ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
Contents
Toggle೩೩೬
ಸಾತ್ವತಧರ್ಮದ ಉಪದೇಶ ಪರಂಪರೆ (1-50); ಭಗವಂತನಲ್ಲಿ ಅನನ್ಯ ಭಕ್ತಿಯ ಮಹಿಮೆ (51-82).
12336001 ಜನಮೇಜಯ ಉವಾಚ|
12336001a ಅಹೋ ಹ್ಯೇಕಾಂತಿನಃ ಸರ್ವಾನ್ಪ್ರೀಣಾತಿ ಭಗವಾನ್ ಹರಿಃ|
12336001c ವಿಧಿಪ್ರಯುಕ್ತಾಂ ಪೂಜಾಂ ಚ ಗೃಹ್ಣಾತಿ ಭಗವಾನ್ಸ್ವಯಮ್||
ಜನಮೇಜಯನು ಹೇಳಿದನು: “ಇದೇನಾಶ್ಚರ್ಯ! ಭಗವಾನ್ ಹರಿಯು ಸರ್ವ ಏಕಾಂತಿಗಳ ವಿಷಯದಲ್ಲಿಯೂ ಪ್ರಸನ್ನನಾಗಿರುತ್ತಾನೆ. ಅವರು ವಿಧಿಪ್ರಯುಕ್ತವಾಗಿ ಮಾಡು ಪೂಜೆಗಳನ್ನು ಭಗವಂತನೇ ಸ್ವತಃ ಸ್ವೀಕರಿಸುತ್ತಾನೆ.
12336002a ಯೇ ತು ದಗ್ಧೇಂಧನಾ ಲೋಕೇ ಪುಣ್ಯಪಾಪವಿವರ್ಜಿತಾಃ|
12336002c ತೇಷಾಂ ತ್ವಯಾಭಿನಿರ್ದಿಷ್ಟಾ ಪಾರಂಪರ್ಯಾಗತಾ ಗತಿಃ||
ಲೋಕದಲ್ಲಿ ಯಾರು ಸುಟ್ಟುಹೋದ ಕಟ್ಟಿಗೆಯಂತೆ ಪುಣ್ಯಪಾಪ ವಿವರ್ಜಿತರಾಗಿದ್ದಾರೋ ಅವರಿಗೆ ಪರಂಪರಾಗತವಾಗಿ ಯಾವ ಗತಿಯು ದೊರಕುವುದೆಂಬುದನ್ನು ನೀನು ನಿರ್ದಿಷ್ಟವಾಗಿ ಹೇಳಿರುವೆ.
12336003a ಚತುರ್ಥ್ಯಾಂ ಚೈವ ತೇ ಗತ್ಯಾಂ ಗಚ್ಚಂತಿ ಪುರುಷೋತ್ತಮಮ್|
12336003c ಏಕಾಂತಿನಸ್ತು ಪುರುಷಾ ಗಚ್ಚಂತಿ ಪರಮಂ ಪದಮ್||
ನಾಲ್ಕು ಗತಿಗಳಲ್ಲಿ ಹೋಗುವವರೂ ನಾಲ್ಕನೆಯ ಗತಿಯಲ್ಲಿ ಪುರುಷೋತ್ತಮನನ್ನು ಸೇರುತ್ತಾರೆ[1]. ಏಕಾಂತಿನ ಪುರುಷರು ನೇರವಾಗಿ ಪರಮ ಪದವನ್ನು ಹೊಂದುತ್ತಾರೆ.
12336004a ನೂನಮೇಕಾಂತಧರ್ಮೋಽಯಂ ಶ್ರೇಷ್ಠೋ ನಾರಾಯಣಪ್ರಿಯಃ|
12336004c ಅಗತ್ವಾ ಗತಯಸ್ತಿಸ್ರೋ ಯದ್ಗಚ್ಚಂತ್ಯವ್ಯಯಂ ಹರಿಮ್||
ನಿಶ್ಚಯವಾಗಿಯೂ ಈ ಏಕಾಂತ ಧರ್ಮವು ಶ್ರೇಷ್ಠವಾದುದು. ನಾರಾಯಣನಿಗೆ ಪ್ರಿಯವಾದುದು. ಈ ಧರ್ಮವನ್ನಾಶ್ರಯಿಸಿದವರು ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣರ ಗತಿಯನ್ನು ಹೊಂದದೆಯೇ ನೇರವಾಗಿ ಅವ್ಯಯ ಹರಿಯನ್ನು ಹೊಂದುತ್ತಾರೆ.
12336005a ಸಹೋಪನಿಷದಾನ್ವೇದಾನ್ಯೇ ವಿಪ್ರಾಃ ಸಮ್ಯಗಾಸ್ಥಿತಾಃ|
12336005c ಪಠಂತಿ ವಿಧಿಮಾಸ್ಥಾಯ ಯೇ ಚಾಪಿ ಯತಿಧರ್ಮಿಣಃ||
12336006a ತೇಭ್ಯೋ ವಿಶಿಷ್ಟಾಂ ಜಾನಾಮಿ ಗತಿಮೇಕಾಂತಿನಾಂ ನೃಣಾಮ್|
ಉಪನಿಷತ್ತುಗಳಿಂದ ಕೂಡಿರುವ ವೇದಗಳನ್ನೇ ಪರಮಾಶ್ರಯವೆಂದು ಭಾವಿಸಿ ವಿಧಿಪೂರ್ವಕವಾಗಿ ಅಧ್ಯಯನ ಮಾಡುವ ಬ್ರಾಹ್ಮಣರಿಗೆ ಮತ್ತು ಯತಿಧರ್ಮವನ್ನು ಆಶ್ರಯಿಸಿರುವವರಿಗೆ ಪ್ರಾಪ್ತವಾಗುವ ಸದ್ಗತಿಗಿಂತಲೂ ವಿಶಿಷ್ಟವಾದ ಗನಿಯು ಏಕಾಂತಿನ ಮನುಷ್ಯರಿಗೆ ದೊರೆಯುತ್ತದೆ ಎಂದು ತಿಳಿಯುತ್ತೇನೆ.
12336006c ಕೇನೈಷ ಧರ್ಮಃ ಕಥಿತೋ ದೇವೇನ ಋಷಿಣಾಪಿ ವಾ||
12336007a ಏಕಾಂತಿನಾಂ ಚ ಕಾ ಚರ್ಯಾ ಕದಾ ಚೋತ್ಪಾದಿತಾ ವಿಭೋ|
12336007c ಏತನ್ಮೇ ಸಂಶಯಂ ಚಿಂಧಿ ಪರಂ ಕೌತೂಹಲಂ ಹಿ ಮೇ||
ವಿಭೋ! ಈ ಧರ್ಮವನ್ನು ಯಾವ ದೇವತೆ ಅಥವಾ ಋಷಿಯು ಮೊದಲು ಉಪದೇಶಿಸಿದರು? ಏಕಾಂತಿನರ ಜೀವನವಿಧಾನವು ಹೇಗಿರುತ್ತದೆ? ಈ ಅನನ್ಯ ಭಕ್ತಿ ಧರ್ಮವು ಎಂದಿನಿಂದ ಪ್ರಚಲಿತವಾಯಿತು? ನನ್ನ ಈ ಸಂಶಯವನ್ನು ಹೋಗಲಾಡಿಸು. ಇದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”
12336008 ವೈಶಂಪಾಯನ ಉವಾಚ|
12336008a ಸಮುಪೋಢೇಷ್ವನೀಕೇಷು ಕುರುಪಾಂಡವಯೋರ್ಮೃಧೇ|
12336008c ಅರ್ಜುನೇ ವಿಮನಸ್ಕೇ ಚ ಗೀತಾ ಭಗವತಾ ಸ್ವಯಮ್||
ವೈಶಂಪಾಯನನು ಹೇಳಿದನು: “ಕುರು-ಪಾಂಡವರ ಯುದ್ಧದಲ್ಲಿ ಎರಡು ಸೇನೆಗಳೂ ಯುದ್ಧಕ್ಕೆ ಸಜ್ಜಾಗಿ ಎದುರು-ಬದುರಾಗಿ ನಿಂತಿದ್ದಾಗ ಅರ್ಜುನನು ವಿಮನಸ್ಕನಾದನು. ಆಗ ಸ್ವಯಂ ಭಗವಂತನು ಇದನ್ನು ಗೀತೆಯ ರೂಪದಲ್ಲಿ ಹೇಳಿದನು.
12336009a ಆಗತಿಶ್ಚ ಗತಿಶ್ಚೈವ ಪೂರ್ವಂ ತೇ ಕಥಿತಾ ಮಯಾ|
12336009c ಗಹನೋ ಹ್ಯೇಷ ಧರ್ಮೋ ವೈ ದುರ್ವಿಜ್ಞೇಯೋಽಕೃತಾತ್ಮಭಿಃ||
ಇದಕ್ಕೂ ಮೊದಲು ನಾನು ನಿನಗೆ ಅಗತಿ (ನಿವೃತ್ತಿ) ಮತ್ತು ಗತಿ (ಪ್ರವೃತ್ತಿ) ಧರ್ಮಗಳ ಕುರಿತು ಹೇಳಿದ್ದೇನೆ. ಈ ಏಕಾಂತಿನ ಧರ್ಮವು ಅತಿಗಹನವಾದುದು ಮತ್ತು ಜಿತೇಂದ್ರಿಯರಲ್ಲವರಿಗೆ ಇದನ್ನು ತಿಳಿದುಕೊಳ್ಳಲು ಅಸಾಧ್ಯವು.
