Svargarohana Parva: Chapter 5

ಸ್ವರ್ಗಾರೋಹಣ ಪರ್ವ

ಕೌರವ-ಪಾಂಡವರ ಕಡೆಗಳಿಂದ ಯುದ್ಧಮಾಡಿ ಮಡಿದ ಎಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ಹೋದುದನ್ನು ಹೇಳಿ ವೈಶಂಪಾಯನನು ಜನಮೇಜಯನಿಗೆ ಹೇಳುತ್ತಿದ್ದ ಮಹಾಭಾರತ ಕಥೆಯನ್ನು ಮುಕ್ತಾಯಗೊಳಿಸಿದುದು (೧-೨೫). ಸೂತ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಮಹಾಭಾರತ ಶ್ರವಣ ಫಲವನ್ನು ತಿಳಿಸಿದುದು (೨೬-).

18005001 ಜನಮೇಜಯ ಉವಾಚ|

18005001a ಭೀಷ್ಮದ್ರೋಣೌ ಮಹಾತ್ಮಾನೌ ಧೃತರಾಷ್ಟ್ರಶ್ಚ ಪಾರ್ಥಿವಃ|

18005001c ವಿರಾಟದ್ರುಪದೌ ಚೋಭೌ ಶಂಖಶ್ಚೈವೋತ್ತರಸ್ತಥಾ||

18005002a ಧೃಷ್ಟಕೇತುರ್ಜಯತ್ಸೇನೋ ರಾಜಾ ಚೈವ ಸ ಸತ್ಯಜಿತ್|

18005002c ದುರ್ಯೋಧನಸುತಾಶ್ಚೈವ ಶಕುನಿಶ್ಚೈವ ಸೌಬಲಃ||

18005003a ಕರ್ಣಪುತ್ರಾಶ್ಚ ವಿಕ್ರಾಂತಾ ರಾಜಾ ಚೈವ ಜಯದ್ರಥಃ|

18005003c ಘಟೋತ್ಕಚಾದಯಶ್ಚೈವ ಯೇ ಚಾನ್ಯೇ ನಾನುಕೀರ್ತಿತಾಃ||

18005004a ಯೇ ಚಾನ್ಯೇ ಕೀರ್ತಿತಾಸ್ತತ್ರ ರಾಜಾನೋ ದೀಪ್ತಮೂರ್ತಯಃ|

18005004c ಸ್ವರ್ಗೇ ಕಾಲಂ ಕಿಯಂತಂ ತೇ ತಸ್ಥುಸ್ತದಪಿ ಶಂಸ ಮೇ||

ಜನಮೇಜಯನು ಹೇಳಿದನು: “ಭೀಷ್ಮ-ದ್ರೋಣರು, ರಾಜ ಧೃತರಾಷ್ಟ್ರ, ವಿರಾಟ-ದ್ರುಪದರು, ಶಂಖ-ಉತ್ತರರು, ಧೃಷ್ಟಕೇತು-ಜಯತ್ಸೇನರು, ರಾಜಾ ಸತ್ಯಜಿತ್, ದುರ್ಯೋಧನನ ಮಕ್ಕಳು, ಸೌಬಲ ಶಕುನಿ, ಕರ್ಣನ ಮಕ್ಕಳು, ವಿಕ್ರಾಂತ ರಾಜಾ ಜಯದ್ರಥ, ಘಟೋತ್ಕಚಾದಿಗಳು, ಮತ್ತು ಇಲ್ಲಿ ಹೆಸರಿಸದ ಅನ್ಯರು, ಹಾಗೂ ಇಲ್ಲಿ ಹೆಸರಿಸಿದ ಅನ್ಯ ದೀಪ್ತಮೂರ್ತಿ ರಾಜರು – ಇವರು ಎಷ್ಟು ಕಾಲ ಸ್ವರ್ಗದಲ್ಲಿದ್ದರು ಎನ್ನುವುದನ್ನು ನನಗೆ ಹೇಳು!

18005005a ಆಹೋ ಸ್ವಿಚ್ಚಾಶ್ವತಂ ಸ್ಥಾನಂ ತೇಷಾಂ ತತ್ರ ದ್ವಿಜೋತ್ತಮ|

18005005c ಅಂತೇ ವಾ ಕರ್ಮಣಃ ಕಾಂ ತೇ ಗತಿಂ ಪ್ರಾಪ್ತಾ ನರರ್ಷಭಾಃ|

18005005e ಏತದಿಚ್ಚಾಮ್ಯಹಂ ಶ್ರೋತುಂ ಪ್ರೋಚ್ಯಮಾನಂ ತ್ವಯಾ ದ್ವಿಜ||

ದ್ವಿಜೋತ್ತಮ! ಅವರಿಗೆ ಅಲ್ಲಿಯ ಆ ಸ್ಥಾನವು ಶಾಶ್ವತವಾದುದೇ? ಹಾಗಲ್ಲದಿದ್ದರೆ ಕರ್ಮಫಲಗಳು ಮುಗಿದ ನಂತರ ಆ ನರರ್ಷಭರು ಯಾವ ಗತಿಯನ್ನು ಹೊಂದಿದರು? ದ್ವಿಜ! ಇದನ್ನು ಕೇಳಲು ಬಯಸುತ್ತಿದ್ದೇನಾದುದರಿಂದ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ!”

