Shalya Parva: Chapter 6

ಶಲ್ಯಪರ್ವ: ಶಲ್ಯವಧ ಪರ್ವ

09006001 ಸಂಜಯ ಉವಾಚ

09006001a ಏತಚ್ಛೃತ್ವಾ ವಚೋ ರಾಜ್ಞೋ ಮದ್ರರಾಜಃ ಪ್ರತಾಪವಾನ್|

09006001c ದುರ್ಯೋಧನಂ ತದಾ ರಾಜನ್ವಾಕ್ಯಮೇತದುವಾಚ ಹ||

ಸಂಜಯನು ಹೇಳಿದನು: “ರಾಜನ್! ರಾಜನ ಈ ಮಾತನ್ನು ಕೇಳಿದ ಪ್ರತಾಪವಾನ್ ಮದ್ರರಾಜನು ದುರ್ಯೋಧನನಿಗೆ ಈ ಮಾತುಗಳನ್ನಾಡಿದನು:

09006002a ದುರ್ಯೋಧನ ಮಹಾಬಾಹೋ ಶೃಣು ವಾಕ್ಯವಿದಾಂ ವರ|

09006002c ಯಾವೇತೌ ಮನ್ಯಸೇ ಕೃಷ್ಣೌ ರಥಸ್ಥೌ ರಥಿನಾಂ ವರೌ||

09006002e ನ ಮೇ ತುಲ್ಯಾವುಭಾವೇತೌ ಬಾಹುವೀರ್ಯೇ ಕಥಂ ಚನ||

“ಮಹಾಬಾಹೋ! ದುರ್ಯೋಧನ! ವಾಕ್ಯವಿದರಲ್ಲಿ ಶ್ರೇಷ್ಠ! ನನ್ನ ಮಾತನ್ನು ಕೇಳು! ಯಾರನ್ನು ನೀನು ರಥಿಗಳಲ್ಲಿ ಶ್ರೇಷ್ಠರೆಂದು ತಿಳಿದುಕೊಂಡಿರುವೆಯೋ ಆ ರಥಸ್ಥರಾದ ಕೃಷ್ಣರಿಬ್ಬರೂ ಬಾಹುವೀರ್ಯದಲ್ಲಿ ಎಂದೂ ನನಗೆ ಸರಿಸಾಟಿಯಾಗುವವರಲ್ಲ!

09006003a ಉದ್ಯತಾಂ ಪೃಥಿವೀಂ ಸರ್ವಾಂ ಸಸುರಾಸುರಮಾನವಾಂ|

09006003c ಯೋಧಯೇಯಂ ರಣಮುಖೇ ಸಂಕ್ರುದ್ಧಃ ಕಿಮು ಪಾಂಡವಾನ್||

09006003e ವಿಜೇಷ್ಯೇ ಚ ರಣೇ ಪಾರ್ಥಾನ್ಸೋಮಕಾಂಶ್ಚ ಸಮಾಗತಾನ್|

ಸುರಾಸುರಮಾನವ ಸರ್ವರೊಂದಿಗೆ ಈ ಪೃಥ್ವಿಯೇ ಯುದ್ಧಕ್ಕೆ ನಿಂತರೂ ಸಂಕ್ರುದ್ಧನಾದ ನಾನು ರಣಮುಖದಲ್ಲಿ ಎದುರಿಸಿ ಯುದ್ಧಮಾಡಬಲ್ಲೆ! ಇನ್ನು ಪಾಂಡವರು ಯಾವ ಲೆಖ್ಕಕ್ಕೆ? ರಣದಲ್ಲಿ ಸೇರಿರುವ ಪಾರ್ಥರನ್ನೂ ಸೋಮಕರನ್ನೂ ನಾನು ಗೆಲ್ಲುತ್ತೇನೆ!

09006004a ಅಹಂ ಸೇನಾಪ್ರಣೇತಾ ತೇ ಭವಿಷ್ಯಾಮಿ ನ ಸಂಶಯಃ|

09006004c ತಂ ಚ ವ್ಯೂಹಂ ವಿಧಾಸ್ಯಾಮಿ ನ ತರಿಷ್ಯಂತಿ ಯಂ ಪರೇ|

09006004e ಇತಿ ಸತ್ಯಂ ಬ್ರವೀಮ್ಯೇಷ ದುರ್ಯೋಧನ ನ ಸಂಶಯಃ||

ನಾನು ನಿನ್ನ ಸೇನಾಪತಿಯಾಗುತ್ತೇನೆ. ಅದರಲ್ಲಿ ಸಂಶಯವಿಲ್ಲ. ಶತ್ರುಗಳಿಗೆ ಭೇದಿಸಲಸಾಧ್ಯ ವ್ಯೂಹವನ್ನೂ ರಚಿಸುತ್ತೇನೆ. ದುರ್ಯೋಧನ! ನಾನುಹೇಳುತ್ತಿರುವುದು ಸತ್ಯವಾದುದು. ಇದರಲ್ಲಿ ಸಂಶಯವಿಲ್ಲ!”

