Udyoga Parva: Chapter 10

ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ

೧೦

ದೇವ-ಋಷಿಗಣಗಳು ವಿಷ್ಣುವನ್ನು ಮೊರೆಹೊಗಲು, ವಿಷ್ಣುವು ವೃತ್ರನೊಂದಿಗೆ ಸಂಧಿಮಾಡಿಕೊಳ್ಳಲು ಸೂಚಿಸುವುದು (೧-೧೩). ಒಣಗಿದುದರಿಂದಾಲೀ ಒದ್ದೆಯಾಗಿದುದರಿಂದಾಗಲೀ, ಕಲ್ಲಿನಿಂದಾಗಲೀ ಮರದಿಂದಾಗಲೀ, ಶಸ್ತ್ರದಿಂದಾಗಲೀ ವಜ್ರದಿಂದಾಗಲೀ, ದಿನದಲ್ಲಿಯಾಗಲೀ ರಾತ್ರಿಯಲ್ಲಾಗಲೀ ಶಕ್ರನು ಅಥವಾ ದೇವತೆಗಳು ನನ್ನನ್ನು ಕೊಲ್ಲದಿರಲಿ ಎಂದು ವೃತ್ರನೊಂದಿಗೆ ಒಪ್ಪಂದವಾದುದು (೧೪-೩೧). ಉಪಾಯದಿಂದ ಅವಕಾಶವನ್ನು ನೋಡಿಕೊಂಡು ಇಂದ್ರನು ವಿಷ್ಣುವಿನ ಸಹಾಯದಿಂದ ವೃತ್ರನನ್ನು ವಧಿಸಿದುದು (೩೪-೩೮). ತ್ರಿಶಿರ ಬ್ರಹ್ಮಹತ್ಯೆಯ ಭಯದಿಂದ ಪೀಡಿತನಾದ ಇಂದ್ರನು ಲೋಕಗಳ ಆಳವನ್ನು ಸೇರಿ ಸಂಜ್ಞೆಗಳನ್ನು ಕಳೆದುಕೊಂಡು ವಿಚೇತನನಾದುದು; ದೇವಲೋಕದಲ್ಲಿ ಇಂದ್ರನೇ ಇಲ್ಲದಂತಾದುದು (೩೯-೪೭).

05010001 ಇಂದ್ರ ಉವಾಚ|

05010001a ಸರ್ವಂ ವ್ಯಾಪ್ತಮಿದಂ ದೇವಾ ವೃತ್ರೇಣ ಜಗದವ್ಯಯಂ|

05010001c ನ ಹ್ಯಸ್ಯ ಸದೃಶಂ ಕಿಂ ಚಿತ್ಪ್ರತಿಘಾತಾಯ ಯದ್ಭವೇತ್||

ಇಂದ್ರನು ಹೇಳಿದನು: “ದೇವತೆಗಳೇ! ಈ ಅವ್ಯಯ ಜಗತ್ತೆಲ್ಲವೂ ವೃತ್ರನಿಂದ ವ್ಯಾಪ್ತಗೊಂಡಿದೆ. ಅವನನ್ನು ಎದುರಿಸುವಂತಹುದು ಯಾವುದೂ ಇಲ್ಲವೆನಿಸುತ್ತಿದೆ.

05010002a ಸಮರ್ಥೋ ಹ್ಯಭವಂ ಪೂರ್ವಮಸಮರ್ಥೋಽಸ್ಮಿ ಸಾಂಪ್ರತಂ|

05010002c ಕಥಂ ಕುರ್ಯಾಂ ನು ಭದ್ರಂ ವೋ ದುಷ್ಪ್ರಧರ್ಷಃ ಸ ಮೇ ಮತಃ||

ಹಿಂದೆ ನಾನು ಸಮರ್ಥನಾಗಿದ್ದೆ. ಆದರೆ ಈಗ ಅಸಮರ್ಥನಾಗಿದ್ದೇನೆ. ನಿಮ್ಮೆಲ್ಲರ ಭದ್ರತೆಗೆ ಏನು ಮಾಡಲಿ? ಅವನು ದುಷ್ಪ್ರಧರ್ಷನೆಂದು ನನ್ನ ಅಭಿಪ್ರಾಯ.

05010003a ತೇಜಸ್ವೀ ಚ ಮಹಾತ್ಮಾ ಚ ಯುದ್ಧೇ ಚಾಮಿತವಿಕ್ರಮಃ|

05010003c ಗ್ರಸೇತ್ತ್ರಿಭುವನಂ ಸರ್ವಂ ಸದೇವಾಸುರಮಾನುಷಂ||

ಯುದ್ಧದಲ್ಲಿ ಅಮಿತವಿಕ್ರಮಿಯಾದ ಆ ತೇಜಸ್ವೀ ಮಹಾತ್ಮನು ದೇವಾಸುರಮನುಷ್ಯರನ್ನೂ ಸೇರಿಸಿ ಮೂರು ಭುವನಗಳನ್ನು ನುಂಗಲು ಸಮರ್ಥನಾಗಿದ್ದಾನೆ.

05010004a ತಸ್ಮಾದ್ವಿನಿಶ್ಚಯಮಿಮಂ ಶೃಣುಧ್ವಂ ಮೇ ದಿವೌಕಸಃ|

05010004c ವಿಷ್ಣೋಃ ಕ್ಷಯಮುಪಾಗಮ್ಯ ಸಮೇತ್ಯ ಚ ಮಹಾತ್ಮನಾ|

05010004e ತೇನ ಸಮ್ಮಂತ್ರ್ಯ ವೇತ್ಸ್ಯಾಮೋ ವಧೋಪಾಯಂ ದುರಾತ್ಮನಃ||

ಆದುದರಿಂದ ದಿವೌಕಸರೇ! ನನ್ನ ಈ ನಿಶ್ಚಯವನ್ನು ಕೇಳಿ. ಒಟ್ಟಿಗೇ ಮಹಾತ್ಮ ವಿಷ್ಣುವಿನಲ್ಲಿಗೆ ಹೋಗಿ ಅವನ ಸಲಹೆಯಂತೆ ಈ ದುರಾತ್ಮನ ವಧೆಯ ಉಪಾಯವನ್ನು ಮಾಡಬೇಕು.””

