Svargarohana Parva: Chapter 3

ಸ್ವರ್ಗಾರೋಹಣ ಪರ್ವ

ಯುಧಿಷ್ಠಿರ ಸ್ವರ್ಗಾರೋಹಣ

ಇಂದ್ರಾದಿ ದೇವತೆಗಳು ಬಂದು ಯುಧಿಷ್ಠಿರನನ್ನು ಸಂಧಿಸಲು ಮೋಸದ ನರಕವು ಮಾಯವಾದುದು; ಇಂದ್ರನ ಮಾತು (೧-೨೭). ಧರ್ಮನ ಮಾತು (೨೮-೩೭). ಯುಧಿಷ್ಠಿರನು ಶರೀರತ್ಯಾಗ ಮಾಡಿ ಸ್ವರ್ಗವನ್ನೇರಿದುದು (೩೮-೪೧). 

18003001 ವೈಶಂಪಾಯನ ಉವಾಚ|

18003001a ಸ್ಥಿತೇ ಮುಹೂರ್ತಂ ಪಾರ್ಥೇ ತು ಧರ್ಮರಾಜೇ ಯುಧಿಷ್ಠಿರೇ|

18003001c ಆಜಗ್ಮುಸ್ತತ್ರ ಕೌರವ್ಯ ದೇವಾಃ ಶಕ್ರಪುರೋಗಮಾಃ||

ವೈಶಂಪಾಯನನು ಹೇಳಿದನು: “ಕೌರವ್ಯ! ಪಾರ್ಥ ಧರ್ಮರಾಜ ಯುಧಿಷ್ಠಿರನು ಅಲ್ಲಿ ಒಂದು ಕ್ಷಣಮಾತ್ರ ನಿಂತಿದ್ದಷ್ಟೇ ಶಕ್ರನನ್ನು ಮುಂದಿರಿಸಿಕೊಂಡ ದೇವತೆಗಳು ಅಲ್ಲಿಗೆ ಆಗಮಿಸಿದರು.

18003002a ಸ್ವಯಂ ವಿಗ್ರಹವಾನ್ಧರ್ಮೋ ರಾಜಾನಂ ಪ್ರಸಮೀಕ್ಷಿತುಮ್|

18003002c ತತ್ರಾಜಗಾಮ ಯತ್ರಾಸೌ ಕುರುರಾಜೋ ಯುಧಿಷ್ಠಿರಃ||

ಸ್ವಯಂ ಧರ್ಮನು ದೇಹಧಾರಿಯಾಗಿ ರಾಜನನ್ನು ನೋಡಲು ಕುರುರಾಜ ಯುಧಿಷ್ಠಿರನು ಎಲ್ಲಿದ್ದನೋ ಅಲ್ಲಿಗೆ ಆಗಮಿಸಿದನು.

18003003a ತೇಷು ಭಾಸ್ವರದೇಹೇಷು ಪುಣ್ಯಾಭಿಜನಕರ್ಮಸು|

18003003c ಸಮಾಗತೇಷು ದೇವೇಷು ವ್ಯಗಮತ್ತತ್ತಮೋ ನೃಪ||

ನೃಪ! ಆ ಪುಣ್ಯ ಜನ್ಮ-ಕರ್ಮಗಳ ದೇವತೆಗಳು ಅಲ್ಲಿಗೆ ಆಗಮಿಸುತ್ತಲೇ ಅವರ ಹೊಳೆಯುತ್ತಿರುವ ದೇಹಗಳಿಂದಾಗಿ ಅಲ್ಲಿದ್ದ ಕತ್ತಲೆಯು ಹೊರಟುಹೋಯಿತು.

18003004a ನಾದೃಶ್ಯಂತ ಚ ತಾಸ್ತತ್ರ ಯಾತನಾಃ ಪಾಪಕರ್ಮಿಣಾಮ್|

18003004c ನದೀ ವೈತರಣೀ ಚೈವ ಕೂಟಶಾಲ್ಮಲಿನಾ ಸಹ||

ಪಾಪಕರ್ಮಿಗಳ ಯಾತನೆಗಳೂ, ವೈತರಣೀ ನದಿಯೂ, ಮುಳ್ಳಿನ ಮರಗಳೂ ಅಲ್ಲಿಂದ ಅದೃಶ್ಯವಾದವು.

