Shanti Parva: Chapter 104

ಶಾಂತಿ ಪರ್ವ: ರಾಜಧರ್ಮ ಪರ್ವ

೧೦೪

ಇಂದ್ರ-ಬೃಹಸ್ಪತಿ ಸಂವಾದ

ಶತ್ರುಗಳನ್ನು ವಶಪಡಿಸಿಕೊಳ್ಳುವ ನೀತಿ ಮತ್ತು ದುಷ್ಟರನ್ನು ಗುರುತಿಸುವಿಕೆಯ ಕುರಿತು ಇಂದ್ರ-ಬೃಹಸ್ಪತಿಯರ ಸಂವಾದ (1-52).

12104001 ಯುಧಿಷ್ಠಿರ ಉವಾಚ|

12104001a ಕಥಂ ಮೃದೌ ಕಥಂ ತೀಕ್ಷ್ಣೇ ಮಹಾಪಕ್ಷೇ ಚ ಪಾರ್ಥಿವ|

12104001c ಅರೌ ವರ್ತೇತ ನೃಪತಿಸ್ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಪಿತಾಮಹ! ರಾಜನಾದವನು ದೊಡ್ಡ ಪಕ್ಷದೊಡನೆ, ಮೃದು ಪಕ್ಷದೊಡನೆ ಮತ್ತು ತೀಕ್ಷ್ಣ ಪಕ್ಷದೊಡನೆ ಮೊದಲು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ನನಗೆ ಹೇಳು.”

12104002 ಭೀಷ್ಮ ಉವಾಚ|

12104002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12104002c ಬೃಹಸ್ಪತೇಶ್ಚ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬೃಹಸ್ಪತಿ ಮತ್ತು ಇಂದ್ರರ ಸಂವಾದವನ್ನು ಉದಾಹರಿಸುತ್ತಾರೆ.

12104003a ಬೃಹಸ್ಪತಿಂ ದೇವಪತಿರಭಿವಾದ್ಯ ಕೃತಾಂಜಲಿಃ|

12104003c ಉಪಸಂಗಮ್ಯ ಪಪ್ರಚ್ಚ ವಾಸವಃ ಪರವೀರಹಾ||

ದೇವಪತಿ ಪರವೀರಹ ವಾಸವನು ಬೃಹಸ್ಪತಿಯ ಬಳಿಸಾರಿ ಅಂಜಲೀಬದ್ಧನಾಗಿ ನಮಸ್ಕರಿಸಿ ಕೇಳಿದನು:

12104004a ಅಹಿತೇಷು ಕಥಂ ಬ್ರಹ್ಮನ್ವರ್ತಯೇಯಮತಂದ್ರಿತಃ|

12104004c ಅಸಮುಚ್ಚಿದ್ಯ ಚೈವೇನಾನ್ನಿಯಚ್ಚೇಯಮುಪಾಯತಃ||

“ಬ್ರಹ್ಮನ್! ಆಲಸ್ಯರಹಿತನಾಗಿ ನನಗೆ ಅಹಿತರಾಗಿರುವವರೊಡನೆ ನಾನು ಹೇಗೆ ನಡೆದುಕೊಳ್ಳಬೇಕು? ಯಾವ ಉಪಾಯದಿಂದ ಅವರನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡದೇ ವಶಪಡಿಸಿಕೊಳ್ಳಬಹುದು?

12104005a ಸೇನಯೋರ್ವ್ಯತಿಷಂಗೇಣ ಜಯಃ ಸಾಧಾರಣೋ ಭವೇತ್|

12104005c ಕಿಂ ಕುರ್ವಾಣಂ ನ ಮಾಂ ಜಹ್ಯಾಜ್ಜ್ವಲಿತಾ ಶ್ರೀಃ ಪ್ರತಾಪಿನೀ||

ಸೈನ್ಯಗಳ ಪರಸ್ಪರ ಸಂಘರ್ಷಣೆಯಿಂದ ದೊರೆಯುವ ವಿಜಯವು ಸಾಧಾರಣವಾದುದು. ಶತ್ರುಗಳಿಗೆ ಸಂತಾಪವನ್ನುಂಟುಮಾಡುತ್ತಿರುವ ನನ್ನ ರಾಜ್ಯಲಕ್ಷ್ಮಿಯು ನನ್ನನ್ನು ಬಿಟ್ಟುಹೋಗದ ಹಾಗೆ ಏನು ಮಾಡಬೇಕು?”

12104006a ತತೋ ಧರ್ಮಾರ್ಥಕಾಮಾನಾಂ ಕುಶಲಃ ಪ್ರತಿಭಾನವಾನ್|

12104006c ರಾಜಧರ್ಮವಿಧಾನಜ್ಞಃ ಪ್ರತ್ಯುವಾಚ ಪುರಂದರಮ್||

ಆಗ ಧರ್ಮಾರ್ಥಕಾಮಗಳ ವಿಷಯದಲ್ಲಿ ಕುಶಲನಾಗಿದ್ದ ಮತ್ತು ರಾಜಧರ್ಮವಿಧಾನಗಳನ್ನು ತಿಳಿದಿದ್ದ ಪ್ರತಿಭಾನವಾನ್ ಬೃಹಸ್ಪತಿಯು ಪುರಂದರಿನಿಗೆ ಉತ್ತರಿಸಿದನು:

12104007a ನ ಜಾತು ಕಲಹೇನೇಚ್ಚೇನ್ನಿಯಂತುಮಪಕಾರಿಣಃ|

12104007c ಬಾಲಸಂಸೇವಿತಂ ಹ್ಯೇತದ್ಯದಮರ್ಷೋ ಯದಕ್ಷಮಾ|

12104007e ನ ಶತ್ರುರ್ವಿವೃತಃ ಕಾರ್ಯೋ ವಧಮಸ್ಯಾಭಿಕಾಂಕ್ಷತಾ||

“ಯಾವಾಗಲೂ ಯುದ್ಧದ ಮೂಲಕವಾಗಿಯೇ ಅಪಕಾರಿಗಳನ್ನು ನಿಯಂತ್ರಿಸಲು ಇಚ್ಛಿಸಬಾರದು. ಕೋಪ ಮತ್ತು ಅಕ್ಷಮೆ – ಇವೆರಡನ್ನೂ ಮೂರ್ಖರಾದವರು ಮಾತ್ರ ಬಳಸುತ್ತಾರೆ. ಶತ್ರುವಿನ ವಧೆಯನ್ನು ಇಚ್ಛಿಸುವ ರಾಜನು ಶತ್ರುವಿಗೆ ಅದರ ಸುಳಿವೂ ತಿಳಿಯದಂತೆ ವರ್ತಿಸಬೇಕು.

12104008a ಕ್ರೋಧಂ ಬಲಮಮರ್ಷಂ ಚ ನಿಯಮ್ಯಾತ್ಮಜಮಾತ್ಮನಿ|

12104008c ಅಮಿತ್ರಮುಪಸೇವೇತ ವಿಶ್ವಸ್ತವದವಿಶ್ವಸನ್||

ಕ್ರೋಧ-ಭಯ-ಹರ್ಷಗಳನ್ನು ಮನಸ್ಸಿನಲ್ಲಿಯೇ ಅಡಗಿಸಿಕೊಂಡು ಕಾರ್ಯಮಾಡಬೇಕು. ವಿಶ್ವಾಸವಿಲ್ಲದಿದ್ದರೂ ಶತ್ರುವಿನೊಡನೆ ವಿಶ್ವಾಸವಿರುವವನಂತೆಯೇ ನಡೆದುಕೊಳ್ಳಬೇಕು.

