ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
Contents
Toggle೩೩೭
ವ್ಯಾಸನ ಪೂರ್ವಜನ್ಮ ವೃತ್ತಾಂತ (1-69).
12337001 ಜನಮೇಜಯ ಉವಾಚ|
12337001a ಸಾಂಖ್ಯಂ ಯೋಗಂ ಪಂಚರಾತ್ರಂ ವೇದಾರಣ್ಯಕಮೇವ ಚ|
12337001c ಜ್ಞಾನಾನ್ಯೇತಾನಿ ಬ್ರಹ್ಮರ್ಷೇ ಲೋಕೇಷು ಪ್ರಚರಂತಿ ಹ||
ಜನಮೇಜಯನು ಹೇಳಿದನು: “ಬ್ರಹ್ಮರ್ಷೇ! ಲೋಕಗಳಲ್ಲಿ ಸಾಂಖ್ಯ, ಯೋಗ, ಪಂಚರಾತ್ರ, ಮತ್ತು ಉಪನಿಷದ್ ಎಂಬ ಜ್ಞಾನಗಳು ಪ್ರಚಲಿತವಾಗಿವೆ.
12337002a ಕಿಮೇತಾನ್ಯೇಕನಿಷ್ಠಾನಿ ಪೃಥಘ್ನಿಷ್ಠಾನಿ ವಾ ಮುನೇ|
12337002c ಪ್ರಬ್ರೂಹಿ ವೈ ಮಯಾ ಪೃಷ್ಟಃ ಪ್ರವೃತ್ತಿಂ ಚ ಯಥಾಕ್ರಮಮ್||
ಈ ನಾಲ್ಕೂ ಶಾಸ್ತ್ರಗಳೂ ಒಂದೇ ಲಕ್ಷ್ಯವನ್ನು ಕುರಿತು ಹೇಳುತ್ತವೆಯೇ ಅಥವಾ ಒಂದೊಂದಕ್ಕೂ ಪ್ರತ್ಯೇಕ ಪ್ರತ್ಯೇಕವಾದ ಗುರಿಗಳಿವೆಯೇ? ನನ್ನ ಈ ಪ್ರಶ್ನೆಗೆ ಉತ್ತರವನ್ನೂ ಪ್ರವೃತ್ತಿಮಾರ್ಗವನ್ನೂ ಯಥಾಕ್ರಮವಾಗಿ ಹೇಳಬೇಕು.”
12337003 ವೈಶಂಪಾಯನ ಉವಾಚ|
12337003a ಜಜ್ಞೇ ಬಹುಜ್ಞಂ ಪರಮತ್ಯುದಾರಂ
ಯಂ ದ್ವೀಪಮಧ್ಯೇ ಸುತಮಾತ್ಮವಂತಮ್|
12337003c ಪರಾಶರಾದ್ಗಂಧವತೀ ಮಹರ್ಷಿಂ
ತಸ್ಮೈ ನಮೋಽಜ್ಞಾನತಮೋನುದಾಯ||
ವೈಶಂಪಾಯನನು ಹೇಳಿದನು: “ಬಹುಜ್ಞಾನೀ ಪರಮ ಉದಾರಿ ಪರಾಶರ-ಗಂಧವತಿಯರಿಗೆ ದ್ವೀಪಮಧ್ಯದಲ್ಲಿ ಹುಟ್ಟಿದ ಆತ್ಮವಂತ ಸುತ ಮಹರ್ಷಿ ಅಜ್ಞಾನತಮವನ್ನು ಹೋಗಲಾಡಿಸುವ ವ್ಯಾಸನಿಗೆ ನಾನು ನಮಸ್ಕರಿಸುತ್ತೇನೆ.
12337004a ಪಿತಾಮಹಾದ್ಯಂ ಪ್ರವದಂತಿ ಷಷ್ಠಂ
ಮಹರ್ಷಿಮಾರ್ಷೇಯವಿಭೂತಿಯುಕ್ತಮ್|
12337004c ನಾರಾಯಣಸ್ಯಾಂಶಜಮೇಕಪುತ್ರಂ
ದ್ವೈಪಾಯನಂ ವೇದಮಹಾನಿಧಾನಮ್||
ಪಿತಾಮಹನಿಗೂ ಮೊದಲಿಗನಾದ ನಾರಾಯಣನಿಂದ ಆರನೆಯವನೆಂದು[1] ಯಾರನ್ನು ಕರೆಯುತ್ತಾರೋ, ಋಷಿಗಳ ಐಶ್ವರ್ಯದಿಂದ ಕೂಡಿರುವ ಮಹರ್ಷಿ, ನಾರಾಯಣನ ಅಂಶಜ, ಪರಾಶರನ ಏಕಮಾತ್ರ ಪುತ್ರ ವೇದಗಳ ಮಹಾನಿಧಿ ದ್ವೈಪಾಯನನನ್ನು ನಮಸ್ಕರಿಸುತ್ತೇನೆ.
12337005a ತಮಾದಿಕಾಲೇಷು ಮಹಾವಿಭೂತಿರ್
ನಾರಾಯಣೋ ಬ್ರಹ್ಮಮಹಾನಿಧಾನಮ್|
12337005c ಸಸರ್ಜ ಪುತ್ರಾರ್ಥಮುದಾರತೇಜಾ
ವ್ಯಾಸಂ ಮಹಾತ್ಮಾನಮಜಃ ಪುರಾಣಃ||
ಆದಿಕಾಲದಲ್ಲಿ ಮಹಾವೈಭವಸಂಪನ್ನ ನಾರಾಯಣನು ಬ್ರಹ್ಮಮಹಾನಿಧಿಯಾದ ಉದಾರತೇಜಸ್ವೀ ಮಹಾತ್ಮಾ ಅಜ ಪುರಾಣ ವ್ಯಾಸನನ್ನು ಪುತ್ರನನ್ನಾಗಿ ಸೃಷ್ಟಿಸಿದನು.”
12337006 ಜನಮೇಜಯ ಉವಾಚ|
12337006a ತ್ವಯೈವ ಕಥಿತಃ ಪೂರ್ವಂ ಸಂಭವೋ ದ್ವಿಜಸತ್ತಮ|
12337006c ವಸಿಷ್ಠಸ್ಯ ಸುತಃ ಶಕ್ತಿಃ ಶಕ್ತೇಃ ಪುತ್ರಃ ಪರಾಶರಃ||
12337007a ಪರಾಶರಸ್ಯ ದಾಯಾದಃ ಕೃಷ್ಣದ್ವೈಪಾಯನೋ ಮುನಿಃ|
12337007c ಭೂಯೋ ನಾರಾಯಣಸುತಂ ತ್ವಮೇವೈನಂ ಪ್ರಭಾಷಸೇ||
ಜನಮೇಜಯನು ಹೇಳಿದನು: “ದ್ವಿಜಸತ್ತಮ! ನೀನೇ ಈ ಮೊದಲು ಹೇಳಿದ್ದೆ – ವಸಿಷ್ಠನ ಮಗ ಶಕ್ತಿ, ಶಕ್ತಿಯ ಪುತ್ರ ಪರಾಶರ ಮತ್ತು ಪರಾಶರನ ಮಗನಾಗಿ ಮುನಿ ಕೃಷ್ಣದ್ವೈಪಾಯನನು ಹುಟ್ಟಿದನು ಎಂದು. ಮತ್ತೆ ನೀನು ಈಗ ಅವನು ನಾರಾಯಣನ ಸುತನೆಂದೂ ಹೇಳುತ್ತಿರುವೆ!
12337008a ಕಿಮತಃ ಪೂರ್ವಜಂ ಜನ್ಮ ವ್ಯಾಸಸ್ಯಾಮಿತತೇಜಸಃ|
12337008c ಕಥಯಸ್ವೋತ್ತಮಮತೇ ಜನ್ಮ ನಾರಾಯಣೋದ್ಭವಮ್||
ಉತ್ತಮ ಮತೇ! ಅಮಿತತೇಜಸ್ವೀ ವ್ಯಾಸನಿಗೆ ಹಿಂದೆ ಮತ್ತೊಂದು ಜನ್ಮವಿದ್ದಿತೇ? ನಾರಾಯಣನಿಂದ ಅವನ ಜನ್ಮವು ಯಾವಾಗ ಮತ್ತು ಹೇಗೆ ಆಯಿತು?”
