Shalya Parva: Chapter 64

ಶಲ್ಯಪರ್ವ: ಗದಾಯುದ್ಧ ಪರ್ವ

೬೪

ಕೃಪ-ಅಶ್ವತ್ಥಾಮ-ಕೃತವರ್ಮರು ದುರ್ಯೋಧನನು ಹತನಾದುದನ್ನು ಕೇಳಿ ರಣರಂಗಕ್ಕೆ ಬಂದು ಅವನನ್ನು ನೋಡಿದುದು (೧-೧೦). ಅಶ್ವತ್ಥಾಮನ ವಾಕ್ಯ (೧೧-೧೯). ದುರ್ಯೋಧನ ವಾಕ್ಯ (೨೦-೩೦). ಅಶ್ವತ್ಥಾಮನಿಗೆ ಕುರುಸೇನಾಪತ್ಯದ ಅಭಿಷೇಕ (೩೧-೪೩).

09064001 ಸಂಜಯ ಉವಾಚ

09064001a ವಾತಿಕಾನಾಂ ಸಕಾಶಾತ್ತು ಶ್ರುತ್ವಾ ದುರ್ಯೋಧನಂ ಹತಂ|

09064001c ಹತಶಿಷ್ಟಾಸ್ತತೋ ರಾಜನ್ಕೌರವಾಣಾಂ ಮಹಾರಥಾಃ||

09064002a ವಿನಿರ್ಭಿನ್ನಾಃ ಶಿತೈರ್ಬಾಣೈರ್ಗದಾತೋಮರಶಕ್ತಿಭಿಃ|

09064002c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ||

09064002e ತ್ವರಿತಾ ಜವನೈರಶ್ವೈರಾಯೋಧನಮುಪಾಗಮನ್||

ಸಂಜಯನು ಹೇಳಿದನು: “ರಾಜನ್! ವಾರ್ತಾವಾಹಿಗಳಿಂದ ದುರ್ಯೋಧನನು ಹತನಾದನೆಂದು ಕೇಳಿ ಹತರಾಗದೇ ಉಳಿದಿದ್ದ ಆದರೆ ನಿಶಿತ ಬಾಣಗಳಿಂದ, ಗದೆ-ತೋಮರ-ಶಕ್ತಿಗಳ ಹೊಡೆತದಿಂದ ಗಾಯಗೊಂಡಿದ್ದ ಕೌರವರ ಮಹಾರಥರು ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ತ್ವರೆಮಾಡಿ ವೇಗಶಾಲೀ ಕುದುರೆಗಳೊಂದಿಗೆ ರಣರಂಗವನ್ನು ತಲುಪಿದರು.

09064003a ತತ್ರಾಪಶ್ಯನ್ಮಹಾತ್ಮಾನಂ ಧಾರ್ತರಾಷ್ಟ್ರಂ ನಿಪಾತಿತಂ|

09064003c ಪ್ರಭಗ್ನಂ ವಾಯುವೇಗೇನ ಮಹಾಶಾಲಂ ಯಥಾ ವನೇ||

ಅಲ್ಲಿ ಅವರು ಚಂಡಮಾರುತದಿಂದ ವನದಲ್ಲಿ ಮುರಿದುಬಿದ್ದ ಮಹಾಶಾಲ ವೃಕ್ಷದಂತೆ ಕೆಳಗೆ ಬಿದ್ದಿದ್ದ ಮಹಾತ್ಮ ಧಾರ್ತರಾಷ್ಟ್ರನನ್ನು ನೋಡಿದರು.

09064004a ಭೂಮೌ ವಿವೇಷ್ಟಮಾನಂ ತಂ ರುಧಿರೇಣ ಸಮುಕ್ಷಿತಂ|

09064004c ಮಹಾಗಜಮಿವಾರಣ್ಯೇ ವ್ಯಾಧೇನ ವಿನಿಪಾತಿತಂ||

ಅರಣ್ಯದಲ್ಲಿ ವ್ಯಾಧನಿಂದ ಕೆಳಗುರುಳಿಸಲ್ಪಟ್ಟ ಮಹಾಗಜದಂತೆ ಅವನು ರಕ್ತದಲ್ಲಿ ತೋಯ್ದುಹೋಗಿ ನೆಲದಮೇಲೆ ಚಡಪಡಿಸುತ್ತಿದ್ದನು.

09064005a ವಿವರ್ತಮಾನಂ ಬಹುಶೋ ರುಧಿರೌಘಪರಿಪ್ಲುತಂ|

09064005c ಯದೃಚ್ಚಯಾ ನಿಪತಿತಂ ಚಕ್ರಮಾದಿತ್ಯಗೋಚರಂ||

ರಕ್ತದ ಕೋಡಿಯಲ್ಲಿಯೇ ಮುಳುಗಿ ಹೋಗಿ ಪ್ರಾಣಸಂಕಟದಿಂದ ಹೊರಳಾಡುತ್ತಿದ್ದ ಅವನು ತನ್ನ ಇಚ್ಛೆಯಿಂದಲೇ ಕೆಳಗೆ ಬಿದ್ದಿದ್ದ ಸೂರ್ಯನ ಚಕ್ರದಂತೆ ಕಾಣುತ್ತಿದ್ದನು.