12336010a ಸಂಮಿತಃ ಸಾಮವೇದೇನ ಪುರೈವಾದಿಯುಗೇ ಕೃತಃ|
12336010c ಧಾರ್ಯತೇ ಸ್ವಯಮೀಶೇನ ರಾಜನ್ನಾರಾಯಣೇನ ಹ||
ಈ ಏಕಾಂತಿನ ಧರ್ಮವು ಸಾಮವೇದಕ್ಕೆ ಸಮನಾಗಿದ್ದು ಹಿಂದೆ ಆದಿಯುಗ ಕೃತಯುಗದಲ್ಲಿಯೇ ಪ್ರಾರಂಭವಾಯಿತು. ರಾಜನ್! ಇದನ್ನು ಆಗ ಸ್ವಯಂ ಈಶ ನಾರಾಯಣನೇ ಧರಿಸಿದ್ದನು.
12336011a ಏತಮರ್ಥಂ ಮಹಾರಾಜ ಪೃಷ್ಟಃ ಪಾರ್ಥೇನ ನಾರದಃ|
12336011c ಋಷಿಮಧ್ಯೇ ಮಹಾಭಾಗಃ ಶೃಣ್ವತೋಃ ಕೃಷ್ಣಭೀಷ್ಮಯೋಃ||
ಮಹಾರಾಜ! ಇದೇ ವಿಷಯದ ಕುರಿತು ಋಷಿಗಳ ಮಧ್ಯದಲ್ಲಿ ಕೃಷ್ಣ ಮತ್ತು ಭೀಷ್ಮರ ಸಮ್ಮುಖದಲ್ಲಿಯೇ ಪಾರ್ಥ ಯುಧಿಷ್ಠಿರನು ನಾರದಲ್ಲಿ ಕೇಳಿದ್ದನು.
12336012a ಗುರುಣಾ ಚ ಮಮಾಪ್ಯೇಷ ಕಥಿತೋ ನೃಪಸತ್ತಮ|
12336012c ಯಥಾ ತು ಕಥಿತಸ್ತತ್ರ ನಾರದೇನ ತಥಾ ಶೃಣು||
ನೃಪಸತ್ತಮ! ಆಗ ನಾರದನು ಹೇಳಿದುದನ್ನು ನನ್ನ ಗುರುವು ನನಗೂ ಹೇಳಿದ್ದರು. ಅದನ್ನು ಕೇಳು.
12336013a ಯದಾಸೀನ್ಮಾನಸಂ ಜನ್ಮ ನಾರಾಯಣಮುಖೋದ್ಗತಮ್|
12336013c ಬ್ರಹ್ಮಣಃ ಪೃಥಿವೀಪಾಲ ತದಾ ನಾರಾಯಣಃ ಸ್ವಯಮ್|
12336013e ತೇನ ಧರ್ಮೇಣ ಕೃತವಾನ್ದೈವಂ ಪಿತ್ರ್ಯಂ ಚ ಭಾರತ||
ಪೃಥಿವೀಪಾಲ! ಯಾವಾಗ ನಾರಾಯಣನ ಮುಖದಿಂದ ಬ್ರಹ್ಮನ ಮಾನಸ ಜನ್ಮವಾಯಿತೋ ಆಗಲೇ ಸ್ವಯಂ ನಾರಾಯಣನು ಬ್ರಹ್ಮನಿಗೆ ಇದನ್ನು ಉಪದೇಶಿಸಿದನು. ಭಾರತ! ಅದೇ ಧರ್ಮದಿಂದಲೇ ನಾರಾಯಣನು ದೇವ-ಪಿತೃಕಾರ್ಯಗಳನ್ನು ನಡೆಸುತ್ತಿದ್ದನು.
12336014a ಫೇನಪಾ ಋಷಯಶ್ಚೈವ ತಂ ಧರ್ಮಂ ಪ್ರತಿಪೇದಿರೇ|
12336014c ವೈಖಾನಸಾಃ ಫೇನಪೇಭ್ಯೋ ಧರ್ಮಮೇತಂ ಪ್ರಪೇದಿರೇ|
12336014e ವೈಖಾನಸೇಭ್ಯಃ ಸೋಮಸ್ತು ತತಃ ಸೋಽಂತರ್ದಧೇ ಪುನಃ||
ಅನಂತರ ಫೇನಪ ಋಷಿಗಳು ಅವನಿಂದ ಆ ಧರ್ಮವನ್ನು ಪಡೆದುಕೊಂಡರು. ಫೇನಪರಿಂದ ವೈಖಾನಸರು ಆ ಧರ್ಮವನ್ನು ಪಡೆದುಕೊಂಡರು. ವೈಖಾನಸರಿಂದ ಸೋಮನು ಆ ಧರ್ಮವನ್ನು ಪಡೆದುಕೊಂಡನು. ಅನಂತರ ಅದು ಪುನಃ ಲುಪ್ತವಾಗಿ ಹೋಯಿತು.
12336015a ಯದಾಸೀಚ್ಚಾಕ್ಷುಷಂ ಜನ್ಮ ದ್ವಿತೀಯಂ ಬ್ರಹ್ಮಣೋ ನೃಪ|
12336015c ತದಾ ಪಿತಾಮಹಾತ್ಸೋಮಾದೇತಂ ಧರ್ಮಮಜಾನತ|
12336015e ನಾರಾಯಣಾತ್ಮಕಂ ರಾಜನ್ರುದ್ರಾಯ ಪ್ರದದೌ ಚ ಸಃ||
ನೃಪ! ನಾರಾಯಣನ ಕಣ್ಣುಗಳಿಂದ ಬ್ರಹ್ಮನ ಎರಡನೇ ಜನ್ಮವಾದಾಗ ಪಿತಾಮಹನು ಈ ಧರ್ಮವನ್ನು ಸೋಮನಿಂದ ತಿಳಿದುಕೊಂಡನು. ರಾಜನ್! ಅನಂತರ ಅವನು ಈ ನಾರಾಯಣಾತ್ಮಕ ಧರ್ಮವನ್ನು ರುದ್ರನಿಗೆ ಉಪದೇಶಿಸಿದನು.
12336016a ತತೋ ಯೋಗಸ್ಥಿತೋ ರುದ್ರಃ ಪುರಾ ಕೃತಯುಗೇ ನೃಪ|
12336016c ವಾಲಖಿಲ್ಯಾನೃಷೀನ್ಸರ್ವಾನ್ಧರ್ಮಮೇತಮಪಾಠಯತ್|
12336016e ಅಂತರ್ದಧೇ ತತೋ ಭೂಯಸ್ತಸ್ಯ ದೇವಸ್ಯ ಮಾಯಯಾ||
ನೃಪ! ಹಿಂದೆ ಕೃತಯುಗದಲ್ಲಿ ಯೋಗಸ್ಥಿತ ರುದ್ರನು ಈ ಧರ್ಮವನ್ನು ವಾಲಖಿಲ್ಯಋಷಿಗಳೆಲ್ಲರಿಗೂ ಉಪದೇಶಿಸಿದನು. ಆಗ ಆ ದೇವನ ಮಾಯೆಯಿಂದ ಪುನಃ ಅದು ಅಂತರ್ಧಾನವಾಯಿತು.
12336017a ತೃತೀಯಂ ಬ್ರಹ್ಮಣೋ ಜನ್ಮ ಯದಾಸೀದ್ವಾಚಿಕಂ ಮಹತ್|
12336017c ತತ್ರೈಷ ಧರ್ಮಃ ಸಂಭೂತಃ ಸ್ವಯಂ ನಾರಾಯಣಾನ್ನೃಪ||
ನೃಪ! ನಾರಾಯಣನ ವಾಣಿಯಿಂದ ಬ್ರಹ್ಮನ ಮಹತ್ತರವಾದ ಮೂರನೆಯ ಜನ್ಮವಾದಾಗ ಈ ಧರ್ಮವು ಸ್ವಯಂ ನಾರಾಯಣನಿಂದಲೇ ಪ್ರಕಟವಾಯಿತು.
12336018a ಸುಪರ್ಣೋ ನಾಮ ತಮೃಷಿಃ ಪ್ರಾಪ್ತವಾನ್ಪುರುಷೋತ್ತಮಾತ್|
12336018c ತಪಸಾ ವೈ ಸುತಪ್ತೇನ ದಮೇನ ನಿಯಮೇನ ಚ||
ಸುಪರ್ಣನೆಂಬ ಋಷಿಯು ಇದನ್ನು ದಮ-ನಿಯಮಗಳಿಂದ ಉತ್ತಮ ತಪಸ್ಸನ್ನು ತಪಿಸಿ ಪುರುಷೋತ್ತಮನಿಂದ ಇದನ್ನು ಪಡೆದುಕೊಂಡನು.
12336019a ತ್ರಿಃ ಪರಿಕ್ರಾಂತವಾನೇತತ್ಸುಪರ್ಣೋ ಧರ್ಮಮುತ್ತಮಮ್|
12336019c ಯಸ್ಮಾತ್ತಸ್ಮಾದ್ವ್ರತಂ ಹ್ಯೇತತ್ತ್ರಿಸೌಪರ್ಣಮಿಹೋಚ್ಯತೇ||
ಸುಪರ್ಣನು ಆ ಉತ್ತಮ ಧರ್ಮವನ್ನು ಪ್ರತಿದಿನವೂ ಮೂರು ಬಾರಿ ಪಾರಾಯಣಮಾಡುತ್ತಿದ್ದನು. ಇದರಿಂದ ಆ ವ್ರತವನ್ನು ತ್ರಿಸೌಪರ್ಣವೆಂದೂ ಕರೆಯುತ್ತಾರೆ.
