Shalya Parva: Chapter 8

ಶಲ್ಯಪರ್ವ: ಶಲ್ಯವಧ ಪರ್ವ

09008001 ಸಂಜಯ ಉವಾಚ

09008001a ತತಃ ಪ್ರವವೃತೇ ಯುದ್ಧಂ ಕುರೂಣಾಂ ಭಯವರ್ಧನಂ|

09008001c ಸೃಂಜಯೈಃ ಸಹ ರಾಜೇಂದ್ರ ಘೋರಂ ದೇವಾಸುರೋಪಮಂ||

ಸಂಜಯನು ಹೇಳಿದನು: “ರಾಜೇಂದ್ರ! ಅನಂತರ ಕುರುಗಳು ಮತ್ತು ಸೃಂಜಯರ ನಡುವೆ ಕುರುಗಳ ಭಯವನ್ನು ಹೆಚ್ಚಿಸುವ, ದೇವಾಸುರರ ಯುದ್ಧಕ್ಕೆ ಸಮನಾದ ಘೋರ ಯುದ್ಧವು ಪ್ರಾರಂಭವಾಯಿತು.

09008002a ನರಾ ರಥಾ ಗಜೌಘಾಶ್ಚ ಸಾದಿನಶ್ಚ ಸಹಸ್ರಶಃ|

09008002c ವಾಜಿನಶ್ಚ ಪರಾಕ್ರಾಂತಾಃ ಸಮಾಜಗ್ಮುಃ ಪರಸ್ಪರಂ||

ಪದಾತಿ-ರಥ-ಆನೆಗಳ ಗುಂಪುಗಳೂ, ಸಾವಿರಾರು ಕುದುರೆಸವಾರರೂ ತಮ್ಮ ಪರಾಕ್ರಮಗಳನ್ನು ಪ್ರದರ್ಶಿಸುತ್ತಾ ಪರಸ್ಪರರೊಡನೆ ಕಾದಾಡಿದರು.

09008003a ನಾಗಾನಾಂ ಭೀಮರೂಪಾಣಾಂ ದ್ರವತಾಂ ನಿಸ್ವನೋ ಮಹಾನ್|

09008003c ಅಶ್ರೂಯತ ಯಥಾ ಕಾಲೇ ಜಲದಾನಾಂ ನಭಸ್ತಲೇ||

ಆಗ ನಭಸ್ತಲದಲ್ಲಿ ಮೇಘಗಳ ನಿನಾದದಂತೆ ಘೋರರೂಪೀ ಆನೆಗಳು ಓಡುತ್ತಿರುವ ಮಹಾ ನಿನಾದವು ಕೇಳಿಬಂದಿತು.

09008004a ನಾಗೈರಭ್ಯಾಹತಾಃ ಕೇ ಚಿತ್ಸರಥಾ ರಥಿನೋಽಪತನ್|

09008004c ವ್ಯದ್ರವಂತ ರಣೇ ವೀರಾ ದ್ರಾವ್ಯಮಾಣಾ ಮದೋತ್ಕಟೈಃ||

ಕೆಲವು ರಥಿಗಳು ಆನೆಗಳ ಆಘಾತದಿಂದ ರಥಗಳೊಂದಿಗೆ ಕೆಳಕ್ಕುರುಳಿದರು. ಮದೋತ್ಕಟ ಆನೆಗಳಿಂದ ದೂಡಲ್ಪಟ್ಟ ಅನೇಕ ವೀರರು ರಣವನ್ನು ಬಿಟ್ಟು ಓಡಿಹೋಗುತ್ತಿದ್ದರು.

09008005a ಹಯೌಘಾನ್ಪಾದರಕ್ಷಾಂಶ್ಚ ರಥಿನಸ್ತತ್ರ ಶಿಕ್ಷಿತಾಃ|

09008005c ಶರೈಃ ಸಂಪ್ರೇಷಯಾಮಾಸುಃ ಪರಲೋಕಾಯ ಭಾರತ||

ಭಾರತ! ಸುಶಿಕ್ಷಿತ ರಥಿಗಳು ಅಲ್ಲಿ ಶರಗಳಿಂದ ಕುದುರೆಗಳ ಗುಂಪುಗಳನ್ನೂ ಪಾದರಕ್ಷಕರನ್ನೂ ಪರಲೋಕಕ್ಕೆ ಕಳುಹಿಸುತ್ತಿದ್ದರು.

09008006a ಸಾದಿನಃ ಶಿಕ್ಷಿತಾ ರಾಜನ್ಪರಿವಾರ್ಯ ಮಹಾರಥಾನ್|

09008006c ವಿಚರಂತೋ ರಣೇಽಭ್ಯಘ್ನನ್ಪ್ರಾಸಶಕ್ತ್ಯೃಷ್ಟಿಭಿಸ್ತಥಾ||

ರಾಜನ್! ಸುಶಿಕ್ಷಿತ ಅಶ್ವಾರೋಹಿಗಳು ಮಹಾರಥರನ್ನು ಸುತ್ತುವರೆದು ಪ್ರಾಸ-ಶಕ್ತಿ-ಋಷ್ಟಿಗಳಿಂದ ಅವರನ್ನು ಸಂಹರಿಸುತ್ತಾ ಸಂಚರಿಸುತ್ತಿದ್ದರು.