12337009 ವೈಶಂಪಾಯನ ಉವಾಚ|
12337009a ವೇದಾರ್ಥಾನ್ವೇತ್ತುಕಾಮಸ್ಯ ಧರ್ಮಿಷ್ಠಸ್ಯ ತಪೋನಿಧೇಃ|
12337009c ಗುರೋರ್ಮೇ ಜ್ಞಾನನಿಷ್ಠಸ್ಯ ಹಿಮವತ್ಪಾದ ಆಸತಃ||
ವೈಶಂಪಾಯನನು ಹೇಳಿದನು: “ವೇದಾರ್ಥಗಳನ್ನು ತಿಳಿಯುವ ಇಚ್ಛೆಯುಳ್ಳವನಾಗಿದ್ದ ಧರ್ಮನಿಷ್ಠ ಜ್ಞಾನನಿಷ್ಠ ತಪೋನಿಧಿ ನನ್ನ ಗುರುವು ಹಿಮವತ್ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿದ್ದನು.
12337010a ಕೃತ್ವಾ ಭಾರತಮಾಖ್ಯಾನಂ ತಪಃಶ್ರಾಂತಸ್ಯ ಧೀಮತಃ|
12337010c ಶುಶ್ರೂಷಾಂ ತತ್ಪರಾ ರಾಜನ್ ಕೃತವಂತೋ ವಯಂ ತದಾ||
ರಾಜನ್! ಮಹಾಭಾರತ ಆಖ್ಯಾನವನ್ನು ರಚಿಸಿ ತಪಸ್ಸಿನಿಂದ ಬಳಲಿದ್ದ ಆ ಧೀಮತನ ಶುಶ್ರೂಷೆಯಲ್ಲಿ ವಿದ್ಯೆಯನ್ನು ಕಲಿತು ಮುಗಿಸಿದ್ದ ನಾವು ತತ್ಪರರಾಗಿದ್ದೆವು.
12337011a ಸುಮಂತುರ್ಜೈಮಿನಿಶ್ಚೈವ ಪೈಲಶ್ಚ ಸುದೃಢವ್ರತಃ|
12337011c ಅಹಂ ಚತುರ್ಥಃ ಶಿಷ್ಯೋ ವೈ ಶುಕೋ ವ್ಯಾಸಾತ್ಮಜಸ್ತಥಾ||
ಸುಮಂತು, ಜೈಮಿನಿ, ಸುದೃಢವ್ರತ ಪೈಲ, ನಾಲ್ಕನೆಯವನಾಗಿ ನಾನು ಮತ್ತು ವ್ಯಾಸನ ಮಗ ಶುಕ.
12337012a ಏಭಿಃ ಪರಿವೃತೋ ವ್ಯಾಸಃ ಶಿಷ್ಯೈಃ ಪಂಚಭಿರುತ್ತಮೈಃ|
12337012c ಶುಶುಭೇ ಹಿಮವತ್ಪಾದೇ ಭೂತೈರ್ಭೂತಪತಿರ್ಯಥಾ||
ಈ ಐವರು ಉತ್ತಮ ಶಿಷ್ಯರಿಂದ ಪರಿವೃತನಾದ ವ್ಯಾಸನು ಹಿಮವತ್ಪರ್ವತದ ತಪ್ಪಲಿನಲ್ಲಿ ಭೂತಗಳಿಂದ ಸುತ್ತುವರೆಯಲ್ಪಟ್ಟ ಭೂತಪತಿಯಂತೆ ಶೋಭಿಸುತ್ತಿದ್ದನು.
12337013a ವೇದಾನಾವರ್ತಯನ್ಸಾಂಗಾನ್ಭಾರತಾರ್ಥಾಂಶ್ಚ ಸರ್ವಶಃ|
12337013c ತಮೇಕಮನಸಂ ದಾಂತಂ ಯುಕ್ತಾ ವಯಮುಪಾಸ್ಮಹೇ||
ಷಡಂಗಯುಕ್ತ ವೇದಗಳನ್ನೂ ಮಹಾಭಾರತದ ಅರ್ಥಗಳನ್ನೂ ಆವರ್ತನೆಮಾಡುತ್ತಾ ದಾಂತ ಏಕಮನಸ್ಕ ಗುರುವನ್ನು ನಾವೆಲ್ಲರೂ ಉಪಾಸಿಸುತ್ತಿದ್ದೆವು.
12337014a ಕಥಾಂತರೇಽಥ ಕಸ್ಮಿಂಶ್ಚಿತ್ಪೃಷ್ಟೋಽಸ್ಮಾಭಿರ್ದ್ವಿಜೋತ್ತಮಃ|
12337014c ವೇದಾರ್ಥಾನ್ಭಾರತಾರ್ಥಾಂಶ್ಚ ಜನ್ಮ ನಾರಾಯಣಾತ್ತಥಾ||
ವೇದಾರ್ಥಗಳನ್ನೂ ಭಾರತದ ಅರ್ಥಗಳನ್ನೂ ಕೇಳುತ್ತಿದ್ದಾಗ ಯಾವುದೋ ಒಂದು ಕಥೆಯ ಮಧ್ಯೆ ಆ ನಾರಾಯಣನಿಂದ ಅವನಿಗಾದ ಜನ್ಮದ ಕುರಿತು ಕೇಳಿದೆವು.
12337015a ಸ ಪೂರ್ವಮುಕ್ತ್ವಾ ವೇದಾರ್ಥಾನ್ಭಾರತಾರ್ಥಾಂಶ್ಚ ತತ್ತ್ವವಿತ್|
12337015c ನಾರಾಯಣಾದಿದಂ ಜನ್ಮ ವ್ಯಾಹರ್ತುಮುಪಚಕ್ರಮೇ||
ಆ ತತ್ತ್ವವಿದುವು ವೇದಾರ್ಥಗಳನ್ನೂ ಭಾರತದ ಅರ್ಥಗಳನ್ನೂ ಮೊದಲು ಹೇಳಿ ನಂತರ ನಾರಾಯಣನಿಂದಾದ ಅವನ ಜನ್ಮದ ಕುರಿತು ಹೇಳಲು ಪ್ರಾರಂಭಿಸಿದನು.
12337016a ಶೃಣುಧ್ವಮಾಖ್ಯಾನವರಮೇತದಾರ್ಷೇಯಮುತ್ತಮಮ್|
12337016c ಆದಿಕಾಲೋದ್ಭವಂ ವಿಪ್ರಾಸ್ತಪಸಾಧಿಗತಂ ಮಯಾ||
“ವಿಪ್ರರೇ! ಆದಿಕಾಲದಲ್ಲಿ ನಡೆದ ಋಷಿಸಂಬಂಧವಾದ ಈ ಉತ್ತಮ ಆಖ್ಯಾನವನ್ನು ಕೇಳಿ. ತಪಶ್ಚರಣೆಯಿಂದ ಈ ವಿಷಯವನ್ನು ನಾನು ತಿಳಿದುಕೊಂಡೆನು.