09006005a ಏವಮುಕ್ತಸ್ತತೋ ರಾಜಾ ಮದ್ರಾಧಿಪತಿಮಂಜಸಾ|

09006005c ಅಭ್ಯಷಿಂಚತ ಸೇನಾಯಾ ಮಧ್ಯೇ ಭರತಸತ್ತಮ||

09006005e ವಿಧಿನಾ ಶಾಸ್ತ್ರದೃಷ್ಟೇನ ಹೃಷ್ಟರೂಪೋ ವಿಶಾಂ ಪತೇ|

ಭರತಸತ್ತಮ! ವಿಶಾಂಪತೇ! ಮದ್ರಾಧಿಪತಿಯು ಹೀಗೆ ಹೇಳಲು ರಾಜನು ಸೇನೆಗಳ ಮಧ್ಯದಲ್ಲಿ ಹೃಷ್ಟರೂಪನಾಗಿ ಶಾಸ್ತ್ರಗಳಲ್ಲಿ ತೋರಿಸಿಕೊಟ್ಟ ವಿಧಿಗಳಿಂದ ಅವನನ್ನು ಅಭಿಷೇಕಿಸಿದನು.

09006006a ಅಭಿಷಿಕ್ತೇ ತತಸ್ತಸ್ಮಿನ್ಸಿಂಹನಾದೋ ಮಹಾನಭೂತ್||

09006006c ತವ ಸೈನ್ಯೇಷ್ವವಾದ್ಯಂತ ವಾದಿತ್ರಾಣಿ ಚ ಭಾರತ|

ಭಾರತ! ಅವನು ಅಭಿಷಿಕ್ತನಾಗಲು ಅಲ್ಲಿ ಮಹಾ ಸಿಂಹನಾದವು ಕೇಳಿಬಂದಿತು. ನಿನ್ನ ಸೇನೆಗಳಲ್ಲಿ ವಾದ್ಯಗಳು ಮೊಳಗಿದವು.

09006007a ಹೃಷ್ಟಾಶ್ಚಾಸಂಸ್ತದಾ ಯೋಧಾ ಮದ್ರಕಾಶ್ಚ ಮಹಾರಥಾಃ||

09006007c ತುಷ್ಟುವುಶ್ಚೈವ ರಾಜಾನಂ ಶಲ್ಯಮಾಹವಶೋಭಿನಂ|

ಆಗ ಮದ್ರಕ ಮಹಾರಥ ಯೋಧರು ಹರ್ಷಿತರಾಗಿ ಆಹವಶೋಭೀ ರಾಜಾ ಶಲ್ಯನನ್ನು ಸ್ತುತಿಸಿದರು.

0900008a ಜಯ ರಾಜಂಶ್ಚಿರಂ ಜೀವ ಜಹಿ ಶತ್ರೂನ್ ಸಮಾಗತಾನ್||

0900008c ತವ ಬಾಹುಬಲಂ ಪ್ರಾಪ್ಯ ಧಾರ್ತರಾಷ್ಟ್ರಾ ಮಹಾಬಲಾಃ|

09006008e ನಿಖಿಲಾಂ ಪೃಥಿವೀಂ ಸರ್ವಾಂ ಪ್ರಶಾಸಂತು ಹತದ್ವಿಷಃ||

“ರಾಜನ್! ನಿನಗೆ ಜಯವಾಗಲಿ! ಚಿರಂಜೀವಿಯಾಗು! ಸಮಾಗತರಾಗಿರುವ ಶತ್ರುಗಳನ್ನು ಸಂಹರಿಸು! ನಿನ್ನ ಬಾಹುಬಲವನ್ನು ಪಡೆದಿರುವ ಮಹಾಬಲ ಧಾರ್ತರಾಷ್ಟ್ರರು ಶತ್ರುಗಳು ಹತರಾಗಿ ಅಖಿಲ ಪೃಥ್ವಿಯಲ್ಲವನ್ನೂ ಆಳುತ್ತಾರೆ!

09006009a ತ್ವಂ ಹಿ ಶಕ್ತೋ ರಣೇ ಜೇತುಂ ಸಸುರಾಸುರಮಾನವಾನ್|

09006009c ಮರ್ತ್ಯಧರ್ಮಾಣ ಇಹ ತು ಕಿಮು ಸೋಮಕಸೃಂಜಯಾನ್||

ರಣದಲ್ಲಿ ಸುರಾಸುರಮಾನವರನ್ನು ನೀನು ಗೆಲ್ಲಲು ಶಕ್ತನಾಗಿರುವಾಗ ಮರ್ತ್ಯಧರ್ಮವನ್ನನುಸರಿಸುವ ಸೋಮಕ-ಸೃಂಜಯರು ಯಾವ ಲೆಖ್ಕಕ್ಕೆ?”

