Shanti Parva: Chapter 125

ಶಾಂತಿ ಪರ್ವ: ರಾಜಧರ್ಮ ಪರ್ವ

೧೨೫

ಋಷಭ-ಸುಮಿತ್ರ ಸಂವಾದ (ಋಷಭ ಗೀತಾ)

12125001 ಯುಧಿಷ್ಠಿರ ಉವಾಚ|

12125001a ಶೀಲಂ ಪ್ರಧಾನಂ ಪುರುಷೇ ಕಥಿತಂ ತೇ ಪಿತಾಮಹ|

12125001c ಕಥಮಾಶಾ ಸಮುತ್ಪನ್ನಾ ಯಾ ಚ ಸಾ ತದ್ವದಸ್ವ ಮೇ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಪುರುಷನಿಗೆ ಶೀಲವೇ ಪ್ರಧಾನವೆಂದು ನೀನು ಹೇಳಿದ್ದಿಯೆ. ಆಶೆಯು ಹೇಗೆ ಉತ್ಪನ್ನವಾಯಿತು ಎನ್ನುವುದನ್ನು ನನಗೆ ಹೇಳು.

12125002a ಸಂಶಯೋ ಮೇ ಮಹಾನೇಷ ಸಮುತ್ಪನ್ನಃ ಪಿತಾಮಹ|

12125002c ಚೇತ್ತಾ ಚ ತಸ್ಯ ನಾನ್ಯೋಽಸ್ತಿ ತ್ವತ್ತಃ ಪರಪುರಂಜಯ||

ಪಿತಾಮಹ! ಪರಪುರಂಜಯ! ಆಶೆಯ ಉತ್ಪನ್ನದ ಕುರಿತು ನನಗೆ ಈ ಮಹಾ ಸಂಶಯವಿದೆ. ಇದನ್ನು ಪರಿಹರಿಸುವವನು ನೀನಲ್ಲದೇ ಅನ್ಯರು ಯಾರೂ ಇಲ್ಲ.

12125003a ಪಿತಾಮಹಾಶಾ ಮಹತೀ ಮಮಾಸೀದ್ಧಿ ಸುಯೋಧನೇ|

12125003c ಪ್ರಾಪ್ತೇ ಯುದ್ಧೇ ತು ಯದ್ಯುಕ್ತಂ ತತ್ಕರ್ತಾಯಮಿತಿ ಪ್ರಭೋ||

ಪಿತಾಮಹ! ಸುಯೋಧನನ ವಿಷಯದಲ್ಲಿ ನನಗೆ ಮಹತ್ತಾದ ಆಶೆ ಇದ್ದಿತ್ತು. ಪ್ರಭೋ! ಯುದ್ಧವು ಪ್ರಾರಂಭವಾದಾಗಲಾದರೂ ಅವನು ಯುಕ್ತವಾದ ಕಾರ್ಯವನ್ನು ಮಾಡುತ್ತಾನೆಂದು ಆಶಿಸಿದ್ದೆ.

12125004a ಸರ್ವಸ್ಯಾಶಾ ಸುಮಹತೀ ಪುರುಷಸ್ಯೋಪಜಾಯತೇ|

12125004c ತಸ್ಯಾಂ ವಿಹನ್ಯಮಾನಾಯಾಂ ದುಃಖೋ ಮೃತ್ಯುರಸಂಶಯಮ್||

ಪ್ರಾಯಶಃ ಎಲ್ಲ ಮನುಷ್ಯರ ಹೃದಯಗಳಲ್ಲಿಯೂ ಯಾವುದಾದರೊಂದು ದೊಡ್ಡ ಆಶೆಯು ಇದ್ದೇ ಇರುತ್ತದೆ. ಆಶೆಯು ಭಂಗವಾಯಿತೆಂದರೆ ಮಹಾದುಃಖವುಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮರಣವೂ ಸಂಭವಿಸಬಹುದು. ಇದರಲಿ ಸಂಶಯವಿಲ್ಲ.

