Shalya Parva: Chapter 28

ಶಲ್ಯಪರ್ವ: ಹ್ರದಪ್ರವೇಶಪರ್ವ

೨೮

ಅರ್ಜುನನು ಅಳಿದುಳಿದ ಕೌರವಸೇನೆಯನ್ನು ಯಾರೂ ಉಳಿಯದಂತೆ ನಾಶಗೊಳಿಸಿದುದು (೧-೧೪). ರಣರಂಗದಲ್ಲಿ ಏಕಾಂಗಿಯಾಗಿದ್ದ ದುರ್ಯೋಧನನು ಪಲಾಯನದ ಮನಸ್ಸು ಮಾಡಿದುದು (೧೫-೨೮). ಸೆರೆಯಲ್ಲಿದ್ದ ಸಂಜಯನನ್ನು ಸಾತ್ಯಕಿಯು ಕೊಲ್ಲಲು ಹೊರಟಾಗ ವ್ಯಾಸನು ಅವನನ್ನು ತಡೆದುದು; ಸಂಜಯನು ಹಸ್ತಿನಾಪುರದ ಕಡೆ ತೆರಳುವುದು (೨೯-೩೯). ದಾರಿಯಲ್ಲಿ ಸಂಜಯ-ದುರ್ಯೋಧನರ ಸಂವಾದ ಮತ್ತು ದುರ್ಯೋಧನನು ಸರೋವರವನ್ನು ಪ್ರವೇಶಿಸಿದುದು (೪೦-೫೨). ದುರ್ಯೋಧನನು ಸರೋವರದಲ್ಲಿರುವನೆಂದು ಸಂಜಯನು ಕೃಪ-ಅಶ್ವತ್ಥಾಮ-ಕೃತವರ್ಮರಿಗೆ ತಿಳಿಸಿದುದು (೫೩-೬೦). ಯುಯುತ್ಸುವು ಯುಧಿಷ್ಠಿರನ ಅನುಮತಿಯನ್ನು ಪಡೆದು ಕೌರವ ಶಿಬಿರದಿಂದ ರಾಜಪತ್ನಿಯರನ್ನು ಕರೆದುಕೊಂಡು ಹಸ್ತಿನಾಪುರಕ್ಕೆ ಹಿಂದಿರುಗಿದುದು (೫೩-೯೨).

09028001 ಸಂಜಯ ಉವಾಚ

09028001a ತತಃ ಕ್ರುದ್ಧಾ ಮಹಾರಾಜ ಸೌಬಲಸ್ಯ ಪದಾನುಗಾಃ|

09028001c ತ್ಯಕ್ತ್ವಾ ಜೀವಿತಮಾಕ್ರಂದೇ ಪಾಂಡವಾನ್ಪರ್ಯವಾರಯನ್||

ಸಂಜಯನು ಹೇಳಿದನು: “ಮಹಾರಾಜ! ಆಗ ಸೌಬಲನ ಅನುಯಾಯಿಗಳು ಕ್ರುದ್ಧರಾಗಿ ಜೀವವನ್ನು ತೊರೆದು ಪಾಂಡವರನ್ನು ಸುತ್ತುವರೆದು ಆಕ್ರಮಣಿಸಿದರು.

09028002a ತಾನರ್ಜುನಃ ಪ್ರತ್ಯಗೃಹ್ಣಾತ್ಸಹದೇವಜಯೇ ಧೃತಃ|

09028002c ಭೀಮಸೇನಶ್ಚ ತೇಜಸ್ವೀ ಕ್ರುದ್ಧಾಶೀವಿಷದರ್ಶನಃ||

ಸಹದೇವಜಯದಲ್ಲಿ ಧೃತನಾದ ಅರ್ಜುನ ಮತ್ತು ಕ್ರುದ್ಧ ವಿಷಸರ್ಪದಂತೆ ತೋರುತ್ತಿದ್ದ ತೇಜಸ್ವೀ ಭೀಮಸೇನರು ಅವರನ್ನು ಎದುರಿಸಿದರು.

09028003a ಶಕ್ತ್ಯೃಷ್ಟಿಪ್ರಾಸಹಸ್ತಾನಾಂ ಸಹದೇವಂ ಜಿಘಾಂಸತಾಂ|

09028003c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ||

ಸಹದೇವನನ್ನು ಸಂಹರಿಸಲು ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದಿದ್ದ ಸಹಸ್ರಾರು ಯೋಧರ ಸಂಕಲ್ಪಗಳನ್ನು ಧನಂಜಯನು ಗಾಂಡೀವದಿಂದ ವ್ಯರ್ಥಗೊಳಿಸಿದನು.

09028004a ಪ್ರಗೃಹೀತಾಯುಧಾನ್ಬಾಹೂನ್ಯೋಧಾನಾಮಭಿಧಾವತಾಂ|

09028004c ಭಲ್ಲೈಶ್ಚಿಚ್ಚೇದ ಬೀಭತ್ಸುಃ ಶಿರಾಂಸ್ಯಪಿ ಹಯಾನಪಿ||

ಧಾವಿಸಿ ಬರುತ್ತಿದ್ದ ಯೋಧರ ಆಯುಧಗಳನ್ನು ಹಿಡಿದಿದ್ದ ಬಾಹುಗಳನ್ನು, ಶಿರಗಳನ್ನು ಮತ್ತು ಕುದುರೆಗಳನ್ನು ಬೀಭತ್ಸುವು ಭಲ್ಲಗಳಿಂದ ತುಂಡರಿಸಿದನು.

09028005a ತೇ ಹತಾಃ ಪ್ರತ್ಯಪದ್ಯಂತ ವಸುಧಾಂ ವಿಗತಾಸವಃ|

09028005c ತ್ವರಿತಾ ಲೋಕವೀರೇಣ ಪ್ರಹತಾಃ ಸವ್ಯಸಾಚಿನಾ||

ಲೋಕವೀರ ಸವ್ಯಸಾಚಿಯಿಂದ ಪ್ರಹರಿಸಲ್ಪಟ್ಟ ಅವರು ಅಸುನೀಗಿ ವಸುಧೆಯಮೇಲೆ ತೊಪತೊಪನೆ ಬೀಳುತ್ತಿದ್ದರು.