12337017a ಪ್ರಾಪ್ತೇ ಪ್ರಜಾವಿಸರ್ಗೇ ವೈ ಸಪ್ತಮೇ ಪದ್ಮಸಂಭವೇ|
12337017c ನಾರಾಯಣೋ ಮಹಾಯೋಗೀ ಶುಭಾಶುಭವಿವರ್ಜಿತಃ||
12337018a ಸಸೃಜೇ ನಾಭಿತಃ ಪುತ್ರಂ ಬ್ರಹ್ಮಾಣಮಮಿತಪ್ರಭಮ್|
12337018c ತತಃ ಸ ಪ್ರಾದುರಭವದಥೈನಂ ವಾಕ್ಯಮಬ್ರವೀತ್||
ಏಳನೆಯ ಬಾರಿ ಪ್ರಜಾಸೃಷ್ಟಿಯ ಕಾಲವು ಪ್ರಾಪ್ತವಾದಾಗ ಶುಭಾಶುಭವಿವರ್ಜಿತ ಮಹಾಯೋಗೀ ನಾರಾಯಣನು ತನ್ನ ನಾಭಿಕಮಲದಿಂದ ಅಮಿತಪ್ರಭೆಯ ಪುತ್ರ ಬ್ರಹ್ಮನನ್ನು ಹುಟ್ಟಿಸಿದನು. ಅವನು ಹುಟ್ಟಿದನಂತರ ಈ ಮಾತನ್ನಾಡಿದನು:
12337019a ಮಮ ತ್ವಂ ನಾಭಿತೋ ಜಾತಃ ಪ್ರಜಾಸರ್ಗಕರಃ ಪ್ರಭುಃ|
12337019c ಸೃಜ ಪ್ರಜಾಸ್ತ್ವಂ ವಿವಿಧಾ ಬ್ರಹ್ಮನ್ ಸಜಡಪಂಡಿತಾಃ||
“ಪ್ರಜೆಗಳನ್ನು ಸೃಷ್ಟಿಸುವ ಪ್ರಭು ನೀನು ನನ್ನ ನಾಭಿಯಿಂದ ಹುಟ್ಟಿರುವೆ. ಬ್ರಹ್ಮನ್! ನೀನು ಜಡ ಮತ್ತು ಪಂಡಿತ ಪ್ರಜೆಗಳನ್ನು ಸೃಷ್ಟಿಸು!”
12337020a ಸ ಏವಮುಕ್ತೋ ವಿಮುಖಶ್ಚಿಂತಾವ್ಯಾಕುಲಮಾನಸಃ|
12337020c ಪ್ರಣಮ್ಯ ವರದಂ ದೇವಮುವಾಚ ಹರಿಮೀಶ್ವರಮ್||
ಅವನು ಹೀಗೆ ಹೇಳಲು ಬ್ರಹ್ಮನು ಚಿಂತಾವ್ಯಾಕುಲ ಮಾನಸನಾಗಿ ವಿಮುಖನಾಗಿ ನಮಸ್ಕರಿಸಿ ವರದ ದೇವ ಹರಿ ಈಶ್ವರನಿಗೆ ಹೇಳಿದನು:
12337021a ಕಾ ಶಕ್ತಿರ್ಮಮ ದೇವೇಶ ಪ್ರಜಾಃ ಸ್ರಷ್ಟುಂ ನಮೋಽಸ್ತು ತೇ|
12337021c ಅಪ್ರಜ್ಞಾವಾನಹಂ ದೇವ ವಿಧತ್ಸ್ವ ಯದನಂತರಮ್||
“ದೇವೇಶ! ನಿನಗೆ ನಮಸ್ಕರಿಸುತ್ತೇನೆ. ಪ್ರಜೆಗಳನ್ನು ಸೃಷ್ಟಿಸಲು ನನ್ನಲ್ಲಿ ಯಾವ ಶಕ್ತಿಯಿದೆ? ನಾನು ಅಪ್ರಜ್ಞಾವಾನನು. ದೇವ! ಮುಂದೆ ನಾನೇನು ಮಾಡಬೇಕೆಂದು ನೀನೇ ಹೇಳು.”
12337022a ಸ ಏವಮುಕ್ತೋ ಭಗವಾನ್ ಭೂತ್ವಾಥಾಂತರ್ಹಿತಸ್ತತಃ|
12337022c ಚಿಂತಯಾಮಾಸ ದೇವೇಶೋ ಬುದ್ಧಿಂ ಬುದ್ಧಿಮತಾಂ ವರಃ||
ಅವನು ಹೀಗೆ ಹೇಳಲು ಬುದ್ಧಿವಂತರಲ್ಲಿ ಶ್ರೇಷ್ಠ ಭಗವಾನ್ ದೇವೇಶನು ಅಂತರ್ಹಿತನಾಗಿ ಬುದ್ಧಿಯ ಕುರಿತು ಚಿಂತಿಸಿದನು.
12337023a ಸ್ವರೂಪಿಣೀ ತತೋ ಬುದ್ಧಿರುಪತಸ್ಥೇ ಹರಿಂ ಪ್ರಭುಮ್|
12337023c ಯೋಗೇನ ಚೈನಾಂ ನಿರ್ಯೋಗಃ ಸ್ವಯಂ ನಿಯುಯುಜೇ ತದಾ||
ಆಗ ಬುದ್ಧಿಯು ಶರೀರವನ್ನು ಧರಿಸಿ ಪ್ರಭು ಹರಿಯ ಬಳಿ ನಿಂತುಕೊಂಡಳು. ನಿರ್ಯೋಗನಾದ ಅವನು ಸ್ವಯಂ ತಾನೇ ಅವಳನ್ನು ಯೋಗದಿಂದ ಸಂಯೋಜಿಸಿದನು.
12337024a ಸ ತಾಮೈಶ್ವರ್ಯಯೋಗಸ್ಥಾಂ ಬುದ್ಧಿಂ ಶಕ್ತಿಮತೀಂ ಸತೀಮ್|
12337024c ಉವಾಚ ವಚನಂ ದೇವೋ ಬುದ್ಧಿಂ ವೈ ಪ್ರಭುರವ್ಯಯಃ||
ಪ್ರಭು ಅವ್ಯಯ ದೇವನು ಹಾಗೆ ಯೋಗೈಶ್ವರ್ಯಯುಕ್ತಳಾಗಿದ್ದ ಶಕ್ತಿಮತೀ ಸತೀ ಬುದ್ಧಿಗೆ ಈ ಮಾತನ್ನಾಡಿದನು:
12337025a ಬ್ರಹ್ಮಾಣಂ ಪ್ರವಿಶಸ್ವೇತಿ ಲೋಕಸೃಷ್ಟ್ಯರ್ಥಸಿದ್ಧಯೇ|
12337025c ತತಸ್ತಮೀಶ್ವರಾದಿಷ್ಟಾ ಬುದ್ಧಿಃ ಕ್ಷಿಪ್ರಂ ವಿವೇಶ ಸಾ||
“ಲೋಕಸೃಷ್ಟಿಗಾಗಿ ನೀನು ಬ್ರಹ್ಮನನ್ನು ಪ್ರವೇಶಿಸು!” ಈಶ್ವರನ ಆದೇಶದಂತೆ ಆ ಬುದ್ಧಿಯು ಕ್ಷಿಪ್ರವಾಗಿ ಬ್ರಹ್ಮನನ್ನು ಪ್ರವೇಶಿಸಿದಳು.
12337026a ಅಥೈನಂ ಬುದ್ಧಿಸಂಯುಕ್ತಂ ಪುನಃ ಸ ದದೃಶೇ ಹರಿಃ|
12337026c ಭೂಯಶ್ಚೈನಂ ವಚಃ ಪ್ರಾಹ ಸೃಜೇಮಾ ವಿವಿಧಾಃ ಪ್ರಜಾಃ||
ಆಗ ಬುದ್ಧಿಸಂಯುಕ್ತನಾದ ಬ್ರಹ್ಮನನ್ನು ಹರಿಯು ಪುನಃ ನೋಡಿದನು ಮತ್ತು “ವಿವಿಧ ಪ್ರಜೆಗಳನ್ನು ಸೃಷ್ಟಿಸು!” ಎಂದು ಪುನಃ ಹೇಳಿದನು.
12337027a ಏವಮುಕ್ತ್ವಾ ಸ ಭಗವಾಂಸ್ತತ್ರೈವಾಂತರಧೀಯತ|
12337027c ಪ್ರಾಪ ಚೈವ ಮುಹೂರ್ತೇನ ಸ್ವಸ್ಥಾನಂ ದೇವಸಂಜ್ಞಿತಮ್||
ಹೀಗೆ ಹೇಳಿ ಭಗವಾನನು ಅಲ್ಲಿಯೇ ಅಂತರ್ಧಾನನಾದನು ಮತ್ತು ಮುಹೂರ್ತಮಾತ್ರದಲ್ಲಿಯೇ ದೇವಸಂಜ್ಞಿತವಾದ ಸ್ವಸ್ಥಾನಕ್ಕೆ ತೆರಳಿದನು.
