Shanti Parva: Chapter 298

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೯೮

ಯಾಜ್ಞವಲ್ಕ್ಯ-ಜನಕ ಸಂವಾದ

ಜನಕನಿಗೆ ಯಾಜ್ಞವಲ್ಕ್ಯನ ಉಪದೇಶ (1-9); ಇಪ್ಪತ್ನಾಲ್ಕು ತತ್ತ್ವಗಳ ಮತ್ತು ಒಂಭತ್ತು ಸೃಷ್ಟಿಗಳ ನಿರೂಪಣೆ (10-26).

12298001 ಯುಧಿಷ್ಠಿರ ಉವಾಚ|

12298001a ಧರ್ಮಾಧರ್ಮವಿಮುಕ್ತಂ ಯದ್ವಿಮುಕ್ತಂ ಸರ್ವಸಂಶ್ರಯಾತ್|

12298001c ಜನ್ಮಮೃತ್ಯುವಿಮುಕ್ತಂ ಚ ವಿಮುಕ್ತಂ ಪುಣ್ಯಪಾಪಯೋಃ||

12298002a ಯಚ್ಚಿವಂ ನಿತ್ಯಮಭಯಂ ನಿತ್ಯಂ ಚಾಕ್ಷರಮವ್ಯಯಮ್|

12298002c ಶುಚಿ ನಿತ್ಯಮನಾಯಾಸಂ ತದ್ಭವಾನ್ವಕ್ತುಮರ್ಹತಿ||

ಯುಧಿಷ್ಠಿರನು ಹೇಳಿದನು: “ಯಾವುದು ಧರ್ಮಾಧರ್ಮಗಳಿಂದಲೂ, ಸರ್ವ ಸಂಶಯಗಳಿಂದಲೂ, ಜನ್ಮ-ಮೃತ್ಯುಗಳಿಂದಲೂ, ಪುಣ್ಯ-ಪಾಪಗಳಿಂದಲೂ ವಿಮುಕ್ತವಾಗಿರುವುದೋ ಮತ್ತು ಯಾವುದು ನಿತ್ಯವೂ, ಅಭಯವೂ, ಮಂಗಳವೂ, ಅಕ್ಷರವೂ, ಅವ್ಯಯವೂ, ಪವಿತ್ರವೂ, ಕ್ಲೇಶರಹಿತವೂ ಆಗಿರುವುದೋ ಆ ಪರಮತತ್ತ್ವದ ಕುರಿತು ನನಗೆ ಹೇಳಬೇಕು.”

12298003 ಭೀಷ್ಮ ಉವಾಚ|

12298003a ಅತ್ರ ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್|

12298003c ಯಾಜ್ಞವಲ್ಕ್ಯಸ್ಯ ಸಂವಾದಂ ಜನಕಸ್ಯ ಚ ಭಾರತ||

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಯಾಜ್ಞವಲ್ಕ್ಯ ಮತ್ತು ಜನಕರ ಸಂವಾದವನ್ನು ಹೇಳುತ್ತೇನೆ.

12298004a ಯಾಜ್ಞವಲ್ಕ್ಯಮೃಷಿಶ್ರೇಷ್ಠಂ ದೈವರಾತಿರ್ಮಹಾಯಶಾಃ|

12298004c ಪಪ್ರಚ್ಚ ಜನಕೋ ರಾಜಾ ಪ್ರಶ್ನಂ ಪ್ರಶ್ನವಿದಾಂ ವರಃ||

ದೇವರಾತನ ಮಗ, ಮಹಾಯಶಸ್ವೀ, ಪ್ರಶ್ನಿಸುವವರಲ್ಲಿ ಶ್ರೇಷ್ಠ ರಾಜಾ ಜನಕನು ಋಷಿಶ್ರೇಷ್ಠ ಯಾಜ್ಞವಲ್ಕ್ಯನನ್ನು ಕೇಳಿದನು:

12298005a ಕತೀಂದ್ರಿಯಾಣಿ ವಿಪ್ರರ್ಷೇ ಕತಿ ಪ್ರಕೃತಯಃ ಸ್ಮೃತಾಃ|

12298005c ಕಿಮವ್ಯಕ್ತಂ ಪರಂ ಬ್ರಹ್ಮ ತಸ್ಮಾಚ್ಚ ಪರತಸ್ತು ಕಿಮ್||

“ವಿಪ್ರರ್ಷೇ! ಇಂದ್ರಿಯಗಳು ಎಷ್ಟಿವೆ? ಪೃಕೃತಿಯಲ್ಲಿ ಎಷ್ಟು ಭೇದಗಳಿವೆ? ಅವ್ಯಕ್ತವೆನ್ನುವುದು ಯಾವುದು? ಅದಕ್ಕಿಂತಲೂ ಅತೀತವಾಗಿರುವ ಪರಬ್ರಹ್ಮನ ಸ್ವರೂಪವೇನು?

12298006a ಪ್ರಭವಂ ಚಾಪ್ಯಯಂ ಚೈವ ಕಾಲಸಂಖ್ಯಾಂ ತಥೈವ ಚ|

12298006c ವಕ್ತುಮರ್ಹಸಿ ವಿಪ್ರೇಂದ್ರ ತ್ವದನುಗ್ರಹಕಾಂಕ್ಷಿಣಃ||

ವಿಪ್ರೇಂದ್ರ! ನಿನ್ನ ಅನುಗ್ರಹವನ್ನೇ ಬಯಸುವ ನನಗೆ ಇವುಗಳ ಸೃಷ್ಟಿ ಮತ್ತು ಕಾಲಪ್ರಮಾಣಗಳ ಕುರಿತು ಹೇಳಬೇಕು.

12298007a ಅಜ್ಞಾನಾತ್ಪರಿಪೃಚ್ಚಾಮಿ ತ್ವಂ ಹಿ ಜ್ಞಾನಮಯೋ ನಿಧಿಃ|

12298007c ತದಹಂ ಶ್ರೋತುಮಿಚ್ಚಾಮಿ ಸರ್ವಮೇತದಸಂಶಯಮ್||

ಅಜ್ಞಾನದಿಂದ ಕೇಳುತ್ತಿದ್ದೇನೆ. ನೀನು ಜ್ಞಾನಮಯ ಮತ್ತು ನಿಧಿ. ಆದುದರಿಂದ ಇವೆಲ್ಲವುಗಳನ್ನೂ ನಿಸ್ಸಂಶಯವಾಗಿ ನಿನ್ನಿಂದ ಕೇಳ ಬಯಸುತ್ತೇನೆ.”

12298008 ಯಾಜ್ಞವಲ್ಕ್ಯ ಉವಾಚ|

12298008a ಶ್ರೂಯತಾಮವನೀಪಾಲ ಯದೇತದನುಪೃಚ್ಚಸಿ|

12298008c ಯೋಗಾನಾಂ ಪರಮಂ ಜ್ಞಾನಂ ಸಾಂಖ್ಯಾನಾಂ ಚ ವಿಶೇಷತಃ||

ಯಾಜ್ಞವಲ್ಕ್ಯನು ಹೇಳಿದನು: “ಅವನೀಪಾಲ! ನೀನು ಕೇಳಿದ ಪ್ರಶ್ನೆಗಳು ಯೋಗಿಗಳ ಪರಮ ಜ್ಞಾನಕ್ಕೆ ಮತ್ತು ಅದರಲ್ಲೂ ವಿಶೇಷವಾಗಿ ಸಾಂಖ್ಯರ ಜ್ಞಾನಕ್ಕೆ ಸಂಬಂಧಿಸಿವೆ. ಕೇಳು.

12298009a ನ ತವಾವಿದಿತಂ ಕಿಂ ಚಿನ್ಮಾಂ ತು ಜಿಜ್ಞಾಸತೇ ಭವಾನ್|

12298009c ಪೃಷ್ಟೇನ ಚಾಪಿ ವಕ್ತವ್ಯಮೇಷ ಧರ್ಮಃ ಸನಾತನಃ||

ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ಆದರೂ ನನ್ನಿಂದ ಕೇಳಿ ತಿಳಿಯಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿರುವೆ. ಕೇಳಿದವನಿಗೆ ಹೇಳಬೇಕು ಎನ್ನುವುದು ಸನಾತನ ಧರ್ಮವಾಗಿದೆ.

