Shalya Parva: Chapter 7

ಶಲ್ಯಪರ್ವ: ಶಲ್ಯವಧ ಪರ್ವ

09007001 ಸಂಜಯ ಉವಾಚ

09007001a ವ್ಯತೀತಾಯಾಂ ರಜನ್ಯಾಂ ತು ರಾಜಾ ದುರ್ಯೋಧನಸ್ತದಾ|

09007001c ಅಬ್ರವೀತ್ತಾವಕಾನ್ಸರ್ವಾನ್ಸಮ್ನಹ್ಯಂತಾಂ ಮಹಾರಥಾಃ||

ಸಂಜಯನು ಹೇಳಿದನು: “ರಾತ್ರಿಯು ಕಳೆಯಲು ರಾಜಾ ದುರ್ಯೋಧನನು ಮಹಾರಥರೆಲ್ಲರೂ ಕವಚಗಳನ್ನು ಧರಿಸಿ ಯುದ್ಧಸನ್ನದ್ಧರಾಗುವಂತೆ ನಿನ್ನ ಕಡೆಯ ಎಲ್ಲರಿಗೆ ಹೇಳಿದನು:

09007002a ರಾಜ್ಞಸ್ತು ಮತಮಾಜ್ಞಾಯ ಸಮನಹ್ಯತ ಸಾ ಚಮೂಃ|

09007002c ಅಯೋಜಯನ್ರಥಾಂಸ್ತೂರ್ಣಂ ಪರ್ಯಧಾವಂಸ್ತಥಾಪರೇ||

ರಾಜನ ಅಭಿಪ್ರಾಯವನ್ನು ತಿಳಿದ ಆ ಸೇನೆಯು ಸನ್ನದ್ಧವಾಗತೊಡಗಿತು. ಬೇಗನೆ ರಥವನ್ನು ಸಜ್ಜುಗೊಳಿಸಲು ಇನ್ನು ಕೆಲವರು ಅತ್ತಿತ್ತ ಓಡಾಡುತ್ತಿದ್ದರು.

09007003a ಅಕಲ್ಪ್ಯಂತ ಚ ಮಾತಂಗಾಃ ಸಮನಹ್ಯಂತ ಪತ್ತಯಃ|

09007003c ಹಯಾನಸ್ತರಣೋಪೇತಾಂಶ್ಚಕ್ರುರನ್ಯೇ[1] ಸಹಸ್ರಶಃ||

ಆನೆಗಳನ್ನು ಸಜ್ಜುಗೊಳಿಸಿದರು. ಪದಾತಿಗಳು ಕವಚಗಳನ್ನು ತೊಟ್ಟುಕೊಂಡರು. ಇನ್ನು ಕೆಲವರು ಸಹಸ್ರಾರು ಕುದುರೆಗಳನ್ನು ಸಜ್ಜುಗೊಳಿಸಿದರು.

09007004a ವಾದಿತ್ರಾಣಾಂ ಚ ನಿನದಃ ಪ್ರಾದುರಾಸೀದ್ವಿಶಾಂ ಪತೇ|

09007004c ಬೋಧನಾರ್ಥಂ ಹಿ[2] ಯೋಧಾನಾಂ ಸೈನ್ಯಾನಾಂ ಚಾಪ್ಯುದೀರ್ಯತಾಂ||

ವಿಶಾಂಪತೇ! ವಾದ್ಯಗಳು ಮೊಳಗಿದವು. ಗರ್ಜಿಸುತ್ತಿದ್ದ ಯೋಧ-ಮುಂದುವರೆಯುತ್ತಿದ್ದ ಸೇನೆಗಳ ತುಮುಲ ಶಬ್ಧಗಳೂ ಕೇಳಿಬಂದವು.

09007005a ತತೋ ಬಲಾನಿ ಸರ್ವಾಣಿ ಸೇನಾಶಿಷ್ಟಾನಿ ಭಾರತ|

09007005c ಸಂನದ್ಧಾನ್ಯೇವ ದದೃಶುರ್ಮೃತ್ಯುಂ[3] ಕೃತ್ವಾ ನಿವರ್ತನಂ||

ಭಾರತ! ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಕಲ್ಪಿಸಿಕೊಂಡಿದ್ದ ಅಳಿದುಳಿದಿದ್ದ ಸರ್ವ ಸೇನೆಗಳೂ ಯುದ್ಧಸನ್ನದ್ಧರಾಗಿ ಮುಂದುವರೆಯುತ್ತಿರುವುದು ಕಂಡಿತು.

09007006a ಶಲ್ಯಂ ಸೇನಾಪತಿಂ ಕೃತ್ವಾ ಮದ್ರರಾಜಂ ಮಹಾರಥಾಃ|

09007006c ಪ್ರವಿಭಜ್ಯ ಬಲಂ ಸರ್ವಮನೀಕೇಷು ವ್ಯವಸ್ಥಿತಾಃ||

ಮಹಾರಥರು ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡು ಸೇನೆಗಳೆಲ್ಲವನ್ನೂ ವಿಭಜಿಸಿ ತಮ್ಮ ತಮ್ಮ ದಳಗಳಲ್ಲಿ ಸನ್ನದ್ಧರಾಗಿದ್ದರು.