09028006a ತತೋ ದುರ್ಯೋಧನೋ ರಾಜಾ ದೃಷ್ಟ್ವಾ ಸ್ವಬಲಸಂಕ್ಷಯಂ|

09028006c ಹತಶೇಷಾನ್ಸಮಾನೀಯ ಕ್ರುದ್ಧೋ ರಥಶತಾನ್ವಿಭೋ||

09028007a ಕುಂಜರಾಂಶ್ಚ ಹಯಾಂಶ್ಚೈವ ಪಾದಾತಾಂಶ್ಚ ಪರಂತಪ|

09028007c ಉವಾಚ ಸಹಿತಾನ್ಸರ್ವಾನ್ಧಾರ್ತರಾಷ್ಟ್ರ ಇದಂ ವಚಃ||

ವಿಭೋ! ಪರಂತಪ! ಆಗ ರಾಜಾ ಧಾರ್ತರಾಷ್ಟ್ರ ದುರ್ಯೋಧನನು ತನ್ನ ಸೇನೆಯು ಕ್ಷಯವಾಗುತ್ತಿರುವುದನ್ನು ನೋಡಿ ಕ್ರುದ್ಧನಾಗಿ, ನಾಶಗೊಳ್ಳದೇ ಉಳಿದಿದ್ದ ನೂರಾರು ರಥ-ಆನೆ-ಕುದುರೆಗಳ ಸವಾರರನ್ನು ಮತ್ತು ಪದಾತಿಗಳನ್ನು ಒಟ್ಟಾಗಿ ಕರೆದು ಈ ಮಾತನ್ನಾಡಿದನು:

09028008a ಸಮಾಸಾದ್ಯ ರಣೇ ಸರ್ವಾನ್ಪಾಂಡವಾನ್ಸಸುಹೃದ್ಗಣಾನ್|

09028008c ಪಾಂಚಾಲ್ಯಂ ಚಾಪಿ ಸಬಲಂ ಹತ್ವಾ ಶೀಘ್ರಂ ನಿವರ್ತತ||

“ಕೂಡಲೇ ರಣವನ್ನು ಸೇರಿ ತಮ್ಮ ಸೇನೆ ಮತ್ತು ಸುಹೃದಯ ಪಾಂಚಾಲ್ಯ ಗಣಗಳಿಂದ ಕೂಡಿರುವ ಪಾಂಡವರೆಲ್ಲರನ್ನೂ ಸಂಹರಿಸಿ ಹಿಂದಿರುಗಿರಿ!”

09028009a ತಸ್ಯ ತೇ ಶಿರಸಾ ಗೃಹ್ಯ ವಚನಂ ಯುದ್ಧದುರ್ಮದಾಃ|

09028009c ಪ್ರತ್ಯುದ್ಯಯೂ ರಣೇ ಪಾರ್ಥಾಂಸ್ತವ ಪುತ್ರಸ್ಯ ಶಾಸನಾತ್||

ಅವನ ಆ ಮಾತನ್ನು ಶಿರಸಾವಹಿಸಿ ನಿನ್ನ ಪುತ್ರನ ಶಾಸನದಂತೆಯೇ ಆ ಯುದ್ಧದುರ್ಮದರು ರಣದಲ್ಲಿ ಪಾರ್ಥರನ್ನು ಎದುರಿಸಿ ಯುದ್ಧಮಾಡಿದರು.

09028010a ತಾನಭ್ಯಾಪತತಃ ಶೀಘ್ರಂ ಹತಶೇಷಾನ್ಮಹಾರಣೇ|

09028010c ಶರೈರಾಶೀವಿಷಾಕಾರೈಃ ಪಾಂಡವಾಃ ಸಮವಾಕಿರನ್||

ಮಹಾರಣದಲ್ಲಿ ಹತರಾಗದೇ ತಮ್ಮ ಮೇಲೆ ಬೀಳುತ್ತಿದ್ದ ಅವರನ್ನು ಪಾಂಡವರು ಶೀಘ್ರದಲ್ಲಿಯೇ ವಿಷಸರ್ಪಗಳ ಆಕಾರದ ಬಾಣಗಳಿಂದ ಮುಚ್ಚಿಬಿಟ್ಟರು.

09028011a ತತ್ಸೈನ್ಯಂ ಭರತಶ್ರೇಷ್ಠ ಮುಹೂರ್ತೇನ ಮಹಾತ್ಮಭಿಃ|

09028011c ಅವಧ್ಯತ ರಣಂ ಪ್ರಾಪ್ಯ ತ್ರಾತಾರಂ ನಾಭ್ಯವಿಂದತ||

09028011e ಪ್ರತಿಷ್ಠಮಾನಂ ತು ಭಯಾನ್ನಾವತಿಷ್ಠತ ದಂಶಿತಂ||

ಭರತಶ್ರೇಷ್ಠ! ತ್ರಾತಾರರಿಲ್ಲದೇ ರಣವನ್ನು ಸೇರಿದ ಅವರನ್ನು ಮುಹೂರ್ತಮಾತ್ರದಲ್ಲಿ ಮಹಾತ್ಮ ಪಾಂಡವರು ವಧಿಸಿಬಿಟ್ಟರು. ಕವಚಧಾರಿಗಳಾಗಿ ಯುದ್ಧದಲ್ಲಿ ನಿಂತಿದ್ದರೂ ಭಯದಿಂದ ಅವರು ಹೆಚ್ಚುಕಾಲ ನಿಲ್ಲಲಿಲ್ಲ.

09028012a ಅಶ್ವೈರ್ವಿಪರಿಧಾವದ್ಭಿಃ ಸೈನ್ಯೇನ ರಜಸಾ ವೃತೇ|

09028012c ನ ಪ್ರಾಜ್ಞಾಯಂತ ಸಮರೇ ದಿಶಶ್ಚ ಪ್ರದಿಶಸ್ತಥಾ||

ಕುದುರೆಗಳನ್ನೇರಿ ಪಲಾಯನ ಮಾಡುತ್ತಿದ್ದ ಸೇನೆಗಳಿಂದ ಮೇಲೆದ್ದ ಧೂಳು ತುಂಬಿಕೊಂಡಿರಲು ರಣರಂಗದಲ್ಲಿ ದಿಕ್ಕು ಉಪದಿಕ್ಕುಗಳ್ಯಾವುವೆಂದೇ ತೋರುತ್ತಿರಲಿಲ್ಲ.

09028013a ತತಸ್ತು ಪಾಂಡವಾನೀಕಾನ್ನಿಃಸೃತ್ಯ ಬಹವೋ ಜನಾಃ|

09028013c ಅಭ್ಯಘ್ನಂಸ್ತಾವಕಾನ್ಯುದ್ಧೇ ಮುಹೂರ್ತಾದಿವ ಭಾರತ||

09028013e ತತೋ ನಿಃಶೇಷಮಭವತ್ತತ್ಸೈನ್ಯಂ ತವ ಭಾರತ||

ಭಾರತ! ಆಗ ಪಾಂಡವರ ಸೇನೆಯಿಂದ ಹೊರಬಂದ ಅನೇಕ ಜನರು ಓಡಿಹೋಗುತ್ತಿರುವ ನಿನ್ನವರನ್ನು ಕ್ಷಣಮಾತ್ರದಲ್ಲಿ ಸಂಹರಿಸಿದರು. ಭಾರತ! ಆಗ ನಿನ್ನ ಸೇನೆಯಲ್ಲಿ ಯಾರೂ ಉಳಿದುಕೊಂಡಿರದ ಹಾಗಾಯಿತು.

