Shanti Parva: Chapter 259

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೯

ಸತ್ಯವಾನ-ದ್ಯುಮತ್ಸೇನ ಸಂವಾದ

ಅಹಿಂಸಾಪೂರ್ವಕವಾದ ರಾಜ್ಯಶಾಸನದ ಕುರಿತಾಗಿ ದ್ಯುಮತ್ಸೇನ-ಸತ್ಯವಾನರ ಸಂವಾದ (1-35).

12259001 ಯುಧಿಷ್ಠಿರ ಉವಾಚ|

12259001a ಕಥಂ ರಾಜಾ ಪ್ರಜಾ ರಕ್ಷೇನ್ನ ಚ ಕಿಂ ಚಿತ್ ಪ್ರತಾಪಯೇತ್[1]|

12259001c ಪೃಚ್ಚಾಮಿ ತ್ವಾಂ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸತ್ಪುರುಷರಲ್ಲಿ ಶ್ರೇಷ್ಠ! ಯಾರನ್ನೂ ಹಿಂಸಿಸದೇ ರಾಜನಾದವನು ಹೇಗೆ ಪ್ರಜೆಗಳನ್ನು ರಕ್ಷಿಸಬೇಕು? ಇದನ್ನು ನಿನ್ನಲ್ಲಿ ಕೇಳುತ್ತೇನೆ. ಅದನ್ನು ನನಗೆ ಹೇಳು.”

12259002 ಭೀಷ್ಮ ಉವಾಚ|

12259002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12259002c ದ್ಯುಮತ್ಸೇನಸ್ಯ ಸಂವಾದಂ ರಾಜ್ಞಾ ಸತ್ಯವತಾ ಸಹ||

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ, ಸತ್ಯವಾನನೊಂದಿಗೆ ರಾಜಾ ದ್ಯುಮತ್ಸೇನ[2]ನ, ಸಂವಾದವನ್ನು ಉದಾಹರಿಸುತ್ತಾರೆ.

12259003a ಅವ್ಯಾಹೃತಂ ವ್ಯಾಜಹಾರ ಸತ್ಯವಾನಿತಿ ನಃ ಶ್ರುತಮ್|

12259003c ವಧಾಯ ನೀಯಮಾನೇಷು ಪಿತುರೇವಾನುಶಾಸನಾತ್||

ತಂದೆಯ ಅನುಶಾಸನದಂತೆ ಓರ್ವನನ್ನು ವಧೆಗೆ ಕೊಂಡೊಯ್ಯುತ್ತಿದ್ದಾಗ ಸತ್ಯವಾನನು ಅದಕ್ಕೆ ಮೊದಲು ಯಾರೂ ಮಾಡದಿದ್ದುದನ್ನು ಮಾಡಿದನೆಂದು ನಾವು ಕೇಳಿದ್ದೇವೆ.

12259004a ಅಧರ್ಮತಾಂ ಯಾತಿ ಧರ್ಮೋ ಯಾತ್ಯಧರ್ಮಶ್ಚ ಧರ್ಮತಾಮ್|

12259004c ವಧೋ ನಾಮ ಭವೇದ್ಧರ್ಮೋ ನೈತದ್ ಭವಿತುಮರ್ಹತಿ||

“ವಧಿಸುವುದು ಧರ್ಮವೆಂದಾದರೆ, ಧರ್ಮವು ಅಧರ್ಮತ್ವವನ್ನು ಪಡೆದುಕೊಳ್ಳುತ್ತದೆ. ಅಧರ್ಮವೂ ಧರ್ಮತ್ವವನ್ನು ಪಡೆದುಕೊಳ್ಳುತ್ತದೆ. ಅದು ಹಾಗಾಗಬಾರದು!” ಎಂದನು.

12259005 ದ್ಯುಮತ್ಸೇನ ಉವಾಚ|

12259005a ಅಥ ಚೇದವಧೋ ಧರ್ಮೋ ಧರ್ಮಃ[3] ಕೋ ಜಾತು ಚಿದ್ಭವೇತ್|

12259005c ದಸ್ಯವಶ್ಚೇನ್ನ ಹನ್ಯೇರನ್ ಸತ್ಯವನ್ ಸಂಕರೋ ಭವೇತ್||

ದ್ಯುಮತ್ಸೇನನು ಹೇಳಿದನು: “ಸತ್ಯವನ್! ವಧಿಸದಿರುವುದು ಧರ್ಮವೆಂದಾದರೆ ಏನಾಗಬಹುದು? ದಸ್ಯುಗಳನ್ನು ಕೊಲ್ಲದಿದ್ದರೆ ಧರ್ಮಸಂಕರವಾಗುತ್ತದೆ.

