Shanti Parva: Chapter 105

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೫

ಕಾಲಕವೃಕ್ಷೀಯ

ರಾಜ್ಯದಿಂದಲೂ, ಸೈನಿಕರಿಂದಲೂ, ಸ್ವಜನರಿಂದಲೂ ವಂಚಿತನಾದ ಕ್ಷೇಮದರ್ಶಿಗೆ ಕಾಲಕವೃಕ್ಷೀಯನ ವೈರಾಗ್ಯೋಪದೇಶ (1-53).

12105001 ಯುಧಿಷ್ಠಿರ ಉವಾಚ|

12105001a ಧಾರ್ಮಿಕೋಽರ್ಥಾನಸಂಪ್ರಾಪ್ಯ ರಾಜಾಮಾತ್ಯೈಃ ಪ್ರಬಾಧಿತಃ|

12105001c ಚ್ಯುತಃ ಕೋಶಾಚ್ಚ ದಂಡಾಚ್ಚ ಸುಖಮಿಚ್ಚನ್ಕಥಂ ಚರೇತ್||

ಯುಧಿಷ್ಠಿರನು ಹೇಳಿದನು: “ಧಾರ್ಮಿಕನಾಗಿದ್ದರೂ ಸಂಪತ್ತನ್ನು ಕಳೆದುಕೊಂಡ, ಆಮಾತ್ಯರಿಂದ ಬಾಧಿತನಾದ, ಕೋಶ-ಸೈನ್ಯಗಳನ್ನು ಕಳೆದುಕೊಂಡ ರಾಜನು ಸುಖವನ್ನು ಬಯಸಿ ಏನು ಮಾಡಬೇಕು?”

12105002 ಭೀಷ್ಮ ಉವಾಚ|

12105002a ಅತ್ರಾಯಂ ಕ್ಷೇಮದರ್ಶೀಯಮಿತಿಹಾಸೋಽನುಗೀಯತೇ|

12105002c ತತ್ತೇಽಹಂ ಸಂಪ್ರವಕ್ಷ್ಯಾಮಿ ತನ್ನಿಬೋಧ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಕ್ಷೇಮದರ್ಶೀಯ ಎಂಬ ಇತಿಹಾಸವನ್ನು ಹೇಳುತ್ತಾರೆ. ಅದನ್ನೇ ನಾನು ಹೇಳುತ್ತೇನೆ. ಕೇಳು.

12105003a ಕ್ಷೇಮದರ್ಶಂ ನೃಪಸುತಂ ಯತ್ರ ಕ್ಷೀಣಬಲಂ ಪುರಾ|

12105003c ಮುನಿಃ ಕಾಲಕವೃಕ್ಷೀಯ ಆಜಗಾಮೇತಿ ನಃ ಶ್ರುತಮ್|

12105003e ತಂ ಪಪ್ರಚ್ಚೋಪಸಂಗೃಹ್ಯ ಕೃಚ್ಚ್ರಾಮಾಪದಮಾಸ್ಥಿತಃ||

ಹಿಂದೆ ನೃಪಸುತ ಕ್ಷೇಮದರ್ಶೀ ಎನ್ನುವವನು ಕ್ಷೀಣಬಲನಾಗಿದ್ದನು. ಮಹಾ ಆಪತ್ತಿನಲ್ಲಿ ಸಿಲುಕಿದ್ದ ಅವನು ಮುನಿ ಕಾಲಕವೃಕ್ಷೀಯನ ಬಳಿ ಹೋಗಿ ಸಾಷ್ಟಾಂಗ ಪ್ರಣಾಮ ಮಾಡಿ ಅವನನ್ನು ಹೀಗೆ ಪ್ರಶ್ನಿಸಿದನು ಎಂದು ಕೇಳಿದ್ದೇವೆ.

12105004a ಅರ್ಥೇಷು ಭಾಗೀ ಪುರುಷ ಈಹಮಾನಃ ಪುನಃ ಪುನಃ|

12105004c ಅಲಬ್ಧ್ವಾ ಮದ್ವಿಧೋ ರಾಜ್ಯಂ ಬ್ರಹ್ಮನ್ಕಿಂ ಕರ್ತುಮರ್ಹತಿ||

“ಬ್ರಹ್ಮನ್! ಪುರುಷನು ಅರ್ಥಕ್ಕೆ ಭಾಗಿಯಾಗಿದ್ದಾನೆ. ಆದರೆ ಪುನಃ ಪುನಃ ಅರ್ಥವನ್ನು ಅಪೇಕ್ಷಿಸುತ್ತಿದ್ದರೂ ಅರ್ಥವನ್ನಾಗಲೀ ರಾಜ್ಯವನ್ನಾಗಲೀ ಪಡೆದುಕೊಳ್ಳಲು ಸಾಧ್ಯವಾಗದೇ ಇದ್ದ ನನ್ನಂಥವನು ಏನು ಮಾಡಬೇಕು?

12105005a ಅನ್ಯತ್ರ ಮರಣಾತ್ ಸ್ತೇಯಾದನ್ಯತ್ರ[1] ಪರಸಂಶ್ರಯಾತ್|

12105005c ಕ್ಷುದ್ರಾದನ್ಯತ್ರ ಚಾಚಾರಾತ್ತನ್ಮಮಾಚಕ್ಷ್ವ ಸತ್ತಮ||

ಸತ್ತಮ! ಆತ್ಮಹತ್ಯೆ, ಕಳ್ಳತನ, ಪರಾಶ್ರಯ ಮತ್ತು ಕ್ಷುದ್ರ ವ್ಯವಹಾರಗಳನ್ನು ಬಿಟ್ಟು ರಾಜ್ಯ-ಧನ ಸಂಪಾದನೆಗಳಿಗೆ ಬೇರೆ ಯಾವುದಾದರೂ ಉಪಾಯವಿದ್ದರೆ ಅದನ್ನು ನನಗೆ ತಿಳಿಸು.

12105006a ವ್ಯಾಧಿನಾ ಚಾಭಿಪನ್ನಸ್ಯ ಮಾನಸೇನೇತರೇಣ ವಾ|

12105006c ಬಹುಶ್ರುತಃ ಕೃತಪ್ರಜ್ಞಸ್ತ್ವದ್ವಿಧಃ ಶರಣಂ ಭವೇತ್||

ಮಾನಸಿಕ ಮತ್ತು ಇತರ ವ್ಯಾಧಿಗಳಿಂದ ಪೀಡಿತನಾಗಿರುವ ನನಗೆ ಬಹುಶ್ರುತನೂ ಕೃತಪ್ರಜ್ಞನೂ ಆಗಿರುವ ನಿನ್ನಂಥವರೇ ಶರಣ್ಯನಾಗಬೇಕು.

