Shalya Parva: Chapter 57

ಶಲ್ಯಪರ್ವ: ಗದಾಯುದ್ಧ ಪರ್ವ

೫೭

ಅರ್ಜುನ-ವಾಸುದೇವರ ಸಂವಾದ ಮತ್ತು ಅರ್ಜುನನು ತನ್ನ ಎಡತೊಡೆಯನ್ನು ಹೊಡೆದುಕೊಂಡು ಭೀಮಸೇನನಿಗೆ ಸೂಚನೆಯನ್ನಿತ್ತಿದುದು (೧-೧೮). ಭೀಮಸೇನನು ದುರ್ಯೋಧನನ ತೊಡೆಗಳನ್ನು ಮುರಿದು ಬೀಳಿಸಿದುದು (೧೯-೪೪). ದುರ್ಯೋಧನನು ಬಿದ್ದಾಗ ಕಾಣಿಸಿಕೊಂಡ ಉತ್ಪಾತಗಳು (೪೫-೫೯).

09057001 ಸಂಜಯ ಉವಾಚ

09057001a ಸಮುದೀರ್ಣಂ ತತೋ ದೃಷ್ಟ್ವಾ ಸಂಗ್ರಾಮಂ ಕುರುಮುಖ್ಯಯೋಃ|

09057001c ಅಥಾಬ್ರವೀದರ್ಜುನಸ್ತು ವಾಸುದೇವಂ ಯಶಸ್ವಿನಂ||

ಸಂಜಯನು ಹೇಳಿದನು: “ಕುರುಮುಖ್ಯರ ಆ ಸಂಗ್ರಾಮವು ಮುಕ್ತಾಯವಾಗದಿರುವುದನ್ನು ನೋಡಿ ಅರ್ಜುನನು ಯಶಸ್ವಿ ವಾಸುದೇವನಿಗೆ ಇಂತೆಂದನು:

09057002a ಅನಯೋರ್ವೀರಯೋರ್ಯುದ್ಧೇ ಕೋ ಜ್ಯಾಯಾನ್ಭವತೋ ಮತಃ|

09057002c ಕಸ್ಯ ವಾ ಕೋ ಗುಣೋ ಭೂಯಾನೇತದ್ವದ ಜನಾರ್ದನ||

“ಜನಾರ್ದನ! ನಿನ್ನ ಅಭಿಪ್ರಾಯದಲ್ಲಿ ಈ ಇಬ್ಬರು ವೀರರಲ್ಲಿ ಯಾರು ಹೆಚ್ಚಿನವರು? ಯಾರಲ್ಲಿ ಯಾವ ಗುಣವು ಅಧಿಕವಾಗಿದೆ ಎನ್ನುವುದನ್ನು ಹೇಳು!”

09057003 ವಾಸುದೇವ ಉವಾಚ

09057003a ಉಪದೇಶೋಽನಯೋಸ್ತುಲ್ಯೋ ಭೀಮಸ್ತು ಬಲವತ್ತರಃ|

09057003c ಕೃತಯತ್ನತರಸ್ತ್ವೇಷ ಧಾರ್ತರಾಷ್ಟ್ರೋ ವೃಕೋದರಾತ್||

ವಾಸುದೇವನು ಹೇಳಿದನು: “ಶಿಕ್ಷಣದಲ್ಲಿ ಇಬ್ಬರೂ ಸಮಾನರೇ. ಆದರೆ ಭೀಮನು ಹೆಚ್ಚು ಬಲಶಾಲಿ. ಧಾರ್ತರಾಷ್ಟ್ರನು ವೃಕೋದರನಿಗಿಂತಲೂ ಹೆಚ್ಚು ಪ್ರಯತ್ನಶೀಲ.

09057004a ಭೀಮಸೇನಸ್ತು ಧರ್ಮೇಣ ಯುಧ್ಯಮಾನೋ ನ ಜೇಷ್ಯತಿ|

09057004c ಅನ್ಯಾಯೇನ ತು ಯುಧ್ಯನ್ವೈ ಹನ್ಯಾದೇಷ ಸುಯೋಧನಂ||

ಆದರೆ ಭೀಮಸೇನನು ಧರ್ಮಪೂರ್ವಕವಾಗಿಯೇ ಯುದ್ಧಮಾಡುತ್ತಿದ್ದರೆ ಜಯಿಸುವುದಿಲ್ಲ. ಅನ್ಯಾಯದಿಂದ ಯುದ್ಧಮಾಡಿದರೆ ಮಾತ್ರ ಸುಯೋಧನನನ್ನು ಇವನು ಸಂಹರಿಸಬಲ್ಲನು.

09057005a ಮಾಯಯಾ ನಿರ್ಜಿತಾ ದೇವೈರಸುರಾ ಇತಿ ನಃ ಶ್ರುತಂ|

09057005c ವಿರೋಚನಶ್ಚ ಶಕ್ರೇಣ ಮಾಯಯಾ ನಿರ್ಜಿತಃ ಸಖೇ|

09057005e ಮಾಯಯಾ ಚಾಕ್ಷಿಪತ್ತೇಜೋ ವೃತ್ರಸ್ಯ ಬಲಸೂದನಃ||

ದೇವತೆಗಳು ಅಸುರರನ್ನು ಮಾಯೆಯಿಂದಲೇ ಸೋಲಿಸಿದರೆಂದು ನಾವು ಕೇಳಿದ್ದೇವೆ. ಸಖ ಶಕ್ರನು ವಿರೋಚನನನ್ನು ಮಾಯೆಯಿಂದಲೇ ಸೋಲಿಸಿದನು. ಬಲಸೂದನನು ಮಾಯೆಯಿಂದಲೇ ವೃತ್ರನ ತೇಜಸ್ಸನ್ನು ಅಪಹರಿಸಿದನು.

09057006a ಪ್ರತಿಜ್ಞಾತಂ ತು ಭೀಮೇನ ದ್ಯೂತಕಾಲೇ ಧನಂಜಯ|

09057006c ಊರೂ ಭೇತ್ಸ್ಯಾಮಿ ತೇ ಸಂಖ್ಯೇ ಗದಯೇತಿ ಸುಯೋಧನಂ||

ಧನಂಜಯ! ಭೀಮನಾದರೋ ದ್ಯೂತದ ಸಮಯದಲ್ಲಿ “ಯುದ್ಧದಲ್ಲಿ ಸುಯೋಧನನ ತೊಡೆಯನ್ನು ಗದೆಯಿಂದ ಒಡೆಯುತ್ತೇನೆ!” ಎಂದು ಪ್ರತಿಜ್ಞೆಮಾಡಿದ್ದನು.