09028014a ಅಕ್ಷೌಹಿಣ್ಯಃ ಸಮೇತಾಸ್ತು ತವ ಪುತ್ರಸ್ಯ ಭಾರತ|

09028014c ಏಕಾದಶ ಹತಾ ಯುದ್ಧೇ ತಾಃ ಪ್ರಭೋ ಪಾಂಡುಸೃಂಜಯೈಃ||

ಭಾರತ! ಪ್ರಭೋ! ಯುದ್ಧದಲ್ಲಿ ಒಂದಾಗಿದ್ದ ನಿನ್ನ ಪುತ್ರನ ಹನ್ನೊಂದು ಅಕ್ಷೌಹಿಣೀ ಸೇನೆಯು ಪಾಂಡು-ಸೃಂಜಯರಿಂದ ನಾಶಗೊಂಡಿತು.

09028015a ತೇಷು ರಾಜಸಹಸ್ರೇಷು ತಾವಕೇಷು ಮಹಾತ್ಮಸು|

09028015c ಏಕೋ ದುರ್ಯೋಧನೋ ರಾಜನ್ನದೃಶ್ಯತ ಭೃಶಂ ಕ್ಷತಃ||

ರಾಜನ್! ನಿನ್ನ ಆ ಸಹಸ್ರಾರು ಮಹಾತ್ಮ ರಾಜರಲ್ಲಿ ಅತ್ಯಂತ ಗಾಯಗೊಂಡಿರುವ ದುರ್ಯೋಧನನೊಬ್ಬನೇ ಅಲ್ಲಿ ಕಾಣುತ್ತಿದ್ದನು.

09028016a ತತೋ ವೀಕ್ಷ್ಯ ದಿಶಃ ಸರ್ವಾ ದೃಷ್ಟ್ವಾ ಶೂನ್ಯಾಂ ಚ ಮೇದಿನೀಂ|

09028016c ವಿಹೀನಃ ಸರ್ವಯೋಧೈಶ್ಚ ಪಾಂಡವಾನ್ವೀಕ್ಷ್ಯ ಸಂಯುಗೇ||

09028017a ಮುದಿತಾನ್ಸರ್ವಸಿದ್ಧಾರ್ಥಾನ್ನರ್ದಮಾನಾನ್ಸಮಂತತಃ|

09028017c ಬಾಣಶಬ್ದರವಾಂಶ್ಚೈವ ಶ್ರುತ್ವಾ ತೇಷಾಂ ಮಹಾತ್ಮನಾಂ||

09028018a ದುರ್ಯೋಧನೋ ಮಹಾರಾಜ ಕಶ್ಮಲೇನಾಭಿಸಂವೃತಃ|

09028018c ಅಪಯಾನೇ ಮನಶ್ಚಕ್ರೇ ವಿಹೀನಬಲವಾಹನಃ||

ಆಗ ಸರ್ವದಿಕ್ಕುಗಳನ್ನೂ ನೋಡಿ, ಭೂಮಿಯು ಸರ್ವಯೋಧರಿಂದ ವಿಹೀನವಾಗಿ ಶೂನ್ಯವಾದುದನ್ನು ಕಂಡು, ಸರ್ವ ಉದ್ದೇಶಗಳನ್ನೂ ಪೂರೈಸಿ ಹರ್ಷಿತರಾದ ಪಾಂಡವರನ್ನು ಎಲ್ಲೆಡೆಯೂ ಕಂಡು, ಆ ಮಹಾತ್ಮರ ಬಾಣಗಳ ಶಬ್ಧ ಮತ್ತು ಕೂಗುಗಳನ್ನು ಕೇಳಿ ಸೇನೆ-ವಾಹನಗಳನ್ನು ಕಳೆದುಕೊಂಡಿದ್ದ ದುರ್ಯೋಧನನು ಶೋಕಸಂತಪ್ತನಾಗಿ ಯುದ್ಧದಿಂದ ಹಿಮ್ಮೆಟ್ಟುವ ಮನಸ್ಸುಮಾಡಿದನು.”

09028019 ಧೃತರಾಷ್ಟ್ರ ಉವಾಚ

09028019a ನಿಹತೇ ಮಾಮಕೇ ಸೈನ್ಯೇ ನಿಃಶೇಷೇ ಶಿಬಿರೇ ಕೃತೇ|

09028019c ಪಾಂಡವಾನಾಂ ಬಲಂ ಸೂತ ಕಿಂ ನು ಶೇಷಮಭೂತ್ತದಾ||

09028019e ಏತನ್ಮೇ ಪೃಚ್ಚತೋ ಬ್ರೂಹಿ ಕುಶಲೋ ಹ್ಯಸಿ ಸಂಜಯ||

ಧೃತರಾಷ್ಟ್ರನು ಹೇಳಿದನು: “ಸೂತ! ನನ್ನಕಡೆಯ ಸೇನೆಯನ್ನು ಸಂಹರಿಸಿ ಶಿಬಿರಗಳನ್ನು ನಿಃಶೇಷವನ್ನಾಗಿ ಮಾಡಿದ ಪಾಂಡವ ಸೇನೆಯು ಆ ಸಮಯದಲ್ಲಿ ಎಷ್ಟು ಉಳಿದು ಕೊಂಡಿತ್ತು? ಸಂಜಯ! ಹೀಗೆ ಕೇಳುತ್ತಿರುವ ನನಗೆ ಹೇಳು. ನೀನು ಕುಶಲನಾಗಿರುವೆ!

09028020a ಯಚ್ಚ ದುರ್ಯೋಧನೋ ಮಂದಃ ಕೃತವಾಂಸ್ತನಯೋ ಮಮ|

09028020c ಬಲಕ್ಷಯಂ ತಥಾ ದೃಷ್ಟ್ವಾ ಸ ಏಕಃ ಪೃಥಿವೀಪತಿಃ||

ಹಾಗೆ ತನ್ನ ಸೇನೆಯು ನಾಶವಾದುದನ್ನು ನೋಡಿ ಒಬ್ಬಂಟಿಗ ಪೃಥಿವೀಪತಿ ನನ್ನ ಮಗ ಮೂಢ ದುರ್ಯೋಧನನು ಏನು ಮಾಡಿದನು?”

09028021 ಸಂಜಯ ಉವಾಚ

09028021a ರಥಾನಾಂ ದ್ವೇ ಸಹಸ್ರೇ ತು ಸಪ್ತ ನಾಗಶತಾನಿ ಚ|

09028021c ಪಂಚ ಚಾಶ್ವಸಹಸ್ರಾಣಿ ಪತ್ತೀನಾಂ ಚ ಶತಂ ಶತಾಃ||

09028022a ಏತಚ್ಚೇಷಮಭೂದ್ರಾಜನ್ಪಾಂಡವಾನಾಂ ಮಹದ್ಬಲಂ|

09028022c ಪರಿಗೃಹ್ಯ ಹಿ ಯದ್ಯುದ್ಧೇ ಧೃಷ್ಟದ್ಯುಮ್ನೋ ವ್ಯವಸ್ಥಿತಃ||

ಸಂಜಯನು ಹೇಳಿದನು: “ರಾಜನ್! ಪಾಂಡವರ ಮಹಾ ಸೇನೆಯಲ್ಲಿ ಎರಡು ಸಾವಿರ ರಥಗಳೂ, ಏಳು ನೂರು ಆನೆಗಳೂ, ಐದು ಸಾವಿರ ಕುದುರೆಗಳೂ, ಹತ್ತುಸಾವಿರ ಪದಾತಿಗಳೂ ಉಳಿದುಕೊಂಡಿದ್ದವು. ಆ ಸೇನೆಯೊಡನೆ ಧೃಷ್ಟದ್ಯುಮ್ನನು ಯುದ್ಧದಲ್ಲಿ ನಿಂತಿದ್ದನು.