12105007a ನಿರ್ವಿದ್ಯ ಹಿ ನರಃ ಕಾಮಾನ್ನಿಯಮ್ಯ[2] ಸುಖಮೇಧತೇ|

12105007c ತ್ಯಕ್ತ್ವಾ ಪ್ರೀತಿಂ ಚ ಶೋಕಂ ಚ ಲಬ್ಧ್ವಾಪ್ರೀತಿಮಯಂ ವಸು||

ಕಾಮಭೋಗಗಳಿಂದ ವೈರಾಗ್ಯವನ್ನು ಹೊಂದಿ ವಿರಕ್ತನಾದ ಮನುಷ್ಯನು ಪ್ರೀತಿ-ಶೋಕಗಳೆರಡನ್ನೂ ತ್ಯಜಿಸಿ ಜ್ಞಾನಮಯ ಐಶ್ವರ್ಯವನ್ನು ಪಡೆದುಕೊಂಡು ಸುಖಿಯಾಗುತ್ತಾನೆ.

12105008a ಸುಖಮರ್ಥಾಶ್ರಯಂ ಯೇಷಾಮನುಶೋಚಾಮಿ ತಾನಹಮ್|

12105008c ಮಮ ಹ್ಯರ್ಥಾಃ ಸುಬಹವೋ ನಷ್ಟಾಃ ಸ್ವಪ್ನ ಇವಾಗತಾಃ||

ಸುಖವು ಧನವನ್ನೇ ಆಶ್ರಯಿಸಿದೆಯೆಂದು ಭಾವಿಸಿರುವವವರ ವಿಷಯದಲ್ಲಿ ನನಗೆ ಅನುತಾಪವಿದೆ. ನನ್ನಲ್ಲಿದ್ದ ಅಪಾರ್ಯ ಐಶ್ವರ್ಯ-ಸಂಪತ್ತು ಸ್ವಪ್ನದಲ್ಲಿ ಕಂಡ ಸಂಪತ್ತಿನಂತೆ ನಷ್ಟವಾಗಿ ಹೋದವು.

12105009a ದುಷ್ಕರಂ ಬತ ಕುರ್ವಂತಿ ಮಹತೋಽರ್ಥಾಂಸ್ತ್ಯಜಂತಿ ಯೇ|

12105009c ವಯಂ ತ್ವೇನಾನ್ಪರಿತ್ಯಕ್ತುಮಸತೋಽಪಿ ನ ಶಕ್ನುಮಃ||

ತಮ್ಮಲ್ಲಿರುವ ಮಹಾಸಂಪತ್ತನ್ನು ತ್ಯಜಿಸುವವರು ನಿಶ್ಚಯವಾಗಿಯೂ ಅತ್ಯಂತ ದುಷ್ಕರಕಾರ್ಯವನ್ನೇ ಮಾಡುವವರು. ನನ್ನಲ್ಲಿ ಈಗ ಧನದ ಲೇಶವೂ ಉಳಿದಿಲ್ಲ. ಆದರೂ ಧನದ ಮೇಲಿನ ಮೋಹವು ಮಾತ್ರ ನನ್ನನ್ನು ಬಿಟ್ಟು ಹೋಗಿಲ್ಲ. ಧನವನ್ನು ತ್ಯಾಗಮಾಡಲೂ ನಾನು ಶಕ್ಯನಾಗಿಲ್ಲ.

12105010a ಇಮಾಮವಸ್ಥಾಂ ಸಂಪ್ರಾಪ್ತಂ ದೀನಮಾರ್ತಂ ಶ್ರಿಯಶ್ಚ್ಯುತಮ್|

12105010c ಯದನ್ಯತ್ಸುಖಮಸ್ತೀಹ ತದ್ಬ್ರಹ್ಮನ್ನನುಶಾಧಿ ಮಾಮ್||

ಬ್ರಹ್ಮನ್! ಸಂಪತ್ತಿನಿಂದ ಚ್ಯುತನಾಗಿ ಈ ಅವಸ್ಥೆಯನ್ನು ಪಡೆದು ನಾನು ದೀನನೂ ಆರ್ತನೂ ಆಗಿದ್ದೇನೆ. ಅನ್ಯ ರೀತಿಯಲ್ಲಿ ಸುಖವು ದೊರಕುವುದಿದ್ದರೆ ಅದನ್ನು ನನಗೆ ಉಪದೇಶಿಸು!”

12105011a ಕೌಸಲ್ಯೇನೈವಮುಕ್ತಸ್ತು ರಾಜಪುತ್ರೇಣ ಧೀಮತಾ|

12105011c ಮುನಿಃ ಕಾಲಕವೃಕ್ಷೀಯಃ ಪ್ರತ್ಯುವಾಚ ಮಹಾದ್ಯುತಿಃ||

ಧೀಮತ ಕೌಸಲ್ಯ ರಾಜಪುತ್ರನು ಹೀಗೆ ಹೇಳಲು ಮಹಾದ್ಯುತಿ ಮುನಿ ಕಾಲಕವೃಕ್ಷೀಯನು ಉತ್ತರಿಸಿದನು:

12105012a ಪುರಸ್ತಾದೇವ ತೇ ಬುದ್ಧಿರಿಯಂ ಕಾರ್ಯಾ ವಿಜಾನತಃ|

12105012c ಅನಿತ್ಯಂ ಸರ್ವಮೇವೇದಮಹಂ ಚ ಮಮ ಚಾಸ್ತಿ ಯತ್||

“ನಿನ್ನ ಈ ಬುದ್ಧಿಯು ಮೊದಲೇ “ಇವೆಲ್ಲವೂ ಅನಿತ್ಯವಾದವು ಮತ್ತು ಇವುಗಳಲ್ಲಿ ನನ್ನದು ಎನ್ನುವುದು ಯಾವುದೂ ಇಲ್ಲ” ಎನ್ನುವ ವಿಷಯವನ್ನು ತಿಳಿದುಕೊಳ್ಳಬೇಕಾಗಿತ್ತು.

12105013a ಯತ್ಕಿಂಚಿನ್ಮನ್ಯಸೇಽಸ್ತೀತಿ ಸರ್ವಂ ನಾಸ್ತೀತಿ ವಿದ್ಧಿ ತತ್|

12105013c ಏವಂ ನ ವ್ಯಥತೇ ಪ್ರಾಜ್ಞಃ ಕೃಚ್ಚ್ರಾಮಪ್ಯಾಪದಂ ಗತಃ||

ಯಾವುದನ್ನು ನೀನು ಇದೆ ಎಂದು ತಿಳಿದುಕೊಂಡಿರುವೆಯೋ ಅವು ಎಲ್ಲವೂ ಇಲ್ಲ ಎಂದು ತಿಳಿದುಕೋ. ಹೀಗೆ ತಿಳಿದುಕೊಂಡಿರುವವನು ಕಷ್ಟತಮ ಆಪತ್ತಿನಲ್ಲಿ ಸಿಕ್ಕಿಕೊಂಡರೂ ವ್ಯಥಿತನಾಗುವುದಿಲ್ಲ.