09064006a ಮಹಾವಾತಸಮುತ್ಥೇನ ಸಂಶುಷ್ಕಮಿವ ಸಾಗರಂ|

09064006c ಪೂರ್ಣಚಂದ್ರಮಿವ ವ್ಯೋಮ್ನಿ ತುಷಾರಾವೃತಮಂಡಲಂ||

ಮೇಲೆದ್ದ ಭಿರುಗಾಳಿಯಿಂದ ಒಣಗಿದ ಸಾಗರದಂತೆ ಮತ್ತು ಹಿಮದಿಂದ ಆವೃತವಾದ ಆಕಾಶಮಂಡಲದಿಂದ ಕೂಡಿದ ಪೂರ್ಣಚಂದ್ರನಂತೆ ದುರ್ಯೋಧನನು ಕಾಣುತ್ತಿದ್ದನು.

09064007a ರೇಣುಧ್ವಸ್ತಂ ದೀರ್ಘಭುಜಂ ಮಾತಂಗಸಮವಿಕ್ರಮಂ|

09064007c ವೃತಂ ಭೂತಗಣೈರ್ಘೋರೈಃ ಕ್ರವ್ಯಾದೈಶ್ಚ ಸಮಂತತಃ||

09064007e ಯಥಾ ಧನಂ ಲಿಪ್ಸಮಾನೈರ್ಭೃತ್ಯೈರ್ನೃಪತಿಸತ್ತಮಂ||

ಮಾತಂಗಸಮ ವಿಕ್ರಮಿಯಾಗಿದ್ದ ಆ ದೀರ್ಘಭುಜ ನೃಪತಿಸತ್ತಮನು ಧೂಳಿನಿಂದ ತುಂಬಿಹೋಗಿದ್ದು, ಧನವನ್ನು ಕಸಿದುಕೊಳ್ಳುವ ಇಚ್ಛೆಯಿಂದ ಸೇವಕರು ಮುತ್ತುವಂತೆ ಸುತ್ತಲೂ ಘೋರ ಭೂತಗಣಗಳಿಂದಲೂ ಮಾಂಸಾಶಿ ಮೃಗ-ಪಕ್ಷಿಗಳಿಂದಲೂ ಆವೃತನಾಗಿದ್ದನು.

09064008a ಭ್ರುಕುಟೀಕೃತವಕ್ತ್ರಾಂತಂ ಕ್ರೋಧಾದುದ್ವೃತ್ತಚಕ್ಷುಷಂ|

09064008c ಸಾಮರ್ಷಂ ತಂ ನರವ್ಯಾಘ್ರಂ ವ್ಯಾಘ್ರಂ ನಿಪತಿತಂ ಯಥಾ||

ಕೆಳಗುರುಳಿ ಸಿಟ್ಟಾದ ವ್ಯಾಘ್ರನಂತಿದ್ದ ಆ ನರವ್ಯಾಘ್ರನ ಕ್ರೋಧದಿಂದ ಗಂಟುಕಟ್ಟಿದ್ದ ಹುಬ್ಬುಗಳು ಬಾಯಿಯವರೆಗೂ ಪ್ರಸರಿಸಿದ್ದವು. ಕಣ್ಣುಗಳು ಹೊರಚಾಚಿದಂತಿದ್ದವು.

09064009a ತೇ ತು ದೃಷ್ಟ್ವಾ ಮಹೇಷ್ವಾಸಾ ಭೂತಲೇ ಪತಿತಂ ನೃಪಂ|

09064009c ಮೋಹಮಭ್ಯಾಗಮನ್ಸರ್ವೇ ಕೃಪಪ್ರಭೃತಯೋ ರಥಾಃ||

ಭೂತಲದಲ್ಲಿ ಬಿದ್ದಿರುವ ಆ ನೃಪನನ್ನು ಕಂಡು ಕೃಪನೇ ಮೊದಲಾದ ಆ ಮಹೇಷ್ವಾಸ ಮಹಾರಥರಿಗೆ ಮೋಹವು ಆವೇಶಗೊಂಡಿತು.

09064010a ಅವತೀರ್ಯ ರಥೇಭ್ಯಸ್ತು ಪ್ರಾದ್ರವನ್ರಾಜಸಂನಿಧೌ|

09064010c ದುರ್ಯೋಧನಂ ಚ ಸಂಪ್ರೇಕ್ಷ್ಯ ಸರ್ವೇ ಭೂಮಾವುಪಾವಿಶನ್||

ರಥದಿಂದ ಕೆಳಗಿಳಿದು ರಾಜಸನ್ನಿಧಿಗೆ ಓಡಿಬಂದು ದುರ್ಯೋಧನನನ್ನು ನೋಡಿ ಎಲ್ಲರೂ ನೆಲದ ಮೇಲೆ ಕುಳಿತುಕೊಂಡರು.

