Shanti Parva: Chapter 86

ಶಾಂತಿ ಪರ್ವ: ರಾಜಧರ್ಮ ಪರ್ವ

೮೬

ರಾಜನ ವ್ಯವಹಾರ; ಮಂತ್ರಿಮಂಡಲದ ರಚನೆ; ಮಂತ್ರಿ, ಸೇನಾಪತಿ, ಮತ್ತು ದೂತರ ಗುಣ-ಲಕ್ಷಣಗಳು (೧-೩೩).

12086001 ಯುಧಿಷ್ಠಿರ ಉವಾಚ|

12086001a ಕಥಂ ಸ್ವಿದಿಹ ರಾಜೇಂದ್ರ ಪಾಲಯನ್ಪಾರ್ಥಿವಃ ಪ್ರಜಾಃ|

12086001c ಪ್ರತಿ ಧರ್ಮಂ ವಿಶೇಷೇಣ ಕೀರ್ತಿಮಾಪ್ನೋತಿ ಶಾಶ್ವತೀಮ್||

ಯುಧಿಷ್ಠಿರನು ಹೇಳಿದನು: “ರಾಜೇಂದ್ರ! ಇಲ್ಲಿ ಪ್ರಜೆಗಳನ್ನು ಯಾವ ಧರ್ಮವಿಶೇಷದಿಂದ ಪಾಲಿಸಿದರೆ ರಾಜನು ಪ್ರಜೆಗಳ ಪ್ರೀತಿಯನ್ನೂ ಶಾಶ್ವತ ಕೀರ್ತಿಯನ್ನೂ ಪಡೆಯುತ್ತಾನೆ?”

12086002 ಭೀಷ್ಮ ಉವಾಚ|

12086002a ವ್ಯವಹಾರೇಣ ಶುದ್ಧೇನ ಪ್ರಜಾಪಾಲನತತ್ಪರಃ|

12086002c ಪ್ರಾಪ್ಯ ಧರ್ಮಂ ಚ ಕೀರ್ತಿಂ ಚ ಲೋಕಾವಾಪ್ನೋತ್ಯುಭೌ ಶುಚಿಃ||

ಭೀಷ್ಮನು ಹೇಳಿದನು: “ಶುಚಿಯಾಗಿ ಶುದ್ಧ ವ್ಯವಹಾರಗಳಿಂದ ಪ್ರಜಾಪಾಲನೆಯಲ್ಲಿ ತತ್ಪರನಾಗಿರುವ ರಾಜನು ಇಹ-ಪರ ಲೋಕಗಳಲ್ಲಿ ಧರ್ಮ ಮತ್ತು ಕೀರ್ತಿಗಳನ್ನು ಪಡೆಯುತ್ತಾನೆ.”

12086003 ಯುಧಿಷ್ಠಿರ ಉವಾಚ|

12086003a ಕೀದೃಶಂ ವ್ಯವಹಾರಂ ತು ಕೈಶ್ಚ ವ್ಯವಹರೇನ್ನೃಪಃ|

12086003c ಏತತ್ಪೃಷ್ಟೋ ಮಹಾಪ್ರಾಜ್ಞ ಯಥಾವದ್ವಕ್ತುಮರ್ಹಸಿ||

ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ರಾಜನು ಯಾವ ವ್ಯವಹಾರಗಳನ್ನು ಕೈಗೊಳ್ಳಬೇಕು ಮತ್ತು ಯಾರೊಂದಿಗೆ ವ್ಯವಹರಿಸಬೇಕು? ನನ್ನ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಬೇಕು.

12086004a ಯೇ ಚೈತೇ ಪೂರ್ವಕಥಿತಾ ಗುಣಾಸ್ತೇ ಪುರುಷಂ ಪ್ರತಿ|

12086004c ನೈಕಸ್ಮಿನ್ಪುರುಷೇ ಹ್ಯೇತೇ ವಿದ್ಯಂತ ಇತಿ ಮೇ ಮತಿಃ||

ನೀನು ಈ ಹಿಂದೆ ಹೇಳಿದ ಪುರುಷನಲ್ಲಿರಬೇಕಾದ ಗುಣಗಳೆಲ್ಲವೂ ಒಬ್ಬ ಪುರುಷನಲ್ಲಿಯೇ ಇರುವುದಿಲ್ಲ ಎಂದು ನನ್ನ ಅಭಿಪ್ರಾಯ.”

