Udyoga Parva: Chapter 141

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೧

ದುರ್ಯೋಧನನ ಪರಾಭವವನ್ನು ಮತ್ತು ಯುಧಿಷ್ಠಿರನ ವಿಜಯವನ್ನು ಘೋಷಿಸುವ ವಿವಿಧ ಘೋರ ಸ್ವಪ್ನಗಳು, ಘೋರ ನಿಮಿತ್ತಗಳು ಮತ್ತು ದಾರುಣ ಉತ್ಪಾತಗಳ ಕುರಿತು ಕರ್ಣನು ಕೃಷ್ಣನಲ್ಲಿ ಹೇಳಿಕೊಂಡಿದುದು (೧-೪೨). ಅನಂತರ ಕರ್ಣ-ಕೃಷ್ಣರೀರ್ವರು ಪರಸ್ಪರರನ್ನು ಬೀಳ್ಕೊಂಡಿದುದು (೪೩-೪೯).

05141001 ಸಂಜಯ ಉವಾಚ|

05141001a ಕೇಶವಸ್ಯ ತು ತದ್ವಾಕ್ಯಂ ಕರ್ಣಃ ಶ್ರುತ್ವಾ ಹಿತಂ ಶುಭಂ|

05141001c ಅಬ್ರವೀದಭಿಸಂಪೂಜ್ಯ ಕೃಷ್ಣಂ ಮಧುನಿಷೂದನಂ|

05141001e ಜಾನನ್ಮಾಂ ಕಿಂ ಮಹಾಬಾಹೋ ಸಮ್ಮೋಹಯಿತುಮಿಚ್ಚಸಿ||

ಸಂಜಯನು ಹೇಳಿದನು: “ಕೇಶವನ ಹಿತವೂ ಶುಭವೂ ಆದ ಆ ಮಾತನ್ನು ಕೇಳಿ ಕರ್ಣನು ಕೃಷ್ಣ ಮಧುನಿಷೂದನನಿಗೆ ನಮಸ್ಕರಿಸಿ ಹೇಳಿದನು: “ಮಹಾಬಾಹೋ! ಗೊತ್ತಿದ್ದರೂ ನನ್ನನ್ನು ಏಕೆ ಮೋಹಗೊಳಿಸಲು ಬಯಸುವೆ?

05141002a ಯೋಽಯಂ ಪೃಥಿವ್ಯಾಃ ಕಾರ್ತ್ಸ್ನ್ಯೆನ ವಿನಾಶಃ ಸಮುಪಸ್ಥಿತಃ|

05141002c ನಿಮಿತ್ತಂ ತತ್ರ ಶಕುನಿರಹಂ ದುಃಶಾಸನಸ್ತಥಾ|

05141002e ದುರ್ಯೋಧನಶ್ಚ ನೃಪತಿರ್ಧೃತರಾಷ್ಟ್ರಸುತೋಽಭವತ್||

ಸಂಪೂರ್ಣ ಈ ಪೃಥ್ವಿಯ ವಿನಾಶವು ಬಂದಿದೆ. ಶಕುನಿ, ನಾನು, ದುಃಶಾಸನ, ಧೃತರಾಷ್ಟ್ರಸುತ ನೃಪತಿ ದುರ್ಯೋದನರು ಇದರಲ್ಲಿ ನಿಮಿತ್ತಮಾತ್ರ.

05141003a ಅಸಂಶಯಮಿದಂ ಕೃಷ್ಣ ಮಹದ್ಯುದ್ಧಮುಪಸ್ಥಿತಂ|

05141003c ಪಾಂಡವಾನಾಂ ಕುರೂಣಾಂ ಚ ಘೋರಂ ರುಧಿರಕರ್ದಮಂ||

ಕೃಷ್ಣ! ಪಾಂಡವರ ಮತ್ತು ಕುರುಗಳ ರಕ್ತವನ್ನು ಚೆಲ್ಲುವ ಘೋರ ಮಹಾಯುದ್ಧವು ಬಂದೊದಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

05141004a ರಾಜಾನೋ ರಾಜಪುತ್ರಾಶ್ಚ ದುರ್ಯೋಧನವಶಾನುಗಾಃ|

05141004c ರಣೇ ಶಸ್ತ್ರಾಗ್ನಿನಾ ದಗ್ಧಾಃ ಪ್ರಾಪ್ಸ್ಯಂತಿ ಯಮಸಾದನಂ||

ದುರ್ಯೋಧನನ ವಶರಾಗಿ ಅನುಸರಿಸುವ ರಾಜರು ರಾಜಪುತ್ರರು ರಣದಲ್ಲಿ ಶಸ್ತ್ರಾಗ್ನಿಯಲ್ಲಿ ಸುಟ್ಟು ಯುಮಸಾದನವನ್ನು ಸೇರುತ್ತಾರೆ.

