Udyoga Parva: Chapter 123

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೨೩

“ಕುಲಘ್ನ-ಅಂತಕನೆನಿಸಿಕೊಳ್ಳಬೇಡ. ದುರ್ಮತಿಯಾಗಬೇಡ! ಕೆಟ್ಟ ದಾರಿಯಲ್ಲಿ ಹೋಗಬೇಡ! ವೃದ್ಧ ತಂದೆ-ತಾಯಂದಿರಿಗೆ ಶೋಕವನ್ನು ಕೊಡಬೇಡ!” ಎಂದು ಭೀಷ್ಮನು ದುರ್ಯೋಧನನಿಗೆ ಹೇಳಲು (೧-೮), ದ್ರೋಣನು “ಎಲ್ಲಿ ವಾಸುದೇವ-ಅರ್ಜುನರು ಇರುವರೋ ಅಲ್ಲಿ ಸೇನೆಯು ಅಜೇಯವೆಂದು ತಿಳಿದುಕೋ!” ಎಂದು ಹೇಳಿದುದು (೯-೧೭). ಅನಂತರ ವಿದುರನೂ (೧೮-೨೧), ಧೃತರಾಷ್ಟ್ರನೂ ದುರ್ಯೋಧನನಿಗೆ ಹಿತವಾಕ್ಯಗಳನ್ನು ನುಡಿದುದು (೨೨-೨೭).

05123001 ವೈಶಂಪಾಯನ ಉವಾಚ|

05123001a ತತಃ ಶಾಂತನವೋ ಭೀಷ್ಮೋ ದುರ್ಯೋಧನಮಮರ್ಷಣಂ|

05123001c ಕೇಶವಸ್ಯ ವಚಃ ಶ್ರುತ್ವಾ ಪ್ರೋವಾಚ ಭರತರ್ಷಭ||

ವೈಶಂಪಾಯನನು ಹೇಳಿದನು: “ಭರತರ್ಷಭ! ಆಗ ಕೇಶವನ ಮಾತನ್ನು ಕೇಳಿ ಶಾಂತನವ ಭೀಷ್ಮನು ಅಮರ್ಷಣ ದುರ್ಯೋಧನನಿಗೆ ಹೀಗೆ ಹೇಳಿದನು:

05123002a ಕೃಷ್ಣೇನ ವಾಕ್ಯಮುಕ್ತೋಽಸಿ ಸುಹೃದಾಂ ಶಮಮಿಚ್ಚತಾ|

05123002c ಅನುಪಶ್ಯಸ್ವ ತತ್ತಾತ ಮಾ ಮನ್ಯುವಶಮನ್ವಗಾಃ||

“ಸುಹೃದಯರಲ್ಲಿ ಶಾಂತಿಯನ್ನು ಬಯಸಿ ಕೃಷ್ಣನು ನಿನಗೆ ಹೇಳಿದ್ದಾನೆ. ಮಗೂ! ಅದನ್ನು ಅನುಸರಿಸು. ಸಿಟ್ಟಿನ ವಶದಲ್ಲಿ ಬರಬೇಡ, ಸಾಧಿಸಬೇಡ.

05123003a ಅಕೃತ್ವಾ ವಚನಂ ತಾತ ಕೇಶವಸ್ಯ ಮಹಾತ್ಮನಃ|

05123003c ಶ್ರೇಯೋ ನ ಜಾತು ನ ಸುಖಂ ನ ಕಲ್ಯಾಣಮವಾಪ್ಸ್ಯಸಿ||

ಅಯ್ಯಾ! ಮಹಾತ್ಮ ಕೇಶವನ ಮಾತಿನಂತೆ ಮಾಡದೇ ಇದ್ದರೆ ನಿನಗೆ ಶ್ರೇಯಸ್ಸಾಗಲೀ, ಸಂಪತ್ತಾಗಲೀ, ಸುಖವಾಗಲೀ, ಕಲ್ಯಾಣವಾಗಲೀ ದೊರಕುವುದಿಲ್ಲ.

