Shanti Parva: Chapter 315

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೫

ಶಿಷ್ಯರೆಲ್ಲರೂ ಹೊರಟುಹೋದನಂತರ ವ್ಯಾಸನ ಆಶ್ರಮಕ್ಕೆ ನಾರದನ ಆಗಮನ (1-11); ವೇದಪಾರಾಯಣಕ್ಕಾಗಿ ನಾರದನಿಂದ ಪ್ರಚೋದನೆ (12-21); ವ್ಯಾಸನು ಶುಕನಿಗೆ ಪ್ರವಹವೇ ಮೊದಲಾದ ಏಳು ವಾಯುಗಳ ಕುರಿತು ಹೇಳುವುದು (22-57).

12315001 ಭೀಷ್ಮ ಉವಾಚ|

12315001a ಏತಚ್ಚ್ರುತ್ವಾ ಗುರೋರ್ವಾಕ್ಯಂ ವ್ಯಾಸಶಿಷ್ಯಾ ಮಹೌಜಸಃ|

12315001c ಅನ್ಯೋನ್ಯಂ ಹೃಷ್ಟಮನಸಃ ಪರಿಷಸ್ವಜಿರೇ ತದಾ||

ಭೀಷ್ಮನು ಹೇಳಿದನು: “ಗುರುವಿನ ಮಾತನ್ನು ಕೇಳಿ ಮಹೌಜಸ ವ್ಯಾಸಶಿಷ್ಯರು ಹೃಷ್ಟಮನಸ್ಕ್ರರಾಗಿ ಅನ್ಯೋನ್ಯರನ್ನು ಆಲಂಗಿಸಿದರು.

12315002a ಉಕ್ತಾಃ ಸ್ಮೋ ಯದ್ಭಗವತಾ ತದಾತ್ವಾಯತಿಸಂಹಿತಮ್|

12315002c ತನ್ನೋ ಮನಸಿ ಸಂರೂಢಂ ಕರಿಷ್ಯಾಮಸ್ತಥಾ ಚ ತತ್||

“ನೀವು ನಮಗೆ ನೀಡಿದ ಉಪದೇಶವು ನಮ್ಮ ಮನಸ್ಸಿನಲ್ಲಿ ದೃಢವಾಗಿ ಬೇರೂರಿದೆ. ಅವಶ್ಯಕವಾಗಿ ನಿಮ್ಮ ಉಪದೇಶದಂತೆಯೇ ನಾವು ನಡೆದುಕೊಳ್ಳುತ್ತೇವೆ.”

12315003a ಅನ್ಯೋನ್ಯಂ ಚ ಸಭಾಜ್ಯೈವಂ ಸುಪ್ರೀತಮನಸಃ ಪುನಃ|

12315003c ವಿಜ್ಞಾಪಯಂತಿ ಸ್ಮ ಗುರುಂ ಪುನರ್ವಾಕ್ಯವಿಶಾರದಾಃ||

ಹೀಗೆ ಅನ್ಯೋನ್ಯರಲ್ಲಿ ಸಂಭಾಷಣೆಗೈಯದು ಗುರು-ಶಿಷ್ಯರು ಸುಪ್ರೀತರಾದರು. ಆ ವಾಕ್ಯವಿಶಾರದಅರು ಪುನಃ ಒಮ್ಮೆ ಗುರುವಿನಲ್ಲಿ ವಿಜ್ಞಾಪಿಸಿದರು.

12315004a ಶೈಲಾದಸ್ಮಾನ್ಮಹೀಂ ಗಂತುಂ ಕಾಂಕ್ಷಿತಂ ನೋ ಮಹಾಮುನೇ|

12315004c ವೇದಾನನೇಕಧಾ ಕರ್ತುಂ ಯದಿ ತೇ ರುಚಿತಂ ವಿಭೋ||

“ಮಹಾಮುನೇ! ವಿಭೋ! ನಿನಗೆ ಇಷ್ಟವಾದರೆ ವೇದಗಳನ್ನು ಪ್ರಚುರಗೊಳಿಸಲು ಈ ಪರ್ವತದಿಂದ ನಾವು ಮಹೀತಲಕ್ಕೆ ಹೋಗಲು ಬಯಸುತ್ತೇವೆ.

12315005a ಶಿಷ್ಯಾಣಾಂ ವಚನಂ ಶ್ರುತ್ವಾ ಪರಾಶರಸುತಃ ಪ್ರಭುಃ|

12315005c ಪ್ರತ್ಯುವಾಚ ತತೋ ವಾಕ್ಯಂ ಧರ್ಮಾರ್ಥಸಹಿತಂ ಹಿತಮ್||

ಶಿಷ್ಯರ ವಚನವನ್ನು ಕೇಳಿ ಪ್ರಭು ಪರಾಶರಸುತನು ಧರ್ಮಾರ್ಥಸಹಿತವೂ ಹಿತವೂ ಆದ ಈ ಮಾತಿನಲ್ಲಿ ಉತ್ತರಿಸಿದನು.

12315006a ಕ್ಷಿತಿಂ ವಾ ದೇವಲೋಕಂ ವಾ ಗಮ್ಯತಾಂ ಯದಿ ರೋಚತೇ|

12315006c ಅಪ್ರಮಾದಶ್ಚ ವಃ ಕಾರ್ಯೋ ಬ್ರಹ್ಮ ಹಿ ಪ್ರಚುರಚ್ಚಲಮ್||

“ನೀವು ಬಯಸಿದರೆ ಭೂಲೋಕಕ್ಕೆ ಅಥವಾ ದೇವಲೋಕಕ್ಕೆ ಹೋಗಿರಿ. ಆದರೆ ವೇದದ ಪ್ರಚಾರವನ್ನು ನೀವು ಜಾಗರೂಕತೆಯಿಂದ ಮಾಡಬೇಕಾಗಿದೆ.”

12315007a ತೇಽನುಜ್ಞಾತಾಸ್ತತಃ ಸರ್ವೇ ಗುರುಣಾ ಸತ್ಯವಾದಿನಾ|

12315007c ಜಗ್ಮುಃ ಪ್ರದಕ್ಷಿಣಂ ಕೃತ್ವಾ ವ್ಯಾಸಂ ಮೂರ್ಧ್ನಾಭಿವಾದ್ಯ ಚ||

ಸತ್ಯವಾದೀ ಗುರುವಿನಿಂದ ಅನುಜ್ಞಾತರಾದ ಅವರೆಲ್ಲರೂ ವ್ಯಾಸನಿಗೆ ಪ್ರದಕ್ಷಿಣೆ ಮಾಡಿ ಶಿರಬಾಗಿ ನಮಸ್ಕರಿಸಿ ಹೊರಟುಹೋದರು.

