Stri Parva: Chapter 20

ಸ್ತ್ರೀ ಪರ್ವ

೨೦

ಹತನಾಗಿದ್ದ ಅಭಿಮನ್ಯುವನ್ನು ಆಲಂಗಿಸಿ ಪರಿತಪಿಸುತ್ತಿದ್ದ ಉತ್ತರೆಯನ್ನು ಕೃಷ್ಣನಿಗೆ ತೋರಿಸುತ್ತಾ ಗಾಂಧಾರಿಯು ವಿಲಪಿಸಿದುದು (೧-೩೨).

11020001 ಗಾಂಧಾರ್ಯುವಾಚ

11020001a ಅಧ್ಯರ್ಧಗುಣಮಾಹುರ್ಯಂ ಬಲೇ ಶೌರ್ಯೇ ಚ ಮಾಧವ|

11020001c ಪಿತ್ರಾ ತ್ವಯಾ ಚ ದಾಶಾರ್ಹ ದೃಪ್ತಂ ಸಿಂಹಮಿವೋತ್ಕಟಮ್||

11020002a ಯೋ ಬಿಭೇದ ಚಮೂಮೇಕೋ ಮಮ ಪುತ್ರಸ್ಯ ದುರ್ಭಿದಾಮ್|

11020002c ಸ ಭೂತ್ವಾ ಮೃತ್ಯುರನ್ಯೇಷಾಂ ಸ್ವಯಂ ಮೃತ್ಯುವಶಂ ಗತಃ||

ಗಾಂಧಾರಿಯು ಹೇಳಿದಳು: “ಮಾಧವ! ದಾಶಾರ್ಹ! ಬಲ ಮತ್ತು ಶೌರ್ಯಗಳಲ್ಲಿ ತನ್ನ ತಂದೆ ಮತ್ತು ನಿನಗಿಂತಲೂ ಒಂದೂವರೆಯುಷ್ಟು ಗುಣವುಳ್ಳವನೆಂದು ಹೇಳುವ, ಸಿಂಹದ ಬಲವಿದ್ದ, ದರ್ಪನಾಗಿದ್ದ ಅಭಿಮನ್ಯುವು ನನ್ನ ಮಗನ ದುರಾಸದ ಸೇನೆಯನ್ನು ಭೇದಿಸಿ, ಅನ್ಯರ ಮೃತ್ಯುವಿಗೆ ಕಾರಣನಾಗಿ ತಾನೇ ಮೃತ್ಯುವಶನಾಗಿಹೋದನು!

11020003a ತಸ್ಯೋಪಲಕ್ಷಯೇ ಕೃಷ್ಣ ಕಾರ್ಷ್ಣೇರಮಿತತೇಜಸಃ|

11020003c ಅಭಿಮನ್ಯೋರ್ಹತಸ್ಯಾಪಿ ಪ್ರಭಾ ನೈವೋಪಶಾಮ್ಯತಿ||

ಕೃಷ್ಣ! ಅರ್ಜುನನ ಮಗ ಅಮಿತ ತೇಜಸ್ವಿ ಅಭಿಮನ್ಯುವು ಹತನಾಗಿದ್ದರೂ ಅವನ ಪ್ರಭೆಯು ಕುಂದಿರದೇ ಇರುವುದನ್ನು ನಾನು ನೋಡುತ್ತಿದ್ದೇನೆ!

11020004a ಏಷಾ ವಿರಾಟದುಹಿತಾ ಸ್ನುಷಾ ಗಾಂಡೀವಧನ್ವನಃ|

11020004c ಆರ್ತಾ ಬಾಲಾ ಪತಿಂ ವೀರಂ ಶೋಚ್ಯಾ ಶೋಚತ್ಯನಿಂದಿತಾ||

ವಿರಾಟನ ಮಗಳು, ಗಾಂಡೀವಧನ್ವಿಯ ಸೊಸೆ ಅನಿಂದಿತೆ ಬಾಲೆಯು ವೀರ ಪತಿಯನ್ನು ನೋಡಿ ಆರ್ತಳಾಗಿ ಶೋಕಿಸುತ್ತಿದ್ದಾಳೆ!