09006010a ಏವಂ ಸಂಸ್ತೂಯಮಾನಸ್ತು ಮದ್ರಾಣಾಮಧಿಪೋ ಬಲೀ|

09006010c ಹರ್ಷಂ ಪ್ರಾಪ ತದಾ ವೀರೋ ದುರಾಪಮಕೃತಾತ್ಮಭಿಃ||

ಹೀಗೆ ಸಂಸ್ತುತಿಸಲ್ಪಡಲು ಬಲಶಾಲೀ ವೀರ ಮದ್ರಾಧಿಪತಿಯು ಅಕೃತಾತ್ಮರಿಗೆ ದುರ್ಲಭವಾದ ಹರ್ಷವನ್ನು ಪಡೆದನು.

09006011 ಶಲ್ಯ ಉವಾಚ

09006011a ಅದ್ಯೈವಾಹಂ ರಣೇ ಸರ್ವಾನ್ಪಾಂಚಾಲಾನ್ಸಹ ಪಾಂಡವೈಃ|

09006011c ನಿಹನಿಷ್ಯಾಮಿ ರಾಜೇಂದ್ರ ಸ್ವರ್ಗಂ ಯಾಸ್ಯಾಮಿ ವಾ ಹತಃ||

ಶಲ್ಯನು ಹೇಳಿದನು: “ರಾಜೇಂದ್ರ! ಇಂದು ನಾನು ರಣದಲ್ಲಿ ಪಾಂಚಾಲರೊಂದಿಗೆ ಸರ್ವ ಪಾಂಡವರನ್ನೂ ಸಂಹರಿಸುತ್ತೇನೆ. ಅಥವಾ ಹತನಾಗಿ ಸ್ವರ್ಗಕ್ಕೆ ಹೋಗುತ್ತೇನೆ!

09006012a ಅದ್ಯ ಪಶ್ಯಂತು ಮಾಂ ಲೋಕಾ ವಿಚರಂತಮಭೀತವತ್|

09006012c ಅದ್ಯ ಪಾಂಡುಸುತಾಃ ಸರ್ವೇ ವಾಸುದೇವಃ ಸಸಾತ್ಯಕಿಃ||

09006013a ಪಾಂಚಾಲಾಶ್ಚೇದಯಶ್ಚೈವ ದ್ರೌಪದೇಯಾಶ್ಚ ಸರ್ವಶಃ|

09006013c ಧೃಷ್ಟದ್ಯುಮ್ನಃ ಶಿಖಂಡೀ ಚ ಸರ್ವೇ ಚಾಪಿ ಪ್ರಭದ್ರಕಾಃ||

ಇಂದು ನಿರ್ಭೀತನಾಗಿ ಸಂಚರಿಸುವ ನನ್ನನ್ನು ಲೋಕಗಳೆಲ್ಲವೂ, ಪಾಂಡುಸುತರೆಲ್ಲರೂ, ಸಾತ್ಯಕಿಯೊಂದಿಗೆ ವಾಸುದೇವ, ಪಾಂಚಾಲರು ಮತ್ತು ದ್ರೌಪದೇಯರೆಲ್ಲರೂ, ಧೃಷ್ಟದ್ಯುಮ್ನ, ಶಿಖಂಡಿ ಮತ್ತು ಸರ್ವ ಪ್ರಭದ್ರಕರೂ ನೋಡಲಿ!

09006014a ವಿಕ್ರಮಂ ಮಮ ಪಶ್ಯಂತು ಧನುಷಶ್ಚ ಮಹದ್ಬಲಂ|

09006014c ಲಾಘವಂ ಚಾಸ್ತ್ರವೀರ್ಯಂ ಚ ಭುಜಯೋಶ್ಚ ಬಲಂ ಯುಧಿ||

ಯುದ್ಧದಲ್ಲಿ ನನ್ನ ವಿಕ್ರಮ, ಧನುಸ್ಸಿನ ಮಹಾ ಬಲ, ಹಸ್ತಲಾಘವ, ಅಸ್ತ್ರವೀರ್ಯ ಮತ್ತು ಭುಜಗಳ ಬಲವನ್ನು ನೋಡಲಿದ್ದಾರೆ!

09006015a ಅದ್ಯ ಪಶ್ಯಂತು ಮೇ ಪಾರ್ಥಾಃ ಸಿದ್ಧಾಶ್ಚ ಸಹ ಚಾರಣೈಃ|

09006015c ಯಾದೃಶಂ ಮೇ ಬಲಂ ಬಾಹ್ವೋಃ ಸಂಪದಸ್ತ್ರೇಷು ಯಾ ಚ ಮೇ||

ನನ್ನಲ್ಲಿರುವ ಬಾಹು ಬಲವನ್ನೂ, ಅಸ್ತ್ರಗಳ ಸಂಪತ್ತನ್ನೂ ಇಂದು ಪಾರ್ಥರು, ಚಾರಣ-ಸಿದ್ಧರೊಂದಿಗೆ ನೋಡಲಿ.

