Shanti Parva: Chapter 314

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೧೪

ವ್ಯಾಸಾಶ್ರಮವಿದ್ದ ಹಿಮವತ್ಪರ್ವತದ ವರ್ಣನೆ (1-22). ತಂದೆಯ ಬಳಿ ಶುಕನ ಆಗಮನ (23-30). ವ್ಯಾಸನ ನಾಲ್ವರು ಶಿಷ್ಯರು ಅವನಲ್ಲಿ ವರವನ್ನು ಕೇಳಿದುದು (31-38). ಶಿಷ್ಯರಿಗೆ ವ್ಯಾಸನ ಉಪದೇಶ (39-49).

12314001 ಭೀಷ್ಮ ಉವಾಚ|

12314001a ಏತಚ್ಚ್ರುತ್ವಾ ತು ವಚನಂ ಕೃತಾತ್ಮಾ ಕೃತನಿಶ್ಚಯಃ|

12314001c ಆತ್ಮನಾತ್ಮಾನಮಾಸ್ಥಾಯ ದೃಷ್ಟ್ವಾ ಚಾತ್ಮಾನಮಾತ್ಮನಾ||

ಭೀಷ್ಮನು ಹೇಳಿದನು: “ಆ ಮಾತನ್ನು ಕೇಳಿ ಕೃತಾತ್ಮಾ ಶುಕನು ನಿಶ್ಚಯಿಸಿ ಆತ್ಮನನ್ನು ಆತ್ಮನಲ್ಲಿ ಇರಿಸಿ ಆತ್ಮನನ್ನು ಆತ್ಮನಿಂದ ಕಂಡು ಕೃತಾರ್ಥನಾದನು.

12314002a ಕೃತಕಾರ್ಯಃ ಸುಖೀ ಶಾಂತಸ್ತೂಷ್ಣೀಂ ಪ್ರಾಯಾದುದಙ್ಮುಖಃ|

12314002c ಶೈಶಿರಂ ಗಿರಿಮುದ್ದಿಶ್ಯ ಸಧರ್ಮಾ ಮಾತರಿಶ್ವನಃ||

ಆತ್ಮದರ್ಶನದಿಂದ ಸುಖವನ್ನೂ ಪರಮ ಶಾಂತಿಯನ್ನೂ ಪಡೆದು ವಾಯುವಿನ ವೇಗವಿದ್ದ ಶುಕನು ಹಿಮವತ್ಪರ್ವತದ ಕಡೆಗೆ ಉತ್ತರಾಭಿಮುಖವಾಗಿ ಪ್ರಯಾಣಮಾಡಿದನು.

12314003a ಏತಸ್ಮಿನ್ನೇವ ಕಾಲೇ ತು ದೇವರ್ಷಿರ್ನಾರದಸ್ತದಾ|

12314003c ಹಿಮವಂತಮಿಯಾದ್ದ್ರಷ್ಟುಂ ಸಿದ್ಧಚಾರಣಸೇವಿತಮ್||

ಅದೇ ಸಮಯದಲ್ಲಿ ದೇವರ್ಷಿ ನಾರದನು ಸಿದ್ಧಚಾರಣ ಸೇಇತ ಹಿಮವತ್ಪರ್ವತವನ್ನು ನೋಡಲು ಅಲ್ಲಿಗೆ ಆಗಮಿಸಿದ್ದನು.

12314004a ತಮಪ್ಸರೋಗಣಾಕೀರ್ಣಂ ಗೀತಸ್ವನನಿನಾದಿತಮ್|

12314004c ಕಿಂನರಾಣಾಂ ಸಮೂಹೈಶ್ಚ ಭೃಂಗರಾಜೈಸ್ತಥೈವ ಚ||

ಅದು ಅಪ್ಸರೆಯರ ಗುಂಪುಗಳ, ಕಿನ್ನರರ ಸಮೂಹಗಳ ಮತ್ತು ದುಂಬಿಗಳ ಗೀತ-ಸ್ವರಗಳಿಂದ ನಿನಾದಿತಗೊಂಡಿತ್ತು.

12314005a ಮದ್ಗುಭಿಃ ಖಂಜರೀಟೈಶ್ಚ ವಿಚಿತ್ರೈರ್ಜೀವಜೀವಕೈಃ|

12314005c ಚಿತ್ರವರ್ಣೈರ್ಮಯೂರೈಶ್ಚ ಕೇಕಾಶತವಿರಾಜಿತೈಃ|

12314005e ರಾಜಹಂಸಸಮೂಹೈಶ್ಚ ಹೃಷ್ಟೈಃ ಪರಭೃತೈಸ್ತಥಾ||

ನೀರುಕಾಗೆಗಳಿಂದ, ಗೀಜುಗಪಕ್ಷಿಗಳಿಂದ, ವಿಚಿತ್ರ ಚಕೋರ ಪಕ್ಷಿಗಳಿಂದ, ಕೇಕೆಗೈಯುತ್ತಿದ್ದ ನೂರಾರು ಚಿತ್ರವರ್ಣದ ನವಿಲುಗಳಿಂದ, ಸಂತೋಷದಿಂದ ನಲಿದಾಡುತ್ತಿದ್ದ ರಾಜಹಂಸಗಳ ಸಮೂಹದಿಂದ ಆ ಪರ್ವತವು ಕೂಡಿತ್ತು.

