Stri Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀಪರ್ವ: ವಿಶೋಕ ಪರ್ವ

ವಿಲಪಿಸುತ್ತಿದ್ದ ಧೃತರಾಷ್ಟ್ರನನ್ನು ಸಂಜಯನು ಸಂತವಿಸಿದುದು (೧-೩೭).

11001001 ಜನಮೇಜಯ ಉವಾಚ

11001001a ಹತೇ ದುರ್ಯೋಧನೇ ಚೈವ ಹತೇ ಸೈನ್ಯೇ ಚ ಸರ್ವಶಃ|

11001001c ಧೃತರಾಷ್ಟ್ರೋ ಮಹಾರಾಜಃ ಶ್ರುತ್ವಾ ಕಿಮಕರೋನ್ಮುನೇ||

ಜನಮೇಜಯನು ಹೇಳಿದನು: “ಮುನೇ! ದುರ್ಯೋಧನನು ಹತನಾಗಿದ್ದುದನ್ನು ಮತ್ತು ಸರ್ವ ಸೇನೆಗಳೂ ಹತಗೊಂಡಿದ್ದುದನ್ನು ಕೇಳಿ ಮಹಾರಾಜ ಧೃತರಾಷ್ಟ್ರನು ಏನು ಮಾಡಿದನು?

11001002a ತಥೈವ ಕೌರವೋ ರಾಜಾ ಧರ್ಮಪುತ್ರೋ ಮಹಾಮನಾಃ|

11001002c ಕೃಪಪ್ರಭೃತಯಶ್ಚೈವ ಕಿಮಕುರ್ವತ ತೇ ತ್ರಯಃ||

ಹಾಗೆಯೇ ಕೌರವ ರಾಜಾ ಮಹಾಮನಸ್ವಿ ಧರ್ಮಪುತ್ರ ಮತ್ತು ಕೃಪನೇ ಮೊದಲಾದ ಆ ಮೂವರು ಏನು ಮಾಡಿದರು?

11001003a ಅಶ್ವತ್ಥಾಮ್ನಃ ಶ್ರುತಂ ಕರ್ಮ ಶಾಪಶ್ಚಾನ್ಯೋನ್ಯಕಾರಿತಃ|

11001003c ವೃತ್ತಾಂತಮುತ್ತರಂ ಬ್ರೂಹಿ ಯದಭಾಷತ ಸಂಜಯಃ||

ಅಶ್ವತ್ಥಾಮನು ಮಾಡಿದುದನ್ನೂ, ಅನ್ಯೋನ್ಯರು ಶಾಪನೀಡಿದುದನ್ನೂ ಕೇಳಿದೆನು. ಅದರ ನಂತರ ಸಂಜಯನು ಏನು ಹೇಳಿದನೆನ್ನುವುದನ್ನು ಹೇಳು!”

11001004 ವೈಶಂಪಾಯನ ಉವಾಚ

11001004a ಹತೇ ಪುತ್ರಶತೇ ದೀನಂ ಚಿನ್ನಶಾಖಮಿವ ದ್ರುಮಮ್|

11001004c ಪುತ್ರಶೋಕಾಭಿಸಂತಪ್ತಂ ಧೃತರಾಷ್ಟ್ರಂ ಮಹೀಪತಿಮ್||

11001005a ಧ್ಯಾನಮೂಕತ್ವಮಾಪನ್ನಂ ಚಿಂತಯಾ ಸಮಭಿಪ್ಲುತಮ್|

11001005c ಅಭಿಗಮ್ಯ ಮಹಾಪ್ರಾಜ್ಞಃ ಸಂಜಯೋ ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ಪುತ್ರಶತರನ್ನು ಕಳೆದುಕೊಂಡು ರೆಂಬೆಗಳು ಕಡಿದ ವೃಕ್ಷದಂತೆ ದೀನನಾಗಿದ್ದ, ಪುತ್ರಶೋಕದಿಂದ ಸಂತಪ್ತನಾಗಿದ್ದ, ಧ್ಯಾನ-ಮೂಕತ್ವಗಳನ್ನು ಪಡೆದಿದ್ದ, ಚಿಂತೆಯಲ್ಲಿ ಮುಳುಗಿಹೋಗಿದ್ದ ಮಹೀಪತಿ ಧೃತರಾಷ್ಟ್ರನ ಬಳಿಹೋಗಿ ಮಹಾಪ್ರಾಜ್ಞ ಸಂಜಯನು ಇಂತೆಂದನು:

11001006a ಕಿಂ ಶೋಚಸಿ ಮಹಾರಾಜ ನಾಸ್ತಿ ಶೋಕೇ ಸಹಾಯತಾ|

11001006c ಅಕ್ಷೌಹಿಣ್ಯೋ ಹತಾಶ್ಚಾಷ್ಟೌ ದಶ ಚೈವ ವಿಶಾಂ ಪತೇ|

11001006e ನಿರ್ಜನೇಯಂ ವಸುಮತೀ ಶೂನ್ಯಾ ಸಂಪ್ರತಿ ಕೇವಲಾ||

“ಮಹಾರಾಜ! ಏಕೆ ಶೋಕಿಸುತ್ತಿರುವೆ? ಶೋಕದಿಂದ ಯಾವ ಸಹಾಯವೂ ದೊರಕುವುದಿಲ್ಲ! ವಿಶಾಂಪತೇ! ಹದಿನೆಂಟು ಅಕ್ಷೌಹಿಣೀ ಸೇನೆಗಳು ನಾಶವಾದವು. ನಿರ್ಜನವಾಗಿರುವ ಈ ವಸುಮತಿಯು ಕೇವಲ ಶೂನ್ಯವಾಗಿ ತೋರುತ್ತಿದೆ!

11001007a ನಾನಾದಿಗ್ಭ್ಯಃ ಸಮಾಗಮ್ಯ ನಾನಾದೇಶ್ಯಾ ನರಾಧಿಪಾಃ|

11001007c ಸಹಿತಾಸ್ತವ ಪುತ್ರೇಣ ಸರ್ವೇ ವೈ ನಿಧನಂ ಗತಾಃ||

ನಾನಾ ದಿಕ್ಕುಗಳಿಂದ, ನಾನಾದೇಶಗಳಿಂದ ಬಂದು ಸೇರಿದ್ದ ನರಾಧಿಪರೆಲ್ಲರೂ ನಿನ್ನ ಪುತ್ರರೊಂದಿಗೆ ನಿಧನಹೊಂದಿದರು.

11001008a ಪಿತೄಣಾಂ ಪುತ್ರಪೌತ್ರಾಣಾಂ ಜ್ಞಾತೀನಾಂ ಸುಹೃದಾಂ ತಥಾ|

11001008c ಗುರೂಣಾಂ ಚಾನುಪೂರ್ವ್ಯೇಣ ಪ್ರೇತಕಾರ್ಯಾಣಿ ಕಾರಯ||

ಪಿತೃಗಳ, ಪುತ್ರ-ಪೌತ್ರರ, ಬಾಂಧವರ, ಸುಹೃದಯರ ಮತ್ತು ಗುರುಜನರ ಪ್ರೇತಕಾರ್ಯಗಳನ್ನು ಯಥಾನುಕ್ರಮವಾಗಿ ಮಾಡಿಸು!””

11001009 ವೈಶಂಪಾಯನ ಉವಾಚ

11001009a ತಚ್ಚ್ರುತ್ವಾ ಕರುಣಂ ವಾಕ್ಯಂ ಪುತ್ರಪೌತ್ರವಧಾರ್ದಿತಃ|

11001009c ಪಪಾತ ಭುವಿ ದುರ್ಧರ್ಷೋ ವಾತಾಹತ ಇವ ದ್ರುಮಃ||

ವೈಶಂಪಾಯನನು ಹೇಳಿದನು: “ಆ ಕರುಣ ವಾಕ್ಯವನ್ನು ಕೇಳಿ ಪುತ್ರ-ಪೌತ್ರರ ವಧೆಯಿಂದ ದುಃಖಿತನಾಗಿದ್ದ ದುರ್ಧರ್ಷ ಧೃತರಾಷ್ಟ್ರನು ಭಿರುಗಾಳಿಯು ಬಡಿದ ವೃಕ್ಷದಂತೆ ಭೂಮಿಯಮೇಲೆ ಬಿದ್ದನು.