12259006a ಮಮೇದಮಿತಿ ನಾಸ್ಯೈತತ್ ಪ್ರವರ್ತೇತ ಕಲೌ ಯುಗೇ|

12259006c ಲೋಕಯಾತ್ರಾ ನ ಚೈವ ಸ್ಯಾದಥ ಚೇದ್ವೇತ್ಥ ಶಂಸ ನಃ||

ಕಲಿಯುಗದಲ್ಲಿ ಇದು ನನ್ನದು ಅವನದ್ದಲ್ಲ ಎನ್ನುವುದೇ ನಡೆಯುತ್ತದೆ. ಲೋಕವ್ಯವಹಾರಗಳೇ ನಡೆಯುವುದಿಲ್ಲ. ಇದರ ಕುರಿತು ನಿನ್ನಲ್ಲಿ ಉಪಾಯವೇನಾದರೂ ಇದ್ದರೆ ನಮಗೆ ಹೇಳು.”

12259007 ಸತ್ಯವಾನುವಾಚ|

12259007a ಸರ್ವ ಏವ ತ್ರಯೋ ವರ್ಣಾಃ ಕಾರ್ಯಾ ಬ್ರಾಹ್ಮಣಬಂಧನಾಃ|

12259007c ಧರ್ಮಪಾಶನಿಬದ್ಧಾನಾಮಲ್ಪೋ ವ್ಯಪಚರಿಷ್ಯತಿ||

ಸತ್ಯವಾನನು ಹೇಳಿದನು: “ಮೂರೂ ವರ್ಣದವರನ್ನೂ ಬ್ರಾಹ್ಮಣರಿಗೆ ಅಧೀನರನ್ನಾಗಿ ಮಾಡಬೇಕು. ಈ ರೀತಿ ಧರ್ಮಪಾಶದಿಂದ ಕಟ್ಟಲ್ಪಟ್ಟಾಗ ಉಳಿದವರು ಹಾಗೆಯೇ ನಡೆದುಕೊಳ್ಳುತ್ತಾರೆ.

12259008a ಯೋ ಯಸ್ತೇಷಾಮಪಚರೇತ್ತಮಾಚಕ್ಷೀತ ವೈ ದ್ವಿಜಃ|

12259008c ಅಯಂ ಮೇ ನ ಶೃಣೋತೀತಿ ತಸ್ಮಿನ್ರಾಜಾ ಪ್ರಧಾರಯೇತ್||

ಅವರಲ್ಲಿ ಯಾರಾದರೂ ಅಪಚಾರವನ್ನೆಸಗಿದರೆ ದ್ವಿಜನು “ಇವನು ನನ್ನ ಮಾತನ್ನು ಕೇಳುತ್ತಿಲ್ಲ” ಎಂದು ರಾಜನಿಗೆ ದೂರಿಡಬೇಕು. ಆಗ ರಾಜನು ಅಪರಾಧಿಗೆ ಶಿಕ್ಷೆಯನ್ನು ವಿಧಿಸಬೇಕು.

12259009a ತತ್ತ್ವಾಭೇದೇನ ಯಚ್ಚಾಸ್ತ್ರಂ ತತ್ಕಾರ್ಯಂ ನಾನ್ಯಥಾ ವಧಃ|

12259009c ಅಸಮೀಕ್ಷ್ಯೈವ ಕರ್ಮಾಣಿ ನೀತಿಶಾಸ್ತ್ರಂ ಯಥಾವಿಧಿ||

ಶಿಕ್ಷಿಸುವಾಗ ಪಂಚಭೂತಗಳು ಪ್ರತ್ಯೇಕವಾಗದ ರೀತಿಯಲ್ಲಿ ಶಿಕ್ಷಿಸಬೇಕು. ಅನ್ಯಥಾ ವಧಿಸಬಾರದು. ನೀತಿಶಾಸ್ತ್ರದಂತೆ ಯಥಾವಿಧಿಯಾಗಿ ಕರ್ಮಗಳನ್ನು ಸಮೀಕ್ಷಿಸದೇ ಶಿಕ್ಷಿಸಬಾರದು.

