Udyoga Parva: Chapter 112

ಉದ್ಯೋಗ ಪರ್ವ: ಭಗವದ್ಯಾನ ಪರ್ವ

೧೧೨

ಗರುಡ ಗಾಲವರಿಬ್ಬರೂ ರಾಜಾ ಯಯಾತಿಯಲ್ಲಿಗೆ ಬಂದು ದಾನವನ್ನು ಬೇಡಿದುದು (೧-೨೦).

05112001 ನಾರದ ಉವಾಚ|

05112001a ಅಥಾಹ ಗಾಲವಂ ದೀನಂ ಸುಪರ್ಣಃ ಪತತಾಂ ವರಃ|

05112001c ನಿರ್ಮಿತಂ ವಹ್ನಿನಾ ಭೂಮೌ ವಾಯುನಾ ವೈಧಿತಂ ತಥಾ|

05112001e ಯಸ್ಮಾದ್ಧಿರಣ್ಮಯಂ ಸರ್ವಂ ಹಿರಣ್ಯಂ ತೇನ ಚೋಚ್ಯತೇ||

ನಾರದನು ಹೇಳಿದನು: “ದೀನನಾಗಿದ್ದ ಗಾಲವನಿಗೆ ಆಗ ಪಕ್ಷಿಗಳಲ್ಲಿಯೇ ಶ್ರೇಷ್ಠ ಸುಪರ್ಣನು ಹೇಳಿದನು: “ಭೂಮಿಯ ಒಡಲು ಅಗ್ನಿಯಿಂದ ನಿರ್ಮಿತವಾಗಿದೆ, ವಾಯುವಿನಿಂದ ವೃದ್ಧಿಗೊಂಡಿದೆ ಮತ್ತು ಎಲ್ಲವೂ ಹಿರಣ್ಮಯವಾದುದರಿಂದ ಅದಕ್ಕೆ ಹಿರಣ್ಯ ಎಂದೂ ಕರೆಯುತ್ತಾರೆ.

05112002a ಧತ್ತೇ ಧಾರಯತೇ ಚೇದಮೇತಸ್ಮಾತ್ಕಾರಣಾದ್ಧನಂ|

05112002c ತದೇತತ್ತ್ರಿಷು ಲೋಕೇಷು ಧನಂ ತಿಷ್ಠತಿ ಶಾಶ್ವತಂ||

ಪೋಷಿಸುವುದರಿಂದ ಅದನ್ನು ಧನವೆಂದು ಕರೆಯುತ್ತಾರೆ. ಧನಕ್ಕಾಗಿಯೇ ಈ ಮೂರೂ ಲೋಕಗಳು ಶಾಶ್ವತವಾಗಿವೆ.

05112003a ನಿತ್ಯಂ ಪ್ರೋಷ್ಠಪದಾಭ್ಯಾಂ ಚ ಶುಕ್ರೇ ಧನಪತೌ ತಥಾ|

05112003c ಮನುಷ್ಯೇಭ್ಯಃ ಸಮಾದತ್ತೇ ಶುಕ್ರಶ್ಚಿತ್ತಾರ್ಜಿತಂ ಧನಂ||

ಪೂರ್ವಾಭಾದ್ರ ಅಥವಾ ಉತ್ತರಾಭಾದ್ರ ನಕ್ಷತ್ರವು ಉದಯಿಸುತ್ತಿರುವ ಆ ಶುಕ್ರವಾರದಂದು ಅಗ್ನಿಯು ತನ್ನ ಚಿತ್ತದಿಂದ ಸೃಷ್ಟಿಸಿದ ಧನವನ್ನು ಧನಪತಿಗೆ ನೀಡಲು ಮನುಷ್ಯರಿಗೆ ಕೊಟ್ಟನು.

05112004a ಅಜೈಕಪಾದಹಿರ್ಬುಧ್ನ್ಯೈ ರಕ್ಷ್ಯತೇ ಧನದೇನ ಚ|

05112004c ಏವಂ ನ ಶಕ್ಯತೇ ಲಬ್ಧುಮಲಬ್ಧವ್ಯಂ ದ್ವಿಜರ್ಷಭ||

ದ್ವಿಜರ್ಷಭ! ಭೂಮಿಯ ಒಡಲಲ್ಲಿರುವ ಧನವನ್ನು ಅಜೈಕಪಾದ, ಅಹಿರ್ಬುಧ್ನ ಮತ್ತು ಧನದರು ರಕ್ಷಿಸುತ್ತಾರೆ. ಪಡೆಯಲು ಅತಿ ಕಷ್ಟಕರವಾದ ಅದನ್ನು ಪಡೆಯಲಿಕ್ಕಾಗುವುದಿಲ್ಲ.

