Shalya Parva: Chapter 5

ಶಲ್ಯಪರ್ವ: ಶಲ್ಯವಧ ಪರ್ವ

09005001 ಸಂಜಯ ಉವಾಚ

09005001a ಅಥ ಹೈಮವತೇ ಪ್ರಸ್ಥೇ ಸ್ಥಿತ್ವಾ ಯುದ್ಧಾಭಿನಂದಿನಃ|

09005001c ಸರ್ವ ಏವ ಮಹಾರಾಜ ಯೋಧಾಸ್ತತ್ರ ಸಮಾಗತಾಃ||

ಸಂಜಯನು ಹೇಳಿದನು: “ಮಹಾರಾಜ! ಹಿಮಾಲಯದ ತಪ್ಪಲಿನಲ್ಲಿ ಯುದ್ಧಾಭಿನಂದಿ ಯೋಧರೆಲ್ಲರೂ ಸೇರಿ ತಂಗಿದರು.

09005002a ಶಲ್ಯಶ್ಚ ಚಿತ್ರಸೇನಶ್ಚ ಶಕುನಿಶ್ಚ ಮಹಾರಥಃ|

09005002c ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ||

09005003a ಸುಷೇಣೋಽರಿಷ್ಟಸೇನಶ್ಚ ಧೃತಸೇನಶ್ಚ ವೀರ್ಯವಾನ್|

09005003c ಜಯತ್ಸೇನಶ್ಚ ರಾಜಾನಸ್ತೇ ರಾತ್ರಿಮುಷಿತಾಸ್ತತಃ||

ಶಲ್ಯ, ಚಿತ್ರಸೇನ, ಮಹಾರಥ ಶಕುನಿ, ಅಶ್ವತ್ಥಾಮ, ಕೃಪ, ಸಾತ್ವತ ಕೃತವರ್ಮ, ಸುಷೇಣ, ಅರಿಷ್ಟಸೇನ, ವೀರ್ಯವಾನ್ ಧೃತಸೇನ, ರಾಜಾ ಜಯತ್ಸೇನ – ಇವರು ರಾತ್ರಿಯನ್ನು ಅಲ್ಲಿ ಕಳೆದರು.

09005004a ರಣೇ ಕರ್ಣೇ ಹತೇ ವೀರೇ ತ್ರಾಸಿತಾ ಜಿತಕಾಶಿಭಿಃ|

09005004c ನಾಲಭನ್ ಶರ್ಮ ತೇ ಪುತ್ರಾ ಹಿಮವಂತಂ ಋತೇ ಗಿರಿಂ||

ರಣದಲ್ಲಿ ವೀರ ಕರ್ಣನು ಹತನಾಗಲು ಜಯದಿಂದ ಉಬ್ಬಿದ್ದ ಪಾಂಡವರ ಭಯದಿಂದ ತತ್ತರಿಸಿದ್ದ ನಿನ್ನ ಮಕ್ಕಳಿಗೆ ಆ ಹಿಮಾಲಯದ ತಪ್ಪಲಿನಲ್ಲಿಯೂ ಸಮಾಧಾನವು ದೊರಕಲಿಲ್ಲ.

09005005a ತೇಽಬ್ರುವನ್ಸಹಿತಾಸ್ತತ್ರ ರಾಜಾನಂ ಸೈನ್ಯಸಂನಿಧೌ|

09005005c ಕೃತಯತ್ನಾ ರಣೇ ರಾಜನ್ಸಂಪೂಜ್ಯ ವಿಧಿವತ್ತದಾ||

ರಾಜನ್! ರಣದಲ್ಲಿ ಪ್ರಯತ್ನಮಾಡಿ ಅಲ್ಲಿ ನೆರೆದಿದ್ದ ಅವರು ಸೈನ್ಯ ಸನ್ನಿಧಿಯಲ್ಲಿ ರಾಜನನ್ನು ವಿಧಿವತ್ತಾಗಿ ಗೌರವಿಸಿ ಅವನಿಗೆ ಹೇಳಿದರು:

09005006a ಕೃತ್ವಾ ಸೇನಾಪ್ರಣೇತಾರಂ ಪರಾಂಸ್ತ್ವಂ ಯೋದ್ಧುಮರ್ಹಸಿ|

09005006c ಯೇನಾಭಿಗುಪ್ತಾಃ ಸಂಗ್ರಾಮೇ ಜಯೇಮಾಸುಹೃದೋ ವಯಂ||

“ಸೇನಾನಾಯಕನನ್ನು ಮಾಡಿಕೊಂಡು ಶತ್ರುಗಳೊಂದಿಗೆ ನೀನು ಯುದ್ಧಮಾಡಬೇಕು. ಸೇನಾಪತಿಯ ರಕ್ಷಣೆಯಡಿಯಲ್ಲಿ ನಾವು ಸಂಗ್ರಾಮದಲ್ಲಿ ಜಯವನ್ನು ಗಳಿಸಬಲ್ಲೆವು!”