09057007a ಸೋಽಯಂ ಪ್ರತಿಜ್ಞಾಂ ತಾಂ ಚಾಪಿ ಪಾರಯಿತ್ವಾರಿಕರ್ಶನಃ|

09057007c ಮಾಯಾವಿನಂ ಚ ರಾಜಾನಂ ಮಾಯಯೈವ ನಿಕೃಂತತು||

ಆ ಪ್ರತಿಜ್ಞೆಯನ್ನು ಅರಿಕರ್ಶನ ಭೀಮನು ಈಗ ಪರಿಪಾಲಿಸಲಿ. ಮಾಯಾವಿ ರಾಜನನ್ನು ಮಾಯೆಯಿಂದಲೇ ಸಂಹರಿಸಲಿ.

09057008a ಯದ್ಯೇಷ ಬಲಮಾಸ್ಥಾಯ ನ್ಯಾಯೇನ ಪ್ರಹರಿಷ್ಯತಿ|

09057008c ವಿಷಮಸ್ಥಸ್ತತೋ ರಾಜಾ ಭವಿಷ್ಯತಿ ಯುಧಿಷ್ಠಿರಃ||

ಒಂದುವೇಳೆ ಭೀಮಸೇನನು ಬಲವನ್ನೇ ಉಪಯೋಗಿಸಿ ನ್ಯಾಯರೀತಿಯಲ್ಲಿ ಹೊಡೆದಾಡುತ್ತಿದ್ದರೆ ರಾಜ ಯುಧಿಷ್ಠಿರನಿಗೆ ವಿಷಮ ಪರಿಸ್ಥಿತಿಯುಂಟಾಗುತ್ತದೆ.

09057009a ಪುನರೇವ ಚ ವಕ್ಷ್ಯಾಮಿ ಪಾಂಡವೇದಂ ನಿಬೋಧ ಮೇ|

09057009c ಧರ್ಮರಾಜಾಪರಾಧೇನ ಭಯಂ ನಃ ಪುನರಾಗತಂ||

ಪಾಂಡವ! ಪುನಃ ನಿನಗೆ ಇದನ್ನು ಹೇಳುತ್ತಿದ್ದೇನೆ. ಕೇಳು. ಧರ್ಮರಾಜನ ಅಪರಾಧದಿಂದಾಗಿ ನಮಗೆ ಪುನಃ ಭಯವು ಆವರಿಸಿದೆ.

09057010a ಕೃತ್ವಾ ಹಿ ಸುಮಹತ್ಕರ್ಮ ಹತ್ವಾ ಭೀಷ್ಮಮುಖಾನ್ಕುರೂನ್|

09057010c ಜಯಃ ಪ್ರಾಪ್ತೋ ಯಶಶ್ಚಾಗ್ರ್ಯಂ ವೈರಂ ಚ ಪ್ರತಿಯಾತಿತಂ|

09057010e ತದೇವಂ ವಿಜಯಃ ಪ್ರಾಪ್ತಃ ಪುನಃ ಸಂಶಯಿತಃ ಕೃತಃ||

ಮಹತ್ಕಾರ್ಯವನ್ನೆಸಗಿ ಭೀಷ್ಮನೇ ಮೊದಲಾದ ಕುರುಮುಖ್ಯರನ್ನು ಸಂಹರಿಸಿ, ಜಯವನ್ನು ಪಡೆದು ನಾವು ವೈರಕ್ಕೆ ಪ್ರತೀಕಾರವನ್ನೆಸಗಿದ ಯಶಸ್ಸನ್ನು ಪಡೆದಿದ್ದೆವು. ಗಳಿಸಿದ ವಿಜಯವನ್ನೇ ಅವನು ಪುನಃ ಸಂಶಯಕ್ಕೀಡುಮಾಡಿಬಿಟ್ಟಿದ್ದಾನೆ!

09057011a ಅಬುದ್ಧಿರೇಷಾ ಮಹತೀ ಧರ್ಮರಾಜಸ್ಯ ಪಾಂಡವ|

09057011c ಯದೇಕವಿಜಯೇ ಯುದ್ಧಂ ಪಣಿತಂ ಕೃತಮೀದೃಶಂ|

09057011e ಸುಯೋಧನಃ ಕೃತೀ ವೀರ ಏಕಾಯನಗತಸ್ತಥಾ||

ಪಾಂಡವ! ಒಬ್ಬನನ್ನೇ ಜಯಿಸುವ ಈ ರೀತಿ ಪಣವನ್ನಿಟ್ಟಿರುವ ಧರ್ಮರಾಜನ ಬುದ್ಧಿಯು ನಿಶ್ಚಯವಾಗಿಯೂ ವಿವೇಕವಿಲ್ಲದ ಬುದ್ಧಿಯೇ ಸರಿ! ಸುಯೋಧನನು ವೀರ, ಕಾರ್ಯಶಾಲೀ ಮತ್ತು ದೃಢಚಿತ್ತನು.

09057012a ಅಪಿ ಚೋಶನಸಾ ಗೀತಃ ಶ್ರೂಯತೇಽಯಂ ಪುರಾತನಃ|

09057012c ಶ್ಲೋಕಸ್ತತ್ತ್ವಾರ್ಥಸಹಿತಸ್ತನ್ಮೇ ನಿಗದತಃ ಶೃಣು||

ಇದರ ಕುರಿತು ಉಶಸನನು ಹೇಳಿದ ಪುರಾತನ ಗೀತೆಯೊಂದು ಕೇಳಿಬರುತ್ತದೆ. ತತ್ತ್ವಾರ್ಥಸಹಿತವಾಗಿರುವ ಆ ಶ್ಲೋಕವನ್ನೇ ಹೇಳುವೆನು. ಕೇಳು!

