Stri Parva: Chapter 8

ಸ್ತ್ರೀಪರ್ವ: ವಿಶೋಕ ಪರ್ವ

ಮೂರ್ಛೆಯಿಂದ ಎದ್ದ ಧೃತರಾಷ್ಟ್ರನು ಪ್ರಾಣತ್ಯಾಗಮಾಡುತ್ತೇನೆಂದು ಹೇಳಲು ವ್ಯಾಸನು ಅವನಿಗೆ ದೇವರಹಸ್ಯದ ಕುರಿತು ಹೇಳಿ ಸಂತವಿಸಿದುದು (೧-೪೮).

11008001 ವೈಶಂಪಾಯನ ಉವಾಚ

11008001a ವಿದುರಸ್ಯ ತು ತದ್ವಾಕ್ಯಂ ನಿಶಮ್ಯ ಕುರುಸತ್ತಮಃ|

11008001c ಪುತ್ರಶೋಕಾಭಿಸಂತಪ್ತಃ ಪಪಾತ ಭುವಿ ಮೂರ್ಚಿತಃ||

ವೈಶಂಪಾಯನನು ಹೇಳಿದನು: “ವಿದುರನ ಆ ಮಾತನ್ನು ಕೇಳಿ ಕುರುಸತ್ತಮನು ಪುತ್ರಶೋಕದಿಂದ ಸಂತಪ್ತನಾಗಿ ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು.

11008002a ತಂ ತಥಾ ಪತಿತಂ ಭೂಮೌ ನಿಃಸಂಜ್ಞಂ ಪ್ರೇಕ್ಷ್ಯ ಬಾಂಧವಾಃ|

11008002c ಕೃಷ್ಣದ್ವೈಪಾಯನಶ್ಚೈವ ಕ್ಷತ್ತಾ ಚ ವಿದುರಸ್ತಥಾ||

11008003a ಸಂಜಯಃ ಸುಹೃದಶ್ಚಾನ್ಯೇ ದ್ವಾಃಸ್ಥಾ ಯೇ ಚಾಸ್ಯ ಸಂಮತಾಃ|

11008003c ಜಲೇನ ಸುಖಶೀತೇನ ತಾಲವೃಂತೈಶ್ಚ ಭಾರತ||

ಭಾರತ! ಹಾಗೆ ನಿಃಸಂಜ್ಞನಾಗಿ ಅವನು ನೆಲದ ಮೇಲೆ ಬಿದ್ದುದನ್ನು ನೋಡಿ ಅಲ್ಲಿದ್ದ ಬಾಂಧವರು – ಕೃಷ್ಣದ್ವೈಪಾಯನ, ಕ್ಷತ್ತ ವಿದುರ - ಮತ್ತು ಅನ್ಯ ವಿಶ್ವಸನೀಯ ಸುಹೃದಯರು – ಸಂಜಯ ಮತ್ತು ದ್ವಾರಪಾಲಕರು – ಸುಖಶೀತಲ ನೀರನ್ನು ಚುಮಿಕಿಸಿ ಬೀಸಣಿಗೆಯನ್ನು ಬೀಸಿದರು.

11008004a ಪಸ್ಪೃಶುಶ್ಚ ಕರೈರ್ಗಾತ್ರಂ ವೀಜಮಾನಾಶ್ಚ ಯತ್ನತಃ|

11008004c ಅನ್ವಾಸನ್ಸುಚಿರಂ ಕಾಲಧೃತರಾಷ್ಟ್ರಂ ತಥಾಗತಮ್||

ಕೈಗಳಿಂದ ಅವನ ಶರೀರವನ್ನು ಮುಟ್ಟುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದ್ದ ಅವರು ಹಾಗೆಯೇ ಬಹಳ ಹೊತ್ತಿನವರೆಗೆ ಧೃತರಾಷ್ಟ್ರನ ಬಳಿಯೇ ಇದ್ದರು.

11008005a ಅಥ ದೀರ್ಘಸ್ಯ ಕಾಲಸ್ಯ ಲಬ್ಧಸಂಜ್ಞೋ ಮಹೀಪತಿಃ|

11008005c ವಿಲಲಾಪ ಚಿರಂ ಕಾಲಂ ಪುತ್ರಾಧಿಭಿರಭಿಪ್ಲುತಃ||

ದೀರ್ಘಕಾಲದ ನಂತರ ಎಚ್ಚರಗೊಂಡ ಮಹೀಪತಿಯು ಪುತ್ರವ್ಯಸನದಿಂದ ಮುಳುಗಿಹೋಗಿ ಬಹಳ ಹೊತ್ತು ವಿಲಪಿಸುತ್ತಿದ್ದನು.

11008006a ದಿಗಸ್ತು ಖಲು ಮಾನುಷ್ಯಂ ಮಾನುಷ್ಯೇ ಚ ಪರಿಗ್ರಹಮ್|

11008006c ಯತೋಮೂಲಾನಿ ದುಃಖಾನಿ ಸಂಭವಂತಿ ಮುಹುರ್ಮುಹುಃ||

“ಮನುಷ್ಯಜನ್ಮಕ್ಕೇ ಧಿಕ್ಕಾರ! ಮನುಷ್ಯನಾಗಿ ಹುಟ್ಟಿದಾಗಿನಿಂದ ಪುನಃ ಪುನಃ ದುಃಖಗಳು ಬರುತ್ತಲೇ ಇರುತ್ತವೆ!

