Shanti Parva: Chapter 130

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೩೦

12130001 ಯುಧಿಷ್ಠಿರ ಉವಾಚ|

12130001a ಹೀನೇ ಪರಮಕೇ ಧರ್ಮೇ ಸರ್ವಲೋಕಾತಿಲಂಘಿನಿ[1]|

12130001c ಸರ್ವಸ್ಮಿನ್ದಸ್ಯುಸಾದ್ಭೂತೇ ಪೃಥಿವ್ಯಾಮುಪಜೀವನೇ||

12130002a ಕೇನಾಸ್ಮಿನ್ಬ್ರಾಹ್ಮಣೋ ಜೀವೇಜ್ಜಘನ್ಯೇ ಕಾಲ ಆಗತೇ|

12130002c ಅಸಂತ್ಯಜನ್ಪುತ್ರಪೌತ್ರಾನನುಕ್ರೋಶಾತ್ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಲೋಕಗಳಿಗೂ ಹಿತಕರವಾದ ಪರಮ ರಾಜಧರ್ಮವು ಹೀನವಗಿ ಭೂಮಿಯ ಮೇಲಿನ ಉಪಜೀವನ ಸಾಧನಗಳೆಲ್ಲವೂ ದಸ್ಯುಗಳ ಅಧಿಕಾರಕ್ಕೆ ಬಂದು ಅತ್ಯಂತ ಸಂಕಟವಾದ ಜೀವಕ್ಕೇ ತೊಂದರೆಯಾಗುವಂತಹ ಕಾಲವು ಬಂದಾಗ ಮಕ್ಕಳು ಮೊಮ್ಮಕ್ಕಳನ್ನು ತೊರೆಯದೇ ದಯಾಪರನಾಗಿರುವ ಬ್ರಾಹ್ಮಣನು ಯಾವ ವೃತ್ತಿಯಿಂದ ಜೀವನವನ್ನು ನಡೆಸಬೇಕು?”

12130003 ಭೀಷ್ಮ ಉವಾಚ|

12130003a ವಿಜ್ಞಾನಬಲಮಾಸ್ಥಾಯ ಜೀವಿತವ್ಯಂ ತಥಾಗತೇ|

12130003c ಸರ್ವಂ ಸಾಧ್ವರ್ಥಮೇವೇದಮಸಾಧ್ವರ್ಥಂ ನ ಕಿಂ ಚನ||

ಭೀಷ್ಮನು ಹೇಳಿದನು: “ಅಂಥಹ ಕಾಲವು ಬಂದಾಗ ಬ್ರಾಹ್ಮಣನು ತನ್ನ ವಿಜ್ಞಾನಬಲವನ್ನು ಆಶ್ರಯಿಸಿ ಜೀವಿಸಬೇಕು. ಈ ಲೋಕದಲ್ಲಿ ಎಲ್ಲವೂ ಸಾಧುಗಳ ಸಲುವಾಗಿ ಇರುವವೇ ಹೊರತು ಯಾವುದೂ ಅಸಾಧುಗಳಿಗೆ ಇರುವುದಿಲ್ಲ.

12130004a ಅಸಾಧುಭ್ಯೋ ನಿರಾದಾಯ ಸಾಧುಭ್ಯೋ ಯಃ ಪ್ರಯಚ್ಚತಿ|

12130004c ಆತ್ಮಾನಂ ಸಂಕ್ರಮಂ ಕೃತ್ವಾ ಕೃತ್ಸ್ನಧರ್ಮವಿದೇವ[2] ಸಃ||

ತನ್ನನ್ನೇ ಸೇತುವೆಯನ್ನಾಗಿ ಮಾಡಿಕೊಂಡು ಅಸಾಧುಗಳಿಂದ ಧನವನ್ನು ತೆಗೆದುಕೊಂಡು ಸಾಧುಗಳಿಗೆ ಕೊಂಡುವವನೇ ಧರ್ಮವನ್ನು ಸಂಪೂರ್ಣವಾಗಿ ತಿಳಿದುಕೊಂಡವನು.

12130005a ಸುರೋಷೇಣಾತ್ಮನೋ[3] ರಾಜನ್ರಾಜ್ಯೇ ಸ್ಥಿತಿಮಕೋಪಯನ್|

12130005c ಅದತ್ತಮಪ್ಯಾದದೀತ ದಾತುರ್ವಿತ್ತಂ ಮಮೇತಿ ವಾ||

ರಾಜನ್! ರಾಜ್ಯಭ್ರಷ್ಟನಾದ ರಾಜನು ತನ್ನ ರಾಜ್ಯವನ್ನು ಪುನಃ ಪಡೆದುಕೊಳ್ಳಲು ರಾಜ್ಯದ ಪರಿಸ್ಥಿತಿಯನ್ನು ಹದಗೆಡಿಸದೇ ಧನಿಕರಲ್ಲಿರುವ ಧನವು ತನ್ನದೇ ಎಂದು ಭಾವಿಸಿ ಅವರಿಂದ ಬಲಾತ್ಕಾರವಾಗಿ ಧನವನ್ನು ತೆಗೆದುಕೊಳ್ಳಬೇಕು.