09028023a ಏಕಾಕೀ ಭರತಶ್ರೇಷ್ಠ ತತೋ ದುರ್ಯೋಧನೋ ನೃಪಃ|

09028023c ನಾಪಶ್ಯತ್ಸಮರೇ ಕಂ ಚಿತ್ಸಹಾಯಂ ರಥಿನಾಂ ವರಃ||

ಭರತಶ್ರೇಷ್ಠ! ಆಗ ಏಕಾಕಿಯಾಗಿದ್ದ ರಥಿಗಳಲ್ಲಿ ಶ್ರೇಷ್ಠ ನೃಪ ದುರ್ಯೋಧನನು ಸಮರದಲ್ಲಿ ಸಹಾಯಕರಾಗಿರುವ ಯಾರೊಬ್ಬನನ್ನೂ ಕಾಣಲಿಲ್ಲ.

09028024a ನರ್ದಮಾನಾನ್ಪರಾಂಶ್ಚೈವ ಸ್ವಬಲಸ್ಯ ಚ ಸಂಕ್ಷಯಂ|

09028024c ಹತಂ ಸ್ವಹಯಮುತ್ಸೃಜ್ಯ ಪ್ರಾಙ್ಮುಖಃ ಪ್ರಾದ್ರವದ್ಭಯಾತ್||

ಗರ್ಜಿಸುತ್ತಿದ್ದ ಶತ್ರುಗಳನ್ನೂ, ನಾಶವಾಗಿದ್ದ ತನ್ನ ಸೇನೆಯನ್ನೂ, ಮತ್ತು ಸತ್ತುಹೋಗಿದ್ದ ತನ್ನ ಕುದುರೆಯನ್ನು ಬಿಟ್ಟು ಭಯದಿಂದ ಪೂರ್ವದಿಕ್ಕಿನಲ್ಲಿ ಓಡತೊಡಗಿದನು.

09028025a ಏಕಾದಶಚಮೂಭರ್ತಾ ಪುತ್ರೋ ದುರ್ಯೋಧನಸ್ತವ|

09028025c ಗದಾಮಾದಾಯ ತೇಜಸ್ವೀ ಪದಾತಿಃ ಪ್ರಸ್ಥಿತೋ ಹ್ರದಂ||

ಹನ್ನೊಂದು ಅಕ್ಷೌಹಿಣೀ ಸೇನೆಗಳ ಒಡೆಯನಾಗಿದ್ದ ನಿನ್ನ ಮಗ ತೇಜಸ್ವೀ ದುರ್ಯೋಧನನು ಗದೆಯನ್ನೆತ್ತಿಕೊಂಡು ಕಾಲ್ನಡುಗೆಯಲ್ಲಿಯೇ ಸರೋವರದ ಕಡೆ ಹೊರಟನು.

09028026a ನಾತಿದೂರಂ ತತೋ ಗತ್ವಾ ಪದ್ಭ್ಯಾಮೇವ ನರಾಧಿಪಃ|

09028026c ಸಸ್ಮಾರ ವಚನಂ ಕ್ಷತ್ತುರ್ಧರ್ಮಶೀಲಸ್ಯ ಧೀಮತಃ||

ಕಾಲ್ನಡುಗೆಯಲ್ಲಿಯೇ ಸ್ವಲ್ಪದೂರ ಹೋಗಿ ನರಾಧಿಪನು ಧರ್ಮಶೀಲ ಧೀಮಂತ ಕ್ಷತ್ತ ವಿದುರನ ಮಾತನ್ನು ನೆನಪಿಸಿಕೊಂಡನು:

09028027a ಇದಂ ನೂನಂ ಮಹಾಪ್ರಾಜ್ಞೋ ವಿದುರೋ ದೃಷ್ಟವಾನ್ಪುರಾ|

09028027c ಮಹದ್ವೈಶಸಮಸ್ಮಾಕಂ ಕ್ಷತ್ರಿಯಾಣಾಂ ಚ ಸಂಯುಗೇ||

“ಯುದ್ಧದಲ್ಲಿ ನಮ್ಮ ಕ್ಷತ್ರಿಯರ ಈ ಮಹಾ ವಿನಾಶವನ್ನು ಮಹಾಪ್ರಾಜ್ಞ ವಿದುರನು ಬಹಳ ಹಿಂದೆಯೇ ಕಂಡಿದ್ದನು!”

09028028a ಏವಂ ವಿಚಿಂತಯಾನಸ್ತು ಪ್ರವಿವಿಕ್ಷುರ್ಹ್ರದಂ ನೃಪಃ|

09028028c ದುಃಖಸಂತಪ್ತಹೃದಯೋ ದೃಷ್ಟ್ವಾ ರಾಜನ್ಬಲಕ್ಷಯಂ||

ರಾಜನ್! ಹೀಗೆ ಯೋಚಿಸುತ್ತಾ ಸೇನೆಗಳ ನಾಶವನ್ನು ನೋಡಿ ದುಃಖಸಂತಪ್ತ ಹೃದಯನಾಗಿ ನೃಪನು ಸರೋವರವನ್ನು ಪ್ರವೇಶಿಸಿದನು.

09028029a ಪಾಂಡವಾಶ್ಚ ಮಹಾರಾಜ ಧೃಷ್ಟದ್ಯುಮ್ನಪುರೋಗಮಾಃ|

09028029c ಅಭ್ಯಧಾವಂತ ಸಂಕ್ರುದ್ಧಾಸ್ತವ ರಾಜನ್ಬಲಂ ಪ್ರತಿ||

ಮಹಾರಾಜ! ರಾಜನ್! ಧೃಷ್ಟದ್ಯುಮ್ನನನ್ನು ಮುಂದಿರಿಸಿಕೊಂಡು ಪಾಂಡವರು ಸಂಕ್ರುದ್ಧರಾಗಿ ನಿನ್ನ ಸೇನೆಯನ್ನು ಆಕ್ರಮಣಿಸಿದರು.

09028030a ಶಕ್ತ್ಯೃಷ್ಟಿಪ್ರಾಸಹಸ್ತಾನಾಂ ಬಲಾನಾಮಭಿಗರ್ಜತಾಂ|

09028030c ಸಂಕಲ್ಪಮಕರೋನ್ಮೋಘಂ ಗಾಂಡೀವೇನ ಧನಂಜಯಃ||

ಆಗ ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಗರ್ಜಿಸುತ್ತಿರುವ ಸಹಸ್ರಾರು ಯೋಧರ ಸಂಕಲ್ಪಗಳನ್ನು ಗಾಂಡೀವದಿಂದ ಧನಂಜಯನು ವ್ಯರ್ಥಗೊಳಿಸಿದನು.