05123004a ಧರ್ಮ್ಯಮರ್ಥಂ ಮಹಾಬಾಹುರಾಹ ತ್ವಾಂ ತಾತ ಕೇಶವಃ|

05123004c ತಮರ್ಥಮಭಿಪದ್ಯಸ್ವ ಮಾ ರಾಜನ್ನೀನಶಃ ಪ್ರಜಾಃ||

ಮಗೂ! ಮಹಾಬಾಹು ಕೇಶವನು ಧರ್ಮವೂ ಅರ್ಥವೂ ಉಳ್ಳ ಮಾತುಗಳನ್ನು ನಿನಗೆ ಹೇಳಿದ್ದಾನೆ. ನೀನು ಅದರಂತೆ ನಡೆದುಕೋ. ರಾಜನ್! ಪ್ರಜೆಗಳನ್ನು ನಾಶಗೊಳಿಸಬೇಡ!

05123005a ಇಮಾಂ ಶ್ರಿಯಂ ಪ್ರಜ್ವಲಿತಾಂ ಭಾರತೀಂ ಸರ್ವರಾಜಸು|

05123005c ಜೀವತೋ ಧೃತರಾಷ್ಟ್ರಸ್ಯ ದೌರಾತ್ಮ್ಯಾದ್ ಭ್ರಂಶಯಿಷ್ಯಸಿ||

ಧೃತರಾಷ್ಟ್ರನು ಜೀವಂತವಾಗಿರಿಸಿರುವ, ಎಲ್ಲ ರಾಜರಲ್ಲಿ ಶ್ರೀಯಿಂದ ಪ್ರಜ್ವಲಿಸುತ್ತಿರುವ ಈ ಭಾರತವನ್ನು ನಿನ್ನ ದೌರಾತ್ಮದಿಂದ ಭ್ರಂಶಗೊಳಿಸುತ್ತಿರುವೆ.

05123006a ಆತ್ಮಾನಂ ಚ ಸಹಾಮಾತ್ಯಂ ಸಪುತ್ರಪಶುಬಾಂಧವಂ|

05123006c ಸಹಮಿತ್ರಮಸದ್ಬುದ್ಧ್ಯಾ ಜೀವಿತಾದ್ ಭ್ರಂಶಯಿಷ್ಯಸಿ||

ಅಮಾತ್ಯರೊಂದಿಗೆ, ಪುತ್ರ-ಪಶು-ಬಾಂಧವರೊಂದಿಗೆ, ಮಿತ್ರರೊಂದಿಗೆ ನಿನ್ನ ಜೀವನವನ್ನೂ ಅಸದ್ಬುದ್ಧಿಯಿಂದ ಭ್ರಂಶಗೊಳಿಸುತ್ತಿರುವೆ!

05123007a ಅತಿಕ್ರಾಮನ್ಕೇಶವಸ್ಯ ತಥ್ಯಂ ವಚನಮರ್ಥವತ್|

05123007c ಪಿತುಶ್ಚ ಭರತಶ್ರೇಷ್ಠ ವಿದುರಸ್ಯ ಚ ಧೀಮತಃ||

05123008a ಮಾ ಕುಲಘ್ನೋಽಂತಪುರುಷೋ ದುರ್ಮತಿಃ ಕಾಪಥಂ ಗಮಃ|

05123008c ಪಿತರಂ ಮಾತರಂ ಚೈವ ವೃದ್ಧೌ ಶೋಕಾಯ ಮಾ ದದಃ||

ಭರತಶ್ರೇಷ್ಠ! ತಥ್ಯವಾದ, ಅರ್ಥವತ್ತಾದ ಕೇಶವನ, ನಿನ್ನ ತಂದೆಯ, ಧೀಮತ ವಿದುರನ ಮಾತನ್ನು ಅತಿಕ್ರಮಿಸಿ ಕುಲಘ್ನ-ಅಂತಕನೆನಿಸಿಕೊಳ್ಳಬೇಡ. ದುರ್ಮತಿಯಾಗಬೇಡ! ಕೆಟ್ಟ ದಾರಿಯಲ್ಲಿ ಹೋಗಬೇಡ! ವೃದ್ಧ ತಂದೆ-ತಾಯಂದಿರಿಗೆ ಶೋಕವನ್ನು ಕೊಡಬೇಡ!”