05112005a ಋತೇ ಚ ಧನಮಶ್ವಾನಾಂ ನಾವಾಪ್ತಿರ್ವಿದ್ಯತೇ ತವ|

05112005c ಅರ್ಥಂ ಯಾಚಾತ್ರ ರಾಜಾನಂ ಕಂ ಚಿದ್ರಾಜರ್ಷಿವಂಶಜಂ|

05112005e ಅಪೀಡ್ಯ ರಾಜಾ ಪೌರಾನ್ ಹಿ ಯೋ ನೌ ಕುರ್ಯಾತ್ಕೃತಾರ್ಥಿನೌ||

ಧನವಿಲ್ಲದೇ ನಾವು ನಿನ್ನ ಕುದುರೆಗಳನ್ನು ಪಡೆಯುವ ವಿಧಾನವಿಲ್ಲ. ಆದುದರಿಂದ ನಾವು ಯಾರಾದರೂ ರಾಜರ್ಷಿಯ ವಂಶದಲ್ಲಿ ಹುಟ್ಟಿದ ರಾಜನಲ್ಲಿ ಯಾಚಿಸಬೇಕು. ಆ ರಾಜನು ತನ್ನ ಪೌರರನ್ನು ಪೀಡಿಸದೇ ಯಾಚಿಸುವ ನಮಗೆ ಏನಾದರೂ ಮಾಡಬಹುದು.

05112006a ಅಸ್ತಿ ಸೋಮಾನ್ವವಾಯೇ ಮೇ ಜಾತಃ ಕಶ್ಚಿನ್ನೃಪಃ ಸಖಾ|

05112006c ಅಭಿಗಚ್ಚಾವಹೇ ತಂ ವೈ ತಸ್ಯಾಸ್ತಿ ವಿಭವೋ ಭುವಿ||

ಚಂದ್ರವಂಶದಲ್ಲಿ ನನ್ನ ಸಖನಾದ ನೃಪನೊಬ್ಬನು ಇದ್ದಾನೆ. ಭುವಿಯಲ್ಲಿಯೇ ಅತ್ಯಂತ ಶ್ರೀಮಂತನಾಗಿರುವ ಅವನಲ್ಲಿಗೆ ಹೋಗೋಣ.

05112007a ಯಯಾತಿರ್ನಾಮ ರಾಜರ್ಷಿರ್ನಾಹುಷಃ ಸತ್ಯವಿಕ್ರಮಃ|

05112007c ಸ ದಾಸ್ಯತಿ ಮಯಾ ಚೋಕ್ತೋ ಭವತಾ ಚಾರ್ಥಿತಃ ಸ್ವಯಂ||

ಅವನ ಹೆಸರು ಯಯಾತಿ; ರಾಜರ್ಷಿ ನಾಹುಷ ಮತ್ತು ಸತ್ಯವಿಕ್ರಮಿ. ಸ್ವಯಂ ನೀನು ಕೇಳಿದರೆ, ನಾನು ಅದನ್ನು ಅನುಮೋದಿಸಿದರೆ ಅದನ್ನು ಅವನು ಕೊಡದೇ ಇರಲಾರ.

05112008a ವಿಭವಶ್ಚಾಸ್ಯ ಸುಮಹಾನಾಸೀದ್ಧನಪತೇರಿವ|

05112008c ಏವಂ ಸ ತು ಧನಂ ವಿದ್ವಾನ್ದಾನೇನೈವ ವ್ಯಶೋಧಯತ್||

ಧನಪತಿಯಂತೆ ಅವನು ಅತಿದೊಡ್ಡ ಶ್ರೀಮಂತ. ಹೀಗೆ ಧನವನ್ನು ಪಡೆದು ನಿನ್ನ ಗುರುವಿಗೆ ಅದನ್ನು ಕೊಟ್ಟು ಋಣವನ್ನು ತೀರಿಸಿಕೋ.”

05112009a ತಥಾ ತೌ ಕಥಯಂತೌ ಚ ಚಿಂತಯಂತೌ ಚ ಯತ್ಕ್ಷಮಂ|

05112009c ಪ್ರತಿಷ್ಠಾನೇ ನರಪತಿಂ ಯಯಾತಿಂ ಪ್ರತ್ಯುಪಸ್ಥಿತೌ||

ಈ ರೀತಿಯಾಗಿ ಅವರಿಬ್ಬರೂ ಮಾತನಾಡಿಕೊಳ್ಳುತ್ತಾ, ಒಳ್ಳೆಯದನ್ನು ಮಾಡಲು ಯೋಚಿಸುತ್ತಾ ಪ್ರತಿಷ್ಠಾನದಲ್ಲಿ ನರಪತಿ ಯಯಾತಿಯ ಉಪಸ್ಥಿತಿಯಲ್ಲಿ ಬಂದರು.