18005006 ಸೂತ ಉವಾಚ|

18005006a ಇತ್ಯುಕ್ತಃ ಸ ತು ವಿಪ್ರರ್ಷಿರನುಜ್ಞಾತೋ ಮಹಾತ್ಮನಾ|

18005006c ವ್ಯಾಸೇನ ತಸ್ಯ ನೃಪತೇರಾಖ್ಯಾತುಮುಪಚಕ್ರಮೇ||

ಸೂತನು ಹೇಳಿದನು: “ಅವನು ಹೀಗೆ ಕೇಳಲು ವಿಪ್ರರ್ಷಿ ವೈಶಂಪಾಯನನು ಮಹಾತ್ಮ ವ್ಯಾಸನ ಅನುಮತಿಯನ್ನು ಪಡೆದು ನೃಪತಿ ಜನಮೇಜಯನಿಗೆ ಹೇಳಲು ತೊಡಗಿದನು:

18005007 ವೈಶಂಪಾಯನ ಉವಾಚ|

18005007a ಗಂತವ್ಯಂ ಕರ್ಮಣಾಮಂತೇ ಸರ್ವೇಣ ಮನುಜಾಧಿಪ|

18005007c ಶೃಣು ಗುಹ್ಯಮಿದಂ ರಾಜನ್ದೇವಾನಾಂ ಭರತರ್ಷಭ|

18005007e ಯದುವಾಚ ಮಹಾತೇಜಾ ದಿವ್ಯಚಕ್ಷುಃ ಪ್ರತಾಪವಾನ್||

18005008a ಮುನಿಃ ಪುರಾಣಃ ಕೌರವ್ಯ ಪಾರಾಶರ್ಯೋ ಮಹಾವ್ರತಃ|

18005008c ಅಗಾಧಬುದ್ಧಿಃ ಸರ್ವಜ್ಞೋ ಗತಿಜ್ಞಃ ಸರ್ವಕರ್ಮಣಾಮ್||

ವೈಶಂಪಾಯನನು ಹೇಳಿದನು: “ಮನುಜಾಧಿಪ! ಎಲ್ಲರ ಕರ್ಮಗಳೂ ಅಂತ್ಯವಾಗುವವೇ! ರಾಜನ್! ಭರತರ್ಷಭ! ದೇವತೆಗಳ ಈ ರಹಸ್ಯವನ್ನು ಕೇಳು. ಕೌರವ್ಯ! ಮಹಾತೇಜಸ್ವಿ, ದಿವ್ಯಚಕ್ಷುಷಿ, ಪ್ರತಾಪವಾನ್, ಮುನಿ, ಪುರಾಣ, ಮಹಾವ್ರತ, ಅಗಾಧಬುದ್ಧಿ, ಸರ್ವಜ್ಞ, ಸರ್ವಕರ್ಮಗಳ ಮಾರ್ಗವನ್ನು ತಿಳಿದ ಪಾರಶರ್ಯ ವ್ಯಾಸನು ಇದರ ಕುರಿತು ಹೇಳಿದ್ದನು.

18005009a ವಸೂನೇವ ಮಹಾತೇಜಾ ಭೀಷ್ಮಃ ಪ್ರಾಪ ಮಹಾದ್ಯುತಿಃ|

18005009c ಅಷ್ಟಾವೇವ ಹಿ ದೃಶ್ಯಂತೇ ವಸವೋ ಭರತರ್ಷಭ||

ಭರತರ್ಷಭ! ಮಹಾದ್ಯುತಿ ಭೀಷ್ಮನು ವಸುವಿನ ಮಹಾತೇಜಸ್ಸನ್ನೇ ಪಡೆದನು. ಆದುದರಿಂದ ಈಗ ಎಂಟು ವಸುಗಳು ಕಾಣುತ್ತವೆ.

18005010a ಬೃಹಸ್ಪತಿಂ ವಿವೇಶಾಥ ದ್ರೋಣೋ ಹ್ಯಂಗಿರಸಾಂ ವರಮ್|

18005010c ಕೃತವರ್ಮಾ ತು ಹಾರ್ದಿಕ್ಯಃ ಪ್ರವಿವೇಶ ಮರುದ್ಗಣಮ್||

ದ್ರೋಣನು ಅಂಗಿರಸರಲ್ಲಿ ಶ್ರೇಷ್ಠ ಬೃಹಸ್ಪತಿಯನ್ನು ಪ್ರವೇಶಿಸಿದನು. ಹಾರ್ದಿಕ್ಯ ಕೃತವರ್ಮನು ಮರುದ್ಗಣಗಳನ್ನು ಸೇರಿದನು.

18005011a ಸನತ್ಕುಮಾರಂ ಪ್ರದ್ಯುಮ್ನಃ ಪ್ರವಿವೇಶ ಯಥಾಗತಮ್|

18005011c ಧೃತರಾಷ್ಟ್ರೋ ಧನೇಶಸ್ಯ ಲೋಕಾನ್ಪ್ರಾಪ ದುರಾಸದಾನ್||

ಪ್ರದ್ಯುಮ್ನನು ಎಲ್ಲಿಂದ ಬಂದಿದ್ದನೋ ಆ ಸನತ್ಕುಮಾರನನ್ನು ಪ್ರವೇಶಿಸಿದನು. ಧೃತರಾಷ್ಟ್ರನು ಧನೇಶ ಕುಬೇರನ ದುರಾಸದ ಲೋಕವನ್ನು ಪಡೆದನು.

18005012a ಧೃತರಾಷ್ಟ್ರೇಣ ಸಹಿತಾ ಗಾಂಧಾರೀ ಚ ಯಶಸ್ವಿನೀ|

18005012c ಪತ್ನೀಭ್ಯಾಂ ಸಹಿತಃ ಪಾಂಡುರ್ಮಹೇಂದ್ರಸದನಂ ಯಯೌ||

ಧೃತರಾಷ್ಟ್ರನೊಂದಿಗೆ ಯಶಸ್ವಿನೀ ಗಾಂಧಾರಿಯೂ ಹೋದಳು. ಇಬ್ಬರು ಪತ್ನಿಯರೊಂದಿಗೆ ಪಾಂಡುವು ಮಹೇಂದ್ರನ ಸದನಕ್ಕೆ ಹೋದನು.