12125005a ಸೋಽಹಂ ಹತಾಶೋ ದುರ್ಬುದ್ಧಿಃ ಕೃತಸ್ತೇನ ದುರಾತ್ಮನಾ|

12125005c ಧಾರ್ತರಾಷ್ಟ್ರೇಣ ರಾಜೇಂದ್ರ ಪಶ್ಯ ಮಂದಾತ್ಮತಾಂ ಮಮ||

ರಾಜೇಂದ್ರ! ದುರ್ಬುದ್ಧಿ ದುರಾತ್ಮಾ ಧಾರ್ತರಾಷ್ಟ್ರನು ಮಂದಾತ್ಮನಾದ ನನ್ನನ್ನು ಹತಾಶನಾಗಿ ಮಾಡಿಬಿಟ್ಟನು ನೋಡು!

12125006a ಆಶಾಂ ಮಹತ್ತರಾಂ ಮನ್ಯೇ ಪರ್ವತಾದಪಿ ಸದ್ರುಮಾತ್|

12125006c ಆಕಾಶಾದಪಿ ವಾ ರಾಜನ್ನಪ್ರಮೇಯೈವ ವಾ ಪುನಃ||

ಆಶೆಯೆನ್ನುವುದು ವೃಕ್ಷಗಳಿರುವ ಮಹಾ ಪರ್ವತದಂತೆ. ರಾಜನ್! ಆಕಾಶಕ್ಕಿಂತಲೂ ಎತ್ತರವಾದುದು. ಪುನಃ ಅದು ಅಪ್ರಮೇಯವಾದುದು.

12125007a ಏಷಾ ಚೈವ ಕುರುಶ್ರೇಷ್ಠ ದುರ್ವಿಚಿಂತ್ಯಾ ಸುದುರ್ಲಭಾ|

12125007c ದುರ್ಲಭತ್ವಾಚ್ಚ ಪಶ್ಯಾಮಿ ಕಿಮನ್ಯದ್ದುರ್ಲಭಂ ತತಃ||

ಕುರುಶ್ರೇಷ್ಠ! ಆಶೆಯು ಅಚಿಂತ್ಯವಾದುದು. ಪರಮ ದುರ್ಲಭವಾದುದು. ಅದನ್ನು ಜಯಿಸುವುದು ಬಹಳ ಕಷ್ಟ. ಆದುದರಿಂದಲೇ ಅದು ಬಹಳ ದೊಡ್ಡದಾಗಿ ಕಾಣುತ್ತದೆ. ಆಶೆಗಿಂತಲೂ ದುರ್ಲಭವೂ ಮಹತ್ತರವೂ ಆದುದು ಬೇರೆ ಯಾವುದಿದೆ?”

12125008 ಭೀಷ್ಮ ಉವಾಚ|

12125008a ಅತ್ರ ತೇ ವರ್ತಯಿಷ್ಯಾಮಿ ಯುಧಿಷ್ಠಿರ ನಿಬೋಧ ತತ್|

12125008c ಇತಿಹಾಸಂ ಸುಮಿತ್ರಸ್ಯ ನಿರ್ವೃತ್ತಮೃಷಭಸ್ಯ ಚ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಈ ವಿಷಯದಲ್ಲಿ ನಾನು ನಿನಗೆ ಸುಮಿತ್ರ ಮತ್ತು ಋಷಭರ ನಡುವೆ ನಡೆದ ಇತಿಹಾಸವನ್ನು ಹೇಳುತ್ತೇನೆ. ಅದನ್ನು ಕೇಳು.

12125009a ಸುಮಿತ್ರೋ ನಾಮ ರಾಜರ್ಷಿರ್ಹೈಹಯೋ ಮೃಗಯಾಂ ಗತಃ|

12125009c ಸಸಾರ ಸ ಮೃಗಂ ವಿದ್ಧ್ವಾ ಬಾಣೇನ ನತಪರ್ವಣಾ||

ಸುಮಿತ್ರ ಎಂಬ ಹೆಸರಿನ ಹೈಹಯ ರಾಜರ್ಷಿಯು ಬೇಟೆಗೆಂದು ಹೋಗಿ ನತಪರ್ವಣ ಬಾಣದಿಂದ ಒಂದು ಜಿಂಕೆಯನ್ನು ಹೊಡೆದು ಅದನ್ನು ಹಿಂಬಾಲಿಸಿ ಹೋದನು.