12086005 ಭೀಷ್ಮ ಉವಾಚ|

12086005a ಏವಮೇತನ್ಮಹಾಪ್ರಾಜ್ಞ ಯಥಾ ವದಸಿ ಬುದ್ಧಿಮಾನ್|

12086005c ದುರ್ಲಭಃ ಪುರುಷಃ ಕಶ್ಚಿದೇಭಿರ್ಗುಣಗುಣೈರ್ಯುತಃ||

ಭೀಷ್ಮನು ಹೇಳಿದನು: “ಮಹಾಪ್ರಾಜ್ಞ! ಬುದ್ಧಿವಂತ! ನೀನು ಹೇಳಿದುದು ಸರಿ. ಈ ಗುಣಗಳೆಲ್ಲವೂ ಯಾವುದೇ ಓರ್ವ ಪುರುಷನಲ್ಲಿರುವುದು ದುರ್ಲಭ.

12086006a ಕಿಂ ತು ಸಂಕ್ಷೇಪತಃ ಶೀಲಂ ಪ್ರಯತ್ನೇ ನೇಹ ದುರ್ಲಭಮ್|

12086006c ವಕ್ಷ್ಯಾಮಿ ತು ಯಥಾಮಾತ್ಯಾನ್ಯಾದೃಶಾಂಶ್ಚ ಕರಿಷ್ಯಸಿ||

ದುರ್ಲಭವಾಗಿರುವ ಈ ಶೀಲವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಯಾವ ರೀತಿಯ ಅಮಾತ್ಯರನ್ನು ನೀನು ಮಾಡಿಕೊಳ್ಳಬೇಕು ಎನ್ನುವುದನ್ನೂ ಹೇಳುತ್ತೇನೆ.

12086007a ಚತುರೋ ಬ್ರಾಹ್ಮಣಾನ್ವೈದ್ಯಾನ್ಪ್ರಗಲ್ಭಾನ್ಸಾತ್ತ್ವಿಕಾನ್ ಶುಚೀನ್|

12086007c ತ್ರೀಂಶ್ಚ ಶೂದ್ರಾನ್ವಿನೀತಾಂಶ್ಚ ಶುಚೀನ್ಕರ್ಮಣಿ ಪೂರ್ವಕೇ||

12086008a ಅಷ್ಟಾಭಿಶ್ಚ ಗುಣೈರ್ಯುಕ್ತಂ ಸೂತಂ ಪೌರಾಣಿಕಂ ಚರೇತ್|

ಪ್ರತಿಭಾನ್ವಿತ, ಅಂತಃಕರಣ ಶುದ್ಧಿಯ, ಸ್ನಾತಕ ವಿದ್ವಾಂಸರಾದ ನಾಲ್ವರು ಬ್ರಾಹ್ಮಣರನ್ನೂ, ಬಲಿಷ್ಠ ಶಸ್ತ್ರಪಾಣಿಗಳಾದ ಎಂಟು ಕ್ಷತ್ರಿಯರನ್ನೂ, ಐಶ್ವರ್ಯಸಂಪನ್ನ ಇಪ್ಪತ್ತೊಂದು ವೈಶ್ಯರನ್ನೂ, ಪವಿತ್ರ ಆಚಾರ-ವಿಚಾರಗಳಿರುವ ವಿನಯಶೀಲ ಮೂವರು ಶೂದ್ರರನ್ನೂ, ಎಂಟು ಗುಣಗಳಿರುವ[1] ಪುರಾಣಜ್ಞ ಸೂತನನ್ನೂ ಸೇರಿಕೊಂಡು ಈ ಮೂವತ್ತೇಳು ಜನರಿರುವ ಮಹಾ ಮಂತ್ರಿಮಂಡಲವನ್ನು ರಾಜನು ರಚಿಸಬೇಕು.

