Shanti Parva: Chapter 260

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೬೦

ಗೋಕಪಿಲೀಯ

ಸ್ಯೂಮರಶ್ಮಿ ಮತ್ತು ಕಪಿಲರ ಸಂವಾದ: ಸ್ಯೂಮರಶ್ಮಿಯು ಯಜ್ಞದ ಅವಶ್ಯಕತೆಯನ್ನು ನಿರೂಪಿಸಿದುದು (1-39).

12260001 ಯುಧಿಷ್ಠಿರ ಉವಾಚ|

12260001a ಅವಿರೋಧೇನ ಭೂತಾನಾಂ ತ್ಯಾಗಃ[1] ಷಾಡ್ಗುಣ್ಯಕಾರಕಃ|

12260001c ಯಃ ಸ್ಯಾದುಭಯಭಾಗ್ಧರ್ಮಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪ್ರಾಣಿಗಳಿಗೆ ಅಹಿತವಾಗದಂತೆ ಅರು ಗುಣಗಳನ್ನು[2] ಒದಗಿಸಿಕೊಡುವ ತ್ಯಾಗ ಮತ್ತು ಮೋಕ್ಷ ಈ ಎರಡಕ್ಕೂ ಸಾಧನಭೂತವಾದ ಧರ್ಮವು ಯಾವುದು ಎನ್ನುವುದನ್ನು ನನಗೆ ಹೇಳು.

12260002a ಗಾರ್ಹಸ್ಥ್ಯಸ್ಯ ಚ ಧರ್ಮಸ್ಯ ತ್ಯಾಗಧರ್ಮಸ್ಯ[3] ಚೋಭಯೋಃ|

12260002c ಅದೂರಸಂಪ್ರಸ್ಥಿತಯೋಃ ಕಿಂ ಸ್ವಿಚ್ಚ್ರೇಯಃ ಪಿತಾಮಹ||

ಪಿತಾಮಹ! ಹೆಚ್ಚು ಅಂತರವಿಲ್ಲದಿರುವ ಗಾರ್ಹಸ್ಥ್ಯ ಧರ್ಮ ಮತ್ತು ತ್ಯಾಗಧರ್ಮ ಇವೆರಡರಲ್ಲಿ ಯಾವುದು ಶ್ರೇಯಸ್ಕರವಾದುದು?”

12260003 ಭೀಷ್ಮ ಉವಾಚ|

12260003a ಉಭೌ ಧರ್ಮೌ ಮಹಾಭಾಗಾವುಭೌ ಪರಮದುಶ್ಚರೌ|

12260003c ಉಭೌ ಮಹಾಫಲೌ ತಾತ ಸದ್ಭಿರಾಚರಿತಾವುಭೌ||

ಭೀಷ್ಮನು ಹೇಳಿದನು: “ಈ ಎರಡೂ ಧರ್ಮಗಳೂ ಮಹಾ ಸೌಭಾಗ್ಯವನ್ನುಂಟುಮಾಡುವವು. ಆಚರಿಸಲು ಎರಡೂ ಪರಮ ಕಷ್ಟಕರವಾದವುಗಳು. ಅಯ್ಯಾ! ಸತ್ಪುರುಷರು ಆಚರಿಸುವ ಇವೆರಡೂ ಮಹಾಫಲಗಳನ್ನು ನೀಡುತ್ತವೆ.

12260004a ಅತ್ರ ತೇ ವರ್ತಯಿಷ್ಯಾಮಿ ಪ್ರಾಮಾಣ್ಯಮುಭಯೋಸ್ತಯೋಃ|

12260004c ಶೃಣುಷ್ವೈಕಮನಾಃ ಪಾರ್ಥ ಚಿನ್ನಧರ್ಮಾರ್ಥಸಂಶಯಮ್||

ಈಗ ನಾನು ನಿನಗೆ ಇವೆರಡರ ಪ್ರಮಾಣಗಳನ್ನು ವರ್ಣಿಸುತ್ತೇನೆ. ಪಾರ್ಥ! ಧರ್ಮಾರ್ಥಸಂಶಯಗಳನ್ನು ಹೋಗಲಾಡಿಸುವ ಇದನ್ನು ಏಕಾಗ್ರಚಿತ್ತನಾಗಿ ಕೇಳು.

12260005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12260005c ಕಪಿಲಸ್ಯ ಗೋಶ್ಚ ಸಂವಾದಂ ತನ್ನಿಬೋಧ ಯುಧಿಷ್ಠಿರ||

ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕಪಿಲ ಮತ್ತು ಗೋವಿನ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.

12260006a ಆಮ್ನಾಯಮನುಪಶ್ಯನ್ ಹಿ ಪುರಾಣಂ ಶಾಶ್ವತಂ ಧ್ರುವಮ್|

12260006c ನಹುಷಃ ಪೂರ್ವಮಾಲೇಭೇ ತ್ವಷ್ಟುರ್ಗಾಮಿತಿ ನಃ ಶ್ರುತಮ್||

ಪೂರ್ವಕಾಲದಲ್ಲಿ ವೇದಾನುಶಾಸನವು ಪುರಾಣ, ಶಾಶ್ವತ ಮತ್ತು ನಿತ್ಯವೆಂದು ಮನಗಂಡು ನಹುಷನು ತ್ವಷ್ಟನಿಗಾಗಿ ಗವಾಲಂಭನ ಮಾಡಲು ಉದ್ಯುಕ್ತನಾದನು ಎಂದು ನಾವು ಕೇಳಿದ್ದೇವೆ.

12260007a ತಾಂ ನಿಯುಕ್ತಾಮದೀನಾತ್ಮಾ ಸತ್ತ್ವಸ್ಥಃ ಸಮಯೇ ರತಃ|

12260007c ಜ್ಞಾನವಾನ್ನಿಯತಾಹಾರೋ ದದರ್ಶ ಕಪಿಲಸ್ತದಾ||

ಅದೇ ಸಮಯದಲ್ಲಿ ಸತ್ತ್ವಗುಣಸಂಪನ್ನ, ಉದಾರ ಸ್ವಭಾವದ, ಸಂಯಮರತ, ನಿಯತಾಹಾರೀ ಮತ್ತು ಜ್ಞಾನವಾನ್ ಕಪಿಲನು ಕೊಲ್ಲಲು ನಿಯುಕ್ತವಾಗಿದ್ದ ಆ ಗೋವನ್ನು ನೋಡಿದನು.

