Shanti Parva: Chapter 331

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೩೧

ನಾರದನು ಶ್ವೇತದ್ವೀಪಕ್ಕೆ ಹೋಗಿ ನರ-ನಾರಾಯಣರನ್ನು ಸಂಧಿಸಿದುದು (1-52).

12331001 ಜನಮೇಜಯ ಉವಾಚ|

12331001a ಬ್ರಹ್ಮನ್ಸುಮಹದಾಖ್ಯಾನಂ ಭವತಾ ಪರಿಕೀರ್ತಿತಮ್|

12331001c ಯಚ್ಚ್ರುತ್ವಾ ಮುನಯಃ ಸರ್ವೇ ವಿಸ್ಮಯಂ ಪರಮಂ ಗತಾಃ||

ಜನಮೇಜಯನು ಹೇಳಿದನು: “ಬ್ರಹ್ಮನ್! ಮಹದಾಖ್ಯಾನವನ್ನು ನೀವು ಹೇಳಿರುವಿರಿ. ಇದನ್ನು ಕೇಳಿ ಸರ್ವಮುನಿಗಳೂ ವಿಸ್ಮಿತರಾಗಿದ್ದಾರೆ!

[1]12331002a ಇದಂ ಶತಸಹಸ್ರಾದ್ಧಿ ಭಾರತಾಖ್ಯಾನವಿಸ್ತರಾತ್|

12331002c ಆಮಥ್ಯ ಮತಿಮಂಥೇನ ಜ್ಞಾನೋದಧಿಮನುತ್ತಮಮ್||

12331003a ನವನೀತಂ ಯಥಾ ದಧ್ನೋ ಮಲಯಾಚ್ಚಂದನಂ ಯಥಾ|

12331003c ಆರಣ್ಯಕಂ ಚ ವೇದೇಭ್ಯ ಓಷಧಿಭ್ಯೋಽಮೃತಂ ಯಥಾ||

12331004a ಸಮುದ್ಧೃತಮಿದಂ ಬ್ರಹ್ಮನ್ಕಥಾಮೃತಮನುತ್ತಮಮ್|

ಒಂದು ಲಕ್ಷ ಶ್ಲೋಕಗಳಿಂದ ಕೂಡಿರುವ ವಿಸ್ತಾರ ಭಾರತಾಖ್ಯಾನದಿಂದ ಉದ್ಧರಿಸಿ ನೀನು ಹೇಳುತ್ತಿರುವ ಈ ಕಥಾಸಮುದಾಯವು ಬುದ್ಧಿಯೆಂಬ ಕಡೆಗೋಲಿನಿಂದ ಜ್ಞಾನವೆಂಬ ಸಮುದ್ರವನ್ನು ಕಡೆದು ಹೊರತೆಗೆದ ಅಮೃತದಂತೆಯೇ ಇದೆ. ಮೊಸರಿನಿಂದ ಬೆಣ್ಣೆಯನ್ನು ತೆಗೆಯುವಂತೆ ಮತ್ತು ಮಲಯ ಪರ್ವತದಿಂದ ಗಂಧವನ್ನು ತೆಗೆಯುವಂತೆ ಮತ್ತು ವೇದಗಳಿಂದ ಅರಣ್ಯಕವನ್ನು ಉದ್ಧರಿಸಿದಂತೆ ಮತ್ತು ಓಷಧಿಗಳಿಂದ ಅಮೃತವನ್ನು ತೆಗೆಯುವಂತೆ ಭಾರತಕಥಾಭಾಗರೂಪದ ಈ ಅಮೃತವು ಸಮುದ್ಧೃತವಾಗಿದೆ.

12331004c ತಪೋನಿಧೇ ತ್ವಯೋಕ್ತಂ ಹಿ ನಾರಾಯಣಕಥಾಶ್ರಯಮ್||

12331005a ಸ ಹೀಶೋ ಭಗವಾನ್ದೇವಃ ಸರ್ವಭೂತಾತ್ಮಭಾವನಃ|

ತಪೋನಿಧೇ! ನಾರಾಯಣ ಕಥಾಶ್ರಯವನ್ನೇ ನೀವು ಹೇಳಿದ್ದೀರಿ. ಆ ಭಗವಾನ್ ದೇವ ಸರ್ವಭೂತಾತ್ಮಭಾವನನೇ ಈಶ.

12331005c ಅಹೋ ನಾರಾಯಣಂ ತೇಜೋ ದುರ್ದರ್ಶಂ ದ್ವಿಜಸತ್ತಮ||

12331006a ಯತ್ರಾವಿಶಂತಿ ಕಲ್ಪಾಂತೇ ಸರ್ವೇ ಬ್ರಹ್ಮಾದಯಃ ಸುರಾಃ|

12331006c ಋಷಯಶ್ಚ ಸಗಂಧರ್ವಾ ಯಚ್ಚ ಕಿಂ ಚಿಚ್ಚರಾಚರಮ್|

12331006e ನ ತತೋಽಸ್ತಿ ಪರಂ ಮನ್ಯೇ ಪಾವನಂ ದಿವಿ ಚೇಹ ಚ||

ದ್ವಿಜಸತ್ತಮ! ಅಹೋ! ನಾರಾಯಣನ ತೇಜಸ್ಸು ದುರ್ದರ್ಶವಾದುದು. ಕಲ್ಪದ ಅಂತ್ಯದಲ್ಲಿ ಬ್ರಹ್ಮಾದಿ ಸುರರೆಲ್ಲರೂ, ಋಷಿಗಳೂ, ಗಂಧರ್ವರೊಡನೆ ಚರಾಚರಗಳೆಲ್ಲವೂ ಅವನನ್ನೇ ಪ್ರವೇಶಿಸುತ್ತವೆ. ಇಲ್ಲಿ ಅಥವಾ ದಿವಿಯಲ್ಲಿ ಇದಕ್ಕಿಂತ ಪರಮ ಪಾವನ ತೇಜಸ್ಸು ಇಲ್ಲ ಎಂದು ತಿಳಿಯುತ್ತೇನೆ.

12331007a ಸರ್ವಾಶ್ರಮಾಭಿಗಮನಂ ಸರ್ವತೀರ್ಥಾವಗಾಹನಮ್|

12331007c ನ ತಥಾ ಫಲದಂ ಚಾಪಿ ನಾರಾಯಣಕಥಾ ಯಥಾ||

ಎಲ್ಲ ಆಶ್ರಮಗಳಿಗೆ ಹೋಗುವುದಾಗಲೀ ಸರ್ವತೀರ್ಥಗಳಿಗೆ ಹೋಗುವುದಾಗಲೀ ನಾರಯಣಕಥೆಯು ನೀಡುವಷ್ಟು ಫಲವನ್ನು ನೀಡುವುದಿಲ್ಲ.