09057013a ಪುನರಾವರ್ತಮಾನಾನಾಂ ಭಗ್ನಾನಾಂ ಜೀವಿತೈಷಿಣಾಂ|

09057013c ಭೇತವ್ಯಮರಿಶೇಷಾಣಾಮೇಕಾಯನಗತಾ ಹಿ ತೇ||

ಜೀವದ ಮೇಲಿನ ಆಸೆಯಿಂದಾಗಿ ಯುದ್ಧವನ್ನು ಬಿಟ್ಟುಹೋಗಿದ್ದ, ಜೀವದಿಂದುಳಿದಿರುವ ಶತ್ರುಗಳು ಒಂದು ವೇಳೆ ಪುನಃ ಯುದ್ಧಕ್ಕೆ ಬಂದರೆ ಅಂತವರ ವಿಷಯದಲ್ಲಿ ಹೆಚ್ಚು ಭಯಪಡಬೇಕು. ಏಕೆಂದರೆ, ಅವರು ಜೀವದ ಮೇಲಿನ ಹಂಗನ್ನೇ ತೊರೆದು ಕೇವಲ ಜಯಗಳಿಸುವುದೊಂದರಲ್ಲಿಯೇ ತಮ್ಮ ಅಭ್ಯಾಸ ಮತ್ತು ಪ್ರಯತ್ನಗಳನ್ನು ಕೇಂದ್ರೀಕರಿಸುತ್ತಾರೆ.

09057014a ಸುಯೋಧನಮಿಮಂ ಭಗ್ನಂ ಹತಸೈನ್ಯಂ ಹ್ರದಂ ಗತಂ|

09057014c ಪರಾಜಿತಂ ವನಪ್ರೇಪ್ಸುಂ ನಿರಾಶಂ ರಾಜ್ಯಲಂಭನೇ||

ಈ ಸುಯೋಧನನಾದರೋ ಭಗ್ನಮನೋರಥನಾಗಿದ್ದನು. ಸೈನ್ಯವನ್ನು ಕಳೆದುಕೊಂಡು ಸರೋವರವನ್ನು ಸೇರಿದ್ದನು. ಪರಾಜಿತನಾಗಿ ವನವನ್ನು ಸೇರಿದ್ದನು. ರಾಜ್ಯವನ್ನು ಉಳಿಸಿಕೊಳ್ಳುವುದರಲ್ಲಿ ನಿರಾಶನಾಗಿಹೋಗಿದ್ದನು.

09057015a ಕೋ ನ್ವೇಷ ಸಂಯುಗೇ ಪ್ರಾಜ್ಞಃ ಪುನರ್ದ್ವಂದ್ವೇ ಸಮಾಹ್ವಯೇತ್|

09057015c ಅಪಿ ವೋ ನಿರ್ಜಿತಂ ರಾಜ್ಯಂ ನ ಹರೇತ ಸುಯೋಧನಃ||

ಇಂಥವನನ್ನು ತಿಳಿದವನು ಯಾರು ತಾನೇ ಪುನಃ ದ್ವಂದ್ವಯುದ್ಧಕ್ಕೆ ಆಹ್ವಾನಿಸುತ್ತಾರೆ? ಜಯಿಸಿರುವ ಈ ರಾಜ್ಯವನ್ನು ಸುಯೋಧನನು ಪುನಃ ಕಸಿದುಕೊಳ್ಳುವುದಿಲ್ಲವೇ?

09057016a ಯಸ್ತ್ರಯೋದಶವರ್ಷಾಣಿ ಗದಯಾ ಕೃತನಿಶ್ರಮಃ|

09057016c ಚರತ್ಯೂರ್ಧ್ವಂ ಚ ತಿರ್ಯಕ್ಚ ಭೀಮಸೇನಜಿಘಾಂಸಯಾ||

ಈ ಹದಿಮೂರು ವರ್ಷಗಳು ಗದಾಯುದ್ಧದಲ್ಲಿ ಶ್ರಮಪಟ್ಟು ಅಭ್ಯಾಸಮಾಡಿರುವ ಸುಯೋಧನನು ಭೀಮನನ್ನು ಕೊಲ್ಲಲು ಬಯಸಿ ಅಡ್ಡವಾಗಿ ನಡೆಯಿಡುತ್ತಿದ್ದಾನೆ; ಮೇಲಕ್ಕೂ ನೆಗೆಯುತ್ತಿದ್ದಾನೆ!

09057017a ಏವಂ ಚೇನ್ನ ಮಹಾಬಾಹುರನ್ಯಾಯೇನ ಹನಿಷ್ಯತಿ|

09057017c ಏಷ ವಃ ಕೌರವೋ ರಾಜಾ ಧಾರ್ತರಾಷ್ಟ್ರೋ ಭವಿಷ್ಯತಿ||

ಮಹಾಬಾಹು ಭೀಮಸೇನನು ಇವನನ್ನು ಅನ್ಯಾಯದಿಂದ ಸಂಹರಿಸದೇ ಇದ್ದರೆ ಧಾರ್ತರಾಷ್ಟ್ರ ಕೌರವನೇ ನಿಮ್ಮೆಲ್ಲರಿಗೂ ರಾಜನಾಗುತ್ತಾನೆ!”

09057018a ಧನಂಜಯಸ್ತು ಶ್ರುತ್ವೈತತ್ಕೇಶವಸ್ಯ ಮಹಾತ್ಮನಃ|

09057018c ಪ್ರೇಕ್ಷತೋ ಭೀಮಸೇನಸ್ಯ ಹಸ್ತೇನೋರುಮತಾಡಯತ್||

ಮಹಾತ್ಮ ಕೇಶವನನ್ನು ಕೇಳಿದ ಧನಂಜಯನಾದರೋ ಭೀಮಸೇನನಿಗೆ ತೋರಿಸುತ್ತಾ ಕೈಯಿಂದ ತನ್ನ ಏಡತೊಡೆಯನ್ನು ಹೊಡೆದುಕೊಂಡನು.

09057019a ಗೃಹ್ಯ ಸಂಜ್ಞಾಂ ತತೋ ಭೀಮೋ ಗದಯಾ ವ್ಯಚರದ್ರಣೇ|

09057019c ಮಂಡಲಾನಿ ವಿಚಿತ್ರಾಣಿ ಯಮಕಾನೀತರಾಣಿ ಚ||

ಸಂಜ್ಞೆಯನ್ನು ಗ್ರಹಿಸಿದ ಭೀಮಸೇನನು ಆಗ ರಣದಲ್ಲಿ ಗದೆಯನ್ನು ಯಮಕವೇ ಮೊದಲಾದ ವಿಚಿತ್ರ ಮಂಡಲಗಳಲ್ಲಿ ತಿರುಗಿಸತೊಡಗಿದನು.