12336020a ಋಗ್ವೇದಪಾಠಪಠಿತಂ ವ್ರತಮೇತದ್ಧಿ ದುಶ್ಚರಮ್|
12336020c ಸುಪರ್ಣಾಚ್ಚಾಪ್ಯಧಿಗತೋ ಧರ್ಮ ಏಷ ಸನಾತನಃ||
12336021a ವಾಯುನಾ ದ್ವಿಪದಾಂ ಶ್ರೇಷ್ಠ ಪ್ರಥಿತೋ ಜಗದಾಯುಷಾ|
ಈ ದುಶ್ಚರ ವ್ರತವು ಋಗ್ವೇದಪಾಠದಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ. ದ್ವಿಪದರಲ್ಲಿ ಶ್ರೇಷ್ಠ! ಜಗತ್ತಿಗೆ ಪ್ರಾಣಸ್ವರೂಪನಾದ ವಾಯುವು ಸುಪರ್ಣನಿಂದ ಈ ಸನಾತನ ಧರ್ಮವನ್ನು ಪಡೆದುಕೊಂಡನು.
12336021c ವಾಯೋಃ ಸಕಾಶಾತ್ ಪ್ರಾಪ್ತಶ್ಚ ಋಷಿಭಿರ್ವಿಘಸಾಶಿಭಿಃ||
12336022a ತೇಭ್ಯೋ ಮಹೋದಧಿಶ್ಚೈನಂ ಪ್ರಾಪ್ತವಾನ್ಧರ್ಮಮುತ್ತಮಮ್|
12336022c ತತಃ ಸೋಽಂತರ್ದಧೇ ಭೂಯೋ ನಾರಾಯಣಸಮಾಹಿತಃ||
ವಿಘಸವನ್ನು ತಿಂದು ಜೀವಿಸುತ್ತಿದ್ದ ಋಷಿಗಳು ಈ ಏಕಾಂತಧರ್ಮವನ್ನು ವಾಯುವಿನಿಂದ ಪಡೆದುಕೊಂಡರು. ಅವರಿಂದ ಈ ಉತ್ತಮ ಧರ್ಮವನ್ನು ಮಹೋದಧಿಯು ಪಡೆದುಕೊಂಡನು. ಅನಂತರ ಪುನಃ ಈ ಧರ್ಮವು ಲುಪ್ತವಾಗಿ ನಾರಾಯಣನಲ್ಲಿ ಸೇರಿಹೋಯಿತು.
12336023a ಯದಾ ಭೂಯಃ ಶ್ರವಣಜಾ ಸೃಷ್ಟಿರಾಸೀನ್ಮಹಾತ್ಮನಃ|
12336023c ಬ್ರಹ್ಮಣಃ ಪುರುಷವ್ಯಾಘ್ರ ತತ್ರ ಕೀರ್ತಯತಃ ಶೃಣು||
ಯಾವಾಗ ಬ್ರಹ್ಮನ ನಾಲ್ಕನೆಯ ಜನ್ಮವು ಶ್ರೀಮನ್ನಾರಾಯಣನ ಕಿವಿಯಿಂದಾಯಿತೋ ಆಗ ಈ ಧರ್ಮವು ಪುನಃ ಪ್ರಾದುರ್ಭವಿಸಿತು. ಪುರುಷವ್ಯಾಘ್ರ! ಅದರ ಕುರಿತು ಹೇಳುತ್ತೇನೆ. ಕೇಳು.
12336024a ಜಗತ್ ಸ್ರಷ್ಟುಮನಾ ದೇವೋ ಹರಿರ್ನಾರಾಯಣಃ ಸ್ವಯಮ್|
12336024c ಚಿಂತಯಾಮಾಸ ಪುರುಷಂ ಜಗತ್ಸರ್ಗಕರಂ ಪ್ರಭುಃ||
ಜಗತ್ತನ್ನು ಸೃಷ್ಟಿಸಲು ಯೋಚಿಸಿದ ಸ್ವಯಂ ದೇವ ಹರಿ ನಾರಾಯಣ ಪ್ರಭುವು ಜಗತ್ತನ್ನು ಸೃಷ್ಟಿಸಬಲ್ಲ ಪುರುಷನನ್ನು ಸ್ಮರಿಸಿದನು.
12336025a ಅಥ ಚಿಂತಯತಸ್ತಸ್ಯ ಕರ್ಣಾಭ್ಯಾಂ ಪುರುಷಃ ಸೃತಃ|
12336025c ಪ್ರಜಾಸರ್ಗಕರೋ ಬ್ರಹ್ಮಾ ತಮುವಾಚ ಜಗತ್ಪತಿಃ||
ಹಾಗೆ ಯೋಚಿಸುತ್ತಿರುವಾಗ ಅವನ ಕಿವಿಗಳಿಂದ ಹೊರಬಂದ ಪುರುಷ ಪ್ರಜೆಗಳ ಸೃಷ್ಟಿಕರ್ತ ಬ್ರಹ್ಮನಿಗೆ ಜಗತ್ಪತಿಯು ಹೇಳಿದನು:
12336026a ಸೃಜ ಪ್ರಜಾಃ ಪುತ್ರ ಸರ್ವಾ ಮುಖತಃ ಪಾದತಸ್ತಥಾ|
12336026c ಶ್ರೇಯಸ್ತವ ವಿಧಾಸ್ಯಾಮಿ ಬಲಂ ತೇಜಶ್ಚ ಸುವ್ರತ||
“ಪುತ್ರ! ಸುವ್ರತ! ಮುಖದಿಂದಲೂ ಪಾದಗಳಿಂದಲೂ ಎಲ್ಲ ಪ್ರಜೆಗಳನ್ನೂ ಸೃಷ್ಟಿಸು. ನಾನು ನಿನಗೆ ಶ್ರೇಯಸ್ಸನ್ನುಂಟುಮಾಡುತ್ತೇನೆ. ನಿನ್ನ ಬಲ-ತೇಜಸ್ಸುಗಳನ್ನು ವೃದ್ಧಿಗೊಳಿಸುತ್ತೇನೆ.
12336027a ಧರ್ಮಂ ಚ ಮತ್ತೋ ಗೃಹ್ಣೀಷ್ವ ಸಾತ್ವತಂ ನಾಮ ನಾಮತಃ|
12336027c ತೇನ ಸರ್ವಂ ಕೃತಯುಗಂ ಸ್ಥಾಪಯಸ್ವ ಯಥಾವಿಧಿ[2]||
ಸಾತ್ವತ ಎಂಬ ಹೆಸರಿನ ಈ ಧರ್ಮವನ್ನೂ ನನ್ನಿಂದ ಸ್ವೀಕರಿಸು. ಇದರಿಂದ ಯಥಾವಿಧಿಯಾಗಿ ಕೃತಯುಗದ ಎಲ್ಲವನ್ನೂ ಸ್ಥಾಪಿಸು.”
12336028a ತತೋ ಬ್ರಹ್ಮಾ ನಮಶ್ಚಕ್ರೇ ದೇವಾಯ ಹರಿಮೇಧಸೇ|
12336028c ಧರ್ಮಂ ಚಾಗ್ರ್ಯಂ ಸ ಜಗ್ರಾಹ ಸರಹಸ್ಯಂ ಸಸಂಗ್ರಹಮ್|
12336028e ಆರಣ್ಯಕೇನ ಸಹಿತಂ ನಾರಾಯಣಮುಖೋದ್ಗತಮ್||
ಅನಂತರ ಬ್ರಹ್ಮನು ಹರಿಮೇಧಸ ದೇವನಿಗೆ ನಮಸ್ಕರಿಸಿ ನಾರಾಯಣನ ಮುಖದಿಂದ ಹೊರಟ ಆರಣ್ಯಕ ಸಹಿತವಾದ ಆ ಉತ್ತಮ ಧರ್ಮವನ್ನು ರಹಸ್ಯಗಳು ಮತ್ತು ಸಂಗ್ರಹಗಳೊಂದಿಗೆ ಪಡೆದುಕೊಂಡನು.
12336029a ಉಪದಿಶ್ಯ ತತೋ ಧರ್ಮಂ ಬ್ರಹ್ಮಣೇಽಮಿತತೇಜಸೇ||
12336029c ತಂ ಕಾರ್ತಯುಗಧರ್ಮಾಣಂ ನಿರಾಶೀಃಕರ್ಮಸಂಜ್ಞಿತಮ್|
12336029e ಜಗಾಮ ತಮಸಃ ಪಾರಂ ಯತ್ರಾವ್ಯಕ್ತಂ ವ್ಯವಸ್ಥಿತಮ್||
ಕೃತಯುಗಧರ್ಮವಾದ ನಿಷ್ಕಾಮಕರ್ಮಯೋಗವೆಂದು ಕರೆಯಲ್ಪಡುವ ಆ ಧರ್ಮವನ್ನು ಅಮಿತತೇಜಸ್ವೀ ಬ್ರಹ್ಮನಿಗೆ ಉಪದೇಶಿಸಿ ನಾರಾಯಣನು ಅಜ್ಞಾನಾಂಧಕಾರದ ಆಚೆ ಅವ್ಯಕ್ತವಿರುವಲ್ಲಿಗೆ ಹೊರಟು ಹೋದನು.
12336030a ತತೋಽಥ ವರದೋ ದೇವೋ ಬ್ರಹ್ಮಲೋಕಪಿತಾಮಹಃ|
12336030c ಅಸೃಜತ್ಸ ತದಾ ಲೋಕಾನ್ಕೃತ್ಸ್ನಾನ್ ಸ್ಥಾವರಜಂಗಮಾನ್||
ಅನಂತರ ವರದ ಲೋಕಪಿತಾಮಹ ಬ್ರಹ್ಮದೇವನು ಸ್ಥಾವರಜಂಗಮಗಳಿಂದ ಕೂಡಿದ ಸಂಪೂರ್ಣ ಲೋಕಗಳನ್ನು ಸೃಷ್ಟಿಸಿದನು.
