Shanti Parva: Chapter 302

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೦೨

ಸಾತ್ತ್ವಿಕ-ರಾಜಸ-ತಾಮಸ ಪ್ರಕೃತಿಯ ಜನರು ಹೊಂದುವ ಗತಿ (1-12); ಜನಕನ ಪ್ರಶ್ನೆ (13-18).

12302001 ಯಾಜ್ಞವಲ್ಕ್ಯ ಉವಾಚ|

12302001a ಏತೇ ಪ್ರಧಾನಸ್ಯ ಗುಣಾಸ್ತ್ರಯಃ ಪುರುಷಸತ್ತಮ|

12302001c ಕೃತ್ಸ್ನಸ್ಯ ಚೈವ ಜಗತಸ್ತಿಷ್ಠಂತ್ಯನಪಗಾಃ ಸದಾ||

ಯಾಜ್ಞವಲ್ಕ್ಯನು ಹೇಳಿದನು: “ಪುರುಷಸತ್ತಮ! ಈ ಮೂರು ಪ್ರಕೃತಿಯ ಗುಣಗಳಾಗಿವೆ. ಈ ಗುಣಗಳು ಸಂಪೂರ್ಣಜಗತ್ತನ್ನೂ ವ್ಯಾಪಿಸಿಕೊಂಡಿವೆ. ಯಾವಾಗಲೂ ಈ ಗುಣಗಳು ಜಗತ್ತನ್ನು ಬಿಟ್ಟುಹೋಗುವುದೇ ಇಲ್ಲ.

[1]12302002a ಶತಧಾ ಸಹಸ್ರಧಾ ಚೈವ ತಥಾ ಶತಸಹಸ್ರಧಾ|

12302002c ಕೋಟಿಶಶ್ಚ ಕರೋತ್ಯೇಷ ಪ್ರತ್ಯಗಾತ್ಮಾನಮಾತ್ಮನಾ||

ಅವ್ಯಕ್ತನು ಪ್ರಕೃತಿಯ ಸಾಹಚರ್ಯದಿಂದ ನೂರಾರು, ಸಾವಿರಾರು, ಲಕ್ಷೋಪಲಕ್ಷ, ಕೋಟ್ಯಾನುಕೋಟಿ ರೂಪಗಳನ್ನು ತನ್ನಿಂದಲೇ ಪ್ರಕಟಪಡಿಸಿಕೊಳ್ಳುತ್ತಾನೆ.

12302003a ಸಾತ್ತ್ವಿಕಸ್ಯೋತ್ತಮಂ ಸ್ಥಾನಂ ರಾಜಸಸ್ಯೇಹ ಮಧ್ಯಮಮ್|

12302003c ತಾಮಸಸ್ಯಾಧಮಂ ಸ್ಥಾನಂ ಪ್ರಾಹುರಧ್ಯಾತ್ಮಚಿಂತಕಾಃ||

ಆಧ್ಯಾತ್ಮಚಿಂತಕರು ಸಾತ್ತ್ವಿಕನು ಉತ್ತಮನೆಂದೂ, ರಾಜಸನು ಮಧ್ಯಮನೆಂದೂ ಮತ್ತು ತಾಮಸನು ಅಧಮನೆಂದೂ ಹೇಳುತ್ತಾರೆ.

12302004a ಕೇವಲೇನೇಹ ಪುಣ್ಯೇನ ಗತಿಮೂರ್ಧ್ವಾಮವಾಪ್ನುಯಾತ್|

12302004c ಪುಣ್ಯಪಾಪೇನ ಮಾನುಷ್ಯಮಧರ್ಮೇಣಾಪ್ಯಧೋಗತಿಮ್||

ಕೇವಲ ಪುಣ್ಯಕಾರ್ಯಗಳಿಂದಲೇ ಜೀವವು ಮೇಲಿನ ಲೋಕವನ್ನು ಪಡೆದುಕೊಳ್ಳುತ್ತದೆ. ಪುಣ್ಯ ಮತ್ತು ಪಾಪಕರ್ಮಗಳೆರಡನ್ನೂ ಮಾಡುವುದರಿಂದ ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ. ಅಧರ್ಮದಿಂದ ಅಧೋಗತಿಯನ್ನು ಪಡೆದುಕೊಳ್ಳುತ್ತದೆ.