09007007a ತತಃ ಸರ್ವೇ ಸಮಾಗಮ್ಯ ಪುತ್ರೇಣ ತವ ಸೈನಿಕಾಃ|

09007007c ಕೃಪಶ್ಚ ಕೃತವರ್ಮಾ ಚ ದ್ರೌಣಿಃ ಶಲ್ಯೋಽಥ ಸೌಬಲಃ||

09007008a ಅನ್ಯೇ ಚ ಪಾರ್ಥಿವಾಃ ಶೇಷಾಃ ಸಮಯಂ ಚಕ್ರಿರೇ ತದಾ|

ಅನಂತರ ಸರ್ವ ಸೈನಿಕರೂ, ಕೃಪ, ಕೃತವರ್ಮ, ದ್ರೌಣಿ, ಶಲ್ಯ, ಸೌಬಲ ಮತ್ತು ಅಳಿದುಳಿದ ಅನ್ಯ ಪಾರ್ಥಿವರು ನಿನ್ನ ಪುತ್ರನೊಡನೆ ಸೇರಿ ಈ ನಿಯಮಗಳನ್ನು ಮಾಡಿಕೊಂಡರು:

09007008c ನ ನ ಏಕೇನ ಯೋದ್ಧವ್ಯಂ ಕಥಂ ಚಿದಪಿ ಪಾಂಡವೈಃ||

09007009a ಯೋ ಹ್ಯೇಕಃ ಪಾಂಡವೈರ್ಯುಧ್ಯೇದ್ಯೋ ವಾ ಯುಧ್ಯಂತಮುತ್ಸೃಜೇತ್|

09007009c ಸ ಪಂಚಭಿರ್ಭವೇದ್ಯುಕ್ತಃ ಪಾತಕೈಃ ಸೋಪಪಾತಕೈಃ|

“ಪಾಂಡವರೊಂದಿಗೆ ನಮ್ಮವರಲ್ಲಿ ಯಾರೂ ಒಬ್ಬನೇ ಯುದ್ಧಮಾಡಬಾರದು. ಪಾಂಡವರೊಂದಿಗೆ ಒಬ್ಬನೇ ಯುದ್ಧಮಾಡುತ್ತಿರುವವನನ್ನು ಬಿಟ್ಟುಬಂದರೆ ಅಂತವನು ಪಂಚಮಹಾಪಾತಕ ಮತ್ತು ಉಪಪಾತಕಗಳಿಂದ ಯುಕ್ತನಾಗುತ್ತಾನೆ.

[4]09007009e ಅನ್ಯೋನ್ಯಂ ಪರಿರಕ್ಷದ್ಭಿರ್ಯೋದ್ಧವ್ಯಂ ಸಹಿತೈಶ್ಚ ನಃ||

09007010a ಏವಂ ತೇ ಸಮಯಂ ಕೃತ್ವಾ ಸರ್ವೇ ತತ್ರ ಮಹಾರಥಾಃ|

09007010c ಮದ್ರರಾಜಂ ಪುರಸ್ಕೃತ್ಯ ತೂರ್ಣಮಭ್ಯದ್ರವನ್ಪರಾನ್||

ನಾವೆಲ್ಲರೂ ಒಟ್ಟಾಗಿ ಅನ್ಯೋನ್ಯರನ್ನು ರಕ್ಷಿಸುತ್ತಾ ಶತ್ರುಗಳೊಂದಿಗೆ ಯುದ್ಧಮಾಡಬೇಕು!” ಹೀಗೆ ಒಪ್ಪಂದವನ್ನು ಮಾಡಿಕೊಂಡು ಆ ಮಹಾರಥರೆಲ್ಲರೂ ಮದ್ರರಾಜನನ್ನು ಮುಂದೆ ಬಿಟ್ಟುಕೊಂಡು ಬೇಗನೆ ಶತ್ರುಗಳ ಮೇಲೆ ಆಕ್ರಮಣ ನಡೆಸಿದರು.

09007011a ತಥೈವ ಪಾಂಡವಾ ರಾಜನ್ವ್ಯೂಹ್ಯ ಸೈನ್ಯಂ ಮಹಾರಣೇ|

09007011c ಅಭ್ಯಯುಃ ಕೌರವಾನ್ಸರ್ವಾನ್ಯೋತ್ಸ್ಯಮಾನಾಃ ಸಮಂತತಃ||

ರಾಜನ್! ಹಾಗೆಯೇ ಪಾಂಡವರು ಕೂಡ ಮಹಾರಣದಲ್ಲಿ ಸೈನ್ಯವನ್ನು ವ್ಯೂಹದಲ್ಲಿ ರಚಿಸಿ ಉತ್ಸಾಹದಿಂದ ಎಲ್ಲಕಡೆಗಳಿಂದ ಕೌರವರೆಲ್ಲರನ್ನೂ ಆಕ್ರಮಣಿಸಿದರು.