12259010a ದಸ್ಯೂನ್ ಹಿನಸ್ತಿ ವೈ ರಾಜಾ ಭೂಯಸೋ ವಾಪ್ಯನಾಗಸಃ|

12259010c ಭಾರ್ಯಾ ಮಾತಾ ಪಿತಾ ಪುತ್ರೋ ಹನ್ಯತೇ ಪುರುಷೇ ಹತೇ|

12259010e ಪರೇಣಾಪಕೃತೇ ರಾಜಾ ತಸ್ಮಾತ್ಸಮ್ಯಕ್ ಪ್ರಧಾರಯೇತ್||

ರಾಜನು ದಸ್ಯರನ್ನು ವಧಿಸುವುದರೊಂದಿಗೆ ಅನೇಕ ನಿರಪರಾಧಿಗಳನ್ನೂ ವಧಿಸುತ್ತಾನೆ. ಪುರುಷನು ಹತನಾಗಲು ಅವನ ಭಾರ್ಯೆ, ಮಾತಾ, ಪಿತಾ ಮತ್ತು ಪುತ್ರರೂ ಹತರಾಗುತ್ತಾರೆ. ಪರರಿಂದ ಅಪಕೃತನಾದ ರಾಜನು ಅವರಿಗೆ ಶಿಕ್ಷೆಯನ್ನು ವಿಧಿಸುವ ಮೊದಲು ಚೆನ್ನಾಗಿ ವಿಚಾರಮಾಡಬೇಕು.

12259011a ಅಸಾಧುಶ್ಚೈವ ಪುರುಷೋ ಲಭತೇ ಶೀಲಮೇಕದಾ|

12259011c ಸಾಧೋಶ್ಚಾಪಿ ಹ್ಯಸಾಧುಭ್ಯೋ ಜಾಯತೇಽಶೋಭನಾ ಪ್ರಜಾ[4]||

ಅಸಾಧುವಾಗಿದ್ದರೂ ಪುರುಷನು ಒಮ್ಮೊಮ್ಮೆ ಉತ್ತಮ ಶೀಲವನ್ನು ಪಡೆದುಕೊಳ್ಳುತ್ತಾನೆ. ಸಾಧು ಮತ್ತು ಅಸಾಧುಗಳಿಬ್ಬರೂ ಅಶೋಭನ ಪ್ರಜೆಗಳಿಗೆ ಜನ್ಮವೀಯುತ್ತಾರೆ.

12259012a ನ ಮೂಲಘಾತಃ ಕರ್ತವ್ಯೋ ನೈಷ ಧರ್ಮಃ ಸನಾತನಃ|

12259012c ಅಪಿ ಖಲ್ವವಧೇನೈವ ಪ್ರಾಯಶ್ಚಿತ್ತಂ ವಿಧೀಯತೇ||

ವಂಶದ ಮೂಲವನ್ನೇ ನಾಶಮಾಡಬಾರದು. ಅದು ಸನಾತನ ಧರ್ಮವಲ್ಲ. ವಧೆಗಿಂತಲೂ ಅಲ್ಪವಾದ ಪ್ರಾಯಶ್ಚಿತ್ತವನ್ನೇ ವಿಧಿಸಬೇಕು.

12259013a ಉದ್ವೇಜನೇನ ಬಂಧೇನ ವಿರೂಪಕರಣೇನ ಚ|

12259013c ವಧದಂಡೇನ ತೇ ಕ್ಲೇಶ್ಯಾ ನ ಪುರೋಽಹಿತಸಂಪದಾ||

ಉದ್ವೇಗವನ್ನುಂಟುಮಾಡುವುದು, ಬಂಧನ, ವಿರೂಪಗೊಳಿಸುವುದು ಮೊದಲಾದ ಶಿಕ್ಷೆಗಳನ್ನು ವಿಧಿಸಬೇಕೇ ಹೊರತು ವಧದಂಡನೆಯನ್ನು ಕೊಟ್ಟು ಅವನ ಬಂಧು-ಮಿತ್ರರಿಗೆ ಕ್ಲೇಶವುಂಟಾಗುವಂತೆ ಮಾಡಬಾರದು.

12259014a ಯದಾ ಪುರೋಹಿತಂ ವಾ ತೇ ಪರ್ಯೇಯುಃ ಶರಣೈಷಿಣಃ|

12259014c ಕರಿಷ್ಯಾಮಃ ಪುನರ್ಬ್ರಹ್ಮನ್ನ ಪಾಪಮಿತಿ ವಾದಿನಃ||

12259015a ತದಾ ವಿಸರ್ಗಮರ್ಹಾಃ ಸ್ಯುರಿತೀದಂ ನೃಪಶಾಸನಮ್|

12259015c ಬಿಭ್ರದ್ದಂಡಾಜಿನಂ ಮುಂಡೋ ಬ್ರಾಹ್ಮಣೋಽರ್ಹತಿ ವಾಸಸಮ್||

ಅಥವಾ ಅವರು ಪುರೋಹಿತನಿಗೆ ಶರಣುಬಂದು “ಬ್ರಹ್ಮನ್! ಪುನಃ ಈ ಪಾಪವನ್ನು ಮಾಡುವುದಿಲ್ಲ” ಎಂದವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎನ್ನುವುದು ಬ್ರಹ್ಮನ ಶಾಸನವೇ ಆಗಿದೆ. ದಂಡ-ಜಿನಗಳನ್ನು ಧರಿಸಿದ ಬ್ರಾಹ್ಮಣ ಸಂನ್ಯಾಸಿಯೂ ಅಪರಾಧಮಾಡಿದಲ್ಲಿ ಶಿಕ್ಷಾರ್ಹನಾಗುತ್ತಾನೆ.