11001010 ಧೃತರಾಷ್ಟ್ರ ಉವಾಚ

11001010a ಹತಪುತ್ರೋ ಹತಾಮಾತ್ಯೋ ಹತಸರ್ವಸುಹೃಜ್ಜನಃ|

11001010c ದುಃಖಂ ನೂನಂ ಭವಿಷ್ಯಾಮಿ ವಿಚರನ್ಪೃಥಿವೀಮಿಮಾಮ್||

ಧೃತರಾಷ್ಟ್ರನು ಹೇಳಿದನು: “ಪುತ್ರರನ್ನು ಕಳೆದುಕೊಂಡ, ಅಮಾತ್ಯರನ್ನು ಕಳೆದುಕೊಂಡ ಮತ್ತು ಸರ್ವ ಸುಹೃಜ್ಜನರನ್ನು ಕಳೆದುಕೊಂಡ ನಾನು ಈ ಭೂಮಿಯಲ್ಲಿ ಸಂಚರಿಸುವ ದುಃಖವೇ ಆಗಿಬಿಟ್ಟಿದ್ದೇನೆ!

11001011a ಕಿಂ ನು ಬಂಧುವಿಹೀನಸ್ಯ ಜೀವಿತೇನ ಮಮಾದ್ಯ ವೈ|

11001011c ಲೂನಪಕ್ಷಸ್ಯ ಇವ ಮೇ ಜರಾಜೀರ್ಣಸ್ಯ ಪಕ್ಷಿಣಃ||

ರೆಕ್ಕೆಗಳನ್ನು ಕಳೆದುಕೊಂಡು ಮುಪ್ಪಿನಿಂದ ಜೀರ್ಣವಾದ ಪಕ್ಷಿಯಂತಿರುವ ನನಗೆ ಇಂದು ಜೀವಿತವಿರುವುದರಿಂದ ಆಗಬೇಕಾದುದಾದರೂ ಏನಿದೆ?

11001012a ಹೃತರಾಜ್ಯೋ ಹತಸುಹೃದ್ಧತಚಕ್ಷುಶ್ಚ ವೈ ತಥಾ|

11001012c ನ ಭ್ರಾಜಿಷ್ಯೇ ಮಹಾಪ್ರಾಜ್ಞ ಕ್ಷೀಣರಶ್ಮಿರಿವಾಂಶುಮಾನ್||

ಮಹಾಪ್ರಾಜ್ಞ! ಸುಹೃದ್ ಜನರು ಹತರಾಗಿ ರಾಜ್ಯದಿಂದ ಅಪಹೃತನಾದ ನಾನು ಕಿರಣಗಳನ್ನು ಕಳೆದುಕೊಂಡ ಸೂರ್ಯನಂತೆ ಇನ್ನು ಬೆಳಗಲಾರೆ!

11001013a ನ ಕೃತಂ ಸುಹೃದಾಂ ವಾಕ್ಯಂ ಜಾಮದಗ್ನ್ಯಸ್ಯ ಜಲ್ಪತಃ|

11001013c ನಾರದಸ್ಯ ಚ ದೇವರ್ಷೇಃ ಕೃಷ್ಣದ್ವೈಪಾಯನಸ್ಯ ಚ||

ಬಾರಿಬಾರಿ ಹೇಳುತ್ತಿದ್ದ ಸುಹೃದರಾಗಿದ್ದ ಜಾಮದಗ್ನಿ ಪರಶುರಾಮ, ದೇವರ್ಷಿ ನಾರದ ಮತ್ತು ಕೃಷ್ಣದ್ವೈಪಾಯನರ ಮಾತುಗಳಂತೆ ನಾನು ಮಾಡಲಿಲ್ಲ.

11001014a ಸಭಾಮಧ್ಯೇ ತು ಕೃಷ್ಣೇನ ಯಚ್ಚ್ರೇಯೋಽಭಿಹಿತಂ ಮಮ|

11001014c ಅಲಂ ವೈರೇಣ ತೇ ರಾಜನ್ಪುತ್ರಃ ಸಂಗೃಹ್ಯತಾಮಿತಿ||

11001015a ತಚ್ಚ ವಾಕ್ಯಮಕೃತ್ವಾಹಂ ಭೃಶಂ ತಪ್ಯಾಮಿ ದುರ್ಮತಿಃ|

ಸಭಾಮಧ್ಯದಲ್ಲಿ ಕೃಷ್ಣನು “ರಾಜನ್! ಈ ವೈರವನ್ನು ಸಾಕುಮಾಡಿ ನಿನ್ನ ಮಗನನ್ನು ಹತೋಟಿಯಲ್ಲಿಟ್ಟುಕೋ!” ಎಂದು ನನಗೆ ಹೇಳಿದ ಶ್ರೇಯ-ಹಿತ ವಚನವನ್ನು ದುರ್ಮತಿಯಾದ ನಾನು ಮಾಡದೇ ಇದ್ದುದಕ್ಕೆ ಈಗ ತುಂಬಾ ಪರಿತಪಿಸುತ್ತಿದ್ದೇನೆ!

