Shanti Parva: Chapter 99

ಶಾಂತಿ ಪರ್ವ: ರಾಜಧರ್ಮ ಪರ್ವ

೯೯

ಇಂದ್ರಾಂಬರೀಷ ಸಂವಾದ

ಸಮರದಲ್ಲಿ ನಿಧನಹೊಂದುವ ಶೂರರಿಗೆ ದೊರೆಯುವ ಲೋಕಗಳ ವರ್ಣನೆ (1-50).

12099001 ಯುಧಿಷ್ಠಿರ ಉವಾಚ|

12099001a ಕೇ ಲೋಕಾ ಯುಧ್ಯಮಾನಾನಾಂ ಶೂರಾಣಾಮನಿವರ್ತಿನಾಮ್|

12099001c ಭವಂತಿ ನಿಧನಂ ಪ್ರಾಪ್ಯ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಯುದ್ಧಮಾಡಿ ರಣದಿಂದ ಪಲಾಯನ ಮಾಡದೇ ನಿಧನವನ್ನು ಹೊಂದುವ ಶೂರರಿಗೆ ಯಾವ ಲೋಕಗಳು ದೊರೆಯುತ್ತವೆ ಎನ್ನುವುದನ್ನು ಹೇಳು.”

12099002 ಭೀಷ್ಮ ಉವಾಚ|

12099002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12099002c ಅಂಬರೀಷಸ್ಯ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಅಂಬರೀಷ-ಇಂದ್ರರ ಸಂವಾದವನ್ನು ಉದಾಹರಿಸುತ್ತಾರೆ.

12099003a ಅಂಬರೀಷೋ ಹಿ ನಾಭಾಗಃ ಸ್ವರ್ಗಂ ಗತ್ವಾ ಸುದುರ್ಲಭಮ್|

12099003c ದದರ್ಶ ಸುರಲೋಕಸ್ಥಂ ಶಕ್ರೇಣ ಸಚಿವಂ ಸಹ||

ನಾಭಾಗ ಅಂಬರೀಷನು ಸುದುರ್ಲಭವಾದ ಸ್ವರ್ಗಕ್ಕೆ ಹೋಗಿ ಅಲ್ಲಿ ಶಕ್ರನೊಂದಿಗೆ ಸುರಲೋಕಸ್ಥನಾಗಿದ್ದ ತನ್ನ ಸಚಿವನನ್ನು ಕಂಡನು.

12099004a ಸರ್ವತೇಜೋಮಯಂ ದಿವ್ಯಂ ವಿಮಾನವರಮಾಸ್ಥಿತಮ್|

12099004c ಉಪರ್ಯುಪರಿ ಗಚ್ಚಂತಂ ಸ್ವಂ ವೈ ಸೇನಾಪತಿಂ ಪ್ರಭುಮ್||

12099005a ಸ ದೃಷ್ಟ್ವೋಪರಿ ಗಚ್ಚಂತಂ ಸೇನಾಪತಿಮುದಾರಧೀಃ|

12099005c ಋದ್ಧಿಂ ದೃಷ್ಟ್ವಾ ಸುದೇವಸ್ಯ ವಿಸ್ಮಿತಃ ಪ್ರಾಹ ವಾಸವಮ್||

ಸರ್ವತೇಜೋಮಯವಾದ ದಿವ್ಯ ವಿಮಾನದಲ್ಲಿ ಕುಳಿತಿದ್ದ ಮತ್ತು ಮೇಲೆ ಮೇಲೆ ಹೋಗುತ್ತಿದ್ದ, ತನಗಿಂತಲೂ ಮೇಲೆ ಹೋಗುತ್ತಿದ್ದ ತನ್ನ ಪ್ರಭು ಸೇನಾಪತಿ ಸುದೇವನ ವೃದ್ಧಿಯನ್ನು ನೋಡಿ ವಿಸ್ಮಿತನಾದ ಉದಾರಧೀ ಅಂಬರೀಷನು ಇಂದ್ರನಿಗೆ ಹೇಳಿದನು.

12099006a ಸಾಗರಾಂತಾಂ ಮಹೀಂ ಕೃತ್ಸ್ನಾಮನುಶಿಷ್ಯ ಯಥಾವಿಧಿ|

12099006c ಚಾತುರ್ವರ್ಣ್ಯೇ ಯಥಾಶಾಸ್ತ್ರಂ ಪ್ರವೃತ್ತೋ ಧರ್ಮಕಾಮ್ಯಯಾ||

“ವಾಸವ! ನಾನು ಸಾಗರಾಂತೆ ಮಹಿಯನ್ನು ಸಂಪೂರ್ಣವಾಗಿ ಯಥಾವಿಧಿಯಾಗಿ ಆಳಿ ಯಥಾಶಾಸ್ತ್ರವಾಗಿ ಧರ್ಮದ ಕಾಮನೆಯಿಂದ ನಾಲ್ಕು ವರ್ಣದವರನ್ನೂ ಪರಿಪಾಲಿಸುವುದರಲ್ಲಿ ತತ್ಪರನಾಗಿದ್ದೆನು.

12099007a ಬ್ರಹ್ಮಚರ್ಯೇಣ ಘೋರೇಣ ಆಚಾರ್ಯಕುಲಸೇವಯಾ|

12099007c ವೇದಾನಧೀತ್ಯ ಧರ್ಮೇಣ ರಾಜಶಾಸ್ತ್ರಂ ಚ ಕೇವಲಮ್||

ಘೋರ ಬ್ರಹ್ಮಚರ್ಯದಿಂದ ಆಚಾರ್ಯಕುಲದ ಸೇವೆಗೈದು ಧರ್ಮಪೂರ್ವಕವಾಗಿಯೇ ವೇದಗಳು ಮತ್ತು ವಿಶೇಷವಾಗಿ ರಾಜಶಾಸ್ತ್ರವನ್ನು ಪಡೆದುಕೊಂಡಿದ್ದೇನೆ.