18003005a ಲೋಹಕುಂಭ್ಯಃ ಶಿಲಾಶ್ಚೈವ ನಾದೃಶ್ಯಂತ ಭಯಾನಕಾಃ|

18003005c ವಿಕೃತಾನಿ ಶರೀರಾಣಿ ಯಾನಿ ತತ್ರ ಸಮಂತತಃ|

18003005e ದದರ್ಶ ರಾಜಾ ಕೌಂತೇಯಸ್ತಾನ್ಯದೃಶ್ಯಾನಿ ಚಾಭವನ್||

ಅಲ್ಲಿ ಸುತ್ತಲೂ ಇದ್ದಿದ್ದ ಭಯಾನಕ ಲೋಹದ ಕೊಪ್ಪರಿಗೆಗಳೂ, ಭಯಾನಕ ಶಿಲೆಗಳೂ, ವಿಕೃತ ಶರೀರಗಳೂ ದೃಶ್ಯಗಳೂ ಅದೃಶ್ಯವಾದುದನ್ನು ರಾಜಾ ಕೌಂತೇಯನು ನೋಡಿದನು.

18003006a ತತೋ ವಾಯುಃ ಸುಖಸ್ಪರ್ಶಃ ಪುಣ್ಯಗಂಧವಹಃ ಶಿವಃ|

18003006c ವವೌ ದೇವಸಮೀಪಸ್ಥಃ ಶೀತಲೋಽತೀವ ಭಾರತ||

ಭಾರತ! ಕೂಡಲೇ ತಂಪಾದ ಮಂಗಳಕರ ಪುಣ್ಯಸುವಾಸನೆಯುಳ್ಳ ಶೀತಲ ಗಾಳಿಯು ಅಲ್ಲಿ ಬಂದ ದೇವತೆಗಳ ಕಡೆಯಿಂದ ಬೀಸತೊಡಗಿತು.

18003007a ಮರುತಃ ಸಹ ಶಕ್ರೇಣ ವಸವಶ್ಚಾಶ್ವಿನೌ ಸಹ|

18003007c ಸಾಧ್ಯಾ ರುದ್ರಾಸ್ತಥಾದಿತ್ಯಾ ಯೇ ಚಾನ್ಯೇಽಪಿ ದಿವೌಕಸಃ||

18003008a ಸರ್ವೇ ತತ್ರ ಸಮಾಜಗ್ಮುಃ ಸಿದ್ಧಾಶ್ಚ ಪರಮರ್ಷಯಃ|

18003008c ಯತ್ರ ರಾಜಾ ಮಹಾತೇಜಾ ಧರ್ಮಪುತ್ರಃ ಸ್ಥಿತೋಽಭವತ್||

ಮಹಾತೇಜಸ್ವಿ ರಾಜಾ ಧರ್ಮಪುತ್ರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಶಕ್ರನೊಂದಿಗೆ ವಾಯು, ವಸವರು, ಅಶ್ವಿನರು, ಸಾಧ್ಯರು, ರುದ್ರರು, ಆದಿತ್ಯರು, ಅನ್ಯ ದೇವತೆಗಳು, ಸಿದ್ಧರು, ಮತ್ತು ಪರಮ ಋಷಿಗಳೆಲ್ಲರೂ ಬಂದು ಸೇರಿದರು.

18003009a ತತಃ ಶಕ್ರಃ ಸುರಪತಿಃ ಶ್ರಿಯಾ ಪರಮಯಾ ಯುತಃ|

18003009c ಯುಧಿಷ್ಠಿರಮುವಾಚೇದಂ ಸಾಂತ್ವಪೂರ್ವಮಿದಂ ವಚಃ||

ಆಗ ಪರಮ ಕಾಂತಿಯುಕ್ತ ಸುರಪತಿ ಶಕ್ರನು ಯುಧಿಷ್ಠಿರನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು:

18003010a ಯುಧಿಷ್ಠಿರ ಮಹಾಬಾಹೋ ಪ್ರೀತಾ ದೇವಗಣಾಸ್ತವ|

18003010c ಏಹ್ಯೇಹಿ ಪುರುಷವ್ಯಾಘ್ರ ಕೃತಮೇತಾವತಾ ವಿಭೋ|

18003010e ಸಿದ್ಧಿಃ ಪ್ರಾಪ್ತಾ ತ್ವಯಾ ರಾಜಽಲ್ಲೋಕಾಶ್ಚಾಪ್ಯಕ್ಷಯಾಸ್ತವ||

“ಯುಧಿಷ್ಠಿರ! ಮಹಾಬಾಹೋ! ವಿಭೋ! ಪುರುಷವ್ಯಾಘ್ರ! ಇಲ್ಲಿ ಬಾ! ಎಲ್ಲವೂ ಮುಗಿಯಿತು! ರಾಜನ್! ನಿನಗೆ ಸಿದ್ಧಿಯು ಪ್ರಾಪ್ತವಾಯಿತು. ಅಕ್ಷಯ ಲೋಕಗಳೂ ನಿನ್ನದಾಗಿವೆ!