09007012a ತದ್ಬಲಂ ಭರತಶ್ರೇಷ್ಠ ಕ್ಷುಬ್ಧಾರ್ಣವಸಮಸ್ವನಂ|

09007012c ಸಮುದ್ಧೂತಾರ್ಣವಾಕಾರಮುದ್ಧೂತರಥಕುಂಜರಂ||

ಭರತಶ್ರೇಷ್ಠ! ಆ ಸೇನೆಯು ಕ್ಷೋಭೆಗೊಂಡ ಮಹಾ ಸಮುದ್ರದಂತೆ ಭೋರ್ಗರೆಯುತ್ತಿತ್ತು. ಉಕ್ಕಿಬರುವ ಮಹಾಸಮುದ್ರದಂತೆ ರಥ-ಆನೆಗಳು ಮುನ್ನುಗ್ಗಿ ಹೋಗುತ್ತಿದ್ದವು.”

09007013 ಧೃತರಾಷ್ಟ್ರ ಉವಾಚ

09007013a ದ್ರೋಣಸ್ಯ ಭೀಷ್ಮಸ್ಯ ಚ ವೈ ರಾಧೇಯಸ್ಯ ಚ ಮೇ ಶ್ರುತಂ|

09007013c ಪಾತನಂ ಶಂಸ ಮೇ ಭೂಯಃ ಶಲ್ಯಸ್ಯಾಥ ಸುತಸ್ಯ ಮೇ||

ಧೃತರಾಷ್ಟ್ರನು ಹೇಳಿದನು: “ದ್ರೋಣ, ಭೀಷ್ಮ ಮತ್ತು ರಾಧೇಯರ ಕುರಿತು ನಾನು ಕೇಳಿದೆನು. ಈಗ ಪುನಃ ಶಲ್ಯ ಮತ್ತು ನನ್ನ ಮಗನ ಪತನದ ಕುರಿತು ನನಗೆ ಹೇಳು.

09007014a ಕಥಂ ರಣೇ ಹತಃ ಶಲ್ಯೋ ಧರ್ಮರಾಜೇನ ಸಂಜಯ|

09007014c ಭೀಮೇನ ಚ ಮಹಾಬಾಹುಃ ಪುತ್ರೋ ದುರ್ಯೋಧನೋ ಮಮ||

ಸಂಜಯ! ರಣದಲ್ಲಿ ಹೇಗೆ ಧರ್ಮರಾಜನಿಂದ ಶಲ್ಯ ಮತ್ತು ಭೀಮನಿಂದ ನನ್ನ ಮಗ ಮಹಾಬಾಹು ದುರ್ಯೋಧನರು ಹತರಾದರು?”

09007015 ಸಂಜಯ ಉವಾಚ

09007015a ಕ್ಷಯಂ ಮನುಷ್ಯದೇಹಾನಾಂ ರಥನಾಗಾಶ್ವಸಂಕ್ಷಯಂ|

09007015c ಶೃಣು ರಾಜನ್ ಸ್ಥಿರೋ ಭೂತ್ವಾ ಸಂಗ್ರಾಮಂ ಶಂಸತೋ ಮಮ||

ಸಂಜಯನು ಹೇಳಿದನು: “ರಾಜನ್! ಮನುಷ್ಯದೇಹಗಳು ಮತ್ತು ರಥ-ಆನೆ-ಕುದುರೆಗಳು ನಾಶಗೊಂಡ ಸಂಗ್ರಾಮದ ಕುರಿತು ಹೇಳುತ್ತೇನೆ. ಸ್ಥಿರನಾಗಿ ಕೇಳು.

09007016a ಆಶಾ ಬಲವತೀ ರಾಜನ್ಪುತ್ರಾಣಾಂ ತೇಽಭವತ್ತದಾ|

09007016c ಹತೇ ಭೀಷ್ಮೇ ಚ ದ್ರೋಣೇ ಚ ಸೂತಪುತ್ರೇ ಚ ಪಾತಿತೇ||

09007016e ಶಲ್ಯಃ ಪಾರ್ಥಾನ್ರಣೇ ಸರ್ವಾನ್ನಿಹನಿಷ್ಯತಿ ಮಾರಿಷ|

ರಾಜನ್! ಮಾರಿಷ! ಭೀಷ್ಮ, ದ್ರೋಣ ಮತ್ತು ಸೂತಪುತ್ರರು ಹತರಾಗಲು ರಣದಲ್ಲಿ ಶಲ್ಯನು ಪಾರ್ಥರೆಲ್ಲರನ್ನೂ ಸಂಹರಿಸುತ್ತಾನೆ ಎಂಬ ಬಲವತ್ತಾದ ಆಶೆಯು ನಿನ್ನ ಪುತ್ರರಲ್ಲುಂಟಾಗಿತ್ತು.