12099008a ಅತಿಥೀನನ್ನಪಾನೇನ ಪಿತೃಂಶ್ಚ ಸ್ವಧಯಾ ತಥಾ|

12099008c ಋಷೀನ್ ಸ್ವಾಧ್ಯಾಯದೀಕ್ಷಾಭಿರ್ದೇವಾನ್ಯಜ್ಞೈರನುತ್ತಮೈಃ||

ಅತಿಥಿಗಳನ್ನು ಅನ್ನಪಾನಗಳಿಂದಲೂ, ಪಿತೃಗಳನ್ನು ಸ್ವಧೆಯ ಮೂಲಕವೂ, ಸ್ವಾಧ್ಯಾಯದೀಕ್ಷೆಗಳಿಂದ ಋಷಿಗಳನ್ನೂ, ಮತ್ತು ಅನುತ್ತಮ ಯಜ್ಞಗಳಿಂದ ದೇವತೆಗಳನ್ನು ತೃಪ್ತಿಪಡಿಸಿದ್ದೇನೆ.

12099009a ಕ್ಷತ್ರಧರ್ಮೇ ಸ್ಥಿತೋ ಭೂತ್ವಾ ಯಥಾಶಾಸ್ತ್ರಂ ಯಥಾವಿಧಿ|

12099009c ಉದೀಕ್ಷಮಾಣಃ ಪೃತನಾಂ ಜಯಾಮಿ ಯುಧಿ ವಾಸವ||

ವಾಸವ! ಯಥಾಶಾಸ್ತ್ರವಾಗಿ ಮತ್ತು ಯಥಾವಿಧಿಯಾಗಿ ಕ್ಷತ್ರಧರ್ಮದಲ್ಲಿಯೇ ಸ್ಥಿತನಾಗಿದ್ದುಕೊಂಡು ಚತುರಂಗ ಸೇನೆಗಳನ್ನೂ ನಿಲ್ಲಿಸಿ ಯುದ್ಧದಲ್ಲಿ ಶತ್ರುಗಳನ್ನು ಜಯಿಸಿದ್ದೇನೆ.

12099010a ದೇವರಾಜ ಸುದೇವೋಽಯಂ ಮಮ ಸೇನಾಪತಿಃ ಪುರಾ|

12099010c ಆಸೀದ್ಯೋಧಃ ಪ್ರಶಾಂತಾತ್ಮಾ ಸೋಽಯಂ ಕಸ್ಮಾದತೀವ ಮಾಮ್||

ದೇವರಾಜ! ಈ ಸುದೇವನು ಹಿಂದೆ ನನ್ನ ಸೇನಾಪತಿಯಾಗಿದ್ದನು. ಯೋಧನೂ ಪ್ರಶಾಂತಾತ್ಮನೂ ಆಗಿದ್ದನು. ಅವನು ಹೇಗೆ ನನ್ನನ್ನು ಮೀರಿಸಿದ್ದಾನೆ?

12099011a ನಾನೇನ ಕ್ರತುಭಿರ್ಮುಖ್ಯೈರಿಷ್ಟಂ ನೈವ ದ್ವಿಜಾತಯಃ|

12099011c ತರ್ಪಿತಾ ವಿಧಿವಚ್ಚಕ್ರ ಸೋಽಯಂ ಕಸ್ಮಾದತೀವ ಮಾಮ್||

ಅವನಾದರೋ ಮುಖ್ಯ ಯಜ್ಞಗಳಿಂದ ದೇವತೆಗಳನ್ನು ಆರಾಧಿಸಿರುವುದಿಲ್ಲ. ಬಹುದಕ್ಷಿಣೆಗಳಿಂದ ಬ್ರಾಹ್ಮಣರನ್ನೂ ವಿಧಿವತ್ತಾಗಿ ತೃಪ್ತಿಪಡಿಸಿರುವುದಿಲ್ಲ. ಅಂಥವನು ನನಗಿಂತಲೂ ಮುಂದೆ ಮುಂದೆ ಪುಣ್ಯಲೋಕಗಳಿಗೆ ಹೋಗುತ್ತಿದ್ದಾನೆ. ಇದಕ್ಕೆ ಕಾರಣವೇನು?”

12099012 ಇಂದ್ರ ಉವಾಚ|

12099012a ಏತಸ್ಯ ವಿತತಸ್ತಾತ ಸುದೇವಸ್ಯ ಬಭೂವ ಹ|

12099012c ಸಂಗ್ರಾಮಯಜ್ಞಃ ಸುಮಹಾನ್ಯಶ್ಚಾನ್ಯೋ ಯುಧ್ಯತೇ ನರಃ||

ಇಂದ್ರನು ಹೇಳಿದನು: “ಅಯ್ಯಾ! ಈ ಸುದೇವನು ಅತ್ಯಂತ ವಿಸ್ತಾರವಾದ ರಣಯಜ್ಞವನ್ನು ಮಾಡಿ ಮುಗಿಸಿದ್ದಾನೆ. ಬೇರೆ ಯಾವ ಮನುಷ್ಯನು ಯುದ್ಧಮಾಡಿದರೂ ಅದು ಮಹಾಸಂಗ್ರಾಮಯುದ್ಧವೇ ಆಗುತ್ತದೆ[1].

12099013a ಸಂನದ್ಧೋ ದೀಕ್ಷಿತಃ ಸರ್ವೋ ಯೋಧಃ ಪ್ರಾಪ್ಯ ಚಮೂಮುಖಮ್|

12099013c ಯುದ್ಧಯಜ್ಞಾಧಿಕಾರಸ್ಥೋ ಭವತೀತಿ ವಿನಿಶ್ಚಯಃ||

ಕವಚವನ್ನು ಧರಿಸಿ ಯಜ್ಞದ ದೀಕ್ಷೆಯನ್ನು ಕೈಗೊಂಡು ಶತ್ರುಸೇನೆಯ ಅಗ್ರಭಾಗದಲ್ಲಿ ನಿಲ್ಲುವ ಯೋಧನೂ ಸಂಗ್ರಾಮಯಜ್ಞಕ್ಕೆ ಅಧಿಕಾರಿಯಾಗುವನೆಂಬುದು ನನ್ನ ಅಭಿಪ್ರಾಯವಾಗಿದೆ.”

