Shanti Parva: Chapter 316

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೬

ನಾರದನು ಶುಕನಿಗೆ ವೈರಾಗ್ಯ ಮತ್ತು ಜ್ಞಾನದ ಕುರಿತು ಉಪದೇಶಿಸಿದುದು (1-59).

12316001 ಭೀಷ್ಮ ಉವಾಚ|

12316001a ಏತಸ್ಮಿನ್ನಂತರೇ ಶೂನ್ಯೇ ನಾರದಃ ಸಮುಪಾಗಮತ್|

12316001c ಶುಕಂ ಸ್ವಾಧ್ಯಾಯನಿರತಂ ವೇದಾರ್ಥಾನ್ವಕ್ತುಮೀಪ್ಸಿತಾನ್||

ಭೀಷ್ಮನು ಹೇಳಿದನು: “ವ್ಯಾಸನು ಆಶ್ರಮದಲ್ಲಿ ಇರದಿದ್ದ ಸಮಯದಲ್ಲಿ ನಾರದನು ಸ್ವಾಧ್ಯಾಯನಿರತನಾಗಿದ್ದ ಶುಕನಿಗೆ ವೇದಾರ್ಥಗಳನ್ನು ಹೇಳಲು ಬಯಸಿ ಅವನ ಬಳಿ ಆಗಮಿಸಿದನು.

12316002a ದೇವರ್ಷಿಂ ತು ಶುಕೋ ದೃಷ್ಟ್ವಾ ನಾರದಂ ಸಮುಪಸ್ಥಿತಮ್|

12316002c ಅರ್ಘ್ಯಪೂರ್ವೇಣ ವಿಧಿನಾ ವೇದೋಕ್ತೇನಾಭ್ಯಪೂಜಯತ್||

ದೇವರ್ಷಿ ನಾರದನು ಉಪಸ್ಥಿತನಾಗಿದುದನ್ನು ನೋಡಿ ಶುಕನು ಅರ್ಘ್ಯವೇ ಮೊದಲಾದ ವೇದೋಕ್ತ ವಿಧಿಗಳಿಂದ ಅವನನ್ನು ಪೂಜಿಸಿದನು.

12316003a ನಾರದೋಽಥಾಬ್ರವೀತ್ಪ್ರೀತೋ ಬ್ರೂಹಿ ಬ್ರಹ್ಮವಿದಾಂ ವರ|

12316003c ಕೇನ ತ್ವಾಂ ಶ್ರೇಯಸಾ ತಾತ ಯೋಜಯಾಮೀತಿ ಹೃಷ್ಟವತ್||

ಪ್ರೀತನಾದ ನಾರದನು ಹೇಳಿದನು: “ಬ್ರಹ್ಮವಿದರಲ್ಲಿ ಶ್ರೇಷ್ಠ! ಮಗೂ! ನಿನ್ನನ್ನು ಯಾವ ಶ್ರೇಯಸ್ಸಿನಿಂದ ಸಂತೋಷಗೊಳಿಸಲಿ?”

12316004a ನಾರದಸ್ಯ ವಚಃ ಶ್ರುತ್ವಾ ಶುಕಃ ಪ್ರೋವಾಚ ಭಾರತ|

12316004c ಅಸ್ಮಿಽಲ್ಲೋಕೇ ಹಿತಂ ಯತ್ಸ್ಯಾತ್ತೇನ ಮಾಂ ಯೋಕ್ತುಮರ್ಹಸಿ||

ಭಾರತ! ನಾರದನ ಮಾತನ್ನು ಕೇಳಿ ಶುಕನು ಉತ್ತರಿಸಿದನು: “ಈ ಲೋಕದಲ್ಲಿ ಯಾವುದರಿಂದ ಹಿತವಾಗುವುದೋ ಅದನ್ನೇ ನನಗೆ ಉಪದೇಶಿಸಿರಿ!”

12316005 ನಾರದ ಉವಾಚ|

12316005a ತತ್ತ್ವಂ ಜಿಜ್ಞಾಸತಾಂ ಪೂರ್ವಮೃಷೀಣಾಂ ಭಾವಿತಾತ್ಮನಾಮ್|

12316005c ಸನತ್ಕುಮಾರೋ ಭಗವಾನಿದಂ ವಚನಮಬ್ರವೀತ್||

ನಾರದನು ಹೇಳಿದನು: “ಹಿಂದೆ ತತ್ತ್ವದ ಕುರಿತು ಜಿಜ್ಞಾಸೆಮಾಡುತ್ತಿದ್ದ ಭಾವಿತಾತ್ಮ ಋಷಿಗಳಿಗೆ ಭಗವಾನ್ ಸನತ್ಕುಮಾರನು ಈ ಮಾತುಗಳನ್ನಾಡಿದ್ದನು:

12316006a ನಾಸ್ತಿ ವಿದ್ಯಾಸಮಂ ಚಕ್ಷುರ್ನಾಸ್ತಿ ವಿದ್ಯಾಸಮಂ ತಪಃ[1]|

12316006c ನಾಸ್ತಿ ರಾಗಸಮಂ ದುಃಖಂ ನಾಸ್ತಿ ತ್ಯಾಗಸಮಂ ಸುಖಮ್||

“ವಿದ್ಯೆಗೆ ಸಮನಾದ ಚಕ್ಷುವಿಲ್ಲ. ವಿದ್ಯೆಗೆ ಸಮಾನವಾದ ತಪಸ್ಸಿಲ್ಲ. ಅನುರಾಗಕ್ಕೆ ಸಮನಾದ ದುಃಖವಿಲ್ಲ ಮತ್ತು ತ್ಯಾಗಕ್ಕೆ ಸಮಾನ ಸುಖವಿಲ್ಲ.

12316007a ನಿವೃತ್ತಿಃ ಕರ್ಮಣಃ ಪಾಪಾತ್ಸತತಂ ಪುಣ್ಯಶೀಲತಾ|

12316007c ಸದ್ವೃತ್ತಿಃ ಸಮುದಾಚಾರಃ ಶ್ರೇಯ ಏತದನುತ್ತಮಮ್||

ಪಾಪಕರ್ಮಗಳಿಂದ ನಿವೃತ್ತಿಯನ್ನು ಹೊಂದುವುದು, ಸತತವೂ ಪುಣ್ಯಶೀಲನಾಗಿರುವುದು, ಸದ್ವೃತ್ತಿ, ಸಮುದಾಚರ – ಇವೇ ಶ್ರೇಯಸ್ಸಿಗೆ ಉತ್ತಮವಾದವುಗಳು.

12316008a ಮಾನುಷ್ಯಮಸುಖಂ ಪ್ರಾಪ್ಯ ಯಃ ಸಜ್ಜತಿ ಸ ಮುಹ್ಯತಿ|

12316008c ನಾಲಂ ಸ ದುಃಖಮೋಕ್ಷಾಯ ಸಂಗೋ ವೈ ದುಃಖಲಕ್ಷಣಮ್||

ಅಸುಖವಾಗಿರುವ ಈ ಮನುಷ್ಯತ್ವವನ್ನು ಪಡೆದುಕೊಂಡು ಯಾರು ಸುಖದಲ್ಲಿಯೇ ಆಸಕ್ತನಾಗಿರುತ್ತಾನೋ ಅವನು ಮೋಹಗೊಂಡವನು. ದುಃಖದಿಂದ ಮೋಕ್ಷಹೊಂದುವುದಕ್ಕೆ ಇದು ಸಾಧನವಾಗಿರಲಿಕ್ಕಿಲ್ಲ ತಾನೇ! ಏಕೆಂದರೆ ಸಂಗವೇ ದುಃಖದ ಲಕ್ಷಣ.