12104009a ಪ್ರಿಯಮೇವ ವದೇನ್ನಿತ್ಯಂ ನಾಪ್ರಿಯಂ ಕಿಂ ಚಿದಾಚರೇತ್|

12104009c ವಿರಮೇಚ್ಚುಷ್ಕವೈರೇಭ್ಯಃ ಕಂಠಾಯಾಸಂ ಚ ವರ್ಜಯೇತ್||

ಯಾವಾಗಲೂ ಅವನೊಡನೆ ಪ್ರಿಯವಾದ ಮಾತನ್ನೇ ಆಡುತ್ತಿರಬೇಕು. ಅಪ್ರಿಯವಾದುದನ್ನು ಸ್ಪಲ್ಪವೂ ಮಾಡಬಾರದು. ಶುಷ್ಕವಾದ ಮತ್ತು ಅಪ್ರಯೋಜಕವಾದ ವೈರದಿಂದ ದೂರವಿರಬೇಕು[1]. ಇತರರೊಡನೆ ಜಗಳವಾಡುತ್ತಾ ಕಂಠಕ್ಕೆ ಆಯಾಸವನ್ನು ಮಾಡಿಕೊಳ್ಳಬಾರದು.

12104010a ಯಥಾ ವೈತಂಸಿಕೋ ಯುಕ್ತೋ ದ್ವಿಜಾನಾಂ ಸದೃಶಸ್ವನಃ|

12104010c ತಾನ್ದ್ವಿಜಾನ್ ಕುರುತೇ ವಶ್ಯಾಂಸ್ತಥಾ ಯುಕ್ತೋ ಮಹೀಪತಿಃ|

12104010e ವಶಂ ಚೋಪನಯೇಚ್ಚತ್ರೂನ್ನಿಹನ್ಯಾಚ್ಚ ಪುರಂದರ||

ಪುರಂದರ! ವ್ಯಾಧನು ತನ್ನ ಕಾರ್ಯದಲ್ಲಿಯೇ ನಿರತನಾಗಿರುತ್ತಾ ಪಕ್ಷಿಗಳಂತೆಯೇ ಕೂಗುತ್ತಾ ಪಕ್ಷಿಗಳನ್ನು ಉಪಾಯದಿಂದ ತನ್ನ ಬಲೆಗೆ ಬೀಳಿಸಿಕೊಳ್ಳುವ ಹಾಗೆ ರಾಜನೂ ಕೂಡ ಉಪಾಯಾಂತರಗಳಿಂದ ಶತ್ರುವನ್ನು ವಶಪಡಿಸಿಕೊಂಡು ಸಂಹರಿಸಬೇಕು.

12104011a ನ ನಿತ್ಯಂ ಪರಿಭೂಯಾರೀನ್ಸುಖಂ ಸ್ವಪಿತಿ ವಾಸವ|

12104011c ಜಾಗರ್ತ್ಯೇವ ಚ ದುಷ್ಟಾತ್ಮಾ ಸಂಕರೇಽಗ್ನಿರಿವೋತ್ಥಿತಃ||

ವಾಸವ! ಶತ್ರುಗಳನ್ನು ತಿರಸ್ಕರಿಸುವವನು ಯಾವಾಗಲೂ ಸುಖವಾಗಿ ನಿದ್ರಿಸಲಾರನು. ಬಿದಿರು ಅಥವಾ ಹುಲ್ಲಿನ ಸಂಪರ್ಕದಲ್ಲಿ ಬಂದ ಅಗ್ನಿಯಂತೆ ಆ ದುಷ್ಟಾತ್ಮನು ಸದಾ ಜಾಗೃತನಾಗಿಯೇ ಇರುತ್ತಾನೆ.

12104012a ನ ಸಂನಿಪಾತಃ ಕರ್ತವ್ಯಃ ಸಾಮಾನ್ಯೇ ವಿಜಯೇ ಸತಿ|

12104012c ವಿಶ್ವಾಸ್ಯೈವೋಪಸಂನ್ಯಾಸ್ಯೋ ವಶೇ ಕೃತ್ವಾ ರಿಪುಃ ಪ್ರಭೋ||

ಪ್ರಭೋ! ವಿಜಯವೂ ಇಬ್ಬರಿಗೂ ದೊರಕುವಂತಿದ್ದರೆ ಯುದ್ಧಮಾಡುವ ಅವಶ್ಯಕತೆಯಿಲ್ಲ. ಶತ್ರುವಿನಲ್ಲಿ ವಿಶ್ವಾಸವನ್ನು ಹುಟ್ಟಿಸಿ ವಶಪಡಿಸಿಕೊಂಡು ಹತ್ತಿರಕ್ಕೆ ಕರೆಯಿಸಿಕೊಂಡುದ್ದಕ್ಕೆ ತಕ್ಕ ಪ್ರಯೋಜನವನ್ನು ಪಡೆದುಕೊಳ್ಳಬೇಕು.

12104013a ಸಂಪ್ರಧಾರ್ಯ ಸಹಾಮಾತ್ಯೈರ್ಮಂತ್ರವಿದ್ಭಿರ್ಮಹಾತ್ಮಭಿಃ|

12104013c ಉಪೇಕ್ಷಮಾಣೋಽವಜ್ಞಾತೇ ಹೃದಯೇನಾಪರಾಜಿತಃ||

12104014a ಅಥಾಸ್ಯ ಪ್ರಹರೇತ್ಕಾಲೇ ಕಿಂ ಚಿದ್ವಿಚಲಿತೇ ಪದೇ|

12104014c ದಂಡಂ ಚ ದೂಷಯೇದಸ್ಯ ಪುರುಷೈರಾಪ್ತಕಾರಿಭಿಃ||

ಶತ್ರುವು ಉಪೇಕ್ಷಿಸಿದರೂ, ಅನಾದರಿಸಿದರೂ, ಬುದ್ಧಿವಂತ ರಾಜನು ಮನಸಾರೆ ಪರಾಜಯವನ್ನು ಹೊಂದಬಾರದು. ಮಹಾತ್ಮ, ಮಂತ್ರಜ್ಞ ಅಮಾತ್ಯರೊಡನೆ ಮಾಡಬೇಕಾದ ಕರ್ತವ್ಯವನ್ನು ನಿಶ್ಚಯಿಸಿ ಶತ್ರುವು ತನ್ನ ಸ್ಥಾನದಿಂದ ಸ್ವಲ್ಪವೇ ವಿಚಲಿತನಾದಾಗ ಸಮಯ ನೋಡಿ ಪ್ರಹರಿಸಬೇಕು. ಆಪ್ತ ಪುರುಷರನ್ನು ಕಳುಹಿಸಿ ಅವನ ಸೈನ್ಯವನ್ನು ಭೇದಿಸಬೇಕು.

