Shanti Parva: Chapter 339

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೯

ಬ್ರಹ್ಮನು ರುದ್ರನಿಗೆ ಪುರುಷನನ್ನು ವರ್ಣಿಸುವುದು (1-21).

12339001 ಬ್ರಹ್ಮೋವಾಚ|

12339001a ಶೃಣು ಪುತ್ರ ಯಥಾ ಹ್ಯೇಷ ಪುರುಷಃ ಶಾಶ್ವತೋಽವ್ಯಯಃ|

12339001c ಅಕ್ಷಯಶ್ಚಾಪ್ರಮೇಯಶ್ಚ ಸರ್ವಗಶ್ಚ ನಿರುಚ್ಯತೇ||

ಬ್ರಹ್ಮನು ಹೇಳಿದನು: “ಪುತ್ರ! ಈ ವಿರಾಟ್ ಪುರುಷನು ಹೇಗೆ ಶಾಶ್ವತನು, ಅವ್ಯಯನು, ಅಕ್ಷಯನು, ಅಪ್ರಮೇಯನು ಮತ್ತು ಸರ್ವಗನು ಎನ್ನುವುದನ್ನು ಹೇಳುತ್ತೇನೆ ಕೇಳು.

12339002a ನ ಸ ಶಕ್ಯಸ್ತ್ವಯಾ ದ್ರಷ್ಟುಂ ಮಯಾನ್ಯೈರ್ವಾಪಿ ಸತ್ತಮ|

12339002c ಸಗುಣೋ ನಿರ್ಗುಣೋ ವಿಶ್ವೋ ಜ್ಞಾನದೃಶ್ಯೋ ಹ್ಯಸೌ ಸ್ಮೃತಃ||

ಸತ್ತಮ! ನೀನಾಗಲೀ ಅಥವಾ ನಾನಾಗಲೀ ಅವನನ್ನು ನೋಡಲು ಶಕ್ಯರಿಲ್ಲ. ಏಕೆಂದರೆ ಆ ಸಗುಣ-ನಿರ್ಗುಣ ವಿಶ್ವನನ್ನು ಜ್ಞಾನದಿಂದ ಮಾತ್ರ ನೋಡಬಹುದೆಂದು ಹೇಳುತ್ತಾರೆ.

12339003a ಅಶರೀರಃ ಶರೀರೇಷು ಸರ್ವೇಷು ನಿವಸತ್ಯಸೌ|

12339003c ವಸನ್ನಪಿ ಶರೀರೇಷು ನ ಸ ಲಿಪ್ಯತಿ ಕರ್ಮಭಿಃ||

ಅಶರೀರಿಯಾಗಿದ್ದರೂ ಅವನು ಸರ್ವ ಶರೀರಗಳಲ್ಲಿಯೂ ನಿತ್ಯವೂ ವಾಸಿಸುತ್ತಿರುತ್ತಾನೆ. ಶರೀರಗಳಲ್ಲಿ ವಾಸಿಸುತ್ತಿದ್ದರೂ ಶರೀರಗಳು ಮಾಡುವ ಕರ್ಮಗಳಿಂದ ಲಿಪ್ತನಾಗುವುದಿಲ್ಲ.

12339004a ಮಮಾಂತರಾತ್ಮಾ ತವ ಚ ಯೇ ಚಾನ್ಯೇ ದೇಹಸಂಜ್ಞಿತಾಃ|

12339004c ಸರ್ವೇಷಾಂ ಸಾಕ್ಷಿಭೂತೋಽಸೌ ನ ಗ್ರಾಹ್ಯಃ ಕೇನ ಚಿತ್ಕ್ವ ಚಿತ್||

ನನ್ನ ಮತ್ತು ನಿನ್ನ ಹಾಗೂ ದೇಹಿಗಳೆಂಬ ಸಂಜ್ಞೆಯನ್ನು ಹೊಂದಿರುವ ಅನ್ಯರ ಅಂತರಾತ್ಮನು ಇವನು. ಎಲ್ಲವಕ್ಕೂ ಸಾಕ್ಷೀಭೂತನು ಇವನು. ಆದರೆ ಇವನು ಯಾರಿಂದಲೂ ಯಾವಾಗಲೂ ಗ್ರಹಿಸಲ್ಪಡತಕ್ಕವನಲ್ಲ.