05141005a ಸ್ವಪ್ನಾ ಹಿ ಬಹವೋ ಘೋರಾ ದೃಶ್ಯಂತೇ ಮಧುಸೂದನ|

05141005c ನಿಮಿತ್ತಾನಿ ಚ ಘೋರಾಣಿ ತಥೋತ್ಪಾತಾಃ ಸುದಾರುಣಾಃ||

05141006a ಪರಾಜಯಂ ಧಾರ್ತರಾಷ್ಟ್ರೇ ವಿಜಯಂ ಚ ಯುಧಿಷ್ಠಿರೇ|

05141006c ಶಂಸಂತ ಇವ ವಾರ್ಷ್ಣೇಯ ವಿವಿಧಾ ಲೋಮಹರ್ಷಣಾಃ||

ಮಧುಸೂದನ! ವಾರ್ಷ್ಣೇಯ! ಧಾರ್ತರಾಷ್ಟ್ರನ ಪರಾಭವವನ್ನು ಮತ್ತು ಯುಧಿಷ್ಠಿರನ ವಿಜಯವನ್ನು ಘೋಷಿಸುವ ವಿವಿಧ, ಮೈ ನವಿರೇಳಿಸುವ, ಬಹಳ ಘೋರ ಸ್ವಪ್ನಗಳು, ಘೋರ ನಿಮಿತ್ತಗಳು ಮತ್ತು ದಾರುಣ ಉತ್ಪಾತಗಳು ಕಾಣಿಸಿಕೊಳ್ಳುತ್ತಿವೆ.

05141007a ಪ್ರಾಜಾಪತ್ಯಂ ಹಿ ನಕ್ಷತ್ರಂ ಗ್ರಹಸ್ತೀಕ್ಷ್ಣೋ ಮಹಾದ್ಯುತಿಃ|

05141007c ಶನೈಶ್ಚರಃ ಪೀಡಯತಿ ಪೀಡಯನ್ಪ್ರಾಣಿನೋಽಧಿಕಂ||

ಪ್ರಾಣಿಗಳನ್ನು ಅಧಿಕವಾಗಿ ಪೀಡಿಸುವ ತೀಕ್ಷ್ಣ ಮಹಾದ್ಯುತಿ ಶನೈಶ್ಚರ ಗ್ರಹವು ರೋಹಿಣೀ ನಕ್ಷತ್ರವನ್ನು ಪೀಡಿಸುತ್ತಿದೆ.

05141008a ಕೃತ್ವಾ ಚಾಂಗಾರಕೋ ವಕ್ರಂ ಜ್ಯೇಷ್ಠಾಯಾಂ ಮಧುಸೂದನ|

05141008c ಅನುರಾಧಾಂ ಪ್ರಾರ್ಥಯತೇ ಮೈತ್ರಂ ಸಂಶಮಯನ್ನಿವ||

ಮಧುಸೂದನ! ಮಿತ್ರರ ನಾಶವನ್ನು ಸೂಚಿಸಿ ಅಂಗಾರಕನು ವಕ್ರಿಯಾಗಿ ಜ್ಯೇಷ್ಠಾ ಮತ್ತು ಅನುರಾಧಾ ನಕ್ಷತ್ರಗಳ ಬಳಿ ಸಾಗುತ್ತಿದ್ದಾನೆ.

05141009a ನೂನಂ ಮಹದ್ಭಯಂ ಕೃಷ್ಣ ಕುರೂಣಾಂ ಸಮುಪಸ್ಥಿತಂ|

05141009c ವಿಶೇಷೇಣ ಹಿ ವಾರ್ಷ್ಣೇಯ ಚಿತ್ರಾಂ ಪೀಡಯತೇ ಗ್ರಹಃ||

ಕೃಷ್ಣ! ವಾರ್ಷ್ಣೇಯ! ಈ ಗ್ರಹವು ಚಿತ್ರಾ ನಕ್ಷತ್ರವನ್ನು ಪೀಡಿಸುತ್ತಿರುವುದರಿಂದ ವಿಶೇಷವಾಗಿ ಕುರುಗಳಿಗೆ ಮಹಾ ಭಯವು ಬಂದೊದಗಿದೆ.

05141010a ಸೋಮಸ್ಯ ಲಕ್ಷ್ಮ ವ್ಯಾವೃತ್ತಂ ರಾಹುರರ್ಕಮುಪೇಷ್ಯತಿ|

05141010c ದಿವಶ್ಚೋಲ್ಕಾಃ ಪತಂತ್ಯೇತಾಃ ಸನಿರ್ಘಾತಾಃ ಸಕಂಪನಾಃ||

ಚಂದ್ರನ ಮೇಲಿರುವ ಕಲೆಯು ತಲೆಕೆಳಗಾಗಿದೆ. ರಾಹುವು ಸೂರ್ಯನನ್ನು ಸಮೀಪಿಸುತ್ತಿದ್ದಾನೆ. ಆಕಾಶದಿಂದ ಜೋರಾಗಿ ಶಬ್ಧಮಾಡುತ್ತಾ, ಕಂಪಿಸುತ್ತಾ ಉಲ್ಕೆಗಳು ಬೀಳುತ್ತಿವೆ.

05141011a ನಿಷ್ಟನಂತಿ ಚ ಮಾತಂಗಾ ಮುಂಚಂತ್ಯಶ್ರೂಣಿ ವಾಜಿನಃ|

05141011c ಪಾನೀಯಂ ಯವಸಂ ಚಾಪಿ ನಾಭಿನಂದಂತಿ ಮಾಧವ||

ಆನೆಗಳು ಇದ್ದಕ್ಕಿದ್ದಂತೆಯೇ ಘೀಳಿಡುತ್ತಿವೆ. ಕುದುರೆಗಳು ಕಣ್ಣೀರು ಸುರಿಸುತ್ತಿವೆ. ಮಾಧವ! ಅವು ನೀರು-ಆಹಾರಗಳನ್ನೂ ಇಷ್ಟಪಡುತ್ತಿಲ್ಲ.