12104015a ಆದಿಮಧ್ಯಾವಸಾನಜ್ಞಃ ಪ್ರಚ್ಚನ್ನಂ ಚ ವಿಚಾರಯೇತ್|

12104015c ಬಲಾನಿ ದೂಷಯೇದಸ್ಯ ಜಾನಂಶ್ಚೈವ ಪ್ರಮಾಣತಃ||

ಮೊದಲು, ಮಧ್ಯದಲ್ಲಿ ಮತ್ತು ಅಂತ್ಯದಲ್ಲಿ ಏನು ಮಾಡಬೇಕು ಎನ್ನುವುದನ್ನು ತಿಳಿದು ರಹಸ್ಯದಲ್ಲಿ ವಿಚಾರಿಸಬೇಕು. ಶತ್ರುವಿನ ಸೇನಾಸಂಖ್ಯೆಯನ್ನು ತಿಳಿದುಕೊಂಡು ಭೇದಿಸಬೇಕು.

12104016a ಭೇದೇನೋಪಪ್ರದಾನೇನ ಸಂಸೃಜನ್ನೌಷಧೈಸ್ತಥಾ|

12104016c ನ ತ್ವೇವ ಚೇಲಸಂಸರ್ಗಂ ರಚಯೇದರಿಭಿಃ ಸಹ||

ಶತ್ರುಸೇನೆಯ ಅಧಿಕಾರಿಗಳಿಗೆ ಲಂಚವನ್ನಿತ್ತು ಭೇದವನ್ನುಂಟುಮಾಡಬೇಕು. ಅಥವಾ ಔಷಧಿಗಳ ಮೂಲಕ ಅವರ ಮನಸ್ಸನ್ನು ಕೆಡಿಸಬೇಕು. ಆದರೆ ತಾನು ಮಾತ್ರ ಶತ್ರುಗಳೊಡನೆ ಬಹಿರಂಗವಾಗಿ ಸಂಬಂಧವನ್ನು ಇಟ್ಟುಕೊಳ್ಳಬಾರದು.

12104017a ದೀರ್ಘಕಾಲಮಪಿ ಕ್ಷಾಂತ್ವಾ ವಿಹನ್ಯಾದೇವ ಶಾತ್ರವಾನ್|

12104017c ಕಾಲಾಕಾಂಕ್ಷೀ ಯಾಮಯೇಚ್ಚ ಯಥಾ ವಿಸ್ರಂಭಮಾಪ್ನುಯುಃ||

ಶತ್ರುವಿನ ವಧೆಗೆ ಅನುಕೂಲ ಸಮಯವನ್ನು ಸಹನೆಯಿಂದ ಕಾಯಬೇಕು. ಅದು ದೀರ್ಘಕಾಲವೇ ಆಗಬಹುದು. ಕಾಲಾಕಾಂಕ್ಷಿಯು ಶತ್ರುವಿನಲ್ಲಿ ವಿಶ್ವಾಸವನ್ನುಂಟುಮಾಡಬಹುದು. ಆದರೆ ಕಾಲವು ಸಿದ್ಧವಾದೊಡನೆ ಹಿಂದೆ ಮುಂದೆ ನೋಡದೇ ಶತ್ರುವನ್ನು ಸಂಹರಿಸಬೇಕು.

12104018a ನ ಸದ್ಯೋಽರೀನ್ವಿನಿರ್ಹನ್ಯಾದ್ದೃಷ್ಟಸ್ಯ ವಿಜಯೋಽಜ್ವರಃ[2]|

12104018c ನ ಯಃ ಶಲ್ಯಂ ಘಟ್ಟಯತಿ ನವಂ ಚ ಕುರುತೇ ವ್ರಣಮ್||

ವಿಜಯವು ತನ್ನದಾಗುತ್ತದೆ ಎಂದು ದೃಢಪಡಿಸಿಕೊಳ್ಳದೇ ಶತ್ರುವಿನ ಮೇಲೆ ಆಕ್ರಮಣ ಮಾಡಬಾರದು. ಅಲ್ಲಿಯವರೆಗೆ ಶತ್ರುಗಳ ಮೇಲೆ ಶಸ್ತ್ರ-ವಿಷಾದಿಗಳನ್ನು ಪ್ರಯೋಗಿಸಬಾರದು ಮತ್ತು ಕಠೋರ ಮಾತುಗಳಿಂದ ಘಾಸಿಯನ್ನುಂಟುಮಾಡಬಾರದು.

12104019a ಪ್ರಾಪ್ತೇ ಚ ಪ್ರಹರೇತ್ಕಾಲೇ ನ ಸ ಸಂವರ್ತತೇ ಪುನಃ|

12104019c ಹಂತುಕಾಮಸ್ಯ ದೇವೇಂದ್ರ ಪುರುಷಸ್ಯ ರಿಪುಂ ಪ್ರತಿ||

ದೇವೇಂದ್ರ! ಕಾಲವು ಪ್ರಾಪ್ತವಾದೊಡನೆಯೇ ಶತ್ರುವನ್ನು ಸಂಹರಿಸಿಬಿಡಬೇಕು. ಶತ್ರುಗಳನ್ನು ಕೊಲ್ಲಲಿಚ್ಛಿಸುವ ಪುರುಷನಿಗೆ ಅಂತಹ ಕಾಲವು ಪುನಃ ಪುನಃ ಪ್ರಾಪ್ತವಾಗುವುದಿಲ್ಲ.

12104020a ಯಃ ಕಾಲೋ ಹಿ ವ್ಯತಿಕ್ರಾಮೇತ್ಪುರುಷಂ ಕಾಲಕಾಂಕ್ಷಿಣಮ್|

12104020c ದುರ್ಲಭಃ ಸ ಪುನಃ ಕಾಲಃ ಕಾಲಧರ್ಮಚಿಕೀರ್ಷುಣಾ[3]||

ಕಾಲವನ್ನು ಪ್ರತೀಕ್ಷಿಸುತ್ತಿರುವ ಪುರುಷನಿಗೆ ಸರಿಯಾದ ಕಾಲವು ವ್ಯತಿಕ್ರಮಿಸಿ ಹೋದುದೇ ಆದರೆ ಕಾಲಧರ್ಮದಂತೆ ನಡೆದುಕೊಳ್ಳಲು ಬಯಸಿದವನಿಗೆ ಪುನಃ ಆ ಕಾಲವು ದೊರೆಯುವುದಿಲ್ಲ.

12104021a ಔರ್ಜಸ್ಥ್ಯಂ ವಿಜಯೇದೇವಂ ಸಂಗೃಹ್ಣನ್ಸಾಧುಸಂಮತಾನ್[4]|

12104021c ಕಾಲೇನ ಸಾಧಯೇನ್ನಿತ್ಯಂ ನಾಪ್ರಾಪ್ತೇಽಭಿನಿಪೀಡಯೇತ್[5]||

ಹೀಗೆ ಶ್ರೇಷ್ಠ ಪುರುಷರ ಸಮ್ಮತಿಯನ್ನು ಪಡೆದು ಓಜಸ್ಸಿನ ವಿಜಯವನ್ನು ಪಡೆದುಕೊಳ್ಳಬೇಕು. ನಿತ್ಯವೂ ಕಾಲದಿಂದಲೇ ವಿಜಯವನ್ನು ಸಾಧಿಸಬೇಕು. ಕಾಲ ಪ್ರಾಪ್ತವಾಗದೇ ಶತ್ರುಗಳನ್ನು ಪೀಡಿಸಬಾರದು.