09006016a ಅದ್ಯ ಮೇ ವಿಕ್ರಮಂ ದೃಷ್ಟ್ವಾ ಪಾಂಡವಾನಾಂ ಮಹಾರಥಾಃ|

09006016c ಪ್ರತೀಕಾರಪರಾ ಭೂತ್ವಾ ಚೇಷ್ಟಂತಾಂ ವಿವಿಧಾಃ ಕ್ರಿಯಾಃ||

ಇಂದು ನನ್ನ ವಿಕ್ರಮವನ್ನು ನೋಡಿ ಮಹಾರಥ ಪಾಂಡವರು ಪ್ರತೀಕಾರಪರರಾಗಿ ವಿವಿಧ ಕ್ರಿಯೆಗಳನ್ನು ಮಾಡುವಂತಾಗಲಿ!

09006017a ಅದ್ಯ ಸೈನ್ಯಾನಿ ಪಾಂಡೂನಾಂ ದ್ರಾವಯಿಷ್ಯೇ ಸಮಂತತಃ|

09006017c ದ್ರೋಣಭೀಷ್ಮಾವತಿ ವಿಭೋ ಸೂತಪುತ್ರಂ ಚ ಸಮ್ಯುಗೇ||

09006017e ವಿಚರಿಷ್ಯೇ ರಣೇ ಯುಧ್ಯನ್ಪ್ರಿಯಾರ್ಥಂ ತವ ಕೌರವ||

ಇಂದು ನಾನು ಪಾಂಡವರ ಸೇನೆಗಳನ್ನು ಎಲ್ಲಕಡೆ ಓಡಿಸುತ್ತೇನೆ! ವಿಭೋ! ಕೌರವ! ನಿನ್ನ ಪ್ರಿಯಾರ್ಥವಾಗಿ ಯುದ್ಧದಲ್ಲಿ ದ್ರೋಣ-ಭೀಷ್ಮರನ್ನೂ, ಸೂತಪುತ್ರನನ್ನೂ ಮೀರಿಸಿ ನಾನು ಯುದ್ಧಮಾಡುತ್ತಾ ರಣದಲ್ಲಿ ಚರಿಸುತ್ತೇನೆ!””

09006018 ಸಂಜಯ ಉವಾಚ

09006018a ಅಭಿಷಿಕ್ತೇ ತದಾ ಶಲ್ಯೇ ತವ ಸೈನ್ಯೇಷು ಮಾನದ|

09006018c ನ ಕರ್ಣವ್ಯಸನಂ ಕಿಂ ಚಿನ್ಮೇನಿರೇ ತತ್ರ ಭಾರತ||

ಸಂಜಯನು ಹೇಳಿದನು: “ಮಾನದ! ಭಾರತ! ಶಲ್ಯನು ಅಭಿಷಿಕ್ತನಾಗಲು ನಿನ್ನ ಸೇನೆಗಳು ಕರ್ಣನ ಕುರಿತಾದ ವ್ಯಸನವನ್ನು ಸ್ವಲ್ಪವೂ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ!

09006019a ಹೃಷ್ಟಾಃ ಸುಮನಸಶ್ಚೈವ ಬಭೂವುಸ್ತತ್ರ ಸೈನಿಕಾಃ|

09006019c ಮೇನಿರೇ ನಿಹತಾನ್ಪಾರ್ಥಾನ್ಮದ್ರರಾಜವಶಂ ಗತಾನ್||

ಮದ್ರರಾಜನ ಶರಣಕ್ಕೆ ಬಂದ ಸೈನಿಕರು ಹೃಷ್ಟರಾಗಿ ಸುಮನಸ್ಕರಾದರಲ್ಲದೇ ಪಾರ್ಥರು ಹತರಾದರೆಂದೇ ಭಾವಿಸಿದರು.

09006020a ಪ್ರಹರ್ಷಂ ಪ್ರಾಪ್ಯ ಸೇನಾ ತು ತಾವಕೀ ಭರತರ್ಷಭ|

09006020c ತಾಂ ರಾತ್ರಿಂ ಸುಖಿನೀ ಸುಪ್ತಾ ಸ್ವಸ್ಥಚಿತ್ತೇವ ಸಾಭವತ್||

ಭರತರ್ಷಭ! ಹರ್ಷವನ್ನು ಪಡೆದ ನಿನ್ನ ಸೇನೆಯು ಆ ರಾತ್ರಿಯನ್ನು ಅಲ್ಲಿಯೇ ಸ್ವಸ್ಥಚಿತ್ತದಿಂದ ಸುಖವಾಗಿ ಮಲಗಿ ಕಳೆಯಿತು.