12125010a ಸ ಮೃಗೋ ಬಾಣಮಾದಾಯ ಯಯಾವಮಿತವಿಕ್ರಮಃ|

12125010c ಸ ಚ ರಾಜಾ ಬಲೀ ತೂರ್ಣಂ ಸಸಾರ ಮೃಗಮಂತಿಕಾತ್||

ಅಮಿತವಿಕ್ರಮಿ ಆ ಮೃಗವು ಬಾಣದೊಡನೆಯೇ ಮಹಾವೇಗದಿಂದ ಓಡಿ ಹೋಯಿತು. ಬಲಶಾಲೀ ರಾಜನೂ ಕೂಡ ಅದನ್ನು ಬಹಳ ಬೇಗ ಹಿಂಬಾಲಿಸಿ ಹೋದನು.

12125011a ತತೋ ನಿಮ್ನಂ ಸ್ಥಲಂ ಚೈವ ಸ ಮೃಗೋಽದ್ರವದಾಶುಗಃ|

12125011c ಮುಹೂರ್ತಮೇವ ರಾಜೇಂದ್ರ ಸಮೇನ ಸ ಪಥಾಗಮತ್||

ರಾಜೇಂದ್ರ! ಅತ್ಯಂತ ವೇಗವಾಗಿ ಓಡುತ್ತಿದ್ದ ಆ ಮೃಗವು ಕಣಿವೆಯಲ್ಲಿ ಓಡಿಹೋಯಿತು ಮತ್ತು ಪುನಃ ಅದು ಸ್ವಲ್ಪ ಹೊತ್ತಿನಲ್ಲಿಯೇ ಸಮವಾಗಿದ್ದ ಮಾರ್ಗವನ್ನು ಹಿಡಿದು ಓಡತೊಡಗಿತು.

12125012a ತತಃ ಸ ರಾಜಾ ತಾರುಣ್ಯಾದೌರಸೇನ ಬಲೇನ ಚ|

12125012c ಸಸಾರ ಬಾಣಾಸನಭೃತ್ಸಖಡ್ಗೋ ಹಂಸವತ್ತದಾ||

ತಾರುಣ್ಯ, ಎದೆಕಿಚ್ಚು ಮತ್ತು ಬಲದಿಂದ ಯುಕ್ತನಾದ ರಾಜನು ಕೂಡ ಕವಚವನ್ನು ಧರಿಸಿ ಧನುರ್ಬಾಣಗಳನ್ನೂ ಖಡ್ಗವನ್ನೂ ಹಿಡಿದು ಆ ಮೃಗವನ್ನು ಹಿಂಬಾಲಿಸಿ ಹೋದನು.

12125013a ತೀರ್ತ್ವಾ ನದಾನ್ನದೀಶ್ಚೈವ ಪಲ್ವಲಾನಿ ವನಾನಿ ಚ|

12125013c ಅತಿಕ್ರಮ್ಯಾಭ್ಯತಿಕ್ರಮ್ಯ ಸಸಾರೈವ ವನೇ ಚರನ್||

ವನದಲ್ಲಿ ಚರಿಸುತ್ತಾ ಅದು ನದನದಿಗಳನ್ನೂ, ಹೊಂಡಗಳನ್ನೂ, ವನಗಳನ್ನೂ ದಾಟಿ ಮುಂದೆ ಮುಂದೆ ಓಡುತ್ತಿತ್ತು.

12125014a ಸ ತು ಕಾಮಾನ್ಮೃಗೋ ರಾಜನ್ನಾಸಾದ್ಯಾಸಾದ್ಯ ತಂ ನೃಪಮ್|

12125014c ಪುನರಭ್ಯೇತಿ ಜವನೋ ಜವೇನ ಮಹತಾ ತತಃ||

ರಾಜನ್! ಆ ಜಿಂಕೆಯು ಬೇಕೆಂದೇ ರಾಜನು ತನ್ನ ಹತ್ತಿರಕ್ಕೆ ಬರುವವರೆಗೆ ನಿಂತಿದ್ದು ಅವನು ಬರುತ್ತಾನೋ ಎನ್ನುವುದರೊಳಗೆ ವೇಗವಾಗಿ ಓಡಿ ಹೋಗುತ್ತಿತ್ತು.

