Shalya Parva: Chapter 4

ಶಲ್ಯಪರ್ವ: ಶಲ್ಯವಧ ಪರ್ವ

09004001 ಸಂಜಯ ಉವಾಚ

09004001a ಏವಮುಕ್ತಸ್ತತೋ ರಾಜಾ ಗೌತಮೇನ ಯಶಸ್ವಿನಾ|

09004001c ನಿಃಶ್ವಸ್ಯ ದೀರ್ಘಮುಷ್ಣಂ ಚ ತೂಷ್ಣೀಮಾಸೀದ್ವಿಶಾಂ ಪತೇ||

ಸಂಜಯನು ಹೇಳಿದನು: “ವಿಶಾಂಪತೇ! ಯಶಸ್ವಿ ಗೌತಮನು ಹೀಗೆ ಹೇಳಲು ರಾಜ ದುರ್ಯೋಧನನು ದೀರ್ಘವಾಗಿ ಬಿಸಿಬಿಸಿ ನಿಟ್ಟುಸಿರು ಬಿಡುತ್ತಾ ಸುಮ್ಮನಿದ್ದನು.

09004002a ತತೋ ಮುಹೂರ್ತಂ ಸ ಧ್ಯಾತ್ವಾ ಧಾರ್ತರಾಷ್ಟ್ರೋ ಮಹಾಮನಾಃ|

09004002c ಕೃಪಂ ಶಾರದ್ವತಂ ವಾಕ್ಯಮಿತ್ಯುವಾಚ ಪರಂತಪಃ||

ಸ್ವಲ್ಪಕಾಲ ಯೋಚಿಸಿ ಮಹಾಮನಸ್ವಿ ಪರಂತಪ ಧಾರ್ತರಾಷ್ಟ್ರನು ಶಾರದ್ವತ ಕೃಪನಿಗೆ ಇಂತೆಂದನು:

09004003a ಯತ್ಕಿಂ ಚಿತ್ಸುಹೃದಾ ವಾಚ್ಯಂ ತತ್ಸರ್ವಂ ಶ್ರಾವಿತೋ ಹ್ಯಹಂ|

09004003c ಕೃತಂ ಚ ಭವತಾ ಸರ್ವಂ ಪ್ರಾಣಾನ್ ಸಂತ್ಯಜ್ಯ ಯುಧ್ಯತಾ||

“ಸುಹೃದಯರು ಏನೆಲ್ಲ ಹೇಳಬೇಕೋ ಅವೆಲ್ಲವನ್ನೂ ನೀವು ನನಗೆ ಹೇಳಿದ್ದೀರಿ. ನಿಮ್ಮ ಪ್ರಾಣ ಸರ್ವಸ್ವವನ್ನೂ ತ್ಯಜಿಸಿ ಯುದ್ಧಮಾಡುತ್ತಿರುವಿರಿ!

09004004a ಗಾಹಮಾನಮನೀಕಾನಿ ಯುಧ್ಯಮಾನಂ ಮಹಾರಥೈಃ|

09004004c ಪಾಂಡವೈರತಿತೇಜೋಭಿರ್ಲೋಕಸ್ತ್ವಾಮನುದೃಷ್ಟವಾನ್||

ಅತಿತೇಜಸ್ವಿಗಳಾದ ಮಹಾರಥ ಪಾಂಡವರ ಸೇನೆಗಳಲ್ಲಿ ನುಗ್ಗಿ ಯುದ್ಧಮಾಡುತ್ತಿರುವ ನಿಮ್ಮನ್ನು ಲೋಕವೇ ಅವಲೋಕಿಸಿದೆ.

09004005a ಸುಹೃದಾ ಯದಿದಂ ವಾಚ್ಯಂ ಭವತಾ ಶ್ರಾವಿತೋ ಹ್ಯಹಂ|

09004005c ನ ಮಾಂ ಪ್ರೀಣಾತಿ ತತ್ಸರ್ವಂ ಮುಮೂರ್ಷೋರಿವ ಭೇಷಜಂ||

ಆದರೆ ಸುಹೃದತೆಯಿಂದ ನೀವು ನನಗೆ ಹೇಳಿದ ಮಾತುಗಳು ಸಾಯುವವನಿಗೆ ಔಷಧಿಯು ಹೇಗೋ ಹಾಗೆ ಪ್ರಿಯವೆನಿಸುತ್ತಿಲ್ಲ.

09004006a ಹೇತುಕಾರಣಸಂಯುಕ್ತಂ ಹಿತಂ ವಚನಮುತ್ತಮಂ|

09004006c ಉಚ್ಯಮಾನಂ ಮಹಾಬಾಹೋ ನ ಮೇ ವಿಪ್ರಾಗ್ರ್ಯ ರೋಚತೇ||

ವಿಪ್ರಾಗ್ರ್ಯ! ನೀವು ಯುಕ್ತಿ ಮತ್ತು ಕಾರಣಗಳಿಂದ ಸುಸಂಗತ- ಹಿತಕರ-ಉತ್ತಮ ಮಾತುಗಳನ್ನೇ ಆಡಿರುವಿರಿ. ಮಹಾಬಾಹೋ! ಆದರೆ ಅವು ನನಗೆ ರುಚಿಸುತ್ತಿಲ್ಲ.

09004007a ರಾಜ್ಯಾದ್ವಿನಿಕೃತೋಽಸ್ಮಾಭಿಃ ಕಥಂ ಸೋಽಸ್ಮಾಸು ವಿಶ್ವಸೇತ್|

09004007c ಅಕ್ಷದ್ಯೂತೇ ಚ ನೃಪತಿರ್ಜಿತೋಽಸ್ಮಾಭಿರ್ಮಹಾಧನಃ|

09004007e ಸ ಕಥಂ ಮಮ ವಾಕ್ಯಾನಿ ಶ್ರದ್ದಧ್ಯಾದ್ಭೂಯ ಏವ ತು||

ನಮ್ಮಿಂದಲೇ ರಾಜ್ಯದಿಂದ ವಂಚಿತನಾದ ಅವನು ನಮ್ಮೊಡನೆ ಹೇಗೆ ವಿಶ್ವಾಸವಿಡುತ್ತಾನೆ? ಅಕ್ಷದ್ಯೂತದಲ್ಲಿ ಮಹಾಧವನ್ನು ಗೆದ್ದ ನಮ್ಮ ಮಾತುಗಳಲ್ಲಿ ಪುನಃ ಆ ನೃಪತಿಯು ಹೇಗೆ ಶ್ರದ್ಧೆಯಿಡುತ್ತಾನೆ?

