Udyoga Parva: Chapter 138

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಕರ್ಣ‌ಉಪನಿವಾದ ಪರ್ವ

೧೩೮

ಕೃಷ್ಣನು ಕರ್ಣನಲ್ಲಿ ಭೇದವನ್ನುಂಟುಮಾಡಲು ಪ್ರಯತ್ನಿಸಿದುದು

ಕೃಷ್ಣನು ಕರ್ಣನಿಗೆ ಏನು ಹೇಳಿದನೆಂದು ಧೃತರಾಷ್ಟ್ರನು ಕೇಳಲು ಸಂಜಯನು ಅವನಿಗೆ ಕೃಷ್ಣ-ಕರ್ಣರ ಸಂಭಾಷಣೆಯನ್ನು ತಿಳಿಸಿದುದು (೧-೫). ಕೃಷ್ಣನು ಕರ್ಣನಿಗೆ ಅವನು ಕುಂತಿಯ ಮಗನೆಂದೂ, ಪಾಂಡವರೊಂದಿಗೆ ಸೇರಿ ರಾಜ್ಯವಾಳೆಂದೂ ಹೇಳುವುದು (೬-೨೮).

Image result for karna and krishna"05138001 ಧೃತರಾಷ್ಟ್ರ ಉವಾಚ|

05138001a ರಾಜಪುತ್ರೈಃ ಪರಿವೃತಸ್ತಥಾಮಾತ್ಯೈಶ್ಚ ಸಂಜಯ|

05138001c ಉಪಾರೋಪ್ಯ ರಥೇ ಕರ್ಣಂ ನಿರ್ಯಾತೋ ಮಧುಸೂದನಃ||

05138002a ಕಿಮಬ್ರವೀದ್ರಥೋಪಸ್ಥೇ ರಾಧೇಯಂ ಪರವೀರಹಾ|

05138002c ಕಾನಿ ಸಾಂತ್ವಾನಿ ಗೋವಿಂದಃ ಸೂತಪುತ್ರೇ ಪ್ರಯುಕ್ತವಾನ್||

ಧೃತರಾಷ್ಟ್ರನು ಹೇಳಿದನು: “ಸಂಜಯ! ರಾಜಪುತ್ರರಿಂದ ಮತ್ತು ಅಮಾತ್ಯರಿಂದ ಪರಿವೃತನಾಗಿ ರಥದಲ್ಲಿ ಕರ್ಣನನ್ನು ಏರಿಸಿಕೊಂಡು ಹೊರಟ ಮಧುಸೂದನನು ರಥದಲ್ಲಿ ಕುಳಿತಿದ್ದ ಪರವೀರಹ ರಾಧೇಯನಿಗೆ ಏನು ಹೇಳಿದನು? ಗೋವಿಂದನು ಸೂತಪುತ್ರನಿಗೆ ಸಾಂತ್ವನದ ಯಾವ ಮಾತುಗಳನ್ನಾಡಿದನು?

05138003a ಓಘಮೇಘಸ್ವನಃ ಕಾಲೇ ಯತ್ಕೃಷ್ಣಃ ಕರ್ಣಮಬ್ರವೀತ್|

05138003c ಮೃದು ವಾ ಯದಿ ವಾ ತೀಕ್ಷ್ಣಂ ತನ್ಮಮಾಚಕ್ಷ್ವ ಸಂಜಯ||

ಸಂಜಯ! ದೊಡ್ಡ ಅಲೆಯಂತೆ ಅಥವಾ ಕಪ್ಪು ಮೋಡದಂತೆ ಧ್ವನಿಯುಳ್ಳ ಕೃಷ್ಣನು ಕರ್ಣನಿಗೆ, ಮೃದುವಾಗಿರಲಿ ಅಥವಾ ಕಠೋರವಾಗಿರಲಿ, ಏನು ಹೇಳಿದ ಎನ್ನುವುದನ್ನು ನನಗೆ ಹೇಳು.”