12130006a ವಿಜ್ಞಾನಬಲಪೂತೋ ಯೋ ವರ್ತತೇ ನಿಂದಿತೇಷ್ವಪಿ|

12130006c ವೃತ್ತವಿಜ್ಞಾನವಾನ್ಧೀರಃ ಕಸ್ತಂ ಕಿಂ ವಕ್ತುಮರ್ಹತಿ||

ವಿಜ್ಞಾನಬಲದಿಂದ ವವಿತ್ರನಾದ, ಯಾವುದರಿಂದ ಯಾವುದು ನಿರ್ವಹಿಸುವುದೆಂದು ತಿಳಿದ ಧೀರನು ಆಪತ್ಕಾಲದಲ್ಲಿ ನಿಂದಿತವಾಗಿ ನಡೆದುಕೊಂಡರೂ ಅವನ ಕುರಿತು ಯಾರು ಏನು ಹೇಳಿಯಾರು?

12130007a ಯೇಷಾಂ ಬಲಕೃತಾ ವೃತ್ತಿರ್ನೈಷಾಮನ್ಯಾಭಿರೋಚತೇ[4]|

12130007c ತೇಜಸಾಭಿಪ್ರವರ್ಧಂತೇ[5] ಬಲವಂತೋ ಯುಧಿಷ್ಠಿರ||

ಯುಧಿಷ್ಠಿರ! ಬಲಕೃತ ವೃತ್ತಿಗಳಲ್ಲಿರುವವರಿಗೆ ಅನ್ಯ ವೃತ್ತಿಗಳು ಹಿಡಿಸುವುದಿಲ್ಲ. ಬಲವಂತರು ತೇಜಸ್ಸಿನಿಂದ ಇನ್ನೂ ವರ್ಧಿಸುತ್ತಾರೆ.

12130008a ಯದೇವ ಪ್ರಕೃತಂ ಶಾಸ್ತ್ರಮವಿಶೇಷೇಣ ವಿಂದತಿ[6]|

12130008c ತದೇವ ಮಧ್ಯಾಃ ಸೇವಂತೇ ಮೇಧಾವೀ ಚಾಪ್ಯಥೋತ್ತರಮ್[7]||

ಮಧ್ಯಮ ವರ್ಗದ ರಾಜರು ಸಂದರ್ಭಕ್ಕೆ ಯಾವುದು ಹೊಳೆಯುತ್ತದೆಯೋ ಅದರಂತೆ ಮಾಡುತ್ತಾರೆ. ವಿಶೇಷವಾದವುಗಳನ್ನೇನೂ ಮಾಡುವುದಿಲ್ಲ. ಆದರೆ ಮೇಧಾವೀ ರಾಜರು ಅದಕ್ಕಿಂತಲೂ ಉತ್ತಮ ಮಾರ್ಗವನ್ನು ಬಳಸುತ್ತಾರೆ.

12130009a ಋತ್ವಿಕ್ಪುರೋಹಿತಾಚಾರ್ಯಾನ್ಸತ್ಕೃತೈರಭಿಪೂಜಿತಾನ್|

12130009c ನ ಬ್ರಾಹ್ಮಣಾನ್ಯಾತಯೇತ ದೋಷಾನ್ಪ್ರಾಪ್ನೋತಿ ಯಾತಯನ್||

ಎಂತಹ ಆಪತ್ಕಾಲದಲ್ಲಿಯೇ ಆದರೂ ಸತ್ಕೃತರಾದ ಋತ್ವಿಜರನ್ನೂ, ಪೂಜನೀಯ ಆಚಾರ್ಯರನ್ನೂ, ಪುರೋಹಿತರನ್ನೂ ಮತ್ತು ಬ್ರಾಹ್ಮಣರನ್ನೂ, ನೋಯಿಸಬಾರದು. ಅವರನ್ನು ನೋಯಿಸಿದರೆ ಅವನಿಗೆ ದೋಷಗಳುಂಟಾಗುತ್ತವೆ.