09004008a ತಥಾ ದೌತ್ಯೇನ ಸಂಪ್ರಾಪ್ತಃ ಕೃಷ್ಣಃ ಪಾರ್ಥಹಿತೇ ರತಃ|

09004008c ಪ್ರಲಬ್ಧಶ್ಚ ಹೃಷೀಕೇಶಸ್ತಚ್ಚ ಕರ್ಮ ವಿರೋಧಿತಂ|

09004008e ಸ ಚ ಮೇ ವಚನಂ ಬ್ರಹ್ಮನ್ಕಥಮೇವಾಭಿಮಂಸ್ಯತೇ||

ಬ್ರಹ್ಮನ್! ಹಾಗೆಯೇ ದ್ಯೂತದ ಪರಿಣಾಮವಾಗಿ ಪಾರ್ಥಹಿತರತನಾಗಿರುವ ಹೃಷೀಕೇಶನು ಸಂಧಿಗಾಗಿ ಬಂದಾಗ ಅವನನ್ನು ನಾವು ವಿರೋಧಿಸಿದೆವು. ಈಗ ಅವನು ನಮ್ಮ ಮಾತನ್ನು ಹೇಗೆ ಮನ್ನಿಸುತ್ತಾನೆ?

09004009a ವಿಲಲಾಪ ಹಿ ಯತ್ಕೃಷ್ಣಾ ಸಭಾಮಧ್ಯೇ ಸಮೇಯುಷೀ|

09004009c ನ ತನ್ಮರ್ಷಯತೇ ಕೃಷ್ಣೋ ನ ರಾಜ್ಯಹರಣಂ ತಥಾ||

ಸಭಾಮಧ್ಯದಲ್ಲಿ ಕೃಷ್ಣೆಯನ್ನು ಎಳೆತಂದಾಗ ಅವಳು ವಿಲಪಿಸಿದುದನ್ನು ಮತ್ತು ರಾಜ್ಯಹರಣವನ್ನು ಕೃಷ್ಣನು ಎಂದಿಗೂ ಸಹಿಸುವವನಲ್ಲ.

09004010a ಏಕಪ್ರಾಣಾವುಭೌ ಕೃಷ್ಣಾವನ್ಯೋನ್ಯಂ ಪ್ರತಿ ಸಂಹತೌ|

09004010c ಪುರಾ ಯಚ್ಛೃತಮೇವಾಸೀದದ್ಯ ಪಶ್ಯಾಮಿ ತತ್ಪ್ರಭೋ||

ಪ್ರಭೋ! ಕೃಷ್ಣರಿಬ್ಬರ ಪ್ರಾಣವೂ ಒಂದೇ. ಅವರು ಅನ್ಯೋನ್ಯರನ್ನು ಆಶ್ರಯಿಸಿರುವರು ಎಂದು ಹೇಳಿದುದನ್ನು ನಾನು ಹಿಂದೆ ಕೇಳಿದ್ದೆನು. ಆದರೆ ಅದನ್ನು ಇಂದು ನಾನು ಪ್ರತ್ಯಕ್ಷವಾಗಿ ಕಾಣುತ್ತಿದ್ದೇನೆ.

09004011a ಸ್ವಸ್ರೀಯಂ ಚ ಹತಂ ಶ್ರುತ್ವಾ ದುಃಖಂ ಸ್ವಪಿತಿ ಕೇಶವಃ|

09004011c ಕೃತಾಗಸೋ ವಯಂ ತಸ್ಯ ಸ ಮದರ್ಥಂ ಕಥಂ ಕ್ಷಮೇತ್||

ಅವನ ಸೋದರಳಿಯನು ಹತನಾದುದನ್ನು ಕೇಳಿ ಕೇಶವನು ದುಃಖದಿಂದ ನಿದ್ದೆಮಾಡುತ್ತಿಲ್ಲ. ಅವನ ಮೇಲೆ ಈ ಅಪರಾಧವೆಸಗಿದ ನಮ್ಮನ್ನು ಅವನು ಹೇಗೆ ತಾನೇ ಕ್ಷಮಿಸಿಯಾನು?

09004012a ಅಭಿಮನ್ಯೋರ್ವಿನಾಶೇನ ನ ಶರ್ಮ ಲಭತೇಽರ್ಜುನಃ|

09004012c ಸ ಕಥಂ ಮದ್ಧಿತೇ ಯತ್ನಂ ಪ್ರಕರಿಷ್ಯತಿ ಯಾಚಿತಃ||

ಅಭಿಮನ್ಯುವಿನ ವಿನಾಶದಿಂದ ಅರ್ಜುನನಿಗೆ ಸುಖವೆಂಬುದೇ ಇಲ್ಲವಾಗಿದೆ. ಪ್ರಾರ್ಥಿಸಿದರೂ ಅವನು ನನ್ನ ಹಿತವನ್ನು ಏಕೆ ಪ್ರಯತ್ನಿಸುತ್ತಾನೆ?

09004013a ಮಧ್ಯಮಃ ಪಾಂಡವಸ್ತೀಕ್ಷ್ಣೋ ಭೀಮಸೇನೋ ಮಹಾಬಲಃ|

09004013c ಪ್ರತಿಜ್ಞಾತಂ ಚ ತೇನೋಗ್ರಂ ಸ ಭಜ್ಯೇತ ನ ಸಂನಮೇತ್||

ಮಧ್ಯಮ ಪಾಂಡವ ತೀಕ್ಷ್ಣ ಮಹಾಬಲ ಭೀಮಸೇನನು ಉಗ್ರ ಪ್ರತಿಜ್ಞೆಯನ್ನು ಮಾಡಿರುವನು. ಅವನು ಭಗ್ನನಾಗಬಲ್ಲನೇ ಹೊರತು ಬಾಗುವವನಲ್ಲ!

