Shanti Parva: Chapter 252

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೨೫೨

ತುಲಾಧಾರ-ಜಾಜಲಿ ಸಂವಾದ

ಯುಧಿಷ್ಠಿರನು ಧರ್ಮದ ಕುರಿತಾದ ಸಂದೇಹಗಳನ್ನು ಹೇಳಿಕೊಳ್ಳುವುದು (1-20).

12252001 ಯುಧಿಷ್ಠಿರ ಉವಾಚ|

12252001a ಸೂಕ್ಷ್ಮಂ ಸಾಧು ಸಮಾದಿಷ್ಟಂ ಭವತಾ ಧರ್ಮಲಕ್ಷಣಮ್|

12252001c ಪ್ರತಿಭಾ ತ್ವಸ್ತಿ ಮೇ ಕಾ ಚಿತ್ತಾಂ ಬ್ರೂಯಾಮನುಮಾನತಃ||

ಯುಧಿಷ್ಠಿರನು ಹೇಳಿದನು: “ಸೂಕ್ಷ್ಮವಾದ ಧರ್ಮಲಕ್ಷಣವನ್ನು ನೀನು ಚೆನ್ನಾಗಿಯೇ ಉಪದೇಶಿಸಿರುವೆ. ಆದರೆ ನನ್ನ ಚಿತ್ತಕ್ಕೆ ಇನ್ನೂ ಕೆಲವು ವಿಷಯಗಳು ಹೊಳೆಯುತ್ತಿವೆ. ಅನುಮಾನದಿಂದ ನಾನು ಅದನ್ನು ಹೇಳುತ್ತೇನೆ.

12252002a ಭೂಯಾಂಸೋ ಹೃದಯೇ ಯೇ ಮೇ ಪ್ರಶ್ನಾಸ್ತೇ ವ್ಯಾಹೃತಾಸ್ತ್ವಯಾ|

12252002c ಇಮಮನ್ಯಂ ಪ್ರವಕ್ಷ್ಯಾಮಿ ನ ರಾಜನ್ ವಿಗ್ರಹಾದಿವ||

ರಾಜನ್! ನನ್ನ ಹೃದಯದಲ್ಲಿದ್ದ ಇನ್ನೂ ಅನೇಕ ಪ್ರಶ್ನೆಗಳನ್ನು ನೀನು ಹೋಗಲಾಡಿಸಿದ್ದೀಯೆ. ಅದರೆ ಈ ಪ್ರಶ್ನೆಯನ್ನು ತಿಳಿಯಬೇಕೆಂದು ಕೇಳುತ್ತಿದ್ದೇನೆಯೇ ಹೊರತು ವಾದಿಸಬೇಕೆಂದು ಕೇಳುತ್ತಿಲ್ಲ.

12252003a ಇಮಾನಿ ಹಿ ಪ್ರಾಪಯಂತಿ[1] ಸೃಜಂತ್ಯುತ್ತಾರಯಂತಿ ಚ|

12252003c ನ ಧರ್ಮಃ ಪರಿಪಾಠೇನ ಶಕ್ಯೋ ಭಾರತ ವೇದಿತುಮ್||

ಭಾರತ! ಪ್ರಾಣಿಗಳು ಬದುಕುತ್ತವೆ, ಹುಟ್ಟಿಸುತ್ತವೆ ಮತ್ತು ಶರೀರಗಳನ್ನು ತೊರೆಯುತ್ತವೆ. ಕೇವಲ ಪರಿಪಾಠದಿಂದ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವಿಲ್ಲ.

12252004a ಅನ್ಯೋ ಧರ್ಮಃ ಸಮಸ್ಥಸ್ಯ ವಿಷಮಸ್ಥಸ್ಯ ಚಾಪರಃ|

12252004c ಆಪದಸ್ತು ಕಥಂ ಶಕ್ಯಾಃ ಪರಿಪಾಠೇನ ವೇದಿತುಮ್||

ಉತ್ತಮ ಪರಿಸ್ಥಿತಿಯಲ್ಲಿರುವವನಿಗೆ ಧರ್ಮವು ಅನ್ಯ. ವಿಷಮ ಪರಿಸ್ಥಿತಿಯಲ್ಲಿರುವವನಿಗೆ ಬೇರೆಯ ಧರ್ಮ. ಆಪತ್ತಿನಲ್ಲಿರುವವನಿಗೆ ಇರುವ ಧರ್ಮಗಳನ್ನು ಪರಿಪಾಠದಿಂದ ಹೇಗೆ ತಿಳಿದುಕೊಳ್ಳಲು ಶಕ್ಯ?