12298010a ಅಷ್ಟೌ ಪ್ರಕೃತಯಃ ಪ್ರೋಕ್ತಾ ವಿಕಾರಾಶ್ಚಾಪಿ ಷೋಡಶ|

12298010c ಅಥ ಸಪ್ತ ತು ವ್ಯಕ್ತಾನಿ[1] ಪ್ರಾಹುರಧ್ಯಾತ್ಮಚಿಂತಕಾಃ||

ಪ್ರಕೃತಿಗಳು ಎಂಟೆಂದು ಹೇಳುತ್ತಾರೆ. ಅವುಗಳ ವಿಕಾರಗಳು ಹದಿನಾರು. ಅವುಗಳನ್ನು ಏಳು ವ್ಯಕ್ತವಾದವುಗಳು ಎಂದು ಆಧ್ಯಾತ್ಮಚಿಂತಕರು ಹೇಳುತ್ತಾರೆ.

12298011a ಅವ್ಯಕ್ತಂ ಚ ಮಹಾಂಶ್ಚೈವ ತಥಾಹಂಕಾರ ಏವ ಚ|

12298011c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್||

12298012a ಏತಾಃ ಪ್ರಕೃತಯಸ್ತ್ವಷ್ಟೌ ವಿಕಾರಾನಪಿ ಮೇ ಶೃಣು|

ಅವ್ಯಕ್ತ, ಮಹತ್ತತ್ತ್ವ, ಅಹಂಕಾರ, ಪೃಥ್ವಿ, ವಾಯು, ಆಕಾಶ, ಜಲ ಮತ್ತು ಐದನೆಯದಾದ ಜ್ಯೋತಿ – ಇವೇ ಎಂಟು ಪ್ರಕೃತಿಗಳು. ಅವುಗಳ ವಿಕಾರಗಳನ್ನು ಕೇಳು.

12298012c ಶ್ರೋತ್ರಂ ತ್ವಕ್ಚೈವ ಚಕ್ಷುಶ್ಚ ಜಿಹ್ವಾ ಘ್ರಾಣಂ ಚ ಪಂಚಮಮ್||

12298013a ಶಬ್ದಸ್ಪರ್ಶೌ ಚ ರೂಪಂ ಚ ರಸೋ ಗಂಧಸ್ತಥೈವ ಚ|

12298013c ವಾಕ್ಚ ಹಸ್ತೌ ಚ ಪಾದೌ ಚ ಪಾಯುರ್ಮೇಢ್ರಂ ತಥೈವ ಚ||

12298014a ಏತೇ ವಿಶೇಷಾ ರಾಜೇಂದ್ರ ಮಹಾಭೂತೇಷು ಪಂಚಸು|

12298014c ಬುದ್ಧೀಂದ್ರಿಯಾಣ್ಯಥೈತಾನಿ ಸವಿಶೇಷಾಣಿ ಮೈಥಿಲ||

ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು – ಇವು ಐದು ಜ್ಞಾನೇಂದ್ರಿಯಗಳು. ಶಬ್ದ, ಸ್ಪರ್ಶ, ರೂಪ, ರಸ, ಗಂಧ – ಇವು ಐದು ಪಂಚತನ್ಮಾತ್ರಗಳು. ನಾಲಿಗೆ, ಕೈಗಳು, ಕಾಲುಗಳು, ಗುದ ಮತ್ತು ಜನನೇಂದ್ರಿಯ – ಇವು ಐದು ಕರ್ಮೇಂದ್ರಿಯಗಳು. ರಾಜೇಂದ್ರ! ಐದು ಕರ್ಮೇಂದ್ರಿಯಗಳನ್ನೂ ಮತ್ತು ಪಂಚ ತನ್ಮಾತ್ರಗಳನ್ನೂ ವಿಶೇಷಗಳೆಂದು ಕರೆಯುತ್ತಾರೆ. ಮೈಥಿಲ! ಐದು ಜ್ಞಾನೇಂದ್ರಿಯಗಳನ್ನು ಸವಿಶೇಷಗಳೆಂದು ಕರೆಯುತ್ತಾರೆ. ವಿಶೇಷ-ಸವಿಶೇಷಗಳೆರಡೂ ಪಂಚಮಹಾಭೂತಗಳಲ್ಲಿಯೇ ಇವೆ.