09064011a ತತೋ ದ್ರೌಣಿರ್ಮಹಾರಾಜ ಬಾಷ್ಪಪೂರ್ಣೇಕ್ಷಣಃ ಶ್ವಸನ್|

09064011c ಉವಾಚ ಭರತಶ್ರೇಷ್ಠಂ ಸರ್ವಲೋಕೇಶ್ವರೇಶ್ವರಂ||

ಮಹಾರಾಜ! ಆಗ ಕಂಬನಿದುಂಬಿದ ಕಣ್ಣುಗಳಿಂದ ಕೂಡಿದ್ದ ದ್ರೌಣಿಯು ನಿಟ್ಟುಸಿರು ಬಿಡುತ್ತಾ ಸರ್ವ ಲೋಕೇಶ್ವರೇಶ್ವರ ಭರತಶ್ರೇಷ್ಠನಿಗೆ ಹೀಗೆಂದನು:

09064012a ನ ನೂನಂ ವಿದ್ಯತೇಽಸಹ್ಯಂ ಮಾನುಷ್ಯೇ ಕಿಂ ಚಿದೇವ ಹಿ|

09064012c ಯತ್ರ ತ್ವಂ ಪುರುಷವ್ಯಾಘ್ರ ಶೇಷೇ ಪಾಂಸುಷು ರೂಷಿತಃ||

“ಪುರುಷವ್ಯಾಘ್ರ! ನಿನ್ನಂತವನೇ ಕೆಸರಿನಲ್ಲಿ ಹೊರಳಾಡುತ್ತಿರುವಂತಾಯಿತೆಂದರೆ ಮನುಷ್ಯನಿಗೆ ಸಹಿಸಲಾಗದಂತಹುದು ಕಿಂಚಿತ್ತೂ ಇಲ್ಲವೆಂದಾಯಿತಲ್ಲವೇ?

09064013a ಭೂತ್ವಾ ಹಿ ನೃಪತಿಃ ಪೂರ್ವಂ ಸಮಾಜ್ಞಾಪ್ಯ ಚ ಮೇದಿನೀಂ|

09064013c ಕಥಮೇಕೋಽದ್ಯ ರಾಜೇಂದ್ರ ತಿಷ್ಠಸೇ ನಿರ್ಜನೇ ವನೇ||

ರಾಜೇಂದ್ರ! ಹಿಂದೆ ನೃಪತಿಯಾಗಿ ಇಡೀ ಮೇದಿನಿಗೇ ಆಜ್ಞೆನೀಡುತ್ತಿದ್ದ ನೀನು ಇಂದು ಏಕಾಂಗಿಯಾಗಿ ನಿರ್ಜನ ವನದಲ್ಲಿ ಹೇಗಿರುವೆ?

09064014a ದುಃಶಾಸನಂ ನ ಪಶ್ಯಾಮಿ ನಾಪಿ ಕರ್ಣಂ ಮಹಾರಥಂ|

09064014c ನಾಪಿ ತಾನ್ಸುಹೃದಃ ಸರ್ವಾನ್ಕಿಮಿದಂ ಭರತರ್ಷಭ||

ಭರತರ್ಷಭ! ದುಃಶಾಸನನನ್ನು ಕಾಣುತ್ತಿಲ್ಲ. ಮಹಾರಥ ಕರ್ಣನೂ ಕಾಣುತ್ತಿಲ್ಲ. ಸರ್ವ ಸುಹೃದ್ಗಣಗಳನ್ನೂ ಕಾಣುತ್ತಿಲ್ಲ! ಇದೇನಾಗಿಹೋಯಿತು?

09064015a ದುಃಖಂ ನೂನಂ ಕೃತಾಂತಸ್ಯ ಗತಿಂ ಜ್ಞಾತುಂ ಕಥಂ ಚನ|

09064015c ಲೋಕಾನಾಂ ಚ ಭವಾನ್ಯತ್ರ ಶೇತೇ ಪಾಂಸುಷು ರೂಷಿತಃ||

ಕೆಸರಿನಲ್ಲಿ ಹೊರಳಾಡುತ್ತಾ ನೀನು ಮಲಗಿರುವುದನ್ನು ನೋಡಿದರೆ ಕೃತಾಂತನು ಲೋಕಗಳನ್ನು ನಡೆಸುವ ಮತ್ತು ದುಃಖವನ್ನು ತಂದೊಡ್ಡುವ ಬಗೆಯನ್ನು ಅರಿತುಕೊಳ್ಳುವುದು ಕಷ್ಟಸಾಧ್ಯ ಎಂದೆನಿಸುತ್ತದೆ.

09064016a ಏಷ ಮೂರ್ಧಾವಸಿಕ್ತಾನಾಮಗ್ರೇ ಗತ್ವಾ ಪರಂತಪಃ|

09064016c ಸತೃಣಂ ಗ್ರಸತೇ ಪಾಂಸುಂ ಪಶ್ಯ ಕಾಲಸ್ಯ ಪರ್ಯಯಂ||

ಮೂರ್ಧಾಭಿಷಿಕ್ತರಾದ ರಾಜರ ಮುಂದಾಳುವಾಗಿದ್ದ ಈ ಪರಂತಪನು ಹುಲ್ಲಿನೊಂದಿಗೆ ಮಿಶ್ರಣವಾಗಿರುವ ಧೂಳನ್ನು ತಿನ್ನುತ್ತಿದ್ದಾನೆ! ಕಾಲದ ವೈಪರೀತ್ಯವನ್ನಾದರೂ ನೋಡಿ!