09007017a ತಾಮಾಶಾಂ ಹೃದಯೇ ಕೃತ್ವಾ ಸಮಾಶ್ವಾಸ್ಯ ಚ ಭಾರತ||

09007017c ಮದ್ರರಾಜಂ ಚ ಸಮರೇ ಸಮಾಶ್ರಿತ್ಯ ಮಹಾರಥಂ|

09007017e ನಾಥವಂತಮಥಾತ್ಮಾನಮಮನ್ಯತ ಸುತಸ್ತವ||

ಭಾರತ! ಅದೇ ಆಶೆಯನ್ನು ಹೃದಯಲ್ಲಿಟ್ಟುಕೊಂಡು ಆಶ್ವಾಸನೆಗಳಿಂದ ಸಮರದಲ್ಲಿ ಮಹಾರಥ ಮದ್ರರಾಜನನ್ನು ಆಶ್ರಯಿಸಿ ನಿನ್ನ ಮಕ್ಕಳು ತಮ್ಮನ್ನು ತಾವೇ ನಾಥವಂತರೆಂದು ತಿಳಿದುಕೊಂಡಿದ್ದರು.

09007018a ಯದಾ ಕರ್ಣೇ ಹತೇ ಪಾರ್ಥಾಃ ಸಿಂಹನಾದಂ ಪ್ರಚಕ್ರಿರೇ|

09007018c ತದಾ ರಾಜನ್ಧಾರ್ತರಾಷ್ಟ್ರಾನಾವಿವೇಶ ಮಹದ್ಭಯಂ||

ಕರ್ಣನು ಹತನಾದಾಗ ಪಾರ್ಥರು ಮಾಡಿದ ಸಿಂಹನಾದದಿಂದ ಧಾರ್ತರಾಷ್ಟ್ರರಲ್ಲಿ ಮಹಾ ಭಯವು ಆವೇಶಗೊಂಡಿತ್ತು.

09007019a ತಾನ್ಸಮಾಶ್ವಾಸ್ಯ ತು ತದಾ ಮದ್ರರಾಜಃ ಪ್ರತಾಪವಾನ್|

09007019c ವ್ಯೂಹ್ಯ ವ್ಯೂಹಂ ಮಹಾರಾಜ ಸರ್ವತೋಭದ್ರಮೃದ್ಧಿಮತ್||

ಮಹಾರಾಜ! ಅವರನ್ನು ಸಮಾಧಾನಗೊಳಿಸಿ ಪ್ರತಾಪವಾನ್ ಮದ್ರರಾಜನು ವೃದ್ಧಿಕಾರಕ ಸರ್ವತೋಭದ್ರ ಸೇನಾವ್ಯೂಹವನ್ನು ರಚಿಸಿದನು.

09007020a ಪ್ರತ್ಯುದ್ಯಾತೋ ರಣೇ ಪಾರ್ಥಾನ್ಮದ್ರರಾಜಃ ಪ್ರತಾಪವಾನ್|

09007020c ವಿಧುನ್ವನ್ಕಾರ್ಮುಕಂ ಚಿತ್ರಂ ಭಾರಘ್ನಂ ವೇಗವತ್ತರಂ||

09007021a ರಥಪ್ರವರಮಾಸ್ಥಾಯ ಸೈಂಧವಾಶ್ವಂ ಮಹಾರಥಃ|

09007021c ತಸ್ಯ ಸೀತಾ[5] ಮಹಾರಾಜ ರಥಸ್ಥಾಶೋಭಯದ್ರಥಂ||

ಮಹಾರಾಜ! ಮಹಾರಥ ಪ್ರತಾಪವಾನ್ ಮದ್ರರಾಜನು ರಣದಲ್ಲಿ ಚಿತ್ರಿತ-ಶತ್ರುಭಾರನಾಶಕ-ವೇಗವತ್ತರ ಧನುಸ್ಸನ್ನು ಸೆಳೆಯುತ್ತಾ ಸಿಂಧುದೇಶದ ಕುದುರೆಗಳನ್ನು ಕಟ್ಟಿದ್ದ ಶೇಷ್ಠ ರಥವನ್ನು ಏರಿ ಪಾರ್ಥರನ್ನು ಆಕ್ರಮಣಿಸಿದನು. ರಥದಲ್ಲಿದ್ದ ಅವನ ಸಾರಥಿಯೂ ರಥವನ್ನು ಶೋಭಾಯಮಾನಗೊಳಿಸಿದನು.