12302005a ದ್ವಂದ್ವಮೇಷಾಂ ತ್ರಯಾಣಾಂ ತು ಸಂನಿಪಾತಂ ಚ ತತ್ತ್ವತಃ|

12302005c ಸತ್ತ್ವಸ್ಯ ರಜಸಶ್ಚೈವ ತಮಸಶ್ಚ ಶೃಣುಷ್ವ ಮೇ||

ಸತ್ತ್ವ, ರಜಸ್ಸು, ತಮೋಗುಣ ಈ ಮೂರರ ದ್ವಂದ್ವ ಮತ್ತು ಸಂನಿಪಾತಗಳ ಪರಿಣಾಮಗಳನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳು.

12302006a ಸತ್ತ್ವಸ್ಯ ತು ರಜೋ ದೃಷ್ಟಂ ರಜಸಶ್ಚ ತಮಸ್ತಥಾ|

12302006c ತಮಸಶ್ಚ ತಥಾ ಸತ್ತ್ವಂ ಸತ್ತ್ವಸ್ಯಾವ್ಯಕ್ತಮೇವ ಚ||

ಸತ್ತ್ವದೊಂದಿಗೆ ರಜೋಗುಣವು ಸೇರಿರುವುದು, ರಜೋಗುಣದೊಂದಿಗೆ ತಮೋಗುಣವು ಸೇರಿರುವುದು ಮತ್ತು ತಮೋಗುಣದೊಂದಿಗೆ ಸತ್ತ್ವಗುಣವು ಸೇರಿರುವುದು ಕಂಡುಬರುತ್ತದೆ. ಅವ್ಯಕ್ತವು ಕೇವಲ ಸತ್ತ್ವದೊಂದಿಗೆ ಸೇರಿರುವುದೂ ಕಂಡುಬರುತ್ತದೆ.

12302007a ಅವ್ಯಕ್ತಸತ್ತ್ವಸಂಯುಕ್ತೋ ದೇವಲೋಕಮವಾಪ್ನುಯಾತ್|

12302007c ರಜಃಸತ್ತ್ವಸಮಾಯುಕ್ತೋ ಮನುಷ್ಯೇಷೂಪಪದ್ಯತೇ||

ಅವ್ಯಕ್ತ-ಸತ್ತ್ವ ಸಂಯುಕ್ತನಾದ ಜೀವವು ದೇವಲೋಕವನ್ನು ಪಡೆದುಕೊಳ್ಳುತ್ತದೆ. ರಜಸ್ಸು ಮತ್ತು ಸತ್ತ್ವ ಸಮಾಯುಕ್ತ ಜೀವವು ಮನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ.

12302008a ರಜಸ್ತಮೋಭ್ಯಾಂ ಸಂಯುಕ್ತಸ್ತಿರ್ಯಗ್ಯೋನಿಷು ಜಾಯತೇ|

12302008c ರಜಸ್ತಾಮಸಸತ್ತ್ವೈಶ್ಚ ಯುಕ್ತೋ ಮಾನುಷ್ಯಮಾಪ್ನುಯಾತ್||

ರಜೋಗುಣ ಮತ್ತು ತಮೋಗುಣಗಳ ಸಂಯುಕ್ತ ಜೀವವು ಕೀಳಯೋನಿಯನ್ನು ಪಡೆದುಕೊಳ್ಳುತ್ತದೆ. ರಜೋಗುಣ-ತಮೋಗುಣ ಮತ್ತು ಸತ್ತ್ವಗುಣ ಯುಕ್ತವಾದ ಜೀವವು ಮಾನುಷ್ಯಲೋಕವನ್ನು ಪಡೆದುಕೊಳ್ಳುತ್ತದೆ.

12302009a ಪುಣ್ಯಪಾಪವಿಯುಕ್ತಾನಾಂ ಸ್ಥಾನಮಾಹುರ್ಮನೀಷಿಣಾಮ್|

12302009c ಶಾಶ್ವತಂ ಚಾವ್ಯಯಂ ಚೈವ ಅಕ್ಷರಂ ಚಾಭಯಂ ಚ ಯತ್||

ಪುಣ್ಯ-ಪಾಪಗಳಿಂದ ಮುಕ್ತರಾದವರು ಶಾಶ್ವತವೂ, ಅವ್ಯಯವೂ ಮತ್ತು ಅಕ್ಷರವೂ ಆದ ಅಭಯವನ್ನು ಪಡೆದುಕೊಳ್ಳುತ್ತಾರೆ ಎಂದು ತಿಳಿದವರು ಹೇಳುತ್ತಾರೆ.