12339005a ವಿಶ್ವಮೂರ್ಧಾ ವಿಶ್ವಭುಜೋ ವಿಶ್ವಪಾದಾಕ್ಷಿನಾಸಿಕಃ|

12339005c ಏಕಶ್ಚರತಿ ಕ್ಷೇತ್ರೇಷು ಸ್ವೈರಚಾರೀ ಯಥಾಸುಖಮ್||

ಅವನಿಗೆ ಎಲ್ಲೆಲ್ಲಿಯೂ ಶಿರಸ್ಸುಗಳು. ಎಲ್ಲೆಲ್ಲಿಯೂ ಭುಜಗಳು. ಎಲ್ಲೆಲ್ಲಿಯೂ ಪಾದಗಳು, ಕಣ್ಣುಗಳು ಮತ್ತು ಮೂಗುಗಳಿವೆ. ಅವನು ಒಬ್ಬನೇ ಎಲ್ಲ ಕ್ಷೇತ್ರಗಳಲ್ಲಿ ಯಥೇಚ್ಛವಾಗಿ ಯಥಾಸುಖವಾಗಿ ಸಂಚರಿಸುತ್ತಿರುತ್ತಾನೆ[1].

Purusha Suktam Verse 1 Reality Two Fingers Breadth – Ramani's blog12339006a ಕ್ಷೇತ್ರಾಣಿ ಹಿ ಶರೀರಾಣಿ ಬೀಜಾನಿ ಚ ಶುಭಾಶುಭೇ|

12339006c ತಾನಿ ವೇತ್ತಿ ಸ ಯೋಗಾತ್ಮಾ ತತಃ ಕ್ಷೇತ್ರಜ್ಞ ಉಚ್ಯತೇ||

ಶರೀರಗಳೇ ಕ್ಷೇತ್ರಗಳು. ಶುಭಾಶುಭ ಕರ್ಮಗಳೇ ಬೀಜಗಳು. ಇವೆರಡನ್ನೂ ಆ ಯೋಗಾತ್ಮನು ತಿಳಿದಿರುವುದರಿಂದ ಅವನನ್ನು ಕ್ಷೇತ್ರಜ್ಞ ಎಂದು ಕರೆಯುತ್ತಾರೆ.