09006021a ಸೈನ್ಯಸ್ಯ ತವ ತಂ ಶಬ್ದಂ ಶ್ರುತ್ವಾ ರಾಜಾ ಯುಧಿಷ್ಠಿರಃ|

09006021c ವಾರ್ಷ್ಣೇಯಮಬ್ರವೀದ್ವಾಕ್ಯಂ ಸರ್ವಕ್ಷತ್ರಸ್ಯ ಶೃಣ್ವತಃ||

ನಿನ್ನ ಸೇನೆಯ ಆ ಶಬ್ಧವನ್ನು ಕೇಳಿದ ರಾಜಾ ಯುಧಿಷ್ಠಿರನು ಸರ್ವ ಕ್ಷತ್ರಿಯರೂ ಕೇಳುವಂತೆ ವಾರ್ಷ್ಣೇಯನಿಗೆ ಈ ಮಾತನ್ನಾಡಿದನು:

09006022a ಮದ್ರರಾಜಃ ಕೃತಃ ಶಲ್ಯೋ ಧಾರ್ತರಾಷ್ಟ್ರೇಣ ಮಾಧವ|

09006022c ಸೇನಾಪತಿರ್ಮಹೇಷ್ವಾಸಃ ಸರ್ವಸೈನ್ಯೇಷು ಪೂಜಿತಃ||

“ಮಾಧವ! ಧಾರ್ತರಾಷ್ಟ್ರರು ಸರ್ವಸೇನೆಗಳಿಂದ ಪೂಜಿತನಾಗಿರುವ ಮಹೇಷ್ವಾಸ ಮದ್ರರಾಜ ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿಕೊಂಡಿದ್ದಾರೆ.

09006023a ಏತಚ್ಛೃತ್ವಾ ಯಥಾಭೂತಂ ಕುರು ಮಾಧವ ಯತ್ ಕ್ಷಮಂ|

09006023c ಭವಾನ್ನೇತಾ ಚ ಗೋಪ್ತಾ ಚ ವಿಧತ್ಸ್ವ ಯದನಂತರಂ||

ಮಾಧವ! ಇದನ್ನು ಕೇಳಿ ಏನು ಉಚಿತವೋ ಅದನ್ನು ಮಾಡು. ನೀನು ನಮ್ಮ ನೇತಾರನೂ, ರಕ್ಷಕನೂ ಆಗಿರುವೆ. ಆದುದರಿಂದ ನಂತರ ಏನು ಮಾಡಬೇಕೆನ್ನುವುದನ್ನು ನಿಶ್ಚಯಿಸು!”

09006024a ತಮಬ್ರವೀನ್ಮಹಾರಾಜ ವಾಸುದೇವೋ ಜನಾಧಿಪಂ|

09006024c ಆರ್ತಾಯನಿಮಹಂ ಜಾನೇ ಯಥಾತತ್ತ್ವೇನ ಭಾರತ||

ಮಹಾರಾಜ! ವಾಸುದೇವನು ಆ ಜನಾಧಿಪನಿಗೆ ಹೇಳಿದನು: “ಭಾರತ! ಋತಾಯನನ ಮಗ ಶಲ್ಯನನ್ನು ಯಥಾತತ್ತ್ವವಾಗಿ ತಿಳಿದುಕೊಂಡಿದ್ದೇನೆ.

09006025a ವೀರ್ಯವಾಂಶ್ಚ ಮಹಾತೇಜಾ ಮಹಾತ್ಮಾ ಚ ವಿಶೇಷತಃ|

09006025c ಕೃತೀ ಚ ಚಿತ್ರಯೋಧೀ ಚ ಸಂಯುಕ್ತೋ ಲಾಘವೇನ ಚ||

ಅವನು ವೀರ್ಯವಾನನೂ, ಮಹಾತೇಜಸ್ವಿಯೂ, ಮಹಾತ್ಮನೂ, ವಿಶೇಷತಃ ಯುದ್ಧವಿಶಾರದನೂ, ಚಿತ್ರಯೋಧಿಯೂ, ಲಾಘವ ಸಂಯುಕ್ತನೂ ಆಗಿದ್ದಾನೆ.

09006026a ಯಾದೃಗ್ಭೀಷ್ಮಸ್ತಥಾ ದ್ರೋಣೋ ಯಾದೃಕ್ಕರ್ಣಶ್ಚ ಸಂಯುಗೇ|

09006026c ತಾದೃಶಸ್ತದ್ವಿಶಿಷ್ಟೋ ವಾ ಮದ್ರರಾಜೋ ಮತೋ ಮಮ||

ಮದ್ರರಾಜನು ರಣದಲ್ಲಿ ಭೀಷ್ಮ, ದ್ರೋಣ ಮತ್ತು ಕರ್ಣರು ಹೇಗಿದ್ದರೋ ಹಾಗೆ ಅಥವಾ ಅವರಿಗಿಂತಲೂ ವಿಶಿಷ್ಟನಾಗಿದ್ದಾನೆ ಎಂದು ನನಗನ್ನಿಸುತ್ತದೆ.

