Shanti Parva: Chapter 83

ಶಾಂತಿ ಪರ್ವ: ರಾಜಧರ್ಮ ಪರ್ವ

೮೩

ಮಂತ್ರಿಗಳ ಪರೀಕ್ಷಾವಿಷಯದಲ್ಲಿ ಕಾಲಕವೃಕ್ಷೀಯೋಽಪಾಖ್ಯಾನ (೧-೬೭).

12083001 ಭೀಷ್ಮ ಉವಾಚ|

12083001a ಏಷಾ ಪ್ರಥಮತೋ ವೃತ್ತಿರ್ದ್ವಿತೀಯಾಂ ಶೃಣು ಭಾರತ|

12083001c ಯಃ ಕಶ್ಚಿಜ್ಜನಯೇದರ್ಥಂ ರಾಜ್ಞಾ ರಕ್ಷ್ಯಃ ಸ ಮಾನವಃ||

ಭೀಷ್ಮನು ಹೇಳಿದನು: “ಭಾರತ! ಇದು ರಾಜನ ಪ್ರಥಮ ವೃತ್ತಿ. ಅವನ ಎರಡನೆಯ ವೃತ್ತಿಯನ್ನು ಕೇಳು. ರಾಜನ ಸಂಪತ್ತನ್ನು ವೃದ್ಧಿಗೊಳಿಸುವವನನ್ನು ರಾಜನು ಸದಾ ರಕ್ಷಿಸಬೇಕು.

12083002a ಹ್ರಿಯಮಾಣಮಮಾತ್ಯೇನ ಭೃತೋ ವಾ ಯದಿ ವಾಭೃತಃ|

12083002c ಯೋ ರಾಜಕೋಶಂ ನಶ್ಯಂತಮಾಚಕ್ಷೀತ ಯುಧಿಷ್ಠಿರ||

12083003a ಶ್ರೋತವ್ಯಂ ತಸ್ಯ ಚ ರಹೋ ರಕ್ಷ್ಯಶ್ಚಾಮಾತ್ಯತೋ ಭವೇತ್|

12083003c ಅಮಾತ್ಯಾ ಹ್ಯುಪಹಂತಾರಂ ಭೂಯಿಷ್ಠಂ ಘ್ನಂತಿ ಭಾರತ||

ಯುಧಿಷ್ಠಿರ! ಭಾರತ! ಅಮಾತ್ಯನೇ ರಾಜಭಂಡಾರವನ್ನು ಕೊಳ್ಳೆಹೊಡೆಯುವ ಸಂದರ್ಭದಲ್ಲಿ ಅದನ್ನು ಗಮನಿಸಿದ ರಾಜಸೇವಕನೋ ಅಥವಾ ಸೇವಕನಲ್ಲದವನೋ ರಾಜಕೋಶವು ನಷ್ಟವಾಗುತ್ತಿರುವುದನ್ನು ರಾಜನಿಗೆ ಹೇಳಿದರೆ ಅವನು ಅದನ್ನು ರಹಸ್ಯದಲ್ಲಿ ಕೇಳಿ ವಿಷಯ ತಿಳಿಸಿದವನನ್ನು ಅಮಾತ್ಯನಿಂದ ರಕ್ಷಿಸಬೇಕು. ಈ ವಿಷಯವನ್ನು ತಿಳಿಸಿದವನನ್ನು ಅಮಾತ್ಯನು ಪ್ರಾಯಶಃ ಕೊಂದೇ ಬಿಡುತ್ತಾರೆ.

12083004a ರಾಜಕೋಶಸ್ಯ ಗೋಪ್ತಾರಂ ರಾಜಕೋಶವಿಲೋಪಕಾಃ|

12083004c ಸಮೇತ್ಯ ಸರ್ವೇ ಬಾಧಂತೇ ಸ ವಿನಶ್ಯತ್ಯರಕ್ಷಿತಃ||

ರಾಜಕೋಶವನ್ನು ಕೊಳ್ಳೆಹೊಡೆಯುವವರು ಎಲ್ಲರೂ ಒಟ್ಟಾಗಿ ರಾಜಕೋಶದ ರಕ್ಷಕನನ್ನು ಬಾಧಿಸುತ್ತಿರುತ್ತಾರೆ. ರಾಜಕೋಶದ ರಕ್ಷಕನನ್ನು ರಕ್ಷಿಸದೇ ಇದ್ದರೆ ಅವನು ವಿನಾಶವನ್ನೇ ಹೊಂದುತ್ತಾನೆ.

12083005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12083005c ಮುನಿಃ ಕಾಲಕವೃಕ್ಷೀಯಃ ಕೌಸಲ್ಯಂ ಯದುವಾಚ ಹ||

ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಮುನಿ ಕಾಲವೃಕ್ಷೀಯ ಮತ್ತು ಕೌಸಲ್ಯರ ಸಂವಾದವನ್ನು ಉದಾಹರಿಸುತ್ತಾರೆ.

12083006a ಕೋಸಲಾನಾಮಾಧಿಪತ್ಯಂ ಸಂಪ್ರಾಪ್ತೇ ಕ್ಷೇಮದರ್ಶಿನಿ|

12083006c ಮುನಿಃ ಕಾಲಕವೃಕ್ಷೀಯ ಆಜಗಾಮೇತಿ ನಃ ಶ್ರುತಮ್||

ಕ್ಷೇಮದರ್ಶಿನಿಯು ಕೋಸಲದ ಅಧಿಪತ್ಯವನ್ನು ಪಡೆದುಕೊಂಡಾಗ ಮುನಿ ಕಾಲಕವೃಕ್ಷೀಯನು ಅಲ್ಲಿಗೆ ಬಂದನೆಂದು ಕೇಳಿದ್ದೇವೆ.

12083007a ಸ ಕಾಕಂ ಪಂಜರೇ ಬದ್ಧ್ವಾ ವಿಷಯಂ ಕ್ಷೇಮದರ್ಶಿನಃ|

12083007c ಪೂರ್ವಂ ಪರ್ಯಚರದ್ಯುಕ್ತಃ ಪ್ರವೃತ್ತ್ಯರ್ಥೀ ಪುನಃ ಪುನಃ||

ಆ ಮುನಿಯು ಒಂದು ಕಾಗೆಯನ್ನು ಪಂಜರದಲ್ಲಿ ಬಂಧಿಸಿ ಕ್ಷೇಮದರ್ಶಿನಿಯ ದೇಶದ ಪರಿಸ್ಥಿತಿಯನ್ನು ತಿಳಿಯಲೋಸುಗ ರಾಜ್ಯಾದಂತ ಅನೇಕ ಬಾರಿ ಸಂಚರಿಸಿದನು.

12083008a ಅಧೀಯೇ ವಾಯಸೀಂ ವಿದ್ಯಾಂ ಶಂಸಂತಿ ಮಮ ವಾಯಸಾಃ|

12083008c ಅನಾಗತಮತೀತಂ ಚ ಯಚ್ಚ ಸಂಪ್ರತಿ ವರ್ತತೇ||

“ವಾಯಸೀವಿದ್ಯೆಯನ್ನು ಕಲಿಯಿರಿ. ನನ್ನ ಕಾಗೆಗಳು ಹಿಂದಿನ, ಮುಂದಾಗುವ ಮತ್ತು ಈಗ ಆಗುತ್ತಿರುವ ವಿಷಯ ಎಲ್ಲವನ್ನೂ ನನಗೆ ಯಥಾವತ್ತಾಗಿ ಹೇಳುತ್ತವೆ.”

12083009a ಇತಿ ರಾಷ್ಟ್ರೇ ಪರಿಪತನ್ಬಹುಶಃ ಪುರುಷೈಃ ಸಹ|

12083009c ಸರ್ವೇಷಾಂ ರಾಜಯುಕ್ತಾನಾಂ ದುಷ್ಕೃತಂ ಪರಿಪೃಷ್ಟವಾನ್||

ಹೀಗೆ ಹೇಳುತ್ತಾ ಅವನು ತಿರುಗಾಡಿ ಅನೇಕ ಪುರುಷರ ಅಭಿಪ್ರಾಯಗಳನ್ನು ಸಂಗ್ರಹಿಸಿದನು. ಹಾಗೆಯೇ ಅವನು ರಾಜಕಾರ್ಯದಲ್ಲಿ ನಿಯುಕ್ತರಾಗಿದ್ದ ಸಮಸ್ತ ಕರ್ಮಚಾರಿಗಳ ದುಷ್ಕರ್ಮಗಳನ್ನೂ ಪ್ರತ್ಯಕ್ಷ ನೋಡಿದನು.