12105014a ಯದ್ಧಿ ಭೂತಂ ಭವಿಷ್ಯಚ್ಚ ಧ್ರುವಂ ತನ್ನ ಭವಿಷ್ಯತಿ|

12105014c ಏವಂ ವಿದಿತವೇದ್ಯಸ್ತ್ವಮಧರ್ಮೇಭ್ಯಃ ಪ್ರಮೋಕ್ಷ್ಯಸೇ||

ಹಿಂದೆ ಇದ್ದುದು ಈಗ ಇಲ್ಲ; ಮುಂದೆ ಆಗುವುದೂ ಯಾವುದೂ ಇರುವುದಿಲ್ಲ ಎಂದು ತಿಳಿದುಕೊಂಡಿರಬೇಕಾದುದನ್ನು ತಿಳಿದುಕೊಂಡರೆ ನೀನು ಎಲ್ಲ ವಿಧದ ಅಧರ್ಮಗಳಿಂದಲೂ ಮುಕ್ತನಾಗುವೆ.

12105015a ಯಚ್ಚ ಪೂರ್ವೇ ಸಮಾಹಾರೇ ಯಚ್ಚ ಪೂರ್ವತರೇ ಪರೇ|

12105015c ಸರ್ವಂ ತನ್ನಾಸ್ತಿ ತಚ್ಚೈವ ತಜ್ಞಾತ್ವಾ ಕೋಽನುಸಂಜ್ವರೇತ್||

ಹಿಂದೆ ನಡೆದುಹೋದುದು, ಪರಂಪರಾಗತವಾಗಿ ಬಂದುದು ಎಲ್ಲವೂ ಈಗ ಇಲ್ಲ ಎಂದು ತಿಳಿದುಕೊಂಡವ ಯಾರು ತಾನೇ ಇಂದು ಇಲ್ಲದಿರುವುದಕ್ಕೆ ಚಿಂತಿಸುತ್ತಾನೆ?

12105016a ಭೂತ್ವಾ ಚ ನ ಭವತ್ಯೇತದಭೂತ್ವಾ ಚ ಭವತ್ಯಪಿ|

12105016c ಶೋಕೇ ನ ಹ್ಯಸ್ತಿ ಸಾಮರ್ಥ್ಯಂ ಶೋಕಂ ಕುರ್ಯಾತ್ಕಥಂ ನರಃ||

ಹಿಂದೆ ಇದ್ದುದು ಈಗ ಇಲ್ಲ. ಯಾರಲ್ಲಿ ಇಲ್ಲವೋ ಅವರಿಗೆ ದೊರಕುತ್ತದೆ. ಕಳೆದುಹೋದುದನ್ನು ಹಿಂದೆ ತಂದು ಕೊಡಲು ಶೋಕಕ್ಕೆ ಸಾಮರ್ಥ್ಯವಿಲ್ಲ. ಆದುದರಿಂದ ನರನು ಹೇಗೆ ಶೋಕಪಡುತ್ತಾನೆ?

12105017a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ|

12105017c ನ ತ್ವಂ ಪಶ್ಯಸಿ ತಾನದ್ಯ ನ ತ್ವಾ ಪಶ್ಯಂತಿ ತೇಽಪಿ ಚ||

ರಾಜನ್! ಇಂದು ನಿನ್ನ ತಂದೆಯೆಲ್ಲಿದ್ದಾನೆ? ಪಿತಾಮಹನೆಲ್ಲಿದ್ದಾನೆ? ನೀನು ಅವರನ್ನು ಈಗ ನೋಡುತ್ತಿಲ್ಲ. ಅವರೂ ನಿನ್ನನ್ನು ನೋಡುತ್ತಿಲ್ಲ ಅಲ್ಲವೇ?

12105018a ಆತ್ಮನೋಽಧ್ರುವತಾಂ ಪಶ್ಯಂಸ್ತಾಂಸ್ತ್ವಂ ಕಿಮನುಶೋಚಸಿ|

12105018c ಬುದ್ಧ್ಯಾ ಚೈವಾನುಬುಧ್ಯಸ್ವ ಧ್ರುವಂ ಹಿ ನ ಭವಿಷ್ಯಸಿ||

ನೀನೇ ಅನಿತ್ಯನು ಎಂದು ನೋಡಿಯೂ ನೀನು ಏಕೆ ಶೋಕಿಸುತ್ತಿರುವೆ? ನಿಶ್ಚಯವಾಗಿಯೂ ನೀನು ಭವಿಷ್ಯದಲ್ಲಿ ಇರುವುದಿಲ್ಲ. ಬುದ್ಧಿಯಿಂದ ಇದನ್ನು ಯೋಚಿಸಿ ತಿಳಿದುಕೋ.

12105019a ಅಹಂ ಚ ತ್ವಂ ಚ ನೃಪತೇ ಶತ್ರವಃ ಸುಹೃದಶ್ಚ ತೇ|

12105019c ಅವಶ್ಯಂ ನ ಭವಿಷ್ಯಾಮಃ ಸರ್ವಂ ಚ ನ ಭವಿಷ್ಯತಿ||

ನೃಪತೇ! ನಾನು, ನೀನು, ಶತ್ರುಗಳು ಮತ್ತು ಸ್ನೇಹಿತರು ಎಲ್ಲರೂ ಅವಶ್ಯವಾಗಿ ಭವಿಷ್ಯದಲ್ಲಿ ಇಲ್ಲವಾಗುತ್ತೇವೆ.

12105020a ಯೇ ತು ವಿಂಶತಿವರ್ಷಾ ವೈ ತ್ರಿಂಶದ್ವರ್ಷಾಶ್ಚ ಮಾನವಾಃ|

12105020c ಅರ್ವಾಗೇವ ಹಿ ತೇ ಸರ್ವೇ ಮರಿಷ್ಯಂತಿ ಶರಚ್ಚತಾತ್||

ಈಗ ಇಪ್ಪತ್ತು ಮತ್ತು ಮೂವತ್ತು ವರ್ಷದ ಮನುಷ್ಯರು ಎಲ್ಲರೂ ಮುಂದಿನ ನೂರು ವರ್ಷಗಳೊಳಗೆಯೇ ಮೃತರಾಗುತ್ತಾರೆ.

12105021a ಅಪಿ ಚೇನ್ಮಹತೋ ವಿತ್ತಾದ್ವಿಪ್ರಮುಚ್ಯೇತ ಪೂರುಷಃ|

12105021c ನೈತನ್ಮಮೇತಿ ತನ್ಮತ್ವಾ ಕುರ್ವೀತ ಪ್ರಿಯಮಾತ್ಮನಃ||

ಹೀಗಿರುವಾಗ ಅಪಾರ ಐಶ್ವರ್ಯವನ್ನು ಪಡೆದುಕೊಂಡರೂ ಇದು ನನ್ನದಲ್ಲ ಎಂದು ತಿಳಿದುಕೊಂಡು ಆತ್ಮಕಲ್ಯಾಣವನ್ನು ಮಾಡಿಕೊಳ್ಳಬೇಕು.

