Shalya Parva: Chapter 3

ಶಲ್ಯಪರ್ವ: ಶಲ್ಯವಧ ಪರ್ವ

09003001 ಸಂಜಯ ಉವಾಚ

09003001a ಶೃಣು ರಾಜನ್ನವಹಿತೋ ಯಥಾ ವೃತ್ತೋ ಮಹಾನ್ ಕ್ಷಯಃ|

09003001c ಕುರೂಣಾಂ ಪಾಂಡವಾನಾಂ ಚ ಸಮಾಸಾದ್ಯ ಪರಸ್ಪರಂ||

ಸಂಜಯನು ಹೇಳಿದನು: “ರಾಜನ್! ಕುರು-ಪಾಂಡವರು ಪರಸ್ಪರರನ್ನು ಎದುರಿಸಿದಾಗ ಆ ಮಹಾಕ್ಷಯವು ಹೇಗೆ ನಡೆಯಿತು ಎನ್ನುವುದನ್ನು ಏಕಾಗ್ರತೆಯಿಂದ ಕೇಳು!

09003002a ನಿಹತೇ ಸೂತಪುತ್ರೇ ತು ಪಾಂಡವೇನ ಮಹಾತ್ಮನಾ|

09003002c ವಿದ್ರುತೇಷು ಚ ಸೈನ್ಯೇಷು ಸಮಾನೀತೇಷು ಚಾಸಕೃತ್||

ಮಹಾತ್ಮ ಪಾಂಡವನಿಂದ ಸೂತಪುತ್ರನು ಹತನಾಗಲು, ಒಂದುಗೂಡಿಸಲು ಪ್ರಯತ್ನಿಸಿದರೂ, ಸೇನೆಗಳು ಓಡಿಹೋದವು.

[1]09003003a ವಿಮುಖೇ ತವ ಪುತ್ರೇ ತು ಶೋಕೋಪಹತಚೇತಸಿ|

09003003c ಭೃಶೋದ್ವಿಗ್ನೇಷು ಸೈನ್ಯೇಷು ದೃಷ್ಟ್ವಾ ಪಾರ್ಥಸ್ಯ ವಿಕ್ರಮಂ||

ಶೋಕದಿಂದ ಚೇತನವನ್ನೇ ಕಳೆದುಕೊಂಡ ನಿನ್ನ ಮಗನು ವಿಮುಖನಾಗಿದ್ದನು ಮತ್ತು ಪಾರ್ಥನ ವಿಕ್ರಮವನ್ನು ನೋಡಿ ಸೇನೆಗಳಲ್ಲಿ ತುಂಬಾ ಭಯ-ಉದ್ವೇಗಗಳುಂಟಾಗಿದ್ದವು.

09003004a ಧ್ಯಾಯಮಾನೇಷು ಸೈನ್ಯೇಷು ದುಃಖಂ ಪ್ರಾಪ್ತೇಷು ಭಾರತ|

09003004c ಬಲಾನಾಂ ಮಥ್ಯಮಾನಾನಾಂ ಶ್ರುತ್ವಾ ನಿನದಮುತ್ತಮಂ||

09003005a ಅಭಿಜ್ಞಾನಂ ನರೇಂದ್ರಾಣಾಂ ವಿಕೃತಂ ಪ್ರೇಕ್ಷ್ಯ ಸಮ್ಯುಗೇ|

09003005c ಪತಿತಾನ್ರಥನೀಡಾಂಶ್ಚ ರಥಾಂಶ್ಚಾಪಿ ಮಹಾತ್ಮನಾಂ||

09003006a ರಣೇ ವಿನಿಹತಾನ್ನಾಗಾನ್ದೃಷ್ಟ್ವಾ ಪತ್ತೀಂಶ್ಚ ಮಾರಿಷ|

09003006c ಆಯೋಧನಂ ಚಾತಿಘೋರಂ ರುದ್ರಸ್ಯಾಕ್ರೀಡಸಂನಿಭಂ||

09003007a ಅಪ್ರಖ್ಯಾತಿಂ ಗತಾನಾಂ ತು ರಾಜ್ಞಾಂ ಶತಸಹಸ್ರಶಃ|

09003007c ಕೃಪಾವಿಷ್ಟಃ ಕೃಪೋ ರಾಜನ್ವಯಃಶೀಲಸಮನ್ವಿತಃ||

09003008a ಅಬ್ರವೀತ್ತತ್ರ ತೇಜಸ್ವೀ ಸೋಽಭಿಸೃತ್ಯ ಜನಾಧಿಪಂ|

09003008c ದುರ್ಯೋಧನಂ ಮನ್ಯುವಶಾದ್ವಚನಂ ವಚನಕ್ಷಮಃ||

ರಾಜನ್! ಭಾರತ! ದುಃಖವನ್ನು ಪಡೆದು ಚಿಂತಿಸುತ್ತಿರುವ ಸೇನೆಯನ್ನು ನೋಡಿ, ಸೇನೆಯನ್ನು ಸದೆಬಡಿಯುತ್ತಿರುವವರ ಸಿಂಹನಾದಗಳನ್ನು ಕೇಳಿ, ಯುದ್ಧಭೂಮಿಯಲ್ಲಿ ನರೇಂದ್ರರ ಧ್ವಜಗಳು ಛಿನ್ನವಿಚ್ಛಿನ್ನವಾದುದನ್ನು ನೋಡಿ, ಮಹಾತ್ಮರ ರಥನೀಡಗಳೂ ರಥಗಳೂ ಬಿದ್ದಿರುವುದನ್ನು ನೋಡಿ, ರಣದಲ್ಲಿ ಹತರಾಗಿ ಬಿದ್ದಿದ್ದ ಆನೆಗಳನ್ನೂ ಪದಾತಿಗಳನ್ನೂ ನೋಡಿ, ರುದ್ರನ ಆಟದ ಮೈದಾನವಾದ ಸ್ಮಶಾನದಂತೆ ಕಾಣುತ್ತಿದ್ದ ಆ ರಣಭೂಮಿಯನ್ನು ನೋಡಿ, ಲಕ್ಷಗಟ್ಟಲೆ ರಾಜರುಗಳು ನಿರ್ನಾಮವಾದುದನ್ನು ನೋಡಿ, ಕೃಪಾವಿಷ್ಟನಾದ, ವಯಸ್ಸಿಗೆ ತಕ್ಕಂತಹ ನಡತೆಗಳನ್ನುಳ್ಳ, ಮಾತನಾಡುವುದರಲ್ಲಿ ಚತುರನಾಗಿದ್ದ ತೇಜಸ್ವಿ ಕೃಪನು ಜನಾಧಿಪ ದುರ್ಯೋಧನನ ಬಳಿಸಾರಿ ದೈನ್ಯದಿಂದ ಈ ಮಾತುಗಳನ್ನಾಡಿದನು:

09003009a ದುರ್ಯೋಧನ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಕೌರವ|

09003009c ಶ್ರುತ್ವಾ ಕುರು ಮಹಾರಾಜ ಯದಿ ತೇ ರೋಚತೇಽನಘ||

“ದುರ್ಯೋಧನ! ಕೌರವ! ನಾನು ಹೇಳುವುದನ್ನು ಕೇಳು! ಮಹಾರಾಜ! ಅನಘ! ಅದನ್ನು ಕೇಳಿ ನಿನಗೆ ಯಾವುದು ಸೂಕ್ತವೆಂದು ತೋರುವುದೋ ಅದರಂತೆಯೇ ಮಾಡು!

09003010a ನ ಯುದ್ಧಧರ್ಮಾಚ್ಚ್ರೇಯಾನ್ವೈ ಪಂಥಾ ರಾಜೇಂದ್ರ ವಿದ್ಯತೇ|

09003010c ಯಂ ಸಮಾಶ್ರಿತ್ಯ ಯುಧ್ಯಂತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ||

ಕ್ಷತ್ರಿಯರ್ಷಭ! ರಾಜೇಂದ್ರ! ಯುದ್ಧಧರ್ಮವನ್ನಾಶ್ರಯಿಸಿ ಯುದ್ಧಮಾಡುವುದಕ್ಕಿಂತ ಶ್ರೇಯಸ್ಕರವಾದ ಇನ್ನೊಂದು ಮಾರ್ಗವು ಕ್ಷತ್ರಿಯರಿಗಿಲ್ಲ!