12298015a ಮನಃ ಷೋಡಶಕಂ ಪ್ರಾಹುರಧ್ಯಾತ್ಮಗತಿಚಿಂತಕಾಃ|

12298015c ತ್ವಂ ಚೈವಾನ್ಯೇ ಚ ವಿದ್ವಾಂಸಸ್ತತ್ತ್ವಬುದ್ಧಿವಿಶಾರದಾಃ||

ಆಧ್ಯಾತ್ಮಗತಿಚಿಂತಕರು ಮನಸ್ಸನ್ನು ಹದಿನಾರನೆಯ ವಿಕಾರ ಎನ್ನುತ್ತಾರೆ. ನಿನ್ನ ಮತ್ತು ಇತರ ಬುದ್ಧಿವಿಶಾರದ ವಿದ್ವಾಂಸರ ಮತವೂ ಇದೇ ಆಗಿದೆ.

12298016a ಅವ್ಯಕ್ತಾಚ್ಚ ಮಹಾನಾತ್ಮಾ ಸಮುತ್ಪದ್ಯತಿ ಪಾರ್ಥಿವ|

12298016c ಪ್ರಥಮಂ ಸರ್ಗಮಿತ್ಯೇತದಾಹುಃ ಪ್ರಾಧಾನಿಕಂ ಬುಧಾಃ||

ಪಾರ್ಥಿವ! ಮಹತ್ತು ಅಥವಾ ಅವ್ಯಕ್ತವು ತಾನೇ ಉತ್ಪನ್ನವಾಗುತ್ತದೆ[2]. ಇದನ್ನೇ ವಿದ್ವಾಂಸರು ಮೊದಲನೆಯ ಮತ್ತು ಪ್ರಧಾನ ಸೃಷ್ಟಿಯೆಂದು ಹೇಳುತ್ತಾರೆ.

12298017a ಮಹತಶ್ಚಾಪ್ಯಹಂಕಾರ ಉತ್ಪದ್ಯತಿ ನರಾಧಿಪ|

12298017c ದ್ವಿತೀಯಂ ಸರ್ಗಮಿತ್ಯಾಹುರೇತದ್ಬುದ್ಧ್ಯಾತ್ಮಕಂ ಸ್ಮೃತಮ್||

ನರಾಧಿಪ! ಮಹತ್ತಿನಿಂದ ಅಹಂಕಾರವು ಉತ್ಪನ್ನವಾಗುತ್ತದೆ. ಇದನ್ನು ಎರಡನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಬುದ್ಧ್ಯಾತ್ಮಕ ಸೃಷ್ಟಿ ಎಂದೂ ತಿಳಿಯಲ್ಪಟ್ಟಿದೆ.

12298018a ಅಹಂಕಾರಾಚ್ಚ ಸಂಭೂತಂ ಮನೋ ಭೂತಗುಣಾತ್ಮಕಮ್|

12298018c ತೃತೀಯಃ ಸರ್ಗ ಇತ್ಯೇಷ ಆಹಂಕಾರಿಕ ಉಚ್ಯತೇ||

ಪಂಚಭೂತಗಳ ಮತ್ತು ಗುಣಗಳನ್ನು ಹೊಂದಿರುವ ಮನಸ್ಸು ಅಹಂಕಾರದಿಂದ ಹುಟ್ಟುತ್ತದೆ. ಇದನ್ನು ಮೂರನೆಯ ಸೃಷ್ಟಿ ಮತ್ತು ಆಹಂಕಾರಿಕ ಸೃಷ್ಟಿ ಎಂದು ಹೇಳುತ್ತಾರೆ.