09028031a ತಾನ್ ಹತ್ವಾ ನಿಶಿತೈರ್ಬಾಣೈಃ ಸಾಮಾತ್ಯಾನ್ಸಹ ಬಂಧುಭಿಃ|

09028031c ರಥೇ ಶ್ವೇತಹಯೇ ತಿಷ್ಠನ್ನರ್ಜುನೋ ಬಹ್ವಶೋಭತ||

ಅಮಾತ್ಯ-ಬಂಧುಗಳೊಂದಿಗೆ ಅವರನ್ನು ನಿಶಿತಬಾಣಗಳಿಂದ ಸಂಹರಿಸಿ ಶ್ವೇತಕುದುರೆಗಳ ರಥದಲ್ಲಿ ನಿಂತಿದ್ದ ಅರ್ಜುನನು ಬಹಳವಾಗಿ ಶೋಭಿಸಿದನು.

09028032a ಸುಬಲಸ್ಯ ಹತೇ ಪುತ್ರೇ ಸವಾಜಿರಥಕುಂಜರೇ|

09028032c ಮಹಾವನಮಿವ ಚಿನ್ನಮಭವತ್ತಾವಕಂ ಬಲಂ||

ರಥ-ಕುದುರೆ-ಆನೆಗಳೊಂದಿಗೆ ಸುಬಲನ ಮಗನು ಹತನಾಗಲು ನಿನ್ನ ಸೇನೆಯು ಮರಗಳು ಕಡಿದುಬಿದ್ದಿರುವ ಮಹಾವನದಂತೆ ತೋರುತ್ತಿತ್ತು.

09028033a ಅನೇಕಶತಸಾಹಸ್ರೇ ಬಲೇ ದುರ್ಯೋಧನಸ್ಯ ಹ|

09028033c ನಾನ್ಯೋ ಮಹಾರಥೋ ರಾಜನ್ಜೀವಮಾನೋ ವ್ಯದೃಶ್ಯತ||

09028034a ದ್ರೋಣಪುತ್ರಾದೃತೇ ವೀರಾತ್ತಥೈವ ಕೃತವರ್ಮಣಃ|

09028034c ಕೃಪಾಚ್ಚ ಗೌತಮಾದ್ರಾಜನ್ಪಾರ್ಥಿವಾಚ್ಚ ತವಾತ್ಮಜಾತ್||

ರಾಜನ್! ದುರ್ಯೋಧನನ ಅನೇಕ ಲಕ್ಷಸಂಖ್ಯಾತ ಸೇನೆಯಲ್ಲಿ ದ್ರೋಣಪುತ್ರ, ವೀರ ಕೃತವರ್ಮ, ಗೌತಮ ಕೃಪ ಮತ್ತು ನಿನ್ನ ಮಗ ಪಾರ್ಥಿವನನ್ನು ಬಿಟ್ಟು ಬೇರೆ ಯಾವ ಮಹಾರಥನೂ ಜೀವಂತವಾಗಿರುವುದು ತೋರಿಬರಲಿಲ್ಲ.

09028035a ಧೃಷ್ಟದ್ಯುಮ್ನಸ್ತು ಮಾಂ ದೃಷ್ಟ್ವಾ ಹಸನ್ಸಾತ್ಯಕಿಮಬ್ರವೀತ್|

09028035c ಕಿಮನೇನ ಗೃಹೀತೇನ ನಾನೇನಾರ್ಥೋಽಸ್ತಿ ಜೀವತಾ||

ಧೃಷ್ಟದ್ಯುಮ್ನನಾದರೋ ನನ್ನನ್ನು ನೋಡಿ ನಗುತ್ತಾ ಸಾತ್ಯಕಿಗೆ ಹೇಳಿದನು: “ಸೆರೆಯಲ್ಲಿರುವ ಇವನನ್ನು ಜೀವಂತವಿಡುವುದರಿಂದ ನಮಗೇನಾಗಲಿಕ್ಕಿದೆ?”

09028036a ಧೃಷ್ಟದ್ಯುಮ್ನವಚಃ ಶ್ರುತ್ವಾ ಶಿನೇರ್ನಪ್ತಾ ಮಹಾರಥಃ|

09028036c ಉದ್ಯಮ್ಯ ನಿಶಿತಂ ಖಡ್ಗಂ ಹಂತುಂ ಮಾಮುದ್ಯತಸ್ತದಾ||

ಧೃಷ್ಟದ್ಯುಮ್ನನ ಮಾತನ್ನು ಕೇಳಿ ಮಹಾರಥ ಶಿನಿಯ ಮಗನು ನನ್ನನ್ನು ಕೊಲ್ಲಲು ನಿಶಿತ ಖಡ್ಗವನ್ನು ಮೇಲೆತ್ತಿದನು.

09028037a ತಮಾಗಮ್ಯ ಮಹಾಪ್ರಾಜ್ಞಃ ಕೃಷ್ಣದ್ವೈಪಾಯನೋಽಬ್ರವೀತ್|

09028037c ಮುಚ್ಯತಾಂ ಸಂಜಯೋ ಜೀವನ್ನ ಹಂತವ್ಯಃ ಕಥಂ ಚನ||

ಆಗ ಅಲ್ಲಿಗೆ ಮಹಾಪ್ರಾಜ್ಞ ಕೃಷ್ಣದ್ವೈಪಾಯನನು ಬಂದು “ಸಂಜಯನನ್ನು ಜೀವಸಹಿತ ಬಿಟ್ಟು ಬಿಡಿ! ಯಾವುದೇ ಕಾರಣದಿಂದ ಇವನನ್ನು ಸಂಹರಿಸಬಾರದು!” ಎಂದು ಹೇಳಿದನು.

09028038a ದ್ವೈಪಾಯನವಚಃ ಶ್ರುತ್ವಾ ಶಿನೇರ್ನಪ್ತಾ ಕೃತಾಂಜಲಿಃ|

09028038c ತತೋ ಮಾಮಬ್ರವೀನ್ಮುಕ್ತ್ವಾ ಸ್ವಸ್ತಿ ಸಂಜಯ ಸಾಧಯ||

ದ್ವೈಪಾಯನನ ಮಾತನ್ನು ಕೇಳಿ ಶೈನೇಯನು ಕೈಮುಗಿದು ನನ್ನನ್ನು ಬಂಧನದಿಂದ ಬಿಡಿಸಿ “ಸಂಜಯ! ನಿನಗೆ ಮಂಗಳವಾಗಲಿ! ನೀನಿನ್ನು ಹೊರಡು!” ಎಂದನು.