12316009a ಸಕ್ತಸ್ಯ ಬುದ್ಧಿಶ್ಚಲತಿ ಮೋಹಜಾಲವಿವರ್ಧಿನೀ|

12316009c ಮೋಹಜಾಲಾವೃತೋ ದುಃಖಮಿಹ ಚಾಮುತ್ರ ಚಾಶ್ನುತೇ||

ಸುಖದಲ್ಲಿ ಆಸಕ್ತನಾದವನ ಬುದ್ಧಿಯು ಚಂಚಲವಾಗಿರುತ್ತದೆ. ಮೋಹಜಾಲಗಳನ್ನು ಹೆಚ್ಚಾಗಿಸುತ್ತಿರುತ್ತದೆ. ಮೋಹಜಾಲಗಳಿಂದ ಆವೃತನಾಗಿರುವವನು ಇಹದಲ್ಲಿಯೂ ಪರದಲ್ಲಿಯೂ ದುಃಖವನ್ನೇ ಅನುಭವಿಸುತ್ತಾನೆ.

12316010a ಸರ್ವೋಪಾಯೇನ ಕಾಮಸ್ಯ ಕ್ರೋಧಸ್ಯ ಚ ವಿನಿಗ್ರಹಃ|

12316010c ಕಾರ್ಯಃ ಶ್ರೇಯೋರ್ಥಿನಾ ತೌ ಹಿ ಶ್ರೇಯೋಘಾತಾರ್ಥಮುದ್ಯತೌ||

ಶ್ರೇಯೋರ್ಥಿಯು ಸರ್ವೋಪಾಯಗಳಿಂದ ಕಾಮ ಮತ್ತು ಕ್ರೋಧಗಳನ್ನು ನಿಗ್ರಹಿಸಬೇಕು. ಏಕೆಂದರೆ ಅವೆರಡೂ ಶ್ರೇಯಸ್ಸಿಗೆ ಆಘಾತಗಳನ್ನುಂಟುಮಾಡುತ್ತವೆ.

12316011a ನಿತ್ಯಂ ಕ್ರೋಧಾತ್ತಪೋ ರಕ್ಷೇಚ್ಚ್ರಿಯಂ ರಕ್ಷೇತ ಮತ್ಸರಾತ್|

12316011c ವಿದ್ಯಾಂ ಮಾನಾವಮಾನಾಭ್ಯಾಮಾತ್ಮಾನಂ ತು ಪ್ರಮಾದತಃ||

ನಿತ್ಯವೂ ತಪಸ್ಸನ್ನು ಕ್ರೋಧದಿಂದ ರಕ್ಷಿಸಬೇಕು.  ಐಶ್ವರ್ಯವನ್ನು ಮಾತ್ಸರ್ಯದಿಂದ ರಕ್ಷಿಸಬೇಕು. ವಿದ್ಯೆಯನ್ನು ಮಾನಾಪಮಾನಗಳಿಂದ ರಕ್ಷಿಸಿಕೊಳ್ಳಬೇಕು. ಆತ್ಮವನ್ನು ಪ್ರಮಾದದಿಂದ ರಕ್ಷಿಸಿಕೊಳ್ಳಬೇಕು.

12316012a ಆನೃಶಂಸ್ಯಂ ಪರೋ ಧರ್ಮಃ ಕ್ಷಮಾ ಚ ಪರಮಂ ಬಲಮ್|

12316012c ಆತ್ಮಜ್ಞಾನಂ ಪರಂ ಜ್ಞಾನಂ ನ ಸತ್ಯಾದ್ವಿದ್ಯತೇ ಪರಮ್||

ಸುಳ್ಳುಹೇಳದಿರುವುದು ಪರಮ ಧರ್ಮ. ಕ್ಷಮೆಯು ಪರಮ ಬಲ. ಆತ್ಮಜ್ಞಾನವು ಪರಮ ಜ್ಞಾನ. ಸತ್ಯಕ್ಕಿಂತಲೂ ಶ್ರೇಷ್ಠವಾದುದು ಬೇರೆ ಯಾವುದೂ ಇಲ್ಲ.

12316013a ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ಭವೇತ್[2]|

12316013c ಯದ್ಭೂತಹಿತಮತ್ಯಂತಮೇತತ್ಸತ್ಯಂ ಮತಂ ಮಮ||

ಸತ್ಯವಚನವು ಶ್ರೇಯಸ್ಕರವಾದುದು. ಸತ್ಯಕ್ಕಿಂತಲೂ ಹಿತವಚನವು ಶ್ರೇಯಸ್ಕರವು. ಭೂತಗಳಿಗೆ ಅತ್ಯಂತ ಹಿತಕಾರವಾದುದೇ ಸತ್ಯ ಎಂದು ನನ್ನ ಮತ.

12316014a ಸರ್ವಾರಂಭಫಲತ್ಯಾಗೀ ನಿರಾಶೀರ್ನಿಷ್ಪರಿಗ್ರಹಃ|

12316014c ಯೇನ ಸರ್ವಂ ಪರಿತ್ಯಕ್ತಂ ಸ ವಿದ್ವಾನ್ಸ ಚ ಪಂಡಿತಃ||

ಎಲ್ಲಾಕರ್ಮಗಳ ಫಲವನ್ನೂ ತ್ಯಜಿಸಿದವನು, ಆಸೆಗಳಿಲ್ಲದವನು, ಏನನ್ನೂ ಬಳಸದಿರುವವನು ಮತ್ತು ಯಾರಿಂದ ಸರ್ವವೂ ಪರಿತ್ಯಜಿಸಲ್ಪಟ್ಟಿವೆಯೋ ಅವನೇ ವಿದ್ವಾಂಸ ಮತ್ತು ಪಂಡಿತ.

12316015a ಇಂದ್ರಿಯೈರಿಂದ್ರಿಯಾರ್ಥೇಭ್ಯಶ್ಚರತ್ಯಾತ್ಮವಶೈರಿಹ|

12316015c ಅಸಜ್ಜಮಾನಃ ಶಾಂತಾತ್ಮಾ ನಿರ್ವಿಕಾರಃ ಸಮಾಹಿತಃ||

12316016a ಆತ್ಮಭೂತೈರತದ್ಭೂತಃ ಸಹ ಚೈವ ವಿನೈವ ಚ|

12316016c ಸ ವಿಮುಕ್ತಃ ಪರಂ ಶ್ರೇಯೋ ನಚಿರೇಣಾಧಿಗಚ್ಚತಿ||

ತನ್ನ ವಶದಲ್ಲಿರುವ ಇಂದ್ರಿಯಗಳ ಮೂಲಕ ಇಂದ್ರಿಯ ವಿಷಯಗಳನ್ನು ಅನಸಕ್ತನಾಗಿ ಸೇವಿಸುತ್ತಿರುವ, ಶಾತಾಂತ್ಮಾ, ನಿರ್ವಿಕಾರ, ಸಮಾಹಿತ, ತಾನು ಆತ್ಮನಂತೆ ಕಾಣುವ ಶರೀರ ಮತ್ತು ಇಂದ್ರಿಯಗಳಿಂದ ಕೂಡಿದವನಾಗಿದ್ದರೂ ದೇಹರೂಪನೂ ಅಲ್ಲ ಇಂದ್ರಿಯರೂಪನೂ ಅಲ್ಲ, ಅವುಗಳಿಂದ ಪ್ರತ್ಯೇಕನಾದವನು ಎಂದು ತಿಳಿದುಕೊಂಡಿರುವ ಅವನೇ ಮುಕ್ತನು. ಅಂಥವನು ಬಹಳ ಶೀಘ್ರ ಪರಮ ಶ್ರೇಯಸ್ಸನ್ನು ಹೊಂದುತ್ತಾನೆ.