12298019a ಮನಸಸ್ತು ಸಮುದ್ಭೂತಾ ಮಹಾಭೂತಾ ನರಾಧಿಪ|

12298019c ಚತುರ್ಥಂ ಸರ್ಗಮಿತ್ಯೇತನ್ಮಾನಸಂ ಪರಿಚಕ್ಷತೇ||

ನರಾಧಿಪ! ಮನಸ್ಸಿನಿಂದ ಮಹಾಭೂತಗಳು ಹುಟ್ಟುತ್ತವೆ. ಇದನ್ನು ನಾಲ್ಕನೆಯ ಸೃಷ್ಟಿ ಮತ್ತು ಮಾನಸ ಸೃಷ್ಟಿ ಎಂದು ಕರೆಯುತ್ತಾರೆ.

12298020a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಸ್ತಥೈವ ಚ|

12298020c ಪಂಚಮಂ ಸರ್ಗಮಿತ್ಯಾಹುರ್ಭೌತಿಕಂ ಭೂತಚಿಂತಕಾಃ||

ಪಂಚಮಹಾಭೂತಗಳಿಂದ ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ ಇವು ಹುಟ್ಟುತ್ತವೆ. ಭೂತಚಿಂತಕರು ಇದನ್ನು ಐದನೆಯ ಸೃಷ್ಟಿಯೆಂದೂ ಭೌತಿಕ ಸೃಷ್ಟಿಯೆಂದೂ ಹೇಳುತ್ತಾರೆ.

12298021a ಶ್ರೋತ್ರಂ ತ್ವಕ್ಚೈವ ಚಕ್ಷುಶ್ಚ ಜಿಹ್ವಾ ಘ್ರಾಣಂ ಚ ಪಂಚಮಮ್|

12298021c ಸರ್ಗಂ ತು ಷಷ್ಠಮಿತ್ಯಾಹುರ್ಬಹುಚಿಂತಾತ್ಮಕಂ ಸ್ಮೃತಮ್||

ಶಬ್ದ-ಸ್ಪರ್ಶಾದಿ ತನ್ಮಾತ್ರಗಳಿಂದ ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಐದನೆಯದಾಗಿ ಮೂಗು ಇವುಗಳು ಹುಟ್ಟುತ್ತವೆ. ಇದನ್ನು ಆರನೆಯ ಸೃಷ್ಟಿ ಮತ್ತು ಬಹುಚಿಂತಾತ್ಮಕ ಸೃಷ್ಟಿ ಎಂದು ಕರೆಯುತ್ತಾರೆ.

12298022a ಅಧಃ[3] ಶ್ರೋತ್ರೇಂದ್ರಿಯಗ್ರಾಮ ಉತ್ಪದ್ಯತಿ ನರಾಧಿಪ|

12298022c ಸಪ್ತಮಂ ಸರ್ಗಮಿತ್ಯಾಹುರೇತದೈಂದ್ರಿಯಕಂ ಸ್ಮೃತಮ್||

ನರಾಧಿಪ! ಅನಂತರ ಕೆಳಗಿನವುಗಳಾದ ಕಿವಿಯೇ ಮೊದಲಾದ ಕರ್ಮೇಂದ್ರಿಯಗಳ ಗುಂಪು ಹುಟ್ಟುತ್ತದೆ. ಇದನ್ನು ಏಳನೆಯ ಸೃಷ್ಟಿಯೆಂದು ಹೇಳುತ್ತಾರೆ. ಇದು ಐಂದ್ರಿಯಕ ಸೃಷ್ಟಿಯೆಂದೂ ತಿಳಿಯಲ್ಪಟ್ಟಿದೆ.