12105022a ಅನಾಗತಂ ಯನ್ನ ಮಮೇತಿ ವಿದ್ಯಾದ್

ಅತಿಕ್ರಾಂತಂ ಯನ್ನ ಮಮೇತಿ ವಿದ್ಯಾತ್|

12105022c ದಿಷ್ಟಂ ಬಲೀಯ ಇತಿ ಮನ್ಯಮಾನಾಸ್

ತೇ ಪಂಡಿತಾಸ್ತತ್ಸತಾಂ ಸ್ಥಾನಮಾಹುಃ||

ಮುಂದೆ ದೊರೆಯುವುದನ್ನೂ ಅದು ನನ್ನದಲ್ಲ ಎಂದು ತಿಳಿಯಬೇಕು. ಕಳೆದುಹೋದುದೂ ನನ್ನದಲ್ಲ ಎಂದು ಭಾವಿಸಬೇಕು. ಅದೃಷ್ಟವೇ ಬಲಿಷ್ಠವಾದುದು ಎಂದು ತಿಳಿದವರು ವಿದ್ವಾಂಸರೇ ಸರಿ. ಅದೇ ಸತ್ಪುರುಷರ ಸ್ಥಾನ ಎಂದು ಹೇಳುತ್ತಾರೆ.

12105023a ಅನಾಢ್ಯಾಶ್ಚಾಪಿ ಜೀವಂತಿ ರಾಜ್ಯಂ ಚಾಪ್ಯನುಶಾಸತೇ|

12105023c ಬುದ್ಧಿಪೌರುಷಸಂಪನ್ನಾಸ್ತ್ವಯಾ ತುಲ್ಯಾಧಿಕಾ ಜನಾಃ||

ಧನಾಡ್ಯರಲ್ಲದವರೂ ಜೀವಿಸುತ್ತಾರೆ. ರಾಜ್ಯವನ್ನೂ ಆಳುತ್ತಾರೆ. ಬುದ್ಧಿ ಪೌರುಷಗಳಲ್ಲಿ ನಿನ್ನ ಸಮನಾದವರೂ ಇದ್ದಾರೆ. ನಿನಗೆ ಮಿಗಿಲಾದವರೂ ಇದ್ದಾರೆ.

12105024a ನ ಚ ತ್ವಮಿವ ಶೋಚಂತಿ ತಸ್ಮಾತ್ತ್ವಮಪಿ ಮಾ ಶುಚಃ|

12105024c ಕಿಂ ನು ತ್ವಂ ತೈರ್ನ ವೈ ಶ್ರೇಯಾಂಸ್ತುಲ್ಯೋ ವಾ ಬುದ್ಧಿಪೌರುಷೈಃ||

ಆದರೆ ಅವರು ನಿನ್ನಂತೆ ಶೋಕಿಸುವುದಿಲ್ಲ. ಆದುದರಿಂದ ನೀನೂ ಶೋಕಿಸಬೇಡ. ಬುದ್ಧಿ-ಪೌರುಷಗಳಲ್ಲಿ ನೀನು ಅವರಿಗಿಂತಲೂ ಅಧಿಕ ಅಥವಾ ಸಮಾನನಾಗಿಲ್ಲವೇ?”

12105025 ರಾಜಪುತ್ರ ಉವಾಚ|

12105025a ಯಾದೃಚ್ಚಿಕಂ ಮಮಾಸೀತ್ತದ್ರಾಜ್ಯಮಿತ್ಯೇವ ಚಿಂತಯೇ|

12105025c ಹ್ರಿಯತೇ ಸರ್ವಮೇವೇದಂ ಕಾಲೇನ ಮಹತಾ ದ್ವಿಜ||

ರಾಜಪುತ್ರನು ಹೇಳಿದನು: “ದ್ವಿಜ! ಅನಾಯಾಸವಾಗಿ ನನ್ನ ವಶವಾಗಿದ್ದ ಅಖಂಡ ಸಾಮ್ರಾಜ್ಯ ಸರ್ವವನ್ನೂ ಮಹಾ ಕಾಲನು ಅಪಹರಿಸಿದನೆಂದು ಭಾವಿಸುತ್ತೇನೆ.

12105026a ತಸ್ಯೈವಂ ಹ್ರಿಯಮಾಣಸ್ಯ ಸ್ರೋತಸೇವ ತಪೋಧನ|

12105026c ಫಲಮೇತತ್ ಪ್ರಪಶ್ಯಾಮಿ ಯಥಾಲಬ್ಧೇನ ವರ್ತಯೇ||

ತಪೋಧನ! ಪ್ರವಾಹವು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವಂತೆ ನನ್ನ ಎಲ್ಲವೂ ಹೊರಟು ಹೋಗಿವೆ. ಯಾವುದು ಯಾವಾಗ ದೊರಕುವುದೋ ಅದರಿಂದಲೇ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದೇನೆ.”

12105027 ಮುನಿರುವಾಚ|

12105027a ಅನಾಗತಮತೀತಂ ಚ ಯಥಾ ತಥ್ಯವಿನಿಶ್ಚಯಾತ್|

12105027c ನಾನುಶೋಚಸಿ ಕೌಸಲ್ಯ ಸರ್ವಾರ್ಥೇಷು ತಥಾ ಭವ||

ಮುನಿಯು ಹೇಳಿದನು: “ಕೌಸಲ್ಯ! ಯಥಾತಥ್ಯವನ್ನು ನಿಶ್ಚಯಿಸಿಯಾದಮೇಲೆ ಮುಂದಾಗುವುದಕ್ಕೆ ಮತ್ತು ಆಗಿಹೋದುದಕ್ಕೆ ಶೋಕಿಸಬಾರದು. ಎಲ್ಲ ವಿಷಯಗಳಲ್ಲಿಯೂ ನೀನು ಹಾಗಾಗಬೇಕು.

12105028a ಅವಾಪ್ಯಾನ್ಕಾಮಯಸ್ವಾರ್ಥಾನ್ನಾನವಾಪ್ಯಾನ್ಕದಾ ಚನ|

12105028c ಪ್ರತ್ಯುತ್ಪನ್ನಾನನುಭವನ್ಮಾ ಶುಚಸ್ತ್ವಮನಾಗತಾನ್||

ಪಡೆಯಬಹುದಾದುದನ್ನು ಬಯಸು. ಪಡೆಯಲಸಾಧ್ಯವಾದುದನ್ನು ಎಂದೂ ಬಯಸಬೇಡ. ನೀನು ಪಡೆದಿರುವುದನ್ನು ಉಪಭೋಗಿಸು ಮತ್ತು ಅಲಭ್ಯವಾದವುಗಳಿಗೆ ಶೋಕಿಸಬೇಡ.