12315008a ಅವತೀರ್ಯ ಮಹೀಂ ತೇಽಥ ಚಾತುರ್ಹೋತ್ರಮಕಲ್ಪಯನ್|

12315008c ಸಂಯಾಜಯಂತೋ ವಿಪ್ರಾಂಶ್ಚ ರಾಜನ್ಯಾಂಶ್ಚ ವಿಶಸ್ತಥಾ||

ಅವರು ಭೂಮಿಗೆ ಇಳಿದು ಚಾತುರ್ಹೋತ್ರಗಳಲ್ಲಿ ತೊಡಗಿದರು. ವಿಪ್ರರಿಗೆ, ರಾಜರಿಗೆ ಮತ್ತು ವೈಶ್ಯರಿಗೆ ಯಜ್ಞಯಾಗಾದಿಗಳನ್ನು ಮಾಡಿಸತೊಡಗಿದರು.

12315009a ಪೂಜ್ಯಮಾನಾ ದ್ವಿಜೈರ್ನಿತ್ಯಂ ಮೋದಮಾನಾ ಗೃಹೇ ರತಾಃ|

12315009c ಯಾಜನಾಧ್ಯಾಪನರತಾಃ ಶ್ರೀಮಂತೋ ಲೋಕವಿಶ್ರುತಾಃ||

ನಿತ್ಯವೂ ದ್ವಿಜರಿಂದ ಪೂಜಿಸಲ್ಪಡುತ್ತಾ ಸಂತೋಷದಿಂದ ಗೃಹಸ್ಥಾಶ್ರಮದಲ್ಲಿದ್ದುಕೊಂಡು ಯಾಜನ-ಅಧ್ಯಾಪನರತರಾಗಿ ಶ್ರೀಮಂತರೂ ಲೋಕವಿಶ್ರುತರೂ ಆದರು.

12315010a ಅವತೀರ್ಣೇಷು ಶಿಷ್ಯೇಷು ವ್ಯಾಸಃ ಪುತ್ರಸಹಾಯವಾನ್|

12315010c ತೂಷ್ಣೀಂ ಧ್ಯಾನಪರೋ ಧೀಮಾನೇಕಾಂತೇ ಸಮುಪಾವಿಶತ್||

ಶಿಷ್ಯರು ಇಳಿದು ಹೋದನಂತರ ಪುತ್ರನನ್ನೇ ಸಹಾಯಕನನ್ನಾಗಿ ಹೊಂದಿದ ಧೀಮಾನ್ ವ್ಯಾಸನು ಸುಮ್ಮನಾಗಿ ಧ್ಯಾನಪರನಾಗಿ ಕುಳಿತುಕೊಂಡನು.

12315011a ತಂ ದದರ್ಶಾಶ್ರಮಪದೇ ನಾರದಃ ಸುಮಹಾತಪಾಃ|

12315011c ಅಥೈನಮಬ್ರವೀತ್ಕಾಲೇ ಮಧುರಾಕ್ಷರಯಾ ಗಿರಾ||

ಆಗಲೇ ಸುಮಹಾತಪಸ್ವಿ ನಾರದನು ಆಶ್ರಮಪದದಲ್ಲಿ ಕಾಣಿಸಿಕೊಂಡನು. ಸಮಯವೊದಗಿದ ನಂತರ ಅವನು ಮದುರಾಕ್ಷರದ ಮಾತಿನಲ್ಲಿ ಹೇಳಿದನು:

12315012a ಭೋ ಭೋ ಮಹರ್ಷೇ ವಾಸಿಷ್ಠ ಬ್ರಹ್ಮಘೋಷೋ ನ ವರ್ತತೇ|

12315012c ಏಕೋ ಧ್ಯಾನಪರಸ್ತೂಷ್ಣೀಂ ಕಿಮಾಸ್ಸೇ ಚಿಂತಯನ್ನಿವ||

“ಭೋ! ಭೋ! ಮಹರ್ಷೇ! ವಾಸಿಷ್ಠ! ಬ್ರಹ್ಮಘೋಷವೇನೂ ನಡೆಯುತ್ತಿಲ್ಲ! ಒಬ್ಬನೇ ಧ್ಯಾನಪರನಾಗಿ ಚಿಂತಿಸುತ್ತಿರುವೆಯೋ ಎನ್ನುವಂತೆ ಏಕೆ ಸುಮ್ಮನೇ ಕುಳಿತಿರುವೆ?

12315013a ಬ್ರಹ್ಮಘೋಷೈರ್ವಿರಹಿತಃ ಪರ್ವತೋಽಯಂ ನ ಶೋಭತೇ|

12315013c ರಜಸಾ ತಮಸಾ ಚೈವ ಸೋಮಃ ಸೋಪಪ್ಲವೋ ಯಥಾ||

ರಜಸ್ಸು ಮತ್ತು ತಮಸ್ಸುಗಳಿಂದ ಕೂಡಿ ರಾಹುಗ್ರಸ್ಥನಾದ ಚಂದ್ರನಂತೆಯೇ ಈ ಪರ್ವತವು ಬ್ರಹ್ಮಘೋಷಗಳಿಲ್ಲದೇ ಶೋಭಿಸುತ್ತಿಲ್ಲ.

12315014a ನ ಭ್ರಾಜತೇ ಯಥಾಪೂರ್ವಂ ನಿಷಾದಾನಾಮಿವಾಲಯಃ|

12315014c ದೇವರ್ಷಿಗಣಜುಷ್ಟೋಽಪಿ ವೇದಧ್ವನಿನಿರಾಕೃತಃ||

ದೇವರ್ಷಿಗಣ ಸೇವಿತವಾಗಿದ್ದರೂ ವೇದಧ್ವನಿಯಿಲ್ಲದೇ ಇದು ನಿಷಾದರ ಆಲಯದಂತೆ ಹಿಂದಿನ ಹಾಗೆ ಪ್ರಕಾಶಿಸುತ್ತಿಲ್ಲ.