09003011a ಪುತ್ರೋ ಭ್ರಾತಾ ಪಿತಾ ಚೈವ ಸ್ವಸ್ರೇಯೋ ಮಾತುಲಸ್ತಥಾ|

09003011c ಸಂಬಂಧಿಬಾಂಧವಾಶ್ಚೈವ ಯೋಧ್ಯಾ ವೈ ಕ್ಷತ್ರಜೀವಿನಾ||

ಕ್ಷತ್ರಿಯನಾಗಿ ಜೀವಿಸುವವನಿಗೆ ಪುತ್ರ, ಭ್ರಾತಾ, ಪಿತ, ಸೋದರಳಿಯ, ಸೋದರ ಮಾವ, ಮತ್ತು ಇತರ ಬಂಧು-ಬಾಂಧವರೊಡನೆ ಯುದ್ಧಮಾಡುವುದು ಅನಿವಾರ್ಯವಾಗುತ್ತದೆ.

09003012a ವಧೇ ಚೈವ ಪರೋ ಧರ್ಮಸ್ತಥಾಧರ್ಮಃ ಪಲಾಯನೇ|

09003012c ತೇ ಸ್ಮ ಘೋರಾಂ ಸಮಾಪನ್ನಾ ಜೀವಿಕಾಂ ಜೀವಿತಾರ್ಥಿನಃ||

ಯುದ್ಧದಲ್ಲಿ ಶತ್ರುಗಳನ್ನು ವಧಿಸುವುದು ಅಥವಾ ಅವರಿಂದ ವಧಿಸಲ್ಪಡುವುದು ಪರಮ ಧರ್ಮವೆನಿಸಿಕೊಳ್ಳುತ್ತದೆ. ಪಲಾಯನಮಾಡುವುದು ಅಧರ್ಮ. ಕ್ಷತ್ರಿಯನಾಗಿ ಜೀವಿಸುವವನು ಈ ರೀತಿಯ ಘೋರ ಜೀವನಶೈಲಿಯನ್ನು ಪಾಲಿಸುತ್ತಾನೆ.

09003013a ತತ್ರ ತ್ವಾಂ ಪ್ರತಿವಕ್ಷ್ಯಾಮಿ ಕಿಂ ಚಿದೇವ ಹಿತಂ ವಚಃ|

09003013c ಹತೇ ಭೀಷ್ಮೇ ಚ ದ್ರೋಣೇ ಚ ಕರ್ಣೇ ಚೈವ ಮಹಾರಥೇ||

09003014a ಜಯದ್ರಥೇ ಚ ನಿಹತೇ ತವ ಭ್ರಾತೃಷು ಚಾನಘ|

09003014c ಲಕ್ಷ್ಮಣೇ ತವ ಪುತ್ರೇ ಚ ಕಿಂ ಶೇಷಂ ಪರ್ಯುಪಾಸ್ಮಹೇ||

ಅದಕ್ಕೆ ಸಂಬಂಧಿಸಿದಂತೆ ನಿನಗೆ ಒಂದಿಷ್ಟು ಹಿತವಚನವನ್ನು ಹೇಳುತ್ತೇನೆ. ಅನಘ! ಮಹಾರಥರಾದ ಭೀಷ್ಮ, ದ್ರೋಣ, ಕರ್ಣ, ಜಯದ್ರಥ, ನಿನ್ನ ಸಹೋದರರು ಮತ್ತು ನಿನ್ನ ಮಗ ಲಕ್ಷ್ಮಣರು ಹತರಾಗಿರಲು ನಾವು ಬೇರೆ ಯಾರನ್ನು ಆಶ್ರಯಿಸೋಣ?

09003015a ಯೇಷು ಭಾರಂ ಸಮಾಸಜ್ಯ ರಾಜ್ಯೇ ಮತಿಮಕುರ್ಮಹಿ|

09003015c ತೇ ಸಂತ್ಯಜ್ಯ ತನೂರ್ಯಾತಾಃ ಶೂರಾ ಬ್ರಹ್ಮವಿದಾಂ ಗತಿಂ||

ನಾವು ಯಾರ ಯಾರ ಮೇಲೆ ಭಾರವನ್ನು ಹೊರಿಸಿ ಈ ರಾಜ್ಯದ ಆಸೆಯನ್ನಿಟ್ಟುಕೊಂಡಿದ್ದೆವೋ ಆ ಶೂರರೆಲ್ಲರೂ ತಮ್ಮ ದೇಹಗಳನ್ನು ತ್ಯಾಗಮಾಡಿ ಬ್ರಹ್ಮವಿದರ ಗತಿಯನ್ನು ಹೊಂದಿದರು.

09003016a ವಯಂ ತ್ವಿಹ ವಿನಾಭೂತಾ ಗುಣವದ್ಭಿರ್ಮಹಾರಥೈಃ|

09003016c ಕೃಪಣಂ ವರ್ತಯಿಷ್ಯಾಮ ಪಾತಯಿತ್ವಾ ನೃಪಾನ್ಬಹೂನ್||

ಗುಣವತ್ತರಾದ ಮಹಾರಥರಿಂದ ಈಗ ನಾವು ವಿಹೀನರಾಗಿದ್ದೇವೆ. ಅನೇಕ ನೃಪರನ್ನು ಬಲಿಗೊಟ್ಟು ನಾವೀಗ ಶೋಕಸ್ಥಿತಿಯಲ್ಲಿದ್ದೇವೆ.

09003017a ಸರ್ವೈರಪಿ ಚ ಜೀವದ್ಭಿರ್ಬೀಭತ್ಸುರಪರಾಜಿತಃ|

09003017c ಕೃಷ್ಣನೇತ್ರೋ ಮಹಾಬಾಹುರ್ದೇವೈರಪಿ ದುರಾಸದಃ||

ಅವರೆಲ್ಲರೂ ಜೀವಿತರಾಗಿದ್ದು ಒಟ್ಟಾಗಿ ಸೆಣೆಸಿದ್ದರೂ ಬೀಭತ್ಸುವನ್ನು ಸೋಲಿಸಲಾಗುತ್ತಿರಲಿಲ್ಲ. ಕೃಷ್ಣನನ್ನೇ ಕಣ್ಣಾಗುಳ್ಳ ಆ ಮಹಾಬಾಹುವು ದೇವತೆಗಳಿಗೂ ಕಷ್ಟಸಾಧ್ಯನು.

09003018a ಇಂದ್ರಕಾರ್ಮುಕವಜ್ರಾಭಮಿಂದ್ರಕೇತುಮಿವೋಚ್ಚ್ರಿತಂ|

09003018c ವಾನರಂ ಕೇತುಮಾಸಾದ್ಯ ಸಂಚಚಾಲ ಮಹಾಚಮೂಃ||

ಇಂದ್ರಧನುಸ್ಸಿನಂತೆ ಹೊಳೆಯುತ್ತಿರುವ, ಇಂದ್ರಧ್ವಜದಂತೆ ಎತ್ತರವಾಗಿರುವ ವಾನರಧ್ವಜವನ್ನು ಎದುರಿಸಿ ಮಹಾಸೇನೆಯು ನಡುಗಿದೆ.

09003019a ಸಿಂಹನಾದೇನ ಭೀಮಸ್ಯ ಪಾಂಚಜನ್ಯಸ್ವನೇನ ಚ|

09003019c ಗಾಂಡೀವಸ್ಯ ಚ ನಿರ್ಘೋಷಾತ್ಸಂಹೃಷ್ಯಂತಿ ಮನಾಂಸಿ ನಃ||

ಭೀಮನ ಸಿಂಹನಾದ, ಪಾಂಚಜನ್ಯದ ಧ್ವನಿ ಮತ್ತು ಗಾಂಡೀವದ ನಿರ್ಘೋಷದಿಂದ ನಮ್ಮವರ ಮನಸ್ಸುಗಳು ಮೋಹಗೊಳ್ಳುತ್ತಿವೆ.

09003020a ಚರಂತೀವ ಮಹಾವಿದ್ಯುನ್ಮುಷ್ಣಂತಿ ನಯನಪ್ರಭಾಂ|

09003020c ಅಲಾತಮಿವ ಚಾವಿದ್ಧಂ ಗಾಂಡೀವಂ ಸಮದೃಶ್ಯತ||

ಕಣ್ಣಿನ ಪ್ರಭೆಯನ್ನು ಅಪಹರಿಸಿ ತಿರುಗುತ್ತಿರುವ ಮಹಾ ಮಿಂಚಿನಂತೆ ಮತ್ತು ಕೊಳ್ಳಿಯ ಚಕ್ರದಂತೆ ಅರ್ಜುನನ ಗಾಂಡೀವವು ಕಾಣುತ್ತಿದೆ.