11001015c ನ ಹಿ ಶ್ರೋತಾಸ್ಮಿ ಭೀಷ್ಮಸ್ಯ ಧರ್ಮಯುಕ್ತಂ ಪ್ರಭಾಷಿತಮ್||

11001016a ದುರ್ಯೋಧನಸ್ಯ ಚ ತಥಾ ವೃಷಭಸ್ಯೇವ ನರ್ದತಃ|

11001016c ದುಃಶಾಸನವಧಂ ಶ್ರುತ್ವಾ ಕರ್ಣಸ್ಯ ಚ ವಿಪರ್ಯಯಮ್|

11001016e ದ್ರೋಣಸೂರ್ಯೋಪರಾಗಂ ಚ ಹೃದಯಂ ಮೇ ವಿದೀರ್ಯತೇ||

ಭೀಷ್ಮನು ಹೇಳಿದ್ದ ಧರ್ಮಯುಕ್ತ ಮಾತುಗಳನ್ನೂ, ದುರ್ಯೋಧನನ ಗೂಳಿಯಂಥಹ ಕೂಗನ್ನೂ ನಾನು ಕೇಳಲಿಲ್ಲ! ಇಂದು ದುಃಶಾಸನನು ಹತನಾದುದನ್ನು, ಕರ್ಣನು ವಿನಾಶಗೊಂಡಿದುದನ್ನು ಮತ್ತು ಸೂರ್ಯನಂತಹ ದ್ರೋಣನಿಗೂ ಗ್ರಹಣವಾದುದನ್ನು ಕೇಳಿ ನನ್ನ ಹೃದಯವು ಸೀಳಿಹೋಗುತ್ತಿದೆ!

11001017a ನ ಸ್ಮರಾಮ್ಯಾತ್ಮನಃ ಕಿಂ ಚಿತ್ಪುರಾ ಸಂಜಯ ದುಷ್ಕೃತಮ್|

11001017c ಯಸ್ಯೇದಂ ಫಲಮದ್ಯೇಹ ಮಯಾ ಮೂಢೇನ ಭುಜ್ಯತೇ||

ಸಂಜಯ! ಮೂಢನಾದ ನಾನು ಯಾವುದರ ಫಲವೆಂದು ಇದನ್ನು ಅನುಭವಿಸುತ್ತಿದ್ದೇನೋ ಅಂತಹ ದುಷ್ಕೃತವನ್ನು ಈ ಹಿಂದೆ ಮಾಡಿದುದು ನನ್ನ ನೆನಪಿಗೇ ಬರುತ್ತಿಲ್ಲ!

11001018a ನೂನಂ ಹ್ಯಪಕೃತಂ ಕಿಂ ಚಿನ್ಮಯಾ ಪೂರ್ವೇಷು ಜನ್ಮಸು|

11001018c ಯೇನ ಮಾಂ ದುಃಖಭಾಗೇಷು ಧಾತಾ ಕರ್ಮಸು ಯುಕ್ತವಾನ್||

ನನ್ನ ಹಿಂದಿನ ಜನ್ಮದಲ್ಲಿ ನಾನು ಏನಾದರೂ ಅಪಕೃತವನ್ನು ಮಾಡಿರಬೇಕು. ಅದರಿಂದಾಗಿಯೇ ಧಾತನು ನನ್ನನ್ನು ಈ ದುಃಖವನ್ನು ತರುವ ಕರ್ಮಗಳಲ್ಲಿ ನನ್ನನ್ನು ತೊಡಗಿಸಿದ್ದಾನೆ!

11001019a ಪರಿಣಾಮಶ್ಚ ವಯಸಃ ಸರ್ವಬಂಧುಕ್ಷಯಶ್ಚ ಮೇ|

11001019c ಸುಹೃನ್ಮಿತ್ರವಿನಾಶಶ್ಚ ದೈವಯೋಗಾದುಪಾಗತಃ|

ದೈವಯೋಗದ ಪರಿಣಾಮವಾಗಿಯೇ ವೃದ್ಧನಾಗಿರುವ ನನಗೆ ಸರ್ವಬಂಧುಗಳ ನಾಶ ಮತ್ತು ಸುಹೃದಯರ ವಿನಾಶವು ಬಂದೊದಗಿದೆ!