18005013a ವಿರಾಟದ್ರುಪದೌ ಚೋಭೌ ಧೃಷ್ಟಕೇತುಶ್ಚ ಪಾರ್ಥಿವಃ|

18005013c ನಿಶಠಾಕ್ರೂರಸಾಂಬಾಶ್ಚ ಭಾನುಃ ಕಂಪೋ ವಿಡೂರಥಃ||

18005014a ಭೂರಿಶ್ರವಾಃ ಶಲಶ್ಚೈವ ಭೂರಿಶ್ಚ ಪೃಥಿವೀಪತಿಃ|

18005014c ಉಗ್ರಸೇನಸ್ತಥಾ ಕಂಸೋ ವಸುದೇವಶ್ಚ ವೀರ್ಯವಾನ್||

18005015a ಉತ್ತರಶ್ಚ ಸಹ ಭ್ರಾತ್ರಾ ಶಂಖೇನ ನರಪುಂಗವಃ|

18005015c ವಿಶ್ವೇಷಾಂ ದೇವತಾನಾಂ ತೇ ವಿವಿಶುರ್ನರಸತ್ತಮಾಃ||

ವಿರಾಟ-ದ್ರುಪದರು, ಪಾರ್ಥಿವ ಧೃಷ್ಟಕೇತು, ನಿಶಠ, ಅಕ್ರೂರ, ಸಾಂಬ, ಭಾನು, ಕಂಪ, ವಿಡೂರಥ, ಭೂರಿಶ್ರವ, ಶಲ, ಪೃಥಿವೀಪತಿ ಭೂರಿ, ಉಗ್ರಸೇನ, ಕಂಸ, ವೀರ್ಯವಾನ್ ವಸುದೇವ, ಉತ್ತರ, ಜೊತೆಗೆ ಅವನ ಸಹೋದರ ನರಪುಂಗವ ಶಂಖ ಈ ನರಸತ್ತಮರು ವಿಶ್ವೇ ದೇವತೆಗಳನ್ನು ಪ್ರವೇಶಿಸಿದರು.

18005016a ವರ್ಚಾ ನಾಮ ಮಹಾತೇಜಾಃ ಸೋಮಪುತ್ರಃ ಪ್ರತಾಪವಾನ್|

18005016c ಸೋಽಭಿಮನ್ಯುರ್ನೃಸಿಂಹಸ್ಯ ಫಲ್ಗುನಸ್ಯ ಸುತೋಽಭವತ್||

ವರ್ಚಾ ಎಂಬ ಹೆಸರಿನ ಮಹಾತೇಜಸ್ವೀ ಪ್ರತಾಪವಾನ್ ಸೋಮಪುತ್ರನು ನರಸಿಂಹ ಫಲ್ಗುನನ ಮಗ ಅಭಿಮನ್ಯುವಾಗಿದ್ದನು.

18005017a ಸ ಯುದ್ಧ್ವಾ ಕ್ಷತ್ರಧರ್ಮೇಣ ಯಥಾ ನಾನ್ಯಃ ಪುಮಾನ್ಕ್ವ ಚಿತ್|

18005017c ವಿವೇಶ ಸೋಮಂ ಧರ್ಮಾತ್ಮಾ ಕರ್ಮಣೋಽಂತೇ ಮಹಾರಥಃ||

ಬೇರಾವ ಪುರುಷನೂ ಮಾಡಿರದಂಥಹ ಯುದ್ಧವನ್ನು ಕ್ಷತ್ರಧರ್ಮದಂತೆ ಮಾಡಿ ಆ ಧರ್ಮಾತ್ಮ ಮಹಾರಥನು ಕರ್ಮಫಲಗಳು ಅಂತ್ಯವಾಗಲು ಸೋಮನನ್ನು ಪ್ರವೇಶಿಸಿದನು.

18005018a ಆವಿವೇಶ ರವಿಂ ಕರ್ಣಃ ಪಿತರಂ ಪುರುಷರ್ಷಭ|

18005018c ದ್ವಾಪರಂ ಶಕುನಿಃ ಪ್ರಾಪ ಧೃಷ್ಟದ್ಯುಮ್ನಸ್ತು ಪಾವಕಮ್||

ಪುರುಷರ್ಷಭ! ಕರ್ಣನು ತಂದೆ ರವಿಯನ್ನು ಪ್ರವೇಶಿಸಿದನು. ಶಕುನಿಯು ದ್ವಾಪರನನ್ನೂ ಧೃಷ್ಟದ್ಯುಮ್ನನು ಅಗ್ನಿಯನ್ನೂ ಪ್ರವೇಶಿಸಿದರು.

18005019a ಧೃತರಾಷ್ಟ್ರಾತ್ಮಜಾಃ ಸರ್ವೇ ಯಾತುಧಾನಾ ಬಲೋತ್ಕಟಾಃ|

18005019c ಋದ್ಧಿಮಂತೋ ಮಹಾತ್ಮಾನಃ ಶಸ್ತ್ರಪೂತಾ ದಿವಂ ಗತಾಃ|

18005019e ಧರ್ಮಮೇವಾವಿಶತ್ಕ್ಷತ್ತಾ ರಾಜಾ ಚೈವ ಯುಧಿಷ್ಠಿರಃ||

ಧೃತರಾಷ್ಟ್ರನ ಮಕ್ಕಳೆಲ್ಲರೂ ಬಲೋತ್ಕಟ ದುಷ್ಟ ರಾಕ್ಷಸರಾಗಿದ್ದರು. ಈಗ ಶಸ್ತ್ರಗಳಿಂದ ಪೂತರೂ, ಮಹಾತ್ಮರೂ, ಉತ್ತಮರೂ ಆಗಿ ಅವರು ಸ್ವರ್ಗಕ್ಕೆ ತೆರಳಿದರು.