09003021a ಜಾಂಬೂನದವಿಚಿತ್ರಂ ಚ ಧೂಯಮಾನಂ ಮಹದ್ಧನುಃ|

09003021c ದೃಶ್ಯತೇ ದಿಕ್ಷು ಸರ್ವಾಸು ವಿದ್ಯುದಭ್ರಘನೇಷ್ವಿವ||

ಸೆಳೆಯಲ್ಪಡುತ್ತಿರುವ ಆ ಚಿನ್ನ-ಚಿತ್ರಿತ ಮಹಾ ಧನುಸ್ಸು ಮೋಡಗಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮಿಂಚಿನಂತೆ ಸರ್ವ ದಿಕ್ಕುಗಳಲ್ಲಿ ಕಾಣಿಸುತ್ತಿದೆ.

[2]09003022a ಉಹ್ಯಮಾನಶ್ಚ ಕೃಷ್ಣೇನ ವಾಯುನೇವ ಬಲಾಹಕಃ|

[3]09003022c ತಾವಕಂ ತದ್ಬಲಂ ರಾಜನ್ನರ್ಜುನೋಽಸ್ತ್ರವಿದಾಂ ವರಃ||

09003022e ಗಹನಂ ಶಿಶಿರೇ ಕಕ್ಷಂ ದದಾಹಾಗ್ನಿರಿವೋತ್ಥಿತಃ||

ರಾಜನ್! ಕೃಷ್ಣನಿಂದ ನಡೆಸಲ್ಪಡುತ್ತಿರುವ ವಾಯುವಿನಂತೆಯೇ ಅತಿವೇಗವುಳ್ಳ ರಥದಲ್ಲಿ ಕುಳಿತು ಅಸ್ತ್ರವಿದರಲ್ಲಿ ಶ್ರೇಷ್ಠ ಅರ್ಜುನನು ಶಿಶಿರ ಋತುವಿನಲ್ಲಿ ಗಹನವಾಗಿ ಹುಲ್ಲು ಮೆದೆಗಳನ್ನು ಹೇಗೋ ಹಾಗೆ ನಿನ್ನ ಸೇನೆಯನ್ನು ದಹಿಸಿಬಿಟ್ಟಿದ್ದಾನೆ.

09003023a ಗಾಹಮಾನಮನೀಕಾನಿ ಮಹೇಂದ್ರಸದೃಶಪ್ರಭಂ|

09003023c ಧನಂಜಯಮಪಶ್ಯಾಮ ಚತುರ್ದಂತಮಿವ ದ್ವಿಪಂ||

ಮಹೇಂದ್ರನ ಪ್ರಭೆಯುಳ್ಳ ಧನಂಜಯನು ನಾಲ್ಕು ದಂತಗಳಿರುವ ಸಲಗದಂತೆ ಸೇನೆಗಳಲ್ಲಿ ನುಗ್ಗಿ ಹೋಗುತ್ತಿರುವುದನ್ನು ನಾವು ನೋಡಿದೆವು.

09003024a ವಿಕ್ಷೋಭಯಂತಂ ಸೇನಾಂ ತೇ ತ್ರಾಸಯಂತಂ ಚ ಪಾರ್ಥಿವಾನ್|

09003024c ಧನಂಜಯಮಪಶ್ಯಾಮ ನಲಿನೀಮಿವ ಕುಂಜರಂ||

ಕಮಲಗಳ ಸರೋವರಕ್ಕೆ ಆನೆಯು ಹೇಗೋ ಹಾಗೆ ಧನಂಜಯನು ನಿನ್ನ ಸೇನೆಗಳನ್ನು ನುಗ್ಗಿ ಅಲ್ಲೋಲಕಲ್ಲೋಲಗೊಳಿಸಿ ಪಾರ್ಥಿವರನ್ನು ನಡುಗಿಸಿದುದನ್ನು ನಾವು ನೋಡಿದೆವು.

09003025a ತ್ರಾಸಯಂತಂ ತಥಾ ಯೋಧಾನ್ಧನುರ್ಘೋಷೇಣ ಪಾಂಡವಂ|

09003025c ಭೂಯ ಏನಮಪಶ್ಯಾಮ ಸಿಂಹಂ ಮೃಗಗಣಾ ಇವ||

ಸಿಂಹವು ಮೃಗಗಣಗಳನ್ನು ಹೇಗೋ ಹಾಗೆ ಪಾಂಡವನು ತನ್ನ ಧನುರ್ಷೋಷದಿಂದ ಯೋಧರನ್ನು ಪುನಃ ಪುನಃ ಭಯಗೊಳಿಸುತ್ತಿರುವುದನ್ನು ನಾವು ನೋಡಿದೆವು.

09003026a ಸರ್ವಲೋಕಮಹೇಷ್ವಾಸೌ ವೃಷಭೌ ಸರ್ವಧನ್ವಿನಾಂ|

09003026c ಆಮುಕ್ತಕವಚೌ ಕೃಷ್ಣೌ ಲೋಕಮಧ್ಯೇ ವಿರೇಜತುಃ||

ಸರ್ವಲೋಕ ಮಹೇಷ್ವಾಸರಾದ, ಸರ್ವಧನ್ವಿಗಳಲ್ಲಿ ವೃಷಭರಾದ, ಕವಚಗಳನ್ನು ಧರಿಸಿರುವ ಕೃಷ್ಣರಿಬ್ಬರೂ ಲೋಕಮಧ್ಯದಲ್ಲಿ ವಿರಾಜಿಸುತ್ತಿದ್ದಾರೆ.

09003027a ಅದ್ಯ ಸಪ್ತದಶಾಹಾನಿ ವರ್ತಮಾನಸ್ಯ ಭಾರತ|

09003027c ಸಂಗ್ರಾಮಸ್ಯಾತಿಘೋರಸ್ಯ ವಧ್ಯತಾಂ ಚಾಭಿತೋ ಯುಧಿ||

ಭಾರತ! ಯುದ್ಧದಲ್ಲಿ ವಧೆಯಾಗುತ್ತಿರುವ ಈ ಅತಿ ಘೋರ ಸಂಗ್ರಾಮದ ಹದಿನೇಳನೇ ದಿನವು ಇಂದು ನಡೆಯುತ್ತಿದೆ.

09003028a ವಾಯುನೇವ ವಿಧೂತಾನಿ ತವಾನೀಕಾನಿ ಸರ್ವಶಃ|

09003028c ಶರದಂಭೋದಜಾಲಾನಿ ವ್ಯಶೀರ್ಯಂತ ಸಮಂತತಃ||

ಶರತ್ಕಾಲದ ಮೋಡ ಸಮೂಹಗಳು ಗಾಳಿಯಿಂದ ಚದುರಿಹೋಗುವಂತೆ ನಿನ್ನ ಸೇನೆಗಳೆಲ್ಲವೂ ಎಲ್ಲ ಕಡೆ ಚದುರಿಹೋಗಿವೆ.

09003029a ತಾಂ ನಾವಮಿವ ಪರ್ಯಸ್ತಾಂ ಭ್ರಾಂತವಾತಾಂ ಮಹಾರ್ಣವೇ|

09003029c ತವ ಸೇನಾಂ ಮಹಾರಾಜ ಸವ್ಯಸಾಚೀ ವ್ಯಕಂಪಯತ್||

ಮಹಾರಾಜ! ಮಹಾಸಮುದ್ರದಲ್ಲಿ ಭಿರುಗಾಳಿಗೆ ಸಿಲುಕಿ ನಡುಗುತ್ತಿರುವ ಹಡಗಿನಂತೆ ಸವ್ಯಸಾಚಿಯು ನಿನ್ನ ಸೇನೆಯನ್ನು ನಡುಗಿಸುತ್ತಿದ್ದಾನೆ!

09003030a ಕ್ವ ನು ತೇ ಸೂತಪುತ್ರೋಽಭೂತ್ಕ್ವ ನು ದ್ರೋಣಃ ಸಹಾನುಗಃ|

09003030c ಅಹಂ ಕ್ವ ಚ ಕ್ವ ಚಾತ್ಮಾ ತೇ ಹಾರ್ದಿಕ್ಯಶ್ಚ ತಥಾ ಕ್ವ ನು||

09003030e ದುಃಶಾಸನಶ್ಚ ಭ್ರಾತಾ ತೇ ಭ್ರಾತೃಭಿಃ ಸಹಿತಃ ಕ್ವ ನು||

09003031a ಬಾಣಗೋಚರಸಂಪ್ರಾಪ್ತಂ ಪ್ರೇಕ್ಷ್ಯ ಚೈವ ಜಯದ್ರಥಂ|

ಜಯದ್ರಥನು ಅವನ ಬಾಣದ ಲಕ್ಷ್ಯವಾಗಿದ್ದಾಗ ಸೂತಪುತ್ರನು ಎಲ್ಲಿದ್ದನು? ಅನುಯಾಯಿಗಳೊಡನೆ ದ್ರೋಣನು ಎಲ್ಲಿದ್ದನು? ನಾನು ಅಥವಾ ನೀನು ಎಲ್ಲಿದ್ದೆವು? ಹಾಗೆಯೇ ಹಾರ್ದಿಕ್ಯನು ಎಲ್ಲಿದ್ದನು? ನಿನ್ನ ಭ್ರಾತಾ ದುಃಶಾಸನನು ಸಹೋದರರೊಂದಿಗೆ ಎಲ್ಲಿದ್ದನು?