12105029a ಯಥಾ ಲಬ್ಧೋಪಪನ್ನಾರ್ಥಸ್ತಥಾ ಕೌಸಲ್ಯ ರಂಸ್ಯಸೇ|

12105029c ಕಚ್ಚಿಚ್ಚುದ್ಧಸ್ವಭಾವೇನ ಶ್ರಿಯಾ ಹೀನೋ ನ ಶೋಚಸಿ||

ಕೌಸಲ್ಯ! ಆಗ ನೀನು ಹೇಗೆ ಉಪಲಬ್ಧವಾದವುಗಳಿಂದ ಸಂತುಷ್ಟನಾಗಿದ್ದೆಯೋ ಹಾಗೆ ಈಗಲೂ ಲಭ್ಯವಾದವುಗಳಿಂದ ಸಂತುಷ್ಟನಾಗು. ಶುದ್ಧಸ್ವಭಾವದವನಾದ ನೀನು ರಾಜ್ಯನಾಶಕ್ಕಾಗಿ ಶೋಕಿಸುತ್ತಿಲ್ಲ ತಾನೇ?

12105030a ಪುರಸ್ತಾದ್ಭೂತಪೂರ್ವತ್ವಾದ್ಧೀನಭಾಗ್ಯೋ ಹಿ ದುರ್ಮತಿಃ|

12105030c ಧಾತಾರಂ ಗರ್ಹತೇ ನಿತ್ಯಂ ಲಬ್ಧಾರ್ಥಾಂಶ್ಚ ನ ಮೃಷ್ಯತೇ||

ದುರ್ಮತಿಯಾದವನು ಹಿಂದೆ ಪಡೆದಿದ್ದ ಸಂಪತ್ತು ನಷ್ಟವಾಗಿ ಹೋದರೆ ತಾನು ಭಾಗ್ಯಹೀನನೆಂದು ಭಾವಿಸಿ ನಿತ್ಯವೂ ಧಾತಾರನನ್ನು ನಿಂದಿಸುತ್ತಿರುತ್ತಾನೆ. ಆದರೆ ಐಶ್ವರ್ಯವು ಬಂದರೆ ಅದು ದೈವಲಬ್ಧವೆಂದು ಭಾವಿಸುದಿಲ್ಲ. ಅದು ಸ್ವಪ್ರಯತ್ನದಿಂದಲೇ ಬಂದಿತೆಂದು ಭಾವಿಸುತ್ತಾನೆ.

12105031a ಅನರ್ಹಾನಪಿ ಚೈವಾನ್ಯಾನ್ಮನ್ಯತೇ ಶ್ರೀಮತೋ ಜನಾನ್|

12105031c ಏತಸ್ಮಾತ್ಕಾರಣಾದೇತದ್ದುಃಖಂ ಭೂಯೋಽನುವರ್ತತೇ||

ಶ್ರೀಮಂತ ಜನರನ್ನು ನೋಡಿ ಅವರು ಐಶ್ವರ್ಯಕ್ಕೆ ಅನರ್ಹರೆಂದು ಭಾವಿಸುತ್ತಾನೆ. ಈರ್ಷ್ಯೆಯಿಂದ ಹುಟ್ಟಿದ ಆ ದುಃಖವು ಸದಾ ಅವನನ್ನು ಹಿಂಬಾಲಿಸುತ್ತದೆ.

12105032a ಈರ್ಷ್ಯಾತಿಚ್ಚೇದಸಂಪನ್ನಾ ರಾಜನ್ ಪುರುಷಮಾನಿನಃ|

12105032c ಕಚ್ಚಿತ್ತ್ವಂ ನ ತಥಾ ಪ್ರಾಜ್ಞ ಮತ್ಸರೀ ಕೋಸಲಾಧಿಪ||

ರಾಜನ್! ಕೋಸಲಾಧಿಪ! ಪೌರುಷಮಾನಿನಿಗಳಾದವರು ಈ ಈರ್ಷ್ಯೆಯಿಂದ ಕೂಡಿರುತ್ತಾರೆ. ಪ್ರಾಜ್ಞ! ನೀನು ಹಾಗೆ ಮತ್ಸರಿಯಾಗಿಲ್ಲ ತಾನೇ?

12105033a ಸಹಸ್ವ ಶ್ರಿಯಮನ್ಯೇಷಾಂ ಯದ್ಯಪಿ ತ್ವಯಿ ನಾಸ್ತಿ ಸಾ|

12105033c ಅನ್ಯತ್ರಾಪಿ ಸತೀಂ ಲಕ್ಷ್ಮೀಂ ಕುಶಲಾ ಭುಂಜತೇ ಜನಾಃ[3]|

12105033e ಅಭಿವಿಷ್ಯಂದತೇ ಶ್ರೀರ್ಹಿ ಸತ್ಯಪಿ ದ್ವಿಷತೋ ಜನಾತ್||

ನಿನ್ನಲ್ಲಿ ಸಂಪತ್ತಿಲ್ಲದಿದ್ದರೂ ಅದು ಬೇರೆಯವರ ಬಳಿಯಲ್ಲಿರುವುದನ್ನು ಸಹನೆಯಿಂದ ಕಾಣು. ಕುಶಲ ಜನರು ಬೇರೆಯವರಲ್ಲಿರುವ ಸಂಪತ್ತನ್ನೂ ಭೋಗಿಸುತ್ತಾರೆ. ಅಸೂಯೆಯಿಂದ ಇತರನ್ನು ದ್ವೇಷಿಸುವವರು ಶ್ರೀಮಂತರಾಗಿದ್ದರೂ ಬಹು ಬೇಗ ನಾಶಹೊಂದುತ್ತಾರೆ.

12105034a ಶ್ರಿಯಂ ಚ ಪುತ್ರಪೌತ್ರಂ ಚ ಮನುಷ್ಯಾ ಧರ್ಮಚಾರಿಣಃ|

12105034c ತ್ಯಾಗಧರ್ಮವಿದೋ[4] ವೀರಾಃ ಸ್ವಯಮೇವ ತ್ಯಜಂತ್ಯುತ||

ತ್ಯಾಗಧರ್ಮವನ್ನು ತಿಳಿದಿರುವ ವೀರರು ಮತ್ತು ಧರ್ಮಚಾರೀ ಮನುಷ್ಯರು ಸಂಪತ್ತು ಮತ್ತು ಪುತ್ರ-ಪೌತ್ರರನ್ನು ತಾವಾಗಿಯೇ ತ್ಯಜಿಸುತ್ತಾರೆ.