11008007a ಪುತ್ರನಾಶೇಽರ್ಥನಾಶೇ ಚ ಜ್ಞಾತಿಸಂಬಂಧಿನಾಮಪಿ|

11008007c ಪ್ರಾಪ್ಯತೇ ಸುಮಹದ್ದುಃಖಂ ವಿಷಾಗ್ನಿಪ್ರತಿಮಂ ವಿಭೋ||

ವಿಭೋ! ಪುತ್ರನಾಶ, ಅರ್ಥನಾಶ, ಜ್ಞಾತಿ-ಸಂಬಂಧಿಗಳ ನಾಶಗಳಿಂದ ವಿಷ ಮತ್ತು ಅಗ್ನಿಗಳಿಗೆ ಸಮಾನ ಮಹಾದುಃಖವು ಪ್ರಾಪ್ತವಾಗಿದೆ.

11008008a ಯೇನ ದಹ್ಯಂತಿ ಗಾತ್ರಾಣಿ ಯೇನ ಪ್ರಜ್ಞಾ ವಿನಶ್ಯತಿ|

11008008c ಯೇನಾಭಿಭೂತಃ ಪುರುಷೋ ಮರಣಂ ಬಹು ಮನ್ಯತೇ||

ಇವುಗಳಿಂದ ದೇಹವು ಸುಡುತ್ತಿದೆ. ಪ್ರಜ್ಞೆಯು ನಾಶವಾಗುತ್ತಿದೆ. ಇದನ್ನು ಅನುಭವಿಸುತ್ತಿರುವ ಮನುಷ್ಯನಿಗೆ ಮರಣವೇ ಲೇಸೆನಿಸುತ್ತದೆ.

11008009a ತದಿದಂ ವ್ಯಸನಂ ಪ್ರಾಪ್ತಂ ಮಯಾ ಭಾಗ್ಯವಿಪರ್ಯಯಾತ್|

11008009c ತಚ್ಚೈವಾಹಂ ಕರಿಷ್ಯಾಮಿ ಅದ್ಯೈವ ದ್ವಿಜಸತ್ತಮ||

ದ್ವಿಜಸತ್ತಮ! ಭಾಗ್ಯವಿಪರ್ಯಾಸದಿಂದ ನನಗೆ ಈ ವ್ಯಸನವು ಪ್ರಾಪ್ತವಾಗಿದೆ. ಇಂದೇ ನಾನು ಪ್ರಾಣತ್ಯಾಗಮಾಡುತ್ತೇನೆ!”

11008010a ಇತ್ಯುಕ್ತ್ವಾ ತು ಮಹಾತ್ಮಾನಂ ಪಿತರಂ ಬ್ರಹ್ಮವಿತ್ತಮಮ್|

11008010c ಧೃತರಾಷ್ಟ್ರೋಽಭವನ್ಮೂಢಃ ಶೋಕಂ ಚ ಪರಮಂ ಗತಃ|

11008010e ಅಭೂಚ್ಚ ತೂಷ್ಣೀಂ ರಾಜಾಸೌ ಧ್ಯಾಯಮಾನೋ ಮಹೀಪತೇ||

ಹೀಗೆ ಅವನು ಮಹಾತ್ಮ ಬ್ರಹ್ಮವಿತ್ತಮ ತಂದೆಗೆ ಹೇಳಿ ಮೂಢನಾಗಿ ಪರಮ ಶೋಕಾನ್ವಿತನಾದನು. ಯೋಚನಾಮಗ್ನನಾಗಿದ್ದ ರಾಜ ಮಹೀಪತಿಯು ಸುಮ್ಮನಾದನು.

11008011a ತಸ್ಯ ತದ್ವಚನಂ ಶ್ರುತ್ವಾ ಕೃಷ್ಣದ್ವೈಪಾಯನಃ ಪ್ರಭುಃ|

11008011c ಪುತ್ರಶೋಕಾಭಿಸಂತಪ್ತಂ ಪುತ್ರಂ ವಚನಮಬ್ರವೀತ್||

ಅವನ ಆ ಮಾತನ್ನು ಕೇಳಿ ಪ್ರಭು ಕೃಷ್ಣದ್ವೈಪಾಯನನು ಪುತ್ರಶೋಕದಿಂದ ಸಂತಪ್ತನಾಗಿದ್ದ ಪುತ್ರನಿಗೆ ಈ ಮಾತನ್ನಾಡಿದನು:

11008012a ಧೃತರಾಷ್ಟ್ರ ಮಹಾಬಾಹೋ ಯತ್ತ್ವಾಂ ವಕ್ಷ್ಯಾಮಿ ತಚ್ಚೃಣು|

11008012c ಶ್ರುತವಾನಸಿ ಮೇಧಾವೀ ಧರ್ಮಾರ್ಥಕುಶಲಸ್ತಥಾ||

“ಧೃತರಾಷ್ಟ್ರ! ಮಹಾಬಾಹೋ! ನಾನು ನಿನಗೆ ಹೇಳುವುದನ್ನು ಕೇಳು. ನೀನು ವೇದಾಧ್ಯಯನ ಮಾಡಿರುವೆ. ಮೇಧಾವಿಯೂ ಧರ್ಮಾರ್ಥಕುಶಲನೂ ಆಗಿರುವೆ.