12331008a ಸರ್ವಥಾ ಪಾವಿತಾಃ ಸ್ಮೇಹ ಶ್ರುತ್ವೇಮಾಮಾದಿತಃ ಕಥಾಮ್|

12331008c ಹರೇರ್ವಿಶ್ವೇಶ್ವರಸ್ಯೇಹ ಸರ್ವಪಾಪಪ್ರಣಾಶನೀಮ್||

ಸರ್ವಪಾಪಪ್ರಣಾಶನ ವಿಶ್ವೇಶ್ವರ ಹರಿಯ ಈ ಕಥೆಯನ್ನು ಮೊದಲಿನಿಂದಲೂ ಕೇಳಿ ನಾವೆಲ್ಲರೂ ಪಾವನರಾಗಿದ್ದೇವೆ.

12331009a ನ ಚಿತ್ರಂ ಕೃತವಾಂಸ್ತತ್ರ ಯದಾರ್ಯೋ ಮೇ ಧನಂಜಯಃ|

12331009c ವಾಸುದೇವಸಹಾಯೋ ಯಃ ಪ್ರಾಪ್ತವಾನ್ಜಯಮುತ್ತಮಮ್||

ನನ್ನ ಆರ್ಯ ಧನಂಜಯನು ವಾಸುದೇವನ ಸಹಾಯದಿಂದ ಉತ್ತಮ ಜಯವನ್ನು ಪಡೆದನು. ಇದರಲ್ಲಿ ಅವನು ಅತ್ಯಂತ ಅದ್ಭುತವಾದ ಕಾರ್ಯವನ್ನೇನೂ ಮಾಡಿದಂತಾಗಲಿಲ್ಲ.

12331010a ನ ಚಾಸ್ಯ ಕಿಂ ಚಿದಪ್ರಾಪ್ಯಂ ಮನ್ಯೇ ಲೋಕೇಷ್ವಪಿ ತ್ರಿಷು|

12331010c ತ್ರೈಲೋಕ್ಯನಾಥೋ ವಿಷ್ಣುಃ ಸ ಯಸ್ಯಾಸೀತ್ಸಾಹ್ಯಕೃತ್ಸಖಾ||

ತ್ರೈಲೋಕ್ಯನಾಥ ವಿಷ್ಣುವು ಯಾರಿಗೆ ಸಖನಾಗಿ ಸಹಾಯವನ್ನು ಮಾಡುತ್ತಾನೋ ಅವನಿಗೆ ಮೂರು ಲೋಕಗಳಲ್ಲಿಯೂ ಯಾವುದೂ ಅಪ್ರಾಪ್ಯವಲ್ಲವೆಂದು ನನ್ನ ಮತ.

12331011a ಧನ್ಯಾಶ್ಚ ಸರ್ವ ಏವಾಸನ್ಬ್ರಹ್ಮಂಸ್ತೇ ಮಮ ಪೂರ್ವಕಾಃ|

12331011c ಹಿತಾಯ ಶ್ರೇಯಸೇ ಚೈವ ಯೇಷಾಮಾಸೀಜ್ಜನಾರ್ದನಃ||

ಬ್ರಹ್ಮನ್! ಯಾರ ಹಿತ ಮತ್ತು ಶ್ರೇಯಸ್ಸಿಗೆ ಜನಾರ್ದನನಿದ್ದನೋ ಆ ನನ್ನ ಪೂರ್ವಜರು ಎಲ್ಲರೂ ಧನ್ಯರೇ ಎಂದು ನನ್ನ ಮತ.

12331012a ತಪಸಾಪಿ ನ ದೃಶ್ಯೋ[2] ಹಿ ಭಗವಾಽಲ್ಲೋಕಪೂಜಿತಃ|

12331012c ಯಂ ದೃಷ್ಟವಂತಸ್ತೇ ಸಾಕ್ಷಾಚ್ಚ್ರೀವತ್ಸಾಂಕವಿಭೂಷಣಮ್||

ಆ ಭಗವಾನ್ ಲೋಕಪೂಜಿತನು ತಪಸ್ಸಿನಿಂದಲೂ ನೋಡಲು ದೊರಕುವವನಲ್ಲ. ಅಂಥಹ ಶ್ರೀವತ್ಸಾಂಕವಿಭೂಷಣನನ್ನು ಅವರು ಸಾಕ್ಷಾತ್ ಕಂಡಿದ್ದರು.

12331013a ತೇಭ್ಯೋ ಧನ್ಯತರಶ್ಚೈವ ನಾರದಃ ಪರಮೇಷ್ಠಿಜಃ|

12331013c ನ ಚಾಲ್ಪತೇಜಸಮೃಷಿಂ ವೇದ್ಮಿ ನಾರದಮವ್ಯಯಮ್|

12331013e ಶ್ವೇತದ್ವೀಪಂ ಸಮಾಸಾದ್ಯ ಯೇನ ದೃಷ್ಟಃ ಸ್ವಯಂ ಹರಿಃ||

ಅವರಿಗಿಂತಲೂ ಹೆಚ್ಚು ಧನ್ಯನಾಗಿದ್ದವನು ಪರಮೇಷ್ಠಿಯ ಮಗ ನಾರದನೇ ಸರಿ. ನಾರದ ಅವ್ಯಯನು ಅಲ್ಪತೇಜಸ್ಸಿರುವ ಋಷಿಯೆಂದು ನನಗನಿಸುವುದಿಲ್ಲ. ಶ್ವೇತದ್ವೀಪಕ್ಕೆ ಹೋಗಿ ಸ್ವಯಂ ಹರಿಯನ್ನು ಕಂಡನು.

12331014a ದೇವಪ್ರಸಾದಾನುಗತಂ ವ್ಯಕ್ತಂ ತತ್ತಸ್ಯ ದರ್ಶನಮ್|

12331014c ಯದ್ದೃಷ್ಟವಾಂಸ್ತದಾ ದೇವಮನಿರುದ್ಧತನೌ ಸ್ಥಿತಮ್||

ಅಲ್ಲಿ ನಿಂತಿದ್ದ ದೇವ ಮತ್ತು ಅನಿರುದ್ಧರಿಬ್ಬರನ್ನೂ ನೋಡಿದ ನಾರದನಿಗೆ ಅವರ ದರ್ಶನವು ದೇವಪ್ರಸಾದದಿಂದಲೇ ದೊರಕಿರಬೇಕು.