12339007a ನಾಗತಿರ್ನ ಗತಿಸ್ತಸ್ಯ ಜ್ಞೇಯಾ ಭೂತೇನ ಕೇನ ಚಿತ್|

12339007c ಸಾಂಖ್ಯೇನ ವಿಧಿನಾ ಚೈವ ಯೋಗೇನ ಚ ಯಥಾಕ್ರಮಮ್||

12339008a ಚಿಂತಯಾಮಿ ಗತಿಂ ಚಾಸ್ಯ ನ ಗತಿಂ ವೇದ್ಮಿ ಚೋತ್ತಮಾಮ್|

12339008c ಯಥಾಜ್ಞಾನಂ ತು ವಕ್ಷ್ಯಾಮಿ ಪುರುಷಂ ತಂ ಸನಾತನಮ್||

ಅವನು ಜೀವಿಗಳನ್ನು ಯಾವರೀತಿಯಲ್ಲಿ ಪ್ರವೇಶಿಸುತ್ತಾನೆ ಮತ್ತು ಯಾವ ರೀತಿಯಲ್ಲಿ ಹೊರಬರುತ್ತಾನೆ ಎನ್ನುವುದು ತಿಳಿಯದು. ಯಥಾಕ್ರಮವಾಗಿ ಸಾಂಖ್ಯ ಮತ್ತು ಯೋಗಗಳ ವಿಧಿಯಿಂದ ಅವನ ಗತಿಯ ಕುರಿತು ಯೋಚಿಸುತ್ತಿದ್ದರೂ ಅವನ ಉತ್ತಮ ಗತಿಯನ್ನು ತಿಳಿಯದವನಾಗಿದ್ದೇನೆ. ಆದರೂ ಆ ಸನಾತನ ಪುರುಷನ ಕುರಿತು ನನಗೆ ತಿಳಿದಿರುವುದನ್ನು ಹೇಳುತ್ತೇನೆ.

12339009a ತಸ್ಯೈಕತ್ವಂ ಮಹತ್ತ್ವಂ ಹಿ ಸ ಚೈಕಃ ಪುರುಷಃ ಸ್ಮೃತಃ|

12339009c ಮಹಾಪುರುಷಶಬ್ದಂ ಸ ಬಿಭರ್ತ್ಯೇಕಃ ಸನಾತನಃ||

ಅವನಲ್ಲಿ ಏಕತ್ವವೂ ಮಹತ್ತ್ವವೂ ಇದೆ. ಆದುದರಿಂದ ಅವನನ್ನು ಏಕಮಾತ್ರಪುರುಷನೆಂದು ಹೇಳುತ್ತಾರೆ. ಸನಾತನನಾದ ಅವನೊಬ್ಬನನ್ನೇ ಮಹಾಪುರುಷ ಶಬ್ದದಿಂದ ಸಂಬೋಧಿಸುತ್ತಾರೆ.

12339010a ಏಕೋ ಹುತಾಶೋ ಬಹುಧಾ ಸಮಿಧ್ಯತೇ

ಏಕಃ ಸೂರ್ಯಸ್ತಪಸಾಂ ಯೋನಿರೇಕಾ|

12339010c ಏಕೋ ವಾಯುರ್ಬಹುಧಾ ವಾತಿ ಲೋಕೇ

ಮಹೋದಧಿಶ್ಚಾಂಭಸಾಂ ಯೋನಿರೇಕಃ|

12339010e ಪುರುಷಶ್ಚೈಕೋ ನಿರ್ಗುಣೋ ವಿಶ್ವರೂಪಸ್

ತಂ ನಿರ್ಗುಣಂ ಪುರುಷಂ ಚಾವಿಶಂತಿ||

ಒಬ್ಬನೇ ಅಗ್ನಿಯು ಅನೇಕರೂಪಗಳಿಂದ ಪ್ರಜ್ವಲಿಸುತ್ತಾನೆ. ಒಬ್ಬನೇ ಸೂರ್ಯನು ಅನೇಕ ಪ್ರಕಾಶಗಳಿಗೆ ಯೋನಿ. ಒಬ್ಬನೇ ವಾಯುವು ಲೋಕಗಳಲ್ಲಿ ಅನೇಕ ಪ್ರಕಾರಗಳಲ್ಲಿ ಬೀಸುತ್ತಾನೆ. ಸಮುದ್ರವು ಹಲವು ರೂಪದ ನೀರುಗಳಿಗೆ ಉತ್ಪತ್ತಿಸ್ಥಾನವಾಗಿದೆ. ಹಾಗೆಯೇ ಒಬ್ಬನೇ ಪುರುಷನು ನಿರ್ಗುಣನೂ, ವಿಶ್ವರೂಪನೂ ಆಗಿದ್ದಾನೆ. ನಿರ್ಗುಣನಾದ ಅವನನ್ನು ಗುಣಯುಕ್ತವಾದ ಎಲ್ಲವೂ ಲಯಹೊಂದುತ್ತವೆ.