09007022a ಸ ತೇನ ಸಂವೃತೋ ವೀರೋ ರಥೇನಾಮಿತ್ರಕರ್ಶನಃ|

09007022c ತಸ್ಥೌ ಶೂರೋ ಮಹಾರಾಜ ಪುತ್ರಾಣಾಂ ತೇ ಭಯಪ್ರಣುತ್||

ಮಹಾರಾಜ! ಆ ವೀರ ಅಮಿತ್ರಕರ್ಶನ ಶೂರನು ನಿನ್ನ ಪುತ್ರರ ಭಯವನ್ನು ಹೋಗಲಾಡಿಸುತ್ತಾ ಆ ರಥದಲ್ಲಿ ಸಿದ್ಧನಾಗಿ ನಿಂತಿದ್ದನು.

09007023a ಪ್ರಯಾಣೇ ಮದ್ರರಾಜೋಽಭೂನ್ಮುಖಂ ವ್ಯೂಹಸ್ಯ ದಂಶಿತಃ|

09007023c ಮದ್ರಕೈಃ ಸಹಿತೋ ವೀರೈಃ ಕರ್ಣಪುತ್ರೈಶ್ಚ ದುರ್ಜಯೈಃ||

ಪ್ರಯಾಣದ ಸಮದಲ್ಲಿ ಮದ್ರರಾಜನು ಕವಚವನ್ನು ಧರಿಸಿ ವೀರ ಮದ್ರಕರು ಮತ್ತು ದುರ್ಜಯ ಕರ್ಣಪುತ್ರರೊಂದಿಗೆ ವ್ಯೂಹದ ಮುಖಭಾಗದಲ್ಲಿದ್ದನು.

09007024a ಸವ್ಯೇಽಭೂತ್ಕೃತವರ್ಮಾ ಚ ತ್ರಿಗರ್ತೈಃ ಪರಿವಾರಿತಃ|

09007024c ಗೌತಮೋ ದಕ್ಷಿಣೇ ಪಾರ್ಶ್ವೇ ಶಕೈಶ್ಚ ಯವನೈಃ ಸಹ||

ಎಡಭಾಗದಲ್ಲಿ ತ್ರಿಗರ್ತರಿಂದ ಪರಿವಾರಿತನಾದ ಕೃತವರ್ಮನೂ, ಬಲಭಾಗದಲ್ಲಿ ಶಕ-ಯವನರೊಂದಿಗೆ ಗೌತಮ ಕೃಪನೂ ಇದ್ದರು.

09007025a ಅಶ್ವತ್ಥಾಮಾ ಪೃಷ್ಠತೋಽಭೂತ್ಕಾಂಬೋಜೈಃ ಪರಿವಾರಿತಃ|

09007025c ದುರ್ಯೋಧನೋಽಭವನ್ಮಧ್ಯೇ ರಕ್ಷಿತಃ ಕುರುಪುಂಗವೈಃ||

ಕಾಂಬೋಜರಿಂದ ಪರಿವಾರಿತನಾಗಿ ಅಶ್ವತ್ಥಾಮನು ಪೃಷ್ಠ ಭಾಗದಲ್ಲಿದ್ದನು ಮತ್ತು ಕುರುಪುಂಗವರಿಂದ ರಕ್ಷಿತನಾಗಿ ದುರ್ಯೋಧನನು ಮಧ್ಯದಲ್ಲಿದ್ದನು.

09007026a ಹಯಾನೀಕೇನ ಮಹತಾ ಸೌಬಲಶ್ಚಾಪಿ ಸಂವೃತಃ|

09007026c ಪ್ರಯಯೌ ಸರ್ವಸೈನ್ಯೇನ ಕೈತವ್ಯಶ್ಚ ಮಹಾರಥಃ||

ಮಹಾ ಸೇನೆಯಿಂದ ಪರಿವೃತನಾಗಿ ಸೌಬಲ ಶಕುನಿಯೂ ಮಹಾರಥ ಕೈತವ್ಯ ಉಲೂಕನೂ ಸರ್ವಸೇನೆಗಳಿಂದ ಪರಿವೃತರಾಗಿ ಹೊರಟರು.

09007027a ಪಾಂಡವಾಶ್ಚ ಮಹೇಷ್ವಾಸಾ ವ್ಯೂಹ್ಯ ಸೈನ್ಯಮರಿಂದಮಾಃ|

09007027c ತ್ರಿಧಾ ಭೂತ್ವಾ ಮಹಾರಾಜ ತವ ಸೈನ್ಯಮುಪಾದ್ರವನ್||

ಮಹಾರಾಜ! ಮಹೇಷ್ವಾಸ ಅರಿಂದಮ ಪಾಂಡವರು ವ್ಯೂಹವನ್ನು ಮೂರು ಭಾಗಗಳಲ್ಲಿ ರಚಿಸಿಕೊಂಡು ನಿನ್ನ ಸೇನೆಯನ್ನು ಆಕ್ರಮಣಿಸಿದರು.