09064017a ಕ್ವ ತೇ ತದಮಲಂ ಚತ್ರಂ ವ್ಯಜನಂ ಕ್ವ ಚ ಪಾರ್ಥಿವ|

09064017c ಸಾ ಚ ತೇ ಮಹತೀ ಸೇನಾ ಕ್ವ ಗತಾ ಪಾರ್ಥಿವೋತ್ತಮ||

ಪಾರ್ಥಿವ! ನಿನ್ನ ಆ ಅಮಲ ಚತ್ರವೆಲ್ಲಿ? ನಿನ್ನ ಆ ಚಾಮರವೆಲ್ಲಿ? ಪಾರ್ಥಿವೋತ್ತಮ! ನಿನ್ನ ಆ ಮಹಾಸೇನೆಯು ಎಲ್ಲಿ ಹೋಯಿತು?

09064018a ದುರ್ವಿಜ್ಞೇಯಾ ಗತಿರ್ನೂನಂ ಕಾರ್ಯಾಣಾಂ ಕಾರಣಾಂತರೇ|

09064018c ಯದ್ವೈ ಲೋಕಗುರುರ್ಭೂತ್ವಾ ಭವಾನೇತಾಂ ದಶಾಂ ಗತಃ||

ಲೋಕಗುರುವಾಗಿದ್ದ ನಿನಗೆ ಈ ದಶೆಯುಂಟಾಯಿತೆಂದರೆ ಆಗು ಹೋಗುಗಳ ಕಾರಣಗಳನ್ನು ತಿಳಿದುಕೊಳ್ಳುವುದು ಕಷ್ಟವೆಂದಾಯಿತಲ್ಲವೇ?

09064019a ಅಧ್ರುವಾ ಸರ್ವಮರ್ತ್ಯೇಷು ಧ್ರುವಂ ಶ್ರೀರುಪಲಕ್ಷ್ಯತೇ|

09064019c ಭವತೋ ವ್ಯಸನಂ ದೃಷ್ಟ್ವಾ ಶಕ್ರವಿಸ್ಪರ್ಧಿನೋ ಭೃಶಂ||

ಸಂಪತ್ತಿನಲ್ಲಿ ಶಕ್ರನೊಡನೆ ಕೂಡ ಸ್ಪರ್ಧಿಸುವಂತಿದ್ದ ನಿನಗೇ ಈ ವ್ಯಸನವುಂಟಾಯಿತೆಂದರೆ ಸರ್ವ ಮನುಷ್ಯರಲ್ಲಿ ಸಂಪತ್ತು ಅನಿಶ್ಚಿತವಾದುದು ಎನ್ನುವುದು ನಿಶ್ಚಯ!”

09064020a ತಸ್ಯ ತದ್ವಚನಂ ಶ್ರುತ್ವಾ ದುಃಖಿತಸ್ಯ ವಿಶೇಷತಃ|

09064020c ಉವಾಚ ರಾಜನ್ಪುತ್ರಸ್ತೇ ಪ್ರಾಪ್ತಕಾಲಮಿದಂ ವಚಃ||

09064021a ವಿಮೃಜ್ಯ ನೇತ್ರೇ ಪಾಣಿಭ್ಯಾಂ ಶೋಕಜಂ ಬಾಷ್ಪಮುತ್ಸೃಜನ್|

09064021c ಕೃಪಾದೀನ್ಸ ತದಾ ವೀರಾನ್ಸರ್ವಾನೇವ ನರಾಧಿಪಃ||

ರಾಜನ್! ವಿಶೇಷವಾಗಿ ದುಃಖಿತನಾಗಿದ್ದ ಅವನ ಆ ಮಾತನ್ನು ಕೇಳಿ ನಿನ್ನ ಮಗ ನರಾಧಿಪನು ಶೋಕದಿಂದ ಉಕ್ಕಿಬರುತ್ತಿದ್ದ ಕಣ್ಣೀರನ್ನು ಎರಡೂ ಕೈಗಳಿಂದ ಒರೆಸಿಕೊಳ್ಳುತ್ತಾ ಕೃಪನೇ ಮೊದಲಾದ ಆ ಸರ್ವ ವೀರರಿಗೆ ಸಮಯಕ್ಕೆ ತಕ್ಕುದಾದ ಈ ಮಾತನ್ನಾಡಿದನು:

09064022a ಈದೃಶೋ ಮರ್ತ್ಯಧರ್ಮೋಽಯಂ ಧಾತ್ರಾ ನಿರ್ದಿಷ್ಟ ಉಚ್ಯತೇ|

09064022c ವಿನಾಶಃ ಸರ್ವಭೂತಾನಾಂ ಕಾಲಪರ್ಯಾಯಕಾರಿತಃ||

“ಕಾಲದ ಉರುಳುವಿಕೆಯಿಂದ ಸರ್ವಭೂತಗಳ ವಿನಾಶವಾಗುತ್ತದೆ. ಇದೇ ಮನುಷ್ಯಧರ್ಮವೆಂದೂ ಇದನ್ನು ಧಾತಾರನೇ ನಿರ್ಧರಿಸಿದ್ದಾನೆಂದೂ ಹೇಳುತ್ತಾರೆ.