12314006a ಪಕ್ಷಿರಾಜೋ ಗರುತ್ಮಾಂಶ್ಚ ಯಂ ನಿತ್ಯಮಧಿಗಚ್ಚತಿ|

12314006c ಚತ್ವಾರೋ ಲೋಕಪಾಲಾಶ್ಚ ದೇವಾಃ ಸರ್ಷಿಗಣಾಸ್ತಥಾ|

12314006e ಯತ್ರ ನಿತ್ಯಂ ಸಮಾಯಾಂತಿ ಲೋಕಸ್ಯ ಹಿತಕಾಮ್ಯಯಾ||

ಪಕ್ಷಿರಾಜ ಗರುತ್ಮಂತನು ನಿತ್ಯವೂ ಅಲ್ಲಿಗೆ ಹೋಗುತ್ತಿರುತ್ತಾನೆ. ನಾಲ್ವರು ಲೋಕಪಾಲಕರೂ, ದೇವತೆಗಳು, ಋಷಿಗಣಗಳು ಲೋಕದ ಹಿತವನ್ನು ಬಯಸಿ ನಿತ್ಯವೂ ಅಲ್ಲಿ ಸೇರುತ್ತಾರೆ.

12314007a ವಿಷ್ಣುನಾ ಯತ್ರ ಪುತ್ರಾರ್ಥೇ ತಪಸ್ತಪ್ತಂ ಮಹಾತ್ಮನಾ|

12314007c ಯತ್ರೈವ ಚ ಕುಮಾರೇಣ ಬಾಲ್ಯೇ ಕ್ಷಿಪ್ತಾ ದಿವೌಕಸಃ||

ಅಲ್ಲಿ ಮಹಾತ್ಮ ವಿಷ್ಣುವು ಪುತ್ರನಿಗಾಗಿ ತಪಸ್ಸನ್ನು ತಪಿಸಿದ್ದನು. ಅಲ್ಲಿಯೇ ಬಾಲ್ಯದಲ್ಲಿಯೇ ಕುಮಾರನು ದಿವೌಕಸರನ್ನು ಸೋಲಿಸಿದ್ದನು.

12314008a ಶಕ್ತಿರ್ನ್ಯಸ್ತಾ ಕ್ಷಿತಿತಲೇ ತ್ರೈಲೋಕ್ಯಮವಮನ್ಯ ವೈ|

12314008c ಯತ್ರೋವಾಚ ಜಗತ್ಸ್ಕಂದಃ ಕ್ಷಿಪನ್ವಾಕ್ಯಮಿದಂ ತದಾ||

ಮೂರುಲೋಕಗಳನ್ನು ನಿರ್ಲಕ್ಷಿಸಿ ಸ್ಕಂದನು ಭೂಮಿಯ ಮೇಲೆ ಶಕ್ತಿಯನ್ನು ನೆಟ್ಟಿದ್ದನು. ಆ ಜಗತ್ತಿಗೆ ಅವನು ಈ ಮಾತನ್ನು ಹೇಳಿದ್ದನು:

12314009a ಯೋಽನ್ಯೋಽಸ್ತಿ ಮತ್ತೋಽಭ್ಯಧಿಕೋ ವಿಪ್ರಾ ಯಸ್ಯಾಧಿಕಂ ಪ್ರಿಯಾಃ|

12314009c ಯೋ ಬ್ರಹ್ಮಣ್ಯೋ ದ್ವಿತೀಯೋಽಸ್ತಿ ತ್ರಿಷು ಲೋಕೇಷು ವೀರ್ಯವಾನ್||

“ಬ್ರಾಹ್ಮಣರು ಅಧಿಕ ಪ್ರಿಯರಾಗಿರುವ ನನಗಿಂತಲೂ ಅಧಿಕ ವೀರ್ಯವಂತನಾದ ಎರಡನೆಯ ಬ್ರಹ್ಮಣ್ಯನು ಈ ಮೂರು ಲೋಕಗಳಲ್ಲಿಯೂ ಯಾರಿದ್ದಾರೆ?

12314010a ಸೋಽಭ್ಯುದ್ಧರತ್ವಿಮಾಂ ಶಕ್ತಿಮಥ ವಾ ಕಂಪಯತ್ವಿತಿ|

12314010c ತಚ್ಚ್ರುತ್ವಾ ವ್ಯಥಿತಾ ಲೋಕಾಃ ಕ ಇಮಾಮುದ್ಧರೇದಿತಿ||

ಅಂಥವನು ಯಾರಾದರೂ ಇದ್ದರೆ ಅವನು ಈ ಶಕ್ತಿಯನ್ನು ಕಿತ್ತುಹಾಕಲಿ ಅಥವಾ ಅಳ್ಳಾಡಿಸಲಿ!” ಇದನ್ನು ಕೇಳಿ ಲೋಕಗಳು “ಇದನ್ನು ಯಾರು ಕಿತ್ತುಹಾಕುತ್ತಾರೆ?” ಎಂದು ವ್ಯಥಿತಗೊಂಡವು.

12314011a ಅಥ ದೇವಗಣಂ ಸರ್ವಂ ಸಂಭ್ರಾಂತೇಂದ್ರಿಯಮಾನಸಮ್|

12314011c ಅಪಶ್ಯದ್ಭಗವಾನ್ವಿಷ್ಣುಃ ಕ್ಷಿಪ್ತಂ ಸಾಸುರರಾಕ್ಷಸಮ್||

ಆಗ ದೇವಗಣಗಳೆಲ್ಲವೂ ಮತ್ತು ಅಸುರ ರಾಕ್ಷಸರೂ ಇಂದ್ರಿಯ-ಮನಸ್ಸುಗಳಲ್ಲಿ ಸಂಭ್ರಾಂತರಾಗಿದ್ದುದನ್ನು ಭಗವಾನ್ ವಿಷ್ಣುವು ನೋಡಿದನು.