09057020a ದಕ್ಷಿಣಂ ಮಂಡಲಂ ಸವ್ಯಂ ಗೋಮೂತ್ರಕಮಥಾಪಿ ಚ|

09057020c ವ್ಯಚರತ್ಪಾಂಡವೋ ರಾಜನ್ನರಿಂ ಸಮ್ಮೋಹಯನ್ನಿವ||

ರಾಜನ್! ಶತ್ರುವನ್ನು ಭ್ರಾಂತಗೊಳಿಸುವುದಕ್ಕೋ ಎನ್ನುವಂತೆ ದಕ್ಷಿಣ, ಮಂಡಲ, ಸವ್ಯ, ಗೋಮೂತ್ರಕ ರೀತಿಗಳಲ್ಲಿ ಸಂಚರಿಸತೊಡಗಿದನು.

09057021a ತಥೈವ ತವ ಪುತ್ರೋಽಪಿ ಗದಾಮಾರ್ಗವಿಶಾರದಃ|

09057021c ವ್ಯಚರಲ್ಲಘು ಚಿತ್ರಂ ಚ ಭೀಮಸೇನಜಿಘಾಂಸಯಾ||

ಗದಾಮಾರ್ಗವಿಶಾರದನಾದ ನಿನ್ನ ಮಗನೂ ಕೂಡ ಭೀಮಸೇನನನ್ನು ಕೊಲ್ಲಲೋಸುಗ ಲಘುವಾಗಿ ಚಿತ್ರ ರೀತಿಗಳಲ್ಲಿ ಸಂಚರಿಸತೊಡಗಿದನು.

09057022a ಆಧುನ್ವಂತೌ ಗದೇ ಘೋರೇ ಚಂದನಾಗರುರೂಷಿತೇ|

09057022c ವೈರಸ್ಯಾಂತಂ ಪರೀಪ್ಸಂತೌ ರಣೇ ಕ್ರುದ್ಧಾವಿವಾಂತಕೌ||

ವೈರದ ಅಂತ್ಯವನ್ನು ಹುಡುಕುತ್ತಾ ಚಂದನ ಅಗರುಗಳ ಲೇಪಿತಗೊಂಡ ಘೋರ ಗದೆಗಳನ್ನು ತಿರುಗಿಸುತ್ತಿದ್ದ ಅವರು ರಣದಲ್ಲಿ ಕ್ರುದ್ಧರಾದ ಇಬ್ಬರು ಅಂತಕರಂತೆ ತೋರುತ್ತಿದ್ದರು.

09057023a ಅನ್ಯೋನ್ಯಂ ತೌ ಜಿಘಾಂಸಂತೌ ಪ್ರವೀರೌ ಪುರುಷರ್ಷಭೌ|

09057023c ಯುಯುಧಾತೇ ಗರುತ್ಮಂತೌ ಯಥಾ ನಾಗಾಮಿಷೈಷಿಣೌ||

ಅನ್ಯೋನ್ಯರನ್ನು ಕೊಲ್ಲಲು ಕಾತೊರೆಯುತ್ತಿದ್ದ ಆ ಇಬ್ಬರು ಪ್ರವೀರ ಪುರುಷರ್ಷಭರು ನಾಗಗಳನ್ನು ತಿನ್ನಲು ಬಯಸಿ ಹೋರಾಡುತ್ತಿದ್ದ ಎರಡು ಗರುಡಗಳಂತೆ ತೋರಿದರು.

09057024a ಮಂಡಲಾನಿ ವಿಚಿತ್ರಾಣಿ ಚರತೋರ್ನೃಪಭೀಮಯೋಃ|

09057024c ಗದಾಸಂಪಾತಜಾಸ್ತತ್ರ ಪ್ರಜಜ್ಞುಃ ಪಾವಕಾರ್ಚಿಷಃ||

ವಿಚಿತ್ರ ಮಂಡಲಗಳಲ್ಲಿ ತಿರುಗುತ್ತಿದ್ದ ನೃಪ ಮತ್ತು ಭೀಮರ ಗದೆಗಳ ಸಂಘರ್ಷದಿಂದಾಗಿ ಅಲ್ಲಿ ಬೆಂಕಿಯ ಕಿಡಿಗಳು ಕಾಣಿಸಿಕೊಂಡವು.

09057025a ಸಮಂ ಪ್ರಹರತೋಸ್ತತ್ರ ಶೂರಯೋರ್ಬಲಿನೋರ್ಮೃಧೇ|

09057025c ಕ್ಷುಬ್ಧಯೋರ್ವಾಯುನಾ ರಾಜನ್ದ್ವಯೋರಿವ ಸಮುದ್ರಯೋಃ||

ರಾಜನ್! ಭಿರುಗಾಳಿಯಿಂದ ಪ್ರಕ್ಷುಬ್ಧಗೊಂಡ ಎರಡು ಸಮುದ್ರಗಳು ಅಲೆಗಳಿಂದ ಪರಸ್ಪರರನ್ನು ಅಪ್ಪಳಿಸುವಂತೆ ಆ ಶೂರ ಬಲಶಾಲಿಗಳು ರಣದಲ್ಲಿ ಒಬ್ಬರನ್ನೊಬ್ಬರು ಹೊಡೆಯುತ್ತಿದ್ದರು.

09057026a ತಯೋಃ ಪ್ರಹರತೋಸ್ತುಲ್ಯಂ ಮತ್ತಕುಂಜರಯೋರಿವ|

09057026c ಗದಾನಿರ್ಘಾತಸಂಹ್ರಾದಃ ಪ್ರಹಾರಾಣಾಮಜಾಯತ||

ಅವರಿಬ್ಬರ ಹೊಡೆತಗಳು ಮದಿಸಿದ ಆನೆಗಳ ಹೊಡೆತಗಳಂತಿದ್ದವು. ಗದೆಗಳ ಪ್ರಹಾರದಿಂದ ಆದ ಶಬ್ಧವು ಸಿಡಿಲಿನ ಶಬ್ಧದಂತೆ ಕೇಳಿಬರುತ್ತಿತ್ತು.

09057027a ತಸ್ಮಿಂಸ್ತದಾ ಸಂಪ್ರಹಾರೇ ದಾರುಣೇ ಸಂಕುಲೇ ಭೃಶಂ|

09057027c ಉಭಾವಪಿ ಪರಿಶ್ರಾಂತೌ ಯುಧ್ಯಮಾನಾವರಿಂದಮೌ||

ತುಂಬಾ ದಾರುಣವಾಗಿ ಹೊಡೆದಾಡುತ್ತಿದ್ದ ಆ ಅರಿಂದಮರಿಬ್ಬರೂ ಬಹಳವಾಗಿ ಬಳಲಿದ್ದರು.