12336031a ತತಃ ಪ್ರಾವರ್ತತ ತದಾ ಆದೌ ಕೃತಯುಗಂ ಶುಭಮ್|
12336031c ತತೋ ಹಿ ಸಾತ್ವತೋ ಧರ್ಮೋ ವ್ಯಾಪ್ಯ ಲೋಕಾನವಸ್ಥಿತಃ||
ಆದಿಯಲ್ಲಿ ಶುಭ ಕೃತಯುಗವು ಪ್ರಾರಂಭವಾಗಲು ಸಾತ್ವತ ಧರ್ಮವು ಲೋಕಗಳನ್ನು ವ್ಯಾಪಿಸಿ ಸ್ಥಾಪಿತಗೊಂಡಿತು.
12336032a ತೇನೈವಾದ್ಯೇನ ಧರ್ಮೇಣ ಬ್ರಹ್ಮಾ ಲೋಕವಿಸರ್ಗಕೃತ್|
12336032c ಪೂಜಯಾಮಾಸ ದೇವೇಶಂ ಹರಿಂ ನಾರಾಯಣಂ ಪ್ರಭುಮ್||
ಆ ಧರ್ಮದಿಂದಲೇ ಲೋಕಸೃಷ್ಟಿಕರ್ತ ಬ್ರಹ್ಮನು ದೇವೇಶ ಹರಿ ನಾರಾಯಣ ಪ್ರಭುವನ್ನು ಮೊಟ್ಟಮೊದಲು ಪೂಜಿಸಿದನು.
12336033a ಧರ್ಮಪ್ರತಿಷ್ಠಾಹೇತೋಶ್ಚ ಮನುಂ ಸ್ವಾರೋಚಿಷಂ ತತಃ|
12336033c ಅಧ್ಯಾಪಯಾಮಾಸ ತದಾ ಲೋಕಾನಾಂ ಹಿತಕಾಮ್ಯಯಾ||
ಧರ್ಮಪ್ರತಿಶಷ್ಠಾಪನೆಯ ಕಾರಣದಿಂದಲೂ ಮತ್ತು ಲೋಕಗಳ ಹಿತವನ್ನೂ ಬಯಸಿ ಬ್ರಹ್ಮನು ಅದನ್ನು ಸ್ವಾರೋಚಿಷ ಮನುವಿಗೆ ಉಪದೇಶಿಸಿದನು.
12336034a ತತಃ ಸ್ವಾರೋಚಿಷಃ ಪುತ್ರಂ ಸ್ವಯಂ ಶಂಖಪದಂ ನೃಪ|
12336034c ಅಧ್ಯಾಪಯತ್ ಪುರಾವ್ಯಗ್ರಃ ಸರ್ವಲೋಕಪತಿರ್ವಿಭುಃ||
ನೃಪ! ಅನಂತರ ಸ್ವಯಂ ಅವ್ಯಗ್ರ ಸರ್ವಲೋಕಪತಿ ವಿಭು ಸ್ವಾರೋಚಿಷನು ಅದನ್ನು ಹಿಂದೆ ತನ್ನ ಪುತ್ರ ಶಂಖಪದನಿಗೆ ಉಪದೇಶಿಸಿದನು.
12336035a ತತಃ ಶಂಖಪದಶ್ಚಾಪಿ ಪುತ್ರಮಾತ್ಮಜಮೌರಸಮ್|
12336035c ದಿಶಾಪಾಲಂ ಸುಧರ್ಮಾಣಮಧ್ಯಾಪಯತ ಭಾರತ|
12336035e ತತಃ ಸೋಽಂತರ್ದಧೇ ಭೂಯಃ ಪ್ರಾಪ್ತೇ ತ್ರೇತಾಯುಗೇ ಪುನಃ||
ಭಾರತ! ಅನಂತರ ಶಂಖಪದನು ತನ್ನ ಔರಸ ಪುತ್ರ ದಿಶಾಪಾಲ ಸುಧರ್ಮನಿಗೆ ಅಧ್ಯಯನ ಮಾಡಿಸಿದನು. ತ್ರೇತಾಯುಗವು ಪ್ರಾಪ್ತವಾಗಲು ಅದು ಪುನಃ ಅಂತರ್ಗತವಾಯಿತು.
12336036a ನಾಸಿಕ್ಯಜನ್ಮನಿ ಪುರಾ ಬ್ರಹ್ಮಣಃ ಪಾರ್ಥಿವೋತ್ತಮ|
12336036c ಧರ್ಮಮೇತಂ ಸ್ವಯಂ ದೇವೋ ಹರಿರ್ನಾರಾಯಣಃ ಪ್ರಭುಃ|
12336036e ಉಜ್ಜಗಾರಾರವಿಂದಾಕ್ಷೋ ಬ್ರಹ್ಮಣಃ ಪಶ್ಯತಸ್ತದಾ||
ಪಾರ್ಥಿವೋತ್ತಮ! ಹಿಂದೆ ನಾರಾಯಣನ ನಾಸಿಕದಿಂದ ಬ್ರಹ್ಮನ ಜನ್ಮವಾದಾಗ ಈ ಧರ್ಮವನ್ನು ಸ್ವಯಂ ದೇವ ಹರಿ ನಾರಾಯಣ ಪ್ರಭು ಅರವಿಂದಾಕ್ಷನು ಬ್ರಹ್ಮನ ಸಮ್ಮುಖದಲ್ಲಿ ಹೇಳಿದನು.
12336037a ಸನತ್ಕುಮಾರೋ ಭಗವಾಂಸ್ತತಃ ಪ್ರಾಧೀತವಾನ್ನೃಪ|
12336037c ಸನತ್ಕುಮಾರಾದಪಿ ಚ ವೀರಣೋ ವೈ ಪ್ರಜಾಪತಿಃ|
12336037e ಕೃತಾದೌ ಕುರುಶಾರ್ದೂಲ ಧರ್ಮಮೇತಮಧೀತವಾನ್||
ನೃಪ! ಭಗವಾನ್ ಸನತ್ಕುಮಾರನು ಅದನ್ನು ಬ್ರಹ್ಮನಿಂದ ಪಡೆದುಕೊಂದನು. ಕುರುಶಾರ್ದೂಲ! ಕೃತಯುಗದ ಆದಿಯಲ್ಲಿ ಈ ಧರ್ಮವನ್ನು ಸನತ್ಕುಮಾರನು ಪ್ರಜಾಪತಿ ವೀರಣನಿಗೆ ಅಧ್ಯಯನ ಮಾಡಿಸಿದನು.
12336038a ವೀರಣಶ್ಚಾಪ್ಯಧೀತ್ಯೈನಂ ರೌಚ್ಯಾಯ ಮನವೇ ದದೌ|
12336038c ರೌಚ್ಯಃ ಪುತ್ರಾಯ ಶುದ್ಧಾಯ ಸುವ್ರತಾಯ ಸುಮೇಧಸೇ||
12336039a ಕುಕ್ಷಿನಾಮ್ನೇಽಥ ಪ್ರದದೌ ದಿಶಾಂ ಪಾಲಾಯ ಧರ್ಮಿಣೇ|
12336039c ತತಃ ಸೋಽಂತರ್ದಧೇ ಭೂಯೋ ನಾರಾಯಣಮುಖೋದ್ಗತಃ||
ವೀರಣನಾದರೋ ದಿಅನ್ನು ಮನು ರುಚಿಗೆ ನೀಡಿದನು. ರುಚಿಯು ಇದನ್ನು ತನ್ನ ಪುತ್ರ ಶುದ್ಧ, ಸುವ್ರತ, ಸುಮೇಧಸ, ಕುಕ್ಷಿ ಎಂಬ ದಿಶಾಪಾಲ ಧರ್ಮಿಗೆ ನೀಡಿದನು. ನಾರಾಯಣನ ಮುಖದಿಂದ ಬಂದಿದ್ದ ಆ ಧರ್ಮವು ಪುನಃ ಅಂತರ್ಹಿತವಾಯಿತು.
12336040a ಅಂಡಜೇ ಜನ್ಮನಿ ಪುನರ್ಬ್ರಹ್ಮಣೇ ಹರಿಯೋನಯೇ|
12336040c ಏಷ ಧರ್ಮಃ ಸಮುದ್ಭೂತೋ ನಾರಾಯಣಮುಖಾತ್ಪುನಃ||
12336041a ಗೃಹೀತೋ ಬ್ರಹ್ಮಣಾ ರಾಜನ್ ಪ್ರಯುಕ್ತಶ್ಚ ಯಥಾವಿಧಿ|
12336041c ಅಧ್ಯಾಪಿತಾಶ್ಚ ಮುನಯೋ ನಾಮ್ನಾ ಬರ್ಹಿಷದೋ ನೃಪ|
ಹರಿಯೋನಿಯ ಅಂಡದಿಂದ ಪುನಃ ಬ್ರಹ್ಮನ ಜನ್ಮವಾಗಲು ಈ ಧರ್ಮವು ನಾರಾಯಣನ ಮುಖದಿಂದ ಪುನಃ ಉದ್ಭವಿಸಿತು. ರಾಜನ್! ಯಥಾವಿಧಿಯಾಗಿ ಬ್ರಹ್ಮನು ಅದನ್ನು ಸ್ವೀಕರಿಸಿ ಅನುಷ್ಠಾನಕ್ಕೆ ತಂದುಕೊಂಡನು. ನೃಪ! ಬ್ರಹ್ಮನು ಅದನ್ನು ಬರ್ಹಿಷದರೆಂಬ ಮುನಿಗಳಿಗೆ ಉಪದೇಶಿಸಿದನು.