09003031c ಸಂಬಂಧಿನಸ್ತೇ ಭ್ರಾತೄಂಶ್ಚ ಸಹಾಯಾನ್ಮಾತುಲಾಂಸ್ತಥಾ||

09003032a ಸರ್ವಾನ್ವಿಕ್ರಮ್ಯ ಮಿಷತೋ ಲೋಕಾಂಶ್ಚಾಕ್ರಮ್ಯ ಮೂರ್ಧನಿ|

09003032c ಜಯದ್ರಥೋ ಹತೋ ರಾಜನ್ಕಿಂ ನು ಶೇಷಮುಪಾಸ್ಮಹೇ||

ರಾಜನ್! ನಿನ್ನ ಸಹಾಯಕರಾಗಿದ್ದ ಸಂಬಂಧಿಗಳು, ಸಹೋದರರು, ಸೋದರ ಮಾವಂದಿರು ಮತ್ತು ಎಲ್ಲರ ನೆತ್ತಿಯ ಮೇಲೆ ಕಾಲಿಟ್ಟು ಅರ್ಜುನನು ಒಂದೇ ಕ್ಷಣದಲ್ಲಿ ಜಯದ್ರಥನನು ಸಂಹರಿಸಿದನು. ಇನ್ನೇನು ನಾವು ಮಾಡಬಹುದಾಕಿತ್ತು?

09003033a ಕೋ ವೇಹ ಸ ಪುಮಾನಸ್ತಿ ಯೋ ವಿಜೇಷ್ಯತಿ ಪಾಂಡವಂ|

09003033c ತಸ್ಯ ಚಾಸ್ತ್ರಾಣಿ ದಿವ್ಯಾನಿ ವಿವಿಧಾನಿ ಮಹಾತ್ಮನಃ||

09003033e ಗಾಂಡೀವಸ್ಯ ಚ ನಿರ್ಘೋಷೋ ವೀರ್ಯಾಣಿ ಹರತೇ ಹಿ ನಃ|

ಪಾಂಡವನನ್ನು ಜಯಿಸಬಲ್ಲ ಪುರುಷನು ನಮ್ಮವರಲ್ಲಿ ಯಾರಿದ್ದಾರೆ? ಆ ಮಹಾತ್ಮನ ವಿವಿಧ ದಿವ್ಯಾಸ್ತ್ರಗಳು ಮತ್ತು ಗಾಂಡೀವದ ನಿರ್ಘೋಷವು ನಮ್ಮ ವೀರ್ಯಗಳನ್ನು ಅಪಹರಿಸಿಬಿಟ್ಟಿವೆ!

09003034a ನಷ್ಟಚಂದ್ರಾ ಯಥಾ ರಾತ್ರಿಃ ಸೇನೇಯಂ ಹತನಾಯಕಾ|

09003034c ನಾಗಭಗ್ನದ್ರುಮಾ ಶುಷ್ಕಾ ನದೀವಾಕುಲತಾಂ ಗತಾ||

ನಾಯಕನನ್ನು ಕಳೆದುಕೊಂಡ ನಮ್ಮ ಈ ಸೇನೆಯು ಚಂದ್ರನಿಲ್ಲದ ರಾತ್ರಿಯಂತೆ, ಆನೆಗಳಿಂದ ವೃಕ್ಷಗಳು ನಾಶವಾಗಿದ್ದ ವನದಂತೆ ಮತ್ತು ಬತ್ತಿಹೋದ ನದಿಯಂತೆ ವ್ಯಾಕುಲಗೊಂಡಿದೆ.

09003035a ಧ್ವಜಿನ್ಯಾಂ ಹತನೇತ್ರಾಯಾಂ ಯಥೇಷ್ಟಂ ಶ್ವೇತವಾಹನಃ|

09003035c ಚರಿಷ್ಯತಿ ಮಹಾಬಾಹುಃ ಕಕ್ಷೇಽಗ್ನಿರಿವ ಸಂಜ್ವಲನ್||

ನೇತಾರನನ್ನು ಕಳೆದುಕೊಂಡ ನಮ್ಮ ಸೇನೆಯೊಳಗೆ ನುಗ್ಗಿ ಮಹಾಬಾಹು ಶ್ವೇತವಾಹನನು ಅಗ್ನಿಯು ಹುಲ್ಲುಮೆದೆಗಳನ್ನು ಹೇಗೋ ಹಾಗೆ ಸುಡುತ್ತಾ ಸಂಚರಿಸುತ್ತಿದ್ದಾನೆ.

09003036a ಸಾತ್ಯಕೇಶ್ಚೈವ ಯೋ ವೇಗೋ ಭೀಮಸೇನಸ್ಯ ಚೋಭಯೋಃ|

09003036c ದಾರಯೇತ ಗಿರೀನ್ಸರ್ವಾನ್ ಶೋಷಯೇತ ಚ ಸಾಗರಾನ್||

ಸಾತ್ಯಕಿ ಮತ್ತು ಭೀಮಸೇನರಿಬ್ಬರೂ ಮಹಾ ವೇಗಶಾಲಿಗಳು ಮತ್ತು ಇವರು ಗಿರಿಗಳೆಲ್ಲವನ್ನೂ ಸೀಳಬಲ್ಲರು ಮತ್ತು ಸಾಗರಗಳನ್ನು ಬತ್ತಿಸಬಲ್ಲರು.

09003037a ಉವಾಚ ವಾಕ್ಯಂ ಯದ್ಭೀಮಃ ಸಭಾಮಧ್ಯೇ ವಿಶಾಂ ಪತೇ|

09003037c ಕೃತಂ ತತ್ಸಕಲಂ ತೇನ ಭೂಯಶ್ಚೈವ ಕರಿಷ್ಯತಿ||

ವಿಶಾಂಪತೇ! ಸಭಾಮಧ್ಯದಲ್ಲಿ ಭೀಮನು ಏನೆಲ್ಲ ಮಾತುಗಳನ್ನು ಆಡಿದ್ದನೋ ಅವೆಲ್ಲವನ್ನು ಮಾಡಿದ್ದಾನೆ ಮತ್ತು ಮುಂದೆ ಮಾಡುತ್ತಾನೆ ಕೂಡ!

09003038a ಪ್ರಮುಖಸ್ಥೇ ತದಾ ಕರ್ಣೇ ಬಲಂ ಪಾಂಡವರಕ್ಷಿತಂ|

09003038c ದುರಾಸದಂ ತಥಾ ಗುಪ್ತಂ ಗೂಢಂ ಗಾಂಡೀವಧನ್ವನಾ||

ಗಾಂಡೀವ ಧನ್ವಿಯಿಂದ ವ್ಯೂಹಿಸಲ್ಪಟ್ಟು ರಕ್ಷಿತಗೊಂಡಿರುವ ಮತ್ತು ಪಾಂಡವರಿಂದ ರಕ್ಷಿತವಾದ ಆ ಸೇನೆಯು ಕರ್ಣನ ನಾಯಕತ್ವದಲ್ಲಿ ಕೂಡ ದುರಾಸದವಾಗಿತ್ತು.

09003039a ಯುಷ್ಮಾಭಿಸ್ತಾನಿ ಚೀರ್ಣಾನಿ ಯಾನ್ಯಸಾಧೂನಿ ಸಾಧುಷು|

09003039c ಅಕಾರಣಕೃತಾನ್ಯೇವ ತೇಷಾಂ ವಃ ಫಲಮಾಗತಂ||

ಸಾಧುಗಳೊಂದಿಗೆ ಅಕಾರಣವಾಗಿ ಅಸಾಧುಗಳಂತೆ ವರ್ತಿಸಿದುದಕ್ಕಾಗಿ ಅದರ ಫಲವು ನಮಗೆ ದೊರೆಯುತ್ತಿದೆ.