12083010a ಸ ಬುದ್ಧ್ವಾ ತಸ್ಯ ರಾಷ್ಟ್ರಸ್ಯ ವ್ಯವಸಾಯಂ ಹಿ ಸರ್ವಶಃ|

12083010c ರಾಜಯುಕ್ತಾಪಚಾರಾಂಶ್ಚ ಸರ್ವಾನ್ಬುದ್ಧ್ವಾ ತತಸ್ತತಃ||

12083011a ತಮೇವ ಕಾಕಮಾದಾಯ ರಾಜಾನಂ ದ್ರಷ್ಟುಮಾಗಮತ್|

12083011c ಸರ್ವಜ್ಞೋಽಸ್ಮೀತಿ ವಚನಂ ಬ್ರುವಾಣಃ ಸಂಶಿತವ್ರತಃ||

ಆ ಸಂಶಿತವ್ರತನು ಆ ರಾಷ್ಟ್ರದ ಎಲ್ಲ ಆಗುಹೋಗುಗಳನ್ನೂ ತಿಳಿದುಕೊಂಡು ಮತ್ತು ಅಲ್ಲಲ್ಲಿ ರಾಜಕಾರ್ಯಯುಕ್ತರ ಅಪಚಾರಗಳೆಲ್ಲವನ್ನೂ ತಿಳಿದುಕೊಂಡು ಅವನು ಆ ಕಾಗೆಯನ್ನು ಹಿಡಿದುಕೊಂಡು ರಾಜನನ್ನು ನೋಡಲು ನಾನು ಸರ್ವಜ್ಞ ಎಂದು ಹೇಳಿಕೊಳ್ಳುತ್ತಾ ಆಗಮಿಸಿದನು.

12083012a ಸ ಸ್ಮ ಕೌಸಲ್ಯಮಾಗಮ್ಯ ರಾಜಾಮಾತ್ಯಮಲಂಕೃತಮ್|

12083012c ಪ್ರಾಹ ಕಾಕಸ್ಯ ವಚನಾದಮುತ್ರೇದಂ ತ್ವಯಾ ಕೃತಮ್||

12083013a ಅಸೌ ಚಾಸೌ ಚ ಜಾನೀತೇ ರಾಜಕೋಶಸ್ತ್ವಯಾ ಹೃತಃ|

12083013c ಏವಮಾಖ್ಯಾತಿ ಕಾಕೋಽಯಂ ತಚ್ಚೀಘ್ರಮನುಗಮ್ಯತಾಮ್||

ಅವನು ರಾಜಾ ಕೌಸಲ್ಯನ ಬಳಿಬಂದು ಸಮಲಂಕೃತನಾಗಿದ್ದ ಅಮಾತ್ಯನಿಗೆ ಕಾಗೆಯ ಮಾತೋ ಎನ್ನುವಂತೆ ಈ ಮಾತುಗಳನ್ನಾಡಿದನು: “ಇಂತಹ ಸ್ಥಳದಲ್ಲಿ ನೀನು ರಾಜಧನವನ್ನು ಅಪಹರಿಸಿರುವೆ. ನೀನು ಅಪಹರಿಸಿರುವುದನ್ನು ಇಂತಿಂತಹ ಅಧಿಕಾರಿಗಳು ತಿಳಿದಿರುತ್ತಾರೆ. ನೀನೀಗ ರಾಜಕೋಶದ ಕಳ್ಳನಾಗಿದ್ದೀಯೆ ಎಂದು ನನ್ನ ಈ ಕಾಗೆಯು ಹೇಳುತ್ತಿದೆ. ನೀನು ಈಗಲೇ ಈ ಅಪರಾದವನ್ನು ಒಪ್ಪಿಕೋ.” 

12083014a ತಥಾನ್ಯಾನಪಿ ಸ ಪ್ರಾಹ ರಾಜಕೋಶಹರಾನ್ಸದಾ|

12083014c ನ ಚಾಸ್ಯ ವಚನಂ ಕಿಂ ಚಿದಕೃತಂ ಶ್ರೂಯತೇ ಕ್ವ ಚಿತ್||

ಅವನು ಅನ್ಯ ರಾಜಕೋಶಾಪಹಾರಕರ ಹೆಸರುಗಳನ್ನೂ ಹೇಳಿದನು. ಅವನ ಮಾತು ಯಾವುದೂ ಸುಳ್ಳಾಗಿದ್ದುದು ಎಲ್ಲಿಂದಲೂ ಕೇಳಿಬಂದಿರಲಿಲ್ಲ.

12083015a ತೇನ ವಿಪ್ರಕೃತಾಃ ಸರ್ವೇ ರಾಜಯುಕ್ತಾಃ ಕುರೂದ್ವಹ|

12083015c ತಮತಿಕ್ರಮ್ಯ ಸುಪ್ತಸ್ಯ ನಿಶಿ ಕಾಕಮಪೋಥಯನ್||

ಕುರೂದ್ವಹ! ಅವನಿಂದ ಅಪಮಾನಿತರಾದ ಎಲ್ಲ ರಾಜಕರ್ಮಚಾರಿಗಳೂ ರಾತ್ರಿಯಲ್ಲಿ ಅವನು ಮಲಗಿದ್ದಾಗ ಕಾಲಕವೃಕ್ಷೀಯನ ಅ ಕಾಗೆಯನ್ನು ಕೊಂದುಹಾಕಿದರು.

12083016a ವಾಯಸಂ ತು ವಿನಿರ್ಭಿನ್ನಂ ದೃಷ್ಟ್ವಾ ಬಾಣೇನ ಪಂಜರೇ|

12083016c ಪೂರ್ವಾಹ್ಣೇ ಬ್ರಾಹ್ಮಣೋ ವಾಕ್ಯಂ ಕ್ಷೇಮದರ್ಶಿನಮಬ್ರವೀತ್||

ಬೆಳಿಗ್ಗೆ ಪಂಜರದಲ್ಲಿ ಬಾಣದಿಂದ ಹೊಡೆಯಲ್ಪಟ್ಟ ಕಾಗೆಯನ್ನು ನೋಡಿ ಬ್ರಾಹ್ಮಣನು ಕ್ಷೇಮದರ್ಶಿಗೆ ಈ ಮಾತನ್ನಾಡಿದನು:

12083017a ರಾಜಂಸ್ತ್ವಾಮಭಯಂ ಯಾಚೇ ಪ್ರಭುಂ ಪ್ರಾಣಧನೇಶ್ವರಮ್|

12083017c ಅನುಜ್ಞಾತಸ್ತ್ವಯಾ ಬ್ರೂಯಾಂ ವಚನಂ ತ್ವತ್ಪುರೋ ಹಿತಮ್||

“ರಾಜನ್! ಪ್ರಭು ಪ್ರಾಣಧನೇಶ್ವರನಾದ ನಿನ್ನಲ್ಲಿ ಅಭಯವನ್ನು ಯಾಚಿಸುತ್ತಿದ್ದೇನೆ. ನೀನು ಅನುಜ್ಞೆಯನ್ನು ನೀಡಿದರೆ ನಿನಗೆ ಹಿತಕರವಾದ ಮಾತನ್ನು ಹೇಳುತ್ತೇನೆ.

12083018a ಮಿತ್ರಾರ್ಥಮಭಿಸಂತಪ್ತೋ ಭಕ್ತ್ಯಾ ಸರ್ವಾತ್ಮನಾ ಗತಃ|

12083018c ಅಯಂ ತವಾರ್ಥಂ ಹರತೇ ಯೋ ಬ್ರೂಯಾದಕ್ಷಮಾನ್ವಿತಃ||

ಮಿತ್ರಾರ್ಥ ಸರ್ವಭಾವದಿಂದ ಬಂದಿರುವ ನಾನು ರಾಜಕರ್ಮಚಾರಿಗಳಿಂದ ಸಂತಪ್ತನಾಗಿದ್ದೇನೆ. ಇವರು ನಿನ್ನ ಧನವನ್ನು ಅಪಹರಿಸುತ್ತಾರೆ ಎಂದು ಎಚ್ಚರಿಸಲು ಬಂದಿದ್ದೇನೆ.