11001019e ಕೋಽನ್ಯೋಽಸ್ತಿ ದುಃಖಿತತರೋ ಮಯಾ ಲೋಕೇ ಪುಮಾನಿಹ||

11001020a ತನ್ಮಾಮದ್ಯೈವ ಪಶ್ಯಂತು ಪಾಂಡವಾಃ ಸಂಶಿತವ್ರತಮ್|

11001020c ವಿವೃತಂ ಬ್ರಹ್ಮಲೋಕಸ್ಯ ದೀರ್ಘಮಧ್ವಾನಮಾಸ್ಥಿತಮ್||

ನನಗಿಂಥಲೂ ಹೆಚ್ಚು ದುಃಖಿತನಾಗಿರುವ ಇನ್ನೊಬ್ಬ ಪುರುಷನು ಈ ಲೋಕದಲ್ಲಿ ಬೇರೆ ಯಾರಿದ್ದಾರೆ? ಸಂಶಿತವ್ರತನಾಗಿ ನಾನು ಇಂದು ತೆರೆದಿರುವ ಈ ಬ್ರಹ್ಮಲೋಕದ ದೀರ್ಘಮಾರ್ಗವನ್ನೇ ಆಶ್ರಯಿಸುವುದನ್ನು ಪಾಂಡವರು ನೋಡಲಿ!””

11001021 ವೈಶಂಪಾಯನ ಉವಾಚ

11001021a ತಸ್ಯ ಲಾಲಪ್ಯಮಾನಸ್ಯ ಬಹುಶೋಕಂ ವಿಚಿನ್ವತಃ|

11001021c ಶೋಕಾಪಹಂ ನರೇಂದ್ರಸ್ಯ ಸಂಜಯೋ ವಾಕ್ಯಮಬ್ರವೀತ್||

ವೈಶಂಪಾಯನನು ಹೇಳಿದನು: “ಹೀಗೆ ಬಹುಶೋಕಿತನಾಗಿ ಒಂದೇ ಸಮನೆ ಪ್ರಲಪಿತ್ತಿದ್ದ ನರೇಂದ್ರನ ಶೋಕವನ್ನು ಹೋಗಲಾಡಿಸುವಂತಹ ಈ ಮಾತುಗಳನ್ನು ಸಂಜಯನು ಹೇಳಿದನು:

11001022a ಶೋಕಂ ರಾಜನ್ವ್ಯಪನುದ ಶ್ರುತಾಸ್ತೇ ವೇದನಿಶ್ಚಯಾಃ|

11001022c ಶಾಸ್ತ್ರಾಗಮಾಶ್ಚ ವಿವಿಧಾ ವೃದ್ಧೇಭ್ಯೋ ನೃಪಸತ್ತಮ||

11001022e ಸೃಂಜಯೇ ಪುತ್ರಶೋಕಾರ್ತೇ ಯದೂಚುರ್ಮುನಯಃ ಪುರಾ||

ರಾಜನ್! ಶೋಕವನ್ನು ತೊರೆ! ನೃಪಸತ್ತಮ! ನೀನು ವೃದ್ಧರು ಹೇಳಿದ ವೇದನಿಶ್ಚಯಗಳನ್ನೂ, ವಿವಿಧ ಶಾಸ್ತ್ರ-ಆಗಮಗಳನ್ನೂ ಕೇಳಿದ್ದೀಯೆ. ಹಿಂದೆ ಪುತ್ರಶೋಕಾರ್ತನಾಗಿದ್ದ ಸೃಂಜಯನಿಗೆ ಮುನಿಗಳು ಹೇಳಿದುದನ್ನೂ ಕೇಳಿದ್ದೀಯೆ.

11001023a ತಥಾ ಯೌವನಜಂ ದರ್ಪಮಾಸ್ಥಿತೇ ತೇ ಸುತೇ ನೃಪ|

11001023c ನ ತ್ವಯಾ ಸುಹೃದಾಂ ವಾಕ್ಯಂ ಬ್ರುವತಾಮವಧಾರಿತಮ್|

11001023e ಸ್ವಾರ್ಥಶ್ಚ ನ ಕೃತಃ ಕಶ್ಚಿಲ್ಲುಬ್ಧೇನ ಫಲಗೃದ್ಧಿನಾ||

ನೃಪ! ಯೌವನದಿಂದುಂಟಾದ ದರ್ಪವನ್ನು ನಿನ್ನ ಮಗನು ಆಶ್ರಯಿಸಿದ್ದಾಗ ನೀನು ಆಡುತ್ತಿರುವ ಸುಹೃದಯರ ಮಾತುಗಳನ್ನು ಗಮನಿಸಲಿಲ್ಲ. ಸ್ವಾರ್ಥ ಮತ್ತು ಫಲವನ್ನು ಭೋಗಿಸಲು ಇಚ್ಛಿಸಿದ್ದ ಅವನು ಲುಬ್ಧನಾಗಿ ಯಾವ ಪುರುಷಾರ್ಥ ಸಾಧನೆಯನ್ನೂ ಮಾಡಲಿಲ್ಲ.