09064023a ಸೋಽಯಂ ಮಾಂ ಸಮನುಪ್ರಾಪ್ತಃ ಪ್ರತ್ಯಕ್ಷಂ ಭವತಾಂ ಹಿ ಯಃ|

09064023c ಪೃಥಿವೀಂ ಪಾಲಯಿತ್ವಾಹಮೇತಾಂ ನಿಷ್ಠಾಮುಪಾಗತಃ||

ಅದೇ ವಿನಾಶವನ್ನು ನಾನು ನಿಮ್ಮ ಸಮಕ್ಷಮದಲ್ಲಿ ಹೊಂದಿದ್ದೇನೆ. ಪೃಥ್ವಿಯನ್ನು ಪಾಲಿಸುತ್ತಿದ್ದ ನಾನು ಈ ಪರಿಸ್ಥಿತಿಯನ್ನು ಹೊಂದಿದ್ದೇನೆ.

09064024a ದಿಷ್ಟ್ಯಾ ನಾಹಂ ಪರಾವೃತ್ತೋ ಯುದ್ಧೇ ಕಸ್ಯಾಂ ಚಿದಾಪದಿ|

09064024c ದಿಷ್ಟ್ಯಾಹಂ ನಿಹತಃ ಪಾಪೈಶ್ಚಲೇನೈವ ವಿಶೇಷತಃ||

ಒಳ್ಳೆಯದಾಯಿತು! ನಾನು ಯುದ್ಧದಿಂದ ಎಂದೂ ಹಿಂದೆಸರಿಯಲಿಲ್ಲ! ಒಳ್ಳೆಯದಾಯಿತು! ಪಾಪಿಷ್ಟರು ನನ್ನನ್ನು ಮೋಸದಿಂದಲೇ ಕೊಂದರು!

09064025a ಉತ್ಸಾಹಶ್ಚ ಕೃತೋ ನಿತ್ಯಂ ಮಯಾ ದಿಷ್ಟ್ಯಾ ಯುಯುತ್ಸತಾ|

09064025c ದಿಷ್ಟ್ಯಾ ಚಾಸ್ಮಿ ಹತೋ ಯುದ್ಧೇ ನಿಹತಜ್ಞಾತಿಬಾಂಧವಃ||

ಒಳ್ಳೆಯದಾಯಿತು! ನಾನು ನಿತ್ಯವೂ ಉತ್ಸಾಹದಿಂದಲೇ ಯುದ್ಧಮಾಡಿದೆ! ಒಳ್ಳೆಯದಾಯಿತು! ನನ್ನ ಜ್ಞಾತಿಬಾಂಧವರೆಲ್ಲರೂ ಯುದ್ಧದಲ್ಲಿ ಹತನಾದ ನಂತರವೇ ನಾನು ಹತನಾದೆನು!

09064026a ದಿಷ್ಟ್ಯಾ ಚ ವೋಽಹಂ ಪಶ್ಯಾಮಿ ಮುಕ್ತಾನಸ್ಮಾಜ್ಜನಕ್ಷಯಾತ್|

09064026c ಸ್ವಸ್ತಿಯುಕ್ತಾಂಶ್ಚ ಕಲ್ಯಾಂಶ್ಚ ತನ್ಮೇ ಪ್ರಿಯಮನುತ್ತಮಂ||

ಒಳ್ಳೆಯದಾಯಿತು! ಈ ಜನಕ್ಷಯಯುದ್ಧದಿಂದ ಮುಕ್ತರಾಗಿರುವ ನಿಮ್ಮನ್ನು ನಾನು ನೋಡುತ್ತಿದ್ದೇನೆ! ಕುಶಲರಾಗಿರುವಿರಿ ಮತ್ತು ಕಾರ್ಯಸಮರ್ಥರಾಗಿದ್ದೀರಿ ಎಂದು ನೋಡಿ ಅತ್ಯಂತ ಸಂತೋಷವೂ ಆಗಿದೆ.

09064027a ಮಾ ಭವಂತೋಽನುತಪ್ಯಂತಾಂ ಸೌಹೃದಾನ್ನಿಧನೇನ ಮೇ|

09064027c ಯದಿ ವೇದಾಃ ಪ್ರಮಾಣಂ ವೋ ಜಿತಾ ಲೋಕಾ ಮಯಾಕ್ಷಯಾಃ||

ನನ್ನ ನಿಧನದ ಕುರಿತು ಸ್ನೇಹಭಾವದಿಂದ ನೀವು ಪರಿತಪಿಸಬೇಕಾಗಿಲ್ಲ! ವೇದಗಳಿಗೆ ಪ್ರಮಾಣವಿದೆಯೆಂದಾದರೆ ನಾನು ಅಕ್ಷಯ ಲೋಕಗಳನ್ನು ಗೆದ್ದುಕೊಂಡಿದ್ದೇನೆ!

09064028a ಮನ್ಯಮಾನಃ ಪ್ರಭಾವಂ ಚ ಕೃಷ್ಣಸ್ಯಾಮಿತತೇಜಸಃ|

09064028c ತೇನ ನ ಚ್ಯಾವಿತಶ್ಚಾಹಂ ಕ್ಷತ್ರಧರ್ಮಾತ್ಸ್ವನುಷ್ಠಿತಾತ್||

ಅಮಿತತೇಜಸ್ವಿ ಕೃಷ್ಣನ ಪ್ರಭಾವವನ್ನು ತಿಳಿದುಕೊಂಡಿದ್ದರೂ ಅವನ ಪ್ರೇರಣೆಗೆ ಬಾರದೇ ನಾನು ಕ್ಷತ್ರಧರ್ಮದಲ್ಲಿಯೇ ನಿರತನಾಗಿದ್ದೆ!