09057028a ತೌ ಮುಹೂರ್ತಂ ಸಮಾಶ್ವಸ್ಯ ಪುನರೇವ ಪರಂತಪೌ|

09057028c ಅಭ್ಯಹಾರಯತಾಂ ಕ್ರುದ್ಧೌ ಪ್ರಗೃಹ್ಯ ಮಹತೀ ಗದೇ||

ಮುಹೂರ್ತಕಾಲ ವಿಶ್ರಮಿಸಿ ದಣಿವಾರಿಸಿಕೊಂಡು ಪುನಃ ಆ ಪರಂತಪರಿಬ್ಬರೂ ತಮ್ಮ ಮಹಾ ಗದೆಗಳನ್ನು ಹಿಡಿದು ಕ್ರುದ್ಧರಾಗಿ ಪ್ರಹರಿಸತೊಡಗಿದರು.

09057029a ತಯೋಃ ಸಮಭವದ್ಯುದ್ಧಂ ಘೋರರೂಪಮಸಂವೃತಂ|

09057029c ಗದಾನಿಪಾತೈ ರಾಜೇಂದ್ರ ತಕ್ಷತೋರ್ವೈ ಪರಸ್ಪರಂ||

ರಾಜೇಂದ್ರ! ಪರಸ್ಪರರನ್ನು ಗದೆಗಳ ಹೊಡೆತದಿಂದ ಗಾಯಗೊಳಿಸುವ ಘೋರರೂಪದ ಮಹಾ ಯುದ್ಧವು ಅವರಿಬ್ಬರ ನಡುವೆ ನಡೆಯಿತು.

09057030a ವ್ಯಾಯಾಮಪ್ರದ್ರುತೌ ತೌ ತು ವೃಷಭಾಕ್ಷೌ ತರಸ್ವಿನೌ|

09057030c ಅನ್ಯೋನ್ಯಂ ಜಘ್ನತುರ್ವೀರೌ ಪಂಕಸ್ಥೌ ಮಹಿಷಾವಿವ||

ಕೆಸರಿನಲ್ಲಿ ಬಿದ್ದಿರುವ ಎರಡು ಕಾಡುಕೋಣಗಳು ಪರಸ್ಪರ ಹೊಡೆದಾಡುವಂತೆ ಆ ಇಬ್ಬರು ವೃಷಭಾಕ್ಷ ತರಸ್ವಿ ವೀರರು ಅನ್ಯೋನ್ಯರೊಡನೆ ಹೊಡೆದಾಡುತ್ತಿದ್ದರು.

09057031a ಜರ್ಜರೀಕೃತಸರ್ವಾಂಗೌ ರುಧಿರೇಣಾಭಿಸಂಪ್ಲುತೌ|

09057031c ದದೃಶಾತೇ ಹಿಮವತಿ ಪುಷ್ಪಿತಾವಿವ ಕಿಂಶುಕ||

ಸರ್ವಾಂಗಗಳೂ ಜರ್ಜಿರತವಾಗಿ ರಕ್ತದಿಂದ ತೋಯ್ದುಹೋಗಿದ್ದ ಅವರಿಬ್ಬರೂ ಹಿಮವತ್ಪರ್ವತದಲ್ಲಿ ಹೂಬಿಟ್ಟಿರುವ ಕಿಂಶುಕ ವೃಕ್ಷಗಳಂತೆ ಕಾಣುತ್ತಿದ್ದರು.

09057032a ದುರ್ಯೋಧನೇನ ಪಾರ್ಥಸ್ತು ವಿವರೇ ಸಂಪ್ರದರ್ಶಿತೇ|

09057032c ಈಷದುತ್ಸ್ಮಯಮಾನಸ್ತು ಸಹಸಾ ಪ್ರಸಸಾರ ಹ||

ಪಾರ್ಥ ಭೀಮನು ದುರ್ಯೋಧನನಿಗೆ ಪ್ರಹರಿಸಲು ಅವಕಾಶಕೊಟ್ಟವನಂತೆ ಕಾಣಲು ದುರ್ಯೋಧನನು ನಸುನಕ್ಕು ಒಡನೆಯೇ ಅವನ ಮೇಲೆ ಬಿದ್ದನು.

09057033a ತಮಭ್ಯಾಶಗತಂ ಪ್ರಾಜ್ಞೋ ರಣೇ ಪ್ರೇಕ್ಷ್ಯ ವೃಕೋದರಃ|

09057033c ಅವಾಕ್ಷಿಪದ್ಗದಾಂ ತಸ್ಮೈ ವೇಗೇನ ಮಹತಾ ಬಲೀ||

ರಣದಲ್ಲಿ ತನ್ನ ಮೇಲೆ ಎರಗಿ ಬರುತ್ತಿದ್ದವನನ್ನು ಕಂಡು ಪ್ರಾಜ್ಞ ಮಹಾಬಲಿ ವೃಕೋದರನು ಅವನ ಮೇಲೆ ಗದೆಯನ್ನು ಬೀಸಿ ಎಸೆದನು.

09057034a ಅವಕ್ಷೇಪಂ ತು ತಂ ದೃಷ್ಟ್ವಾ ಪುತ್ರಸ್ತವ ವಿಶಾಂ ಪತೇ|

09057034c ಅಪಾಸರ್ಪತ್ತತಃ ಸ್ಥಾನಾತ್ಸಾ ಮೋಘಾ ನ್ಯಪತದ್ಭುವಿ||

ವಿಶಾಂಪತೇ! ಮೇಲೆ ಬೀಳುತ್ತಿರುವ ಗದೆಯನ್ನು ನೋಡಿ ನಿನ್ನ ಮಗನು ತಾನಿದ್ದ ಸ್ಥಳದಿಂದ ಸರಿಯಲು ಅದು ವ್ಯರ್ಥವಾಗಿ ಭೂಮಿಯ ಮೇಲೆ ಬಿದ್ದಿತು.

09057035a ಮೋಕ್ಷಯಿತ್ವಾ ಪ್ರಹಾರಂ ತಂ ಸುತಸ್ತವ ಸ ಸಂಭ್ರಮಾತ್|

09057035c ಭೀಮಸೇನಂ ಚ ಗದಯಾ ಪ್ರಾಹರತ್ಕುರುಸತ್ತಮಃ||

ಆ ಪ್ರಹಾರದಿಂದ ತಪ್ಪಿಸಿಕೊಂಡ ನಿನ್ನ ಮಗ ಕುರುಸತ್ತಮನು ಒಡನೆಯೇ ಭೀಮಸೇನನನ್ನು ಗದೆಯಿಂದ ಹೊಡೆದನು.