05123009a ಅಥ ದ್ರೋಣೋಽಬ್ರವೀತ್ತತ್ರ ದುರ್ಯೋಧನಮಿದಂ ವಚಃ|

05123009c ಅಮರ್ಷವಶಮಾಪನ್ನಂ ನಿಃಶ್ವಸಂತಂ ಪುನಃ ಪುನಃ||

ಆಗ ಅಲ್ಲಿ ಕೋಪಾವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿರುವ ದುರ್ಯೋಧನನಿಗೆ ದ್ರೋಣನು ಹೇಳಿದನು:

05123010a ಧರ್ಮಾರ್ಥಯುಕ್ತಂ ವಚನಮಾಹ ತ್ವಾಂ ತಾತ ಕೇಶವಃ|

05123010c ತಥಾ ಭೀಷ್ಮಃ ಶಾಂತನವಸ್ತಜ್ಜುಷಸ್ವ ನರಾಧಿಪ||

“ಮಗೂ! ನರಾಧಿಪ! ಕೇಶವನೂ ಹಾಗೆ ಶಾಂತನವ ಭೀಷ್ಮನೂ ನಿನಗೆ ಧರ್ಮಾರ್ಥಯುಕ್ತವಾದ ಮಾತುಗಳನ್ನೇ ಹೇಳಿದ್ದಾರೆ. ಇವುಗಳನ್ನು ಸ್ವೀಕರಿಸು.

05123011a ಪ್ರಾಜ್ಞೌ ಮೇಧಾವಿನೌ ದಾಂತಾವರ್ಥಕಾಮೌ ಬಹುಶ್ರುತೌ|

05123011c ಆಹತುಸ್ತ್ವಾಂ ಹಿತಂ ವಾಕ್ಯಂ ತದಾದತ್ಸ್ವ ಪರಂತಪ||

ಪರಂತಪ! ಇವರಿಬ್ಬರೂ ಪ್ರಾಜ್ಞರು, ಮೇಧಾವಿಗಳು, ಅರ್ಥ-ಕಾಮಗಳಲ್ಲಿ ದಾಂತರು, ಬಹಳ ವಿದ್ಯಾವಂತರು. ನಿನಗೆ ಹಿತವಾದುದನ್ನೇ ಆಡಿದ್ದಾರೆ. ಅದನ್ನು ತೆಗೆದುಕೋ!

05123012a ಅನುತಿಷ್ಠ ಮಹಾಪ್ರಾಜ್ಞಾ ಕೃಷ್ಣಭೀಷ್ಮೌ ಯದೂಚತುಃ|

05123012c ಮಾ ವಚೋ ಲಘುಬುದ್ಧೀನಾಂ ಸಮಾಸ್ಥಾಸ್ತ್ವಂ ಪರಂತಪ||

ಮಹಾಪ್ರಾಜ್ಞರಾದ ಕೃಷ್ಣ-ಭೀಷ್ಮರು ಹೇಳಿದುದನ್ನು ಅನುಸರಿಸಿ ನಡೆ. ಪರಂತಪ! ಲಘು ಬುದ್ಧಿಯಿಂದ ಈ ಮಾತುಗಳನ್ನು ನೀನು ಅಲ್ಲಗಳೆಯಬೇಡ.

05123013a ಯೇ ತ್ವಾಂ ಪ್ರೋತ್ಸಾಹಯಂತ್ಯೇತೇ ನೈತೇ ಕೃತ್ಯಾಯ ಕರ್ಹಿ ಚಿತ್|

05123013c ವೈರಂ ಪರೇಷಾಂ ಗ್ರೀವಾಯಾಂ ಪ್ರತಿಮೋಕ್ಷ್ಯಂತಿ ಸಂಯುಗೇ||

ನಿನ್ನನ್ನು ಯಾರು ಪ್ರೋತ್ಸಾಹಿಸುತ್ತಿರುವರೋ ಅವರು ಏನನ್ನೂ ಮಾಡಲಾರರು. ಯುದ್ಧದಲ್ಲಿ ಇವರು ವೈರವನ್ನು ಇನ್ನೊಬ್ಬರ ಕೊರಳಿಗೆ ಕಟ್ಟುತ್ತಾರೆ.