18005020a ಅನಂತೋ ಭಗವಾನ್ದೇವಃ ಪ್ರವಿವೇಶ ರಸಾತಲಮ್|

18005020c ಪಿತಾಮಹನಿಯೋಗಾದ್ಧಿ ಯೋ ಯೋಗಾದ್ಗಾಮಧಾರಯತ್||

ಭಗವಾನ್ ಅನಂತ ದೇವನು ಪಿತಾಮಹನ ನಿಯೋಗದಂತೆ ತನ್ನ ಯೋಗದಿಂದ ಭೂಮಿಯನ್ನು ಹೊರಲು ರಸಾತಲವನ್ನು ಪ್ರವೇಶಿಸಿದನು.

18005021a ಷೋಡಶಸ್ತ್ರೀಸಹಸ್ರಾಣಿ ವಾಸುದೇವಪರಿಗ್ರಹಃ|

18005021c ನ್ಯಮಜ್ಜಂತ ಸರಸ್ವತ್ಯಾಂ ಕಾಲೇನ ಜನಮೇಜಯ|

18005021e ತಾಶ್ಚಾಪ್ಯಪ್ಸರಸೋ ಭೂತ್ವಾ ವಾಸುದೇವಮುಪಾಗಮನ್||

ಜನಮೇಜಯ! ವಾಸುದೇವನು ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಸರಸ್ವತಿಯಲ್ಲಿ ಮುಳುಗಿ ಕಾಲಾಂತರದಲ್ಲಿ ಅಪ್ಸರೆಯರಾಗಿ ವಾಸುದೇವನ ಬಳಿಸೇರಿದರು.

18005022a ಹತಾಸ್ತಸ್ಮಿನ್ಮಹಾಯುದ್ಧೇ ಯೇ ವೀರಾಸ್ತು ಮಹಾರಥಾಃ|

18005022c ಘಟೋತ್ಕಚಾದಯಃ ಸರ್ವೇ ದೇವಾನ್ಯಕ್ಷಾಂಶ್ಚ ಭೇಜಿರೇ||

ಆ ಮಹಾಯುದ್ಧದಲ್ಲಿ ಹತರಾದ ಘಟೋತ್ಕಚನೇ ಮೊದಲಾದ ಮಹಾರಥ ವೀರರೆಲ್ಲರೂ ದೇವತೆಗಳೂ ಯಕ್ಷರೂ ಆದರು.

18005023a ದುರ್ಯೋಧನಸಹಾಯಾಶ್ಚ ರಾಕ್ಷಸಾಃ ಪರಿಕೀರ್ತಿತಾಃ|

18005023c ಪ್ರಾಪ್ತಾಸ್ತೇ ಕ್ರಮಶೋ ರಾಜನ್ಸರ್ವಲೋಕಾನನುತ್ತಮಾನ್||

18005024a ಭವನಂ ಚ ಮಹೇಂದ್ರಸ್ಯ ಕುಬೇರಸ್ಯ ಚ ಧೀಮತಃ|

18005024c ವರುಣಸ್ಯ ತಥಾ ಲೋಕಾನ್ವಿವಿಶುಃ ಪುರುಷರ್ಷಭಾಃ||

ದುರ್ಯೋಧನನ ಸಹಾಯಕರಾಗಿದ್ದ ಆ ಪುರುಷರ್ಷಭರು ರಾಕ್ಷಸರಾಗಿದ್ದರೆಂದು ಹೇಳುತ್ತಾರೆ. ರಾಜನ್! ಅವರೆಲ್ಲರೂ ಕೂಡ ಕ್ರಮೇಣವಾಗಿ ಉತ್ತಮ ಲೋಕಗಳನ್ನು ಪಡೆದು ಮಹೇಂದ್ರ, ಧೀಮಂತ ಕುಬೇರ ಮತ್ತು ವರುಣನ ಭವನ-ಲೋಕಗಳನ್ನು ಪ್ರವೇಶಿಸಿದರು.

18005025a ಏತತ್ತೇ ಸರ್ವಮಾಖ್ಯಾತಂ ವಿಸ್ತರೇಣ ಮಹಾದ್ಯುತೇ|

18005025c ಕುರೂಣಾಂ ಚರಿತಂ ಕೃತ್ಸ್ನಂ ಪಾಂಡವಾನಾಂ ಚ ಭಾರತ||

ಮಹಾದ್ಯುತೇ! ಭಾರತ! ಇದೂವರೆಗೆ ಕುರುಗಳ ಮತ್ತು ಪಾಂಡವರ ಸಮಗ್ರ ಚರಿತ್ರೆಯನ್ನು ವಿಸ್ತಾರವಾಗಿ ಎಲ್ಲವನ್ನೂ ಹೇಳಿದ್ದಾಯಿತು!”

18005026 ಸೂತ ಉವಾಚ|

18005026a ಏತಚ್ಛೃತ್ವಾ ದ್ವಿಜಶ್ರೇಷ್ಠಾತ್ಸ ರಾಜಾ ಜನಮೇಜಯಃ|

18005026c ವಿಸ್ಮಿತೋಽಭವದತ್ಯರ್ಥಂ ಯಜ್ಞಕರ್ಮಾಂತರೇಷ್ವಥ||

ಸೂತನು ಹೇಳಿದನು: “ಸರ್ಪಯಜ್ಞದ ಕರ್ಮಗಳ ಮಧ್ಯೆ ದ್ವಿಜಶ್ರೇಷ್ಠ ವೈಶಂಪಾಯನನಿಂದ ಇದನ್ನು ಕೇಳಿದ ರಾಜಾ ಜನಮೇಜಯನು ಬಹಳ ವಿಸ್ಮಿತನಾದನು.