12315015a ಋಷಯಶ್ಚ ಹಿ ದೇವಾಶ್ಚ ಗಂಧರ್ವಾಶ್ಚ ಮಹೌಜಸಃ|

12315015c ವಿಮುಕ್ತಾ ಬ್ರಹ್ಮಘೋಷೇಣ ನ ಭ್ರಾಜಂತೇ ಯಥಾ ಪುರಾ||

ಬ್ರಹ್ಮಘೋಷವಿಲ್ಲದೇ ಋಷಿಗಳೂ, ದೇವತೆಗಳೂ, ಮಹೌಜಸ ಗಂಧರ್ವರೂ ಹಿಂದಿನಂತೆ ಪ್ರಕಾಶಿಸುತ್ತಿಲ್ಲ.”

12315016a ನಾರದಸ್ಯ ವಚಃ ಶ್ರುತ್ವಾ ಕೃಷ್ಣದ್ವೈಪಾಯನೋಽಬ್ರವೀತ್|

12315016c ಮಹರ್ಷೇ ಯತ್ತ್ವಯಾ ಪ್ರೋಕ್ತಂ ವೇದವಾದವಿಚಕ್ಷಣ||

12315017a ಏತನ್ಮನೋನುಕೂಲಂ ಮೇ ಭವಾನರ್ಹತಿ ಭಾಷಿತುಮ್|

12315017c ಸರ್ವಜ್ಞಃ ಸರ್ವದರ್ಶೀ ಚ ಸರ್ವತ್ರ ಚ ಕುತೂಹಲೀ||

ನಾರದನ ಮಾತನ್ನು ಕೇಳಿ ಕೃಷ್ಣದ್ವೈಪಾಯನನು ಹೇಳಿದನು: “ವೇದವಾದವಿಚಕ್ಷಣ! ಮಹರ್ಷೇ! ನೀನು ಹೇಳಿದುದನ್ನು ಒಪ್ಪುತ್ತೇನೆ. ಸರ್ವಜ್ಞನೂ, ಸರ್ವದರ್ಶಿಯೂ, ಸರ್ವತ್ರ ಕುತೂಹಲಿಯೂ ಆದ ನೀನು ಈ ರೀತಿ ಹೇಳಲು ಅರ್ಹನಾಗಿದ್ದೀಯೆ.

12315018a ತ್ರಿಷು ಲೋಕೇಷು ಯದ್ವೃತ್ತಂ ಸರ್ವಂ ತವ ಮತೇ ಸ್ಥಿತಮ್|

12315018c ತದಾಜ್ಞಾಪಯ ವಿಪ್ರರ್ಷೇ ಬ್ರೂಹಿ ಕಿಂ ಕರವಾಣಿ ತೇ||

ಮೂರು ಲೋಕಗಳಲ್ಲಿ ನಡೆಯುವುದೆಲ್ಲವೂ ನಿನಗೆ ತಿಳಿದೇ ಇದೆ. ವಿಪ್ರರ್ಷೇ! ನಿನಗೆ ನಾನು ಏನು ಮಾಡಲಿ. ಆಜ್ಞಾಪಿಸು!

12315019a ಯನ್ಮಯಾ ಸಮನುಷ್ಠೇಯಂ ಬ್ರಹ್ಮರ್ಷೇ ತದುದಾಹರ|

12315019c ವಿಯುಕ್ತಸ್ಯೇಹ ಶಿಷ್ಯೈರ್ಮೇ ನಾತಿಹೃಷ್ಟಮಿದಂ ಮನಃ||

ಬ್ರಹ್ಮರ್ಷೇ! ಈ ಸಮಯದಲ್ಲಿ ನನ್ನ ಕರ್ತವ್ಯವೇನೆಂದು ಹೇಳು. ಶಿಷ್ಯರಿಂದ ವಿಹೀನನಾದ ನನ್ನ ಮನಸ್ಸು ಅಷ್ಟು ಪ್ರಸನ್ನವಾಗಿಲ್ಲ.”

12315020 ನಾರದ ಉವಾಚ|

12315020a ಅನಾಮ್ನಾಯಮಲಾ ವೇದಾ ಬ್ರಾಹ್ಮಣಸ್ಯಾವ್ರತಂ ಮಲಮ್|

12315020c ಮಲಂ ಪೃಥಿವ್ಯಾ ವಾಹೀಕಾಃ ಸ್ತ್ರೀಣಾಂ ಕೌತೂಹಲಂ ಮಲಮ್||

ನಾರದನು ಹೇಳಿದನು: “ವೇದಾಧ್ಯಯನ ಮಾಡಿ ಅದನ್ನು ಪುನಃ ಅಭ್ಯಾಸ ಅಥವಾ ಪುನರಾವೃತ್ತಿಯನ್ನು ಮಾಡದಿದ್ದರೆ ಅದು ವೇದಾಧ್ಯಯನದ ದೂಷಣವಾಗುತ್ತದೆ. ವ್ರತಾನಿಷ್ಠಾನಗಳನ್ನು ಮಾಡದಿರುವುದರಿಂದ ಬ್ರಾಹ್ಮಣನು ದೂಷಿತನಾಗುತ್ತಾನೆ. ವಾಹೀಕದೇಶದ ಜನರು ಪೃಥ್ವಿಗೆ ಕಳಂಕಪ್ರಾಯರಾಗಿದ್ದಾರೆ. ಲಾಲಸೆಯು ಸ್ತ್ರೀಯರನ್ನು ದೂಷಿತಗೊಳಿಸುತ್ತದೆ.

12315021a ಅಧೀಯತಾಂ ಭವಾನ್ವೇದಾನ್ಸಾರ್ಧಂ ಪುತ್ರೇಣ ಧೀಮತಾ|

12315021c ವಿಧುನ್ವನ್ ಬ್ರಹ್ಮಘೋಷೇಣ ರಕ್ಷೋಭಯಕೃತಂ ತಮಃ||

ರಾಕ್ಷಸರ ಭಯದಿಂದ ಉಂಟಾದ ಅಂಧಕಾರವನ್ನು ವೇದಘೋಷದಿಂದ ವಿನಾಶಗೊಳಿಸುತ್ತಾ ಧೀಮಂತ ಪುತ್ರನೊಡನೆ ವೇದಾಧ್ಯಯನ ಮಾಡು.””