09005007a ತತೋ ದುರ್ಯೋಧನಃ ಸ್ಥಿತ್ವಾ ರಥೇ ರಥವರೋತ್ತಮಂ|

09005007c ಸರ್ವಯುದ್ಧವಿಭಾಗಜ್ಞಮಂತಕಪ್ರತಿಮಂ ಯುಧಿ||

09005008a ಸ್ವಂಗಂ ಪ್ರಚ್ಚನ್ನಶಿರಸಂ ಕಂಬುಗ್ರೀವಂ ಪ್ರಿಯಂವದಂ|

09005008c ವ್ಯಾಕೋಶಪದ್ಮಾಭಿಮುಖಂ ವ್ಯಾಘ್ರಾಸ್ಯಂ ಮೇರುಗೌರವಂ||

09005009a ಸ್ಥಾಣೋರ್ವೃಷಸ್ಯ ಸದೃಶಂ ಸ್ಕಂಧನೇತ್ರಗತಿಸ್ವರೈಃ|

09005009c ಪುಷ್ಟಶ್ಲಿಷ್ಟಾಯತಭುಜಂ ಸುವಿಸ್ತೀರ್ಣಘನೋರಸಂ||

09005010a ಜವೇ ಬಲೇ ಚ ಸದೃಶಮರುಣಾನುಜವಾತಯೋಃ|

09005010c ಆದಿತ್ಯಸ್ಯ ತ್ವಿಷಾ ತುಲ್ಯಂ ಬುದ್ಧ್ಯಾ ಚೋಶನಸಾ ಸಮಂ||

09005011a ಕಾಂತಿರೂಪಮುಖೈಶ್ವರ್ಯೈಸ್ತ್ರಿಭಿಶ್ಚಂದ್ರಮಸೋಪಮಂ|

09005011c ಕಾಂಚನೋಪಲಸಂಘಾತೈಃ ಸದೃಶಂ ಶ್ಲಿಷ್ಟಸಂಧಿಕಂ||

09005012a ಸುವೃತ್ತೋರುಕಟೀಜಂಘಂ ಸುಪಾದಂ ಸ್ವಂಗುಲೀನಖಂ|

09005012c ಸ್ಮೃತ್ವಾ ಸ್ಮೃತ್ವೈವ ಚ ಗುಣಾನ್ಧಾತ್ರಾ ಯತ್ನಾದ್ವಿನಿರ್ಮಿತಂ||

09005013a ಸರ್ವಲಕ್ಷಣಸಂಪನ್ನಂ ನಿಪುಣಂ ಶ್ರುತಿಸಾಗರಂ|

09005013c ಜೇತಾರಂ ತರಸಾರೀಣಾಮಜೇಯಂ ಶತ್ರುಭಿರ್ಬಲಾತ್||

09005014a ದಶಾಂಗಂ ಯಶ್ಚತುಷ್ಪಾದಮಿಷ್ವಸ್ತ್ರಂ ವೇದ ತತ್ತ್ವತಃ|

09005014c ಸಾಂಗಾಂಶ್ಚ ಚತುರೋ ವೇದಾನ್ಸಂಯಗಾಖ್ಯಾನಪಂಚಮಾನ್||

09005015a ಆರಾಧ್ಯ ತ್ರ್ಯಂಬಕಂ ಯತ್ನಾದ್ವ್ರತೈರುಗ್ರೈರ್ಮಹಾತಪಾಃ|

09005015c ಅಯೋನಿಜಾಯಾಮುತ್ಪನ್ನೋ ದ್ರೋಣೇನಾಯೋನಿಜೇನ ಯಃ||

09005016a ತಮಪ್ರತಿಮಕರ್ಮಾಣಂ ರೂಪೇಣಾಸದೃಶಂ ಭುವಿ|

09005016c ಪಾರಗಂ ಸರ್ವವಿದ್ಯಾನಾಂ ಗುಣಾರ್ಣವಮನಿಂದಿತಂ||

09005016e ತಮಭ್ಯೇತ್ಯಾತ್ಮಜಸ್ತುಭ್ಯಮಶ್ವತ್ಥಾಮಾನಮಬ್ರವೀತ್||

