Shalya Parva: Chapter 55

ಶಲ್ಯಪರ್ವ: ಗದಾಯುದ್ಧ ಪರ್ವ

೫೫

ಗದಾಯುದ್ಧದ ಪ್ರಾರಂಭದಲ್ಲಾದ ಘೋರ ನಿಮಿತ್ತಗಳು (೧-೧೪). ಭೀಮಸೇನನು ಯುಧಿಷ್ಠಿರನಿಗೆ ಹೇಳಿದ ಮಾತು (೧೫-೨೪). ಭೀಮಸೇನ-ದುರ್ಯೋಧನರ ಸಂವಾದ (೨೫-೪೪).  

09055001 ವೈಶಂಪಾಯನ ಉವಾಚ

09055001a ತತೋ ವಾಗ್ಯುದ್ಧಮಭವತ್ತುಮುಲಂ ಜನಮೇಜಯ|

09055001c ಯತ್ರ ದುಃಖಾನ್ವಿತೋ ರಾಜಾ ಧೃತರಾಷ್ಟ್ರೋಽಬ್ರವೀದಿದಂ||

ವೈಶಂಪಾಯನನು ಹೇಳಿದನು: “ಜನಮೇಜಯ! ತುಮುಲ ವಾಗ್ಯುದ್ಧವು ನಡೆಯಿತೆಂದು ದುಃಖಾನ್ವಿತನಾದ ರಾಜಾ ಧೃತರಾಷ್ಟ್ರನು ಹೀಗೆ ಹೇಳಿದನು:

09055002a ಧಿಗಸ್ತು ಖಲು ಮಾನುಷ್ಯಂ ಯಸ್ಯ ನಿಷ್ಠೇಯಮೀದೃಶೀ|

09055002c ಏಕಾದಶಚಮೂಭರ್ತಾ ಯತ್ರ ಪುತ್ರೋ ಮಮಾಭಿಭೂಃ||

09055003a ಆಜ್ಞಾಪ್ಯ ಸರ್ವಾನ್ನೃಪತೀನ್ಭುಕ್ತ್ವಾ ಚೇಮಾಂ ವಸುಂಧರಾಂ|

09055003c ಗದಾಮಾದಾಯ ವೇಗೇನ ಪದಾತಿಃ ಪ್ರಸ್ಥಿತೋ ರಣಂ||

“ಇಂಥಹ ಪರಿಸ್ಥಿತಿಯನ್ನು ಹೊಂದಿರುವ ಮನುಷ್ವತ್ತಕ್ಕೇ ಧಿಕ್ಕಾರ! ನನ್ನ ಪುತ್ರನು ಹನ್ನೊಂದು ಸೇನೆಗಳ ಪಾಲಕನೂ ನಾಯಕನೂ ಆಗಿದ್ದನು. ಸರ್ವ ನೃಪತಿಗಳನ್ನೂ ಆಳಿಕೊಂಡು ಈ ವಸುಂಧರೆಯನ್ನು ಭೋಗಿಸಿದ ಅವನು ಗದೆಯನ್ನೆತ್ತಿಕೊಂಡು ಪದಾತಿಯಾಗಿ ರಣದಲ್ಲಿ ಓಡಾಡುತ್ತಿದ್ದನಲ್ಲಾ!

09055004a ಭೂತ್ವಾ ಹಿ ಜಗತೋ ನಾಥೋ ಹ್ಯನಾಥ ಇವ ಮೇ ಸುತಃ|

09055004c ಗದಾಮುದ್ಯಮ್ಯ ಯೋ ಯಾತಿ ಕಿಮನ್ಯದ್ಭಾಗಧೇಯತಃ||

ಜಗತ್ತಿಗೇ ನಾಥನಾಗಿದ್ದುಕೊಂಡು ಈಗ ಅನಾಥನಂತೆ ಗದೆಯನ್ನೆತ್ತಿಕೊಂಡು ಹೋಗುತ್ತಿದ್ದವನು ನನ್ನ ಮಗ ಎಂದರೆ ಅದಕ್ಕಿಂತಲೂ ದುರ್ಭಾಗ್ಯವು ಏನಿದ್ದೀತು?

09055005a ಅಹೋ ದುಃಖಂ ಮಹತ್ಪ್ರಾಪ್ತಂ ಪುತ್ರೇಣ ಮಮ ಸಂಜಯ|

09055005c ಏವಮುಕ್ತ್ವಾ ಸ ದುಃಖಾರ್ತೋ ವಿರರಾಮ ಜನಾಧಿಪಃ||

ಅಯ್ಯೋ ಸಂಜಯ! ನನ್ನ ಮಗನು ಮಹಾ ದುಃಖವನ್ನೇ ಅನುಭವಿಸಿದನು!” ಹೀಗೆ ಹೇಳಿ ದುಃಖಾರ್ತ ಜನಾಧಿಪನು ಸುಮ್ಮನಾದನು.

