Udyoga Parva: Chapter 125

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೫

ಆಗ ದುರ್ಯೋಧನನು ಕೃಷ್ಣನಿಗೆ “ಸರಿಯಾಗಿ ವಿವರಿಸದೇ ಕೇವಲ ನನ್ನನ್ನೇ ನೀನು ವಿಶೇಷವಾಗಿ ನಿಂದಿಸುತ್ತಿದ್ದೀಯೆ...ನಾನು ನನ್ನಲ್ಲಿ ಯಾವುದೇ ವ್ಯಭಿಚಾರವನ್ನು ಕಾಣುವುದಿಲ್ಲ...ಪಾಂಡವರು ಸಂತೋಷದಿಂದ ದ್ಯೂತಕ್ಕೆ ಒಪ್ಪಿಕೊಂಡರು. ಶಕುನಿಯು ರಾಜ್ಯವನ್ನು ಗೆದ್ದನು. ಅದರಲ್ಲಿ ನನ್ನ ದುಷ್ಕೃತವಾದರೂ ಎನಿದೆ?...ಪಾಂಡವರಿಂದ ಏನೆಲ್ಲ ಗೆದ್ದಿದ್ದೆವೋ ಅವನ್ನು ಹಿಂತೆಗೆದು ಕೊಂಡು ಹೋಗಲು ಅಲ್ಲಿಯೇ ಅವರಿಗೆ ಅನುಮತಿಯನ್ನಿತ್ತೆ...ಆದರೂ ಅವರು ಜೂಜಿನಲ್ಲಿ ಸೋತು ವನಕ್ಕೆ ತೆರಳಿದುದರಲ್ಲಿ ನನ್ನ ಅಪರಾಧವೇನೂ ಇಲ್ಲವಲ್ಲ!...ಯಾವ ಅಪರಾಧದ ಸೇಡನ್ನು ತೀರಿಸಲು ಪಾಂಡವರು ಸೃಂಜಯರನ್ನು ಸೇರಿಕೊಂಡು ಧಾರ್ತರಾಷ್ಟ್ರರನ್ನು ಕೊಲ್ಲಲು ಬರುತ್ತಿದ್ದಾರೆ?...ಯಾವುದೇ ಉಗ್ರ ಕರ್ಮದಿಂದಾಗಲೀ ಅಥವಾ ಮಾತಿನಿಂದಾಗಲೀ ನಮ್ಮನ್ನು ನಡುಗಿಸಲಿಕ್ಕಾಗುವುದಿಲ್ಲ...ಕ್ಷತ್ರಧರ್ಮವನ್ನು ಅನುಸರಿಸಿ ನಮ್ಮನ್ನು ಯುದ್ಧದಲ್ಲಿ ಜಯಿಸಬಲ್ಲ ಯಾರೂ ನನಗೆ ಕಾಣುವುದಿಲ್ಲ...ನಾನು ಜೀವಂತವಾಗಿರುವಾಗ ಹಿಂದೆ ನನ್ನ ತಂದೆಯು ಕೊಟ್ಟಿದ್ದ ರಾಜ್ಯಾಂಶವು ಅವರಿಗೆ ಪುನಃ ದೊರೆಯುವುದಿಲ್ಲ...ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟುಕೊಡುವುದಿಲ್ಲ!” ಎನ್ನುವುದು (೧-೨೬).

Image result for krishna and dhritarashtra"05125001 ವೈಶಂಪಾಯನ ಉವಾಚ|

05125001a ಶ್ರುತ್ವಾ ದುರ್ಯೋಧನೋ ವಾಕ್ಯಮಪ್ರಿಯಂ ಕುರುಸಂಸದಿ|

05125001c ಪ್ರತ್ಯುವಾಚ ಮಹಾಬಾಹುಂ ವಾಸುದೇವಂ ಯಶಸ್ವಿನಂ||

ವೈಶಂಪಾಯನನು ಹೇಳಿದನು: “ಕುರುಸಂಸದಿಯಲ್ಲಿ ಈ ಅಪ್ರಿಯ ಮಾತುಗಳನ್ನು ಕೇಳಿ ದುರ್ಯೋಧನನು ಮಹಾಬಾಹು ಯಶಸ್ವಿ ವಾಸುದೇವನಿಗೆ ಉತ್ತರಿಸಿದನು.