12315022 ಭೀಷ್ಮ ಉವಾಚ|

12315022a ನಾರದಸ್ಯ ವಚಃ ಶ್ರುತ್ವಾ ವ್ಯಾಸಃ ಪರಮಧರ್ಮವಿತ್|

12315022c ತಥೇತ್ಯುವಾಚ ಸಂಹೃಷ್ಟೋ ವೇದಾಭ್ಯಾಸೇ ದೃಢವ್ರತಃ||

ಭೀಷ್ಮನು ಹೇಳಿದನು: “ನಾರದನ ಮಾತನ್ನು ಕೇಳಿ ಪರಮಧರ್ಮವಿದು ವ್ಯಾಸನು ಹಾಗೆಯೇ ಆಗಲೆಂದು ಹೇಳಿ ಸಂಹೃಷ್ಟನಾಗಿ ವೇದಾಭ್ಯಾಸದಲ್ಲಿ ದೃಢವ್ರತನಾದನು.

12315023a ಶುಕೇನ ಸಹ ಪುತ್ರೇಣ ವೇದಾಭ್ಯಾಸಮಥಾಕರೋತ್|

12315023c ಸ್ವರೇಣೋಚ್ಚೈಃ ಸ ಶೈಕ್ಷೇಣ ಲೋಕಾನಾಪೂರಯನ್ನಿವ||

ಲೋಕಗಳನ್ನೇ ತುಂಬುವಂತೆ ಉಚ್ಚ ಸ್ವರಗಳಲ್ಲಿ ಅವನು ಪುತ್ರ ಶುಕನೊಡನೆ ವೇದಾಭ್ಯಾಸವನ್ನು ಮಾಡಿದನು.

12315024a ತಯೋರಭ್ಯಸತೋರೇವಂ ನಾನಾಧರ್ಮಪ್ರವಾದಿನೋಃ|

12315024c ವಾತೋಽತಿಮಾತ್ರಂ ಪ್ರವವೌ ಸಮುದ್ರಾನಿಲವೇಜಿತಃ||

ನಾನಾಧರ್ಮಪ್ರವಾದಿಗಳಾಗಿದ್ದ ಅವರಿಬ್ಬರೂ ಹೀಗೆ ವೇದಾಧ್ಯಯನ ಮಾಡುತ್ತಿರುವಾಗ ಸಮುದ್ರದ ಮೇಲಿನ ಗಾಳಿಯಿಂದ ಪ್ರಚೋದಿತವಾದ ಭಿರುಗಾಳಿಯು ಜೋರಾಗಿ ಬೀಸತೊಡಗಿತು.

12315025a ತತೋಽನಧ್ಯಾಯ ಇತಿ ತಂ ವ್ಯಾಸಃ ಪುತ್ರಮವಾರಯತ್|

12315025c ಶುಕೋ ವಾರಿತಮಾತ್ರಸ್ತು ಕೌತೂಹಲಸಮನ್ವಿತಃ||

ಆಗ “ಅನಧ್ಯಾಯ” ಎಂದು ವ್ಯಾಸನು ಪುತ್ರನನ್ನು ವೇದಾಧ್ಯಯನದಿಂದ ತಡೆದು ನಿಲ್ಲಿಸಿದನು. ಹಾಗೆ ನಿಲ್ಲಿಸಲು ಶುಕನು ಕುತೂಹಲಗೊಂಡನು.

12315026a ಅಪೃಚ್ಚತ್ಪಿತರಂ ಬ್ರಹ್ಮನ್ಕುತೋ ವಾಯುರಭೂದಯಮ್|

12315026c ಆಖ್ಯಾತುಮರ್ಹತಿ ಭವಾನ್ವಾಯೋಃ ಸರ್ವಂ ವಿಚೇಷ್ಟಿತಮ್||

ಅಂತೆಯೇ ತಂದೆಯನ್ನು ಪ್ರಶ್ನಿಸಿದನು. “ಬ್ರಹ್ಮನ್! ಈ ಗಾಳಿಯು ಎಲ್ಲಿಂದ ಹುಟ್ಟಿ ಬಂದಿತು? ವಾಯುವಿನ ಸರ್ವ ಚೇಷ್ಟೆಗಳ ಕುರಿತು ನನಗೆ ನೀವು ಹೇಳಬೇಕು.”

12315027a ಶುಕಸ್ಯೈತದ್ವಚಃ ಶ್ರುತ್ವಾ ವ್ಯಾಸಃ ಪರಮವಿಸ್ಮಿತಃ|

12315027c ಅನಧ್ಯಾಯನಿಮಿತ್ತೇಽಸ್ಮಿನ್ನಿದಂ ವಚನಮಬ್ರವೀತ್||

ಶುಕನ ಆ ಮಾತನ್ನು ಕೇಳಿ ವ್ಯಾಸನು ಪರಮವಿಸ್ಮಿತನಾದನು. ಅನಧ್ಯಾಯದ ನಿಮಿತ್ತವನ್ನು ವರ್ಣಿಸುತ್ತಾ ಹೇಳಿದನು:

12315028a ದಿವ್ಯಂ ತೇ ಚಕ್ಷುರುತ್ಪನ್ನಂ ಸ್ವಸ್ಥಂ ತೇ ನಿರ್ಮಲಂ ಮನಃ|

12315028c ತಮಸಾ ರಜಸಾ ಚಾಪಿ ತ್ಯಕ್ತಃ ಸತ್ತ್ವೇ ವ್ಯವಸ್ಥಿತಃ||

“ನಿನಗೆ ಸ್ವತಃ ದಿವ್ಯದೃಷ್ಟಿಯು ಪ್ರಾಪ್ತವಾಗಿದೆ. ನಿನ್ನ ಮನಸ್ಸು ನಿರ್ಮಲವಾಗಿದೆ. ತಮಸ್ಸು ಮತ್ತು ರಜಸ್ಸುಗಳನ್ನು ತ್ಯಜಿಸಿ ಸತ್ತ್ವದಲ್ಲಿ ನೆಲೆಸಿರುವೆ.