12083019a ಸಂಬುಬೋಧಯಿಷುರ್ಮಿತ್ರಂ ಸದಶ್ವಮಿವ ಸಾರಥಿಃ|

12083019c ಅತಿಮನ್ಯುಪ್ರಸಕ್ತೋ ಹಿ ಪ್ರಸಜ್ಯ ಹಿತಕಾರಣಮ್||

ಸಾರಥಿಯಾದವನು ಉತ್ತಮ ಕುದುರೆಯನ್ನು ಹುರಿದುಂಬಿಸುವಂತೆ ಪ್ರಜೆಗಳ ಹಿತಕ್ಕಾಗಿ ಮತ್ತು ಮಿತ್ರನಿಗಾಗುತ್ತಿದ್ದ ಹಾನಿಯನ್ನು ಸಹಿಸಲಾರದೇ ಎಚ್ಚರಿಸಲು ಬಂದಿದ್ದೇನೆ.

12083020a ತಥಾವಿಧಸ್ಯ ಸುಹೃದಃ ಕ್ಷಂತವ್ಯಂ ಸಂವಿಜಾನತಾ|

12083020c ಐಶ್ವರ್ಯಮಿಚ್ಚತಾ ನಿತ್ಯಂ ಪುರುಷೇಣ ಬುಭೂಷತಾ||

ಐಶ್ವರ್ಯವನ್ನು ಬಯಸುವವನು ನಿತ್ಯವೂ ತನ್ನ ಒಳಿತನ್ನೇ ಬಯಸುವ ಪುರುಷನ ಮತ್ತು ಸುಹೃದಯನ ವಿಷಯದಲ್ಲಿ ಕ್ಷಮೆಯನ್ನು ತಾಳಬೇಕು.”

12083021a ತಂ ರಾಜಾ ಪ್ರತ್ಯುವಾಚೇದಂ ಯನ್ಮಾ ಕಿಂ ಚಿದ್ಭವಾನ್ವದೇತ್|

12083021c ಕಸ್ಮಾದಹಂ ನ ಕ್ಷಮೇಯಮಾಕಾಂಕ್ಷನ್ನಾತ್ಮನೋ ಹಿತಮ್||

12083022a ಬ್ರಾಹ್ಮಣ ಪ್ರತಿಜಾನೀಹಿ ಪ್ರಬ್ರೂಹಿ ಯದಿ ಚೇಚ್ಚಸಿ|

12083022c ಕರಿಷ್ಯಾಮಿ ಹಿ ತೇ ವಾಕ್ಯಂ ಯದ್ಯನ್ಮಾಂ ವಿಪ್ರ ವಕ್ಷ್ಯಸಿ||

ರಾಜನು ಅವನಿಗೆ ಉತ್ತರಿಸಿದನು: “ಇದೇನು ನೀನು ನನ್ನಲ್ಲಿ ಹೇಳುತ್ತಿರುವುದು? ನನ್ನ ಹಿತದಲ್ಲಿ ನಿರತನಾದವನನ್ನು ನಾನು ಹೇಗೆ ತಾನೇ ಕ್ಷಮಿಸದಿರಲಿ? ಬ್ರಾಹ್ಮಣ! ಹೇಳಬೇಕೆಂದಿರುವುದನ್ನು ಭಯವಿಲ್ಲದೇ ಹೇಳು. ವಿಪ್ರ! ನೀನು ನನಗೆ ಏನನ್ನು ಹೇಳುತ್ತೀಯೋ ಅದನ್ನು ಮಾಡುತ್ತೇನೆ.”

12083023 ಮುನಿರುವಾಚ

12083023a ಜ್ಞಾತ್ವಾ ನಯಾನಪಾಯಾಂಶ್ಚ ಭೃತ್ಯತಸ್ತೇ ಭಯಾನಿ ಚ|

12083023c ಭಕ್ತ್ಯಾ ವೃತ್ತಿಂ ಸಮಾಖ್ಯಾತುಂ ಭವತೋಽಂತಿಕಮಾಗಮಮ್||

ಮುನಿಯು ಹೇಳಿದನು: “ನಿನ್ನ ಸೇವಕರು ನಿನಗೆ ಮಾಡುತ್ತಿರುವ ಅನ್ಯಾಯಗಳನ್ನು ಮತ್ತು ಅವರ ಕಡೆಯಿಂದ ನಿನಗಿರುವ ಭಯವನ್ನು ತಿಳಿದುಕೊಂಡು ಭಕ್ತಿಯಿಂದ ಅದರ ಕುರಿತು ಹೇಳಲು ನಿನ್ನ ಬಳಿ ಬಂದೆ.

12083024a ಪ್ರಾಗೇವೋಕ್ತಶ್ಚ ದೋಷೋಽಯಮಾಚಾರ್ಯೈರ್ನೃಪಸೇವಿನಾಮ್|

12083024c ಅಗತೀಕಗತಿರ್ಹ್ಯೇಷಾ ಯಾ ರಾಜ್ಞಾ ಸಹ ಜೀವಿಕಾ||

ರಾಜಸೇವಕರ ಕಾರ್ಯವು ದೋಷಯುಕ್ತವಾದುದೆಂದು ಮೊದಲೇ ಆಚಾರ್ಯರು ಹೇಳಿರುತ್ತಾರೆ. ರಾಜನೊಂದಿಗೆ ಜೀವಿಸುವುದು ಗತಿಯಿಲ್ಲದವರು ಗತಿಬೇಕೆಂದು ಮಾಡುವ ಕೆಲಸವು.

12083025a ಆಶೀವಿಷೈಶ್ಚ ತಸ್ಯಾಹುಃ ಸಂಗತಂ ಯಸ್ಯ ರಾಜಭಿಃ|

12083025c ಬಹುಮಿತ್ರಾಶ್ಚ ರಾಜಾನೋ ಬಹ್ವಮಿತ್ರಾಸ್ತಥೈವ ಚ||

ರಾಜನ ಸಂಗವು ಸರ್ಪಗಳೊಡನೆ ಸರಸವಾಡುವಂತೆ ಮತ್ತು ರಾಜನಿಗೆ ಅನೇಕ ಮಿತ್ರರೂ ಶತ್ರುಗಳೂ ಇರುತ್ತಾರೆಂದೂ ಹೇಳುತ್ತಾರೆ.

12083026a ತೇಭ್ಯಃ ಸರ್ವೇಭ್ಯ ಏವಾಹುರ್ಭಯಂ ರಾಜೋಪಸೇವಿನಾಮ್|

12083026c ಅಥೈಷಾಮೇಕತೋ ರಾಜನ್ಮುಹೂರ್ತಾದೇವ ಭೀರ್ಭವೇತ್||

ರಾಜೋಪಜೀವಿಗಳಿಗೆ ಅವರೆಲ್ಲರ ಭಯವೂ ಇರುತ್ತದೆ ಎಂದು ಹೇಳುತ್ತಾರೆ. ಅಲ್ಲದೇ ರಾಜನಿಂದಲೂ ಕ್ಷಣ-ಕ್ಷಣಕ್ಕೂ ಭಯವಿದ್ದೇ ಇರುತ್ತದೆ.

12083027a ನೈಕಾಂತೇನಾಪ್ರಮಾದೋ ಹಿ ಕರ್ತುಂ ಶಕ್ಯೋ ಮಹೀಪತೌ|

12083027c ನ ತು ಪ್ರಮಾದಃ ಕರ್ತವ್ಯಃ ಕಥಂ ಚಿದ್ಭೂತಿಮಿಚ್ಚತಾ||

ಮಹೀಪತಿಯ ಸಮೀಪದಲ್ಲಿರುವವನು ಯಾವಾಗಲೂ ಯಾವುದೇ ಪ್ರಮಾದವನ್ನು ಮಾಡಬಾರದು. ತನಗೆ ಒಳ್ಳೆಯದನ್ನು ಬಯಸುವವರು ಪ್ರಮಾದವಾದುದನ್ನು ಎಂದೂ ಮಾಡಬಾರದು.