12314011e ಕಿಂ ನ್ವತ್ರ ಸುಕೃತಂ ಕಾರ್ಯಂ ಭವೇದಿತಿ ವಿಚಿಂತಯನ್|

12314012a ಸ ನಾಮೃಷ್ಯತ ತಂ ಕ್ಷೇಪಮವೈಕ್ಷತ ಚ ಪಾವಕಿಮ್||

ಇಲ್ಲಿ ಮಾಡಬೇಕಾದ ಉತ್ತಮ ಕಾರ್ಯವು ಯಾವುದು ಎಂದು ಚಿಂತಿಸಿ, ಸ್ಕಂದನು ದೇವತೆಗಳ ವಿಷಯದಲ್ಲಿ ತೋರಿದ ತಿರಸ್ಕಾರ ಭಾವವನ್ನು ಸಹಿಸಿಕೊಳ್ಳಲಾರದೇ ಪಾವಕಿಯನ್ನು ನೋಡಿದನು.

12314012c ಸ ಪ್ರಹಸ್ಯ ವಿಶುದ್ಧಾತ್ಮಾ ಶಕ್ತಿಂ ಪ್ರಜ್ವಲಿತಾಂ ತದಾ|

12314012e ಕಂಪಯಾಮಾಸ ಸವ್ಯೇನ ಪಾಣಿನಾ ಪುರುಷೋತ್ತಮಃ||

ಆಗ ನಸುನಕ್ಕು ಆ ವಿಶುದ್ಧಾತ್ಮ ಪುರುಷೋತ್ತಮನು ತನ್ನ ಎಡಗೈಯಿಂದ ಪ್ರಜ್ವಲಿಸುತ್ತಿದ್ದ ಆ ಶಕ್ತ್ಯಾಯುಧವನ್ನು ಅಳ್ಳಾಡಿಸಿದನು.

12314013a ಶಕ್ತ್ಯಾಂ ತು ಕಂಪಮಾನಾಯಾಂ ವಿಷ್ಣುನಾ ಬಲಿನಾ ತದಾ|

12314013c ಮೇದಿನೀ ಕಂಪಿತಾ ಸರ್ವಾ ಸಶೈಲವನಕಾನನಾ||

ಬಲಶಾಲೀ ವಿಷ್ಣುವು ಆ ಶಕ್ತಿಯನ್ನು ಅಳ್ಳಾಡಿಸಲು ಪರ್ವತ-ವನ-ಕಾನನಗಳೊಂದಿಗೆ ಮೇದಿನಿಯೇ ಕಂಪಿಸಿತು.

12314014a ಶಕ್ತೇನಾಪಿ ಸಮುದ್ಧರ್ತುಂ ಕಂಪಿತಾ ಸಾ ನ ತೂದ್ಧೃತಾ|

12314014c ರಕ್ಷತಾ ಸ್ಕಂದರಾಜಸ್ಯ ಧರ್ಷಣಾಂ ಪ್ರಭವಿಷ್ಣುನಾ||

ಅದನ್ನು ಕೀಳಲು ಸಮರ್ಥನಾಗಿದ್ದರೂ ಅವನು ಅದನ್ನು ಕೇವಲ ಅಳ್ಳಾಡಿಸಿ ಪ್ರಭು ವಿಷ್ಣುವು ಸ್ಕಂದರಾಜ ಮಾನವನ್ನು ಕಾಪಾಡಿದನು.

12314015a ತಾಂ ಕಂಪಯಿತ್ವಾ ಭಗವಾನ್ಪ್ರಹ್ರಾದಮಿದಮಬ್ರವೀತ್|

12314015c ಪಶ್ಯ ವೀರ್ಯಂ ಕುಮಾರಸ್ಯ ನೈತದನ್ಯಃ ಕರಿಷ್ಯತಿ||

ಅದನ್ನು ಅಳ್ಳಾಡಿಸಿ ಭಗವಂತನು ಪ್ರಹ್ರಾದನಿಗೆ ಹೇಳಿದನು: “ಕುಮಾರನ ವೀರ್ಯವನ್ನು ನೋಡು. ಬೇರೆ ಯಾರೂ ಇದನ್ನು ಮಾಡಲಾರರು.”

12314016a ಸೋಽಮೃಷ್ಯಮಾಣಸ್ತದ್ವಾಕ್ಯಂ ಸಮುದ್ಧರಣನಿಶ್ಚಿತಃ|

12314016c ಜಗ್ರಾಹ ತಾಂ ತಸ್ಯ ಶಕ್ತಿಂ ನ ಚೈನಾಮಪ್ಯಕಂಪಯತ್||

ಆ ಮಾತನ್ನು ಸಹಿಸಿಕೊಳ್ಳಲಾರದೇ ಪ್ರಹ್ರಾದನು ಶಕ್ತಿಯನ್ನು ಕಿತ್ತುಹಾಕಲು ನಿಶ್ಚಯಿಸಿದನು. ಅವನು ಆ ಶಕ್ತಿಯನ್ನು ಹಿಡಿದು ಎಳೆದನು. ಆದರೆ ಅವನಿಗೆ ಅದನ್ನು ಅಳ್ಳಾಡಿಸಲೂ ಸಾಧ್ಯವಾಗಲಿಲ್ಲ.

12314017a ನಾದಂ ಮಹಾಂತಂ ಮುಕ್ತ್ವಾ ಸ ಮೂರ್ಚಿತೋ ಗಿರಿಮೂರ್ಧನಿ|

12314017c ವಿಹ್ವಲಃ ಪ್ರಾಪತದ್ಭೂಮೌ ಹಿರಣ್ಯಕಶಿಪೋಃ ಸುತಃ||

ಹಿರಣ್ಯಕಶಿಪುವಿನ ಆ ಮಗನು ಗಿರಿಮೂರ್ಧನಿಯಲ್ಲಿ ವಿಹ್ವಲನಾಗಿ ಮಹಾ ಕೂಗನ್ನು ಕೂಗುತ್ತಾ ಮೂರ್ಚಿತನಾಗಿ ಭೂಮಿಯ ಮೇಲೆ ಬಿದ್ದನು.