11020005a ತಮೇಷಾ ಹಿ ಸಮಾಸಾದ್ಯ ಭಾರ್ಯಾ ಭರ್ತಾರಮಂತಿಕೇ|

11020005c ವಿರಾಟದುಹಿತಾ ಕೃಷ್ಣ ಪಾಣಿನಾ ಪರಿಮಾರ್ಜತಿ||

ಕೃಷ್ಣ! ಅವನ ಭಾರ್ಯೆ ವಿರಾಟಸುತೆಯು ತನ್ನ ಪತಿಯ ಬಳಿಸಾರಿ ಕೈಗಳಿಂದ ಅವನನ್ನು ನೇವರಿಸುತ್ತಿದ್ದಾಳೆ!

11020006a ತಸ್ಯ ವಕ್ತ್ರಮುಪಾಘ್ರಾಯ ಸೌಭದ್ರಸ್ಯ ಯಶಸ್ವಿನೀ|

11020006c ವಿಬುದ್ಧಕಮಲಾಕಾರಂ ಕಂಬುವೃತ್ತಶಿರೋಧರಮ್||

11020007a ಕಾಮ್ಯರೂಪವತೀ ಚೈಷಾ ಪರಿಷ್ವಜತಿ ಭಾಮಿನೀ|

11020007c ಲಜ್ಜಮಾನಾ ಪುರೇವೈನಂ ಮಾಧ್ವೀಕಮದಮೂರ್ಚಿತಾ||

ಅರಳಿದ ಕಮಲದಂತಿರುವ ಮತ್ತು ಶಂಖದಂತೆ ದುಂಡಾಗಿರುವ ಕತ್ತುಳ್ಳ ಸೌಭದ್ರನ ಶಿರವನ್ನು ಕಮನೀಯ ರೂಪವತಿ ಯಶಸ್ವಿನೀ ಭಾಮಿನೀ ಉತ್ತರೆಯು ಆಘ್ರಾಣಿಸಿ ಆಲಂಗಿಸಿಕೊಂಡಿದ್ದಾಳೆ. ಹಿಂದೆ ಅವಳು ಮಧುಪಾನದಿಂದ ಉನ್ಮತ್ತಳಾಗಿ ಲಜ್ಜೆಯಿಂದ ಅಭಿಮನ್ಯುವನ್ನು ಆಲಂಗಿಸುತ್ತಿದ್ದಳು. 

11020008a ತಸ್ಯ ಕ್ಷತಜಸಂದಿಗ್ಧಂ ಜಾತರೂಪಪರಿಷ್ಕೃತಮ್|

11020008c ವಿಮುಚ್ಯ ಕವಚಂ ಕೃಷ್ಣ ಶರೀರಮಭಿವೀಕ್ಷತೇ||

ಕೃಷ್ಣ! ರಕ್ತದಿಂದ ಅಂಟಿಕೊಂಡಿದ್ದ ಸುವರ್ಣಮಯ ಕವಚವನ್ನು ಬಿಚ್ಚಿ ಅವಳು ಅವನ ಶರೀರವನ್ನು ವೀಕ್ಷಿಸುತ್ತಿದ್ದಾಳೆ!

11020009a ಅವೇಕ್ಷಮಾಣಾ ತಂ ಬಾಲಾ ಕೃಷ್ಣ ತ್ವಾಮಭಿಭಾಷತೇ|

11020009c ಅಯಂ ತೇ ಪುಂಡರೀಕಾಕ್ಷ ಸದೃಶಾಕ್ಷೋ ನಿಪಾತಿತಃ||

ಕೃಷ್ಣ! ಅವನನ್ನು ನೋಡುತ್ತಾ ಆ ಬಾಲೆಯು ನಿನಗೆ ಹೇಳುತ್ತಿದ್ದಾಳೆ: “ಪುಂಡರೀಕಾಕ್ಷ! ನಿನ್ನಂತೆಯೇ ಇದ್ದ ಇವನು ಹತನಾಗಿ ಕೆಳಗುರುಳಿದ್ದಾನೆ!