12104022a ವಿಹಾಯ ಕಾಮಂ ಕ್ರೋಧಂ ಚ ತಥಾಹಂಕಾರಮೇವ ಚ|

12104022c ಯುಕ್ತೋ ವಿವರಮನ್ವಿಚ್ಚೇದಹಿತಾನಾಂ ಪುರಂದರ||

ಪುರಂದರ! ಕಾಮ-ಕ್ರೋಧ ಮತ್ತು ಅಹಂಕಾರಗಳನ್ನು ತ್ಯಜಿಸಿ, ಜಾಗರೂಕನಾಗಿದ್ದುಕೊಂಡು ಶತ್ರುವಿನಲ್ಲಿ ಉಂಟಾಗುವ ಛಿದ್ರಗಳನ್ನು ನಿರೀಕ್ಷಿಸುತ್ತಿರಬೇಕು.

12104023a ಮಾರ್ದವಂ ದಂಡ ಆಲಸ್ಯಂ ಪ್ರಮಾದಶ್ಚ ಸುರೋತ್ತಮ|

12104023c ಮಾಯಾಶ್ಚ ವಿವಿಧಾಃ[6] ಶಕ್ರ ಸಾಧಯಂತ್ಯವಿಚಕ್ಷಣಮ್||

ಸುರೋತ್ತಮ! ಶಕ್ರ! ಮೃದುತ್ವ, ದಂಡ, ಆಲಸ್ಯ, ಪ್ರಮಾದ, ಮತ್ತು ವಿವಿದ ಮೋಸಗಳು – ಇವುಗಳನ್ನು ಅರಿಯವನು ನಾಶಗೊಳ್ಳುತ್ತಾನೆ.

12104024a ನಿಹತ್ಯೈತಾನಿ ಚತ್ವಾರಿ ಮಾಯಾಂ ಪ್ರತಿವಿಧಾಯ ಚ|

12104024c ತತಃ ಶಕ್ನೋತಿ ಶತ್ರೂಣಾಂ ಪ್ರಹರ್ತುಮವಿಚಾರಯನ್||

ಮಾರ್ದವ, ಗರ್ವ, ಆಲಸ್ಯ ಮತ್ತು ಪ್ರಮಾದ – ಈ ನಾಲ್ಕನ್ನು ನಾಶಗೊಳಿಸಿ ಶತ್ರುವಿನ ಮೋಸಗಳಿಗೆ ಪ್ರತಿಮೋಸಗಳನ್ನು ಮಾಡಬೇಕು. ಆಗ ಅವನು ವಿಚಾರಿಸದೆಯೇ ಶತ್ರುಗಳನ್ನು ಪ್ರಹರಿಸಲು ಶಕ್ಯನಾಗುತ್ತಾನೆ.

12104025a ಯದೈವೈಕೇನ ಶಕ್ಯೇತ ಗುಹ್ಯಂ ಕರ್ತುಂ ತದಾಚರೇತ್|

12104025c ಯಚ್ಚಂತಿ ಸಚಿವಾ ಗುಹ್ಯಂ ಮಿಥೋ ವಿದ್ರಾವಯಂತ್ಯಪಿ||

ಒಬ್ಬನಿಂದಲೇ ಮಾಡಬಹುದಾದ ರಹಸ್ಯ ಕಾರ್ಯವನ್ನು ತಾನೊಬ್ಬನೇ ಮಾಡಿ ಮುಗಿಸಬೇಕು. ಮಂತ್ರಿಗಳೂ ಕೂಡ ಕೆಲವೊಮ್ಮೆ ರಹಸ್ಯಗಳನ್ನು ಬಹಿರಂಗಗೊಳಿಸುತ್ತಾರೆ ಅಥವಾ ತಮ್ಮಲ್ಲಿಯೇ ಅದರ ಕುರಿತು ಮಾತನಾಡಿಕೊಳ್ಳುತ್ತಾರೆ.

12104026a ಅಶಕ್ಯಮಿತಿ ಕೃತ್ವಾ ವಾ ತತೋಽನ್ಯೈಃ ಸಂವಿದಂ ಚರೇತ್|

12104026c ಬ್ರಹ್ಮದಂಡಮದೃಷ್ಟೇಷು ದೃಷ್ಟೇಷು ಚತುರಂಗಿಣೀಮ್||

ಒಬ್ಬನೇ ಮಾಡಲು ಸಾಧ್ಯವಿಲ್ಲದ ವಿಷಯವನ್ನು ಅನ್ಯರೊಡನೆ ಸಮಾಲೋಚಿಸಿ ನಡೆಸಬೇಕು. ಪ್ರತ್ಯಕ್ಷ ಕಾಣದ ಶತ್ರುಗಳ ಮೇಲೆ ಬ್ರಹ್ಮದಂಡ[7]ವನ್ನು ಮತ್ತು ಕಾಣುವ ಶತ್ರುಗಳ ಮೇಲೆ ಚತುರಂಗ ಬಲವನ್ನು ಪ್ರಯೋಗಿಸಬೇಕು.

12104027a ಭೇದಂ ಚ ಪ್ರಥಮಂ ಯುಂಜ್ಯಾತ್ತೂಷ್ಣೀಂದಂಡಂ ತಥೈವ ಚ|

12104027c ಕಾಲೇ ಪ್ರಯೋಜಯೇದ್ರಾಜಾ ತಸ್ಮಿಂಸ್ತಸ್ಮಿಂಸ್ತದಾ ತದಾ||

ಮೊಟ್ಟಮೊದಲನೆಯದಾಗಿ ಭೇದೋಪಾಯವನ್ನು ಬಳಸಬೇಕು. ಕಾಲವು ಬಂದಹಾಗೆ ಬೇರೆ ಬೇರೆ ಸಮಯಗಳಲ್ಲಿ ಮೌನವಾಗಿ ದಂಡನೀತಿಯನ್ನು ಬಳಸಬೇಕು.

12104028a ಪ್ರಣಿಪಾತಂ ಚ ಗಚ್ಚೇತ ಕಾಲೇ ಶತ್ರೋರ್ಬಲೀಯಸಃ|

12104028c ಯುಕ್ತೋಽಸ್ಯ ವಧಮನ್ವಿಚ್ಚೇದಪ್ರಮತ್ತಃ ಪ್ರಮಾದ್ಯತಃ||

ಶತ್ರುವು ಬಲಶಾಲಿಯಾಗಿದ್ದು ಕಾಲವು ಅವನಿಗೇ ಅನುಕೂಲಕರವಾಗಿದ್ದರೆ ಶತ್ರುವಿಗೆ ಶರಣಾಗತನೂ ಆಗಬೇಕಾಗುತ್ತದೆ. ಜಾಗರೂಕನಾಗಿದ್ದುಕೊಂಡು ಶತ್ರುವು ಪ್ರಮಾದದಲ್ಲಿದ್ದಾಗ ಉದ್ಯೋಗಶೀಲನಾಗಿ ಅವನ ವಧೋಪಾಯವನ್ನು ಹುಡುಕಬೇಕು.

12104029a ಪ್ರಣಿಪಾತೇನ ದಾನೇನ ವಾಚಾ ಮಧುರಯಾ ಬ್ರುವನ್|

12104029c ಅಮಿತ್ರಮುಪಸೇವೇತ ನ ತು ಜಾತು ವಿಶಂಕಯೇತ್[8]||

ಶತ್ರುವಿಗೆ ಶಂಕೆಬಾರದ ಹಾಗೆ ನಮಸ್ಕರಿಸಿ, ಧನವನ್ನು ಕೊಟ್ಟು, ಮಧುರ ಮಾತುಗಳನ್ನು ಆಡುತ್ತಾ ಶತ್ರುವಿನ ಸೇವೆಯನ್ನು ಮಾಡುತ್ತಿರಬೇಕು.