18003011a ನ ಚ ಮನ್ಯುಸ್ತ್ವಯಾ ಕಾರ್ಯಃ ಶೃಣು ಚೇದಂ ವಚೋ ಮಮ|

18003011c ಅವಶ್ಯಂ ನರಕಸ್ತಾತ ದ್ರಷ್ಟವ್ಯಃ ಸರ್ವರಾಜಭಿಃ||

ನೀನು ಸಿಟ್ಟಾಗಬಾರದು! ನನ್ನ ಮಾತನ್ನು ಕೇಳು! ಮಗೂ! ಎಲ್ಲ ರಾಜರೂ ನರಕವನ್ನು ನೋಡುವುದು ಅವಶ್ಯಕವಾಗಿದೆ!

18003012a ಶುಭಾನಾಮಶುಭಾನಾಂ ಚ ದ್ವೌ ರಾಶೀ ಪುರುಷರ್ಷಭ|

18003012c ಯಃ ಪೂರ್ವಂ ಸುಕೃತಂ ಭುಂಕ್ತೇ ಪಶ್ಚಾನ್ನಿರಯಮೇತಿ ಸಃ|

18003012e ಪೂರ್ವಂ ನರಕಭಾಗ್ಯಸ್ತು ಪಶ್ಚಾತ್ ಸ್ವರ್ಗಮುಪೈತಿ ಸಃ||

ಪುರುಷರ್ಷಭ! ಶುಭ ಮತ್ತು ಅಶುಭ ಕರ್ಮಗಳೆಂಬ ಎರಡು ರಾಶಿಗಳಿರುತ್ತವೆ. ಮೊದಲು ಸುಕೃತಗಳ ಪುಣ್ಯಗಳನ್ನು ಭೋಗಿಸುವವರು ಅನಂತರ ನರಕವನ್ನು ಕಾಣುತ್ತಾರೆ. ಆದರೆ ಮೊದಲೇ ನರಕವನ್ನು ಅನುಭವಿಸಿದವರು ಅನಂತರ ಸ್ವರ್ಗವನ್ನು ಸೇರುತ್ತಾರೆ.

18003013a ಭೂಯಿಷ್ಠಂ ಪಾಪಕರ್ಮಾ ಯಃ ಸ ಪೂರ್ವಂ ಸ್ವರ್ಗಮಶ್ನುತೇ|

18003013c ತೇನ ತ್ವಮೇವಂ ಗಮಿತೋ ಮಯಾ ಶ್ರೇಯೋರ್ಥಿನಾ ನೃಪ||

ತುಂಬಾ ಪಾಪಕರ್ಮಗಳನ್ನು ಮಾಡಿರುವವನು ಮೊದಲು ಸ್ವರ್ಗವನ್ನು ಅನುಭವಿಸುತ್ತಾನೆ. ನೃಪ! ನಿನ್ನ ಶ್ರೇಯಸ್ಸನ್ನು ಬಯಸಿದ ನಾನೇ ನೀನು ಇಲ್ಲಿಗೆ ಬರುವಂತೆ ಮಾಡಿದೆ.

18003014a ವ್ಯಾಜೇನ ಹಿ ತ್ವಯಾ ದ್ರೋಣ ಉಪಚೀರ್ಣಃ ಸುತಂ ಪ್ರತಿ|

18003014c ವ್ಯಾಜೇನೈವ ತತೋ ರಾಜನ್ದರ್ಶಿತೋ ನರಕಸ್ತವ||

ಅವನ ಮಗನ ವಿಷಯದಲ್ಲಿ ನೀನು ದ್ರೋಣನೊಂದಿಗೆ ಮೋಸದಲ್ಲಿ ನಡೆದುಕೊಂಡೆ. ಆದುದರಿಂದ ರಾಜನ್! ಈ ನರಕವನ್ನು ನೋಡಿ ನೀನೂ ಕೂಡ ಮೋಸಹೋದೆ!

18003015a ಯಥೈವ ತ್ವಂ ತಥಾ ಭೀಮಸ್ತಥಾ ಪಾರ್ಥೋ ಯಮೌ ತಥಾ|

18003015c ದ್ರೌಪದೀ ಚ ತಥಾ ಕೃಷ್ಣಾ ವ್ಯಾಜೇನ ನರಕಂ ಗತಾಃ||

ನಿನ್ನಂತೆಯೇ ಭೀಮ, ಪಾರ್ಥ, ಯಮಳರು ಮತ್ತು ದ್ರೌಪದೀ ಕೃಷ್ಣೆ ಇವರುಗಳು ಕೂಡ ಮೋಸದ ನರಕಕ್ಕೆ ಹೋಗಿದ್ದರು.