12125015a ಸ ತಸ್ಯ ಬಾಣೈರ್ಬಹುಭಿಃ ಸಮಭ್ಯಸ್ತೋ ವನೇಚರಃ|

12125015c ಪ್ರಕ್ರೀಡನ್ನಿವ ರಾಜೇಂದ್ರ ಪುನರಭ್ಯೇತಿ ಚಾಂತಿಕಮ್||

ರಾಜೇಂದ್ರ! ಅವನ ಬಾಣಗಳಿಂದ ಬಹಳವಾಗಿ ಗಾಯಗೊಂಡಿದ್ದ ಆ ವನಚರವು ಆಡುತ್ತಿರುವುದೋ ಎನ್ನುವಂತೆ ಪುನಃ ಅವನ ಸಮೀಪವಾಗುತ್ತಿತ್ತು.

12125016a ಪುನಶ್ಚ ಜವಮಾಸ್ಥಾಯ ಜವನೋ ಮೃಗಯೂಥಪಃ|

12125016c ಅತೀತ್ಯಾತೀತ್ಯ ರಾಜೇಂದ್ರ ಪುನರಭ್ಯೇತಿ ಚಾಂತಿಕಮ್||

ರಾಜೇಂದ್ರ! ಆ ಮೃಗಯೂಥಪ[1]ವು ವೇಗದಿಂದ ನದನದಿಗಳನ್ನು ದಾಟಿ ಬಹಳ ದೂರ ಹೋಗುತ್ತಿತ್ತು.

12125017a ತಸ್ಯ ಮರ್ಮಚ್ಚಿದಂ ಘೋರಂ ಸುಮಿತ್ರೋಽಮಿತ್ರಕರ್ಶನಃ|

12125017c ಸಮಾದಾಯ ಶರಶ್ರೇಷ್ಠಂ ಕಾರ್ಮುಕಾನ್ನಿರವಾಸೃಜತ್||

ಮೃಗವು ಹತ್ತಿರದಲ್ಲಿದೆಯೆಂದು ಗಮನಿಸಿದ ಅಮಿತ್ರಕರ್ಶನ ಸುಮಿತ್ರನು ಮರ್ಮವನ್ನು ಭೇದಿಸುವ ಘೋರವಾದ ಶ್ರೇಷ್ಠವನ್ನು ಭತ್ತಳಿಕೆಯಿಂದ ತೆಗೆದು ಹೂಡಿದನು.

12125018a ತತೋ ಗವ್ಯೂತಿಮಾತ್ರೇಣ ಮೃಗಯೂಥಪಯೂಥಪಃ|

12125018c ತಸ್ಯ ಬಾಣಪಥಂ ತ್ಯಕ್ತ್ವಾ ತಸ್ಥಿವಾನ್ ಪ್ರಹಸನ್ನಿವ||

ಆಗ ಆ ಮೃಗಯೂಥಪಯೂಥಪನು ಬಾಣಪಥವನ್ನು ಬಿಟ್ಟು ಒಂದು ಗಾವುದ ದೂರ ನಗುತ್ತಿರುವುದೋ ಎನ್ನುವಂತೆ ನಿಂತುಕೊಂಡಿತು.

12125019a ತಸ್ಮಿನ್ನಿಪತಿತೇ ಬಾಣೇ ಭೂಮೌ ಪ್ರಜ್ವಲಿತೇ ತತಃ|

12125019c ಪ್ರವಿವೇಶ ಮಹಾರಣ್ಯಂ ಮೃಗೋ ರಾಜಾಪ್ಯಥಾದ್ರವತ್||

ಆ ಪ್ರಜ್ವಲಿತ ಬಾಣವು ಭೂಮಿಯ ಮೇಲೆ ಬೀಳಲು ಮೃಗವು ಮಹಾರಣ್ಯವನ್ನು ಪ್ರವೇಶಿಸಿತು. ರಾಜನೂ ಅದನ್ನು ಹಿಂಬಾಲಿಸಿ ಹೋದನು.