11001024a ತವ ದುಃಶಾಸನೋ ಮಂತ್ರೀ ರಾಧೇಯಶ್ಚ ದುರಾತ್ಮವಾನ್|

11001024c ಶಕುನಿಶ್ಚೈವ ದುಷ್ಟಾತ್ಮಾ ಚಿತ್ರಸೇನಶ್ಚ ದುರ್ಮತಿಃ|

11001024e ಶಲ್ಯಶ್ಚ ಯೇನ ವೈ ಸರ್ವಂ ಶಲ್ಯಭೂತಂ ಕೃತಂ ಜಗತ್||

ದುಃಶಾಸನ, ದುರಾತ್ಮ ರಾಧೇಯ, ದುಷ್ಟಾತ್ಮ ಶಕುನಿ, ದುರ್ಮತಿ ಚಿತ್ರಸೇನ ಮತ್ತು ಇಡೀ ಜಗತ್ತಿಗೇ ಮುಳ್ಳಿನಂತಿದ್ದ ಶಲ್ಯರು ನಿನ್ನ ಮಂತ್ರಿಗಳಾಗಿದ್ದರು.

11001025a ಕುರುವೃದ್ಧಸ್ಯ ಭೀಷ್ಮಸ್ಯ ಗಾಂಧಾರ್ಯಾ ವಿದುರಸ್ಯ ಚ|

11001025c ನ ಕೃತಂ ವಚನಂ ತೇನ ತವ ಪುತ್ರೇಣ ಭಾರತ||

ಭಾರತ! ಕುರುವೃದ್ಧ ಭೀಷ್ಮ, ಗಾಂಧಾರೀ, ಮತ್ತು ವಿದುರರ ಮಾತಿನಂತೆ ನಿನ್ನ ಪುತ್ರನು ನಡೆದುಕೊಳ್ಳಲಿಲ್ಲ.

11001026a ನ ಧರ್ಮಃ ಸತ್ಕೃತಃ ಕಶ್ಚಿನ್ನಿತ್ಯಂ ಯುದ್ಧಮಿತಿ ಬ್ರುವನ್|

11001026c ಕ್ಷಪಿತಾಃ ಕ್ಷತ್ರಿಯಾಃ ಸರ್ವೇ ಶತ್ರೂಣಾಂ ವರ್ಧಿತಂ ಯಶಃ||

ನಿತ್ಯವೂ ಯುದ್ಧಮಾಡಬೇಕೆಂದು ಹೇಳುತ್ತಿದ್ದನೇ ಹೊರತು ಉತ್ತಮವಾಗಿ ಯಾವ ಧರ್ಮಾಚರಣೆಯನ್ನೂ ಅವನು ಮಾಡಲಿಲ್ಲ. ಅವನು ಸರ್ವ ಕ್ಷತ್ರಿಯರನ್ನೂ ವಿನಾಶಗೊಳಿಸಿದನು ಮತ್ತು ಶತ್ರುಗಳ ಯಶಸ್ಸನ್ನು ವರ್ಧಿಸಿದನು.

11001027a ಮಧ್ಯಸ್ಥೋ ಹಿ ತ್ವಮಪ್ಯಾಸೀರ್ನ ಕ್ಷಮಂ ಕಿಂ ಚಿದುಕ್ತವಾನ್|

11001027c ಧೂರ್ಧರೇಣ ತ್ವಯಾ ಭಾರಸ್ತುಲಯಾ ನ ಸಮಂ ಧೃತಃ||

ನೀನು ಮಧ್ಯಸ್ಥನಾಗಿದ್ದರೂ ತಕ್ಕುದಾದ ಯಾವ ಮಾತುಗಳನ್ನೂ ಆಡಲಿಲ್ಲ. ನೀನು ದುರ್ಧರನಾಗಿದ್ದೆ. ಆದರೂ ನೀನು ತಕ್ಕಡಿಯಂತೆ ಸಮನಾಗಿರಲಿಲ್ಲ. ಒಂದೇ ಕಡೆ ಭಾರವನ್ನು ಹೆಚ್ಚಿಸಿದೆ.