09064029a ಸ ಮಯಾ ಸಮನುಪ್ರಾಪ್ತೋ ನಾಸ್ಮಿ ಶೋಚ್ಯಃ ಕಥಂ ಚನ|

09064029c ಕೃತಂ ಭವದ್ಭಿಃ ಸದೃಶಮನುರೂಪಮಿವಾತ್ಮನಃ|

09064029e ಯತಿತಂ ವಿಜಯೇ ನಿತ್ಯಂ ದೈವಂ ತು ದುರತಿಕ್ರಮಂ||

ಆ ಕ್ಷತ್ರಧರ್ಮದ ಫಲವನ್ನು ನಾನು ಪಡೆದುಕೊಂಡಿದ್ದೇನೆ. ಅದರಲ್ಲಿ ಶೋಕಿಸುವಂತಾದ್ದು ಏನೂ ಇಲ್ಲ. ನೀವು ನಿಮಗೆ ಅನುರೂಪವಾದ ರೀತಿಗಳಲ್ಲಿ ಯುದ್ಧಮಾಡಿರುವಿರಿ! ನಿತ್ಯವೂ ನನ್ನ ವಿಜಯಕ್ಕೆ ಪ್ರಯತ್ನಿಸಿದರೂ ದೈವವನ್ನು ಅತಿಕ್ರಮಿಸಲು ಯಾರಿಗೂ ಸಾಧ್ಯವಿಲ್ಲ!”

09064030a ಏತಾವದುಕ್ತ್ವಾ ವಚನಂ ಬಾಷ್ಪವ್ಯಾಕುಲಲೋಚನಃ|

09064030c ತೂಷ್ಣೀಂ ಬಭೂವ ರಾಜೇಂದ್ರ ರುಜಾಸೌ ವಿಹ್ವಲೋ ಭೃಶಂ||

ಹೀಗೆ ಹೇಳಿ ಪ್ರಾಣಪ್ರಯಾಣದಿಂದ ತುಂಬಾ ವಿಹ್ವಲನಾಗಿದ್ದ ರಾಜೇಂದ್ರನು, ಕಣ್ಣೀರು ಮತ್ತು ವ್ಯಾಕುಲಗಳು ಅವನ ಕಣ್ಣುಗಳನ್ನು ತುಂಬಿರಲು, ಸುಮ್ಮನಾದನು.

09064031a ತಥಾ ತು ದೃಷ್ಟ್ವಾ ರಾಜಾನಂ ಬಾಷ್ಪಶೋಕಸಮನ್ವಿತಂ|

09064031c ದ್ರೌಣಿಃ ಕ್ರೋಧೇನ ಜಜ್ವಾಲ ಯಥಾ ವಹ್ನಿರ್ಜಗತ್ ಕ್ಷಯೇ||

ಹಾಗೆ ಬಾಷ್ಪಶೋಕಸಮನ್ವಿತನಾದ ರಾಜನನ್ನು ನೋಡಿ ದ್ರೌಣಿಯು ಜಗತ್ ಕ್ಷಯದಲ್ಲಿ ವಹ್ನಿಯು ಹೇಗೋ ಹಾಗೆ ಕ್ರೋಧದಿಂದ ಪ್ರಜ್ವಲಿಸಿದನು.

09064032a ಸ ತು ಕ್ರೋಧಸಮಾವಿಷ್ಟಃ ಪಾಣೌ ಪಾಣಿಂ ನಿಪೀಡ್ಯ ಚ|

09064032c ಬಾಷ್ಪವಿಹ್ವಲಯಾ ವಾಚಾ ರಾಜಾನಮಿದಮಬ್ರವೀತ್||

ಅವನಾದರೋ ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ರಾಜನಿಗೆ ಈ ಬಾಷ್ಪವಿಹ್ವಲ ಮಾತುಗಳನ್ನಾಡಿದನು:

09064033a ಪಿತಾ ಮೇ ನಿಹತಃ ಕ್ಷುದ್ರೈಃ ಸುನೃಶಂಸೇನ ಕರ್ಮಣಾ|

09064033c ನ ತಥಾ ತೇನ ತಪ್ಯಾಮಿ ಯಥಾ ರಾಜಂಸ್ತ್ವಯಾದ್ಯ ವೈ||

“ಆ ಕ್ಷುದ್ರರು ಅತ್ಯಂತ ಕ್ರೂರಕರ್ಮದಿಂದ ನನ್ನ ತಂದೆಯನ್ನು ಸಂಹರಿಸಿದಾಗಲೂ ಇಂದು ನಿನ್ನ ಈ ಪರಿಸ್ಥಿತಿಯನ್ನು ನೋಡಿ ಪರಿತಾಪಪಡುವಷ್ಟು ಪರಿತಪಿಸಿರಲಿಲ್ಲ.

09064034a ಶೃಣು ಚೇದಂ ವಚೋ ಮಹ್ಯಂ ಸತ್ಯೇನ ವದತಃ ಪ್ರಭೋ|

09064034c ಇಷ್ಟಾಪೂರ್ತೇನ ದಾನೇನ ಧರ್ಮೇಣ ಸುಕೃತೇನ ಚ||

ಪ್ರಭೋ! ನಾನು ಪೂರೈಸಿದ ಇಷ್ಟಿಗಳ, ದಾನ-ಧರ್ಮ ಮತ್ತು ಸುಕೃತಗಳ ಮೇಲೆ ಆಣೆಯನ್ನಿಟ್ಟು ಹೇಳುವ ಈ ನನ್ನ ಸತ್ಯವಚನವನ್ನು ಕೇಳು!