12260008a ಸ ಬುದ್ಧಿಮುತ್ತಮಾಂ ಪ್ರಾಪ್ತೋ ನೈಷ್ಠಿಕೀಮಕುತೋಭಯಾಮ್|

12260008c ಸ್ಮರಾಮಿ ಶಿಥಿಲಂ ಸತ್ಯ[4] ವೇದಾ ಇತ್ಯಬ್ರವೀತ್ಸಕೃತ್||

ಉತ್ತಮ, ಭಯರಹಿತ, ಸುಸ್ಥಿರ, ಸತ್ಯ ಮತ್ತು ಸದ್ಭಾವಯುಕ್ತ ಬುದ್ಧಿಯ ಅವನು ವಧೆಗೆ ನಿಯುಕ್ತವಾಗಿದ್ದ ಆ ಗೋವನ್ನು ನೋಡಿ “ಹಾ ವೇದ!” ಎಂದು ಹೇಳಿ ಆಕ್ಷೇಪಿಸಿದನು.

12260009a ತಾಂ ಗಾಮೃಷಿಃ ಸ್ಯೂಮರಶ್ಮಿಃ ಪ್ರವಿಶ್ಯ ಯತಿಮಬ್ರವೀತ್|

12260009c ಹಂಹೋ ವೇದಾ ಯದಿ ಮತಾ ಧರ್ಮಾಃ ಕೇನಾಪರೇ ಮತಾಃ||

ಆಗ ಸ್ಯೂಮರಶ್ಮಿ ಎಂಬ ಯತಿಯು ಆ ಗೋವನ್ನು ಪ್ರವೇಶಿಸಿ ಹೇಳಿದನು: “ನಿನಗೆ ವೇದಗಳ ಪ್ರಾಮಾಣ್ಯದಲ್ಲಿಯೇ ಸಂದೇಹವಿರುವುದಾದರೆ ಇತರ ಧರ್ಮಶಾಸ್ತ್ರಗಳನ್ನು ಯಾವುದರ ಆಧಾರದ ಮೇಲೆ ಪ್ರಮಾಣೀಕರಿಸಲು ಸಾಧ್ಯವಾಗುತ್ತದೆ?

12260010a ತಪಸ್ವಿನೋ ಧೃತಿಮತಃ ಶ್ರುತಿವಿಜ್ಞಾನಚಕ್ಷುಷಃ|

12260010c ಸರ್ವಮಾರ್ಷಂ ಹಿ ಮನ್ಯಂತೇ ವ್ಯಾಹೃತಂ ವಿದಿತಾತ್ಮನಃ||

ಶೃತಿವಿಜ್ಞಾನವನ್ನೇ ಕಣ್ಣುಗಳಾಗುಳ್ಳ ಧೈರ್ಯಶಾಲೀ ತಪಸ್ವಿಗಳು ವೇದಗಳನ್ನು ನಿತ್ಯಜ್ಞಾನಸಂಪನ್ನನಾದ ಪರಮಾತ್ಮನ ನಿಃಶ್ವಾಸರೂಪದ ವಾಣಿಯೆಂದು ಮನ್ನಿಸುತ್ತಾರೆ.

12260011a ತಸ್ಯೈವಂ ಗತತೃಷ್ಣಸ್ಯ ವಿಜ್ವರಸ್ಯ ನಿರಾಶಿಷಃ|

12260011c ಕಾ ವಿವಕ್ಷಾಸ್ತಿ ವೇದೇಷು ನಿರಾರಂಭಸ್ಯ ಸರ್ವಶಃ||

ತೃಷ್ಣಾರಹಿತನಾದ, ಉದ್ವೇಗಶೂನ್ಯನಾದ, ನಿಷ್ಕಾಮನಾದ ಮತ್ತು ಆರಂಭರಹಿತನಾದ ಪರಮೇಶ್ವರನ ನಿಃಶ್ವಾಸದಿಂದ ಹೊರಟಿರುವ ವೇದಗಳಲ್ಲಿ ವಿಪರೀತವಾದ ಯಾವ ವಾಕ್ಯಗಳಿವೆ?”

12260012 ಕಪಿಲ ಉವಾಚ|

12260012a ನಾಹಂ ವೇದಾನ್ವಿನಿಂದಾಮಿ ನ ವಿವಕ್ಷಾಮಿ ಕರ್ಹಿ ಚಿತ್|

12260012c ಪೃಥಗಾಶ್ರಮಿಣಾಂ ಕರ್ಮಾಣ್ಯೇಕಾರ್ಥಾನೀತಿ ನಃ ಶ್ರುತಮ್||

ಕಪಿಲನು ಹೇಳಿದನು: “ನಾನು ವೇದಗಳನ್ನು ನಿಂದಿಸುತ್ತಿಲ್ಲ. ವೇದವಿರುದ್ಧ ಮಾತುಗಳನ್ನೂ ಎಂದೂ ಆಡುವುದಿಲ್ಲ. ಪ್ರತ್ಯೇಕ ಆಶ್ರಮಗಳಿಗಿರುವ ಕರ್ಮಗಳ ಗುರಿಯೂ ಒಂದೇ ಎನ್ನುವುದನ್ನು ನಾವು ಕೇಳಿದ್ದೇವೆ.