09007028a ಧೃಷ್ಟದ್ಯುಮ್ನಃ ಶಿಖಂಡೀ ಚ ಸಾತ್ಯಕಿಶ್ಚ ಮಹಾರಥಃ|

09007028c ಶಲ್ಯಸ್ಯ ವಾಹಿನೀಂ ತೂರ್ಣಮಭಿದುದ್ರುವುರಾಹವೇ||

ಧೃಷ್ಟದ್ಯುಮ್ನ, ಶಿಖಂಡೀ ಮತ್ತು ಮಹಾರಥ ಸಾತ್ಯಕಿಯರು ಕೂಡಲೇ ಶಲ್ಯನ ಸೇನೆಯನ್ನು ಯುದ್ಧದಲ್ಲಿ ಆಕ್ರಮಣಿಸಿದರು.

09007029a ತತೋ ಯುಧಿಷ್ಠಿರೋ ರಾಜಾ ಸ್ವೇನಾನೀಕೇನ ಸಂವೃತಃ|

09007029c ಶಲ್ಯಮೇವಾಭಿದುದ್ರಾವ ಜಿಘಾಂಸುರ್ಭರತರ್ಷಭ||

ಭರತರ್ಷಭ! ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಗಳಿಂದ ಪರಿವೃತನಾಗಿ ಶಲ್ಯನನ್ನೇ ಕೊಲ್ಲಲು ಬಯಸಿ ಅವನನ್ನು ಆಕ್ರಮಣಿಸಿದನು.

09007030a ಹಾರ್ದಿಕ್ಯಂ ತು ಮಹೇಷ್ವಾಸಮರ್ಜುನಃ ಶತ್ರುಪೂಗಹಾ|

09007030c ಸಂಶಪ್ತಕಗಣಾಂಶ್ಚೈವ ವೇಗತೋಽಭಿವಿದುದ್ರುವೇ||

ಶತ್ರುಸೈನ್ಯಹಂತಕ ಅರ್ಜುನನು ವೇಗದಿಂದ ಮಹೇಷ್ವಾಸ ಹಾರ್ದಿಕ್ಯನನ್ನೂ ಮತ್ತು ಸಂಶಪ್ತಕಗಣಗಳನ್ನೂ ಆಕ್ರಮಣಿಸಿದನು.

09007031a ಗೌತಮಂ ಭೀಮಸೇನೋ ವೈ ಸೋಮಕಾಶ್ಚ ಮಹಾರಥಾಃ|

09007031c ಅಭ್ಯದ್ರವಂತ ರಾಜೇಂದ್ರ ಜಿಘಾಂಸಂತಃ ಪರಾನ್ಯುಧಿ||

ರಾಜೇಂದ್ರ! ಭೀಮಸೇನ ಮತ್ತು ಮಹಾರಥ ಸೋಮಕರು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸುತ್ತಾ ಗೌತಮ ಕೃಪನನ್ನು ಆಕ್ರಮಣಿಸಿದರು.

09007032a ಮಾದ್ರೀಪುತ್ರೌ ತು ಶಕುನಿಮುಲೂಕಂ ಚ ಮಹಾರಥೌ|

09007032c ಸಸೈನ್ಯೌ ಸಹಸೇನೌ ತಾವುಪತಸ್ಥತುರಾಹವೇ||

ಮಹಾರಥ ಮಾದ್ರೀಪುತ್ರರಿಬ್ಬರೂ ಸೇನೆಗಳೊಂದಿಗೆ ಶಕುನಿ-ಉಲೂಕರನ್ನು ಅವರ ಸೇನೆಗಳೊಂದಿಗೆ ಯುದ್ಧದಲ್ಲಿ ಆಕ್ರಮಣಿಸಿದರು.

09007033a ತಥೈವಾಯುತಶೋ ಯೋಧಾಸ್ತಾವಕಾಃ ಪಾಂಡವಾನ್ರಣೇ|

09007033c ಅಭ್ಯದ್ರವಂತ ಸಂಕ್ರುದ್ಧಾ ವಿವಿಧಾಯುಧಪಾಣಯಃ||

ಹಾಗೆಯೇ ವಿವಿಧ ಆಯುಧಗಳನ್ನು ಹಿಡಿದಿದ್ದ ನಿನ್ನ ಕಡೆಯ ಹತ್ತು ಸಾವಿರ ಯೋಧರು ರಣದಲ್ಲಿ ಪಾಂಡವರನ್ನು ಆಕ್ರಮಣಿಸಿದರು.”

09007034 ಧೃತರಾಷ್ಟ್ರ ಉವಾಚ

09007034a ಹತೇ ಭೀಷ್ಮೇ ಮಹೇಷ್ವಾಸೇ ದ್ರೋಣೇ ಕರ್ಣೇ ಮಹಾರಥೇ|

09007034c ಕುರುಷ್ವಲ್ಪಾವಶಿಷ್ಟೇಷು ಪಾಂಡವೇಷು ಚ ಸಮ್ಯುಗೇ||

ಧೃತರಾಷ್ಟ್ರನು ಹೇಳಿದನು: “ಯುದ್ಧದಲ್ಲಿ ಮಹೇಷ್ವಾಸ ಭೀಷ್ಮ-ದ್ರೋಣರು ಮತ್ತು ಮಹಾರಥ ಕರ್ಣನು ಹತರಾಗಲು ಕುರುಗಳು ಮತ್ತು ಪಾಂಡವರಲ್ಲಿ ಸ್ವಲ್ಪವೇ ಸೈನ್ಯವು ಉಳಿದಿತ್ತು.