12314018a ಯತ್ರೋತ್ತರಾಂ ದಿಶಂ ಗತ್ವಾ ಶೈಲರಾಜಸ್ಯ ಪಾರ್ಶ್ವತಃ|

12314018c ತಪೋಽತಪ್ಯತ ದುರ್ಧರ್ಷಸ್ತಾತ ನಿತ್ಯಂ ವೃಷಧ್ವಜಃ||

ಆ ಶೈಲರಾಜನ ಮಗ್ಗುಲಿನಿಂದ ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಿ ದುರ್ಧರ್ಷ ವೃಷಧ್ವಜನು ಅಲ್ಲಿ ನಿತ್ಯವೂ ತಪಸ್ಸನ್ನು ತಪಿಸಿದನು.

12314019a ಪಾವಕೇನ ಪರಿಕ್ಷಿಪ್ತೋ ದೀಪ್ಯತಾ ತಸ್ಯ ಚಾಶ್ರಮಃ|

12314019c ಆದಿತ್ಯಬಂಧನಂ ನಾಮ ದುರ್ಧರ್ಷಮಕೃತಾತ್ಮಭಿಃ||

ಅಗ್ನಿಯಿಂದ ಸುತ್ತುವರೆಯಲ್ಪಟ್ಟು ಬೆಳಗುತ್ತಿದ್ದ ಆದಿತ್ಯಬಂಧನವೆಂಬ ಹೆಸರಿನ ಅವನ ಆಶ್ರಮವು ಅಕೃತಾತ್ಮರಿಗೆ ತಲುಪಲಸಾಧ್ಯವಾದುದು.

12314020a ನ ತತ್ರ ಶಕ್ಯತೇ ಗಂತುಂ ಯಕ್ಷರಾಕ್ಷಸದಾನವೈಃ|

12314020c ದಶಯೋಜನವಿಸ್ತಾರಮಗ್ನಿಜ್ವಾಲಾಸಮಾವೃತಮ್||

ಅಗ್ನಿಜ್ವಾಲೆಯಿಂದ ಸುತ್ತುವರೆಯಲ್ಪಟ್ಟಿರುವ ಆ ಹತ್ತು ಯೋಜನ ವಿಸ್ತೀರ್ಣ ಪ್ರದೇಶಕ್ಕೆ ಯಕ್ಷ-ರಾಕ್ಷಸ-ದಾನವರಿಗೂ ಹೋಗಲು ಶಕ್ಯವಾಗುವುದಿಲ್ಲ.

12314021a ಭಗವಾನ್ಪಾವಕಸ್ತತ್ರ ಸ್ವಯಂ ತಿಷ್ಠತಿ ವೀರ್ಯವಾನ್|

12314021c ಸರ್ವವಿಘ್ನಾನ್ಪ್ರಶಮಯನ್ಮಹಾದೇವಸ್ಯ ಧೀಮತಃ||

ಸ್ವಯಂ ವೀರ್ಯವಾನ್ ಭಗವಾನ್ ಪಾವಕನು ಅಲ್ಲಿ ಧೀಮತ ಮಹಾದೇವನ ಸರ್ವವಿಘ್ನಗಳನ್ನೂ ಪರಿಹರಿಸುತ್ತಾ ಅಲ್ಲಿ ನಿಂತಿರುತ್ತಾನೆ.

12314022a ದಿವ್ಯಂ ವರ್ಷಸಹಸ್ರಂ ಹಿ ಪಾದೇನೈಕೇನ ತಿಷ್ಠತಃ|

12314022c ದೇವಾನ್ಸಂತಾಪಯಂಸ್ತತ್ರ ಮಹಾದೇವೋ ಧೃತವ್ರತಃ||

ಧೃತವ್ರತ ಮಹಾದೇವನು ಅಲ್ಲಿ ಸಹಸ್ರ ದಿವ್ಯವರ್ಷಗಳ ಪರ್ಯಂತ ದೇವತೆಗಳನ್ನು ಸಂತಾಪಗೊಳಿಸುತ್ತಾ ಒಂದೇ ಕಾಲಿನ ಮೇಲೆ ನಿಂತಿದ್ದನು.

12314023a ಐಂದ್ರೀಂ ತು ದಿಶಮಾಸ್ಥಾಯ ಶೈಲರಾಜಸ್ಯ ಧೀಮತಃ|

12314023c ವಿವಿಕ್ತೇ ಪರ್ವತತಟೇ ಪಾರಾಶರ್ಯೋ ಮಹಾತಪಾಃ|

12314023e ವೇದಾನಧ್ಯಾಪಯಾಮಾಸ ವ್ಯಾಸಃ ಶಿಷ್ಯಾನ್ಮಹಾತಪಾಃ||

12314024a ಸುಮಂತುಂ ಚ ಮಹಾಭಾಗಂ ವೈಶಂಪಾಯನಮೇವ ಚ|

12314024c ಜೈಮಿನಿಂ ಚ ಮಹಾಪ್ರಾಜ್ಞಂ ಪೈಲಂ ಚಾಪಿ ತಪಸ್ವಿನಮ್||

ಆ ಪರ್ವತರಾಜನ ಪೂರ್ವದಿಕ್ಕಿನಲ್ಲಿ ನಿರ್ಜನ ಪರ್ವತ ತಟದಲ್ಲಿ ಪಾರಶರ್ಯ ಮಹಾತಪಸ್ವೀ ವ್ಯಾಸನು ಮಹಾತಪಸ್ವಿಗಳಾದ ಸುಮಂತು, ಮಹಾಭಾಗ ವೈಶಂಪಾಯನ, ಮಹಾಪ್ರಾಜ್ಞ ಜೈಮಿನಿ ಮತ್ತು ತಪಸ್ವಿ ಪೈಲ – ಇವರಿಗೆ ವೇದಾಧ್ಯಯನವನ್ನು ಮಾಡಿಸುತ್ತಿದ್ದನು.