12130010a ಏತತ್ಪ್ರಮಾಣಂ ಲೋಕಸ್ಯ ಚಕ್ಷುರೇತತ್ಸನಾತನಮ್|

12130010c ತತ್ಪ್ರಮಾಣೋಽವಗಾಹೇತ ತೇನ ತತ್ಸಾಧ್ವಸಾಧು ವಾ||

ಈ ಆಪದ್ಧರ್ಮವು ಲೋಕಕ್ಕೇ ಪ್ರಮಾಣಭೂತವಾಗಿದೆ. ಇದು ಸನಾತನ ದೃಷ್ಟಿಕೋಣ. ರಾಜನು ಇದನ್ನೇ ಪ್ರಮಾಣವಾಗಿಟ್ಟುಕೊಂಡು ಸಾಧು-ಅಸಾಧು ಕಾರ್ಯಗಳನ್ನು ನಿರ್ಣಯಿಸಬೇಕು.

12130011a ಬಹೂನಿ ಗ್ರಾಮವಾಸ್ತವ್ಯಾ ರೋಷಾದ್ಬ್ರೂಯುಃ ಪರಸ್ಪರಮ್|

12130011c ನ ತೇಷಾಂ ವಚನಾದ್ರಾಜಾ ಸತ್ಕುರ್ಯಾದ್ಯಾತಯೇತ ವಾ||

ಅನೇಕ ಗ್ರಾಮವಾಸಿಗಳು ರೋಷದಿಂದ ಪರಸ್ಪರರರ ಕುರಿತು ಹೇಳಿಕೊಳ್ಳುತ್ತಿರುತ್ತಾರೆ. ರಾಜನು ಅವರ ಮಾತಿನ ಆಧಾರದ ಮೇಲೆ ಯಾರನ್ನೂ ಸತ್ಕರಿಸಲೂ ಬಾರದು, ಶಿಕ್ಷಿಸಲೂ ಬಾರದು.

12130012a ನ ವಾಚ್ಯಃ ಪರಿವಾದೋ ವೈ ನ ಶ್ರೋತವ್ಯಃ ಕಥಂ ಚನ|

12130012c ಕರ್ಣಾವೇವ ಪಿಧಾತವ್ಯೌ ಪ್ರಸ್ಥೇಯಂ ವಾ ತತೋಽನ್ಯತಃ||

ಪರನಿಂದೆಯನ್ನು ಮಾಡಲೂ ಬಾರದು; ಪರನಿಂದೆಯನ್ನು ಯಾವುದೇ ಕಾರಣಕ್ಕೂ ಕೇಳಲೂ ಬಾರದು. ಪರನಿಂದೆಯು ನಡೆಯುತ್ತಿರುವಾಗ ಕಿವಿಗಳನ್ನಾದರೂ ಮುಚ್ಚಿಕೊಳ್ಳಬೇಕು ಅಥವಾ ಬೇರೆ ಕಡೆ ಹೊರಟುಹೋಗಬೇಕು.

12130013a ನ ವೈ ಸತಾಂ ವೃತ್ತಮೇತತ್ಪರಿವಾದೋ ನ ಪೈಶುನಮ್|

12130013c ಗುಣಾನಾಮೇವ ವಕ್ತಾರಃ ಸಂತಃ ಸತ್ಸು ಯುಧಿಷ್ಠಿರ||

ಯುಧಿಷ್ಠಿರ! ಪರನಿಂದನೆ ಮತ್ತು ಚಾಡಿಹೇಳುವುದು ಸತ್ಪುರುಷರ ನಡತೆಗಳಲ್ಲ. ಸತ್ಪುರುಷರಾದರೋ ಸತ್ಪುರುಷರ ಸಭೆಗಳಲ್ಲಿ ಇತರರ ಗುಣಗಳ ಕುರಿತೇ ಮಾತನಾಡುತ್ತಾರೆ.

12130014a ಯಥಾ ಸಮಧುರೌ ದಮ್ಯೌ ಸುದಾಂತೌ[8] ಸಾಧುವಾಹಿನೌ|

12130014c ಧುರಮುದ್ಯಮ್ಯ ವಹತಸ್ತಥಾ ವರ್ತೇತ ವೈ ನೃಪಃ|

ಸುಮಧುರ, ಸುಶಿಕ್ಷಿತ, ನಿಯಂತ್ರಣದಲ್ಲಿರುವ, ಭಾರವನ್ನು ಹೊರಬಲ್ಲ ಎರಡು ಎತ್ತುಗಳಂತೆ ನೃಪನು ರಾಜ್ಯಭಾರವನ್ನು ಚೆನ್ನಾಗಿ ನಿರ್ವಹಿಸಬೇಕು.