12252005a ಸದಾಚಾರೋ ಮತೋ ಧರ್ಮಃ ಸಂತಸ್ತ್ವಾಚಾರಲಕ್ಷಣಾಃ|

12252005c ಸಾಧ್ಯಾಸಾಧ್ಯಂ ಕಥಂ ಶಕ್ಯಂ ಸದಾಚಾರೋ ಹ್ಯಲಕ್ಷಣಮ್||

ಸದಾಚಾರವೇ ಧರ್ಮ. ಧರ್ಮಾಚರಣೆಯ ಲಕ್ಷಣವುಳ್ಳವರು ಸಂತರು[2]. ಸದಾಚಾರಕ್ಕೆ ನಿರ್ದಿಷ್ಟ ಲಕ್ಷಣವೇ ಇಲ್ಲದಿರುವಾಗ ಸದಾಚಾರವನ್ನು ಪಾಲಿಸುವುದು ಸಾಧ್ಯ ಅಥವಾ ಅಸಾಧ್ಯ ಎಂದು ಹೇಗೆ ತಿಳಿದುಕೊಳ್ಳಬಹುದು?

12252006a ದೃಶ್ಯತೇ ಧರ್ಮರೂಪೇಣ ಅಧರ್ಮಂ ಪ್ರಾಕೃತಶ್ಚರನ್|

12252006c ಧರ್ಮಂ ಚಾಧರ್ಮರೂಪೇಣ ಕಶ್ಚಿದಪ್ರಾಕೃತಶ್ಚರನ್||

ಸಾಮಾನ್ಯ ಜನರು ಧರ್ಮರೂಪದಲ್ಲಿ ಅಧರ್ಮವನ್ನು ಆಚರಿಸುವುದೂ ಮತ್ತು ಶಿಷ್ಟರು ಅಧರ್ಮರೂಪದಲ್ಲಿ ಧರ್ಮವನ್ನು ಆಚರಿಸುವುದೂ ಕಂಡುಬರುತ್ತದೆ[3].

12252007a ಪುನರಸ್ಯ ಪ್ರಮಾಣಂ ಹಿ ನಿರ್ದಿಷ್ಟಂ ಶಾಸ್ತ್ರಕೋವಿದೈಃ|

12252007c ವೇದವಾದಾಶ್ಚಾನುಯುಗಂ ಹ್ರಸಂತೀತಿ ಹ ನಃ ಶ್ರುತಮ್||

ಮತ್ತು ಶಾಸ್ತ್ರಕೋವಿದರು ಧರ್ಮಕ್ಕೆ ವೇದವೇ ಪ್ರಮಾಣವೆಂದು ನಿರ್ದಿಷ್ಟಪಡಿಸಿರುತ್ತಾರೆ. ಆದರೆ ವೇದವು ಒಂದು ಯುಗದಿಂದ ಮತ್ತೊಂದು ಯುಗಕ್ಕೆ ಹೋಗುವಾಗ ಕ್ಷೀಣವಾಗುತ್ತದೆ ಎನ್ನುವುದನ್ನೂ ನಾವು ಕೇಳಿದ್ದೇವೆ.

12252008a ಅನ್ಯೇ ಕೃತಯುಗೇ ಧರ್ಮಾಸ್ತ್ರೇತಾಯಾಂ ದ್ವಾಪರೇಽಪರೇ|

12252008c ಅನ್ಯೇ ಕಲಿಯುಗೇ ಧರ್ಮಾ ಯಥಾಶಕ್ತಿಕೃತಾ ಇವ||

ಕೃತಯುಗದಲ್ಲಿ ಅನ್ಯ ಧರ್ಮಗಳಿವೆ. ತ್ರೇತಾಯುಗದಲ್ಲಿ ಬೇರೆ ಮತ್ತು ದ್ವಾಪರಯುಗದಲ್ಲಿ ಬೇರೆ ಧರ್ಮಗಳಿವೆ. ಮತ್ತು ಕಲಿಯುಗದ ಧರ್ಮಗಳೇ ಬೇರೆ. ಹೀಗೆ ಮನುಷ್ಯರ ಶಕ್ತಿಗನುಸಾರವಾಗಿ ಧರ್ಮಗಳನ್ನು ಮಾಡಿರುವಂತಿದೆ.