09028039a ಅನುಜ್ಞಾತಸ್ತ್ವಹಂ ತೇನ ನ್ಯಸ್ತವರ್ಮಾ ನಿರಾಯುಧಃ|

09028039c ಪ್ರಾತಿಷ್ಠಂ ಯೇನ ನಗರಂ ಸಾಯಾಹ್ನೇ ರುಧಿರೋಕ್ಷಿತಃ||

ಹಾಗೆ ಅವನಿಂದ ಅನುಜ್ಞೆಯನ್ನು ಪಡೆದು ಕವಚವನ್ನು ಬಿಚ್ಚಿಟ್ಟು ನಿರಾಯುಧನಾಗಿ ರಕ್ತದಿಂದ ತೋಯ್ದು ಹೋಗಿದ್ದ ನಾನು ಸಾಯಂಕಾಲದ ಹೊತ್ತಿಗೆ ನಗರದ ಕಡೆ ಹೊರಟೆನು.

09028040a ಕ್ರೋಶಮಾತ್ರಮಪಕ್ರಾಂತಂ ಗದಾಪಾಣಿಮವಸ್ಥಿತಂ|

09028040c ಏಕಂ ದುರ್ಯೋಧನಂ ರಾಜನ್ನಪಶ್ಯಂ ಭೃಶವಿಕ್ಷತಂ||

ರಾಜನ್! ಕ್ರೋಶಮಾತ್ರ ದೂರಬಂದಾಗ ಅಲ್ಲಿ ತುಂಬಾ ಗಾಯಗೊಂಡು ಗದಾಪಾಣಿಯಾಗಿ ಏಕಾಂಗಿಯಾಗಿ ನಿಂತಿದ್ದ ದುರ್ಯೋಧನನನ್ನು ಕಂಡೆನು.

09028041a ಸ ತು ಮಾಮಶ್ರುಪೂರ್ಣಾಕ್ಷೋ ನಾಶಕ್ನೋದಭಿವೀಕ್ಷಿತುಂ|

09028041c ಉಪಪ್ರೈಕ್ಷತ ಮಾಂ ದೃಷ್ಟ್ವಾ ತದಾ ದೀನಮವಸ್ಥಿತಂ||

ಕಣ್ಣೀರು ತುಂಬಿಕೊಂಡಿದ್ದುದರಿಂದ ಅವನಿಗೆ ನನ್ನನ್ನು ನೋಡಲಾಗಲಿಲ್ಲ. ಸ್ವಲ್ಪಹೊತ್ತಿನ ನಂತರ ದೀನನಾಗಿ ಬಳಿಯಲ್ಲಿಯೇ ನಿಂತಿದ್ದ ನನ್ನನ್ನು ಅವನು ನೋಡಿದನು.

09028042a ತಂ ಚಾಹಮಪಿ ಶೋಚಂತಂ ದೃಷ್ಟ್ವೈಕಾಕಿನಮಾಹವೇ|

09028042c ಮುಹೂರ್ತಂ ನಾಶಕಂ ವಕ್ತುಂ ಕಿಂ ಚಿದ್ದುಃಖಪರಿಪ್ಲುತಃ||

ರಣರಂಗದಲ್ಲಿ ಏಕಾಂಗಿಯಾಗಿ ಶೋಕಿಸುತ್ತಿದ್ದ ಅವನನ್ನು ನೋಡಿ ದುಃಖತುಂಬಿಬಂದಿದ್ದ ನನಗೂ ಸ್ವಲ್ಪಹೊತ್ತು ಅವನಿಗೆ ಏನನ್ನು ಹೇಳಲೂ ಸಾಧ್ಯವಾಗಲಿಲ್ಲ.

09028043a ತತೋಽಸ್ಮೈ ತದಹಂ ಸರ್ವಮುಕ್ತವಾನ್ಗ್ರಹಣಂ ತದಾ|

09028043c ದ್ವೈಪಾಯನಪ್ರಸಾದಾಚ್ಚ ಜೀವತೋ ಮೋಕ್ಷಮಾಹವೇ||

ಅನಂತರ ಅವನಿಗೆ ಯುದ್ಧದಲ್ಲಿ ನಾನು ಸೆರೆಯಾದುದು ಮತ್ತು ದ್ವೈಪಾಯನನ ಪ್ರಸಾದದಿಂದ ಜೀವಂತನಾಗಿ ಬಿಡುಗಡೆಹೊಂದಿದ್ದುದು ಎಲ್ಲದರ ಕುರಿತು ಹೇಳಿದೆನು.

09028044a ಮುಹೂರ್ತಮಿವ ಚ ಧ್ಯಾತ್ವಾ ಪ್ರತಿಲಭ್ಯ ಚ ಚೇತನಾಂ|

09028044c ಭ್ರಾತೄಂಶ್ಚ ಸರ್ವಸೈನ್ಯಾನಿ ಪರ್ಯಪೃಚ್ಚತ ಮಾಂ ತತಃ||

ಮುಹೂರ್ತಕಾಲ ಚಿಂತಿಸುತ್ತಲೇ ಇದ್ದು, ಪುನಃ ತನ್ನ ಮನಸ್ಸನ್ನು ಹಿಡಿತಕ್ಕೆ ತಂದುಕೊಂಡು, ನನ್ನಲ್ಲಿ ತನ್ನ ಸಹೋದರರ ಮತ್ತು ಸರ್ವ ಸೇನೆಗಳ ಕುರಿತು ಪ್ರಶ್ನಿಸಿದನು.

09028045a ತಸ್ಮೈ ತದಹಮಾಚಕ್ಷಂ ಸರ್ವಂ ಪ್ರತ್ಯಕ್ಷದರ್ಶಿವಾನ್|

09028045c ಭ್ರಾತೄಂಶ್ಚ ನಿಹತಾನ್ಸರ್ವಾನ್ಸೈನ್ಯಂ ಚ ವಿನಿಪಾತಿತಂ||

ಆಗ ಎಲ್ಲವನ್ನೂ ಪ್ರತ್ಯಕ್ಷವಾಗಿ ಕಂಡಿದ್ದ ನಾನು ಅವನಿಗೆ ಸರ್ವ ಸಹೋದರರೂ ಸೇನೆಗಳೂ ನಿಧನಹೊಂದಿರುವುದನ್ನು ವರದಿಮಾಡಿದೆ.

09028046a ತ್ರಯಃ ಕಿಲ ರಥಾಃ ಶಿಷ್ಟಾಸ್ತಾವಕಾನಾಂ ನರಾಧಿಪ|

09028046c ಇತಿ ಪ್ರಸ್ಥಾನಕಾಲೇ ಮಾಂ ಕೃಷ್ಣದ್ವೈಪಾಯನೋಽಬ್ರವೀತ್||

“ನರಾಧಿಪ! ನಿನ್ನ ಕಡೆಯಲ್ಲಿ ಮೂವರು ಮಹಾರಥರು ಮಾತ್ರ ಉಳಿದುಕೊಂಡಿದ್ದಾರೆಂದು ನಾನು ಯುದ್ಧಭೂಮಿಯಿಂದ ಹೊರಡುವಾಗ ಕೃಷ್ಣದ್ವೈಪಾಯನನು ಹೇಳಿದ್ದನು.”