05138004 ಸಂಜಯ ಉವಾಚ|

05138004a ಆನುಪೂರ್ವ್ಯೇಣ ವಾಕ್ಯಾನಿ ಶ್ಲಕ್ಷ್ಣಾನಿ ಚ ಮೃದೂನಿ ಚ|

05138004c ಪ್ರಿಯಾಣಿ ಧರ್ಮಯುಕ್ತಾನಿ ಸತ್ಯಾನಿ ಚ ಹಿತಾನಿ ಚ||

05138005a ಹೃದಯಗ್ರಹಣೀಯಾನಿ ರಾಧೇಯಂ ಮಧುಸೂದನಃ|

05138005c ಯಾನ್ಯಬ್ರವೀದಮೇಯಾತ್ಮಾ ತಾನಿ ಮೇ ಶೃಣು ಭಾರತ||

ಸಂಜಯನು ಹೇಳಿದನು: “ಭಾರತ! ಆ ಸಂಭಾಷಣೆಯಲ್ಲಿ ಅಮೇಯಾತ್ಮ ಮಧುಸೂದನನು ರಾಧೇಯನಿಗೆ ಹೇಳಿದ ನಯವಾದ, ದಯೆಯಿಂದ ಕೂಡಿದ, ಪ್ರಿಯವಾದ, ಧರ್ಮಯುಕ್ತವಾದ, ಸತ್ಯವೂ ಹಿತವೂ ಆದ, ಹೃದಯದಲ್ಲಿ ಹಿಡಿದಿಟ್ಟುಕೊಳ್ಳಬೇಕಾದಂತಹ ಮಾತುಗಳನ್ನು ನನ್ನಿಂದ ಕೇಳು[1].

05138006 ವಾಸುದೇವ ಉವಾಚ|

05138006a ಉಪಾಸಿತಾಸ್ತೇ ರಾಧೇಯ ಬ್ರಾಹ್ಮಣಾ ವೇದಪಾರಗಾಃ|

05138006c ತತ್ತ್ವಾರ್ಥಂ ಪರಿಪೃಷ್ಟಾಶ್ಚ ನಿಯತೇನಾನಸೂಯಯಾ||

ವಾಸುದೇವನು ಹೇಳಿದನು: “ರಾಧೇಯ! ವೇದಪಾರಂಗತ ಬ್ರಾಹ್ಮಣರನ್ನು ನೀನು ಉಪಾಸಿಸಿದ್ದೀಯೆ. ವಿನಯದಿಂದ, ಅನಸೂಯನಾಗಿ ಅವುಗಳ ಅರ್ಥವನ್ನು ಕೇಳಿ ತಿಳಿದುಕೊಂಡಿರುವೆ.

05138007a ತ್ವಮೇವ ಕರ್ಣ ಜಾನಾಸಿ ವೇದವಾದಾನ್ಸನಾತನಾನ್|

05138007c ತ್ವಂ ಹ್ಯೇವ ಧರ್ಮಶಾಸ್ತ್ರೇಷು ಸೂಕ್ಷ್ಮೇಷು ಪರಿನಿಷ್ಠಿತಃ||

ಕರ್ಣ! ಸನಾತನವಾದ ವೇದಗಳನ್ನೂ ನೀನು ಅರಿತಿದ್ದೀಯೆ. ನೀನು ಧರ್ಮಶಾಸ್ತ್ರಗಳ ಸೂಕ್ಷ್ಮತೆಗಳಲ್ಲಿಯೂ ಪಳಗಿದ್ದೀಯೆ.

05138008a ಕಾನೀನಶ್ಚ ಸಹೋಢಶ್ಚ ಕನ್ಯಾಯಾಂ ಯಶ್ಚ ಜಾಯತೇ|

05138008c ವೋಢಾರಂ ಪಿತರಂ ತಸ್ಯ ಪ್ರಾಹುಃ ಶಾಸ್ತ್ರವಿದೋ ಜನಾಃ||

ಮದುವೆಯ ಮೊದಲು ಕನ್ಯೆಗೆ ಹುಟ್ಟಿದವನು ಮದುವೆಯಾದ ಅವಳ ಗಂಡನಿಗೆ ಹುಟ್ಟಿದ ಮಕ್ಕಳಿಗೆ ಸಮನೆಂದು ಶಾಸ್ತ್ರವನ್ನು ತಿಳಿದ ಜನರು ಹೇಳುತ್ತಾರೆ.