12086008c ಪಂಚಾಶದ್ವರ್ಷವಯಸಂ ಪ್ರಗಲ್ಭಮನಸೂಯಕಮ್||

12086009a ಮತಿಸ್ಮೃತಿಸಮಾಯುಕ್ತಂ ವಿನೀತಂ ಸಮದರ್ಶನಮ್|

12086009c ಕಾರ್ಯೇ ವಿವದಮಾನಾನಾಂ ಶಕ್ತಮರ್ಥೇಷ್ವಲೋಲುಪಮ್||

ಸೂತನ ವಯಸ್ಸು ಐವತ್ತಕ್ಕೆ ಕಡಿಮೆಯಿರಬಾರದು. ಅವನು ಪ್ರತಿಭಾವಂತನೂ, ಇನ್ನೊಬ್ಬರಲ್ಲಿ ದೋಷವನ್ನೆಣಿಸದವನೂ, ಶ್ರುತಿ-ಸ್ಮೃತಿಗಳನ್ನು ತಿಳಿದುಕೊಂಡಿರುವವನೂ, ವಿನೀತನೂ, ಸುಂದರನೂ ಆಗಿರಬೇಕು. ಕಾರ್ಯಸಂಬಂಧ ವಿವಾದವುಂಟಾದಾಗ ಎಲ್ಲ ಪಕ್ಷದವರನ್ನೂ ಸಮಾಧಾನಗೊಳಿಸಲು ಸಮರ್ಥನಾಗಿರಬೇಕು. ಲೋಭರಹಿತನಾಗಿರಬೇಕು.

12086010a ವಿವರ್ಜಿತಾನಾಂ ವ್ಯಸನೈಃ ಸುಘೋರೈಃ ಸಪ್ತಭಿರ್ಭೃಶಮ್|

12086010c ಅಷ್ಟಾನಾಂ ಮಂತ್ರಿಣಾಂ ಮಧ್ಯೇ ಮಂತ್ರಂ ರಾಜೋಪಧಾರಯೇತ್||

ಏಳು[2] ಅತ್ಯಂತ ಘೋರ ವ್ಯಸನಗಳಿಂದ ವಿವರ್ಜಿತರಾದ ಎಂಟು ಮಂತ್ರಿಗಳ ಮಧ್ಯೆ ರಾಜನು ಮಂತ್ರಾಲೋಚನೆ ಮಾಡಬೇಕು.

12086011a ತತಃ ಸಂಪ್ರೇಷಯೇದ್ರಾಷ್ಟ್ರೇ ರಾಷ್ಟ್ರಾಯಾಥ ಚ ದರ್ಶಯೇತ್|

12086011c ಅನೇನ ವ್ಯವಹಾರೇಣ ದ್ರಷ್ಟವ್ಯಾಸ್ತೇ ಪ್ರಜಾಃ ಸದಾ||

ಅನಂತರ ಈ ನಿರ್ಣಯವನ್ನು ರಾಷ್ಟ್ರದಲ್ಲಿ ಪ್ರಚರಿಸಬೇಕು. ಇದರ ಪ್ರಯೋಜನಗಳನ್ನು ರಾಷ್ಟ್ರದವರಿಗೆ ತೋರಿಸಬೇಕು. ಇಂತಹ ವ್ಯವಹಾರಗಳಿಂದ ಸದಾ ಪ್ರಜೆಗಳನ್ನು ನೋಡಿಕೊಳ್ಳುತ್ತಿರಬೇಕು.

12086012a ನ ಚಾಪಿ ಗೂಢಂ ಕಾರ್ಯಂ[3] ತೇ ಗ್ರಾಹ್ಯಂ ಕಾರ್ಯೋಪಘಾತಕಮ್|

12086012c ಕಾರ್ಯೇ ಖಲು ವಿಪನ್ನೇ ತ್ವಾಂ ಸೋಽಧರ್ಮಸ್ತಾಂಶ್ಚ ಪೀಡಯೇತ್||

ನೀನು ಯಾವುದೇ ರೀತಿಯ ಗೂಢ ಕಾರ್ಯಗಳನ್ನು ನಡೆಸಬಾರದು. ಅದು ಕಾರ್ಯಗಳನ್ನು ಘಾತಿಗೊಳಿಸುತ್ತದೆ. ಈ ಅಧರ್ಮದಿಂದ ಆ ಕಾರ್ಯವನ್ನು ಮಾಡಿದರವರಿಗೂ ಆಪತ್ತಾಗಬಹುದು.

12086013a ವಿದ್ರವೇಚ್ಚೈವ ರಾಷ್ಟ್ರಂ ತೇ ಶ್ಯೇನಾತ್ಪಕ್ಷಿಗಣಾ ಇವ|

12086013c ಪರಿಸ್ರವೇಚ್ಚ ಸತತಂ ನೌರ್ವಿಶೀರ್ಣೇವ ಸಾಗರೇ||

ಹೀಗೆ ಮಾಡಿದರೆ ಗಿಡುಗವನ್ನು ಕಂಡು ಹೆದರಿ ದೂರಹೋಗುವ ಹಕ್ಕಿಗಳಂತೆ ಜನರು ನಿನ್ನ ದೂರ ಹೋಗುತ್ತಾರೆ. ಸಾಗರದಲ್ಲಿ ಒಡೆದ ಹಡಗು ನೀರು ತುಂಬಿ ಸುತ್ತುತ್ತಿರುವಂತೆ ದಿಕ್ಕುತೋಚದೇ ಜನರು ಸುತ್ತಾಡುತ್ತಾರೆ.