09057036a ತಸ್ಯ ವಿಷ್ಯಂದಮಾನೇನ ರುಧಿರೇಣಾಮಿತೌಜಸಃ|

09057036c ಪ್ರಹಾರಗುರುಪಾತಾಚ್ಚ ಮೂರ್ಚೇವ ಸಮಜಾಯತ||

ಅಮಿತ ತೇಜಸ್ವಿ ಭೀಮನ ದೇಹದಿಂದ ರಕ್ತವು ಧಾರಾಕಾರವಾಗಿ ಸುರಿಯತೊಡಗಿತು. ಜೋರಾದ ಆ ಪೆಟ್ಟಿನಿಂದ ಅವನು ಮೂರ್ಛೆಗೊಂಡವನಂತಾದನು.

09057037a ದುರ್ಯೋಧನಸ್ತಂ ಚ ವೇದ ಪೀಡಿತಂ ಪಾಂಡವಂ ರಣೇ|

09057037c ಧಾರಯಾಮಾಸ ಭೀಮೋಽಪಿ ಶರೀರಮತಿಪೀಡಿತಂ||

ರಣದಲ್ಲಿ ಪಾಂಡವನನ್ನು ತಾನು ಪೀಡಿಸಿದೆನೆಂದು ದುರ್ಯೋಧನನು ತಿಳಿದುಕೊಂಡಿದ್ದರೂ ಮತ್ತು ಶರೀರದಲ್ಲಿ ಅತಿ ನೋವುಂಟಾಗಿದ್ದರೂ ಭೀಮನು ಅದನ್ನು ಸಹಿಸಿಕೊಂಡನು.

09057038a ಅಮನ್ಯತ ಸ್ಥಿತಂ ಹ್ಯೇನಂ ಪ್ರಹರಿಷ್ಯಂತಮಾಹವೇ|

09057038c ಅತೋ ನ ಪ್ರಾಹರತ್ತಸ್ಮೈ ಪುನರೇವ ತವಾತ್ಮಜಃ||

ರಣದಲ್ಲಿ ಪ್ರಹಾರಕ್ಕೊಳಗಾಗಿ ಭೀಮನು ಕ್ಷಣಕಾಲ ನಿಂತಿದ್ದರೂ ನಿನ್ನ ಮಗನು ಪುನಃ ಪ್ರಹರಿಸಲು ನಿಂತಿದ್ದಾನೆಂದೇ ತಿಳಿದುಕೊಂಡನು.

09057039a ತತೋ ಮುಹೂರ್ತಮಾಶ್ವಸ್ಯ ದುರ್ಯೋಧನಮವಸ್ಥಿತಂ|

09057039c ವೇಗೇನಾಭ್ಯದ್ರವದ್ರಾಜನ್ಭೀಮಸೇನಃ ಪ್ರತಾಪವಾನ್||

ಆಗ ಮುಹೂರ್ತಕಾಲ ಚೇತರಿಸಿಕೊಂಡ ಪ್ರತಾಪವಾನ್ ಭೀಮಸೇನನು ನಿಂತಿದ್ದ ದುರ್ಯೋಧನನನ್ನು ವೇಗದಿಂದ ಆಕ್ರಮಣಿಸಿದನು.

09057040a ತಮಾಪತಂತಂ ಸಂಪ್ರೇಕ್ಷ್ಯ ಸಂರಬ್ಧಮಮಿತೌಜಸಂ|

09057040c ಮೋಘಮಸ್ಯ ಪ್ರಹಾರಂ ತಂ ಚಿಕೀರ್ಷುರ್ಭರತರ್ಷಭ||

ತನ್ನ ಮೇಲೆ ಬೀಳುತ್ತಿದ್ದ ಕುಪಿತ ಅಮಿತೌಜಸನನ್ನು ನೋಡಿ ಭರತರ್ಷಭ ದುರ್ಯೋಧನನು ಅವನ ಪ್ರಹಾರವನ್ನು ವ್ಯರ್ಥಗೊಳಿಸಲು ಪ್ರಯತ್ನಿಸಿದನು.

09057041a ಅವಸ್ಥಾನೇ ಮತಿಂ ಕೃತ್ವಾ ಪುತ್ರಸ್ತವ ಮಹಾಮನಾಃ|

09057041c ಇಯೇಷೋತ್ಪತಿತುಂ ರಾಜಂಶ್ಚಲಯಿಷ್ಯನ್ವೃಕೋದರಂ||

ರಾಜನ್! ಮಹಾಮನಸ್ವಿ ನಿನ್ನ ಮಗನು ಚಲಿಸುತ್ತಿರುವ ವೃಕೋದರನಿಗೆ ಮೋಸಮಾಡಲು ಬಯಸಿ ನಿಂತಲ್ಲಿಯೇ ಮೇಲೆ ನೆಗೆಯಲು ನಿಶ್ಚಯಿಸಿದನು.

09057042a ಅಬುಧ್ಯದ್ಭೀಮಸೇನಸ್ತದ್ರಾಜ್ಞಸ್ತಸ್ಯ ಚಿಕೀರ್ಷಿತಂ|

09057042c ಅಥಾಸ್ಯ ಸಮಭಿದ್ರುತ್ಯ ಸಮುತ್ಕ್ರಮ್ಯ ಚ ಸಿಂಹವತ್||

ರಾಜ ದುರ್ಯೋಧನ ಇಂಗಿತವನ್ನು ತಿಳಿದ ಭೀಮಸೇನನು ಅವನನ್ನು ಸಿಂಹನಂತೆ ಆಕ್ರಮಣಿಸಲು ನಿರ್ಧರಿಸಿದನು.

09057043a ಸೃತ್ಯಾ ವಂಚಯತೋ ರಾಜನ್ಪುನರೇವೋತ್ಪತಿಷ್ಯತಃ|

09057043c ಊರುಭ್ಯಾಂ ಪ್ರಾಹಿಣೋದ್ರಾಜನ್ಗದಾಂ ವೇಗೇನ ಪಾಂಡವಃ||

ವಂಚಿಸಲು ಪುನಃ ಮೇಲೆ ಹಾರಿದ್ದ ಅವನ ತೊಡೆಗಳನ್ನು ಪಾಂಡವನು ಗದೆಯಿಂದ ವೇಗವಾಗಿ ಹೊಡೆದನು.