12337028a ತಾಂ ಚೈವ ಪ್ರಕೃತಿಂ ಪ್ರಾಪ್ಯ ಏಕೀಭಾವಗತೋಽಭವತ್|
12337028c ಅಥಾಸ್ಯ ಬುದ್ಧಿರಭವತ್ ಪುನರನ್ಯಾ ತದಾ ಕಿಲ||
ಅಲ್ಲಿ ತನ್ನ ಮೂಲಪ್ರಕೃತಿಯನ್ನು ಹೊಂದಿ ಅವಳೊಡನೆ ಏಕೀಭೂತನಾದನು. ಅನಂತರ ಪುನಃ ಅವನ ಮನಸ್ಸಿನಲ್ಲಿ ಇನ್ನೊಂದು ವಿಚಾರವು ಹುಟ್ಟಿತು.
12337029a ಸೃಷ್ಟಾ ಇಮಾಃ ಪ್ರಜಾಃ ಸರ್ವಾ ಬ್ರಹ್ಮಣಾ ಪರಮೇಷ್ಠಿನಾ|
12337029c ದೈತ್ಯದಾನವಗಂಧರ್ವರಕ್ಷೋಗಣಸಮಾಕುಲಾಃ|
12337029e ಜಾತಾ ಹೀಯಂ ವಸುಮತೀ ಭಾರಾಕ್ರಾಂತಾ ತಪಸ್ವಿನೀ||
“ಪರಮೇಷ್ಠಿ ಬ್ರಹ್ಮನು ದೈತ್ಯ, ದಾನವ, ಗಂಧರ್ವ, ರಾಕ್ಷಸ ಗಣ ಸಮಾಕುಲಗಳ ಈ ಎಲ್ಲ ಪ್ರಜೆಗಳನ್ನೂ ಸೃಷ್ಟಿಸಿದ್ದಾನೆ. ಆದರೆ ಇವರ ಭಾರದಿಂದ ತಪಸ್ವಿನೀ ವಸುಮತಿಯು ಪೀಡಿತಳಾಗಿದ್ದಾಳೆ.
12337030a ಬಹವೋ ಬಲಿನಃ ಪೃಥ್ವ್ಯಾಂ ದೈತ್ಯದಾನವರಾಕ್ಷಸಾಃ|
12337030c ಭವಿಷ್ಯಂತಿ ತಪೋಯುಕ್ತಾ ವರಾನ್ಪ್ರಾಪ್ಸ್ಯಂತಿ ಚೋತ್ತಮಾನ್||
ಅನೇಕ ಬಲಶಾಲಿ ದೈತ್ಯ-ದಾನವ-ರಾಕ್ಷಸರು ಭೂಮಿಯ ಮೇಲೆ ಹುಟ್ಟುತ್ತಾರೆ. ಅವರು ತಪೋಯುಕ್ತರಾಗಿ ಉತ್ತಮ ವರಗಳನ್ನು ಪಡೆದುಕೊಳ್ಳುತ್ತಾರೆ.
12337031a ಅವಶ್ಯಮೇವ ತೈಃ ಸರ್ವೈರ್ವರದಾನೇನ ದರ್ಪಿತೈಃ|
12337031c ಬಾಧಿತವ್ಯಾಃ ಸುರಗಣಾ ಋಷಯಶ್ಚ ತಪೋಧನಾಃ|
12337031e ತತ್ರ ನ್ಯಾಯ್ಯಮಿದಂ ಕರ್ತುಂ ಭಾರಾವತರಣಂ ಮಯಾ||
ವರದಾನಗಳಿಂದ ದರ್ಪಿತರಾದ ಅವರೆಲ್ಲರಿಂದ ಸುರಗಣಗಳೂ ಮತ್ತು ತಪೋಧನ ಋಷಿಗಳೂ ಅವಶ್ಯವಾಗಿ ಬಾಧೆಗೊಳಗಾಗುತ್ತಾರೆ. ಆದುದರಿಂದ ನಾನು ಅವತರಿಸಿ ಭಾರವನ್ನು ಕಡಿಮೆಮಾಡುವುದು ನ್ಯಾಯವಾದ ಕರ್ತವ್ಯವಾಗಿದೆ.
12337032a ಅಥ ನಾನಾಸಮುದ್ಭೂತೈರ್ವಸುಧಾಯಾಂ ಯಥಾಕ್ರಮಮ್|
12337032c ನಿಗ್ರಹೇಣ ಚ ಪಾಪಾನಾಂ ಸಾಧೂನಾಂ ಪ್ರಗ್ರಹೇಣ ಚ||
12337033a ಇಮಾಂ ತಪಸ್ವಿನೀಂ ಸತ್ಯಾಂ ಧಾರಯಿಷ್ಯಾಮಿ ಮೇದಿನೀಮ್[2]|
ವಸುಧೆಯಲ್ಲಿ ಯಥಾಕ್ರಮವಾಗಿ ನಾನಾ ಅವತಾರಗಳನ್ನೆತ್ತಿ ಪಾಪಿಗಳನ್ನು ನಿಗ್ರಹಿಸಿ ಮತ್ತು ಸಾಧುಗಳನ್ನು ಅನುಗ್ರಹಿಸಿ ಈ ತಪಸ್ವಿನೀ ಸತ್ಯೆ ಮೇದಿನಿಯನ್ನು ಧರಿಸುತ್ತೇನೆ.
12337033c ಮಯಾ ಹ್ಯೇಷಾ ಹಿ ಧ್ರಿಯತೇ ಪಾತಾಲಸ್ಥೇನ ಭೋಗಿನಾ||
12337034a ಮಯಾ ಧೃತಾ ಧಾರಯತಿ ಜಗದ್ಧಿ ಸಚರಾಚರಮ್|
12337034c ತಸ್ಮಾತ್ ಪೃಥ್ವ್ಯಾಃ ಪರಿತ್ರಾಣಂ ಕರಿಷ್ಯೇ ಸಂಭವಂ ಗತಃ||
ಪಾತಾಲದಲ್ಲಿರುವ ನಾಗನಾಗಿ ನಾನು ಇವಳನ್ನು ಹೊರುತ್ತೇನೆ. ನನ್ನಿಂದ ಹೊರಲ್ಪಟ್ಟ ಇವಳು ಚರಾಚರಗಳೊಂದಿಗೆ ಜಗತ್ತನ್ನು ಧಾರಣೆಮಾಡುತ್ತಾಳೆ. ಆದುದರಿಂದ ನಾನು ಪೃಥ್ವಿಯಮೇಲೆ ಅವತರಿಸಿ ಅವಳನ್ನು ರಕ್ಷಿಸುತ್ತೇನೆ.”
12337035a ಏವಂ ಸ ಚಿಂತಯಿತ್ವಾ ತು ಭಗವಾನ್ ಮಧುಸೂದನಃ|
12337035c ರೂಪಾಣ್ಯನೇಕಾನ್ಯಸೃಜತ್ ಪ್ರಾದುರ್ಭಾವಭವಾಯ ಸಃ||
12337036a ವಾರಾಹಂ ನಾರಸಿಂಹಂ ಚ ವಾಮನಂ ಮಾನುಷಂ ತಥಾ|
12337036c ಏಭಿರ್ಮಯಾ ನಿಹಂತವ್ಯಾ ದುರ್ವಿನೀತಾಃ ಸುರಾರಯಃ||
ಭಗವಾನ್ ಮಧುಸೂದನನನು ಹೀಗೆ ಯೋಚಿಸಿ ವರಾಹ, ನಾರಸಿಂಹ, ವಾಮನ ಮತ್ತು ಮನುಷ್ಯ ಹೀಗೆ ಅನೇಕ ರೂಪಗಳನ್ನು ಸೃಷ್ಟಿಸಿ “ಇವುಗಳಿಂದ ಸುರರ ದುರ್ವಿನೀತ ಶತ್ರುಗಳನ್ನು ಸಂಹರಿಸುತ್ತೇನೆ” ಎಂದು ಅವತರಿಸಿದನು.