12083028a ಪ್ರಮಾದಾದ್ಧಿ ಸ್ಖಲೇದ್ರಾಜಾ ಸ್ಖಲಿತೇ ನಾಸ್ತಿ ಜೀವಿತಮ್|

12083028c ಅಗ್ನಿಂ ದೀಪ್ತಮಿವಾಸೀದೇದ್ರಾಜಾನಮುಪಶಿಕ್ಷಿತಃ||

ಎಚ್ಚರತಪ್ಪಿ ನಡೆದುಕೊಂಡರೆ ರಾಜನು ಸ್ಖಲಿತನಾಗಬಹುದು. ಅವನು ಸ್ಖಲಿತನಾದರೆ ಜೀವಿತವೇ ಇಲ್ಲವಾಗಬಹುದು. ರಾಜನ ಬಳಿಯಿರುವವನು ಧಗ-ಧಗಿಸುವ ಬೆಂಕಿಯ ಸಮೀಪದಲ್ಲಿ ಹೇಗೋ ಹಾಗೆ ಎಚ್ಚರದಿಂದಿರಬೇಕು.

12083029a ಆಶೀವಿಷಮಿವ ಕ್ರುದ್ಧಂ ಪ್ರಭುಂ ಪ್ರಾಣಧನೇಶ್ವರಮ್|

12083029c ಯತ್ನೇನೋಪಚರೇನ್ನಿತ್ಯಂ ನಾಹಮಸ್ಮೀತಿ ಮಾನವಃ||

ಪ್ರಾಣ-ಧನೇಶ್ವರ ಪ್ರಭು ರಾಜನನ್ನು ಕ್ರುದ್ಧ ಸರ್ಪದಂತೆಯೇ ನಿತ್ಯವೂ ಪ್ರಯತ್ನಪಟ್ಟು, ಇಲ್ಲದಿದ್ದರೆ ನಾನೇ ಇಲ್ಲವಾಗುತ್ತೇನೆಂಬ ಭಯದಿಂದ, ಉಪಚಾರ ಮಾಡಬೇಕು. 

12083030a ದುರ್ವ್ಯಾಹೃತಾಚ್ಚಂಕಮಾನೋ ದುಷ್ಕೃತಾದ್ದುರಧಿಷ್ಠಿತಾತ್|

12083030c ದುರಾಸಿತಾದ್ದುರ್ವ್ರಜಿತಾದಿಂಗಿತಾದಂಗಚೇಷ್ಟಿತಾತ್||

ಬಾಯಿಂದ ಕೆಟ್ಟ ಮಾತು ಬರಬಾರದು. ಕೆಟ್ಟ ಕೆಲಸವನ್ನು ಮಾಡಬಾರದು. ಯಾವುದನ್ನು ಮಾಡಿದರೆ ಏನಾಗುವುದೋ ಎಂದು ಶಂಕೆಯಿಂದಲೇ ಇರಬೇಕು. ರಾಜನ ಎದಿರು ಬೇಕಾದ ಹಾಗೆ ನಿಂತುಕೊಳ್ಳಬಾರದು. ಬೇಕಾದ ಹಾಗೆ ಕುಳಿತುಕೊಳ್ಳಬಾರದು. ಹೇಗಾದರೂ ಓಡಾಡಿಕೊಂಡಿರಬಾರದು. ರಾಜನ ಎದಿರು ಅಂಗಚೇಷ್ಟೆಗಳನ್ನೂ ಸಂಕೇತಗಳನ್ನೂ ಮಾಡಬಾರದು.

12083031a ದೇವತೇವ ಹಿ ಸರ್ವಾರ್ಥಾನ್ಕುರ್ಯಾದ್ರಾಜಾ ಪ್ರಸಾದಿತಃ|

12083031c ವೈಶ್ವಾನರ ಇವ ಕ್ರುದ್ಧಃ ಸಮೂಲಮಪಿ ನಿರ್ದಹೇತ್|

ಪ್ರಸಾದಿತ ರಾಜನು ದೇವತೆಯಂತೆಯೇ ಎಲ್ಲವನ್ನೂ ಮಾಡುತ್ತಾನೆ. ಇಲ್ಲವಾದರೆ ವೈಶ್ವಾನರನಂತೆ ಕ್ರುದ್ಧನಾಗಿ ಕುಲಸಮೇತ ಸುಟ್ಟುಬಿಡಬಹುದು.

12083031e ಇತಿ ರಾಜನ್ಮಯಃ ಪ್ರಾಹ ವರ್ತತೇ ಚ ತಥೈವ ತತ್||

12083032a ಅಥ ಭೂಯಾಂಸಮೇವಾರ್ಥಂ ಕರಿಷ್ಯಾಮಿ ಪುನಃ ಪುನಃ|

ರಾಜನ್! ಹೀಗೆ ಮಯನು ಹೇಳಿದನು. ಅವನು ಹೇಳಿದುದು ಯಥಾರ್ಥವಾಗಿರುವುದರಿಂದ ನಾನೂ ನಿನಗೆ ಇದನ್ನ್ ಪುನಃ ಪುನಃ ಹೇಳುತ್ತಿದ್ದೇನೆ.

12083032c ದದಾತ್ಯಸ್ಮದ್ವಿಧೋಽಮಾತ್ಯೋ ಬುದ್ಧಿಸಾಹಾಯ್ಯಮಾಪದಿ||

12083033a ವಾಯಸಶ್ಚೈವ ಮೇ ರಾಜನ್ನಂತಕಾಯಾಭಿಸಂಹಿತಃ|

ರಾಜನ್! ನನ್ನಂತಹ ಅಮಾತ್ಯನು ಆಪತ್ಕಾಲದಲ್ಲಿ ರಾಜನಿಗೆ ಬುದ್ಧಿಸಹಾಯ ಮಾಡುತ್ತಾರೆ. ನನ್ನ ಕಾಗೆಯೂ ಹಾಗೆಯೇ ಇತ್ತು. ಆದರೆ ಈಗ ಅದು ಸತ್ತುಹೋಗಿದೆ.

12083033c ನ ಚ ಮೇಽತ್ರ ಭವಾನ್ಗರ್ಹ್ಯೋ ನ ಚ ಯೇಷಾಂ ಭವಾನ್ಪ್ರಿಯಃ|

12083033e ಹಿತಾಹಿತಾಂಸ್ತು ಬುಧ್ಯೇಥಾ ಮಾ ಪರೋಕ್ಷಮತಿರ್ಭವ||

ಈ ಕಾಗೆಯು ಸತ್ತಿದುದಕ್ಕೆ ನಾನು ನಿನ್ನನ್ನು ನಿಂದಿಸಲಾರೆ. ನಿನಗೆ ಪ್ರಿಯರಾದವರನ್ನೂ ನಾನು ನಿಂದಿಸುವುದಿಲ್ಲ. ನಿನಗೆ ಹಿತರು ಮತ್ತು ಅಹಿತರು ಯಾರು ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಬೇಕು. ಪರೋಕ್ಷಮತಿಯಾಗಬೇಡ.

12083034a ಯೇ ತ್ವಾದಾನಪರಾ ಏವ ವಸಂತಿ ಭವತೋ ಗೃಹೇ|

12083034c ಅಭೂತಿಕಾಮಾ ಭೂತಾನಾಂ ತಾದೃಶೈರ್ಮೇಽಭಿಸಂಹಿತಮ್||

ನಿನ್ನ ಧನವನ್ನು ಕದಿಯುವವರು ನಿನ್ನ ಭವನದಲ್ಲಿಯೇ ವಾಸವಾಗಿದ್ದಾರೆ. ಅವರು ಪ್ರಜೆಗಳ ಅಭಿವೃದ್ಧಿಯನ್ನು ಬಯಸುತ್ತಿಲ್ಲ. ಅಂಥವರೊಂದಿಗೆ ನನ್ನ ವೈರವುಂಟಾಗಿದೆ.

