಿ ಯುಜ್ಯೇಯಂ ನಿಹತಃ ಸವ್ಯಸಾಚಿನಾ||

ಯುಧಿಷ್ಠಿರನ ಬಲದಲ್ಲಿರುವ ಅರ್ಜುನನೊಂದಿಗೆ ನನ್ನ ಯುದ್ಧವು ನಡೆಯುತ್ತದೆ. ಅರ್ಜುನನನ್ನು ಕೊಂದು ನನಗೆ ನನ್ನ ಫಲವು ದೊರೆಯುತ್ತದೆ. ಅಥವಾ ಸವ್ಯಸಾಚಿಯಿಂದ ಹತನಾದರೆ ಯಶಸ್ಸನ್ನು ಪಡೆಯುತ್ತೇನೆ.

05144022a ನ ತೇ ಜಾತು ನಶಿಷ್ಯಂತಿ ಪುತ್ರಾಃ ಪಂಚ ಯಶಸ್ವಿನಿ|

05144022c ನಿರರ್ಜುನಾಃ ಸಕರ್ಣಾ ವಾ ಸಾರ್ಜುನಾ ವಾ ಹತೇ ಮಯಿ||

ಯಶಸ್ವಿನೀ! ನಿನಗೆ ಐವರಿಗಿಂತ ಕಡಿಮೆ ಮಕ್ಕಳಿರುವುದಿಲ್ಲ. ಅರ್ಜುನನನು ಇಲ್ಲವಾದರೆ ಕರ್ಣನಿರುತ್ತಾನೆ ಅಥವಾ ನಾನು ಹತನಾದರೆ ಅರ್ಜುನನಿರುತ್ತಾನೆ.””

05144023 ವೈಶಂಪಾಯನ ಉವಾಚ|

05144023a ಇತಿ ಕರ್ಣವಚಃ ಶ್ರುತ್ವಾ ಕುಂತೀ ದುಃಖಾತ್ಪ್ರವೇಪತೀ|

05144023c ಉವಾಚ ಪುತ್ರಮಾಶ್ಲಿಷ್ಯ ಕರ್ಣಂ ಧೈರ್ಯಾದಕಂಪಿತಂ||

ವೈಶಂಪಾಯನನು ಹೇಳಿದನು: “ಕರ್ಣನ ಈ ಮಾತುಗಳನ್ನು ಕೇಳಿ ಕುಂತಿಯು ದುಃಖದಿಂದ ನಡುಗಿದಳು. ಓಲಾಡದೇ ಧೈಯದಿಂದಿದ್ದ ಪುತ್ರ ಕರ್ಣನನ್ನು ಬಿಗಿದಪ್ಪಿ ಹೇಳಿದಳು:

05144024a ಏವಂ ವೈ ಭಾವ್ಯಮೇತೇನ ಕ್ಷಯಂ ಯಾಸ್ಯಂತಿ ಕೌರವಾಃ|

05144024c ಯಥಾ ತ್ವಂ ಭಾಷಸೇ ಕರ್ಣ ದೈವಂ ತು ಬಲವತ್ತರಂ||

“ಕರ್ಣ! ಹೀಗೆಯೇ ಆಗಲಿ! ನೀನು ಹೇಳಿದಂತೆ ಕೌರವರು ಕ್ಷಯ ಹೊಂದುತ್ತಾರೆ. ದೈವವು ಬಲವತ್ತರವಾದುದು.

05144025a ತ್ವಯಾ ಚತುರ್ಣಾಂ ಭ್ರಾತೄಣಾಮಭಯಂ ಶತ್ರುಕರ್ಶನ|

05144025c ದತ್ತಂ ತತ್ಪ್ರತಿಜಾನೀಹಿ ಸಂಗರಪ್ರತಿಮೋಚನಂ||

ಶತ್ರುಕರ್ಶನ! ನಿನ್ನ ನಾಲ್ವರು ತಮ್ಮಂದಿರಿಗೆ ನೀನು ನೀಡಿರುವ ಅಭಯವನ್ನು ನೆನಪಿನಲ್ಲಿಟ್ಟುಕೊಂಡು ಸಂಗರಕ್ಕೆ ಪ್ರಾಯಶ್ಚಿತ್ತವನ್ನು ಮಾಡಿಕೋ.

05144026a ಅನಾಮಯಂ ಸ್ವಸ್ತಿ ಚೇತಿ ಪೃಥಾಥೋ ಕರ್ಣಮಬ್ರವೀತ್|

05144026c ತಾಂ ಕರ್ಣೋಽಭ್ಯವದತ್ಪ್ರೀತಸ್ತತಸ್ತೌ ಜಗ್ಮತುಃ ಪೃಥಕ್||

ಆರೋಗ್ಯವಾಗಿರು! ಮಂಗಳವಾಗಲಿ!” ಎಂದು ಪೃಥೆಯು ಕರ್ಣನಿಗೆ ಹೇಳಿದಳು. ಪ್ರೀತಿಯಿಂದ ಕರ್ಣನು ಅವಳಿಗೆ ವಂದಿಸಿದನು. ಇಬ್ಬರೂ ಬೇರೆ ಬೇರೆ ದಾರಿಗಳಲ್ಲಿ ಹೋದರು.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಕುಂತೀಕರ್ಣಸಮಾಗಮೇ ಚತುಶ್ಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಕುಂತೀಕರ್ಣಸಮಾಗಮದಲ್ಲಿ ನೂರಾನಲ್ವತ್ನಾಲ್ಕನೆಯ ಅಧ್ಯಾಯವು.

Image result for flowers against white background

Comments are closed.