12260013a ಗಚ್ಚತ್ಯೇವ ಪರಿತ್ಯಾಗೀ ವಾನಪ್ರಸ್ಥಶ್ಚ ಗಚ್ಚತಿ|

12260013c ಗೃಹಸ್ಥೋ ಬ್ರಹ್ಮಚಾರೀ ಚ ಉಭೌ ತಾವಪಿ ಗಚ್ಚತಃ||

ಸರ್ವಪರಿತ್ಯಾಗಿಯಾದ ಸಂನ್ಯಾಸಿಯೂ ಅಲ್ಲಿಗೇ ಹೋಗುತ್ತಾನೆ. ವಾನಪ್ರಸ್ಥಿಯೂ ಅಲ್ಲಿಗೇ ಹೋಗುತ್ತಾನೆ. ಗೃಹಸ್ಥ-ಬ್ರಹ್ಮಚಾರಿಗಳಿಬ್ಬರೂ ಅಲ್ಲಿಗೇ ಹೋಗುತ್ತಾರೆ.

12260014a ದೇವಯಾನಾ ಹಿ ಪಂಥಾನಶ್ಚತ್ವಾರಃ ಶಾಶ್ವತಾ ಮತಾಃ|

12260014c ತೇಷಾಂ ಜ್ಯಾಯಃಕನೀಯಸ್ತ್ವಂ ಫಲೇಷೂಕ್ತಂ ಬಲಾಬಲಮ್||

ಈ ನಾಲ್ಕನ್ನೂ ದೇವಯಾನದ ನಾಲ್ಕು ಶಾಶ್ವತ ಮಾರ್ಗಗಳೆಂಬ ಮತವಿದೆ. ಅವುಗಳಲ್ಲಿ ಶ್ರೇಷ್ಠತೆ-ಕನಿಷ್ಠತೆಗಳು ಮತ್ತು ಬಲಾಬಲಗಳು ಅವುಗಳ ಫಲವನ್ನು ಆಧರಿಸಿವೆ.[5]

12260015a ಏವಂ ವಿದಿತ್ವಾ ಸರ್ವಾರ್ಥಾನಾರಭೇದಿತಿ ವೈದಿಕಮ್|

12260015c ನಾರಭೇದಿತಿ ಚಾನ್ಯತ್ರ ನೈಷ್ಠಿಕೀ ಶ್ರೂಯತೇ ಶ್ರುತಿಃ||

ಹೀಗೆ ಎಲ್ಲವುಗಳ ಗುರಿಯನ್ನು ಚೆನ್ನಾಗಿ ತಿಳಿದುಕೊಂಡು ಕರ್ಮಗಳನ್ನು ಆರಂಭಿಸಬೇಕು ಎಂಬ ವೈದಿಕ ಮತವಿದೆ[6]. ಮತ್ತೊಂದು ಕಡೆಯಲ್ಲಿ ಸಿದ್ಧಾಂತಭೂತ ಶ್ರುತಿಯು ಕರ್ಮಗಳನ್ನು ಆರಂಭಿಸಲೇ ಕೂಡದು ಎಂದೂ ಹೇಳುತ್ತದೆ[7].

12260016a ಅನಾರಂಭೇ ಹ್ಯದೋಷಃ ಸ್ಯಾದಾರಂಭೇಽದೋಷ ಉತ್ತಮಃ[8]|

12260016c ಏವಂ ಸ್ಥಿತಸ್ಯ ಶಾಸ್ತ್ರಸ್ಯ ದುರ್ವಿಜ್ಞೇಯಂ ಬಲಾಬಲಮ್||

ಕರ್ಮಮಾಡುವುದರಲ್ಲಿ ದೋಷವಿದೆ. ಕರ್ಮಮಾಡದೇ ಇರುವುದರಲ್ಲಿ ಇನ್ನೂ ಹೆಚ್ಚಿನ ದೋಷವಿದೆ[9]. ಶಾಸ್ತ್ರಗಳ ನಿಲುವುಗಳು ಹೀಗಿರುವಾಗ ಬಲಾಬಲಗಳನ್ನು ತಿಳಿದುಕೊಳ್ಳುವುದೇ ಕಷ್ಟವಾಗುತ್ತದೆ. 

12260017a ಯದ್ಯತ್ರ ಕಿಂ ಚಿತ್ ಪ್ರತ್ಯಕ್ಷಮಹಿಂಸಾಯಾಃ ಪರಂ ಮತಮ್|

12260017c ಋತೇ ತ್ವಾಗಮಶಾಸ್ತ್ರೇಭ್ಯೋ ಬ್ರೂಹಿ ತದ್ಯದಿ ಪಶ್ಯಸಿ||

ಅಹಿಂಸೆಯೇ ಪರಮ ಧರ್ಮ. ಅದಕ್ಕಿಂತಲೂ ಪ್ರತ್ಯಕ್ಷ ಶೃತಿವಾಕ್ಯವು ಬೇರೆ ಯಾವುದಾದರೂ ಇದ್ದರೆ ಅದನ್ನು ಹೇಳು. ಆ ವಾಕ್ಯಗಳು ಅಶಾಸ್ತ್ರೀಯವೆಂದು ತ್ಯಜಿಸಬೇಕಾಗಿಲ್ಲ.”

12260018 ಸ್ಯೂಮರಶ್ಮಿರುವಾಚ|

12260018a ಸ್ವರ್ಗಕಾಮೋ ಯಜೇತೇತಿ ಸತತಂ ಶ್ರೂಯತೇ ಶ್ರುತಿಃ|

12260018c ಫಲಂ ಪ್ರಕಲ್ಪ್ಯ ಪೂರ್ವಂ ಹಿ ತತೋ ಯಜ್ಞಃ ಪ್ರತಾಯತೇ||

ಸ್ಯೂಮರಶ್ಮಿಯು ಹೇಳಿದನು: “ಶ್ರುತಿಯು ಸತತವೂ ಸ್ವರ್ಗವನ್ನು ಬಯಸಿ ಯಜ್ಞಮಾಡು ಎಂದು ಹೇಳುತ್ತದೆ. ಮೊದಲು ಫಲವನ್ನು ಕಲ್ಪಿಸಿಕೊಂಡು ನಂತರ ಯಜ್ಞವನ್ನು ಪ್ರಾರಂಭಿಸುತ್ತಾರೆ.