09004014a ಉಭೌ ತೌ ಬದ್ಧನಿಸ್ತ್ರಿಂಶಾವುಭೌ ಚಾಬದ್ಧಕಂಕಟೌ|

09004014c ಕೃತವೈರಾವುಭೌ ವೀರೌ ಯಮಾವಪಿ ಯಮೋಪಮೌ||

ಕವಚಗಳನ್ನು ತೊಟ್ಟು ಖಡ್ಗಗಳನ್ನು ಸೊಂಟಗಳಿಗೆ ಕಟ್ಟಿಕೊಂಡಿರುವ ಯಮರೂಪದ ವೀರ ಯಮಳರು ಕೂಡ ನಮಗೆ ಬದ್ಧವೈರಿಗಳು.

09004015a ಧೃಷ್ಟದ್ಯುಮ್ನಃ ಶಿಖಂಡೀ ಚ ಕೃತವೈರೌ ಮಯಾ ಸಹ|

09004015c ತೌ ಕಥಂ ಮದ್ಧಿತೇ ಯತ್ನಂ ಪ್ರಕುರ್ಯಾತಾಂ ದ್ವಿಜೋತ್ತಮ||

ದ್ವಿಜೋತ್ತಮ! ಧೃಷ್ಟದ್ಯುಮ್ನ ಮತ್ತು ಶಿಖಂಡಿಯರು ಸಹ ನನ್ನೊಡನೆ ವೈರವನ್ನು ಕಟ್ಟಿಕೊಂಡಿರುವರು. ಅವರಿಬ್ಬರೂ ನನ್ನ ಹಿತಕ್ಕಾಗಿ ಏಕೆ ಪ್ರಯತ್ನಿಸುವರು?

09004016a ದುಃಶಾಸನೇನ ಯತ್ಕೃಷ್ಣಾ ಏಕವಸ್ತ್ರಾ ರಜಸ್ವಲಾ|

09004016c ಪರಿಕ್ಲಿಷ್ಟಾ ಸಭಾಮಧ್ಯೇ ಸರ್ವಲೋಕಸ್ಯ ಪಶ್ಯತಃ||

09004017a ತಥಾ ವಿವಸನಾಂ ದೀನಾಂ ಸ್ಮರಂತ್ಯದ್ಯಾಪಿ ಪಾಂಡವಾಃ|

09004017c ನ ನಿವಾರಯಿತುಂ ಶಕ್ಯಾಃ ಸಂಗ್ರಾಮಾತ್ತೇ ಪರಂತಪಾಃ||

ಏಕವಸ್ತ್ರಳೂ ರಜಸ್ವಲೆಯೂ ಆಗಿದ್ದ ಕೃಷ್ಣೆಯನ್ನು ದುಃಶಾಸನನು ಸಭಾಮಧ್ಯದಲ್ಲಿ ಸರ್ವರೂ ನೋಡುತ್ತಿರುವಂತೆಯೇ ಕಾಡಿಸಿದ್ದು, ಹಾಗೆಯೇ ಆ ದೀನಳಾದವಳನ್ನು ವಸ್ತ್ರಹೀನಳನ್ನಾಗಿ ಮಾಡಿದುದು ಇವುಗಳನ್ನು ಸ್ಮರಿಸಿಕೊಂಡಿರುವ ಪರಂತಪ ಪಾಂಡವರು ಈಗ ಸಂಗ್ರಾಮವನ್ನು ನಿಲ್ಲಿಸಲು ಸಾಧ್ಯವಿಲ್ಲ.

09004018a ಯದಾ ಚ ದ್ರೌಪದೀ ಕೃಷ್ಣಾ ಮದ್ವಿನಾಶಾಯ ದುಃಖಿತಾ|

09004018c ಉಗ್ರಂ ತೇಪೇ ತಪಃ ಕೃಷ್ಣಾ ಭರ್ತೄಣಾಮರ್ಥಸಿದ್ಧಯೇ|

09004018e ಸ್ಥಂಡಿಲೇ ನಿತ್ಯದಾ ಶೇತೇ ಯಾವದ್ವೈರಸ್ಯ ಯಾತನಾ||

ದುಃಖಿತಳಾದ ದ್ರೌಪದೀ ಕೃಷ್ಣೆಯು ತನ್ನ ಪತಿಯಂದಿರ ಅರ್ಥಸಿದ್ಧಿಗಾಗಿ ಉಗ್ರತಪಸ್ಸನ್ನು ತಪಿಸುತ್ತಿದ್ದಾಳೆ. ವೈರದ ಯಾತನೆಯಿರುವವರೆಗೆ ಅವಳು ನಿತ್ಯವೂ ನೆಲದ ಮೇಲೆಯೇ ಮಲಗುತ್ತಿದ್ದಾಳೆ.

09004019a ನಿಕ್ಷಿಪ್ಯ ಮಾನಂ ದರ್ಪಂ ಚ ವಾಸುದೇವಸಹೋದರಾ|

09004019c ಕೃಷ್ಣಾಯಾಃ ಪ್ರೇಷ್ಯವದ್ಭೂತ್ವಾ ಶುಶ್ರೂಷಾಂ ಕುರುತೇ ಸದಾ||

ಮಾನ ಮತ್ತು ದರ್ಪಗಳನ್ನು ಬದಿಗೊತ್ತಿ ವಾಸುದೇವನ ಸಹೋದರಿ ಸುಭದ್ರೆಯು ಕೃಷ್ಣೆಯ ದಾಸಿಯಾಗಿ ಸದಾ ಅವಳ ಶುಶ್ರೂಷೆಯನ್ನು ಮಾಡುತ್ತಿದ್ದಾಳೆ.