05010005 ಶಲ್ಯ ಉವಾಚ|

05010005a ಏವಮುಕ್ತೇ ಮಘವತಾ ದೇವಾಃ ಸರ್ಷಿಗಣಾಸ್ತದಾ|

05010005c ಶರಣ್ಯಂ ಶರಣಂ ದೇವಂ ಜಗ್ಮುರ್ವಿಷ್ಣುಂ ಮಹಾಬಲಂ||

ಶಲ್ಯನು ಹೇಳಿದನು: “ಮಘವತನು ಹೀಗೆ ಹೇಳಲು ದೇವತೆ ಋಷಿಗಣಗಳು ಮಹಾಬಲ, ಶರಣ್ಯ, ದೇವ ವಿಷ್ಣುವಿನ ಶರಣುಹೊಕ್ಕರು.

05010006a ಊಚುಶ್ಚ ಸರ್ವೇ ದೇವೇಶಂ ವಿಷ್ಣುಂ ವೃತ್ರಭಯಾರ್ದಿತಾಃ|

05010006c ತ್ವಯಾ ಲೋಕಾಸ್ತ್ರಯಃ ಕ್ರಾಂತಾಸ್ತ್ರಿಭಿರ್ವಿಕ್ರಮಣೈಃ ಪ್ರಭೋ||

ವೃತ್ರನಿಂದ ಭಯಾರ್ದಿತ ಅವರೆಲ್ಲರೂ ದೇವೇಶ ವಿಷ್ಣುವಿಗೆ ಹೇಳಿದರು: “ಪ್ರಭೋ! ಹಿಂದೆ ನೀನು ಮೂರು ಲೋಕಗಳನ್ನು ಮೂರು ಹೆಜ್ಜೆಗಳಲ್ಲಿ ಆವರಿಸಿದ್ದೆ.

05010007a ಅಮೃತಂ ಚಾಹೃತಂ ವಿಷ್ಣೋ ದೈತ್ಯಾಶ್ಚ ನಿಹತಾ ರಣೇ|

05010007c ಬಲಿಂ ಬದ್ಧ್ವಾ ಮಹಾದೈತ್ಯಂ ಶಕ್ರೋ ದೇವಾಧಿಪಃ ಕೃತಃ||

ವಿಷ್ಣು! ಅಮೃತವನ್ನು ಅಪಹರಿಸಿ ನೀನು ರಣದಲ್ಲಿ ದೈತ್ಯರನ್ನು ಸಂಹರಿಸಿದ್ದೆ. ಮಹಾದೈತ್ಯ ಬಲಿಯನ್ನು ಬಂಧಿಸಿ ಶಕ್ರನನ್ನು ದೇವಾಧಿಪನನ್ನಾಗಿ ಮಾಡಿದೆ.

05010008a ತ್ವಂ ಪ್ರಭುಃ ಸರ್ವಲೋಕಾನಾಂ ತ್ವಯಾ ಸರ್ವಮಿದಂ ತತಂ|

05010008c ತ್ವಂ ಹಿ ದೇವ ಮಹಾದೇವಃ ಸರ್ವಲೋಕನಮಸ್ಕೃತಃ||

ಸರ್ವಲೋಕಗಳ ಪ್ರಭು ನೀನು. ಇವೆಲ್ಲವೂ ನಿನ್ನಿಂದ ತುಂಬಿದೆ. ನೀನೇ ದೇವ, ಮಹಾದೇವ ಮತ್ತು ಸರ್ವಲೋಕನಮಸ್ಕೃತ.

05010009a ಗತಿರ್ಭವ ತ್ವಂ ದೇವಾನಾಂ ಸೇಂದ್ರಾಣಾಮಮರೋತ್ತಮ|

05010009c ಜಗದ್ವ್ಯಾಪ್ತಮಿದಂ ಸರ್ವಂ ವೃತ್ರೇಣಾಸುರಸೂದನ||

ಅಮರೋತ್ತಮ! ನೀನು ಇಂದ್ರನೊಂದಿಗೆ ದೇವತೆಗಳ ಗತಿಯಾಗು. ಅಸುರಸೂದನ! ಈ ಜಗತ್ತೆಲ್ಲವೂ ವೃತ್ರನಿಂದ ವ್ಯಾಪಿತಗೊಂಡಿದೆ.”

05010010 ವಿಷ್ಣುರುವಾಚ|

05010010a ಅವಶ್ಯಂ ಕರಣೀಯಂ ಮೇ ಭವತಾಂ ಹಿತಮುತ್ತಮಂ|

05010010c ತಸ್ಮಾದುಪಾಯಂ ವಕ್ಷ್ಯಾಮಿ ಯಥಾಸೌ ನ ಭವಿಷ್ಯತಿ||

ವಿಷ್ಣುವು ಹೇಳಿದನು: “ನಿಮ್ಮ ಉತ್ತಮ ಹಿತಕ್ಕಾಗಿ ಅವಶ್ಯವಾದುದನ್ನು ನಾನು ಮಾಡಲೇಬೇಕು. ಆದುದರಿಂದ ಅವನು ಇಲ್ಲದಂತೆ ಮಾಡುವ ಉಪಾಯವನ್ನು ಹೇಳುತ್ತೇನೆ.