05125002a ಪ್ರಸಮೀಕ್ಷ್ಯ ಭವಾನೇತದ್ವಕ್ತುಮರ್ಹತಿ ಕೇಶವ|

05125002c ಮಾಮೇವ ಹಿ ವಿಶೇಷೇಣ ವಿಭಾಷ್ಯ ಪರಿಗರ್ಹಸೇ||

“ಕೇಶವ! ಇದನ್ನು ಹೇಳುವುದಕ್ಕೆ ಮೊದಲು ನೀನು ಯೋಚಿಸಬೇಕು. ಸರಿಯಾಗಿ ವಿವರಿಸದೇ ಕೇವಲ ನನ್ನನ್ನೇ ನೀನು ವಿಶೇಷವಾಗಿ ನಿಂದಿಸುತ್ತಿದ್ದೀಯೆ.

05125003a ಭಕ್ತಿವಾದೇನ ಪಾರ್ಥಾನಾಮಕಸ್ಮಾನ್ಮಧುಸೂದನ|

05125003c ಭವಾನ್ಗರ್ಹಯತೇ ನಿತ್ಯಂ ಕಿಂ ಸಮೀಕ್ಷ್ಯ ಬಲಾಬಲಂ||

ಏಕೆಂದರೆ ಮಧುಸೂದನ! ಪಾರ್ಥರಲ್ಲಿ ನಿನಗೆ ಭಕ್ತಿಯಿದೆ. ಆದರೆ ನೀನು ನಮ್ಮ ಬಲಾಬಲಗಳನ್ನು ಪರಿಶೀಲಿಸಿ ನಮ್ಮನ್ನು ದೂಷಿಸುತ್ತಿರುವೆಯೋ ಹೇಗೆ?

05125004a ಭವಾನ್ ಕ್ಷತ್ತಾ ಚ ರಾಜಾ ಚ ಆಚಾರ್ಯೋ ವಾ ಪಿತಾಮಹಃ|

05125004c ಮಾಮೇವ ಪರಿಗರ್ಹಂತೇ ನಾನ್ಯಂ ಕಂ ಚನ ಪಾರ್ಥಿವಂ||

ನೀನು, ಕ್ಷತ್ತ, ರಾಜ, ಆಚಾರ್ಯ ಅಥವಾ ಪಿತಾಮಹರು ನನ್ನನ್ನೇ ದೂಷಿಸುತ್ತೀರಿ. ಎಂದೂ ಅನ್ಯ ಪಾರ್ಥಿವರನ್ನಲ್ಲ!

05125005a ನ ಚಾಹಂ ಲಕ್ಷಯೇ ಕಂ ಚಿದ್ವ್ಯಭಿಚಾರಮಿಹಾತ್ಮನಃ|

05125005c ಅಥ ಸರ್ವೇ ಭವಂತೋ ಮಾಂ ವಿದ್ವಿಷಂತಿ ಸರಾಜಕಾಃ||

ನಾನು ನನ್ನಲ್ಲಿ ಯಾವುದೇ ವ್ಯಭಿಚಾರವನ್ನು ಕಾಣುವುದಿಲ್ಲ. ಆದರೂ ರಾಜರೊಂದಿಗೆ ನೀವೆಲ್ಲರೂ ನನ್ನನ್ನೇ ದ್ವೇಷಿಸುತ್ತೀರಿ.

05125006a ನ ಚಾಹಂ ಕಂ ಚಿದತ್ಯರ್ಥಮಪರಾಧಮರಿಂದಮ|

05125006c ವಿಚಿಂತಯನ್ಪ್ರಪಶ್ಯಾಮಿ ಸುಸೂಕ್ಷ್ಮಮಪಿ ಕೇಶವ||

ಅರಿಂದಮ! ಕೇಶವ! ಆಲೋಚಿಸಿದರೆ ನಾನು ಯಾವ ಮಹಾ ಅಪರಾಧವನ್ನೂ, ಸೂಕ್ಷ್ಮವಾದುದನ್ನೂ ಮಾಡಿಲ್ಲ.