09057044a ಸಾ ವಜ್ರನಿಷ್ಪೇಷಸಮಾ ಪ್ರಹಿತಾ ಭೀಮಕರ್ಮಣಾ|

09057044c ಊರೂ ದುರ್ಯೋಧನಸ್ಯಾಥ ಬಭಂಜ ಪ್ರಿಯದರ್ಶನೌ||

ಆ ಭೀಮಕರ್ಮಿಯಿಂದ ಪ್ರಹರಿಸಲ್ಪಟ್ಟ ಗದೆಯು ಸಿಡಿಲಿನಂತೆ ಸಿಡಿದು ನೋಡಲು ಬಹು ಸುಂದರವಾಗಿದ್ದ ದುರ್ಯೋಧನನ ತೊಡೆಗಳನ್ನು ಮುರಿದುಹಾಗಿತು.

09057045a ಸ ಪಪಾತ ನರವ್ಯಾಘ್ರೋ ವಸುಧಾಮನುನಾದಯನ್|

09057045c ಭಗ್ನೋರುರ್ಭೀಮಸೇನೇನ ಪುತ್ರಸ್ತವ ಮಹೀಪತೇ||

ಮಹೀಪತೇ! ಭೀಮಸೇನನಿಂದ ತೊಡೆಗಳು ಮುರಿಯಲ್ಪಟ್ಟ ಆ ನಿನ್ನ ಪುತ್ರ ನರವ್ಯಾಘ್ರನು ಜೋರಾಗಿ ಕೂಗುತ್ತಾ ವಸುಧೆಯ ಮೇಲೆ ಬಿದ್ದನು.

09057046a ವವುರ್ವಾತಾಃ ಸನಿರ್ಘಾತಾಃ ಪಾಂಸುವರ್ಷಂ ಪಪಾತ ಚ|

09057046c ಚಚಾಲ ಪೃಥಿವೀ ಚಾಪಿ ಸವೃಕ್ಷಕ್ಷುಪಪರ್ವತಾ||

09057047a ತಸ್ಮಿನ್ನಿಪತಿತೇ ವೀರೇ ಪತ್ಯೌ ಸರ್ವಮಹೀಕ್ಷಿತಾಂ|

09057047c ಮಹಾಸ್ವನಾ ಪುನರ್ದೀಪ್ತಾ ಸನಿರ್ಘಾತಾ ಭಯಂಕರೀ||

09057047e ಪಪಾತ ಚೋಲ್ಕಾ ಮಹತೀ ಪತಿತೇ ಪೃಥಿವೀಪತೌ||

ಆ ವೀರ ಸರ್ವಮಹೀಕ್ಷಿತರ ಅಧಿಪತಿಯು ಬೀಳಲು ಸಿಡಿಲುಗಳೊಡನೆ ಚಂಡಮಾರುತಗಳು ಬೀಸತೊಡಗಿದವು. ಕೆಸರಿನ ಮಳೆಯು ಸುರಿಯಿತು. ವೃಕ್ಷ, ಪರ್ವತ ಕಂದರಗಳಿಂದ ಕೂಡಿದ ಭೂಮಿಯು ನಡುಗಿತು. ಮಹಾಶಬ್ಧದಿಂದ ಕೂಡಿದ ದೇದೀಪ್ಯಮಾನವಾದ ಭಯಂಕರ ನಿರ್ಘಾತದೊಂದಿಗೆ ಮಹಾ ಉಲ್ಕೆಯು ಬಿದ್ದಿತು.

09057048a ತಥಾ ಶೋಣಿತವರ್ಷಂ ಚ ಪಾಂಸುವರ್ಷಂ ಚ ಭಾರತ|

09057048c ವವರ್ಷ ಮಘವಾಂಸ್ತತ್ರ ತವ ಪುತ್ರೇ ನಿಪಾತಿತೇ||

ಭಾರತ! ನಿನ್ನ ಮಗನು ಕೆಳಕ್ಕೆ ಬೀಳಲು ಮಘವ ಇಂದ್ರನು ರಕ್ತದ ಮಳೆಗಳನ್ನೂ ಕೆಸರಿನ ಮಳೆಗಳನ್ನೂ ಸುರಿಸಿದನು.

09057049a ಯಕ್ಷಾಣಾಂ ರಾಕ್ಷಸಾನಾಂ ಚ ಪಿಶಾಚಾನಾಂ ತಥೈವ ಚ|

09057049c ಅಂತರಿಕ್ಷೇ ಮಹಾನಾದಃ ಶ್ರೂಯತೇ ಭರತರ್ಷಭ||

ಭಾರತ! ಆಕಾಶದಲ್ಲಿ ಯಕ್ಷರ, ರಾಕ್ಷಸರ ಮತ್ತು ಪಿಶಾಚಿಗಳ ಮಹಾನಾದವು ಕೇಳಿಬಂದಿತು.

09057050a ತೇನ ಶಬ್ದೇನ ಘೋರೇಣ ಮೃಗಾಣಾಮಥ ಪಕ್ಷಿಣಾಂ|

09057050c ಜಜ್ಞೇ ಘೋರತಮಃ ಶಬ್ದೋ ಬಹೂನಾಂ ಸರ್ವತೋದಿಶಂ||

ಅಂತರಿಕ್ಷದ ಆ ಘೋರ ಶಬ್ಧಗಳೊಂದಿಗೆ ಎಲ್ಲ ದಿಕ್ಕುಗಳಿಂದ ಮೃಗ- ಪಕ್ಷಿಗಳ ಘೋರತಮ ಶಬ್ಧವು ಬಹಳವಾಗಿ ಕೇಳಿಬಂದಿತು.

09057051a ಯೇ ತತ್ರ ವಾಜಿನಃ ಶೇಷಾ ಗಜಾಶ್ಚ ಮನುಜೈಃ ಸಹ|

09057051c ಮುಮುಚುಸ್ತೇ ಮಹಾನಾದಂ ತವ ಪುತ್ರೇ ನಿಪಾತಿತೇ||

ನಿನ್ನ ಮಗನು ಬೀಳಲು ಅಲ್ಲಿ ಉಳಿದಿದ್ದ ಕುದುರೆಗಳೂ ಆನೆಗಳೂ ಮನುಷ್ಯರೊಂದಿಗೆ ಮಹಾನಾದದಿಂದ ಕೂಗಿಕೊಂಡವು.