12086014a ಪ್ರಜಾಃ ಪಾಲಯತೋಽಸಮ್ಯಗಧರ್ಮೇಣೇಹ ಭೂಪತೇಃ|

12086014c ಹಾರ್ದಂ ಭಯಂ ಸಂಭವತಿ ಸ್ವರ್ಗಶ್ಚಾಸ್ಯ ವಿರುಧ್ಯತೇ||

ಅತ್ಯಂತ ಅಧರ್ಮದಿಂದ ಪ್ರಜೆಗಳನ್ನು ಪಾಲಿಸುವ ಭೂಪತಿಯ ಹೃದಯವನ್ನು ಭಯವು ಆವರಿಸುತ್ತದೆ ಮತ್ತು ಅವನಿಗೆ ಪರಲೋಕವೂ ವಿಪರೀತವಾಗಿ ಪರಿಣಮಿಸುತ್ತದೆ.

12086015a ಅಥ ಯೋಽಧರ್ಮತಃ ಪಾತಿ ರಾಜಾಮಾತ್ಯೋಽಥ ವಾತ್ಮಜಃ|

12086015c ಧರ್ಮಾಸನೇ ನಿಯುಕ್ತಃ ಸನ್ಧರ್ಮಮೂಲಂ ನರರ್ಷಭ||

12086016a ಕಾರ್ಯೇಷ್ವಧಿಕೃತಾಃ ಸಮ್ಯಗಕುರ್ವಂತೋ ನೃಪಾನುಗಾಃ|

12086016c ಆತ್ಮಾನಂ ಪುರತಃ ಕೃತ್ವಾ ಯಾಂತ್ಯಧಃ ಸಹಪಾರ್ಥಿವಾಃ||

ನರರ್ಷಭ! ರಾಜನಾಗಲೀ, ಅಮಾತ್ಯನಾಗಲೀ, ರಾಜಪುತ್ರನಾಗಲೀ ಅಧರ್ಮದಿಂದ ರಾಜ್ಯಪಾಲನೆ ಮಾಡಿದರೆ ರಾಜಕಾರ್ಯದಲ್ಲಿ ನಿಯುಕ್ತ ರಾಜನ ಅನುಯಾಯಿಗಳು ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡದೇ ಇರುವುದರಿಂದ ತಮ್ಮನ್ನೇ ಮುಂದೆ ಮಾಡಿಕೊಂಡು ತಮ್ಮನ್ನು ನಿಯಮಿಸಿದ ರಾಜನೊಂದಿಗೆ ನರಕದಲ್ಲಿ ಬೀಳುತ್ತಾರೆ.

12086017a ಬಲಾತ್ಕೃತಾನಾಂ ಬಲಿಭಿಃ ಕೃಪಣಂ ಬಹು ಜಲ್ಪತಾಮ್|

12086017c ನಾಥೋ ವೈ ಭೂಮಿಪೋ ನಿತ್ಯಮನಾಥಾನಾಂ ನೃಣಾಂ ಭವೇತ್||

ಬಲಿಷ್ಠರ ಬಲಾತ್ಕಾರಕ್ಕೊಳಗಾಗಿ ದೈನ್ಯಭಾವದಿಂದ ಕೂಗಿಕೊಳ್ಳುವ ಅನಾಥ ಜನರಿಗೆ ರಾಜನು ರಕ್ಷಣೆಯನ್ನು ನೀಡುವ ನಾಥನಾಗಬೇಕು.

12086018a ತತಃ ಸಾಕ್ಷಿಬಲಂ ಸಾಧು ದ್ವೈಧೇ ವಾದಕೃತಂ ಭವೇತ್|

12086018c ಅಸಾಕ್ಷಿಕಮನಾಥಂ ವಾ ಪರೀಕ್ಷ್ಯಂ ತದ್ವಿಶೇಷತಃ||

ಎರಡು ಪಕ್ಷದವರು ವಾದಮಾಡುತ್ತಿರುವ ಸಂದರ್ಭದಲ್ಲಿ ಸಾಕ್ಷಿಬಲವೇ ಉತ್ತಮವಾದುದು. ಆದರೆ ಸಾಕ್ಷಿಗಳೇ ಇಲ್ಲದ ಅನಾಥರನ್ನು ವಿಶೇಷವಾಗಿ ಪರೀಕ್ಷಿಸಿ ನ್ಯಾಯವನ್ನು ದೊರಕಿಸಬೇಕು.