12260019a ಅಜಶ್ಚಾಶ್ವಶ್ಚ ಮೇಷಶ್ಚ ಗೌಶ್ಚ ಪಕ್ಷಿಗಣಾಶ್ಚ ಯೇ|

12260019c ಗ್ರಾಮ್ಯಾರಣ್ಯಾ ಓಷಧಯಃ ಪ್ರಾಣಸ್ಯಾನ್ನಮಿತಿ ಶ್ರುತಿಃ||

ಕುರಿ, ಕುದುರೆ, ಆಡು, ಹಸು, ಪಕ್ಷಿಗಳು, ಗ್ರಾಮಗಳಲ್ಲಿರುವ ಮತ್ತು ಅರಣ್ಯಗಳಲ್ಲಿರುವ ಓಷಧಿಗಳು – ಇವು ಪ್ರಾಣಕ್ಕೆ ಅನ್ನಗಳೆಂದು ಶ್ರುತಿಯಿದೆ.

12260020a ತಥೈವಾನ್ನಂ ಹ್ಯಹರಹಃ ಸಾಯಂ ಪ್ರಾತರ್ನಿರುಪ್ಯತೇ|

12260020c ಪಶವಶ್ಚಾಥ ಧಾನ್ಯಂ ಚ ಯಜ್ಞಸ್ಯಾಂಗಮಿತಿ ಶ್ರುತಿಃ||

ಹಾಗೆಯೇ ಪ್ರತಿನಿತ್ಯವೂ ಸಾಯಂಕಾಲ-ಪ್ರಾತಃಕಾಲಗಳಲ್ಲಿ ಆಹಾರವನ್ನು ಸೇವಿಸಬೇಕೆಂದೂ, ಪಶುಗಳು ಮತ್ತು ಧಾನ್ಯಗಳು ಯಜ್ಞದ ಅಂಗಗಳೆಂದೂ ಶ್ರುತಿಯಿದೆ.

12260021a ಏತಾನಿ ಸಹ ಯಜ್ಞೇನ ಪ್ರಜಾಪತಿರಕಲ್ಪಯತ್|

12260021c ತೇನ ಪ್ರಜಾಪತಿರ್ದೇವಾನ್ಯಜ್ಞೇನಾಯಜತ ಪ್ರಭುಃ||

ಪ್ರಜಾಪತಿಯು ಯಜ್ಞದೊಂದಿಗೆ ಯಜ್ಞಾಂಗಗಳನ್ನೂ ಕಲ್ಪಿಸಿದನು. ಪ್ರಭು ಪ್ರಜಾಪತಿಯು ಇವುಗಳಿಂದಲೇ ದೇವತೆಗಳಿಗಾಗಿ ಯಜ್ಞವನ್ನು ಮಾಡಿದನು.

12260022a ತೇ ಸ್ಮಾನ್ಯೋನ್ಯಂಚರಾಃ ಸರ್ವೇ ಪ್ರಾಣಿನಃ ಸಪ್ತ ಸಪ್ತ ಚ|

12260022c ಯಜ್ಞೇಷೂಪಾಕೃತಂ ವಿಶ್ವಂ ಪ್ರಾಹುರುತ್ತಮಸಂಜ್ಞಿತಮ್||

ಏಳು ಏಳು ಪ್ರಕಾರದ ಗ್ರಾಮ್ಯ ಮತ್ತು ಅರಣ್ಯ ಪ್ರಾಣಿಗಳಲ್ಲಿ[10] ಒಂದು ಮತ್ತೊಂದಕ್ಕಿಂತ ಶ್ರೇಷ್ಠವಾದುದು. ಯಜ್ಞಗಳಲ್ಲಿ ಯೂಪಕ್ಕೇರಿಸಿದ ಪ್ರಾಣಿಗಳನ್ನು “ಉತ್ತಮ” ಎಂಬ ಸಂಜ್ಞೆಯಿಂದ ಕರೆಯುತ್ತಾರೆ.

12260023a ಏತಚ್ಚೈವಾಭ್ಯನುಜ್ಞಾತಂ ಪೂರ್ವೈಃ ಪೂರ್ವತರೈಸ್ತಥಾ|

12260023c ಕೋ ಜಾತು ನ ವಿಚಿನ್ವೀತ ವಿದ್ವಾನ್ ಸ್ವಾಂ ಶಕ್ತಿಮಾತ್ಮನಃ||

ಹಿಂದಿನವರು ಮತ್ತು ಅವರಿಗಿಂತಲೂ ಹಿಂದಿನವರು ಇವುಗಳನ್ನು ಯಜ್ಞದ ಅಂಗಗಳೆಂದು ತಿಳಿದಿದ್ದರು. ಆದುದರಿಂದ ಯಾವ ವಿದ್ವಾಂಸನು ತಾನೇ ತನ್ನ ಶಕ್ತಿಗನುಸಾರವಾಗಿ ಯಜ್ಞವನ್ನು ಮಾಡದೇ ಇದ್ದಾನು?

12260024a ಪಶವಶ್ಚ ಮನುಷ್ಯಾಶ್ಚ ದ್ರುಮಾಶ್ಚೌಷಧಿಭಿಃ ಸಹ|

12260024c ಸ್ವರ್ಗಮೇವಾಭಿಕಾಂಕ್ಷತೇ ನ ಚ ಸ್ವರ್ಗಸ್ತ್ವ್ ಋತೇ ಮಖಮ್||

ಪಶುಗಳು, ಮನುಷ್ಯರು, ವೃಕ್ಷಗಳು ಮತ್ತು ಓಷಧಿಗಳು ಎಲ್ಲವೂ ಸ್ವರ್ಗವನ್ನೇ ಬಯಸುತ್ತವೆ. ಆದರೆ ಯಜ್ಞವಿಲ್ಲದೇ ಸ್ವರ್ಗವಿಲ್ಲ.[11]

12260025a ಓಷಧ್ಯಃ ಪಶವೋ ವೃಕ್ಷಾ ವೀರುದಾಜ್ಯಂ ಪಯೋ ದಧಿ|

12260025c ಹವಿರ್ಭೂಮಿರ್ದಿಶಃ ಶ್ರದ್ಧಾ ಕಾಲಶ್ಚೈತಾನಿ ದ್ವಾದಶ||

ಓಷಧಿಗಳು, ಪಶುಗಳು, ವೃಕ್ಷಗಳು, ಬಳ್ಳಿಗಳು, ತುಪ್ಪ, ಹಾಲು, ಮೊಸರು, ಹವಿಸ್ಸು, ಭೂಮಿ, ದಿಕ್ಕುಗಳು, ಶ್ರದ್ಧೆ ಮಾತು ಕಾಲ – ಈ ಹನ್ನೆರಡೂ ಯಜ್ಞದ ಅಂಗಗಳು.