12336042a ಬರ್ಹಿಷದ್ಭ್ಯಶ್ಚ ಸಂಕ್ರಾಂತಃ ಸಾಮವೇದಾಂತಗಂ ದ್ವಿಜಮ್|
12336042c ಜ್ಯೇಷ್ಠಂ ನಾಮ್ನಾಭಿವಿಖ್ಯಾತಂ ಜ್ಯೇಷ್ಠಸಾಮವ್ರತೋ ಹರಿಃ||
12336043a ಜ್ಯೇಷ್ಠಾಚ್ಚಾಪ್ಯನುಸಂಕ್ರಾಂತೋ ರಾಜಾನಮವಿಕಂಪನಮ್|
12336043c ಅಂತರ್ದಧೇ ತತೋ ರಾಜನ್ನೇಷ ಧರ್ಮಃ ಪ್ರಭೋರ್ಹರೇಃ||
ಬರ್ಹಿಷದರು ಅದನ್ನು ಸಾಮವೇದಪಾರಂಗತ ಜ್ಯೇಷ್ಠ ಎಂಬ ಹೆಸರಿನ ದ್ವಿಜನಿಗೆ ಉಪದೇಶಿಸಿದರು. ವನು ಜ್ಯೇಷ್ಠಸಾಮವ್ರತ ಹರಿಯೆಂದು ವಿಖ್ಯಾತನಾದನು. ಜ್ಯೇಷ್ಠನು ಅದನ್ನು ರಾಜಾ ಅವಿಕಂಪನನಿಗೆ ಉಪದೇಶಿಸಿದನು. ರಾಜನ್! ಪುನಃ ಪ್ರಭು ಹರಿಯ ಈ ಧರ್ಮವು ಅಂತರ್ಗತವಾಯಿತು.
12336044a ಯದಿದಂ ಸಪ್ತಮಂ ಜನ್ಮ ಪದ್ಮಜಂ ಬ್ರಹ್ಮಣೋ ನೃಪ|
12336044c ತತ್ರೈಷ ಧರ್ಮಃ ಕಥಿತಃ ಸ್ವಯಂ ನಾರಾಯಣೇನ ಹಿ||
12336045a ಪಿತಾಮಹಾಯ ಶುದ್ಧಾಯ ಯುಗಾದೌ ಲೋಕಧಾರಿಣೇ|
12336045c ಪಿತಾಮಹಶ್ಚ ದಕ್ಷಾಯ ಧರ್ಮಮೇತಂ ಪುರಾ ದದೌ||
ನೃಪ! ಪದ್ಮದಿಂದ ಹುಟ್ಟಿದ ಬ್ರಹ್ಮನ ಈ ಏಳನೆಯ ಜನ್ಮದಲ್ಲಿ ಸ್ವಯಂ ನಾರಾಯಣನು ಈ ಧರ್ಮವನ್ನು ಶುದ್ಧ ಪಿತಾಮಹ ಲೋಕಧಾರಿಣೀ ಬ್ರಹ್ಮನಿಗೆ ಯುಗಾದಿಯಲ್ಲಿ ಹೇಳಿದನು. ಹಿಂದೆ ಪಿತಾಮಹನು ಈ ಧರ್ಮವನ್ನು ದಕ್ಷನಿಗೆ ನೀಡಿದನು.
12336046a ತತೋ ಜ್ಯೇಷ್ಠೇ ತು ದೌಹಿತ್ರೇ ಪ್ರಾದಾದ್ದಕ್ಷೋ ನೃಪೋತ್ತಮ|
12336046c ಆದಿತ್ಯೇ ಸವಿತುರ್ಜ್ಯೇಷ್ಠೇ ವಿವಸ್ವಾನ್ ಜಗೃಹೇ ತತಃ||
ನೃಪೋತ್ತಮ! ಅನಂತರ ದಕ್ಷನು ತನ್ನ ಮಗಳ ಜ್ಯೇಷ್ಠ ಮಗ, ಸವಿತುವಿನ ಅಣ್ಣ ಆದಿತ್ಯನಿಗೆ ಉಪದೇಶಿಸಿದನು. ಅನಂತರ ಅವನಿಂದ ವಿವಸ್ವಂತನು ಅದನ್ನು ಪಡೆದುಕೊಂಡನು.
12336047a ತ್ರೇತಾಯುಗಾದೌ ಚ ಪುನರ್ವಿವಸ್ವಾನ್ಮನವೇ ದದೌ|
12336047c ಮನುಶ್ಚ ಲೋಕಭೂತ್ಯರ್ಥಂ ಸುತಾಯೇಕ್ಷ್ವಾಕವೇ ದದೌ[3]||
ತ್ರೇತಾಯುಗದ ಆದಿಯಲ್ಲಿ ವಿವಸ್ವಾನನು ಇದನ್ನು ಪುನಃ ಮನುವಿಗೆ ನೀಡಿದನು. ಲೋಕಕಲ್ಯಾಣಕ್ಕಾಗಿ ಮನುವು ಇದನ್ನು ತನ್ನ ಮಗ ಇಕ್ಷ್ವಾಕುವಿಗೆ ನೀಡಿದನು.
12336048a ಇಕ್ಷ್ವಾಕುಣಾ ಚ ಕಥಿತೋ ವ್ಯಾಪ್ಯ ಲೋಕಾನವಸ್ಥಿತಃ|
12336048c ಗಮಿಷ್ಯತಿ ಕ್ಷಯಾಂತೇ ಚ ಪುನರ್ನಾರಾಯಣಂ ನೃಪ||
ಇಕ್ಷ್ವಾಕುವಿಗೆ ಉಪದೇಶಿಸಿದ ಈ ಧರ್ಮವು ಲೋಕಗಳಲ್ಲಿ ವ್ಯಾಪ್ತವಾಗಿ ಪ್ರತಿಷ್ಠಿತಗೊಂಡಿದೆ. ನೃಪ! ಅಂತ್ಯದಲ್ಲಿ ಇದು ಪುನಃ ನಾರಾಯಣನನ್ನೇ ಸೇರುತ್ತದೆ.
12336049a ವ್ರತಿನಾಂ ಚಾಪಿ ಯೋ ಧರ್ಮಃ ಸ ತೇ ಪೂರ್ವಂ ನೃಪೋತ್ತಮ|
12336049c ಕಥಿತೋ ಹರಿಗೀತಾಸು ಸಮಾಸವಿಧಿಕಲ್ಪಿತಃ||
ನೃಪೋತ್ತಮ! ಏಕಾಂತವ್ರತಿಗಳ ಧರ್ಮವು ಏನು ಎನ್ನುವುದನ್ನು ಮೊದಲೇ ನಿನಗೆ ಹರಿಗೀತೆಯಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ.
12336050a ನಾರದೇನ ತು ಸಂಪ್ರಾಪ್ತಃ ಸರಹಸ್ಯಃ ಸಸಂಗ್ರಹಃ|
12336050c ಏಷ ಧರ್ಮೋ ಜಗನ್ನಾಥಾತ್ಸಾಕ್ಷಾನ್ನಾರಾಯಣಾನ್ನೃಪ||
ನೃಪ! ನಾರದನು ರಹಸ್ಯ ಸಂಗ್ರಹಗಳೊಂದಿಗೆ ಈ ಧರ್ಮವನ್ನು ಸಾಕ್ಷಾತ್ ಜಗನ್ನಾಥ ನಾರಾಯಣನಿಂದ ಪಡೆದುಕೊಂಡನು.
12336051a ಏವಮೇಷ ಮಹಾನ್ ಧರ್ಮ ಆದ್ಯೋ ರಾಜನ್ಸನಾತನಃ|
12336051c ದುರ್ವಿಜ್ಞೇಯೋ ದುಷ್ಕರಶ್ಚ ಸಾತ್ವತೈರ್ಧಾರ್ಯತೇ ಸದಾ||
ರಾಜನ್! ಈ ಸನಾತನ ಮಹಾನ್ ಧರ್ವವೇ ಮೊದಲ ಧರ್ಮ. ಸಾತ್ವತರಿಂದ ಸದಾ ಆಚರಿಸಲ್ಪಡುವ ಈ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ ಮತ್ತು ಆಚರಿಸುವುದು ಕಷ್ಟ.
12336052a ಧರ್ಮಜ್ಞಾನೇನ ಚೈತೇನ ಸುಪ್ರಯುಕ್ತೇನ ಕರ್ಮಣಾ|
12336052c ಅಹಿಂಸಾಧರ್ಮಯುಕ್ತೇನ ಪ್ರೀಯತೇ ಹರಿರೀಶ್ವರಃ||
ಅಹಿಂಸಾಧರ್ಮಯುಕ್ತವಾದ ಈ ಧರ್ಮವನ್ನು ತಿಳಿದುಕೊಂಡು ಕಾರ್ಯತಃ ಆಚರಣೆಗೆ ತರುವುದರಿಂದ ಈಶ್ವರ ಹರಿಯು ಪ್ರೀತನಾಗುತ್ತಾನೆ.