12315029a ಆದರ್ಶೇ ಸ್ವಾಮಿವ ಚಾಯಾಂ ಪಶ್ಯಸ್ಯಾತ್ಮಾನಮಾತ್ಮನಾ|

12315029c ನ್ಯಸ್ಯಾತ್ಮನಿ ಸ್ವಯಂ ವೇದಾನ್ಬುದ್ಧ್ಯಾ ಸಮನುಚಿಂತಯ||

ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ಕಾಣುವಂತೆ ನಿನ್ನ ಬುದ್ಧಿಯೆಂಬ ಕನ್ನಡಿಯಲ್ಲಿ ನಿನ್ನ ಆತ್ಮನನ್ನು ನೋಡುತ್ತಿರುವೆ. ವೇದಗಳೆಲ್ಲವನ್ನೂ ಬುದ್ಧಿಯಲ್ಲಿ ಧಾರಣೆಮಾಡಿ ಅನಧ್ಯಾಯಕ್ಕೆ ಕಾರಣನಾದ ವಾಯುವಿನ ವಿಷಯವಾಗಿ ನೀನೇ ಚಿಂತಿಸು.

12315030a ದೇವಯಾನಚರೋ ವಿಷ್ಣೋಃ ಪಿತೃಯಾನಶ್ಚ ತಾಮಸಃ|

12315030c ದ್ವಾವೇತೌ ಪ್ರೇತ್ಯ ಪಂಥಾನೌ ದಿವಂ ಚಾಧಶ್ಚ ಗಚ್ಚತಃ||

ವಿಷ್ಣುವಿನ ಲೋಕಕ್ಕೆ ಹೋಗುವವರಿಗೆ ದೇವಯಾನ ಮಾರ್ಗ ಮತ್ತು ಅಧೋಲೋಕಗಳಿಗೆ ಹೋಗುವವರಿಗೆ ತಾಮಸವಾದ ಪಿತೃಮಾರ್ಗ – ಹೀಗೆ ಮರಣಾನಂತರ ಊರ್ಧ್ವ ಮತ್ತು ಅಧೋಲೋಕಗಳಿಗೆ ಹೋಗಲು ಎರಡು ಮಾರ್ಗಗಳಿವೆ.

12315031a ಪೃಥಿವ್ಯಾಮಂತರಿಕ್ಷೇ ಚ ಯತ್ರ ಸಂವಾಂತಿ ವಾಯವಃ|

12315031c ಸಪ್ತೈತೇ ವಾಯುಮಾರ್ಗಾ ವೈ ತಾನ್ನಿಬೋಧಾನುಪೂರ್ವಶಃ||

ಪೃಥ್ವಿಯಲ್ಲಿ ಮತ್ತು ಅಂತರಿಕ್ಷದಲ್ಲಿ ಎಲ್ಲಿ ವಾಯುವು ಬೀಸುತ್ತದೆಯೋ ಅಲ್ಲಿ ಏಳು ವಾಯುಮಾರ್ಗಗಳಿವೆ. ಅದನ್ನು ಅನುಕ್ರಮವಾಗಿ ಕೇಳು.

12315032a ತತ್ರ ದೇವಗಣಾಃ ಸಾಧ್ಯಾಃ ಸಮಭೂವನ್ಮಹಾಬಲಾಃ|

12315032c ತೇಷಾಮಪ್ಯಭವತ್ಪುತ್ರಃ ಸಮಾನೋ ನಾಮ ದುರ್ಜಯಃ||

ಅಲ್ಲಿ ಮಹಾಬಲರಾದ ಸಾಧ್ಯರೆನ್ನುವ ದೇವಗಣವಿದೆ. ಅವರಿಗೆ ಸಮಾನ ಎಂಬ ಹೆಸರಿನ ದುರ್ಜಯ ಪುತ್ರನು ಜನಿಸಿದನು.

12315033a ಉದಾನಸ್ತಸ್ಯ ಪುತ್ರೋಽಭೂದ್ವ್ಯಾನಸ್ತಸ್ಯಾಭವತ್ಸುತಃ|

12315033c ಅಪಾನಶ್ಚ ತತೋ ಜ್ಞೇಯಃ ಪ್ರಾಣಶ್ಚಾಪಿ ತತಃ ಪರಮ್||

ಅವನಿಗೆ ಉದಾನನೆಂಬ ಪುತ್ರನಾದನು. ಉದಾನನಿಗೆ ವ್ಯಾನನೆಂಬ ಸುತನಾದನು. ವ್ಯಾನನಿಗೆ ಅಪಾನ ಮತ್ತು ನಂತರ ಅಪಾನನಿಗೆ ಪ್ರಾಣನೆಂಬ ಮಗನು ಹುಟ್ಟಿದರು.

12315034a ಅನಪತ್ಯೋಽಭವತ್ಪ್ರಾಣೋ ದುರ್ಧರ್ಷಃ ಶತ್ರುತಾಪನಃ|

12315034c ಪೃಥಕ್ಕರ್ಮಾಣಿ ತೇಷಾಂ ತು ಪ್ರವಕ್ಷ್ಯಾಮಿ ಯಥಾತಥಮ್||

ದುರ್ಧರ್ಷ ಶತ್ರುತಾಪನ ಪ್ರಾಣನಿಗೆ ಮಕ್ಕಳಾಗಲಿಲ್ಲ. ಪ್ರತ್ಯೇಕ ಪ್ರತ್ಯೇಕವಾಗಿ ಅವರ ಕರ್ಮಗಳ ಕುರಿತು ಯಥಾತಥವಾಗಿ ಹೇಳುತ್ತೇನೆ.

12315035a ಪ್ರಾಣಿನಾಂ ಸರ್ವತೋ ವಾಯುಶ್ಚೇಷ್ಟಾ ವರ್ತಯತೇ ಪೃಥಕ್|

12315035c ಪ್ರಾಣನಾಚ್ಚೈವ ಭೂತಾನಾಂ ಪ್ರಾಣ ಇತ್ಯಭಿಧೀಯತೇ||

ವಾಯುವು ಪ್ರಾಣಿಗಳನ್ನು ಎಲ್ಲಕಡೆಗಳಿಂದಲೂ ಪ್ರತ್ಯೇಕ ಪ್ರತ್ಯೇಕವಾಗಿ ಚೇಷ್ಟೆಮಾಡುತ್ತಿರುತ್ತದೆ. ಪ್ರಾಣಿಗಳು ಜೀವಂತವಾಗಿರಲು ಕಾರಣವಾದುದರಿಂದ ಇದನ್ನು ಪ್ರಾಣ ಎಂದು ಕರೆಯುತ್ತಾರೆ.