ಆಗ ನಿನ್ನ ಮಗ ದುರ್ಯೋಧನನು ಶ್ರೇಷ್ಠ ಉತ್ತಮ ರಥದಲ್ಲಿ ನಿಂತು ಸರ್ವಯುದ್ಧವಿಭಾವಜ್ಞನೂ, ಯುದ್ಧದಲ್ಲಿ ಅಂತಕನಂತಿರುವ, ಸುಂದರಾಂಗ, ಶಿರದಲ್ಲಿ ಕೇಶರಾಶಿಯಿದ್ದ, ಕಂಬುಗ್ರೀವ, ಪ್ರಿಯವದನ, ಅರಳಿದ ಕಮಲದಳಗಳಂತಿರುವ ಕಣ್ಣುಗಳಿದ್ದ, ವ್ಯಾಘ್ರದಂತೆ ವಿಶಾಲ ಮುಖವಿದ್ದ, ಮೇರುಪರ್ವದಂತೆ ಗಂಭೀರನಾಗಿದ್ದ, ಸ್ಥಾಣುವಿನ ನಂದಿಯ ಹೆಗಲು-ಕಣ್ಣುಗಳು-ನಡಿಗೆ-ಗರ್ಜನೆಗಳಿದ್ದ, ಪುಷ್ಟ-ಸುಸಂಘಟಿತ-ನೀಳ ತೋಳುಗಳಿದ್ದ, ವಿಶಾಲ-ಶ್ರೇಷ್ಠ ವಕ್ಷಸ್ಥಳವಿದ್ದ, ಅರುಣಾನುಜ ಗರುಡ ಮತ್ತು ವಾಯುವಿನಂಥಹ ಬಲ-ವೇಗವುಳ್ಳ, ಸೂರ್ಯನ ತೇಜಸ್ಸು ಮತ್ತು ಶುಕ್ರಾಚಾರ್ಯನ ಬುದ್ಧಿಯುಳ್ಳ, ಚಂದ್ರನ ಮುಖಕಾಂತಿ-ರೂಪೈಶ್ವರ್ಯಯುಕ್ತ, ಸುವರ್ಣಶಿಲೆಯ ಕಾಂತಿಯ ಶರೀರವುಳ್ಳ, ಸುಘಟಿತ ಸಂಧಿಗಳಿಂದ ಕೂಡಿದ್ದ, ವೃತ್ತಾಕಾರದ ತೊಡೆ-ಕಟಿ-ಮೊಣಕಾಲುಗಳಿದ್ದ, ಸುಂದರ ಪಾದ-ಬೆರಳು-ಉಗುರುಗಳನ್ನು ಪಡೆದಿದ್ದ, ಬ್ರಹ್ಮನು ಒಳ್ಳೊಳ್ಳೆಯ ಗುಣಗಳನ್ನು ಸ್ಮರಣೆಗೆ ತಂದುಕೊಂಡು ಪ್ರಯತ್ನಪೂರ್ವಕವಾಗಿ ನಿರ್ಮಿಸಿದಂತಿದ್ದ ಸುಂದರ ಅವಯವಗಳಿದ್ದ, ಸರ್ವಲಕ್ಷಣ ಸಂಪನ್ನ, ನಿಪುಣ, ಶ್ರುತಿಸಾಗರ, ಶತ್ರುಗಳನ್ನು ಬಹುಬೇಗ ಜಯಿಸಬಲ್ಲ, ಶತ್ರುಗಳಿಗೆ ದುರ್ಲಭ, ಧನುರ್ವೇದದ ಹತ್ತು ಅಂಗಗಳನ್ನು ಮತ್ತು ನಾಲ್ಕು ಪಾದಗಳನ್ನು ತಿಳಿದಿದ್ದ, ಇಷ್ವಸ್ತ್ರಗಳ ತತ್ವಗಳನ್ನು ತಿಳಿದಿದ್ದ, ನಾಲ್ಕು ವೇದಗಳನ್ನು ಸಾಂಗವಾಗಿ ತಿಳಿದಿದ್ದ, ಐದನೆಯ ವೇದವನ್ನು ತಿಳಿದಿದ್ದ, ಉಗ್ರ ವ್ರತಾನುಷ್ಟಾನಗಳಿಂದ ಪ್ರಯತ್ನಪಟ್ಟು ತ್ರ್ಯಂಬಕನನ್ನು ಆರಾಧಿಸಿ ಅನುಗ್ರಹ ಪಡೆದುಕೊಂಡಿದ್ದ, ಅಯೋನಿಜೆ ಕೃಪೆ ಮತ್ತು ಅಯೋನಿಜ ದ್ರೋಣರಿಂದ ಉತ್ಪನ್ನನಾಗಿದ್ದ, ಅಪ್ರತಿಮ ಕರ್ಮಗಳನ್ನೆಸಗಿದ್ದ, ರೂಪದಲ್ಲಿ ಭುವಿಯಲ್ಲಿಯೇ ಅಸದೃಶನಾಗಿದ್ದ, ಸರ್ವವಿದ್ಯಾ ಪಾರಂಗ, ಗುಣಗಳ ಸಾಗರ, ಅನಿಂದಿತ ಅಶ್ವತ್ಥಾಮನಿಗೆ ಈ ರೀತಿ ಹೇಳಿದನು:

09005017a ಯಂ ಪುರಸ್ಕೃತ್ಯ ಸಹಿತಾ ಯುಧಿ ಜೇಷ್ಯಾಮ ಪಾಂಡವಾನ್|

09005017c ಗುರುಪುತ್ರೋಽದ್ಯ ಸರ್ವೇಷಾಮಸ್ಮಾಕಂ ಪರಮಾ ಗತಿಃ||

09005017e ಭವಾಂಸ್ತಸ್ಮಾನ್ನಿಯೋಗಾತ್ತೇ ಕೋಽಸ್ತು ಸೇನಾಪತಿರ್ಮಮ||

“ಗುರುಪುತ್ರ! ಯಾರನ್ನು ಮುಂದಿಟ್ಟುಕೊಂಡು ಒಟ್ಟಾಗಿ ನಾವು ಯುದ್ಧದಲ್ಲಿ ಪಾಂಡವರನ್ನು ಜಯಿಸಬಲ್ಲೆವೋ ಅಂತಹ ನೀನೇ ನಮ್ಮೆಲ್ಲರ ಪರಮ ಗತಿಯು. ಆದುದರಿಂದ ನಿನ್ನ ನಿರ್ದೇಶನದಂತೆಯೇ ನಾವು ನಡೆದುಕೊಳ್ಳುತ್ತೇವೆ. ಯಾರು ನನ್ನ ಸೇನಾಪತಿಯಾಗಬಹುದು?”

09005018 ದ್ರೌಣಿರುವಾಚ

09005018a ಅಯಂ ಕುಲೇನ ವೀರ್ಯೇಣ ತೇಜಸಾ ಯಶಸಾ ಶ್ರಿಯಾ|

09005018c ಸರ್ವೈರ್ಗುಣೈಃ ಸಮುದಿತಃ ಶಲ್ಯೋ ನೋಽಸ್ತು ಚಮೂಪತಿಃ||

ದ್ರೌಣಿಯು ಹೇಳಿದನು: “ಈ ಶಲ್ಯನು ಕುಲ, ವೀರ್ಯ, ತೇಜಸ್ಸು, ಯಶಸ್ಸು ಮತ್ತು ಶ್ರೀ ಈ ಸರ್ವಗುಣಗಳಿಂದ ಸಮುದಿತನಾಗಿರುವನು. ಅವನೇ ನಮ್ಮ ಸೇನಾಪತಿಯಾಗಲಿ!

09005019a ಭಾಗಿನೇಯಾನ್ನಿಜಾಂಸ್ತ್ಯಕ್ತ್ವಾ ಕೃತಜ್ಞೋಽಸ್ಮಾನುಪಾಗತಃ|

09005019c ಮಹಾಸೇನೋ ಮಹಾಬಾಹುರ್ಮಹಾಸೇನ ಇವಾಪರಃ||

ಕೃತಜ್ಞನಾದ ಇವನು ತಂಗಿಯ ಮಕ್ಕಳನ್ನೂ ಪರಿತ್ಯಜಿಸಿ ನಮ್ಮನ್ನು ಅನುಸರಿಸಿ ಬಂದಿದ್ದಾನೆ. ಈ ಮಹಾಬಾಹುವು ಮತ್ತೊಬ್ಬ ಕಾರ್ತಿಕೇಯನಂತೆ ಮಹಾಸೇನಾನಿಯಾಗಿದ್ದಾನೆ.