12105035a ಬಹು ಸಂಕಸುಕಂ ದೃಷ್ಟ್ವಾ ವಿವಿತ್ಸಾಸಾಧನೇನ[5] ಚ|

12105035c ತಥಾನ್ಯೇ ಸಂತ್ಯಜಂತ್ಯೇನಂ ಮತ್ವಾ ಪರಮದುರ್ಲಭಮ್||

ನಿರಂತರ ಪ್ರಯತ್ನದಿಂದ ಸಂಪಾದಿಸಿದ ಧನವೂ ಅಸ್ಥಿರವಾಗಿರುತ್ತದೆ ಎನ್ನುವುದನ್ನು ತಿಳಿದು ಧನವು ಪರಮ ದುರ್ಲಭವಾದುದೆಂದು ಭಾವಿಸಿ ಅನ್ಯ ಜನರು ಧನವನ್ನೇ ತ್ಯಜಿಸುತ್ತಾರೆ.

12105036a ತ್ವಂ ಪುನಃ ಪ್ರಾಜ್ಞರೂಪಃ ಸನ್ ಕೃಪಣಂ ಪರಿತಪ್ಯಸೇ|

12105036c ಅಕಾಮ್ಯಾನ್ಕಾಮಯಾನೋಽರ್ಥಾನ್ಪರಾಚೀನಾನುಪದ್ರುತಾನ್||

ನೀನಾದರೋ ಪ್ರಾಜ್ಞನಂತೆ ಕಾಣುವೆ. ಸುಖೋಪಭೋಗಗಳು ದೈವಾಧೀನವೆಂಬುದು ನಿನಗೆ ತಿಳಿದಿದೆ. ಐಶ್ವರ್ಯವು ಅಸ್ಥಿರ ಎನ್ನುವುದೂ ನಿನಗೆ ತಿಳಿದಿದೆ. ಆದರೂ ಅಪೇಕ್ಷಿಸಲು ಅಯೋಗ್ಯವಾದವುಗಳನ್ನು ನೀನು ಅಪೇಕ್ಷಿಸುತ್ತಿರುವೆ. ಕೃಪಣನಾಗಿ ಪರಿತಪಿಸುತ್ತಿದ್ದೀಯೆ.

12105037a ತಾಂ ಬುದ್ಧಿಮುಪಜಿಜ್ಞಾಸುಸ್ತ್ವಮೇವೈನಾನ್ ಪರಿತ್ಯಜ|

12105037c ಅನರ್ಥಾಂಶ್ಚಾರ್ಥರೂಪೇಣ ಅರ್ಥಾಂಶ್ಚಾನರ್ಥರೂಪತಃ||

ಈ ಬುದ್ಧಿವಾದವನ್ನು ಗ್ರಹಿಸಿ ಮನನಮಾಡಿಕೊಳ್ಳಲು ಪ್ರಯತ್ನಿಸು. ಭೋಗೇಚ್ಛೆಯನ್ನು ಬಿಟ್ಟುಬಿಡು. ನಿನಗೆ ಅರ್ಥರೂಪದಲ್ಲಿ ಕಾಣುತ್ತಿರುವುದೆಲ್ಲವೂ ಅನರ್ಥಗಳೇ ಆಗಿವೆ. ಏಕೆಂದರೆ ಸಮಸ್ತ ಭೋಗಗಲೂ ಅನರ್ಥರೂಪಗಳೇ ಆಗಿವೆ.

12105038a ಅರ್ಥಾಯೈವ ಹಿ ಕೇಷಾಂ ಚಿದ್ಧನನಾಶೋ ಭವತ್ಯುತ|

12105038c ಅನಂತ್ಯಂ ತಂ ಸುಖಂ ಮತ್ವಾ ಶ್ರಿಯಮನ್ಯಃ ಪರೀಕ್ಷತೇ||

ಅರ್ಥಸಂಪಾದನೆಯ ಸಲುವಾಗಿಯೇ ಕೆಲವರ ಧನವು ನಾಶವಾಗುತ್ತದೆ. ಇನ್ನು ಕೆಲವರು ಸಂಪತ್ತಿನಿಂದಲೇ ಅಕ್ಷಯ ಸುಖವು ದೊರೆಯುವುದೆಂದು ತಿಳಿದು ಐಶ್ವರ್ಯದ ಹಿಂದೆ ಓಡುತ್ತಿರುತ್ತಾರೆ.

12105039a ರಮಮಾಣಃ ಶ್ರಿಯಾ ಕಶ್ಚಿನ್ನಾನ್ಯಚ್ಚ್ರೇಯೋಽಭಿಮನ್ಯತೇ|

12105039c ತಥಾ ತಸ್ಯೇಹಮಾನಸ್ಯ ಸಮಾರಂಭೋ ವಿನಶ್ಯತಿ||

ಸಂಪತ್ತಿನಿಂದ ಆನಂದಿಸುತ್ತಿರುವವನು ಸಂಪತ್ತಿಗಿಂತಲೂ ಬೇರೆ ಸುಖಸಾಧನವ್ಯಾವುದೂ ಇಲ್ಲವೆಂದೇ ಭಾವಿಸುತ್ತಾನೆ. ಹಾಗೆಯೇ ಧನವನ್ನು ಬಯಸುವವರ ಪ್ರಯತ್ನಗಳು ಪ್ರಾರಂಭದಲ್ಲಿಯೇ ನಾಶವಾಗಬಲ್ಲವು.

12105040a ಕೃಚ್ಚ್ರಾಲ್ಲಬ್ಧಮಭಿಪ್ರೇತಂ ಯದಾ ಕೌಸಲ್ಯ ನಶ್ಯತಿ|

12105040c ತದಾ ನಿರ್ವಿದ್ಯತೇ ಸೋಽರ್ಥಾತ್ ಪರಿಭಗ್ನಕ್ರಮೋ ನರಃ||

ಕೌಸಲ್ಯ! ಅತ್ಯಂತ ಕಷ್ಟದಿಂದ ಸಂಗ್ರಹಿಸಿದ್ದ ಧನವು ವಿನಾಶಹೊಂದಿದರೆ ಪ್ರಯತ್ನಗಳು ಭಗ್ನಗೊಂಡ ಮನುಷ್ಯನು ಧನದಿಂದ ವಿರಕ್ತನಾಗುತ್ತಾನೆ.

12105041a ಧರ್ಮಮೇಕೇಽಭಿಪದ್ಯಂತೇ ಕಲ್ಯಾಣಾಭಿಜನಾ ನರಾಃ|

12105041c ಪರತ್ರ ಸುಖಮಿಚ್ಚಂತೋ ನಿರ್ವಿದ್ಯೇಯುಶ್ಚ ಲೌಕಿಕಾತ್||

ಮರಣಾನಂತರದ ಸುಖವನ್ನು ಬಯಸುವ ಕಲ್ಯಾಣ ಕುಲದ ಜನರು ಧರ್ಮವನ್ನು ಮಾತ್ರ ಅವಲಂಬಿಸುತ್ತಾರೆ ಮತ್ತು ಲೌಕಿಕ ವ್ಯವಹಾರಗಳಿಂದ ವಿರಕ್ತರಾಗುತ್ತಾರೆ.