11020010a ಬಲೇ ವೀರ್ಯೇ ಚ ಸದೃಶಸ್ತೇಜಸಾ ಚೈವ ತೇಽನಘ|

11020010c ರೂಪೇಣ ಚ ತವಾತ್ಯರ್ಥಂ ಶೇತೇ ಭುವಿ ನಿಪಾತಿತಃ||

ಅನಘ! ಬಲ-ವೀರ್ಯ-ತೇಜಸ್ಸು-ರೂಪಗಳಲ್ಲಿ ನಿನ್ನಂತೆಯೇ ಇದ್ದ ಇವನು ಕೆಳಗುರುಳಿಸಲ್ಪಟ್ಟು ಭೂಮಿಯ ಮೇಲೆ ಮಲಗಿದ್ದಾನೆ!

11020011a ಅತ್ಯಂತಸುಕುಮಾರಸ್ಯ ರಾಂಕವಾಜಿನಶಾಯಿನಃ|

11020011c ಕಚ್ಚಿದದ್ಯ ಶರೀರಂ ತೇ ಭೂಮೌ ನ ಪರಿತಪ್ಯತೇ||

ರಂಕುಮೃಗದ ಚರ್ಮದ ಮೇಲೆ ಮಲಗುತ್ತಿದ್ದ ನಿನ್ನ ಈ ಅತ್ಯಂತ ಸುಕುಮಾರ ಶರೀರವು ಇಂದು ಭೂಮಿಯ ಮೇಲೆ ಬಿದ್ದು ಪರಿತಪಿಸುತ್ತಿಲ್ಲವೇ?

11020012a ಮಾತಂಗಭುಜವರ್ಷ್ಮಾಣೌ ಜ್ಯಾಕ್ಷೇಪಕಠಿನತ್ವಚೌ|

11020012c ಕಾಂಚನಾಂಗದಿನೌ ಶೇಷೇ ನಿಕ್ಷಿಪ್ಯ ವಿಪುಲೌ ಭುಜೌ||

ಮೌರ್ವಿಯನ್ನು ಸೆಳೆದು ಜಡ್ಡುಗಟ್ಟಿದ ಚರ್ಮಯುಕ್ತವಾದ, ಕಾಂಚನ ಅಂಗದಗಳನ್ನು ಧರಿಸಿರುವ, ಆನೆಯ ಸೊಂಡಿಲಿನಂತಿರುವ ಎರಡೂ ವಿಪುಲ ಭುಜಗಳನ್ನು ಚಾಚಿ ಮಲಗಿರುವೆಯಲ್ಲ!

11020013a ವ್ಯಾಯಮ್ಯ ಬಹುಧಾ ನೂನಂ ಸುಖಸುಪ್ತಃ ಶ್ರಮಾದಿವ|

11020013c ಏವಂ ವಿಲಪತೀಮಾರ್ತಾಂ ನ ಹಿ ಮಾಮಭಿಭಾಷಸೇ||

ಬಹಳ ಶ್ರಮದಿಂದ ಯುದ್ಧಮಾಡಿ ಆಯಾಸಕಳೆಯಲೆಂದು ಸುಖವಾಗಿ ನೀನು ಮಲಗಿರುವಂತಿದೆ! ಆದುದರಿಂದಲೇ ನೀನು ಆರ್ತಳಾಗಿ ವಿಲಪಿಸುತ್ತಿರುವ ನನ್ನೊಡನೆ ಮಾತನಾಡುತ್ತಿಲ್ಲ!

11020014a ಆರ್ಯಾಮಾರ್ಯ ಸುಭದ್ರಾಂ ತ್ವಮಿಮಾಂಶ್ಚ ತ್ರಿದಶೋಪಮಾನ್|

11020014c ಪಿತೄನ್ಮಾಂ ಚೈವ ದುಃಖಾರ್ತಾಂ ವಿಹಾಯ ಕ್ವ ಗಮಿಷ್ಯಸಿ||

ಆರ್ಯ! ಆರ್ಯಳಾದ ಸುಭದ್ರೆಯನ್ನೂ, ದೇವೋಪಮರಾದ ನಿನ್ನ ಪಿತೃಗಳನ್ನೂ ಮತ್ತು ದುಃಖಾರ್ತಳಾಗಿರುವ ನನ್ನನ್ನೂ ತೊರೆದು ನೀನು ಎಲ್ಲಿಗೆ ಹೋಗುವೆ?”