05141012a ಪ್ರಾದುರ್ಭೂತೇಷು ಚೈತೇಷು ಭಯಮಾಹುರುಪಸ್ಥಿತಂ|

05141012c ನಿಮಿತ್ತೇಷು ಮಹಾಬಾಹೋ ದಾರುಣಂ ಪ್ರಾಣಿನಾಶನಂ||

ಮಹಾಬಾಹೋ! ಈ ಸೂಚನೆಗಳು ಕಂಡುಬಂದಾಗ ಮಹಾ ಭಯವು ಬರಲಿಕ್ಕಿದೆ ಎಂದು ಹೇಳುತ್ತಾರೆ. ಇವು ದಾರುಣ ಪ್ರಾಣಿನಾಶನವನ್ನು ಸೂಚಿಸುತ್ತವೆ.

05141013a ಅಲ್ಪೇ ಭುಕ್ತೇ ಪುರೀಷಂ ಚ ಪ್ರಭೂತಮಿಹ ದೃಶ್ಯತೇ|

05141013c ವಾಜಿನಾಂ ವಾರಣಾನಾಂ ಚ ಮನುಷ್ಯಾಣಾಂ ಚ ಕೇಶವ||

ಕೇಶವ! ಆನೆಗಳು, ಕುದುರೆಗಳು ಮತ್ತು ಮನುಷ್ಯರು ಕಡಿಮೆ ತಿನ್ನುವಂತೆ ಆದರೆ ಅಧಿಕವಾಗಿ ಮಲವಿಸರ್ಜನೆ ಮಾಡುವಂತೆ ತೋರುತ್ತಿದೆ.

05141014a ಧಾರ್ತರಾಷ್ಟ್ರಸ್ಯ ಸೈನ್ಯೇಷು ಸರ್ವೇಷು ಮಧುಸೂದನ|

05141014c ಪರಾಭವಸ್ಯ ತಲ್ಲಿಂಗಮಿತಿ ಪ್ರಾಹುರ್ಮನೀಷಿಣಃ||

ಮಧುಸೂದನ! ಪರಾಭವದ ಸೂಚನೆಗಳೇನೆಂದು ತಿಳಿದವರು ಹೇಳುವ ಎಲ್ಲವೂ ಧಾರ್ತರಾಷ್ಟ್ರನ ಸೇನೆಯಲ್ಲಿವೆ.

05141015a ಪ್ರಹೃಷ್ಟಂ ವಾಹನಂ ಕೃಷ್ಣ ಪಾಂಡವಾನಾಂ ಪ್ರಚಕ್ಷತೇ|

05141015c ಪ್ರದಕ್ಷಿಣಾ ಮೃಗಾಶ್ಚೈವ ತತ್ತೇಷಾಂ ಜಯಲಕ್ಷಣಂ||

ಕೃಷ್ಣ! ಪಾಂಡವರ ವಾಹನಗಳು ಸಂತೋಷದಿಂದಿರುವಂತೆ ಕಾಣುತ್ತಿವೆ. ಮೃಗಗಳು ಪ್ರದಕ್ಷಿಣೆಯಾಗಿ ಚಲಿಸುತ್ತಿವೆ. ಇದು ಅವರ ಜಯದ ಲಕ್ಷಣ.

05141016a ಅಪಸವ್ಯಾ ಮೃಗಾಃ ಸರ್ವೇ ಧಾರ್ತರಾಷ್ಟ್ರಸ್ಯ ಕೇಶವ|

05141016c ವಾಚಶ್ಚಾಪ್ಯಶರೀರಿಣ್ಯಸ್ತತ್ಪರಾಭವಲಕ್ಷಣಂ||

ಕೇಶವ! ಧಾರ್ತರಾಷ್ಟ್ರನ ಮೃಗಗಳೆಲ್ಲವೂ ಅಪ್ರದಕ್ಷಿಣೆಯಾಗಿ ತಿರುಗುತ್ತಿವೆ. ಅಶರೀರವಾಣಿಗಳು ಕೇಳಿಬರುತ್ತಿವೆ. ಇದು ಅವರ ಸೋಲಿನ ಲಕ್ಷಣ.

05141017a ಮಯೂರಾಃ ಪುಷ್ಪಶಕುನಾ ಹಂಸಾಃ ಸಾರಸಚಾತಕಾಃ|

05141017c ಜೀವಂ ಜೀವಕಸಂಘಾಶ್ಚಾಪ್ಯನುಗಚ್ಚಂತಿ ಪಾಂಡವಾನ್||

ಉತ್ತಮ ಪಕ್ಷಿಗಳಾದ ನವಿಲುಗಳು, ಹಂಸಗಳು, ಸಾರಸಗಳು, ಜಾತಕಗಳು, ಜೀವ ಮತ್ತು ಜೀವಕಗಳ ಗುಂಪುಗಳು ಪಾಂಡವರನ್ನು ಅನುಸರಿಸಿ ಹೋಗುತ್ತಿವೆ.

05141018a ಗೃಧ್ರಾಃ ಕಾಕಾ ಬಡಾಃ ಶ್ಯೇನಾ ಯಾತುಧಾನಾಃ ಶಲಾವೃಕಾಃ|

05141018c ಮಕ್ಷಿಕಾಣಾಂ ಚ ಸಂಘಾತಾ ಅನುಗಚ್ಚಂತಿ ಕೌರವಾನ್||

ಆದರೆ ಹದ್ದು, ಕಾಗೆ, ಗಿಡುಗ, ತೋಳಗಳು, ರಾಕ್ಷಸರು ಮತ್ತು ಜೇನುಹುಳುಗಳು ಗುಂಪುಗಳಲ್ಲಿ ಕೌರವರನ್ನು ಹಿಂಬಾಲಿಸುತ್ತಿವೆ.