12086019a ಅಪರಾಧಾನುರೂಪಂ ಚ ದಂಡಂ ಪಾಪೇಷು ಪಾತಯೇತ್|

12086019c ಉದ್ವೇಜಯೇದ್ಧನೈರೃದ್ಧಾನ್ದರಿದ್ರಾನ್ವಧಬಂಧನೈಃ||

ಪಾಪಿಗಳಿಗೆ ಅಪರಾಧಕ್ಕೆ ಅನುಗುಣವದ ದಂಡವನ್ನು ನೀಡಬೇಕು. ಧನಿಕರನ್ನು ಧನದಂಡದ ಮೂಲಕ ಮತ್ತು ದರಿದ್ರರನ್ನು ವಧ-ಬಂಧನಗಳ ಮೂಲಕ ಶಿಕ್ಷಿಸಬೇಕು.

12086020a ವಿನಯೈರಪಿ ದುರ್ವೃತ್ತಾನ್ಪ್ರಹಾರೈರಪಿ ಪಾರ್ಥಿವಃ|

12086020c ಸಾಂತ್ವೇನೋಪಪ್ರದಾನೇನ ಶಿಷ್ಟಾಂಶ್ಚ ಪರಿಪಾಲಯೇತ್||

ದುರ್ವೃತ್ತರನ್ನು ಪ್ರಹಾರಗಳಿಂದಲಾದರೂ ಸನ್ಮಾರ್ಗಕ್ಕೆ ತರಬೇಕು. ಶಿಷ್ಟರನ್ನು ಸಾಂತ್ವವಚನಗಳಿಂದಲೂ ವಸ್ತುಗಳ ಪ್ರದಾನದಿಂದಲೂ ಪರಿಪಾಲಿಸಬೇಕು.

12086021a ರಾಜ್ಞೋ ವಧಂ ಚಿಕೀರ್ಷೇದ್ಯಸ್ತಸ್ಯ ಚಿತ್ರೋ ವಧೋ ಭವೇತ್|

12086021c ಆಜೀವಕಸ್ಯ ಸ್ತೇನಸ್ಯ ವರ್ಣಸಂಕರಕಸ್ಯ ಚ||

ರಾಜನನ್ನು ವಧಿಸಲು ಬಯಸಿದವನಿಗೆ, ಕೊಂದವನಿಗೆ, ಕಳ್ಳನಿಗೆ ಮತ್ತು ವರ್ಣಸಂಕರವನ್ನುಂಟುಮಾಡುವವನಿಗೆ ಚಿತ್ರಹಿಂಸೆಯನ್ನು ಕೊಟ್ಟು ವಧಿಸಬೇಕು.

12086022a ಸಮ್ಯಕ್ಪ್ರಣಯತೋ ದಂಡಂ ಭೂಮಿಪಸ್ಯ ವಿಶಾಂ ಪತೇ|

12086022c ಯುಕ್ತಸ್ಯ ವಾ ನಾಸ್ತ್ಯಧರ್ಮೋ ಧರ್ಮ ಏವೇಹ ಶಾಶ್ವತಃ||

ವಿಶಾಂಪತೇ! ಚೆನ್ನಾಗಿ ಪರಿಶೀಲಿಸಿ ದಂಡವನ್ನು ವಿಧಿಸುವ ಭೂಮಿಪನಿಗೆ ಮತ್ತು ಯುಕ್ತ ದಂಡವನ್ನು ವಿಧಿಸುವುದರಿಂದ ಅಧರ್ಮವು ಉಂಟಾಗುವುದಿಲ್ಲ. ಇದೇ ಸನಾತನ ಧರ್ಮ.