12252009a ಆಮ್ನಾಯವಚನಂ ಸತ್ಯಮಿತ್ಯಯಂ ಲೋಕಸಂಗ್ರಹಃ|

12252009c ಆಮ್ನಾಯೇಭ್ಯಃ ಪರಂ ವೇದಾಃ ಪ್ರಸೃತಾ ವಿಶ್ವತೋಮುಖಾಃ[4]||

ವೇದವಾಕ್ಯವು ಸತ್ಯ ಎಂಬ ಈ ಮಾತು ಕೇವಲ ಲೋಕರಂಜನೆಗೆ ಮಾತ್ರವೇ ಆಗಿದೆ. ಏಕೆಂದರೆ ವೇದಗಳಿಂದಲೇ ಅನೇಕ ಪ್ರಕಾರದ ಸ್ಮೃತಿಗಳು ಸರ್ವತೋಮುಖವಾಗಿ ಬೆಳೆದಿವೆ.

12252010a ತೇ ಚೇತ್ಸರ್ವೇ ಪ್ರಮಾಣಂ ವೈ ಪ್ರಮಾಣಂ ತನ್ನ ವಿದ್ಯತೇ|

12252010c ಪ್ರಮಾಣೇ ಚಾಪ್ರಮಾಣೇ ಚ ವಿರುದ್ಧೇ ಶಾಸ್ತ್ರತಾ ಕುತಃ||

ಕೆಲವರು ಸಂಪೂರ್ಣ ವೇದವನ್ನೇ ಪ್ರಮಾಣವೆಂದು ಹೇಳುತ್ತಾರೆ. ಆದರೆ ವೇದಗಳಲ್ಲಿ ಪರಸ್ಪರ ವಿರುದ್ಧ ವಾಕ್ಯಗಳೂ ಕಂಡುಬರುತ್ತವೆ. ಅವುಗಳಲ್ಲಿ ಒಂದರ ದೃಷ್ಟಿಯಿಂದ ಮತ್ತೊಂದು ಅಪ್ರಮಾಣವಾಗುತ್ತದೆ. ಆಗ ಅಪ್ರಮಾಣ ವಾಕ್ಯಗಳು ಪ್ರಮಾಣವನ್ನು ಬಾಧಿಸಿದಂತಾಗುತ್ತದೆ. ಹಾಗಾದರೆ ವೇದಕ್ಕೆ ಶಾಸ್ತ್ರತ್ವವು[5] ಹೇಗೆ ಉಂಟಾಗುತ್ತದೆ?

12252011a ಧರ್ಮಸ್ಯ ಹ್ರಿಯಮಾಣಸ್ಯ[6] ಬಲವದ್ಭಿರ್ದುರಾತ್ಮಭಿಃ|

12252011c ಯಾ ಯಾ ವಿಕ್ರಿಯತೇ ಸಂಸ್ಥಾ ತತಃ ಸಾಪಿ ಪ್ರಣಶ್ಯತಿ||

ಬಲಶಾಲೀ ದುರಾತ್ಮರು ಧರ್ಮವನ್ನು ಅಪಹರಿಸಿ ಅದರ ಮೂಲಸ್ಥಾನವನ್ನೇ ವಿನಾಶಗೊಳಿಸಲು ಧರ್ಮವು ನಾಶಹೊಂದುತ್ತದೆ.

12252012a ವಿದ್ಮ ಚೈವಂ ನ ವಾ ವಿದ್ಮ ಶಕ್ಯಂ ವಾ ವೇದಿತುಂ ನ ವಾ|

12252012c ಅಣೀಯಾನ್ ಕ್ಷುರಧಾರಾಯಾ ಗರೀಯಾನ್ ಪರ್ವತಾದಪಿ[7]||

ಧರ್ಮವನ್ನು ನಾವು ತಿಳಿದಿರುವೆವೋ ಇಲ್ಲವೋ ಅಥವಾ ಧರ್ಮವನ್ನು ತಿಳಿದುಕೊಳ್ಳಲು ಶಕ್ಯವೋ ಇಲ್ಲವೋ, ಇಷ್ಟು ಮಾತ್ರ ಹೇಳಬಹುದಾಗಿದೆ: ಧರ್ಮವು ಕತ್ತಿಯ ಅಲುಗಿಗಿಂತಲೂ ಸೂಕ್ಷ್ಮವಾದುದು ಮತ್ತು ಪರ್ವತಕ್ಕಿಂತಲೂ ದೊಡ್ಡದಾದುದು.