05125007a ಪ್ರಿಯಾಭ್ಯುಪಗತೇ ದ್ಯೂತೇ ಪಾಂಡವಾ ಮಧುಸೂದನ|

05125007c ಜಿತಾಃ ಶಕುನಿನಾ ರಾಜ್ಯಂ ತತ್ರ ಕಿಂ ಮಮ ದುಷ್ಕೃತಂ||

ಮಧುಸೂದನ! ಪಾಂಡವರು ಸಂತೋಷದಿಂದ ದ್ಯೂತಕ್ಕೆ ಒಪ್ಪಿಕೊಂಡರು. ಶಕುನಿಯು ರಾಜ್ಯವನ್ನು ಗೆದ್ದನು. ಅದರಲ್ಲಿ ನನ್ನ ದುಷ್ಕೃತವಾದರೂ ಎನಿದೆ?

05125008a ಯತ್ಪುನರ್ದ್ರವಿಣಂ ಕಿಂ ಚಿತ್ತತ್ರಾಜೀಯಂತ ಪಾಂಡವಾಃ|

05125008c ತೇಭ್ಯ ಏವಾಭ್ಯನುಜ್ಞಾತಂ ತತ್ತದಾ ಮಧುಸೂದನ||

ಮಧುಸೂದನ! ಪಾಂಡವರಿಂದ ಏನೆಲ್ಲ ಗೆದ್ದಿದ್ದೆವೋ ಅವನ್ನು ಹಿಂತೆಗೆದು ಕೊಂಡು ಹೋಗಲು ಅಲ್ಲಿಯೇ ಅವರಿಗೆ ಅನುಮತಿಯನ್ನಿತ್ತೆ.

05125009a ಅಪರಾಧೋ ನ ಚಾಸ್ಮಾಕಂ ಯತ್ತೇ ಹ್ಯಕ್ಷಪರಾಜಿತಾಃ|

05125009c ಅಜೇಯಾ ಜಯತಾಂ ಶ್ರೇಷ್ಠ ಪಾರ್ಥಾಃ ಪ್ರವ್ರಾಜಿತಾ ವನಂ||

ಅಜೇಯ! ಜಯಿಸುವವರಲ್ಲಿ ಶ್ರೇಷ್ಠ ಪಾರ್ಥರು ಜೂಜಿನಲ್ಲಿ ಸೋತು ವನಕ್ಕೆ ತೆರಳಿದುದರಲ್ಲಿ ನನ್ನ ಅಪರಾಧವೇನೂ ಇಲ್ಲವಲ್ಲ!

05125010a ಕೇನ ಚಾಪ್ಯಪವಾದೇನ ವಿರುಧ್ಯಂತೇಽರಿಭಿಃ ಸಹ|

05125010c ಅಶಕ್ತಾಃ ಪಾಂಡವಾಃ ಕೃಷ್ಣ ಪ್ರಹೃಷ್ಟಾಃ ಪ್ರತ್ಯಮಿತ್ರವತ್||

ಅದೂ ಅಲ್ಲದೇ ಕೃಷ್ಣ! ಈಗ ಯಾವ ಅಪವಾದಕ್ಕೆಂದು ಅಶಕ್ತ ಪಾಂಡವರು ಸಂತೋಷದಿಂದ ನಾವು ಅರಿಗಳೋ ಎನ್ನುವಂತೆ ಜಗಳವಾಡುತ್ತಿದ್ದಾರೆ?

05125011a ಕಿಮಸ್ಮಾಭಿಃ ಕೃತಂ ತೇಷಾಂ ಕಸ್ಮಿನ್ವಾ ಪುನರಾಗಸಿ|

05125011c ಧಾರ್ತರಾಷ್ಟ್ರಾಂ ಜಿಘಾಂಸಂತಿ ಪಾಂಡವಾಃ ಸೃಂಜಯೈಃ ಸಹ||

ನಾವು ಅವರಿಗೆ ಏನು ಮಾಡಿದ್ದೇವೆ? ಯಾವ ಅಪರಾಧದ ಸೇಡನ್ನು ತೀರಿಸಲು ಪಾಂಡವರು ಸೃಂಜಯರನ್ನು ಸೇರಿಕೊಂಡು ಧಾರ್ತರಾಷ್ಟ್ರರನ್ನು ಕೊಲ್ಲಲು ಬರುತ್ತಿದ್ದಾರೆ?