12315036a ಪ್ರೇರಯತ್ಯಭ್ರಸಂಘಾತಾನ್ಧೂಮಜಾಂಶ್ಚೋಷ್ಮಜಾಂಶ್ಚ ಯಃ|

12315036c ಪ್ರಥಮಃ ಪ್ರಥಮೇ ಮಾರ್ಗೇ ಪ್ರವಹೋ ನಾಮ ಸೋಽನಿಲಃ||

ಹೊಗೆ ಮತ್ತು ಉಷ್ಣದಿಂದ ಹುಟ್ಟುವ ಮೇಘಸಮೂಹಗಳು ಅಲ್ಲಿಂದಿಲ್ಲಿಗೆ ಚಲಿಸುವಂತೆ ಮಾಡುವ ವಾಯುವು ಪ್ರಥಮ ಮಾರ್ಗದಲ್ಲಿ ಚಲಿಸುವ “ಪ್ರವಹ” ಎಂಬ ಹೆಸರಿನ ಮೊದಲನೆಯ ವಾಯುವು.

12315037a ಅಂಬರೇ ಸ್ನೇಹಮಭ್ರೇಭ್ಯಸ್ತಡಿದ್ಭ್ಯಶ್ಚೋತ್ತಮದ್ಯುತಿಃ|

12315037c ಆವಹೋ ನಾಮ ಸಂವಾತಿ ದ್ವಿತೀಯಃ ಶ್ವಸನೋ ನದನ್||

ಅಂಬರದಲ್ಲಿ ಮೋಡಗಳಿಗೆ ಅಂಟಿಕೊಂಡು ಜೋರಾಗಿ ಗರ್ಜಿಸುತ್ತಾ ವಿದ್ಯುತ್ತಿನೊಂದಿಗೆ ಬೀಸುವ ಎರಡನೆಯ ವಾಯುವು “ಆವಹ” ಎಂಬ ಹೆಸರಿನದು.

12315038a ಉದಯಂ ಜ್ಯೋತಿಷಾಂ ಶಶ್ವತ್ಸೋಮಾದೀನಾಂ ಕರೋತಿ ಯಃ|

12315038c ಅಂತರ್ದೇಹೇಷು ಚೋದಾನಂ ಯಂ ವದಂತಿ ಮಹರ್ಷಯಃ||

12315039a ಯಶ್ಚತುರ್ಭ್ಯಃ ಸಮುದ್ರೇಭ್ಯೋ ವಾಯುರ್ಧಾರಯತೇ ಜಲಮ್|

12315039c ಉದ್ಧೃತ್ಯಾದದತೇ ಚಾಪೋ ಜೀಮೂತೇಭ್ಯೋಽಂಬರೇಽನಿಲಃ||

12315040a ಯೋಽದ್ಭಿಃ ಸಂಯೋಜ್ಯ ಜೀಮೂತಾನ್ಪರ್ಜನ್ಯಾಯ ಪ್ರಯಚ್ಚತಿ|

12315040c ಉದ್ವಹೋ ನಾಮ ವರ್ಷಿಷ್ಠಸ್ತ್ರಿತೀಯಃ ಸ ಸದಾಗತಿಃ||

ನಕ್ಷತ್ರಾದಿಗಳ ಮತ್ತು ಸೋಮ-ಸೂರ್ಯಾದಿ ಗ್ರಹಗಳ ಉದಯವನ್ನುಂಟುಮಾಡುವ, ನಾಲ್ಕೂ ಸಮುದ್ರಗಳಿಂದ ಜಲರಾಶಿಯನ್ನು ಹೊತ್ತು ಮೇಲಕ್ಕೆ ತೆಗೆದುಕೊಂಡು ಹೋಗಿ ಮೋಡಗಳಿಗೆ ಕೊಡುವ ಮತ್ತು ಮೇಘಗಳನ್ನು ನೀರಿನೊಡನೆ ಸಂಯೋಜಿಸಿ ಪರ್ಜನ್ಯನಿಗೆ ಒಪ್ಪಿಸುವ, ಶರೀರಗಳಲ್ಲಿರುವ ಯಾವುದನ್ನು ಮಹರ್ಷಿಗಳು ಉದಾನವೆಂದು ಕರೆಯುವರೋ ಆ ಮೂರನೆಯ ಮಹಾವಾಯುವಿಗೆ ಉದ್ವಹ ಎಂದು ಹೆಸರು.

12315041a ಸಮುಹ್ಯಮಾನಾ ಬಹುಧಾ ಯೇನ ನೀಲಾಃ ಪೃಥಗ್ಘನಾಃ|

12315041c ವರ್ಷಮೋಕ್ಷಕೃತಾರಂಭಾಸ್ತೇ ಭವಂತಿ ಘನಾಘನಾಃ||

12315042a ಸಂಹತಾ ಯೇನ ಚಾವಿದ್ಧಾ ಭವಂತಿ ನದತಾಂ ನದಾಃ|

12315042c ರಕ್ಷಣಾರ್ಥಾಯ ಸಂಭೂತಾ ಮೇಘತ್ವಮುಪಯಾಂತಿ ಚ||

12315043a ಯೋಽಸೌ ವಹತಿ ದೇವಾನಾಂ ವಿಮಾನಾನಿ ವಿಹಾಯಸಾ|

12315043c ಚತುರ್ಥಃ ಸಂವಹೋ ನಾಮ ವಾಯುಃ ಸ ಗಿರಿಮರ್ದನಃ||

ಚದುರಿದ ಮೋಡಗಳು ಯಾವುದರಿಂದ ಘನಮೋಡಗಳಾಗುವವೋ, ಇನ್ನೂ ದಟ್ಟವಾಗಿ ಮಳೆಯನ್ನು ಸುರಿಸಲು ಪ್ರಾರಂಭಿಸುತ್ತವೆಯೋ, ಯಾರ ಸಂಹತದಿಂದ ನದಿಗಳು ಭೋರ್ಗರೆಯುವ ಪ್ರವಾಹವುಳ್ಳದ್ದಾಗುತ್ತವೆಯೋ, ಪ್ರಜೆಗಳ ರಕ್ಷಣೆಗಾಗಿ ಪುನಃ ಮೇಘತ್ವವನ್ನು ಪಡೆದುಕೊಳ್ಳುವ, ದೇವತೆಗಳ ವಿಮಾನಗಳನ್ನು ಕೊಂಡೊಯ್ಯುವ. ಪರ್ವತ ಶಿಖರಗಳನ್ನೇ ಧ್ವಂಸಮಾಡಬಲ್ಲ ನಾಲ್ಕನೆಯ ವಾಯುವಿನ ಹೆಸರು “ಸಂವಹ” ಎಂದು.

