Udyoga Parva: Chapter 140

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೪೦

ಕರ್ಣನ ಮಾತನ್ನು ಕೇಳಿ ಜೋರಾಗಿ ನಕ್ಕು ಕೃಷ್ಣನು ಯುದ್ಧದಲ್ಲಿ ಪಾಂಡವರಿಗೆ ಜಯವು ನಿಶ್ಚಯವೆಂದೂ, ಅಂದಿನಿಂದ ಏಳನೆಯ ದಿನದ ಅಮವಾಸ್ಯೆಯಂದು ಸಂಗ್ರಾಮವನ್ನು ಪ್ರಾರಂಭಿಸಬೇಕೆಂದು ಹೇಳಿದುದು (೧-೨೦).

05140001 ಸಂಜಯ ಉವಾಚ|

05140001a ಕರ್ಣಸ್ಯ ವಚನಂ ಶ್ರುತ್ವಾ ಕೇಶವಃ ಪರವೀರಹಾ|

05140001c ಉವಾಚ ಪ್ರಹಸನ್ವಾಕ್ಯಂ ಸ್ಮಿತಪೂರ್ವಮಿದಂ ತದಾ||

ಸಂಜಯನು ಹೇಳಿದನು: “ಕರ್ಣನ ಮಾತನ್ನು ಕೇಳಿ ಪರವೀರಹ ಕೇಶವನು ಮೊದಲು ಮುಗುಳ್ನಕ್ಕು, ನಂತರ ಜೋರಾಗಿ ನಕ್ಕು ಹೀಗೆ ಹೇಳಿದನು:

05140002a ಅಪಿ ತ್ವಾಂ ನ ತಪೇತ್ಕರ್ಣ ರಾಜ್ಯಲಾಭೋಪಪಾದನಾ|

05140002c ಮಯಾ ದತ್ತಾಂ ಹಿ ಪೃಥಿವೀಂ ನ ಪ್ರಶಾಸಿತುಮಿಚ್ಚಸಿ||

“ಕರ್ಣ! ರಾಜ್ಯಲಾಭವು ಕೂಡ ನಿನ್ನನ್ನು ಬದಲಾಯಿಸುವುದಿಲ್ಲವೇ? ನಾನು ಕೊಡುತ್ತಿರುವ ಈ ಪೃಥ್ವಿಯನ್ನು ಆಳಲು ಬಯಸುವುದಿಲ್ಲವೇ? 

05140003a ಧ್ರುವೋ ಜಯಃ ಪಾಂಡವಾನಾಮಿತೀದಂ

         ನ ಸಂಶಯಃ ಕಶ್ಚನ ವಿದ್ಯತೇಽತ್ರ|

05140003c ಜಯಧ್ವಜೋ ದೃಶ್ಯತೇ ಪಾಂಡವಸ್ಯ

         ಸಮುಚ್ಚ್ರಿತೋ ವಾನರರಾಜ ಉಗ್ರಃ||

ಪಾಂಡವರಿಗೇ ಜಯವೆನ್ನುವುದು ನಿಶ್ಚಿತ. ಅದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಉಗ್ರ ವಾನರರಾಜನಿಂದ ಕೂಡಿದ ಧ್ವಜವುಳ್ಳ ಪಾಂಡವನಿಗೆ ಜಯವೇ ಕಾಣುತ್ತಿದೆ.

05140004a ದಿವ್ಯಾ ಮಾಯಾ ವಿಹಿತಾ ಭೌವನೇನ

         ಸಮುಚ್ಚ್ರಿತಾ ಇಂದ್ರಕೇತುಪ್ರಕಾಶಾ|

05140004c ದಿವ್ಯಾನಿ ಭೂತಾನಿ ಭಯಾವಹಾನಿ

         ದೃಶ್ಯಂತಿ ಚೈವಾತ್ರ ಭಯಾನಕಾನಿ||

ಭೌವನನು ಆ ದಿವ್ಯ ಇಂದ್ರಕೇತುವಿನಂತೆ ಪ್ರಕಾಶಿಸುವ ಧ್ವಜದಲ್ಲಿ ಮಾಯೆಯನ್ನು ಅಳವಡಿಸಿದ್ದಾನೆ. ಅದರಲ್ಲಿ ಭಯವನ್ನು ನೀಡುವ ಭೂತಗಳೂ ಭಯಾನಕ ದೃಶ್ಯಗಳೂ ಇವೆ.