05141019a ಧಾರ್ತರಾಷ್ಟ್ರಸ್ಯ ಸೈನ್ಯೇಷು ಭೇರೀಣಾಂ ನಾಸ್ತಿ ನಿಸ್ವನಃ|

05141019c ಅನಾಹತಾಃ ಪಾಂಡವಾನಾಂ ನದಂತಿ ಪಟಹಾಃ ಕಿಲ||

ಧಾರ್ತರಾಷ್ಟ್ರನ ಸೇನೆಯಲ್ಲಿ ಭೇರಿಗಳು ಶಬ್ಧಮಾಡುತ್ತಿಲ್ಲ. ಆದರೆ ಪಾಂಡವರಲ್ಲಿ ಅವು ಹೊಡೆಯದೆಯೇ ಶಬ್ಧಮಾಡುತ್ತಿವೆಯಲ್ಲ!

05141020a ಉದಪಾನಾಶ್ಚ ನರ್ದಂತಿ ಯಥಾ ಗೋವೃಷಭಾಸ್ತಥಾ|

05141020c ಧಾರ್ತರಾಷ್ಟ್ರಸ್ಯ ಸೈನ್ಯೇಷು ತತ್ಪರಾಭವಲಕ್ಷಣಂ||

ಧಾರ್ತರಾಷ್ಟ್ರನ ಸೇನೆಯಲ್ಲಿ ಬಾವಿಗಳು ಹೋರಿಯಂತೆ ಶಬ್ಧಮಾಡುತ್ತಿವೆ. ಅದು ಅವರ ಪರಾಭವದ ಲಕ್ಷಣ.

05141021a ಮಾಂಸಶೋಣಿತವರ್ಷಂ ಚ ವೃಷ್ಟಂ ದೇವೇನ ಮಾಧವ|

05141021c ತಥಾ ಗಂಧರ್ವನಗರಂ ಭಾನುಮಂತಮುಪಸ್ಥಿತಂ|

05141021e ಸಪ್ರಾಕಾರಂ ಸಪರಿಖಂ ಸವಪ್ರಂ ಚಾರುತೋರಣಂ||

ಮಾಧವ! ದೇವತೆಗಳು ಮಾಂಸ ಮತ್ತು ರಕ್ತಗಳ ಮಳೆಯನ್ನು ಸುರಿಸುತ್ತಿದ್ದಾರೆ. ಆಗಸದಲ್ಲಿ ಪ್ರಾಕಾರ, ಪರಿಖ ಮತ್ತು ವಪ್ರ ಚಾರುತೋರಣಗಳಿಂದ ಸಜ್ಜಿತವಾದ ಗಂಧರ್ವನಗರಿಯು ಕಾಣುತ್ತಿದೆ.

05141022a ಕೃಷ್ಣಶ್ಚ ಪರಿಘಸ್ತತ್ರ ಭಾನುಮಾವೃತ್ಯ ತಿಷ್ಠತಿ|

05141022c ಉದಯಾಸ್ತಮಯೇ ಸಂಧ್ಯೇ ವೇದಯಾನೋ ಮಹದ್ಭಯಂ|

05141022e ಏಕಾ ಸೃಗ್ವಾಶತೇ ಘೋರಂ ತತ್ಪರಾಭವಲಕ್ಷಣಂ||

ಸೂರ್ಯನನ್ನು ಕಪ್ಪುಬಣ್ಣದ ಕೊಪ್ಪರಿಗೆಯು ಆವರಿಸಿದಂತಿದೆ. ಉದಯ ಮತ್ತು ಅಸ್ತ ಸಂಧ್ಯೆಗಳು ಮಹಾಭಯವನ್ನು ತಿಳಿಸುತ್ತಿವೆ. ನರಿಗಳು ಘೋರವಾಗಿ ಗೋಳಿಡುತ್ತಿವೆ. ಇವು ಪರಾಭವದ ಲಕ್ಷಣಗಳು.

05141023a ಕೃಷ್ಣಗ್ರೀವಾಶ್ಚ ಶಕುನಾ ಲಂಬಮಾನಾ ಭಯಾನಕಾಃ|

05141023c ಸಂಧ್ಯಾಮಭಿಮುಖಾ ಯಾಂತಿ ತತ್ಪರಾಭವಲಕ್ಷಣಂ||

ಸಾಯಂಕಾಲ ಕಪ್ಪು ಕೊರಳಿನ ಕೆಂಪುಕಾಲಿನ ಭಯಾನಕ ಪಕ್ಷಿಗಳು ಸೇನೆಯ ಎದುರುಮುಖವಾಗಿ ಹಾರುತ್ತಿವೆ. ಇದು ಪರಾಭವದ ಲಕ್ಷಣ.