09004020a ಇತಿ ಸರ್ವಂ ಸಮುನ್ನದ್ಧಂ ನ ನಿರ್ವಾತಿ ಕಥಂ ಚನ|

09004020c ಅಭಿಮನ್ಯೋರ್ವಿನಾಶೇನ ಸ ಸಂಧೇಯಃ ಕಥಂ ಮಯಾ||

ಹೀಗೆ ಎಲ್ಲ ಪ್ರಕಾರಗಳಿಂದ ವೃದ್ಧಿಯಾಗುತ್ತಿರುವ ವೈರವನ್ನು ಎಂದೂ ನಿವಾರಿಸಲು ಸಾಧ್ಯವಿಲ್ಲ. ಅಭಿಮನ್ಯುವಿನ ವಿನಾಶ ಕಾರಣನಾದ ನನ್ನೊಂದಿಗೆ ಅವರು ಹೇಗೆ ತಾನೇ ಸಂಧಿಮಾಡಿಕೊಂಡಾರು?

09004021a ಕಥಂ ಚ ನಾಮ ಭುಕ್ತ್ವೇಮಾಂ ಪೃಥಿವೀಂ ಸಾಗರಾಂಬರಾಂ|

09004021c ಪಾಂಡವಾನಾಂ ಪ್ರಸಾದೇನ ಭುಂಜೀಯಾಂ ರಾಜ್ಯಮಲ್ಪಕಂ||

ಪಾಂಡವರ ಪ್ರಸಾದವೆಂದೆನಿಸಿಕೊಳ್ಳುವ ಸಾಗರವೇ ವಸ್ತ್ರಪ್ರಾಯವಾಗಿರುವ ಈ ಇಡೀ ಭೂಮಿಯನ್ನು ನಾನು ಅಲ್ಪಕ ರಾಜನಂತೆ ಹೇಗೆ ತಾನೇ ಭೋಗಿಸಲಿ?

09004022a ಉಪರ್ಯುಪರಿ ರಾಜ್ಞಾಂ ವೈ ಜ್ವಲಿತೋ ಭಾಸ್ಕರೋ ಯಥಾ|

09004022c ಯುಧಿಷ್ಠಿರಂ ಕಥಂ ಪಶ್ಚಾದನುಯಾಸ್ಯಾಮಿ ದಾಸವತ್||

ರಾಜರನ್ನು ಮೆಟ್ಟಿ ಭಾಸ್ಕರನಂತೆ ಪ್ರಜ್ವಲಿಸುತ್ತಿರುವ ನಾನು ಹೇಗೆ ತಾನೇ ಯುಧಿಷ್ಠಿರನ ಹಿಂದೆ ಓರ್ವ ದಾಸನಂತೆ ಹೋಗುತ್ತಿರಬಲ್ಲೆ?

09004023a ಕಥಂ ಭುಕ್ತ್ವಾ ಸ್ವಯಂ ಭೋಗಾನ್ದತ್ತ್ವಾ ದಾಯಾಂಶ್ಚ ಪುಷ್ಕಲಾನ್|

09004023c ಕೃಪಣಂ ವರ್ತಯಿಷ್ಯಾಮಿ ಕೃಪಣೈಃ ಸಹ ಜೀವಿಕಾಂ||

ಸ್ವಯಂ ನಾನು ಭೋಗಗಳನ್ನು ಭೋಗಿಸಿ ಪುಷ್ಕಲ ದಾನಗಳನ್ನು ನೀಡಿ ದೈನ್ಯನಾಗಿ ದೀನತೆಯಿಂದ ಹೇಗೆ ಜೀವಿಸಬಲ್ಲೆ?

09004024a ನಾಭ್ಯಸೂಯಾಮಿ ತೇ ವಾಕ್ಯಮುಕ್ತಂ ಸ್ನಿಗ್ಧಂ ಹಿತಂ ತ್ವಯಾ|

09004024c ನ ತು ಸಂಧಿಮಹಂ ಮನ್ಯೇ ಪ್ರಾಪ್ತಕಾಲಂ ಕಥಂ ಚನ||

ನಿನ್ನ ಸ್ನೇಹಪೂರಕ-ಹಿತಕರ ಮಾತುಗಳನ್ನು ನಾನು ಅಲ್ಲಗಳೆಯುತ್ತಿಲ್ಲ. ಆದರೆ ನನಗೆ ಸಂಧಿಮಾಡಿಕೊಳ್ಳುವ ಕಾಲವೊದಗಿದೆ ಎನ್ನುವುದನ್ನು ಮಾತ್ರ ಸರ್ವಥಾ ಒಪ್ಪಿಕೊಳ್ಳುವುದಿಲ್ಲ.

09004025a ಸುನೀತಮನುಪಶ್ಯಾಮಿ ಸುಯುದ್ಧೇನ ಪರಂತಪ|

09004025c ನಾಯಂ ಕ್ಲೀಬಯಿತುಂ ಕಾಲಃ ಸಮ್ಯೋದ್ಧುಂ ಕಾಲ ಏವ ನಃ||

ಪರಂತಪ! ಉತ್ತಮ ನೀತಿಯನ್ನನುಸರಿಸಿ ಉತ್ತಮವಾಗಿ ಯುದ್ಧಮಾಡಬೇಕೆಂದು ನನಗೆ ತೋರುತ್ತದೆ. ದುರ್ಬಲರಾಗಿರುವ ಕಾಲವಿದಲ್ಲ. ನಾವು ಇನ್ನೂ ಸರಿಯಾಗಿ ಯುದ್ಧಮಾಡುವ ಕಾಲವಿದು.