05140005a ನ ಸಜ್ಜತೇ ಶೈಲವನಸ್ಪತಿಭ್ಯ

         ಊರ್ಧ್ವಂ ತಿರ್ಯಗ್ಯೋಜನಮಾತ್ರರೂಪಃ|

05140005c ಶ್ರೀಮಾನ್ಧ್ವಜಃ ಕರ್ಣ ಧನಂಜಯಸ್ಯ

         ಸಮುಚ್ಚ್ರಿತಃ ಪಾವಕತುಲ್ಯರೂಪಃ||

ಉದ್ದದಲ್ಲಿ ಮತ್ತು ಎಲ್ಲಕಡೆ ಒಂದು ಯೋಜನೆ ಅಳತೆಯಿರುವ ಆ ಧ್ವಜವನ್ನು ಬಿಡಿಸಿದಾಗ ಗಿರಿ-ಮರಗಳು ಅಡ್ಡವಾಗಿ ಬರಲಾರವು. ಕರ್ಣ! ಧನಂಜಯನ ಶ್ರೀಮಾನ್ ಧ್ವಜವು ರೂಪದಲ್ಲಿ ಗಾಳಿಯಂತೆ ರಚಿಸಲ್ಪಟ್ಟಿದೆ.

05140006a ಯದಾ ದ್ರಕ್ಷ್ಯಸಿ ಸಂಗ್ರಾಮೇ ಶ್ವೇತಾಶ್ವಂ ಕೃಷ್ಣಸಾರಥಿಂ|

05140006c ಐಂದ್ರಮಸ್ತ್ರಂ ವಿಕುರ್ವಾಣಮುಭೇ ಚೈವಾಗ್ನಿಮಾರುತೇ||

05140007a ಗಾಂಡೀವಸ್ಯ ಚ ನಿರ್ಘೋಷಂ ವಿಸ್ಫೂರ್ಜಿತಮಿವಾಶನೇಃ|

05140007c ನ ತದಾ ಭವಿತಾ ತ್ರೇತಾ ನ ಕೃತಂ ದ್ವಾಪರಂ ನ ಚ||

ಕೃಷ್ಣನು ಸಾರಥಿಯಾಗಿರುವ ಶ್ವೇತಾಶ್ವನು ಸಂಗ್ರಾಮದಲ್ಲಿ ಐಂದ್ರ, ಅಗ್ನಿ ಮತ್ತು ಮರುತಾಸ್ತ್ರಗಳನ್ನು ಪ್ರಯೋಗಿಸುವುದನ್ನು ನೋಡಿದಾಗ ಮತ್ತು ಗಾಂಡೀವವನ್ನು ಎಳೆದಾಗ ಉಂಟಾಗುವ ನಿರ್ಘೋಷವನ್ನು ಕೇಳಿದಾಗ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

05140008a ಯದಾ ದ್ರಕ್ಷ್ಯಸಿ ಸಂಗ್ರಾಮೇ ಕುಂತೀಪುತ್ರಂ ಯುಧಿಷ್ಠಿರಂ|

05140008c ಜಪಹೋಮಸಮಾಯುಕ್ತಂ ಸ್ವಾಂ ರಕ್ಷಂತಂ ಮಹಾಚಮೂಂ||

05140009a ಆದಿತ್ಯಮಿವ ದುರ್ಧರ್ಷಂ ತಪಂತಂ ಶತ್ರುವಾಹಿನೀಂ|

05140009c ನ ತದಾ ಭವಿತಾ ತ್ರೇತಾ ನ ಕೃತಂ ದ್ವಾಪರಂ ನ ಚ||

ಸಂಗ್ರಾಮದಲ್ಲಿ ಜಪಹೋಮಸಮಾಯುಕ್ತನಾಗಿ ಮಹಾಸೇನೆಯನ್ನು ರಕ್ಷಿಸುತ್ತಿರುವ, ದುರ್ಧರ್ಷ ಆದಿತ್ಯನಂತೆ ಶತ್ರುಸೇನೆಯನ್ನು ಸುಡುತ್ತಿರುವ ಕುಂತೀಪುತ್ರ ಯುಧಿಷ್ಠಿರನನ್ನು ಯಾವಾಗ ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