12315044a ಯೇನ ವೇಗವತಾ ರುಗ್ಣಾ ರೂಕ್ಷೇಣಾರುಜತಾ ರಸಾನ್|

12315044c ವಾಯುನಾ ವಿಹತಾ ಮೇಘಾ ನ ಭವಂತಿ ಬಲಾಹಕಾಃ||

12315045a ದಾರುಣೋತ್ಪಾತಸಂಚಾರೋ ನಭಸಃ ಸ್ತನಯಿತ್ನುಮಾನ್|

12315045c ಪಂಚಮಃ ಸ ಮಹಾವೇಗೋ ವಿವಹೋ ನಾಮ ಮಾರುತಃ||

ಭಯಂಕರ ವೇಗದಿಂದ ಬೀಸಿ ಬೆಟ್ಟಗಳನ್ನು ಮರ್ದಿಸುವ ಯಾವ ವಾಯುವಿನಿಂದಾಗಿ ಮೇಘಗಳು ಬಲಾಹಕ ಮೋಡಗಳಾಗುತ್ತವೆಯೋ, ಯಾರ ಸಂಚಾರವು ನಭದಲ್ಲಿ ಮೋಡಗಳನ್ನು ಚಲಿಸುವಂತೆ ಮಾಡಿ ಭಯಂಕರ ಉತ್ಪಾತಗಳನ್ನು ಉಂಟುಮಾಡುವುದೋ ಆ ಐದನೆಯ ಮಹಾವೇಗಯುಕ್ತ ಮಾರುತನ ಹೆಸರು “ವಿವಹ”.

12315046a ಯಸ್ಮಿನ್ಪಾರಿಪ್ಲವೇ ದಿವ್ಯಾ ವಹಂತ್ಯಾಪೋ ವಿಹಾಯಸಾ|

12315046c ಪುಣ್ಯಂ ಚಾಕಾಶಗಂಗಾಯಾಸ್ತೋಯಂ ವಿಷ್ಟಭ್ಯ ತಿಷ್ಠತಿ||

12315047a ದೂರಾತ್ಪ್ರತಿಹತೋ ಯಸ್ಮಿನ್ನೇಕರಶ್ಮಿರ್ದಿವಾಕರಃ|

12315047c ಯೋನಿರಂಶುಸಹಸ್ರಸ್ಯ ಯೇನ ಭಾತಿ ವಸುಂಧರಾ||

12315048a ಯಸ್ಮಾದಾಪ್ಯಾಯತೇ ಸೋಮೋ ನಿಧಿರ್ದಿವ್ಯೋಽಮೃತಸ್ಯ ಚ|

12315048c ಷಷ್ಠಃ ಪರಿವಹೋ ನಾಮ ಸ ವಾಯುರ್ಜವತಾಂ ವರಃ||

ನೀರಿನ ಮೇಲೆ ಸಂಚರಿಸುವ ಪಕ್ಷಿಗಳನ್ನು ಒಯ್ಯುವ, ಪುಣ್ಯ ಆಕಾಶಗಂಗೆಯ ನೀರನ್ನು ಧರಿಸಿರುವ, ಯಾರ ಪರಿಹತನಾಗಿ ಸಹಸ್ರಾಂಶುಗಳ ಯೋನಿ ದಿವಾಕರನು ದೂರದಿಂದ ಒಂದೇ ಕಿರಣದಿಂದ ಕೂಡಿರುವವನಂತೆ ಕಾಣುತ್ತಾನೋ, ಯಾರಿಂದ ಈ ವಸುಂಧರೆಯು ಪ್ರಕಾಶಮಾನವಾಗಿರುವುದೋ, ಮತ್ತು ಅಮೃತನಿಧಿ ದಿವ್ಯ ಸೋಮನು ಯಾರಿಂದ ಪೋಷಿಸಲ್ಪಡುತ್ತಿರುವನೋ ಆ ವಿಜಯಗಳಲ್ಲಿ ಶ್ರೇಷ್ಠ ಆರನೆಯ ವಾಯುವಿನ ಹೆಸರು “ಪರಿವಹ” ಎಂದು.