12302010a ಜ್ಞಾನಿನಾಂ ಸಂಭವಂ ಶ್ರೇಷ್ಠಂ ಸ್ಥಾನಮವ್ರಣಮಚ್ಯುತಮ್|

12302010c ಅತೀಂದ್ರಿಯಮಬೀಜಂ ಚ ಜನ್ಮಮೃತ್ಯುತಮೋನುದಮ್||

ಜ್ಞಾನಿಗಳಿಗೆ ಅವಿನಾಶಿಯಾದ, ಚ್ಯುತವಾಗದ, ಇಂದ್ರಿಯಾತೀತವಾದ, ಪಾಪ-ಪುಣ್ಯಗಳಿಗೆ ಅವಕಾಶವೇ ಇಲ್ಲದ, ಹುಟ್ಟು-ಸಾವುಗಳನ್ನೂ ಅಜ್ಞಾನವನ್ನೂ ತೊಡೆದುಹಾಕುವ ಶ್ರೇಷ್ಠ ಪರಮ ಪದವು ಪ್ರಾಪ್ತವಾಗುತ್ತದೆ.

12302011a ಅವ್ಯಕ್ತಸ್ಥಂ ಪರಂ ಯತ್ತತ್ ಪೃಷ್ಟಸ್ತೇಽಹಂ ನರಾಧಿಪ|

12302011c ಸ ಏಷ ಪ್ರಕೃತಿಷ್ಠೋ ಹಿ ತಸ್ಥುರಿತ್ಯಭಿಧೀಯತೇ||

ನರಾಧಿಪ! ಅವ್ಯಕ್ತಸ್ಥನಾದ ಪರಮಾತ್ಮನ ಕುರಿತು ನೀನು ಹೇಳಿದುದಕ್ಕೆ ಉತ್ತರವು ಇದಾಗಿದೆ. ಅವನೇ ಶರೀರದಲ್ಲಿರುವುದರಿಂದ ಅವನನ್ನು ಪ್ರಕೃತಿಸ್ಥನೆಂದೂ ಕರೆಯುತ್ತಾರೆ.

12302012a ಅಚೇತನಶ್ಚೈಷ ಮತಃ ಪ್ರಕೃತಿಸ್ಥಶ್ಚ ಪಾರ್ಥಿವ|

12302012c ಏತೇನಾಧಿಷ್ಠಿತಶ್ಚೈವ ಸೃಜತೇ ಸಂಹರತ್ಯಪಿ||

ಪಾರ್ಥಿವ! ಅಚೇತನ ಅಥವಾ ಜಡವಾಗಿದ್ದರೂ ಪ್ರಕೃತಿಯು ಅವ್ಯಕ್ತ ಪರಮಾತ್ಮನಿಂದ ಆಶ್ರಯಿಸಲ್ಪಟ್ಟಿರುವುದರಿಂದ ಸೃಷ್ಟಿ-ಸಂಹಾರ ಕಾರ್ಯಗಳನ್ನು ಮಾಡುತ್ತದೆ.”

12302013 ಜನಕ ಉವಾಚ|

12302013a ಅನಾದಿನಿಧನಾವೇತಾವುಭಾವೇವ ಮಹಾಮುನೇ|

12302013c ಅಮೂರ್ತಿಮಂತಾವಚಲಾವಪ್ರಕಂಪ್ಯೌ ಚ ನಿರ್ವ್ರಣೌ[2]||

ಜನಕನು ಹೇಳಿದನು: “ಮಹಾಮುನೇ! ಪ್ರಕೃತಿ-ಪುರುಷರಿಬ್ಬರೂ ಅನಾದಿನಿಧನರು. ಅಮೂರ್ತರು. ಅಚಲರು. ತಮ್ಮ ತಮ್ಮ ಗುಣಗಳಲ್ಲಿ ಸ್ಥಿರವಾಗಿರತಕ್ಕವರು ಮತ್ತು ನಿರ್ಗುಣರು.

12302014a ಅಗ್ರಾಹ್ಯಾವೃಷಿಶಾರ್ದೂಲ ಕಥಮೇಕೋ ಹ್ಯಚೇತನಃ|

12302014c ಚೇತನಾವಾಂಸ್ತಥಾ ಚೈಕಃ ಕ್ಷೇತ್ರಜ್ಞ ಇತಿ ಭಾಷಿತಃ||

ಋಷಿಶಾರ್ದೂಲ! ಅವರು ಬುದ್ಧಿಗೆ ಅಗೋಚರರು. ಹೀಗಿರುವಾಗ ಅವುಗಳಲ್ಲಿ ಒಂದೇ ಹೇಗೆ ಜಡವಾಯಿತು? ಮತ್ತೊಂದು ಚೇತನವುಳ್ಳದ್ದು ಹೇಗಾಯಿತು? ಮತ್ತು ಅದನ್ನು ಕ್ಷೇತ್ರಜ್ಞ ಎಂದು ಏಕೆ ಕರೆಯುತ್ತಾರೆ?