12260026a ಋಚೋ ಯಜೂಂಷಿ ಸಾಮಾನಿ ಯಜಮಾನಶ್ಚ ಷೋಡಶಃ|

12260026c ಅಗ್ನಿರ್ಜ್ಞೇಯೋ ಗೃಹಪತಿಃ ಸ ಸಪ್ತದಶ ಉಚ್ಯತೇ|

12260026e ಅಂಗಾನ್ಯೇತಾನಿ ಯಜ್ಞಸ್ಯ ಯಜ್ಞೋ ಮೂಲಮಿತಿ ಶ್ರುತಿಃ||

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಯಜಮಾನ ಇವು ಸೇರಿ ಯಜ್ಞಾಂಗಗಳು ಹದಿನಾರಾಗುತ್ತವೆ. ಗಾರ್ಹಪತ್ಯಾಗ್ನಿಯು ಹದಿನೇಳನೇ ಯಜ್ಞಾಂಗ ಎಂದು ಹೇಳಿದ್ದಾರೆ. ಇವು ಯಜ್ಞಗಳ ಅಂಗಗಳು ಮತ್ತು ಯಜ್ಞವೇ ವಿಶ್ವದ ಮೂಲ ಎಂದು ಶ್ರುತಿಯಿದೆ[12].

12260027a ಆಜ್ಯೇನ ಪಯಸಾ ದಧ್ನಾ ಶಕೃತಾಮಿಕ್ಷಯಾ ತ್ವಚಾ|

12260027c ವಾಲೈಃ ಶೃಂಗೇಣ ಪಾದೇನ ಸಂಭವತ್ಯೇವ ಗೌರ್ಮಖಮ್|

12260027e ಏವಂ ಪ್ರತ್ಯೇಕಶಃ ಸರ್ವಂ ಯದ್ಯದಸ್ಯ ವಿಧೀಯತೇ||

ತುಪ್ಪ, ಹಾಲು, ಮೊಸರು, ಸಗಣಿ, ಒಡೆದ ಹಾಲಿನ ಗಡ್ಡೆ, ಚರ್ಮ, ಬಾಲದ ಕೂದಲುಗಳು, ಕೊಂಬು ಮತ್ತು ಗೊರಸು – ಇವುಗಳಿಂದ ಗೋಯಜ್ಞವನ್ನು ಮಾಡುತ್ತಾರೆ. ಹೀಗೆ ಪ್ರತ್ಯೇಕ ಯಜ್ಞಕ್ಕೆ ಪ್ರತ್ಯೇಕ ವಸ್ತುಗಳನ್ನು ಸಂಗ್ರಹಿಸಬೇಕಾಗುತ್ತದೆ[13].

12260028a ಯಜ್ಞಂ ವಹಂತಿ ಸಂಭೂಯ ಸಹರ್ತ್ವಿಗ್ಭಿಃ ಸದಕ್ಷಿಣೈಃ|

12260028c ಸಂಹತ್ಯೈತಾನಿ ಸರ್ವಾಣಿ ಯಜ್ಞಂ ನಿರ್ವರ್ತಯಂತ್ಯುತ||

ದಕ್ಷಿಣೆಗಳೊಂದಿಗೆ ಋತ್ವಿಜರು ಯಜ್ಞವನ್ನು ನಿರ್ವಹಿಸುತ್ತಾರೆ. ಈ ಎಲ್ಲ ವಸ್ತುಗಳನ್ನೂ ಸಂಗ್ರಹಿಸಿ ಯಜ್ಞವು ನಡೆಯುತ್ತದೆ.

12260029a ಯಜ್ಞಾರ್ಥಾನಿ ಹಿ ಸೃಷ್ಟಾನಿ ಯಥಾ ವೈ ಶ್ರೂಯತೇ ಶ್ರುತಿಃ|

12260029c ಏವಂ ಪೂರ್ವೇ ಪೂರ್ವತರಾಃ ಪ್ರವೃತ್ತಾಶ್ಚೈವ ಮಾನವಾಃ||

ಯಜ್ಞಕ್ಕಾಗಿಯೇ ಎಲ್ಲವೂ ಸೃಷ್ಟಿಸಲ್ಪಟ್ಟಿವೆ ಎಂದು ಶ್ರುತಿಯೇ ಹೇಳುತ್ತದೆ. ಹೀಗೆ ಹಿಂದಿನ ಮತ್ತು ಅದಕ್ಕೂ ಹಿಂದಿನ ಮಾನವರು ಯಜ್ಞದಲ್ಲಿಯೇ ಪ್ರವೃತ್ತರಾಗಿದ್ದರು.

12260030a ನ ಹಿನಸ್ತಿ ಹ್ಯಾರಭತೇ ನಾಭಿದ್ರುಹ್ಯತಿ ಕಿಂ ಚನ|

12260030c ಯಜ್ಞೋ ಯಷ್ಟವ್ಯ ಇತ್ಯೇವ ಯೋ ಯಜತ್ಯಫಲೇಪ್ಸಯಾ||

ಆದರೆ ಯಜ್ಞಮಾಡುವುದು ತನ್ನ ಕರ್ತವ್ಯವೆಂದು ಯಾವ ಫಲವನ್ನೂ ಅಪೇಕ್ಷಿಸದೇ ಯಜ್ಞಮಾಡುವವನು ಹಿಂಸಿಸುವುದೂ ಇಲ್ಲ, ಯಾರಿಗೂ ದ್ರೋಹವನ್ನೆಸಗುವುದಿಲ್ಲ ಮತ್ತು ಅಹಂಕಾರ ಪೂರ್ವಕವಾಗಿ ಯಾವ ಕರ್ಮವನ್ನೂ ಆರಂಭಿಸುವುದಿಲ್ಲ.[14]