12125020a ಪ್ರವಿಶ್ಯ ತು ಮಹಾರಣ್ಯಂ ತಾಪಸಾನಾಮಥಾಶ್ರಮಮ್|

12125020c ಆಸಸಾದ ತತೋ ರಾಜಾ ಶ್ರಾಂತಶ್ಚೋಪಾವಿಶತ್ಪುನಃ||

ತಾಪಸರ ಆಶ್ರಮವಾಗಿದ್ದ ಆ ಮಹಾರಣ್ಯವನ್ನು ಪ್ರವೇಶಿಸಿ ಬಳಲಿದ್ದ ರಾಜನು ವಿಶ್ರಾಂತಿಗಾಗಿ ಅಲ್ಲಿಯೇ ಕುಳಿತುಕೊಂಡನು.

12125021a ತಂ ಕಾರ್ಮುಕಧರಂ ದೃಷ್ಟ್ವಾ ಶ್ರಮಾರ್ತಂ ಕ್ಷುಧಿತಂ ತದಾ|

12125021c ಸಮೇತ್ಯ ಋಷಯಸ್ತಸ್ಮಿನ್ ಪೂಜಾಂ ಚಕ್ರುರ್ಯಥಾವಿಧಿ||

ಬಳಲಿದ್ದ ಮತ್ತು ಹಸಿದಿದ್ದ ಆ ಕಾರ್ಮುಕಧರನನ್ನು ನೋಡಿ ಋಷಿಗಳು ಒಂದಾಗಿ ಯಥಾವಿಧಿಯಾಗಿ ಅವನ ಪೂಜೆಗೈದರು.

12125022a ಋಷಯೋ ರಾಜಶಾರ್ದೂಲಮಪೃಚ್ಚನ್ ಸ್ವಂ ಪ್ರಯೋಜನಮ್|

12125022c ಕೇನ ಭದ್ರಮುಖಾರ್ಥೇನ ಸಂಪ್ರಾಪ್ತೋಽಸಿ ತಪೋವನಮ್||

12125023a ಪದಾತಿರ್ಬದ್ಧನಿಸ್ತ್ರಿಂಶೋ ಧನ್ವೀ ಬಾಣೀ ನರೇಶ್ವರ|

ಋಷಿಗಳು ಆ ರಾಜಶಾರ್ದೂಲನನ್ನು ಬಂದ ಕಾರಣವನ್ನು ಕೇಳಿದರು: “ಭದ್ರ! ನರೇಶ್ವರ! ಯಾವ ಕಾರಣಕ್ಕಾಗಿ ಧನುರ್ಬಾಣಗಳನ್ನು ಹಿಡಿದು ಖಡ್ಗವನ್ನು ಸೊಂಟಕ್ಕೆ ಧರಿಸಿ ಈ ತಪೋವನವನ್ನು ತಲುಪಿರುವೆ?

12125023c ಏತದಿಚ್ಚಾಮ ವಿಜ್ಞಾತುಂ ಕುತಃ ಪ್ರಾಪ್ತೋಽಸಿ ಮಾನದ|

12125023e ಕಸ್ಮಿನ್ಕುಲೇ ಹಿ ಜಾತಸ್ತ್ವಂ ಕಿಂನಾಮಾಸಿ ಬ್ರವೀಹಿ ನಃ||

ಮಾನದ! ನೀನು ಎಲ್ಲಿಂದ ಬಂದಿದ್ದೀಯೆ ಎಂದು ತಿಳಿಯ ಬಯಸುತ್ತೇವೆ. ನೀನು ಯಾವ ಕುಲದಲ್ಲಿ ಜನಿಸಿದ್ದೀಯೆ ಮತ್ತು ನಿನ್ನ ಹೆಸರೇನು ಎನ್ನುವುದನ್ನು ಹೇಳು.”