09006027a ಯುಧ್ಯಮಾನಸ್ಯ ತಸ್ಯಾಜೌ ಚಿಂತಯನ್ನೇವ ಭಾರತ|

09006027c ಯೋದ್ಧಾರಂ ನಾಧಿಗಚ್ಚಾಮಿ ತುಲ್ಯರೂಪಂ ಜನಾಧಿಪ||

ಭಾರತ! ಜನಾಧಿಪ! ಎಷ್ಟು ಯೋಚಿಸಿದರೂ ಯುದ್ಧಮಾಡುತ್ತಿರುವ ಅವನ ಸಮಾನರೂಪ ಯೋಧನನ್ನು ನಾನು ಕಾಣುತ್ತಿಲ್ಲ.

09006028a ಶಿಖಂಡ್ಯರ್ಜುನಭೀಮಾನಾಂ ಸಾತ್ವತಸ್ಯ ಚ ಭಾರತ|

09006028c ಧೃಷ್ಟದ್ಯುಮ್ನಸ್ಯ ಚ ತಥಾ ಬಲೇನಾಭ್ಯಧಿಕೋ ರಣೇ||

ಭಾರತ! ರಣದಲ್ಲಿ ಅವನು ಶಿಖಂಡಿ, ಅರ್ಜುನ, ಭೀಮಸೇನ, ಸಾತ್ವತ ಮತ್ತು ಧೃಷ್ಟದ್ಯುಮ್ನರಿಗಿಂತ ಅಧಿಕ ಬಲಶಾಲಿಯು.

09006029a ಮದ್ರರಾಜೋ ಮಹಾರಾಜ ಸಿಂಹದ್ವಿರದವಿಕ್ರಮಃ|

09006029c ವಿಚರಿಷ್ಯತ್ಯಭೀಃ ಕಾಲೇ ಕಾಲಃ ಕ್ರುದ್ಧಃ ಪ್ರಜಾಸ್ವಿವ||

ಮಹಾರಾಜ! ಮದ್ರರಾಜನು ಸಿಂಹ-ಆನೆಗಳ ವಿಕ್ರಮವುಳ್ಳವನು. ಪ್ರಳಕಾಲದಲ್ಲಿ ಪ್ರಜೆಗಳ ಮೇಲೆ ಕ್ರುದ್ಧನಾಗಿರುವ ಕಾಲನಂತೆ ಅವನು ರಣದಲ್ಲಿ ಸಂಚರಿಸುತ್ತಾನೆ.

09006030a ತಸ್ಯಾದ್ಯ ನ ಪ್ರಪಶ್ಯಾಮಿ ಪ್ರತಿಯೋದ್ಧಾರಮಾಹವೇ|

09006030c ತ್ವಾಂ ಋತೇ ಪುರುಷವ್ಯಾಘ್ರ ಶಾರ್ದೂಲಸಮವಿಕ್ರಮಂ||

ಪುರುಷವ್ಯಾಘ್ರ! ಶಾರ್ದೂಲಸಮವಿಕ್ರಮಿಯಾದ ನಿನ್ನನ್ನು ಬಿಟ್ಟರೆ ಇಂದು ಅವನನ್ನು ರಣದಲ್ಲಿ ಎದುರಿಸುವ ಬೇರೆ ಯಾವ ಯೋಧನನ್ನೂ ನಾನು ಕಾಣಲಾರೆ!

09006031a ಸದೇವಲೋಕೇ ಕೃತ್ಸ್ನೇಽಸ್ಮಿನ್ನಾನ್ಯಸ್ತ್ವತ್ತಃ ಪುಮಾನ್ಭವೇತ್|

09006031c ಮದ್ರರಾಜಂ ರಣೇ ಕ್ರುದ್ಧಂ ಯೋ ಹನ್ಯಾತ್ಕುರುನಂದನ|

09006031e ಅಹನ್ಯಹನಿ ಯುಧ್ಯಂತಂ ಕ್ಷೋಭಯಂತಂ ಬಲಂ ತವ||

ಕುರುನಂದನ! ರಣದಲ್ಲಿ ಕ್ರುದ್ಧನಾಗಿ ಪ್ರತಿದಿನವೂ ಯುದ್ಧಮಾಡುತ್ತಾ ನಿನ್ನ ಸೇನೆಯನ್ನು ಕ್ಷೋಭೆಗೊಳಿಸುತ್ತಿರುವ ಮದ್ರರಾಜನನ್ನು ಸಂಹರಿಸಬಲ್ಲ ನಿನ್ನಂತಹ ಪುರುಷನು ದೇವಲೋಕವೂ ಸೇರಿ ಇಡೀ ಜಗತ್ತಿನಲ್ಲಿಯೇ ಇಲ್ಲ.