05138009a ಸೋಽಸಿ ಕರ್ಣ ತಥಾ ಜಾತಃ ಪಾಂಡೋಃ ಪುತ್ರೋಽಸಿ ಧರ್ಮತಃ|

05138009c ನಿಗ್ರಹಾದ್ಧರ್ಮಶಾಸ್ತ್ರಾಣಾಮೇಹಿ ರಾಜಾ ಭವಿಷ್ಯಸಿ||

ಕರ್ಣ! ಹಾಗೆ ಹುಟ್ಟಿದ ನೀನೂ ಕೂಡ ಧರ್ಮತಃ ಪಾಂಡುವಿನ ಮಗನಾಗಿದ್ದೀಯೆ. ಧರ್ಮಶಾಸ್ತ್ರಗಳ ಕಟ್ಟುಪಾಡುಗಳಂತೆ ಬಾ! ರಾಜನಾಗುವೆಯಂತೆ!

05138010a ಪಿತೃಪಕ್ಷೇ ಹಿ ತೇ ಪಾರ್ಥಾ ಮಾತೃಪಕ್ಷೇ ಚ ವೃಷ್ಣಯಃ|

05138010c ದ್ವೌ ಪಕ್ಷಾವಭಿಜಾನೀಹಿ ತ್ವಮೇತೌ ಪುರುಷರ್ಷಭ||

ತಂದೆಯ ಕಡೆಯಿಂದ ಪಾರ್ಥರು ಮತ್ತು ತಾಯಿಯ ಕಡೆಯಿಂದ ವೃಷ್ಣಿಗಳು. ಪುರುಷರ್ಷಭ! ಇವರಿಬ್ಬರೂ ನಿನ್ನವರೇ ಎನ್ನುವುದನ್ನು ತಿಳಿದುಕೋ!

05138011a ಮಯಾ ಸಾರ್ಧಮಿತೋ ಯಾತಮದ್ಯ ತ್ವಾಂ ತಾತ ಪಾಂಡವಾಃ|

05138011c ಅಭಿಜಾನಂತು ಕೌಂತೇಯಂ ಪೂರ್ವಜಾತಂ ಯುಧಿಷ್ಠಿರಾತ್||

ಅಯ್ಯಾ! ನನ್ನ ಜೊತೆ ಇಂದು ಬಾ! ಯುಧಿಷ್ಠಿರನ ಹಿರಿಯ ಕೌಂತೇಯನೆಂದು ಪಾಂಡವರು ನಿನ್ನನ್ನು ಗುರುತಿಸಲಿ.

05138012a ಪಾದೌ ತವ ಗ್ರಹೀಷ್ಯಂತಿ ಭ್ರಾತರಃ ಪಂಚ ಪಾಂಡವಾಃ|

05138012c ದ್ರೌಪದೇಯಾಸ್ತಥಾ ಪಂಚ ಸೌಭದ್ರಶ್ಚಾಪರಾಜಿತಃ||

ಐವರು ಪಾಂಡವ ಸಹೋದರರು, ಐವರು ದ್ರೌಪದಿಯ ಮಕ್ಕಳು ಮತ್ತು ಅಪರಾಜಿತ ಸೌಭದ್ರಿಯು ನಿನ್ನ ಪಾದಗಳನ್ನು ಹಿಡಿಯುತ್ತಾರೆ.

05138013a ರಾಜಾನೋ ರಾಜಪುತ್ರಾಶ್ಚ ಪಾಂಡವಾರ್ಥೇ ಸಮಾಗತಾಃ|

05138013c ಪಾದೌ ತವ ಗ್ರಹೀಷ್ಯಂತಿ ಸರ್ವೇ ಚಾಂಧಕವೃಷ್ಣಯಃ||

ಪಾಂಡವರಿಗಾಗಿ ಸೇರಿರುವ ಎಲ್ಲ ಅಂಧಕ-ವೃಷ್ಣಿಯರು, ರಾಜರು, ರಾಜಪುತ್ರರು ನಿನ್ನ ಪಾದಗಳನ್ನು ಹಿಡಿಯುತ್ತಾರೆ.