09008007a ಧನ್ವಿನಃ ಪುರುಷಾಃ ಕೇ ಚಿತ್ಸಂನಿವಾರ್ಯ ಮಹಾರಥಾನ್|

09008007c ಏಕಂ ಬಹವ ಆಸಾದ್ಯ ಪ್ರೇಷಯೇಯುರ್ಯಮಕ್ಷಯಂ||

ಧನುಸ್ಸುಗಳನ್ನು ಹಿಡಿದಿದ್ದ ಕೆಲವು ಪುರುಷರು ಮಹಾರಥರನ್ನು ತಡೆದು -ಒಬ್ಬರೇ ಅನೇಕರನ್ನು ಎದುರಿಸಿ, ಯಮಕ್ಷಯಕ್ಕೆ ಕಳುಹಿಸುತ್ತಿದ್ದರು.

09008008a ನಾಗಂ ರಥವರಾಂಶ್ಚಾನ್ಯೇ ಪರಿವಾರ್ಯ ಮಹಾರಥಾಃ|

09008008c ಸೋತ್ತರಾಯುಧಿನಂ ಜಘ್ನುರ್ದ್ರವಮಾಣಾ ಮಹಾರವಂ||

ಅನ್ಯ ರಥಶ್ರೇಷ್ಠರು ಮಹಾರಥರನ್ನು ಸುತ್ತುವರೆದು ಮಹಾರವದೊಂದಿಗೆ ಆಯುಧಗಳನ್ನು ಬಿಟ್ಟು ಓಡಿಹೋಗುತ್ತಿದ್ದವರನ್ನು ಸಂಹರಿಸುತ್ತಿದ್ದರು.

09008009a ತಥಾ ಚ ರಥಿನಂ ಕ್ರುದ್ಧಂ ವಿಕಿರಂತಂ ಶರಾನ್ಬಹೂನ್|

09008009c ನಾಗಾ ಜಘ್ನುರ್ಮಹಾರಾಜ ಪರಿವಾರ್ಯ ಸಮಂತತಃ||

ಮಹಾರಾಜ! ಹಾಗೆಯೇ ಕ್ರುದ್ಧ ಆನೆಗಳು ಅನೇಕ ಶರಗಳನ್ನು ಚೆಲ್ಲುತ್ತಿದ್ದ ರಥಿಗಳನ್ನು ಎಲ್ಲ ಕಡೆಗಳಿಂದ ಸುತ್ತುವರೆದು ಕೊಲ್ಲುತ್ತಿದ್ದವು.

09008010a ನಾಗೋ ನಾಗಮಭಿದ್ರುತ್ಯ ರಥೀ ಚ ರಥಿನಂ ರಣೇ|

09008010c ಶಕ್ತಿತೋಮರನಾರಾಚೈರ್ನಿಜಘ್ನುಸ್ತತ್ರ ತತ್ರ ಹ||

ರಣದಲ್ಲಿ ಆನೆಗಳು ಆನೆಗಳ ಮೇಲೆ ಎರಗಿದವು. ಅಲ್ಲಲ್ಲಿ ರಥಿಗಳು ರಥಿಗಳನ್ನು ಶಕ್ತಿ-ತೋಮರ-ನಾರಚಗಳಿಂದ ಸಂಹರಿಸುತ್ತಿದ್ದರು.

09008011a ಪಾದಾತಾನವಮೃದ್ನಂತೋ ರಥವಾರಣವಾಜಿನಃ|

09008011c ರಣಮಧ್ಯೇ ವ್ಯದೃಶ್ಯಂತ ಕುರ್ವಂತೋ ಮಹದಾಕುಲಂ||

ರಥ-ಆನೆ-ಕುದುರೆಗಳು ರಣಮಧ್ಯದಲ್ಲಿ ಪಾದಾತಿಗಳನ್ನು ತುಳಿದು ಮಹಾ ವ್ಯಾಕುಲವನ್ನುಂಟುಮಾಡುತ್ತಿರುವುದು ಕಾಣುತ್ತಿತ್ತು.

09008012a ಹಯಾಶ್ಚ ಪರ್ಯಧಾವಂತ ಚಾಮರೈರುಪಶೋಭಿತಾಃ|

09008012c ಹಂಸಾ ಹಿಮವತಃ ಪ್ರಸ್ಥೇ ಪಿಬಂತ ಇವ ಮೇದಿನೀಂ||

ಹಿಮವತ್ಪರ್ವತ ಪ್ರಸ್ಥದಲ್ಲಿರುವ ಹಂಸಗಳು ನೀರು ಕುಡಿಯಲು ಭೂಮಿಯ ಕಡೆ ವೇಗದಿಂದ ಹಾರಿಬರುವಂತೆ ಚಾಮರಗಳಿಂದ ಸುಶೋಭಿತ ಕುದುರೆಗಳು ಓಡುತ್ತಿದ್ದವು.