12104030a ಸ್ಥಾನಾನಿ ಶಂಕಿತಾನಾಂ ಚ ನಿತ್ಯಮೇವ ವಿವರ್ಜಯೇತ್|

12104030c ನ ಚ ತೇಷ್ವಾಶ್ವಸೇದ್ದ್ರುಗ್ಧ್ವಾ ಜಾಗ್ರತೀಹ ನಿರಾಕೃತಾಃ||

ಶಂಕಿಸುವವರು ಇರುವ ಜಾಗವನ್ನೇ ನಿತ್ಯವೂ ವರ್ಜಿಸಬೇಕು. ಅವರಲ್ಲಿ ವಿಶ್ವಾಸವನ್ನಿಡಬಾರದು. ತಿರಸ್ಕೃತ ಶತ್ರುಗಳು ಪ್ರತೀಕಾರಮಾಡಲು ಜಾಗರೂಕರಾಗಿರುತ್ತಾರೆ.

12104031a ನ ಹ್ಯತೋ ದುಷ್ಕರಂ ಕರ್ಮ ಕಿಂ ಚಿದಸ್ತಿ ಸುರೋತ್ತಮ|

12104031c ಯಥಾ ವಿವಿಧವೃತ್ತಾನಾಮೈಶ್ವರ್ಯಮಮರಾಧಿಪ||

ಸುರೋತ್ತಮ! ಅಮರಾಧಿಪ! ವಿವಿಧ ವ್ಯವಹಾರ ಚತುರ ಜನರ ಮೇಲೆ ಹತೋಟಿಯನ್ನಿಟ್ಟುಕೊಳ್ಳುವುದಕ್ಕಿಂತಲೂ ದುಷ್ಕರ ಕಾರ್ಯವು ಬೇರೊಂದಿಲ್ಲ.

12104032a ತಥಾ ವಿವಿಧಶೀಲಾನಾಮಪಿ ಸಂಭವ ಉಚ್ಯತೇ|

12104032c ಯತೇತ ಯೋಗಮಾಸ್ಥಾಯ ಮಿತ್ರಾಮಿತ್ರಾನವಾರಯನ್||

ಅಂಥಹ ವಿವಿಧ ಶೀಲಗಳ ಜನರನ್ನು ಹತೋಟಿಯಲ್ಲಿಟ್ಟುಕೊಳ್ಳುವಾಗ ಅವರಲ್ಲಿ ಮಿತ್ರರು ಯಾರು ಮತ್ತು ಅಮಿತ್ರರು ಯಾರು ಎನ್ನುವುದನ್ನು ಬುದ್ಧಿಯಿಂದ ತಿಳಿದುಕೊಳ್ಳಲು ಪ್ರಯತ್ನಿಸಬೇಕು.

12104033a ಮೃದುಮಪ್ಯವಮನ್ಯಂತೇ ತೀಕ್ಷ್ಣಾದುದ್ವಿಜತೇ ಜನಃ|

12104033c ಮಾತೀಕ್ಷ್ಣೋ ಮಾಮೃದುರ್ಭೂಸ್ತ್ವಂ ತೀಕ್ಷ್ಣೋ ಭವ ಮೃದುರ್ಭವ||

ಮೃದುಸ್ವಭಾವದನಾಗಿದ್ದರೆ ಅನಾದರಣೆ ಮಾಡುತ್ತಾರೆ. ತೀಕ್ಷ್ಣನಾಗಿದ್ದರೆ ಜನರು ಉದ್ವಿಗ್ನರಾಗುತ್ತಾರೆ. ಆದುದರಿಂದ ನೀನು ಅತಿ ತೀಕ್ಷ್ಣನೂ ಆಗಿರಬೇಡ. ಅತಿ ಮೃದುವೂ ಆಗಿರಬೇಡ. ತೀಕ್ಷ್ಣನಾಗಿಯೂ ಇರು ಮತ್ತು ಮೃದುವಾಗಿಯೂ ಇರು.

12104034a ಯಥಾ ವಪ್ರೇ ವೇಗವತಿ ಸರ್ವತಃಸಂಪ್ಲುತೋದಕೇ|

12104034c ನಿತ್ಯಂ ವಿವರಣಾದ್ಬಾಧಸ್ತಥಾ ರಾಜ್ಯಂ ಪ್ರಮಾದ್ಯತಃ||

ಸರ್ವತ್ರ ವ್ಯಾಪ್ತವಾದ ನೀರಿನ ಪ್ರವಾಹದಿಂದ ಕೂಡಿರುವ ವೇಗ ನದಿಯ ದಡಗಳು ಹೇಗೆ ನಿತ್ಯವೂ ಕೊರೆಯಲ್ಪಡುತ್ತವೆಯೋ ಹಾಗೆ ಪ್ರಮಾದವಶನಾದ ರಾಜನ ರಾಜ್ಯವನ್ನೂ ಪ್ರಭಾವಶಾಲೀ ಶತ್ರುಗಳು ಬಾಧಿಸುತ್ತಿರುತ್ತಾರೆ.

12104035a ನ ಬನೂನಭಿಯುಂಜೀತ[9] ಯೌಗಪದ್ಯೇನ ಶಾತ್ರವಾನ್|

12104035c ಸಾಮ್ನಾ ದಾನೇನ ಭೇದೇನ ದಂಡೇನ ಚ ಪುರಂದರ||

12104036a ಏಕೈಕಮೇಷಾಂ ನಿಷ್ಪಿಂಷನ್ ಶಿಷ್ಟೇಷು ನಿಪುಣಂ ಚರೇತ್|

12104036c ನ ಚ ಶಕ್ತೋಽಪಿ ಮೇಧಾವೀ ಸರ್ವಾನೇವಾರಭೇನ್ನೃಪಃ||

ಪುರಂದರ! ಅನೇಕರ ಮೇಲೆ ಒಬ್ಬನೇ ಒಂದೇ ಕಾಲದಲ್ಲಿ ಆಕ್ರಮಿಸಬಾರದು. ಒಬ್ಬೊಬ್ಬರನ್ನೂ ಸಾಮ-ದಾನ-ಭೇದ-ದಂಡಗಳಿಂದ ಸ್ವಾಧೀನಪಡಿಸಿಕೊಂಡು, ಉಳಿದವರೊಡನೆ ನೈಪುಣ್ಯತೆಯಿಂದ ವರ್ತಿಸಬೇಕು. ಶಕ್ತನೇ ಆಗಿದ್ದರೂ ಮೇಧಾವಿಯಾದವನು ಎಲ್ಲರೊಡನೆಯೂ ಒಂದೇ ಕಾಲದಲ್ಲಿ ಯುದ್ಧಕ್ಕೆ ಹೋಗಬಾರದು.