11008013a ನ ತೇಽಸ್ತ್ಯವಿದಿತಂ ಕಿಂ ಚಿದ್ವೇದಿತವ್ಯಂ ಪರಂತಪ|

11008013c ಅನಿತ್ಯತಾಂ ಹಿ ಮರ್ತ್ಯಾನಾಂ ವಿಜಾನಾಸಿ ನ ಸಂಶಯಃ||

ಪರಂತಪ! ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ತಿಳಿಯಬೇಕಾಗಿರುವುದೂ ಯಾವುದೂ ಇಲ್ಲ. ಮನುಷ್ಯರ ಅನಿತ್ಯತೆಯನ್ನು ನೀನು ಅರಿತುಕೊಂಡಿದ್ದೇಯೆ. ಅದರಲ್ಲಿ ಸಂಶಯವಿಲ್ಲ!

11008014a ಅಧ್ರುವೇ ಜೀವಲೋಕೇ ಚ ಸ್ಥಾನೇ ವಾಶಾಶ್ವತೇ ಸತಿ|

11008014c ಜೀವಿತೇ ಮರಣಾಂತೇ ಚ ಕಸ್ಮಾಚ್ಚೋಚಸಿ ಭಾರತ||

ಭಾರತ! ಜೀವಲೋಕವೇ ಅಶಾಶ್ವತವಾದುದು. ಸತ್ಯರ ಸ್ಥಾನವೇ ಶಾಶ್ವತವಾದುದು. ಜೀವಿಸಿರುವವನಿಗೆ ಮರಣವೇ ಅಂತ್ಯವಾದುದು. ಅದಕ್ಕಾಗಿ ಏಕೆ ದುಃಖಿಸುತ್ತಿರುವೆ?

11008015a ಪ್ರತ್ಯಕ್ಷಂ ತವ ರಾಜೇಂದ್ರ ವೈರಸ್ಯಾಸ್ಯ ಸಮುದ್ಭವಃ|

11008015c ಪುತ್ರಂ ತೇ ಕಾರಣಂ ಕೃತ್ವಾ ಕಾಲಯೋಗೇನ ಕಾರಿತಃ||

ರಾಜೇಂದ್ರ! ನಿನ್ನ ಪುತ್ರನನ್ನೇ ಕಾರಣವನ್ನಾಗಿಸಿಕೊಂಡು ಕಾಲಯೋಗದಿಂದ ನಿನ್ನ ಪ್ರತ್ಯಕ್ಷದಲ್ಲಿಯೇ ಈ ವೈರವು ಹುಟ್ಟಿಕೊಂಡಿತು.

11008016a ಅವಶ್ಯಂ ಭವಿತವ್ಯೇ ಚ ಕುರೂಣಾಂ ವೈಶಸೇ ನೃಪ|

11008016c ಕಸ್ಮಾಚ್ಚೋಚಸಿ ತಾನ್ ಶೂರಾನ್ಗತಾನ್ಪರಮಿಕಾಂ ಗತಿಮ್||

ನೃಪ! ಅವಶ್ಯವಾಗಿದ್ದ ಕುರುಗಳ ವಿನಾಶವು ನಡೆದುಹೋಯಿತು.  ಪರಮ ಗತಿಯನ್ನು ಸೇರಿದ ಆ ಶೂರರಿಗಾಗಿ ಏಕೆ ನೀನು ಶೋಕಿಸುತ್ತಿರುವೆ?

11008017a ಜಾನತಾ ಚ ಮಹಾಬಾಹೋ ವಿದುರೇಣ ಮಹಾತ್ಮನಾ|

11008017c ಯತಿತಂ ಸರ್ವಯತ್ನೇನ ಶಮಂ ಪ್ರತಿ ಜನೇಶ್ವರ||

ಜನೇಶ್ವರ! ಇದನ್ನು ತಿಳಿದಿದ್ದ ಮಹಾಬಾಹು ಮಹಾತ್ಮ ವಿದುರನು ಸರ್ವಶಕ್ತಿಗಳಿಂದ ಶಾಂತಿಗಾಗಿ ಪ್ರಯತ್ನಿಸಿದನು.

11008018a ನ ಚ ದೈವಕೃತೋ ಮಾರ್ಗಃ ಶಕ್ಯೋ ಭೂತೇನ ಕೇನ ಚಿತ್|

11008018c ಘಟತಾಪಿ ಚಿರಂ ಕಾಲಂ ನಿಯಂತುಮಿತಿ ಮೇ ಮತಿಃ||

ಬಹುಕಾಲ ಪ್ರಯತ್ನಿಸಿದರೂ ದೈವವು ಮಾಡಿದ ಮಾರ್ಗವನ್ನು ಇರುವ ಯಾವುದೂ ತಡೆಯಲಾರದೆನ್ನುವುದು ನನ್ನ ಅಭಿಪ್ರಾಯ.