05010011a ಗಚ್ಚಧ್ವಂ ಸರ್ಷಿಗಂಧರ್ವಾ ಯತ್ರಾಸೌ ವಿಶ್ವರೂಪಧೃಕ್|

05010011c ಸಾಮ ತಸ್ಯ ಪ್ರಯುಂಜಧ್ವಂ ತತ ಏನಂ ವಿಜೇಷ್ಯಥ||

ಋಷಿಗಂಧರ್ವರೊಡನೆ ವಿಶ್ವರೂಪವನ್ನು ತಾಳಿರುವ ವೃತ್ರನಿರುವಲ್ಲಿಗೆ ಹೋಗಿ. ಅವನೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದ ನೀವು ಅವನನ್ನು ಗೆಲ್ಲಬಲ್ಲಿರಿ.

05010012a ಭವಿಷ್ಯತಿ ಗತಿರ್ದೇವಾಃ ಶಕ್ರಸ್ಯ ಮಮ ತೇಜಸಾ|

05010012c ಅದೃಶ್ಯಶ್ಚ ಪ್ರವೇಕ್ಷ್ಯಾಮಿ ವಜ್ರಮಸ್ಯಾಯುಧೋತ್ತಮಂ||

ದೇವತೆಗಳೇ! ಶಕ್ರನಿಗೆ ನನ್ನ ತೇಜಸ್ಸೇ ಗತಿ. ಅದೃಶ್ಯನಾಗಿದ್ದುಕೊಂಡು ನಾನು ಆ ಉತ್ತಮ ವಜ್ರಾಯುಧವನ್ನು ಪ್ರವೇಶಿಸುತ್ತೇನೆ.

05010013a ಗಚ್ಚಧ್ವಮೃಷಿಭಿಃ ಸಾರ್ಧಂ ಗಂಧರ್ವೈಶ್ಚ ಸುರೋತ್ತಮಾಃ|

05010013c ವೃತ್ರಸ್ಯ ಸಹ ಶಕ್ರೇಣ ಸಂಧಿಂ ಕುರುತ ಮಾಚಿರಂ||

ಸುರೋತ್ತಮರೇ! ಹೊರಡಿ! ಆದಷ್ಟು ಬೇಗ ಋಷಿ-ಗಂಧರ್ವರೊಡಗೂಡಿ ವೃತ್ರನೊಂದಿಗೆ ಶಕ್ರನ ಸಂಧಿಯನ್ನು ಮಾಡಿಸಿ.””

05010014 ಶಲ್ಯ ಉವಾಚ|

05010014a ಏವಮುಕ್ತಾಸ್ತು ದೇವೇನ ಋಷಯಸ್ತ್ರಿದಶಾಸ್ತಥಾ|

05010014c ಯಯುಃ ಸಮೇತ್ಯ ಸಹಿತಾಃ ಶಕ್ರಂ ಕೃತ್ವಾ ಪುರಃಸರಂ||

ಶಲ್ಯನು ಹೇಳಿದನು: “ದೇವನು ಹೀಗೆ ಹೇಳಲು ಋಷಿಗಳು, ತ್ರಿದಶರು, ಒಂದಾಗಿ ಶಕ್ರನನ್ನು ಮುಂದಿಟ್ಟುಕೊಂಡು ಹೋದರು.

05010015a ಸಮೀಪಮೇತ್ಯ ಚ ತದಾ ಸರ್ವ ಏವ ಮಹೌಜಸಃ|

05010015c ತಂ ತೇಜಸಾ ಪ್ರಜ್ವಲಿತಂ ಪ್ರತಪಂತಂ ದಿಶೋ ದಶ||

05010016a ಗ್ರಸಂತಮಿವ ಲೋಕಾಂಸ್ತ್ರೀನ್ಸೂರ್ಯಾಚಂದ್ರಮಸೌ ಯಥಾ|

05010016c ದದೃಶುಸ್ತತ್ರ ತೇ ವೃತ್ರಂ ಶಕ್ರೇಣ ಸಹ ದೇವತಾಃ||

ಶಕ್ರನೊಂದಿಗೆ ದೇವತೆಗಳೆಲ್ಲರೂ ಸಮೀಪಕ್ಕೆ ಬಂದು ತೇಜಸ್ಸಿನಿಂದ ಪ್ರಜ್ವಲಿಸಿ ದಶದಿಶಗಳನ್ನೂ ಸುಡುತ್ತಿರುವ, ಸೂರ್ಯ-ಚಂದ್ರರಂತಿರುವ, ಮೂರು ಲೋಕಗಳನ್ನೂ ಕಬಳಿಸುವಂತಿರುವ ಆ ಮಹೌಜಸ ವೃತ್ರನನ್ನು ನೋಡಿದರು.

05010017a ಋಷಯೋಽಥ ತತೋಽಭ್ಯೇತ್ಯ ವೃತ್ರಮೂಚುಃ ಪ್ರಿಯಂ ವಚಃ|

05010017c ವ್ಯಾಪ್ತಂ ಜಗದಿದಂ ಸರ್ವಂ ತೇಜಸಾ ತವ ದುರ್ಜಯ||

ಆಗ ಋಷಿಗಳು ಬಂದು ವೃತ್ರನಿಗೆ ಈ ಪ್ರಿಯ ಮಾತುಗಳನ್ನಾಡಿದರು: “ದುರ್ಜಯ! ನಿನ್ನ ತೇಜಸ್ಸು ಈ ಜಗತ್ತೆಲ್ಲವನ್ನೂ ಆವರಿಸಿದೆ.