12104037a ಯದಾ ಸ್ಯಾನ್ಮಹತೀ ಸೇನಾ ಹಯನಾಗರಥಾಕುಲಾ|

12104037c ಪದಾತಿಯಂತ್ರಬಹುಲಾ ಸ್ವನುರಕ್ತಾ ಷಡಂಗಿನೀ||

12104038a ಯದಾ ಬಹುವಿಧಾಂ ವೃದ್ಧಿಂ ಮನ್ಯತೇ ಪ್ರತಿಲೋಮತಃ|

12104038c ತದಾ ವಿವೃತ್ಯ ಪ್ರಹರೇದ್ದಸ್ಯೂನಾಮವಿಚಾರಯನ್||

ಕುದುರೆ-ಆನೆ-ರಥಸಂಕುಲಗಳ ಮಹಾ ಸೇನೆಯಿರುವಾಗ, ಅನೇಕ ಪದಾತಿಗಳೂ ಯಂತ್ರಗಳೂ ಇರುವಾಗ, ಮತ್ತು ರಾಜನಲ್ಲಿಯೇ ಅನುರಕ್ತರಾದ ಷಡಂಗ[10] ಸೇನೆಯು ಇರುವಾಗ, ಮತ್ತು ಯಾವಾಗ ಶತ್ರುವನ್ನು ಸೋಲಿಸಿ ಬಹುವಿಧದ ವೃದ್ಧಿಯನ್ನು ಪಡೆಯಬಹುದೆಂದು ತಿಳಿದಿರುತ್ತಾನೋ ಆಗ ರಾಜನು ವಿಚಾರಮಾಡದೇ ದಸ್ಯುಗಳನ್ನು ಪ್ರಹರಿಸಿ ಧ್ವಂಸಗೊಳಿಸಬೇಕು.

12104039a ನ ಸಾಮ ದಂಡೋಪನಿಷತ್ ಪ್ರಶಸ್ಯತೇ

ನ ಮಾರ್ದವಂ ಶತ್ರುಷು ಯಾತ್ರಿಕಂ ಸದಾ|

12104039c ನ ಸಸ್ಯಘಾತೋ ನ ಚ ಸಂಕರಕ್ರಿಯಾ

ನ ಚಾಪಿ ಭೂಯಃ ಪ್ರಕೃತೇರ್ವಿಚಾರಣಾ||

ಶತ್ರುವಿನೊಡನೆ ಸಾಮೋಪಾಯವು ಪ್ರಶಸ್ತವಲ್ಲ. ದಂಡೋಪಾಯವೇ ಪ್ರಶಸ್ತವಾದುದು. ಶತ್ರುಗಳೊಂದಿಗೆ ಮೃದುತ್ವವು ಪ್ರಯೋಜನಕ್ಕೆ ಬರುವುದಿಲ್ಲ. ನೇರ ಆಕ್ರಮಣವೂ ಪ್ರಯೋಜನಕರವಾಗುವುದಿಲ್ಲ. ಶತ್ರುರಾಜ್ಯದ ಪೈರು-ಪಚ್ಚೆಗಳನ್ನು ಹಾಳುಮಾಡುವುದೂ ಉಚಿತವಲ್ಲ. ಅವನ ಬಾವಿ-ಸರೋವರಗಳಲ್ಲಿ ವಿಷಬೆರೆಸುವುದೂ ಸರಿಯಲ್ಲ. ಅದರ ಕುರಿತಾಗಿ ಮತ್ತೆ ಮತ್ತೆ ವಿಚಾರಿಸುವುದೂ ಸರಿಯಲ್ಲ.

12104040a ಮಾಯಾವಿಭೇದಾನುಪಸರ್ಜನಾನಿ

ಪಾಪಂ ತಥೈವ ಸ್ಪಶಸಂಪ್ರಯೋಗಾತ್[11]|

12104040c ಆಪ್ತೈರ್ಮನುಷ್ಯೈರುಪಚಾರಯೇತ

ಪುರೇಷು ರಾಷ್ಟ್ರೇಷು ಚ ಸಂಪ್ರಯುಕ್ತಃ[12]||

ಆಪ್ತ ಜನರ ಮೂಲಕ ಶತ್ರುವಿನ ಪುರ ರಾಷ್ಟ್ರಗಳಲ್ಲಿ ರಾಜನಿಗೂ-ಪ್ರಜೆಗಳಿಗೂ ಮತ್ತು ರಾಜ ಮತ್ತು ಅವನ ಮಂತ್ರಿ-ಸೇನಾಪತಿಗಳ ನಡುವೆ ಪರಸ್ಪರ ವಿರೋಧವುಂಟಾಗುವಂತೆ ಕೃತ್ರಿಮಗಳನ್ನು ನಡೆಸಬೇಕು. ಹಾಗೆಯೇ ಗುಟ್ಟಿನಲ್ಲಿ ರಾಜನ ಪ್ರಾಣವನ್ನು ತೆಗೆದುಕೊಳ್ಳುವ ಪಾಪಕಾರ್ಯವನ್ನೂ ಮಾಡಬೇಕಾಗುತ್ತದೆ. ಆದರೆ ತನ್ನ ಯಶಸ್ಸನ್ನು ಕಳೆದುಕೊಳ್ಳದೇ ಈ ಕಾರ್ಯಗಳನ್ನು ಮಾಡಬೇಕು.

12104041a ಪುರಾಣಿ ಚೈಷಾಮನುಸೃತ್ಯ ಭೂಮಿಪಾಃ

ಪುರೇಷು ಭೋಗಾನ್ನಿಖಿಲಾನಿಹಾಜಯನ್|

12104041c ಪುರೇಷು ನೀತಿಂ ವಿಹಿತಾಂ ಯಥಾವಿಧಿ

ಪ್ರಯೋಜಯಂತೋ ಬಲವೃತ್ರಸೂದನ||

ಬಲವೃತ್ರಸೂದನ! ಬುದ್ಧಿವಂತ ಭೂಮಿಪರು ಶತ್ರುವಿನ ಪುರಗಳಲ್ಲಿ ತಮ್ಮ ಗುಪ್ತಚಾರರನ್ನು ಇರಿಸಿ ಅಲ್ಲಿ ಯಥಾವಿಧಿಯಾಗಿ ರಾಜನೀತಿಯನ್ನು ಪ್ರಯೋಗಿಸುತ್ತಾ ಅಲ್ಲಿರುವ ಭೋಗಸಾಮಾಗ್ರಿಗಳನ್ನು ವಶಪಡಿಸಿಕೊಳ್ಳುತ್ತಾರೆ.

12104042a ಪ್ರದಾಯ ಗೂಢಾನಿ ವಸೂನಿ ನಾಮ

ಪ್ರಚ್ಚಿದ್ಯ ಭೋಗಾನವಧಾಯ ಚ ಸ್ವಾನ್|

12104042c ದುಷ್ಟಾಃ ಸ್ವದೋಷೈರಿತಿ ಕೀರ್ತಯಿತ್ವಾ

ಪುರೇಷು ರಾಷ್ಟ್ರೇಷು ಚ ಯೋಜಯಂತಿ||

ಬುದ್ಧಿವಂತ ರಾಜನು ಆಪ್ತರಿಗೆ ಗುಪ್ತವಾಗಿ ಸಂಪತ್ತುಗಳನ್ನಿತ್ತು ಬಹಿರಂಗವಾಗಿ ಅವರು ದುಷ್ಟರೆಂದು ಹೇಳಿ, ಅವರಲ್ಲಿದ್ದ  ಭೋಗವಸ್ತುಗಳನ್ನೆಲ್ಲಾ ಕಸಿದುಕೊಂಡು ಪರರಾಷ್ಟ್ರಕ್ಕೆ ಅಟ್ಟಿ, ಅಲ್ಲಿ ಅವರನ್ನು ಉಪಯೋಗಿಸಿಕೊಳ್ಳುತ್ತಾನೆ.