12331015a ಬದರೀಮಾಶ್ರಮಂ ಯತ್ತು ನಾರದಃ ಪ್ರಾದ್ರವತ್ಪುನಃ|

12331015c ನರನಾರಾಯಣೌ ದ್ರಷ್ಟುಂ ಕಿಂ ನು ತತ್ಕಾರಣಂ ಮುನೇ||

ಮುನೇ! ಪುನಃ ನಾರದನು ನರನಾರಾಯಣರನ್ನು ನೋಡಲು ಬದರಿಕಾಶ್ರಮಕ್ಕೆ ಏಕೆ ಹೋದನು?

12331016a ಶ್ವೇತದ್ವೀಪಾನ್ನಿವೃತ್ತಶ್ಚ ನಾರದಃ ಪರಮೇಷ್ಠಿಜಃ|

12331016c ಬದರೀಮಾಶ್ರಮಂ ಪ್ರಾಪ್ಯ ಸಮಾಗಮ್ಯ ಚ ತಾವೃಷೀ||

12331017a ಕಿಯಂತಂ ಕಾಲಮವಸತ್ಕಾಃ ಕಥಾಃ ಪೃಷ್ಟವಾಂಶ್ಚ ಸಃ|

ಪರಮೇಷ್ಠಿಜ ನಾರದನು ಶ್ವೇತದ್ವೀಪದಿಂದ ಹಿಂದಿರುಗಿ ಬದರಿಕಾಶ್ರಮವನ್ನು ತಲುಪಿ ಆ ಋಷಿಗಳನ್ನು ಸಂದರ್ಶಿಸಿ ಎಷ್ಟು ಸಮಯದವರೆಗೆ ಅಲ್ಲಿದ್ದನು? ಅವನು ಏನನ್ನು ಕೇಳಿದನು?

12331017c ಶ್ವೇತದ್ವೀಪಾದುಪಾವೃತ್ತೇ ತಸ್ಮಿನ್ವಾ ಸುಮಹಾತ್ಮನಿ||

12331018a ಕಿಮಬ್ರೂತಾಂ ಮಹಾತ್ಮಾನೌ ನರನಾರಾಯಣಾವೃಷೀ|

12331018c ತದೇತನ್ಮೇ ಯಥಾತತ್ತ್ವಂ ಸರ್ವಮಾಖ್ಯಾತುಮರ್ಹಸಿ||

ಅಥವಾ ಶ್ವೇತದ್ವೀಪದಿಂದ ಹಿಂದಿರುಗಿದ ಆ ಮಹಾತ್ಮನಿಗೆ ಮಹಾತ್ಮರಾದ ನರನಾರಾಯಣ ಋಷಿಗಳು ಅವನಿಗೆ ಏನನ್ನು ಹೇಳಿದರು? ಇವೆಲ್ಲವನ್ನೂ ನೀನು ಹೇಳಬೇಕು.”

12331019 ವೈಶಂಪಾಯನ ಉವಾಚ|

12331019a ನಮೋ ಭಗವತೇ ತಸ್ಮೈ ವ್ಯಾಸಾಯಾಮಿತತೇಜಸೇ|

12331019c ಯಸ್ಯ ಪ್ರಸಾದಾದ್ವಕ್ಷ್ಯಾಮಿ ನಾರಾಯಣಕಥಾಮಿಮಾಮ್||

ವೈಶಂಪಾಯನನು ಹೇಳಿದನು: “ಯಾರ ಪ್ರಸಾದದಿಂದ ಈ ನಾರಾಯಣಕಥೆಯನ್ನು ಹೇಳುತ್ತಿದ್ದೇನೋ ಆ ಅಮಿತತೇಜಸ್ವೀ ಭಗವಂತ ವ್ಯಾಸನಿಗೆ ಸಮಸ್ಕಾರವು.

12331020a ಪ್ರಾಪ್ಯ ಶ್ವೇತಂ ಮಹಾದ್ವೀಪಂ ದೃಷ್ಟ್ವಾ ಚ ಹರಿಮವ್ಯಯಮ್|

12331020c ನಿವೃತ್ತೋ ನಾರದೋ ರಾಜಂಸ್ತರಸಾ ಮೇರುಮಾಗಮತ್|

12331020e ಹೃದಯೇನೋದ್ವಹನ್ ಭಾರಂ ಯದುಕ್ತಂ ಪರಮಾತ್ಮನಾ||

ರಾಜನ್! ಮಹಾದ್ವೀಪ ಶ್ವೇತವನ್ನು ತಲುಪಿ ಅವ್ಯಯ ಹರಿಯನ್ನು ಕಂಡು ಪರಮಾತ್ಮನು ಹೇಳಿದ ಕಾರ್ಯಭಾರವನ್ನೇ ಹೃದಯದಲ್ಲಿ ಹೊತ್ತು ನಾರದನು ಹಿಂದಿರುಗಿ ಮೇರು ಪರ್ವತಕ್ಕೆ ಬಂದನು.

12331021a ಪಶ್ಚಾದಸ್ಯಾಭವದ್ರಾಜನ್ನಾತ್ಮನಃ ಸಾಧ್ವಸಂ ಮಹತ್|

12331021c ಯದ್ಗತ್ವಾ ದೂರಮಧ್ವಾನಂ ಕ್ಷೇಮೀ ಪುನರಿಹಾಗತಃ||

ರಾಜನ್! ನಂತರ ಅವನು ಅಷ್ಟೊಂದು ದೂರ ಪ್ರಯಾಣಮಾಡಿಯೂ ಕ್ಷೇಮಿಯಾಗಿ ಪುನಃ ಅಲ್ಲಿಗೆ ಬಂದುದು ಒಳ್ಳೆಯದೇ ಆಯಿತು ಎಂದು ತಿಳಿದುಕೊಂಡನು.

12331022a ತತೋ ಮೇರೋಃ ಪ್ರಚಕ್ರಾಮ ಪರ್ವತಂ ಗಂಧಮಾದನಮ್|

12331022c ನಿಪಪಾತ ಚ ಖಾತ್ತೂರ್ಣಂ ವಿಶಾಲಾಂ ಬದರೀಮನು||

ಅನಂತರ ಮೇರುವನ್ನು ಬಿಟ್ಟು ಗಂಧಮಾದನ ಪರ್ವತಕ್ಕೆ ಬಂದು ಕೂಡಲೇ ಅಲ್ಲಿ ವಿಶಾಲ ಬದರಿಕಾಶ್ರಮದಲ್ಲಿ ಆಕಾಶದಿಂದ ಕೆಳಗಿಳಿದನು.