09055006 ಸಂಜಯ ಉವಾಚ

09055006a ಸ ಮೇಘನಿನದೋ ಹರ್ಷಾದ್ವಿನದನ್ನಿವ ಗೋವೃಷಃ|

09055006c ಆಜುಹಾವ ತತಃ ಪಾರ್ಥಂ ಯುದ್ಧಾಯ ಯುಧಿ ವೀರ್ಯವಾನ್||

09055007a ಭೀಮಮಾಹ್ವಯಮಾನೇ ತು ಕುರುರಾಜೇ ಮಹಾತ್ಮನಿ|

09055007c ಪ್ರಾದುರಾಸನ್ಸುಘೋರಾಣಿ ರೂಪಾಣಿ ವಿವಿಧಾನ್ನ್ಯುತ||

ಸಂಜಯನು ಹೇಳಿದನು: “ಹರ್ಷದಿಂದ ಮೇಘದಂತೆ ಗರ್ಜಿಸುತ್ತಾ ಮತ್ತು ಹೋರಿಯಂತೆ ಗುರುಟು ಹಾಕುತ್ತಾ ರಣದಲ್ಲಿ ಯುದ್ಧಕ್ಕೆ ಮಹಾತ್ಮ ಕುರುರಾಜನು ಭೀಮನನ್ನು ಯುದ್ಧಕ್ಕೆ ಕರೆಯುತ್ತಿರಲು ಅಲ್ಲಿ ಘೋರರೂಪದ ವಿವಿಧ ನಿಮಿತ್ತಗಳು ಕಾಣಿಸಿಕೊಂಡವು.

09055008a ವವುರ್ವಾತಾಃ ಸನಿರ್ಘಾತಾಃ ಪಾಂಸುವರ್ಷಂ ಪಪಾತ ಚ|

09055008c ಬಭೂವುಶ್ಚ ದಿಶಃ ಸರ್ವಾಸ್ತಿಮಿರೇಣ ಸಮಾವೃತಾಃ||

ಸುನಿರ್ಘಾತ[1]ಗಳೊಂದಿಗೆ ಚಂಡಮಾರುತಗಳು ಬೀಸಿದವು. ಧೂಳಿನ ಮಳೆಯೇ ಸುರಿಯಿತು. ದಿಕ್ಕುಗಳೆಲ್ಲವನ್ನೂ ಕತ್ತಲೆಯು ಕವಿಯಿತು.

09055009a ಮಹಾಸ್ವನಾಃ ಸನಿರ್ಘಾತಾಸ್ತುಮುಲಾ ರೋಮಹರ್ಷಣಾಃ|

09055009c ಪೇತುಸ್ತಥೋಲ್ಕಾಃ ಶತಶಃ ಸ್ಫೋಟಯಂತ್ಯೋ ನಭಸ್ತಲಂ||

ನಭಸ್ಥಲವನ್ನು ಸೀಳುವಂತೆ ನೂರಾರು ರೋಮಹರ್ಷಣ ಉಲ್ಕೆಗಳು ಮಹಾಧ್ವನಿಯೊಂದಿಗೆ ನಿರ್ಘಾತಗಳೊಂದಿಗೆ ಬಿದ್ದವು.

09055010a ರಾಹುಶ್ಚಾಗ್ರಸದಾದಿತ್ಯಮಪರ್ವಣಿ ವಿಶಾಂ ಪತೇ|

09055010c ಚಕಂಪೇ ಚ ಮಹಾಕಂಪಂ ಪೃಥಿವೀ ಸವನದ್ರುಮಾ||

ವಿಶಾಂಪತೇ! ಪರ್ವತಿಥಿಯಲ್ಲದಿದ್ದರೂ ರಾಹುವು ಸೂರ್ಯನನ್ನು ನುಂಗಿದನು. ವನ-ವೃಕ್ಷಗಳೊಡನೆ ಭೂಮಿಯು ಮಹಾಕಂಪನದೊಂದಿಗೆ ನಡುಗಿತು.

09055011a ರೂಕ್ಷಾಶ್ಚ ವಾತಾಃ ಪ್ರವವುರ್ನೀಚೈಃ ಶರ್ಕರವರ್ಷಿಣಃ|

09055011c ಗಿರೀಣಾಂ ಶಿಖರಾಣ್ಯೇವ ನ್ಯಪತಂತ ಮಹೀತಲೇ||

ಕಲ್ಲುಗಳನ್ನು ಸುರಿಸುವ ಬಿರುಸಾದ ಸುಂಟರಗಾಳಿಗಳು ಕೆಳಗೆ ಬೀಸತೊಡಗಿದವು. ಪರ್ವತಗಳ ಶಿಖರಗಳೇ ಕಳಚಿ ಭೂಮಿಯ ಮೇಲೆ ಬಿದ್ದವು.