05125012a ನ ಚಾಪಿ ವಯಮುಗ್ರೇಣ ಕರ್ಮಣಾ ವಚನೇನ ವಾ|

05125012c ವಿತ್ರಸ್ತಾಃ ಪ್ರಣಮಾಮೇಹ ಭಯಾದಪಿ ಶತಕ್ರತೋಃ||

ಯಾವುದೇ ಉಗ್ರ ಕರ್ಮದಿಂದಾಗಲೀ ಅಥವಾ ಮಾತಿನಿಂದಾಗಲೀ ನಮ್ಮನ್ನು ನಡುಗಿಸಲಿಕ್ಕಾಗುವುದಿಲ್ಲ. ಅದು ಶತಕ್ರತುವಿನಿಂದ ಬಂದ ಭಯವಾದರೂ ಸರಿ!

05125013a ನ ಚ ತಂ ಕೃಷ್ಣ ಪಶ್ಯಾಮಿ ಕ್ಷತ್ರಧರ್ಮಮನುಷ್ಠಿತಂ|

05125013c ಉತ್ಸಹೇತ ಯುಧಾ ಜೇತುಂ ಯೋ ನಃ ಶತ್ರುನಿಬರ್ಹಣ||

ಕೃಷ್ಣ! ಶತ್ರುನಿಬರ್ಹಣ! ಕ್ಷತ್ರಧರ್ಮವನ್ನು ಅನುಸರಿಸಿ ನಮ್ಮನ್ನು ಯುದ್ಧದಲ್ಲಿ ಜಯಿಸಬಲ್ಲ ಯಾರೂ ನನಗೆ ಕಾಣುವುದಿಲ್ಲ.

05125014a ನ ಹಿ ಭೀಷ್ಮಕೃಪದ್ರೋಣಾಃ ಸಗಣಾ ಮಧುಸೂದನ|

05125014c ದೇವೈರಪಿ ಯುಧಾ ಜೇತುಂ ಶಕ್ಯಾಃ ಕಿಮುತ ಪಾಂಡವೈಃ||

ಮಧುಸೂದನ! ಏಕೆಂದರೆ ಗಣಗಳೊಂದಿರುವ ಭೀಷ್ಮ, ದ್ರೋಣ, ಕೃಪರನ್ನು ಯುದ್ಧದಲ್ಲಿ ದೇವತೆಗಳೂ ಜಯಿಸಲು ಶಕ್ಯರಿಲ್ಲ. ಪಾಂಡವರು ಎಲ್ಲಿಂದ?

05125015a ಸ್ವಧರ್ಮಮನುತಿಷ್ಠಂತೋ ಯದಿ ಮಾಧವ ಸಂಯುಗೇ|

05125015c ಶಸ್ತ್ರೇಣ ನಿಧನಂ ಕಾಲೇ ಪ್ರಾಪ್ಸ್ಯಾಮಃ ಸ್ವರ್ಗಮೇವ ತತ್||

ಮಾಧವ! ಸ್ವಧರ್ಮವನ್ನು ಅನುಸರಿಸಿ ಒಂದುವೇಳೆ ಕಾಲವು ಬಂದು ಯುದ್ಧದಲ್ಲಿ ಶಸ್ತ್ರದಿಂದ ನಿಧನರಾದರೂ ನಾವು ಸ್ವರ್ಗವನ್ನೇ ಸೇರುತ್ತೇವೆ.

05125016a ಮುಖ್ಯಶ್ಚೈವೈಷ ನೋ ಧರ್ಮಃ ಕ್ಷತ್ರಿಯಾಣಾಂ ಜನಾರ್ದನ|

05125016c ಯಚ್ಚಯೀಮಹಿ ಸಂಗ್ರಾಮೇ ಶರತಲ್ಪಗತಾ ವಯಂ||

ಜನಾರ್ದನ! ಸಂಗ್ರಾಮದಲ್ಲಿ ನಾವು ಶರತಲ್ಪದಲ್ಲಿ ಮಲಗುವುದನ್ನು ಇಚ್ಛಿಸುವುದೇ ನಮ್ಮಂತಹ ಕ್ಷತ್ರಿಯರ ಮುಖ್ಯ ಧರ್ಮ!