05010018a ನ ಚ ಶಕ್ನೋಷಿ ನಿರ್ಜೇತುಂ ವಾಸವಂ ಭೂರಿವಿಕ್ರಮಂ|

05010018c ಯುಧ್ಯತೋಶ್ಚಾಪಿ ವಾಂ ಕಾಲೋ ವ್ಯತೀತಃ ಸುಮಹಾನಿಹ||

ಸುಮಹಾನಿಹ! ಭೂರಿವಿಕ್ರಮ ವಾಸವನನ್ನು ಸೋಲಿಸಲು ನಿನಗೆ ಶಕ್ಯವಿಲ್ಲ. ಈ ಮಹಾಯುದ್ಧವು ಪ್ರಾರಂಭಿಸಿ ಬಹುಕಾಲವು ಕಳೆದುಹೋಯಿತು.

05010019a ಪೀಡ್ಯಂತೇ ಚ ಪ್ರಜಾಃ ಸರ್ವಾಃ ಸದೇವಾಸುರಮಾನವಾಃ|

05010019c ಸಖ್ಯಂ ಭವತು ತೇ ವೃತ್ರ ಶಕ್ರೇಣ ಸಹ ನಿತ್ಯದಾ|

05010019e ಅವಾಪ್ಸ್ಯಸಿ ಸುಖಂ ತ್ವಂ ಚ ಶಕ್ರಲೋಕಾಂಶ್ಚ ಶಾಶ್ವತಾನ್||

ದೇವಾಸುರ-ಮಾನವರೂ ಸೇರಿ ಎಲ್ಲ ಪ್ರಜೆಗಳೂ ಪೀಡೆಗೊಳಗಾಗಿದ್ದಾರೆ. ವೃತ್ರ! ಶಕ್ರನೊಂದಿಗೆ ನಿನ್ನ ನಿತ್ಯ ಸಖ್ಯವಾಗಲಿ. ಶಕ್ರಲೋಕದಲ್ಲಿ ನೀನು ಶಾಶ್ವತ ಸುಖವನ್ನು ಹೊಂದುವೆ.”

05010020a ಋಷಿವಾಕ್ಯಂ ನಿಶಮ್ಯಾಥ ಸ ವೃತ್ರಃ ಸುಮಹಾಬಲಃ|

05010020c ಉವಾಚ ತಾಂಸ್ತದಾ ಸರ್ವಾನ್ಪ್ರಣಮ್ಯ ಶಿರಸಾಸುರಃ||

ಋಷಿಗಳ ಮಾತುಗಳನ್ನು ಸುಮಹಾಬಲ ವೃತ್ರಾಸುರನು ಕೇಳಿ, ಅವರೆಲ್ಲರಿಗೆ ತಲೆಬಾಗಿ ನಮಸ್ಕರಿಸಿ ಹೇಳಿದನು:

05010021a ಸರ್ವೇ ಯೂಯಂ ಮಹಾಭಾಗಾ ಗಂಧರ್ವಾಶ್ಚೈವ ಸರ್ವಶಃ|

05010021c ಯದ್ಬ್ರೂತ ತಚ್ಚ್ರುತಂ ಸರ್ವಂ ಮಮಾಪಿ ಶೃಣುತಾನಘಾಃ||

“ಎಲ್ಲ ಗಂಧರ್ವರೂ ಮತ್ತು ಮಹಾಭಾಗ ನೀವೆಲ್ಲರೂ ಹೇಳಿದುದನ್ನು ನಾನು ಕೇಳಿದೆ. ಅನಘರೇ! ಈಗ ನಾನು ಹೇಳುವುದನ್ನೂ ಕೇಳಿ.

05010022a ಸಂಧಿಃ ಕಥಂ ವೈ ಭವಿತಾ ಮಮ ಶಕ್ರಸ್ಯ ಚೋಭಯೋಃ|

05010022c ತೇಜಸೋರ್ಹಿ ದ್ವಯೋರ್ದೇವಾಃ ಸಖ್ಯಂ ವೈ ಭವಿತಾ ಕಥಂ||

ನನ್ನ ಮತ್ತು ಶಕ್ರನ ನಡುವೆ ಸಂಧಿಯು ಹೇಗಾದೀತು? ದೇವತೆಗಳೇ! ಇಬ್ಬರು ತೇಜಸ್ವಿ ದ್ರೋಹಿಗಳ ಮಧ್ಯೆ ಸಖ್ಯವು ಹೇಗಾಗಬಹುದು?”

05010023 ಋಷಯ ಊಚುಃ|

05010023a ಸಕೃತ್ಸತಾಂ ಸಂಗತಂ ಲಿಪ್ಸಿತವ್ಯಂ|

        ತತಃ ಪರಂ ಭವಿತಾ ಭವ್ಯಮೇವ|

05010023c ನಾತಿಕ್ರಮೇತ್ಸತ್ಪುರುಷೇಣ ಸಂಗತಂ|

        ತಸ್ಮಾತ್ಸತಾಂ ಸಂಗತಂ ಲಿಪ್ಸಿತವ್ಯಂ||

ಋಷಿಗಳು ಹೇಳಿದರು: “ಸಕೃತರರಲ್ಲಿ ಗೆಳೆತನವು ಒಂದೇ ಭೇಟಿಯಲ್ಲಾಗುವುದು ಒಳ್ಳೆಯದೇ. ಅದರ ನಂತರ ನಡೆಯುವಂಥಹುದು ನಡೆಯಲೇ ಬೇಕಾಗಿರುವ ವಿಧಿವಿಹಿತವಾದುದು. ಆದುದರಿಂದ ಸತ್ಪುರುಷರೊಡನೆ ಸಖ್ಯದ ಅವಕಾಶವನ್ನು ಕಡೆಗಾಣಿಸಬಾರದು. ಆದುದರಿಂದ ಒಳ್ಳೆಯವರೊಂದಿಗೆ ಸಖ್ಯವನ್ನು ಬಯಸಬೇಕು.