12259016a ಗರೀಯಾಂಸೋ ಗರೀಯಾಂಸಮಪರಾಧೇ ಪುನಃ ಪುನಃ|

12259016c ತಥಾ ವಿಸರ್ಗಮರ್ಹಂತಿ ನ ಯಥಾ ಪ್ರಥಮೇ ತಥಾ||

ಪುನಃ ಪುನಃ ಅಪರಾಧವನ್ನೆಸಗಿದವನಿಗೆ ಹೆಚ್ಚು ಹೆಚ್ಚಿನ ಶಿಕ್ಷೆಯನ್ನೇ ವಿಧಿಸಬೇಕು. ಮೊದಲನೆಯ ಅಪರಾಧದಲ್ಲಿ ಎಚ್ಚರಿಕೆ ಕೊಟ್ಟು ಬಂಧನದಿಂದ ಮುಕ್ತಗೊಳಿಸಲು ಹೇಗೆ ಯೋಗ್ಯವೋ ಹಾಗೆ ಪುನಃ ಪುನಃ ಅಪರಾಧವನ್ನೆಸಗಿದವನು ಶಿಕ್ಷೆಯನ್ನು ಪಡೆಯದೇ ಬಿಡುಗಡೆಹೊಂದಲು ಅರ್ಹನಾಗುವುದಿಲ್ಲ.”

12259017 ದ್ಯುಮತ್ಸೇನ ಉವಾಚ|

12259017a ಯತ್ರ ಯತ್ರೈವ ಶಕ್ಯೇರನ್ಸಂಯಂತುಂ ಸಮಯೇ ಪ್ರಜಾಃ|

12259017c ಸ ತಾವತ್ ಪ್ರೋಚ್ಯತೇ ಧರ್ಮೋ ಯಾವನ್ನ ಪ್ರತಿಲಂಘ್ಯತೇ||

ದ್ಯುಮತ್ಸೇನನು ಹೇಳಿದನು: “ಎಲ್ಲೆಲ್ಲಿ ಮತ್ತು ಸಮಯದಲ್ಲಿ ಪ್ರಜೆಗಳನ್ನು ಧರ್ಮದ ಚೌಕಟ್ಟಿನಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅದನ್ನೇ ಧರ್ಮ ಎಂದು ಹೇಳುತ್ತಾರೆ. ಎಲ್ಲಿಯವರೆಗೆ ಧರ್ಮದ ಉಲ್ಲಂಘನೆಯಾಗುವುದಿಲ್ಲವೋ ಅಲ್ಲಿಯವರೆಗೆ ಧರ್ಮವೆಂಬುದು ಉಳಿದಿರುತ್ತದೆ.

12259018a ಅಹನ್ಯಮಾನೇಷು ಪುನಃ ಸರ್ವಮೇವ ಪರಾಭವೇತ್|

12259018c ಪೂರ್ವೇ ಪೂರ್ವತರೇ ಚೈವ ಸುಶಾಸ್ಯಾ ಅಭವನ್ ಜನಾಃ||

ಧರ್ಮವನ್ನು ಉಲ್ಲಂಘಿಸಿದವರನ್ನು ಸಂಹರಿಸದೇ ಇದ್ದರೆ ಎಲ್ಲ ಪ್ರಾಕಾರದ ಆಡಳಿತಗಳೂ ಪರಾಭವಗೊಳ್ಳುತ್ತವೆ. ಹಿಂದಿನ ಮತ್ತು ಅದಕ್ಕೂ ಹಿಂದಿನ ಪ್ರಜೆಗಳನ್ನು ಆಳುವುದು ಸುಲಭವಾಗಿತ್ತು.