18005027a ತತಃ ಸಮಾಪಯಾಮಾಸುಃ ಕರ್ಮ ತತ್ತಸ್ಯ ಯಾಜಕಾಃ|

18005027c ಆಸ್ತೀಕಶ್ಚಾಭವತ್ಪ್ರೀತಃ ಪರಿಮೋಕ್ಷ್ಯ ಭುಜಂಗಮಾನ್||

ಅನಂತರ ಯಾಜಕರು ಅವನ ಆ ಕರ್ಮವನ್ನು ಮಾಡಿ ಪೂರೈಸಿದರು. ಸರ್ಪಗಳನ್ನು ಉಳಿಸಿ ಆಸ್ತೀಕನೂ ಪ್ರೀತನಾದನು.

18005028a ತತೋ ದ್ವಿಜಾತೀನ್ಸರ್ವಾಂಸ್ತಾನ್ದಕ್ಷಿಣಾಭಿರತೋಷಯತ್|

18005028c ಪೂಜಿತಾಶ್ಚಾಪಿ ತೇ ರಾಜ್ಞಾ ತತೋ ಜಗ್ಮುರ್ಯಥಾಗತಮ್||

ಆಗ ಅವನು ಅಲ್ಲಿದ್ದ ಸರ್ವ ದ್ವಿಜಾತಿಯವರಿಗೆ ದಕ್ಷಿಣೆಗಳಿಂದ ತೃಪ್ತಿಗೊಳಿಸಿದನು. ರಾಜನಿಂದ ಪೂಜಿತರಾದ ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.

18005029a ವಿಸರ್ಜಯಿತ್ವಾ ವಿಪ್ರಾಂಸ್ತಾನ್ರಾಜಾಪಿ ಜನಮೇಜಯಃ|

18005029c ತತಸ್ತಕ್ಷಶಿಲಾಯಾಃ ಸ ಪುನರಾಯಾದ್ಗಜಾಹ್ವಯಮ್||

ಆ ವಿಪ್ರರನ್ನು ಬೀಳ್ಕೊಟ್ಟು ರಾಜಾ ಜನಮೇಜಯನೂ ಕೂಡ ತಕ್ಷಶಿಲೆಯಿಂದ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದನು.

18005030a ಏತತ್ತೇ ಸರ್ವಮಾಖ್ಯಾತಂ ವೈಶಂಪಾಯನಕೀರ್ತಿತಮ್|

18005030c ವ್ಯಾಸಾಜ್ಞಯಾ ಸಮಾಖ್ಯಾತಂ ಸರ್ಪಸತ್ರೇ ನೃಪಸ್ಯ ಹ||

ಇದೂವರೆಗೆ ನಾನು ನೃಪನ ಸರ್ಪಸತ್ರದಲ್ಲಿ ವ್ಯಾಸನ ಆಜ್ಞೆಯಂತೆ ವೈಶಂಪಾಯನನು ಹೇಳಿದ್ದ ಎಲ್ಲವನ್ನೂ ನಿಮಗೆ ಹೇಳಿದ್ದಾಯಿತು.

18005031a ಪುಣ್ಯೋಽಯಮಿತಿಹಾಸಾಖ್ಯಃ ಪವಿತ್ರಂ ಚೇದಮುತ್ತಮಮ್|

18005031c ಕೃಷ್ಣೇನ ಮುನಿನಾ ವಿಪ್ರ ನಿಯತಂ ಸತ್ಯವಾದಿನಾ||

18005032a ಸರ್ವಜ್ಞೇನ ವಿಧಿಜ್ಞೇನ ಧರ್ಮಜ್ಞಾನವತಾ ಸತಾ|

18005032c ಅತೀಂದ್ರಿಯೇಣ ಶುಚಿನಾ ತಪಸಾ ಭಾವಿತಾತ್ಮನಾ||

ವಿಪ್ರ! ಇತಿಹಾಸವೆಂದು ಕರೆಯಲ್ಪಡುವ ಈ ಪುಣ್ಯ ಉತ್ತಮ ಕೃತಿಯನ್ನು ನಿಯತನೂ ಸತ್ಯವಾದಿಯೂ ಆದ ಸರ್ವಜ್ಞ, ವಿಧಿಜ್ಞ, ಧರ್ಮಜ್ಞ, ಸಾಧು, ಅತೀಂದ್ರಿಯ, ಶುಚಿ, ತಪಸ್ವಿ, ಭಾವಿತಾತ್ಮ, ಮುನಿ ಕೃಷ್ಣನು ರಚಿಸಿದನು.

18005033a ಐಶ್ವರ್ಯೇ ವರ್ತತಾ ಚೈವ ಸಾಂಖ್ಯಯೋಗವಿದಾ ತಥಾ|

18005033c ನೈಕತಂತ್ರವಿಬುದ್ಧೇನ ದೃಷ್ಟ್ವಾ ದಿವ್ಯೇನ ಚಕ್ಷುಷಾ||

18005034a ಕೀರ್ತಿಂ ಪ್ರಥಯತಾ ಲೋಕೇ ಪಾಂಡವಾನಾಂ ಮಹಾತ್ಮನಾಮ್|

18005034c ಅನ್ಯೇಷಾಂ ಕ್ಷತ್ರಿಯಾಣಾಂ ಚ ಭೂರಿದ್ರವಿಣತೇಜಸಾಮ್||

ಆ ಸಿದ್ಧೈಶ್ವರ್ಯಗಳಿಂದ ಕೂಡಿದ, ಸಾಂಖ್ಯಯೋಗದ ಜ್ಞಾನಿ, ಅನೇಕತಂತ್ರಗಳ ಜ್ಞಾನಿಯು ಲೋಕದಲ್ಲಿ ಮಹಾತ್ಮ ಪಾಂಡವರ ಮತ್ತು ಭೂರಿದ್ರವಿಣ ತೇಜಸ್ವೀ ಅನ್ಯ ಕ್ಷತ್ರಿಯರ ಕೀರ್ತಿಯನ್ನು ಪ್ರಥಿತಗೊಳಿಸಿದನು.