05010024a ದೃಢಂ ಸತಾಂ ಸಂಗತಂ ಚಾಪಿ ನಿತ್ಯಂ|

        ಬ್ರೂಯಾಚ್ಚಾರ್ಥಂ ಹ್ಯರ್ಥಕೃಚ್ಚ್ರೇಷು ಧೀರಃ|

05010024c ಮಹಾರ್ಥವತ್ಸತ್ಪುರುಷೇಣ ಸಂಗತಂ|

        ತಸ್ಮಾತ್ಸಂತಂ ನ ಜಿಘಾಂಸೇತ ಧೀರಃ||

ಸತ್ಯವಂತರೊಂದಿಗಿನ ಸಖ್ಯವು ಕಷ್ಟದಲ್ಲಿ ಬರುವ ಸಂಪತ್ತಿನಂತೆ ದೃಢವೂ ನಿತ್ಯವೂ ಆದುದು. ಸತ್ಪುರುಷರೊಂದಿಗಿನ ಸಖ್ಯವು ಮಹಾ ಐಶ್ವರ್ಯವಿದ್ದಂತೆ. ಆದುದರಿಂದ ಸತ್ಯವಂತರನ್ನು ಕೊಲ್ಲಬಾರದು.

05010025a ಇಂದ್ರಃ ಸತಾಂ ಸಮ್ಮತಶ್ಚ ನಿವಾಸಶ್ಚ ಮಹಾತ್ಮನಾಂ|

05010025c ಸತ್ಯವಾದೀ ಹ್ಯದೀನಶ್ಚ ಧರ್ಮವಿತ್ಸುವಿನಿಶ್ಚಿತಃ||

05010026a  ತೇನ ತೇ ಸಹ ಶಕ್ರೇಣ ಸಂಧಿರ್ಭವತು ಶಾಶ್ವತಃ|

05010026c ಏವಂ ವಿಶ್ವಾಸಮಾಗಚ್ಚ ಮಾ ತೇ ಭೂದ್ಬುದ್ಧಿರನ್ಯಥಾ||

ಇಂದ್ರನು ಸತ್ಯವಂತರಿಂದ ಗೌರವಿಸಲ್ಪಟ್ಟವನು ಮತ್ತು ಮಹಾತ್ಮರ ನಿವಾಸ. ಸತ್ಯವಾದೀ, ಹೃದಯವಂತ ಮತ್ತು ಧರ್ಮನಿಶ್ಚಯಗಳನ್ನು ತಿಳಿದವನು. ಶಕ್ರನೊಂದಿಗೆ ನಿನ್ನ ಶಾಶ್ವತ ಸಂಧಿಯಾಗಲಿ. ಈ ರೀತಿ ನಿನಗೆ ಅವನ ಮೇಲೆ ವಿಶ್ವಾಸ ಬರಲಿ. ಅನ್ಯಥಾ ವಿಚಾರಮಾಡಬೇಡ.””

05010027 ಶಲ್ಯ ಉವಾಚ|

05010027a ಮಹರ್ಷಿವಚನಂ ಶ್ರುತ್ವಾ ತಾನುವಾಚ ಮಹಾದ್ಯುತಿಃ|

05010027c ಅವಶ್ಯಂ ಭಗವಂತೋ ಮೇ ಮಾನನೀಯಾಸ್ತಪಸ್ವಿನಃ||

ಶಲ್ಯನು ಹೇಳಿದನು: “ಮಹರ್ಷಿಗಳ ಮಾತನ್ನು ಕೇಳಿ ಆ ಮಹಾದ್ಯುತಿಯು ಹೇಳಿದನು: “ಭಗವಂತ ತಪಸ್ವಿಗಳನ್ನು ನಾನು ಅವಶ್ಯವಾಗಿಯೂ ಮನ್ನಿಸುತ್ತೇನೆ.

05010028a ಬ್ರವೀಮಿ ಯದಹಂ ದೇವಾಸ್ತತ್ಸರ್ವಂ ಕ್ರಿಯತಾಮಿಹ|

05010028c ತತಃ ಸರ್ವಂ ಕರಿಷ್ಯಾಮಿ ಯದೂಚುರ್ಮಾಂ ದ್ವಿಜರ್ಷಭಾಃ||

ನಾನು ಏನನ್ನು ಹೇಳುತ್ತೇನೋ ಅವೆಲ್ಲವನ್ನೂ ದೇವತೆಗಳು ಮಾಡಲಿ. ಆಗ ದ್ವಿಜರ್ಷಭರು ಹೇಳಿದುದೆಲ್ಲವನ್ನೂ ನಾನು ಮಾಡುತ್ತೇನೆ.

05010029a ನ ಶುಷ್ಕೇಣ ನ ಚಾರ್ದ್ರೇಣ ನಾಶ್ಮನಾ ನ ಚ ದಾರುಣಾ|

05010029c ನ ಶಸ್ತ್ರೇಣ ನ ವಜ್ರೇಣ ನ ದಿವಾ ನ ತಥಾ ನಿಶಿ||

05010030a ವಧ್ಯೋ ಭವೇಯಂ ವಿಪ್ರೇಂದ್ರಾಃ ಶಕ್ರಸ್ಯ ಸಹ ದೈವತೈಃ|

05010030c ಏವಂ ಮೇ ರೋಚತೇ ಸಂಧಿಃ ಶಕ್ರೇಣ ಸಹ ನಿತ್ಯದಾ||

ವಿಪ್ರೇಂದ್ರರೇ! ಒಣಗಿದುದರಿಂದಾಲೀ ಒದ್ದೆಯಾಗಿದುದರಿಂದಾಗಲೀ, ಕಲ್ಲಿನಿಂದಾಗಲೀ ಮರದಿಂದಾಗಲೀ, ಶಸ್ತ್ರದಿಂದಾಗಲೀ ವಜ್ರದಿಂದಾಗಲೀ, ದಿನದಲ್ಲಿಯಾಗಲೀ ರಾತ್ರಿಯಲ್ಲಾಗಲೀ ಶಕ್ರನು ಅಥವಾ ದೇವತೆಗಳು ನನ್ನನ್ನು ಕೊಲ್ಲದಿರಲಿ. ಶಕ್ರನೊಂದಿಗೆ ಈ ರೀತಿಯ ನಿತ್ಯ ಸಂಧಿಯು ನನಗೆ ಇಷ್ಟವಾಗುತ್ತದೆ.”