12125024a ತತಃ ಸ ರಾಜಾ ಸರ್ವೇಭ್ಯೋ ದ್ವಿಜೇಭ್ಯಃ ಪುರುಷರ್ಷಭ|

12125024c ಆಚಖ್ಯೌ ತದ್ಯಥಾನ್ಯಾಯಂ ಪರಿಚರ್ಯಾಂ ಚ ಭಾರತ||

ಪುರುಷರ್ಷಭ! ಭಾರತ! ಆಗ ಆ ರಾಜನು ಸರ್ವ ದಿಜರಿಗೂ ಯಥಾನ್ಯಾಯವಾಗಿ ತನ್ನ ಪರಿಚಯವನ್ನು ಹೇಳಿಕೊಂಡನು.

12125025a ಹೈಹಯಾನಾಂ ಕುಲೇ ಜಾತಃ ಸುಮಿತ್ರೋ ಮಿತ್ರನಂದನಃ|

12125025c ಚರಾಮಿ ಮೃಗಯೂಥಾನಿ ನಿಘ್ನನ್ಬಾಣೈಃ ಸಹಸ್ರಶಃ|

12125025e ಬಲೇನ ಮಹತಾ ಗುಪ್ತಃ ಸಾಮಾತ್ಯಃ ಸಾವರೋಧನಃ||

“ಹೈಹಯರ ಕುಲದಲ್ಲಿ ಹುಟ್ಟಿದ್ದೇನೆ. ಮಿತ್ರನಂದನನಾದ ಸುಮಿತ್ರನು ನಾನು. ಸಹಸ್ರಾರು ಬಾಣಗಳಿಂದ ಮೃಗಗಳ ಹಿಂಡುಗಳನ್ನು ಸಂಹರಿಸುತ್ತಾ ಮಹಾ ಸೇನೆಯಿಂದ ರಕ್ಷಿತನಾಗಿ ಅಮಾತ್ಯರು ಮತ್ತು ಅಂತಃಪುರದ ಸ್ತ್ರೀಯರೊಡನೆ ಬೇಟೆಗೆಂದು ಬಂದಿದ್ದೇನೆ.

12125026a ಮೃಗಸ್ತು ವಿದ್ಧೋ ಬಾಣೇನ ಮಯಾ ಸರತಿ ಶಲ್ಯವಾನ್|

12125026c ತಂ ದ್ರವಂತಮನು ಪ್ರಾಪ್ತೋ ವನಮೇತದ್ಯದೃಚ್ಚಯಾ|

12125026e ಭವತ್ಸಕಾಶೇ ನಷ್ಟಶ್ರೀರ್ಹತಾಶಃ ಶ್ರಮಕರ್ಶಿತಃ||

ಒಂದು ಮೃಗವು ನನ್ನ ಬಾಣದಿಂದ ಗಾಯಗೊಂಡು ಬಾಣದೊಂದಿಗೆ ಓಡಿ ಹೋಯಿತು. ಓಡುತ್ತಿದ್ದ ಅದನ್ನು ಹಿಂಬಾಲಿಸಿ ಬಂದು, ರಾಜ್ಯಶ್ರೀಯನ್ನು ಕಳೆದುಕೊಂಡು ಹತಾಶನಾಗಿ ಬಳಲಿ ನಿಮ್ಮ ಈ ವನವನ್ನು ತಲುಪಿದ್ದೇನೆ.

12125027a ಕಿಂ ನು ದುಃಖಮತೋಽನ್ಯದ್ವೈ ಯದಹಂ ಶ್ರಮಕರ್ಶಿತಃ|

12125027c ಭವತಾಮಾಶ್ರಮಂ ಪ್ರಾಪ್ತೋ ಹತಾಶೋ ನಷ್ಟಲಕ್ಷಣಃ||

ನಿಮ್ಮ ಈ ಆಶ್ರಮಕ್ಕೆ ಇಂದು ಶ್ರಮಕರ್ಶಿತನಾಗಿ ಹತಾಶನೂ ರಾಜನ ಲಕ್ಷಣಗಳನ್ನು ಕಳೆದುಕೊಂಡೂ ಬಂದಿರುವೆನೆಂದರೆ ಇದಕ್ಕಿಂತಲೂ ದುಃಖಮಯವಾದುದು ನನಗೆ ಬೇರೇನಿದೆ?