18005035a ಯ ಇದಂ ಶ್ರಾವಯೇದ್ವಿದ್ವಾನ್ಸದಾ ಪರ್ವಣಿ ಪರ್ವಣಿ|

18005035c ಧೂತಪಾಪ್ಮಾ ಜಿತಸ್ವರ್ಗೋ ಬ್ರಹ್ಮಭೂಯಾಯ ಗಚ್ಚತಿ||

ಇದನ್ನು ಸದಾ ಪರ್ವ-ಪರ್ವಗಳಲ್ಲಿ ಹೇಳುವ ವಿದ್ವಾಂಸನು ಪಾಪಗಳನ್ನು ತೊಳೆದು ಪೂತಾತ್ಮನಾಗಿ ಸ್ವರ್ಗವನ್ನು ಪಡೆದು ನಂತರ ಬ್ರಹ್ಮನನ್ನು ಸೇರುತ್ತಾನೆ.

18005036a ಯಶ್ಚೇದಂ ಶ್ರಾವಯೇಚ್ಚ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ|

18005036c ಅಕ್ಷಯ್ಯಮನ್ನಪಾನಂ ವೈ ಪಿತೄಂಸ್ತಸ್ಯೋಪತಿಷ್ಠತೇ||

ಶ್ರಾದ್ಧದಲ್ಲಿ ಇದನ್ನು, ಅಥವಾ ಕೊನೆಯದಾಗಿ ಶ್ಲೋಕದ ಕಾಲುಭಾಗವನ್ನಾದರೂ ಬ್ರಾಹ್ಮಣರಿಗೆ ಹೇಳಿ ಕೇಳಿಸಿದರೆ ನೀಡಿದ ಅನ್ನಪಾನಗಳು ಅಕ್ಷಯವಾಗಿ ಪಿತೃಗಳನ್ನು ಸೇರುತ್ತವೆ.

18005037a ಅಹ್ನಾ ಯದೇನಃ ಕುರುತೇ ಇಂದ್ರಿಯೈರ್ಮನಸಾಪಿ ವಾ|

18005037c ಮಹಾಭಾರತಮಾಖ್ಯಾಯ ಪಶ್ಚಾತ್ಸಂಧ್ಯಾಂ ಪ್ರಮುಚ್ಯತೇ||

ಸಾಯಂಕಾಲ ಈ ಮಹಾಭಾರತವನ್ನು ಹೇಳಿದರೆ ಹಗಲಿನಲ್ಲಿ ಮಾಡಿದ ಮಾನಸಿಕ ಅಥವಾ ಇಂದ್ರಿಯಗಳಿಂದ ಮಾಡಿದ ಪಾಪಗಳಿಂದ ಮುಕ್ತನಾಗುತ್ತಾನೆ.

18005038a ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ|

18005038c ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವ ಚಿತ್||

ಭರತರ್ಷಭ! ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿರುವವು ಬೇರೆಕಡೆಯೂ ಇವೆ. ಆದರೆ ಇಲ್ಲಿ ಇಲ್ಲದೇ ಇರುವುದು ಬೇರೆಲ್ಲಿಯೂ ಇಲ್ಲ.

18005039a ಜಯೋ ನಾಮೇತಿಹಾಸೋಽಯಂ ಶ್ರೋತವ್ಯೋ ಭೂತಿಮಿಚ್ಚತಾ|

18005039c ರಾಜ್ಞಾ ರಾಜಸುತೈಶ್ಚಾಪಿ ಗರ್ಭಿಣ್ಯಾ ಚೈವ ಯೋಷಿತಾ||

ವೃದ್ಧಿಯನ್ನು ಬಯಸುವ ರಾಜರೂ, ರಾಜಸುತರೂ, ಗರ್ಭಿಣಿ ಸ್ತ್ರೀಯರೂ ಜಯವೆಂಬ ಹೆಸರಿನ ಈ ಇತಿಹಾಸವನ್ನು ಕೇಳಬೇಕು.

18005040a ಸ್ವರ್ಗಕಾಮೋ ಲಭೇತ್ಸ್ವರ್ಗಂ ಜಯಕಾಮೋ ಲಭೇಜ್ಜಯಮ್|

18005040c ಗರ್ಭಿಣೀ ಲಭತೇ ಪುತ್ರಂ ಕನ್ಯಾಂ ವಾ ಬಹುಭಾಗಿನೀಮ್||

ಸ್ವರ್ಗವನ್ನು ಬಯಸಿದವರಿಗೆ ಸ್ವರ್ಗವು ದೊರಕುತ್ತದೆ. ಜಯವನ್ನು ಬಯಸಿದವರಿಗೆ ಜಯವು ಲಭಿಸುತ್ತದೆ. ಗರ್ಭಿಣಿಯರಿಗೆ ಪುತ್ರನಾಗಲೀ ಅಥವಾ ಬಹುಭಾಗ್ಯವಂತ ಕನ್ಯೆಯರಾಗಲೀ ದೊರೆಯುತ್ತಾರೆ.

18005041a ಅನಾಗತಂ ತ್ರಿಭಿರ್ವರ್ಷೈಃ ಕೃಷ್ಣದ್ವೈಪಾಯನಃ ಪ್ರಭುಃ|

18005041c ಸಂದರ್ಭಂ ಭಾರತಸ್ಯಾಸ್ಯ ಕೃತವಾನ್ಧರ್ಮಕಾಮ್ಯಯಾ||

ಧರ್ಮದ ಕಾಮನೆಯಿಂದಾಗಿ ಪ್ರಭು ಕೃಷ್ಣದ್ವೈಪಾಯನನು ಮೊದಲು ಇರದಿದ್ದ ಈ ಭಾರತವನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ರಚಿಸಿದನು.