11008019a ದೇವತಾನಾಂ ಹಿ ಯತ್ಕಾರ್ಯಂ ಮಯಾ ಪ್ರತ್ಯಕ್ಷತಃ ಶ್ರುತಮ್|

11008019c ತತ್ತೇಽಹಂ ಸಂಪ್ರವಕ್ಷ್ಯಾಮಿ ಕಥಂ ಸ್ಥೈರ್ಯಂ ಭವೇತ್ತವ||

ದೇವತೆಗಳ ಕಾರ್ಯವನ್ನು ನಾನು ಪ್ರತ್ಯಕ್ಷ ನೋಡಿದ್ದೇನೆ ಮತ್ತು ಕೇಳಿದ್ದೇನೆ. ಅದನ್ನು ನಿನಗೆ ಹೇಳುತ್ತೇನೆ. ಅದರಿಂದ ನಿನಗೆ ಸ್ಥೈರ್ಯವುಂಟಾಗಬಹುದು.

11008020a ಪುರಾಹಂ ತ್ವರಿತೋ ಯಾತಃ ಸಭಾಮೈಂದ್ರೀಂ ಜಿತಕ್ಲಮಃ|

11008020c ಅಪಶ್ಯಂ ತತ್ರ ಚ ತದಾ ಸಮವೇತಾನ್ ದಿವೌಕಸಃ|

11008020e ನಾರದಪ್ರಮುಖಾಂಶ್ಚಾಪಿ ಸರ್ವಾನ್ದೇವ‌ಋಷೀಂಸ್ತಥಾ||

ಶ್ರಮವನ್ನು ಜಯಿಸಿರುವ ನಾನು ಹಿಂದೆ ತ್ವರೆಮಾಡಿ ಇಂದ್ರನ ಸಭೆಗೆ ಹೋಗಿದ್ದೆನು. ಅಲ್ಲಿ ದಿವೌಕಸರು, ಮತ್ತು ನಾರದನೇ ಮೊದಲಾದ ಸರ್ವ ದೇವ‌ಋಷಿಗಳು ನೆರೆದಿರುವುದನ್ನು ನೋಡಿದೆನು.

11008021a ತತ್ರ ಚಾಪಿ ಮಯಾ ದೃಷ್ಟಾ ಪೃಥಿವೀ ಪೃಥಿವೀಪತೇ|

11008021c ಕಾರ್ಯಾರ್ಥಮುಪಸಂಪ್ರಾಪ್ತಾ ದೇವತಾನಾಂ ಸಮೀಪತಃ||

ಪೃಥಿವೀಪತೇ! ಅಲ್ಲಿ ಕಾರ್ಯಾರ್ಥವಾಗಿ ದೇವತೆಗಳ ಸಮೀಪ ಬಂದಿದ್ದ ಪೃಥ್ವಿಯನ್ನೂ ನೋಡಿದೆ.

11008022a ಉಪಗಮ್ಯ ತದಾ ಧಾತ್ರೀ ದೇವಾನಾಹ ಸಮಾಗತಾನ್|

11008022c ಯತ್ಕಾರ್ಯಂ ಮಮ ಯುಷ್ಮಾಭಿರ್ಬ್ರಹ್ಮಣಃ ಸದನೇ ತದಾ|

11008022e ಪ್ರತಿಜ್ಞಾತಂ ಮಹಾಭಾಗಾಸ್ತಚ್ಚೀಘ್ರಂ ಸಂವಿಧೀಯತಾಮ್||

ಆಗ ಧರಿತ್ರಿಯು ಬಳಿಸಾರಿ ನೆರೆದಿದ್ದ ದೇವತೆಗಳಿಗೆ ಹೇಳಿದಳು: “ಮಹಾಭಾಗರೇ! ಬ್ರಹ್ಮಸದನದಲ್ಲಿ ನೀವು ಪ್ರತಿಜ್ಞೆಮಾಡಿದ್ದ ನನ್ನ ಕಾರ್ಯವನ್ನು ಶೀಘ್ರವಾಗಿ ನಡೆಸಿಕೊಡಿರಿ!”

11008023a ತಸ್ಯಾಸ್ತದ್ವಚನಂ ಶ್ರುತ್ವಾ ವಿಷ್ಣುರ್ಲೋಕನಮಸ್ಕೃತಃ|

11008023c ಉವಾಚ ಪ್ರಹಸನ್ವಾಕ್ಯಂ ಪೃಥಿವೀಂ ದೇವಸಂಸದಿ||

ಅವಳ ಆ ಮಾತನ್ನು ಕೇಳಿ ಲೋಕನಮಸ್ಕೃತ ವಿಷ್ಣುವು ನಗುತ್ತಾ ದೇವಸಂಸದಿಯಲ್ಲಿ ಪೃಥ್ವಿಗೆ ಈ ಮಾತನ್ನಾಡಿದನು:

11008024a ಧೃತರಾಷ್ಟ್ರಸ್ಯ ಪುತ್ರಾಣಾಂ ಯಸ್ತು ಜ್ಯೇಷ್ಠಃ ಶತಸ್ಯ ವೈ|

11008024c ದುರ್ಯೋಧನ ಇತಿ ಖ್ಯಾತಃ ಸ ತೇ ಕಾರ್ಯಂ ಕರಿಷ್ಯತಿ|

11008024e ತಂ ಚ ಪ್ರಾಪ್ಯ ಮಹೀಪಾಲಂ ಕೃತಕೃತ್ಯಾ ಭವಿಷ್ಯಸಿ||

“ಧೃತರಾಷ್ಟ್ರನ ನೂರು ಪುತ್ರರಲ್ಲಿ ಜ್ಯೇಷ್ಠನಾದ ದುರ್ಯೋಧನನೆಂದು ಖ್ಯಾತನಾಗಿರುವ ಅವನು ನಿನ್ನ ಕಾರ್ಯವನ್ನು ಮಾಡಿಕೊಡುತ್ತಾನೆ. ಆ ಮಹೀಪಾಲನನ್ನು ಹೊಂದಿದ ನೀನು ಕೃತಕೃತ್ಯಳಾಗುವೆ!