18003016a ಆಗಚ್ಚ ನರಶಾರ್ದೂಲ ಮುಕ್ತಾಸ್ತೇ ಚೈವ ಕಿಲ್ಬಿಷಾತ್|

18003016c ಸ್ವಪಕ್ಷಾಶ್ಚೈವ ಯೇ ತುಭ್ಯಂ ಪಾರ್ಥಿವಾ ನಿಹತಾ ರಣೇ|

18003016e ಸರ್ವೇ ಸ್ವರ್ಗಮನುಪ್ರಾಪ್ತಾಸ್ತಾನ್ಪಶ್ಯ ಪುರುಷರ್ಷಭ||

ಬಾ ನರಶರ್ದೂಲ! ಪುರುಷರ್ಷಭ! ರಣದಲ್ಲಿ ಹತರಾದ ನಿನ್ನ ಪಕ್ಷದ ಪಾರ್ಥಿವರೆಲ್ಲರೂ ಪಾಪಗಳಿಂದ ಮುಕ್ತರಾಗಿ ಸ್ವರ್ಗವನ್ನು ಸೇರಿರುವುದನ್ನು ನೋಡು!

18003017a ಕರ್ಣಶ್ಚೈವ ಮಹೇಷ್ವಾಸಃ ಸರ್ವಶಸ್ತ್ರಭೃತಾಂ ವರಃ|

18003017c ಸ ಗತಃ ಪರಮಾಂ ಸಿದ್ಧಿಂ ಯದರ್ಥಂ ಪರಿತಪ್ಯಸೇ||

ಯಾರಿಗಾಗಿ ನೀನು ಪರಿತಪಿಸುತ್ತಿದ್ದೆಯೋ ಆ ಮಹೇಷ್ವಾಸ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನು ಪರಮ ಸಿದ್ಧಿಯನ್ನು ಹೊಂದಿದ್ದಾನೆ.

18003018a ತಂ ಪಶ್ಯ ಪುರುಷವ್ಯಾಘ್ರಮಾದಿತ್ಯತನಯಂ ವಿಭೋ|

18003018c ಸ್ವಸ್ಥಾನಸ್ಥಂ ಮಹಾಬಾಹೋ ಜಹಿ ಶೋಕಂ ನರರ್ಷಭ||

ವಿಭೋ! ಮಹಾಬಾಹೋ! ನರರ್ಷಭ! ಸ್ವಸ್ಥಾನದಲ್ಲಿ ಕುಳಿತಿರುವ ಆ ಪುರುಷವ್ಯಾಘ್ರ ಆದಿತ್ಯತನಯನನ್ನು ನೋಡಿ ಶೋಕವನ್ನು ತೊರೆ!

18003019a ಭ್ರಾತೄಂಶ್ಚಾನ್ಯಾಂಸ್ತಥಾ ಪಶ್ಯ ಸ್ವಪಕ್ಷಾಂಶ್ಚೈವ ಪಾರ್ಥಿವಾನ್|

18003019c ಸ್ವಂ ಸ್ವಂ ಸ್ಥಾನಮನುಪ್ರಾಪ್ತಾನ್ವ್ಯೇತು ತೇ ಮಾನಸೋ ಜ್ವರಃ||

ನಿನ್ನ ಇತರ ಸಹೋದರರೂ ನಿನ್ನ ಪಕ್ಷದಲ್ಲಿದ್ದ ಪಾರ್ಥಿವರೂ ತಮ್ಮ ತಮ್ಮ ಸ್ಥಾನಗಳನ್ನು ಪಡೆದು ಕುಳಿತಿರುವುದನ್ನು ನೋಡಿ ನಿನ್ನ ಮಾನಸಿಕ ಜ್ವರವನ್ನು ತೊರೆ!

18003020a ಅನುಭೂಯ ಪೂರ್ವಂ ತ್ವಂ ಕೃಚ್ಚ್ರಮಿತಃ ಪ್ರಭೃತಿ ಕೌರವ|

18003020c ವಿಹರಸ್ವ ಮಯಾ ಸಾರ್ಧಂ ಗತಶೋಕೋ ನಿರಾಮಯಃ||

ಕೌರವ! ಮೊದಲೇ ನರಕವನ್ನು ಅನುಭವಿಸಿದ ನೀನು ಈ ನಂತರ ಶೋಕವನ್ನು ತೊರೆದು ನಿರಾಮಯನಾಗಿ ನನ್ನೊಡನೆ ವಿಹರಿಸು!