12314025a ಏಭಿಃ ಶಿಷ್ಯೈಃ ಪರಿವೃತೋ ವ್ಯಾಸ ಆಸ್ತೇ ಮಹಾತಪಾಃ|

12314025c ತತ್ರಾಶ್ರಮಪದಂ ಪುಣ್ಯಂ ದದರ್ಶ ಪಿತುರುತ್ತಮಮ್|

12314025e ಆರಣೇಯೋ ವಿಶುದ್ಧಾತ್ಮಾ ನಭಸೀವ ದಿವಾಕರಃ|||

ನಭದಲ್ಲಿ ದಿವಾಕರನನಂತಿದ್ದ ವಿಶುದ್ಧಾತ್ಮಾ ಆರಣೇಯ ಶುಕನು ಆ ಉತ್ತಮ ತಂದೆ ಮಹಾತಪಸ್ವಿ ವ್ಯಾಸಸ್ನು ಶಿಷ್ಯರಿಂದ ಪರಿವೃತನಾಗಿದ್ದ ಆ ಪುಣ್ಯ ಆಶ್ರಮಪದವನ್ನು ನೋಡಿದನು.

12314026a ಅಥ ವ್ಯಾಸಃ ಪರಿಕ್ಷಿಪ್ತಂ ಜ್ವಲಂತಮಿವ ಪಾವಕಮ್|

12314026c ದದರ್ಶ ಸುತಮಾಯಾಂತಂ ದಿವಾಕರಸಮಪ್ರಭಮ್||

ಪ್ರಜ್ವಲಿಸುವ ಪಾವಕನಂತೆ ಬೆಳಗುತ್ತಿದ್ದ ದಿವಾಕರನ ಸಮ ಪ್ರಭೆಯನ್ನು ಹೊಂದಿದ್ದ ತನ್ನ ಮಗನು ಹತ್ತಿರ ಬರುತ್ತಿದ್ದುದನ್ನು ವ್ಯಾಸನು ನೋಡಿದನು.

12314027a ಅಸಜ್ಜಮಾನಂ ವೃಕ್ಷೇಷು ಶೈಲೇಷು ವಿಷಮೇಷು ಚ|

12314027c ಯೋಗಯುಕ್ತಂ ಮಹಾತ್ಮಾನಂ ಯಥಾ ಬಾಣಂ ಗುಣಚ್ಯುತಮ್||

ಪರ್ವತದ ತಪ್ಪಲು ಪ್ರದೇಶ ಮತ್ತು ಮರಗಿಡಗಳ ಮೇಲೆ ದೃಷ್ಟಿಹಾಯಿಸದೇ ಧನುಸ್ಸಿನಿಂದ ಪ್ರಯೋಗಿಸಿದ ಬಾಣದಂತೆ ಯೋಗಯುಕ್ತನಾಗಿ ಆ ಮಹಾತ್ಮನು ಬರುತ್ತಿದ್ದನು.

12314028a ಸೋಽಭಿಗಮ್ಯ ಪಿತುಃ ಪಾದಾವಗೃಹ್ಣಾದರಣೀಸುತಃ|

12314028c ಯಥೋಪಜೋಷಂ ತೈಶ್ಚಾಪಿ ಸಮಾಗಚ್ಚನ್ಮಹಾಮುನಿಃ||

ಅರಣೀಸುತ ಶುಕನು ಆಗಮಿಸಿ ತಂದೆಯ ಪಾದಗಳನ್ನು ಹಿಡಿದು ನಮಸ್ಕರಿಸಿದನು ಮತ್ತು ಆ ಮಹಾಮುನಿಯು ಮೌನಿಯಾಗಿಯೇ ಅವರನ್ನು ಕೂಡಿಕೊಂಡನು.

12314029a ತತೋ ನಿವೇದಯಾಮಾಸ ಪಿತ್ರೇ ಸರ್ವಮಶೇಷತಃ|

12314029c ಶುಕೋ ಜನಕರಾಜೇನ ಸಂವಾದಂ ಪ್ರೀತಮಾನಸಃ||

ಅನಂತರ ಶುಕನು ತಂದೆಗೆ ಪ್ರೀತಮಾನಸನಾಗಿ ಜನಕರಾಜನೊಡನೆ ನಡೆದ ಸಂವಾದವನ್ನು ಏನನ್ನೂ ಬಿಡದೇ ಎಲ್ಲವನ್ನೂ ನಿವೇದಿಸಿದನು.

12314030a ಏವಮಧ್ಯಾಪಯನ್ಶಿಷ್ಯಾನ್ವ್ಯಾಸಃ ಪುತ್ರಂ ಚ ವೀರ್ಯವಾನ್|

12314030c ಉವಾಸ ಹಿಮವತ್ಪೃಷ್ಠೇ ಪಾರಾಶರ್ಯೋ ಮಹಾಮುನಿಃ||

ಹೀಗೆ ಮಹಾಮುನಿ ಪಾರಾಶರ್ಯ ವ್ಯಾಸನು ತನ್ನ ಶಿಷ್ಯರು ಮತ್ತು ವೀರ್ಯವಾನ್ ಪುತ್ರನಿಗೆ ಅಧ್ಯಾಪನ ಮಾಡಿಸುತ್ತಾ ಆ ಹಿಮವತ್ ಪರ್ವತದ ಮೇಲೆ ವಾಸಿಸುತ್ತಿದ್ದನು.