05141024a ಬ್ರಾಹ್ಮಣಾನ್ಪ್ರಥಮಂ ದ್ವೇಷ್ಟಿ ಗುರೂಂಶ್ಚ ಮಧುಸೂದನ|

05141024c ಭೃತ್ಯಾನ್ಭಕ್ತಿಮತಶ್ಚಾಪಿ ತತ್ಪರಾಭವಲಕ್ಷಣಂ||

ಮಧುಸೂದನ! ಮೊದಲು ಬ್ರಾಹ್ಮಣರನ್ನು, ಗುರುಗಳನ್ನು, ನಂತರ ಭಕ್ತಿಯುಳ್ಳ ಸೇವಕರನ್ನು ದ್ವೇಷಿಸುತ್ತಿದ್ದಾರೆ. ಇದು ಪರಾಭವದ ಲಕ್ಷಣ.

05141025a ಪೂರ್ವಾ ದಿಗ್ಲೋಹಿತಾಕಾರಾ ಶಸ್ತ್ರವರ್ಣಾ ಚ ದಕ್ಷಿಣಾ|

05141025c ಆಮಪಾತ್ರಪ್ರತೀಕಾಶಾ ಪಶ್ಚಿಮಾ ಮಧುಸೂದನ||

ಮಧುಸೂದನ! ಪೂರ್ವ ದಿಕ್ಕು ಕೆಂಪಾಗಿದೆ. ದಕ್ಷಿಣವು ಶಸ್ತ್ರವರ್ಣದ್ದಾಗಿದೆ. ಪಶ್ಚಿಮವು ಮಣ್ಣಿನ ಬಣ್ಣವನ್ನು ತಳೆದಿದೆ.

05141026a ಪ್ರದೀಪ್ತಾಶ್ಚ ದಿಶಃ ಸರ್ವಾ ಧಾರ್ತರಾಷ್ಟ್ರಸ್ಯ ಮಾಧವ|

05141026c ಮಹದ್ಭಯಂ ವೇದಯಂತಿ ತಸ್ಮಿನ್ನುತ್ಪಾತಲಕ್ಷಣೇ||

ಮಾಧವ! ಧಾರ್ತರಾಷ್ಟ್ರನ ಎಲ್ಲ ದಿಕ್ಕುಗಳು ಹತ್ತಿ ಉರಿಯುವಂತಿವೆ. ಈ ಉತ್ಪಾತ ಲಕ್ಷಣಗಳು ಮಹಾಭಯವನ್ನು ಸೂಚಿಸುತ್ತವೆ.

05141027a ಸಹಸ್ರಪಾದಂ ಪ್ರಾಸಾದಂ ಸ್ವಪ್ನಾಂತೇ ಸ್ಮ ಯುಧಿಷ್ಠಿರಃ|

05141027c ಅಧಿರೋಹನ್ಮಯಾ ದೃಷ್ಟಃ ಸಹ ಭ್ರಾತೃಭಿರಚ್ಯುತ||

ಅಚ್ಯುತ! ಸಹೋದರರೊಂದಿಗೆ ಯುಧಿಷ್ಠಿರನು ಸಾವಿರ ಮೆಟ್ಟಿಲುಗಳಿರುವ ಅರಮನೆಯನ್ನು ಏರುತ್ತಿರುವುದನ್ನು ನಾನು ಸ್ವಪ್ನದ ಕೊನೆಯಲ್ಲಿ ಕಂಡಿದ್ದೇನೆ.

05141028a ಶ್ವೇತೋಷ್ಣೀಷಾಶ್ಚ ದೃಶ್ಯಂತೇ ಸರ್ವೇ ತೇ ಶುಕ್ಲವಾಸಸಃ|

05141028c ಆಸನಾನಿ ಚ ಶುಭ್ರಾಣಿ ಸರ್ವೇಷಾಮುಪಲಕ್ಷಯೇ||

ಅವರೆಲ್ಲರೂ ಬಿಳೀಬಣ್ಣದ ಮುಂಡಾಸು, ಬಿಳೀ ವಸ್ತ್ರವನ್ನು ಧರಿಸಿದ್ದರು ಮತ್ತು ಎಲ್ಲರೂ ಶುಭ್ರ ಆಸನಗಳಲ್ಲಿ ಕುಳಿತುಕೊಳ್ಳುವುದನ್ನು ನೋಡಿದೆನು.

05141029a ತವ ಚಾಪಿ ಮಯಾ ಕೃಷ್ಣ ಸ್ವಪ್ನಾಂತೇ ರುಧಿರಾವಿಲಾ|

05141029c ಆಂತ್ರೇಣ ಪೃಥಿವೀ ದೃಷ್ಟಾ ಪರಿಕ್ಷಿಪ್ತಾ ಜನಾರ್ದನ||

ಕೃಷ್ಣ! ಜನಾರ್ದನ! ಅದೇ ಸ್ವಪ್ನದ ಕೊನೆಯಲ್ಲಿ ನೀನು ರಕ್ತದಿಂದ ತೋಯ್ದ ಆಯುಧಗಳನ್ನು ನೆಲದಲ್ಲಿ ಮುಚ್ಚಿಡುತ್ತಿದ್ದುದನ್ನು ನೋಡಿದೆನು.

05141030a ಅಸ್ಥಿಸಂಚಯಮಾರೂಢಶ್ಚಾಮಿತೌಜಾ ಯುಧಿಷ್ಠಿರಃ|

05141030c ಸುವರ್ಣಪಾತ್ರ್ಯಾಂ ಸಂಹೃಷ್ಟೋ ಭುಕ್ತವಾನ್ ಘೃತಪಾಯಸಂ||

ಅಮಿತೌಜಸ ಯುಧಿಷ್ಠಿರನು ಅಸ್ಥಿಗಳ ಗುಡ್ಡೆಯನ್ನೇರಿ ಸಂತೋಷದಿಂದ ಸುವರ್ಣಪಾತ್ರೆಯಲ್ಲಿ ಘೃತಪಾಯಸವನ್ನು ತಿನ್ನುತ್ತಿದ್ದನು.