18005042a ನಾರದೋಽಶ್ರಾವಯದ್ದೇವಾನಸಿತೋ ದೇವಲಃ ಪಿತೄನ್|

18005042c ರಕ್ಷೋ ಯಕ್ಷಾನ್ಶುಕೋ ಮರ್ತ್ಯಾನ್ವೈಶಂಪಾಯನ ಏವ ತು||

ಅನಂತರ ನಾರದನು ಇದನ್ನು ದೇವತೆಗಳಿಗೆ, ಅಸಿತ ದೇವಲನು ಪಿತೃಗಳಿಗೆ, ಶುಕನು ಯಕ್ಷ-ರಾಕ್ಷಸರಿಗೆ ಮತ್ತು ವೈಶಂಪಾಯನನು ಮನುಷ್ಯರಿಗೆ ಹೇಳಿದರು.

18005043a ಇತಿಹಾಸಮಿಮಂ ಪುಣ್ಯಂ ಮಹಾರ್ಥಂ ವೇದಸಂಮಿತಮ್|

18005043c ಶ್ರಾವಯೇದ್ಯಸ್ತು ವರ್ಣಾಂಸ್ತ್ರೀನ್ಕೃತ್ವಾ ಬ್ರಾಹ್ಮಣಮಗ್ರತಃ||

18005044a ಸ ನರಃ ಪಾಪನಿರ್ಮುಕ್ತಃ ಕೀರ್ತಿಂ ಪ್ರಾಪ್ಯೇಹ ಶೌನಕ|

18005044c ಗಚ್ಚೇತ್ಪರಮಿಕಾಂ ಸಿದ್ಧಿಮತ್ರ ಮೇ ನಾಸ್ತಿ ಸಂಶಯಃ||

ಮಹಾ ಅರ್ಥವುಳ್ಳ ವೇದಸಮ್ಮಿತವಾದ ಈ ಪುಣ್ಯ ಇತಿಹಾಸವನ್ನು ಬ್ರಾಹ್ಮಣರೇ ಮೊದಲಾದ ಮೂರು ವರ್ಣದವರಿಗೆ ಹೇಳಬೇಕು. ಶೌನಕ! ಅಂಥಹ ಮನುಷ್ಯನು ಪಾಪದಿಂದ ಮುಕ್ತನಾಗಿ ಕೀರ್ತಿಯನ್ನು ಪಡೆಯುತ್ತಾನಲ್ಲದೇ ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

18005045a ಭಾರತಾಧ್ಯಯನಾತ್ಪುಣ್ಯಾದಪಿ ಪಾದಮಧೀಯತಃ|

18005045c ಶ್ರದ್ಧಧಾನಸ್ಯ ಪೂಯಂತೇ ಸರ್ವಪಾಪಾನ್ಯಶೇಷತಃ||              

ಶ್ರದ್ಧಾವಂತನಾಗಿ ಭಾರತದ ಶ್ಲೋಕದ ಕಾಲುಭಾಗವನ್ನಾದರೂ ಅಧ್ಯಯನ ಮಾಡಿ ಅರ್ಥಮಾಡಿಕೊಂಡರೆ ಆ ಪುಣ್ಯವು ಅವನ ಸರ್ವ ಪಾಪಗಳೂ ಉಳಿಯದಂತೆ ತೊಳೆದು ಶುದ್ಧೀಕರಿಸುತ್ತದೆ.

18005046a ಮಹರ್ಷಿರ್ಭಗವಾನ್ವ್ಯಾಸಃ ಕೃತ್ವೇಮಾಂ ಸಂಹಿತಾಂ ಪುರಾ|

18005046c ಶ್ಲೋಕೈಶ್ಚತುರ್ಭಿರ್ಭಗವಾನ್ಪುತ್ರಮಧ್ಯಾಪಯಚ್ಚುಕಮ್||

ಹಿಂದೆ ಮಹರ್ಷಿ ಭಗವಾನ್ ವ್ಯಾಸನು ಈ ಕೃತಿಯನ್ನು ಈ ನಾಲ್ಕು ಶ್ಲೋಕಗಳೊಂದಿಗೆ ತನ್ನ ಮಗ ಭಗವಾನ್ ಶುಕನಿಗೆ ಕಲಿಸಿದ್ದನು:

18005047a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ|

18005047c ಸಂಸಾರೇಷ್ವನುಭೂತಾನಿ ಯಾಂತಿ ಯಾಸ್ಯಂತಿ ಚಾಪರೇ||

“ಈ ಸಂಸಾರದಲ್ಲಿ ಸಹಸ್ರಾರು ಮಾತಾಪಿತೃಗಳೂ, ನೂರಾರು ಪತ್ನಿ-ಪುತ್ರರೂ ಆಗಿಹೋಗಿದ್ದಾರೆ ಮತ್ತು ಮುಂದೆ ಕೂಡ ಆಗುತ್ತಾರೆ.

18005048a ಹರ್ಷಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ|

18005048c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್||

ಸಹಸ್ರಾರು ಹರ್ಷವನ್ನು ಕೊಡುವ ಮತ್ತು ನೂರಾರು ಭಯವನ್ನು ಕೊಡುವ ಸಂದರ್ಭಗಳು ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ.

18005049a ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಚೃಣೋತಿ ಮೇ|

18005049c ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ||

ಬಾಹುಗಳನ್ನು ಮೇಲೆತ್ತಿ ಹೀಗೆ ಕೂಗಿಕೊಳ್ಳುತ್ತಿರುವ ನನ್ನನ್ನು ಯಾರೂ ಕೇಳುತ್ತಿಲ್ಲ: “ಅರ್ಥ-ಕಾಮಗಳು ಧರ್ಮದಿಂದಲೇ ದೊರೆಯುತ್ತವೆ. ಆದರೂ ಧರ್ಮದಿಂದ ಏಕೆ ನಡೆದುಕೊಳ್ಳಬಾರದು?”