12252013a ಗಂಧರ್ವನಗರಾಕಾರಃ ಪ್ರಥಮಂ ಸಂಪ್ರದೃಶ್ಯತೇ|

12252013c ಅನ್ವೀಕ್ಷ್ಯಮಾಣಃ ಕವಿಭಿಃ ಪುನರ್ಗಚ್ಚತ್ಯದರ್ಶನಮ್||

ಮೊಟ್ಟಮೊದಲು ಧರ್ಮವು ಗಂಧರ್ವನಗರದ ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನೇ ವಿಶೇಷರೂಪದಲ್ಲಿ ವಿಚಾರಮಾಡುವ ವಿದ್ವಾಂಸರಿಗೆ ಅದು ಕಾಣಿಸದೇ ಮಾಯವಾಗಿಬಿಡುತ್ತದೆ.

12252014a ನಿಪಾನಾನೀವ ಗೋಭ್ಯಾಶೇ ಕ್ಷೇತ್ರೇ ಕುಲ್ಯೇವ ಭಾರತ|

12252014c ಸ್ಮೃತೋಽಪಿ ಶಾಶ್ವತೋ ಧರ್ಮೋ ವಿಪ್ರಹೀಣೋ ನ ದೃಶ್ಯತೇ||

ಭಾರತ! ಹಸುಗಳು ನೀರು ಕುಡಿಯುವ ತೊಟ್ಟಿ ಮತ್ತು ಗದ್ದೆಗಳಿಗೆ ನೀರು ಹಾಯಿಸುವ ಕಾಲುವೆಯು ಹೇಗೆ ಒಂದೇ ಸಮನಾಗಿರುವುದಿಲ್ಲವೋ ಹಾಗೆ ಸ್ಮೃತಿಯೂ ಕೂಡ ಒಂದೇ ರೀತಿಯಾಗಿರದೇ ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಿರುತ್ತದೆ[8]. ಆದುದರಿಂದ ನಾಶಹೊಂದದೇ ಇರುವ ಶಾಶ್ವತ ಧರ್ಮವೇ ಇಲ್ಲ.

12252015a ಕಾಮಾದನ್ಯೇ ಕ್ಷಯಾದನ್ಯೇ ಕಾರಣೈರಪರೈಸ್ತಥಾ|

12252015c ಅಸಂತೋ ಹಿ ವೃಥಾಚಾರಂ ಭಜಂತೇ ಬಹವೋಽಪರೇ||

ಕೆಲವರು ಕಾಮಕ್ಕಾಗಿ, ಕೆಲವರು ಇಚ್ಛೆಗಳಿಗಾಗಿ ಮತ್ತು ಅನ್ಯರು ಇತರ ಅನೇಕ ಕಾರಣಗಳಿಗಾಗಿ ಧರ್ಮಾಚರಣೆಯನ್ನು ಮಾಡುತ್ತಾರೆ. ಕೆಲವು ಅಸಾಧು ಪುರುಷರು ಕೇವಲ ತೋರಿಕೆಗಾಗಿ ವ್ಯರ್ಥ ಧರ್ಮಾಚರಣೆಯನ್ನು ಮಾಡುತ್ತಾರೆ.

12252016a ಧರ್ಮೋ ಭವತಿ ಸ ಕ್ಷಿಪ್ರಂ ವಿಲೀನಸ್ತ್ವೇವ[9] ಸಾಧುಷು|

12252016c ಅನ್ಯೇ ತಾನಾಹುರುನ್ಮತ್ತಾನಪಿ ಚಾವಹಸಂತ್ಯುತ||

ಬೇಗನೇ ಮುಂದೆ ಅದೇ ಧರ್ಮವಾಗಿಬಿಡುತ್ತದೆ. ಸಾಧುಗಳ ಧರ್ಮವು ವಿಲೀನವಾಗಿಬಿಡುತ್ತದೆ. ಅನ್ಯರು ಸಾಧುಪುರುಷರನ್ನು ಹುಚ್ಚರೆಂದು ಕರೆಯುತ್ತಾ ಅಪಹಾಸ್ಯವನ್ನೂ ಮಾಡುತ್ತಾರೆ.