09004026a ಇಷ್ಟಂ ಮೇ ಬಹುಭಿರ್ಯಜ್ಞೈರ್ದತ್ತಾ ವಿಪ್ರೇಷು ದಕ್ಷಿಣಾಃ|

09004026c ಪ್ರಾಪ್ತಾಃ ಕ್ರಮಶ್ರುತಾ[1] ವೇದಾಃ ಶತ್ರೂಣಾಂ ಮೂರ್ಧ್ನಿ ಚ ಸ್ಥಿತಂ||

ನಾನು ವಿಪ್ರರಿಗೆ ದಕ್ಷಿಣೆಗಳನ್ನಿತ್ತು ಅನೇಕ ಇಷ್ಟಿ-ಯಜ್ಞಗಳನ್ನು ಮಾಡಿದ್ದೇನೆ. ವೇದ-ಶ್ರುತಿಗಳನ್ನು ಕಲಿತುಕೊಂಡಿದ್ದೇನೆ. ಶತ್ರುಗಳ ತಲೆಮೆಟ್ಟಿ ನಿಂತಿದ್ದೇನೆ.

09004027a ಭೃತ್ಯಾ ಮೇ ಸುಭೃತಾಸ್ತಾತ ದೀನಶ್ಚಾಭ್ಯುದ್ಧೃತೋ ಜನಃ|

[2]09004027c ಯಾತಾನಿ[3] ಪರರಾಷ್ಟ್ರಾಣಿ ಸ್ವರಾಷ್ಟ್ರಮನುಪಾಲಿತಂ||

ಅಯ್ಯಾ! ಭೃತ್ಯರ ಪಾಲನೆ-ಪೋಷಣೆಗಳನ್ನು ಮಾಡುತ್ತಿದ್ದೇನೆ. ದೀನ ದಲಿತರನ್ನು ಉದ್ಧರಿಸಿದ್ದೇನೆ. ಪರರಾಷ್ಟ್ರಗಳನ್ನೂ ನನ್ನ ರಾಷ್ಟ್ರಗಳಲ್ಲಿ ಸೇರಿಸಿಕೊಂಡು ಪರಿಪಾಲಿಸುತ್ತಿದ್ದೇನೆ.

09004028a ಭುಕ್ತಾಶ್ಚ ವಿವಿಧಾ ಭೋಗಾಸ್ತ್ರಿವರ್ಗಃ ಸೇವಿತೋ ಮಯಾ|

09004028c ಪಿತೄಣಾಂ ಗತಮಾನೃಣ್ಯಂ ಕ್ಷತ್ರಧರ್ಮಸ್ಯ ಚೋಭಯೋಃ||

ವಿವಿಧ ಭೋಗಗಳನ್ನು ಅನುಭವಿಸಿದ್ದೇನೆ. ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳನ್ನೂ ಸೇವಿಸಿದ್ದೇನೆ. ಕ್ಷತ್ರಿಯ ಧರ್ಮ ಮತ್ತು ಪಿತೃಗಳ ಋಣಗಳೆರಡನ್ನೂ ತೀರಿಸಿದ್ದೇನೆ.

09004029a ನ ಧ್ರುವಂ ಸುಖಮಸ್ತೀಹ ಕುತೋ ರಾಜ್ಯಂ ಕುತೋ ಯಶಃ|

09004029c ಇಹ ಕೀರ್ತಿರ್ವಿಧಾತವ್ಯಾ ಸಾ ಚ ಯುದ್ಧೇನ ನಾನ್ಯಥಾ||

ಸುಖವೇ ಶಾಶ್ವತವಿಲ್ಲದಿರುವಾಗ ರಾಜ್ಯವಾಗಲೀ ಯಶಸ್ಸಾಗಲೀ ಹೇಗೆ ತಾನೇ ಶಾಶ್ವತವಾಗಿರುವವು? ಇಲ್ಲಿ ಕೀರ್ತಿಯನ್ನು ಪಡೆಯಬೇಕೆಂದರೆ ಯುದ್ಧದಿಂದ ಮಾತ್ರವೇ ಹೊರತಾಗಿ ಅನ್ಯ ಕಾರ್ಯಗಳಿಂದಲ್ಲ!

09004030a ಗೃಹೇ ಯತ್ ಕ್ಷತ್ರಿಯಸ್ಯಾಪಿ ನಿಧನಂ ತದ್ವಿಗರ್ಹಿತಂ|

09004030c ಅಧರ್ಮಃ ಸುಮಹಾನೇಷ ಯಚ್ಚಯ್ಯಾಮರಣಂ ಗೃಹೇ||

ಮನೆಯಲ್ಲಿ ನಿಧನಹೊಂದಿದ ಕ್ಷತ್ರಿಯನು ಅತಿನಿಂದನೀಯನು. ಅದರನ್ನೂ ಮನೆಯಲ್ಲಿ ಹಾಸಿಗೆಯ ಮೇಲೆ ಮರಣಹೊಂದಿದರೆ ಮಹಾ ಅಧರ್ಮವೆನಿಸಿಕೊಳ್ಳುತ್ತದೆ.

09004031a ಅರಣ್ಯೇ ಯೋ ವಿಮುಂಚೇತ ಸಂಗ್ರಾಮೇ ವಾ ತನುಂ ನರ|

09004031c ಕ್ರತೂನಾಹೃತ್ಯ ಮಹತೋ ಮಹಿಮಾನಂ ಸ ಗಚ್ಚತಿ||

ಮಹಾ ಕ್ರತುಗಳನ್ನು ಮಾಡಿ ಅರಣ್ಯದಲ್ಲಿ ಅಥವಾ ಸಂಗ್ರಾಮದಲ್ಲಿ ಶರೀರತ್ಯಾಗ ಮಾಡುವ ಕ್ಷತ್ರಿಯನು ಮಹಾ ಮಹಿಮೆಯನ್ನು ಪಡೆಯುತ್ತಾನೆ.