05138014a ಹಿರಣ್ಮಯಾಂಶ್ಚ ತೇ ಕುಂಭಾನ್ರಾತಾನ್ಪಾರ್ಥಿವಾಂಸ್ತಥಾ|

05138014c ಓಷಧ್ಯಃ ಸರ್ವಬೀಜಾನಿ ಸರ್ವರತ್ನಾನಿ ವೀರುಧಃ||

05138015a ರಾಜನ್ಯಾ ರಾಜಕನ್ಯಾಶ್ಚಾಪ್ಯಾನಯಂತ್ವಭಿಷೇಚನಂ|

05138015c ಷಷ್ಠೇ ಚ ತ್ವಾಂ ತಥಾ ಕಾಲೇ ದ್ರೌಪದ್ಯುಪಗಮಿಷ್ಯತಿ||

ಪಾರ್ಥಿವರು, ರಾಜರು, ರಾಜಕನ್ಯೆಯರು ಬಂಗಾರದ ಮತ್ತು ರಜತ ಕಲಶಗಳಲ್ಲಿ ಔಷಧಿ, ಸರ್ವಬೀಜಗಳು, ಸರ್ವರತ್ನಗಳನ್ನು, ಗಿಡಮೂಲಿಕೆಗಳನ್ನು ತಂದು ನಿನ್ನನ್ನು ಅಭಿಷೇಕಿಸುತ್ತಾರೆ. ಸಮಯ ಬಂದಾಗ ದ್ರೌಪದಿಯೂ ಕೂಡ ಆರನೆಯವನಾಗಿ ನಿನ್ನನ್ನು ಸೇರುತ್ತಾಳೆ.

05138016a ಅದ್ಯ ತ್ವಾಮಭಿಷಿಂಚಂತು ಚಾತುರ್ವೈದ್ಯಾ ದ್ವಿಜಾತಯಃ|

05138016c ಪುರೋಹಿತಃ ಪಾಂಡವಾನಾಂ ವ್ಯಾಘ್ರಚರ್ಮಣ್ಯವಸ್ಥಿತಂ||

ಇಂದು ಚಾತುರ್ವೇದಗಳನ್ನು ತಿಳಿದಿರುವ ಬ್ರಾಹ್ಮಣವರ್ಗ ಮತ್ತು ಪಾಂಡವರ ಪುರೋಹಿತನು ನಿನ್ನನ್ನು ವ್ಯಾಘ್ರಚರ್ಮದ ಮೇಲೆ ಕುಳ್ಳಿರಿಸಿ ಅಭಿಷೇಕಿಸುತ್ತಾರೆ.

05138017a ತಥೈವ ಭ್ರಾತರಃ ಪಂಚ ಪಾಂಡವಾಃ ಪುರುಷರ್ಷಭಾಃ|

05138017c ದ್ರೌಪದೇಯಾಸ್ತಥಾ ಪಂಚ ಪಾಂಚಾಲಾಶ್ಚೇದಯಸ್ತಥಾ||

05138018a ಅಹಂ ಚ ತ್ವಾಭಿಷೇಕ್ಷ್ಯಾಮಿ ರಾಜಾನಂ ಪೃಥಿವೀಪತಿಂ|

05138018c ಯುವರಾಜೋಽಸ್ತು ತೇ ರಾಜಾ ಕುಂತೀಪುತ್ರೋ ಯುಧಿಷ್ಠಿರಃ||

ಹಾಗೆಯೇ ಆ ಪುರುಷರ್ಷಭ ಸಹೋದರ ಪಂಚ ಪಾಂಡವರು, ಐವರು ದ್ರೌಪದೇಯರು, ಪಾಂಚಾಲ-ಚೇದಿಯರು ಮತ್ತು ನಾನೂ ಕೂಡ ನಿನ್ನನ್ನು ಪೃಥಿವೀಪತಿ ರಾಜನಾಗಿ ಅಭಿಷೇಕಿಸುತ್ತೇವೆ. ರಾಜನಾದ ನಿನಗೆ ಕುಂತೀಪುತ್ರ ಯುಧಿಷ್ಠಿರನು ಯುವರಾಜನಾಗುತ್ತಾನೆ.

05138019a ಗೃಹೀತ್ವಾ ವ್ಯಜನಂ ಶ್ವೇತಂ ಧರ್ಮಾತ್ಮಾ ಸಂಶಿತವ್ರತಃ|

05138019c ಉಪಾನ್ವಾರೋಹತು ರಥಂ ಕುಂತೀಪುತ್ರೋ ಯುಧಿಷ್ಠಿರಃ||

ಧರ್ಮಾತ್ಮ ಸಂಶಿತವ್ರತ ಕುಂತೀಪುತ್ರ ಯುಧಿಷ್ಠಿರನು ನಿನ್ನ ಮೇಲೆ ಶ್ವೇತವ್ಯಾಜಿನವನ್ನು ಹಿಡಿದು ನಿನ್ನ ರಥದಲ್ಲಿ ನಿಲ್ಲುತ್ತಾನೆ.