12302015a ತ್ವಂ ಹಿ ವಿಪ್ರೇಂದ್ರ ಕಾರ್ತ್ಸ್ನ್ಯೇನ ಮೋಕ್ಷಧರ್ಮಮುಪಾಸಸೇ|

12302015c ಸಾಕಲ್ಯಂ ಮೋಕ್ಷಧರ್ಮಸ್ಯ ಶ್ರೋತುಮಿಚ್ಚಾಮಿ ತತ್ತ್ವತಃ||

ವಿಪ್ರೇಂದ್ರ! ನೀನು ಸಂಪೂರ್ಣವಾಗಿ ಮೋಕ್ಷಧರ್ಮವನ್ನು ಉಪಾಸಿಸುತ್ತೀದ್ದೀಯೆ. ಆದುದರಿಂದ ಸಂಪೂರ್ಣ ಮೋಕ್ಷಧರ್ಮವನ್ನು ತತ್ತ್ವತಃ ನಿನ್ನಿಂದ ಕೇಳಬೇಕೆಂದಿದ್ದೇನೆ.

12302016a ಅಸ್ತಿತ್ವಂ ಕೇವಲತ್ವಂ ಚ ವಿನಾಭಾವಂ ತಥೈವ ಚ|

12302016c ತಥೈವೋತ್ಕ್ರಮಣಸ್ಥಾನಂ ದೇಹಿನೋಽಪಿ ವಿಯುಜ್ಯತಃ||

12302017a ಕಾಲೇನ ಯದ್ಧಿ ಪ್ರಾಪ್ನೋತಿ ಸ್ಥಾನಂ ತದ್ಬ್ರೂಹಿ ಮೇ ದ್ವಿಜ|

ಪುರುಷನ ಅಸ್ತಿತ್ವ, ಕೇವಲತ್ವ, ಪ್ರಕೃತಿಯೊಂದಿಗೆ ಸಂಬಂಧವಿಲ್ಲದೇ ಇರುವಿಕೆ ಮತ್ತು ಮರಣಹೊಂದುತ್ತಿರುವ ದೇಹಿಯ ಉತ್ಕ್ರಮಣಸ್ಥಾನವು ಯಾವುದು ಮತ್ತು ದ್ವಿಜ! ಮರಣಾನಂತರ ಅವನು ಯಾವ ಸ್ಥಾನವನ್ನು ಪಡೆದುಕೊಳ್ಳುತ್ತಾನೆ ಎನ್ನುವುದನ್ನೂ ನೀನು ನನಗೆ  ಹೇಳು.

12302017c ಸಾಂಖ್ಯಜ್ಞಾನಂ ಚ ತತ್ತ್ವೇನ ಪೃಥಗ್ಯೋಗಂ ತಥೈವ ಚ||

12302018a ಅರಿಷ್ಟಾನಿ ಚ ತತ್ತ್ವೇನ ವಕ್ತುಮರ್ಹಸಿ ಸತ್ತಮ|

12302018c ವಿದಿತಂ ಸರ್ವಮೇತತ್ತೇ ಪಾಣಾವಾಮಲಕಂ ಯಥಾ||

ಸತ್ತಮ! ಸಾಂಖ್ಯಜ್ಞಾನವನ್ನು ಮತ್ತು ಪ್ರತ್ಯೇಕವಾಗಿ ಯೋಗಜ್ಞಾನವನ್ನೂ, ಮೃತ್ಯುಸೂಚಕ ಲಕ್ಷಣಗಳನ್ನೂ ತತ್ತ್ವಪೂರ್ವಕವಾಗಿ ಹೇಳಬೇಕು. ಅಂಗೈಯಲ್ಲಿರುವ ನೆಲ್ಲೀಕಾಯಿಯಂತೆ ನಿನಗೆ ಈ ವಿಷಯಗಳೆಲ್ಲವೂ ಸಂಪೂರ್ಣವಾಗಿ ತಿಳಿದಿವೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ದ್ವಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಮುನ್ನೂರಾಎರಡನೇ ಅಧ್ಯಾಯವು.

Free tree white background Images, Pictures, and Royalty-Free Stock Photos  - FreeImages.com

[1] ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಒಂದು ಶ್ಲೋಕಾರ್ಧವಿದೆ: ಅವ್ಯಕ್ತರೂಪೋ ಭಗವಾನ್ ಶತಧಾ ಚ ಸಹಸ್ರಧಾ|

[2] ಅಮೂರ್ತಿಮಂತಾವಚಲಾವಪ್ರಕಂಪ್ಯಗುಣಾಗುಣೌ| ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.