09008013a ತೇಷಾಂ ತು ವಾಜಿನಾಂ ಭೂಮಿಃ ಖುರೈಶ್ಚಿತ್ರಾ ವಿಶಾಂ ಪತೇ|

09008013c ಅಶೋಭತ ಯಥಾ ನಾರೀ ಕರಜಕ್ಷತವಿಕ್ಷತಾ||

ವಿಶಾಂಪತೇ! ಆ ಕುದುರೆಗಳ ಖುರಗಳಿಂದ ಚಿತ್ರಿತವಾದ ರಣಭೂಮಿಯು ಪ್ರಿಯತಮನ ಉಗುರುಗಳಿಂದ ಗಾಯಗೊಂಡ ನಾರಿಯಂತೆ ಶೋಭಿಸುತ್ತಿತ್ತು.

09008014a ವಾಜಿನಾಂ ಖುರಶಬ್ದೇನ ರಥನೇಮಿಸ್ವನೇನ ಚ|

09008014c ಪತ್ತೀನಾಂ ಚಾಪಿ ಶಬ್ದೇನ ನಾಗಾನಾಂ ಬೃಂಹಿತೇನ ಚ||

09008015a ವಾದಿತ್ರಾಣಾಂ ಚ ಘೋಷೇಣ ಶಂಖಾನಾಂ ನಿಸ್ವನೇನ ಚ|

09008015c ಅಭವನ್ನಾದಿತಾ ಭೂಮಿರ್ನಿರ್ಘಾತೈರಿವ ಭಾರತ||

ಭಾರತ! ಕುದುರೆಗಳ ಖುರಶಬ್ಧಗಳಿಂದ, ರಥಚಕ್ರಗಳ ನಿಸ್ವನಗಳಿಂದ, ಪದಾತಿಗಳ ಕೂಗು, ಆನೆಗಳ ಘೀಂಕಾರ, ವಾದ್ಯಗಳ ಘೋಷ ಮತ್ತು ಶಂಖಗಳ ನಿನಾದಗಳು ಸಿಡಿಲುಗಳು ಭೂಮಿಯನ್ನು ಬಡಿಯುತ್ತಿವೆಯೋ ಎಂಬಂತೆ ತೋರುತ್ತಿದ್ದವು.

09008016a ಧನುಷಾಂ ಕೂಜಮಾನಾನಾಂ ನಿಸ್ತ್ರಿಂಶಾನಾಂ ಚ ದೀಪ್ಯತಾಂ|

09008016c ಕವಚಾನಾಂ ಪ್ರಭಾಭಿಶ್ಚ ನ ಪ್ರಾಜ್ಞಾಯತ ಕಿಂ ಚನ||

ಟೇಂಕರಿಸುತ್ತಿದ್ದ ಧನುಸ್ಸುಗಳಿಂದಲೂ, ಉರಿಯುತ್ತಿದ್ದ ಅಸ್ತ್ರಗಳಿಂದಲೂ ಮತ್ತು ಕವಚಗಳ ಪ್ರಭೆಗಳಿಂದಲೂ ಯಾವುದೊಂದೂ ತಿಳಿಯುತ್ತಿರಲಿಲ್ಲ.

09008017a ಬಹವೋ ಬಾಹವಶ್ಚಿನ್ನಾ ನಾಗರಾಜಕರೋಪಮಾಃ|

09008017c ಉದ್ವೇಷ್ಟಂತೇ ವಿವೇಷ್ಟಂತೇ ವೇಗಂ ಕುರ್ವಂತಿ ದಾರುಣಂ||

ಆನೆಗಳ ಸೊಂಡಿಲುಗಳಂತಿದ್ದ ಅನೇಕ ಬಾಹುಗಳು ತುಂಡಾಗಿ ವೇಗದಿಂದ ಕುಪ್ಪಳಿಸಿ ದಾರುಣವಾಗಿ ಸುತ್ತುತ್ತಿದ್ದವು.

09008018a ಶಿರಸಾಂ ಚ ಮಹಾರಾಜ ಪತತಾಂ ವಸುಧಾತಲೇ|

09008018c ಚ್ಯುತಾನಾಮಿವ ತಾಲೇಭ್ಯಃ ಫಲಾನಾಂ ಶ್ರೂಯತೇ ಸ್ವನಃ||

ಮಹಾರಾಜ! ವಸುಧಾತಲದಲ್ಲಿ ಬೀಳುತ್ತಿದ್ದ ಶಿರಗಳು ತಾಳೆಯ ಮರದಿಂದ ಕೆಳಕ್ಕೆ ಬೀಳುತ್ತಿದ್ದ ತಾಲಫಲಗಳಂತೆ ಶಬ್ಧಮಾಡುತ್ತಿದ್ದವು.