12259019a ಮೃದವಃ ಸತ್ಯಭೂಯಿಷ್ಠಾ ಅಲ್ಪದ್ರೋಹಾಲ್ಪಮನ್ಯವಃ|

12259019c ಪುರಾ ಧಿಗ್ದಂಡ ಏವಾಸೀದ್ವಾಗ್ದಂಡಸ್ತದನಂತರಮ್||

ಆಗ ಜನರು ಮೃದುವಾಗಿದ್ದರು, ಸತ್ಯದಲ್ಲಿಯೇ ನೆಲೆಸಿದ್ದರು. ಅಲ್ಪದ್ರೋಹಿಗಳಾಗಿದ್ದರು ಮತ್ತು ಅಲ್ಪಕೋಪಿಷ್ಟರಾಗಿದ್ದರು. ಹಿಂದೆ “ಧಿಕ್ಕಾರ” ಎನ್ನುವುದೇ ದಂಡವಾಗಿತ್ತು. ಅನಂತರ ವಾಗ್ದಂಡವು ಪ್ರಾರಂಭವಾಯಿತು.

12259020a ಆಸೀದಾದಾನದಂಡೋಽಪಿ ವಧದಂಡೋಽದ್ಯ ವರ್ತತೇ|

12259020c ವಧೇನಾಪಿ ನ ಶಕ್ಯಂತೇ ನಿಯಂತುಮಪರೇ ಜನಾಃ||

ಅದಾನದಂಡವೂ[5] ಇತ್ತು. ಈಗ ವಧದಂಡನೆಯು ನಡೆಯುತ್ತಿದೆ. ವಧದಂಡನೆಯಿಂದ ಕೂಡ ಕೈಗೆ ಸಿಕ್ಕಿದವರನ್ನು ಬಿಟ್ಟು ಇತರ ಜನರನ್ನೂ ನಿಯಂತ್ರಿಸಲು ಶಕ್ಯವಿಲ್ಲ.

12259021a ನೈವ ದಸ್ಯುರ್ಮನುಷ್ಯಾಣಾಂ ನ ದೇವಾನಾಮಿತಿ ಶ್ರುತಿಃ|

12259021c ನ ಗಂಧರ್ವಪಿತೃಣಾಂ ಚ ಕಃ ಕಸ್ಯೇಹ ನ ಕಶ್ಚನ||

ದಸ್ಯುಗಳು ಮನುಷರಲ್ಲಿ ಮಾತ್ರವಲ್ಲದೆ ದೇವತೆಗಳಲ್ಲಿ, ಗಂಧರ್ವರಲ್ಲಿ ಮತ್ತು ಪಿತೃಗಳಲ್ಲಿ ಕೂಡ ಯಾರಿಗೂ ಬೇಡವಾದವರು. ಹಾಗಿರುವಾಗ ದಸ್ಯುಗಳು[6] ಯಾರಿಗೂ ಬೇಡವಾದವರು ಎನ್ನುವುದೇ ಯಥಾರ್ಥ.

12259022a ಪದ್ಮಂ ಶ್ಮಶಾನಾದಾದತ್ತೇ ಪಿಶಾಚಾಚ್ಚಾಪಿ ದೈವತಮ್|

12259022c ತೇಷು ಯಃ ಸಮಯಂ ಕುರ್ಯಾದಜ್ಞೇಷು ಹತಬುದ್ಧಿಷು||

ದಸ್ಯುಗಳು ಶ್ಮಶಾನದಿಂದಲೂ ಪದ್ಮವನ್ನು ಕದಿಯುತ್ತಾರೆ ಮತ್ತು ಪಿಚಾಚಿಗಳನ್ನೇ ದೈವತವೆಂದು ಪೂಜಿಸುತ್ತಾರೆ. ಅಂಥಹ ಬುದ್ಧಿಯನ್ನು ಕಳೆದುಕೊಂಡವರ ವಿಷಯದಲ್ಲಿ ಅಜ್ಞಾನದಿಂದ ಯಾರು ತಾನೇ ಒಪ್ಪಂದವನ್ನು ಮಾಡಿಕೊಳ್ಳುತ್ತಾನೆ?”

12259023 ಸತ್ಯವಾನುವಾಚ|

12259023a ತಾನ್ನ ಶಕ್ನೋಷಿ ಚೇತ್ಸಾಧೂನ್ ಪರಿತ್ರಾತುಮಹಿಂಸಯಾ|

12259023c ಕಸ್ಯ ಚಿದ್ಭೂತಭವ್ಯಸ್ಯ ಲಾಭೇನಾಂತಂ ತಥಾ ಕುರು||

ಸತ್ಯವಾನನು ಹೇಳಿದನು: “ದಸ್ಯುಗಳನ್ನು ಸಂಹರಿಸದೇ ಅಹಿಂಸಾಪೂರ್ವಕವಾಗಿ ಸತ್ಪುರುಷರನ್ನು ರಕ್ಷಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಲೋಕಕಲ್ಯಾಣಕ್ಕಾಗಿ ಅವರನ್ನು ಸಂಹರಿಸು.”