12337037a ಅಥ ಭೂಯೋ ಜಗತ್ಸ್ರಷ್ಟಾ ಭೋಃಶಬ್ದೇನಾನುನಾದಯನ್|
12337037c ಸರಸ್ವತೀಮುಚ್ಚಚಾರ ತತ್ರ ಸಾರಸ್ವತೋಽಭವತ್||
ಅನಂತರ ಜಗತ್ಸ್ರಷ್ಟನು “ಭೋಃ” ಎಂಬ ಶಬ್ದದಿಂದ ಪ್ರತಿಧ್ವನಿಯನ್ನುಂಟುಮಾಡುತ್ತಾ ಸರಸ್ವತಿಯನ್ನು ಕರೆದನು. ಆಗ ಸಾರಸ್ವತನ ಆವಿರ್ಭಾವವಾಯಿತು.
12337038a ಅಪಾಂತರತಮಾ ನಾಮ ಸುತೋ ವಾಕ್ಸಂಭವೋ ವಿಭೋಃ|
12337038c ಭೂತಭವ್ಯಭವಿಷ್ಯಜ್ಞಃ ಸತ್ಯವಾದೀ ದೃಢವ್ರತಃ||
ವಿಭುವಿನ ವಾಕ್ಸಂಭವನಾದ ಅವನ ಸುತನ ಹೆಸರು ಅಪಾಂತರತಮಾ ಎಂದಾಯಿತು. ಆ ಸತ್ಯವಾದೀ ದೃಢವ್ರತನು ಭೂತ-ಭವ್ಯ-ಭವಿಷ್ಯಗಳನ್ನು ತಿಳಿದವನಾಗಿದ್ದನು.
12337039a ತಮುವಾಚ ನತಂ ಮೂರ್ಧ್ನಾ ದೇವಾನಾಮಾದಿರವ್ಯಯಃ|
12337039c ವೇದಾಖ್ಯಾನೇ ಶ್ರುತಿಃ ಕಾರ್ಯಾ ತ್ವಯಾ ಮತಿಮತಾಂ ವರ|
12337039e ತಸ್ಮಾತ್ ಕುರು ಯಥಾಜ್ಞಪ್ತಂ ಮಯೈತದ್ವಚನಂ ಮುನೇ||
ತಲೆಬಾಗಿ ನಮಸ್ಕರಿಸಿದ ಅವನಿಗೆ ದೇವತೆಗಳ ಆದಿ ಅವ್ಯಯನು ಹೇಳಿದನು: “ಬುದ್ಧಿವಂತರಲ್ಲಿ ಶ್ರೇಷ್ಠ! ವೇದಗಳನ್ನು ವ್ಯಾಖ್ಯಾನಿಸಲು ನಿನ್ನಿಂದ ಶ್ರುತಿಗಳ ಕಾರ್ಯವಾಗಬೇಕು. ಆದುದರಿಂದ ಮುನೇ! ನಾನು ಹೇಗೆ ಆಜ್ಞಾಪಿಸುತ್ತೇನೋ ಹಾಗೆ ಮಾಡು. ನನ್ನ ಮಾತಿನಂತೆಯೇ ಮಾಡು.”
12337040a ತೇನ ಭಿನ್ನಾಸ್ತದಾ ವೇದಾ ಮನೋಃ ಸ್ವಾಯಂಭುವೇಽಂತರೇ|
12337040c ತತಸ್ತುತೋಷ ಭಗವಾನ್ ಹರಿಸ್ತೇನಾಸ್ಯ ಕರ್ಮಣಾ|
12337040e ತಪಸಾ ಚ ಸುತಪ್ತೇನ ಯಮೇನ ನಿಯಮೇನ ಚ||
ಅಪಾಂತರತಮನು ಸ್ವಾಯಂಭುವ ಮನ್ವಂತರದಲ್ಲಿ ವೇದಗಳನ್ನು ವಿಂಗಡಿಸಿ ಚೆನ್ನಾಗಿ ತಪಿಸಿದ ತಪಸ್ಸಿನಿಂದ ಮತ್ತು ಯಮ-ನಿಯಮಗಳೇ ಮೊದಲಾದ ತನ್ನ ಕರ್ಮಗಳಿಂದ ಭಗವಾನ್ ಹರಿಯನ್ನು ಮೆಚ್ಚಿಸಿದನು.
12337041 ಶ್ರೀಭಗವಾನುವಾಚ|
12337041a ಮನ್ವಂತರೇಷು ಪುತ್ರ ತ್ವಮೇವಂ ಲೋಕಪ್ರವರ್ತಕಃ|
12337041c ಭವಿಷ್ಯಸ್ಯಚಲೋ ಬ್ರಹ್ಮನ್ನಪ್ರಧೃಷ್ಯಶ್ಚ ನಿತ್ಯಶಃ||
ಶ್ರೀಭಗವಂತನು ಹೇಳಿದನು: “ಪುತ್ರ! ಮನ್ವಂತರಗಳಲ್ಲಿ ನೀನು ಲೋಕಪ್ರವರ್ತಕನಾಗು. ಬ್ರಹ್ಮನ್! ಭವಿಷ್ಯದಲ್ಲಿ ನೀನು ನಿತ್ಯವೂ ಅಚಲನೂ ಅಜೇಯನೂ ಆಗುವೆ.
12337042a ಪುನಸ್ತಿಷ್ಯೇ ಚ ಸಂಪ್ರಾಪ್ತೇ ಕುರವೋ ನಾಮ ಭಾರತಾಃ|
12337042c ಭವಿಷ್ಯಂತಿ ಮಹಾತ್ಮಾನೋ ರಾಜಾನಃ ಪ್ರಥಿತಾ ಭುವಿ||
ದ್ವಾಪರ-ಕಲಿಗಳ ಸಂಧಿಕಾಲವು ಪ್ರಾಪ್ತವಾದಾಗ ಕುರುಗಳೆಂಬ ಭಾರತರು ಆಗುತ್ತಾರೆ. ಆ ಮಹಾತ್ಮ ರಾಜರು ಭುವಿಯಲ್ಲಿ ಪ್ರಥಿತರಾಗುತ್ತಾರೆ.
12337043a ತೇಷಾಂ ತ್ವತ್ತಃ ಪ್ರಸೂತಾನಾಂ ಕುಲಭೇದೋ ಭವಿಷ್ಯತಿ|
12337043c ಪರಸ್ಪರವಿನಾಶಾರ್ಥಂ ತ್ವಾಮೃತೇ ದ್ವಿಜಸತ್ತಮ||
ದ್ವಿಜಸತ್ತಮ! ನಿನ್ನಿಂದಲೇ ಪ್ರಸೂತರಾಗುವ ಅವರಲ್ಲಿ, ನಿನ್ನನ್ನು ಬಿಟ್ಟು ಪರಸ್ಪರ ವಿನಾಶರಾಗುವ, ಕುಲಭೇದವು ಉಂಟಾಗುತ್ತದೆ.
12337044a ತತ್ರಾಪ್ಯನೇಕಧಾ ವೇದಾನ್ ಭೇತ್ಸ್ಯಸೇ ತಪಸಾನ್ವಿತಃ|
12337044c ಕೃಷ್ಣೇ ಯುಗೇ ಚ ಸಂಪ್ರಾಪ್ತೇ ಕೃಷ್ಣವರ್ಣೋ ಭವಿಷ್ಯಸಿ||
ಆಗಲೂ ಕೂಡ ತಪಸಾನ್ವಿತನಾದ ನೀನು ವೇದಗಳನ್ನು ಅನೇಕಭಾಗಗಳನ್ನಾಗಿ ವಿಂಗಡಿಸುವೆ. ಕೃಷ್ಣಯುಗವು ಪ್ರಾಪ್ತವಾಗಲು ನೀನು ಕೃಷ್ಣವರ್ಣನಾಗುತ್ತೀಯೆ.