12314031a ತತಃ ಕದಾ ಚಿಚ್ಚಿಷ್ಯಾಸ್ತಂ ಪರಿವಾರ್ಯಾವತಸ್ಥಿರೇ|

12314031c ವೇದಾಧ್ಯಯನಸಂಪನ್ನಾಃ ಶಾಂತಾತ್ಮಾನೋ ಜಿತೇಂದ್ರಿಯಾಃ||

12314032a ವೇದೇಷು ನಿಷ್ಠಾಂ ಸಂಪ್ರಾಪ್ಯ ಸಾಂಗೇಷ್ವತಿತಪಸ್ವಿನಃ|

12314032c ಅಥೋಚುಸ್ತೇ ತದಾ ವ್ಯಾಸಂ ಶಿಷ್ಯಾಃ ಪ್ರಾಂಜಲಯೋ ಗುರುಮ್||

ವೇದಗಳಲ್ಲಿ ಮತ್ತು ವೇದಾಂಗಗಳಲ್ಲಿ ನಿಷ್ಠೆಯನ್ನು ಪಡೆದು ಆ ವೇದಾಧ್ಯಯನಸಂಪನ್ನ ಶಾಂತಾತ್ಮ ಜಿತೇಂದ್ರಿಯ ಶಿಷ್ಯರು ಒಮ್ಮೆ ವ್ಯಾಸನನ್ನು ಸುತ್ತುವರೆದು ಕುಳಿತಿದ್ದರು. ಆಗ ಶಿಷ್ಯರು ಕೈಮುಗಿದು ಗುರು ವ್ಯಾಸನಿಗೆ ಹೇಳಿದರು:

12314033a ಮಹತಾ ಶ್ರೇಯಸಾ ಯುಕ್ತಾ ಯಶಸಾ ಚ ಸ್ಮ ವರ್ಧಿತಾಃ|

12314033c ಏಕಂ ತ್ವಿದಾನೀಮಿಚ್ಚಾಮೋ ಗುರುಣಾನುಗ್ರಹಂ ಕೃತಮ್||

“ನಾವು ಮಹಾ ಶ್ರೇಯಸ್ಸಿನಿಂದ ಕೂಡಿದವರಾಗಿ, ಯಶಸ್ಸಿನಲ್ಲಿಯೂ ವರ್ಧಿಸಿದ್ದೇವೆ. ಈಗ ಗುರುವಿನ ಒಂದು ಅನುಗ್ರಹವಾಗಬೇಕೆಂದು ಇಚ್ಛಿಸಿದ್ದೇವೆ.”

12314034a ಇತಿ ತೇಷಾಂ ವಚಃ ಶ್ರುತ್ವಾ ಬ್ರಹ್ಮರ್ಷಿಸ್ತಾನುವಾಚ ಹ|

12314034c ಉಚ್ಯತಾಮಿತಿ ತದ್ವತ್ಸಾ ಯದ್ವಃ ಕಾರ್ಯಂ ಪ್ರಿಯಂ ಮಯಾ||

ಅವರ ಈ ಮಾತನ್ನು ಕೇಳಿ ಬ್ರಹ್ಮರ್ಷಿಯು ಅವರಿಗೆ ಹೇಳಿದನು: “ವತ್ಸರೇ! ನನ್ನಿಂದ ಯಾವ ಪ್ರಿಯ ಕಾರ್ಯವಾಗಬೇಕು ಅದನ್ನು ಹೇಳಿ.”

12314035a ಏತದ್ವಾಕ್ಯಂ ಗುರೋಃ ಶ್ರುತ್ವಾ ಶಿಷ್ಯಾಸ್ತೇ ಹೃಷ್ಟಮಾನಸಾಃ|

12314035c ಪುನಃ ಪ್ರಾಂಜಲಯೋ ಭೂತ್ವಾ ಪ್ರಣಮ್ಯ ಶಿರಸಾ ಗುರುಮ್||

12314036a ಊಚುಸ್ತೇ ಸಹಿತಾ ರಾಜನ್ನಿದಂ ವಚನಮುತ್ತಮಮ್|

ರಾಜನ್! ಗುರುವಿನ ಈ ಮಾತನ್ನು ಕೇಳಿ ಹೃಷ್ಟಮಾನಸರಾದ ಆ ಶಿಷ್ಯರು ಪುನಃ ಅಂಜಲೀಬದ್ಧರಾಗಿ ಗುರುವನ್ನು ಶಿರಸಾ ನಮಸ್ಕರಿಸಿ ಒಟ್ಟಿಗೇ ಈ ಉತ್ತಮ ಮಾತನ್ನಾಡಿದರು.

12314036c ಯದಿ ಪ್ರೀತ ಉಪಾಧ್ಯಾಯೋ ಧನ್ಯಾಃ ಸ್ಮೋ ಮುನಿಸತ್ತಮ||

12314037a ಕಾಂಕ್ಷಾಮಸ್ತು ವಯಂ ಸರ್ವೇ ವರಂ ದತ್ತಂ ಮಹರ್ಷಿಣಾ|

12314037c ಷಷ್ಠಃ ಶಿಷ್ಯೋ ನ ತೇ ಖ್ಯಾತಿಂ ಗಚ್ಚೇದತ್ರ ಪ್ರಸೀದ ನಃ||

“ಮುನಿಸತ್ತಮ! ಉಪಾಧ್ಯಾಯನು ಪ್ರೀತನಾದನೆಂದರೆ ನಾವು ಧನ್ಯರೇ ಸರಿ. ನಾವೆಲ್ಲರೂ ಮಹರ್ಷಿಯಿಂದ ಒಂದು ವರವನ್ನು ಪಡೆಯಲು ಬಯಸುತ್ತೇವೆ. ನಿನ್ನ ಆರನೆಯ ಶಿಷ್ಯನು ಖ್ಯಾತನಾಗಬಾರದು. ನಮ್ಮ ಮೇಲೆ ಪ್ರಸೀದನಾಗಬೇಕು!