05140010a ಯದಾ ದ್ರಕ್ಷ್ಯಸಿ ಸಂಗ್ರಾಮೇ ಭೀಮಸೇನಂ ಮಹಾಬಲಂ|

05140010c ದುಃಶಾಸನಸ್ಯ ರುಧಿರಂ ಪೀತ್ವಾ ನೃತ್ಯಂತಮಾಹವೇ||

05140011a ಪ್ರಭಿನ್ನಮಿವ ಮಾತಂಗಂ ಪ್ರತಿದ್ವಿರದಘಾತಿನಂ|

05140011c ನ ತದಾ ಭವಿತಾ ತ್ರೇತಾ ನ ಕೃತಂ ದ್ವಾಪರಂ ನ ಚ||

ಸಂಗ್ರಾಮದಲ್ಲಿ ಮಹಾಬಲ ಭೀಮಸೇನನು ಪ್ರತಿದ್ವಂದಿ ಆನೆಯನ್ನು ಕೊಂದು ಸೊಕ್ಕಿದ ದುಃಶಾಸನನ ರುಧಿರವನ್ನು ಕುಡಿದು ರಣದಲ್ಲಿ ನೃತ್ಯವಾಡುವುದನ್ನು ನೀನು ಯಾವಾಗ ನೋಡುತ್ತೀಯೋ, ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

05140012a ಯದಾ ದ್ರಕ್ಷ್ಯಸಿ ಸಂಗ್ರಾಮೇ ಮಾದ್ರೀಪುತ್ರೌ ಮಹಾರಥೌ|

05140012c ವಾಹಿನೀಂ ಧಾರ್ತರಾಷ್ಟ್ರಾಣಾಂ ಕ್ಷೋಭಯಂತೌ ಗಜಾವಿವ||

05140013a ವಿಗಾಢೇ ಶಸ್ತ್ರಸಂಪಾತೇ ಪರವೀರರಥಾರುಜೌ|

05140013c ನ ತದಾ ಭವಿತಾ ತ್ರೇತಾ ನ ಕೃತಂ ದ್ವಾಪರಂ ನ ಚ||

ಸಂಗ್ರಾಮದಲ್ಲಿ ಯಾವಾಗ ಮಹಾರಥಿ ಮಾದ್ರೀಪುತ್ರರು ಆನೆಗಳಂತೆ ಧಾರ್ತರಾಷ್ಟ್ರನ ಸೇನೆಯನ್ನು ಕ್ಷೋಭೆಗೊಳಿಸುತ್ತಿರುವುದನ್ನು, ಶಸ್ತ್ರಗಳ ಗುಂಪುಗಳನ್ನು ಸೀಳಿ ಶತ್ರುಗಳ ರಥಗಳನ್ನು ಧ್ವಂಸಿಸುತ್ತಿರುವುದನ್ನು ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

05140014a ಯದಾ ದ್ರಕ್ಷ್ಯಸಿ ಸಂಗ್ರಾಮೇ ದ್ರೋಣಂ ಶಾಂತನವಂ ಕೃಪಂ|

05140014c ಸುಯೋಧನಂ ಚ ರಾಜಾನಂ ಸೈಂಧವಂ ಚ ಜಯದ್ರಥಂ||

05140015a ಯುದ್ಧಾಯಾಪತತಸ್ತೂರ್ಣಂ ವಾರಿತಾನ್ಸವ್ಯಸಾಚಿನಾ|

05140015c ನ ತದಾ ಭವಿತಾ ತ್ರೇತಾ ನ ಕೃತಂ ದ್ವಾಪರಂ ನ ಚ||

ಸಂಗ್ರಾಮದಲ್ಲಿ ಸವ್ಯಸಾಚಿಯು ದ್ರೋಣ, ಶಾಂತನವ, ಕೃಪ, ಸುಯೋಧನ, ಮತ್ತು ಸೈಂಧವ ರಾಜ ಜಯದ್ರಥರನ್ನು ಯುದ್ಧದಲ್ಲಿ ಮುನ್ನುಗ್ಗಿಬರುವಾಗ ತಡೆಯುವುದನ್ನು ಯಾವಾಗ ನೋಡುತ್ತೀಯೋ ಆಗ ಅಲ್ಲಿ ತ್ರೇತವೂ ಇರುವುದಿಲ್ಲ, ಕೃತವೂ ಇರುವುದಿಲ್ಲ, ದ್ವಾಪರವೂ ಇರುವುದಿಲ್ಲ.