09005020a ಏನಂ ಸೇನಾಪತಿಂ ಕೃತ್ವಾ ನೃಪತಿಂ ನೃಪಸತ್ತಮ|

09005020c ಶಕ್ಯಃ ಪ್ರಾಪ್ತುಂ ಜಯೋಽಸ್ಮಾಭಿರ್ದೇವೈಃ ಸ್ಕಂದಮಿವಾಜಿತಂ||

ನೃಪಸತ್ತಮ! ಅಪರಾಜಿತ ದೇವತೆಗಳು ಸ್ಕಂದನನ್ನು ಪಡೆದು ಜಯವನ್ನು ಗಳಿಸಿದಂತೆ ನಾವೂ ಕೂಡ ಈ ನೃಪತಿಯನ್ನು ಸೇನಾಪತಿಯನ್ನಾಗಿ ಮಾಡಿ ಜಯಗಳಿಸುತ್ತೇವೆ.”

09005021a ತಥೋಕ್ತೇ ದ್ರೋಣಪುತ್ರೇಣ ಸರ್ವ ಏವ ನರಾಧಿಪಾಃ|

09005021c ಪರಿವಾರ್ಯ ಸ್ಥಿತಾಃ ಶಲ್ಯಂ ಜಯಶಬ್ದಾಂಶ್ಚ ಚಕ್ರಿರೇ||

09005021e ಯುದ್ಧಾಯ ಚ ಮತಿಂ ಚಕ್ರೂರಾವೇಶಂ ಚ ಪರಂ ಯಯುಃ||

ದ್ರೋಣಪುತ್ರನು ಹೀಗೆ ಹೇಳಲು ಸರ್ವ ನರಾಧಿಪರೂ ಶಲ್ಯನನ್ನು ಸುತ್ತುವರೆದು ನಿಂತು ಜಯಕಾರ ಮಾಡಿದರು. ಯುದ್ಧಮಾಡಬೇಕೆಂದು ನಿರ್ಧರಿಸಿ ಪರಮ ಆವೇಶಪೂರ್ಣರಾದರು.

09005022a ತತೋ ದುರ್ಯೋಧನಃ ಶಲ್ಯಂ ಭೂಮೌ ಸ್ಥಿತ್ವಾ ರಥೇ ಸ್ಥಿತಂ|

09005022c ಉವಾಚ ಪ್ರಾಂಜಲಿರ್ಭೂತ್ವಾ ರಾಮಭೀಷ್ಮಸಮಂ ರಣೇ||

ಅನಂತರ ದುರ್ಯೋಧನನು ನೆಲದ ಮೇಲೆಯೇ ನಿಂತು ರಥದಲ್ಲಿ ಕುಳಿತಿದ್ದ, ರಣದಲ್ಲಿ ಪರಶುರಾಮ-ಭೀಷ್ಮರ ಸಮನಾಗಿದ್ದ ಶಲ್ಯನಿಗೆ ಕೈಮುಗಿದು ಹೇಳಿದನು:

09005023a ಅಯಂ ಸ ಕಾಲಃ ಸಂಪ್ರಾಪ್ತೋ ಮಿತ್ರಾಣಾಂ ಮಿತ್ರವತ್ಸಲ|

09005023c ಯತ್ರ ಮಿತ್ರಮಮಿತ್ರಂ ವಾ ಪರೀಕ್ಷಂತೇ ಬುಧಾ ಜನಾಃ||

“ಮಿತ್ರವತ್ಸಲ! ವಿಧ್ವಾಂಸರು ಮಿತ್ರರು ಯಾರು ಮತ್ತು ಅಮಿತ್ರರು ಯಾರು ಎಂದು ಪರೀಕ್ಷಿಸುವಂತಹ, ಮಿತ್ರರಿಗೆ ಸರಿಯಾದ, ಕಾಲವು ಬಂದೊದಗಿದೆ.

09005024a ಸ ಭವಾನಸ್ತು ನಃ ಶೂರಃ ಪ್ರಣೇತಾ ವಾಹಿನೀಮುಖೇ|

09005024c ರಣಂ ಚ ಯಾತೇ ಭವತಿ ಪಾಂಡವಾ ಮಂದಚೇತಸಃ||

09005024e ಭವಿಷ್ಯಂತಿ ಸಹಾಮಾತ್ಯಾಃ ಪಾಂಚಾಲಾಶ್ಚ ನಿರುದ್ಯಮಾಃ||

ಶೂರನಾದ ನೀನು ಸೇನಾಮುಖದಲ್ಲಿ ನಮ್ಮ ಪ್ರಣೇತನಾಗು. ನೀನು ಯುದ್ಧಕ್ಕೆ ಹೋದೆಯಾದರೆ ಅಮಾತ್ಯರೊಂದಿಗೆ ಮಂದಬುದ್ಧಿಯ ಪಾಂಡವರೂ ಮತ್ತು ಪಾಂಚಾಲರೂ ಉದ್ಯೋಗಶೂನ್ಯರಾಗುತ್ತಾರೆ!”