11008025a ತಸ್ಯಾರ್ಥೇ ಪೃಥಿವೀಪಾಲಾಃ ಕುರುಕ್ಷೇತ್ರೇ ಸಮಾಗತಾಃ|

11008025c ಅನ್ಯೋನ್ಯಂ ಘಾತಯಿಷ್ಯಂತಿ ದೃಢೈಃ ಶಸ್ತ್ರೈಃ ಪ್ರಹಾರಿಣಃ||

ಅವನಿಗೋಸ್ಕರವಾಗಿ ಪೃಥ್ವೀಪಾಲರು ಕುರುಕ್ಷೇತ್ರದಲ್ಲಿ ಸೇರಿ ದೃಢ ಶಸ್ತ್ರ ಪ್ರಹಾರಗಳಿಂದ ಅನ್ಯೋನ್ಯರನ್ನು ಸಂಹರಿಸುತ್ತಾರೆ.

11008026a ತತಸ್ತೇ ಭವಿತಾ ದೇವಿ ಭಾರಸ್ಯ ಯುಧಿ ನಾಶನಮ್|

11008026c ಗಚ್ಚ ಶೀಘ್ರಂ ಸ್ವಕಂ ಸ್ಥಾನಂ ಲೋಕಾನ್ಧಾರಯ ಶೋಭನೇ||

ದೇವೀ! ಆ ಯುದ್ಧದಲ್ಲಿ ನೀನು ಹೊತ್ತಿರುವ ಭಾರವು ನಾಶವಾಗುತ್ತದೆ. ಶೋಭನೇ! ಶೀಘ್ರವಾಗಿ ನಿನ್ನ ಸ್ವಸ್ಥಾನಕ್ಕೆ ತೆರಳಿ ಲೋಕಗಳನ್ನು ಧರಿಸು!”

11008027a ಸ ಏಷ ತೇ ಸುತೋ ರಾಜಽಲ್ಲೋಕಸಂಹಾರಕಾರಣಾತ್|

11008027c ಕಲೇರಂಶಃ ಸಮುತ್ಪನ್ನೋ ಗಾಂಧಾರ್ಯಾ ಜಠರೇ ನೃಪ||

ರಾಜನ್! ನೃಪ! ಲೋಕಸಂಹಾರದ ಕಾರಣಾರ್ಥವಾಗಿ ಕಲಿಯ ಅಂಶದಿಂದ ಅವನು ಗಾಂಧಾರಿಯ ಜಠರದಲ್ಲಿ ನಿನ್ನ ಸುತನಾಗಿ ಹುಟ್ಟಿದನು.

11008028a ಅಮರ್ಷೀ ಚಪಲಶ್ಚಾಪಿ ಕ್ರೋಧನೋ ದುಷ್ಪ್ರಸಾಧನಃ|

11008028c ದೈವಯೋಗಾತ್ಸಮುತ್ಪನ್ನಾ ಭ್ರಾತರಶ್ಚಾಸ್ಯ ತಾದೃಶಾಃ||

ದೈವಯೋಗದಿಂದ ಅಸಹನಶೀಲನೂ, ಚಪಲನೂ, ಕೋಪಿಷ್ಠನೂ, ಅಸಂತುಷ್ಟನೂ ಆಗಿದ್ದ ಅವನಂತೆಯೇ ಅವನ ಸಹೋದರರೂ ಹುಟ್ಟಿಕೊಂಡರು.

11008029a ಶಕುನಿರ್ಮಾತುಲಶ್ಚೈವ ಕರ್ಣಶ್ಚ ಪರಮಃ ಸಖಾ|

11008029c ಸಮುತ್ಪನ್ನಾ ವಿನಾಶಾರ್ಥಂ ಪೃಥಿವ್ಯಾಂ ಸಹಿತಾ ನೃಪಾಃ|

11008029e ಏತಮರ್ಥಂ ಮಹಾಬಾಹೋ ನಾರದೋ ವೇದ ತತ್ತ್ವತಃ||

ಪೃಥ್ವಿಯ ನೃಪರನ್ನು ಒಟ್ಟಾಗಿ ವಿನಾಶಗೊಳಿಸಲಿಕ್ಕಾಗಿಯೇ ಅವನ ಮಾವ ಶಕುನಿಯೂ ಪರಮ ಸಖ ಕರ್ಣನೂ ಹುಟ್ಟಿದ್ದರು. ಮಹಾಬಾಹೋ! ಇದರ ಅರ್ಥವನ್ನು ನಾರದನು ತತ್ತ್ವತಃ ತಿಳಿದುಕೊಂಡಿದ್ದಾನೆ.