12099014 ಅಂಬರೀಷ ಉವಾಚ|

12099014a ಕಾನಿ ಯಜ್ಞೇ ಹವೀಂಷ್ಯತ್ರ ಕಿಮಾಜ್ಯಂ ಕಾ ಚ ದಕ್ಷಿಣಾ|

12099014c ಋತ್ವಿಜಶ್ಚಾತ್ರ ಕೇ ಪ್ರೋಕ್ತಾಸ್ತನ್ಮೇ ಬ್ರೂಹಿ ಶತಕ್ರತೋ||

ಅಂಬರೀಷನು ಹೇಳಿದನು: “ಶತಕ್ರತೋ! ಈ ಯಜ್ಞದ ಹವಿಸ್ಸುಗಳ್ಯಾವುವು? ಆಜ್ಯವು ಯಾವುದು? ದಕ್ಷಿಣೆಯು ಯಾವುದು? ಇದರ ಋತ್ವಿಜರು ಯಾರು? ಅದನ್ನು ನನಗೆ ಹೇಳು.”

12099015 ಇಂದ್ರ ಉವಾಚ|

12099015a ಋತ್ವಿಜಃ ಕುಂಜರಾಸ್ತತ್ರ ವಾಜಿನೋಽಧ್ವರ್ಯವಸ್ತಥಾ|

12099015c ಹವೀಂಷಿ ಪರಮಾಂಸಾನಿ ರುಧಿರಂ ತ್ವಾಜ್ಯಮೇವ ಚ||

ಇಂದ್ರನು ಹೇಳಿದನು: “ಸಂಗ್ರಾಮ ಯಜ್ಞದಲ್ಲಿ ಆನೆಗಳೇ ಋತ್ವಿಜರು. ಕುದುರೆಗಳು ಅಧ್ವರ್ಯುಗಳು. ಶತ್ರುಗಳ ಮಾಂಸವೇ ಹವಿಸ್ಸು. ರುಧಿರವೇ ಇದರ ಆಜ್ಯ.

12099016a ಸೃಗಾಲ[2]ಗೃಧ್ರಕಾಕೋಲಾಃ ಸದಸ್ಯಾಸ್ತತ್ರ ಸತ್ರಿಣಃ|

12099016c ಆಜ್ಯಶೇಷಂ ಪಿಬಂತ್ಯೇತೇ ಹವಿಃ ಪ್ರಾಶ್ನಂತಿ ಚಾಧ್ವರೇ||

ಗುಳ್ಳೇನರಿ, ರಣಹದ್ದು, ಕಾಗೆ ಮತ್ತು ಇತರ ಮಾಂಸಾಶೀ ಪಕ್ಷಿಗಳೇ ಈ ಅಧ್ವರದಲ್ಲಿ ಸದಸ್ಯರು. ರಕ್ತರೂಪವಾದ ಆಜ್ಯಶೇಷವನ್ನು ಇವು ಕುಡಿಯುತ್ತವೆ. ಮಾಂಸರೂಪೀ ಹವಿಸ್ಸನ್ನು ತಿನ್ನುತ್ತವೆ.

12099017a ಪ್ರಾಸತೋಮರಸಂಘಾತಾಃ ಖಡ್ಗಶಕ್ತಿಪರಶ್ವಧಾಃ|

12099017c ಜ್ವಲಂತೋ ನಿಶಿತಾಃ ಪೀತಾಃ ಸ್ರುಚಸ್ತಸ್ಯಾಥ ಸತ್ರಿಣಃ||

ಮೇಲಿಂದ ಮೇಲೆ ಬೀಳುವ ಪ್ರಜ್ವಲಿಸುವಷ್ಟು ಹರಿತವಾದ ಪೀತವರ್ಣದ ಪ್ರಾಸ-ತೋಮರಗಳು, ಖಡ್ಗ-ಶಕ್ತಿ-ಪರಶು ಆಯುಧಗಳು ಯಜ್ಞದೀಕ್ಷಿತನ ಸ್ರಕ್ಕುಗಳು.

12099018a ಚಾಪವೇಗಾಯತಸ್ತೀಕ್ಷ್ಣಃ ಪರಕಾಯಾವದಾರಣಃ|

12099018c ಋಜುಃ ಸುನಿಶಿತಃ ಪೀತಃ ಸಾಯಕೋಽಸ್ಯ ಸ್ರುವೋ ಮಹಾನ್||

ಚಾಪದಿಂದ ಸರಿಯಾಗಿ ಗುರಿಯಿಟ್ಟು ವೇಗವಾಗಿ ಪ್ರಯೋಗಿಸಲ್ಪಟ್ಟ ಪರಕಾಯವನ್ನು ಛೇದಿಸುವ ತೀಕ್ಷ್ಣ ನಿಶಿತ ಪೀತವರ್ಣದ ಸಾಯಕಗಳೇ ಇದರ ಮಹಾನ್ ಸ್ರುವಗಳು.

12099019a ದ್ವೀಪಿಚರ್ಮಾವನದ್ಧಶ್ಚ ನಾಗದಂತಕೃತತ್ಸರುಃ|

12099019c ಹಸ್ತಿಹಸ್ತಗತಃ ಖಡ್ಗಃ ಸ್ಫ್ಯೋ ಭವೇತ್ತಸ್ಯ ಸಂಯುಗೇ||

ವ್ಯಾಘ್ರಚರ್ಮದ ಕೋಶದಿಂದ ಬಂಧಿಸಿದ, ಆನೆಯ ದಂತದ ಹಿಡಿಯ, ಆನೆಯ ಸೊಂಡಿಲನ್ನೂ ಕತ್ತರಿಸಬಲ್ಲ ಖಡ್ಗವೇ ಸಂಯುಗ ಯಜ್ಞದಲ್ಲಿ ಸ್ಫ್ಯು[3].

12099020a ಜ್ವಲಿತೈರ್ನಿಶಿತೈಃ ಪೀತೈಃ ಪ್ರಾಸಶಕ್ತಿಪರಶ್ವಧೈಃ|

12099020c ಶೈಕ್ಯಾಯಸಮಯೈಸ್ತೀಕ್ಷ್ಣೈರಭಿಘಾತೋ ಭವೇದ್ವಸು||

ಒಂದೇ ಸಮನೆ ಬೀಳುವ ಪ್ರಜ್ವಲಿತ ನಿಶಿತ ಪೀತ ತೀಕ್ಷ್ಣ ಪ್ರಾಸ ಶಕ್ತಿ ಪರಶಾಯುಧಗಳೇ ದ್ರವ್ಯಗಳು.