12331023a ತತಃ ಸ ದದೃಶೇ ದೇವೌ ಪುರಾಣಾವೃಷಿಸತ್ತಮೌ|

12331023c ತಪಶ್ಚರಂತೌ ಸುಮಹದಾತ್ಮನಿಷ್ಠೌ ಮಹಾವ್ರತೌ||

ಅಲ್ಲಿ ಅವನು ಪುರಾಣ ಋಷಿಸತ್ತಮ ದೇವರಿಬ್ಬರೂ, ಮಹಾ ಆತ್ಮನಿಷ್ಠ ಮಹಾವ್ರತರು ತಪಸ್ಸನ್ನು ನಡೆಸುತ್ತಿದ್ದುದನ್ನು ನೋಡಿದನು.

12331024a ತೇಜಸಾಭ್ಯಧಿಕೌ ಸೂರ್ಯಾತ್ಸರ್ವಲೋಕವಿರೋಚನಾತ್|

12331024c ಶ್ರೀವತ್ಸಲಕ್ಷಣೌ ಪೂಜ್ಯೌ ಜಟಾಮಂಡಲಧಾರಿಣೌ||

12331025a ಜಾಲಪಾದಭುಜೌ ತೌ ತು ಪಾದಯೋಶ್ಚಕ್ರಲಕ್ಷಣೌ|

12331025c ವ್ಯೂಢೋರಸ್ಕೌ ದೀರ್ಘಭುಜೌ ತಥಾ ಮುಷ್ಕಚತುಷ್ಕಿಣೌ||

12331026a ಷಷ್ಟಿದಂತಾವಷ್ಟದಂಷ್ಟ್ರೌ ಮೇಘೌಘಸದೃಶಸ್ವನೌ|

12331026c ಸ್ವಾಸ್ಯೌ ಪೃಥುಲಲಾಟೌ ಚ ಸುಹನೂ ಸುಭ್ರುನಾಸಿಕೌ|

12331027a ಆತಪತ್ರೇಣ ಸದೃಶೇ ಶಿರಸೀ ದೇವಯೋಸ್ತಯೋಃ|

12331027c ಏವಂ ಲಕ್ಷಣಸಂಪನ್ನೌ ಮಹಾಪುರುಷಸಂಜ್ಞಿತೌ||

Nara Narayan - myIndiamyGloryಸರ್ವಲೋಕವನ್ನೂ ಬೆಳಗಿಸುವ ಸೂರ್ಯನಿಗಿಂತಲೂ ಅಧಿಕ ತೇಜಸ್ಸಿನಿಂದ ಅವರಿಬ್ಬರೂ ಕೂಡಿದ್ದರು. ಶ್ರೀವತ್ಸಲಕ್ಷಣದಿಂದ ಕೂಡಿದ್ದ ಆ ಪೂಜ್ಯರಿಬ್ಬರೂ ಜಟಾಮಂಡಲಗಳನ್ನು ಧರಿಸಿದ್ದರು. ಭುಜಗಳಲ್ಲಿ ಹಂಸಪಕ್ಷಿಯ ಗುರುತುಗಳನ್ನೂ, ಕಾಲುಗಳಲ್ಲಿ ಚಕ್ರದ ಗುರುತುಗಳನ್ನೂ ಹೊಂದಿದ್ದರು. ವಿಶಾಲವಕ್ಷಸ್ಥಳ ಮತ್ತು ದೀರ್ಘಭುಜಳಿದ್ದ ಅವರಿಗೆ ನಾಲ್ಕು ವೃಷಣಗಳಿದ್ದವು. ಅರವತ್ತು ಹಲ್ಲುಗಳಿದ್ದವು. ಎಂಟು ಕೋರೆಹಲ್ಲುಗಳಿದ್ದವು. ಮೇಘಸಮೂಹಗಳಿಂದ ಬರುವ ಗುಡುಗಿನ ಧ್ವನಿಯುಳ್ಳವರಾಗಿದ್ದರು. ಸುಂದರ ವದನವುಳ್ಳವರಾಗಿದ್ದರು. ವಿಶಾಲ ಹಣೆಯುಳ್ಳವರಾಗಿದ್ದರು. ಸುಂದರ ಹಲ್ಲುಗಳೂ ಸುಂದರ ನಾಸಿಕವೂ ಅವರದ್ದಾಗಿತ್ತು. ಆ ದೇವರ ಶಿರಗಳು ಛತ್ರಸದೃಶವಾಗಿದ್ದವು. ಇಂಥಹ ಲಕ್ಷಣಸಂಪನ್ನರಾದ ಮಹಾಪುರುಷರೆಂದು ಖ್ಯಾತರಾದ ಅವರನ್ನು ನಾರದನು  ನೋಡಿದನು.

12331028a ತೌ ದೃಷ್ಟ್ವಾ ನಾರದೋ ಹೃಷ್ಟಸ್ತಾಭ್ಯಾಂ ಚ ಪ್ರತಿಪೂಜಿತಃ|

12331028c ಸ್ವಾಗತೇನಾಭಿಭಾಷ್ಯಾಥ ಪೃಷ್ಟಶ್ಚಾನಾಮಯಂ ತದಾ||

ಅವರಿಬ್ಬರನ್ನೂ ನೋಡಿ ನಾರದನು ಹೃಷ್ಟನಾದನು. ಅವರು ಅವನನ್ನು ಪ್ರತಿಯಾಗಿ ಪೂಜಿಸಿದರು, ಸ್ವಾಗತವೆಂದರು ಮತ್ತು ಕುಶಲವನ್ನು ಕೇಳಿದರು.

12331029a ಬಭೂವಾಂತರ್ಗತಮತಿರ್ನಿರೀಕ್ಷ್ಯ ಪುರುಷೋತ್ತಮೌ|

12331029c ಸದೋಗತಾಸ್ತತ್ರ ಯೇ ವೈ ಸರ್ವಭೂತನಮಸ್ಕೃತಾಃ||

12331030a ಶ್ವೇತದ್ವೀಪೇ ಮಯಾ ದೃಷ್ಟಾಸ್ತಾದೃಶಾವೃಷಿಸತ್ತಮೌ|

12331030c ಇತಿ ಸಂಚಿಂತ್ಯ ಮನಸಾ ಕೃತ್ವಾ ಚಾಭಿಪ್ರದಕ್ಷಿಣಮ್|

12331030e ಉಪೋಪವಿವಿಶೇ ತತ್ರ ಪೀಠೇ ಕುಶಮಯೇ ಶುಭೇ||

ಆ ಪುರುಷೋತ್ತಮರಿಬ್ಬರನ್ನೂ ನೋಡಿ ಮನಸ್ಸಿನಲ್ಲಿಯೇ “ಶ್ವೇತದ್ವೀಪದಲ್ಲಿ ನಾನು ನೋಡಿದ ಸರ್ವಭೂತನಮಸ್ಕೃತ ಋಷಿಸತ್ತಮರೇ ಇವರು” ಎಂದು ಯೋಚಿಸಿದನು. ಹೀಗೆ ಮನಸ್ಸಿನಲ್ಲೇ ಯೋಚಿಸಿ ಪ್ರದಕ್ಷಿಣೆ ಮಾಡಿ ಶುಭ ಕುಶಮಯ ಪೀಠದಲ್ಲಿ ನಾರದನು ಕುಳಿತುಕೊಂಡನು.