11008030a ಆತ್ಮಾಪರಾಧಾತ್ಪುತ್ರಾಸ್ತೇ ವಿನಷ್ಟಾಃ ಪೃಥಿವೀಪತೇ|

11008030c ಮಾ ತಾನ್ ಶೋಚಸ್ವ ರಾಜೇಂದ್ರ ನ ಹಿ ಶೋಕೇಽಸ್ತಿ ಕಾರಣಮ್||

ಪೃಥಿವೀಪತೇ! ತಾವೇ ಮಾಡಿದ ಅಪರಾಧಗಳಿಂದ ನಿನ್ನ ಪುತ್ರರು ವಿನಾಶಹೊಂದಿದ್ದಾರೆ. ರಾಜೇಂದ್ರ! ಅವರ ಕುರಿತು ಶೋಕಿಸಬೇಡ! ಇದರಲ್ಲಿ ಶೋಕಿಸುವ ಕಾರಣವೇ ಇಲ್ಲ!

11008031a ನ ಹಿ ತೇ ಪಾಂಡವಾಃ ಸ್ವಲ್ಪಮಪರಾಧ್ಯಂತಿ ಭಾರತ|

11008031c ಪುತ್ರಾಸ್ತವ ದುರಾತ್ಮಾನೋ ಯೈರಿಯಂ ಘಾತಿತಾ ಮಹೀ||

ಭಾರತ! ಪಾಂಡವರೂ ಕೂಡ ನಿನ್ನನ್ನು ಅಪರಾಧಿಯೆಂದು ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ದುರಾತ್ಮರಾದ ನಿನ್ನ ಮಕ್ಕಳೇ ಈ ಮಹಿಯನ್ನು ವಿನಾಶಮಾಡಿದರು.

11008032a ನಾರದೇನ ಚ ಭದ್ರಂ ತೇ ಪೂರ್ವಮೇವ ನ ಸಂಶಯಃ|

11008032c ಯುಧಿಷ್ಠಿರಸ್ಯ ಸಮಿತೌ ರಾಜಸೂಯೇ ನಿವೇದಿತಮ್||

ನಿನಗೆ ಮಂಗಳವಾಗಲಿ! ನಾರದನು ಹಿಂದೆಯೇ ಯುಧಿಷ್ಠಿರನ ರಾಜಸೂಯದ ಸಭೆಯಲ್ಲಿ ಇದನ್ನು ಹೇಳಿದ್ದನು. ಅದರಲ್ಲಿ ಸಂಶಯವೇ ಇಲ್ಲ.

11008033a ಪಾಂಡವಾಃ ಕೌರವಾಶ್ಚೈವ ಸಮಾಸಾದ್ಯ ಪರಸ್ಪರಮ್|

11008033c ನ ಭವಿಷ್ಯಂತಿ ಕೌಂತೇಯ ಯತ್ತೇ ಕೃತ್ಯಂ ತದಾಚರ||

“ಕೌಂತೇಯ! ಪಾಂಡವರು ಮತ್ತು ಕೌರವರು ಪರಸ್ಪರರನ್ನು ಎದುರಿಸಿ ಇಲ್ಲವಾಗುತ್ತಾರೆ. ನೀನು ಮಾಡಬೇಕಾದ ಕರ್ತವ್ಯವನ್ನು ಮಾಡು!”

11008034a ನಾರದಸ್ಯ ವಚಃ ಶ್ರುತ್ವಾ ತದಾಶೋಚಂತ ಪಾಂಡವಾಃ|

11008034c ಏತತ್ತೇ ಸರ್ವಮಾಖ್ಯಾತಂ ದೇವಗುಹ್ಯಂ ಸನಾತನಮ್||

ನಾರದನ ಮಾತನ್ನು ಕೇಳಿ ಪಾಂಡವರು ವ್ಯಥೆಪಟ್ಟಿದ್ದರು. ಇಗೋ ಸನಾತನವಾಗಿರುವ ಈ ದೇವರಹಸ್ಯವೆಲ್ಲವನ್ನೂ ಹೇಳಿದ್ದೇನೆ.

11008035a ಕಥಂ ತೇ ಶೋಕನಾಶಃ ಸ್ಯಾತ್ಪ್ರಾಣೇಷು ಚ ದಯಾ ಪ್ರಭೋ|

11008035c ಸ್ನೇಹಶ್ಚ ಪಾಂಡುಪುತ್ರೇಷು ಜ್ಞಾತ್ವಾ ದೈವಕೃತಂ ವಿಧಿಮ್||

ಪ್ರಭೋ! ಇದನ್ನು ಕೇಳಿದ ನಂತರವಾದರೂ ದೈವವು ನಡೆಸಿದ ವಿಧಿಯನ್ನು ತಿಳಿದು ನಿನ್ನ ಶೋಕವು ನಾಶವಾಗಲಿ. ಪ್ರಾಣಗಳ ಮೇಲೆ ದಯೆವುಂಟಾಗಲಿ. ಮತ್ತು ಪಾಂಡುಪುತ್ರರೊಡನೆ ಸ್ನೇಹವು ಬೆಳೆಯಲಿ.