09008019a ಶಿರೋಭಿಃ ಪತಿತೈರ್ಭಾತಿ ರುಧಿರಾರ್ದ್ರೈರ್ವಸುಂಧರಾ|

09008019c ತಪನೀಯನಿಭೈಃ ಕಾಲೇ ನಲಿನೈರಿವ ಭಾರತ||

ಭಾರತ! ಕೆಳಕ್ಕೆ ಬೀಳುತ್ತಿದ್ದ ರಕ್ತ-ಸಿಕ್ತ ಶಿರಗಳು ಸುವರ್ಣಮಯ ಕಮಲಪುಷ್ಪಗಳಂತೆ ತೋರುತ್ತಿದ್ದವು.

09008020a ಉದ್ವೃತ್ತನಯನೈಸ್ತೈಸ್ತು ಗತಸತ್ತ್ವೈಃ ಸುವಿಕ್ಷತೈಃ|

09008020c ವ್ಯಭ್ರಾಜತ ಮಹಾರಾಜ ಪುಂಡರೀಕೈರಿವಾವೃತಾ||

ಮಹಾರಾಜ! ಕಣ್ಣುಗಳು ಹೊರಬಂದಿದ್ದ ಮತ್ತು ಗಾಯಗೊಂಡು ಪ್ರಾಣಹೋದ ಶಿರಸ್ಸುಗಳಿಂದ ಆವೃತವಾಗಿದ್ದ ರಣರಂಗವು ಕಮಲಪುಷ್ಪಗಳಿಂದ ಅಚ್ಛಾದಿತವಾಗಿದೆಯೋ ಎನ್ನುವಂತೆ ಕಾಣುತ್ತಿತ್ತು.

09008021a ಬಾಹುಭಿಶ್ಚಂದನಾದಿಗ್ಧೈಃ ಸಕೇಯೂರೈರ್ಮಹಾಧನೈಃ|

09008021c ಪತಿತೈರ್ಭಾತಿ ರಾಜೇಂದ್ರ ಮಹೀ ಶಕ್ರಧ್ವಜೈರಿವ||

ರಾಜೇಂದ್ರ! ಚಂದನ-ಲೇಪಿತ ಮಹಾಧನ-ಅಂಗದ ಕೇಯೂರಗಳಿಂದ ಅಲಂಕೃತ ತೋಳುಗಳು ಸುತ್ತಲೂ ಬಿದ್ದಿರಲು ರಣರಂಗವು ದೊಡ್ಡ ದೊಡ್ಡ ಇಂದ್ರಧ್ವಜಗಳಿಂದ ಆವೃತವಾಗಿರುವಂತೆ ತೋರುತ್ತಿತ್ತು.

09008022a ಊರುಭಿಶ್ಚ ನರೇಂದ್ರಾಣಾಂ ವಿನಿಕೃತ್ತೈರ್ಮಹಾಹವೇ|

09008022c ಹಸ್ತಿಹಸ್ತೋಪಮೈರನ್ಯೈಃ ಸಂವೃತಂ ತದ್ರಣಾಂಗಣಂ||

ಆ ಮಹಾಹವದಲ್ಲಿ ಆನೆಗಳ ಸೊಂಡಿಲುಗಳಂತಿದ್ದ ನರೇಂದ್ರರ ತೊಡೆಗಳು ಕತ್ತರಿಸಿ ಬಿದ್ದು ರಣಾಂಗಣವನ್ನು ತುಂಬಿದ್ದವು.

09008023a ಕಬಂಧಶತಸಂಕೀರ್ಣಂ ಚತ್ರಚಾಮರಶೋಭಿತಂ|

09008023c ಸೇನಾವನಂ ತಚ್ಚುಶುಭೇ ವನಂ ಪುಷ್ಪಾಚಿತಂ ಯಥಾ||

ನೂರಾರು ಮುಂಡಗಳ ಸಮಾಕುಲವಾಗಿದ್ದ, ಚತ್ರಚಾಮರಗಳಿಂದ ಶೋಭಿತವಾದ ಆ ಸೇನಾವನವು ಪುಷ್ಪಭರಿತ ಶುಭ ವನದಂತೆ ತೋರುತ್ತಿತ್ತು.

09008024a ತತ್ರ ಯೋಧಾ ಮಹಾರಾಜ ವಿಚರಂತೋ ಹ್ಯಭೀತವತ್|

09008024c ದೃಶ್ಯಂತೇ ರುಧಿರಾಕ್ತಾಂಗಾಃ ಪುಷ್ಪಿತಾ ಇವ ಕಿಂಶುಕಾಃ||

ಮಹಾರಾಜ! ಅಂಗಗಳು ರಕ್ತಲೇಪಿತಗೊಂಡು ಅಭೀತರಾಗಿ ಸಂಚರಿಸುತ್ತಿದ್ದ ಯೋಧರು ಪುಷ್ಪಿತ ಕಿಂಶುಕ ವೃಕ್ಷಗಳಂತೆ ಕಾಣುತ್ತಿದ್ದರು.