12099021a ಆವೇಗಾದ್ಯತ್ತು ರುಧಿರಂ ಸಂಗ್ರಾಮೇ ಸ್ಯಂದತೇ ಭುವಿ|

12099021c ಸಾಸ್ಯ ಪೂರ್ಣಾಹುತಿರ್ಹೋತ್ರೇ ಸಮೃದ್ಧಾ ಸರ್ವಕಾಮಧುಕ್||

ಸಂಗ್ರಾಮ ಭೂಮಿಯ ಮೇಲೆ ಆವೇಗದಿಂದ ಬೀಳುವ ರಕ್ತವೇ ಹೋತೃವಿನ ಸರ್ವಕಾಮಗಳನ್ನೂ ನೀಡಬಲ್ಲ ಈ ಯಜ್ಞದ ಸಮೃದ್ಧ ಪೂರ್ಣಾಹುತಿಯು.

12099022a ಚಿಂಧಿ ಭಿಂಧೀತಿ ಯಸ್ಯೈತಚ್ಚ್ರೂಯತೇ ವಾಹಿನೀಮುಖೇ|

12099022c ಸಾಮಾನಿ ಸಾಮಗಾಸ್ತಸ್ಯ ಗಾಯಂತಿ ಯಮಸಾದನೇ||

ವಾಹಿನೀಮುಖದಲ್ಲಿ ಕೇಳಿಬರುವ ಕತ್ತರಿಸು! ಒಡೆದುಹಾಕು! ಎಂಬ ಕೂಗುಗಳೇ ಯಮಸಾದನದಲ್ಲಿ ಸಾಮಗರು ಹಾಡುವ ಸಾಮಗಳು.

12099023a ಹವಿರ್ಧಾನಂ ತು ತಸ್ಯಾಹುಃ ಪರೇಷಾಂ ವಾಹಿನೀಮುಖಮ್|

12099023c ಕುಂಜರಾಣಾಂ ಹಯಾನಾಂ ಚ ವರ್ಮಿಣಾಂ ಚ ಸಮುಚ್ಚಯಃ|

12099023e ಅಗ್ನಿಃ ಶ್ಯೇನಚಿತೋ ನಾಮ ತಸ್ಯ ಯಜ್ಞೇ ವಿಧೀಯತೇ||

ಶತ್ರುಸೇನೆಯ ಮುಂಭಾಗವೇ ಹವಿಸ್ಸನ್ನು ನೀಡುವ ಸ್ಥಳ ಹವಿರ್ಧಾನ ಎಂದು ಹೇಳುತ್ತಾರೆ. ಆನೆಗಳು, ಕುದುರೆಗಳು ಮತ್ತು ಕವಚಧಾರಿಗಳ ಸಮುದಾಯವೇ ಆ ಯಜ್ಞದಲ್ಲಿ ಶ್ಯೇನಚಿತ ಎಂಬ ಹೆಸರಿನ ಅಗ್ನಿ ಎಂದು ತಿಳಿಯಬೇಕು.

12099024a ಉತ್ತಿಷ್ಠತಿ ಕಬಂಧೋಽತ್ರ ಸಹಸ್ರೇ ನಿಹತೇ ತು ಯಃ|

12099024c ಸ ಯೂಪಸ್ತಸ್ಯ ಶೂರಸ್ಯ ಖಾದಿರೋಽಷ್ಟಾಶ್ರಿರುಚ್ಯತೇ||

ಸಹಸ್ರಾರು ಮಂದಿ ಹತರಾಗುತ್ತಿರಲು ಎದ್ದು ನಿಲುವ ಕಬಂಧವೇ ಆ ಶೂರನ ಎಂಟು ಕೋಣಗಳುಳ್ಳ ಕಗ್ಗಲೀ ಮರದ ಯೂಪಗಳು.

12099025a ಇಡೋಪಹೂತಂ ಕ್ರೋಶಂತಿ ಕುಂಜರಾ ಅಂಕುಶೇರಿತಾಃ|

12099025c ವ್ಯಾಘುಷ್ಟತಲನಾದೇನ ವಷಟ್ಕಾರೇಣ ಪಾರ್ಥಿವ|

12099025e ಉದ್ಗಾತಾ ತತ್ರ ಸಂಗ್ರಾಮೇ ತ್ರಿಸಾಮಾ ದುಂದುಭಿಃ ಸ್ಮೃತಃ||

ಅಂಕುಶಗಳಿಂದ ಚುಚ್ಚಲ್ಪಟ್ಟ ಆನೆಗಳ ಆಕ್ರೋಶವೇ ಇಡೋಹ್ವಾನ. ಚಪ್ಪಾಳೆಗಳ ಶಬ್ದವೇ ವಷಟ್ಕಾರ. ಪಾರ್ಥಿವ! ಸಂಗ್ರಾಮದಲ್ಲಿ ಮೊಳಗುವ ದುಂದುಭಿಯೇ ತ್ರಿಸಾಮಗಳ ಉದ್ಗಾತವು.

12099026a ಬ್ರಹ್ಮಸ್ವೇ ಹ್ರಿಯಮಾಣೇ ಯಃ ಪ್ರಿಯಾಂ ಯುದ್ಧೇ ತನುಂ ತ್ಯಜೇತ್|

12099026c ಆತ್ಮಾನಂ ಯೂಪಮುಚ್ಚ್ರಿತ್ಯ ಸ ಯಜ್ಞೋಽನಂತದಕ್ಷಿಣಃ||

ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿಕೊಂಡು ಹೋಗುತ್ತಿರುವಾಗ ಯುದ್ಧದಲ್ಲಿ ಪ್ರಿಯ ತನುವನ್ನು ತ್ಯಜಿಸಿದವನು ದೇಹಸ್ವರೂಪವಾದ ಯೂಪವನ್ನು ಉತ್ಸರ್ಜನೆ ಮಾಡುವ ಯಜ್ಞದ ಅನಂತ ದಕ್ಷಿಣೆಯನ್ನು ಇತ್ತವನು.

12099027a ಭರ್ತುರರ್ಥೇ ತು ಯಃ ಶೂರೋ ವಿಕ್ರಮೇದ್ವಾಹಿನೀಮುಖೇ|

12099027c ಭಯಾನ್ನ ಚ ನಿವರ್ತೇತ ತಸ್ಯ ಲೋಕಾ ಯಥಾ ಮಮ||

ಸ್ವಾಮಿಯ ಸಲುವಾಗಿ ವಾಹಿನೀಮುಖದಲ್ಲಿ ವಿಕ್ರಮದಿಂದ ಹೋರಾಡುವ ಮತ್ತು ಭಯದಿಂದ ಪಲಾಯನ ಮಾಡದಿದ್ದ ಶೂರನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.