12252017a ಮಹಾಜನಾ ಹ್ಯುಪಾವೃತ್ತಾ ರಾಜಧರ್ಮಂ ಸಮಾಶ್ರಿತಾಃ|

12252017c ನ ಹಿ ಸರ್ವಹಿತಃ ಕಶ್ಚಿದಾಚಾರಃ ಸಂಪ್ರದೃಶ್ಯತೇ||

ದ್ರೋಣಾದಿ ಮಹಾಜನರೂ ಸ್ವಧರ್ಮವನ್ನು ಬಿಟ್ಟು ರಾಜಧರ್ಮವನ್ನು ಆಶ್ರಯಿಸಿದ್ದಾರೆ. ಆದುದರಿಂದ ಸರ್ವರಿಗೂ ಹಿತಕರವಾದ ಸಮಾನರೂಪವಾದ ಯಾವ ಆಚಾರವೂ ಪ್ರಚಲಿತವಾಗಿರುವುದಿಲ್ಲ.

12252018a ತೇನೈವಾನ್ಯಃ ಪ್ರಭವತಿ ಸೋಽಪರಂ ಬಾಧತೇ ಪುನಃ|

12252018c ದೃಶ್ಯತೇ ಚೈವ ಸ ಪುನಸ್ತುಲ್ಯರೂಪೋ ಯದೃಚ್ಚಯಾ||

ಇಂತಹ ಧರ್ಮದ ಆಚರಣೆಯಿಂದಲೇ ಕೆಲವರು[10] ಔನ್ನತ್ಯವನ್ನು ಹೊಂದಿದರು. ಅದೇ ರೀತಿ ಇತರರು ಧರ್ಮದ ಬಲದಿಂದಲೇ ಇತರರನ್ನು ಪೀಡಿಸಿದರು[11]. ಇತರರು ಈಶ್ವರೇಚ್ಛೆಯಿಂದ ಧರ್ಮದ ಮೂಲಕವಾಗಿಯೇ ಸಮತ್ವವನ್ನು ಪಡೆದುಕೊಂಡಿರುವುದೂ ಕಂಡು ಬರುತ್ತದೆ.

12252019a ಯೇನೈವಾನ್ಯಃ ಪ್ರಭವತಿ ಸೋಽಪರಾನಪಿ ಬಾಧತೇ|

12252019c ಆಚಾರಾಣಾಮನೈಕಾಗ್ರ್ಯಂ ಸರ್ವೇಷಾಮೇವ ಲಕ್ಷಯೇತ್||

ಒಬ್ಬನು ಧರ್ಮವನ್ನು ಆಚರಿಸಿ ಔನ್ನತ್ಯವನ್ನು ಹೊಂದುತ್ತಾನೆ. ಮತ್ತೊಬ್ಬನು ಅದೇ ಧರ್ಮವನ್ನು ಆಶ್ರಯಿಸಿ ಇತರರನ್ನು ಪೀಡಿಸುತ್ತಾನೆ. ಆದುದರಿಂದ ಧರ್ಮಾಚರಣೆಯನ್ನು ಮಾಡಿದರೂ ಎಲ್ಲರಲ್ಲಿಯೂ ಆಚಾರವ್ಯವಹಾರಗಳು ಒಂದೇ ಆಗಿರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.

12252020a ಚಿರಾಭಿಪನ್ನಃ ಕವಿಭಿಃ ಪೂರ್ವಂ ಧರ್ಮ ಉದಾಹೃತಃ|

12252020c ತೇನಾಚಾರೇಣ ಪೂರ್ವೇಣ ಸಂಸ್ಥಾ ಭವತಿ ಶಾಶ್ವತೀ||

ಹಿಂದೆ ವಿದ್ವಾಂಸರು ಬಹಳ ಕಾಲದಿಂದ ಆಚರಿಸುತ್ತಿದ್ದ ಧರ್ಮದ ಕುರಿತು ನೀನು ಹೇಳಿರುವೆ. ಇದರ ಆಚರಣೆಯ ಮೂಲಕವಾಗಿಯೇ ಸಮಾಜವು ಬಹಳ ಕಾಲದವರೆಗೆ ಸುಸ್ಥಿರವಾಗಿರುತ್ತದೆ.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಧರ್ಮಪ್ರಮಣ್ಯಾಕ್ಷೇಪೇ ದ್ವಿಪಂಚಾಶದಧಿಕದ್ವಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಧರ್ಮಪ್ರಮಾಣ್ಯಾಕ್ಷೇಪ ಎನ್ನುವ ಇನ್ನೂರಾಐವತ್ತೆರಡನೇ ಅಧ್ಯಾಯವು.