12331031a ತತಸ್ತೌ ತಪಸಾಂ ವಾಸೌ ಯಶಸಾಂ ತೇಜಸಾಮಪಿ|

12331031c ಋಷೀ ಶಮದಮೋಪೇತೌ ಕೃತ್ವಾ ಪೂರ್ವಾಹ್ಣಿಕಂ ವಿಧಿಮ್||

12331032a ಪಶ್ಚಾನ್ನಾರದಮವ್ಯಗ್ರೌ ಪಾದ್ಯಾರ್ಘ್ಯಾಭ್ಯಾಂ ಪ್ರಪೂಜ್ಯ ಚ|

12331032c ಪೀಠಯೋಶ್ಚೋಪವಿಷ್ಟೌ ತೌ ಕೃತಾತಿಥ್ಯಾಹ್ನಿಕೌ ನೃಪ||

ತಪಸ್ಸು, ಯಶಸ್ಸು ಮತ್ತು ತೇಜಸ್ಸುಗಳ ವಾಸಸ್ಥಾನರಾಗಿದ್ದ ಅವರಿಬ್ಬರು ಶಮದಮೋಪೇತ ಋಷಿಗಳೂ ವಿಧಿವತ್ತಾಗಿ ಪೂರ್ವಾಹ್ಣಿಕ ಕರ್ಮಗಳನ್ನು ಪೂರೈಸಿ ಅನಂತರ ಅವ್ಯಗ್ರರಿಬ್ಬರೂ ನಾರದನನ್ನು ಪಾದ್ಯ-ಅರ್ಘ್ಯಗಳಿಂದ ಪೂಜಿಸಿದರು. ನೃಪ! ಆಹ್ನಿಕ ಕ್ರಿಯೆಯಗಳನ್ನು ಮಾಡಿ ಮುಗಿಸಿದ್ದ ಅವರಿಬ್ಬರೂ ಪೀಠಗಳಲ್ಲಿ ಕುಳಿತುಕೊಂಡರು.

12331033a ತೇಷು ತತ್ರೋಪವಿಷ್ಟೇಷು ಸ ದೇಶೋಽಭಿವ್ಯರಾಜತ|

12331033c ಆಜ್ಯಾಹುತಿಮಹಾಜ್ವಾಲೈರ್ಯಜ್ಞವಾಟೋಽಗ್ನಿಭಿರ್ಯಥಾ||

ಅವರು ಅಲ್ಲಿ ಕುಳಿತಿರಲು ಆ ಪ್ರದೇಶವು ಆಜ್ಯಾಹುತಿಗಳಿಂದ ಉಂಟಾದ ಮಹಾಜ್ವಾಲೆಗಳಿಂದ ಯುಕ್ತವಾದ ಅಗ್ನಿಗಳಿಂದ ಪ್ರಕಾಶಿಸುವಂತೆ ಪ್ರಕಾಶಿಸಿತು.

12331034a ಅಥ ನಾರಾಯಣಸ್ತತ್ರ ನಾರದಂ ವಾಕ್ಯಮಬ್ರವೀತ್|

12331034c ಸುಖೋಪವಿಷ್ಟಂ ವಿಶ್ರಾಂತಂ ಕೃತಾತಿಥ್ಯಂ ಸುಖಸ್ಥಿತಮ್||

ಬಳಿಕ ಆತಿಥ್ಯವನ್ನು ಪಡೆದು ಸುಖಾಸೀನರಾಗಿ ವಿಶ್ರಾಂತಿಹೊಂದಿದ ನಾರದನಿಗೆ ನಾರಾಯಣನು ಈ ಮಾತನ್ನಾಡಿದನು:

12331035a ಅಪೀದಾನೀಂ ಸ ಭಗವಾನ್ಪರಮಾತ್ಮಾ ಸನಾತನಃ|

12331035c ಶ್ವೇತದ್ವೀಪೇ ತ್ವಯಾ ದೃಷ್ಟ ಆವಯೋಃ ಪ್ರಕೃತಿಃ ಪರಾ||

“ನಮ್ಮ ಪರಾಪ್ರಕೃತಿಯಾದ ಪೂಜ್ಯ ಸನಾತನ ಪರಮಾತ್ಮನನ್ನು ನೀನು ಶ್ವೇತದ್ವೀಪದಲ್ಲಿ ಈಗತಾನೇ ನೋಡಿ ಬಂದೆಯಲ್ಲವೇ?”

12331036 ನಾರದ ಉವಾಚ|

12331036a ದೃಷ್ಟೋ ಮೇ ಪುರುಷಃ ಶ್ರೀಮಾನ್ವಿಶ್ವರೂಪಧರೋಽವ್ಯಯಃ|

12331036c ಸರ್ವೇ ಹಿ ಲೋಕಾಸ್ತತ್ರಸ್ಥಾಸ್ತಥಾ ದೇವಾಃ ಸಹರ್ಷಿಭಿಃ|

12331036e ಅದ್ಯಾಪಿ ಚೈನಂ ಪಶ್ಯಾಮಿ ಯುವಾಂ ಪಶ್ಯನ್ಸನಾತನೌ||

ನಾರದನು ಹೇಳಿದನು: “ನಾನು ಪುರುಷ, ಶ್ರೀಮಾನ್, ವಿಶ್ವರೂಪಧರ, ಅವ್ಯಯನನ್ನು ನೋಡಿದೆನು. ಸರ್ವ ಲೋಕಗಳೂ ಋಷಿಗಳೊಂದಿಗೆ ದೇವತೆಗಳೂ ಅವನಲ್ಲಿಯೇ ಇವೆ. ಸನಾತನರಾದ ನಿಮ್ಮನ್ನು ನೋಡಿ ಅವನನ್ನು ನೋಡುತ್ತಿರುವಂತೆಯೇ ಭಾಸವಾಗುತ್ತಿದೆ.