12099028a ನೀಲಚಂದ್ರಾಕೃತೈಃ[4] ಖಡ್ಗೈರ್ಬಾಹುಭಿಃ ಪರಿಘೋಪಮೈಃ|

12099028c ಯಸ್ಯ ವೇದಿರುಪಸ್ತೀರ್ಣಾ ತಸ್ಯ ಲೋಕಾ ಯಥಾ ಮಮ||

ನೀಲಚಂದ್ರಾಕಾರದ ಖಡ್ಗಗಳು ಮತ್ತು ಪರಿಘೋಪಮ ಬಾಹುಗಳಿಂದ ಯಾರ ಯುದ್ಧವೇದಿಯು ತುಂಬಿಕೊಂಡಿರುವುದೋ ಅವನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.

12099029a ಯಸ್ತು ನಾವೇಕ್ಷತೇ ಕಂ ಚಿತ್ಸಹಾಯಂ ವಿಜಯೇ ಸ್ಥಿತಃ|

12099029c ವಿಗಾಹ್ಯ ವಾಹಿನೀಮಧ್ಯಂ ತಸ್ಯ ಲೋಕಾ ಯಥಾ ಮಮ||

ಯಾರ ಸಹಾಯವನ್ನೂ ಅಪೇಕ್ಷಿಸದೇ ಶತ್ರುಸೇನೆಯ ಮಧ್ಯೆ ಹೊಕ್ಕು ವಿಜಯಕ್ಕಾಗಿ ಹೋರಾಡುವವನಿಗೆ ನನಗೆ ದೊರೆತ ಲೋಕಗಳೇ ದೊರೆಯುತ್ತವೆ.

12099030a ಯಸ್ಯ ತೋಮರಸಂಘಾಟಾ[5] ಭೇರೀಮಂಡೂಕಕಚ್ಚಪಾ|

12099030c ವೀರಾಸ್ಥಿಶರ್ಕರಾ ದುರ್ಗಾ ಮಾಂಸಶೋಣಿತಕರ್ದಮಾ||

12099031a ಅಸಿಚರ್ಮಪ್ಲವಾ ಸಿಂಧುಃ ಕೇಶಶೈವಲಶಾದ್ವಲಾ|

12099031c ಅಶ್ವನಾಗರಥೈಶ್ಚೈವ ಸಂಭಿನ್ನೈಃ ಕೃತಸಂಕ್ರಮಾ||

12099032a ಪತಾಕಾಧ್ವಜವಾನೀರಾ ಹತವಾಹನವಾಹಿನೀ|

12099032c ಶೋಣಿತೋದಾ ಸುಸಂಪೂರ್ಣಾ ದುಸ್ತರಾ ಪಾರಗೈರ್ನರೈಃ||

12099033a ಹತನಾಗಮಹಾನಕ್ರಾ ಪರಲೋಕವಹಾಶಿವಾ|

12099033c ಋಷ್ಟಿಖಡ್ಗಧ್ವಜಾನೂಕಾ ಗೃಧ್ರಕಘ್ಕವಡಪ್ಲವಾ||

12099034a ಪುರುಷಾದಾನುಚರಿತಾ ಭೀರೂಣಾಂ ಕಶ್ಮಲಾವಹಾ|

12099034c ನದೀ ಯೋಧಮಹಾಯಜ್ಞೇ ತದಸ್ಯಾವಭೃಥಂ ಸ್ಮೃತಮ್||

ಯೋಧನ ಯುದ್ಧರೂಪದ ಯಜ್ಞದಲ್ಲಿ ಪ್ರವಹಿಸುವ ರಕ್ತದ ನದಿಯೇ ಅವಭೃತಸ್ನಾನಕ್ಕೆ ಸಮಾನವಾಗಿದ್ದು ಪುಣ್ಯದಾಯಕವಾಗುತ್ತದೆ. ತೋಮರಗಳೇ ಅದರ ದಡಗಳು. ಭೇರಿಗಳೇ ಕಪ್ಪೆಗಳು ಮತ್ತು ಆಮೆಗಳು. ವೀರರ ಅಸ್ತಿಪಂಜರಗಳೇ ಆ ನದಿಯ ಬಂಡೆಗಳು. ಮಾಂಸ-ರಕ್ತಗಳ ಕೆಸರಿನಿಂದ ಆ ನದಿಯು ಅತ್ಯಂತ ದುರ್ಗಮವಾಗಿರುತ್ತದೆ. ಕತ್ತಿ -ಗುರಾಣಿಗಳು ಆ ಘೋರ ರಕ್ತನದಿಯ ನೌಕೆಗಳು. ವೀರರ ಕೇಶಗಳೇ ಹಸಿರು ಪಾಚಿಗಳು. ಕತ್ತರಿಸಲ್ಪಟ್ಟ ಸರ್ವತ್ರ ವ್ಯಾಪ್ತವಾದ ಆನೆ-ಕುದುರೆ-ರಥಗಳು ಆ ಘೋರ ನದಿಯನ್ನು ದಾಟುವ ಸೇತುವೆಗಳು. ಪತಾಕಾ-ಧ್ವಜಗಳು ನದಿಯಲ್ಲಿ ಬೆಳೆಯುವ ಜೊಂಡುಗಿಡಗಳು. ಆ ನದಿಯಲ್ಲಿ ಸತ್ತುಹೋದ ಆನೆಗಳು ತೇಲುತ್ತವೆ. ರಕ್ತವೇ ನೀರಾಗಿ ತುಂಬಿ ಹರಿಯುತ್ತಿರುವ ಆ ನದಿಯನ್ನು ದಾಟಿಹೋಗಲು ಇಚ್ಛಿಸುವ ಹೇಡಿ ಮನುಷ್ಯರಿಗೆ  ಅದು ದುಸ್ತರವಾಗಿರುತ್ತದೆ. ಪರಲೋಕಕ್ಕೆ ಕೊಂಡೊಯ್ಯುವ ಆ ಮಂಗಳ ನದಿಯಲ್ಲಿ ಮೃತ ಮಹಾ ಆನೆಗಳೇ ಮೊಸಳೆಗಳು. ಋಷ್ಟಿ-ಖಡ್ಗಗಳೇ ಮಹಾ ನೌಕೆಗಳು. ಹದ್ದು-ಕಾಗೆಗಳು ದೋಣಿಗಳು. ನರಭಕ್ಷಕ ರಾಕ್ಷಸರು ಆ ನದಿಯ ಬಳಿ ಸುತ್ತಾಡುತ್ತಿರುತ್ತಾರೆ. ಹೇಡಿಗಳ ಬುದ್ಧಿಭ್ರಮೆಯನ್ನು ಹೋಗಲಾಡಿಸುವ ಸಂಗ್ರಾಮದಲ್ಲಿ ಹರಿಯುವ ಆ ನದಿಯೇ ರಣಯಜ್ಞದ ಅವಭೃತ ಸ್ನಾನ ಎಂದು ಹೇಳುತ್ತಾರೆ.  