18003021a ಕರ್ಮಣಾಂ ತಾತ ಪುಣ್ಯಾನಾಂ ಜಿತಾನಾಂ ತಪಸಾ ಸ್ವಯಮ್|

18003021c ದಾನಾನಾಂ ಚ ಮಹಾಬಾಹೋ ಫಲಂ ಪ್ರಾಪ್ನುಹಿ ಪಾಂಡವ||

ಮಗೂ! ಮಹಾಬಾಹೋ! ಪಾಂಡವ! ತಪಸ್ಸು, ದಾನ ಮತ್ತು ಪುಣ್ಯ ಕರ್ಮಗಳಿಂದ ಸ್ವಯಂ ನೀನೇ ಜಯಿಸಿರುವ ಫಲವನ್ನು ಭೋಗಿಸು.

18003022a ಅದ್ಯ ತ್ವಾಂ ದೇವಗಂಧರ್ವಾ ದಿವ್ಯಾಶ್ಚಾಪ್ಸರಸೋ ದಿವಿ|

18003022c ಉಪಸೇವಂತು ಕಲ್ಯಾಣಂ ವಿರಜೋಂಬರವಾಸಸಃ||

ಶುಭ್ರವಸ್ತ್ರಗಳನ್ನುಟ್ಟ ದೇವಗಂಧರ್ವರು, ದಿವ್ಯ ಅಪ್ಸರೆಯರು ದಿವಿಯಲ್ಲಿ ಇಂದು ಕಲ್ಯಾಣನಾದ ನಿನ್ನನ್ನು ಸೇವಿಸುತ್ತಾರೆ!

18003023a ರಾಜಸೂಯಜಿತಾಽಲ್ಲೋಕಾನಶ್ವಮೇಧಾಭಿವರ್ಧಿತಾನ್|

18003023c ಪ್ರಾಪ್ನುಹಿ ತ್ವಂ ಮಹಾಬಾಹೋ ತಪಸಶ್ಚ ಫಲಂ ಮಹತ್||

ಮಹಾಬಾಹೋ! ರಾಜಸೂಯ ಯಾಗದಿಂದ ಪಡೆದ ಮತ್ತು ಅಶ್ವಮೇಧದಿಂದ ವೃದ್ಧಿಯಾದ ಮಹಾಲೋಕಗಳನ್ನೂ ತಪಸ್ಸಿನ ಮಹಾಫಲವನ್ನೂ ಭೋಗಿಸು!

18003024a ಉಪರ್ಯುಪರಿ ರಾಜ್ಞಾಂ ಹಿ ತವ ಲೋಕಾ ಯುಧಿಷ್ಠಿರ|

18003024c ಹರಿಶ್ಚಂದ್ರಸಮಾಃ ಪಾರ್ಥ ಯೇಷು ತ್ವಂ ವಿಹರಿಷ್ಯಸಿ||

ಯುಧಿಷ್ಠಿರ! ನಿನ್ನ ಲೋಕವು ಇತರ ರಾಜರ ಲೋಕಗಳಿಗಿಂತ ಮೇಲಿದೆ. ಪಾರ್ಥ! ಹರಿಶ್ಚಂದ್ರನಿಗೆ ಸಮನಾದ ಲೋಕದಲ್ಲಿ ನೀನು ವಿಹರಿಸುತ್ತೀಯೆ!

18003025a ಮಾಂಧಾತಾ ಯತ್ರ ರಾಜರ್ಷಿರ್ಯತ್ರ ರಾಜಾ ಭಗೀರಥಃ|

18003025c ದೌಃಷಂತಿರ್ಯತ್ರ ಭರತಸ್ತತ್ರ ತ್ವಂ ವಿಹರಿಷ್ಯಸಿ||

ಎಲ್ಲಿ ರಾಜರ್ಷಿ ಮಾಂಧಾತನಿರುವನೋ, ಎಲ್ಲಿ ರಾಜಾ ಭಗೀರಥನಿರುವನೋ, ಎಲ್ಲಿ ದುಷ್ಯಂತನ ಮಗ ಭರತನಿರುವನೋ ಅಲ್ಲಿ ನೀನು ವಿಹರಿಸುತ್ತೀಯೆ!