09055012a ಮೃಗಾ ಬಹುವಿಧಾಕಾರಾಃ ಸಂಪತಂತಿ ದಿಶೋ ದಶ|

09055012c ದೀಪ್ತಾಃ ಶಿವಾಶ್ಚಾಪ್ಯನದನ್ಘೋರರೂಪಾಃ ಸುದಾರುಣಾಃ||

ಬಹುವಿಧ ಆಕಾರಗಳ ಮೃಗಗಳು ಹತ್ತು ದಿಕ್ಕುಗಳಲ್ಲಿಯೂ ಓಡ ತೊಡಗಿದವು. ಘೋರರೂಪೀ ಗುಳ್ಳೇನರಿಗಳು ಪ್ರದೀಪ್ತ ಮುಖಗಳಿಂದ ಸುದಾರುಣವಾಗಿ ಕೂಗತೊಡಗಿದವು.

09055013a ನಿರ್ಘಾತಾಶ್ಚ ಮಹಾಘೋರಾ ಬಭೂವೂ ರೋಮಹರ್ಷಣಾಃ|

09055013c ದೀಪ್ತಾಯಾಂ ದಿಶಿ ರಾಜೇಂದ್ರ ಮೃಗಾಶ್ಚಾಶುಭವಾದಿನಃ||

ಮಹಾಘೋರ ರೋಮಾಂಚಕಾರೀ ನಿರ್ಘಾತಗಳುಂಟಾದವು. ರಾಜೇಂದ್ರ! ಉರಿಯುತ್ತಿದ್ದ ಆಗ್ನೇಯ ದಿಕ್ಕಿನಲ್ಲಿ ಮೃಗಗಳು ಅಶುಭವಾಗಿ ಕೂಗತೊಡಗಿದವು.

09055014a ಉದಪಾನಗತಾಶ್ಚಾಪೋ ವ್ಯವರ್ಧಂತ ಸಮಂತತಃ|

09055014c ಅಶರೀರಾ ಮಹಾನಾದಾಃ ಶ್ರೂಯಂತೇ ಸ್ಮ ತದಾ ನೃಪ||

ನೃಪ! ಎಲ್ಲ ಬಾವಿಗಳಲ್ಲಿದ್ದ ನೀರು ಉಕ್ಕಿಬಂದಿತು. ಆಗ ನಮಗೆ ಅಶರೀರ ಮಹಾನಾದಗಳು ಕೇಳಿಬಂದವು.

09055015a ಏವಮಾದೀನಿ ದೃಷ್ಟ್ವಾಥ ನಿಮಿತ್ತಾನಿ ವೃಕೋದರಃ|

09055015c ಉವಾಚ ಭ್ರಾತರಂ ಜ್ಯೇಷ್ಠಂ ಧರ್ಮರಾಜಂ ಯುಧಿಷ್ಠಿರಂ||

ಇವೇ ಮೊದಲಾದ ನಿಮಿತ್ತಗಳು ಕಾಣಿಸಿಕೊಳ್ಳಲು ವೃಕೋದರನು ಜ್ಯೇಷ್ಠ ಭ್ರಾತಾ ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:

09055016a ನೈಷ ಶಕ್ತೋ ರಣೇ ಜೇತುಂ ಮಂದಾತ್ಮಾ ಮಾಂ ಸುಯೋಧನಃ|

09055016c ಅದ್ಯ ಕ್ರೋಧಂ ವಿಮೋಕ್ಷ್ಯಾಮಿ ನಿಗೂಢಂ ಹೃದಯೇ ಚಿರಂ||

09055016e ಸುಯೋಧನೇ ಕೌರವೇಂದ್ರೇ ಖಾಂಡವೇ ಪಾವಕೋ ಯಥಾ||

“ಈ ಮಂದಾತ್ಮ ಸುಯೋಧನನು ರಣದಲ್ಲಿ ನನ್ನನ್ನು ಗೆಲ್ಲಲು ಶಕ್ತನಿಲ್ಲ. ಖಾಂಡವದ ಮೇಲೆ ಅಗ್ನಿಯು ಹೇಗಿ ಸುರಿಯಲ್ಪಟ್ಟಿತೋ ಹಾಗೆ ಇಂದು ನಾನು ಹೃದಯದಲ್ಲಿ ಬಹುಕಾಲ ನಿಗೂಢವಾಗಿದ್ದ ಕ್ರೋಧವನ್ನು ಕೌರವೇಂದ್ರ ಸುಯೋಧನನ ಮೇಲೆ ಸುರಿಯುತ್ತೇನೆ.

09055017a ಶಲ್ಯಮದ್ಯೋದ್ಧರಿಷ್ಯಾಮಿ ತವ ಪಾಂಡವ ಹೃಚ್ಚಯಂ|

09055017c ನಿಹತ್ಯ ಗದಯಾ ಪಾಪಮಿಮಂ ಕುರುಕುಲಾಧಮಂ||

ಪಾಂಡವ! ಈ ಪಾಪಿ ಕುರುಕುಲಾಧಮನನ್ನು ಗದೆಯಿಂದ ಸಂಹರಿಸಿ ನಿನ್ನ ಹೃದಯದಲ್ಲಿ ಹುದುಗಿರುವ ಮುಳ್ಳನ್ನು ಇಂದು ಕಿತ್ತುಹಾಕುತ್ತೇನೆ.