12337045a ಧರ್ಮಾಣಾಂ ವಿವಿಧಾನಾಂ ಚ ಕರ್ತಾ ಜ್ಞಾನಕರಸ್ತಥಾ|
12337045c ಭವಿಷ್ಯಸಿ ತಪೋಯುಕ್ತೋ ನ ಚ ರಾಗಾದ್ವಿಮೋಕ್ಷ್ಯಸೇ||
ವಿವಿಧ ಧರ್ಮಗಳ ಕರ್ತನಾಗುವೆ. ಜ್ಞಾನಕರನಾಗುವೆ. ತಪೋಯುಕ್ತನೂ ಆಗುವೆ. ಆದರೆ ರಾಗಾದಿಗಳಿಂದ ಮುಕ್ತನಾಗಿರುವುದಿಲ್ಲ.
12337046a ವೀತರಾಗಶ್ಚ ಪುತ್ರಸ್ತೇ ಪರಮಾತ್ಮಾ ಭವಿಷ್ಯತಿ|
12337046c ಮಹೇಶ್ವರಪ್ರಸಾದೇನ ನೈತದ್ವಚನಮನ್ಯಥಾ||
ಮಹೇಶ್ವರನ ಪ್ರಸಾದದಿಂದ ನಿನ್ನ ಮಗನು ವೀತರಾಗನಾಗಿ ಪರಮಾತ್ಮನಾಗುತ್ತಾನೆ. ನನ್ನ ಈ ವಚನವು ಅನ್ಯಥಾ ಆಗುವುದಿಲ್ಲ.
12337047a ಯಂ ಮಾನಸಂ ವೈ ಪ್ರವದಂತಿ ಪುತ್ರಂ
ಪಿತಾಮಹಸ್ಯೋತ್ತಮಬುದ್ಧಿಯುಕ್ತಮ್|
12337047c ವಸಿಷ್ಠಮಗ್ರ್ಯಂ ತಪಸೋ ನಿಧಾನಂ
ಯಶ್ಚಾಪಿ ಸೂರ್ಯಂ ವ್ಯತಿರಿಚ್ಯ ಭಾತಿ||
12337048a ತಸ್ಯಾನ್ವಯೇ ಚಾಪಿ ತತೋ ಮಹರ್ಷಿಃ
ಪರಾಶರೋ ನಾಮ ಮಹಾಪ್ರಭಾವಃ|
12337048c ಪಿತಾ ಸ ತೇ ವೇದನಿಧಿರ್ವರಿಷ್ಠೋ
ಮಹಾತಪಾ ವೈ ತಪಸೋ ನಿವಾಸಃ|
12337048e ಕಾನೀನಗರ್ಭಃ ಪಿತೃಕನ್ಯಕಾಯಾಂ
ತಸ್ಮಾದೃಷೇಸ್ತ್ವಂ ಭವಿತಾ ಚ ಪುತ್ರಃ||
ಯಾರನ್ನು ಪಿತಾಮಹನ ಮಾನಸಪುತ್ರನೆಂದು ಕರೆಯುತ್ತಾರೋ ಆ ಉತ್ತಮಬುದ್ಧಿಯುಕ್ತ, ಅಗ್ರ್ಯ, ತಪಸ್ಸಿನ ನಿಧಿ, ಸೂರ್ಯನಿಗೂ ಮೀರಿ ಪ್ರಕಾಶಿಸುವ ಮಹರ್ಷಿ ವಸಿಷ್ಠನ ಕುಲದಲ್ಲಿ ಪರಾಶರ ಎಂಬ ಹೆಸರಿನ ಮಹಾಪ್ರಭಾವನು ಹುಟ್ಟುತ್ತಾನೆ. ಆ ವೇದನಿಧಿ ವರಿಷ್ಠ ಮಹಾತಪಸ್ವಿಯು ನಿನ್ನ ಪಿತನಾಗುತ್ತಾನೆ. ಇನ್ನೂ ತಂದೆಯ ಮನೆಯಲ್ಲಿಯೇ ಇದ್ದ ಕನ್ಯೆಯೊಬ್ಬಳಲ್ಲಿ ನೀನು ಪುತ್ರನಾಗಿ ಹುಟ್ಟುವೆ ಮತ್ತು ಅದರ ಕಾರಣ ಕಾನೀನಗರ್ಭನೆಂದಾಗುವೆ.
12337049a ಭೂತಭವ್ಯಭವಿಷ್ಯಾಣಾಂ ಚಿನ್ನಸರ್ವಾರ್ಥಸಂಶಯಃ|
12337049c ಯೇ ಹ್ಯತಿಕ್ರಾಂತಕಾಃ ಪೂರ್ವಂ ಸಹಸ್ರಯುಗಪರ್ಯಯಾಃ||
12337050a ತಾಂಶ್ಚ ಸರ್ವಾನ್ಮಯೋದ್ದಿಷ್ಟಾನ್ ದ್ರಕ್ಷ್ಯಸೇ ತಪಸಾನ್ವಿತಃ|
12337050c ಪುನರ್ದ್ರಕ್ಷ್ಯಸಿ ಚಾನೇಕಸಹಸ್ರಯುಗಪರ್ಯಯಾನ್||
ಭೂತ-ಭವ್ಯ-ಭವಿಷ್ಯತ್ತುಗಳಲ್ಲಿ ನಿನಗೆ ಯಾವ ಸಂಶಯವೂ ಇರುವುದಿಲ್ಲ. ತಪಸಾನ್ವಿತನಾದ ನೀನು ಸಹಸ್ರಯುಗಗಳ ಹಿಂದೆಯೂ ನನ್ನ ಉದ್ದೇಶದಿಂದ ನಡೆದುಹೋದವುಗಳನ್ನು ಸ್ಪಷ್ಟವಾಗಿ ನೋಡುವೆ. ಮುಂದಿನ ಸಾವಿರ ಯುಗಗಳಲ್ಲಿ ನಡೆಯುವ ವಿಷಯಗಳನ್ನೂ ನೀನು ಸ್ಪಷ್ಟರೂಪದಿಂದ ಕಾಣುವೆ.
12337051a ಅನಾದಿನಿಧನಂ ಲೋಕೇ ಚಕ್ರಹಸ್ತಂ ಚ ಮಾಂ ಮುನೇ|
12337051c ಅನುಧ್ಯಾನಾನ್ಮಮ ಮುನೇ ನೈತದ್ವಚನಮನ್ಯಥಾ||
ಮುನೇ! ನಿತ್ಯವೂ ನನ್ನನ್ನು ಧ್ಯಾನಮಾಡುವುದರಿಂದ ಅನಾದಿನಿಧನನಾದ ಚಕ್ರಪಾಣಿಯಾದ ನನ್ನನ್ನು ನೀನು ಕಾಣುತ್ತಿರುವೆ. ನನ್ನ ಈ ಮಾತು ಅನ್ಯಥಾ ಆಗುವುದಿಲ್ಲ.
[3]12337052a ಶನೈಶ್ಚರಃ ಸೂರ್ಯಪುತ್ರೋ ಭವಿಷ್ಯತಿ ಮನುರ್ಮಹಾನ್|
12337052c ತಸ್ಮಿನ್ಮನ್ವಂತರೇ ಚೈವ ಸಪ್ತರ್ಷಿಗಣಪೂರ್ವಕಃ[4]|
12337052e ತ್ವಮೇವ ಭವಿತಾ ವತ್ಸ ಮತ್ಪ್ರಸಾದಾನ್ನ ಸಂಶಯಃ||
ಭವಿಷ್ಯದಲ್ಲಿ ಸೂರ್ಯಪುತ್ರ ಶನೈಶ್ಚರನು ಮಹಾಮನುವಾಗುತ್ತಾನೆ. ವತ್ಸ! ನನ್ನ ಪ್ರಸಾದದಿಂದ ಅವನ ಮನ್ವಂತರದಲ್ಲಿ ನೀನು ಸಪ್ತರ್ಷಿಗಣಗಳಿಗೆ ಪ್ರಧಾನನಾಗುವೆ. ಇದರಲ್ಲಿ ಸಂಶಯವಿಲ್ಲ.””