18003026a ಏಷಾ ದೇವನದೀ ಪುಣ್ಯಾ ಪಾರ್ಥ ತ್ರೈಲೋಕ್ಯಪಾವನೀ|

18003026c ಆಕಾಶಗಂಗಾ ರಾಜೇಂದ್ರ ತತ್ರಾಪ್ಲುತ್ಯ ಗಮಿಷ್ಯಸಿ||

ಪಾರ್ಥ! ಇಗೋ ಮೂರುಲೋಕಗಳನ್ನೂ ಪಾವನಗೊಳಿಸುವ ಪುಣ್ಯ ದೇವನದಿ ಆಕಾಶಗಂಗೆಯಿದು! ರಾಜೇಂದ್ರ! ಅಲ್ಲಿ ಸ್ನಾನಮಾಡಿ ನಿನ್ನದೇ ಲೋಕಕ್ಕೆ ನೀನು ಹೋಗುವೆ!

18003027a ಅತ್ರ ಸ್ನಾತಸ್ಯ ತೇ ಭಾವೋ ಮಾನುಷೋ ವಿಗಮಿಷ್ಯತಿ|

18003027c ಗತಶೋಕೋ ನಿರಾಯಾಸೋ ಮುಕ್ತವೈರೋ ಭವಿಷ್ಯಸಿ||

ಅಲ್ಲಿ ಸ್ನಾನಮಾಡಿದರೆ ನಿನ್ನ ಮನುಷ್ಯ ಭಾವವು ಹೊರಟುಹೋಗುತ್ತದೆ. ಶೋಕವನ್ನು ಕಳೆದುಕೊಂಡು, ನಿರಾಯಾಸನಾಗಿ, ವೈರದಿಂದ ಬಿಡುಗಡೆಯೂ ಆಗುತ್ತದೆ.”

18003028a ಏವಂ ಬ್ರುವತಿ ದೇವೇಂದ್ರೇ ಕೌರವೇಂದ್ರಂ ಯುಧಿಷ್ಠಿರಮ್|

18003028c ಧರ್ಮೋ ವಿಗ್ರಹವಾನ್ಸಾಕ್ಷಾದುವಾಚ ಸುತಮಾತ್ಮನಃ||

ಕೌರವೇಂದ್ರ ಯುಧಿಷ್ಠಿರನಿಗೆ ದೇವೇಂದ್ರನು ಹೀಗೆ ಹೇಳಲು ಮೂರ್ತಿಮತ್ತಾಗಿದ್ದ ಸಾಕ್ಷಾತ್ ಧರ್ಮನು ತನ್ನ ಮಗನಿಗೆ ಇಂತೆಂದನು:

18003029a ಭೋ ಭೋ ರಾಜನ್ಮಹಾಪ್ರಾಜ್ಞ ಪ್ರೀತೋಽಸ್ಮಿ ತವ ಪುತ್ರಕ|

18003029c ಮದ್ಭಕ್ತ್ಯಾ ಸತ್ಯವಾಕ್ಯೇನ ಕ್ಷಮಯಾ ಚ ದಮೇನ ಚ||

“ಭೋ ಭೋ! ರಾಜನ್! ಮಹಾಪ್ರಾಜ್ಞ! ಮಗನೇ! ನಿನಗೆ ನನ್ನ ಮೇಲಿರುವ ಭಕ್ತಿ, ಸತ್ಯ ವಾಕ್ಯ, ಕ್ಷಮೆ ಮತ್ತು ದಮಗಳಿಂದ ನಾನು ಪ್ರೀತನಾಗಿದ್ದೇನೆ.

18003030a ಏಷಾ ತೃತೀಯಾ ಜಿಜ್ಞಾಸಾ ತವ ರಾಜನ್ಕೃತಾ ಮಯಾ|

18003030c ನ ಶಕ್ಯಸೇ ಚಾಲಯಿತುಂ ಸ್ವಭಾವಾತ್ಪಾರ್ಥ ಹೇತುಭಿಃ||

ರಾಜನ್! ಇದು ನಾನು ನಡೆಸಿದ ನಿನ್ನ ಮೂರನೆಯ ಪರೀಕ್ಷೆಯಾಗಿತ್ತು. ಪಾರ್ಥ! ಎಷ್ಟೇ ಪ್ರಯತ್ನಪಟ್ಟರೂ ನಿನ್ನ ಸ್ವಭಾವದಿಂದ ವಿಚಲಿತನನ್ನಾಗಿಸಲು ನನಗೆ ಸಾಧ್ಯವಾಗಲಿಲ್ಲ!

18003031a ಪೂರ್ವಂ ಪರೀಕ್ಷಿತೋ ಹಿ ತ್ವಮಾಸೀರ್ದ್ವೈತವನಂ ಪ್ರತಿ|

18003031c ಅರಣೀಸಹಿತಸ್ಯಾರ್ಥೇ ತಚ್ಚ ನಿಸ್ತೀರ್ಣವಾನಸಿ||

ಮೊಟ್ಟಮೊದಲನೆಯದಾಗಿ ನೀನು ದ್ವೈತವನದ ಬಳಿಯಲ್ಲಿ ಅರಣಿಯನ್ನು ಹುಡುಕುತ್ತಿದ್ದಾಗ ನಿನ್ನನ್ನು ಪರೀಕ್ಷಿಸಿದ್ದೆ ಮತ್ತು ನೀನು ಅದರಲ್ಲಿ ಉತ್ತೀರ್ಣನಾಗಿದ್ದೆ.