12339011a ಹಿತ್ವಾ ಗುಣಮಯಂ ಸರ್ವಂ ಕರ್ಮ ಹಿತ್ವಾ ಶುಭಾಶುಭಮ್|

12339011c ಉಭೇ ಸತ್ಯಾನೃತೇ ತ್ಯಕ್ತ್ವಾ ಏವಂ ಭವತಿ ನಿರ್ಗುಣಃ||

ಗುಣಮಯವಾದ ಸರ್ವವನ್ನೂ ತ್ಯಜಿಸಿ, ಶುಭಾಶುಭಕರ್ಮಗಳನ್ನು ತ್ಯಜಿಸಿ ಸತ್ಯ-ಸುಳ್ಳುಗಳೆರಡನ್ನೂ ತ್ಯಜಿಸಿ ಸಾಧಕನು ನಿರ್ಗುಣನಾಗುತ್ತಾನೆ.

12339012a ಅಚಿಂತ್ಯಂ ಚಾಪಿ ತಂ ಜ್ಞಾತ್ವಾ ಭಾವಸೂಕ್ಷ್ಮಂ ಚತುಷ್ಟಯಮ್|

12339012c ವಿಚರೇದ್ಯೋ ಯತಿರ್ಯತ್ತಃ ಸ ಗಚ್ಚೇತ್ಪುರುಷಂ ಪ್ರಭುಮ್||

ಅಚಿಂತ್ಯನಾಗಿದ್ದರೂ ಅವನ ನಾಲ್ಕು ಸೂಕ್ಷ್ಮಭಾವಗಳನ್ನು[2] ತಿಳಿದುಕೊಂಡು ನಡೆಯುವ ಯತಿಯು ಆ ಪ್ರಭು ಪುರುಷನನ್ನು ಹೊಂದುತ್ತಾನೆ.

12339013a ಏವಂ ಹಿ ಪರಮಾತ್ಮಾನಂ ಕೇ ಚಿದಿಚ್ಚಂತಿ ಪಂಡಿತಾಃ|

12339013c ಏಕಾತ್ಮಾನಂ ತಥಾತ್ಮಾನಮಪರೇಽಧ್ಯಾತ್ಮಚಿಂತಕಾಃ||

ಹೀಗೆ ಕೆಲವು ಪಂಡಿತರು ಪರಮಾತ್ಮನು ನಾಲ್ಕು ವ್ಯೂಹಗಳುಳ್ಳವನು ಎಂದು ತಿಳಿಯುತ್ತಾರೆ. ಮತ್ತೆ ಕೆಲವು ಆಧ್ಯಾತ್ಮಚಿಂತಕರು ಅವನು ಏಕಾತ್ಮನು ಮತ್ತು ತಮಗೂ ಆತ್ಮಭೂತನಾಗಿರುವನು ಎಂದು ತಿಳಿಯುತ್ತಾರೆ.

12339014a ತತ್ರ ಯಃ ಪರಮಾತ್ಮಾ ಹಿ ಸ ನಿತ್ಯಂ ನಿರ್ಗುಣಃ ಸ್ಮೃತಃ|

12339014c ಸ ಹಿ ನಾರಾಯಣೋ ಜ್ಞೇಯಃ ಸರ್ವಾತ್ಮಾ ಪುರುಷೋ ಹಿ ಸಃ|

12339014e ನ ಲಿಪ್ಯತೇ ಫಲೈಶ್ಚಾಪಿ ಪದ್ಮಪತ್ರಮಿವಾಂಭಸಾ||

ಅಲ್ಲಿ ಪರಮಾತ್ಮನು ನಿತ್ಯ ಮತ್ತು ನಿರ್ಗುಣನೆಂದು ಹೇಳಲ್ಪಟ್ಟಿದ್ದಾನೆ. ಅವನೇ ನಾರಾಯಣ. ತಿಳಿಯಬೇಕಾದ ಸರ್ವಾತ್ಮಾ ಪುರುಷ. ತಾವರೆಯ ಎಲೆಯು ನೀರಿಗೆ ಅಂಟಿಕೊಳ್ಳದಿರುವಂತೆ ಅವನು ಶುಭಾಶುಭ ಕರ್ಮಫಲಗಳಿಗೆ ಅಂಟಿಕೊಂಡಿರುವುದಿಲ್ಲ.