12316017a ಅದರ್ಶನಮಸಂಸ್ಪರ್ಶಸ್ತಥಾಸಂಭಾಷಣಂ ಸದಾ|

12316017c ಯಸ್ಯ ಭೂತೈಃ ಸಹ ಮುನೇ ಸ ಶ್ರೇಯೋ ವಿಂದತೇ ಪರಮ್||

ಯಾರು ಯಾವ ಜೀವಿಗಳನ್ನೂ ನೋಡುವುದೇ ಇಲ್ಲವೋ, ಮುಟ್ಟುವುದೇ ಇಲ್ಲವೋ, ಮತ್ತು ಯಾವ ಜೀವಿಗಳೊಡನೆಯೂ ಮಾತನಾಡುವುದೇ ಇಲ್ಲವೋ ಅವನು ಶ್ರೇಷ್ಠ ಶ್ರೇಯಸ್ಸನ್ನು ಹೊಂದುತ್ತಾನೆ.

12316018a ನ ಹಿಂಸ್ಯಾತ್ಸರ್ವಭೂತಾನಿ ಮೈತ್ರಾಯಣಗತಶ್ಚರೇತ್|

12316018c ನೇದಂ ಜನ್ಮ ಸಮಾಸಾದ್ಯ ವೈರಂ ಕುರ್ವೀತ ಕೇನ ಚಿತ್||

ಯಾವ ಜೀವಿಯನ್ನೂ ಹಿಂಸಿಸಬಾರದು. ಎಲ್ಲರೊಡನೆಯೂ ಮಿತ್ರಭಾವದಿಂದಲೇ ವ್ಯವಹರಿಸಬೇಕು. ಮನುಷ್ಯ ಜನ್ಮವನ್ನು ಪಡೆದು ಯಾರೊಡನೆಯೂ ದ್ವೇಷವನ್ನು ಕಟ್ಟಿಕೊಳ್ಳಬಾರದು.

12316019a ಆಕಿಂಚನ್ಯಂ ಸುಸಂತೋಷೋ ನಿರಾಶೀಷ್ಟ್ವಮಚಾಪಲಮ್|

12316019c ಏತದಾಹುಃ ಪರಂ ಶ್ರೇಯ ಆತ್ಮಜ್ಞಸ್ಯ ಜಿತಾತ್ಮನಃ||

ಜಿತಾತ್ಮನಾದ ಆತ್ಮಜ್ಞನಿಗೆ ಯಾವುದನ್ನೂ ಸಂಗ್ರಹಿಸಿಟ್ಟುಕೊಳ್ಳದೇ ಇರುವುದು, ಯಾವಾಗಲೂ ತೃಪ್ತನಾಗಿರುವುದು, ಯಾವುದರಲ್ಲಿಯೂ ಆಸೆಪಡದಿರುವುದು ಮತ್ತು ಚಾಂಚಲ್ಯವಿಲ್ಲದಿರುವುದು ಪರಮ ಶ್ರೇಯಸ್ಸಿಗೆ ಕಾರಣಗಳಾಗುತ್ತವೆ ಎಂದು ಹೇಳುತ್ತಾರೆ.

[3]12316020a ಪರಿಗ್ರಹಂ ಪರಿತ್ಯಜ್ಯ ಭವ ತಾತ ಜಿತೇಂದ್ರಿಯಃ|

12316020c ಅಶೋಕಂ ಸ್ಥಾನಮಾತಿಷ್ಠ ಇಹ ಚಾಮುತ್ರ ಚಾಭಯಮ್||

ಮಗೂ! ಪರಿಗ್ರಹವನ್ನು ಪರಿತ್ಯಜಿಸಿ ಜಿತೇಂದ್ರಿಯನಾಗು. ಇಹ-ಪರಗಳೆರಡರಲ್ಲೂ ಶೋಕರಹಿತವಾಗಿರುವ ಮತ್ತು ಭಯರಹಿತವಾಗಿರುವ ಸ್ಥಾನವನ್ನು ಆಶ್ರಯಿಸು.

12316021a ನಿರಾಮಿಷಾ ನ ಶೋಚಂತಿ ತ್ಯಜೇಹಾಮಿಷಮಾತ್ಮನಃ|

12316021c ಪರಿತ್ಯಜ್ಯಾಮಿಷಂ ಸೌಮ್ಯ ದುಃಖತಾಪಾದ್ವಿಮೋಕ್ಷ್ಯಸೇ||

ನಿರಾಮಿಷರು ಶೋಕಿಸುವುದಿಲ್ಲ. ಆದುದರಿಂದ ಆಸೆಗಳನ್ನು ಪರಿತ್ಯಜಿಸಬೇಕು. ಸೌಮ್ಯ! ಆಮಿಷವನ್ನು ಪರಿತ್ಯಜಿಸಿ ದುಃಖತಾಪದಿಂದ ವಿಮುಕ್ತನಾಗು.

12316022a ತಪೋನಿತ್ಯೇನ ದಾಂತೇನ ಮುನಿನಾ ಸಂಯತಾತ್ಮನಾ|

12316022c ಅಜಿತಂ ಜೇತುಕಾಮೇನ ಭಾವ್ಯಂ ಸಂಗೇಷ್ವಸಂಗಿನಾ||

ತಪೋನಿತ್ಯ ದಾಂತ ಸಂಯತಾತ್ಮ ಮುನಿಗಳಿಗೆ ಮತ್ತು ಜೊತೆಯಲ್ಲಿದ್ದೂ ಅಂಟಿಕೊಂಡಿರದವರಿಗೆ ಮೋಕ್ಷವು ಗಳಿಸಲಸಾಧ್ಯವಾದ್ದೇನೂ ಅಲ್ಲ.

12316023a ಗುಣಸಂಗೇಷ್ವನಾಸಕ್ತ ಏಕಚರ್ಯಾರತಃ ಸದಾ|

12316023c ಬ್ರಾಹ್ಮಣೇ ನಚಿರಾದೇವ ಸುಖಮಾಯಾತ್ಯನುತ್ತಮಮ್||

ಗುಣ-ಸಂಗಗಳಲ್ಲಿ ಅನಾಸಕ್ತನಾಗಿರುವ ಮತ್ತು ಒಂಟಿಯಾಗಿ ವಾಸಿಸುವ ಬ್ರಾಹ್ಮಣನು ಬಹುಬೇಗ ಅನುತ್ತಮ ಸುಖವನ್ನು ಪಡೆದುಕೊಳ್ಳುತ್ತಾನೆ.

12316024a ದ್ವಂದ್ವಾರಾಮೇಷು ಭೂತೇಷು ಯ ಏಕೋ ರಮತೇ ಮುನಿಃ|

12316024c ವಿದ್ಧಿ ಪ್ರಜ್ಞಾನತೃಪ್ತಂ ತಂ ಜ್ಞಾನತೃಪ್ತೋ ನ ಶೋಚತಿ||

ರಮಿಸುವುದನ್ನೇ ಪರಮ ಸುಖವೆಂದು ತಿಳಿದಿರುವವರ ಮಧ್ಯದಲ್ಲಿದ್ದರೂ ಏಕಾಕಿಯಾಗಿದ್ದುಕೊಂಡು ಆನಂದ ಪಡುವ ಮುನಿಯು ಪ್ರಜ್ಞಾನತೃಪ್ತನೆಂದು ತಿಳಿ. ಜ್ಞಾನತೃಪ್ತನಾದವನು ಶೋಕಿಸುವುದಿಲ್ಲ.