18003032a ಸೋದರ್ಯೇಷು ವಿನಷ್ಟೇಷು ದ್ರೌಪದ್ಯಾಂ ತತ್ರ ಭಾರತ|

18003032c ಶ್ವರೂಪಧಾರಿಣಾ ಪುತ್ರ ಪುನಸ್ತ್ವಂ ಮೇ ಪರೀಕ್ಷಿತಃ||

ಭಾರತ! ಮಗನೇ! ದ್ರೌಪದಿ ಮತ್ತು ನಿನ್ನ ಸೋದರರು ಅಲ್ಲಿ ವಿನಾಶರಾದಾಗ ನಾಯಿಯ ರೂಪವನ್ನು ಧರಿಸಿ ನಾನು ಪುನಃ ನಿನ್ನನ್ನು ಪರೀಕ್ಷಿಸಿದೆ.

18003033a ಇದಂ ತೃತೀಯಂ ಭ್ರಾತೄಣಾಮರ್ಥೇ ಯತ್ ಸ್ಥಾತುಮಿಚ್ಚಸಿ|

18003033c ವಿಶುದ್ಧೋಽಸಿ ಮಹಾಭಾಗ ಸುಖೀ ವಿಗತಕಲ್ಮಷಃ||

ಸಹೋದರರಿಗಾಗಿ ಇಲ್ಲಿ ನೀನು ನಿಲ್ಲಲು ಬಯಸಿದ ಇದು ಮೂರನೆಯ ಪರೀಕ್ಷೆಯಾಗಿತ್ತು. ಮಹಾಭಾಗ! ಈಗ ನೀನು ವಿಶುದ್ಧನೂ, ಸುಖಿಯೂ, ಪಾಪಗಳನ್ನು ಕಳೆದುಕೊಂಡವನೂ ಆಗಿರುವೆ!

18003034a ನ ಚ ತೇ ಭ್ರಾತರಃ ಪಾರ್ಥ ನರಕಸ್ಥಾ ವಿಶಾಂ ಪತೇ|

18003034c ಮಾಯೈಷಾ ದೇವರಾಜೇನ ಮಹೇಂದ್ರೇಣ ಪ್ರಯೋಜಿತಾ||

ಪಾರ್ಥ! ವಿಶಾಂಪತೇ! ನಿನ್ನ ಈ ಸಹೋದರರು ನರಕದಲ್ಲಿಲ್ಲ. ಇದೊಂದು ಮಹೇಂದ್ರ ದೇವರಾಜನು ಆಯೋಜಿಸಿದ ಮಾಯೆಯಾಗಿತ್ತು.

18003035a ಅವಶ್ಯಂ ನರಕಸ್ತಾತ ದ್ರಷ್ಟವ್ಯಃ ಸರ್ವರಾಜಭಿಃ|

18003035c ತತಸ್ತ್ವಯಾ ಪ್ರಾಪ್ತಮಿದಂ ಮುಹೂರ್ತಂ ದುಃಖಮುತ್ತಮಮ್||

ಮಗೂ! ಎಲ್ಲ ರಾಜರೂ ಅವಶ್ಯಕವಾಗಿ ನರಕವನ್ನು ನೋಡಲೇಬೇಕು. ಆದುದರಿಂದ ನೀನು ಮುಹೂರ್ತಕಾಲ ಈ ಮಹಾದುಃಖವನ್ನು ಅನುಭವಿಸಬೇಕಾಯಿತು.

18003036a ನ ಸವ್ಯಸಾಚೀ ಭೀಮೋ ವಾ ಯಮೌ ವಾ ಪುರುಷರ್ಷಭೌ|

18003036c ಕರ್ಣೋ ವಾ ಸತ್ಯವಾಕ್ ಶೂರೋ ನರಕಾರ್ಹಾಶ್ಚಿರಂ ನೃಪ||

ನೃಪ! ಸವ್ಯಸಾಚಿಯಾಗಲೀ, ಭೀಮನಾಗಲೀ, ಪುರುಷರ್ಷಭ ಯಮಳರಾಗಲೀ, ಸತ್ಯವಾಗ್ಮಿ ಶೂರ ಕರ್ಣನಾಗಲೀ ದೀರ್ಘಕಾಲ ನರಕಕ್ಕೆ ಅರ್ಹರಾದವರಲ್ಲ.