05138020a ಚತ್ರಂ ಚ ತೇ ಮಹಚ್ಚ್ವೇತಂ ಭೀಮಸೇನೋ ಮಹಾಬಲಃ|

05138020c ಅಭಿಷಿಕ್ತಸ್ಯ ಕೌಂತೇಯ ಕೌಂತೇಯೋ ಧಾರಯಿಷ್ಯತಿ||

ಅಭಿಷಿಕ್ತನಾದ ಕೌಂತೇಯ ನಿನಗೆ ಕೌಂತೇಯ ಮಹಾಬಲಿ ಭೀಮಸೇನನು ದೊಡ್ಡ ಶ್ವೇತಚತ್ರವನ್ನು ಹಿಡಿಯುತ್ತಾನೆ.

05138021a ಕಿಂಕಿಣೀಶತನಿರ್ಘೋಷಂ ವೈಯಾಘ್ರಪರಿವಾರಣಂ|

05138021c ರಥಂ ಶ್ವೇತಹಯೈರ್ಯುಕ್ತಮರ್ಜುನೋ ವಾಹಯಿಷ್ಯತಿ||

ನೂರಾರು ಗಂಟೆಗಳ ಧ್ವನಿಗಳಿಂದ ಕೂಡಿದ, ವೈಯಾಘ್ರಚರ್ಮವನ್ನು ಹೊದೆಸಿದ, ಬಿಳಿಯ ಕುದುರೆಗಳನ್ನು ಕಟ್ಟಿರುವ ರಥದಲ್ಲಿ ನಿನ್ನನ್ನು ಅರ್ಜುನನು ಕರೆದೊಯ್ಯುತ್ತಾನೆ.

05138022a ಅಭಿಮನ್ಯುಶ್ಚ ತೇ ನಿತ್ಯಂ ಪ್ರತ್ಯಾಸನ್ನೋ ಭವಿಷ್ಯತಿ|

05138022c ನಕುಲಃ ಸಹದೇವಶ್ಚ ದ್ರೌಪದೇಯಾಶ್ಚ ಪಂಚ ಯೇ||

ಅಭಿಮನ್ಯು, ನಕುಲ, ಸಹದೇವ, ಐವರು ದ್ರೌಪದೇಯರು ನಿತ್ಯವೂ ನಿನ್ನ ಸೇವೆಮಾಡುತ್ತಾರೆ.

05138023a ಪಾಂಚಾಲಾಸ್ತ್ವಾನುಯಾಸ್ಯಂತಿ ಶಿಖಂಡೀ ಚ ಮಹಾರಥಃ|

05138023c ಅಹಂ ಚ ತ್ವಾನುಯಾಸ್ಯಾಮಿ ಸರ್ವೇ ಚಾಂಧಕವೃಷ್ಣಯಃ|

05138023e ದಾಶಾರ್ಹಾಃ ಪರಿವಾರಾಸ್ತೇ ದಾಶಾರ್ಣಾಶ್ಚ ವಿಶಾಂ ಪತೇ||

ವಿಶಾಂಪತೇ! ಪಾಂಚಾಲರು, ಮಹಾರಥಿ ಶಿಖಂಡಿ, ಮತ್ತು ನಾನೂ ಕೂಡ ನಿನ್ನನ್ನು ಅನುಸರಿಸುತ್ತೇವೆ. ಎಲ್ಲ ಅಂಧಕ ವೃಷ್ಣಿಯರು, ದಾಶಾರ್ಹರು, ದಾಶಾರ್ಣರು ನಿನ್ನನ್ನು ಸುತ್ತುವರೆದಿರುತ್ತಾರೆ.

05138024a ಭುಂಕ್ಷ್ವ ರಾಜ್ಯಂ ಮಹಾಬಾಹೋ ಭ್ರಾತೃಭಿಃ ಸಹ ಪಾಂಡವೈಃ|

05138024c ಜಪೈರ್ಹೋಮೈಶ್ಚ ಸಂಯುಕ್ತೋ ಮಂಗಲೈಶ್ಚ ಪೃಥಗ್ವಿಧೈಃ||

ಮಹಾಬಾಹೋ! ಪಾಂಡವ ಸಹೋದರರೊಂದಿಗೆ, ಜಪ-ಹೋಮಗಳಿಂದ ಸಂಯುಕ್ತನಾಗಿ, ಮಂಗಲ ವಿಧಗಳಿಂದ ರಾಜ್ಯವನ್ನು ಭೋಗಿಸು.