12331037a ಯೈರ್ಲಕ್ಷಣೈರುಪೇತಃ ಸ ಹರಿರವ್ಯಕ್ತರೂಪಧೃಕ್|

12331037c ತೈರ್ಲಕ್ಷಣೈರುಪೇತೌ ಹಿ ವ್ಯಕ್ತರೂಪಧರೌ ಯುವಾಮ್||

ಅವ್ಯಕ್ತರೂಪವನ್ನು ಧರಿಸಿರುವ ಹರಿಯು ಯಾವ ಲಕ್ಷಣಗಳಿಂದ ಕೂಡಿರುವನೋ ಅವೇ ಲಕ್ಷಣಗಳಿಂದ ವ್ಯಕ್ತರೂಪಧರರಾದ ನೀವಿಬ್ಬರೂ ಕೂಡಿದ್ದೀರಿ.

12331038a ದೃಷ್ಟೌ ಮಯಾ ಯುವಾಂ ತತ್ರ ತಸ್ಯ ದೇವಸ್ಯ ಪಾರ್ಶ್ವತಃ|

12331038c ಇಹ ಚೈವಾಗತೋಽಸ್ಮ್ಯದ್ಯ ವಿಸೃಷ್ಟಃ ಪರಮಾತ್ಮನಾ||

ಅಲ್ಲಿ ಆ ದೇವನ ಪಕ್ಕದಲ್ಲಿಯೇ ನಿಮ್ಮಿಬ್ಬರನ್ನೂ ನೋಡಿದ್ದೆ. ಪರಮಾತ್ಮನಿಂದ ಕಳುಹಿಸಲ್ಪಟ್ಟ ನಾನು ನೇರವಾಗಿ ಇಲ್ಲಿಗೇ ಆಗಮಿಸಿದ್ದೇನೆ.

12331039a ಕೋ ಹಿ ನಾಮ ಭವೇತ್ತಸ್ಯ ತೇಜಸಾ ಯಶಸಾ ಶ್ರಿಯಾ|

12331039c ಸದೃಶಸ್ತ್ರಿಷು ಲೋಕೇಷು ಋತೇ ಧರ್ಮಾತ್ಮಜೌ ಯುವಾಮ್||

ಧರ್ಮನ ಮಕ್ಕಳಾದ ನಿಮ್ಮಿಬ್ಬರನ್ನು ಬಿಟ್ಟು ತೇಜಸ್ಸು, ಯಶಸ್ಸು ಮತ್ತು ಶ್ರೀಗಳಿಂದ ಕೂಡಿರುವ ಅವನ ಸದೃಶರಾದವರು ಈ ಮೂರು ಲೋಕಗಳಲ್ಲಿಯೂ ಬೇರೆ ಯಾರಿದ್ದಾರೆ?

12331040a ತೇನ ಮೇ ಕಥಿತಂ ಪೂರ್ವಂ ನಾಮ ಕ್ಷೇತ್ರಜ್ಞಸಂಜ್ಞಿತಮ್|

12331040c ಪ್ರಾದುರ್ಭಾವಾಶ್ಚ ಕಥಿತಾ ಭವಿಷ್ಯಂತಿ ಹಿ ಯೇ ಯಥಾ||

ಮೊದಲು ಅವನು ನನಗೆ ಕ್ಷೇತ್ರಜ್ಞ ಎಂದು ಕರೆಯಲ್ಪಡುವುದರ ಕುರಿತು ಹೇಳಿದನು. ಹಾಗೆಯೇ ಅವನು ಅವನ ಹಿಂದಿನ ಮತ್ತು ಮುಂದೆ ಆಗುವ ಅವತಾರಗಳ ಕುರಿತು ಹೇಳಿದನು.

12331041a ತತ್ರ ಯೇ ಪುರುಷಾಃ ಶ್ವೇತಾಃ ಪಂಚೇಂದ್ರಿಯವಿವರ್ಜಿತಾಃ|

12331041c ಪ್ರತಿಬುದ್ಧಾಶ್ಚ ತೇ ಸರ್ವೇ ಭಕ್ತಾಶ್ಚ ಪುರುಷೋತ್ತಮಮ್||

ಅಲ್ಲಿರುವ ಪುರುಷರು ಶ್ವೇತವರ್ಣದವರು ಮತ್ತು ಪಂಚೇಂದ್ರಿಯಗಳನ್ನು ವರ್ಜಿಸಿದವರು. ಅವರೆಲ್ಲರೂ ಜ್ಞಾನಿಗಳು ಮತ್ತು ಪುರುಷೋತ್ತಮನ ಭಕ್ತರು.

12331042a ತೇಽರ್ಚಯಂತಿ ಸದಾ ದೇವಂ ತೈಃ ಸಾರ್ಧಂ ರಮತೇ ಚ ಸಃ|

12331042c ಪ್ರಿಯಭಕ್ತೋ ಹಿ ಭಗವಾನ್ಪರಮಾತ್ಮಾ ದ್ವಿಜಪ್ರಿಯಃ||

ಅವರು ಸದಾ ದೇವನನ್ನು ಅರ್ಚಿಸುತ್ತಾರೆ. ಅವನೂ ಕೂಡ ಅವರೊಂದಿಗೆ ರಮಿಸುತ್ತಾನೆ. ದ್ವಿಜಪ್ರಿಯನಾದ ಭಗವಾನ್ ಪರಮಾತ್ಮನು ಭಕ್ತಪ್ರಿಯನು.

12331043a ರಮತೇ ಸೋಽರ್ಚ್ಯಮಾನೋ ಹಿ ಸದಾ ಭಾಗವತಪ್ರಿಯಃ|

12331043c ವಿಶ್ವಭುಕ್ಸರ್ವಗೋ ದೇವೋ ಬಾಂಧವೋ ಭಕ್ತವತ್ಸಲಃ|

12331043e ಸ ಕರ್ತಾ ಕಾರಣಂ ಚೈವ ಕಾರ್ಯಂ ಚಾತಿಬಲದ್ಯುತಿಃ||

ಆ ವಿಶ್ವಭುಕ್ ಸರ್ವಗ ಬಾಂಧವ ಭಕ್ತವತ್ಸಲ ದೇವನು ಸದಾ ಭಾಗವತಪ್ರಿಯನು. ಅರ್ಚಿಸಿದರೆ ರಮಿಸುವವನು. ಅವನೇ ಕರ್ತ, ಕಾರಣ ಮತ್ತು ಕಾರ್ಯ. ಅವನು ಅತಿಬಲ. ದ್ಯುತಿ.