09055018a ಅದ್ಯ ಕೀರ್ತಿಮಯೀಂ ಮಾಲಾಂ ಪ್ರತಿಮೋಕ್ಷ್ಯಾಮ್ಯಹಂ ತ್ವಯಿ|

09055018c ಹತ್ವೇಮಂ ಪಾಪಕರ್ಮಾಣಂ ಗದಯಾ ರಣಮೂರ್ಧನಿ||

ರಣರಂಗದಲ್ಲಿ ಈ ಪಾಪಕರ್ಮಿಯನ್ನು ಕೊಂದು ನಾನು ಇಂದು ನಿನಗೆ ಕೀರ್ತಿಮಯೀ ಮಾಲೆಯನ್ನು ಹಾಕುತ್ತೇನೆ.

09055019a ಅದ್ಯಾಸ್ಯ ಶತಧಾ ದೇಹಂ ಭಿನದ್ಮಿ ಗದಯಾನಯಾ|

09055019c ನಾಯಂ ಪ್ರವೇಷ್ಟಾ ನಗರಂ ಪುನರ್ವಾರಣಸಾಹ್ವಯಂ||

ಇಂದು ಗದೆಯಿಂದ ಇವನ ದೇಹವನ್ನು ನೂರಾರು ಚೂರುಗಳನ್ನಾಗಿ ಒಡೆಯದೇ ನಾನು ಪುನಃ ವಾರಣಸಾಹ್ವಯ ನಗರವನ್ನು ಪ್ರವೇಶಿಸುವುದಿಲ್ಲ.

09055020a ಸರ್ಪೋತ್ಸರ್ಗಸ್ಯ ಶಯನೇ ವಿಷದಾನಸ್ಯ ಭೋಜನೇ|

09055020c ಪ್ರಮಾಣಕೋಟ್ಯಾಂ ಪಾತಸ್ಯ ದಾಹಸ್ಯ ಜತುವೇಶ್ಮನಿ||

09055021a ಸಭಾಯಾಮವಹಾಸಸ್ಯ ಸರ್ವಸ್ವಹರಣಸ್ಯ ಚ|

09055021c ವರ್ಷಮಜ್ಞಾತವಾಸಸ್ಯ ವನವಾಸಸ್ಯ ಚಾನಘ||

09055022a ಅದ್ಯಾಂತಮೇಷಾಂ ದುಃಖಾನಾಂ ಗಂತಾ ಭರತಸತ್ತಮ|

09055022c ಏಕಾಹ್ನಾ ವಿನಿಹತ್ಯೇಮಂ ಭವಿಷ್ಯಾಮ್ಯಾತ್ಮನೋಽನೃಣಃ||

ಅನಘ! ಭರತಸತ್ತಮ! ಮಲಗಿರುವಾಗ ಸರ್ಪಗಳನ್ನು ಬಿಟ್ಟು ಕಚ್ಚಿಸಿದುದು, ಭೋಜನದಲ್ಲಿ ವಿಷವನ್ನಿತ್ತಿದುದು, ಪ್ರಮಾಣಕೋಟಿಯಲ್ಲಿ ಮುಳುಗಿಸಿದುದು, ಜತುಗೃಹದಲ್ಲಿ ಸುಟ್ಟಿದುದು, ಸಭೆಯಲ್ಲಿ ಅಪಮಾನಸಿದುದು, ಸರ್ವವನ್ನೂ ಅಪಹರಿಸಿದುದು, ಒಂದು ವರ್ಷದ ಅಜ್ಞಾತವಾಸ ಮತ್ತು ವನವಾಸಗಳ ಈ ಇಲ್ಲ ದುಃಖಗಳ ಕೊನೆಗಾಣಿಸುತ್ತೇನೆ. ಈ ಒಂದು ಹಗಲಿನಲ್ಲಿಯೇ ನಾನಿವನನ್ನು ಸಂಹರಿಸಿ ನನ್ನ ಋಣದಿಂದ ಮುಕ್ತನಾಗುತ್ತೇನೆ.

09055023a ಅದ್ಯಾಯುರ್ಧಾರ್ತರಾಷ್ಟ್ರಸ್ಯ ದುರ್ಮತೇರಕೃತಾತ್ಮನಃ|

09055023c ಸಮಾಪ್ತಂ ಭರತಶ್ರೇಷ್ಠ ಮಾತಾಪಿತ್ರೋಶ್ಚ ದರ್ಶನಂ||

ಭರತಶ್ರೇಷ್ಠ! ಇಂದು ಈ ದುರ್ಮತಿ, ಜಿತೇಂದ್ರಿಯನಲ್ಲದ ಧಾರ್ತರಾಷ್ಟ್ರನ ಆಯುಷ್ಯ ಮತ್ತು ಮಾತಪಿತೃಗಳ ದರ್ಶನವು ಸಮಾಪ್ತವಾಗುವುದು.