12298023a ಊರ್ಧ್ವಸ್ರೋತಸ್ತಥಾ ತಿರ್ಯಗುತ್ಪದ್ಯತಿ ನರಾಧಿಪ|

12298023c ಅಷ್ಟಮಂ ಸರ್ಗಮಿತ್ಯಾಹುರೇತದಾರ್ಜವಕಂ ಬುಧಾಃ||

ನರಾಧಿಪ! ಅನಂತರ ಮೇಲಕ್ಕೆ ಪ್ರವಹಿಸುವ ಮತ್ತು ಅಡ್ಡಡ್ಡವಾಗಿ ಸಂಚರಿಸುವ ಸಮಾನ, ವ್ಯಾನ ಮತ್ತು ಉದಾನ ವಾಯುಗಳು ಹುಟ್ಟುತ್ತವೆ. ತಿಳಿದವರು ಇದನ್ನು ಎಂಟನೆಯ ಸೃಷ್ಟಿಯೆಂದು ಮತ್ತು ಆರ್ಜವಕ ಸೃಷ್ಟಿಯೆಂದು ಹೇಳುತ್ತಾರೆ.

12298024a ತಿರ್ಯಕ್ ಸ್ರೋತಸ್ತ್ವಧಃಸ್ರೋತ ಉತ್ಪದ್ಯತಿ ನರಾಧಿಪ|

12298024c ನವಮಂ ಸರ್ಗಮಿತ್ಯಾಹುರೇತದಾರ್ಜವಕಂ ಬುಧಾಃ||

ನರಾಧಿಪ! ಅಡ್ಡಡ್ಡವಾಗಿ ಸಂಚರಿಸುವ ಸಮಾನ-ವ್ಯಾನ-ಉದಾನ ವಾಯುಗಳು ಅಧೋಗತಿಗೆ ತಿರುಗಿದಾಗ ಅಪಾನವು ಹುಟ್ಟುತ್ತದೆ. ಆರ್ಜಕವೆಂದೇ ತಿಳಿದವರು ಕರೆಯುವ ಇದು ಒಂಭತ್ತನೆಯ ಸೃಷ್ಟಿ.

12298025a ಏತಾನಿ ನವ ಸರ್ಗಾಣಿ ತತ್ತ್ವಾನಿ ಚ ನರಾಧಿಪ|

12298025c ಚತುರ್ವಿಂಶತಿರುಕ್ತಾನಿ ಯಥಾಶ್ರುತಿ ನಿದರ್ಶನಾತ್||

ನರಾಧಿಪ! ಇವೇ ಶ್ರುತಿಗಳಲ್ಲಿ ನಿದರ್ಶನಗಳೊಂದಿಗೆ ಹೇಳಲ್ಪಟ್ಟಿರುವ ಒಂಭತ್ತು ಸೃಷ್ಟಿಗಳು ಮತ್ತು ಇಪ್ಪತ್ನಾಲ್ಕು ತತ್ತ್ವಗಳು.

12298026a ಅತ ಊರ್ಧ್ವಂ ಮಹಾರಾಜ ಗುಣಸ್ಯೈತಸ್ಯ ತತ್ತ್ವತಃ|

12298026c ಮಹಾತ್ಮಭಿರನುಪ್ರೋಕ್ತಾಂ ಕಾಲಸಂಖ್ಯಾಂ ನಿಬೋಧ ಮೇ||

ಮಹಾರಾಜ! ಇನ್ನು ಮುಂದೆ ಮಹಾತ್ಮರು ಹೇಳಿರುವ ಇವುಗಳ ಗುಣ ಮತ್ತು ಕಾಲಸಂಖ್ಯೆಯನ್ನು ನನ್ನಿಂದ ಕೇಳು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಯಾಜ್ಞವಲ್ಕ್ಯಜನಕಸಂವಾದೇ ಅಷ್ಟನವತ್ಯತ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಯಾಜ್ಞವಲ್ಕ್ಯಜನಕಸಂವಾದ ಎನ್ನುವ ಇನ್ನೂರಾತೊಂಭತ್ತೆಂಟನೇ ಅಧ್ಯಾಯವು.

Plane tree on a white background. Isolated plane tree on a white background  , #Ad, #white, #tree, #Plane, #plane, #Isolated #a… | Plane tree, White  background, Tree

[1] ತತ್ರ ತು ಪ್ರಕೃತೀರಷ್ಟೌ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಮಹತ್ತು ಅಥವಾ ಅವ್ಯಕ್ತವು ಪ್ರಧಾನದಿಂದ ಉತ್ಪತ್ತಿಯಾಗುತ್ತದೆ?

[3] ಅಥಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.