File:Flower on white Background.jpg - Wikimedia Commons

[1] ಪ್ರಾಣಯಂತಿ ಎಂಬ ಪಾಠಾಂತರವಿದೆ (ಭಾರತದರ್ಶನ).

[2] ಸತ್ಪುರುಷರ ಆಚರಣೆಯೇ ಧರ್ಮ ಮತ್ತು ಧರ್ಮಾಚರಣೆ ಮಾಡುವವರು ಸತ್ಪುರುಷರು ಎಂದು ಹೇಳಿರುವುದರಿಂದ ಸದಾಚಾರ ಮತ್ತು ಸತ್ಪುರುಷರು ಅನ್ಯೋನ್ಯಾಶ್ರಯವನ್ನು ಹೊಂದಿದಂತಾಗುತ್ತದೆ.

[3] ಕೇವಲ ಆಚರಣೆಯಿಂದ ಧರ್ಮಾಧರ್ಮಗಳನ್ನು ನಿರ್ಣಯಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಸಾಮಾನ್ಯರು ಧರ್ಮವನ್ನು ಆಚರಿಸಿದರೂ ಅವರ ಆಚರಣೆಯು ಅಧರ್ಮವಾಗಿ ಕಾಣುತ್ತದೆ. ಶಿಷ್ಟರಾದವರು ಅಧರ್ಮವನ್ನು ಆಚರಿಸಿದರೂ ಅದು ಧರ್ಮವಾಗಿಯೇ ಕಾಣುತ್ತದೆ. ಆ ಸಂದರ್ಭಗಳಲ್ಲಿ ಭ್ರಷ್ಟರು ಶಿಷ್ಟಾಚಾರರಂತೆಯೂ ಶಿಷ್ಟರು ಭ್ರಷ್ಟಾಚಾರರಂತೆ ಕಾಣುವುದರಿಂದ ಸದಾಚಾರಲಕ್ಷಣವನ್ನು ನಿರ್ಣಯಿಸಲಿಕ್ಕಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಶಾಂತಿಪರ್ವದ 141ನೇ ಅಧ್ಯಾಯದ ಚಾಂಡಾಲ-ವಿಶ್ಚಾಮಿತ್ರರ ಸಂವಾದವು ಉದಾಹರಣೆಯಾಗಿದೆ.

[4] ಸರ್ವತೋಮುಖಾಃ ಎಂಬ ಪಾಠಾಂತರವಿದೆ (ಭಾರತದರ್ಶನ).

[5] ಶಾಸನ ಮಾಡುವ ಅಧಿಕಾರವು

[6] ಕ್ರಿಯಮಾಣಸ್ಯ ಎಂಬ ಪಾಠಾಂತರವಿದೆ (ಭಾರತದರ್ಶನ).

[7] ಗರೀಯಾನಪಿ ಪರ್ವತಾತ್| ಎಂಬ ಪಾಠಾಂತರವಿದೆ (ಭಾರತದರ್ಶನ).

[8] ವೇದಾ ವಿಭಿನ್ನಾಃ ಸ್ಮೃತಯೋ ವಿಭಿನ್ನಾಃ|

[9] ಪ್ರಲಾಪಸ್ತ್ವೇವ ಎಂಬ ಪಾಠಾಂತರವಿದೆ (ಭಾರತದರ್ಶನ).

[10] ವಿಶ್ವಾಮಿತ್ರಾದಿ ಮಹಾಪುರುಷರು.

[11] ರಾವಣಾದಿ ರಾಕ್ಷಸರು ತಪೂರೂಪಧರ್ಮದ ಬಲದಿಂದ ಇತರರನ್ನು ಪೀಡಿಸಿದರು.

Comments are closed.