12086023a ಕಾಮಕಾರೇಣ ದಂಡಂ ತು ಯಃ ಕುರ್ಯಾದವಿಚಕ್ಷಣಃ|

12086023c ಸ ಇಹಾಕೀರ್ತಿಸಂಯುಕ್ತೋ ಮೃತೋ ನರಕಮಾಪ್ನುಯಾತ್||

ವಿಚಾರಿಸದೇ ಮನಬಂದಂತೆ ದಂದವನ್ನು ವಿಧಿಸುವವನು ಇಲ್ಲಿ ಅಕೀರ್ತಿಯನ್ನು ಪಡೆಯುವುದಲ್ಲದೇ ಮರಣಾನಂತರ ನರಕವನ್ನು ಪಡೆಯುತ್ತಾನೆ.

12086024a ನ ಪರಸ್ಯ ಶ್ರವಾದೇವ ಪರೇಷಾಂ ದಂಡಮರ್ಪಯೇತ್|

12086024c ಆಗಮಾನುಗಮಂ ಕೃತ್ವಾ ಬಧ್ನೀಯಾನ್ಮೋಕ್ಷಯೇತ ವಾ||

ಬೇರೆಯವರು ಆಡುವ ಮಾತನ್ನು ಕೇಳಿ ಒಬ್ಬನಿಗೆ ಶಿಕ್ಷೆಯನ್ನು ವಿಧಿಸಬಾರದು. ಸಾಕ್ಷಿ-ಪ್ರಮಾಣಾದಿಗಳಿಂದ ವಿಚಾರಮಾಡಿ ನಿಶ್ಚಯಿಸನಂತರವೇ ಅಪರಾಧಿಯನ್ನು ಬಂಧಿಸಬೇಕು. ಇಲ್ಲವಾದರೆ ಅವನನ್ನು ಬಿಟ್ಟುಬಿಡಬೇಕು.

12086025a ನ ತು ಹನ್ಯಾನ್ನೃಪೋ ಜಾತು ದೂತಂ ಕಸ್ಯಾಂ ಚಿದಾಪದಿ|

12086025c ದೂತಸ್ಯ ಹಂತಾ ನಿರಯಮಾವಿಶೇತ್ಸಚಿವೈಃ ಸಹ||

ಯಾವುದೇ ಆಪತ್ತಿನ ಸಮಯದಲ್ಲಿಯೂ ನೃಪನು ದೂತನನ್ನು ಕೊಲ್ಲಬಾರದು. ದೂತನನ್ನು ಕೊಂದ ರಾಜನು ಸಚಿವರೊಂದಿಗೆ ನರಕಕ್ಕೆ ಹೋಗುತ್ತಾನೆ.

12086026a ಯಥೋಕ್ತವಾದಿನಂ ದೂತಂ ಕ್ಷತ್ರಧರ್ಮರತೋ ನೃಪಃ|

12086026c ಯೋ ಹನ್ಯಾತ್ಪಿತರಸ್ತಸ್ಯ ಭ್ರೂಣಹತ್ಯಾಮವಾಪ್ನುಯುಃ||

ಕ್ಷತ್ರಧರ್ಮರತ ನೃಪನು ಹೇಳಿಕಳುಹಿಸಿದುದನ್ನು ಹೇಳುವ ದೂತನನ್ನು ಕೊಂದರೆ ಅವನ ಪಿತೃಗಳು ಭ್ರೂಣಹತ್ಯಾಪಾಪವನ್ನು ಹೊಂದುತ್ತಾರೆ.

12086027a ಕುಲೀನಃ ಶೀಲಸಂಪನ್ನೋ ವಾಗ್ಮೀ ದಕ್ಷಃ ಪ್ರಿಯಂವದಃ|

12086027c ಯಥೋಕ್ತವಾದೀ ಸ್ಮೃತಿಮಾನ್ದೂತಃ ಸ್ಯಾತ್ಸಪ್ತಭಿರ್ಗುಣೈಃ||

ದೂತನಾದವನು ಈ ಏಳು ಗುಣಗಳನ್ನು ಹೊಂದಿರಬೇಕು: ಕುಲೀನನಾಗಿರಬೇಕು. ಶೀಲಸಂಪನ್ನನಾಗಿರಬೇಕು. ವಾಗ್ಮೀ, ದಕ್ಷ, ಪ್ರಿಯಂವದ ಮತ್ತು ಹೇಳಿಕಳುಹಿಸಿದ ಮಾತುಗಳನ್ನೇ ಹೇಳುವವನಾಗಿರಬೇಕು.