11020015a ತಸ್ಯ ಶೋಣಿತಸಂದಿಗ್ಧಾನ್ಕೇಶಾನುನ್ನಾಮ್ಯ ಪಾಣಿನಾ|

11020015c ಉತ್ಸಂಗೇ ವಕ್ತ್ರಮಾಧಾಯ ಜೀವಂತಮಿವ ಪೃಚ್ಚತಿ||

ಅಭಿಮನ್ಯುವಿನ ತಲೆಯನ್ನು ತನ್ನ ತೊಡೆಯಮೇಲಿರಿಸಿಕೊಂಡು ಉತ್ತರೆಯು ಅವನ ಮುಖದ ಮೇಲೆ ರಕ್ತದಿಂದ ತೋಯ್ದು ಅಂಟಿಕೊಂಡಿರುವ ತಲೆಗೂದಲುಗಳನ್ನು ಮೆಲ್ಲಗೆ ಬಿಡಿಸುತ್ತಾ, ಅವನಿನ್ನೂ ಜೀವಂತನಾಗಿರುವನೆಂದೇ ಭಾವಿಸಿ, ಅವನನ್ನು ಪ್ರಶ್ನಿಸುತ್ತಿದ್ದಾಳೆ!

11020015e ಸ್ವಸ್ರೀಯಂ ವಾಸುದೇವಸ್ಯ ಪುತ್ರಂ ಗಾಂಡೀವಧನ್ವನಃ||

11020016a ಕಥಂ ತ್ವಾಂ ರಣಮಧ್ಯಸ್ಥಂ ಜಘ್ನುರೇತೇ ಮಹಾರಥಾಃ|

“ವಾಸುದೇವನ ಅಳಿಯನೂ ಗಾಂಡೀವಧನ್ವಿಯ ಪುತ್ರನೂ ಆದ ನಿನ್ನನ್ನು ರಣರಂಗದ ಮಧ್ಯದಲ್ಲಿ ಆ ಮಹಾರಥರು ಹೇಗೆ ತಾನೇ ಸಂಹರಿಸಿದರು?

11020016c ಧಿಗಸ್ತು ಕ್ರೂರಕರ್ತೄಂಸ್ತಾನ್ಕೃಪಕರ್ಣಜಯದ್ರಥಾನ್||

11020017a ದ್ರೋಣದ್ರೌಣಾಯನೀ ಚೋಭೌ ಯೈರಸಿ ವ್ಯಸನೀಕೃತಃ|

ನನ್ನನ್ನು ಹೀಗೆ ವಿಧವೆಯನ್ನಾಗಿ ಮಾಡಿದ ಆ ಕ್ರೂರಕರ್ಮಿ ಕೃಪ-ಕರ್ಣ-ಜಯದ್ರಥ-ದ್ರೋಣ-ದ್ರೌಣಿಗಳಿಗೆ ಧಿಕ್ಕಾರ!

11020017c ರಥರ್ಷಭಾಣಾಂ ಸರ್ವೇಷಾಂ ಕಥಮಾಸೀತ್ತದಾ ಮನಃ||

11020018a ಬಾಲಂ ತ್ವಾಂ ಪರಿವಾರ್ಯೈಕಂ ಮಮ ದುಃಖಾಯ ಜಘ್ನುಷಾಮ್|

ನನಗೆ ದುಃಖವನ್ನುಂಟುಮಾಡುವುದಕ್ಕಾಗಿಯೇ ಬಾಲಕನಾದ ನಿನ್ನನ್ನೊಬ್ಬನನ್ನೇ ಸುತ್ತುವರೆದಾಗ ಆ ಎಲ್ಲ ರಥರ್ಷಭರ ಮನಸ್ಸು ಹೇಗಿದ್ದೀತು?

11020018c ಕಥಂ ನು ಪಾಂಡವಾನಾಂ ಚ ಪಾಂಚಾಲಾನಾಂ ಚ ಪಶ್ಯತಾಮ್||

11020018e ತ್ವಂ ವೀರ ನಿಧನಂ ಪ್ರಾಪ್ತೋ ನಾಥವಾನ್ಸನ್ನನಾಥವತ್||

ವೀರ! ಪಾಂಡವರು ಮತ್ತು ಪಾಂಚಾಲರು ನೋಡುತ್ತಿದ್ದಂತೆಯೇ, ರಕ್ಷಕರನ್ನು ಪಡೆದಿದ್ದ ನೀನು ಅನಾಥನಂತೆ, ಹೇಗೆ ನಿಧನ ಹೊಂದಿದೆ?