09006032a ತಸ್ಮಾಜ್ಜಹಿ ರಣೇ ಶಲ್ಯಂ ಮಘವಾನಿವ ಶಂಬರಂ|

09006032c ಅತಿಪಶ್ಚಾದಸೌ[1] ವೀರೋ ಧಾರ್ತರಾಷ್ಟ್ರೇಣ ಸತ್ಕೃತಃ||

ಆದುದರಿಂದ ಮಘವಾನನು ಶಂಬರನನ್ನು ಹೇಗೋ ಹಾಗೆ ರಣದಲ್ಲಿ ಶಲ್ಯನನ್ನು ಸಂಹರಿಸು. ಅವನು ಅತಿ ವೀರನೂ ಧಾರ್ತರಾಷ್ಟ್ರರಿಂದ ಸತ್ಕೃತನೂ ಆಗಿದ್ದಾನೆ.

09006033a ತವೈವ ಹಿ ಜಯೋ ನೂನಂ ಹತೇ ಮದ್ರೇಶ್ವರೇ ಯುಧಿ|

09006033c ತಸ್ಮಿನ್ ಹತೇ ಹತಂ ಸರ್ವಂ ಧಾರ್ತರಾಷ್ಟ್ರಬಲಂ ಮಹತ್||

ಯುದ್ಧದಲ್ಲಿ ಮದ್ರೇಶ್ವರನು ಹತನಾದನೆಂದರೆ ನಿನಗೇ ಜಯವೊದಗುತ್ತದೆ. ಅವನು ಹತನಾದರೆ ಧಾರ್ತರಾಷ್ಟ್ರರ ಮಹಾ ಸೇನೆಯಲ್ಲವೂ ಹತಗೊಂಡಂತೆ.

09006034a ಏತಚ್ಛೃತ್ವಾ ಮಹಾರಾಜ ವಚನಂ ಮಮ ಸಾಂಪ್ರತಂ|

09006034c ಪ್ರತ್ಯುದ್ಯಾಹಿ ರಣೇ ಪಾರ್ಥ ಮದ್ರರಾಜಂ ಮಹಾಬಲಂ||

09006034e ಜಹಿ ಚೈನಂ ಮಹಾಬಾಹೋ ವಾಸವೋ ನಮುಚಿಂ ಯಥಾ||

ಮಹಾರಾಜ! ಪಾರ್ಥ! ಮಹಾಬಾಹೋ! ನನ್ನ ಈ ಮಾತನ್ನು ಕೇಳಿ ನನ್ನ ಸಲಹೆಯಂತೆ ರಣದಲ್ಲಿ ಮಹಾಬಲ ಮದ್ರರಾಜನನ್ನು ಎದುರಿಸಿ ಯುದ್ಧಮಾಡಿ ವಾಸವನು ನಮುಚಿಯನ್ನು ಹೇಗೋ ಹಾಗೆ ಅವನನ್ನು ಸಂಹರಿಸು!

09006035a ನ ಚೈವಾತ್ರ ದಯಾ ಕಾರ್ಯಾ ಮಾತುಲೋಽಯಂ ಮಮೇತಿ ವೈ|

09006035c ಕ್ಷತ್ರಧರ್ಮಂ ಪುರಸ್ಕೃತ್ಯ ಜಹಿ ಮದ್ರಜನೇಶ್ವರಂ||

ನನ್ನ ಮಾತುಲನಿವನು ಎಂದು ಅವನ ಮೇಲೆ ದಯವನ್ನು ತೋರಿಸದೆಯೇ ಕ್ಷತ್ರಧರ್ಮವನ್ನು ಪುರಸ್ಕರಿಸಿ ಮದ್ರಜನೇಶ್ವರನನ್ನು ಸಂಹರಿಸು.

09006036a ಭೀಷ್ಮದ್ರೋಣಾರ್ಣವಂ ತೀರ್ತ್ವಾ ಕರ್ಣಪಾತಾಲಸಂಭವಂ|

09006036c ಮಾ ನಿಮಜ್ಜಸ್ವ ಸಗಣಃ ಶಲ್ಯಮಾಸಾದ್ಯ ಗೋಷ್ಪದಂ||

ಭೀಷ್ಮ-ದ್ರೋಣರೆಂಬ ಮಹಾ ಸಾಗರವನ್ನೂ, ಕರ್ಣನೆಂಬ ಪಾತಾಳದಷ್ಟು ಆಳವಾಗಿದ್ದ ಮಡುವನ್ನೂ ದಾಟಿದ ನೀನು ಶಲ್ಯನೆಂಬ ಗೋವಿನ ಪಾದದಷ್ಟಿರುವ ಗುಂಡಿಯಲ್ಲಿ ಗಣಸಮೇತನಾಗಿ ಮುಳುಗಿಹೋಗಬೇಡ!