12083035a ಯೇ ವಾ ಭವದ್ವಿನಾಶೇನ ರಾಜ್ಯಮಿಚ್ಚಂತ್ಯನಂತರಮ್|

12083035c ಅಂತರೈರಭಿಸಂಧಾಯ ರಾಜನ್ಸಿಧ್ಯಂತಿ ನಾನ್ಯಥಾ||

ರಾಜನ್! ನಿನ್ನ ವಿನಾಶದ ನಂತರ ರಾಜ್ಯವನ್ನು ಬಯಸುವವರು ಒಳಗಿನವರ ಸಹಾಯದಿಂದಲೇ ಕಾರ್ಯಸಿದ್ಧಿಯನ್ನು ಪಡೆಯುತ್ತಾರೆ. ಅನ್ಯಥಾ ಅಲ್ಲ.

12083036a ತೇಷಾಮಹಂ ಭಯಾದ್ರಾಜನ್ಗಮಿಷ್ಯಾಮ್ಯನ್ಯಮಾಶ್ರಮಮ್|

12083036c ತೈರ್ಹಿ ಮೇ ಸಂಧಿತೋ ಬಾಣಃ ಕಾಕೇ ನಿಪತಿತಃ ಪ್ರಭೋ||

ರಾಜನ್! ಪ್ರಭೋ! ಅಂಥಹ ಒಳಗಿನವರ ಭಯದಿಂದಲೇ ನಾನು ಅನ್ಯ ಆಶ್ರಮಕ್ಕೆ ಹೋಗುತ್ತೇನೆ. ನನ್ನ ಮೇಲೆ ಅವರು ಬಿಟ್ಟ ಬಾಣವು ಈ ಕಾಗೆಯ ಮೇಲೆ ಬಿದ್ದುಬಿಟ್ಟಿತು.

12083037a ಚದ್ಮನಾ ಮಮ ಕಾಕಶ್ಚ ಗಮಿತೋ ಯಮಸಾದನಮ್|

12083037c ದೃಷ್ಟಂ ಹ್ಯೇತನ್ಮಯಾ ರಾಜಂಸ್ತಪೋದೀರ್ಘೇಣ ಚಕ್ಷುಷಾ||

ರಾಜನ್! ಮೋಸಗಾರರು ನನ್ನ ಕಾಗೆಯನ್ನು ಯಮಸಾದನಕ್ಕೆ ಕಳುಹಿಸಿದರು. ನನ್ನ ತಪೋದೀರ್ಘ ದೃಷ್ಟಿಯಿಂದ ನಾನು ಇದನ್ನು ಕಂಡೆ.

12083038a ಬಹುನಕ್ರಝಷಗ್ರಾಹಾಂ ತಿಮಿಂಗಿಲಗಣಾಯುತಾಮ್|

12083038c ಕಾಕೇನ ಬಡಿಶೇನೇಮಾಮತಾರ್ಷಂ ತ್ವಾಮಹಂ ನದೀಮ್||

ಬಡಪಾಯಿ ಕಾಗೆಯ ಸಹಾಯದಿಂದ ನಾನು ಮೀನು, ಮೊಸಳೆ, ತಿಮಿ, ಮತ್ತು ತಿಮಿಂಗಿಲಗಣಗಳಿಂದ ತುಂಬಿರುವ ಈ ನದಿಯನ್ನು ದಾಟಿದ್ದೇನೆ.

12083039a ಸ್ಥಾಣ್ವಶ್ಮಕಂಟಕವತೀಂ ವ್ಯಾಘ್ರಸಿಂಹಗಜಾಕುಲಾಮ್|

12083039c ದುರಾಸದಾಂ ದುಷ್ಪ್ರವೇಶಾಂ ಗುಹಾಂ ಹೈಮವತೀಮಿವ||

ಮೋಟುಮರಗಳಿಂದಲೂ, ಕಲ್ಲು-ಮುಳ್ಳುಗಳಿಂದಲೂ, ವ್ಯಾಘ್ರ-ಸಿಂಹ-ಆನೆಗಳ ಗುಂಪುಗಳಿಂದಲೂ ಹಿಮವತ್ಪರ್ವತದ ಗುಹೆಯಂತಿ ಈ ನಿನ್ನ ರಾಜ್ಯವು ದುರಾಸದವೂ ಪ್ರವೇಶಿಸಲು ಕಷ್ಟಸಾದ್ಯವೂ ಆಗಿಬಿಟ್ಟಿದೆ.

12083040a ಅಗ್ನಿನಾ ತಾಮಸಂ ದುರ್ಗಂ ನೌಭಿರಾಪ್ಯಂ ಚ ಗಮ್ಯತೇ|

12083040c ರಾಜದುರ್ಗಾವತರಣೇ ನೋಪಾಯಂ ಪಂಡಿತಾ ವಿದುಃ||

ಪಂಜಿನ ಬೆಳಕಿನಿಂದ ಅಂಧಕಾರಮಯ ದುರ್ಗವನ್ನು ಪ್ರವೇಶಿಸಬಹುದು. ದೋಣಿಯಿಂದ ನೀರನ್ನು ದಾಟಬಹುದು. ಆದರೆ ರಾಜದುರ್ಗವನ್ನು ಪ್ರವೇಶಿಸುವ ಉಪಾಯವನ್ನು ಪಂಡಿತರು ತಿಳಿದಿಲ್ಲ.

12083041a ಗಹನಂ ಭವತೋ ರಾಜ್ಯಮಂಧಕಾರತಮೋವೃತಮ್|

12083041c ನೇಹ ವಿಶ್ವಸಿತುಂ ಶಕ್ಯಂ ಭವತಾಪಿ ಕುತೋ ಮಯಾ||

ನಿನ್ನ ಈ ರಾಜ್ಯವು ಅತಿಗಹನವಾಗಿದೆ. ಅಂಧಕಾರದ ಕತ್ತಲೆಯಿಂದ ಆವೃತವಾಗಿದೆ. ನೀನೇ ವಿಶ್ವಾಸವನ್ನಿಡಲು ಶಕ್ಯನಾಗದಿರಲು ನನ್ನ ವಿಷಯದಲ್ಲಿ ಹೇಳುವುದೇನಿದೆ?

12083042a ಅತೋ ನಾಯಂ ಶುಭೋ ವಾಸಸ್ತುಲ್ಯೇ ಸದಸತೀ ಇಹ|

12083042c ವಧೋ ಹ್ಯೇವಾತ್ರ ಸುಕೃತೇ ದುಷ್ಕೃತೇ ನ ಚ ಸಂಶಯಃ||

ಆದುದರಿಂದ ಈ ದೇಶದಲ್ಲಿ ವಾಸಮಾಡುವುದರಿಂದ ಯಾರಿಗೂ ಕಲ್ಯಾಣವುಂಟಾಗುವುದಿಲ್ಲ. ಏಕೆಂದರೆ ಇಲ್ಲಿ ಸುಕೃತರಿಗೂ ದುಷ್ಕೃತರಿಗೂ ವಧೆಯೇ ದೊರೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

12083043a ನ್ಯಾಯತೋ ದುಷ್ಕೃತೇ ಘಾತಃ ಸುಕೃತೇ ಸ್ಯಾತ್ಕಥಂ ವಧಃ|

12083043c ನೇಹ ಯುಕ್ತಂ ಚಿರಂ ಸ್ಥಾತುಂ ಜವೇನಾತೋ ವ್ರಜೇದ್ಬುಧಃ||

ನ್ಯಾಯವಾಗಿ ನೋಡಿದರೆ ದುಷ್ಕೃತನಿಗೆ ಶಿಕ್ಷೆಯಾಗಬೇಕು. ಯಾವುದೇ ಕಾರಣದಿಂದಲೂ ಸುಕೃತನಿಗೆ ವಧೆಯಾಗಬಾರದು. ಆದುದರಿಂದ ನಿನ್ನ ದೇಶದಲ್ಲಿ ಬಹಳ ಕಾಲ ಇರುವುದು ಯುಕ್ತವಲ್ಲ. ತಿಳಿದವರು ಬೇಗನೇ ನಿನ್ನ ರಾಜ್ಯವನ್ನು ಬಿಟ್ಟು ಹೋಗಬೇಕು.