12260031a ಯಜ್ಞಾಂಗಾನ್ಯಪಿ ಚೈತಾನಿ ಯಥೋಕ್ತಾನಿ ನಸಂಶಯಃ|

12260031c ವಿಧಿನಾ ವಿಧಿಯುಕ್ತಾನಿ ತಾರಯಂತಿ ಪರಸ್ಪರಮ್||

ಈ ಯಜ್ಞಾಂಗಗಳು ಮತ್ತು ಯಜ್ಞ ಸಾಮಗ್ರಿಗಳು ವಿಧಿಪೂರ್ವಕವಾಗಿ ಯಜ್ಞದಲ್ಲಿ ವಿನಿಯೋಗಿಸಲ್ಪಟ್ಟಾಗ ಅವು ಪರಸ್ಪರ ಧಾರಣೆಮಾಡಿಕೊಂಡಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.

12260032a ಆಮ್ನಾಯಮಾರ್ಷಂ ಪಶ್ಯಾಮಿ ಯಸ್ಮಿನ್ವೇದಾಃ ಪ್ರತಿಷ್ಠಿತಾಃ|

12260032c ತಂ ವಿದ್ವಾಂಸೋಽನುಪಶ್ಯಂತಿ ಬ್ರಾಹ್ಮಣಸ್ಯಾನುದರ್ಶನಾತ್||

ವೇದಗಳು ಪ್ರತಿಷ್ಠಿತವಾಗಿರುವ ಋಷಿಪ್ರೋಕ್ತ ಧರ್ಮಶಾಸ್ತ್ರವನ್ನು ನಾನು ನೋಡಿದ್ದೇನೆ. ಬ್ರಾಹ್ಮಣರ ಕರ್ಮವನ್ನು ತೋರಿಸಿಕೊಡುವ ಅವುಗಳನ್ನು ವಿದ್ವಾಂಸರು ಪ್ರಮಾಣಗಳೆಂದು ನೋಡುತ್ತಾರೆ.

12260033a ಬ್ರಾಹ್ಮಣಪ್ರಭವೋ ಯಜ್ಞೋ ಬ್ರಾಹ್ಮಣಾರ್ಪಣ ಏವ ಚ|

12260033c ಅನು ಯಜ್ಞಂ ಜಗತ್ಸರ್ವಂ ಯಜ್ಞಶ್ಚಾನು ಜಗತ್ಸದಾ||

ಬ್ರಾಹ್ಮಣನಿಂದ ಯಜ್ಞವು ಉತ್ಪತ್ತಿಯಾಗುತ್ತದೆ[15] ಮತ್ತು ಬ್ರಾಹ್ಮಣನಿಗೇ ಇದು ಅರ್ಪಿತವಾಗುತ್ತದೆ. ಸರ್ವ ಜಗತ್ತೂ ಯಜ್ಞವನ್ನೇ ಅನುಸರಿಸುತ್ತದೆ. ಯಜ್ಞವು ಜಗತ್ತನ್ನು ಅನುಸರಿಸುತ್ತದೆ.

12260034a ಓಮಿತಿ ಬ್ರಹ್ಮಣೋ ಯೋನಿರ್ನಮಃ ಸ್ವಾಹಾ ಸ್ವಧಾ ವಷಟ್|

12260034c ಯಸ್ಯೈತಾನಿ ಪ್ರಯುಜ್ಯಂತೇ ಯಥಾಶಕ್ತಿ ಕೃತಾನ್ಯಪಿ||

ಬ್ರಹ್ಮನ ಯೋನಿಯಾದ ಓಂ, ನಮಃ, ಸ್ವಾಹಾ, ಸ್ವಧಾ ಮತ್ತು ವಷಟ್ – ಇವುಗಳನ್ನು ಯಥಾಶಕ್ತಿಯಾಗಿ ಹೇಳಲ್ಪಡುವ ಯಜ್ಞವು ಸಾಂಗೋಪಾಂಗವಾಗಿ ಆದಂತಾಗುತ್ತದೆ.

12260035a ನ ತಸ್ಯ ತ್ರಿಷು ಲೋಕೇಷು ಪರಲೋಕಭಯಂ ವಿದುಃ|

12260035c ಇತಿ ವೇದಾ ವದಂತೀಹ ಸಿದ್ಧಾಶ್ಚ ಪರಮರ್ಷಯಃ||

ಹಾಗೆ ಯಜ್ಞಮಾಡಿದವನಿಗೆ ಮೂರು ಲೋಕಗಳಲ್ಲಿಯೂ ಇತರರಿಂದ ಭಯವಿರುವುದಿಲ್ಲ. ಹೀಗೆಂದು ವೇದಗಳು ಹೇಳುತ್ತವೆ. ಸಿದ್ಧರೂ, ಪರಮ ಋಷಿಗಳೂ ಹೇಳುತ್ತಾರೆ.

12260036a ಋಚೋ ಯಜೂಂಷಿ ಸಾಮಾನಿ ಸ್ತೋಭಾಶ್ಚ ವಿಧಿಚೋದಿತಾಃ|

12260036c ಯಸ್ಮಿನ್ನೇತಾನಿ ಸರ್ವಾಣಿ ಬಹಿರೇವ ಸ ವೈ ದ್ವಿಜಃ||

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ವಿಧಿವಿಹಿತವಾದ ಸ್ತೋಭಗಳು[16] ಯಾರಲ್ಲಿ ಇರುವವೋ ಅವನೇ ನಿಜವಾದ ದ್ವಿಜನು.