09004032a ಕೃಪಣಂ ವಿಲಪನ್ನಾರ್ತೋ ಜರಯಾಭಿಪರಿಪ್ಲುತಃ|

09004032c ಮ್ರಿಯತೇ ರುದತಾಂ ಮಧ್ಯೇ ಜ್ಞಾತೀನಾಂ ನ ಸ ಪೂರುಷಃ||

ಮುಪ್ಪಿನಿಂದ ಶಿಥಿಲಹೊಂದಿದ ಶರೀರವುಳ್ಳವನಾಗಿ ರೋಗಪೀಡಿತನಾಗಿ ಆರ್ತನಾಗಿ ವಿಲಪಿಸುತ್ತಾ ಗೋಳಾಡುತ್ತಾ ಜ್ಞಾತಿಗಳ ಮಧ್ಯದಲ್ಲಿ ಮರಣಹೊಂದುವವನು ಖಂಡಿತವಾಗಿಯೂ ಪುರುಷನೇ ಅಲ್ಲ!

09004033a ತ್ಯಕ್ತ್ವಾ ತು ವಿವಿಧಾನ್ಭೋಗಾನ್ಪ್ರಾಪ್ತಾನಾಂ ಪರಮಾಂ ಗತಿಂ|

09004033c ಅಪೀದಾನೀಂ ಸುಯುದ್ಧೇನ ಗಚ್ಚೇಯಂ ಸತ್ಸಲೋಕತಾಂ||

ವಿವಿಧ ಭೋಗಗಳನ್ನು ಪರಿತ್ಯಜಿಸಿದವರಿಗೆ ಯಾವ ಪರಮ ಗತಿಯು ದೊರಕುವುದೋ ಆ ಉತ್ತಮ ಲೋಕಗಳಿಗೆ ನಾನು ಇದೋ ಈ ಉತ್ತಮ ಯುದ್ಧದಿಂದ ಹೋಗುತ್ತೇನೆ!

09004034a ಶೂರಾಣಾಮಾರ್ಯವೃತ್ತಾನಾಂ ಸಂಗ್ರಾಮೇಷ್ವನಿವರ್ತಿನಾಂ|

09004034c ಧೀಮತಾಂ ಸತ್ಯಸಂಧಾನಾಂ ಸರ್ವೇಷಾಂ ಕ್ರತುಯಾಜಿನಾಂ||

09004035a ಶಸ್ತ್ರಾವಭೃಥಮಾಪ್ತಾನಾಂ ಧ್ರುವಂ ವಾಸಸ್ತ್ರಿವಿಷ್ಟಪೇ|

ಶೂರರಿಗೆ, ಉತ್ತಮ ನಡತೆಯುಳ್ಳವರಿಗೆ, ಸಂಗ್ರಾಮದಿಂದ ಹಿಂದಿರುಗದವರಿಗೆ, ಧೀಮತ ಸತ್ಯಸಂಧರಿಗೆ, ಕ್ರತು-ಯಜ್ಞಗಳನ್ನು ನಡೆಸಿದವರಿಗೆ, ಶಸ್ತ್ರಗಳಿಂದ ಅವಭೃತಸ್ನಾನ ಮಾಡಿ ಪೂತರಾದವರಿಗೆ ಇವರೆಲ್ಲರಿಗೂ ಸ್ವರ್ಗವಾಸವು ನಿಶ್ಚಿತವಾಗಿದೆ.

09004035c ಮುದಾ ನೂನಂ ಪ್ರಪಶ್ಯಂತಿ ಶುಭ್ರಾ ಹ್ಯಪ್ಸರಸಾಂ ಗಣಾಃ||

09004036a ಪಶ್ಯಂತಿ ನೂನಂ ಪಿತರಃ ಪೂಜಿತಾನ್ಶಕ್ರಸಂಸದಿ|

09004036c ಅಪ್ಸರೋಭಿಃ ಪರಿವೃತಾನ್ಮೋದಮಾನಾಂಸ್ತ್ರಿವಿಷ್ಟಪೇ||

ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿದವರನ್ನು ಅಪ್ಸರೆಯರು ಪರಮ ಸಂತೋಷದಿಂದ ಸ್ವಾಗತಿಸುತ್ತಾರೆ. ಶಕ್ರಸಭೆಯಲ್ಲಿ ಅಪ್ಸರೆಯರಿಂದ ಪರಿವೃತರಾಗಿ ಸ್ವರ್ಗದಲ್ಲಿ ಗೌರವಿಸಲ್ಪಡುವವರನ್ನು ಪಿತೃಗಳು ಕೂಡ ನೋಡಿ ಸಂತೋಷಪಡುತ್ತಾರೆ.

09004037a ಪಂಥಾನಮಮರೈರ್ಯಾತಂ ಶೂರೈಶ್ಚೈವಾನಿವರ್ತಿಭಿಃ|

09004037c ಅಪಿ ತೈಃ ಸಂಗತಂ ಮಾರ್ಗಂ ವಯಮಪ್ಯಾರುಹೇಮಹಿ||

09004038a ಪಿತಾಮಹೇನ ವೃದ್ಧೇನ ತಥಾಚಾರ್ಯೇಣ ಧೀಮತಾ|

09004038c ಜಯದ್ರಥೇನ ಕರ್ಣೇನ ತಥಾ ದುಃಶಾಸನೇನ ಚ||

ಯುದ್ಧದಿಂದ ಹಿಂದಿರುಗದ ಶೂರರು ಹೋಗುವ ದಾರಿಯಲ್ಲಿಯೇ ಹೋದರೆ ನಾವೂ ಕೂಡ ವೃದ್ಧ ಪಿತಾಮಹ ಭೀಷ್ಮ, ಧೀಮಂತ ಆಚಾರ್ಯ, ಜಯದ್ರಥ, ಕರ್ಣ ಮತ್ತು ದುಃಶಾಸನರು ಹೋಗಿರುವ ಪುಣ್ಯ ಲೋಕಗಳಿಗೆ ಹೋಗುತ್ತೇವೆ.