05010031a ಬಾಢಮಿತ್ಯೇವ ಋಷಯಸ್ತಮೂಚುರ್ಭರತರ್ಷಭ|

05010031c ಏವಂ ಕೃತೇ ತು ಸಂಧಾನೇ ವೃತ್ರಃ ಪ್ರಮುದಿತೋಽಭವತ್||

ಭರತರ್ಷಭ! “ಒಳ್ಳೆಯದು” ಎಂದು ಋಷಿಗಳು ಹೇಳಿದರು. ಈ ರೀತಿ ಸಂಧಾನವನ್ನು ಮಾಡಿಕೊಂಡು ವೃತ್ರನು ಪರಮ ಮುದಿತನಾದನು.

05010032a ಯತ್ತಃ ಸದಾಭವಚ್ಚಾಪಿ ಶಕ್ರೋಽಮರ್ಷಸಮನ್ವಿತಃ|

05010032c ವೃತ್ರಸ್ಯ ವಧಸಮ್ಯುಕ್ತಾನುಪಾಯಾನನುಚಿಂತಯನ್|

05010032e ರಂಧ್ರಾನ್ವೇಷೀ ಸಮುದ್ವಿಗ್ನಃ ಸದಾಭೂದ್ಬಲವೃತ್ರಹಾ||

ಹಾಗೆಯೇ ಶಕ್ರನೂ ಕೂಡ ಸಂತುಷ್ಟನಾದರೂ ಅವನು ಸದಾ ವ್ಯಾಕುಲಗೊಂಡು ವೃತ್ರನ ವಧೆಯ ಕುರಿತ ಉಪಾಯವನ್ನು ಯೋಚಿಸುತ್ತಿದ್ದನು. ಬಲವೃತ್ರಹನು ಸದಾ ಅವಕಾಶದ ರಂಧ್ರವನ್ನು ಹುಡುಕುವುದರಲ್ಲಿ ನಿರತನಾಗಿದ್ದನು.

05010033a ಸ ಕದಾ ಚಿತ್ಸಮುದ್ರಾಂತೇ ತಮಪಶ್ಯನ್ಮಹಾಸುರಂ|

05010033c ಸಂಧ್ಯಾಕಾಲ ಉಪಾವೃತ್ತೇ ಮುಹೂರ್ತೇ ರಮ್ಯದಾರುಣೇ||

ಒಮ್ಮೆ ಅವನು ಸಂಧ್ಯಾಕಾಲದ ರಮ್ಯವೂ ದಾರುಣವೂ ಆದ ಮುಹೂರ್ತವು ಸನ್ನಿಹಿತವಾಗುವಾಗ ಆ ಮಹಾಸುರನನ್ನು ಸಮುದ್ರದ ಅಂಚಿನಲ್ಲಿ ಕಂಡನು.

05010034a ತತಃ ಸಂಚಿಂತ್ಯ ಭಗವಾನ್ವರದಾನಂ ಮಹಾತ್ಮನಃ|

05010034c ಸಂಧ್ಯೇಯಂ ವರ್ತತೇ ರೌದ್ರಾ ನ ರಾತ್ರಿರ್ದಿವಸಂ ನ ಚ|

05010034e ವೃತ್ರಶ್ಚಾವಶ್ಯವಧ್ಯೋಽಯಂ ಮಮ ಸರ್ವಹರೋ ರಿಪುಃ||

ಆಗ ಭಗವಾನನು ಆ ಮಹಾತ್ಮನಿಗೆ ನೀಡಿದ ವರದ ಕುರಿತು ಯೋಚಿಸಿದನು: “ಇದು ರೌದ್ರವಾದ ಸಂಧ್ಯಾಸಮಯ. ರಾತ್ರಿಯೂ ಅಲ್ಲ ದಿವಸವೂ ಅಲ್ಲ. ನನ್ನಿಂದ ಎಲ್ಲವನ್ನೂ ಅಪಹರಿಸಿದ ನನ್ನ ಈ ಶತ್ರು ವೃತ್ರನನ್ನು ನಾನು ಅವಶ್ಯವಾಗಿ ವಧಿಸುತ್ತೇನೆ.

05010035a ಯದಿ ವೃತ್ರಂ ನ ಹನ್ಮ್ಯದ್ಯ ವಂಚಯಿತ್ವಾ ಮಹಾಸುರಂ|

05010035c ಮಹಾಬಲಂ ಮಹಾಕಾಯಂ ನ ಮೇ ಶ್ರೇಯೋ ಭವಿಷ್ಯತಿ||

ಇಂದು ನಾನು ವಂಚಿಸಿ ಈ ಮಹಾಬಲ ಮಹಾಕಾಯ ಮಹಾಸುರನನ್ನು ಕೊಲ್ಲದೇ ಇದ್ದರೆ ನನಗೆ ಶ್ರೇಯಸ್ಸುಂಟಾಗುವುದಿಲ್ಲ.

05010036a ಏವಂ ಸಂಚಿಂತಯನ್ನೇವ ಶಕ್ರೋ ವಿಷ್ಣುಮನುಸ್ಮರನ್|

05010036c ಅಥ ಫೇನಂ ತದಾಪಶ್ಯತ್ಸಮುದ್ರೇ ಪರ್ವತೋಪಮಂ||

ಈ ರೀತಿ ಆಲೋಚಿಸಿ ಶಕ್ರನು ವಿಷ್ಣುವನ್ನು ಸ್ಮರಿಸಿದನು. ಅಗ ಸಮುದ್ರದಲ್ಲಿ ಪರ್ವತೋಪಮ ನೊರೆಯು ಕಾಣಿಸಿಕೊಂಡಿತು.