05141031a ಯುಧಿಷ್ಠಿರೋ ಮಯಾ ದೃಷ್ಟೋ ಗ್ರಸಮಾನೋ ವಸುಂಧರಾಂ|

05141031c ತ್ವಯಾ ದತ್ತಾಮಿಮಾಂ ವ್ಯಕ್ತಂ ಭೋಕ್ಷ್ಯತೇ ಸ ವಸುಂಧರಾಂ||

ನೀನು ನೀಡಿದ ವಸುಂಧರೆಯನ್ನು ಯುಧಿಷ್ಠಿರನು ನುಂಗುತ್ತಿರುವುದನ್ನು ನೋಡಿದೆನು. ಇದರಿಂದ ಅವನು ವಸುಂಧರೆಯನ್ನು ಭೋಗಿಸುತ್ತಾನೆ ಎನ್ನುವುದು ವ್ಯಕ್ತವಾಗುತ್ತದೆ.

05141032a ಉಚ್ಚಂ ಪರ್ವತಮಾರೂಢೋ ಭೀಮಕರ್ಮಾ ವೃಕೋದರಃ|

05141032c ಗದಾಪಾಣಿರ್ನರವ್ಯಾಘ್ರೋ ವೀಕ್ಷನ್ನಿವ ಮಹೀಮಿಮಾಂ||

ಎತ್ತರ ಪರ್ವತವನ್ನು ಏರಿ ಭೀಮಕರ್ಮಿ, ಗದಾಪಾಣಿ, ನರವ್ಯಾಘ್ರ, ವೃಕೋದರನು ಈ ಭೂಮಿಯನ್ನು ವೀಕ್ಷಿಸುತ್ತಿರುವಂತಿದ್ದನು.

05141033a ಕ್ಷಪಯಿಷ್ಯತಿ ನಃ ಸರ್ವಾನ್ಸ ಸುವ್ಯಕ್ತಂ ಮಹಾರಣೇ|

05141033c ವಿದಿತಂ ಮೇ ಹೃಷೀಕೇಶ ಯತೋ ಧರ್ಮಸ್ತತೋ ಜಯಃ||

ಅವನು ಮಹಾರಣದಲ್ಲಿ ನಮ್ಮೆಲ್ಲರನ್ನೂ ಸಂಹರಿಸುತ್ತಾನೆ ಎನ್ನುವುದು ಚೆನ್ನಾಗಿ ವ್ಯಕ್ತವಾಗಿದೆ. ಹೃಷೀಕೇಶ! ಧರ್ಮವು ಎಲ್ಲಿರುವುದೋ ಅಲ್ಲಿ ಜಯವೆಂದು ನನಗೆ ತಿಳಿದಿದೆ.

05141034a ಪಾಂಡುರಂ ಗಜಮಾರೂಢೋ ಗಾಂಡೀವೀ ಸ ಧನಂಜಯಃ|

05141034c ತ್ವಯಾ ಸಾರ್ಧಂ ಹೃಷೀಕೇಶ ಶ್ರಿಯಾ ಪರಮಯಾ ಜ್ವಲನ್||

05141035a ಯೂಯಂ ಸರ್ವಾನ್ವಧಿಷ್ಯಧ್ವಂ ತತ್ರ ಮೇ ನಾಸ್ತಿ ಸಂಶಯಃ|

05141035c ಪಾರ್ಥಿವಾನ್ಸಮರೇ ಕೃಷ್ಣ ದುರ್ಯೋಧನಪುರೋಗಮಾನ್||

ಹೃಷೀಕೇಶ! ಕೃಷ್ಣ! ಬಿಳಿಯ ಗಜವನ್ನೇರಿದ ಆ ಗಾಂಡೀವಿ ಧನಂಜಯನು ನಿನ್ನ ಜೊತೆಗೂಡಿ, ಪರಮಶ್ರೀಯಿಂದ ಬೆಳಗುತ್ತಾ, ನಮ್ಮೆಲ್ಲರನ್ನೂ ಸಮರದಲ್ಲಿ ದುರ್ಯೋಧನನನ್ನು ಬೆಂಬಲಿಸಿ ಬರುವ ಪಾರ್ಥಿವರನ್ನು- ವಧಿಸುತ್ತಾನೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

05141036a ನಕುಲಃ ಸಹದೇವಶ್ಚ ಸಾತ್ಯಕಿಶ್ಚ ಮಹಾರಥಃ|

05141036c ಶುದ್ಧಕೇಯೂರಕಂಠತ್ರಾಃ ಶುಕ್ಲಮಾಲ್ಯಾಂಬರಾವೃತಾಃ||

ನಕುಲ-ಸಹದೇವರು ಮತ್ತು ಮಹಾರಥಿ ಸಾತ್ಯಕಿಯರು ಶುದ್ಧ ಕೇಯೂರ, ಹಾರ, ಮತ್ತು ಶುಕ್ಲ ಮಾಲ್ಯಾಂಬರಗಳನ್ನು ಧರಿಸಿದ್ದರು.