09003040a ಆತ್ಮನೋಽರ್ಥೇ ತ್ವಯಾ ಲೋಕೋ ಯತ್ನತಃ ಸರ್ವ ಆಹೃತಃ|

09003040c ಸ ತೇ ಸಂಶಯಿತಸ್ತಾತ ಆತ್ಮಾ ಚ ಭರತರ್ಷಭ||

ಅಯ್ಯಾ ಭರತರ್ಷಭ! ನಿನಗೋಸ್ಕರವಾಗಿ ನೀನು ಕರೆದಿರುವ ಎಲ್ಲರೂ ಪ್ರಯತ್ನಪಟ್ಟರೂ ಅವರಾಗಲೀ ಅಥವಾ ನೀನಾಗಲೀ ಉಳಿಯುವುದು ಸಂಶಯವೇ ಆಗಿದೆ.

09003041a ರಕ್ಷ ದುರ್ಯೋಧನಾತ್ಮಾನಮಾತ್ಮಾ ಸರ್ವಸ್ಯ ಭಾಜನಂ|

09003041c ಭಿನ್ನೇ ಹಿ ಭಾಜನೇ ತಾತ ದಿಶೋ ಗಚ್ಚತಿ ತದ್ಗತಂ||

ಮಗೂ! ದುರ್ಯೋಧನ! ನಿನ್ನನ್ನು ನೀನು ರಕ್ಷಿಸಿಕೋ! ಈ ಶರೀರವೇ ಸರ್ವ ಸುಖಗಳ ಅನುಭವಸ್ಥಾನವಾಗಿದೆ. ಪಾತ್ರೆಯು ಒಡೆದಾಗ ಅದರಲ್ಲಿರುವ ನೀರು ಎಲ್ಲ ಕಡೆ ಹರಿದುಹೋಗುವಂತೆ ಶರೀರವು ನಾಶವಾಗಲು ಸರ್ವ ಸುಖಗಳೂ ಅಂತ್ಯಗೊಳ್ಳುತ್ತವೆ.

09003042a ಹೀಯಮಾನೇನ ವೈ ಸಂಧಿಃ ಪರ್ಯೇಷ್ಟವ್ಯಃ ಸಮೇನ ಚ|

09003042c ವಿಗ್ರಹೋ ವರ್ಧಮಾನೇನ ನೀತಿರೇಷಾ ಬೃಹಸ್ಪತೇಃ||

ತನ್ನ ಬಲವು ಶತ್ರುಬಲಕ್ಕಿಂತ ಕಡಿಮೆಯಾಗಿರುವಾಗ ಅಥವಾ ಸಮನಾಗಿರುವಾಗ ಶತ್ರುಗಳೊಡನೆ ಸಂಧಿಯ ಮಾರ್ಗವನ್ನು ಹುಡುಕಬೇಕು. ಅಧಿಕವಾಗಿರುವಾಗ ಯುದ್ಧಮಾಡಬೇಕು. ಇದೇ ಬೃಹಸ್ಪತಿಯ ನೀತಿ.

09003043a ತೇ ವಯಂ ಪಾಂಡುಪುತ್ರೇಭ್ಯೋ ಹೀನಾಃ ಸ್ವಬಲಶಕ್ತಿತಃ|

09003043c ಅತ್ರ ತೇ ಪಾಂಡವೈಃ ಸಾರ್ಧಂ ಸಂಧಿಂ ಮನ್ಯೇ ಕ್ಷಮಂ ಪ್ರಭೋ||

ಪ್ರಭೋ! ಈಗ ನಾವು ನಮ್ಮ ಶಕ್ತಿಯಲ್ಲಿ ಪಾಂಡುಪುತ್ರರಿಗಿಂತಲೂ ಹೀನರಾಗಿದ್ದೇವೆ. ಆದುದರಿಂದ ಪಾಂಡವರೊಂದಿಗೆ ಸಂಧಿಯೇ ಸರಿಯಾದುದೆಂದು ಅನ್ನಿಸುತ್ತಿದೆ.

09003044a ನ ಜಾನೀತೇ ಹಿ ಯಃ ಶ್ರೇಯಃ ಶ್ರೇಯಸಶ್ಚಾವಮನ್ಯತೇ|

09003044c ಸ ಕ್ಷಿಪ್ರಂ ಭ್ರಶ್ಯತೇ ರಾಜ್ಯಾನ್ನ ಚ ಶ್ರೇಯೋಽನುವಿಂದತಿ||

ಯಾವ ರೀತಿಯಲ್ಲಿ ನಡೆದರೆ ಶ್ರೇಯಸ್ಸುಂಟಾಗುತ್ತದೆ ಎನ್ನುವುದನ್ನು ಅರಿಯದವನು ಶ್ರೇಯಸ್ಸನ್ನು ಅಪಮಾನಿಸಿದಂತೆ. ಅವನು ಕ್ಷಿಪ್ರವಾಗಿ ರಾಜ್ಯ-ಶ್ರೇಯಸ್ಸುಗಳನ್ನು ಕಳೆದುಕೊಳ್ಳುತ್ತಾನೆ.

09003045a ಪ್ರಣಿಪತ್ಯ ಹಿ ರಾಜಾನಂ ರಾಜ್ಯಂ ಯದಿ ಲಭೇಮಹಿ|

09003045c ಶ್ರೇಯಃ ಸ್ಯಾನ್ನ ತು ಮೌಢ್ಯೇನ ರಾಜನ್ಗಂತುಂ ಪರಾಭವಂ||

ರಾಜನ್! ರಾಜ ಯುಧಿಷ್ಠಿರನಿಗೆ ತಲೆಬಾಗಿ ನಮ್ಮ ರಾಜ್ಯವನ್ನು ಪಡೆದುಕೊಂಡೆವೆಂದರೆ ಅದರಿಂದ ನಮಗೆ ಶ್ರೇಯಸ್ಸೇ ಉಂಟಾಗುತ್ತದೆ. ಮೌಡ್ಯತನದಿಂದ ಹೀಗೆಯೇ ಮುಂದುವರೆದರೆ ಪರಾಭವವನ್ನು ಹೊಂದುತ್ತೇವೆಯೇ ವಿನಃ ಶ್ರೇಯಸ್ಸು ದೊರಕುವುದಿಲ್ಲ.

09003046a ವೈಚಿತ್ರವೀರ್ಯವಚನಾತ್ಕೃಪಾಶೀಲೋ ಯುಧಿಷ್ಠಿರಃ|

09003046c ವಿನಿಯುಂಜೀತ ರಾಜ್ಯೇ ತ್ವಾಂ ಗೋವಿಂದವಚನೇನ ಚ||

ಕೃಪಾಶೀಲ ಯುಧಿಷ್ಠಿರನು ವೈಚಿತ್ರವೀರ್ಯನ ಮಾತು ಅಥವಾ ಗೋವಿಂದನ ಹೇಳಿಕೆಯಂತೆ ನಿನಗೇ ರಾಜ್ಯವೆಲ್ಲವನ್ನು ನೀಡಿಯಾನು!

09003047a ಯದ್ಬ್ರೂಯಾದ್ಧಿ ಹೃಷೀಕೇಶೋ ರಾಜಾನಮಪರಾಜಿತಂ|

09003047c ಅರ್ಜುನಂ ಭೀಮಸೇನಂ ಚ ಸರ್ವಂ ಕುರ್ಯುರಸಂಶಯಂ||

ಹೃಷೀಕೇಶನು ರಾಜ ಅಪರಾಜಿತ ಯುಧಿಷ್ಠಿರನಿಗೆ ಏನನ್ನು ಹೇಳುವನೋ ಅದರಂತೆಯೇ ಭೀಮಾರ್ಜುನರೆಲ್ಲರೂ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

09003048a ನಾತಿಕ್ರಮಿಷ್ಯತೇ ಕೃಷ್ಣೋ ವಚನಂ ಕೌರವಸ್ಯ ಹ|

09003048c ಧೃತರಾಷ್ಟ್ರಸ್ಯ ಮನ್ಯೇಽಹಂ ನಾಪಿ ಕೃಷ್ಣಸ್ಯ ಪಾಂಡವಃ||

ಕೌರವ ಧೃತರಾಷ್ಟ್ರನ ಮಾತನ್ನು ಕೃಷ್ಣನು ಉಲ್ಲಂಘಿಸುವುದಿಲ್ಲ, ಮತ್ತು ಅಂತೆಯೇ ಕೃಷ್ಣನ ಮಾತನ್ನು ಪಾಂಡವರು ಉಲ್ಲಂಘಿಸುವುದಿಲ್ಲ ಎಂದು ನನಗನ್ನಿಸುತ್ತದೆ.