09008025a ಮಾತಂಗಾಶ್ಚಾಪ್ಯದೃಶ್ಯಂತ ಶರತೋಮರಪೀಡಿತಾಃ|

09008025c ಪತಂತಸ್ತತ್ರ ತತ್ರೈವ ಚಿನ್ನಾಭ್ರಸದೃಶಾ ರಣೇ||

ಶರ-ತೋಮರಗಳಿಂದ ಪೀಡಿತ ಆನೆಗಳು ಅಲ್ಲಲ್ಲಿಯೇ ಮೋಡಗಳು ತುಂಡಾಗಿ ಬೀಳುತ್ತಿವೆಯೋ ಎನ್ನುವಂತೆ ಬೀಳುತ್ತಿದ್ದವು.

09008026a ಗಜಾನೀಕಂ ಮಹಾರಾಜ ವಧ್ಯಮಾನಂ ಮಹಾತ್ಮಭಿಃ|

09008026c ವ್ಯದೀರ್ಯತ ದಿಶಃ ಸರ್ವಾ ವಾತನುನ್ನಾ ಘನಾ ಇವ||

ಮಹಾರಾಜ! ಮಹಾತ್ಮರು ವಧಿಸುತ್ತಿದ್ದ ಗಜಸೇನೆಯು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ಎಲ್ಲ  ದಿಕ್ಕುಗಳಲ್ಲಿಯೂ ಚದುರಿಹೋಯಿತು.

09008027a ತೇ ಗಜಾ ಘನಸಂಕಾಶಾಃ ಪೇತುರುರ್ವ್ಯಾಂ ಸಮಂತತಃ|

09008027c ವಜ್ರರುಗ್ಣಾ ಇವ ಬಭುಃ ಪರ್ವತಾ ಯುಗಸಂಕ್ಷಯೇ||

ಮೋಡಗಳಂತಿದ್ದ ಆ ಆನೆಗಳು ಯುಗಸಂಕ್ಷಯದಲ್ಲಿ ವಜ್ರಗಳಿಂದ ಪ್ರಹರಿಸಲ್ಪಟ್ಟ ಪರ್ವತಗಳಂತೆ ಭೂಮಿಯ ಮೇಲೆ ಎಲ್ಲಕಡೆ ಬಿದ್ದವು.

09008028a ಹಯಾನಾಂ ಸಾದಿಭಿಃ ಸಾರ್ಧಂ ಪತಿತಾನಾಂ ಮಹೀತಲೇ|

09008028c ರಾಶಯಃ ಸಂಪ್ರದೃಶ್ಯಂತೇ ಗಿರಿಮಾತ್ರಾಸ್ತತಸ್ತತಃ||

ಆರೋಹಿಗಳೊಂದಿಗೆ ರಣದಲ್ಲಿ ಅಲ್ಲಲ್ಲಿ ಬೀಳುತ್ತಿದ್ದ ಕುದುರೆಗಳ ರಾಶಿಗಳು ಕೂಡ ಪರ್ವತಗಳಂತೆಯೇ ಕಾಣುತ್ತಿದ್ದವು.

09008029a ಸಂಜಜ್ಞೇ ರಣಭೂಮೌ ತು ಪರಲೋಕವಹಾ ನದೀ|

09008029c ಶೋಣಿತೋದಾ ರಥಾವರ್ತಾ ಧ್ವಜವೃಕ್ಷಾಸ್ಥಿಶರ್ಕರಾ||

ಆಗ ರಣಭೂಮಿಯಲ್ಲಿ ರಕ್ತವೇ ನೀರಾಗಿದ್ದ, ರಥಗಳೇ ಸುಳಿಗಳಾಗಿದ್ದ, ಧ್ವಜಗಳೇ ವೃಕ್ಷಗಳಾಗಿದ್ದ ಮತ್ತು ಮೂಳೆಗಳೇ ಕಲ್ಲಾಗಿದ್ದ ಪರಲೋಕಕ್ಕೆ ಕೊಂಡೊಯ್ಯುವ ನದಿಯೇ ಹರಿಯತೊಡಗಿತು.

09008030a ಭುಜನಕ್ರಾ ಧನುಃಸ್ರೋತಾ ಹಸ್ತಿಶೈಲಾ ಹಯೋಪಲಾ|

09008030c ಮೇದೋಮಜ್ಜಾಕರ್ದಮಿನೀ ಚತ್ರಹಂಸಾ ಗದೋಡುಪಾ||

ಆ ನದಿಯಲ್ಲಿ ಭುಜಗಳು ಮೊಸಳೆಗಳಂತಿದ್ದವು. ಧನುಸ್ಸುಗಳು ಪ್ರಹಾವರೂಪದಲ್ಲಿದ್ದವು. ಆನೆಗಳು ಪರ್ವತಗಳಂತೆಯೂ, ಕುದುರೆಗಳು ಪರ್ವತದ ಕಲ್ಲುಬಂಡೆಗಳಂತೆಯೂ, ಮೇದಮಜ್ಜೆಗಳೇ ಕೆಸರಾಗಿಯೂ, ಶ್ವೇತಚ್ಛತ್ರಗಳು ಹಂಸಗಳಂತೆಯೂ, ಗದೆಗಳು ನೌಕೆಗಳಂತೆಯೂ ತೋರುತ್ತಿದ್ದವು.