12086028a ಏತೈರೇವ ಗುಣೈರ್ಯುಕ್ತಃ ಪ್ರತೀಹಾರೋಽಸ್ಯ ರಕ್ಷಿತಾ|

12086028c ಶಿರೋರಕ್ಷಶ್ಚ ಭವತಿ ಗುಣೈರೇತೈಃ ಸಮನ್ವಿತಃ||

ರಾಜದ್ವಾರವನ್ನು ರಕ್ಷಿಸುವ ಪ್ರತೀಹಾರಿ-ದ್ವಾರಪಾಲಕನೂ ಮತ್ತು ರಾಜನ ಶಿರೋರಕ್ಷಕ-ಅಂಗರಕ್ಷಕನೂ ಈ ಗುಣಗಳಿಂದ ಕೂಡಿದವನಾಗಿರಬೇಕು.

12086029a ಧರ್ಮಾರ್ಥಶಾಸ್ತ್ರತತ್ತ್ವಜ್ಞಃ ಸಂಧಿವಿಗ್ರಹಕೋ ಭವೇತ್|

12086029c ಮತಿಮಾನ್ಧೃತಿಮಾನ್ಧೀಮಾನ್ರಹಸ್ಯವಿನಿಗೂಹಿತಾ||

ಧರ್ಮಾರ್ಥಶಾಸ್ತ್ರತತ್ತ್ವಜ್ಞ, ಬುದ್ಧಿವಂತ, ಧೀರ, ಲಜ್ಜಾಶೀಲ, ಮತ್ತು ರಹಸ್ಯವನ್ನು ಗೋಪ್ಯವಾಗಿಡುವವನು ಸಂಧಿವಿಗ್ರಹಕನಾಗಬೇಕು.

12086030a ಕುಲೀನಃ ಸತ್ಯಸಂಪನ್ನಃ ಶಕ್ತೋಽಮಾತ್ಯಃ ಪ್ರಶಂಸಿತಃ|

12086030c ಏತೈರೇವ ಗುಣೈರ್ಯುಕ್ತಸ್ತಥಾ ಸೇನಾಪತಿರ್ಭವೇತ್||

ಕುಲೀನ, ಸತ್ಯಸಂಪನ್ನ, ಶಕ್ತನು ಶ್ರೇಷ್ಠಮಂತ್ರಿಯೆಂದು ಪರಿಗಣಿಸಲ್ಪಡುತ್ತಾನೆ. ಇವೇ ಗುಣಗಳಿಂದ ಯುಕ್ತನಾದವನು ಸೇನಾಪತಿಯಾಗಬೇಕು.

12086031a ವ್ಯೂಹಯಂತ್ರಾಯುಧೀಯಾನಾಂ ತತ್ತ್ವಜ್ಞೋ ವಿಕ್ರಮಾನ್ವಿತಃ|

12086031c ವರ್ಷಶೀತೋಷ್ಣವಾತಾನಾಂ ಸಹಿಷ್ಣುಃ ಪರರಂಧ್ರವಿತ್||

ಸೇನಾಪತಿಯಾದವನು ವ್ಯೂಹ-ಯಂತ್ರ-ಆಯುಧಗಳ ತತ್ತ್ವಜ್ಞನಾಗಿರಬೇಕು. ವಿಕ್ರಮಾನ್ವಿತನಾಗಿರಬೇಕು. ಮಳೆ-ಗಾಳಿ-ಛಳಿ-ಬಿಸಿಲುಗಳನ್ನು ಸಹಿಸಿಕೊಳ್ಳುವವನಾಗಿರಬೇಕು. ಶತ್ರುಗಳ ನ್ಯೂನತೆಗಳನ್ನು ತಿಳಿದುಕೊಂಡಿರುವವನಾಗಿರಬೇಕು.

12086032a ವಿಶ್ವಾಸಯೇತ್ಪರಾಂಶ್ಚೈವ ವಿಶ್ವಸೇನ್ನ ತು ಕಸ್ಯ ಚಿತ್|

12086032c ಪುತ್ರೇಷ್ವಪಿ ಹಿ ರಾಜೇಂದ್ರ ವಿಶ್ವಾಸೋ ನ ಪ್ರಶಸ್ಯತೇ||

ಶತ್ರುಗಳೂ ನಂಬುವ ರೀತಿಯಲ್ಲಿ ರಾಜನು ವ್ಯವಹಾರಗಳನ್ನಿಟ್ಟುಕೊಂಡಿರಬೇಕು. ಆದರೆ ತಾನು ಮಾತ್ರ ಯಾರಲ್ಲಿಯೂ ವಿಶ್ವಾಸವನ್ನಿಟ್ಟುಕೊಂಡಿರಬಾರದು. ರಾಜೇಂದ್ರ! ಪುತ್ರರಲ್ಲಿಯೂ ವಿಶ್ವಾಸವನ್ನಿಟ್ಟುಕೊಂಡಿರುವುದನ್ನು ಪ್ರಶಂಸಿಸುವುದಿಲ್ಲ.