09055024a ಅದ್ಯಾಯಂ ಕುರುರಾಜಸ್ಯ ಶಂತನೋಃ ಕುಲಪಾಂಸನಃ|

09055024c ಪ್ರಾಣಾನ್ ಶ್ರಿಯಂ ಚ ರಾಜ್ಯಂ ಚ ತ್ಯಕ್ತ್ವಾ ಶೇಷ್ಯತಿ ಭೂತಲೇ||

ಇಂದು ಶಂತನುವಿನ ಕುಲಕ್ಕೆ ಕಳಂಕಪ್ರಾಯನಾದ ಈ ಕುರುರಾಜನು ಪ್ರಾಣಗಳನ್ನೂ, ಸಂಪತ್ತನ್ನೂ, ರಾಜ್ಯವನ್ನೂ ತೊರೆದು ನೆಲದ ಮೇಲೆ ಮಲಗುತ್ತಾನೆ.

09055025a ರಾಜಾ ಚ ಧೃತರಾಷ್ಟ್ರೋಽದ್ಯ ಶ್ರುತ್ವಾ ಪುತ್ರಂ ಮಯಾ ಹತಂ|

09055025c ಸ್ಮರಿಷ್ಯತ್ಯಶುಭಂ ಕರ್ಮ ಯತ್ತಚ್ಚಕುನಿಬುದ್ಧಿಜಂ||

ನನ್ನಿಂದ ತನ್ನ ಮಗನು ಹತನಾದನೆಂದು ಕೇಳಿ ಇಂದು ರಾಜಾ ಧೃತರಾಷ್ಟ್ರನೂ ಕೂಡ ಶಕುನಿಯ ಬುದ್ಧಿಯಿಂದ ಹುಟ್ಟಿದ್ದ ಅಶುಭಕರ್ಮಗಳನ್ನು ಸ್ಮರಿಸಿಕೊಳ್ಳುತ್ತಾನೆ!”

09055026a ಇತ್ಯುಕ್ತ್ವಾ ರಾಜಶಾರ್ದೂಲ ಗದಾಮಾದಾಯ ವೀರ್ಯವಾನ್|

09055026c ಅವಾತಿಷ್ಠತ ಯುದ್ಧಾಯ ಶಕ್ರೋ ವೃತ್ರಮಿವಾಹ್ವಯನ್||

ರಾಜಶಾರ್ದೂಲ! ಹೀಗೆ ಹೇಳಿ ಆ ವೀರ್ಯವಾನನು ಗದೆಯನ್ನು ಎತ್ತಿ ಶಕ್ರನು ವೃತ್ರನನ್ನು ಆಹ್ವಾನಿಸಿದಂತೆ ಯುದ್ಧಕ್ಕೆ ನಿಂತನು.

09055027a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ|

09055027c ಭೀಮಸೇನಃ ಪುನಃ ಕ್ರುದ್ಧೋ ದುರ್ಯೋಧನಮುವಾಚ ಹ||

ಶಿಖರವನ್ನು ಹೊತ್ತಿದ್ದ ಕೈಲಾಸದಂತೆ ನಿಂತಿದ್ದ ದುರ್ಯೋಧನನನ್ನು ನೋಡಿ ಭೀಮಸೇನನು ಪುನಃ ಕ್ರುದ್ಧನಾಗಿ ಅವನಿಗೆ ಹೀಗೆ ಹೇಳಿದನು:

09055028a ರಾಜ್ಞಶ್ಚ ಧೃತರಾಷ್ಟ್ರಸ್ಯ ತಥಾ ತ್ವಮಪಿ ಚಾತ್ಮನಃ|

09055028c ಸ್ಮರ ತದ್ದುಷ್ಕೃತಂ ಕರ್ಮ ಯದ್ವೃತ್ತಂ ವಾರಣಾವತೇ||

“ವಾರಣಾವತದಲ್ಲಿ ರಾಜ ಧೃತರಾಷ್ಟ್ರ ಮತ್ತು ನೀನು ನಮ್ಮ ಮೇಲೆಸಗಿದ ದುಷ್ಕೃತಗಳನ್ನು ಸ್ಮರಿಸಿಕೋ!