11001028a ಆದಾವೇವ ಮನುಷ್ಯೇಣ ವರ್ತಿತವ್ಯಂ ಯಥಾ ಕ್ಷಮಮ್|

11001028c ಯಥಾ ನಾತೀತಮರ್ಥಂ ವೈ ಪಶ್ಚಾತ್ತಾಪೇನ ಯುಜ್ಯತೇ||

ನಡೆದುಹೋದ ನಂತರ ಪಶ್ಚಾತ್ತಾಪ ಪಡಬೇಕಾಗದಂತೆ, ಮನುಷ್ಯನು ಮೊದಲೇ ಯೋಗ್ಯರೀತಿಯಲ್ಲಿ ವರ್ತಿಸಬೇಕು. 

11001029a ಪುತ್ರಗೃದ್ಧ್ಯಾ ತ್ವಯಾ ರಾಜನ್ಪ್ರಿಯಂ ತಸ್ಯ ಚಿಕೀರ್ಷತಾ|

11001029c ಪಶ್ಚಾತ್ತಾಪಮಿದಂ ಪ್ರಾಪ್ತಂ ನ ತ್ವಂ ಶೋಚಿತುಮರ್ಹಸಿ||

ರಾಜನ್! ಪುತ್ರನ ಮೇಲಿನ ವ್ಯಾಮೋಹದಿಂದ ನೀನು ಅವನಿಗೆ ಪ್ರಿಯವಾಗುವಂತೆ ಮಾಡಿಕೊಂಡು ಬಂದೆ. ಈಗ ಪಶ್ಚಾತ್ತಾಪ ಪಡುವ ಕಾಲವು ಬಂದಿದೆ. ನೀನು ಶೋಕಿಸಬಾರದು!

11001030a ಮಧು ಯಃ ಕೇವಲಂ ದೃಷ್ಟ್ವಾ ಪ್ರಪಾತಂ ನಾನುಪಶ್ಯತಿ|

11001030c ಸ ಭ್ರಷ್ಟೋ ಮಧುಲೋಭೇನ ಶೋಚತ್ಯೇವ ಯಥಾ ಭವಾನ್||

ಮಧುವಿನ ಆಸೆಯಿಂದ ಕೇವಲ ಮಧುವನ್ನು ನೋಡಿಕೊಂಡು ಕೆಳಗಿರುವ ಪ್ರಪಾತವನ್ನು ಕಾಣದೇ ಭ್ರಷ್ಟನಾದವನಂತೆ ನೀನು ಈಗ ಶೋಕಿಸುತ್ತಿರುವೆ!

11001031a ಅರ್ಥಾನ್ನ ಶೋಚನ್ಪ್ರಾಪ್ನೋತಿ ನ ಶೋಚನ್ವಿಂದತೇ ಸುಖಮ್|

11001031c ನ ಶೋಚನ್ ಶ್ರಿಯಮಾಪ್ನೋತಿ ನ ಶೋಚನ್ವಿಂದತೇ ಪರಮ್||

ಶೋಕಿಸುವುದರಿಂದ ಯಾವ ಫಲವೂ ದೊರಕುವುದಿಲ್ಲ. ಶೋಕಿಸುವವನಿಗೆ ಸುಖವೂ ಇಲ್ಲ. ಶೋಕಿಸುವವನಿಗೆ ಸಂಪತ್ತು ದೊರಕುವುದಿಲ್ಲ. ಶೋಕಿಸಿದರೆ ಪರಮ ಗತಿಯೂ ದೊರಕುವುದಿಲ್ಲ.

11001032a ಸ್ವಯಮುತ್ಪಾದಯಿತ್ವಾಗ್ನಿಂ ವಸ್ತ್ರೇಣ ಪರಿವೇಷ್ಟಯೇತ್|

11001032c ದಹ್ಯಮಾನೋ ಮನಸ್ತಾಪಂ ಭಜತೇ ನ ಸ ಪಂಡಿತಃ||

ಬೆಂಕಿಯನ್ನು ತಾನೇ ಹೊತ್ತಿಸಿ, ಬಟ್ಟೆಯಲ್ಲಿ ಅದನ್ನು ಕಟ್ಟಿಕೊಂಡು, ಅದು ಪ್ರಜ್ವಲಿಸಿ ತನ್ನನ್ನೇ ಸುಡುವಾಗ ಪರಿತಾಪ ಪಡುವವನು ಖಂಡಿತವಾಗಿಯೂ ಪಂಡಿತನೆಂದೆನಿಸಿಕೊಳ್ಳುವುದಿಲ್ಲ.