09057052a ಭೇರೀಶಂಖಮೃದಂಗಾನಾಮಭವಚ್ಚ ಸ್ವನೋ ಮಹಾನ್|

09057052c ಅಂತರ್ಭೂಮಿಗತಶ್ಚೈವ ತವ ಪುತ್ರೇ ನಿಪಾತಿತೇ||

ನಿನ್ನ ಮಗನು ಬೀಳಲು ಭೇರಿ-ಶಂಖ-ಮೃದಂಗಗಳ ಮತ್ತು ಭೂಮಿಯ ಒಳಗಿನಿಂದಲೂ ಮಹಾಧ್ವನಿಯು ಕೇಳಿಬಂದಿತು.

09057053a ಬಹುಪಾದೈರ್ಬಹುಭುಜೈಃ ಕಬಂಧೈರ್ಘೋರದರ್ಶನೈಃ|

09057053c ನೃತ್ಯದ್ಭಿರ್ಭಯದೈರ್ವ್ಯಾಪ್ತಾ ದಿಶಸ್ತತ್ರಾಭವನ್ನೃಪ||

ನೃಪ! ಬಹುಪಾದದಗಳಿಂದ ಬಹುಭುಜಗಳಿಂದ ಕೂಡಿದ್ದ ಘೋರವಾಗಿ ಕಾಣುತ್ತಿದ್ದ ನರ್ತಿಸುವ ಕಬಂಧಗಳಿಂದ ಎಲ್ಲ ದಿಕ್ಕುಗಳೂ ತುಂಬಿಹೋಗಿದ್ದವು.

09057054a ಧ್ವಜವಂತೋಽಸ್ತ್ರವಂತಶ್ಚ ಶಸ್ತ್ರವಂತಸ್ತಥೈವ ಚ|

09057054c ಪ್ರಾಕಂಪಂತ ತತೋ ರಾಜಂಸ್ತವ ಪುತ್ರೇ ನಿಪಾತಿತೇ||

ರಾಜನ್! ನಿನ್ನ ಮಗನು ಬೀಳಲು ಧ್ವಜವಂತ, ಅಸ್ತ್ರವಂತ, ಶಸ್ತ್ರವಂತ ವೀರರು ನಡುಗಿದರು.

09057055a ಹ್ರದಾಃ ಕೂಪಾಶ್ಚ ರುಧಿರಮುದ್ವೇಮುರ್ನೃಪಸತ್ತಮ|

09057055c ನದ್ಯಶ್ಚ ಸುಮಹಾವೇಗಾಃ ಪ್ರತಿಸ್ರೋತೋವಹಾಭವನ್||

ನೃಪಸತ್ತಮ! ಬಾವಿ ಸರೋವರಗಳು ರಕ್ತವನ್ನೇ ತುಂಬಿಕೊಂಡವು. ನದಿಗಳು ಮಹಾವೇಗದಿಂದ ಹರಿಯತೊಡಗಿ ಪ್ರವಾಹಗಳುಂಟಾದವು.

09057056a ಪುಲ್ಲಿಂಗಾ ಇವ ನಾರ್ಯಸ್ತು ಸ್ತ್ರೀಲಿಂಗಾಃ ಪುರುಷಾಭವನ್|

09057056c ದುರ್ಯೋಧನೇ ತದಾ ರಾಜನ್ಪತಿತೇ ತನಯೇ ತವ||

ರಾಜನ್! ನಿನ್ನ ಮಗ ದುರ್ಯೋಧನನು ಕೆಳಕ್ಕೆ ಬೀಳಲು ಪುರುಷರು ಸ್ತ್ರೀಯರ ಲಕ್ಷಣಗಳನ್ನೂ ಸ್ತ್ರೀಯರು ಪುರುಷ ಲಕ್ಷಣಗಳನ್ನೂ ಪಡೆದುಕೊಂಡರು.

09057057a ದೃಷ್ಟ್ವಾ ತಾನದ್ಭುತೋತ್ಪಾತಾನ್ಪಾಂಚಾಲಾಃ ಪಾಂಡವೈಃ ಸಹ|

09057057c ಆವಿಗ್ನಮನಸಃ ಸರ್ವೇ ಬಭೂವುರ್ಭರತರ್ಷಭ||

ಭರತರ್ಷಭ! ಆ ಅದ್ಭುತ ಉತ್ಪಾತಗಳನ್ನು ನೋಡಿ ಪಾಂಚಾಲ-ಪಾಂಡವರೆಲ್ಲರೂ ಒಟ್ಟಿಗೇ ಅವಿಗ್ನಮನಸ್ಕರಾದರು.

09057058a ಯಯುರ್ದೇವಾ ಯಥಾಕಾಮಂ ಗಂಧರ್ವಾಪ್ಸರಸಸ್ತಥಾ|

09057058c ಕಥಯಂತೋಽದ್ಭುತಂ ಯುದ್ಧಂ ಸುತಯೋಸ್ತವ ಭಾರತ||

ಭಾರತ! ನಿನ್ನ ಮಕ್ಕಳ ಆ ಅದ್ಭುತ ಯುದ್ಧವನ್ನು ಪ್ರಶಂಸಿಸುತ್ತಾ ದೇವತೆಗಳೂ, ಗಂಧರ್ವ-ಅಪ್ಸರೆಯರೂ ತಮಗಿಷ್ಟವಾದಲ್ಲಿಗೆ ತೆರಳಿದರು.

09057059a ತಥೈವ ಸಿದ್ಧಾ ರಾಜೇಂದ್ರ ತಥಾ ವಾತಿಕಚಾರಣಾಃ|

09057059c ನರಸಿಂಹೌ ಪ್ರಶಂಸಂತೌ ವಿಪ್ರಜಗ್ಮುರ್ಯಥಾಗತಂ||

ರಾಜೇಂದ್ರ! ಹಾಗೆಯೇ ಸಿದ್ಧರೂ, ವಾತಿಕ-ಚಾರಣರೂ ಆ ನರಸಿಂಹರಿಬ್ಬರನ್ನು ಪ್ರಶಂಸಿಸುತ್ತಾ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ದುರ್ಯೋಧನವಧೇ ಸಪ್ತಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ದುರ್ಯೋಧನವಧ ಎನ್ನುವ ಐವತ್ತೇಳನೇ ಅಧ್ಯಾಯವು.

Comments are closed.