05141037a ಅಧಿರೂಢಾ ನರವ್ಯಾಘ್ರಾ ನರವಾಹನಮುತ್ತಮಂ|

05141037c ತ್ರಯ ಏತೇ ಮಹಾಮಾತ್ರಾಃ ಪಾಂಡುರಚ್ಚತ್ರವಾಸಸಃ||

ಆ ನರವ್ಯಾಘ್ರರು ಉತ್ತಮ ನರವಾಹನಗಳನ್ನೇರಿದ್ದರು. ಆ ಮೂವರೂ ಮಹಾಮಾತ್ರರ ಮೇಲೆ ಬಿಳಿಗೊಡೆಗಳನ್ನು ಹಿಡಿಯಲಾಗಿತ್ತು.

05141038a ಶ್ವೇತೋಷ್ಣೀಷಾಶ್ಚ ದೃಶ್ಯಂತೇ ತ್ರಯ ಏವ ಜನಾರ್ದನ|

05141038c ಧಾರ್ತರಾಷ್ಟ್ರಸ್ಯ ಸೈನ್ಯೇಷು ತಾನ್ವಿಜಾನೀಹಿ ಕೇಶವ||

ಜನಾರ್ದನ! ಧಾರ್ತರಾಷ್ಟ್ರನ ಸೇನೆಯಲ್ಲಿ ಈ ಮೂವರು ಮಾತ್ರ ಬಿಳಿಯ ಮುಂಡಾಸನ್ನು ಧರಿಸಿರುವುದು ಕಂಡಿತು. ಕೇಶವ! ಅವರು ಯಾರೆಂದು ತಿಳಿದುಕೋ.

05141039a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ|

05141039c ರಕ್ತೋಷ್ಣೀಷಾಶ್ಚ ದೃಶ್ಯಂತೇ ಸರ್ವೇ ಮಾಧವ ಪಾರ್ಥಿವಾಃ||

ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮ! ಮಾಧವ! ಇತರ ಎಲ್ಲ ಪಾರ್ಥಿವರೂ ಕೆಂಪು ಮುಂಡಾಸಗಳನ್ನು ಧರಿಸಿ ಕಂಡುಬಂದರು.

05141040a ಉಷ್ಟ್ರಯುಕ್ತಂ ಸಮಾರೂಢೌ ಭೀಷ್ಮದ್ರೋಣೌ ಜನಾರ್ದನ|

05141040c ಮಯಾ ಸಾರ್ಧಂ ಮಹಾಬಾಹೋ ಧಾರ್ತರಾಷ್ಟ್ರೇಣ ಚಾಭಿಭೋ||

05141041a ಅಗಸ್ತ್ಯಶಾಸ್ತಾಂ ಚ ದಿಶಂ ಪ್ರಯಾತಾಃ ಸ್ಮ ಜನಾರ್ದನ|

05141041c ಅಚಿರೇಣೈವ ಕಾಲೇನ ಪ್ರಾಪ್ಸ್ಯಾಮೋ ಯಮಸಾದನಂ||

ಜನಾರ್ದನ! ಮಹಾಬಾಹೋ! ವಿಭೋ! ಭೀಷ್ಮ-ದ್ರೋಣರು, ನಾನು ಮತ್ತು ಧಾರ್ತರಾಷ್ಟ್ರ ಇವರು ಒಂಟೆಗಳನ್ನು ಕಟ್ಟಿದ ವಾಹನಗಳನ್ನೇರಿ ಅಗಸ್ತ್ಯನ ದಿಕ್ಕಿನೆಡೆಗೆ ಹೋಗುತ್ತಿದ್ದೆವು. ಜನಾರ್ದನ! ಸ್ವಲ್ಪವೇ ಸಮಯದಲ್ಲಿ ನಾವು ಯಮಸಾದನವನ್ನು ಸೇರುವವರಿದ್ದೇವೆ.

05141042a ಅಹಂ ಚಾನ್ಯೇ ಚ ರಾಜಾನೋ ಯಚ್ಚ ತತ್ಕ್ಷತ್ರಮಂಡಲಂ|

05141042c ಗಾಂಡೀವಾಗ್ನಿಂ ಪ್ರವೇಕ್ಷ್ಯಾಮ ಇತಿ ಮೇ ನಾಸ್ತಿ ಸಂಶಯಃ||

ನಾನು ಮತ್ತು ಆ ಕ್ಷತ್ರಮಂಡಲದಲ್ಲಿರುವ ಅನ್ಯ ರಾಜರು ಗಾಂಡೀವಾಗ್ನಿಯನ್ನು ಪ್ರವೇಶಿಸುತ್ತೇವೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.”

05141043 ಕೃಷ್ಣ ಉವಾಚ|

05141043a ಉಪಸ್ಥಿತವಿನಾಶೇಯಂ ನೂನಮದ್ಯ ವಸುಂಧರಾ|

05141043c ತಥಾ ಹಿ ಮೇ ವಚಃ ಕರ್ಣ ನೋಪೈತಿ ಹೃದಯಂ ತವ||

ಕೃಷ್ಣನು ಹೇಳಿದನು: “ಕರ್ಣ! ನನ್ನ ಮಾತುಗಳು ನಿನ್ನ ಹೃದಯವನ್ನು ಮುಟ್ಟುವುದಿಲ್ಲವಾದರೆ ಇಂದು ಈ ವಸುಂಧರೆಯ ವಿನಾಶವು ಬಂದೊದಗಿದೆ ಎಂದರ್ಥ.