12104043a ತಥೈವ ಚಾನ್ಯೈ ರತಿಶಾಸ್ತ್ರವೇದಿಭಿಃ[13]

ಸ್ವಲಂಕೃತೈಃ ಶಾಸ್ತ್ರವಿಧಾನದೃಷ್ಟಿಭಿಃ|

12104043c ಸುಶಿಕ್ಷಿತೈರ್ಭಾಷ್ಯಕಥಾವಿಶಾರದೈಃ

ಪರೇಷು ಕೃತ್ಯಾನುಪಧಾರಯಸ್ವ||

ಹಾಗೆಯೇ ರತಿಶಾಸ್ತ್ರವನ್ನು ತಿಳಿದಿರುವ, ಸ್ವಲಂಕೃತ, ಶಾಸ್ತ್ರವಿಧಾನದೃಷ್ಟಿಯಿರುವ, ಸುಶಿಕ್ಷಿತ, ಭಾಷ್ಯಕಥಾವಿಶಾರದರನ್ನು ಶತ್ರುಗಳ ವಿಷಯದಲ್ಲಿ ಬಳಸಿಕೊಳ್ಳಬೇಕು.”

12104044 ಇಂದ್ರ ಉವಾಚ|

12104044a ಕಾನಿ ಲಿಂಗಾನಿ ದುಷ್ಟಸ್ಯ ಭವಂತಿ ದ್ವಿಜಸತ್ತಮ|

12104044c ಕಥಂ ದುಷ್ಟಂ ವಿಜಾನೀಯಾದೇತತ್ಪೃಷ್ಟೋ ಬ್ರವೀಹಿ ಮೇ||

ಇಂದ್ರನು ಹೇಳಿದನು: “ದ್ವಿಜಸತ್ತಮ! ದುಷ್ಟನಿಗೆ ಯಾವ ಲಕ್ಷಣಗಳಿರುತ್ತವೆ? ದುಷ್ಟನೆಂದು ಹೇಗೆ ತಿಳಿದುಕೊಳ್ಳಬಹುದು? ಕೇಳುತ್ತಿರುವ ನನಗೆ ಅದನ್ನು ಹೇಳು.”

12104045 ಬೃಹಸ್ಪತಿರುವಾಚ|

12104045a ಪರೋಕ್ಷಮಗುಣಾನಾಹ ಸದ್ಗುಣಾನಭ್ಯಸೂಯತಿ|

12104045c ಪರೈರ್ವಾ ಕೀರ್ತ್ಯಮಾನೇಷು ತೂಷ್ಣೀಮಾಸ್ತೇ ಪರಾಙ್ಮುಖಃ||

ಬೃಹಸ್ಪತಿಯು ಹೇಳಿದನು: “ಪರೋಕ್ಷದಲ್ಲಿ ದುರ್ಗುಣಗಳನ್ನೇ ಎತ್ತಿ ಹೇಳುವ ಮತ್ತು ಸದ್ಗುಣಗಳ ಕುರಿತು ಅಸೂಯೆಪಡುವವನು ದುಷ್ಟಾತ್ಮನು. ತನ್ನ ಎದುರಿಗೇ ಇತರರು ತನ್ನನ್ನು ಹೊಗಳುವಾಗ ಮುಖವನ್ನು ತಿರುಗಿಸಿ ಬಾಯಿಮುಚ್ಚಿಕೊಂಡು ಸುಮ್ಮನೇ ಕುಳಿತುಕೊಳ್ಳುವವನು ದುಷ್ಟಾತ್ಮನು.

12104046a ತೂಷ್ಣೀಂಭಾವೇಽಪಿ ಹಿ ಜ್ಞಾನಂ ನ ಚೇದ್ಭವತಿ ಕಾರಣಮ್|

12104046c ವಿಶ್ವಾಸಮೋಷ್ಠಸಂದಂಶಂ ಶಿರಸಶ್ಚ ಪ್ರಕಂಪನಮ್||

ಇನ್ನೊಬ್ಬರು ಸತ್ಪುರುಷರ ಗುಣಗಾನಮಾಡುತ್ತಿರುವಾಗ ಸುಮ್ಮನೇ ಕುಳಿತಿದ್ದರೂ ನಿಟ್ಟುಸಿರು ಬಿಡುವುದು, ತುಟಿ ಕಚ್ಚುವುದೂ ಮತ್ತು ತಲೆಯನ್ನು ಅಲ್ಲಾಡಿಸುವುದೂ ದುಷ್ಟರ ಲಕ್ಷಣವಾಗಿದೆ.

12104047a ಕರೋತ್ಯಭೀಕ್ಷ್ಣಂ ಸಂಸೃಷ್ಟಮಸಂಸೃಷ್ಟಶ್ಚ ಭಾಷತೇ|

12104047c ಅದೃಷ್ಟಿತೋ ವಿಕುರುತೇ ದೃಷ್ಟ್ವಾ ವಾ ನಾಭಿಭಾಷತೇ||

ಕರೆಯದಿದ್ದರೂ ಪದೇ ಪದೇ ಬಂದು ಹೋಗುತ್ತಾ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುವವನು, ದೂರಹೋದೊಡನೆಯೇ ಬೇರೆಯವರೊಂದಿಗೆ ನಿಂದಿಸುವವನು, ಕಣ್ಣೆದುರಿಗೆ ಮಾತ್ರ ಕಾರ್ಯಮಾಡಿ ವ್ಯಕ್ತಿಯು ಅಗೋಚರನಾದೊಡನೆಯೇ ಆ ಕಾರ್ಯವನ್ನು ನಿಲ್ಲಿಸಿಬಿಡುವವನು, ನೋಡಿದರೂ ಮಾತನಾಡದಿರುವವನು – ದುಷ್ಟಾತ್ಮನೆಂದು ಹೇಳಬಹುದು.

12104048a ಪೃಥಗೇತ್ಯ ಸಮಶ್ನಾತಿ ನೇದಮದ್ಯ ಯಥಾವಿಧಿ|

12104048c ಆಸನೇ ಶಯನೇ ಯಾನೇ ಭಾವಾ ಲಕ್ಷ್ಯಾ ವಿಶೇಷತಃ||

ಎಲ್ಲಿಂದಲೋ ಬಂದು ಯಾರ ಜೊತೆಯಲ್ಲಿಯೂ ಊಟಕ್ಕೆ ಕುಳಿತು ಕೊಳ್ಳದೇ ತಾನೊಬ್ಬನೇ ಊಟಕ್ಕೆ ಕುಳಿತುಕೊಳ್ಳುವ, “ಇಂದಿನ ಭೋಜನವು ಹಿಂದೆ ಇದ್ದಂತೆ ಪರಿಷ್ಕೃತವಾಗಿಲ್ಲ” ಎಂದು ಅನ್ನವನ್ನು ದೂಷಿಸುವವನು ದುಷ್ಟನೆಂದೇ ಭಾವಿಸಬೇಕು. ಹೀಗೆ ಕುಳಿತುಕೊಳ್ಳುವುದರಲ್ಲಿ, ಮಲಗುವುದರಲ್ಲಿ, ಪ್ರಯಾಣಮಾಡುವುದರಲ್ಲಿ ಎಲ್ಲದರಲ್ಲಿಯೂ ದುಷ್ಟಜನರ ದುಷ್ಟಭಾವವು ಎದ್ದು ಕಾಣುತ್ತದೆ.