12105042a ಜೀವಿತಂ ಸಂತ್ಯಜಂತ್ಯೇಕೇ ಧನಲೋಭಪರಾ ನರಾಃ|

12105042c ನ ಜೀವಿತಾರ್ಥಂ ಮನ್ಯಂತೇ ಪುರುಷಾ ಹಿ ಧನಾದೃತೇ||

ಧನಲೋಭಪರರಾದವರು ಧನಕ್ಕಾಗಿ ಜೀವಿತವನ್ನೂ ತ್ಯಜಿಸಲು ಸಿದ್ಧರಾಗಿರುತ್ತಾರೆ. ಅಂಥವರು ಧನವಿಲ್ಲದೇ ಜೀವಿತದಲ್ಲಿ ಅರ್ಥವಿಲ್ಲ ಎಂದು ಭಾವಿಸುತ್ತಾರೆ.

12105043a ಪಶ್ಯ ತೇಷಾಂ ಕೃಪಣತಾಂ ಪಶ್ಯ ತೇಷಾಮಬುದ್ಧಿತಾಮ್|

12105043c ಅಧ್ರುವೇ ಜೀವಿತೇ ಮೋಹಾದರ್ಥತೃಷ್ಣಾಮುಪಾಶ್ರಿತಾಃ||

ಅವರ ಕೃಪಣತೆಯನ್ನು ನೋಡು. ಅವರ ಮೂಢತನವನ್ನು ನೋಡು. ನಿಶ್ಚಿತವಾಗಿರದ ಜೀವಿತಕ್ಕಾಗಿ ಮೋಹದಿಂದ ಅರ್ಥತೃಷ್ಣೆಯನ್ನು ಅವರು ಆಶ್ರಯಿಸುತ್ತಾರೆ.

12105044a ಸಂಚಯೇ ಚ ವಿನಾಶಾಂತೇ ಮರಣಾಂತೇ ಚ ಜೀವಿತೇ|

12105044c ಸಂಯೋಗೇ ವಿಪ್ರಯೋಗಾಂತೇ ಕೋ ನು ವಿಪ್ರಣಯೇನ್ಮನಃ||

ಸಂಗ್ರಹವು ವಿನಾಶದಲ್ಲಿ ಅಂತ್ಯವಾಗುತ್ತದೆ. ಜೀವಿತವು ಮರಣದಲ್ಲಿ ಕೊನೆಗೊಳ್ಳುತ್ತದೆ. ಸೇರುವಿಕೆಯು ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಹೀಗಿರುವಾಗ ಯಾರುತಾನೇ ಅವುಗಳ ಕುರಿತು ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ?

12105045a ಧನಂ ವಾ ಪುರುಷಂ ರಾಜನ್ಪುರುಷೋ ವಾ ಪುನರ್ಧನಮ್|

12105045c ಅವಶ್ಯಂ ಪ್ರಜಹಾತ್ಯೇತತ್ತದ್ವಿದ್ವಾನ್ ಕೋಽನುಸಂಜ್ವರೇತ್||

ರಾಜನ್! ಮನುಷ್ಯನು ಧನವನ್ನು ಬಿಡಬಹುದು ಅಥವಾ ಧನವೂ ಮನುಷ್ಯನನ್ನು ಬಿಡಬಹುದು. ಹೀಗಿರುವಾಗ ಅದರ ಕುರಿತು ಯಾವ ವಿದ್ವಾಂಸನು ತಾನೇ ಚಿಂತಿಸುತ್ತಾನೆ?

12105046a ಅನ್ಯೇಷಾಮಪಿ ನಶ್ಯಂತಿ ಸುಹೃದಶ್ಚ ಧನಾನಿ ಚ|

12105046c ಪಶ್ಯ ಬುದ್ಧ್ಯಾ ಮನುಷ್ಯಾಣಾಂ ರಾಜನ್ನಾಪದಮಾತ್ಮನಃ|

12105046e ನಿಯಚ್ಚ ಯಚ್ಚ ಸಂಯಚ್ಚ ಇಂದ್ರಿಯಾಣಿ ಮನೋ ಗಿರಮ್||

ನಿನ್ನದು ಮಾತ್ರವೇ ಅಲ್ಲ. ಬೇರೆಯವರ ಸುಹೃದರೂ ಧನಗಳೂ ನಾಶವಾಗುತ್ತವೆ. ರಾಜನ್! ಎಲ್ಲ ಮನುಷ್ಯರಿಗೂ ಒದಗಿಬರುವಂಥಹ ಆಪತ್ತೇ ನಿನಗೂ ಒದಗಿ ಬಂದಿದೆ ಎನ್ನುವುದನ್ನು ಬುದ್ಧಿಪೂರ್ವಕವಾಗಿ ವಿಚಾರಿಸಿ ನೋಡು. ಇಂದ್ರಿಯಗಳನ್ನು ಸಂಯಮದಲ್ಲಿಡು. ಮನಸ್ಸನ್ನು ವಶದಲ್ಲಿಟ್ಟುಕೋ. ಮಾತನ್ನು ಕಡಿಮೆಮಾಡಿ ಮೌನಿಯಾಗು.

12105047a ಪ್ರತಿಷಿದ್ಧಾನವಾಪ್ಯೇಷು[6] ದುರ್ಲಭೇಷ್ವಹಿತೇಷು ಚ|

12105047c ಪ್ರತಿಕೃಷ್ಟೇಷು ಭಾವೇಷು ವ್ಯತಿಕೃಷ್ಟೇಷ್ವಸಂಭವೇ|

12105047e ಪ್ರಜ್ಞಾನತೃಪ್ತೋ ವಿಕ್ರಾಂತಸ್ತ್ವದ್ವಿಧೋ ನಾನುಶೋಚತಿ||

ದುರ್ಬಲರು ಇಂದ್ರಿಯಗಳು, ಮನಸ್ಸು ಮತ್ತು ಮಾತುಗಳು ಅಹಿತವಾಗಿದ್ದರೂ ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಿಲ್ಲ.  ನಿಕಟ ಸಂಪರ್ಕದಿಂದ ಎಲ್ಲ ವಸ್ತುಗಳೂ ದೃಷ್ಟಿಗೋಚರವಾಗುತ್ತವೆ. ದೂರವಾದನಂತರ ದೃಷ್ಟಿಗೆ ಸಿಲುಕುವುದಿಲ್ಲ. ನಾಶವಾದನಂತರ ವಸ್ತುವನ್ನು ನೋಡಲಿಕ್ಕಾಗುವುದಿಲ್ಲ. ಪ್ರಜ್ಞಾನತೃಪ್ತ ವಿಕ್ರಮಿಯು ದೃಷ್ಟಿಗೆ ಗೋಚರವಾಗದೇ ಇರುವ ಅರ್ಥಕ್ಕಾಗಿ ಶೋಕಿಸವುದಿಲ್ಲ.