12083044a ಸೀತಾ ನಾಮ ನದೀ ರಾಜನ್ ಪ್ಲವೋ ಯಸ್ಯಾಂ ನಿಮಜ್ಜತಿ|

12083044c ತಥೋಪಮಾಮಿಮಾಂ ಮನ್ಯೇ ವಾಗುರಾಂ ಸರ್ವಘಾತಿನೀಮ್||

ರಾಜನ್! ಸೀತಾ ಎಂಬ ಹೆಸರಿನ ನದಿಯಲ್ಲಿ ದೋಣಿಗಳೇ ಮುಳುಗಿಹೋಗುತ್ತವೆ. ಹಾಗೆಯೇ ಇಲ್ಲಿಯೂ ಕೂಡ ರಾಜನನ್ನು ಆಪತ್ತಿನಿಂದ ಪಾರುಮಾಡಬೇಕೆಂದು ಬಯಸುವವರು ನಾಶಹೊಂದುತ್ತಾರೆ. ನಿನ್ನ ಈ ರಾಜ್ಯವು ಎಲ್ಲರನ್ನೂ ಘಾತಿಗೊಳಿಸುವ ಒಂದು ದೊಡ್ಡ ಬಲೆಯಂತಿದೆ.

12083045a ಮಧುಪ್ರಪಾತೋ ಹಿ ಭವಾನ್ಭೋಜನಂ ವಿಷಸಂಯುತಮ್|

12083045c ಅಸತಾಮಿವ ತೇ ಭಾವೋ ವರ್ತತೇ ನ ಸತಾಮಿವ|

12083045e ಆಶೀವಿಷೈಃ ಪರಿವೃತಃ ಕೂಪಸ್ತ್ವಮಿವ ಪಾರ್ಥಿವ||

ನೀನು ಪ್ರಪಾತದಲ್ಲಿ ಕಟ್ಟಿರುವ ಜೇನುಗೂಡಿನಂತಿರುವೆ. ವಿಷಸಂಯುತ ಭೋಜನದಂತಿರುವೆ. ನಿನ್ನ ಭಾವವು ದುರ್ಜನರದ್ದಂತಿದೆ. ಸತ್ಪುರುಷರಂತೆ ನೀನು ವರ್ತಿಸುತ್ತಿಲ್ಲ. ಪಾರ್ಥಿವ! ಹಾವುಗಳಿಂದ ಪರಿವೃತವಾದ ಬಾವಿಯಂತಿರುವೆ!

12083046a ದುರ್ಗತೀರ್ಥಾ ಬೃಹತ್ಕೂಲಾ ಕರೀರೀವೇತ್ರಸಂಯುತಾ|

12083046c ನದೀ ಮಧುರಪಾನೀಯಾ ಯಥಾ ರಾಜಂಸ್ತಥಾ ಭವಾನ್|

12083046e ಶ್ವಗೃಧ್ರಗೋಮಾಯುಯುತೋ ರಾಜಹಂಸಸಮೋ ಹ್ಯಸಿ||

ರಾಜನ್! ಎತ್ತರ ತೀರವುಳ್ಳ ಜಲ್ಲೆ-ಬೆತ್ತಗಳಿಂದ ಮುಚ್ಚಲ್ಪಟ್ಟ, ನೀರನ್ನು ಕುಡಿಯಲು ಕಷ್ಟಸಾಧ್ಯವಾದ ಮಧುರ ಪಾನೀಯ ನದಿಯಂತೆ ನೀನಿದ್ದೀಯೆ. ನಾಯಿ, ಹದ್ದು ಮತ್ತು ಗುಳ್ಳೇನರಿಗಳಿಂದ ಆವೃತವಾಗಿರುವ ರಾಜಹಂಸದಂತಿರುವೆ.

12083047a ಯಥಾಶ್ರಿತ್ಯ ಮಹಾವೃಕ್ಷಂ ಕಕ್ಷಃ ಸಂವರ್ಧತೇ ಮಹಾನ್|

12083047c ತತಸ್ತಂ ಸಂವೃಣೋತ್ಯೇವ ತಮತೀತ್ಯ ಚ ವರ್ಧತೇ||

ಮಹಾವೃಕ್ಷದ ಬಳಿಯಲ್ಲಿ ಹುಟ್ಟಿದ ಗಿಡವೊಂದು ಅದನ್ನೇ ಅವಲಂಬಿಸಿ ಬೆಳೆದು ಆ ಮರವನ್ನೇ ಸಂಪೂರ್ಣವಾಗಿ ಆವರಿಸಿ ಬಿಡುತ್ತದೆ.

12083048a ತೇನೈವೋಪೇಂಧನೋ ನೂನಂ ದಾವೋ ದಹತಿ ದಾರುಣಃ|

12083048c ತಥೋಪಮಾ ಹ್ಯಮಾತ್ಯಾಸ್ತೇ ರಾಜಂಸ್ತಾನ್ಪರಿಶೋಧಯ||

ಅಗ್ನಿಯು ಒಣಗಿದ ಆ ಗಿಡಕ್ಕೆ ಹತ್ತಿಕೊಂಡು ಕ್ಷಣಮಾತ್ರದಲ್ಲಿ ಅದಕ್ಕೆ ಆಶ್ರಯವನ್ನಿತ್ತಿದ್ದ ಮಹಾವೃಕ್ಷವನ್ನೇ ಸುಟ್ಟುಹಾಕುತ್ತದೆ. ಈ ಉಪಮೆಯು ನಿನಗ ಅನ್ವಯಿಸುತ್ತದೆ. ಆದುದರಿಂದ ಪರಿಶೋಧಿಸು!

12083049a ಭವತೈವ ಕೃತಾ ರಾಜನ್ಭವತಾ ಪರಿಪಾಲಿತಾಃ|

12083049c ಭವಂತಂ ಪರ್ಯವಜ್ಞಾಯ ಜಿಘಾಂಸಂತಿ ಭವತ್ಪ್ರಿಯಮ್||

ರಾಜನ್! ನಿನ್ನಿಂದಲೇ ಅಧಿಕಾರಿಗಳಾಗಿ ಮಾಡಲ್ಪಟ್ಟ ಮತ್ತು ನಿನ್ನಿಂದಲೇ ಪರಿಪಾಲಿತರಾದ ಅವರು ಕಪಟತನದಿಂದ ನಿನಗೆ ಪ್ರಿಯವಾದವುಗಳನ್ನು ನಾಶಮಾಡುತ್ತಿದ್ದಾರೆ.

12083050a ಉಷಿತಂ ಶಂಕಮಾನೇನ ಪ್ರಮಾದಂ ಪರಿರಕ್ಷತಾ|

12083050c ಅಂತಃಸರ್ಪ ಇವಾಗಾರೇ ವೀರಪತ್ನ್ಯಾ ಇವಾಲಯೇ|

12083050e ಶೀಲಂ ಜಿಜ್ಞಾಸಮಾನೇನ ರಾಜ್ಞಶ್ಚ ಸಹಜೀವಿನಾ||

ರಾಜನ ಸಹಜೀವಿಗಳ ಶೀಲವನ್ನು ಪರೀಕ್ಷಿಸಲು ನಾನು ಯಾರಿಗೂ ಶಂಕೆಯುಂಟಾಗದಂತೆ ಅಪ್ರಮತ್ತನಾಗಿದ್ದುಕೊಂಡು – ಸರ್ಪವಿರುವ ಮನೆಯಲ್ಲಿ ಅಥವಾ ವೀರಪತ್ನಿಯ ಮನೆಯಲ್ಲಿ ಇರುವಂತೆ – ನಿನ್ನ ಅರಮನೆಯಲ್ಲಿ ಉಳಿದುಕೊಂಡೆನು.

12083051a ಕಚ್ಚಿಜ್ಜಿತೇಂದ್ರಿಯೋ ರಾಜಾ ಕಚ್ಚಿದಭ್ಯಂತರಾ ಜಿತಾಃ|

12083051c ಕಚ್ಚಿದೇಷಾಂ ಪ್ರಿಯೋ ರಾಜಾ ಕಚ್ಚಿದ್ರಾಜ್ಞಃ ಪ್ರಿಯಾಃ ಪ್ರಜಾಃ||

12083052a ಜಿಜ್ಞಾಸುರಿಹ ಸಂಪ್ರಾಪ್ತಸ್ತವಾಹಂ ರಾಜಸತ್ತಮ|

ರಾಜಸತ್ತಮ! ರಾಜನು ಜಿತೇಂದ್ರಿಯನೇ? ಸೇವಕರು ಇವನ ಅಧೀನರಾಗಿರುವರೇ? ಪ್ರಜೆಗಳಿಗೆ ರಾಜನ ಮೇಲೆ ಪ್ರೀತಿಯಿದೆಯೇ? ರಾಜನಾದರೋ ಪ್ರಜೆಗಳನ್ನು ಪ್ರೀತಿಸುತ್ತಿದ್ದಾನೆಯೇ? ಇದನ್ನು ತಿಳಿದುಕೊಳ್ಳಲೇ ನಾನು ನಿನ್ನ ಬಳಿ ಬಂದೆನು.