12104049a ಆರ್ತಿರಾರ್ತೇ ಪ್ರಿಯೇ ಪ್ರೀತಿರೇತಾವನ್ಮಿತ್ರಲಕ್ಷಣಮ್|

12104049c ವಿಪರೀತಂ ತು ಬೋದ್ಧವ್ಯಮರಿಲಕ್ಷಣಮೇವ ತತ್||

ಮಿತ್ರನು ಕಷ್ಟದಲ್ಲಿದ್ದರೆ ತಾನೂ ಕಷ್ಟದಲ್ಲಿದ್ದಂತೆ ಭಾವಿಸುವುದು ಮತ್ತು ಮಿತ್ರನು ಸಂತೋಷಭರಿತನಾಗಿದ್ದರೆ ತಾನೂ ಸಂತೋಷಪಡುವುದು – ಇವು ಸನ್ಮಿತ್ರನ ಲಕ್ಷಣಗಳು. ಇದಕ್ಕೆ ವಿಪರೀತವಾಗಿರುವುದು ಶತ್ರುವಿನ ಲಕ್ಷಣವೇ ಸರಿ.

12104050a ಏತಾನ್ಯೇವಂ ಯಥೋಕ್ತಾನಿ ಬುಧ್ಯೇಥಾಸ್ತ್ರಿದಶಾಧಿಪ|

12104050c ಪುರುಷಾಣಾಂ ಪ್ರದುಷ್ಟಾನಾಂ ಸ್ವಭಾವೋ ಬಲವತ್ತರಃ||

ತ್ರಿದಶಾಧಿಪ! ನಾನು ಹೇಳಿದ ರೀತಿಯಲ್ಲಿ ದುಷ್ಟರು-ಮಿತ್ರರನ್ನು ತಿಳಿದುಕೊಳ್ಳಬೇಕು. ದುಷ್ಟ ಪುರುಷರ ಸ್ವಭಾವವು ಬಲವತ್ತರವಾಗಿರುತ್ತದೆ.

12104051a ಇತಿ ದುಷ್ಟಸ್ಯ ವಿಜ್ಞಾನಮುಕ್ತಂ ತೇ ಸುರಸತ್ತಮ|

12104051c ನಿಶಾಮ್ಯ ಶಾಸ್ತ್ರತತ್ತ್ವಾರ್ಥಂ ಯಥಾವದಮರೇಶ್ವರ||

ಸುರಸತ್ತಮ! ಅಮರೇಶ್ವರ! ಶಾಸ್ತ್ರತತ್ತ್ವಾರ್ಥಗಳನ್ನು ಯಥಾವತ್ತಾಗಿ ವಿಚಾರಮಾಡಿ ನಾನು ನಿನಗೆ ದುಷ್ಟರನ್ನು ಹೇಗೆ ಗುರುತಿಸಬಹುದು ಎನ್ನುವುದನ್ನು ಹೇಳಿದ್ದೇನೆ.””

12104052 ಭೀಷ್ಮ ಉವಾಚ|

12104052a ಸ ತದ್ವಚಃ ಶತ್ರುನಿಬರ್ಹಣೇ ರತಸ್

ತಥಾ ಚಕಾರಾವಿತಥಂ ಬೃಹಸ್ಪತೇಃ|

12104052c ಚಚಾರ ಕಾಲೇ ವಿಜಯಾಯ ಚಾರಿಹಾ

ವಶಂ ಚ ಶತ್ರೂನನಯತ್ಪುರಂದರಃ||

ಭೀಷ್ಮನು ಹೇಳಿದನು: “ಶತ್ರುಸಂಹಾರದಲ್ಲಿ ನಿರತನಾಗಿದ್ದ ಅರಿಹಾ ಪುರಂದರನು ಬೃಹಸ್ಪತಿಯ ಮಾತಿನಂತೆಯೇ ನಡೆದುಕೊಂಡನು. ಯಥೋಚಿತ ಕಾಲದಲ್ಲಿ ವಿಜಯವನ್ನು ಸಾಧಿಸಲು ಪ್ರಸ್ಥಾನಮಾಡಿ ಶತ್ರುಗಳನ್ನು ಸೋಲಿಸಿ ತನ್ನ ಅಧೀನರನ್ನಾಗಿ ಮಾಡಿಕೊಂಡನು.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಇಂದ್ರಬೃಹಸ್ಪತಿಸಂವಾದೇ ಚತುರಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಇಂದ್ರಬೃಹಸ್ಪತಿಸಂವಾದ ಎನ್ನುವ ನೂರಾನಾಲ್ಕನೇ ಅಧ್ಯಾಯವು.

Image result for flowers with white background

[1] ಬಹಿರಂಗವಾಗಿ ಯಾರೊಡನೆಯೂ ವೈರವನ್ನು ಕಟ್ಟಿಕೊಳ್ಳಬಾರದು (ಭಾರತ ದರ್ಶನ).

[2] ನ ಸದ್ಯೋಽರೀನ್ವಿಹನ್ಯಾಚ್ಚ ದ್ರಷ್ಟವ್ಯೋ ವಿಜಯೋ ಧ್ರುವಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಕಾಲಃ ಕರ್ಮಚಿಕೀರ್ಷುಣಾ| ಎಂಬ ಪಾಠಾಂತರವಿದೆ (ಭಾರತ ದರ್ಶನ).

[4] ಓಜಶ್ಚ ಜನಯೇದೇವ ಸಂಗೃಹ್ಣನ್ಸಾಧುಸಮ್ಮತಮ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಅಕಾಲೇ ಸಾಧಯೇನ್ಮಿತ್ರಂ ನ ಚ ಪ್ರಾಪ್ತೇ ಪ್ರಪೀಡಯೇತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[6] ಮಾಯಾಃ ಸುವಿಹಿತಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

[7] ಪುರೋಹಿತರಿಂದ ಅಭಿಚಾರಕ್ರಿಯಗಳನ್ನು ಮಾಡಿಸಬೇಕು (ಭಾರತ ದರ್ಶನ).

[8] ಅಮಿತ್ರಮಪಿ ಸೇವೇತ ನ ಚ ಜಾತು ವಿಶಂಕಯೇತ್| ಎಂಬ ಪಾಅಂತರವಿದೆ (ಭಾರತ ದರ್ಶನ).

[9] ಬಹೂನಭಿಯುಂಜೀತ ಎಂಬ ಪಾಠಾಂತರವಿದೆ (ಭಾರತ ದರ್ಶನ).

[10] ಆನೆ, ಕುದುರೆ, ರಥ, ಪದಾತಿ, ಬೊಕ್ಕಸ ಮತ್ತು ಧನಿಕ ವೈಶ್ಯರು ಸೇನೆಯ ಷಡಂಗಗಳು (ಭಾರತ ದರ್ಶನ).

[11] ತಥೈವ ಪಾಪಂ ನ ಯಶಂಪ್ರಯೋಗಾತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).

[12] ಸಂಪ್ರಯುಕ್ತಾನ್ ಎಂಬ ಪಾಠಾಂತರವಿದೆ (ಭಾರತ ದರ್ಶನ).

[13] ತಥೈವ ಚಾನ್ಯೈರಪಿ ಶಾಸ್ತ್ರವೇದಿಭಿಃ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.