12314038a ಚತ್ವಾರಸ್ತೇ ವಯಂ ಶಿಷ್ಯಾ ಗುರುಪುತ್ರಶ್ಚ ಪಂಚಮಃ|

12314038c ಇಹ ವೇದಾಃ ಪ್ರತಿಷ್ಠೇರನ್ನೇಷ ನಃ ಕಾಂಕ್ಷಿತೋ ವರಃ||

ನಾವು ನಾಲ್ವರು ನಿನ್ನ ಶಿಷ್ಯರು. ಗುರುಪುತ್ರನು ಐದನೆಯವನು. ಇವರಲ್ಲಿ ಮಾತ್ರ ವೇದಗಳು ಪ್ರತಿಷ್ಠಿತವಾಗಿರಬೇಕು. ಇದೇ ನಾವು ಬಯಸುವ ವರ.”

12314039a ಶಿಷ್ಯಾಣಾಂ ವಚನಂ ಶ್ರುತ್ವಾ ವ್ಯಾಸೋ ವೇದಾರ್ಥತತ್ತ್ವವಿತ್|

12314039c ಪರಾಶರಾತ್ಮಜೋ ಧೀಮಾನ್ಪರಲೋಕಾರ್ಥಚಿಂತಕಃ|

12314039e ಉವಾಚ ಶಿಷ್ಯಾನ್ಧರ್ಮಾತ್ಮಾ ಧರ್ಮ್ಯಂ ನೈಃಶ್ರೇಯಸಂ ವಚಃ||

ಶಿಷ್ಯರ ಮಾತನ್ನು ಕೇಳಿ ಪರಾಶರಾತ್ಮಜ ಧೀಮಾನ್ ಪರಲೋಕಾರ್ಥಚಿಂತಕ ಧರ್ಮಾತ್ಮಾ ವೇದಾರ್ಥವಿದು ವ್ಯಾಸನು ಧರ್ಮಾನುಕೂಲವಾದ ಮತ್ತು ಮೋಕ್ಷಾನುಕೂಲವಾದ ಈ ಮಾತನ್ನಾಡಿದನು.

12314040a ಬ್ರಾಹ್ಮಣಾಯ ಸದಾ ದೇಯಂ ಬ್ರಹ್ಮ ಶುಶ್ರೂಷವೇ ಭವೇತ್|

12314040c ಬ್ರಹ್ಮಲೋಕೇ ನಿವಾಸಂ ಯೋ ಧ್ರುವಂ ಸಮಭಿಕಾಂಕ್ಷತಿ||

“ಬ್ರಹ್ಮಲೋಕದಲ್ಲಿ ಶಾಶ್ವತ ನಿವಾಸವನ್ನು ಬಯಸುವವನು ಬ್ರಾಹ್ಮಣನಿಗೆ ಸದಾ ಬ್ರಹ್ಮವೇದವನ್ನು ಅಧ್ಯಾಪನ ಮಾಡಿಸಬೇಕು.

12314041a ಭವಂತೋ ಬಹುಲಾಃ ಸಂತು ವೇದೋ ವಿಸ್ತಾರ್ಯತಾಮಯಮ್|

12314041c ನಾಶಿಷ್ಯೇ ಸಂಪ್ರದಾತವ್ಯೋ ನಾವ್ರತೇ ನಾಕೃತಾತ್ಮನಿ||

ನೀವು ಅನೇಕರಾಗಿರಿ. ವೇದವನ್ನು ಎಲ್ಲೆಲ್ಲಿಯೂ ಹರಡಿರಿ. ಆದರೆ ಶಿಷ್ಯನಲ್ಲದವನಿಗೆ, ವ್ರತನಲ್ಲದವನಿಗೆ ಮತ್ತು ಅಕೃತಾತ್ಮನಿಗೆ ಇದನ್ನು ಹೇಳಿಕೊಡಬೇಡಿ.

12314042a ಏತೇ ಶಿಷ್ಯಗುಣಾಃ ಸರ್ವೇ ವಿಜ್ಞಾತವ್ಯಾ ಯಥಾರ್ಥತಃ|

12314042c ನಾಪರೀಕ್ಷಿತಚಾರಿತ್ರೇ ವಿದ್ಯಾ ದೇಯಾ ಕಥಂ ಚನ||

ಈ ಎಲ್ಲ ಗುಣಗಳು ಶಿಷ್ಯನಲ್ಲಿವೆಯೇ ಇಲ್ಲವೇ ಎನ್ನುವುದನ್ನು ಯಥಾರ್ಥವಾಗಿ ತಿಳಿದುಕೊಳ್ಳಬೇಕು. ಚಾರಿತ್ರ್ಯವನ್ನು ಪರೀಕ್ಷಿಸದೆಯೇ ಎಂದೂ ವಿದ್ಯೆಯನ್ನು ನೀಡಬಾರದು.

12314043a ಯಥಾ ಹಿ ಕನಕಂ ಶುದ್ಧಂ ತಾಪಚ್ಚೇದನಿಘರ್ಷಣೈಃ|

12314043c ಪರೀಕ್ಷೇತ ತಥಾ ಶಿಷ್ಯಾನೀಕ್ಷೇತ್ಕುಲಗುಣಾದಿಭಿಃ||

ಸುಡುವುದರಿಂದ, ಕತ್ತರಿಸುವುದರಿಂದ ಮತ್ತು ತಿಕ್ಕುವುದರಿಂದ ಹೇಗೆ ಚಿನ್ನವು ಶುದ್ಧವಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾರೋ ಹಾಗೆ ಶಿಷ್ಯನನ್ನೂ ಕೂಡ ಕುಲ-ಗುಣ ಮೊದಲಾದ ವಿಷಯಗಳಲ್ಲಿ ಪರೀಕ್ಷಿಸಬೇಕು.