11020019a ದೃಷ್ಟ್ವಾ ಬಹುಭಿರಾಕ್ರಂದೇ ನಿಹತಂ ತ್ವಾಮನಾಥವತ್|

11020019c ವೀರಃ ಪುರುಷಶಾರ್ದೂಲಃ ಕಥಂ ಜೀವತಿ ಪಾಂಡವಃ||

ಆನೇಕರ ಆಕ್ರಮಣಕ್ಕೊಳಪಟ್ಟು ಅನಾಥನಂತೆ ನೀನು ಹತನಾದುದನ್ನು ನೋಡಿ ವೀರ ಪುರುಷಶಾರ್ದೂಲ ಪಾಂಡವ ಅರ್ಜುನನು ಹೇಗೆ ಜೀವಿಸಿರುತ್ತಾನೆ?

11020020a ನ ರಾಜ್ಯಲಾಭೋ ವಿಪುಲಃ ಶತ್ರೂಣಾಂ ವಾ ಪರಾಭವಃ|

11020020c ಪ್ರೀತಿಂ ದಾಸ್ಯತಿ ಪಾರ್ಥಾನಾಂ ತ್ವಾಮೃತೇ ಪುಷ್ಕರೇಕ್ಷಣ||

ಪುಂಡರೀಕಾಕ್ಷ! ನೀನಿಲ್ಲದೇ ವಿಪುಲ ರಾಜ್ಯಲಾಭವಾಗಲೀ ಶತ್ರುಗಳ ಪರಾಭವವಾಗಲೀ ಪಾರ್ಥರಿಗೆ ಸಂತೋಷವನ್ನು ಕೊಡುವುದಿಲ್ಲ!

11020021a ತವ ಶಸ್ತ್ರಜಿತಾಽಲ್ಲೋಕಾನ್ಧರ್ಮೇಣ ಚ ದಮೇನ ಚ|

11020021c ಕ್ಷಿಪ್ರಮನ್ವಾಗಮಿಷ್ಯಾಮಿ ತತ್ರ ಮಾಂ ಪ್ರತಿಪಾಲಯ||

ಶಸ್ತ್ರಗಳಿಂದ ನೀನು ಜಯಿಸಿದ ಲೋಕಗಳನ್ನು ಬೇಗನೇ ನಾನು ಧರ್ಮ-ದಮಗಳಿಂದ ಪಡೆದುಕೊಂಡು ಬರುತ್ತೇನೆ. ಅಲ್ಲಿ ನನ್ನನ್ನು ಪ್ರತಿಪಾಲಿಸು!

11020022a ದುರ್ಮರಂ ಪುನರಪ್ರಾಪ್ತೇ ಕಾಲೇ ಭವತಿ ಕೇನ ಚಿತ್|

11020022c ಯದಹಂ ತ್ವಾಂ ರಣೇ ದೃಷ್ಟ್ವಾ ಹತಂ ಜೀವಾಮಿ ದುರ್ಭಗಾ||

ಮರಣಕಾಲವು ಸನ್ನಿಹಿತವಾಗದೇ ಯಾರಿಗೂ ಮರಣಹೊಂದಲು ಸಾಧ್ಯವಿಲ್ಲ. ಏಕೆಂದರೆ ರಣದಲ್ಲಿ ಹತನಾಗಿರುವ ನಿನ್ನನ್ನು ನೋಡಿಯೂ ಕೂಡ ದುರ್ಭಾಗ್ಯಳಾದ ನಾನು ಜೀವಿಸಿರುವೆನಲ್ಲಾ!

11020023a ಕಾಮಿದಾನೀಂ ನರವ್ಯಾಘ್ರ ಶ್ಲಕ್ಷ್ಣಯಾ ಸ್ಮಿತಯಾ ಗಿರಾ|

11020023c ಪಿತೃಲೋಕೇ ಸಮೇತ್ಯಾನ್ಯಾಂ ಮಾಮಿವಾಮಂತ್ರಯಿಷ್ಯಸಿ||

ನರವ್ಯಾಘ್ರ! ಇಲ್ಲಿ ನನ್ನನ್ನು ಪ್ರೀತಿಪೂರ್ವಕವಾಗಿ ಮಾತನಾಡಿಸುತ್ತಿದ್ದಂತೆ ಪಿತೃಲೋಕದಲ್ಲಿ ಬೇರೆ ಯಾರನ್ನು ಸುಮಧುರವಾಗಿ ಸ್ಮಿತಪೂರ್ವಕವಾಗಿ ಮಾತನಾಡಿಸುವೆ?