09007035a ಸುಸಂರಬ್ಧೇಷು ಪಾರ್ಥೇಷು ಪರಾಕ್ರಾಂತೇಷು ಸಂಜಯ|

09007035c ಮಾಮಕಾನಾಂ ಪರೇಷಾಂ ಚ ಕಿಂ ಶಿಷ್ಟಮಭವದ್ಬಲಂ||

ಸಂಜಯ! ಪಾರ್ಥರು ಕೋಪಾವಿಷ್ಟರಾಗಿ ಆಕ್ರಮಣ ನಡೆಸುತ್ತಿರಲು ಆಗ ನನ್ನವರ ಕಡೆ ಮತ್ತು ಶತ್ರುಗಳ ಕಡೆ ಎಷ್ಟು ಸೇನೆಗಳು ಉಳಿದುಕೊಂಡಿದ್ದವು?”

09007036 ಸಂಜಯ ಉವಾಚ

09007036a ಯಥಾ ವಯಂ ಪರೇ ರಾಜನ್ಯುದ್ಧಾಯ ಸಮವಸ್ಥಿತಾಃ|

09007036c ಯಾವಚ್ಚಾಸೀದ್ಬಲಂ ಶಿಷ್ಟಂ ಸಂಗ್ರಾಮೇ ತನ್ನಿಬೋಧ ಮೇ||

ಸಂಜಯನು ಹೇಳಿದನು: “ರಾಜನ್! ನಾವು ಮತ್ತು ಶತ್ರುಗಳು ಯುದ್ಧಕ್ಕೆ ಸಜ್ಜಾಗಿರುವಾಗ ಸಂಗ್ರಾಮದಲ್ಲಿ ಎಷ್ಟು ಸೇನೆಗಳಿದ್ದವು ಎನ್ನುವುದನ್ನು ನನ್ನಿಂದ ಕೇಳು!

09007037a ಏಕಾದಶ ಸಹಸ್ರಾಣಿ ರಥಾನಾಂ ಭರತರ್ಷಭ|

09007037c ದಶ ದಂತಿಸಹಸ್ರಾಣಿ ಸಪ್ತ ಚೈವ ಶತಾನಿ ಚ||

09007038a ಪೂರ್ಣೇ ಶತಸಹಸ್ರೇ ದ್ವೇ ಹಯಾನಾಂ ಭರತರ್ಷಭ|

09007038c ನರಕೋಟ್ಯಸ್ತಥಾ[6] ತಿಸ್ರೋ ಬಲಮೇತತ್ತವಾಭವತ್||

ಭರತರ್ಷಭ! ನಿನ್ನ ಪಕ್ಷದಲ್ಲಿ ಹನ್ನೊಂದು ಸಾವಿರ ರಥಗಳೂ, ಹತ್ತು ಸಾವಿರದ ಏಳು ನೂರು ಆನೆಗಳೂ, ಎರಡು ಲಕ್ಷ ಕುದುರೆಗಳೂ ಮತ್ತು ಮೂರು ಕೋಟಿ ಪದಾತಿಸೈನಿಕರೂ ಉಳಿದುಕೊಂಡಿದ್ದರು.

09007039a ರಥಾನಾಂ ಷಟ್ಸಹಸ್ರಾಣಿ ಷಟ್ಸಹಸ್ರಾಶ್ಚ ಕುಂಜರಾಃ|

09007039c ದಶ ಚಾಶ್ವಸಹಸ್ರಾಣಿ ಪತ್ತಿಕೋಟೀ ಚ ಭಾರತ||

09007040a ಏತದ್ಬಲಂ ಪಾಂಡವಾನಾಮಭವಚ್ಚೇಷಮಾಹವೇ|

ಭಾರತ! ಪಾಂಡವರ ಪಕ್ಷದಲ್ಲಿ ಆರು ಸಾವಿರ ರಥಗಳೂ, ಆರು ಸಾವಿರ ಆನೆಗಳೂ, ಹತ್ತು ಸಾವಿರ ಕುದುರೆಗಳೂ ಮತ್ತು ಎರಡು ಕೋಟಿ ಪದಾತಿಸೈನಿಕರೂ ಉಳಿದುಕೊಂಡಿದ್ದರು.