12337053 ವ್ಯಾಸ ಉವಾಚ|
12337053a ಏವಂ ಸಾರಸ್ವತಮೃಷಿಮಪಾಂತರತಮಂ ತದಾ|
12337053c ಉಕ್ತ್ವಾ ವಚನಮೀಶಾನಃ ಸಾಧಯಸ್ವೇತ್ಯಥಾಬ್ರವೀತ್||
ವ್ಯಾಸನು ಹೇಳಿದನು: “ಹೀಗೆ ಆ ಸಾರಸ್ವತ ಋಷಿ ಅಪಾಂತರತಮನಿಗೆ ಹೇಳಿ ಈಶಾನನು ಮುಂದಿನ ಕಾರ್ಯಗಳನ್ನು ಸಾಧಿಸಲು ಹೇಳಿದನು.
12337054a ಸೋಽಹಂ ತಸ್ಯ ಪ್ರಸಾದೇನ ದೇವಸ್ಯ ಹರಿಮೇಧಸಃ|
12337054c ಅಪಾಂತರತಮಾ ನಾಮ ತತೋ ಜಾತೋಽಜ್ಞಯಾ ಹರೇಃ|
12337054e ಪುನಶ್ಚ ಜಾತೋ ವಿಖ್ಯಾತೋ ವಸಿಷ್ಠಕುಲನಂದನಃ||
ಹೀಗೆ ನಾನು ಆ ದೇವ ಹರಿಮೇಧಸನ ಪ್ರಸಾದದಿಂದ ಅಪಾಂತರತಮ ಎಂಬ ಹೆಸರಿನಿಂದ ಹುಟ್ಟಿದೆನು. ಹರಿಯ ಆಜ್ಞೆಯಂತೆಯೇ ಪುನಃ ನಾನು ವಿಖ್ಯಾತ ವಸಿಷ್ಠನ ಕುಲದಲ್ಲಿ ಹುಟ್ಟಿದೆನು.
12337055a ತದೇತತ್ಕಥಿತಂ ಜನ್ಮ ಮಯಾ ಪೂರ್ವಕಮಾತ್ಮನಃ|
12337055c ನಾರಾಯಣಪ್ರಸಾದೇನ ತಥಾ ನಾರಾಯಣಾಂಶಜಮ್||
ಹಿಂದೆ ನಾರಾಯಣನ ಕೃಪೆಯಿಂದ ನಾನು ನಾರಾಯಣಾಂಶದಿಂದ ಹುಟ್ಟಿದ್ದೆನು. ಇದೋ ನನ್ನ ಪೂರ್ವಜನ್ಮದ ಕುರಿತು ಹೇಳಿದ್ದೇನೆ.
12337056a ಮಯಾ ಹಿ ಸುಮಹತ್ತಪ್ತಂ ತಪಃ ಪರಮದಾರುಣಮ್|
12337056c ಪುರಾ ಮತಿಮತಾಂ ಶ್ರೇಷ್ಠಾಃ ಪರಮೇಣ ಸಮಾಧಿನಾ||
ಮತಿವಂತರಲ್ಲಿ ಶ್ರೇಷ್ಠರೇ! ಹಿಂದೆ ನಾನು ಪರಮ ಸಮಾಧಿಯಿಂದ ಪರಮ ದಾರುಣವಾದ ಮಹಾತಪಸ್ಸನ್ನು ತಪಿಸಿದೆನು.
12337057a ಏತದ್ವಃ ಕಥಿತಂ ಸರ್ವಂ ಯನ್ಮಾಂ ಪೃಚ್ಚಥ ಪುತ್ರಕಾಃ|
12337057c ಪೂರ್ವಜನ್ಮ ಭವಿಷ್ಯಂ ಚ ಭಕ್ತಾನಾಂ ಸ್ನೇಹತೋ ಮಯಾ||
ಪುತ್ರರೇ! ನನ್ನನ್ನು ಕೇಳಿದ ನನ್ನ ಪೂರ್ವಜನ್ಮ ಮತ್ತು ಭವಿಷ್ಯ ಎಲ್ಲವನ್ನೂ, ಭಕ್ತರ ಮೇಲಿನ ಸ್ನೇಹದಿಂದ, ನಿಮಗೆ ಹೇಳಿದ್ದೇನೆ.””
12337058 ವೈಶಂಪಾಯನ ಉವಾಚ|
12337058a ಏಷ ತೇ ಕಥಿತಃ ಪೂರ್ವಂ ಸಂಭವೋಽಸ್ಮದ್ಗುರೋರ್ನೃಪ|
12337058c ವ್ಯಾಸಸ್ಯಾಕ್ಲಿಷ್ಟಮನಸೋ ಯಥಾ ಪೃಷ್ಟಃ ಪುನಃ ಶೃಣು||
ವೈಶಂಪಾಯನನು ಹೇಳಿದನು: “ನೃಪ! ನೀನು ನನಗೆ ಕೇಳಿದಂತೆ ನನ್ನ ಗುರು ಅಕ್ಲಿಷ್ಟಮನಸ್ಕ ವ್ಯಾಸನ ಪೂರ್ವಜನ್ಮದ ಕುರಿತು ಹೇಳಿದ್ದೇನೆ. ಇನ್ನೂ ಕೆಲವು ವಿಷಯಗಳಿವೆ. ಕೇಳು.
12337059a ಸಾಂಖ್ಯಂ ಯೋಗಂ ಪಂಚರಾತ್ರಂ ವೇದಾಃ ಪಾಶುಪತಂ ತಥಾ|
12337059c ಜ್ಞಾನಾನ್ಯೇತಾನಿ ರಾಜರ್ಷೇ ವಿದ್ಧಿ ನಾನಾಮತಾನಿ ವೈ||
ರಾಜರ್ಷೇ! ಸಾಂಖ್ಯ, ಯೋಗ, ಪಂಚರಾತ್ರ, ವೇದಗಳು ಮತ್ತು ಪಾಶುಪತ – ಈ ಎಲ್ಲ ಜ್ಞಾನಗಳೂ ಒಂದೇ. ಆದರೆ ನಾನಾ ಅಭಿಪ್ರಾಯಗಳೆಂದು ತಿಳಿ.
12337060a ಸಾಂಖ್ಯಸ್ಯ ವಕ್ತಾ ಕಪಿಲಃ ಪರಮರ್ಷಿಃ ಸ ಉಚ್ಯತೇ|
12337060c ಹಿರಣ್ಯಗರ್ಭೋ ಯೋಗಸ್ಯ ವೇತ್ತಾ ನಾನ್ಯಃ ಪುರಾತನಃ||
ಸಾಂಖ್ಯದ ವಕ್ತಾರನು ಕಪಿಲ. ಅವನು ಪರಮ ಋಷಿಯೆಂದು ಹೇಳುತ್ತಾರೆ. ಪುರಾತನ ಹಿರಣ್ಯಗರ್ಭನೇ ಯೋಗದ ವೇತಾರನು. ಬೇರೆ ಯಾರೂ ಅಲ್ಲ.
12337061a ಅಪಾಂತರತಮಾಶ್ಚೈವ ವೇದಾಚಾರ್ಯಃ ಸ ಉಚ್ಯತೇ|
12337061c ಪ್ರಾಚೀನಗರ್ಭಂ ತಮೃಷಿಂ ಪ್ರವದಂತೀಹ ಕೇ ಚನ||
ಅಪಾಂತರತಮನನ್ನು ವೇದಾಚಾರ್ಯನೆಂದು ಹೇಳುತ್ತಾರೆ. ಕೆಲವರು ಆ ಋಷಿಯನ್ನು ಪ್ರಾಚೀನಗರ್ಭ ಎಂದೂ ಕರೆಯುತ್ತಾರೆ.
12337062a ಉಮಾಪತಿರ್ಭೂತಪತಿಃ ಶ್ರೀಕಂಠೋ ಬ್ರಹ್ಮಣಃ ಸುತಃ|
12337062c ಉಕ್ತವಾನಿದಮವ್ಯಗ್ರೋ ಜ್ಞಾನಂ ಪಾಶುಪತಂ ಶಿವಃ||
ಬ್ರಹ್ಮನ ಪುತ್ರ ಉಮಾಪತಿ ಭೂತಪತಿ ಶ್ರೀಕಂಠ ಅವ್ಯಗ್ರ ಶಿವನು ಪಾಶುಪತ ಜ್ಞಾನವನ್ನು ನೀಡಿದನು.