12130014e ಯಥಾ ಯಥಾಸ್ಯ ವಹತಃ ಸಹಾಯಾಃ ಸ್ಯುಸ್ತಥಾಪರೇ||

12130015a ಆಚಾರಮೇವ ಮನ್ಯಂತೇ ಗರೀಯೋ ಧರ್ಮಲಕ್ಷಣಮ್|

ಅನೇಕ ಸಹಾಯಕರನ್ನು ಪಡೆದುಕೊಳ್ಳಲು ಶಕ್ಯವಾದ ಆಚಾರಗಳನ್ನಿಟ್ಟುಕೊಂಡಿರಬೇಕು. ಸದಾಚಾರವೇ ಅತಿ ದೊಡ್ಡ ಧರ್ಮಲಕ್ಷಣವೆಂದು ಮನ್ನಿಸುತ್ತಾರೆ.

12130015c ಅಪರೇ ನೈವಮಿಚ್ಚಂತಿ ಯೇ ಶಂಖಲಿಖಿತಪ್ರಿಯಾಃ|

12130015e ಮಾರ್ದವಾದಥ ಲೋಭಾದ್ವಾ ತೇ ಬ್ರೂಯುರ್ವಾಕ್ಯಮೀದೃಶಮ್[9]||

ಆದರೆ ಶಂಖಲಿಖಿತ ಪ್ರಿಯರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಮಾರ್ದವದಿಂದ ಮತ್ತು ಲೋಭದಿಂದ ಅವರು ಹೀಗೆ ಹೇಳುತ್ತಾರೆ.

12130016a ಆರ್ಷಮಪ್ಯತ್ರ ಪಶ್ಯಂತಿ ವಿಕರ್ಮಸ್ಥಸ್ಯ ಯಾಪನಮ್[10]|

12130016c ನ ಚಾರ್ಷಾತ್ಸದೃಶಂ ಕಿಂ ಚಿತ್ಪ್ರಮಾಣಂ ವಿದ್ಯತೇ[11] ಕ್ವ ಚಿತ್||

ವಿಕರ್ಮಿಯು ಗುರುವೇ ಆಗಿದ್ದರೂ ಶಿಕ್ಷಾರ್ಹನೆಂದು ಹೇಳುತ್ತಾರೆ. ಋಷಿಗಳ ಸದೃಶವಾದ ಪ್ರಮಾಣವು ಬೇರೆ ಯಾವುದೂ ಇಲ್ಲ.

12130017a ದೇವಾ ಅಪಿ ವಿಕರ್ಮಸ್ಥಂ ಯಾತಯಂತಿ ನರಾಧಮಮ್|

12130017c ವ್ಯಾಜೇನ ವಿಂದನ್ವಿತ್ತಂ ಹಿ ಧರ್ಮಾತ್ತು ಪರಿಹೀಯತೇ||

ದೇವತೆಗಳೂ ಕೂಡ ವಿಕರ್ಮಿ ನರಾಧಮನನ್ನು ಪೀನರಕಕ್ಕೆ ಕೊಂಡೊಯ್ಯುತ್ತಾರೆ. ವ್ಯಾಜ್ಯದಿಂದ ವಿತ್ತವನ್ನು ಪಡೆದುಕೊಳ್ಳುವವನು ಧರ್ಮಭ್ರಷ್ಟನಾಗುತ್ತಾನೆ.

12130018a ಸರ್ವತಃ ಸತ್ಕೃತಃ ಸದ್ಭಿರ್ಭೂತಿಪ್ರಭವಕಾರಣೈಃ|

12130018c ಹೃದಯೇನಾಭ್ಯನುಜ್ಞಾತೋ ಯೋ ಧರ್ಮಸ್ತಂ ವ್ಯವಸ್ಯತಿ||

ಅಭಿವೃದ್ಧಿಗೆ ಕಾರಣರಾದ ಸಾಧುಪುರುಷರಿಂದ ಸರ್ವತಃ ಸತ್ಕೃತವಾದ ಮತ್ತು ತನ್ನ ಹೃದಯದಿಂದಲೂ ಅನುಜ್ಞಾತ ಧರ್ಮವನ್ನೇ ರಾಜನೂ ಅನುಸರಿಸಬೇಕು.

12130019a ಯಶ್ಚತುರ್ಗುಣಸಂಪನ್ನಂ ಧರ್ಮಂ ವೇದ ಸ ಧರ್ಮವಿತ್|

12130019c ಅಹೇರಿವ ಹಿ ಧರ್ಮಸ್ಯ ಪದಂ ದುಃಖಂ ಗವೇಷಿತುಮ್||

ಚತುರ್ಗುಣ[12]ಸಂಪನ್ನವಾದುದನ್ನೇ ಧರ್ಮವೆಂದು ಧರ್ಮವಿದರು ತಿಳಿದಿರುತ್ತಾರೆ. ಸರ್ಪದ ಪದಚಿಹ್ನೆಗಳನ್ನು ತಿಳಿಯುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟಕರವಾದುದು ಧರ್ಮವನ್ನು ತಿಳಿದುಕೊಳ್ಳುವುದು.