12315049a ಸರ್ವಪ್ರಾಣಭೃತಾಂ ಪ್ರಾಣಾನ್ಯೋಽಂತಕಾಲೇ ನಿರಸ್ಯತಿ|

12315049c ಯಸ್ಯ ವರ್ತ್ಮಾನುವರ್ತೇತೇ ಮೃತ್ಯುವೈವಸ್ವತಾವುಭೌ||

12315050a ಸಮ್ಯಗನ್ವೀಕ್ಷತಾಂ ಬುದ್ಧ್ಯಾ ಶಾಂತಯಾಧ್ಯಾತ್ಮನಿತ್ಯಯಾ|

12315050c ಧ್ಯಾನಾಭ್ಯಾಸಾಭಿರಾಮಾಣಾಂ ಯೋಽಮೃತತ್ವಾಯ ಕಲ್ಪತೇ||

12315051a ಯಂ ಸಮಾಸಾದ್ಯ ವೇಗೇನ ದಿಶಾಮಂತಂ ಪ್ರಪೇದಿರೇ|

12315051c ದಕ್ಷಸ್ಯ ದಶ ಪುತ್ರಾಣಾಂ ಸಹಸ್ರಾಣಿ ಪ್ರಜಾಪತೇಃ||

12315052a ಯೇನ ಸೃಷ್ಟಃ ಪರಾಭೂತೋ ಯಾತ್ಯೇವ ನ ನಿವರ್ತತೇ|

12315052c ಪರಾವಹೋ ನಾಮ ಪರೋ ವಾಯುಃ ಸ ದುರತಿಕ್ರಮಃ||

ಅಂತಕಾಲದಲ್ಲಿ ಸರ್ವಪ್ರಾಣಿಗಳ ಪ್ರಾಣಗಳನ್ನು ಹೊರತೆಗೆಯುವ, ಮೃತ್ಯು ಮತ್ತು ವೈವಸ್ವತರು ಹಿಂಬಾಲಿಸಿ ಹೋಗುವ, ಆಧ್ಯಾತ್ಮಚಿಂತನೆಯಲ್ಲಿರುವ ಶಾಂತ ಬುದ್ಧಿಯನ್ನು ಧ್ಯಾನದಲ್ಲಿ ತೊಡಗಿಸಿಕೊಂಡು ಆನಂದಪಡುವ ಮತ್ತು ಬ್ರಹ್ಮವಸ್ತುವನ್ನು ಚೆನ್ನಾಗಿ ನೋಡುವ ಸಾಧಕರಿಗೆ ಅಮೃತತ್ತ್ವವನ್ನೀಯಲು ಸಮರ್ಥನಾದ, ಯಾರನ್ನು ಅನುಸರಿಸಿ ಪ್ರಜಾಪತಿ ದಕ್ಷನ ಹತ್ತು ಸಾವಿರ ಪುತ್ರರು ಅತಿವೇಗದಲ್ಲಿ ದಿಕ್ಕಿನ ಅಂತ್ಯವನ್ನು ಸೇರಿದರೋ ಮತ್ತು ಯಾರ ಸ್ಪರ್ಷದಿಂದ ಪರಲೋಕವನ್ನು ಸೇರಿದವರು ಹಿಂದಿರುಗುವುದಿಲ್ಲವೋ ಅಂತಹ ಅತಿಕ್ರಮಿಸಲು ಅಸಾಧ್ಯವಾದ  ಏಳನೆಯ ವಾಯುವಿನ ಹೆಸರು ಪರಾವಹ ಎಂದು.

12315053a ಏವಮೇತೇಽದಿತೇಃ[1] ಪುತ್ರಾ ಮಾರುತಾಃ ಪರಮಾದ್ಭುತಾಃ|

12315053c ಅನಾರಮಂತಃ ಸಂವಾಂತಿ ಸರ್ವಗಾಃ ಸರ್ವಧಾರಿಣಃ||

ಹೀಗೆ ಈ ಸಪ್ತಮಾರುತರೂ ಅದಿತಿಯ ಪರಮಾದ್ಭುತ ಪುತ್ರರು. ಎಲ್ಲವನ್ನೂ ಧಾರಣೆಮಾಡಿರುವ ಈ ವಾಯುಗಳು ಎಲ್ಲಕಡೆ ನಿರಂತರವಾಗಿ ಬೀಸುತ್ತಿರುತ್ತವೆ.

12315054a ಏತತ್ತು ಮಹದಾಶ್ಚರ್ಯಂ ಯದಯಂ ಪರ್ವತೋತ್ತಮಃ|

12315054c ಕಂಪಿತಃ ಸಹಸಾ ತೇನ ವಾಯುನಾಭಿಪ್ರವಾಯತಾ||

ಅತ್ಯಂತ ವೇಗವಾಗಿ ಬೀಸುತ್ತಿರುವ ಈ ಗಾಳಿಯಿಂದಾಗಿ ಪರ್ವತಶ್ರೇಷ್ಠ ಈ ಹಿಮಾಲಯವೂ ಕಂಪಿಸುತ್ತಿರುವುದು ಮಹಾ ಆಶ್ಚರ್ಯಕರವಾಗಿದೆ.

12315055a ವಿಷ್ಣೋರ್ನಿಃಶ್ವಾಸವಾತೋಽಯಂ ಯದಾ ವೇಗಸಮೀರಿತಃ|

12315055c ಸಹಸೋದೀರ್ಯತೇ ತಾತ ಜಗತ್ ಪ್ರವ್ಯಥತೇ ತದಾ||

ಮಗೂ! ಈ ವಾಯುವು ವಿಷ್ಣುವಿನ ನಿಃಶ್ವಾಸವಾಗಿದೆ. ಅವನ ಈ ನಿಃಶ್ವಾಸ ವಾಯುವು ವೇಗಯುಕ್ತವಾಗಿ ಒಡನೆಯೇ ಘ್ರಾಣದಿಂದ ಹೊರಬಂದಾಗ ಜಗತ್ತು ಬಹಳವಾಗಿ ವ್ಯಥೆಪಡುತ್ತದೆ.

12315056a ತಸ್ಮಾದ್ಬ್ರಹ್ಮವಿದೋ ಬ್ರಹ್ಮ ನಾಧೀಯಂತೇಽತಿವಾಯತಿ|

12315056c ವಾಯೋರ್ವಾಯುಭಯಂ ಹ್ಯುಕ್ತಂ ಬ್ರಹ್ಮ ತತ್ಪೀಡಿತಂ ಭವೇತ್||

ಆದುದರಿಂದ ಬ್ರಹ್ಮವಿದರು ಬಿರುಗಾಳಿಯು ವೀಸುತ್ತಿರುವಾಗ ವೇದಾಧ್ಯಯನವನ್ನು ಮಾಡುವುದಿಲ್ಲ. ವೇದವು ಭಗವಂತನ ನಿಃಶ್ವಾಸವೇ ಆಗಿರುವುದರಿಂದ ಬಿರುಗಾಳಿ ಬೀಶುತ್ತಿರುವಾಗ ವೀದಾಧ್ಯಯವನ್ನು ಮಾಡಿದರೆ ವಾಯುವಿನಿಂದಲೇ ವಾಯುವಿಗೆ ಭಯವುಂಟಾಗುತ್ತದೆ. ಇದರಿಂದ ವೇದಕ್ಕೂ ಪೀಡೆಯುಂಟಾಗುತ್ತದೆ.

12315057a ಏತಾವದುಕ್ತ್ವಾ ವಚನಂ ಪರಾಶರಸುತಃ ಪ್ರಭುಃ|

12315057c ಉಕ್ತ್ವಾ ಪುತ್ರಮಧೀಷ್ವೇತಿ ವ್ಯೋಮಗಂಗಾಮಯಾತ್ತದಾ||

ಈ ಮಾತನ್ನು ಹೇಳಿ ಪರಾಶರಸುತ ಪ್ರಭುವು ವೇದಾಧ್ಯಯವನ್ನು ಮುಂದುವರಿಸು ಎಂದು ಹೇಳಿ ಆಕಾಶಗಂಗೆಯ ಕಡೆ ಹೋದನು.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಅನಧ್ಯಾಯನಿಮಿತ್ತಕಥನಂ ನಾಮ ಪಂಚದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಅನಧ್ಯಾಯನಿಮಿತ್ತಕಥನ ಎನ್ನುವ ಮುನ್ನೂರಾಹದಿನೈದನೇ ಅಧ್ಯಾಯವು.

Stargazer Lily

[1] ಏವಮೇತೇ ದಿತೇಃ ಪುತ್ರಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.