12099035a ವೇದೀ ಯಸ್ಯ ತ್ವಮಿತ್ರಾಣಾಂ ಶಿರೋಭಿರವಕೀರ್ಯತೇ|

12099035c ಅಶ್ವಸ್ಕಂಧೈರ್ಗಜಸ್ಕಂಧೈಸ್ತಸ್ಯ ಲೋಕಾ ಯಥಾ ಮಮ||

ಯಾರ ವೇದಿಯಲ್ಲಿ ಶತ್ರುಗಳ ತಲೆಗಳು, ಕುದುರೆಗಳ ಸ್ಕಂಧಗಳು ಮತ್ತು ಆನೆಗಳ ಕುಂಭಸ್ಥಳಗಳು ಹರಡಿರುವವೋ ಅವನಿಗೆ ನನಗೆ ದೊರಕಿದ ಲೋಕಗಳಂಥಹವೇ ದೊರಕುವುದು.

12099036a ಪತ್ನೀಶಾಲಾ ಕೃತಾ ಯಸ್ಯ ಪರೇಷಾಂ ವಾಹಿನೀಮುಖಮ್|

12099036c ಹವಿರ್ಧಾನಂ ಸ್ವವಾಹಿನ್ಯಸ್ತದಸ್ಯಾಹುರ್ಮನೀಷಿಣಃ||

ಶತ್ರುಗಳ ಸೇನಾಮುಖವನ್ನೇ ಪತ್ನೀಶಾಲೆಯನ್ನಾಗಿ ಮಾಡಿಕೊಳ್ಳುವವನ ಮತ್ತು ತನ್ನ ಸೈನ್ಯದ ಮುಖ್ಯಭಾಗವನ್ನು ಹವಿರ್ಧಾನವನ್ನಾಗಿ ಮಾಡಿಕೊಳ್ಳುವವನಿಗೆ ನನ್ನದೇ ಲೋಕಗಳು ಪ್ರಾಪ್ತವಾಗುವವೆಂದು ವಿದ್ವಾಂಸರು ಹೇಳುತ್ತಾರೆ.

12099037a ಸದಶ್ಚಾಂತರಯೋಧಾ[6]ಗ್ನಿರಾಗ್ನೀಧ್ರಶ್ಚೋತ್ತರಾಂ ದಿಶಮ್|

12099037c ಶತ್ರುಸೇನಾಕಲತ್ರಸ್ಯ ಸರ್ವಲೋಕಾನದೂರತಃ||

ದಕ್ಷಿಣ ದಿಕ್ಕಿನಲ್ಲಿರುವ ಯೋಧರು ಯಾರ ರಣಯಜ್ಞದಲ್ಲಿ ಸದಸ್ಯರಾಗಿರುವರೋ ಮತ್ತು ಉತ್ತರ ದಿಕ್ಕಿನವರು ಋತ್ವಿಜರಾಗಿರುವರೋ ಮತ್ತು ಶತ್ರುಸೇನೆಯೇ ಯಾರ ಪತ್ನಿಸ್ಥಾನದಲ್ಲಿರುವುದೋ ಅವನಿಗೆ ಸಮಸ್ತಲೋಕಗಳೂ ಹತ್ತಿರದಲ್ಲಿಯೇ ಇರುತ್ತವೆ.

12099038a ಯದಾ ತೂಭಯತೋ ವ್ಯೂಹೋ ಭವತ್ಯಾಕಾಶಮಗ್ರತಃ|

12099038c ಸಾಸ್ಯ ವೇದೀ ತಥಾ ಯಜ್ಞೇ ನಿತ್ಯಂ ವೇದಾಸ್ತ್ರಯೋಽಗ್ನಯಃ||

ಎರಡು ಸೇನಾವ್ಯೂಹಗಳ ಮಧ್ಯೆ ಇರುವ ಆಕಾಶವೇ ಆ ಯಜ್ಞದ ವೇದಿಯಾಗುತ್ತದೆ ಮತ್ತು ಅಲ್ಲಿ ನಿತ್ಯವೂ ವೇದಗಳೂ ಮೂರು ಅಗ್ನಿಗಳೂ ಇರುತ್ತವೆ.

12099039a ಯಸ್ತು ಯೋಧಃ ಪರಾವೃತ್ತಃ ಸಂತ್ರಸ್ತೋ ಹನ್ಯತೇ ಪರೈಃ|

12099039c ಅಪ್ರತಿಷ್ಠಂ ಸ ನರಕಂ ಯಾತಿ ನಾಸ್ತ್ಯತ್ರ ಸಂಶಯಃ||

ಭಯಭೀತನಾಗಿ ಶತ್ರುಗಳಿಗೆ ಬೆನ್ನುತೋರಿಸಿ ಪಲಾಯನ ಮಾಡುವ ಮತ್ತು ಅದೇ ಸಮಯದಲ್ಲಿ ಶತ್ರುಗಳಿಂದ ಕೊಲ್ಲಲ್ಪಡುವವನು ಮತ್ತೆಲ್ಲಿಯೂ ನಿಲ್ಲದೇ ನೇರವಾಗಿ ನರಕದಲ್ಲಿಯೇ ಬೀಳುತ್ತಾನೆ. ಇದರಲ್ಲಿ ಸಂಶಯವೇ ಇಲ್ಲ.