12316025a ಶುಭೈರ್ಲಭತಿ ದೇವತ್ವಂ ವ್ಯಾಮಿಶ್ರೈರ್ಜನ್ಮ ಮಾನುಷಮ್|

12316025c ಅಶುಭೈಶ್ಚಾಪ್ಯಧೋಜನ್ಮ ಕರ್ಮಭಿರ್ಲಭತೇಽವಶಃ||

ಅಸ್ವತಂತ್ರ ಜೀವಿಗೆ ಶುಭಕರ್ಮಗಳಿಂದ ದೇವತ್ವವು ದೊರೆಯುತ್ತದೆ. ಮಿಶ್ರಕರ್ಮಗಳಿಂದ ಮನುಷ್ಯ ಜನ್ಮವು ದೊರೆಯುತ್ತದೆ. ಅಶುಭ ಕರ್ಮಗಳಿಂದ ಅಧೋಜನ್ಮವು ಲಭಿಸುತ್ತದೆ.

12316026a ತತ್ರ ಮೃತ್ಯುಜರಾದುಃಖೈಃ ಸತತಂ ಸಮಭಿದ್ರುತಃ|

12316026c ಸಂಸಾರೇ ಪಚ್ಯತೇ ಜಂತುಸ್ತತ್ಕಥಂ ನಾವಬುಧ್ಯಸೇ||

ಮೃತ್ಯು-ಮುಪ್ಪು-ದುಃಖಗಳು ಸತತವೂ ಹಿಂಬಾಲಿಸಿ ಬರುತ್ತಿರುವ ಸಂಸಾರದಲ್ಲಿ ಜಂತುವು ಬೇಯಿಸಲ್ಪಡುತ್ತದೆ. ಇದನ್ನು ನೀನು ಹೇಗೆ ಅರ್ಥಮಾಡಿಕೊಳ್ಳುತ್ತಿಲ್ಲ?

12316027a ಅಹಿತೇ ಹಿತಸಂಜ್ಞಸ್ತ್ವಮಧ್ರುವೇ ಧ್ರುವಸಂಜ್ಞಕಃ|

12316027c ಅನರ್ಥೇ ಚಾರ್ಥಸಂಜ್ಞಸ್ತ್ವಂ ಕಿಮರ್ಥಂ ನಾವಬುಧ್ಯಸೇ||

ಅಹಿತವಾದವುಗಳೇ ಹಿತವೆಂದು ತಿಳಿದುಕೊಂಡುಬಿಟ್ಟಿದ್ದೀಯೆ. ಸದಾ ಇಲ್ಲದವುಗಳನ್ನು ಸದಾ ಇರುತ್ತವೆ ಎಂದು ತಿಳಿದುಕೊಂಡುಬಿಟ್ಟಿದ್ದೀಯೆ. ಅನರ್ಥವಾದವುಗಳು ಅರ್ಥವತ್ತಾದವುಗಳು ಎಂದು ತಿಳಿದುಕೊಂಡುಬಿಟ್ಟಿದ್ದೀಯೆ. ನಿನಗೆ ಇವು ಹೇಗೆ ಅರ್ಥವಾಗುತ್ತಿಲ್ಲ?

12316028a ಸಂವೇಷ್ಟ್ಯಮಾನಂ ಬಹುಭಿರ್ಮೋಹತಂತುಭಿರಾತ್ಮಜೈಃ|

12316028c ಕೋಶಕಾರವದಾತ್ಮಾನಂ ವೇಷ್ಟಯನ್ನಾವಬುಧ್ಯಸೇ||

ತನ್ನ ಶರೀರದಿಂದಲೇ ಹುಟ್ಟಿದ ತಂತುಗಳಿಂದ ಗೂಡನ್ನು ಕಟ್ಟಿ ಅದರಲ್ಲಿಯೇ ತಾನು ಬಂಧಿತನಾಗುವ ರೇಷ್ಮೆ ಹುಳುವಿನಂತೆ ನೀನೂ ಕೂಡ ನಿನ್ನ ಸುತ್ತಲೂ ಕೋಶವನ್ನು ಕಟ್ಟಿಕೊಳ್ಳುತ್ತಿರುವೆ. ಇದು ನಿನಗೆ ಹೇಗೆ ತಿಳಿಯುತ್ತಿಲ್ಲ?

12316029a ಅಲಂ ಪರಿಗ್ರಹೇಣೇಹ ದೋಷವಾನ್ ಹಿ ಪರಿಗ್ರಹಃ|

12316029c ಕೃಮಿರ್ಹಿ ಕೋಶಕಾರಸ್ತು ಬಧ್ಯತೇ ಸ್ವಪರಿಗ್ರಹಾತ್||

ಸಂಗ್ರಹಿಸುವುದನ್ನು ನಿಲ್ಲಿಸು. ಸಂಗ್ರಹಿಸುವಿಕೆಯೇ ದೋಷಯುಕ್ತವಾದುದು. ಏಕೆಂದರೆ ಸಂಗ್ರಹಿಸುವುದಕ್ಕಾಗಿಯೇ ರೇಷ್ಮೆ ಹುಳುವು ತಾನು ಕಟ್ಟಿದ ಕೋಶದಲ್ಲಿಯೇ ಬಂಧಿಯಾಗುತ್ತದೆಯಲ್ಲವೇ?

12316030a ಪುತ್ರದಾರಕುಟುಂಬೇಷು ಸಕ್ತಾಃ ಸೀದಂತಿ ಜಂತವಃ|

12316030c ಸರಃಪಂಕಾರ್ಣವೇ ಮಗ್ನಾ ಜೀರ್ಣಾ ವನಗಜಾ ಇವ||

ಪುತ್ರ-ಹೆಂಡತಿ-ಕುಟುಂಬಗಳಲ್ಲಿ ಆಸಕ್ತರಾಗಿರುವ ಜಂತುಗಳು ಸರೋವರದ ಕೆಸರಿನಲ್ಲಿ ಸಿಲುಕಿಹಾಕಿಕೊಂಡ ಕಾಡಾನೆಯಂತೆ ಜೀರ್ಣಗೊಂಡು ನಾಶಹೊಂದುತ್ತವೆ.

12316031a ಮಹಾಜಾಲಸಮಾಕೃಷ್ಟಾನ್ ಸ್ಥಲೇ ಮತ್ಸ್ಯಾನಿವೋದ್ಧೃತಾನ್|

12316031c ಸ್ನೇಹಜಾಲಸಮಾಕೃಷ್ಟಾನ್ಪಶ್ಯ ಜಂತೂನ್ಸುದುಃಖಿತಾನ್||

ಮಹಾಬಲೆಯಿಂದ ಮೇಲಕ್ಕೆ ಸೆಳೆಯಲ್ಪಟ್ಟ ಮೀನುಗಳಂತೆ ಸ್ನೇಹಜಾಲಗಳಲ್ಲಿ ಸಿಲುಕಿ ಎಳೆಯಲ್ಪಟ್ಟು ಅತ್ಯಂತ ದುಃಖಿತಗೊಂಡಿರುವ ಜಂತುಗಳನ್ನು ನೋಡು.