12125028a ನ ರಾಜಲಕ್ಷಣತ್ಯಾಗೋ ನ ಪುರಸ್ಯ ತಪೋಧನಾಃ|

12125028c ದುಃಖಂ ಕರೋತಿ ತತ್ತೀವ್ರಂ ಯಥಾಶಾ ವಿಹತಾ ಮಮ||

ತಪೋಧನರೇ! ರಾಜಲಕ್ಷಣದ ತ್ಯಾಗವಾಗಲೀ, ಪಟ್ಟಣದ ತ್ಯಾಗವಾಗಲೀ ನನಗೀಗ ಅಷ್ಟೊಂದು ದುಃಖವನ್ನಿಟ್ಟುಮಾಡುತ್ತಿಲ್ಲ. ಆದರೆ ನನ್ನ ಭಗ್ನವಾದ ಆಶೆಯು ನನಗೆ ಅತಿ ತೀವ್ರವಾದ ದುಃಖವನ್ನುಂಟುಮಾಡಿದೆ.

12125029a ಹಿಮವಾನ್ವಾ ಮಹಾಶೈಲಃ ಸಮುದ್ರೋ ವಾ ಮಹೋದಧಿಃ|

12125029c ಮಹತ್ತ್ವಾನ್ನಾನ್ವಪದ್ಯೇತಾಂ ರೋದಸ್ಯೋರಂತರಂ ಯಥಾ|

12125029e ಆಶಾಯಾಸ್ತಪಸಿ ಶ್ರೇಷ್ಠಾಸ್ತಥಾ ನಾಂತಮಹಂ ಗತಃ||

12125030a ಭವತಾಂ ವಿದಿತಂ ಸರ್ವಂ ಸರ್ವಜ್ಞಾ ಹಿ ತಪೋಧನಾಃ|

ಮಹಾಶೈಲ ಹಿಮಾಲಯವೂ, ಮಹೋದಧಿ ಸಮುದ್ರವೂ, ಎತ್ತರ ಮತ್ತು ಮಹತ್ತರದ ದೃಷ್ಟಿಗಳಲ್ಲಿ ಸರ್ವಥಾ ಆಸೆಗೆ ಸಮನಾದವುಗಳಲ್ಲ. ಅವುಗಳಿಗಿಂತಲೂ ಆಸೆಯೇ ಹೆಚ್ಚು ದೊಡ್ಡದು. ಹಾಗೆಯೇ ಆಕಾಶಪ್ರದೇಶವೂ ಆಶೆಗಿಂತ ದೊಡ್ಡದಲ್ಲ. ತಪಃಶ್ರೇಷ್ಠರೇ! ಆದುದರಿಂದ ಆಶೆಯ ಕೊನೆಯನ್ನು ನಾನು ಮುಟ್ಟಿಲ್ಲ. ತಪೋಧನರು ಸರ್ವಜ್ಞರೇ ಆಗಿರುತ್ತಾರೆ. ನಿಮಗೆ ಎಲ್ಲವೂ ತಿಳಿದಿದೆ.