12339015a ಕರ್ಮಾತ್ಮಾ ತ್ವಪರೋ ಯೋಽಸೌ ಮೋಕ್ಷಬಂಧೈಃ ಸ ಯುಜ್ಯತೇ|

12339015c ಸಸಪ್ತದಶಕೇನಾಪಿ ರಾಶಿನಾ ಯುಜ್ಯತೇ ಹಿ ಸಃ|

12339015e ಏವಂ ಬಹುವಿಧಃ ಪ್ರೋಕ್ತಃ ಪುರುಷಸ್ತೇ ಯಥಾಕ್ರಮಮ್||

ಕರ್ಮಗಳಿಗೆ ಅಂಟಿಕೊಂಡಿರುವವನು ಹುಟ್ಟು-ಸಾವು ಮುಂತಾದ ಬಂಧನಗಳಿಗೆ ಈಡಾಗುತ್ತಾನೆ. ಅಂಥವನು ಹದಿನೇಳು ರಾಶಿಗಳಿಂದ[3] ಯುಕ್ತನಾಗಿರುತ್ತಾನೆ. ಹೀಗೆ ಪುರುಷನ ಕುರಿತು ಯಥಾಕ್ರಮವಾಗಿ ಬಹುವಿಧವಾಗಿ ಹೇಳಿದ್ದೇನೆ.

12339016a ಯತ್ತತ್ಕೃತ್ಸ್ನಂ ಲೋಕತಂತ್ರಸ್ಯ ಧಾಮ

ವೇದ್ಯಂ ಪರಂ ಬೋಧನೀಯಂ ಸಬೋದ್ಧೃ|

12339016c ಮಂತಾ ಮಂತವ್ಯಂ ಪ್ರಾಶಿತಾ ಪ್ರಾಶಿತವ್ಯಂ

ಘ್ರಾತಾ ಘ್ರೇಯಂ ಸ್ಪರ್ಶಿತಾ ಸ್ಪರ್ಶನೀಯಮ್||

ಸಂಪೂರ್ಣವಾದ ಲೋಕತಂತ್ರಕ್ಕೆ ಆಶ್ರಯಸ್ಥಾನನಾಗಿರುವ ಅವನೇ ತಿಳಿಯಲ್ಪಡುವ ಪರಮ ತತ್ತ್ವವೂ, ಬೋಧಿಸಲ್ಪಡುವವನೂ, ಬೋಧಿಸುವವನೂ, ಮನನಶೀಲನೂ, ಮನನಮಾಡಬೇಕಾದವನೂ ಆಗಿದ್ದಾನೆ. ಭೋಜಿಸುವವನೂ ಬೋಜಿಸುವ ಆಹಾರವೂ ಅವನೇ ಆಗಿದ್ದಾನೆ. ಆಘ್ರಾಣಿಸುವವನೂ, ಗಂಧವೂ ಅವನೇ ಆಗಿದ್ದಾನೆ. ಸ್ಪರ್ಶಿಸುವವನೂ ಸ್ಪರ್ಶಿಸುವ ವಸ್ತುವೂ ಅವನೇ ಆಗಿದ್ದಾನೆ.