12260037a ಅಗ್ನ್ಯಾಧೇಯೇ ಯದ್ಭವತಿ ಯಚ್ಚ ಸೋಮೇ ಸುತೇ ದ್ವಿಜ|

12260037c ಯಚ್ಚೇತರೈರ್ಮಹಾಯಜ್ಞೈರ್ವೇದ ತದ್ಭಗವಾನ್ ಸ್ವತಃ||

ದ್ವಿಜ! ಅಗ್ನ್ಯಾಧಾನ, ಸೋಮಯಾಗ ಮತ್ತು ಇತರ ಮಹಾಯಜ್ಞಗಳಿಂದ ಯಾವ ಫಲವು ಉಂಟಾಗುತ್ತದೆಯೆನ್ನುವುದನ್ನು ಭಗವತ್ಸ್ವರೂಪನಾದ ನೀನು ಚೆನ್ನಾಗಿ ತಿಳಿದಿದ್ದೀಯೆ.

12260038a ತಸ್ಮಾದ್ಬ್ರಹ್ಮನ್ಯಜೇತೈವ ಯಾಜಯೇಚ್ಚಾವಿಚಾರಯನ್|

12260038c ಯಜತಃ ಸ್ವರ್ಗವಿಧಿನಾ ಪ್ರೇತ್ಯ ಸ್ವರ್ಗಫಲಂ ಮಹತ್||

ಬ್ರಹ್ಮನ್! ಆದುದರಿಂದ ಬ್ರಾಹ್ಮಣನಾದವನು ಏನನ್ನೂ ಯೋಚಿಸದೇ ಯಜ್ಞ ಮಾಡಬೇಕು ಮತ್ತು ಮಾಡಿಸಬೇಕು. ಸ್ವರ್ಗವನ್ನು ಬಯಸಿ ಯಜ್ಞಮಾಡುವವನಿಗೆ ಸ್ವರ್ಗದ ಮಹಾಫಲವು ದೊರೆಯುತ್ತದೆ.

12260039a ನಾಯಂ ಲೋಕೋಽಸ್ತ್ಯಯಜ್ಞಾನಾಂ ಪರಶ್ಚೇತಿ ವಿನಿಶ್ಚಯಃ|

12260039c ವೇದವಾದವಿದಶ್ಚೈವ ಪ್ರಮಾಣಮುಭಯಂ ತದಾ||

ಯಜ್ಞವನ್ನು ಮಾಡದವನಿಗೆ ಐಹಿಕ ಸುಖವಾಗಲೀ ಪಾರಲೌಕಿಕ ಸುಖವಾಗಲೀ ಇಲ್ಲವೆನ್ನುವುದು ನಿಶ್ಚಯ. ವೇದವಾದವನ್ನು ತಿಳಿದಿರುವವನು ಎರಡಕ್ಕೂ[17] ಪ್ರಮಾಣಗಳಿವೆಯೆನ್ನುವುದನ್ನು ತಿಳಿದಿರುತ್ತಾನೆ.”

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಗೋಕಪಿಲೀಯೇ ಷಷ್ಟ್ಯಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಗೋಕಪಿಲೀಯ ಎನ್ನುವ ಇನ್ನೂರಾಅರವತ್ತನೇ ಅಧ್ಯಾಯವು.

[1] ಯೋಗಃ (ಗೀತಾ ಪ್ರೆಸ್/ಭಾರತ ದರ್ಶನ).

[2] ಐಶ್ವರ್ಯ, ಧ್ಯಾನ, ಯಶಸ್ಸು, ಶ್ರೀ, ವೈರಾಗ್ಯ ಮತ್ತು ಧರ್ಮ ಇವು ಷಡ್ಗುಣಗಳು. (ದಾಮೋದರ್ ಸಾತ್ವಾಲೇಕರ್) ಶಮ-ದಮಾದಿ ಷಡ್ಗುಣಗಳು (ಗೀತಾ ಪ್ರೆಸ್).

[3] ಯೋಗಧರ್ಮಸ್ಯ (ಗೀತಾ ಪ್ರೆಸ್/ಭಾರತ ದರ್ಶನ).

[4] ಸತೀಮಶಿಥಿಲಾಂ ಸತ್ಯಾಂ (ಗೀತಾ ಪ್ರೆಸ್).

[5] ದೇವಯಾನಕ್ಕೆ ವ್ಯಾಖ್ಯಾನಕಾರರು ಆತ್ಮಸಾಕ್ಷಾತ್ಕಾರಕರ್ತೃಗಳೆಂದು ಅರ್ಥಮಾಡಿದ್ದಾರೆ. ದೇವಂ ಆತ್ಮನಂ ಯಾಂತಿ ಏಭಿಃ ಇತಿ ದೇವಯಾನಾಃ – ಯಾವುದರಿಂದ ಆತ್ಮನನ್ನು ಹೊಂದಬಹುದೋ ಅದು ದೇವಯಾನ. ನಾಲ್ಕೂ ಆಶ್ರಮಗಳಿಗೂ ದೇವಯಾನಗಳೆಂದೇ ಹೆಸರು. ಆಯಾ ಆಶ್ರಮಗಳ ಫಲಗಳನ್ನು ವ್ಯಾಖ್ಯಾನಕಾರರು ಗಂಥಾಂತರದಲ್ಲಿ ಉದ್ಧರಿಸಿದ್ದಾರೆ: ಸಂನ್ಯಾಸೀ ಮೋಕ್ಷಮಾಪ್ನೋತಿ ಬ್ರಹ್ಮಲೋಕಂ ವನೀ ತಥಾ| ಸ್ವರ್ಲೋಕಮೃಷಿಲೋಕಂ ಚ ಗೃಹಸ್ಥಬ್ರಹ್ಮಚಾರಿಣೌ|| ಸಂನ್ಯಾಸಿಗೆ ನೇರವಾಗಿ ಮೋಕ್ಷಪ್ರಾಪ್ತಿ. ಉಳಿದ ಆಶ್ರಮಿಗಳಿಗೆ ಉತ್ತಮ ಲೋಕಗಳು ಪ್ರಾಪ್ತಿಯಾದ ನಂತರ ಮೋಕ್ಷಪ್ರಾಪ್ತಿ. (ಭಾರತ ದರ್ಶನ)