05123014a ಮಾ ಕುರೂಂ ಜೀಘನಃ ಸರ್ವಾನ್ಪುತ್ರಾನ್ ಭ್ರಾತೄನ್ತಥೈವ ಚ|

05123014c ವಾಸುದೇವಾರ್ಜುನೌ ಯತ್ರ ವಿದ್ಧ್ಯಜೇಯಂ ಬಲಂ ಹಿ ತತ್||

ಎಲ್ಲ ಮಕ್ಕಳ ಮತ್ತು ಸಹೋದರರ ಕೊಲೆ ಮಾಡಬೇಡ. ಎಲ್ಲಿ ವಾಸುದೇವ-ಅರ್ಜುನರು ಇರುವರೋ ಅಲ್ಲಿ ಸೇನೆಯು ಅಜೇಯವೆಂದು ತಿಳಿದುಕೋ!

05123015a ಏತಚ್ಚೈವ ಮತಂ ಸತ್ಯಂ ಸುಹೃದೋಃ ಕೃಷ್ಣಭೀಷ್ಮಯೋಃ|

05123015c ಯದಿ ನಾದಾಸ್ಯಸೇ ತಾತ ಪಶ್ಚಾತ್ತಪ್ಸ್ಯಸಿ ಭಾರತ||

ಸುಹೃದಯರಾದ ಈ ಕೃಷ್ಣ-ಭೀಷ್ಮರ ಸತ್ಯ ಮತವನ್ನು ನೀನು ಆದರಿಸದೇ ಇದ್ದರೆ ಮಗೂ! ಭಾರತ! ಪಶ್ಚಾತ್ತಾಪ ಪಡುತ್ತೀಯೆ.

05123016a ಯಥೋಕ್ತಂ ಜಾಮದಗ್ನ್ಯೇನ ಭೂಯಾನೇವ ತತೋಽರ್ಜುನಃ|

05123016c ಕೃಷ್ಣೋ ಹಿ ದೇವಕೀಪುತ್ರೋ ದೇವೈರಪಿ ದುರುತ್ಸಹಃ||

ಅರ್ಜುನನು ಜಾಮದಗ್ನಿಯು ಹೇಳಿದುದಕ್ಕಿಂತಲೂ ಹೆಚ್ಚಿನವನು. ದೇವಕೀ ಪುತ್ರ ಕೃಷ್ಣನು ದೇವತೆಗಳಿಗೂ ದುರುತ್ಸಹನು.

05123017a ಕಿಂ ತೇ ಸುಖಪ್ರಿಯೇಣೇಹ ಪ್ರೋಕ್ತೇನ ಭರತರ್ಷಭ|

05123017c ಏತತ್ತೇ ಸರ್ವಮಾಖ್ಯಾತಂ ಯಥೇಚ್ಚಸಿ ತಥಾ ಕುರು|

05123017e ನ ಹಿ ತ್ವಾಮುತ್ಸಹೇ ವಕ್ತುಂ ಭೂಯೋ ಭರತಸತ್ತಮ||

ಭರತರ್ಷಭ! ನಿನಗೆ ಸುಖವೂ ಪ್ರಿಯವೂ ಆದುದನ್ನು ಹೇಳುವುದರಲ್ಲಿ ಇನ್ನೇನಿದೆ? ಇವರು ಎಲ್ಲವನ್ನೂ ಹೇಳಿದ್ದಾರೆ. ನಿನಗೆ ಇಷ್ಟವಾದ ಹಾಗೆ ಮಾಡು! ಭರತಸತ್ತಮ! ಇದಕ್ಕಿಂತಲೂ ಹೆಚ್ಚಿಗೆ ನಿನಗೆ ಹೇಳಲು ಉತ್ಸಾಹವಿಲ್ಲ.”

05123018a ತಸ್ಮಿನ್ವಾಕ್ಯಾಂತರೇ ವಾಕ್ಯಂ ಕ್ಷತ್ತಾಪಿ ವಿದುರೋಽಬ್ರವೀತ್|

05123018c ದುರ್ಯೋಧನಮಭಿಪ್ರೇಕ್ಷ್ಯ ಧಾರ್ತರಾಷ್ಟ್ರಮಮರ್ಷಣಂ||

ಆ ಮಾತು ಮುಗಿದ ನಂತರ ಕ್ಷತ್ತ ವಿದುರನೂ ಕೂಡ ಕೋಪಾವಿಷ್ಟನಾಗಿದ್ದ ಧಾರ್ತರಾಷ್ಟ್ರ ದುರ್ಯೋಧನನನ್ನು ನೋಡಿ ಹೇಳಿದನು:

05123019a ದುರ್ಯೋಧನ ನ ಶೋಚಾಮಿ ತ್ವಾಮಹಂ ಭರತರ್ಷಭ|

05123019c ಇಮೌ ತು ವೃದ್ಧೌ ಶೋಚಾಮಿ ಗಾಂಧಾರೀಂ ಪಿತರಂ ಚ ತೇ||

“ದುರ್ಯೋಧನ! ಭರತರ್ಷಭ! ನಿನ್ನ ಕುರಿತು ನಾನು ಶೋಕಿಸುತ್ತಿಲ್ಲ! ವೃದ್ಧರಾಗಿರುವ ಈ ಗಾಂಧಾರೀ ಮತ್ತು ನಿನ್ನ ತಂದೆಯ ಕುರಿತು ಶೋಕಿಸುತ್ತಿದ್ದೇನೆ.

05123020a ಯಾವನಾಥೌ ಚರಿಷ್ಯೇತೇ ತ್ವಯಾ ನಾಥೇನ ದುರ್ಹೃದಾ|

05123020c ಹತಮಿತ್ರೌ ಹತಾಮಾತ್ಯೌ ಲೂನಪಕ್ಷಾವಿವ ದ್ವಿಜೌ||

ದುಷ್ಟನಾದ ನಿನ್ನನ್ನು ನಾಥನನ್ನಾಗಿ ಪಡೆದಿರುವ ಇವರು ಮಿತ್ರರನ್ನು ಕಳೆದುಕೊಂಡು, ಅಮಾತ್ಯರನ್ನು ಕಳೆದುಕೊಂಡು, ರೆಕ್ಕೆಗಳನ್ನು ಕಳೆದುಕೊಂಡ ಪಕ್ಷಿಗಳಂತೆ ಅನಾಥರಾಗಿ ತಿರುಗ ಬೇಕಾಗುತ್ತದೆ.

05123021a ಭಿಕ್ಷುಕೌ ವಿಚರಿಷ್ಯೇತೇ ಶೋಚಂತೌ ಪೃಥಿವೀಮಿಮಾಂ|

05123021c ಕುಲಘ್ನಮೀದೃಶಂ ಪಾಪಂ ಜನಯಿತ್ವಾ ಕುಪೂರುಷಂ||

ನಿನ್ನಂತಹ ಕುಲಘ್ನ, ಪಾಪಿ, ಕೆಟ್ಟಪುರುಷನಿಗೆ ಜನ್ಮವಿತ್ತು ಭಿಕ್ಷುಕರಂತೆ ಶೋಕಿಸುತ್ತಾ ಈ ಭೂಮಿಯಲ್ಲಿ ಅಲೆಯಬೇಕಾಗುತ್ತದೆ.”

05123022a ಅಥ ದುರ್ಯೋಧನಂ ರಾಜಾ ಧೃತರಾಷ್ಟ್ರೋಽಭ್ಯಭಾಷತ|

05123022c ಆಸೀನಂ ಭ್ರಾತೃಭಿಃ ಸಾರ್ಧಂ ರಾಜಭಿಃ ಪರಿವಾರಿತಂ||

ಆಗ ಸಹೋದರರೊಂದಿಗೆ, ರಾಜರಿಂದ ಸುತ್ತುವರೆಯಲ್ಪಟ್ಟು ಕುಳಿತಿದ್ದ ದುರ್ಯೋಧನನಿಗೆ ರಾಜಾ ಧೃತರಾಷ್ಟ್ರನು ಹೇಳಿದನು:

05123023a ದುರ್ಯೋಧನ ನಿಬೋಧೇದಂ ಶೌರಿಣೋಕ್ತಂ ಮಹಾತ್ಮನಾ|

05123023c ಆದತ್ಸ್ವ ಶಿವಮತ್ಯಂತಂ ಯೋಗಕ್ಷೇಮವದವ್ಯಯಂ||

“ದುರ್ಯೋಧನ! ಮಹಾತ್ಮ ಶೌರಿಯು ಹೇಳಿದುದನ್ನು ಕೇಳು. ಅವನ ಆ ಅತ್ಯಂತ ಮಂಗಳಕರ, ಅವ್ಯಯ ಯೋಗ-ಕ್ಷೇಮಗಳನ್ನು ನೀಡುವ  ಮಾತನ್ನು ಸ್ವೀಕರಿಸು.

05123024a ಅನೇನ ಹಿ ಸಹಾಯೇನ ಕೃಷ್ಣೇನಾಕ್ಲಿಷ್ಟಕರ್ಮಣಾ|

05123024c ಇಷ್ಟಾನ್ಸರ್ವಾನಭಿಪ್ರಾಯಾನ್ಪ್ರಾಪ್ಸ್ಯಾಮಃ ಸರ್ವರಾಜಸು||

ಏಕೆಂದರೆ ಈ ಅಕ್ಲಿಷ್ಟಕರ್ಮಿ ಕೃಷ್ಣನ ಸಹಾಯದಿಂದಲೇ ನಾವು ಎಲ್ಲ ರಾಜರೂ ತಮ್ಮ ಇಷ್ಟ ಅಭಿಪ್ರಾಯಗಳನ್ನು ಸಾಧಿಸಬಲ್ಲೆವು.

05123025a ಸುಸಂಹಿತಃ ಕೇಶವೇನ ಗಚ್ಚ ತಾತ ಯುಧಿಷ್ಠಿರಂ|

05123025c ಚರ ಸ್ವಸ್ತ್ಯಯನಂ ಕೃತ್ಸ್ನಂ ಭಾರತಾನಾಮನಾಮಯಂ||

ಮಗೂ! ಕೇಶವನೊಂದಿಗೆ ಹೋಗಿ ಯುಧಿಷ್ಠಿರನನ್ನು ಸೇರು. ಭಾರತರ ಈ ಅನಾಮಯ ಸಂಪೂರ್ಣ ಮಂಗಳ ಕಾರ್ಯವನ್ನು ಮಾಡಿ ಅದರಂತೆ ನಡೆದುಕೋ.

05123026a ವಾಸುದೇವೇನ ತೀರ್ಥೇನ ತಾತ ಗಚ್ಚಸ್ವ ಸಂಗಮಂ|

05123026c ಕಾಲಪ್ರಾಪ್ತಮಿದಂ ಮನ್ಯೇ ಮಾ ತ್ವಂ ದುರ್ಯೋಧನಾತಿಗಾಃ||

ಮಗೂ! ವಾಸುದೇವನ ಮೂಲಕ ಸಂಗಮವನ್ನು ಹೊಂದು. ಕಾಲವು ಪ್ರಾಪ್ತವಾಗಿದೆ ಎಂದೆನಿಸುತ್ತಿದೆ. ದುರ್ಯೋಧನ! ಈ ಅವಕಾಶವನ್ನು ಕಳೆದುಕೊಳ್ಳಬೇಡ!

05123027a ಶಮಂ ಚೇದ್ಯಾಚಮಾನಂ ತ್ವಂ ಪ್ರತ್ಯಾಖ್ಯಾಸ್ಯಸಿ ಕೇಶವಂ|

05123027c ತ್ವದರ್ಥಮಭಿಜಲ್ಪಂತಂ ನ ತವಾಸ್ತ್ಯಪರಾಭವಃ||

ಆದರೆ ನಿನ್ನ ಒಳ್ಳೆಯದಕ್ಕಾಗಿಯೇ ಪುನಃ ಪುನಃ ಹೇಳುತ್ತಿರುವ ಕೇಶವನನ್ನು ನೀನು ಅನಾದರಿಸಿ ಶಾಂತಿಯನ್ನು ಮಾಡಿಕೊಳ್ಳದೇ ಇದ್ದರೆ ಪರಾಭವವು ನಿನ್ನದಾಗುತ್ತದೆ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಭೀಷ್ಮಾದಿವಾಕ್ಯೇ ತ್ರಿವಿಂಶತ್ಯಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಭೀಷ್ಮಾದಿವಾಕ್ಯದಲ್ಲಿ ನೂರಾಇಪ್ಪತ್ತ್ಮೂರನೆಯ ಅಧ್ಯಾಯವು.

Image result for flowers against white background

Comments are closed.