12331044a ತಪಸಾ ಯೋಜ್ಯ ಸೋಽತ್ಮಾನಂ ಶ್ವೇತದ್ವೀಪಾತ್ಪರಂ ಹಿ ಯತ್|

12331044c ತೇಜ ಇತ್ಯಭಿವಿಖ್ಯಾತಂ ಸ್ವಯಂಭಾಸಾವಭಾಸಿತಮ್||

ಶ್ವೇತದ್ವೀಪದ ಆಚೆ ಸ್ವಪ್ರಕಾಶದಿಂದಲೇ ಪ್ರಕಾಶಿತವಾದ ತೇಜಃಪುಂಜವಾದ ತೇಜಸ್ಸೆಂದೇ ವಿಖ್ಯಾತ ಪ್ರದೇಶದಲ್ಲಿ ಅವನು ತನ್ನನ್ನು ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದಾನೆ.

12331045a ಶಾಂತಿಃ ಸಾ ತ್ರಿಷು ಲೋಕೇಷು ಸಿದ್ಧಾನಾಂ ಭಾವಿತಾತ್ಮನಾಮ್|

12331045c ಏತಯಾ ಶುಭಯಾ ಬುದ್ಧ್ಯಾ ನೈಷ್ಠಿಕಂ ವ್ರತಮಾಸ್ಥಿತಃ||

ಮೂರು ಲೋಕಗಳಲ್ಲಿಯೂ ಅವನು ಶಾಂತಿಯನ್ನು ಸ್ಥಾಪಿಸಿದ್ದಾನೆ. ಸಿದ್ಧರ ಭಾವಿತಾತ್ಮರ ಶುಭ ಬುದ್ಧಿಯಿಂದ ನೈಷ್ಠಿಕ ವ್ರತವನ್ನು ಆಶ್ರಯಿಸಿದ್ದಾನೆ.

12331046a ನ ತತ್ರ ಸೂರ್ಯಸ್ತಪತಿ ನ ಸೋಮೋಽಭಿವಿರಾಜತೇ|

12331046c ನ ವಾಯುರ್ವಾತಿ ದೇವೇಶೇ ತಪಶ್ಚರತಿ ದುಶ್ಚರಮ್||

ಅಲ್ಲಿ ಸೂರ್ಯನು ಸುಡುವುದಿಲ್ಲ. ಸೋಮನು ಬೆಳಗುವುದಿಲ್ಲ. ದೇವೇಶನ ದುಶ್ಚರ ತಪಸ್ಸು ನಡೆಯುತ್ತಿರುವ ಅಲ್ಲಿ ವಾಯುವೂ ಬೀಸುವುದಿಲ್ಲ.

12331047a ವೇದೀಮಷ್ಟತಲೋತ್ಸೇಧಾಂ ಭೂಮಾವಾಸ್ಥಾಯ ವಿಶ್ವಭುಕ್|

12331047c ಏಕಪಾದಸ್ಥಿತೋ ದೇವ ಊರ್ಧ್ವಬಾಹುರುದಙ್ಮುಖಃ|

12331047e ಸಾಂಗಾನಾವರ್ತಯನ್ವೇದಾಂಸ್ತಪಸ್ತೇಪೇ ಸುದುಶ್ಚರಮ್||

ವಿಶ್ವಭುಕ್ ದೇವನು ಭೂಮಿಯಿಂದ ಎಂಟು ಅಂಗುಲಗಳಷ್ಟು ಎತ್ತರವಾಗಿರುವ ವೇದಿಯಲ್ಲಿ ತೋಳುಗಳನ್ನು ಮೇಲಕ್ಕೆತ್ತಿ ಉತ್ತರಾಭಿಮುಖನಾಗಿ ಒಂದೇ ಕಾಲಿನಲ್ಲಿ ನಿಂತು ಷಡಂಗಯುಕ್ತ ವೇದಗಳನ್ನು ಆವರ್ತನೆಮಾಡುತ್ತಾ ಅತ್ಯಂತ ಕಠೋರ ತಪಸ್ಸನ್ನು ತಪಿಸುತ್ತಿದ್ದಾನೆ.

12331048a ಯದ್ಬ್ರಹ್ಮಾ ಋಷಯಶ್ಚೈವ ಸ್ವಯಂ ಪಶುಪತಿಶ್ಚ ಯತ್|

12331048c ಶೇಷಾಶ್ಚ ವಿಬುಧಶ್ರೇಷ್ಠಾ ದೈತ್ಯದಾನವರಾಕ್ಷಸಾಃ||

12331049a ನಾಗಾಃ ಸುಪರ್ಣಾ ಗಂಧರ್ವಾಃ ಸಿದ್ಧಾ ರಾಜರ್ಷಯಶ್ಚ ಯೇ|

12331049c ಹವ್ಯಂ ಕವ್ಯಂ ಚ ಸತತಂ ವಿಧಿಪೂರ್ವಂ ಪ್ರಯುಂಜತೇ|

12331049e ಕೃತ್ಸ್ನಂ ತತ್ತಸ್ಯ ದೇವಸ್ಯ ಚರಣಾವುಪತಿಷ್ಠತಿ||

ಬ್ರಹ್ಮ, ಋಷಿಗಳು, ಸ್ವಯಂ ಪಶುಪತಿ, ಉಳಿದ ವಿಬುಧಶ್ರೇಷ್ಠರು, ದೈತ್ಯ-ದಾನವ-ರಾಕ್ಷಸರು, ನಾಗರು, ಸುಪರ್ಣರು, ಗಂಧರ್ವರು, ಸಿದ್ಧರು, ರಾಜರ್ಷಿಗಳು ಎಲ್ಲರೂ ವಿಧಿಯುಕ್ತವಾದ ಹವ್ಯ-ಕವ್ಯಗಳನ್ನು ಸತತವಾಗಿ ಅರ್ಪಿಸುತ್ತಲೇ ಇರುತ್ತಾರೆ. ಅವೆಲ್ಲವೂ ದೇವನ ಚರಣಗಳನ್ನೇ ಹೊಂದುತ್ತವೆ.

12331050a ಯಾಃ ಕ್ರಿಯಾಃ ಸಂಪ್ರಯುಕ್ತಾಸ್ತು ಏಕಾಂತಗತಬುದ್ಧಿಭಿಃ|

12331050c ತಾಃ ಸರ್ವಾಃ ಶಿರಸಾ ದೇವಃ ಪ್ರತಿಗೃಹ್ಣಾತಿ ವೈ ಸ್ವಯಮ್||

ಏಕಾಂತಗತಬುದ್ಧಿಯಿಂದ ಒಪ್ಪಿಸುವ ಕ್ರಿಯೆಗಳೆಲ್ಲವನ್ನೂ ಸ್ವಯಂ ದೇವನು ಶಿರಸಾ ಪ್ರತಿಗ್ರಹಿಸುತ್ತಾನೆ.