09064035a ಅದ್ಯಾಹಂ ಸರ್ವಪಾಂಚಾಲಾನ್ವಾಸುದೇವಸ್ಯ ಪಶ್ಯತಃ|

09064035c ಸರ್ವೋಪಾಯೈರ್ಹಿ ನೇಷ್ಯಾಮಿ ಪ್ರೇತರಾಜನಿವೇಶನಂ|

09064035e ಅನುಜ್ಞಾಂ ತು ಮಹಾರಾಜ ಭವಾನ್ಮೇ ದಾತುಮರ್ಹತಿ||

ಇಂದು ನಾನು ವಾಸುದೇವನು ನೋಡುತ್ತಿದ್ದಂತೆಯೇ ಸರ್ವಪಾಂಚಾಲರನ್ನು ಸರ್ವೋಪಾಯಗಳನ್ನು ಬಳಸಿ ಪ್ರೇತರಾಜನ ನಿವೇಶನಕ್ಕೆ ಕಳುಹಿಸುತ್ತೇನೆ. ಮಹಾರಾಜ! ನೀನು ನನಗೆ ಅನುಜ್ಞೆಯನ್ನು ನೀಡಬೇಕು!”

09064036a ಇತಿ ಶ್ರುತ್ವಾ ತು ವಚನಂ ದ್ರೋಣಪುತ್ರಸ್ಯ ಕೌರವಃ|

09064036c ಮನಸಃ ಪ್ರೀತಿಜನನಂ ಕೃಪಂ ವಚನಮಬ್ರವೀತ್||

09064036e ಆಚಾರ್ಯ ಶೀಘ್ರಂ ಕಲಶಂ ಜಲಪೂರ್ಣಂ ಸಮಾನಯ||

ಮನಸ್ಸಿಗೆ ಸಂತೋಷವನ್ನುಂಟುಮಾಡಿದ ದ್ರೋಣಪುತ್ರನ ಆ ಮಾತನ್ನು ಕೇಳಿ ಕೌರವನು ಕೃಪನಿಗೆ “ಆಚಾರ್ಯ! ಶೀಘ್ರವಾಗಿ ಜಲಪೂರ್ಣ ಕಲಶವನ್ನು ತರಿಸಿ!” ಎಂದು ಹೇಳಿದನು.

09064037a ಸ ತದ್ವಚನಮಾಜ್ಞಾಯ ರಾಜ್ಞೋ ಬ್ರಾಹ್ಮಣಸತ್ತಮಃ|

09064037c ಕಲಶಂ ಪೂರ್ಣಮಾದಾಯ ರಾಜ್ಞೋಂಽತಿಕಮುಪಾಗಮತ್||

ರಾಜನ ಆ ಮಾತನ್ನು ಕೇಳಿ ಬ್ರಾಹ್ಮಣಸತ್ತಮನು ಪೂರ್ಣಕಲಶವನ್ನು ಹಿಡಿದು ರಾಜನ ಬಳಿಬಂದನು.

09064038a ತಮಬ್ರವೀನ್ಮಹಾರಾಜ ಪುತ್ರಸ್ತವ ವಿಶಾಂ ಪತೇ|

09064038c ಮಮಾಜ್ಞಯಾ ದ್ವಿಜಶ್ರೇಷ್ಠ ದ್ರೋಣಪುತ್ರೋಽಭಿಷಿಚ್ಯತಾಂ|

09064038e ಸೇನಾಪತ್ಯೇನ ಭದ್ರಂ ತೇ ಮಮ ಚೇದಿಚ್ಚಸಿ ಪ್ರಿಯಂ||

ಮಹಾರಾಜ! ವಿಶಾಂಪತೇ! ಅವನಿಗೆ ನಿನ್ನ ಮಗನು ಹೇಳಿದನು: “ದ್ವಿಜಶ್ರೇಷ್ಠ! ನಿಮಗೆ ಮಂಗಳವಾಗಲಿ! ನನಗೆ ಪ್ರಿಯವಾದುದನ್ನು ಬಯಸುವಿರಾದರೆ ನನ್ನ ಆಜ್ಞೆಯಂತೆ  ದ್ರೋಣಪುತ್ರನನ್ನು ಸೇನಾಪತ್ಯದಿಂದ ಅಭಿಷೇಕಿಸಿರಿ!

09064039a ರಾಜ್ಞೋ ನಿಯೋಗಾದ್ಯೋದ್ಧವ್ಯಂ ಬ್ರಾಹ್ಮಣೇನ ವಿಶೇಷತಃ|

09064039c ವರ್ತತಾ ಕ್ಷತ್ರಧರ್ಮೇಣ ಹ್ಯೇವಂ ಧರ್ಮವಿದೋ ವಿದುಃ||

ರಾಜನ ನಿಯೋಗದಂತೆ ಯುದ್ಧಮಾಡಬೇಕು! ಅದರಲ್ಲೂ ವಿಶೇಷವಾಗಿ ಕ್ಷತ್ರಧರ್ಮದಿಂದ ವರ್ತಿಸುವ ಬ್ರಾಹ್ಮಣನು ಹೀಗೇ ಮಾಡಬೇಕೆಂದು ಧರ್ಮವಿದರು ತಿಳಿಸುತ್ತಾರೆ.”