05010037a ನಾಯಂ ಶುಷ್ಕೋ ನ ಚಾರ್ದ್ರೋಽಯಂ ನ ಚ ಶಸ್ತ್ರಮಿದಂ ತಥಾ|

05010037c ಏನಂ ಕ್ಷೇಪ್ಸ್ಯಾಮಿ ವೃತ್ರಸ್ಯ ಕ್ಷಣಾದೇವ ನಶಿಷ್ಯತಿ||

“ಇದು ಒಣಗಿಯೂ ಇಲ್ಲ ಒದ್ದೆಯಾಗಿಯೂ ಇಲ್ಲ. ಹಾಗೆಯೇ ಇದು ಶಸ್ತ್ರವೂ ಅಲ್ಲ. ಇದನ್ನು ಎಸೆಯುತ್ತೇನೆ. ಕ್ಷಣದಲ್ಲಿಯೇ ವೃತ್ರನು ನಾಶಗೊಳ್ಳುತ್ತಾನೆ.”

05010038a ಸವಜ್ರಮಥ ಫೇನಂ ತಂ ಕ್ಷಿಪ್ರಂ ವೃತ್ರೇ ನಿಸೃಷ್ಟವಾನ್|

05010038c ಪ್ರವಿಶ್ಯ ಫೇನಂ ತಂ ವಿಷ್ಣುರಥ ವೃತ್ರಂ ವ್ಯನಾಶಯತ್||

ಅವನು ಆಗ ವಜ್ರವನ್ನು ನೊರೆಯಲ್ಲಿ ಅದ್ದಿ ವೃತ್ರನೆಡೆ ಎಸೆದನು. ಆಗ ವಿಷ್ಣುವು ನೊರೆಯನ್ನು ಪ್ರವೇಶಿಸಿ ವೃತ್ರನನ್ನು ನಾಶಗೊಳಿಸಿದನು.

05010039a ನಿಹತೇ ತು ತತೋ ವೃತ್ರೇ ದಿಶೋ ವಿತಿಮಿರಾಭವನ್|

05010039c ಪ್ರವವೌ ಚ ಶಿವೋ ವಾಯುಃ ಪ್ರಜಾಶ್ಚ ಜಹೃಷುಸ್ತದಾ||

ವೃತ್ರನು ಹತನಾಗಲು ದಿಕ್ಕುಗಳು ಕತ್ತಲೆರಹಿತವಾದವು. ಸುಖಕರ ಗಾಳಿಯು ಬೀಸಿತು. ಪ್ರಜೆಗಳೆಲ್ಲರೂ ಹರ್ಷಿತರಾದರು.

05010040a ತತೋ ದೇವಾಃ ಸಗಂಧರ್ವಾ ಯಕ್ಷರಾಕ್ಷಸಪನ್ನಗಾಃ|

05010040c ಋಷಯಶ್ಚ ಮಹೇಂದ್ರಂ ತಮಸ್ತುವನ್ವಿವಿಧೈಃ ಸ್ತವೈಃ||

ಆಗ ದೇವತೆಗಳು ಮತ್ತು ಋಷಿಗಳು ಗಂಧರ್ವ, ಯಕ್ಷ, ರಾಕ್ಷಸ, ಪನ್ನಗರೊಡನೆ ಮಹೇಂದ್ರನನ್ನು ವಿವಿಧ ಸ್ತವಗಳಿಂದ ಸ್ತುತಿಸಿದರು.

05010041a ನಮಸ್ಕೃತಃ ಸರ್ವಭೂತೈಃ ಸರ್ವಭೂತಾನಿ ಸಾಂತ್ವಯನ್|

05010041c ಹತಶತ್ರುಃ ಪ್ರಹೃಷ್ಟಾತ್ಮಾ ವಾಸವಃ ಸಹ ದೈವತೈಃ|

05010041e ವಿಷ್ಣುಂ ತ್ರಿಭುವನಶ್ರೇಷ್ಠಂ ಪೂಜಯಾಮಾಸ ಧರ್ಮವಿತ್||

ಸರ್ವಭೂತಗಳಿಂದ ನಮಸ್ಕರಿಸಲ್ಪಟ್ಟ ವಾಸವನು ಸರ್ವಭೂತಗಳನ್ನು ಸಂತವಿಸಿ ಶತ್ರುವು ಹತನಾದನೆಂದು ಪ್ರಹೃಷ್ಟಾತ್ಮನಾಗಿ ದೇವತೆಗಳೊಂದಿಗೆ ತ್ರಿಭುವನಶ್ರೇಷ್ಠ ವಿಷ್ಣುವನ್ನು ಧರ್ಮವತ್ತಾಗಿ ಪೂಜಿಸಿದನು.

05010042a ತತೋ ಹತೇ ಮಹಾವೀರ್ಯೇ ವೃತ್ರೇ ದೇವಭಯಂಕರೇ|

05010042c ಅನೃತೇನಾಭಿಭೂತೋಽಭೂಚ್ಚಕ್ರಃ ಪರಮದುರ್ಮನಾಃ|

05010042e ತ್ರೈಶೀರ್ಷಯಾಭಿಭೂತಶ್ಚ ಸ ಪೂರ್ವಂ ಬ್ರಹ್ಮಹತ್ಯಯಾ||

ದೇವಭಯಂಕರ ಮಹಾವೀರ್ಯ ವೃತ್ರನು ಹತನಾಗಲು ಶಕ್ರನು ಸುಳ್ಳಿನಿಂದ ಅಭಿಭೂತನಾಗಿ ಮತ್ತು ಹಿಂದೆ ಮಾಡಿದ ತ್ರಿಶಿರ ಬ್ರಹ್ಮಹತ್ಯೆಯಿಂದ ಅಭಿಭೂತನಾಗಿ ಪರಮ ದುಃಖಿತನಾದನು.