12339017a ದ್ರಷ್ಟಾ ದ್ರಷ್ಟವ್ಯಂ ಶ್ರಾವಿತಾ ಶ್ರಾವಣೀಯಂ

ಜ್ಞಾತಾ ಜ್ಞೇಯಂ ಸಗುಣಂ ನಿರ್ಗುಣಂ ಚ|

12339017c ಯದ್ವೈ ಪ್ರೋಕ್ತಂ ಗುಣಸಾಮ್ಯಂ ಪ್ರಧಾನಂ[4]

ನಿತ್ಯಂ ಚೈತಚ್ಚಾಶ್ವತಂ ಚಾವ್ಯಯಂ ಚ||

ನೋಡುವವನೂ ನೋಡುವ ದೃಶ್ಯನೂ ಅವನೇ. ಕೇಳುವವನೂ ಕೇಳುವ ಶಬ್ದವೂ ಅವನೇ ಆಗಿದ್ದಾನೆ. ತಿಳಿಯುವವನೂ ತಿಳಿಯಲ್ಪಡುವವನೂ ಅವನೇ. ಅವನು ಸಗುಣ ಮತ್ತು ನಿರ್ಗುಣನು ಕೂಡ. ಯಾವುದನ್ನು ಪ್ರಧಾನ ತತ್ತ್ವವೆಂದು ಹೇಳುತ್ತಾರೋ ಅದು ನಿತ್ಯವೂ, ಶಾಶ್ವತವೂ, ಅವಿನಾಶಿಯೂ, ಗುಣಸಾಮ್ಯವೂ ಆಗಿದೆ.

12339018a ಯದ್ವೈ ಸೂತೇ ಧಾತುರಾದ್ಯಂ ನಿಧಾನಂ

ತದ್ವೈ ವಿಪ್ರಾಃ ಪ್ರವದಂತೇಽನಿರುದ್ಧಮ್|

12339018c ಯದ್ವೈ ಲೋಕೇ ವೈದಿಕಂ ಕರ್ಮ ಸಾಧು

ಆಶೀರ್ಯುಕ್ತಂ ತದ್ಧಿ ತಸ್ಯೋಪಭೋಜ್ಯಮ್||

ಬ್ರಹ್ಮನಿಗಿಂತಲೂ (ನನಗಿಂತಲೂ) ಮೊದಲೇ ಹುಟ್ಟಿದ ಮೂಲಕಾರಣ ಅಥವಾ ಮೂಲಪ್ರಕೃತಿಯನ್ನು ವಿಪ್ರರು ಅನಿರುದ್ಧ ಎಂದು ಕರೆಯುತ್ತಾರೆ. ಲೋಕಗಳಲ್ಲಿ ಯಾವ ಆಶೀರ್ಯುಕ್ತ ಸಾಧು ವೈದಿಕ ಕರ್ಮಗಳಿವೆಯೋ ಅವೆಲ್ಲವೂ ಅವನವೇ ಎಂದು ಭಾವಿಸಬೇಕು.