09028047a ಸ ದೀರ್ಘಮಿವ ನಿಃಶ್ವಸ್ಯ ವಿಪ್ರೇಕ್ಷ್ಯ ಚ ಪುನಃ ಪುನಃ|

09028047c ಅಂಸೇ ಮಾಂ ಪಾಣಿನಾ ಸ್ಪೃಷ್ಟ್ವಾ ಪುತ್ರಸ್ತೇ ಪರ್ಯಭಾಷತ||

ಆಗ ನಿನ್ನ ಮಗನು ದೀರ್ಘ ನಿಟ್ಟುಸಿರು ಬಿಡುತ್ತಾ ನನ್ನನ್ನೇ ಪುನಃ ಪುನಃ ನೋಡುತ್ತಾ ಕೈಯಿಂದ ಮುಟ್ಟಿ ಹೇಳಿದನು:

09028048a ತ್ವದನ್ಯೋ ನೇಹ ಸಂಗ್ರಾಮೇ ಕಶ್ಚಿಜ್ಜೀವತಿ ಸಂಜಯ|

09028048c ದ್ವಿತೀಯಂ ನೇಹ ಪಶ್ಯಾಮಿ ಸಸಹಾಯಾಶ್ಚ ಪಾಂಡವಾಃ||

“ಸಂಜಯ! ಈ ಸಂಗ್ರಾಮದಲ್ಲಿ ನಮ್ಮ ಕಡೆಯವನಾಗಿ ನಿನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಜೀವಿಸಿರುವುದಿಲ್ಲ. ಏಕೆಂದರೆ ನಿನ್ನನ್ನು ಬಿಟ್ಟು ಎರಡನೆಯವನನ್ನು ನಾನು ಕಾಣುತ್ತಲೇ ಇಲ್ಲ. ಆದರೆ ಪಾಂಡವರು ಸಹಾಯಕರಿಂದ ಸಂಪನ್ನರಾಗಿದ್ದಾರೆ.

09028049a ಬ್ರೂಯಾಃ ಸಂಜಯ ರಾಜಾನಂ ಪ್ರಜ್ಞಾಚಕ್ಷುಷಮೀಶ್ವರಂ|

09028049c ದುರ್ಯೋಧನಸ್ತವ ಸುತಃ ಪ್ರವಿಷ್ಟೋ ಹ್ರದಮಿತ್ಯುತ||

ಸಂಜಯ! ಪ್ರಜ್ಞಾಚಕ್ಷು ಈಶ್ವರ ರಾಜನಿಗೆ “ನಿನ್ನ ಮಗ ದುರ್ಯೋಧನನು ಸರೋವರವನ್ನು ಪ್ರವೇಶಿಸಿದ್ದಾನೆ” ಎಂದು ಹೇಳು.

09028050a ಸುಹೃದ್ಭಿಸ್ತಾದೃಶೈರ್ಹೀನಃ ಪುತ್ರೈರ್ಭ್ರಾತೃಭಿರೇವ ಚ|

09028050c ಪಾಂಡವೈಶ್ಚ ಹೃತೇ ರಾಜ್ಯೇ ಕೋ ನು ಜೀವತಿ ಮಾದೃಶಃ||

ಸುಹೃದಯರಿಂದಲೂ, ಪುತ್ರರಿಂದಲೂ, ಸಹೋದರರಿಂದಲೂ ವಿಹೀನನಾದ ನನ್ನಂಥವನು ಪಾಂಡವರು ರಾಜ್ಯವನ್ನು ಅಪಹರಿಸಿದ ನಂತರ ಹೇಗೆತಾನೇ ಜೀವಿಸಿರುವನು?

09028051a ಆಚಕ್ಷೇಥಾಃ ಸರ್ವಮಿದಂ ಮಾಂ ಚ ಮುಕ್ತಂ ಮಹಾಹವಾತ್|

09028051c ಅಸ್ಮಿಂಸ್ತೋಯಹ್ರದೇ ಸುಪ್ತಂ ಜೀವಂತಂ ಭೃಶವಿಕ್ಷತಂ||

ತುಂಬಾ ಗಾಯಗೊಂಡಿರುವ ನಾನು ಮಹಾಯುದ್ಧದಿಂದ ತಪ್ಪಿಸಿಕೊಂಡು ಜೀವಂತನಾಗಿ ನೀರಿನಿಂದ ತುಂಬಿದ ಈ ಸರೋವರದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ ಎಂದು ಎಲ್ಲವನ್ನೂ ಅವನಿಗೆ ಹೇಳು.”

09028052a ಏವಮುಕ್ತ್ವಾ ಮಹಾರಾಜ ಪ್ರಾವಿಶತ್ತಂ ಹ್ರದಂ ನೃಪಃ|

09028052c ಅಸ್ತಂಭಯತ ತೋಯಂ ಚ ಮಾಯಯಾ ಮನುಜಾಧಿಪಃ||

ಮಹಾರಾಜ! ಹೀಗೆ ಹೇಳಿ ನೃಪ ಮನುಜಾಧಿಪನು ಸರೋವರವನ್ನು ಪ್ರವೇಶಿಸಿದನು ಮತ್ತು ಮಾಯೆಯಿಂದ ನೀರನ್ನು ಸ್ತಂಭಿಸಿದನು.

09028053a ತಸ್ಮಿನ್ ಹ್ರದಂ ಪ್ರವಿಷ್ಟೇ ತು ತ್ರೀನ್ರಥಾನ್ ಶ್ರಾಂತವಾಹನಾನ್|

09028053c ಅಪಶ್ಯಂ ಸಹಿತಾನೇಕಸ್ತಂ ದೇಶಂ ಸಮುಪೇಯುಷಃ||

09028054a ಕೃಪಂ ಶಾರದ್ವತಂ ವೀರಂ ದ್ರೌಣಿಂ ಚ ರಥಿನಾಂ ವರಂ|

09028054c ಭೋಜಂ ಚ ಕೃತವರ್ಮಾಣಂ ಸಹಿತಾನ್ ಶರವಿಕ್ಷತಾನ್||

ಅವನು ಸರೋವರವನ್ನು ಪ್ರವೇಶಿಸಲು ಒಂಟಿಯಾಗಿ ನಿಂತಿದ್ದ ನಾನು ಆ ಪ್ರದೇಶವನ್ನು ಒಟ್ಟಾಗಿ ತಲುಪಿದ ಮೂವರು ರಥರನ್ನು ವೀರ ಕೃಪ ಶಾರದ್ವತ, ರಥಿಗಳಲ್ಲಿ ಶ್ರೇಷ್ಠ ದ್ರೌಣಿ ಮತ್ತು ಭೋಜ ಕೃತವರ್ಮರನ್ನು ನೋಡಿದೆನು. ಅವರ ಕುದುರೆಗಳು ಬಳಲಿದ್ದವು ಮತ್ತು ಅವರುಗಳು ಕೂಡ ಶರಪ್ರಹಾರಗಳಿಂದ ಗಾಯಗೊಂಡಿದ್ದರು.