05112010a ಪ್ರತಿಗೃಹ್ಯ ಚ ಸತ್ಕಾರಮರ್ಘಾದಿಂ ಭೋಜನಂ ವರಂ|

05112010c ಪೃಷ್ಟಶ್ಚಾಗಮನೇ ಹೇತುಮುವಾಚ ವಿನತಾಸುತಃ||

ಅರ್ಘ್ಯವೇ ಮೊದಲಾದ ಸತ್ಕಾರಗಳನ್ನೂ, ಶ್ರೇಷ್ಠ ಭೋಜನವನ್ನೂ ಸ್ವೀಕರಿಸಿ, ಬಂದ ಕಾರಣವನ್ನು ಕೇಳಲು, ವಿನತಾಸುತನು ಹೇಳಿದನು:

05112011a ಅಯಂ ಮೇ ನಾಹುಷ ಸಖಾ ಗಾಲವಸ್ತಪಸೋ ನಿಧಿಃ|

05112011c ವಿಶ್ವಾಮಿತ್ರಸ್ಯ ಶಿಷ್ಯೋಽಭೂದ್ವರ್ಷಾಣ್ಯಯುತಶೋ ನೃಪ||

“ನಾಹುಷ! ನೃಪ! ಈ ತಪಸ್ಸಿನ ನಿಧಿ ಗಾಲವನು ನನ್ನ ಸಖ. ಇವನು ಸಹಸ್ರವರ್ಷಗಳು ವಿಶ್ವಾಮಿತ್ರನ ಶಿಷ್ಯನಾಗಿದ್ದನು.

05112012a ಸೋಽಯಂ ತೇನಾಭ್ಯನುಜ್ಞಾತ ಉಪಕಾರೇಪ್ಸಯಾ ದ್ವಿಜಃ|

05112012c ತಮಾಹ ಭಗವಾನ್ಕಾಂ ತೇ ದದಾನಿ ಗುರುದಕ್ಷಿಣಾಂ||

ಅವನಿಂದ ಹೋಗಲು ಅನುಜ್ಞಾತನಾದ ಈ ದ್ವಿಜನು ಉಪಕಾರ ಮಾಡಲು ಬಯಸಿ ಅವನಿಗೆ ಕೇಳಿದನು – “ಭಗವನ್! ನಿನಗೆ ಗುರುದಕ್ಷಿಣೆಯನ್ನಾಗಿ ಏನು ಕೊಡಲಿ?”

05112013a ಅಸಕೃತ್ತೇನ ಚೋಕ್ತೇನ ಕಿಂ ಚಿದಾಗತಮನ್ಯುನಾ|

05112013c ಅಯಮುಕ್ತಃ ಪ್ರಯಚ್ಚೇತಿ ಜಾನತಾ ವಿಭವಂ ಲಘು||

ಇವನ ಸಂಪತ್ತು ಕಡಿಮೆಯಿದೆ ಎನ್ನುವುದನ್ನ್ನು ತಿಳಿದಿದ್ದ ಅವನು ಎನನ್ನೂ ಕೇಳಲಿಲ್ಲ. ಆದರೆ ಪುನಃ ಪುನಃ ಇವನಿಂದ ಕೇಳಲ್ಪಟ್ಟ ಅವನು ಸ್ವಲ್ಪ ಸಿಟ್ಟಿಗೆದ್ದು ಕೇಳಿದನು:

05112014a ಏಕತಃಶ್ಯ್ಯಾಮಕರ್ಣಾನಾಂ ಶುಭ್ರಾಣಾಂ ಶುದ್ಧಜನ್ಮನಾಂ|

05112014c ಅಷ್ಟೌ ಶತಾನಿ ಮೇ ದೇಹಿ ಹಯಾನಾಂ ಚಂದ್ರವರ್ಚಸಾಂ||

“ಒಂದೇ ಕಿವಿಯು ಕಪ್ಪಾಗಿರುವ, ಚಂದ್ರವರ್ಚಸ, ಶುಭ್ರ ಬಣ್ಣದ, ಶುದ್ಧ ಜನ್ಮದ ಎಂಟುನೂರು ಕುದುರೆಗಳನ್ನು ನನಗೆ ಕೊಡು.