09064040a ರಾಜ್ಞಸ್ತು ವಚನಂ ಶ್ರುತ್ವಾ ಕೃಪಃ ಶಾರದ್ವತಸ್ತತಃ|

09064040c ದ್ರೌಣಿಂ ರಾಜ್ಞೋ ನಿಯೋಗೇನ ಸೇನಾಪತ್ಯೇಽಭ್ಯಷೇಚಯತ್||

ರಾಜನ ಮಾತನ್ನು ಕೇಳಿ ಶಾರದ್ವತ ಕೃಪನು ರಾಜನ ನಿಯೋಗದಂತೆ ದ್ರೌಣಿಯನ್ನು ಸೇನಾಪತಿಯಾಗಿ ಅಭಿಷೇಕಿಸಿದನು.

09064041a ಸೋಽಭಿಷಿಕ್ತೋ ಮಹಾರಾಜ ಪರಿಷ್ವಜ್ಯ ನೃಪೋತ್ತಮಂ|

09064041c ಪ್ರಯಯೌ ಸಿಂಹನಾದೇನ ದಿಶಃ ಸರ್ವಾ ವಿನಾದಯನ್||

ಮಹಾರಾಜ! ಹಾಗೆ ಅಭಿಷಿಕ್ತನಾದ ಅಶ್ವತ್ಥಾಮನು ನೃಪೋತ್ತಮನನ್ನು ಆಲಂಗಿಸಿ ಸರ್ವ ದಿಶಗಳಲ್ಲಿಯೂ ಪ್ರತಿಧ್ವನಿಯಾಗುವಂತೆ ಸಿಂಹನಾದ ಮಾಡುತ್ತಾ ಹೊರಟುಹೋದನು.

09064042a ದುರ್ಯೋಧನೋಽಪಿ ರಾಜೇಂದ್ರ ಶೋಣಿತೌಘಪರಿಪ್ಲುತಃ|

09064042c ತಾಂ ನಿಶಾಂ ಪ್ರತಿಪೇದೇಽಥ ಸರ್ವಭೂತಭಯಾವಹಾಂ||

ರಾಜೇಂದ್ರ! ರಕ್ತದಿಂದ ತೋಯ್ದುಹೋಗಿದ್ದ ದುರ್ಯೋಧನನಾದರೋ ಸರ್ವಭೂತಗಳಿಗೂ ಭಯಂಕರವಾಗಿದ್ದ ಆ ರಾತ್ರಿಯನ್ನು ಅಲ್ಲಿಯೇ ಕಳೆದನು.

09064043a ಅಪಕ್ರಮ್ಯ ತು ತೇ ತೂರ್ಣಂ ತಸ್ಮಾದಾಯೋಧನಾನ್ನೃಪ|

09064043c ಶೋಕಸಂವಿಗ್ನಮನಸಶ್ಚಿಂತಾಧ್ಯಾನಪರಾಭವನ್||

ನೃಪ! ಅಲ್ಲಿಂದ ಶೀಘ್ರವಾಗಿ ಹೊರಟುಹೋದ ಅವರು ಶೋಕಸಂವಿಗ್ನಮನಸ್ಕರಾಗಿ ಚಿಂತಾಧ್ಯಾನಪರರಾದರು.”

ಇತಿ ಶ್ರೀಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಣಿ ಅಶ್ವತ್ಥಾಮಸೈನಾಪತ್ಯಾಭಿಷೇಕೇ ಚತುಃಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವದಲ್ಲಿ ಅಶ್ವತ್ಥಾಮಸೈನಾಪತ್ಯಾಭಿಷೇಕ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಲ್ಯ ಪರ್ವಣಿ ಗದಾಯುದ್ಧ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಲ್ಯ ಪರ್ವದಲ್ಲಿ ಗದಾಯುದ್ಧ ಪರ್ವವು.

ಇತಿ ಶ್ರೀ ಮಹಾಭಾರತೇ ಶಲ್ಯ ಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಲ್ಯ ಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೯/೧೮, ಉಪಪರ್ವಗಳು-೭೭/೧೦೦, ಅಧ್ಯಾಯಗಳು-೧೨೮೩/೧೯೯೫, ಶ್ಲೋಕಗಳು-೪೮೫೦೮/೧೯೯೫

Ornate colorful decorative indian mandala with om sign, aum simbol.  Isolated on white background Stock Vector Image & Art - Alamy

ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್

ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ|

ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ

ಲೋಕಾಃ ಸಮಸ್ತಾಃ ಸುಖಿನೋ ಭವಂತು||

ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ|

ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ||

ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ|

ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್||

ಕಾಯೇನ ವಾಚಾ ಮನಸೇಂದ್ರಿಯೈರ್ವಾ

ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್|

ಕರೋಮಿ ಯದ್ಯತ್ಸಕಲಂ ಪರಸ್ಮೈ

ನಾರಾಯಣಾಯೇತಿ ಸಮರ್ಪಯಾಮಿ||

ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್|

ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ||

|| ಹರಿಃ ಓಂ ಕೃಷ್ಣಾರ್ಪಣಮಸ್ತು ||

 

Comments are closed.