12336053a ಏಕವ್ಯೂಹವಿಭಾಗೋ ವಾ ಕ್ವ ಚಿದ್ದ್ವಿವ್ಯೂಹಸಂಜ್ಞಿತಃ|
12336053c ತ್ರಿವ್ಯೂಹಶ್ಚಾಪಿ ಸಂಖ್ಯಾತಶ್ಚತುರ್ವ್ಯೂಹಶ್ಚ ದೃಶ್ಯತೇ||
ಕೆಲವರು ಏಕವ್ಯೂಹವನ್ನಿಟ್ಟುಕೊಂಡು ವಾಸುದೇವನೊಬ್ಬನನ್ನೇ ಉಪಾಸನೆ ಮಾಡುವುದನ್ನು ನೋಡುತ್ತೇವೆ. ಕೆಲವರು ಎರಡು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣರನ್ನು, ಇನ್ನು ಕೆಲವರು ಮೂರು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣ-ಪ್ರದ್ಯುಮ್ನರನ್ನು ಮತ್ತು ಇನ್ನೂ ಕೆಲವರು ನಾಲ್ಕು ವ್ಯೂಹಗಳಲ್ಲಿ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರನ್ನು ಉಪಾಸನೆ ಮಾಡುತ್ತಾರೆ.
12336054a ಹರಿರೇವ ಹಿ ಕ್ಷೇತ್ರಜ್ಞೋ ನಿರ್ಮಮೋ ನಿಷ್ಕಲಸ್ತಥಾ|
12336054c ಜೀವಶ್ಚ ಸರ್ವಭೂತೇಷು ಪಂಚಭೂತಗುಣಾತಿಗಃ||
ಹರಿಯೇ ಕ್ಷೇತ್ರಜ್ಞನು. ನಿರ್ಮಮನು ಮತ್ತು ನಿಷ್ಕಲನು. ಪಂಚಭೂತಗಳ ಗುಣಾತೀತನಾಗಿ ಸರ್ವಪ್ರಾಣಿಗಳಲ್ಲಿಯೂ ಇರುವ ಜೀವಾತ್ಮನು ಕೂಡ.
12336055a ಮನಶ್ಚ ಪ್ರಥಿತಂ ರಾಜನ್ ಪಂಚೇಂದ್ರಿಯಸಮೀರಣಮ್|
12336055c ಏಷ ಲೋಕನಿಧಿರ್ಧೀಮಾನೇಷ[4] ಲೋಕವಿಸರ್ಗಕೃತ್||
ರಾಜನ್! ಪಂಚೇಂದ್ರಿಯಗಳ ಪ್ರೇರಕವೆಂದು ಪ್ರಥಿತವಾದ ಮನಸ್ಸೂ ಕೂಡ ಹರಿಯೇ ಆಗಿದ್ದಾನೆ. ಆ ಧೀಮಂತನೇ ಲೋಕನಿಧಿಯೂ ಸೃಷ್ಟಿಕರ್ತನೂ ಆಗಿದ್ದಾನೆ.
12336056a ಅಕರ್ತಾ ಚೈವ ಕರ್ತಾ ಚ ಕಾರ್ಯಂ ಕಾರಣಮೇವ ಚ|
12336056c ಯಥೇಚ್ಚತಿ ತಥಾ ರಾಜನ್ ಕ್ರೀಡತೇ ಪುರುಷೋಽವ್ಯಯಃ||
ರಾಜನ್! ಈ ಅವ್ಯಯ ಪುರುಷನು ಕರ್ತಾ ಮತ್ತು ಅಕರ್ತಾ. ಕಾರ್ಯ ಮತ್ತು ಕಾರಣ. ಅವನು ಇಷ್ಟಬಂದಂತೆ ಆಡುತ್ತಿರುತ್ತಾನೆ.
12336057a ಏಷ ಏಕಾಂತಿಧರ್ಮಸ್ತೇ ಕೀರ್ತಿತೋ ನೃಪಸತ್ತಮ|
12336057c ಮಯಾ ಗುರುಪ್ರಸಾದೇನ ದುರ್ವಿಜ್ಞೇಯೋಽಕೃತಾತ್ಮಭಿಃ|
12336057e ಏಕಾಂತಿನೋ ಹಿ ಪುರುಷಾ ದುರ್ಲಭಾ ಬಹವೋ ನೃಪ||
ನೃಪಸತ್ತಮ! ಇದೋ ನಾನು ಏಕಾಂತಿಧರ್ಮದ ಕುರಿತು ನಿನಗೆ ಹೇಳಿದ್ದೇನೆ. ಅಕೃತಾತ್ಮರಿಗೆ ತಿಳಿಯಲಸಾಧ್ಯವಾದ ಇದನ್ನು ನಾನು ಗುರುವಿನ ಪ್ರಸಾದದಿಂದ ಪಡೆದುಕೊಂಡೆನು. ನೃಪ! ಏಕಾಂತಿನ ಪುರುಷರು ದುರ್ಲಭರು.
12336058a ಯದ್ಯೇಕಾಂತಿಭಿರಾಕೀರ್ಣಂ ಜಗತ್ ಸ್ಯಾತ್ಕುರುನಂದನ|
12336058c ಅಹಿಂಸಕೈರಾತ್ಮವಿದ್ಭಿಃ ಸರ್ವಭೂತಹಿತೇ ರತೈಃ|
12336058e ಭವೇತ್ ಕೃತಯುಗಪ್ರಾಪ್ತಿರಾಶೀಃಕರ್ಮವಿವರ್ಜಿತೈಃ||
ಕುರುನಂದನ! ಒಂದು ವೇಳೆ ಈ ಜಗತ್ತು ಅಹಿಸಂಕರಾದ ಆತ್ಮಜ್ಞಾನಿಗಳಾದ ಮತ್ತು ಸರ್ವಭೂತಹಿತರತರಾದ ಕಾಮ-ಕರ್ಮವಿವರ್ಜಿತರಾದ ಏಕಾಂತಿಗಳಿಂದ ತುಂಬಿಹೋಗಿದ್ದರೆ ಕೃತಯುಗವು ಪ್ರಾಪ್ತವಾಗುತ್ತಿತ್ತು.
12336059a ಏವಂ ಸ ಭಗವಾನ್ ವ್ಯಾಸೋ ಗುರುರ್ಮಮ ವಿಶಾಂ ಪತೇ|
12336059c ಕಥಯಾಮಾಸ ಧರ್ಮಜ್ಞೋ ಧರ್ಮರಾಜ್ಞೇ ದ್ವಿಜೋತ್ತಮಃ||
12336060a ಋಷೀಣಾಂ ಸಂನಿಧೌ ರಾಜನ್ ಶೃಣ್ವತೋಃ ಕೃಷ್ಣಭೀಷ್ಮಯೋಃ|
ವಿಶಾಂಪತೇ! ರಾಜನ್! ಹೀಗೆ ನನ್ನ ಗುರು ದ್ವಿಜೋತ್ತಮ ಧರ್ಮಜ್ಞ ಭಗವಾನ್ ವ್ಯಾಸನು ಧರ್ಮರಾಜನಿಗೆ , ಋಷಿಗಳ ಸನ್ನಿಧಿಯಲ್ಲಿ, ಕೃಷ್ಣ-ಭೀಷ್ಮರು ಕೇಳುತ್ತಿರುವಾಗ, ಹೇಳಿದನು.
12336060c ತಸ್ಯಾಪ್ಯಕಥಯತ್ಪೂರ್ವಂ ನಾರದಃ ಸುಮಹಾತಪಾಃ||
12336061a ದೇವಂ ಪರಮಕಂ ಬ್ರಹ್ಮ ಶ್ವೇತಂ ಚಂದ್ರಾಭಮಚ್ಯುತಮ್|
12336061c ಯತ್ರ ಚೈಕಾಂತಿನೋ ಯಾಂತಿ ನಾರಾಯಣಪರಾಯಣಾಃ||
ಅದಕ್ಕೂ ಮೊದಲು ಮಹಾತಪಸ್ವೀ ನಾರದನು ಅವನಿಗೆ ಇದನ್ನು ಹೇಳಿದ್ದನು. ನಾರಾಯಣ ಪರಾಯಣರಾದ ಏಕಾಂತಿಗಳು ಪರಮ ಬ್ರಹ್ಮ ದೇವ ಶ್ವೇತ ಚಂದ್ರನಂತೆ ಹೊಳೆಯುತ್ತಿರುವ ಅಚ್ಯುತನನ್ನು ಸೇರುತ್ತಾರೆ.”
12336062 ಜನಮೇಜಯ ಉವಾಚ|
12336062a ಏವಂ ಬಹುವಿಧಂ ಧರ್ಮಂ ಪ್ರತಿಬುದ್ಧೈರ್ನಿಷೇವಿತಮ್|
12336062c ನ ಕುರ್ವಂತಿ ಕಥಂ ವಿಪ್ರಾ ಅನ್ಯೇ ನಾನಾವ್ರತೇ ಸ್ಥಿತಾಃ||
ಜನಮೇಜಯನು ಹೇಳಿದನು: ’ಜ್ಞಾನಿಗಳು ಆಚರಿಸುವ ಬಹುವಿಧದ ಗುಣಗಳಿಂದ ಯುಕ್ತವಾಗಿರುವ ಈ ಧರ್ಮವನ್ನು ನಾನಾ ವ್ರತಗಳನ್ನು ಆಚರಿಸುವ ಅನ್ಯ ವಿಪ್ರರು ಏಕೆ ಆಚರಿಸುವುದಿಲ್ಲ?”
12336063 ವೈಶಂಪಾಯನ ಉವಾಚ|
12336063a ತಿಸ್ರಃ ಪ್ರಕೃತಯೋ ರಾಜನ್ ದೇಹಬಂಧೇಷು ನಿರ್ಮಿತಾಃ|
12336063c ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ಭಾರತ||
ವೈಶಂಪಾಯನನು ಹೇಳಿದನು: “ರಾಜನ್! ಭಾರತ! ದೇಹಬಂಧಿಗಳಲ್ಲಿ ಸಾತ್ತ್ವಿಕೀ, ರಾಜಸೀ ಮತ್ತು ತಾಮಸಿಗಳೆಂಬ ಮೂರು ಪ್ರಕೃತಿಗಳು ನಿರ್ಮಿತವಾಗಿವೆ.