09006037a ಯಚ್ಚ ತೇ ತಪಸೋ ವೀರ್ಯಂ ಯಚ್ಚ ಕ್ಷಾತ್ರಂ ಬಲಂ ತವ|

09006037c ತದ್ದರ್ಶಯ ರಣೇ ಸರ್ವಂ ಜಹಿ ಚೈನಂ ಮಹಾರಥಂ||

ನಿನ್ನಲ್ಲಿರುವ ತಪಸ್ಸು, ವೀರ್ಯ, ಮತ್ತು ಕ್ಷಾತ್ರಬಲಗಳೆಲ್ಲವನ್ನೂ ರಣದಲ್ಲಿ ತೋರಿಸಿ ಆ ಮಹಾರಥನನ್ನು ಸಂಹರಿಸು!”

09006038a ಏತಾವದುಕ್ತ್ವಾ ವಚನಂ ಕೇಶವಃ ಪರವೀರಹಾ|

09006038c ಜಗಾಮ ಶಿಬಿರಂ ಸಾಯಂ ಪೂಜ್ಯಮಾನೋಽಥ ಪಾಂಡವೈಃ||

ಈ ಮಾತುಗಳನ್ನು ಹೇಳಿ ಪರವೀರಹ ಕೇಶವನು ಪಾಂಡವರಿಂದ ಗೌರವಿಸಲ್ಪಟ್ಟು ಸಾಯಂಕಾಲದ ಹೊತ್ತಿಗೆ ತನ್ನ ಶಿಬಿರಕ್ಕೆ ಹೋದನು.

09006039a ಕೇಶವೇ ತು ತದಾ ಯಾತೇ ಧರ್ಮರಾಜೋ ಯುಧಿಷ್ಠಿರಃ|

09006039c ವಿಸೃಜ್ಯ ಸರ್ವಾನ್ಭ್ರಾತೄಂಶ್ಚ ಪಾಂಚಾಲಾನಥ ಸೋಮಕಾನ್||

09006039e ಸುಷ್ವಾಪ ರಜನೀಂ ತಾಂ ತು ವಿಶಲ್ಯ ಇವ ಕುಂಜರಃ||

ಕೇಶವನು ಹೊರಟು ಹೋಗಲು ಧರ್ಮರಾಜ ಯುಧಿಷ್ಠಿರನು ತನ್ನ ಭ್ರಾತೃಗಳನ್ನೂ, ಪಾಂಚಾಲ-ಸೋಮಕರೆಲ್ಲರನ್ನೂ ಕಳುಹಿಸಿ ಅಂಕುಶವಿಲ್ಲದ ಸಲಗದಂತೆ ಸುಖವಾಗಿ ಆ ರಾತ್ರಿ ನಿದ್ರಿಸಿದನು.

09006040a ತೇ ಚ ಸರ್ವೇ ಮಹೇಷ್ವಾಸಾಃ ಪಾಂಚಾಲಾಃ ಪಾಂಡವಾಸ್ತಥಾ|

09006040c ಕರ್ಣಸ್ಯ ನಿಧನೇ ಹೃಷ್ಟಾಃ ಸುಷುಪುಸ್ತಾಂ ನಿಶಾಂ ತದಾ||

ಕರ್ಣನ ನಿಧನದಿಂದ ಹೃಷ್ಟರಾಗಿದ್ದ ಮಹೇಷ್ವಾಸ ಪಾಂಚಾಲ-ಪಾಂಡವರೆಲ್ಲರೂ ಆ ರಾತ್ರಿ ಸುಖವಾಗಿ ನಿದ್ರಿಸಿದರು.

09006041a ಗತಜ್ವರಂ ಮಹೇಷ್ವಾಸಂ ತೀರ್ಣಪಾರಂ ಮಹಾರಥಂ|

09006041c ಬಭೂವ ಪಾಂಡವೇಯಾನಾಂ ಸೈನ್ಯಂ ಪ್ರಮುದಿತಂ ನಿಶಿ||

09006041e ಸೂತಪುತ್ರಸ್ಯ ನಿಧನೇ ಜಯಂ ಲಬ್ಧ್ವಾ ಚ ಮಾರಿಷ||

ಮಾರಿಷ! ಸೂತಪುತ್ರನ ನಿಧನದಿಂದಾಗಿ ಜಯವನ್ನು ಪಡೆದ ಪಾಂಡವ ಸೇನೆಯು, ಕರ್ಣನಂಥ ಮಹಾರಥ ಮಹೇಷ್ವಾಸನನ್ನು ದಾಟಿ ಚಿಂತೆಗಳನ್ನು ಕಳೆದುಕೊಂಡು ಆ ರಾತ್ರಿ ಅತ್ಯಂತ ಮುದಿತವಾಗಿತ್ತು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯಸೈನಾಪತ್ಯಾಭಿಷೇಕೇ ಷಷ್ಠೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯಸೈನಾಪತ್ಯಾಭಿಷೇಕ ಎನ್ನುವ ಆರನೇ ಅಧ್ಯಾಯವು.

[1] ಅಜೇಯಾಪ್ಯಾಸದೌ ಎಂಬ ಪಾಠಾಂತರವಿದೆ (ನೀಲಕಂಠ).

Comments are closed.