09003049a ಏತತ್ ಕ್ಷಮಮಹಂ ಮನ್ಯೇ ತವ ಪಾರ್ಥೈರವಿಗ್ರಹಂ|

09003049c ನ ತ್ವಾ ಬ್ರವೀಮಿ ಕಾರ್ಪಣ್ಯಾನ್ನ ಪ್ರಾಣಪರಿರಕ್ಷಣಾತ್||

09003049e ಪಥ್ಯಂ ರಾಜನ್ಬ್ರವೀಮಿ ತ್ವಾಂ ತತ್ಪರಾಸುಃ ಸ್ಮರಿಷ್ಯಸಿ||

ರಾಜನ್! ನೀನು ಪಾರ್ಥರೊಂದಿಗೆ ಯುದ್ಧವನ್ನು ನಿಲ್ಲಿಸುವುದೇ ಉತ್ತಮವೆಂದು ನನಗನ್ನಿಸುತ್ತಿದೆ. ಇದನ್ನು ನಾನು ಯುದ್ಧಮಾಡುವುದು ಕಷ್ಟವೆಂಬ ಕಾರಣದಿಂದಾಗಲೀ ಪ್ರಾಣರಕ್ಷಣೆಯ ಸಲುವಾಗಲೀ ಹೇಳುತ್ತಿಲ್ಲ. ನಿನಗೆ ಪಥ್ಯ-ಹಿತವಾಗುವ ಮಾತನ್ನು ಹೇಳುತ್ತಿದ್ದೇನೆ.”

09003050a ಇತಿ ವೃದ್ಧೋ ವಿಲಪ್ಯೈತತ್ಕೃಪಃ ಶಾರದ್ವತೋ ವಚಃ|

09003050c ದೀರ್ಘಮುಷ್ಣಂ ಚ ನಿಃಶ್ವಸ್ಯ ಶುಶೋಚ ಚ ಮುಮೋಹ ಚ||

ಹೀಗೆ ಹೇಳಿ ವೃದ್ಧ ಶಾರದ್ವತ ಕೃಪನು ಬಿಸಿಬಿಸಿಯಾದ ನಿಟ್ಟುಸಿರು ಬಿಡುತ್ತಾ, ಬಹಳವಾಗಿ ಶೋಕಿಸುತ್ತಾ, ದುಃಖಾತಿರೇಕದಿಂದ ಮೂರ್ಛಿತನಾದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಕೃಪವಾಕ್ಯೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಕೃಪವಾಕ್ಯ ಎನ್ನುವ ಮೂರನೇ ಅಧ್ಯಾಯವು.