09055029a ದ್ರೌಪದೀ ಚ ಪರಿಕ್ಲಿಷ್ಟಾ ಸಭಾಯಾಂ ಯದ್ರಜಸ್ವಲಾ|

09055029c ದ್ಯೂತೇ ಚ ವಂಚಿತೋ ರಾಜಾ ಯತ್ತ್ವಯಾ ಸೌಬಲೇನ ಚ||

09055030a ವನೇ ದುಃಖಂ ಚ ಯತ್ಪ್ರಾಪ್ತಮಸ್ಮಾಭಿಸ್ತ್ವತ್ಕೃತಂ ಮಹತ್|

09055030c ವಿರಾಟನಗರೇ ಚೈವ ಯೋನ್ಯಂತರಗತೈರಿವ||

09055030e ತತ್ಸರ್ವಂ ಯಾತಯಾಮ್ಯದ್ಯ ದಿಷ್ಟ್ಯಾ ದೃಷ್ಟೋಽಸಿ ದುರ್ಮತೇ||

ರಜಸ್ವಲೆಯಾಗಿದ್ದಾಗ ಸಭೆಯಲ್ಲಿ ದ್ರೌಪದಿಯು ಕಷ್ಟಗಳನ್ನನುಭವಿಸಿದಳು. ಸೌಬಲನ ಮೂಲಕ ನೀನು ದ್ಯೂತದಲ್ಲಿ ರಾಜಾ ಯುಧಿಷ್ಠಿರನನ್ನು ವಂಚಿಸಿದೆ. ನಿನ್ನಿಂದಾಗಿ ನಾವು ವನದಲ್ಲಿ ಮಹಾ ದುಃಖಗಳನ್ನನುಭವಿಸಿದೆವು. ವಿರಾಟನಗರದಲ್ಲಿ ನಾವು ಭೂಗತರಾದವರಂತೆ ವಾಸಿಸಿದೆವು. ದುರ್ಮತೇ! ಅದೃಷ್ಟವಶಾತ್ ಈ ಎಲ್ಲ ಯಾತನೆಗಳಿಂದ ನಾನು ನಿನ್ನನ್ನು ಸರಿಯಾಗಿ ನೋಡುತ್ತಿದ್ದೇನೆ.

09055031a ತ್ವತ್ಕೃತೇಽಸೌ ಹತಃ ಶೇತೇ ಶರತಲ್ಪೇ ಪ್ರತಾಪವಾನ್|

09055031c ಗಾಂಗೇಯೋ ರಥಿನಾಂ ಶ್ರೇಷ್ಠೋ ನಿಹತೋ ಯಾಜ್ಞಸೇನಿನಾ||

ನೀನು ಮಾಡಿದ ಕರ್ಮಗಳಿಂದಾಗಿ ಪ್ರತಾಪವಾನ್ ರಥಿಗಳಲ್ಲಿ ಶ್ರೇಷ್ಠ ಗಾಂಗೇಯನು ಯಾಜ್ಞಸೇನಿಯಿಂದ ಹತನಾಗಿ ಶರತಲ್ಪದಲ್ಲಿ ಮಲಗಿದ್ದಾನೆ.

09055032a ಹತೋ ದ್ರೋಣಶ್ಚ ಕರ್ಣಶ್ಚ ತಥಾ ಶಲ್ಯಃ ಪ್ರತಾಪವಾನ್|

09055032c ವೈರಾಗ್ನೇರಾದಿಕರ್ತಾ ಚ ಶಕುನಿಃ ಸೌಬಲೋ ಹತಃ||

ದ್ರೋಣ, ಹಾಗೆಯೇ ಕರ್ಣ ಮತ್ತು ಪ್ರತಾಪವಾನ್ ಶಲ್ಯರು ಹತರಾದರು. ಈ ವೈರಾಗ್ನಿಗೆ ಮೂಲಕಾರಣನಾದ ಸೌಬಲ ಶಕುನಿಯೂ ಹತನಾದನು.

09055033a ಪ್ರಾತಿಕಾಮೀ ತಥಾ ಪಾಪೋ ದ್ರೌಪದ್ಯಾಃ ಕ್ಲೇಶಕೃದ್ಧತಃ|

09055033c ಭ್ರಾತರಸ್ತೇ ಹತಾಃ ಸರ್ವೇ ಶೂರಾ ವಿಕ್ರಾಂತಯೋಧಿನಃ||

ದ್ರೌಪದಿಗೆ ಕ್ಲೇಶವನ್ನುಂಟುಮಾಡಿದ್ದ ಪಾಪಿ ಪ್ರಾತಿಕಾಮಿಯೂ, ವಿಕ್ರಾಂತ ಯೋಧರಾದ ನಿನ್ನ ಸಹೋದರ ಶೂರರೆಲ್ಲರೂ ಹತರಾದರು.

09055034a ಏತೇ ಚಾನ್ಯೇ ಚ ಬಹವೋ ನಿಹತಾಸ್ತ್ವತ್ಕೃತೇ ನೃಪಾಃ|

09055034c ತ್ವಾಮದ್ಯ ನಿಹನಿಷ್ಯಾಮಿ ಗದಯಾ ನಾತ್ರ ಸಂಶಯಃ||

ನಿನ್ನ ಕಾರಣದಿಂದಾಗಿ ಇವರು ಮತ್ತು ಇನ್ನೂ ಅನೇಕ ನೃಪರು ಹತರಾದರು. ಇಂದು ನಾನು ನಿನ್ನನ್ನು ಗದೆಯಿಂದ ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ!”