[1]09005025 ಶಲ್ಯ ಉವಾಚ

09005025a ಯತ್ತು ಮಾಂ ಮನ್ಯಸೇ ರಾಜನ್ಕುರುರಾಜ ಕರೋಮಿ ತತ್|

09005025c ತ್ವತ್ಪ್ರಿಯಾರ್ಥಂ ಹಿ ಮೇ ಸರ್ವಂ ಪ್ರಾಣಾ ರಾಜ್ಯಂ ಧನಾನಿ ಚ||

ಶಲ್ಯನು ಹೇಳಿದನು: “ರಾಜನ್! ಕುರುರಾಜ! ನೀನು ನನಗೆ ಹೊರಿಸುವ ಕಾರ್ಯವನ್ನು ಮಾಡುತ್ತೇನೆ. ನನ್ನ ಪ್ರಾಣ, ರಾಜ್ಯ, ಧನ ಸರ್ವವೂ ನಿನ್ನ ಪ್ರೀತ್ಯರ್ಥವಾಗಿಯೇ ಇವೆ!”

09005026 ದುರ್ಯೋಧನ ಉವಾಚ

09005026a ಸೇನಾಪತ್ಯೇನ ವರಯೇ ತ್ವಾಮಹಂ ಮಾತುಲಾತುಲಂ|

09005026c ಸೋಽಸ್ಮಾನ್ಪಾಹಿ ಯುಧಾಂ ಶ್ರೇಷ್ಠ ಸ್ಕಂದೋ ದೇವಾನಿವಾಹವೇ||

ದುರ್ಯೋಧನನು ಹೇಳಿದನು: “ಮಾತುಲ! ಅತುಲ ಪರಾಕ್ರಮಿಯಾಗಿರುವ ನಿನ್ನನ್ನು ನಾನು ಸೇನಾಪತಿಯನ್ನಾಗಿ ಆರಿಸುತ್ತೇನೆ. ಯೋಧರಲ್ಲಿ ಶ್ರೇಷ್ಠ ಸ್ಕಂದನು ದೇವತೆಗಳನ್ನು ಹೇಗೋ ಹಾಗೆ ನೀನು ನಮ್ಮನ್ನು ಯುದ್ಧದಲ್ಲಿ ರಕ್ಷಿಸುವವನಾಗು!

09005027a ಅಭಿಷಿಚ್ಯಸ್ವ ರಾಜೇಂದ್ರ ದೇವಾನಾಮಿವ ಪಾವಕಿಃ|

09005027c ಜಹಿ ಶತ್ರೂನ್ರಣೇ ವೀರ ಮಹೇಂದ್ರೋ ದಾನವಾನಿವ||

ರಾಜೇಂದ್ರ! ಪಾವಕಿಯನ್ನು ದೇವತೆಗಳು ಹೇಗೋ ಹಾಗೆ ನಾನು ನಿನ್ನನ್ನು ಸೇನಾಪತಿಯಾಗಿ ಅಭಿಷೇಕಿಸುತ್ತೇನೆ. ವೀರ! ಮಹೇಂದ್ರನು ದಾನವರನ್ನು ಹೇಗೋ ಹಾಗೆ ರಣದಲ್ಲಿ ಶತ್ರುಗಳನ್ನು ಸಂಹರಿಸು!””

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಶಲ್ಯದುರ್ಯೋಧನಸಂವದೇ ಪಂಚಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಶಲ್ಯದುರ್ಯೋಧನಸಂವಾದ ಎನ್ನುವ ಐದನೇ ಅಧ್ಯಾಯವು.

[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕವಿದೆ: ದುರ್ಯೋಧನವಚಃ ಶ್ರುತ್ವಾ ಶಲ್ಯೋ ಮದ್ರಾಧಿಪಸ್ತದಾ| ಉವಾಚ ವಾಕ್ಯಂ ವಾಕ್ಯಜ್ಞೋ ರಾಜಾನಂ ರಾಜಸಂನಿಧೌ||

Comments are closed.