[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ೫೯ ಶ್ಲೋಕಗಳಲ್ಲಿ ಕೌರವ ಸೇನೆಯ ಪಲಾಯನ ಮತ್ತು ದುರ್ಯೋಧನನ ಆದೇಶದಂತೆ ಪುನಃ ಯುದ್ಧಕ್ಕೆ ನಿಂತ ವಿಷಯದ ವರ್ಣನೆಯಿದೆ: ಘೋರೇ ಮನುಷ್ಯದೇಹಾನಾಮಾಜೌ ನರವರ ಕ್ಷಯೇ| ಯತ್ತತ್ಕರ್ಣೇ ಹತೇ ಪಾರ್ಥಃ ಸಿಂಹನಾದಮಥಾಕರೋತ್||೧|| ತದಾ ತವ ಸುತಾನ್ರಾಜನ್ ಪ್ರಾವಿಶತ್ಸುಮಹದ್ಭಯಮ್| ನ ಸಂಧಾತುಮನೀಕಾನಿ ನ ಚೈವಾಥ ಪರಾಕ್ರಮೇ||೨|| ಆಸೀದ್ಬುದ್ಧಿರ್ಹತೇ ಕರ್ಣೇ ತವ ಯೋಧಸ್ಯ ಕಸ್ಯಚಿತ್| ವಣಿಜೋ ನಾವಿ ಭಿನ್ನಾಯಾಮಗಾಧೇ ವಿಪ್ಲವಾ ಇವ||೩|| ಅಪಾರೇ ಪಾರಮಿಚ್ಛಂತೋ ಹತೇ ದ್ವೀಪೇ ಕಿರೀಟಿನಾ| ಸೂತಪುತ್ರೇ ಹತೇ ರಾಜನ್ ವಿತ್ರಸ್ತಾಃ ಶರವಿಕ್ಷತಾಃ||೪|| ಅನಾಥಾನಾಥಮಿಚ್ಛಾಂತೋ ಮೃಗಾಃ ಸಿಂಹಾರ್ದಿತಾ ಇವ| ಭಗ್ನಶೃಂಗಾಃ ಇವ ವೃಷಾಃ ಶೀರ್ಣದಂಷ್ಟ್ರಾ ಇವೋರಗಾಃ||೫|| ಪ್ರತ್ಯುಪಾಯಾಮ ಸಾಯಾಹ್ನೇ ನಿರ್ಜಿತಾಃ ಸವ್ಯಸಾಚಿನಾ| ಹತಪ್ರವೀರಾ ವಿಧ್ವಸ್ತಾ ನಿಕೃತ್ತಾ ನಿಶಿತೈಃ ಶರೈಃ||೬|| ಸೂತಪುತ್ರೇ ಹತೇ ರಾಜನ್ ಪುತ್ರಾಸ್ತೇ ಪ್ರಾದ್ರವಸ್ತತಃ| ವಿಧ್ವಸ್ತಕವಚಾಃ ಸರ್ವೇ ಕಾಂದಿಶೀಕಾ ವಿಚೇತಸಃ||೭|| ಅನ್ಯೋನ್ಯಮಭಿನಿಘ್ನಂತೋ ವೀಕ್ಷಮಾಣಾ ಭಯಾದ್ದಿಶಃ| ಮಾಮೇವ ನೂನಂ ಬೀಭತ್ಸುರ್ಮಾಮೇವ ಚ ವೃಕೋದರಃ||೮|| ಅಭಿಯಾತೀತಿ ಮನ್ವಾನಾಃ ಪೇತುರ್ಮಮ್ಲುಶ್ಚ ಭಾರತ| ಅಶ್ವಾನನ್ಯೇ ಗಜಾನನ್ಯೇ ರಥಾನನ್ಯೇ ಮಹಾರಥಾಃ||೯|| ಆರುಹ್ಯ ಜವಸಂಪನ್ನಾಃ ಪಾದಾತಾನ್ ಪ್ರಜಹುರ್ಭಯಾತ್| ಕುಂಜರೈಃ ಸ್ಯಂದನಾ ಭಗ್ನಾಃ ಸಾದಿನಶ್ಚ ಮಹಾರಥೈಃ||೧೦|| ಪದಾತಿಸಂಘಾಶ್ಚಾಶ್ವೌಘೈಃ ಪಲಾಯದ್ಭಿರ್ಭೃಶಂ ಹತಾಃ| ವ್ಯಾಲತಸ್ಕರಸಂಕೀರ್ಣೇ ಸಾರ್ಥಹೀನಾ ಯಥಾ ವನೇ||೧೧|| ತಥಾ ತ್ವದೀಯಾ ನಿಹತೇ ಸೂತಪುತ್ರೇ ತದಾಭವನ್| ಹತಾರೋಹಸ್ತಥಾ ನಾಗಾಶ್ಛಿನ್ನಹಸ್ತಾಸ್ತಥಾಪರೇ||೧೨|| ಸರ್ವಂ ಪಾರ್ಥಮಯಂ ಲೋಕಮಪಶ್ಯನ್ವೈ ಭಯಾರ್ದಿತಾಃ| ತಾನ್ಪ್ರೇಕ್ಷ್ಯ ದ್ರವತಃ ಸರ್ವಾನ್ಭೀಮಸೇನಭಯಾರ್ದಿತಾನ್||೧೩|| ದುರ್ಯೋಧನೋಽಥ ಸ್ವಂ ಸೂತಂ ಹಾ ಹಾ ಕೃತೈವಮಬ್ರವೀತ್| ನಾತಿಕ್ರಮಿಷ್ಯತೇ ಪಾರ್ಥೋ ಧನುಷ್ಪಾಣಿಮವಸ್ಥಿತಮ್||೧೪|| ಜಘನೇ ಯುದ್ಯಮಾನಂ ಮಾಂ ತೂರ್ಣಮಶ್ವಾನ್ಪ್ರಚೋದಯ| ಸಮರೇ ಯುದ್ಧ್ಯಮಾನಂ ಹಿ ಕೌಂತೇಯೋ ಮಾಂ ಧನಂಜಯಃ||೧೫|| ನೋತ್ಸಹೇತಾಪ್ಯತಿಕ್ರಾಂತುಂ ವೇಲಾಮಿವ ಮಹಾರ್ಣವಃ| ಅದ್ಯಾರ್ಜುನಂ ಸಗೋವಿಂದಂ ಮಾನಿನಂ ಚ ವೃಕೋದರಮ್||೧೬|| ನಿಹತ್ಯಾ ಶಿಷ್ಟಾನ್ ಶತ್ರೂಂಶ್ಚ ಕರ್ಣಸ್ಯಾನೃಣ್ಯಮಾಪ್ನುಯಾಮ್| ತಚ್ಛೃತ್ವಾ ಕುರುರಾಜಸ್ಯ ಶೂರಾರ್ಥಸದೃಶಂ ವಚಃ||೧೭|| ಸೂತೋ ಹೇಮಪರಿಚ್ಛನಾನ್ ಶನೈರಶ್ವಾನಚೋದಯತ್| ಗಜಾಶ್ವರಥಹೀನಾಸ್ತು ಪಾದಾತಾಶ್ಚೈವ ಮಾರಿಷ||೧೮|| ಪಂಚವಿಂಶತಿಸಾಹಸ್ರಾಃ ಪ್ರಾದ್ರವನ್ ಶನಕೈರಿವ| ತಾನ್ಭೀಮಸೇನಃ ಸಂಕ್ರುದ್ಧೋ ಧೃಷ್ಟದ್ಯುಮ್ನಶ್ಚ ಪಾರ್ಷತಃ||೧೯|| ಬಲೇನ ಚತುರಂಗೇಣ ಪರಿಕ್ಷಿಪ್ಯಾಹನಚ್ಛರೈಃ| ಪ್ರತ್ಯಯುದ್ಧ್ಯಂಸ್ತು ತೇ ಸರ್ವೇ ಭೀಮಸೇನಂ ಸಪಾರ್ಷತಮ್||೨೦|| ಪಾರ್ಥಪಾರ್ಷತಯೋಶ್ಚಾನ್ಯೇ ಜಗೃಹುಸ್ತತ್ರ ನಾಮನಿ| ಅಕೃಧ್ಯತ ರಣೇ ಭೀಮಸ್ತೈರ್ಮೃಧೇ ಪ್ರತ್ಯವಸ್ಥಿತೈಃ||೨೧|| ಸೋಽವತೀರ್ಯೇ ರಥಾತ್ತೂರ್ಣಂ ಗದಾಪಾಣಿರಯುದ್ಯತ| ನ ತಾನ್ರಥಸ್ಥೋ ಭೂಮಿಷ್ಠಾನ್ಧರ್ಮೋಪೇಕ್ಷೀ ವೃಕೋದರಃ||೨೨|| ಯೋಧಯಾಮಾಸ ಕೌಂತೇಯೋ ಭುಜವೀರ್ಯಮುಪಾಶ್ರಿತಃ| ಜಾತರೂಪಪರಿಚ್ಛನ್ನಾಂ ಪ್ರಗೃಹ್ಯ ಮಹತೀಂ ಗದಾಂ||೨೩|| ನ್ಯವಧೀತ್ತಾವಕಾನ್ಸರ್ವಾನ್ ದಂಡಪಾಣಿರಿವಾಂತಕಃ| ಪದಾತಯೋ ಹಿ ಸಂರಬ್ಧಾಸ್ತ್ಯಕ್ತಜೀವಿತಬಾಂಧವಾಃ||೨೪|| ಭೀಮಮಭ್ಯದ್ರವನ್ಸಂಖ್ಯೇ ಪತಂಗಾ ಇವ ಪಾವಕಮ್| ಆಸಾದ್ಯ ಭೀಮಸೇನಂ ತೇ ಸಂರಬ್ಧಾ ಯುದ್ಧದುರ್ಮದಾಃ||೨೫|| ವಿನೇದುಃ ಸಹಸಾ ದೃಷ್ಟ್ವಾ ಭೂತಗ್ರಾಮಾ ಇವಾಂತಕಂ| ಶ್ಯೇನವದ್ವ್ಯಚರದ್ಭೀಮಃ ಖಡ್ಗೇನ ಗದಯಾ ತಥಾ||೨೬|| ಪಂಚವಿಂಶತಿಸಾಹಸ್ರಾನ್ಸ್ತಾವಕಾನಾಂ ವ್ಯಪೋಥಯತ್| ಹತ್ವಾ ತತ್ಪುರುಷಾನೀಕಂ ಭೀಮಃ ಸತ್ಯಪರಾಕ್ರಮಃ||೨೭|| ಧೃಷ್ಟದ್ಯುಮ್ನಂ ಪುರಸ್ಕೃತ್ಯ ಪುನಸ್ತಸ್ಥೌ ಮಹಾಬಲಃ| ಧನಂಜಯೋ ರಥಾನೀಕಮನ್ವಪದ್ಯತ ವೀರ್ಯವಾನ್||೨೮|| ಮಾದ್ರೀಪುತ್ರೌ ಚ ಶಕುನಿಂ ಸಾತ್ಯಕಿಶ್ಚ ಮಹಾಬಲಃ| ಜವೇನಾಭ್ಯಪತನ್ ಹೃಷ್ಟಾ ಘ್ನಂತೋ ದುರ್ಯೋಧನಂ ಬಲಮ್||೨೯|| ತಸ್ಯಾಶ್ವವಾಹಾನ್ಸುಬಹೂನ್ಸ್ತೇ ನಿಹತ್ಯ ಶಿತೈಃ ಶರೈಃ| ತಮನ್ವಧಾವನ್ಸ್ತ್ವರಿತಾಸ್ತತ್ರ ಯುದ್ಧಮವರ್ತತ||೩೦|| ತತೋ ಧನಂಜಯೋ ರಾಜನ್ರಥಾನೀಕಮಗಾಹತ| ವಿಶೃತಂ ತ್ರಿಷು ಲೋಕೇಷು ಗಾಂಡೀವಂ ವ್ಯಾಕ್ಷಿಪನ್ ಧನುಃ||೩೧|| ಕೃಷ್ಣಸಾರಥಿಮಾಯಾಂತಂ ದೃಷ್ಟ್ವಾ ಶ್ವೇತಹಯಂ ರಥಮ್| ಅರ್ಜುನಂ ಚಾಪಿ ಯೋದ್ಧಾರಂ ತ್ವದೀಯಾಃ ಪ್ರಾದ್ರವನ್ಭಯಾತ್|| ೩೨|| ವಿಪ್ರಹೀನರಥಾಶ್ವಾಶ್ಚ ಶರೈಶ್ಚ ಪರಿವಾರಿತಾಃ| ಪಂಚವಿಂಶತಿಸಾಹಸ್ರಾಃ ಪಾರ್ಥಮಾರ್ಛನ್ಪದಾತಯಃ||೩೩|| ಹತ್ವಾತತ್ಪುರುಷಾನೀಕಂ ಪಾಂಚಾಲಾನಾಂ ಮಹಾರಥಃ| ಭೀಮಸೇನಂ ಪುರಸ್ಕೃತ್ಯ ನಚಿರಾದ್ಪ್ರತ್ಯದೃಶ್ಯತ||೩೪|| ಮಹಾಧನುರ್ಧರಃ ಶ್ರೀಮಾನಮಿತ್ರಗಣಮರ್ದನಃ| ಪುತ್ರಃ ಪಾಂಚಾಲರಾಜಸ್ಯ ಧೃಷ್ಟದ್ಯುಮ್ನೋ ಮಹಾಯಶಾಃ||೩೫|| ಪಾರಾವತಸವರ್ಣಾಶ್ವಂ ಕೋವಿದಾರವರಧ್ವಜಮ್| ಧೃಷ್ಟದ್ಯುಮ್ನಂ ರಣೇ ದೃಷ್ಟ್ವಾ ತ್ವದೀಯಾಃ ಪ್ರಾದ್ರವನ್ಭಯಾತ್||೩೬|| ಗಾಂಧಾರರಾಜಂ ಶ್ರೀಘ್ರಾಸ್ತ್ರಮನುಸೃತ್ಯ ಯಶಸ್ವಿನೌ| ಅಚಿರಾತ್ಪ್ರತ್ಯದೃಶ್ಯೇತಾಂ ಮಾದ್ರೀಪುತ್ರೌ ಸಸಾತ್ಯಕೀ||೩೭|| ಚೇಕಿತಾನಃ ಶಿಖಂಡೀ ಚ ದ್ರೌಪದೇಯಾಶ್ಚ ಮಾರಿಷ| ಹತ್ವಾ ತ್ವದೀಯಂ ಸುಮಹತ್ಸೈನ್ಯಂ ಶಂಕಾನಥಾಧಮನ್||೩೮|| ತೇ ಸರ್ವೇ ತವಾಕಾನ್ಪ್ರೇಕ್ಷ್ಯ ದ್ರವತೋ ವೈ ಪರಾಙ್ಮುಖಾನ್| ಅಭ್ಯದಾವಂತ ನಿಘ್ನಂತೋ ವೃಷಾನ್ಜಿತ್ವಾ ವೃಷಾ ಇವ||೩೯|| ಸೇನಾವಶೇಷಂ ತಂ ದೃಷ್ಟ್ವಾ ತವ ಪುತ್ರಸ್ಯ ಪಾಂಡವಃ| ಅವಸ್ಥಿತಂ ಸವ್ಯಸಾಚೀ ಚುಕ್ರೋಧ ಬಲವನೃಪ||೪೦|| ತತ ಏನಂ ಶರೈ ರಾಜನ್ಸಹಸಾ ಸಮವಾಕಿರತ್| ರಜಸಾ ಚೋದ್ಗತೇನಾಥ ನ ಸ್ಮ ಕಿಂಚನ ದೃಶ್ಯತೇ||೪೧|| ಅಂಧಕಾರೀಕೃತೇ ಲೋಕೇ ಶರೀಭೂತೇ ಮಹೀತಲೇ| ದಿಶಃ ಸರ್ವಾ ಮಹಾರಾಜ ತಾವಕಾಃ ಪ್ರಾದ್ರವನ್ಭಯಾತ್||೪೨|| ಭಜ್ಯಮಾನೇಷು ಸರ್ವೇಷು ಕುರುರಾಜೋ ವಿಶಾಂಪತೇ| ಪರೇಷಾಮಾತ್ಮನಶ್ಚೈವ ಸೈನ್ಯೇ ತೇ ಸಮುಪಾದ್ರವತ್||೪೩|| ತತೋ ದುರ್ಯೋಧನಃ ಸರ್ವಾನಾಜುವಾಹಾಥ ಪಾಂಡವಾನ್| ಯುದ್ಧಾಯ ಭರತಶ್ರೇಷ್ಠ ದೇವಾನಪಿ ಪುರಾ ಬಲೀ||೪೪|| ತ ಏನಮಭಿಗರ್ಜಂತಂ ಸಹಿತಾಃ ಸಮುಪಾದ್ರವನ್| ನಾನಾಶಸ್ತ್ರಸೃಜಃ ಕ್ರುದ್ಧಾ ಭರ್ತ್ಸ್ಯಯಂತೋ ಮುಹುರ್ಮುಹುಃ||೪೫|| ದುರ್ಯೋಧನೋಪ್ಯಸಂಭ್ರಾಂತಸ್ತಾನರೀನ್ವ್ಯಧಮಚ್ಛರೈಃ| ತತ್ರಾದ್ಭುತಮಪಶ್ಯಾಮ ತವ ಪುತ್ರಸ್ಯ ಪೌರುಷಮ್||೪೬|| ಯದೇನಂ ಪಾಂಡವಾಃ ಸರ್ವೇ ನ ಶೇಕುರತಿವರ್ತಿತುಮ್| ನಾತಿದೂರಾಪಯಾತಂ ಚ ಕೃತಬುದ್ಧಿಃ ಪಲಾಯನೇ||೪೭|| ದುರ್ಯೋಧನಃ ಸ್ವಕಂ ಸೈನ್ಯಮಪಶ್ಯದ್ಭೃಶವಿಕ್ಷತಂ| ತತೋಽವಸ್ಥಾಪ್ಯ ರಾಜೇಂದ್ರ ಕೃತಬುದ್ಧಿಸ್ತವಾತ್ಮಜಃ||೪೮|| ಹರ್ಷಯನ್ನಿವ ತಾನ್ಯೋಧಾನ್ಸ್ತತೋ ವಚನಮಬ್ರವೀತ್| ನ ತಂ ದೇಶಂ ಪ್ರಪಶ್ಯಾಮಿ ಪೃಥಿವ್ಯಾಂ ಪರ್ವತೇಷು ಚ||೪೯|| ಯತ್ರ ಯಾತಾನ್ನ ವೋ ಹನ್ಯುಃ ಪಾಂಡವಾಃ ಕಿಂ ಸೃತೇನ ವಃ| ಸ್ವಲ್ಪಂ ಚೈವ ಬಲಂ ತೇಷಾಂ ಕೃಷ್ಣೌ ಚ ಭೃಶವಿಕ್ಷತೌ||೫೦|| ಯದಿ ಸರ್ವೇಽತ್ರ ತಿಷ್ಠಾಮೋ ಧೃವಂ ನೋ ವಿಜಯಂ ಭವೇತ್| ವಿಪ್ರಯಾತಾಂಸ್ತುವೋ ಭಿನ್ನಾನ್ ಪಾಂಡವಾಃ ಕೃತಕಿಲ್ಬಿಷಾನ್||೫೧|| ಅನುಸೃಜ್ಯ ಹನಿಷ್ಯಂತಿ ಶ್ರೇಯೋ ನಃ ಸಮರೇ ವಧಃ| ಸುಖಃ ಸಾಂಗ್ರಾಮಿಕೋಮೃತ್ಯುಃ ಕ್ಷತ್ರಧರ್ಮೇಣ ಯುಧ್ಯತಾಮ್||೫೨|| ಮೃತೋ ದುಃಖಂ ನ ಜಾನೀತೇ ಪ್ರೇತ್ಯ ಚಾನಂತ್ಯಮಶ್ನುತೇ| ಶೃಣ್ವಂತು ಕ್ಷತ್ರಿಯಾಃ ಸರ್ವೇ ಯಾವಂತೋಽತ್ರಸಮಾಗತಾಃ||೫೩|| ದ್ದಿಶತೋ ಭೀಮಸೇನಸ್ಯ ವಶಮೇಪ್ಯತ ವಿದ್ರುತಾಃ| ಪಿತಾಮಹೈರಾಚರಿತಂ ನ ಧರ್ಮಂ ಹಾತುಮರ್ಹಥ||೫೪|| ನಾನ್ಯತ್ಕರ್ಮಾಸ್ತಿ ಪಾಪೀಯಃ ಕ್ಷತ್ರಿಯಸ್ಯ ಪಲಾಯನಾತ್| ನ ಯುದ್ಧಧರ್ಮಾಚ್ಛ್ರೇಯಾನ್ ಹಿ ಪಂಥಾಃ ಸ್ವರ್ಗಸ್ಯ ಕೌರವಾಃ||೫೫|| ಸುಚಿರೇಣಾರ್ಜಿತಾನ್ಲ್ಲೋಕಾನ್ಸದ್ಯೋ ಯುದ್ಧಾತ್ಸಮಶ್ನುತೇ| ತಸ್ಯ ಯದ್ವಚನಮ್ರಾಜ್ಞಃ ಪೂಜಯಿತ್ವಾ ಮಹಾರಥಾಃ||೫೬|| ಪುನರೇವಾಭ್ಯವರ್ತಂತ ಕ್ಷತ್ರಿಯಾಃ ಪಾಂಡವಾನ್ಪ್ರತಿ| ಪರಾಜಯಮಮೃಷ್ಯಂತಃ ಕೃತಚಿತ್ತಾಶ್ಚ ವಿಕ್ರಮೇ||೫೭|| ತತಃ ಪ್ರವವೃತೇ ಯುದ್ದಂ ಪುನರೇವ ಸುದಾರುಮ್| ತಾವಕಾನಾಂ ಪರೇಷಾಂ ಚ ದೇವಾಸುರಗಣೋಪಮಮ್||೫೮|| ಯುಧಿಷ್ಠಿರಪುರೋಗಾಂಶ್ಚ ಸರ್ವಸೈನ್ಯೇನ ಪಾಂಡವಾನ್| ಅನ್ವಧಾವನ್ಮಹಾರಾಜ ಪುತ್ರೋ ದುರ್ಯೋಧನಸ್ತವ||೫೯||

[2] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಒಂದು ಶ್ಲೋಕವಿದೆ: ಶ್ವೇತಾಶ್ಚ ವೇಗಸಂಪನ್ನಾಃ ಶಶಿಕಾಶಸಮಪ್ರಭಾಃ| ಪಿಬಂತ ಇವ ಚಾಕಾಶಂ ರಥೇ ಯುಕ್ತಾಸ್ತು ವಾಜಿನಃ||

[3] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಜಾಂಬೂನದವಿಚಿತ್ರಾಂಗಾ ವಹಂತೇ ಚಾರ್ಜುನಂ ರಣೇ|

Comments are closed.