12316032a ಕುಟುಂಬಂ ಪುತ್ರದಾರಂ ಚ ಶರೀರಂ ದ್ರವ್ಯಸಂಚಯಾಃ|

12316032c ಪಾರಕ್ಯಮಧ್ರುವಂ ಸರ್ವಂ ಕಿಂ ಸ್ವಂ ಸುಕೃತದುಷ್ಕೃತಮ್||

ಕುಂಟುಂಬ, ಮಕ್ಕಳು, ಪತ್ನಿ, ಶರೀರ ಮತ್ತು ದ್ರವ್ಯಸಂಚಯಗಳು ಎಲ್ಲವೂ ನಿಶ್ಚಯವಾಗಿಯೂ ಇತರರಿಗೆ ಸಂಬಂಧಿಸಿದವುಗಳು. ಕೇವಲ ಪುಣ್ಯ-ಪಾಪ ಕರ್ಮಗಳು ಮಾತ್ರ ತನಗೆ ಸಂಬಂಧಿಸಿದವುಗಳಲ್ಲವೇ?

12316033a ಯದಾ ಸರ್ವಂ ಪರಿತ್ಯಜ್ಯ ಗಂತವ್ಯಮವಶೇನ ತೇ|

12316033c ಅನರ್ಥೇ ಕಿಂ ಪ್ರಸಕ್ತಸ್ತ್ವಂ ಸ್ವಮರ್ಥಂ ನಾನುತಿಷ್ಠಸಿ||

ಸ್ವತಂತ್ರನಾಗಿರದ ನೀನು ಒಂದು ದಿನ ಇಲ್ಲಿರುವ ಎಲ್ಲವನ್ನೂ ಪರಿತ್ಯಜಿಸಿ ಹೋಗಲೇ ಬೇಕಾಗುತ್ತದೆ. ಹೀಗಿರುವಾಗ ಅನರ್ಥವಾದ ಇವುಗಳ ಕುರಿತು ಏಕೆ ಆಸಕ್ತನಾಗಿದ್ದೀಯೆ? ಸ್ವಾರ್ಥಕ್ಕಾಗಿ ಇನ್ನೂ ಏಕೆ ಪ್ರಯತ್ನಿಸುತ್ತಿಲ್ಲ?

12316034a ಅವಿಶ್ರಾಂತಮನಾಲಂಬಮಪಾಥೇಯಮದೈಶಿಕಮ್|

12316034c ತಮಃಕಾಂತಾರಮಧ್ವಾನಂ ಕಥಮೇಕೋ ಗಮಿಷ್ಯಸಿ||

ವಿಶ್ರಾಂತಿ ಪಡೆಯಲಿಕ್ಕೂ ಅವಕಾಶವಿಲ್ಲದ, ಸಹಾಯಕ್ಕೆ ಯಾರೂ ಇಲ್ಲದ, ಮತ್ತು ದಾರಿತೋರಿಸಲು ಸ್ಥಳೀಯರು ಯಾರೂ ಇಲ್ಲದ ಆ ಅಂಧಕಾರಮಯ ದಾರಿಯಲ್ಲಿ ನೀನು ಒಬ್ಬನೇ ಹೇಗೆ ಹೋಗಬಲ್ಲೆ?

12316035a ನ ಹಿ ತ್ವಾ ಪ್ರಸ್ಥಿತಂ ಕಶ್ಚಿತ್ ಪೃಷ್ಠತೋಽನುಗಮಿಷ್ಯತಿ|

12316035c ಸುಕೃತಂ ದುಷ್ಕೃತಂ ಚ ತ್ವಾ ಯಾಸ್ಯಂತಮನುಯಾಸ್ಯತಿ||

ಪರಲೋಕಕ್ಕೆ ಪ್ರಯಾಣಿಸುವಾಗ ನಿನ್ನನ್ನು ಅನುಸರಿಸಿ ಯಾರೂ ಬರುವುದಿಲ್ಲ. ಕೇವಲ ನಿನ್ನ ಸುಕೃತ-ದುಷ್ಕೃತಗಳೇ ಅಂತ್ಯದವರೆಗೂ ನಿನ್ನನ್ನು ಅನುಸರಿಸಿ ಬರುತ್ತವೆ.

12316036a ವಿದ್ಯಾ ಕರ್ಮ ಚ ಶೌರ್ಯಂ ಚ ಜ್ಞಾನಂ ಚ ಬಹುವಿಸ್ತರಮ್|

12316036c ಅರ್ಥಾರ್ಥಮನುಸಾರ್ಯಂತೇ ಸಿದ್ಧಾರ್ಥಸ್ತು ವಿಮುಚ್ಯತೇ||

ಮೋಕ್ಷಾರ್ಥಿಯನ್ನು ಅನುಸರಿಸಿ ಬರುವ ವಿದ್ಯೆ, ಕರ್ಮ, ಶೌರ್ಯ, ಮತ್ತು ಬಹುವಿಸ್ತರ ಜ್ಞಾನಗಳೂ ಕೂಡ ಅವನು ಸಿದ್ಧಾರ್ಥನಾದ ಕೂಡಲೇ ಅವನನ್ನು ಬಿಟ್ಟು ಹೊರಟುಹೋಗುತ್ತವೆ.

12316037a ನಿಬಂಧನೀ ರಜ್ಜುರೇಷಾ ಯಾ ಗ್ರಾಮೇ ವಸತೋ ರತಿಃ|

12316037c ಚಿತ್ತ್ವೈನಾಂ ಸುಕೃತೋ ಯಾಂತಿ ನೈನಾಂ ಚಿಂದಂತಿ ದುಷ್ಕೃತಃ||

ಇಂದ್ರಿಯಗ್ರಾಮಗಳಲ್ಲಿಯೇ ವಾಸಿಸಿಕೊಂಡು ಅದರಲ್ಲಿಯೇ ರಮಿಸುತ್ತಿರುವವನಿಗೆ ಅವುಗಳೇ ಅವನನ್ನು ಬಂಧಿಸುವ ಹಗ್ಗಗಳು. ಸುಕೃತರು ಅವುಗಳನ್ನು ತುಂಡರಿಸುತ್ತಾರೆ. ದುಷ್ಕೃತರು ಅವುಗಳನ್ನು ತುಂಡುಮಾಡುವುದಿಲ್ಲ.

12316038a ರೂಪಕೂಲಾಂ ಮನಃಸ್ರೋತಾಂ ಸ್ಪರ್ಶದ್ವೀಪಾಂ ರಸಾವಹಾಮ್|

12316038c ಗಂಧಪಂಕಾಂ ಶಬ್ದಜಲಾಂ ಸ್ವರ್ಗಮಾರ್ಗದುರಾವಹಾಮ್||

12316039a ಕ್ಷಮಾರಿತ್ರಾಂ ಸತ್ಯಮಯೀಂ ಧರ್ಮಸ್ಥೈರ್ಯವಟಾಕರಾಮ್|

12316039c ತ್ಯಾಗವಾತಾಧ್ವಗಾಂ ಶೀಘ್ರಾಂ ಬುದ್ಧಿನಾವಾ ನದೀಂ ತರೇತ್||

ಸ್ವರ್ಗಮಾರ್ಗದಲ್ಲಿ ಬರುವ ರೂಪವೆಂಬ ದಡಗಳಿಂದಲೂ, ಮನಸ್ಸೆಂಬ ಪ್ರವಾಹದಿಂದಲೂ, ಸ್ಪರ್ಶವೆಂಬ ದ್ವೀಪಗಳಿಂದಲೂ, ಗಂಧವೆಂಬ ಕೆಸರಿನಿಂದಲೂ, ಶಬ್ದವೆಂಬ ನೀರಿನಿಂದಲೂ ಕೂಡಿರುವ, ದಾಟಲು ಕಷ್ಟಸಾಧ್ಯವಾದ ನದಿಯನ್ನು ಕೇವಲ ಕ್ಷಮೆಯೆಂಬ ಹುಟ್ಟಿನಿಂದ ಧರ್ಮವೆಂಬ ಹಗ್ಗಗಳನ್ನು ಬಿಗಿದಿರುವ ನೌಕೆಯನ್ನು ತ್ಯಾಗವೆಂಬ ಅನುಕೂಲಕರ ಗಾಳಿಯನ್ನು ಬೀಸಿ ದಾಟಬಹುದು.