09008031a ಕವಚೋಷ್ಣೀಷಸಂಚನ್ನಾ ಪತಾಕಾರುಚಿರದ್ರುಮಾ|

09008031c ಚಕ್ರಚಕ್ರಾವಲೀಜುಷ್ಟಾ ತ್ರಿವೇಣೂದಂಡಕಾವೃತಾ||

ಕವಚ-ಕಿರೀಟಗಳಿಂದ ತುಂಬಿದ್ದ ಆ ನದಿಯಲ್ಲಿ ಪತಾಕೆಗಳು ಸುಂದರ ವೃಕ್ಷಗಳಂತೆಯೂ, ಚಕ್ರಗಳಿಂದ ಸಮೃದ್ಧ ಆ ನದಿಯು ಚಕ್ರವಾಕ ಪಕ್ಷಿಗಳಿಂದ ತುಂಬಿದಂತೆಯೂ, ರಥಗಳ ತ್ರಿವೇಣಿಗಳೆಂಬ ಸರ್ಪಗಳಿಂದ ತುಂಬಿದಂತೆಯೂ ತೋರುತ್ತಿತ್ತು.

09008032a ಶೂರಾಣಾಂ ಹರ್ಷಜನನೀ ಭೀರೂಣಾಂ ಭಯವರ್ಧಿನೀ|

09008032c ಪ್ರಾವರ್ತತ ನದೀ ರೌದ್ರಾ ಕುರುಸೃಂಜಯಸಂಕುಲಾ||

ಕುರು-ಸೃಂಜಯರಿಂದ ಹುಟ್ಟಿದ್ದ, ಶೂರರಿಗೆ ಹರ್ಷವನ್ನುಂಟುಮಾಡುವ ಮತ್ತು ಹೇಡಿಗಳ ಭಯವನ್ನು ಹೆಚ್ಚಿಸುವ ಆ ರೌದ್ರ ನದಿಯು ಹರಿಯತೊಡಗಿತು.

09008033a ತಾಂ ನದೀಂ ಪಿತೃಲೋಕಾಯ ವಹಂತೀಮತಿಭೈರವಾಂ|

09008033c ತೇರುರ್ವಾಹನನೌಭಿಸ್ತೇ ಶೂರಾಃ ಪರಿಘಬಾಹವಃ||

ಪಿತೃಲೋಕಗಳಿಗೊಯ್ಯುತ್ತಿದ್ದ ಆ ಭೈರವನದಿಯನ್ನು ಪರಿಘದಂತಹ ಬಾಹುಗಳುಳ್ಳ ಶೂರರು ವಾಹನಗಳ ಮೇಲೆ ದಾಟುತ್ತಿದ್ದರು.

09008034a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ವಿಶಾಂ ಪತೇ|

09008034c ಚತುರಂಗಕ್ಷಯೇ ಘೋರೇ ಪೂರ್ವಂ ದೇವಾಸುರೋಪಮೇ||

09008035a ಅಕ್ರೋಶನ್ಬಾಂಧವಾನನ್ಯೇ ತತ್ರ ತತ್ರ ಪರಂತಪ|

09008035c ಕ್ರೋಶದ್ಭಿರ್ಬಾಂಧವೈಶ್ಚಾನ್ಯೇ ಭಯಾರ್ತಾ ನ ನಿವರ್ತಿರೇ||

ಪರಂತಪ! ವಿಶಾಂಪತೇ! ಹಿಂದೆ ನಡೆದ ದೇವಾಸುರ ಯುದ್ಧದಂತಿದ್ದ, ಮರ್ಯಾದೆ ಮೀರಿದ, ಚತುರಂಗ ಬಲಗಳನ್ನೂ ನಾಶಗೊಳಿಸುವ ಆ ಘೋರ ಯುದ್ಧವು ನಡೆಯುತ್ತಿರಲು ಭಯಾರ್ತ ಯೋಧರು ಅನ್ಯ ಬಾಂಧವರನ್ನು ಕೂಗಿ ಕರೆಯುತ್ತಿದ್ದರು. ಕೆಲವರು ಬಾಂಧವರಿಂದ ಕರೆಯಲ್ಪಡುತ್ತಿದ್ದರೂ ಯುದ್ಧದಿಂದ ಹಿಮ್ಮೆಟ್ಟುತ್ತಿರಲಿಲ್ಲ.