12259024 ದ್ಯುಮತ್ಸೇನ ಉವಾಚ|

12259024a ರಾಜಾನೋ ಲೋಕಯಾತ್ರಾರ್ಥಂ ತಪ್ಯಂತೇ ಪರಮಂ ತಪಃ|

12259024c ಅಪತ್ರಪಂತಿ ತಾದೃಗ್ಭ್ಯಸ್ತಥಾವೃತ್ತಾ ಭವಂತಿ ಚ||

ದ್ಯುಮತ್ಸೇನನು ಹೇಳಿದನು: “ಲೋಕವು ಸುಖಕರವಾಗಿ ನಡೆಯಲೆಂದು ರಾಜರು ಪರಮ ತಪಸ್ಸನ್ನು ತಪಿಸುತ್ತಾರೆ. ತಮ್ಮ ಅಧಿಕಾರದಲ್ಲಿ ದಸ್ಯುಗಳಿಂದ ತೊಂದರೆಯಾದಲ್ಲಿ ಅವರಿಗೆ ನಾಚಿಕೆಯಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ.

12259025a ವಿತ್ರಾಸ್ಯಮಾನಾಃ ಸುಕೃತೋ ನ ಕಾಮಾದ್ ಘ್ನಂತಿ ದುಷ್ಕೃತೀನ್|

12259025c ಸುಕೃತೇನೈವ ರಾಜಾನೋ ಭೂಯಿಷ್ಠಂ ಶಾಸತೇ ಪ್ರಜಾಃ||

ಶಿಕ್ಷೆಯಾಗುವುದೆಂಬ ಭಯದಿಂದಲೇ ಪ್ರಜೆಗಳು ಸುಕೃತರಾಗಿರುತ್ತಾರೆ. ನಯವು ದುಷ್ಕೃತಿಗಳನ್ನು ಕೊಲ್ಲುವುದಿಲ್ಲ. ಪ್ರಜೆಗಳು ಸುಕೃತರಾಗಿದ್ದರೇ ರಾಜರು ಅಭಿವೃದ್ಧಿಯತ್ತ ಶಾಸನ ಮಾಡಬಹುದು.

12259026a ಶ್ರೇಯಸಃ ಶ್ರೇಯಸೀಮೇವಂ ವೃತ್ತಿಂ ಲೋಕೋಽನುವರ್ತತೇ|

12259026c ಸದೈವ ಹಿ ಗುರೋರ್ವೃತ್ತಮನುವರ್ತಂತಿ ಮಾನವಾಃ||

ಇದೇ ಶ್ರೇಯಸ್ಕರವಾದುದೆಂದು ಶ್ರೇಯಸ್ಕರ ಆಚಾರ-ವ್ಯವಹಾರಗಳನ್ನೇ ಜನರು ಅನುಸರಿಸುತ್ತಾರೆ. ಮನುಷ್ಯರು ಸದಾ ಶ್ರೇಷ್ಠರ ಆಚಾರ-ವಿಚಾರಗಳನ್ನೇ ಅನುಕರಿಸುತ್ತದೆ.

12259027a ಆತ್ಮಾನಮಸಮಾಧಾಯ ಸಮಾಧಿತ್ಸತಿ ಯಃ ಪರಾನ್|

12259027c ವಿಷಯೇಷ್ವಿಂದ್ರಿಯವಶಂ ಮಾನವಾಃ ಪ್ರಹಸಂತಿ ತಮ್||

ತನ್ನನ್ನು ತಾನು ಹತೋಟಿಯಲ್ಲಿಟ್ಟುಕೊಳ್ಳದೇ ಯಾರು ಇತರರನ್ನು ಆಳುತ್ತಾರೋ ಮತ್ತು ಇಂದ್ರಿಯ ವಿಷಯಗಳ ವಶರಾಗಿ ವರ್ತಿಸುತ್ತಾರೋ ಅವರನ್ನು ನೋಡಿ ಜನರು ನಗುತ್ತಾರೆ.

12259028a ಯೋ ರಾಜ್ಞೋ ದಂಭಮೋಹೇನ ಕಿಂ ಚಿತ್ಕುರ್ಯಾದಸಾಂಪ್ರತಮ್|

12259028c ಸರ್ವೋಪಾಯೈರ್ನಿಯಮ್ಯಃ ಸ ತಥಾ ಪಾಪಾನ್ನಿವರ್ತತೇ||

ದಂಭದಿಂದಲೋ ಮೋಹದಿಂದಲೋ ರಾಜನ ಕುರಿತು ಅನುಚಿತವಾಗಿ ನಡೆದುಕೊಂಡವವನನ್ನು ಸರ್ವೋಪಾಯಗಳಿಂದ ನಿಯಂತ್ರಿಸಬೇಕು. ಅದರಿಂದಲೇ ಜನರು ಪಾಪಮಾಡುವುದರಿಂದ ಹಿಮ್ಮೆಟ್ಟುತ್ತಾರೆ.