09055035a ಇತ್ಯೇವಮುಚ್ಚೈ ರಾಜೇಂದ್ರ ಭಾಷಮಾಣಂ ವೃಕೋದರಂ|

09055035c ಉವಾಚ ವೀತಭೀ ರಾಜನ್ಪುತ್ರಸ್ತೇ ಸತ್ಯವಿಕ್ರಮಃ||

ರಾಜನ್! ರಾಜೇಂದ್ರ! ಹೀಗೆ ಮಾತನಾಡುತ್ತಿದ್ದ ವೃಕೋದರನಿಗೆ ನಿನ್ನ ಮಗ ಸತ್ಯವಿಕ್ರಮನು ಸ್ವಲ್ಪವೂ ಭಯವಿಲ್ಲದೆ ಹೇಳಿದನು:

09055036a ಕಿಂ ಕತ್ಥಿತೇನ ಬಹುಧಾ ಯುಧ್ಯಸ್ವ ತ್ವಂ ವೃಕೋದರ|

09055036c ಅದ್ಯ ತೇಽಹಂ ವಿನೇಷ್ಯಾಮಿ ಯುದ್ಧಶ್ರದ್ಧಾಂ ಕುಲಾಧಮ||

“ಕುಲಾಧಮ ವೃಕೋದರ! ಹೀಗೇಕೆ ಬಹಳವಾಗಿ ಕೊಚ್ಚಿಕೊಳ್ಳುತ್ತಿರುವೆ? ಯುದ್ಧಮಾಡು! ಇಂದು ನಿನ್ನಲ್ಲಿರುವ ಯುದ್ಧಶ್ರದ್ಧೆಯನ್ನು ಇಲ್ಲವಾಗಿಸುತ್ತೇನೆ!

09055037a ನೈವ ದುರ್ಯೋಧನಃ ಕ್ಷುದ್ರ ಕೇನ ಚಿತ್ತ್ವದ್ವಿಧೇನ ವೈ|

09055037c ಶಕ್ಯಸ್ತ್ರಾಸಯಿತುಂ ವಾಚಾ ಯಥಾನ್ಯಃ ಪ್ರಾಕೃತೋ ನರಃ||

ಕ್ಷುದ್ರ! ಸಾಮಾನ್ಯ ಮನುಷ್ಯರನ್ನು ಮಾತಿನಿಂದ ಹೆದರಿಸುವಂತೆ ದುರ್ಯೋಧನನನ್ನು ನೀನು ಹೆದರಿಸಲಾರೆಯೆನ್ನುವುದನ್ನು ತಿಳಿದುಕೋ!

09055038a ಚಿರಕಾಲೇಪ್ಸಿತಂ ದಿಷ್ಟ್ಯಾ ಹೃದಯಸ್ಥಮಿದಂ ಮಮ|

09055038c ತ್ವಯಾ ಸಹ ಗದಾಯುದ್ಧಂ ತ್ರಿದಶೈರುಪಪಾದಿತಂ||

ನಿನ್ನೊಡನೆ ಗದಾಯುದ್ಧಮಾಡಬೇಕೆಂಬ ಆಸೆಯು ಬಹುಕಾಲದಿಂದ ನನ್ನ ಹೃದಯದಲ್ಲಿತ್ತು. ಅದೃಷ್ಟವಿಶೇಷದಿಂದ ಇಂದು ನನಗೆ ಆ ಅವಕಾಶವನ್ನು ದೇವತೆಗಳೇ ಒದಗಿಸಿಕೊಟ್ಟಿದ್ದಾರೆ.

09055039a ಕಿಂ ವಾಚಾ ಬಹುನೋಕ್ತೇನ ಕತ್ಥಿತೇನ ಚ ದುರ್ಮತೇ|

09055039c ವಾಣೀ ಸಂಪದ್ಯತಾಮೇಷಾ ಕರ್ಮಣಾ ಮಾ ಚಿರಂ ಕೃಥಾಃ||

ದುರ್ಮತೇ! ಅಧಿಕ ಮಾತುಗಳಿಂದ ಕೊಚ್ಚಿಕೊಳ್ಳುವುದರಿಂದ ಏನಾಗುತ್ತದೆ? ನಿನ್ನ ಮಾತನ್ನು ಕೃತಿಯಲ್ಲಿ ತೋರಿಸು! ತಡಮಾಡಬೇಡ!”

09055040a ತಸ್ಯ ತದ್ವಚನಂ ಶ್ರುತ್ವಾ ಸರ್ವ ಏವಾಭ್ಯಪೂಜಯನ್|

09055040c ರಾಜಾನಃ ಸೋಮಕಾಶ್ಚೈವ ಯೇ ತತ್ರಾಸನ್ಸಮಾಗತಾಃ||

ಅವನ ಆ ಮಾತನ್ನು ಕೇಳಿ ಅಲ್ಲಿ ಸೇರಿ ಕುಳಿತಿದ್ದ ಸೋಮಕರೂ ಇತರ ರಾಜರೂ ಅವನನ್ನು ಪ್ರಶಂಸಿಸಿದರು.

09055041a ತತಃ ಸಂಪೂಜಿತಃ ಸರ್ವೈಃ ಸಂಪ್ರಹೃಷ್ಟತನೂರುಹಃ|

09055041c ಭೂಯೋ ಧೀರಂ ಮನಶ್ಚಕ್ರೇ ಯುದ್ಧಾಯ ಕುರುನಂದನಃ||

ಸರ್ವರ ಪ್ರಶಂಸೆಗೊಳಗಾದ ದುರ್ಯೋಧನನ ರೋಮಗಳು ನಿಮಿರಿನಿಂತವು. ಕುರುನಂದನನು ಪುನಃ ಯುದ್ಧಕ್ಕೆ ತನ್ನ ಧೀರಮನಸ್ಸನ್ನು ತೊಡಗಿಸಿದನು.