05138025a ಪುರೋಗಮಾಶ್ಚ ತೇ ಸಂತು ದ್ರವಿಡಾಃ ಸಹ ಕುಂತಲೈಃ|

05138025c ಆಂಧ್ರಾಸ್ತಾಲಚರಾಶ್ಚೈವ ಚೂಚುಪಾ ವೇಣುಪಾಸ್ತಥಾ||

ದ್ರವಿಡರು, ಕುಂತಲರು, ಆಂಧ್ರರು, ತಾಲಚರರು, ಚೂಚುಪರು, ಮತ್ತು ವೇಣುಪರು ನಿನ್ನ ಪುರೋಗಮರಾಗುತ್ತಾರೆ.

05138026a ಸ್ತುವಂತು ತ್ವಾದ್ಯ ಬಹುಶಃ ಸ್ತುತಿಭಿಃ ಸೂತಮಾಗಧಾಃ|

05138026c ವಿಜಯಂ ವಸುಷೇಣಸ್ಯ ಘೋಷಯಂತು ಚ ಪಾಂಡವಾಃ||

ಇಂದು ಅನೇಕ ಸೂತ-ಮಾಗಧರು ಸ್ತುತಿಗಳಿಂದ ನಿನ್ನನ್ನು ಸ್ತುತಿಸುತ್ತಾರೆ. ಪಾಂಡವರು ವಸುಷೇಣನ ವಿಜಯವನ್ನು ಘೋಷಿಸುತ್ತಾರೆ.

05138027a ಸ ತ್ವಂ ಪರಿವೃತಃ ಪಾರ್ಥೈರ್ನಕ್ಷತ್ರೈರಿವ ಚಂದ್ರಮಾಃ|

05138027c ಪ್ರಶಾಧಿ ರಾಜ್ಯಂ ಕೌಂತೇಯ ಕುಂತೀಂ ಚ ಪ್ರತಿನಂದಯ||

ಕೌಂತೇಯ! ನಕ್ಷತ್ರಗಳಿಂದ ಚಂದ್ರಮನು ಹೇಗೋ ಹಾಗೆ ನೀನು ಪಾರ್ಥರಿಂದ ಪರಿವೃತನಾಗಿ ರಾಜ್ಯವನ್ನು ಆಳಿ ಕುಂತಿಗೂ ಆನಂದವನ್ನು ನೀಡುವೆ.

05138028a ಮಿತ್ರಾಣಿ ತೇ ಪ್ರಹೃಷ್ಯಂತು ವ್ಯಥಂತು ರಿಪವಸ್ತಥಾ|

05138028c ಸೌಭ್ರಾತ್ರಂ ಚೈವ ತೇಽದ್ಯಾಸ್ತು ಭ್ರಾತೃಭಿಃ ಸಹ ಪಾಂಡವೈಃ||

ಸಹೋದರ ಪಾಂಡವರೊಂದಿಗಿರುವ ನಿನ್ನ ಸೌಭ್ರಾತೃತ್ವದಿಂದ ನಿನ್ನ ಮಿತ್ರರು ಹರ್ಷಪಡುತ್ತಾರೆ. ಶತ್ರುಗಳು ದುಃಖಿಸುತ್ತಾರೆ[2].”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಕರ್ಣ‌ಉಪನಿವಾದ ಪರ್ವಣಿ ಶ್ರೀಕೃಷ್ಣವಾಕ್ಯೇ ಅಷ್ಟತ್ರಿಂಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಕರ್ಣ‌ಉಪನಿವಾದ ಪರ್ವದಲ್ಲಿ ಶ್ರೀಕೃಷ್ಣವಾಕ್ಯದಲ್ಲಿ ನೂರಾಮೂವತ್ತೆಂಟನೆಯ ಅಧ್ಯಾಯವು.

Image result for flowers against white background

[1] ಕೃಷ್ಣ-ಕರ್ಣರ ಸಂಭಾಷಣೆಯು ಸಂಜಯನಿಗೆ ಹೇಗೆ ತಿಳಿಯಿತು?

[2] ಕರ್ಣನು ಕುಂತಿಯ ಮಗನೆಂದು ತಿಳಿದ ಧೃತರಾಷ್ಟ್ರನು ಏನೂ ಹೇಳಲಿಲ್ಲವೇ? ಏನನ್ನೂ ಮಾಡಲಿಲ್ಲವೇ?

Comments are closed.