12316040a ತ್ಯಜ ಧರ್ಮಮಧರ್ಮಂ ಚ ಉಭೇ ಸತ್ಯಾನೃತೇ ತ್ಯಜ|

12316040c ಉಭೇ ಸತ್ಯಾನೃತೇ ತ್ಯಕ್ತ್ವಾ ಯೇನ ತ್ಯಜಸಿ ತಂ ತ್ಯಜ||

ಧರ್ಮ-ಅಧರ್ಮಗಳನ್ನು ತೊರೆ. ಸತ್ಯ-ಅನೃತಗಳನ್ನೂ ತೊರೆ. ಸತ್ಯ-ಅನೃತಗಳನ್ನು ತೊರೆದು ಯಾವುದರಿಂದ ಅವುಗಳನ್ನು ತೊರೆದೆಯೋ ಅದನ್ನೂ ತ್ಯಜಿಸಿಬಿಡು.

12316041a ತ್ಯಜ ಧರ್ಮಮಸಂಕಲ್ಪಾದಧರ್ಮಂ ಚಾಪ್ಯಹಿಂಸಯಾ[4]|

12316041c ಉಭೇ ಸತ್ಯಾನೃತೇ ಬುದ್ಧ್ಯಾ ಬುದ್ಧಿಂ ಪರಮನಿಶ್ಚಯಾತ್||

ಸಂಕಲ್ಪವನ್ನು ತ್ಯಜಿಸುವುದರ ಮೂಲಕ ಧರ್ಮವನ್ನು ತ್ಯಜಿಸು. ಅಹಿಂಸೆಯಿಂದ ಅಧರ್ಮವನ್ನು ತೊರೆ. ಬುದ್ಧಿಯಿಂದ ಸತ್ಯ-ಅನೃತಗಳನ್ನು ತ್ಯಜಿಸು. ಪರಮ ನಿಶ್ಚಯದಿಂದ ಬುದ್ಧಿಯನ್ನೂ ತ್ಯಜಿಸು.

12316042a ಅಸ್ಥಿಸ್ಥೂಣಂ ಸ್ನಾಯುಯುತಂ ಮಾಂಸಶೋಣಿತಲೇಪನಮ್|

12316042c ಚರ್ಮಾವನದ್ಧಂ ದುರ್ಗಂಧಿ ಪೂರ್ಣಂ ಮೂತ್ರಪುರೀಷಯೋಃ||

12316043a ಜರಾಶೋಕಸಮಾವಿಷ್ಟಂ ರೋಗಾಯತನಮಾತುರಮ್|

12316043c ರಜಸ್ವಲಮನಿತ್ಯಂ ಚ ಭೂತಾವಾಸಂ ಸಮುತ್ಸೃಜ||

ಮೂಳೆಗಳೆಂಬ ಸ್ತಂಭಗಳಿರುವ, ನರ-ನಾಡಿಯುಕ್ತವಾದ, ಮಾಂಸ-ರಕ್ತಗಳಿಂದ ಲಿಪ್ತವಾಗಿರುವ, ಚರ್ಮವನ್ನು ಹೊದಿಸಿರುವ, ದುರ್ಗಂಧಯುಕ್ತವಾದ, ಮೂತ್ರ-ಪುರೀಷಗಳಿಂದ ತುಂಬಿರುವ, ಮುಪ್ಪು-ದುಃಖ-ರೋಗಗಳಿಗೆ ಮನೆಯಾಗಿರುವ, ರಜೋಗುಣರೂಪದ ಧೂಳಿನಿಂದ ಮುಚ್ಚಿಹೋಗಿರುವ, ಪಂಚಭೂತಗಳ ಆವಾಸವಾಗಿರುವ ಈ ಶರೀರದ ಮೇಲಿನ ಅಭಿಮಾನವನ್ನು ಪರಿತ್ಯಜಿಸು.

12316044a ಇದಂ ವಿಶ್ವಂ ಜಗತ್ಸರ್ವಮಜಗಚ್ಚಾಪಿ ಯದ್ಭವೇತ್|

12316044c ಮಹಾಭೂತಾತ್ಮಕಂ ಸರ್ವಂ ಮಹದ್ಯತ್ಪರಮಾಣು ಯತ್[5]||

12316045a ಇಂದ್ರಿಯಾಣಿ ಚ ಪಂಚೈವ ತಮಃ ಸತ್ತ್ವಂ ರಜಸ್ತಥಾ|

12316045c ಇತ್ಯೇಷ ಸಪ್ತದಶಕೋ ರಾಶಿರವ್ಯಕ್ತಸಂಜ್ಞಕಃ||

ಯಾವುದರಿಂದ ಚರಾಚರಾತ್ಮಕ ವಿಶ್ವವು ಎಲ್ಲವೂ ಉತ್ಪನ್ನವಾಗಿದೆಯೋ ಅದನ್ನು ಅವ್ಯಕ್ತ ಎಂದು ಹೇಳುತ್ತಾರೆ. ಪರಮಾಣು ಸ್ವರೂಪದ ಪಂಚ ಮಹಾಭೂತಗಳು ಮತ್ತು ಮಹತ್, ಮನಸ್ಸು-ಬುದ್ಧಿ-ಅಹಂಕಾರಗಳು, ಪಂಚೇಂದ್ರಿಯಗಳು, ತಮ-ಸತ್ತ್ವ-ರಜೋಗುಣಗಳು – ಈ ಹದಿನೇಳರ ಗುಂಪನ್ನು ಅವ್ಯಕ್ತ ಎಂದು ಕರೆಯುತ್ತಾರೆ.

12316046a ಸರ್ವೈರಿಹೇಂದ್ರಿಯಾರ್ಥೈಶ್ಚ ವ್ಯಕ್ತಾವ್ಯಕ್ತೈರ್ಹಿ ಸಂಹಿತಃ|

12316046c ಪಂಚವಿಂಶಕ ಇತ್ಯೇಷ ವ್ಯಕ್ತಾವ್ಯಕ್ತಮಯೋ ಗುಣಃ||

ಅವ್ಯಕ್ತಕ್ಕೆ ಸಂಬಂಧಿಸಿದ ಈ ಹದಿನೇಳು ಮತ್ತು ವ್ಯಕ್ತಕ್ಕೆ ಸಂಬಂಧಿಸಿದ ಇಂದ್ರಿಯಾರ್ಥಗಳಾದ ಶಬ್ದ-ಸ್ಪರ್ಶ-ರೂಪ-ರಸ-ಗಂಧ-ಸಂಕಲ್ಪ-ವಿಕಲ್ಪ ಎಂಬ ಈ ಏಳನ್ನೂ ಕೂಡಿ ವ್ಯಕ್ತಾವ್ಯಕ್ತಗಳಿಗೆ ಸೇರಿದ ಒಟ್ಟು ಇಪ್ಪತ್ನಾಲ್ಕು ಗುಣಗಳು.