05141044a ಸರ್ವೇಷಾಂ ತಾತ ಭೂತಾನಾಂ ವಿನಾಶೇ ಸಮುಪಸ್ಥಿತೇ|

05141044c ಅನಯೋ ನಯಸಂಕಾಶೋ ಹೃದಯಾನ್ನಾಪಸರ್ಪತಿ||

ಅಯ್ಯಾ! ಸರ್ವಭೂತಗಳ ವಿನಾಶವು ಉಪಸ್ಥಿತವಾಗಿರುವಾಗ ಅನ್ಯಾಯವು ನ್ಯಾಯವಾಗಿ ಕಾಣುವುದು ಹೃದಯವನ್ನು ಬಿಟ್ಟು ಹೋಗುವುದಿಲ್ಲ!”

05141045 ಕರ್ಣ ಉವಾಚ|

05141045a ಅಪಿ ತ್ವಾ ಕೃಷ್ಣ ಪಶ್ಯಾಮ ಜೀವಂತೋಽಸ್ಮಾನ್ಮಹಾರಣಾತ್|

05141045c ಸಮುತ್ತೀರ್ಣಾ ಮಹಾಬಾಹೋ ವೀರಕ್ಷಯವಿನಾಶನಾತ್||

ಕರ್ಣನು ಹೇಳಿದನು: “ಮಹಾಬಾಹೋ! ಕೃಷ್ಣ! ಈ ವೀರಕ್ಷಯವಿನಾಶದಿಂದ ಉತ್ತೀರ್ಣರಾಗಿ ಮಹಾರಣದಿಂದ ಜೀವಂತರಾಗಿ ಉಳಿದು ಬಂದರೆ ಪುನಃ ನಾವು ಭೇಟಿಯಾಗೋಣ!

05141046a ಅಥ ವಾ ಸಂಗಮಃ ಕೃಷ್ಣ ಸ್ವರ್ಗೇ ನೋ ಭವಿತಾ ಧ್ರುವಂ|

05141046c ತತ್ರೇದಾನೀಂ ಸಮೇಷ್ಯಾಮಃ ಪುನಃ ಸಾರ್ಧಂ ತ್ವಯಾನಘ||

ಅಥವಾ ಕೃಷ್ಣ! ಅನಘ! ಖಂಡಿತವಾಗಿಯೂ ಸ್ವರ್ಗದಲ್ಲಿ ನಮ್ಮ ಮಿಲನವಾಗುತ್ತದೆ. ಅಲ್ಲಿಯೇ ನಮ್ಮಿಬ್ಬರ ಪುನರ್ಮಿಲನವಾಗುವುದು ಎಂದು ನನಗನ್ನಿಸುತ್ತಿದೆ.””

05141047 ಸಂಜಯ ಉವಾಚ|

05141047a ಇತ್ಯುಕ್ತ್ವಾ ಮಾಧವಂ ಕರ್ಣಃ ಪರಿಷ್ವಜ್ಯ ಚ ಪೀಡಿತಂ|

05141047c ವಿಸರ್ಜಿತಃ ಕೇಶವೇನ ರಥೋಪಸ್ಥಾದವಾತರತ್||

ಸಂಜಯನು ಹೇಳಿದನು: “ಹೀಗೆ ಹೇಳಿ ಕರ್ಣನು ಮಾಧವನನ್ನು ಬಿಗಿಯಾಗಿ ಅಪ್ಪಿಕೊಂಡನು. ಕೇಶವನಿಂದ ಬೀಳ್ಕೊಂಡು ರಥದಿಂದ ಕೆಳಕ್ಕಿಳಿದನು.

05141048a ತತಃ ಸ್ವರಥಮಾಸ್ಥಾಯ ಜಾಂಬೂನದವಿಭೂಷಿತಂ|

05141048c ಸಹಾಸ್ಮಾಭಿರ್ನಿವವೃತೇ ರಾಧೇಯೋ ದೀನಮಾನಸಃ||

ಬಂಗಾರದಿಂದ ವಿಭೂಷಿತವಾದ ತನ್ನ ರಥದಲ್ಲಿ ಕುಳಿತು ದೀನಮಾನಸನಾಗಿ ರಾಧೇಯನು ನಮ್ಮೊಂದಿಗೆ ಹಿಂದಿರುಗಿದನು.

05141049a ತತಃ ಶೀಘ್ರತರಂ ಪ್ರಾಯಾತ್ಕೇಶವಃ ಸಹಸಾತ್ಯಕಿಃ|

05141049c ಪುನರುಚ್ಚಾರಯನ್ವಾಣೀಂ ಯಾಹಿ ಯಾಹೀತಿ ಸಾರಥಿಂ||

ಅನಂತರ ಸಾತ್ಯಕಿಯೊಂದಿಗೆ ಕೇಶವನು “ಹೋಗು! ಹೋಗು!” ಎಂದು ಪುನಃ ಪುನಃ ಸಾರಥಿಗೆ ಹೇಳುತ್ತಾ ಶೀಘ್ರವಾಗಿ ಪ್ರಯಾಣಿಸಿದನು.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಕೃಷ್ಣಕರ್ಣಸಂವಾದೇ ಏಕಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಕೃಷ್ಣಕರ್ಣಸಂವಾದದಲ್ಲಿ ನೂರಾನಲ್ವತ್ತೊಂದನೆಯ ಅಧ್ಯಾಯವು.

Image result for indian motifs"

Comments are closed.