12331051a ನ ತಸ್ಯಾನ್ಯಃ ಪ್ರಿಯತರಃ ಪ್ರತಿಬುದ್ಧೈರ್ಮಹಾತ್ಮಭಿಃ|

12331051c ವಿದ್ಯತೇ ತ್ರಿಷು ಲೋಕೇಷು ತತೋಽಸ್ಮ್ಯೈಕಾಂತಿಕಂ ಗತಃ|

ಜ್ಞಾನಿಗಳಾದ ಮಹಾತ್ಮಗಳಿಗೂ ಪ್ರಿಯತರರಾದವರು ಮೂರು ಲೋಕಗಳಲ್ಲಿಯೂ ಅವನಿಗೆ ಬೇರೆ ಯಾರೂ ಇಲ್ಲ ಎಂದು ತಿಳಿದಿದ್ದೇನೆ. ಆದುದರಿಂದ ನಾನು ಏಕಾಂತಿಕವನ್ನು ನಡೆಸಿದೆನು.

12331051e ಇಹ ಚೈವಾಗತಸ್ತೇನ ವಿಸೃಷ್ಟಃ ಪರಮಾತ್ಮನಾ||

12331052a ಏವಂ ಮೇ ಭಗವಾನ್ದೇವಃ ಸ್ವಯಮಾಖ್ಯಾತವಾನ್ ಹರಿಃ|

12331052c ಆಸಿಷ್ಯೇ ತತ್ಪರೋ ಭೂತ್ವಾ ಯುವಾಭ್ಯಾಂ ಸಹ ನಿತ್ಯಶಃ||

ಪರಮಾತ್ಮನಿಂದ ಕಳುಹಿಸಲ್ಪಟ್ಟ ನಾನು ನೇರವಾಗಿ ಇಲ್ಲಿಗೇ ಬಂದೆನು. ಸ್ವಯಂ ಭಗವಾನ್ ದೇವ ಹರಿಯೇ ನನಗೆ ಇದನ್ನು ಹೇಳಿದನು. ಈಗ ನಾನು ಅವನಲ್ಲಿಯೇ ತತ್ಪರನಾಗಿ ನಿಮ್ಮೊಡನೆ ಇಲ್ಲಿಯೇ ಇದ್ದುಬಿಡುತ್ತೇನೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ನಾರಾಯಣೀಯೇ ಏಕತ್ರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ನಾರಾಯಣೀಯ ಎನ್ನುವ ಮುನ್ನೂರಾಮೂವತ್ತೊಂದನೇ ಅಧ್ಯಾಯವು.

Pin on Paisley

[1] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಅಧಿಕ ಶ್ಲೋಕಗಳಿವೆ: ಶೌನಕ ಉವಾಚ| ಸೌತೇ ಸುಮಹಾಖ್ಯಾನಂ ಭವತಾ ಪರಿಕೀರ್ತಿತಮ್| ಯಚ್ಚ್ರುತ್ವಾ ಮುನಯಃ ಸರ್ವೇ ವಿಸ್ಮಯಂ ಪರಮಂ ಗತಾಃ|| ಸರ್ವಾಶ್ರಮಾಭಿಗಮನಂ ಸರ್ವತೀರ್ಥಾವಗಾಹನಮ್| ನ ತಥಾ ಫಲದಂ ಸೌತೇ ನಾರಾಯಣಕಥಾ ಯಥಾ|| ಪಾವಿತಾಂಗ ಸ್ಮ ಸಂವೃತ್ತಾಃ ಶ್ರುತ್ವೇಮಾಮಾದಿತಃ ಕಥಾಮ್| ನಾರಾಯಣಾಶ್ರಯಾಂ ಪುಣ್ಯಾಂ ಸರ್ವಪಾಪಪ್ರಮೋಚನೀಮ್|| ದುರ್ದರ್ಶೋ ಭಗವಾನ್ದೇವಃ ಸರ್ವಲೋಕನಮಸ್ಕೃತಃ| ಸ ಬ್ರಹ್ಮಕೈಃ ಸುರೈಃ ಕೃತ್ಸೈರನ್ನ್ಯೈಶ್ಚೈವ ಮಹರ್ಷಿಭಿಃ|| ದೃಷ್ಟವಾನ್ನಾರದೋ ಯತ್ತು ದೇವಂ ನಾರಾಯಣಂ ಹರಿಮ್| ನೂನಮೇತದ್ಧ್ಯನುಮತಂ ತಸ್ಯ ದೇವಸ್ಯ ಸೂತಜ| ಯದೃಷ್ಟವಾನ್ ಜಗನ್ನಾಥಮನಿರುದ್ಧತನೌ ಸ್ಥಿತಮ್| ಯತ್ರಾದ್ರವತ್ಪುನರ್ಭೂಯೋ ನಾರದೋ ದೇವಸತ್ತಮೌ| ನರನಾರಾಯಣೌ ದ್ರಷ್ಟುಂ ಕರಣಂ ತದ್ಬ್ರವೀಹಿ ಮೇ|| ಸೂತ ಉವಾಚ| ತಸ್ಮಿನ್ಯಜ್ಞೇ ವರ್ತಮಾನೇ ರಾಜ್ಞಃ ಪಾರಿಕ್ಷಿತಸ್ಯ ವೈ| ಕರ್ಮಾಂತರೇಷು ವಿಧಿವದ್ವರ್ತಮಾನೇಷು ಶೌನಕ|| ಕೃಷ್ಣದ್ವೈಪಾಯನಂ ಋಷಿಂ ವೇದನಿಧಿಂ ಪ್ರಭುಮ್| ಪರಿಪಪ್ರಚ್ಚ ರಾಜೇಂದ್ರಃ ಪಿತಾಮಹಪಿತಾಮಹಮ್|| ಸ್ವೇತದ್ವೀಪಾನ್ನಿವೃತ್ತೇನ ನಾರದೇನ ಸುರರ್ಷಿಣಾ| ಧ್ಯಾಯತಾ ಭಗವದ್ವಾಕ್ಯಂ ಚೇಷ್ಟಿತಂ ಕಿಮತಃ ಪರಮ್|| ಬದರ್ಯಾಶ್ರಮಾಗಮ್ಯಸಮಾ ಗಮ್ಯಚ  ತಾವೃಷೀ| ಕಿಯಂತಂ ಕಾಲಮವಸತ್ಯಾಂ ಕಥಾಂ ಪೃಷ್ಟವಾಂಶ್ಚಸಃ ||

[2] ಸುದೃಶ್ಯೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.