12259029a ಆತ್ಮೈವಾದೌ ನಿಯಂತವ್ಯೋ ದುಷ್ಕೃತಂ ಸಂನಿಯಚ್ಚತಾ|

12259029c ದಂಡಯೇಚ್ಚ ಮಹಾದಂಡೈರಪಿ ಬಂಧೂನನಂತರಾನ್||

ದುಷ್ಕೃತಗಳನ್ನು ತಡೆಯಬೇಕೆಂದು ಬಯಸುವವನು ಮೊದಲು ತನ್ನನ್ನು ತಾನು ನಿಯಂತ್ರಿಸಿಕೊಂಡಿರಬೇಕು. ಅಪರಾಧ ಮಾಡಿದ ತನ್ನ ಬಂಧುಗಳನ್ನೂ, ಮಹಾದಂಡವನ್ನೇ ಇತ್ತು, ದಂಡಿಸಬೇಕು.

12259030a ಯತ್ರ ವೈ ಪಾಪಕೃತ್ ಕ್ಲೇಶ್ಯೋ ನ ಮಹದ್ದುಃಖಮರ್ಚತಿ|

12259030c ವರ್ಧಂತೇ ತತ್ರ ಪಾಪಾನಿ ಧರ್ಮೋ ಹ್ರಸತಿ ಚ ಧ್ರುವಮ್||

ಎಲ್ಲಿ ಪಾಪಕರ್ಮಿಗಳು ಮಹಾದುಃಖವನ್ನು ಅನುಭವಿಸುವುದಿಲ್ಲವೋ ಅಲ್ಲಿ ಪಾಪಕರ್ಮಗಳು ಹೆಚ್ಚುತ್ತಲೇ ಇರುತ್ತವೆ ಮತ್ತು ಧರ್ಮವೂ ನಿಶ್ಚಯವಾಗಿ ಕ್ಷೀಣಿಸುತ್ತಿರುತ್ತದೆ.

12259030e ಇತಿ ಕಾರುಣ್ಯಶೀಲಸ್ತು ವಿದ್ವಾನ್ವೈ ಬ್ರಾಹ್ಮಣೋಽನ್ವಶಾತ್||

12259031a ಇತಿ ಚೈವಾನುಶಿಷ್ಟೋಽಸ್ಮಿ ಪೂರ್ವೈಸ್ತಾತ ಪಿತಾಮಹೈಃ|

12259031c ಆಶ್ವಾಸಯದ್ಭಿಃ ಸುಭೃಶಮನುಕ್ರೋಶಾತ್ತಥೈವ ಚ||

ಹೀಗೆ ಕಾರುಣ್ಯಶೀಲ ವಿದ್ವಾಂಸ ಬ್ರಾಹ್ಮಣನೊಬ್ಬನು ನನಗೆ ಹೇಳಿದ್ದನು. ಮಗೂ! ಹಿಂದಿನಿಂದಲೂ ಪಿತಮಾಹರು ಅನುಸರಿಸಿಕೊಂಡು ಬಂದಿರುವಂತೆಯೇ ನಡೆದುಕೊಳ್ಳುತ್ತೇನೆ.

12259032a ಏತತ್ ಪ್ರಥಮಕಲ್ಪೇನ ರಾಜಾ ಕೃತಯುಗೇಽಭಜತ್|

12259032c ಪಾದೋನೇನಾಪಿ ಧರ್ಮೇಣ ಗಚ್ಚೇತ್ತ್ರೇತಾಯುಗೇ ತಥಾ|

12259032e ದ್ವಾಪರೇ ತು ದ್ವಿಪಾದೇನ ಪಾದೇನ ತ್ವಪರೇ ಯುಗೇ||

ಕೃತಯುಗದಲ್ಲಿ ರಾಜನು ಅಹಿಂಸೆಯಿಂದಲೇ ಪ್ರಜೆಗಳನ್ನು ನಿಯಂತ್ರಿಸಬೇಕು. ತ್ರೇತಾಯುಗವು ಪ್ರಾರಂಭವಾಗುತ್ತಲೇ ಧರ್ಮದ ಒಂದು ಪಾದವು ಊನವಾಗುತ್ತದೆ. ದ್ವಾಪರದಲ್ಲಿ ಧರ್ಮದ ನಾಲ್ಕು ಪಾದಗಳಲ್ಲಿ ಇರಡು ಪಾದಗಳು ಮಾತ್ರವೇ ಉಳಿದಿರುತ್ತದೆ. ಕಲಿಯುಗದಲ್ಲಿ ಒಂದು ಪಾದವು ಮಾತ್ರವೇ ಉಳಿದಿರುತ್ತದೆ.