12083052c ತಸ್ಯ ಮೇ ರೋಚಸೇ ರಾಜನ್ ಕ್ಷುಧಿತಸ್ಯೇವ ಭೋಜನಮ್||

12083053a ಅಮಾತ್ಯಾ ಮೇ ನ ರೋಚಂತೇ ವಿತೃಷ್ಣಸ್ಯ ಯಥೋದಕಮ್||

ಹಸಿವೆಯಾದವನಿಗೆ ಭೋಜನವು ಹೇಗೋ ಹಾಗೆ ನೀನು ನನಗೆ ಅತ್ಯಂತ ಪ್ರಿಯನಾಗಿರುವೆ. ಆದರೆ ನಿನ್ನ ಅಮಾತ್ಯರು ನನಗೆ – ಬಾಯಾರಿಕಯಿಲ್ಲದವನಿಗೆ ನೀರು ಹೇಗೋ ಹಾಗೆ – ರುಚಿಸುತ್ತಿಲ್ಲ.

12083053c ಭವತೋಽರ್ಥಕೃದಿತ್ಯೇವ ಮಯಿ ದೋಷೋ ಹಿ ತೈಃ ಕೃತಃ|

12083053e ವಿದ್ಯತೇ ಕಾರಣಂ ನಾನ್ಯದಿತಿ ಮೇ ನಾತ್ರ ಸಂಶಯಃ||

ನಾನು ನಿನ್ನ ಹಿತಚಿಂತಕನಾಗಿರುವೆನೆಂಬ ಕಾರಣದಿಂದಲೇ ನಿನ್ನ ಅಧಿಕಾರಿಗಳು ನನ್ನಲ್ಲಿ ದೋಷವೆಣಿಸಿದ್ದಾರೆ. ಇದಲ್ಲದೇ ಬೇರೆ ಯಾವ ಕಾರಣವೂ ಇಲ್ಲವೆನ್ನುವುದರಲ್ಲಿ ಸಂಶಯವಿಲ್ಲ.

12083054a ನ ಹಿ ತೇಷಾಮಹಂ ದ್ರುಗ್ಧಸ್ತತ್ತೇಷಾಂ ದೋಷವದ್ಗತಮ್|

12083054c ಅರೇರ್ಹಿ ದುರ್ಹತಾದ್ಭೇಯಂ ಭಗ್ನಪೃಷ್ಠಾದಿವೋರಗಾತ್||

ಅವರಿಗೆ ದ್ರೋಹವೆನ್ನಸಗದಿದ್ದರೂ ಅವರಿಗೆ ನನ್ನ ಮೇಲೆ ದೋಷದೃಷ್ಟಿಯೇ ಇದೆ. ಬಾಲವನ್ನು ಕಳೆದುಕೊಂಡು ಕುಪಿತವಾಗಿರುವ ಸರ್ಪಕ್ಕೆ ಭಯಪಡುವಂತೆ ಕೆಟ್ಟ ಶತ್ರುವಿನ ಕುರಿತು ಭಯಪಡಬೇಕು.”

12083055 ರಾಜೋವಾಚ

12083055a ಭೂಯಸಾ ಪರಿಬರ್ಹೇಣ ಸತ್ಕಾರೇಣ ಚ ಭೂಯಸಾ|

12083055c ಪೂಜಿತೋ ಬ್ರಾಹ್ಮಣಶ್ರೇಷ್ಠ ಭೂಯೋ ವಸ ಗೃಹೇ ಮಮ||

ರಾಜನು ಹೇಳಿದನು: “ಬ್ರಾಹ್ಮಣಶ್ರೇಷ್ಠ! ನಿನಗೆ ವಿಶೇಷ ರಕ್ಷಣೆಯನ್ನು ಕೊಡುತ್ತೇನೆ. ವಿಶೇಷವಾಗಿ ಸತ್ಕರಿಸುತ್ತೇನೆ. ನನ್ನಿಂದ ಪೂಜಿತನಾಗಿ ನನ್ನ ಅರಮನೆಯಲ್ಲಿ ಇನ್ನೂ ಹೆಚ್ಚು ಸಮಯ ವಾಸಿಸಿರು.

12083056a ಯೇ ತ್ವಾಂ ಬ್ರಾಹ್ಮಣ ನೇಚ್ಚಂತಿ ನ ತೇ ವತ್ಸ್ಯಂತಿ ಮೇ ಗೃಹೇ|

12083056c ಭವತೈವ ಹಿ ತಜ್ಜ್ಞೇಯಂ ಯದಿದಾನೀಮನಂತರಮ್||

ಬ್ರಾಹ್ಮಣ! ನೀನು ನನ್ನ ಮನೆಯಲ್ಲಿರುವುದನ್ನು ಯಾರು ಇಚ್ಛಸುವುದಿಲ್ಲವೋ ಅವರು ಇನ್ನು ಮುಂದೆ ನನ್ನ ಮನೆಯಲ್ಲಿಯೇ ಇರಲಾರರು. ಅವರನ್ನು ದಮನಮಾಡಲು ಏನು ಮಾಡಬೇಕೆಂದು ನೀನೇ ಯೋಚಿಸಿ ಹೇಳಬೇಕು.

12083057a ಯಥಾ ಸ್ಯಾದ್ದುಷ್ಕೃತೋ ದಂಡೋ ಯಥಾ ಚ ಸುಕೃತಂ ಕೃತಮ್|

12083057c ತಥಾ ಸಮೀಕ್ಷ್ಯ ಭಗವನ್ ಶ್ರೇಯಸೇ ವಿನಿಯುಂಕ್ಷ್ವ ಮಾಮ್||

ಭಗವನ್! ದುಷ್ಕೃತರಿಗೆ ಹೇಗೆ ದಂಡಿಸಬೇಕು ಮತ್ತು ಸುಕೃತವನ್ನು ಹೇಗೆ ಮಾಡಬೇಕು ಎನ್ನುವುದನ್ನು ನೀನೇ ಯೋಚಿಸಿ ನನ್ನನ್ನು ತೊಡಗಿಸು.”

12083058 ಮುನಿರುವಾಚ

12083058a ಅದರ್ಶಯನ್ನಿಮಂ ದೋಷಮೇಕೈಕಂ ದುರ್ಬಲಂ ಕುರು|

12083058c ತತಃ ಕಾರಣಮಾಜ್ಞಾಯ ಪುರುಷಂ ಪುರುಷಂ ಜಹಿ||

ಮುನಿಯು ಹೇಳಿದನು: “ಈ ದೋಷವನ್ನು ಬಹಿರಂಗ ಪಡಿಸಬೇಡ. ಒಬ್ಬೊಬ್ಬರನ್ನೂ ದುರ್ಬಲರನ್ನಾಗಿ ಮಾಡು. ಅನಂತರ ಕಾರಣವನ್ನು ತಿಳಿದು ಪ್ರತಿಯೊಬ್ಬ ಪುರುಷನನ್ನೂ ಶಿಕ್ಷಿಸು.

12083059a ಏಕದೋಷಾ ಹಿ ಬಹವೋ ಮೃದ್ನೀಯುರಪಿ ಕಂಟಕಾನ್|

12083059c ಮಂತ್ರಭೇದಭಯಾದ್ರಾಜಂಸ್ತಸ್ಮಾದೇತದ್ಬ್ರವೀಮಿ ತೇ||

ಒಂದೇ ದೋಷದಿಂದ ಕೂಡಿದ ಅನೇಕರು ಒಂದಾಗಿ ಮುಳ್ಳುಗಳ ರಾಶಿಯನ್ನೇ ಪುಡಿಮಾಡಬಲ್ಲರು. ರಾಜನ್! ನಮ್ಮ ಈ ಮಂತ್ರಾಲೋಚನೆಯು ಬಹಿರಂಗವಾಗಿಬಿಡಬಹುದೆಂಬ ಭಯದಿಂದಲೇ ನಾನು ನಿನಗೆ ಈ ಮಾತನ್ನು ಹೇಳುತ್ತಿದ್ದೇನೆ.