05140016a ಬ್ರೂಯಾಃ ಕರ್ಣ ಇತೋ ಗತ್ವಾ ದ್ರೋಣಂ ಶಾಂತನವಂ ಕೃಪಂ|

05140016c ಸೌಮ್ಯೋಽಯಂ ವರ್ತತೇ ಮಾಸಃ ಸುಪ್ರಾಪಯವಸೇಂಧನಃ||

ಕರ್ಣ! ಇಲ್ಲಿಂದ ಹಿಂದಿರುಗಿ ದ್ರೋಣ, ಶಾಂತನವ ಮತ್ತು ಕೃಪರಿಗೆ ಹೇಳು. ಈ ತಿಂಗಳು ಬೆಳೆ ಮತ್ತು ಇಂಧನಗಳಿಂದ ಸಮೃದ್ಧವಾಗಿದ್ದು ಉತ್ತಮ ಸಮಯವಾಗಿದೆ.

05140017a ಪಕ್ವೌಷಧಿವನಸ್ಫೀತಃ ಫಲವಾನಲ್ಪಮಕ್ಷಿಕಃ|

05140017c ನಿಷ್ಪಂಕೋ ರಸವತ್ತೋಯೋ ನಾತ್ಯುಷ್ಣಶಿಶಿರಃ ಸುಖಃ||

ಔಷಧಿಗಳು ಪಕ್ವವಾಗಿವೆ, ವನವು ಪುಷ್ಪ-ಫಲ ಭರಿತವಾಗಿದೆ, ಅತೀ ಕಡಿಮೆ ಸೊಳ್ಳೆಗಳಿವೆ. ದಾರಿಯು ಸುಲಭವಾಗಿದೆ. ನೀರು ರಸಭರಿತವಾಗಿದೆ. ಅತಿ ಸೆಖೆಯೂ ಛಳಿಯೂ ಇಲ್ಲದೇ ಸುಖಕರವಾಗಿದೆ.

05140018a ಸಪ್ತಮಾಚ್ಚಾಪಿ ದಿವಸಾದಮಾವಾಸ್ಯಾ ಭವಿಷ್ಯತಿ|

05140018c ಸಂಗ್ರಾಮಂ ಯೋಜಯೇತ್ತತ್ರ ತಾಂ ಹ್ಯಾಹುಃ ಶಕ್ರದೇವತಾಂ||

ಇಂದಿನಿಂದ ಏಳನೆಯ ದಿವಸ ಅಮವಾಸ್ಯೆಯಿದೆ. ಅಂದು ಸಂಗ್ರಾಮವನ್ನು ಪ್ರಾರಂಭಿಸಬೇಕು. ಏಕೆಂದರೆ ಅದರ ದೇವತೆಯು ಶಕ್ರನೆಂದು ಹೇಳುತ್ತಾರೆ.

05140019a ತಥಾ ರಾಜ್ಞೋ ವದೇಃ ಸರ್ವಾನ್ಯೇ ಯುದ್ಧಾಯಾಭ್ಯುಪಾಗತಾಃ|

05140019c ಯದ್ವೋ ಮನೀಷಿತಂ ತದ್ವೈ ಸರ್ವಂ ಸಂಪಾದಯಾಮಿ ವಃ||

ಹಾಗೆಯೇ ಯುದ್ಧಕ್ಕಾಗಿ ಅಲ್ಲಿ ಬಂದು ಸೇರಿರುವ ಎಲ್ಲ ರಾಜರಿಗೂ ಹೇಳು: ಅವರು ಬಯಸಿದುದೆಲ್ಲವನ್ನು ನಾನು ನೆರವೇರಿಸಿಕೊಡುತ್ತೇನೆ.

05140020a ರಾಜಾನೋ ರಾಜಪುತ್ರಾಶ್ಚ ದುರ್ಯೋಧನವಶಾನುಗಾಃ|

05140020c ಪ್ರಾಪ್ಯ ಶಸ್ತ್ರೇಣ ನಿಧನಂ ಪ್ರಾಪ್ಸ್ಯಂತಿ ಗತಿಮುತ್ತಮಾಂ||

ದುರ್ಯೋಧನನ ವಶದಲ್ಲಿದ್ದು ಅವನನ್ನು ಅನುಸರಿಸುವ ರಾಜರು- ರಾಜಪುತ್ರರು ಶಸ್ತ್ರಗಳಿಂದ ಸಾವನ್ನು ಪಡೆದು ಉತ್ತಮ ಗತಿಯನ್ನು ಹೊಂದುತ್ತಾರೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಭಗವದ್ವಾಕ್ಯೇ ಚತ್ವಾರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಭಗವದ್ವಾಕ್ಯದಲ್ಲಿ ನೂರಾನಲ್ವತ್ತನೆಯ ಅಧ್ಯಾಯವು.

Image result for flowers against white background"

Comments are closed.