12316047a ಏತೈಃ ಸರ್ವೈಃ ಸಮಾಯುಕ್ತಃ ಪುಮಾನಿತ್ಯಭಿಧೀಯತೇ|

12316047c ತ್ರಿವರ್ಗೋಽತ್ರ ಸುಖಂ ದುಃಖಂ ಜೀವಿತಂ ಮರಣಂ ತಥಾ||

12316048a ಯ ಇದಂ ವೇದ ತತ್ತ್ವೇನ ಸ ವೇದ ಪ್ರಭವಾಪ್ಯಯೌ|

ಈ ಎಲ್ಲ ಇಪ್ಪತ್ನಾಲ್ಕು ಗುಣಗಳಿಂದ ಯುಕ್ತನಾದವನನ್ನು ಪುರುಷನೆಂದು ಕರೆಯುತ್ತಾರೆ. ಈ ತತ್ತ್ವಗಳನ್ನು ತಿಳಿದುಕೊಂಡವನು ತ್ರಿವರ್ಗಗಳಾದ ಧರ್ಮ-ಅರ್ಥ-ಕಾಮಗಳನ್ನೂ, ಸುಖ-ದುಃಖಗಳನ್ನೂ, ಜೀವಿತ-ಮರಣಗಳನ್ನೂ ಮತ್ತು ಈ ವಿಶ್ವದ ಸೃಷ್ಟಿ-ಲಯಗಳನ್ನೂ ಅರ್ಥಮಾಡಿಕೊಳ್ಳುತ್ತಾನೆ.

12316048c ಪಾರಾಶರ್ಯೇಹ[6] ಬೋದ್ಧವ್ಯಂ ಜ್ಞಾನಾನಾಂ ಯಚ್ಚ ಕಿಂ ಚನ||

12316049a ಇಂದ್ರಿಯೈರ್ಗೃಹ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಥಿತಿಃ|

12316049c ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಮ್||

ತಿಳಿಯಬೇಕಾದ ಏನೆಲ್ಲ ಇದೆಯೋ ಅದನ್ನು ಇಲ್ಲಿ ಪಾರಾಶರ್ಯ ವ್ಯಾಸನಿಂದ ತಿಳಿದುಕೊಳ್ಳಬೇಕು. ಇಂದ್ರಿಯಗಳಿಂದ ಗ್ರಹಿಸಿಕೊಳ್ಳಬಹುದಾದವುಗಳನ್ನು ವ್ಯಕ್ತ ಎಂದಿದೆ. ಇಂದ್ರಿಯಗಳಿಗೆ ಅಗೋಚರವಾಗಿರುವ ಮತ್ತು ಕೇವಲ ಅನುಮಾನ ಅಥವಾ ಶಬ್ದದ ಪ್ರಮಾಣದಿಂದ ಗ್ರಹಿಸಿಕೊಳ್ಳಬಹುದಾದವುಗಳನ್ನು ಅವ್ಯಕ್ತ ಎಂದು ಹೇಳುತ್ತಾರೆ.

12316050a ಇಂದ್ರಿಯೈರ್ನಿಯತೈರ್ದೇಹೀ ಧಾರಾಭಿರಿವ ತರ್ಪ್ಯತೇ|

12316050c ಲೋಕೇ ವಿತತಮಾತ್ಮಾನಂ ಲೋಕಂ ಚಾತ್ಮನಿ ಪಶ್ಯತಿ||

ಇಂದ್ರಿಯಗಳನ್ನು ನಿಯಮಿಸಿಕೊಂಡಿರುವ ಮನುಷ್ಯನು ಜಲಧಾರೆಯು ಸಿಕ್ಕಿದ ಬಾಯಾರಿದವನಂತೆ ತೃಪ್ತನಾಗಿರುತ್ತಾನೆ. ಅಂಥವನು ನನ್ನ ಆತ್ಮವೇ ಲೋಕದಲ್ಲಿರುವಂತೆಯೂ ಮತ್ತು ತನ್ನ ಆತ್ಮನಲ್ಲಿಯೇ ಲೋಕವನ್ನೂ ಕಾಣುತ್ತಾನೆ.

12316051a ಪರಾವರದೃಶಃ ಶಕ್ತಿರ್ಜ್ಞಾನವೇಲಾಂ ನ ಪಶ್ಯತಿ[7]|

12316051c ಪಶ್ಯತಃ ಸರ್ವಭೂತಾನಿ ಸರ್ವಾವಸ್ಥಾಸು ಸರ್ವದಾ||

12316052a ಬ್ರಹ್ಮಭೂತಸ್ಯ ಸಂಯೋಗೋ ನಾಶುಭೇನೋಪಪದ್ಯತೇ|

ಪರಮಾತ್ಮನನ್ನು ಕಂಡುಕೊಂಡಿರುವವನಲ್ಲಿ ಜ್ಞಾನಶಕ್ತಿಯು ಕಾಣಿಸುವುದಿಲ್ಲ. ಸರ್ವದಾ ಸರ್ವಾವಸ್ಥೆಗಳಲ್ಲಿ ಸರ್ವಭೂತಗಳನ್ನು ತನ್ನಲ್ಲಿಯೇ ಕಾಣುವ, ಬ್ರಹ್ಮಭೂತನಿಗೆ ಇತರ ಜೀವಿಗಳ ಸಹವಾಸದಿಂದ ಯಾವ ಶುಭಾಶುಭಗಳೂ ಉಂಟಾಗುವುದಿಲ್ಲ.

12316052c ಜ್ಞಾನೇನ ವಿವಿಧಾನ್ ಕ್ಲೇಶಾನತಿವೃತ್ತಸ್ಯ ಮೋಹಜಾನ್|

12316052e ಲೋಕೇ ಬುದ್ಧಿಪ್ರಕಾಶೇನ ಲೋಕಮಾರ್ಗೋ ನ ರಿಷ್ಯತೇ||

ಮೋಹದಿಂದ ಹುಟ್ಟುವ ವಿವಿಧ ಕ್ಲೇಶಗಳನ್ನು ಜ್ಞಾನದ ಮೂಲಕ ದಾಟಿದವನಿಗೆ ಬುದ್ಧಿಪ್ರಕಾಶದಿಂದ ಮಾಡಬೇಕಾದ ಲೋಕವ್ಯವಹಾರಕ್ಕೂ ತಡೆಯುಂಟಾಗುವುದಿಲ್ಲ.

12316053a ಅನಾದಿನಿಧನಂ ಜಂತುಮಾತ್ಮನಿ ಸ್ಥಿತಮವ್ಯಯಮ್|

12316053c ಅಕರ್ತಾರಮಮೂರ್ತಂ ಚ ಭಗವಾನಾಹ ತೀರ್ಥವಿತ್||

ಮೋಕ್ಷೋಪಾಯವನ್ನು ತಿಳಿದಿರುವ ಭಗವಂತನು ಶರೀರಗಳಲ್ಲಿರುವ ಆತ್ಮನು ಆದಿ-ಮಧ್ಯ-ಅಂತ್ಯ ರಹಿತ, ಅವಿನಾಶಿ, ಕರ್ತೃತ್ವವಿಲ್ಲದ ನಿರಾಕಾರ ಎಂದು ಹೇಳಿದ್ದಾನೆ.