12337063a ಪಂಚರಾತ್ರಸ್ಯ ಕೃತ್ಸ್ನಸ್ಯ ವೇತ್ತಾ ತು ಭಗವಾನ್ ಸ್ವಯಮ್|
12337063c ಸರ್ವೇಷು ಚ ನೃಪಶ್ರೇಷ್ಠ ಜ್ಞಾನೇಷ್ವೇತೇಷು ದೃಶ್ಯತೇ||
ನೃಪಶ್ರೇಷ್ಠ! ಪಂಚರಾತ್ರವು ಸಂಪೂರ್ಣವಾಗಿ ಸ್ವಯಂ ಭಗವಾನನಿಗೆ ತಿಳಿದಿದೆ. ಈ ಸರ್ವ ಜ್ಞಾನಗಳೂ ಅವನಲ್ಲಿಯೇ ಇರುವುದು.
12337064a ಯಥಾಗಮಂ ಯಥಾಜ್ಞಾನಂ ನಿಷ್ಠಾ ನಾರಾಯಣಃ ಪ್ರಭುಃ|
12337064c ನ ಚೈನಮೇವಂ ಜಾನಂತಿ ತಮೋಭೂತಾ ವಿಶಾಂ ಪತೇ||
ವಿಶಾಂಪತೇ! ಎಲ್ಲ ಅನುಭವಗಳೂ ಜ್ಞಾನಗಳೂ ಪ್ರಭು ನಾರಾಯಣನಲ್ಲಿಯೇ ನೆಲೆಸಿವೆ. ಅಜ್ಞಾನಾಂಧಕಾರದಲ್ಲಿರುವವರಿಗೆ ಇದು ತಿಳಿದಿರುವುದಿಲ್ಲ.
12337065a ತಮೇವ ಶಾಸ್ತ್ರಕರ್ತಾರಂ ಪ್ರವದಂತಿ ಮನೀಷಿಣಃ|
12337065c ನಿಷ್ಠಾಂ ನಾರಾಯಣಮೃಷಿಂ ನಾನ್ಯೋಽಸ್ತೀತಿ ಚ ವಾದಿನಃ[5]||
ಜ್ಞಾನಿಗಳು ನಿಷ್ಠ ನಾರಾಯಣ ಋಷಿಯನ್ನೇ ಶಾಸ್ತ್ರಕರ್ತಾರನೆಂದು ಹೇಳುತ್ತಾರೆ. ಅನ್ಯರು ಯಾರೂ ಇಲ್ಲ ಎಂದು ಹೇಳುತ್ತಾರೆ.
12337066a ನಿಃಸಂಶಯೇಷು ಸರ್ವೇಷು ನಿತ್ಯಂ ವಸತಿ ವೈ ಹರಿಃ|
12337066c ಸಸಂಶಯಾನ್ ಹೇತುಬಲಾನ್ನಾಧ್ಯಾವಸತಿ ಮಾಧವಃ||
ಸರ್ವ ವಿಷಯಗಳಲ್ಲಿ ನಿಃಸಂಶಯನಾಗಿರುವವನಲ್ಲಿ ನಿತ್ಯವೂ ಹರಿಯು ವಾಸಿಸುತ್ತಾನೆ. ಆದರೆ ಕುತರ್ಕಗಳಿಂದ ಸಂಶಯಾನ್ವಿತರಾದವರ ಹೃದಯದಲ್ಲಿ ಮಾಧವನು ಎಂದೂ ವಾಸಿಸುವುದಿಲ್ಲ.
12337067a ಪಂಚರಾತ್ರವಿದೋ ಯೇ ತು ಯಥಾಕ್ರಮಪರಾ ನೃಪ|
12337067c ಏಕಾಂತಭಾವೋಪಗತಾಸ್ತೇ ಹರಿಂ ಪ್ರವಿಶಂತಿ ವೈ||
ನೃಪ! ಪಂಚರಾತ್ರವನ್ನು ತಿಳಿದುಕೊಂಡ ಯಾರು ಯಥಾಕ್ರಮವಾಗಿ ಏಕಾಂತಭಾವದಿಂದ ಹರಿಯನ್ನು ಆರಾಧಿಸುವರೋ ಅವರು ಹರಿಯನ್ನೇ ಪ್ರವೇಶಿಸುತ್ತಾರೆ.
12337068a ಸಾಂಖ್ಯಂ ಚ ಯೋಗಂ ಚ ಸನಾತನೇ ದ್ವೇ
ವೇದಾಶ್ಚ ಸರ್ವೇ ನಿಖಿಲೇನ ರಾಜನ್|
12337068c ಸರ್ವೈಃ ಸಮಸ್ತೈರ್ ಋಷಿಭಿರ್ನಿರುಕ್ತೋ
ನಾರಾಯಣೋ ವಿಶ್ವಮಿದಂ ಪುರಾಣಮ್||
ರಾಜನ್! ಸಾಂಖ್ಯ, ಯೋಗ, ಪಂಚರಾತ್ರ ಮತ್ತು ಪಾಶುಪತಗಳೆಂಬ ಎರಡು ಸನಾತನ ಶಾಸ್ತ್ರಗಳು ಮತ್ತು ವೇದಗಳು ಇವೆಲ್ಲವೂ ಹಾಗೆಯೇ ಇಡೀ ವಿಶ್ವವೂ ಸಂಪೂರ್ಣವಾಗಿ ನಾರಾಯಣ ಸ್ವರೂಪವೇ ಎಂದು ಸರ್ವ ಋಷಿಗಳೂ ಹೇಳುತ್ತಾರೆ.
12337069a ಶುಭಾಶುಭಂ ಕರ್ಮ ಸಮೀರಿತಂ ಯತ್
ಪ್ರವರ್ತತೇ ಸರ್ವಲೋಕೇಷು ಕಿಂ ಚಿತ್|
12337069c ತಸ್ಮಾದೃಷೇಸ್ತದ್ ಭವತೀತಿ ವಿದ್ಯಾದ್
ದಿವ್ಯಂತರಿಕ್ಷೇ ಭುವಿ ಚಾಪ್ಸು ಚಾಪಿ||
ದಿವಿ, ಅಂತರಿಕ್ಷ, ಭೂಮಿ ಮತ್ತು ನೀರು - ಈ ಎಲ್ಲ ಲೋಕಗಳಲ್ಲಿ ಯಾವ ಶುಭಾಶುಭಕರ್ಮಗಳು ನಡೆಯುತ್ತವೆಯೋ ಅವೆಲ್ಲವೂ ನಾರಾಯಣ ಋಷಿಯಿಂದಲೇ ನಡೆಯುತ್ತವೆ ಎನ್ನುವುದನ್ನು ತಿಳಿಯಬೇಕು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ದ್ವೈಪಾಯನೋತ್ಪತ್ತೌ ಸಪ್ತತ್ರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ದ್ವೈಪಾಯನೋತ್ಪತ್ತಿ ಎನ್ನುವ ಮುನ್ನೂರಾಮೂವತ್ತೇಳನೇ ಅಧ್ಯಾಯವು.

[1] ನಾರಾಯಣ, ಬ್ರಹ್ಮ, ವಸಿಷ್ಠ, ಶಕ್ತಿ, ಪರಾಶರ, ವ್ಯಾಸ- ಈ ಕ್ರಮದಲ್ಲಿ ವ್ಯಾಸನು ನಾರಾಯಣನಿಗೆ ಆರನೆಯವನು.
[2] ಇಯಂ ತಪಸ್ವಿನೀ ಸತ್ಯಾ ಧಾರಯಿಷ್ಯತಿ ಮೇದಿನೀ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಭವಿಷ್ಯತಿ ಮಹಾಸತ್ತ್ವ ಖ್ಯಾತಿಶ್ಚಾಪ್ಯತುಲಾ ತವ|
[4] ಮನ್ವಾದಿಗಣಪೂರ್ವಕಃ ಎಂಬ ಪಾಠಾಂತರವಿದೆ (ಭಾರತದರ್ಶನ).
[5] ವಚೋ ಮಮ ಎಂಬ ಪಾಠಾಂತರವಿದೆ (ಭಾರತದರ್ಶನ).