[6] ಕರ್ಮಗಳನ್ನು ಮಾಡಬೇಕೆನ್ನುವುದರ ಕುರಿತು ಪ್ರಜಾಪತಿಯ ವಚನವು ಹೀಗಿದೆ: ತ್ರಯೀವಿದ್ಯಾಂ ಬ್ರಹ್ಮಚರ್ಯಂ ಪ್ರಜಾತಿಂ ಶ್ರದ್ಧಾಂ ತಪೋ ಯಜ್ಞ ಮನುಪ್ರದಾನಮ್| ಯ ಏತಾನಿ ಕುರ್ವತೇ ತೈರಿತ್ಸಹಸ್ಯೋ ರಜೋಭೂತಾ ಧ್ವಂಸತೇಽನ್ಯತ್ಪ್ರಶಂಸಮ್|| (ಭಾರತ ದರ್ಶನ)

[7] ಕರ್ಮವನ್ನು ಮಾಡಕೂಡದೆನ್ನುವುದಕ್ಕೆ ವಾರ್ತಿಕಕಾರರು ಉದಾಹರಿಸಿರುವ ಭಲ್ಲವಿಶಾಖಾವಚನವು ಹೀಗಿದೆ: ತ್ಯಾಗ ಏವ ಹಿ ಸರ್ವೇಷು ಮೋಕ್ಷಸಾಧನಮುತ್ತಮಮ್| ತ್ಯಜತೈವ ಹಿ ವಿಜ್ಞೇಯಂ ತ್ಯಕ್ತುಃ ಪ್ರತ್ಯಕ್ಷರಂ ಪದಮ್|| (ಭಾರತ ದರ್ಶನ)

[8] ಅನಾಲಂಭೇ ಹ್ಯದೋಷಃ ಸ್ಯಾದಾಲಂಭೇ ದೋಷ ಉತ್ತಮಃ| (ಭಾರತ ದರ್ಶನ/ಗೀತಾ ಪ್ರೆಸ್).

[9] कर्म न करनॆसे कॊई दॊष नहीं हॊता, परंतु यज्ञ आदि कर्मॊंके अनुष्ठान करनॆसॆ हिंसा आदिसॆ बहुतॆरॆ दॊष हुआ करतॆ हैं। (ದಾಮೋದರ್ ಸಾತ್ವಾಲೇಕರ್).

[10] ಸಪ್ತ ಗ್ರಾಮ್ಯ ಪಶುಗಳು: ಗೌರಜೋ ಮಾನುಷೋಽಶ್ವಶ್ಚ ಮೇಷಾಶ್ವತರಗರ್ದ ಭಾಃ| ಗ್ರಾಮ್ಯಾಃ ಸಪ್ತ ಸಮಾಖ್ಯಾತಾಃ ಪಶವಃ ಸಧುವೇದಿಭಿಃ|| ಹಸು, ಕುರಿ, ಮನುಷ್ಯ, ಕುದುರೆ, ಆಡು, ಹೇಸರಗತ್ತೆ ಮತ್ತು ಕತ್ತೆ – ಇವು ಏಳು ಗ್ರಾಮ್ಯ ಪಶುಗಳು. ಸಿಂಹಾ ವ್ಯಾಘ್ರಾ ವರಾಹಾಶ್ಚ ಮಹಿಷಾ ವಾರಣಾಸ್ತಥಾ| ಋಕ್ಷಾಶ್ಚ ವಾನರಾಶ್ಚೈವ ಸಪ್ತಾರಣ್ಯಾಃ ಪ್ರಕೀರ್ತಿತಾಃ|| ಸಿಂಹಗಳು, ಹುಲಿಗಳು, ಕಾಡುಹಂದಿಗಳು, ಕಾಡೆಮ್ಮೆಗಳು, ಆನೆಗಳು, ಕರಡಿಗಳು, ಮತ್ತು ಕಪಿಗಳು – ಈ ಎಳೂ ಅರಣ್ಯ ಪಶುಗಳು. (ಭಾರತ ದರ್ಶನ).

[11] ಯಜ್ಞವು ಸ್ವರ್ಗಪ್ರಾಪಕವಾದುದರಿಂದ ಇಲ್ಲಿ ಹಿಂಸೆಯ ಪ್ರಶ್ನೆಯೇ ಇಲ್ಲ. ನ ವಾ ಉ ವೇತಸ್ಮಿಂದ್ರಿಯಸೇ ನರಿಷ್ಯಸಿ ದೇವಾಗುಂ ಇದೇಷಿ ಪಥಿಭಿಃ ಸುಗೇಭಿಃ – ಎಂಬ ವೇದಮಂತ್ರವೂ ಯಜ್ಞಕರ್ಮದಿಂದ ಪ್ರಾಣಿಗಳಿಗೆ ಹಿಂಸೆಯಾಗುವುದಿಲ್ಲ ಎನ್ನುವುದನ್ನು ದೃಢಪಡಿಸುತ್ತದೆ. (ಭಾರತ ದರ್ಶನ)

[12] These are said to be the limbs of a sacrifice and the foundations of the sacrifice (Bibek Debroy).

[13] Clarified butter, milk, curds mixed with sugar, skin, hair, horns and hooves – a cow can provide everything for a sacrifice. Each of these is a recommended object. (Bibek Debroy)

[14] However, there are some who do not wish to cause any injury or lead to any violence. They perform sacrifices because of conviction and not because they desire the fruits of sacrifices. (Bibek Debroy)

[15] ವೇದದ ಬ್ರಾಹ್ಮಣಭಾಗದಿಂದಲೇ ಯಜ್ಞವು ಪ್ರಕಟಗೊಂಡಿದೆ (ಭಾರತ ದರ್ಶನ).

[16] ಸಾಮಗಾನಕ್ಕೆ ಸಂಬಂಧಿಸಿದ ಹಾಽಽಯಿ, ಹಾಽಽವು ಇತ್ಯಾದಿ ಸ್ತೋಭಗಳು (ಭಾರತ ದರ್ಶನ).

[17] ಪ್ರವೃತ್ತಿ ಮತ್ತು ನಿವೃತ್ತಿಮಾರ್ಗಗಳೆರಡಕ್ಕೂ (ಭಾರತ ದರ್ಶನ).

Comments are closed.