11008036a ಏಷ ಚಾರ್ಥೋ ಮಹಾಬಾಹೋ ಪೂರ್ವಮೇವ ಮಯಾ ಶ್ರುತಃ|

11008036c ಕಥಿತೋ ಧರ್ಮರಾಜಸ್ಯ ರಾಜಸೂಯೇ ಕ್ರತೂತ್ತಮೇ||

11008037a ಯತಿತಂ ಧರ್ಮಪುತ್ರೇಣ ಮಯಾ ಗುಹ್ಯೇ ನಿವೇದಿತೇ|

11008037c ಅವಿಗ್ರಹೇ ಕೌರವಾಣಾಂ ದೈವಂ ತು ಬಲವತ್ತರಮ್||

ಮಹಾಬಾಹೋ! ಇದರ ಅರ್ಥವನ್ನು ನಾನು ಬಹಳ ಹಿಂದೆಯೇ ಕೇಳಿದ್ದೆ. ಉತ್ತಮ ಕ್ರತು ರಾಜಸೂಯದಲ್ಲಿ ಧರ್ಮರಾಜನಿಗೂ ಇದನ್ನು ಹೇಳಿದ್ದೆ. ಈ ಗುಟ್ಟನ್ನು ನನ್ನಿಂದ ಕೇಳಿದ ಧರ್ಮಪುತ್ರನೂ ಕೌರವರೊಂದಿಗೆ ಕಲಹವಾಗದಂತೆ ಬಹಳವಾಗಿ ಪ್ರಯತ್ನಿಸಿದನು. ಆದರೆ ದೈವವೇ ಬಲವತ್ತರವಾದುದು.

11008038a ಅನತಿಕ್ರಮಣೀಯೋ ಹಿ ವಿಧೀ ರಾಜನ್ಕಥಂ ಚನ|

11008038c ಕೃತಾಂತಸ್ಯ ಹಿ ಭೂತೇನ ಸ್ಥಾವರೇಣ ತ್ರಸೇನ ಚ||

ರಾಜನ್! ಕೃತಾಂತನ ಈ ವಿಧಿಯನ್ನು ಚರಾಚರ ಪ್ರಾಣಿಗಳಲ್ಲಿ ಯಾರಿಗೂ ಎಂದೂ ಅತಿಕ್ರಮಿಸಲಾಗುವುದಿಲ್ಲ.

11008039a ಭವಾನ್ಕರ್ಮಪರೋ ಯತ್ರ ಬುದ್ಧಿಶ್ರೇಷ್ಠಶ್ಚ ಭಾರತ|

11008039c ಮುಹ್ಯತೇ ಪ್ರಾಣಿನಾಂ ಜ್ಞಾತ್ವಾ ಗತಿಂ ಚಾಗತಿಮೇವ ಚ||

ನೀನು ಕರ್ಮಪರನಾಗಿರುವೆ! ಭಾರತ! ಬುದ್ಧಿಶ್ರೇಷ್ಠನೂ ಆಗಿರುವೆ. ಪ್ರಾಣಿಗಳ ಆಗಮನ-ನಿರ್ಗಮನಗಳ ಕುರಿತು ತಿಳಿದಿರುವ ನೀನು ಏಕೆ ಮೋಹಿತನಾಗುವೆ?

11008040a ತ್ವಾಂ ತು ಶೋಕೇನ ಸಂತಪ್ತಂ ಮುಹ್ಯಮಾನಂ ಮುಹುರ್ಮುಹುಃ|

11008040c ಜ್ಞಾತ್ವಾ ಯುಧಿಷ್ಠಿರೋ ರಾಜಾ ಪ್ರಾಣಾನಪಿ ಪರಿತ್ಯಜೇತ್||

ನೀನು ಶೋಕಸಂತಪ್ತನಾಗಿ ಪುನಃ ಪುನಃ ಮೂರ್ಛಿತನಾಗುತ್ತಿರುವೆ ಎಂದು ತಿಳಿದು ರಾಜಾ ಯುಧಿಷ್ಠಿರನು ಪ್ರಾಣಗಳನ್ನೂ ತ್ಯಜಿಸಿಯಾನು!

11008041a ಕೃಪಾಲುರ್ನಿತ್ಯಶೋ ವೀರಸ್ತಿರ್ಯಗ್ಯೋನಿಗತೇಷ್ವಪಿ|

11008041c ಸ ಕಥಂ ತ್ವಯಿ ರಾಜೇಂದ್ರ ಕೃಪಾಂ ವೈ ನ ಕರಿಷ್ಯತಿ||

ರಾಜೇಂದ್ರ! ತಿರ್ಯಗ್ಯೋನಿಗಳಲ್ಲಿ ಜನಿಸಿರುವ ಪಶು-ಪಕ್ಷಿಗಳ ಮೇಲೂ ಕೃಪಾಲುವಾಗಿರುವ ಆ ವೀರನು ನಿನ್ನ ಮೇಲೆ ಏಕೆ ಕೃಪೆಯಿಂದ ನಡೆದುಕೊಳ್ಳುವುದಿಲ್ಲ?

11008042a ಮಮ ಚೈವ ನಿಯೋಗೇನ ವಿಧೇಶ್ಚಾಪ್ಯನಿವರ್ತನಾತ್|

11008042c ಪಾಂಡವಾನಾಂ ಚ ಕಾರುಣ್ಯಾತ್ಪ್ರಾಣಾನ್ಧಾರಯ ಭಾರತ||

ಭಾರತ! ನನ್ನ ನಿಯೋಗದಿಂದ ವಿಧಿಯು ಅನತಿಕ್ರಮಣೀಯವೆಂದು ತಿಳಿದು ಪಾಂಡವರ ಮೇಲಿನ ಕಾರುಣ್ಯದಿಂದ ಪ್ರಾಣಧಾರಣೆಯನ್ನು ಮಾಡಿಕೊಂಡಿರು!