05112015a ಗುರ್ವರ್ಥೋ ದೀಯತಾಮೇಷ ಯದಿ ಗಾಲವ ಮನ್ಯಸೇ|

05112015c ಇತ್ಯೇವಮಾಹ ಸಕ್ರೋಧೋ ವಿಶ್ವಾಮಿತ್ರಸ್ತಪೋಧನಃ||

ಗಾಲವ! ಗುರುವಿಗೆ ಕೊಡಬೇಕೆಂದು ಬಯಸಿದರೆ ಇದನ್ನು ಕೊಡಬೇಕು!” ಎಂದು ಕ್ರೋಧನಾದ ತಪೋಧನ ವಿಶ್ವಾಮಿತ್ರನು ಇವನಿಗೆ ಹೇಳಿದನು.

05112016a ಸೋಽಯಂ ಶೋಕೇನ ಮಹತಾ ತಪ್ಯಮಾನೋ ದ್ವಿಜರ್ಷಭಃ|

05112016c ಅಶಕ್ತಃ ಪ್ರತಿಕರ್ತುಂ ತದ್ಭವಂತಂ ಶರಣಂ ಗತಃ||

ಅದನ್ನು ಮಾಡಲು ಅಶಕ್ತನಾಗಿ, ಮಹಾ ಶೋಕದಿಂದ ಪರಿತಪಿಸುತ್ತಿರುವ ಈ ದ್ವಿಜರ್ಷಭನು ನಿನ್ನ ಶರಣು ಬಂದಿದ್ದಾನೆ.

05112017a ಪ್ರತಿಗೃಹ್ಯ ನರವ್ಯಾಘ್ರ ತ್ವತ್ತೋ ಭಿಕ್ಷಾಂ ಗತವ್ಯಥಃ|

05112017c ಕೃತ್ವಾಪವರ್ಗಂ ಗುರವೇ ಚರಿಷ್ಯತಿ ಮಹತ್ತಪಃ||

ನರವ್ಯಾಘ್ರ! ನಿನ್ನಿಂದ ಭಿಕ್ಷವನ್ನು ಪಡೆದು ಗತವ್ಯಥನಾಗಿ ಗುರುವಿನ ಋಣವನ್ನು ತೀರಿಸಿ ಇವನು ಮಹಾತಪಸ್ಸನ್ನು ಆಚರಿಸುತ್ತಾನೆ.

05112018a ತಪಸಃ ಸಂವಿಭಾಗೇನ ಭವಂತಮಪಿ ಯೋಕ್ಷ್ಯತೇ|

05112018c ಸ್ವೇನ ರಾಜರ್ಷಿತಪಸಾ ಪೂರ್ಣಂ ತ್ವಾಂ ಪೂರಯಿಷ್ಯತಿ||

ಆ ತಪಸ್ಸಿನ ಒಳ್ಳೆಯ ಭಾಗವನ್ನು ನಿನಗೆ ಕೂಡ ಕೊಡುತ್ತಾನೆ. ಅದರಿಂದ ನಿನ್ನ ಸ್ವಂತ ರಾಜರ್ಷಿ ತಪಸ್ಸೂ ಪೂರ್ಣಗೊಳ್ಳುತ್ತದೆ.

05112019a ಯಾವಂತಿ ರೋಮಾಣಿ ಹಯೇ ಭವಂತಿ ಹಿ ನರೇಶ್ವರ|

05112019c ತಾವತೋ ವಾಜಿದಾ ಲೋಕಾನ್ಪ್ರಾಪ್ನುವಂತಿ ಮಹೀಪತೇ||

ನರೇಶ್ವರ! ಮಹೀಪತೇ! ಕುದುರೆಯಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ಪುಣ್ಯಲೋಕಗಳು ಕುದುರೆಯನ್ನು ದಾನಮಾಡಿದವನಿಗೆ ದೊರೆಯುತ್ತದೆ.

05112020a ಪಾತ್ರಂ ಪ್ರತಿಗ್ರಹಸ್ಯಾಯಂ ದಾತುಂ ಪಾತ್ರಂ ತಥಾ ಭವಾನ್|

05112020c ಶಂಖೇ ಕ್ಷೀರಮಿವಾಸಕ್ತಂ ಭವತ್ವೇತತ್ತಥೋಪಮಂ||

ನೀನು ದಾನವನ್ನು ನೀಡಲು ಎಷ್ಟು ಪಾತ್ರನೋ ದಾನವನ್ನು ಸ್ವೀಕರಿಸಲೂ ಕೂಡ ಇವನು ಪಾತ್ರನು. ಆದುದರಿಂದ ಶಂಖದಲ್ಲಿ ಹಾಲನ್ನು ಹಾಕಿದಂತೆ ಈ ದಾನವು ನಡೆಯಲಿ.””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಗಾಲವಚರಿತೇ ದ್ವಾದಶಾಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಗಾಲವಚರಿತೆಯಲ್ಲಿ ನೂರಾಹನ್ನೆರಡನೆಯ ಅಧ್ಯಾಯವು.

Related image

Comments are closed.