12259033a ತಥಾ ಕಲಿಯುಗೇ ಪ್ರಾಪ್ತೇ ರಾಜ್ಞಾಂ ದುಶ್ಚರಿತೇನ ಹ|

12259033c ಭವೇತ್ಕಾಲವಿಶೇಷೇಣ ಕಲಾ ಧರ್ಮಸ್ಯ ಷೋಡಶೀ||

ಕಲಿಯುಗವು ಮುಂದುವರೆಯುತ್ತಿದ್ದಂತೆ ರಾಜರ ದುಷ್ಕರ್ಮಗಳಿಮ್ದಾಗಿ ಮತ್ತು ಕಾಲವಿಶೇಷದಿಂದ ಧರ್ಮದ ಹದಿನಾರನೆಯ ಒಂದು ಭಾಗವು ಮಾತ್ರ ಉಳಿದಿರುತ್ತದೆ.

12259034a ಅಥ ಪ್ರಥಮಕಲ್ಪೇನ ಸತ್ಯವನ್ಸಂಕರೋ ಭವೇತ್|

12259034c ಆಯುಃ ಶಕ್ತಿಂ ಚ ಕಾಲಂ ಚ ನಿರ್ದಿಶ್ಯ ತಪ ಆದಿಶೇತ್||

ಸತ್ಯವಾನ್! ಆಗ ಮೊದಲನೆಯ ಅಹಿಂಸಾತ್ಮಕ ಆಡಳಿತವನ್ನು ನಡೆಸಿದರೆ ವರ್ಣಸಾಂಕರ್ಯವುಂಟಾಗುತ್ತದೆ. ಅಪರಾಧಿಯ ವಯಸ್ಸು, ಶಕ್ತಿ ಮತ್ತು ಕಾಲಗಳನ್ನು ನೋಡಿಯೇ ಶಿಕ್ಷೆಯನ್ನು ವಿಧಿಸಬೇಕು.

12259035a ಸತ್ಯಾಯ ಹಿ ಯಥಾ ನೇಹ ಜಹ್ಯಾದ್ಧರ್ಮಫಲಂ ಮಹತ್|

12259035c ಭೂತಾನಾಮನುಕಂಪಾರ್ಥಂ ಮನುಃ ಸ್ವಾಯಂಭುವೋಽಬ್ರವೀತ್||

ಇರುವವುಗಳ ಮೇಲಿನ ಅನುಕಂಪದಿಂದ ಸ್ವಾಯಂಭುವ ಮನುವು ಹೀಗೆ ಹೇಳಿದ್ದನು: “ಸತ್ಯಕ್ಕಾಗಿ ಮಹತ್ತರ ಅಹಿಂಸಾಧರ್ಮವನ್ನು ಬಿಡಬಾರದು.””

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ದ್ಯುಮತ್ಸೇನಸತ್ಯವತ್ಸಂವಾದೇ ಏಕೋನಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ದ್ಯುಮತ್ಸೇನಸತ್ಯವತ್ಸಂವಾದ ಎನ್ನುವ ಇನ್ನೂರಾಐವತ್ತೊಂಭತ್ತನೇ ಅಧ್ಯಾಯವು.

Painted Orange Dahlia Free Stock Photo - Public Domain Pictures

[1] ಪ್ರಘಾತಯೇತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಅರಣ್ಯ ಪರ್ವದ ಅಧ್ಯಾಯ 377-283ರಲ್ಲಿ ಬರುವ ಸಾವಿತ್ರಿಯ ಕಥೆಯಲ್ಲಿನ ಸತ್ಯವಾನನೇ ಇವನು ಮತ್ತು ಅವನ ತಂದೆ ದ್ಯುಮತ್ಸೇನ, ಶಾಲ್ವದೇಶದ ರಾಜ.

[3] ಧರ್ಮೋಽಧರ್ಮಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಸಾಧೋಶ್ಚಾಪಿ ಹ್ಯಸಾದುಭ್ಯಃ ಶೋಭನಾ ಜಾಯತೇ ಪ್ರಜಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಅಪರಾಧಿಯ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು.

[6] ದರೋಡೆಕೋರರು.

Comments are closed.