11020024a ನೂನಮಪ್ಸರಸಾಂ ಸ್ವರ್ಗೇ ಮನಾಂಸಿ ಪ್ರಮಥಿಷ್ಯಸಿ|

11020024c ಪರಮೇಣ ಚ ರೂಪೇಣ ಗಿರಾ ಚ ಸ್ಮಿತಪೂರ್ವಯಾ||

ನಿನ್ನ ಪರಮ ರೂಪದಿಂದ ಮತ್ತು ಮುಗುಳ್ನಗೆಯ ಮಾತುಗಳಿಂದ ನೀನು ನಿಜವಾಗಿಯೂ ಸ್ವರ್ಗದಲ್ಲಿ ಅಪ್ಸರೆಯರ ಮನಸ್ಸನ್ನು ಕಲಕಿಬಿಡುತ್ತೀಯೆ!

11020025a ಪ್ರಾಪ್ಯ ಪುಣ್ಯಕೃತಾಽಲ್ಲೋಕಾನಪ್ಸರೋಭಿಃ ಸಮೇಯಿವಾನ್|

11020025c ಸೌಭದ್ರ ವಿಹರನ್ಕಾಲೇ ಸ್ಮರೇಥಾಃ ಸುಕೃತಾನಿ ಮೇ||

ಸೌಭದ್ರ! ಪುಣ್ಯಕೃತರ ಲೋಕಗಳನ್ನೂ ಅಪ್ಸರೆಯರನ್ನೂ ಸೇರಿಕೊಂಡು ವಿಹರಿಸುತ್ತಿರುವಾಗ ನೀನು ಖಂಡಿತವಾಗಿಯೂ ನನ್ನ ಸುಕೃತಗಳನ್ನು ಸ್ಮರಿಸಿಕೊಳ್ಳುತ್ತೀಯೆ!

11020026a ಏತಾವಾನಿಹ ಸಂವಾಸೋ ವಿಹಿತಸ್ತೇ ಮಯಾ ಸಹ|

11020026c ಷಣ್ಮಾಸಾನ್ಸಪ್ತಮೇ ಮಾಸಿ ತ್ವಂ ವೀರ ನಿಧನಂ ಗತಃ||

ವೀರ! ನನ್ನೊಡನೆ ನಿನ್ನ ಸಹವಾಸವು ಕೇವಲ ಆರು ತಿಂಗಳುಗಳು ಮಾತ್ರವೇ ವಿಹಿತವಾಗಿತ್ತು! ಏಳನೆಯ ತಿಂಗಳಿನಲ್ಲಿಯೇ ನೀನು ನಿಧನ ಹೊಂದಿದೆ!”

11020027a ಇತ್ಯುಕ್ತವಚನಾಮೇತಾಮಪಕರ್ಷಂತಿ ದುಃಖಿತಾಮ್|

11020027c ಉತ್ತರಾಂ ಮೋಘಸಂಕಲ್ಪಾಂ ಮತ್ಸ್ಯರಾಜಕುಲಸ್ತ್ರಿಯಃ||

ಹೀಗೆ ಹೇಳಿಕೊಂಡು ವ್ಯರ್ಥಮನೋರಥಳಾಗಿ ಶೋಕಿಸುತ್ತಿರುವ ಉತ್ತರೆಯನ್ನು ಮತ್ಸ್ಯರಾಜಕುಲದ ಸ್ತ್ರೀಯರು ಹಿಂದಕ್ಕೆ ಎಳೆಯುತ್ತಿದ್ದಾರೆ!