12099040a ಯಸ್ಯ ಶೋಣಿತವೇಗೇನ ನದೀ ಸ್ಯಾತ್ಸಮಭಿಪ್ಲುತಾ|

12099040c ಕೇಶಮಾಂಸಾಸ್ಥಿಸಂಕೀರ್ಣಾ ಸ ಗಚ್ಚೇತ್ಪರಮಾಂ ಗತಿಮ್||

ಯಾರ ರಕ್ತನದಿಯ ವೇಗದಿಂದ ವೇದಿಯು ಮುಳುಗುವುದೋ ಮತ್ತು ಯಾರ ಕೇಶ-ಮಾಂಸ-ಅಸ್ಥಿಗಳಿಂದ ವೇದಿಯು ತುಂಬಿಹೋಗುವುದೋ ಅವನು ಪರಮ ಗತಿಯನ್ನು ಹೊಂದುತ್ತಾನೆ.

12099041a ಯಸ್ತು ಸೇನಾಪತಿಂ ಹತ್ವಾ ತದ್ಯಾನಮಧಿರೋಹತಿ|

12099041c ಸ ವಿಷ್ಣುವಿಕ್ರಮಕ್ರಾಮೀ ಬೃಹಸ್ಪತಿಸಮಃ ಕ್ರತುಃ[7]||

ಶತ್ರುಸೇನಾಪತಿಯನ್ನು ಸಂಹರಿಸಿ ಅವನ ರಥವನ್ನೇರುವವನ ನಡುಗೆಯನ್ನು ವಿಷ್ಣುವಿಕ್ರಮಿಯೆಂದೂ, ಕ್ರತುವನ್ನು ಬೃಹಸ್ಪತಿಯ ಸಮಾನವೆಂದೂ ಹೇಳುತ್ತಾರೆ.

12099042a ನಾಯಕಂ ವಾ ಪ್ರಮಾಣಂ ವಾ ಯೋ ವಾ ಸ್ಯಾತ್ತತ್ರ ಪೂಜಿತಃ[8]|

12099042c ಜೀವಗ್ರಾಹಂ ನಿಗೃಹ್ಣಾತಿ ತಸ್ಯ ಲೋಕಾ ಯಥಾ ಮಮ||

ಶತ್ರುಪಕ್ಷದ ನಾಯಕನನ್ನಾಗಲೀ, ಅಥವಾ ಅವನ ಮಗನನ್ನೋ ಅಥವಾ ಅವರಲ್ಲಿಯೇ ಸಮ್ಮಾನಿತನಾದೊಬ್ಬನನ್ನು ಜೀವಂತ ಬಂಧಿಸುವವನಿಗೆ ನನ್ನ ಲೋಕಗಳಿಗೆ ಸಮಾನ ಲೋಕಗಳು ದೊರೆಯುತ್ತವೆ.

12099043a ಆಹವೇ ನಿಹತಂ ಶೂರಂ ನ ಶೋಚೇತ ಕದಾ ಚನ|

12099043c ಅಶೋಚ್ಯೋ ಹಿ ಹತಃ ಶೂರಃ ಸ್ವರ್ಗಲೋಕೇ ಮಹೀಯತೇ||

ಯುದ್ಧದಲ್ಲಿ ಹತನಾದ ಶೂರನ ಕುರಿತು ಎಂದೂ ಶೋಕಿಸಬಾರದು. ಅಶೋಚ್ಯನಾದ ಆ ಹತಶೂರನು ಸರ್ಗಲೋಕದಲ್ಲಿ ಮೆರೆಯುತ್ತಾನೆ.

12099044a ನ ಹ್ಯನ್ನಂ ನೋದಕಂ ತಸ್ಯ ನ ಸ್ನಾನಂ ನಾಪ್ಯಶೌಚಕಮ್|

12099044c ಹತಸ್ಯ ಕರ್ತುಮಿಚ್ಚಂತಿ ತಸ್ಯ ಲೋಕಾನ್ ಶೃಣುಷ್ವ ಮೇ||

ಯುದ್ಧದಲ್ಲಿ ಮಡಿದರವರಿಗೆ ಶ್ರಾದ್ಧತರ್ಪಣಗಳನ್ನು ಮಾಡಬೇಕಾಗಿಲ್ಲ. ಅವರ ಬಂಧುಗಳಿಗೆ ಸ್ನಾನಾದಿಗಳನ್ನು ಮಾಡಬೇಕಾಗುವುದಿಲ್ಲ ಏಕೆಂದರೆ ಅವರು ಅಶೌಚಿಗಳಾಗುವುದಿಲ್ಲ. ಯುದ್ಧದಲ್ಲಿ ಹತನಾದವನಿಗೆ ಎಂತಹ ಲೋಕಗಳು ಲಭಿಸುತ್ತವೆ ಎನ್ನುವುದನ್ನು ಹೇಳುತ್ತೇನೆ. ಕೇಳು.

12099045a ವರಾಪ್ಸರಃಸಹಸ್ರಾಣಿ ಶೂರಮಾಯೋಧನೇ ಹತಮ್|

12099045c ತ್ವರಮಾಣಾ ಹಿ ಧಾವಂತಿ ಮಮ ಭರ್ತಾ ಭವೇದಿತಿ||

ಯುದ್ಧದಲ್ಲಿ ಹತನಾದ ಶೂರನನ್ನು ಸಹಸ್ರಾರು ಸುಂದರ ಅಪ್ಸರೆಯರು ಇವನು ನನ್ನ ಪತಿಯಾಗಲಿ ಎಂದು ತ್ವರೆಮಾಡಿ ಓಡಿಬಂದು ಸುತ್ತುವರೆಯುತ್ತಾರೆ.

12099046a ಏತತ್ತಪಶ್ಚ ಪುಣ್ಯಂ ಚ ಧರ್ಮಶ್ಚೈವ ಸನಾತನಃ|

12099046c ಚತ್ವಾರಶ್ಚಾಶ್ರಮಾಸ್ತಸ್ಯ ಯೋ ಯುದ್ಧೇ ನ ಪಲಾಯತೇ[9]||

ಯುದ್ಧದಲ್ಲಿ ಪ್ರಾಣಬಿಡುವುದೇ ಒಂದು ತಪಸ್ಸು. ಪುಣ್ಯಕಾರ್ಯ. ಇದು ಸನಾತನ ಧರ್ಮವೂ ಕೂಡ. ಯುದ್ಧದಿಂದ ಪಲಾಯನ ಮಾಡದಿರುವವನಿಗೆ ನಾಲ್ಕೂ ಆಶ್ರಮಗಳನ್ನು ಪಾಲಿಸಿದ ಪುಣ್ಯವು ಲಭ್ಯವಾಗುತ್ತದೆ.