12105048a ಅಲ್ಪಮಿಚ್ಚನ್ನಚಪಲೋ ಮೃದುರ್ದಾಂತಃ ಸುಸಂಶಿತಃ|

12105048c ಬ್ರಹ್ಮಚರ್ಯೋಪಪನ್ನಶ್ಚ ತ್ವದ್ವಿಧೋ ನೈವ ಮುಹ್ಯತಿ||

ನಿನ್ನಂತೆ ಅಲ್ಪತೃಪ್ತ[7], ಅಚಪಲ, ಮೃದು, ದಾಂತ, ಸುಸಂಶಿತ, ಬ್ರಹ್ಮಚಾರಿಯು ಶೋಕಪಡುವುದಿಲ್ಲ.

12105049a ನ ತ್ವೇವ ಜಾಲ್ಮೀಂ ಕಾಪಾಲೀಂ ವೃತ್ತಿಮೇಷಿತುಮರ್ಹಸಿ|

12105049c ನೃಶಂಸವೃತ್ತಿಂ ಪಾಪಿಷ್ಠಾಂ ದುಃಖಾಂ ಕಾಪುರುಷೋಚಿತಾಮ್||

ಅಂತಹ ಸರ್ವಗುಣಸಂಪನ್ನನಾದ ನಿನಗೆ ತುಚ್ಛವೂ ಕ್ರೂರವೂ ಪಾಪಿಷ್ಠವೂ, ದುಷ್ಟವೂ, ಕಾಪುರುಷರಿಗೆ ಉಚಿತವೂ ಆದ ಕಾಪಾಲೀ[8] ವೃತ್ತಿಯೂ ಯೋಗ್ಯವಲ್ಲ.

12105050a ಅಪಿ ಮೂಲಫಲಾಜೀವೋ ರಮಸ್ವೈಕೋ ಮಹಾವನೇ|

12105050c ವಾಗ್ಯತಃ ಸಂಗೃಹೀತಾತ್ಮಾ ಸರ್ವಭೂತದಯಾನ್ವಿತಃ||

ನೀನು ಕಂದಮೂಲಫಲಗಳನ್ನೇ ತಿಂದು ಜೀವಿಸುತ್ತಾ ವಿಶಾಲ ಅರಣ್ಯದಲ್ಲಿ ಏಕಾಕಿಯಾಗಿ ಸಂಚರಿಸು. ಮಾತು, ಮನಸ್ಸು, ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡು ಸರ್ವಪ್ರಾಣಿಗಳ ವಿಷಯದಿಂದಲೂ ದಯಾಭಾವದಿಂದಿರು.

12105051a ಸದೃಶಂ ಪಂಡಿತಸ್ಯೈತದೀಷಾದಂತೇನ ದಂತಿನಾ|

12105051c ಯದೇಕೋ ರಮತೇಽರಣ್ಯೇ ಯಚ್ಚಾಪ್ಯಲ್ಪೇನ ತುಷ್ಯತಿ||

ಪಂಡಿತನಂತೆ ನೀನೂ ಕೂಡ ಗಾಡಿಯ ಮೂಕಿಯ ಮರದ ದಂಡಕ್ಕೆ ಸಮಾನ ದಂತವನ್ನು ಹೊಂದಿರುವ ಮಹಾಗಜದಂತೆ ಏಕಾಕಿಯಾಗಿ ಸಂಚರಿಸುತ್ತಾ ಅರಣ್ಯದಲ್ಲಿ ಸಿಗುವ ಕಂದಮೂಲಫಲಗಳಿಂದಲೇ ತೃಪ್ತನಾಗಿರು.

12105052a ಮಹಾಹ್ರದಃ ಸಂಕ್ಷುಭಿತ ಆತ್ಮನೈವ ಪ್ರಸೀದತಿ|

12105052c ಏತದೇವಂಗತಸ್ಯಾಹಂ ಸುಖಂ ಪಶ್ಯಾಮಿ ಕೇವಲಮ್||

ಕೆಲವೊಮ್ಮೆ ಕ್ಷೋಭೆಗೊಂಡ ಸರೋವರವು ತಾನಾಗಿಯೇ ಶಾಂತವಾಗುವಂತೆ ಕಡಡಿದ ಮನಸ್ಸೂ ಕೂಡ ತಾನಾಗಿಯೇ ಶಾಂತವಾಗುತ್ತದೆ. ಈ ತರಹದ ಜೀವನವೇ ಸುಖಮಯವೆಂದು ನಾನು ಭಾವಿಸುತ್ತೇನೆ.

12105053a ಅಸಂಭವೇ ಶ್ರಿಯೋ ರಾಜನ್ ಹೀನಸ್ಯ ಸಚಿವಾದಿಭಿಃ|

12105053c ದೈವೇ ಪ್ರತಿನಿವಿಷ್ಟೇ ಚ ಕಿಂ ಶ್ರೇಯೋ ಮನ್ಯತೇ ಭವಾನ್||

ರಾಜನ್!  ಈಗ ನಿನ್ನ ಸಂಪತ್ತು ಇಲ್ಲವಾಗಿದೆ. ಸಚಿವಾದಿಗಳಿಂದಲೂ ನೀನು ಹೀನನಾಗಿರುವೆ. ಇದರ ಜೊತೆಗೆ ದೈವವೂ ನಿನಗೆ ಪ್ರತಿಕೂಲವಾಗಿದೆ. ಇಂತಹ ಅವಸ್ಥೆಯಲ್ಲಿರುವ ನೀನು ನಾನು ಹೇಳಿದುದಕ್ಕಿಂತಲೂ ಬೇರೆ ಯಾವುದನ್ನು ಶ್ರೇಯಸ್ಕರವೆಂದು ಭಾವಿಸುತ್ತೀಯೆ?”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕಾಲಕವೃಕ್ಷೀಯೇ ಪಂಚಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಕಾಲಕವೃಕ್ಷೀಯ ಎನ್ನುವ ನೂರಾಐದನೇ ಅಧ್ಯಾಯವು.

Image result for flowers with white background

[1] ಮರಣಾದ್ದೈನ್ಯಾದನ್ಯತ್ರ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಕಾಮಾನ್ನಿರ್ವಿದ್ಯ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಸದಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಯೋಗಧರ್ಮವಿದೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ವಿಧಿತ್ಸಾಸಾಧನೇನ ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಪ್ರತಿಷೇದ್ಧಾ ನ ಚಾಪ್ಯೇಷು ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಸ್ವಲ್ಪದರಲ್ಲಿಯೇ ತೃಪ್ತನಾಗುವವನು.

[8] ಭಿಕ್ಷೆಬೇಡುವುದು.

Comments are closed.