05010043a ಸೋಽಂತಮಾಶ್ರಿತ್ಯ ಲೋಕಾನಾಂ ನಷ್ಟಸಂಜ್ಞೋ ವಿಚೇತನಃ|

05010043c ನ ಪ್ರಾಜ್ಞಾಯತ ದೇವೇಂದ್ರಸ್ತ್ವಭಿಭೂತಃ ಸ್ವಕಲ್ಮಷೈಃ|

05010043e ಪ್ರತಿಚ್ಚನ್ನೋ ವಸತ್ಯಪ್ಸು ಚೇಷ್ಟಮಾನ ಇವೋರಗಃ||

ಅವನು ಲೋಕಗಳ ಆಳವನ್ನು ಸೇರಿ ಸಂಜ್ಞೆಗಳನ್ನು ಕಳೆದುಕೊಂಡು ವಿಚೇತನನಾದನು. ತನ್ನದೇ ಪಾಪಗಳಿಂದ ಅಭಿಭೂತನಾಗಿ ದೇವೇಂದ್ರನು ಗುರುತಿಗೇ ಸಿಗದಂತಾದನು. ಒದ್ದಾಡುತ್ತಿರುವ ಹಾವಿನಂತೆ ನೀರಿನಲ್ಲಿ ಅಡಗಿಕೊಂಡು ವಾಸಿಸಿದನು.

05010044a ತತಃ ಪ್ರನಷ್ಟೇ ದೇವೇಂದ್ರೇ ಬ್ರಹ್ಮಹತ್ಯಾಭಯಾರ್ದಿತೇ|

05010044c ಭೂಮಿಃ ಪ್ರಧ್ವಸ್ತಸಂಕಾಶಾ ನಿರ್ವೃಕ್ಷಾ ಶುಷ್ಕಕಾನನಾ|

05010044e ವಿಚ್ಚಿನ್ನಸ್ರೋತಸೋ ನದ್ಯಃ ಸರಾಂಸ್ಯನುದಕಾನಿ ಚ||

ಬ್ರಹ್ಮಹತ್ಯೆಯ ಭಯದಿಂದ ಪೀಡಿತನಾದ ದೇವೇಂದ್ರನನ್ನು ಕಳೆದುಕೊಂಡ ಭೂಮಿಯಲ್ಲಿ ಮಹಾ ವಿಧ್ವಂಸವು ನಡೆಯಿತೋ ಎನ್ನುವ ಹಾಗೆ ಮರಗಳನ್ನು ಕಳೆದುಕೊಂಡು, ಕಾನನಗಳು ಒಣಗಿ, ನದಿಗಳ ಪ್ರವಾಹವು ತುಂಡಾಗಿ, ಸರೋವರಗಳು ನೀರಿಲ್ಲದಂತಾದವು.

05010045a ಸಂಕ್ಷೋಭಶ್ಚಾಪಿ ಸತ್ತ್ವಾನಾಮನಾವೃಷ್ಟಿಕೃತೋಽಭವತ್|

05010045c ದೇವಾಶ್ಚಾಪಿ ಭೃಶಂ ತ್ರಸ್ತಾಸ್ತಥಾ ಸರ್ವೇ ಮಹರ್ಷಯಃ||

05010046a ಅರಾಜಕಂ ಜಗತ್ಸರ್ವಮಭಿಭೂತಮುಪದ್ರವೈಃ|

05010046c ತತೋ ಭೀತಾಭವನ್ದೇವಾಃ ಕೋ ನೋ ರಾಜಾ ಭವೇದಿತಿ||

ಅನಾವೃಷ್ಟಿಯಿಂದ ಸತ್ವಗಳಲ್ಲಿ ಸಂಕ್ಷೋಭೆಗೊಂಡಿತು. ದೇವತೆಗಳೂ ಎಲ್ಲ ಮಹರ್ಷಿಗಳೂ ತುಂಬಾ ಪೀಡಿತರಾದರು. ಅರಾಜಕತೆಯಿಂದ ಜಗತ್ತೆಲ್ಲವೂ ಉಪದ್ರವಗಳಿಂದ ತುಂಬಿಕೊಂಡಿತು. “ಯಾರು ನಮ್ಮ ರಾಜನಾಗುತ್ತಾನೆ?” ಎಂದು ದೇವತೆಗಳು ಭಯಭೀತರಾದರು.

05010047a ದಿವಿ ದೇವರ್ಷಯಶ್ಚಾಪಿ ದೇವರಾಜವಿನಾಕೃತಾಃ|

05010047c ನ ಚ ಸ್ಮ ಕಶ್ಚಿದ್ದೇವಾನಾಂ ರಾಜ್ಯಾಯ ಕುರುತೇ ಮನಃ||

ದಿವಿಯಲ್ಲಿ ದೇವರಾಜನಿಲ್ಲದೇ ಆದಾಗ ದೇವತೆಗಳು ಮತ್ತು ಋಷಿಗಳಲ್ಲಿ ಯಾರೂ ದೇವತೆಗಳ ರಾಜನಾಗಲು ಮನಸ್ಸುಮಾಡಲಿಲ್ಲ.”

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ವೃತ್ರವಧೇ ಇಂದ್ರವಿಜಯೋ ನಾಮ ದಶಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ವೃತ್ರವಧೆಯಲ್ಲಿ ಇಂದ್ರವಿಜಯವೆಂಬ ಹತ್ತನೆಯ ಅಧ್ಯಾಯವು|

Image result for flowers against white background

Comments are closed.