18003037a ನ ಕೃಷ್ಣಾ ರಾಜಪುತ್ರೀ ಚ ನರಕಾರ್ಹಾ ಯುಧಿಷ್ಠಿರ|

18003037c ಏಹ್ಯೇಹಿ ಭರತಶ್ರೇಷ್ಠ ಪಶ್ಯ ಗಂಗಾಂ ತ್ರಿಲೋಕಗಾಮ್||

ಯುಧಿಷ್ಠಿರ! ರಾಜಪುತ್ರಿ ಕೃಷ್ಣೆಯೂ ಕೂಡ ನರಕಾರ್ಹಳಲ್ಲ. ಭರತಶ್ರೇಷ್ಠ! ಇಲ್ಲಿ ಬಾ! ತ್ರಿಲೋಕಗಳಲ್ಲಿ ಹರಿಯುವ ಗಂಗೆಯನ್ನು ನೋಡು!”

18003038a ಏವಮುಕ್ತಃ ಸ ರಾಜರ್ಷಿಸ್ತವ ಪೂರ್ವಪಿತಾಮಹಃ|

18003038c ಜಗಾಮ ಸಹ ಧರ್ಮೇಣ ಸರ್ವೈಶ್ಚ ತ್ರಿದಶಾಲಯೈಃ||

18003039a ಗಂಗಾಂ ದೇವನದೀಂ ಪುಣ್ಯಾಂ ಪಾವನೀಮೃಷಿಸಂಸ್ತುತಾಮ್|

18003039c ಅವಗಾಹ್ಯ ತು ತಾಂ ರಾಜಾ ತನುಂ ತತ್ಯಾಜ ಮಾನುಷೀಮ್||

ಅವನು ಹೀಗೆ ಹೇಳಲು ನಿನ್ನ ಪೂರ್ವಪಿತಾಮಹ ರಾಜರ್ಷಿಯು ಧರ್ಮ ಮತ್ತು ಸರ್ವ ದೇವತೆಗಳೊಂದಿಗೆ ಋಷಿಗಳು ಸಂಸ್ತುತಿಸುವ ಪಾವನೀ ಪುಣ್ಯೆ ದೇವನದಿ ಗಂಗೆಯಿದ್ದಲ್ಲಿಗೆ ಹೋದನು. ಅಲ್ಲಿ ಮುಳುಗಿ ರಾಜನು ತನ್ನ ಮಾನುಷೀ ಶರೀರವನ್ನು ತ್ಯಜಿಸಿದನು.

18003040a ತತೋ ದಿವ್ಯವಪುರ್ಭೂತ್ವಾ ಧರ್ಮರಾಜೋ ಯುಧಿಷ್ಠಿರಃ|

18003040c ನಿರ್ವೈರೋ ಗತಸಂತಾಪೋ ಜಲೇ ತಸ್ಮಿನ್ಸಮಾಪ್ಲುತಃ||

ಆ ಜಲದಲ್ಲಿ ಮುಳುಗಿ ಧರ್ಮರಾಜ ಯುಧಿಷ್ಠಿರನು ದಿವ್ಯ ಶರೀರನಾಗಿ ವೈರವಿಲ್ಲದವನಾಗಿ, ಸಂತಾಪಗಳನ್ನು ಕಳೆದುಕೊಂಡನು.

18003041a ತತೋ ಯಯೌ ವೃತೋ ದೇವೈಃ ಕುರುರಾಜೋ ಯುಧಿಷ್ಠಿರಃ|

18003041c ಧರ್ಮೇಣ ಸಹಿತೋ ಧೀಮಾನ್ಸ್ತೂಯಮಾನೋ ಮಹರ್ಷಿಭಿಃ||

ಅನಂತರ ಧೀಮಂತ ಕುರುರಾಜ ಯುಧಿಷ್ಠಿರನು ಧರ್ಮನ ಸಹಿತ, ದೇವತೆಗಳಿಂದ ಸುತ್ತುವರೆಯಲ್ಪಟ್ಟು, ಸ್ತುತಿಸುತ್ತಿದ್ದ ಮಹರ್ಷಿಗಳೊಂದಿಗೆ ಹೊರಟನು.”

ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಯುಧಿಷ್ಠಿರತನುತ್ಯಾಗೇ ತೃತೀಯೋಽಧ್ಯಾಯಃ ||

ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಯುಧಿಷ್ಠಿರತನುತ್ಯಾಗ ಎನ್ನುವ ಮೂರನೇ ಅಧ್ಯಾಯವು.

Related image

Comments are closed.