12339019a ದೇವಾಃ ಸರ್ವೇ ಮುನಯಃ ಸಾಧು ದಾಂತಾಸ್

ತಂ ಪ್ರಾಗ್ಯಜ್ಞೈರ್ಯಜ್ಞಭಾಗಂ ಯಜಂತೇ|

12339019c ಅಹಂ ಬ್ರಹ್ಮಾ ಆದ್ಯ ಈಶಃ ಪ್ರಜಾನಾಂ

ತಸ್ಮಾಜ್ಜಾತಸ್ತ್ವಂ ಚ ಮತ್ತಃ ಪ್ರಸೂತಃ|

12339019e ಮತ್ತೋ ಜಗಜ್ಜಂಗಮಂ ಸ್ಥಾವರಂ ಚ

ಸರ್ವೇ ವೇದಾಃ ಸರಹಸ್ಯಾ ಹಿ ಪುತ್ರ||

ದೇವತೆಗಳು, ಮುನಿಗಳು, ಸಾಧುಗಳು ಮತ್ತು ದಾಂತರು ಎಲ್ಲರೂ ಮೊದಲು ಯಜ್ಞಭಾಗಗಳಿಂದ ಅವನನ್ನೇ ಯಜಿಸಿದರು. ಪ್ರಜೆಗಳ ಈಶ ಆದ್ಯನಾದ ನಾನು ಬ್ರಹ್ಮನೂ ಅವನಿಂದಲೇ ಹುಟ್ಟಿದ್ದೇನೆ. ನನ್ನಿಂದ ನೀನು ಹುಟ್ಟಿರುವೆ. ಪುತ್ರ! ನನ್ನಿಂದ ಈ ಸ್ಥಾವರ-ಜಂಗಮಗಳ ಜಗತ್ತೂ ಮತ್ತು ರಹಸ್ಯಗಳೊಂದಿಗೆ ಸರ್ವ ವೇದಗಳೂ ಹುಟ್ಟಿವೆ.

12339020a ಚತುರ್ವಿಭಕ್ತಃ ಪುರುಷಃ ಸ ಕ್ರೀಡತಿ ಯಥೇಚ್ಚತಿ|

12339020c ಏವಂ ಸ ಏವ ಭಗವಾನ್ ಜ್ಞಾನೇನ ಪ್ರತಿಬೋಧಿತಃ||

ನಾಲ್ಕು ರೂಪಗಳಲ್ಲಿ ವಿಭಾಗಿಸಲ್ಪಟ್ಟಿರುವ ಆ ಪುರುಷನು ಹೇಗೆ ಇಚ್ಛಿಸುವನೋ ಹಾಗೆ ಆಟವಾಡುತ್ತಾನೆ. ಹೀಗೆ ಭಗವಂತನು ತನ್ನದೇ ಜ್ಞಾನದಿಂದ ತಿಳಿಯಲ್ಪಡುತ್ತಾನೆ.

12339021a ಏತತ್ತೇ ಕಥಿತಂ ಪುತ್ರ ಯಥಾವದನುಪೃಚ್ಚತಃ|

12339021c ಸಾಂಖ್ಯಜ್ಞಾನೇ ತಥಾ ಯೋಗೇ ಯಥಾವದನುವರ್ಣಿತಮ್||

ಪುತ್ರ! ನಿನ್ನ ಪ್ರಶ್ನೆಗೆ ಅನುಗುಣವಾಗಿ ನಾನು ಯಥಾವತ್ತಾಗಿ ಉತ್ತರಿಸಿದ್ದೇನೆ. ಸಾಂಖ್ಯಜ್ಞಾನ ಮತ್ತು ಯೋಗಗಳು ವರ್ಣಿಸಿರುವಂತೆ ಪಂಚರಾತ್ರದಲ್ಲಿಯೂ ಭಗವಂತನ ಹಿರಿಮೆಯು ವರ್ಣಿಸಲ್ಪಟ್ಟಿದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯಸಮಾಪ್ತೌ ಏಕೋನಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯಸಮಾಪ್ತಿ ಎನ್ನುವ ಮುನ್ನೂರಾಮೂವತ್ತೊಂಭತ್ತನೇ ಅಧ್ಯಾಯವು.

lotus flower mandala design | Lotus mandala tattoo, Geometric tattoo lotus, Lotus flower mandala

[1] ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಹಸ್ತ ಉತ ವಿಶ್ವತಸ್ಪಾತ್ ಎಂಬ ವೇದವಾಕ್ಯವಿದೆ.

[2] ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ ನಾಲ್ಕು ವ್ಯೂಹಗಳು.

[3] ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಮಹಾಭೂತಗಳು, ಬುದ್ಧಿ ಮತ್ತು ಮನಸ್ಸು – ಇವೇ ಹದಿನೇಳು ರಾಶಿಗಳು.

[4] ಯದ್ವೈ ಪ್ರೋಕ್ತಂ ತಾತ ಸಮ್ಯಕ್ಪ್ರಧಾನಂ| ಎಂಬ ಪಾಠಾಂತರವಿದೆ (ಭಾರತದರ್ಶನ).

Comments are closed.