11001033a ತ್ವಯೈವ ಸಸುತೇನಾಯಂ ವಾಕ್ಯವಾಯುಸಮೀರಿತಃ|

11001033c ಲೋಭಾಜ್ಯೇನ ಚ ಸಂಸಿಕ್ತೋ ಜ್ವಲಿತಃ ಪಾರ್ಥಪಾವಕಃ||

ನೀನೇ ನಿನ್ನ ಮಕ್ಕಳೊಂದಿಗೆ ಕಠೋರ ಮಾತೆಂಬ ಗಾಳಿಯನ್ನು ಬೀಸಿ, ಲೋಭವೆಂಬ ತುಪ್ಪವನ್ನು ಸುರಿದು ಪಾರ್ಥನೆಂಬ ಅಗ್ನಿಯನ್ನು ಪ್ರಜ್ವಲಿಸಿದ್ದೆ.

11001034a ತಸ್ಮಿನ್ಸಮಿದ್ಧೇ ಪತಿತಾಃ ಶಲಭಾ ಇವ ತೇ ಸುತಾಃ|

11001034c ತಾನ್ಕೇಶವಾರ್ಚಿರ್ನಿರ್ದಗ್ಧಾನ್ನ ತ್ವಂ ಶೋಚಿತುಮರ್ಹಸಿ||

ಉರಿಯುತ್ತಿರುವ ಆ ಅಗ್ನಿಯಲ್ಲಿ ಶಲಭಗಳಂತೆ ನಿನ್ನ ಪುತ್ರರು ಬೀಳಲು, ಕೇಶವನೆಂಬ ಜ್ವಾಲೆಯು ಅವರನ್ನು ಸುಟ್ಟುಹಾಕಿತು. ಅದರ ಕುರಿತು ನೀನು ಶೋಕಿಸುವುದು ಸರಿಯಲ್ಲ!

11001035a ಯಚ್ಚಾಶ್ರುಪಾತಕಲಿಲಂ ವದನಂ ವಹಸೇ ನೃಪ|

11001035c ಅಶಾಸ್ತ್ರದೃಷ್ಟಮೇತದ್ಧಿ ನ ಪ್ರಶಂಸಂತಿ ಪಂಡಿತಾಃ||

ನೃಪ! ಕಣ್ಣೀರು ಬಿದ್ದು ಕಲುಷವಾದ ಮುಖವು ಅಶಾಸ್ತ್ರವಾದುದು. ಪಂಡಿತರು ಇದನ್ನು ಪ್ರಶಂಸಿಸುವುದಿಲ್ಲ.

11001036a ವಿಸ್ಫುಲಿಂಗಾ ಇವ ಹ್ಯೇತಾನ್ದಹಂತಿ ಕಿಲ ಮಾನವಾನ್|

11001036c ಜಹೀಹಿ ಮನ್ಯುಂ ಬುದ್ಧ್ಯಾ ವೈ ಧಾರಯಾತ್ಮಾನಮಾತ್ಮನಾ||

ಕಣ್ಣೀರು ಬೆಂಕಿಯ ಕಿಡಿಗಳಂತೆ ಮನುಷ್ಯರನ್ನು ಸುಡುತ್ತದೆ. ಆದುದರಿಂದ ಬುದ್ಧಿಯಿಂದ ಮನಸ್ಸನ್ನು ಗೆಲ್ಲು! ನಿನ್ನನ್ನು ನೀನೇ ಸ್ಥಿರಗೊಳಿಸಿಕೋ!”

11001037a ಏವಮಾಶ್ವಾಸಿತಸ್ತೇನ ಸಂಜಯೇನ ಮಹಾತ್ಮನಾ|

11001037c ವಿದುರೋ ಭೂಯ ಏವಾಹ ಬುದ್ಧಿಪೂರ್ವಂ ಪರಂತಪ||

ಮಹಾತ್ಮ ಸಂಜಯನು ಹೀಗೆ ಅವನನ್ನು ಸಂತವಿಸಲು ಪರಂತಪ ವಿದುರನು ಈ ಬುದ್ಧಿಪೂರ್ವಕ ಮಾತುಗಳನ್ನಾಡಿದನು.”

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಪ್ರಥಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಒಂದನೇ ಅಧ್ಯಾಯವು.

Comments are closed.