11008043a ಏವಂ ತೇ ವರ್ತಮಾನಸ್ಯ ಲೋಕೇ ಕೀರ್ತಿರ್ಭವಿಷ್ಯತಿ|

11008043c ಧರ್ಮಶ್ಚ ಸುಮಹಾಂಸ್ತಾತ ತಪ್ತಂ ಸ್ಯಾಚ್ಚ ತಪಶ್ಚಿರಾತ್||

ಹೀಗೆ ನಡೆದುಕೊಂಡರೆ ಲೋಕದಲ್ಲಿ ಕೀರ್ತಿಯುಂಟಾಗುತ್ತದೆ. ಮಗೂ! ಮಹಾ ಧರ್ಮವನ್ನೂ ದೀರ್ಘಕಾಲದ ತಪಸ್ಸನ್ನೂ ಪಡೆದುಕೊಳ್ಳಬಹುದು.

11008044a ಪುತ್ರಶೋಕಸಮುತ್ಪನ್ನಂ ಹುತಾಶಂ ಜ್ವಲಿತಂ ಯಥಾ|

11008044c ಪ್ರಜ್ಞಾಂಭಸಾ ಮಹಾರಾಜ ನಿರ್ವಾಪಯ ಸದಾ ಸದಾ||

ಮಹಾರಾಜ! ಪುತ್ರಶೋಕದಿಂದ ಹುಟ್ಟಿ ಪ್ರಜ್ವಲಿಸುತ್ತಿರುವ ಅಗ್ನಿಯನ್ನು ಪ್ರಜ್ಞೆಯೆಂಬ ನೀರಿನಿಂದ ಸದಾಕಾಲಕ್ಕಾಗಿ ಆರಿಸು!”

11008045a ಏತಚ್ಚ್ರುತ್ವಾ ತು ವಚನಂ ವ್ಯಾಸಸ್ಯಾಮಿತತೇಜಸಃ|

11008045c ಮುಹೂರ್ತಂ ಸಮನುಧ್ಯಾಯ ಧೃತರಾಷ್ಟ್ರೋಽಭ್ಯಭಾಷತ||

ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಕೇಳಿ ಮುಹೂರ್ತಕಾಲ ಯೋಚಿಸಿ ಧೃತರಾಷ್ಟ್ರನು ಹೇಳಿದನು:

11008046a ಮಹತಾ ಶೋಕಜಾಲೇನ ಪ್ರಣುನ್ನೋಽಸ್ಮಿ ದ್ವಿಜೋತ್ತಮ|

11008046c ನಾತ್ಮಾನಮವಬುಧ್ಯಾಮಿ ಮುಹ್ಯಮಾನೋ ಮುಹುರ್ಮುಹುಃ||

“ದ್ವಿಜೋತ್ತಮ! ಮಹಾ ಶೋಕಜಾಲದಲ್ಲಿ ಸಿಲುಕಿಬಿಟ್ಟಿದ್ದೇನೆ! ಪುನಃಪುನಃ ಮೂರ್ಛಿತನಾಗಿ ನನ್ನನ್ನು ನಾನೇ ತಿಳಿಯದಂತಾಗಿದ್ದೇನೆ.

11008047a ಇದಂ ತು ವಚನಂ ಶ್ರುತ್ವಾ ತವ ದೈವನಿಯೋಗಜಮ್|

11008047c ಧಾರಯಿಷ್ಯಾಮ್ಯಹಂ ಪ್ರಾಣಾನ್ಯತಿಷ್ಯೇ ಚ ನಶೋಚಿತುಮ್||

ದೈವವು ನಿಶ್ಚಯಿಸಿದುದು ಎಂಬ ನಿನ್ನ ಮಾತನ್ನು ಕೇಳಿ ಪ್ರಾಣಗಳನ್ನು ಹಿಡಿದುಕೊಳ್ಳುತ್ತೇನೆ ಮತ್ತು ಶೋಕಿಸದಿರಲು ಪ್ರಯತ್ನಿಸುತ್ತೇನೆ.”

11008048a ಏತಚ್ಚ್ರುತ್ವಾ ತು ವಚನಂ ವ್ಯಾಸಃ ಸತ್ಯವತೀಸುತಃ|

11008048c ಧೃತರಾಷ್ಟ್ರಸ್ಯ ರಾಜೇಂದ್ರ ತತ್ರೈವಾಂತರಧೀಯತ||

ರಾಜೇಂದ್ರ ಧೃತರಾಷ್ಟ್ರನ ಆ ಮಾತನ್ನು ಕೇಳಿ ಸತ್ಯವತೀಸುತ ವ್ಯಾಸನು ಅಲ್ಲಿತೇ ಅಂತರ್ಧಾನನಾದನು.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಅಷ್ಟಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಎಂಟನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವವು|

ಇದೂವರೆಗಿನ ಒಟ್ಟು ಮಹಾಪರ್ವಗಳೂ – ೧೦/೧೮, ಉಪಪರ್ವಗಳು-೮೦/೧೦೦, ಅಧ್ಯಾಯಗಳು-೧೩೦೯/೧೯೯೫, ಶ್ಲೋಕಗಳು-೪೯೪೭೪/೭೩೭೮೪

Comments are closed.