12086033a ಏತಚ್ಚಾಸ್ತ್ರಾರ್ಥತತ್ತ್ವಂ ತು ತವಾಖ್ಯಾತಂ ಮಯಾನಘ|

12086033c ಅವಿಶ್ವಾಸೋ ನರೇಂದ್ರಾಣಾಂ ಗುಹ್ಯಂ ಪರಮಮುಚ್ಯತೇ||

ಅನಘ! ಈ ಶಾಸ್ತ್ರಾರ್ಥತತ್ತ್ವವನ್ನು ನಿನಗೆ ಹೇಳಿದ್ದೇನೆ. ಯಾರಮೇಲೂ ವಿಶ್ವಾಸವನ್ನಿಡದಿರುವುದೇ ನರೇಂದ್ರರ ಪರಮ ಗುಟ್ಟೆಂದು ಹೇಳುತ್ತಾರೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಮಾತ್ಯವಿಭಾಗೇ ಷಡಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಅಮಾತ್ಯವಿಭಾಗ ಎನ್ನುವ ಎಂಭತ್ತಾರನೇ ಅಧ್ಯಾಯವು.

A Bouquet Of Blue Flowers Isolated On A White Background Royalty ...

[1] ಸೂತನಲ್ಲಿರಬೇಕಾದ ಎಂಟು ಗುಣಗಳು ಈ ರೀತಿಯಿವೆ: ಶುಶ್ರೂಷಾ (ಶುಶ್ರೂಷೆ ಮಾಡುವುದು), ಶ್ರವಣ (ಹೇಳಿದುದನ್ನು ಕೇಳುವುದು), ಗ್ರಹಣ (ಕೇಳಿದುದನ್ನು ಗ್ರಹಣ ಮಾಡುವುದು), ಧಾರಣ (ಗ್ರಹಣಮಾಡಿದುದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು), ಊಹನ (ಕಾರ್ಯಗಳ ಪರಿಣಾಮವೇನಾಗಬಹುದೆಂದು ಊಹಿಸುವುದು), ಆಪೋಹನ (ಕಾರ್ಯವು ಸಿದ್ಧಿಯಾಗದಿದ್ದರೆ ಮುಂದೇನುಮಾಡಬೇಕೆಂದು ಯೋಚಿಸುವುದು), ವಿಜ್ಞಾನ (ವಿಜ್ಞಾನವನ್ನು ತಿಳಿದಿರುವುದು), ಮತ್ತು ತತ್ತ್ವಜ್ಞಾನ (ತತ್ತ್ವಜ್ಞಾನವನ್ನು ತಿಳಿದಿರುವುದು).

[2] ಏಳು ವ್ಯಸನಗಳು ಈ ರೀತಿಯಿವೆ: ಮೃಗಾಯಾಕ್ಷಾಃ ಸ್ತ್ರೀಯಃ ಪಾನಂ| ಬೇಟೆಯಾಡುವುದು, ಜೂಜಾಡುವುದು, ಸದಾ ಸ್ತ್ರೀಯರ ಸಹವಾಸದಲ್ಲಿರುವುದು, ಸದಾ ಮದ್ಯಪಾನಪ್ರಿಯನಾಗಿರುವುದು, ಈ ನಾಲ್ಕು ಕಾಮಜನ್ಯ ವ್ಯಸನಗಳು. ದಂಡಪಾತನಂ ವಾಕ್ಪಾರುಷ್ಯಂ ಅರ್ಥದೂಷಣಂ| ಕಠೋರವಾಗಿ ಶಿಕ್ಷಿಸುವುದು, ಕಠೋರವಾಗಿ ಮಾತನಾಡುವುದು, ಅರ್ಥವನ್ನು ದೂಷಿಸುವುದು – ಈ ಮೂರು ಕ್ರೋಧಜನ್ಯ ವ್ಯಸನಗಳು.

[3] ನ ಚಾಪಿ ಗೂಢಂ ದ್ರವ್ಯಂ ಎಂಬ ಪಾಠಾಂತರವಿದೆ.

Comments are closed.