09008036a ನಿರ್ಮರ್ಯಾದೇ ತಥಾ ಯುದ್ಧೇ ವರ್ತಮಾನೇ ಭಯಾನಕೇ|

09008036c ಅರ್ಜುನೋ ಭೀಮಸೇನಶ್ಚ ಮೋಹಯಾಂ ಚಕ್ರತುಃ ಪರಾನ್||

ಆ ರೀತಿ ನಿರ್ಮರ್ಯಾದಾಯುಕ್ತ ಭಯಾನಕ ಯುದ್ಧವು ನಡೆಯುತ್ತಿರಲು ಅರ್ಜುನ-ಭೀಮಸೇನರು ಶತ್ರುಗಳನ್ನು ವಿಮೋಹಗೊಳಿಸಿದರು.

09008037a ಸಾ ವಧ್ಯಮಾನಾ ಮಹತೀ ಸೇನಾ ತವ ಜನಾಧಿಪ|

09008037c ಅಮುಹ್ಯತ್ತತ್ರ ತತ್ರೈವ ಯೋಷಿನ್ಮದವಶಾದಿವ||

ಜನಾಧಿಪ! ಅವರಿಂದ ವಧಿಸಲ್ಪಡುತ್ತಿದ್ದ ನಿನ್ನ ಮಹಾ ಸೇನೆಯು ಮದಮತ್ತ ಯುವತಿಯಂತೆ ಅಲ್ಲಲ್ಲಿಯೇ ಮೂರ್ಛೆಹೋಗುತ್ತಿತ್ತು.

09008038a ಮೋಹಯಿತ್ವಾ ಚ ತಾಂ ಸೇನಾಂ ಭೀಮಸೇನಧನಂಜಯೌ|

09008038c ದಧ್ಮತುರ್ವಾರಿಜೌ ತತ್ರ ಸಿಂಹನಾದಂ ಚ ನೇದತುಃ||

ಭೀಮಸೇನ-ಧನಂಜಯರಿಬ್ಬರೂ ಆ ಸೇನೆಯನ್ನು ಮೋಹಗೊಳಿಸಿ ಶಂಖಗಳನ್ನು ಊದಿದರು ಮತ್ತು ಸಿಂಹನಾದಗೈದರು.

09008039a ಶ್ರುತ್ವೈವ ತು ಮಹಾಶಬ್ದಂ ಧೃಷ್ಟದ್ಯುಮ್ನಶಿಖಂಡಿನೌ|

09008039c ಧರ್ಮರಾಜಂ ಪುರಸ್ಕೃತ್ಯ ಮದ್ರರಾಜಮಭಿದ್ರುತೌ||

ಆ ಮಹಾಶಬ್ಧವನ್ನು ಕೇಳಿ ಧೃಷ್ಟದ್ಯುಮ್ನ-ಶಿಖಂಡಿಯರು ಧರ್ಮರಾಜನನ್ನು ಮುಂದಿಟ್ಟುಕೊಂಡು ಮದ್ರರಾಜನನ್ನು ಆಕ್ರಮಣಿಸಿದರು.

09008040a ತತ್ರಾಶ್ಚರ್ಯಮಪಶ್ಯಾಮ ಘೋರರೂಪಂ ವಿಶಾಂ ಪತೇ|

09008040c ಶಲ್ಯೇನ ಸಂಗತಾಃ ಶೂರಾ ಯದಯುಧ್ಯಂತ ಭಾಗಶಃ||

ವಿಶಾಂಪತೇ! ಭಾಗ-ಭಾಗಗಳಲ್ಲಿ ಆ ಶೂರರು ಶಲ್ಯನೊಂದಿಗೆ ಘೋರರೂಪದಲ್ಲಿ ಯುದ್ಧಮಾಡುತ್ತಿರುವುದನ್ನು ಅಲ್ಲಿ ನೋಡಿದೆವು.

09008041a ಮಾದ್ರೀಪುತ್ರೌ ಸರಭಸೌ ಕೃತಾಸ್ತ್ರೌ ಯುದ್ಧದುರ್ಮದೌ|

09008041c ಅಭ್ಯಯಾತಾಂ ತ್ವರಾಯುಕ್ತೌ ಜಿಗೀಷಂತೌ ಬಲಂ ತವ||

ಕೃತಾಸ್ತ್ರರಾದ ಯುದ್ಧದುರ್ಮದ ಮಾದ್ರೀಪುತ್ರರಿಬ್ಬರೂ ರಭಸದಿಂದ ತ್ವರೆಮಾಡಿ ನಿನ್ನ ಸೇನೆಯನ್ನು ಗೆಲ್ಲಲು ಆಕ್ರಮಣಿಸಿದರು.

09008042a ತತೋ ನ್ಯವರ್ತತ ಬಲಂ ತಾವಕಂ ಭರತರ್ಷಭ|

09008042c ಶರೈಃ ಪ್ರಣುನ್ನಂ ಬಹುಧಾ ಪಾಂಡವೈರ್ಜಿತಕಾಶಿಭಿಃ||

ಭರತರ್ಷಭ! ವಿಜಯೋತ್ಸಾಹಿತ ಪಾಂಡವರ ಶರಗಳಿಂದ ಬಹಳವಾಗಿ ಪ್ರಹರಿಸಲ್ಪಟ್ಟ ನಿನ್ನ ಸೇನೆಯು ಹಿಂದೆಸರಿಯಿತು.