09007040c ಏತ ಏವ ಸಮಾಜಗ್ಮುರ್ಯುದ್ಧಾಯ ಭರತರ್ಷಭ||

09007041a ಏವಂ ವಿಭಜ್ಯ ರಾಜೇಂದ್ರ ಮದ್ರರಾಜಮತೇ ಸ್ಥಿತಾಃ|

09007041c ಪಾಂಡವಾನ್ಪ್ರತ್ಯುದೀಯಾಮ ಜಯಗೃದ್ಧಾಃ ಪ್ರಮನ್ಯವಃ||

ಭರತರ್ಷಭ! ಹೀಗೆ ಅವರು ಯುದ್ಧಕ್ಕೆ ಸೇರಿದ್ದರು. ರಾಜೇಂದ್ರ! ಈ ರೀತಿ ವಿಭಜನೆಗೊಂಡು ಮದ್ರರಾಜನ ಅಧೀನರಾಗಿದ್ದ ನಾವು ಜಯವನ್ನು ಬಯಸಿ ಅತ್ಯಂತ ಕುಪಿತರಾಗಿ ಪಾಂಡವರನ್ನು ಎದುರಿಸಿ ಯುದ್ಧಮಾಡಿದೆವು.

09007042a ತಥೈವ ಪಾಂಡವಾಃ ಶೂರಾಃ ಸಮರೇ ಜಿತಕಾಶಿನಃ|

09007042c ಉಪಯಾತಾ ನರವ್ಯಾಘ್ರಾಃ ಪಾಂಚಾಲಾಶ್ಚ ಯಶಸ್ವಿನಃ||

ಹಾಗೆಯೇ ಜಯೋಲ್ಲಾಸಿತ ಶೂರ ಪಾಂಡವರು ಮತ್ತು ಯಶಸ್ವಿ ನರವ್ಯಾಘ್ರ ಪಾಂಚಾಲರು ಸಮರದಲ್ಲಿ ಮುಂದುವರೆದರು.

09007043a ಏವಮೇತೇ ಬಲೌಘೇನ ಪರಸ್ಪರವಧೈಷಿಣಃ|

09007043c ಉಪಯಾತಾ ನರವ್ಯಾಘ್ರಾಃ ಪೂರ್ವಾಂ ಸಂಧ್ಯಾಂ ಪ್ರತಿ ಪ್ರಭೋ||

ಪ್ರಭೋ! ಈ ರೀತಿ ಸೇನೆಗಳೊಂದಿಗೆ ಪರಸ್ಪರರನ್ನು ವಧಿಸಲು ಇಚ್ಛಿಸಿ ನರವ್ಯಾಘ್ರರು ಆ ದಿನದ ಪ್ರಾತಃಸಂಧ್ಯಾಸಮಯದಲ್ಲಿ ಹೊರಟರು.

09007044a ತತಃ ಪ್ರವವೃತೇ ಯುದ್ಧಂ ಘೋರರೂಪಂ ಭಯಾನಕಂ|

09007044c ತಾವಕಾನಾಂ ಪರೇಷಾಂ ಚ ನಿಘ್ನತಾಮಿತರೇತರಂ||

ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಪರಸ್ಪರರನ್ನು ಸಂಹರಿಸುವ ಭಯಾನಕ ಘೋರರೂಪೀ ಯುದ್ಧವು ಪ್ರಾರಂಭವಾಯಿತು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ವ್ಯೂಹನಿರ್ಮಾಣೇ ಸಪ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ವ್ಯೂಹನಿರ್ಮಾಣ ಎನ್ನುವ ಏಳನೇ ಅಧ್ಯಾಯವು.

[1] ರಥಾನಾಸ್ತರಣೋಪೇತಾಂಶ್ಚಕ್ರುರನ್ಯೇ ಎಂಬ ಪಾಠಾಂತರವಿದೆ (ನೀಲಕಂಠ).

[2] ಅಯೋಧನಾರ್ಥಂ ಎಂಬ ಪಾಠಾಂತರವಿದೆ (ನೀಲಕಂಠ).

[3] ಪ್ರಸ್ಥಿತಾನಿ ವ್ಯದೃಶ್ಯಂತ ಮೃತ್ಯುಂ ಎಂಬ ಪಾಠಾಂತರವಿದೆ (ನೀಲಕಂಠ).

[4] ದಕ್ಷಿಣಾತ್ಯ ಸಂಪುಟದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಅದ್ಯಾಚಾರ್ಯಸುತೋ ದ್ರೌಣಿರ್ನೈಕೋ ಯುಧೇತ ಶತ್ರುಭಿಃ| ಅರ್ಥಾತ್ ಇಂದು ಆಚಾರ್ಯಸುತ ದ್ರೌಣಿಯು ಶತ್ರುಗಳೊಡನೆ ಒಬ್ಬನೇ ಯುದ್ಧಮಾಡಬಾರದು!

[5] ಸೂತೋ ಎಂಬ ಪಾಠಾಂತರವಿದೆ (ನೀಲಕಂಠ).

[6] ಪತ್ತಿಕೋಟ್ಯಸ್ತಥಾ ಎಂಬ ಪಾಠಾಂತರವಿದೆ (ನೀಲಕಂಠ).

Comments are closed.