09004039a ಘಟಮಾನಾ ಮದರ್ಥೇಽಸ್ಮಿನ್ ಹತಾಃ ಶೂರಾ ಜನಾಧಿಪಾಃ|

09004039c ಶೇರತೇ ಲೋಹಿತಾಕ್ತಾಂಗಾಃ ಪೃಥಿವ್ಯಾಂ ಶರವಿಕ್ಷತಾಃ||

ನನಗಾಗಿ ಸಂಘಟಿತರಾಗಿ ಬಂದಿರುವ ಶೂರ ಜನಾಧಿಪರು ಬಾಣಗಳಿಂದ ಗಾಯಗೊಂಡು ಅಂಗಗಳು ರಕ್ತದಿಂದ ತೋಯ್ದುಹೋಗಿ ರಣಭೂಮಿಯ ಮೇಲೆ ಮಲಗಿದ್ದಾರೆ.

09004040a ಉತ್ತಮಾಸ್ತ್ರವಿದಃ ಶೂರಾ ಯಥೋಕ್ತಕ್ರತುಯಾಜಿನಃ|

09004040c ತ್ಯಕ್ತ್ವಾ ಪ್ರಾಣಾನ್ಯಥಾನ್ಯಾಯಮಿಂದ್ರಸದ್ಮಸು ಧಿಷ್ಠಿತಾಃ||

ಉತ್ತಮಾಸ್ತ್ರಗಳನ್ನು ತಿಳಿದಿದ್ದ ಶೂರರು ಯಥೋಕ್ತವಾಗಿ ಕ್ರತುಗಳನ್ನು ಯಾಜಿಸಿ ಯಥಾನ್ಯಾಯವಾಗಿ ಪ್ರಾಣಗಳನ್ನು ತೊರೆದು ಇಂದ್ರಲೋಕದಲ್ಲಿ ಆಶ್ರಯಪಡೆದಿದ್ದಾರೆ.

09004041a ತೈಸ್ತ್ವಯಂ ರಚಿತಃ ಪಂಥಾ ದುರ್ಗಮೋ ಹಿ ಪುನರ್ಭವೇತ್|

09004041c ಸಂಪತದ್ಭಿರ್ಮಹಾವೇಗೈರಿತೋ ಯಾದ್ಭಿಶ್ಚ ಸದ್ಗತಿಂ||

ಮಹಾರಭಸದಿಂದ ನಡೆಯುತ್ತಿರುವ ಈ ಯುದ್ಧದಲ್ಲಿ ಮಡಿದು ಸದ್ಗತಿಯನ್ನು ಪಡೆದಿರುವವರು ನಿರ್ಮಿಸಿದ ಈ ಮಾರ್ಗವು ಸುಗಮವಾಗಿದೆ. ಇಂತಹ ಮಾರ್ಗವು ಪುನಃ ದೊರೆಯದೇ ಇರಬಹುದು.

09004042a ಯೇ ಮದರ್ಥೇ ಹತಾಃ ಶೂರಾಸ್ತೇಷಾಂ ಕೃತಮನುಸ್ಮರನ್|

09004042c ಋಣಂ ತತ್ಪ್ರತಿಮುಂಚಾನೋ ನ ರಾಜ್ಯೇ ಮನ ಆದಧೇ||

ನನಗೋಸ್ಕರವಾಗಿ ಹತರಾಗಿರುವವರ ಕರ್ಮಗಳನ್ನು ಸ್ಮರಿಸುತ್ತಾ ಅವರ ಋಣದಿಂದ ಮುಕ್ತನಾಗಲು ಪ್ರಯತ್ನಿಸುತ್ತಿರುವ ನನಗೆ ರಾಜ್ಯದಲ್ಲಿ ಮನಸ್ಸಿಲ್ಲ.

09004043a ಪಾತಯಿತ್ವಾ[4] ವಯಸ್ಯಾಂಶ್ಚ ಭ್ರಾತೄನಥ ಪಿತಾಮಹಾನ್|

09004043c ಜೀವಿತಂ ಯದಿ ರಕ್ಷೇಯಂ ಲೋಕೋ ಮಾಂ ಗರ್ಹಯೇದ್ಧ್ರುವಂ||

ಸ್ನೇಹಿತರನ್ನೂ, ಸಹೋದರರನ್ನೂ, ಪಿತಾಮಹರನ್ನೂ ಸಾಯಗೊಟ್ಟು ಈ ಜೀವವನ್ನು ರಕ್ಷಿಸಿಕೊಂಡರೆ ಲೋಕವು ನನ್ನನ್ನು ನಿಶ್ಚಯವಾಗಿಯೂ ನಿಂದಿಸುತ್ತದೆ.

09004044a ಕೀದೃಶಂ ಚ ಭವೇದ್ರಾಜ್ಯಂ ಮಮ ಹೀನಸ್ಯ ಬಂಧುಭಿಃ|

09004044c ಸಖಿಭಿಶ್ಚ ಸುಹೃದ್ಭಿಶ್ಚ ಪ್ರಣಿಪತ್ಯ ಚ ಪಾಂಡವಂ||

ಬಂಧು-ಸ್ನೇಹಿತ-ಸುಹೃದಯರಿಂದ ವಿಹೀನನಾಗಿ ಪಾಂಡವನಿಗೆ ಶರಣಾಗತನಾಗಿ ಪಡೆಯುವ ರಾಜ್ಯದ ರಾಜ್ಯಭಾರವಾದರೂ ಹೇಗಿರಬಹುದು?

09004045a ಸೋಽಹಮೇತಾದೃಶಂ ಕೃತ್ವಾ ಜಗತೋಽಸ್ಯ ಪರಾಭವಂ|

09004045c ಸುಯುದ್ಧೇನ ತತಃ ಸ್ವರ್ಗಂ ಪ್ರಾಪ್ಸ್ಯಾಮಿ ನ ತದನ್ಯಥಾ||

ಜಗತ್ತನ್ನೇ ಪರಾಭವಗೊಳಿಸಿದಂತಹ ಕಾರ್ಯಗಳನ್ನು ಮಾಡಿ ಈಗ ಉತ್ತಮ ಯುದ್ಧದಿಂದ ಸ್ವರ್ಗವನ್ನು ಪಡೆಯುತ್ತೇನೆ. ಅನ್ಯಥಾ ಇಲ್ಲ!”