12314044a ನ ನಿಯೋಜ್ಯಾಶ್ಚ ವಃ ಶಿಷ್ಯಾ ಅನಿಯೋಗೇ ಮಹಾಭಯೇ|

12314044c ಯಥಾಮತಿ ಯಥಾಪಾಠಂ ತಥಾ ವಿದ್ಯಾ ಫಲಿಷ್ಯತಿ||

ಮಾಡಬಾರದ ಮತ್ತು ಭಯವನ್ನುಂಟು ಮಾಡುವ ಕೆಲಸದಲ್ಲಿ ಶಿಷ್ಯರನ್ನು ತೊಡಗಿಸಬಾರದು. ಅವರ ಬುದ್ಧಿಯು ಹೇಗಿರುವುದೋ ಮತ್ತು ನೀವು ಹೇಗೆ ಅವರಿಗೆ ಕಲಿಸುತ್ತೀರೋ ಹಾಗೆಯೇ ಅವರ ವಿದ್ಯೆಯು ಫಲಿಸುತ್ತದೆ.

12314045a ಸರ್ವಸ್ತರತು ದುರ್ಗಾಣಿ ಸರ್ವೋ ಭದ್ರಾಣಿ ಪಶ್ಯತು|

12314045c ಶ್ರಾವಯೇಚ್ಚತುರೋ ವರ್ಣಾನ್ ಕೃತ್ವಾ ಬ್ರಾಹ್ಮಣಮಗ್ರತಃ||

ಎಲ್ಲರೂ ಎಲ್ಲ ಸಂಕಟಗಳಿಂದಲೂ ಪಾರಾಗಲಿ. ಎಲ್ಲರೂ ಕಲ್ಯಾಣವನ್ನು ಕಾಣಲಿ. ಬ್ರಾಹ್ಮಣರಿಗೆ ಪ್ರಾಶಸ್ತ್ಯಕೊಟ್ಟು ನಾಲ್ಕೂ ವರ್ಣದವರಿಗೂ ಹೇಳಬೇಕು.

12314046a ವೇದಸ್ಯಾಧ್ಯಯನಂ ಹೀದಂ ತಚ್ಚ ಕಾರ್ಯಂ ಮಹತ್ಸ್ಮೃತಮ್|

12314046c ಸ್ತುತ್ಯರ್ಥಮಿಹ ದೇವಾನಾಂ ವೇದಾಃ ಸೃಷ್ಟಾಃ ಸ್ವಯಂಭುವಾ||

ವೇದಾದ ಅಧ್ಯಯನವು ಮಹತ್ತರವಾದುದೆಂದು ತಿಳಿದಿದೆ. ಅದನ್ನು ಮಾಡಬೇಕು. ದೇವತೆಗಳ ಸ್ತುತಿಗಾಗಿ ಸ್ವಯಂಭುವು ವೇದಗಳನ್ನು ಸೃಷ್ಟಿಸಿದನು.

12314047a ಯೋ ನಿರ್ವದೇತ ಸಂಮೋಹಾದ್ಬ್ರಾಹ್ಮಣಂ ವೇದಪಾರಗಮ್|

12314047c ಸೋಽಪಧ್ಯಾನಾದ್ಬ್ರಾಹ್ಮಣಸ್ಯ ಪರಾಭೂಯಾದಸಂಶಯಮ್||

ವೇದಪಾರಂಗತ ಬ್ರಾಹ್ಮಣನನ್ನು ಸಂಮೋಹದಿಂದ ಯಾರು ನಿಂದಿಸುರ್ವರೋ ಅವರು ಬ್ರಾಹ್ಮಣನಿಂದನೆಯ ಪರಿಣಾಮವಾಗಿ ಎಲ್ಲದರಲ್ಲಿಯೂ ಪರಾಭವವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

12314048a ಯಶ್ಚಾಧರ್ಮೇಣ ವಿಬ್ರೂಯಾದ್ಯಶ್ಚಾಧರ್ಮೇಣ ಪೃಚ್ಚತಿ|

12314048c ತಯೋರನ್ಯತರಃ ಪ್ರೈತಿ ವಿದ್ವೇಷಂ ವಾಧಿಗಚ್ಚತಿ||

ಯಾರು ಅಧರ್ಮದಿಂದ ಹೇಳುತ್ತಾರೋ ಮತ್ತು ಯಾರು ಅಧರ್ಮದಿಂದ ಪ್ರಶ್ನಿಸುತ್ತಾರೋ ಆ ಇಬ್ಬರಲ್ಲಿ ದ್ವೇಷವುಂಟಾಗುತ್ತದೆ, ವಿವಾದವುಂಟಾಗುತ್ತದೆ ಮತ್ತು ಅವರಲ್ಲಿ ಒಬ್ಬನು ಹಾಳಾಗುತ್ತಾನೆ.

12314049a ಏತದ್ವಃ ಸರ್ವಮಾಖ್ಯಾತಂ ಸ್ವಾಧ್ಯಾಯಸ್ಯ ವಿಧಿಂ ಪ್ರತಿ|

12314049c ಉಪಕುರ್ಯಾಚ್ಚ ಶಿಷ್ಯಾಣಾಮೇತಚ್ಚ ಹೃದಿ ವೋ ಭವೇತ್||

ಸ್ವಾಧ್ಯಾಯದ ವಿಧಿಯ ಕುರಿತು ನಿಮಗೆ ಎಲ್ಲವನ್ನೂ ಹೇಳಿದ್ದೇನೆ. ಶಿಷ್ಯರಿಗೆ ಉಪಕಾರವನ್ನು ಮಾಡಿ. ಇವೆಲ್ಲವೂ ನಿಮ್ಮ ಮನಸ್ಸಿನಲ್ಲಿರಲಿ.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಚತುರ್ದಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮುನ್ನೂರಾಹದಿನಾಲ್ಕನೇ ಅಧ್ಯಾಯವು.

Purple Chrysanthemum Mum Flower ... | Stock image | Colourbox

Comments are closed.