12083060a ವಯಂ ತು ಬ್ರಾಹ್ಮಣಾ ನಾಮ ಮೃದುದಂಡಾಃ ಕೃಪಾಲವಃ|

12083060c ಸ್ವಸ್ತಿ ಚೇಚ್ಚಾಮಿ ಭವತಃ ಪರೇಷಾಂ ಚ ಯಥಾತ್ಮನಃ||

ನಾವಾದರೋ ಬ್ರಾಹ್ಮಣರು. ಮೃದುದಂಡರು. ಕೃಪಾಲುಗಳು. ನಮಗೆ ಹೇಗೋ ಹಾಗೆ ನಿನಗೂ ಮತ್ತು ಇತರರಿಗೂ ಶುಭವನ್ನೇ ಬಯಸುತ್ತೇವೆ.

12083061a ರಾಜನ್ನಾತ್ಮಾನಮಾಚಕ್ಷೇ ಸಂಬಂಧೀ ಭವತೋ ಹ್ಯಹಮ್|

12083061c ಮುನಿಃ ಕಾಲಕವೃಕ್ಷೀಯ ಇತ್ಯೇವಮಭಿಸಂಜ್ಞಿತಃ||

ರಾಜನ್! ನಾನ್ಯಾರೆಂದು ಹೇಳುತ್ತೇನೆ. ನಾನು ನಿನ್ನ ಸಂಬಂಧಿಯು. ಮುನಿ ಕಾಲಕವೃಕ್ಷೀಯನೆಂದು ನನ್ನ ಹೆಸರು.

12083062a ಪಿತುಃ ಸಖಾ ಚ ಭವತಃ ಸಂಮತಃ ಸತ್ಯಸಂಗರಃ|

12083062c ವ್ಯಾಪನ್ನೇ ಭವತೋ ರಾಜ್ಯೇ ರಾಜನ್ಪಿತರಿ ಸಂಸ್ಥಿತೇ||

ನಿನ್ನ ತಂದೆಯ ಸಮ್ಮತ ಸತ್ಯಸಂಗರ ಸಖನಾಗಿದ್ದೆನು. ರಾಜನ್! ನಿನ್ನ ತಂದೆಯು ಸ್ವರ್ಗಗತನಾದ ನಂತರ ನಿನ್ನ ರಾಜ್ಯಕ್ಕೆ ದೊಡ್ಡ ಆಪತ್ತು ಒದಗಿ ಬಂದಿತು.

12083063a ಸರ್ವಕಾಮಾನ್ಪರಿತ್ಯಜ್ಯ ತಪಸ್ತಪ್ತಂ ತದಾ ಮಯಾ|

12083063c ಸ್ನೇಹಾತ್ತ್ವಾಂ ಪ್ರಬ್ರವೀಮ್ಯೇತನ್ಮಾ ಭೂಯೋ ವಿಭ್ರಮೇದಿತಿ||

ಆಗ ಸರ್ವಕಾಮನೆಗಳನ್ನೂ ಪರಿತ್ಯಜಿಸಿ ತಪಸ್ಸನ್ನು ತಪಿಸಿದೆನು. ನಿನ್ನ ಮೇಲಿನ ಸ್ನೇಹದಿಂದ ಪುನಃ ನಿನ್ನ ಬಳಿ ಬಂದಿದ್ದೇನೆ. ಪುನಃ ನೀನು ವಿಪತ್ತಿನಲ್ಲಿ ಸಿಲುಕಬಾರದೆಂದು ನಿನಗೆ ಇದನ್ನು ಹೇಳುತ್ತಿದ್ದೇನೆ.

12083064a ಉಭೇ ದೃಷ್ಟ್ವಾ ದುಃಖಸುಖೇ ರಾಜ್ಯಂ ಪ್ರಾಪ್ಯ ಯದೃಚ್ಚಯಾ|

12083064c ರಾಜ್ಯೇನಾಮಾತ್ಯಸಂಸ್ಥೇನ ಕಥಂ ರಾಜನ್ ಪ್ರಮಾದ್ಯಸಿ||

ದುಃಖ-ಸುಖಗಳೆರಡನ್ನೂ ನೀನು ಕಂಡಿರುವೆ. ದೈವಯೋಗದಿಂದ ರಾಜ್ಯವನ್ನೂ ಪಡೆದುಕೊಂಡಿರುವೆ. ರಾಜನ್! ರಾಜ್ಯಭಾರವನ್ನು ಅಮಾತ್ಯರಿಗೆ ವಹಿಸಿ ನೀನು ಇಂತಹ ಪ್ರಮಾದವನ್ನೇಕೆ ಮಾಡುತ್ತಿರುವೆ?””

12083065 ಭೀಷ್ಮ ಉವಾಚ|

12083065a ತತೋ ರಾಜಕುಲೇ ನಾಂದೀ ಸಂಜಜ್ಞೇ ಭೂಯಸೀ ಪುನಃ|

12083065c ಪುರೋಹಿತಕುಲೇ ಚೈವ ಸಂಪ್ರಾಪ್ತೇ ಬ್ರಾಹ್ಮಣರ್ಷಭೇ||

ಭೀಷ್ಮನು ಹೇಳಿದನು: “ಆ ಬ್ರಾಹ್ಮಣರ್ಷಭನನ್ನು ಪುರೋಹಿತನನ್ನಾಗಿ ಮಾಡಿಕೊಂಡ ನಂತರ ಆ ರಾಜಕುಲದಲ್ಲಿ ಪುನಃ ಅಭಿವೃದ್ಧಿಯ ನಾಂದಿಯಾಯಿತು.

12083066a ಏಕಚ್ಚತ್ರಾಂ ಮಹೀಂ ಕೃತ್ವಾ ಕೌಸಲ್ಯಾಯ ಯಶಸ್ವಿನೇ|

12083066c ಮುನಿಃ ಕಾಲಕವೃಕ್ಷೀಯ ಈಜೇ ಕ್ರತುಭಿರುತ್ತಮೈಃ||

ಮುನಿ ಕಾಲಕವೃಕ್ಷೀಯನು ಯಶಸ್ವೀ ಕೌಸಲ್ಯನನ್ನು ಭೂಮಿಯ ಏಕಚ್ಛತ್ರ ಸಾಮ್ರಾಟನನ್ನಾಗಿ ಮಾಡಿ ಅವನಿಂದ ಉತ್ತಮ ಕ್ರತುಗಳನ್ನು ಮಾಡಿಸಿದನು.

12083067a ಹಿತಂ ತದ್ವಚನಂ ಶ್ರುತ್ವಾ ಕೌಸಲ್ಯೋಽನ್ವಶಿಷನ್ಮಹೀಮ್|

12083067c ತಥಾ ಚ ಕೃತವಾನ್ರಾಜಾಯಥೋಕ್ತಂ ತೇನ ಭಾರತ||

ಭಾರತ! ಅವನ ಹಿತವಚನವನ್ನು ಕೇಳಿ ಕೌಸಲ್ಯನು ಭೂಮಿಯನ್ನೇ ಜಯಿಸಿದನು. ಅವನು ಹೇಳಿದಂತೆಯೇ ರಾಜನು ನಡೆದುಕೊಂಡನು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಮಾತ್ಯಪರೀಕ್ಷಾಯಾಂ ಕಾಲಕವೃಕ್ಷೀಯೋಪಾಖ್ಯಾನೇ ತ್ರ್ಯಶೀತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಅಮಾತ್ಯಪರೀಕ್ಷಾಯಾಂ ಕಾಲಕವೃಕ್ಷೀಯೋಪಾಖ್ಯಾನ ಎನ್ನುವ ಎಂಭತ್ಮೂರನೇ ಅಧ್ಯಾಯವು.

File:Lily flower on white background.jpg - Wikimedia Commons

Comments are closed.