12336064a ದೇಹಬಂಧೇಷು ಪುರುಷಃ ಶ್ರೇಷ್ಠಃ ಕುರುಕುಲೋದ್ವಹ|
12336064c ಸಾತ್ತ್ವಿಕಃ ಪುರುಷವ್ಯಾಘ್ರ ಭವೇನ್ಮೋಕ್ಷಾರ್ಥನಿಶ್ಚಿತಃ||
ಕುರುಕುಲೋದ್ವಹ! ಪುರುಷವ್ಯಾಘ್ರ! ದೇಹಬಂಧಿಗಳಲ್ಲಿ ಸಾತ್ತ್ವಿಕ ಪುರುಷನು ಶ್ರೇಷ್ಠನು. ಅವನೇ ಮೋಕ್ಷಕ್ಕೆ ಅರ್ಹನಾದವನೆಂದು ನಿಶ್ಚಿತವಾಗಿದೆ.
12336065a ಅತ್ರಾಪಿ ಸ ವಿಜಾನಾತಿ ಪುರುಷಂ ಬ್ರಹ್ಮವರ್ತಿನಮ್|
12336065c ನಾರಾಯಣಪರೋ ಮೋಕ್ಷಸ್ತತೋ ವೈ ಸಾತ್ತ್ವಿಕಃ ಸ್ಮೃತಃ||
ಅಂಥವನು ಪುರುಷ ನಾರಾಯಣನೇ ಬ್ರಹ್ಮವರ್ತಿಯೆಂದೂ ನಾರಾಯಣನೇ ಮೋಕ್ಷವೆಂದೂ ತಿಳಿದಿರುತ್ತಾನೆ. ಆದುದರಿಂದ ಅವನು ಸಾತ್ತ್ವಿಕನೆಂದು ಕರೆಯಲ್ಪಡುತ್ತಾನೆ.
12336066a ಮನೀಷಿತಂ ಚ ಪ್ರಾಪ್ನೋತಿ ಚಿಂತಯನ್ಪುರುಷೋತ್ತಮಮ್|
12336066c ಏಕಾಂತಭಕ್ತಿಃ ಸತತಂ ನಾರಾಯಣಪರಾಯಣಃ||
ಅಂಥಹ ಸಾತ್ತ್ವಿಕನು ಸದಾ ಪುರುಷೋತ್ತಮ ಹರಿಯನ್ನು ಧ್ಯಾನಮಾಡುತ್ತಾ ಬಯಸಿದುದನ್ನು ಪಡೆದುಕೊಳ್ಳುತ್ತಾನೆ. ನಾರಾಯಣನ ಸತತ ಪಾರಾಯಣವೇ ಏಕಾಂತಭಕ್ತಿ.
12336067a ಮನೀಷಿಣೋ ಹಿ ಯೇ ಕೇ ಚಿದ್ಯತಯೋ ಮೋಕ್ಷಕಾಂಕ್ಷಿಣಃ|
12336067c ತೇಷಾಂ ವೈ ಚಿನ್ನತೃಷ್ಣಾನಾಂ ಯೋಗಕ್ಷೇಮವಹೋ ಹರಿಃ||
ತೃಷ್ಣೆಗಳನ್ನು ತೊರೆದು ಮೋಕ್ಷಾಕಾಂಕ್ಷಿಗಳಾದ ಎಷ್ಟೊಂದು ವಿದ್ವಾಂಸ ಯತಿಗಳು ಇರುವರೋ ಅವರೆಲ್ಲರ ಯೋಗಕ್ಷೇಮಗಳನ್ನು ಹರಿಯೇ ವಹಿಸಿಕೊಳ್ಳುತ್ತಾನೆ.
12336068a ಜಾಯಮಾನಂ ಹಿ ಪುರುಷಂ ಯಂ ಪಶ್ಯೇನ್ಮಧುಸೂದನಃ|
12336068c ಸಾತ್ತ್ವಿಕಸ್ತು ಸ ವಿಜ್ಞೇಯೋ ಭವೇನ್ಮೋಕ್ಷೇ ಚ ನಿಶ್ಚಿತಃ||
ಹುಟ್ಟು-ಸಾವುಗಳ ಸುಳಿಯಲ್ಲಿ ಸಿಕ್ಕಿರುವ ಯಾವ ಪುರುಷನನ್ನು ಮಧುಸೂದನನು ಕೃಪಾದೃಷ್ಟಿಯಿಂದ ನೋಡುತ್ತಾನೋ ಅವನನ್ನೇ ಸಾತ್ತ್ವಿಕನೆಂದು ತಿಳಿಯಬೇಕು. ಅಂಥವನೇ ಮೋಕ್ಷಕ್ಕೂ ನಿಶ್ಚಿತ ಅಧಿಕಾರಿಯು.
12336069a ಸಾಂಖ್ಯಯೋಗೇನ ತುಲ್ಯೋ ಹಿ ಧರ್ಮ ಏಕಾಂತಸೇವಿತಃ|
12336069c ನಾರಾಯಣಾತ್ಮಕೇ ಮೋಕ್ಷೇ ತತೋ ಯಾಂತಿ ಪರಾಂ ಗತಿಮ್||
ಏಕಾಂತಿಕ ಧರ್ಮಾಚರಣೆಯು ಸಾಂಖ್ಯಯೋಗಕ್ಕೆ ಸಮನಾಗಿದೆ. ಮೋಕ್ಷವು ನಾರಾಯಣಾತ್ಮಕ. ಆದುದರಿಂದ ಏಕಾಂತಿಕರು ಆ ಪರಮ ಗತಿಯನ್ನೇ ಹೊಂದುತ್ತಾರೆ.
12336070a ನಾರಾಯಣೇನ ದೃಷ್ಟಶ್ಚ ಪ್ರತಿಬುದ್ಧೋ ಭವೇತ್ಪುಮಾನ್|
12336070c ಏವಮಾತ್ಮೇಚ್ಚಯಾ ರಾಜನ್ ಪ್ರತಿಬುದ್ಧೋ ನ ಜಾಯತೇ||
ನಾರಾಯಣನ ಕೃಪಾದೃಷ್ಟಿಯಿದ್ದರೆ ಸಾಕು ಪುರುಷನು ಜ್ಞಾನಿಯಾಗುತ್ತಾನೆ. ಜ್ಞಾನಿಯಾಗಬೇಕೆಂದು ಇಚ್ಛಿಸುವುದರಿಂದ ಮಾತ್ರವೇ ಯಾರೂ ಜ್ಞಾನಿಯಾಗುವುದಿಲ್ಲ.
12336071a ರಾಜಸೀ ತಾಮಸೀ ಚೈವ ವ್ಯಾಮಿಶ್ರೇ ಪ್ರಕೃತೀ ಸ್ಮೃತೇ|
12336071c ತದಾತ್ಮಕಂ ಹಿ ಪುರುಷಂ ಜಾಯಮಾನಂ ವಿಶಾಂ ಪತೇ|
12336071e ಪ್ರವೃತ್ತಿಲಕ್ಷಣೈರ್ಯುಕ್ತಂ ನಾವೇಕ್ಷತಿ ಹರಿಃ ಸ್ವಯಮ್||
ವಿಶಾಂಪತೇ! ರಾಜಸೀ ಮತ್ತು ತಾಪಸೀ ಪ್ರಕೃತಿಗಳು ಮಿಶ್ರಪ್ರಕೃತಿಗಳೆಂದು ಹೇಳಲ್ಪಟ್ಟಿವೆ. ಅವುಗಳಿಂದ ಕೂಡಿ ಹುಟ್ಟಿದವನು ಸಾಮಾನ್ಯವಾಗಿ ಪ್ರವೃತ್ತಿಲಕ್ಷಣಗಳಿಂದಲೇ ಕೂಡಿರುತ್ತಾನೆ. ಸ್ವಯಂ ಹರಿಯು ಅವನನ್ನು ನೋಡುವುದೂ ಇಲ್ಲ.
12336072a ಪಶ್ಯತ್ಯೇನಂ ಜಾಯಮಾನಂ ಬ್ರಹ್ಮಾ ಲೋಕಪಿತಾಮಹಃ|
12336072c ರಜಸಾ ತಮಸಾ ಚೈವ ಮಾನುಷಂ ಸಮಭಿಪ್ಲುತಮ್||
ರಜಸ್ತಮಸ್ಸು ಗುಣಗಳಿಂದ ಹುಟ್ಟಿದ ಮನುಷ್ಯನನ್ನು ಲೋಕಪಿತಾಮಹ ಬ್ರಹ್ಮನು ನೋಡಿಕೊಳ್ಳುತ್ತಾನೆ.
12336073a ಕಾಮಂ ದೇವಾಶ್ಚ ಋಷಯಃ ಸತ್ತ್ವಸ್ಥಾ ನೃಪಸತ್ತಮ|
12336073c ಹೀನಾಃ ಸತ್ತ್ವೇನ ಸೂಕ್ಷ್ಮೇಣ ತತೋ ವೈಕಾರಿಕಾಃ ಸ್ಮೃತಾಃ||
ನೃಪಸತ್ತಮ! ದೇವತೆಗಳೂ ಮತ್ತು ಋಷಿಗಳೂ ಹೆಚ್ಚಾಗಿ ಸಾತ್ತ್ವಿಕಗುಣಯುಕ್ತರಾಗಿಯೇ ಇರುತ್ತಾರೆ. ಅಂಥವರು ಸೂಕ್ಷ್ಮ ಸತ್ತ್ವಗುಣದಿಂದ ವಿಹೀನರಾಗಿದ್ದರೆ ಅಂಥವರು ವೈಕಾರಿಕರೆಂದು ಕರೆಯಲ್ಪಡುತ್ತಾರೆ.”