05125017a ತೇ ವಯಂ ವೀರಶಯನಂ ಪ್ರಾಪ್ಸ್ಯಾಮೋ ಯದಿ ಸಂಯುಗೇ|

05125017c ಅಪ್ರಣಮ್ಯೈವ ಶತ್ರೂಣಾಂ ನ ನಸ್ತಪ್ಸ್ಯತಿ ಮಾಧವ||

ಮಾಧವ! ಶತ್ರುಗಳಿಗೆ ತಲೆಬಾಗದೇ ಒಂದುವೇಳೆ ನಾವು ರಣದಲ್ಲಿ ವೀರಶಯನವನ್ನು ಹೊಂದಬೇಕಾಗಿ ಬಂದರೆ ಅದು ನಮಗೆ ಅತೃಪ್ತಿಯನ್ನು ನೀಡುವುದಿಲ್ಲ.

05125018a ಕಶ್ಚ ಜಾತು ಕುಲೇ ಜಾತಃ ಕ್ಷತ್ರಧರ್ಮೇಣ ವರ್ತಯನ್|

05125018c ಭಯಾದ್ವೃತ್ತಿಂ ಸಮೀಕ್ಷ್ಯೈವಂ ಪ್ರಣಮೇದಿಹ ಕಸ್ಯ ಚಿತ್||

ಉತ್ತಮ ಕುಲದಲ್ಲಿ ಹುಟ್ಟಿ, ಕ್ಷತ್ರಧರ್ಮದಲ್ಲಿ ನಡೆದುಕೊಂಡು ಬಂದ ಯಾರು ತಾನೇ ಭಯದಿಂದ ತನ್ನ ಪ್ರಾಣದ ಕುರಿತು ಚಿಂತಿಸಿ ಯಾರಿಗಾದರೂ ತಲೆಬಾಗಿದ್ದಿದೆ?

05125019a ಉದ್ಯಚ್ಚೇದೇವ ನ ನಮೇದುದ್ಯಮೋ ಹ್ಯೇವ ಪೌರುಷಂ|

05125019c ಅಪ್ಯಪರ್ವಣಿ ಭಜ್ಯೇತ ನ ನಮೇದಿಹ ಕಸ್ಯ ಚಿತ್||

ತನ್ನನ್ನು ತಾನು ಮೇಲಿತ್ತಿಕೊಳ್ಳಬೇಕು. ಕೆಳಗೆ ತಳ್ಳಿಕೊಳ್ಳಬಾರದು. ಉದ್ಯಮವೇ ಪೌರುಷ. ಮುರಿಯಬೇಕೇ ಹೊರತು ಬಾಗಬಾರದು!

05125020a ಇತಿ ಮಾತಂಗವಚನಂ ಪರೀಪ್ಸಂತಿ ಹಿತೇಪ್ಸವಃ|

05125020c ಧರ್ಮಾಯ ಚೈವ ಪ್ರಣಮೇದ್ಬ್ರಾಹ್ಮಣೇಭ್ಯಶ್ಚ ಮದ್ವಿಧಃ||

ಈ ಮಾತಂಗನ ವಚನವು ಏಳಿಗೆಯನ್ನು ಬಯಸಿದವರಿಗಿರುವುದು. ನನ್ನಂಥವನು ಕೇವಲ ಧರ್ಮಕ್ಕೆ ಮತ್ತು ಬ್ರಾಹ್ಮಣರಿಗೆ ಮಣಿಯುತ್ತಾನೆ.

05125021a ಅಚಿಂತಯನ್ಕಂ ಚಿದನ್ಯಂ ಯಾವಜ್ಜೀವಂ ತಥಾಚರೇತ್|

05125021c ಏಷ ಧರ್ಮಃ ಕ್ಷತ್ರಿಯಾಣಾಂ ಮತಮೇತಚ್ಚ ಮೇ ಸದಾ||

ಬೇರೆ ಯಾರ ಕುರಿತೂ ಚಿಂತಿಸದೇ ಹೇಗೆ ಬೇಕೋ ಹಾಗೆ ನಡೆದುಕೊಳ್ಳಬೇಕು. ಇದು ಕ್ಷತ್ರಿಯರ ಧರ್ಮ. ಇದೇ ಸದಾ ನನ್ನ ಮತವು.