12099047a ವೃದ್ಧಂ ಬಲಂ ನ ಹಂತವ್ಯಂ ನೈವ ಸ್ತ್ರೀ ನ ಚ ವೈ ದ್ವಿಜಃ[10]|

12099047c ತೃಣಪೂರ್ಣಮುಖಶ್ಚೈವ ತವಾಸ್ಮೀತಿ ಚ ಯೋ ವದೇತ್||

ವೃದ್ಧರನ್ನೂ, ಬಾಲಕರನ್ನೂ ಮತ್ತು ಹಾಗೆಯೇ ಸ್ತ್ರೀಯರನ್ನೂ ದ್ವಿಜರನ್ನೂ ಕೊಲ್ಲಬಾರದು. ಬಾಯಿಯಲ್ಲಿ ಹುಲ್ಲುಕಡ್ಡಿಯನ್ನು ಕಚ್ಚಿಕೊಂಡು ನಾನು ನಿನ್ನವನು ಎಂದು ಹೇಳುವವನನ್ನೂ ಕೊಲ್ಲಬಾರದು.

12099048a ಅಹಂ[11] ವೃತ್ರಂ ಬಲಂ ಪಾಕಂ ಶತಮಾಯಂ ವಿರೋಚನಮ್|

12099048c ದುರಾವಾರ್ಯಂ ಚ ನಮುಚಿಂ ನೈಕಮಾಯಂ ಚ ಶಂಬರಮ್||

12099049a ವಿಪ್ರಚಿತ್ತಿಂ ಚ ದೈತೇಯಂ ದನೋಃ ಪುತ್ರಾಂಶ್ಚ ಸರ್ವಶಃ|

12099049c ಪ್ರಹ್ರಾದಂ ಚ ನಿಹತ್ಯಾಜೌ ತತೋ ದೇವಾಧಿಪೋಽಭವಮ್||

ವೃತ್ರ, ಬಲ, ಪಾಕ, ನೂರಾರು ಮಾಯೆಗಳಿದ್ದ ವಿರೋಚನ, ತಡೆಯಲಸಾಧ್ಯನಾದ ನಮುಚಿ, ಮಾಯಾವಿಶಾರದ ಶಂಬರ, ದೈತ್ಯ ವಿಪ್ರಚಿತ್ತಿ, ದನುವಿನ ಪುತ್ರರಾದ ಎಲ್ಲ ದಾನವರನ್ನೂ, ಪ್ರಹ್ರಾದನನ್ನೂ ಯುದ್ಧದಲ್ಲಿ ಸಂಹರಿಸಿಯೇ ನಾನು ದೇವಾಧಿಪನಾಗಿದ್ದೇನೆ.””

12099050 ಭೀಷ್ಮ ಉವಾಚ|

12099050a ಇತ್ಯೇತಚ್ಚಕ್ರವಚನಂ ನಿಶಮ್ಯ ಪ್ರತಿಗೃಹ್ಯ ಚ|

12099050c ಯೋಧಾನಾಮಾತ್ಮನಃ ಸಿದ್ಧಿಮಂಬರೀಷೋಽಭಿಪನ್ನವಾನ್||

ಭೀಷ್ಮನು ಹೇಳಿದನು: “ಅಂಬರೀಷನು ಹೀಗೆ ಹೇಳಿದ ಶಕ್ರನ ಮಾತನ್ನು ಕೇಳಿ ಸ್ವೀಕರಿಸಿ ವೀರಯೋಧರಿಗೆ ಸ್ವತಃಸಿದ್ಧಿಯು ಪ್ರಾಪ್ತವಾಗುವುದೆನ್ನುವುದನ್ನು ಮನಗಂಡನು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಇಂದ್ರಾಂಬರೀಷಸಂವಾದೇ ನವನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಇಂದ್ರಾಂಬರೀಷಸಂವಾದ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.

Hand drawn flowers isolated on white background Vector Image

[1] ರಾಜನಿಗೆ ಮಾತ್ರವೇ ಸಂಗ್ರಾಮಯಜ್ಞ ಮಾಡಲು ಅಧಿಕಾವಿದೆ ಎಂಬುದೇನೂ ಇಲ್ಲ. ರಾಜನ ಸೈನ್ಯದಲ್ಲಿರುವ ಒಬ್ಬ ಪದಾತಿಯೂ ಸಂಗ್ರಾಮಯಜ್ಞವನ್ನು ಮಾಡಬಹುದು. ಧರ್ಮಾನುಸಾರವಾಗಿ ಯುದ್ಧಮಾಡುತ್ತಾ ಶತ್ರುವಿಗೆ ಬೆನ್ನುತೋರಿಸದೇ ಕಡೆಯವರೆಗೂ ಯುದ್ಧಮಾಡುತ್ತಿದ್ದು ಅಸುನೀಗುವುದೇ ಸಂಗ್ರಾಮಯಜ್ಞ. ಇದನ್ನು ವೀರರಾದವರೆಲ್ಲರೂ ಆಚರಿಸಬಹುದು (ಭಾರತ ದರ್ಶನ).

[2] ಶೃಗಾಲ ಎಂಬ ಪಾಠಂತರವಿದೆ (ಭಾರತ ದರ್ಶನ).

[3] ಯಜ್ಞದಲ್ಲಿ ಉಪಯೋಗಿಸುವ ಕತ್ತಿಯ ರೂಪದ ಆಯುಧ (ಭಾರತ ದರ್ಶನ).

[4] ನೀಲಚರ್ಮಾವೃತೈಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಶೋಣಿತಸಂಘಾತಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಸದಸ್ಯಾ ದಕ್ಷಿಣಾ ಯೋಧಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಪ್ರಭುಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[8] ನಾಯಕಂ ತತ್ಕುಮಾರಂ ವಾ ಯೋ ವಾ ಸ್ಯಾದ್ಯತ್ರ ಪೂಜಿತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[9] ಯೋ ಯುದ್ಧಮನುಪಾಲಯೇತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ವೃದ್ಧಬಾಲೌ ನ ಹಂತವ್ಯೌ ನ ಚ ಸ್ತ್ರೀ ನೈವ ಪೃಷ್ಠತಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[11] ಜಂಭಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.