12336074 ಜನಮೇಜಯ ಉವಾಚ|
12336074a ಕಥಂ ವೈಕಾರಿಕೋ ಗಚ್ಚೇತ್ಪುರುಷಃ ಪುರುಷೋತ್ತಮಮ್[5]|
ಜನಮೇಜಯನು ಹೇಳಿದನು: “ವೈಕಾರಿಕ ಪುರುಷನು ಹೇಗೆ ಪುರುಷೋತ್ತಮನನ್ನು ಹೊಂದಬಹುದು?”
12336075 ವೈಶಂಪಾಯನ ಉವಾಚ|
12336075a ಸುಸೂಕ್ಷ್ಮಸತ್ತ್ವಸಂಯುಕ್ತಂ ಸಂಯುಕ್ತಂ ತ್ರಿಭಿರಕ್ಷರೈಃ|
12336075c ಪುರುಷಃ ಪುರುಷಂ ಗಚ್ಚೇನ್ನಿಷ್ಕ್ರಿಯಃ ಪಂಚವಿಂಶಕಮ್||
ವೈಶಂಪಾಯನನು ಹೇಳಿದನು: “ಅತ್ಯಂತ ಸೂಕ್ಷ್ಮನಾದ ಸತ್ತ್ವಸಂಯುಕ್ತನಾದ, ಅ-ಉ-ಮ್ ಎಂಬ ಮೂರು ಅಕ್ಷರಗಳಿಂದ ಕೂಡಿದ ನಿಷ್ಕ್ರಿಯ ಪುರುಷನು ಇಪ್ಪತ್ತೈದನೆಯವನಾದ ಪುರುಷನನ್ನು ಸೇರುತ್ತಾನೆ.
12336076a ಏವಮೇಕಂ ಸಾಂಖ್ಯಯೋಗಂ ವೇದಾರಣ್ಯಕಮೇವ ಚ|
12336076c ಪರಸ್ಪರಾಂಗಾನ್ಯೇತಾನಿ ಪಂಚರಾತ್ರಂ ಚ ಕಥ್ಯತೇ|
12336076e ಏಷ ಏಕಾಂತಿನಾಂ ಧರ್ಮೋ ನಾರಾಯಣಪರಾತ್ಮಕಃ||
ಹೀಗೆ ಸಾಂಖ್ಯಯೋಗ ಮತ್ತು ವೇದ-ಅರಣ್ಯಕಗಳು ಒಂದೇ. ಪರಸ್ಪರರ ಅಂಗಗಳು. ನಾರಾಯಣಪರಾತ್ಮಕವಾದ ಈ ಏಕಾಂತಿಗಳ ಧರ್ಮವನ್ನು ಪಂಚರಾತ್ರ ಎಂದೂ ಕರೆಯುತ್ತಾರೆ.
12336077a ಯಥಾ ಸಮುದ್ರಾತ್ ಪ್ರಸೃತಾ ಜಲೌಘಾಸ್
ತಮೇವ ರಾಜನ್ ಪುನರಾವಿಶಂತಿ|
12336077c ಇಮೇ ತಥಾ ಜ್ಞಾನಮಹಾಜಲೌಘಾ
ನಾರಾಯಣಂ ವೈ ಪುನರಾವಿಶಂತಿ||
ರಾಜನ್! ಹೇಗೆ ಸಮುದ್ರದಿಂದ ಮೇಲೆಹೋದ ನೀರಿನ ಮೋಡಗಳು ಪುನಃ ಸಮುದ್ರವನ್ನೇ ಸೇರುತ್ತವೆಯೋ ಹಾಗೆ ಜ್ಞಾನವೆಂಬ ಮಹಾ ಮೋಡಗಳು ನಾರಾಯಣನನ್ನೇ ಪುನಃ ಸೇರಿಕೊಳ್ಳುತ್ತವೆ.
12336078a ಏಷ ತೇ ಕಥಿತೋ ಧರ್ಮಃ ಸಾತ್ವತೋ ಯದುಬಾಂಧವ|
12336078c ಕುರುಷ್ವೈನಂ ಯಥಾನ್ಯಾಯಂ ಯದಿ ಶಕ್ನೋಷಿ ಭಾರತ||
ಯದುಬಾಂಧವ! ಭಾರತ! ಇಗೋ ನಿನಗೆ ಸಾತ್ವತ ಧರ್ಮದ ಕುರಿತು ಹೇಳಿದ್ದೇನೆ. ಸಾದ್ಯವಾದರೆ ಯಥಾನ್ಯಾಯವಾಗಿ ಇದನ್ನು ಕಾರ್ಯಗತಗೊಳಿಸು.
12336079a ಏವಂ ಹಿ ಸುಮಹಾಭಾಗೋ ನಾರದೋ ಗುರವೇ ಮಮ|
12336079c ಶ್ವೇತಾನಾಂ ಯತಿನಾಮಾಹ ಏಕಾಂತಗತಿಮವ್ಯಯಾಮ್||
ಹೀಗೆ ಮಹಾಭಾಗ ನಾರದನು ನನ್ನ ಗುರುವಿಗೆ ಶ್ವೇತದ್ವೀಪವಾಸಿ ಯತಿಗಳ ಅವ್ಯಯ ಏಕಾಂತಗತಿಯ ಕುರಿತು ಹೇಳಿದನು.
12336080a ವ್ಯಾಸಶ್ಚಾಕಥಯತ್ ಪ್ರೀತ್ಯಾ ಧರ್ಮಪುತ್ರಾಯ ಧೀಮತೇ|
12336080c ಸ ಏವಾಯಂ ಮಯಾ ತುಭ್ಯಮಾಖ್ಯಾತಃ ಪ್ರಸೃತೋ ಗುರೋಃ||
ಧೀಮತ ವ್ಯಾಸನು ಪ್ರೀತಿಯಿಂದ ಇದನ್ನು ಧರ್ಮಪುತ್ರನಿಗೆ ಹೇಳಿದನು. ಗುರುವಿನಿಂದ ಹೊರಹೊಮ್ಮಿದ ಅದನ್ನೇ ನಾನು ನಿನಗೆ ಹೇಳಿದ್ದೇನೆ.
12336081a ಇತ್ಥಂ ಹಿ ದುಶ್ಚರೋ ಧರ್ಮ ಏಷ ಪಾರ್ಥಿವಸತ್ತಮ|
12336081c ಯಥೈವ ತ್ವಂ ತಥೈವಾನ್ಯೇ ನ ಭಜಂತಿ ವಿಮೋಹಿತಾಃ||
ಪಾರ್ಥಿವಸತ್ತಮ! ಈ ಧರ್ಮವು ಆಚರಿಸಲು ಕಷ್ಟಸಾಧ್ಯವಾದುದು. ಈ ವಿಷಯದಲ್ಲಿ ನೀನು ಹೇಗೆ ವಿಮೋಹಿತನಾಗಿರುವೆಯೋ ಹಾಗೆ ಅನ್ಯರೂ ವಿಮೋಹಿತರಾಗುತ್ತಾರೆ.
12336082a ಕೃಷ್ಣ ಏವ ಹಿ ಲೋಕಾನಾಂ ಭಾವನೋ ಮೋಹನಸ್ತಥಾ|
12336082c ಸಂಹಾರಕಾರಕಶ್ಚೈವ ಕಾರಣಂ ಚ ವಿಶಾಂ ಪತೇ||
ವಿಶಾಂಪತೇ! ಕೃಷ್ಣನೇ ಲೋಕಗಳ ಭಾವನ ಮತ್ತು ಮೋಹನ. ಅವನೇ ಸಂಹಾರಕಾರಕ ಮತ್ತು ಕಾರಣ.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಷಟ್ತ್ರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತಾರನೇ ಅಧ್ಯಾಯವು.

[1] ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣರ ಮಾರ್ಗವನ್ನು ಸಾಧಿಸಿ ಕೊನೆಯಲ್ಲಿ ನಾಲ್ಕನೆಯವನಾದ ವಾಸುದೇವನ ಮಾರ್ಗವನ್ನು ಆಶ್ರಯಿಸುತ್ತಾರೆ.
[2] ಇದರ ನಂತರ ಭಾರತ ದರ್ಶನದಲ್ಲಿ - ತ್ವಂ ಕರ್ತಾ ಯುಗಧರ್ಮಾಣಾಂ ನಿರಾಶೀಃ ಕರ್ಮಸಂಜ್ಞಿತಮ್| ಎಂಬ ಶ್ಲೋಕಾರ್ಧವಿದೆ.
[3] ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್| ವಿವಸ್ವಾನ್ಮನವೇ ಪ್ರಾಹ ಮನುರಿಕ್ಷ್ವಾಕವೇಽಬ್ರವೀತ್|| ಎಂಬ ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ಮೊದಲನೆಯ ಶ್ಲೋಕವನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.
[4] ಲೋಕವಿಧಿರ್ಧೀಮಾನೇಷ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ವದ ಸರ್ವಂ ಯಥಾದೃಷ್ಟಂ ಪ್ರವೃತ್ತಿಂ ಚ ಯಥಾಕ್ರಮಮ್| ಎಂಬ ಶ್ಲೋಕಾರ್ಧವು ಭಾರತದರ್ಶನದಲ್ಲಿದೆ.