09008043a ವಧ್ಯಮಾನಾ ಚಮೂಃ ಸಾ ತು ಪುತ್ರಾಣಾಂ ಪ್ರೇಕ್ಷತಾಂ ತವ|

09008043c ಭೇಜೇ ದಿಶೋ ಮಹಾರಾಜ ಪ್ರಣುನ್ನಾ ದೃಢಧನ್ವಿಭಿಃ|

ಮಹಾರಾಜ! ನಿನ್ನ ಮಕ್ಕಳು ನೋಡುತ್ತಿದ್ದಂತೆಯೇ ದೃಢಧನ್ವಿಗಳು ಚುಚ್ಚಿ ವಧಿಸುತ್ತಿದ್ದ ಆ ಸೇನೆಯು ದಿಕ್ಕಾಪಾಲಾಗಿ ಹೋಯಿತು.

09008043e ಹಾಹಾಕಾರೋ ಮಹಾನ್ಜಜ್ಞೇ ಯೋಧಾನಾಂ ತವ ಭಾರತ||

09008044a ತಿಷ್ಠ ತಿಷ್ಠೇತಿ ವಾಗಾಸೀದ್ದ್ರಾವಿತಾನಾಂ ಮಹಾತ್ಮನಾಂ|

09008044c ಕ್ಷತ್ರಿಯಾಣಾಂ ತದಾನ್ಯೋನ್ಯಂ ಸಮ್ಯುಗೇ ಜಯಮಿಚ್ಚತಾಂ|

ಭಾರತ! ನಿನ್ನ ಯೋಧರಲ್ಲಿ ಮಹಾ ಹಾಹಾಕಾರವುಂಟಾಯಿತು. ಯುದ್ಧದಲ್ಲಿ ಅನ್ಯೋನ್ಯರ ಸಹಾಯದಿಂದ ಜಯವನ್ನು ಬಯಸಿದ್ದ ಕ್ಷತ್ರಿಯರು ಓಡಿಹೋಗುತ್ತಿದ್ದ ಮಹಾತ್ಮರಿಗೆ “ನಿಲ್ಲಿ! ನಿಲ್ಲಿ!” ಎಂದು ಕೂಗಿ ಕರೆಯುವುದೂ ಕೇಳಿಬರುತ್ತಿತ್ತು.

09008044e ಆದ್ರವನ್ನೇವ ಭಗ್ನಾಸ್ತೇ ಪಾಂಡವೈಸ್ತವ ಸೈನಿಕಾಃ||

09008045a ತ್ಯಕ್ತ್ವಾ ಯುದ್ಧೇ ಪ್ರಿಯಾನ್ಪುತ್ರಾನ್ಭ್ರಾತೄನಥ ಪಿತಾಮಹಾನ್|

09008045c ಮಾತುಲಾನ್ಭಾಗಿನೇಯಾಂಶ್ಚ ತಥಾ ಸಂಬಂಧಿಬಾಂಧವಾನ್||

ಪಾಂಡವರಿಂದ ಭಗ್ನರಾದ ನಿನ್ನ ಸೈನಿಕರು ಯುದ್ಧದಲ್ಲಿ ಪ್ರಿಯ ಪುತ್ರ-ಸಹೋದರ-ಪಿತಾಮಹ-ಸೋದರಮಾವಂದಿರನ್ನೂ, ತಂಗಿಯ ಮಕ್ಕಳನ್ನೂ, ಸಂಬಂಧಿ-ಬಾಂಧವರನ್ನೂ ಬಿಟ್ಟು ಓಡುತ್ತಿದ್ದರು.

09008046a ಹಯಾನ್ದ್ವಿಪಾಂಸ್ತ್ವರಯಂತೋ ಯೋಧಾ ಜಗ್ಮುಃ ಸಮಂತತಃ|

09008046c ಆತ್ಮತ್ರಾಣಕೃತೋತ್ಸಾಹಾಸ್ತಾವಕಾ ಭರತರ್ಷಭ||

ಭರತರ್ಷಭ! ಕುದುರೆಗಳನ್ನೂ ಆನೆಗಳನ್ನು ತ್ವರೆಗೊಳಿಸುತ್ತಾ ಆತ್ಮರಕ್ಷಣೆಯಲ್ಲಿ ಉತ್ಸಾಹವಿದ್ದ ನಿನ್ನ ಕಡೆಯ ಯೋಧರು ಎಲ್ಲ ದಿಕ್ಕುಗಳಲ್ಲಿ ಓಡಿ ಹೋದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಸಂಕುಲಯುದ್ಧೇ ಅಷ್ಠಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಸಂಕುಲಯುದ್ಧ ಎನ್ನುವ ಎಂಟನೇ ಅಧ್ಯಾಯವು.

Comments are closed.