09004046a ಏವಂ ದುರ್ಯೋಧನೇನೋಕ್ತಂ ಸರ್ವೇ ಸಂಪೂಜ್ಯ ತದ್ವಚಃ|

09004046c ಸಾಧು ಸಾಧ್ವಿತಿ ರಾಜಾನಂ ಕ್ಷತ್ರಿಯಾಃ ಸಂಬಭಾಷಿರೇ||

ದುರ್ಯೋಧನನಾಡಿದ ಆ ಮಾತನ್ನು ಸರ್ವರೂ ಗೌರವಿಸಿದರು. ಕ್ಷತ್ರಿಯ ರಾಜರು “ಸಾಧು! ಸಾಧು!” ಎಂದು ಮಾತನಾಡಿಕೊಂಡರು.

09004047a ಪರಾಜಯಮಶೋಚಂತಃ ಕೃತಚಿತ್ತಾಶ್ಚ ವಿಕ್ರಮೇ|

09004047c ಸರ್ವೇ ಸುನಿಶ್ಚಿತಾ ಯೋದ್ಧುಮುದಗ್ರಮನಸೋಽಭವನ್||

ತಮ್ಮ ಪರಾಜಯದ ಕುರಿತು ಶೋಕಿಸುವುದನ್ನು ನಿಲ್ಲಿಸಿ ಪರಾಕ್ರಮವನ್ನು ತೋರಿಸುವುದರಲ್ಲಿಯೇ ದೃಢಚಿತ್ತರಾಗಿ ಯುದ್ಧಮಾಡಲು ನಿಶ್ಚಯಿಸಿ ಮುದಿತ ಮನಸ್ಕರಾದರು.

09004048a ತತೋ ವಾಹಾನ್ಸಮಾಶ್ವಾಸ್ಯ ಸರ್ವೇ ಯುದ್ಧಾಭಿನಂದಿನಃ|

09004048c ಊನೇ ದ್ವಿಯೋಜನೇ ಗತ್ವಾ ಪ್ರತ್ಯತಿಷ್ಠಂತ ಕೌರವಾಃ||

ಅನಂತರ ವಾಹನಗಳನ್ನು ಸಂತಯಿಸಿ, ಯುದ್ಧಾಭಿನಂದಿನ ಕೌರವರೆಲ್ಲರೂ ಅಲ್ಲಿಂದ ಎರಡು ಯೋಜನ ದೂರಕ್ಕೆ ಹೋಗಿ ನಿಂತುಕೊಂಡರು.

09004049a ಆಕಾಶೇ ವಿದ್ರುಮೇ ಪುಣ್ಯೇ ಪ್ರಸ್ಥೇ ಹಿಮವತಃ ಶುಭೇ|

09004049c ಅರುಣಾಂ ಸರಸ್ವತೀಂ ಪ್ರಾಪ್ಯ ಪಪುಃ ಸಸ್ನುಶ್ಚ ತಜ್ಜಲಂ||

ಆಕಾಶದಲ್ಲಿರುವಂತೆ ತೋರುತ್ತಿದ್ದ, ವೃಕ್ಷಭರಿತ ಪುಣ್ಯ ಹಿಮವತ್ಪರ್ವತ ತಪ್ಪಲಿನಲ್ಲಿ ಹರಿಯುತ್ತಿದ್ದ ಎಣೆಗೆಂಪಿನ ಸರಸ್ವತೀ ನದಿಗೆ ಹೋಗಿ ಆ ನೀರನ್ನು ಕುಡಿದರು ಮತ್ತು ಅಲ್ಲಿ ಸ್ನಾನಮಾಡಿದರು.

09004050a ತವ ಪುತ್ರಾಃ ಕೃತೋತ್ಸಾಹಾಃ ಪರ್ಯವರ್ತಂತ ತೇ ತತಃ|

09004050c ಪರ್ಯವಸ್ಥಾಪ್ಯ ಚಾತ್ಮಾನಮನ್ಯೋನ್ಯೇನ ಪುನಸ್ತದಾ||

09004050e ಸರ್ವೇ ರಾಜನ್ನ್ಯವರ್ತಂತ ಕ್ಷತ್ರಿಯಾಃ ಕಾಲಚೋದಿತಾಃ||

ರಾಜನ್! ಕಾಲಚೋದಿತ ಸರ್ವ ಕ್ಷತ್ರಿಯರೂ ನಿನ್ನ ಮಗನಿಂದ ಪ್ರೋತ್ಸಾಹಿತರಾಗಿ ಅನ್ಯೋನ್ಯರೊಂದಿಗೆ ಸಂಭಾಷಣೆಗೈಯುತ್ತಾ ತಮ್ಮ ಮನಸ್ಸನ್ನು ಯುದ್ಧದಲ್ಲಿಯೇ ಸ್ಥಿರಗೊಳಿಸಿ ಪುನಃ ಯುದ್ಧಭೂಮಿಗೆ ಹಿಂದಿರುಗಿದರು.”

 

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ದುರ್ಯೋಧನವಾಕ್ಯೇ ಚತುರ್ಥೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ದುರ್ಯೋಧನವಾಕ್ಯ ಎನ್ನುವ ನಾಲ್ಕನೇ ಅಧ್ಯಾಯವು.

[1] ಕಾಮಾಃ ಶೃತಾಃ ಎಂಬ ಪಾಠಾಂತರವಿದೆ (ನೀಲಕಂಠ).

[2] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ನೋತ್ಸಹೇಽದ್ಯ ದ್ವಿಜಶ್ರೇಷ್ಠ ಪಾಂಡವಾನಾಂ ವಕ್ತುಮೀದೃಶಮ್|

[3] ಜಿತಾನಿ ಎಂಬ ಪಾಠಾಂತರವಿದೆ (ನೀಲಕಂಠ).

[4] ಘಾತಯಿತ್ವಾ ಎಂಬ ಪಾಠಾಂತರವಿದೆ (ನೀಲಕಂಠ).

Comments are closed.