12316054a ಯೋ ಜಂತುಃ ಸ್ವಕೃತೈಸ್ತೈಸ್ತೈಃ ಕರ್ಮಭಿರ್ನಿತ್ಯದುಃಖಿತಃ|

12316054c ಸ ದುಃಖಪ್ರತಿಘಾತಾರ್ಥಂ ಹಂತಿ ಜಂತೂನನೇಕಧಾ||

ಜನ್ಮ-ಜನ್ಮಾಂತರಗಳಲ್ಲಿ ತಾನೇ ಮಾಡಿದ ಕರ್ಮಗಳಿಂದ ಸದಾ ದುಃಖಿತನಾಗಿರುವ ಜಂತುವು ದುಃಖನಿವಾರಣೆಗಾಗಿ ಅನೇಕ ಜಂತುಗಳನ್ನು ಹಿಂಸಿಸುತ್ತಾನೆ.

12316055a ತತಃ ಕರ್ಮ ಸಮಾದತ್ತೇ ಪುನರನ್ಯನ್ನವಂ ಬಹು|

12316055c ತಪ್ಯತೇಽಥ ಪುನಸ್ತೇನ ಭುಕ್ತ್ವಾಪಥ್ಯಮಿವಾತುರಃ||

ಮತ್ತೆ ಹೊಸ-ಹೊಸ ಕರ್ಮಗಳನ್ನು ಹೆಚ್ಚು-ಹೆಚ್ಚಾಗಿ ಮಾಡುತ್ತಾ ರೋಗಿಯಾದವನು ಅಪಥ್ಯ ಪದಾರ್ಥಗಳನ್ನು ತಿಂದು ದುಃಖಿಸುವಂತೆ- ತಾನು ಮಾಡಿದ ಆ ಕರ್ಮಗಳಿಗಾಗಿ ಪುನಃ ಪುನಃ ಪರಿತಪಿಸುತ್ತಿರುತ್ತಾನೆ.

12316056a ಅಜಸ್ರಮೇವ ಮೋಹಾರ್ತೋ ದುಃಖೇಷು ಸುಖಸಂಜ್ಞಿತಃ|

12316056c ಬಧ್ಯತೇ ಮಥ್ಯತೇ ಚೈವ ಕರ್ಮಭಿರ್ಮಂಥವತ್ ಸದಾ||

ಮೋಹಾರ್ತನಾಗಿರುವವನು ದುಃಖಗಳಲ್ಲಿಯೂ ಸುಖಿಯಾಗಿದ್ದೇನೆಂದು ತಿಳಿದುಕೊಂಡಿರುತ್ತಾನೆ. ಕಡೆಗೋಲಿನಂತೆ ತಾನೇ ಮಾಡಿದ ಕರ್ಮಗಳಿಂದ ಸದಾ ಮಥಿಸಲ್ಪಡುತ್ತಾನೆ.

12316057a ತತೋ ನಿವೃತ್ತೋ ಬಂಧಾತ್ಸ್ವಾತ್ಕರ್ಮಣಾಮುದಯಾದಿಹ[8]|

12316057c ಪರಿಭ್ರಮತಿ ಸಂಸಾರಂ ಚಕ್ರವದ್ಬಹುವೇದನಃ||

ತನ್ನ ಹೊಸ ಹೊಸ ಕರ್ಮಗಳಿಂದ ಉಂಟಾದ ಬಂಧನಗಳಿಂದ ಸುತ್ತುವರೆಯಲ್ಪಟ್ಟು ಅವನು ಸಂಸಾರ ಚಕ್ರದಲ್ಲಿ ಸುತ್ತುವರೆಯುತ್ತಾ ಅನೇಕ ವೇದನೆಗಳನ್ನು ಅನುಭವಿಸುತ್ತಾನೆ.

12316058a ಸ ತ್ವಂ ನಿವೃತ್ತಬಂಧಸ್ತು ನಿವೃತ್ತಶ್ಚಾಪಿ ಕರ್ಮತಃ|

12316058c ಸರ್ವವಿತ್ಸರ್ವಜಿತ್ಸಿದ್ಧೋ ಭವ ಭಾವವಿವರ್ಜಿತಃ||

ನೀನು ಆ ಬಂಧನದಿಂದ ನಿವೃತ್ತನಾಗಿ, ಕರ್ಮಗಳಿಂದ ನಿವೃತ್ತನಾಗಿ, ಸರ್ವವಿದುವಾಗಿ, ಸರ್ವವನ್ನೂ ಗೆದ್ದು, ಭಾವ ವಿವರ್ಜಿತನಾಗಿ ಸಿದ್ಧನಾಗು.

12316059a ಸಂಯಮೇನ ನವಂ ಬಂಧಂ ನಿವರ್ತ್ಯ ತಪಸೋ ಬಲಾತ್|

12316059c ಸಂಪ್ರಾಪ್ತಾ ಬಹವಃ ಸಿದ್ಧಿಮಪ್ಯಬಾಧಾಂ ಸುಖೋದಯಾಮ್||

ಜ್ಞಾನಿಗಳು ಸಂಯಮ ಮತ್ತು ತಪಸ್ಸಿನ ಬಲಗಳಿಂದ ಹೊಸಬಂಧನಗಳನ್ನು ಕತ್ತರಿಸಿ ಬಾಧೆಗಳಿಲ್ಲದ ಸುಖವನ್ನು ನೀಡುವ ಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಷೋಡಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಮುನ್ನೂರಾಹದಿನಾರನೇ ಅಧ್ಯಾಯವು.

Eurasian Tree Sparrow Bird On White Background Stock Photo, Picture And  Royalty Free Image. Image 33425695.

[1] ನಾಸ್ತಿ ವಿದ್ಯಾಸಮಂ ಚಕ್ಷುರ್ನಾಸ್ತಿ ಸತ್ಯಸಮಂ ತಪಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸತ್ಯಾದಪಿ ಹಿತಂ ವದೇತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] 5ನೆಯ ಶ್ಲೋಕದಲ್ಲಿ ನಾರದನು ಸನತ್ಕುಮಾರನು ಋಷಿಗಳಿಗೆ ಹೇಳಿದ ಮಾತುಗಳನ್ನು ಹೇಳಲು ಉಪಕ್ರಮಿಸಿದ್ದನು. ಆದರೆ ಈ 17ನೆಯ ಶ್ಲೋಕದಿಂದ ಮುಂದಕ್ಕೆ ನಾರದನೇ ಶುಕನಿಗೆ ನೇರವಾಗಿ ಹೇಳಿದಂತಿದೆ.

[4] ಚಾಪ್ಯಲಿಪ್ಸಯಾ| ಎಂಬ ಪಾಠಾಂತಾರವಿದೆ (ಭಾರತದರ್ಶನ).

[5] ಮಹದ್ಯತ್ಪರಮಾಶ್ರಯಾತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಪಾರಂಪರ್ಯೇಣ ಎಂಬ ಪಾಠಾಂತರವಿದೆ (ಭಾರತದರ್ಶನ).

[7] ಪರಾವರದೃಶಃ ಶಕ್ತಿರ್ಜ್ಞಾನಮೂಲಾ ನ ನಶ್ಯತಿ| ಎಂಬ ಪಾಠಾಂತರವಿದೆ (ಭಾರತದರ್ಶನ).

[8] ತತೋ ನಿಬದ್ಧಃ ಸ್ವಾಂ ಯೋನಿಂ ಕರ್ಮಣಾಮುದಯಾದಿಹ| ಎಂಬ ಪಾಠಾಂತರವಿದೆ (ಭಾರತದರ್ಶನ).

Comments are closed.