18005050a ನ ಜಾತು ಕಾಮಾನ್ನ ಭಯಾನ್ನ ಲೋಭಾ

ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋಃ|

18005050c ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ

ಜೀವೋ ನಿತ್ಯೋ ಹೇತುರಸ್ಯಃ ತ್ವನಿತ್ಯಃ||

ಕಾಮಕ್ಕಾಗಲೀ, ಭಯದಿಂದಾಗಲೀ, ಲೋಭದಿಂದಾಗಲೀ, ಜೀವವನ್ನು ಉಳಿಸಿಕೊಳ್ಳಲಿಕ್ಕೂ ಕೂಡ ಧರ್ಮವನ್ನು ತ್ಯಜಿಸಬಾರದು. ಧರ್ಮವು ಯಾವಾಗಲೂ ಇರುವಂಥಹುದು; ಸುಖ-ದುಃಖಗಳು ಯಾವಾಗಲೂ ಇರುವಂಥವುಗಳಲ್ಲ. ಜೀವವು ನಿತ್ಯ; ಯಾವುದರ ಮೂಲಕ ಅದು ಜೀವಿಸುತ್ತದೆಯೋ ಆ ದೇಹವು ಅನಿತ್ಯವಾದುದು.”

18005051a ಇಮಾಂ ಭಾರತ ಸಾವಿತ್ರೀಂ ಪ್ರಾತರುತ್ಥಾಯ ಯಃ ಪಠೇತ್|

18005051c ಸ ಭಾರತಫಲಂ ಪ್ರಾಪ್ಯ ಪರಂ ಬ್ರಹ್ಮಾಧಿಗಚ್ಛತಿ||

ಬೆಳಿಗ್ಗೆ ಎದ್ದು ಈ ಭಾರತ ಸಾವಿತ್ರಿಯನ್ನು ಯಾರು ಓದುತ್ತಾರೋ ಅವರು ಸಂಪೂರ್ಣ ಭಾರತವನ್ನು ಓದಿದುರ ಫಲವನ್ನು ಪಡೆದು ಪರಬ್ರಹ್ಮನನ್ನು ಸೇರುತ್ತಾರೆ.

18005052a ಯಥಾ ಸಮುದ್ರೋ ಭಗವಾನ್ಯಥಾ ಚ ಹಿಮವಾನ್ಗಿರಿಃ|

18005052c ಖ್ಯಾತಾವುಭೌ ರತ್ನನಿಧೀ ತಥಾ ಭಾರತಮುಚ್ಯತೇ||

ಭಗವಾನ್ ಸಮುದ್ರ ಮತ್ತು ಹಿಮವಾನ್ ಗಿರಿಗಳೆರಡನ್ನೂ ಹೇಗೆ ರತ್ನನಿಧಿಗಳೆಂದು ಹೇಳುತ್ತಾರೆಯೋ ಹಾಗೆ ಭಾರತವನ್ನೂ ರತ್ನನಿಧಿಯೆಂದು ಹೇಳುತ್ತಾರೆ.

18005053a ಮಹಾಭಾರತಮಾಖ್ಯಾನಂ ಯಃಪಠೇತ್ಸುಸಮಾಹಿತಃ|

18005053c ಸ ಗಚ್ಛೇತ್ಪರಮಾಂ ಸಿದ್ಧಿಮಿತಿ ಮೇ ನಾಸ್ತಿ ಸಂಶಯಃ||

ಮಹಾಭಾರತವನ್ನು ಸಮಾಹಿತನಾಗಿ ಓದುವವನು ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

18005054a ದ್ವೈಪಾಯನೋಷ್ಠಪುಟನಿಃಸೃತಮಪ್ರಮೇಯಂ

ಪುಣ್ಯಂ ಪವಿತ್ರಮಥ ಪಾಪಹರಂ ಶಿವಂ ಚ|

18005054c ಯೋ ಭಾರತಂ ಸಮಧಿಗಚ್ಛತಿ ವಾಚ್ಯಮಾನಂ

ಕಿಂ ತಸ್ಯ ಪುಷ್ಕರಜಲೈರಭಿಷೇಚನೇನ||

ದ್ವೈಪಾಯನನ ತುಟಿಗಳಿಂದ ಹೊರಬಂದ ಈ ಅಪ್ರಮೇಯ ಕೃತಿಯು ಪುಣ್ಯ, ಪವಿತ್ರ, ಮಂಗಳಕರ ಮತ್ತು ಪಾಪಗಳನ್ನು ಓಡಿಸುತ್ತದೆ. ಇಂಥಹ ಭಾರತವನ್ನು ಓದುವಾಗ ಕೇಳಿದವನು ಪುಷ್ಕರ ತೀರ್ಥದಲ್ಲಿ ಸ್ನಾನಮಾಡುವ ಅವಶ್ಯಕತೆಯಾದರೂ ಏನಿದೆ?”

ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಪಂಚಮೋಽಧ್ಯಾಯಃ ||

ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಐದನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸ್ವರ್ಗಾರೋಹಣಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸ್ವರ್ಗಾರೋಹಣ ಪರ್ವವು|

ಇತಿ ಶ್ರೀ ಮಹಾಭಾರತಃ||

ಇದು ಶ್ರೀ ಮಹಾಭಾರತವು||

ಇದೂವರೆಗಿನ ಒಟ್ಟು ಮಹಾಪರ್ವಗಳು – ೧೮/೧೮, ಉಪಪರ್ವಗಳು-೯೫/೧೦೦, ಅಧ್ಯಾಯಗಳು-೧೬೯೫/೧೯೯೫, ಶ್ಲೋಕಗಳು-೭೩೭೮೪/೭೩೭೮೪

Indian elephant head with bright ... | Stock vector | Colourbox

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

Comments are closed.