09055042a ತಂ ಮತ್ತಮಿವ ಮಾತಂಗಂ ತಲತಾಲೈರ್ನರಾಧಿಪಾಃ|

09055042c ಭೂಯಃ ಸಂಹರ್ಷಯಾಂ ಚಕ್ರುರ್ದುರ್ಯೋಧನಮಮರ್ಷಣಂ||

ಆನೆಯನ್ನು ಉನ್ಮತ್ತವಾಗಿಸುವಂತೆ ನರಾಧಿಪರು ಚಪ್ಪಾಳೆಗಳನ್ನು ಹೊಡೆದು ಅಮರ್ಷಣ ದುರ್ಯೋಧನನ್ನು ಇನ್ನೂ ಹರ್ಷಗೊಳಿಸಿದರು.

09055043a ತಂ ಮಹಾತ್ಮಾ ಮಹಾತ್ಮಾನಂ ಗದಾಮುದ್ಯಮ್ಯ ಪಾಂಡವಃ|

09055043c ಅಭಿದುದ್ರಾವ ವೇಗೇನ ಧಾರ್ತರಾಷ್ಟ್ರಂ ವೃಕೋದರಃ||

ಆಗ ಮಹಾತ್ಮ ಪಾಂಡವ ವೃಕೋದರನು ಗದೆಯನ್ನು ಮೇಲೆತ್ತಿ ವೇಗದಿಂದ ಮಹಾತ್ಮ ಧಾರ್ತರಾಷ್ಟ್ರನನ್ನು ಆಕ್ರಮಣಿಸಿದನು.

09055044a ಬೃಂಹಂತಿ ಕುಂಜರಾಸ್ತತ್ರ ಹಯಾ ಹೇಷಂತಿ ಚಾಸಕೃತ್|

09055044c ಶಸ್ತ್ರಾಣಿ ಚಾಪ್ಯದೀಪ್ಯಂತ ಪಾಂಡವಾನಾಂ ಜಯೈಷಿಣಾಂ||

ಆಗ ಆನೆಗಳು ಘೀಳಿಟ್ಟವು. ಕುದುರೆಗಳೂ ಕೆನೆದವು. ಜಯೈಷಿಗಳಾದ ಪಾಂಡವರ ಶಸ್ತ್ರಗಳು ದೇದೀಪ್ಯಮಾನವಾಗಿ ಬೆಳಗುತ್ತಿದ್ದವು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಗದಾಯುದ್ಧಪರ್ವಣಿ ಗದಾಯುದ್ಧಾರಂಭೇ ಪಂಚಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಗದಾಯುದ್ಧಪರ್ವದಲ್ಲಿ ಗದಾಯುದ್ಧಾರಂಭ ಎನ್ನುವ ಐವತ್ತೈದನೇ ಅಧ್ಯಾಯವು.

[1] ವಾಯುನಾಭಿಹತೇ ವಾಯೌ ಗಗನಾಚ್ಚ ಪ್ರತದ್ಯದಃ| ಪ್ರಚಂಡಘೋರನಿರ್ಘೋಷೋ ನಿರ್ಘಾತ ಇತಿ ಉಚ್ಯತೇ|| ಪವನಃ ಪವನಾಭಿಹತೋ ಗಗನಾದವನೌ ಯದಾ ಸಮಾಪತತಿ| ಭವತಿ ತದಾ ನಿರ್ಘಾತಃ ಸ ಚ ಪಾಪೋ ದೀರ್ಘವಿಹರರುತಃ|| ಅರ್ಥಾತ್ ವಾಯುವಿನಿಂದ ವಾಯುವು ಹೊಡೆಯಲ್ಪಟ್ಟು ಅದು ಭೂಮಿಯ ಮೇಲೆ ಬೀಳುವಾಗ ಉಂಟಾಗುವ ಶಬ್ಧಕ್ಕೆ ನಿರ್ಘಾತ ಎನ್ನುತ್ತಾರೆ. ಹೀಗೆ ವಾಯುವು ಭೂಮಿಯ ಮೇಳೆ ಬೀಳುವುದು ಬಹಳ ಅನಿಷ್ಟಸೂಚಕವಾದುದು. ವಾಯುವು ಭೂಮಿಯ ಮೇಲೆ ಬೀಳುವ ಸಮಯದಲ್ಲಿ ಪಕ್ಷಿಗಳೆಲ್ಲವೂ ಸೂರ್ಯನಿಗೆ ಅಭಿಮುಖವಾಗಿ ತಿರುಗಿಕೊಂಡು ಕೂಗಿಕೊಳ್ಳುವವು. ಈ ನಿರ್ಘಾತದ ಶಬ್ಧವು ಸಿಡಿಲಿನ ಶಬ್ಧದಂತಿರುತ್ತದೆಯೆಂದು ಹೇಳುತ್ತಾರೆ (ಬೃಹತ್ಸಂಹಿತಾ, ೩೯, ೧).

Comments are closed.