12125030c ಭವಂತಃ ಸುಮಹಾಭಾಗಾಸ್ತಸ್ಮಾತ್ ಪ್ರಕ್ಷ್ಯಾಮಿ ಸಂಶಯಮ್||

12125031a ಆಶಾವಾನ್ಪುರುಷೋ ಯಃ ಸ್ಯಾದಂತರಿಕ್ಷಮಥಾಪಿ ವಾ|

12125031c ಕಿಂ ನು ಜ್ಯಾಯಸ್ತರಂ ಲೋಕೇ ಮಹತ್ತ್ವಾತ್ ಪ್ರತಿಭಾತಿ ವಃ|

12125031e ಏತದಿಚ್ಚಾಮಿ ತತ್ತ್ವೇನ ಶ್ರೋತುಂ ಕಿಮಿಹ ದುರ್ಲಭಮ್||

ನೀವು ಸುಮಹಾಭಾಗರೆಂದು ನಿಮ್ಮಲ್ಲಿ ನನ್ನ ಈ ಸಂಶಯವನ್ನು ಕೇಳುತ್ತಿದ್ದೇನೆ. ಪುರುಷನ ಆಶೆ ಮತ್ತು ಅಂತರಿಕ್ಷ ಇವುಗಳಲ್ಲಿ ಯಾವುದು ಲೋಕದಲ್ಲಿ ಮಹತ್ತರವಾದುದು ಎಂದು ನಿಮಗೆ ಹೊಳೆಯುತ್ತದೆ? ಇದನ್ನು ತತ್ತ್ವತಃ ಕೇಳಲು ಬಯಸುತ್ತೇನೆ. ಇಲ್ಲಿ ದುರ್ಲಭವಾದುದು ಯಾವುದಿದೆ?

12125032a ಯದಿ ಗುಹ್ಯಂ ತಪೋನಿತ್ಯಾ ನ ವೋ ಬ್ರೂತೇಹ ಮಾಚಿರಮ್|

12125032c ನ ಹಿ ಗುಹ್ಯಮತಃ ಶ್ರೋತುಮಿಚ್ಚಾಮಿ ದ್ವಿಜಪುಂಗವಾಃ||

ತಪೋನಿತ್ಯರೇ! ಒಂದುವೇಳೆ ಈ ವಿಷಯವು ಗುಹ್ಯವಲ್ಲದಿದ್ದರೆ ಬೇಗನೇ ಅದನ್ನು ನನಗೆ ಹೇಳಿ. ದ್ವಿಜಪುಂಗವರೇ! ಗುಹ್ಯವಾದ ವಿಷಯಗಳನ್ನು ನಿಮ್ಮಿಂದ ಕೇಳಲು ಇಚ್ಛಿಸುವುದಿಲ್ಲ.

12125033a ಭವತ್ತಪೋವಿಘಾತೋ ವಾ ಯೇನ ಸ್ಯಾದ್ವಿರಮೇ ತತಃ|

12125033c ಯದಿ ವಾಸ್ತಿ ಕಥಾಯೋಗೋ ಯೋಽಯಂ ಪ್ರಶ್ನೋ ಮಯೇರಿತಃ||

ನಿಮ್ಮ ತಪಸ್ಸಿಗೆ ನನ್ನಿಂದ ತೊಡಕುಂಟಾಗುತ್ತದೆಯಾದರೆ ನಾನು ವಿರಮಿಸುತ್ತೇನೆ. ನಿಮ್ಮೊಡನೆ ಮಾತನಾಡಲು ಅವಕಾಶವಿದ್ದರೆ ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿ.

12125034a ಏತತ್ಕಾರಣಸಾಮಗ್ರ್ಯಂ ಶ್ರೋತುಮಿಚ್ಚಾಮಿ ತತ್ತ್ವತಃ|

12125034c ಭವಂತೋ ಹಿ ತಪೋನಿತ್ಯಾ ಬ್ರೂಯುರೇತತ್ಸಮಾಹಿತಾಃ||

ಆಶೆಯ ಕಾರಣ ಮತ್ತು ಸಾಮಾಗ್ರಿಗಳನ್ನು ತತ್ವತಃ ಕೇಳಲು ಬಯಸುತ್ತೇನೆ. ನೀವೆಲ್ಲರೂ ತಪೋನಿತ್ಯರಾಗಿದ್ದೀರಿ. ನೀವೆಲ್ಲರೂ ಸೇರಿ ನನಗೆ ಹೇಳಿರಿ.””

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಭಗೀತಾಸು ಪಂಚವಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಭಗೀತಾ ಎನ್ನುವ ನೂರಾಇಪ್ಪತ್ತೈದನೇ ಅಧ್ಯಾಯವು.

Periwinkle flowers line stock image. Image of beauty - 40893095

[1] ಹಿಂಡಿನ ನಾಯಕ.

Comments are closed.