05125022a ರಾಜ್ಯಾಂಶಶ್ಚಾಭ್ಯನುಜ್ಞಾತೋ ಯೋ ಮೇ ಪಿತ್ರಾ ಪುರಾಭವತ್|

05125022c ನ ಸ ಲಭ್ಯಃ ಪುನರ್ಜಾತು ಮಯಿ ಜೀವತಿ ಕೇಶವ||

ಕೇಶವ! ನಾನು ಜೀವಂತವಾಗಿರುವಾಗ ಹಿಂದೆ ನನ್ನ ತಂದೆಯು ಕೊಟ್ಟಿದ್ದ ರಾಜ್ಯಾಂಶವು ಅವರಿಗೆ ಪುನಃ ದೊರೆಯುವುದಿಲ್ಲ.

05125023a ಯಾವಚ್ಚ ರಾಜಾ ಧ್ರಿಯತೇ ಧೃತರಾಷ್ಟ್ರೋ ಜನಾರ್ದನ|

05125023c ನ್ಯಸ್ತಶಸ್ತ್ರಾ ವಯಂ ತೇ ವಾಪ್ಯುಪಜೀವಾಮ ಮಾಧವ||

ಜನಾರ್ದನ! ಮಾಧವ! ರಾಜ ಧೃತರಾಷ್ಟ್ರನು ಜೀವಿಸಿರುವವರೆಗೆ ನಾವಾಗಲೀ ಅವರಾಗಲೀ ಶಸ್ತ್ರಗಳನ್ನು ಎತ್ತದೇ ಉಪಜೀವನವನ್ನು ಮಾಡಬೇಕು.

05125024a ಯದ್ಯದೇಯಂ ಪುರಾ ದತ್ತಂ ರಾಜ್ಯಂ ಪರವತೋ ಮಮ|

05125024c ಅಜ್ಞಾನಾದ್ವಾ ಭಯಾದ್ವಾಪಿ ಮಯಿ ಬಾಲೇ ಜನಾರ್ದನ||

ಜನಾರ್ದನ! ಹಿಂದೆ ಈ ರಾಜ್ಯವನ್ನು ನಾನು ಬಾಲಕನಾಗಿರುವಾಗ ಅಜ್ಞಾನದಿಂದ ಅಥವಾ ಭಯದಿಂದ ಅವರಿಗೆ ಕೊಟ್ಟಿರಬಹುದು.

05125025a ನ ತದದ್ಯ ಪುನರ್ಲಭ್ಯಂ ಪಾಂಡವೈರ್ವೃಷ್ಣಿನಂದನ|

05125025c ಧ್ರಿಯಮಾಣೇ ಮಹಾಬಾಹೋ ಮಯಿ ಸಂಪ್ರತಿ ಕೇಶವ||

ಆದರೆ ವೃಷ್ಣಿನಂದನ! ಮಹಾಬಾಹೋ! ಕೇಶವ! ಇಂದು ನಾನು ಜೀವಂತವಾಗಿರುವಾಗ ಅದು ಪಾಂಡವರಿಗೆ ಪುನಃ ದೊರೆಯುವುದಿಲ್ಲ.

05125026a ಯಾವದ್ಧಿ ಸೂಚ್ಯಾಸ್ತೀಕ್ಷ್ಣಾಯಾ ವಿಧ್ಯೇದಗ್ರೇಣ ಮಾಧವ|

05125026c ತಾವದಪ್ಯಪರಿತ್ಯಾಜ್ಯಂ ಭೂಮೇರ್ನಃ ಪಾಂಡವಾನ್ ಪ್ರತಿ||

ಮಾಧವ! ಸೂಜಿಯ ಮೊನೆಯು ಊರುವಷ್ಟು ಭೂಮಿಯನ್ನೂ ನಾನು ಪಾಂಡವರಿಗೆ ಬಿಟ್ಟುಕೊಡುವುದಿಲ್ಲ!””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ದುರ್ಯೋಧನವಾಕ್ಯೇ ಪಂಚವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾಇಪ್ಪತ್ತೈದನೆಯ ಅಧ್ಯಾಯವು.

Image result for flowers against white background

Comments are closed.