12130020a ಯಥಾ ಮೃಗಸ್ಯ ವಿದ್ಧಸ್ಯ ಮೃಗವ್ಯಾಧಃ ಪದಂ ನಯೇತ್|

12130020c ಕಕ್ಷೇ ರುಧಿರಪಾತೇನ ತಥಾ ಧರ್ಮಪದಂ ನಯೇತ್||

ಬಾಣವು ಚುಚ್ಚಿ ಸೋರುತ್ತಿರುವ ರಕ್ತವು ಹೇಗೆ ವ್ಯಾಧನಿಗೆ ಮೃಗವು ಹೋದ ಮಾರ್ಗವನ್ನು ಸೂಚಿಸುತ್ತದೆಯೋ ಹಾಗೆ ಚತುರ್ಗುಣಸಂಪನ್ನ ಆಚರಣೆಗಳು ಧರ್ಮದ ಮಾರ್ಗವನ್ನು ಸೂಚಿಸುತ್ತವೆ.

12130021a ಏವಂ ಸದ್ಭಿರ್ವಿನೀತೇನ ಪಥಾ ಗಂತವ್ಯಮಚ್ಯುತ|

12130021c ರಾಜರ್ಷೀಣಾಂ ವೃತ್ತಮೇತದವಗಚ್ಚ ಯುಧಿಷ್ಠಿರ||

ಯುಧಿಷ್ಠಿರ! ಹೀಗೆ ಸತ್ಪುರುಷರು ಹೋದ ಮಾರ್ಗವನು ಅನುಸರಿಸುವುದು ಯುಕ್ತವು. ರಾಜರ್ಷಿಗಳ ಸದಾಚಾರಗಳನ್ನು ನೀನೂ ಮನನಮಾಡು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ರಾಜರ್ಷಿವೃತ್ತಂ ನಾಮ ತ್ರಿಂಶಾತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ರಾಜರ್ಷಿವೃತ್ತ ಎನ್ನುವ ನೂರಾಮೂವತ್ತನೇ ಅಧ್ಯಾಯವು.

Spring Tulips

[1] ಸರ್ವಲೋಕಾಭಿಸಂಹಿತೇ| (ಭಾರತ ದರ್ಶನ).

[2] ಕೃಚ್ಛ್ರಧರ್ಮವಿದೇವ (ಭಾರತ ದರ್ಶನ).

[3] ಆಕಾಂಕ್ಷನ್ನಾತ್ಮನೋ (ಭಾರತ ದರ್ಶನ).

[4] ತೇಷಾಮನ್ಯಾ ನ ರೋಚತೇ (ಭಾರತ ದರ್ಶನ).

[5] ಪ್ರವರ್ತಂತೇ (ಭಾರತ ದರ್ಶನ).

[6] ಯದೈವ ಪ್ರಾಕೃತಂ ಶಾಸ್ತ್ರಮವಿಶೇಷೇಣ ವರ್ತತೇ| (ಭಾರತ ದರ್ಶನ).

[7] ತದೈವಮಭ್ಯಸೇದೇವಂ ಮೇಧಾವೀ ವಾಪ್ಯತೋತ್ತರಮ್| (ಭಾರತ ದರ್ಶನ).

[8] ಸುದಂತೌ (ಭಾರತ ದರ್ಶನ).

[9] ಮಾತ್ಸರ್ಯಾದಥವಾ ಲೋಭಾನ್ನ ಬ್ರೂಯುರ್ವಾಕ್ಯಮೀದೃಶಂ| (ಭಾರತ ದರ್ಶನ)

[10] ಪಾತನಮ್| (ಭಾರತ ದರ್ಶನ).

[11] ದೃಶ್ಯತೇ (ಭಾರತ ದರ್ಶನ).

[12] ವೇದವಿಹಿತವಾದ, ಸ್ಮೃತಿಗಳಿಂದ ಅನುಮೋದಿತವಾದ, ಸಜ್ಜನ ಸೇವಿತ ಮತ್ತು ತನಕೂ ಪ್ರಿಯವಾಗಿರುವವೇ ಚತುರ್ಗುಣಸಂಪನ್ನವಾದವುಗಳು (ಭಾರತ ದರ್ಶನ).

Comments are closed.