11020028a ಉತ್ತರಾಮಪಕೃಷ್ಯೈನಾಮಾರ್ತಾಮಾರ್ತತರಾಃ ಸ್ವಯಮ್|

11020028c ವಿರಾಟಂ ನಿಹತಂ ದೃಷ್ಟ್ವಾ ಕ್ರೋಶಂತಿ ವಿಲಪಂತಿ ಚ||

ಉತ್ತರೆಯನ್ನು ಹಿಂದಕ್ಕೆಳೆದ ಆ ಸ್ತ್ರೀಯರು ಸ್ವಯಂ ತಾವೇ ಅತ್ಯಂತ ಆರ್ತರಾಗಿದ್ದಾರೆ. ವಿರಾಟನು ಹತನಾದುದನ್ನು ನೋಡಿ ವಿಲಪಿಸುತ್ತಾ ಕೂಗಿಕೊಳ್ಳುತ್ತಿದ್ದರೆ!

11020029a ದ್ರೋಣಾಸ್ತ್ರಶರಸಂಕೃತ್ತಂ ಶಯಾನಂ ರುಧಿರೋಕ್ಷಿತಮ್|

11020029c ವಿರಾಟಂ ವಿತುದಂತ್ಯೇತೇ ಗೃಧ್ರಗೋಮಾಯುವಾಯಸಾಃ||

ದ್ರೋಣನ ಅಸ್ತ್ರ-ಶರಗಳಿಂದ ಗಾಯಗೊಂಡು ರಕ್ತದಿಂದ ತೋಯ್ದು ಮಲಗಿರುವ ವಿರಾಟನನ್ನು ಹದ್ದು-ನರಿ-ಕಾಗೆಗಳು ಕಿತ್ತು ತಿನ್ನುತ್ತಿವೆ!

11020030a ವಿತುದ್ಯಮಾನಂ ವಿಹಗೈರ್ವಿರಾಟಮಸಿತೇಕ್ಷಣಾಃ|

11020030c ನ ಶಕ್ನುವಂತಿ ವಿವಶಾ ನಿವರ್ತಯಿತುಮಾತುರಾಃ||

ವಿರಾಟನನ್ನು ಕುಕ್ಕುತ್ತಿರುವ ಪಕ್ಷಿಗಳನ್ನು ಕಪ್ಪುಕಣ್ಣಿನ ಆತುರ ವಿವಶ ಸ್ತ್ರೀಯರು ಓಡಿಸಲು ಪ್ರಯತ್ನಿಸಿದರೂ ಅಶಕ್ಯರಾಗಿದ್ದಾರೆ.

11020031a ಆಸಾಮಾತಪತಪ್ತಾನಾಮಾಯಾಸೇನ ಚ ಯೋಷಿತಾಮ್|

11020031c ಶ್ರಮೇಣ ಚ ವಿವರ್ಣಾನಾಂ ರೂಪಾಣಾಂ ವಿಗತಂ ವಪುಃ||

ಬಿಸಿಲಿನಿಂದಲೂ ಆಯಾಸದಿಂದಲೂ ಪರಿತಪ್ತರಾಗಿರುವ ಸ್ತ್ರೀಯರು ವಿವರ್ಣರಾಗಿ ಅವರ ಸುಂದರ ಮುಖಗಳು ಬಾಡಿಹೋಗಿವೆ!

11020032a ಉತ್ತರಂ ಚಾಭಿಮನ್ಯುಂ ಚ ಕಾಂಬೋಜಂ ಚ ಸುದಕ್ಷಿಣಮ್|

11020032c ಶಿಶೂನೇತಾನ್ ಹತಾನ್ಪಶ್ಯ ಲಕ್ಷ್ಮಣಂ ಚ ಸುದರ್ಶನಮ್||

11020032e ಆಯೋಧನಶಿರೋಮಧ್ಯೇ ಶಯಾನಂ ಪಶ್ಯ ಮಾಧವ||

ಮಾಧವ! ರಣರಂಗದ ಮಧ್ಯದಲ್ಲಿ ಹತರಾಗಿ ಮಲಗಿರುವ ಬಾಲಕರಾಗಿದ್ದ ಉತ್ತರ, ಅಭಿಮನ್ಯು, ಕಾಂಬೋಜದ ಸುದಕ್ಷಿಣ, ಮತ್ತು ಸುಂದರ ಲಕ್ಷ್ಮಣ ಇವರನ್ನು ನೋಡು!”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ಗಾಂಧಾರೀವಾಕ್ಯೇ ವಿಂಶತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ಗಾಂಧಾರೀವಾಕ್ಯ ಎನ್ನುವ ಇಪ್ಪತ್ತನೇ ಅಧ್ಯಾಯವು.

Comments are closed.