09028055a ತೇ ಸರ್ವೇ ಮಾಮಭಿಪ್ರೇಕ್ಷ್ಯ ತೂರ್ಣಮಶ್ವಾನಚೋದಯನ್|

09028055c ಉಪಯಾಯ ಚ ಮಾಮೂಚುರ್ದಿಷ್ಟ್ಯಾ ಜೀವಸಿ ಸಂಜಯ||

ಅವರೆಲ್ಲರೂ ನನ್ನನ್ನು ನೋಡಿ ಬೇಗನೇ ಕುದುರೆಗಳನ್ನು ಓಡಿಸಿಕೊಂಡು ಹತ್ತಿರಬಂದು “ಸಂಜಯ! ಒಳ್ಳೆಯದಾಯಿತು! ನೀನು ಜೀವಂತವಿರುವೆ!” ಎಂದರು.

09028056a ಅಪೃಚ್ಚಂಶ್ಚೈವ ಮಾಂ ಸರ್ವೇ ಪುತ್ರಂ ತವ ಜನಾಧಿಪಂ|

09028056c ಕಚ್ಚಿದ್ದುರ್ಯೋಧನೋ ರಾಜಾ ಸ ನೋ ಜೀವತಿ ಸಂಜಯ||

ಜನಾಧಿಪ ನಿನ್ನ ಮಗನ ವಿಷಯವಾಗಿ ಎಲ್ಲವನ್ನೂ ಅವರು ಪ್ರಶ್ನಿಸುತ್ತಾ “ಸಂಜಯ! ನಮ್ಮ ರಾಜ ದುರ್ಯೋಧನನು ಬದುಕಿರುವನೇ?” ಎಂದು ಪ್ರಶ್ನಿಸಿದರು.

09028057a ಆಖ್ಯಾತವಾನಹಂ ತೇಭ್ಯಸ್ತದಾ ಕುಶಲಿನಂ ನೃಪಂ|

09028057c ತಚ್ಚೈವ ಸರ್ವಮಾಚಕ್ಷಂ ಯನ್ಮಾಂ ದುರ್ಯೋಧನೋಽಬ್ರವೀತ್||

09028057e ಹ್ರದಂ ಚೈವಾಹಮಾಚಷ್ಟ ಯಂ ಪ್ರವಿಷ್ಟೋ ನರಾಧಿಪಃ||

ಅವರೊಡನೆ ನಾನು ನೃಪನು ಕುಶಲನಾಗಿರುವನೆಂದು ಹೇಳಿ ದುರ್ಯೋಧನನು ನನಗೆ ಹೇಳಿದುದೆಲ್ಲವನ್ನೂ ಅವರಿಗೆ ಹೇಳಿದೆನು. ನರಾಧಿಪನು ಸರೋವರವನ್ನು ಪ್ರವೇಶಿಸಿದನೆನ್ನುವುದನ್ನೂ ಹೇಳಿದೆನು.

09028058a ಅಶ್ವತ್ಥಾಮಾ ತು ತದ್ರಾಜನ್ನಿಶಮ್ಯ ವಚನಂ ಮಮ|

09028058c ತಂ ಹ್ರದಂ ವಿಪುಲಂ ಪ್ರೇಕ್ಷ್ಯ ಕರುಣಂ ಪರ್ಯದೇವಯತ್||

ರಾಜನ್! ನನ್ನ ವಚನವನ್ನು ಕೇಳಿದ ಅಶ್ವತ್ಥಾಮನಾದರೋ ಆ ವಿಶಾಲ ಸರೋವರವನ್ನು ನೋಡಿ ಕರುಣೆಯಿಂದ ವಿಲಪಿಸಿದನು:

09028059a ಅಹೋ ಧಿಘ್ ನ ಸ ಜಾನಾತಿ ಜೀವತೋಽಸ್ಮಾನ್ನರಾಧಿಪಃ|

09028059c ಪರ್ಯಾಪ್ತಾ ಹಿ ವಯಂ ತೇನ ಸಹ ಯೋಧಯಿತುಂ ಪರಾನ್||

“ಅಯ್ಯೋ! ನಮಗೆ ಧಿಕ್ಕಾರ! ನರಾಧಿಪನಿಗೆ ನಾವಿನ್ನೂ ಜೀವಿಸಿರುವೆವೆಂದು ತಿಳಿದಿಲ್ಲ. ಅವನೊಂದಿಗೆ ಸೇರಿ ಶತ್ರುಗಳೊಡನೆ ಯುದ್ಧಮಾಡಲು ಈಗಲೂ ನಾವು ಪರ್ಯಾಪ್ತರಾಗಿದ್ದೇವೆ!”

09028060a ತೇ ತು ತತ್ರ ಚಿರಂ ಕಾಲಂ ವಿಲಪ್ಯ ಚ ಮಹಾರಥಾಃ|

09028060c ಪ್ರಾದ್ರವನ್ರಥಿನಾಂ ಶ್ರೇಷ್ಠಾ ದೃಷ್ಟ್ವಾ ಪಾಂಡುಸುತಾನ್ರಣೇ||

ಬಹಳ ಹೊತ್ತಿನವರೆಗೆ ಆ ಮಹಾರಥರು ಅಲ್ಲಿ ವಿಲಪಿಸುತ್ತಿದ್ದರು. ರಣದಲ್ಲಿ ಪಾಂಡುಸುತರನ್ನು ಕಂಡು ಆ ರಥಶ್ರೇಷ್ಠರು ಪಲಾಯನಗೈದರು.

09028061a ತೇ ತು ಮಾಂ ರಥಮಾರೋಪ್ಯ ಕೃಪಸ್ಯ ಸುಪರಿಷ್ಕೃತಂ|

09028061c ಸೇನಾನಿವೇಶಮಾಜಗ್ಮುರ್ಹತಶೇಷಾಸ್ತ್ರಯೋ ರಥಾಃ||

ಅಳಿದುಳಿದಿದ್ದ ಆ ಮೂವರು ಮಹಾರಥರೂ ನನ್ನನ್ನು ಕೃಪನ ಸುಸಜ್ಜಿತ ರಥದಲ್ಲಿ ಕುಳ್ಳಿರಿಸಿಕೊಂಡು ಸೇನಾ ಶಿಬಿರದಕಡೆ ತೆರಳಿದರು.

09028062a ತತ್ರ ಗುಲ್ಮಾಃ ಪರಿತ್ರಸ್ತಾಃ ಸೂರ್ಯೇ ಚಾಸ್ತಮಿತೇ ಸತಿ|

09028062c ಸರ್ವೇ ವಿಚುಕ್ರುಶುಃ ಶ್ರುತ್ವಾ ಪುತ್ರಾಣಾಂ ತವ ಸಂಕ್ಷಯಂ||

ಸೂರ್ಯನು ಅಸ್ತಮಿಸಲಾಗಿ ಶಿಬಿರವನ್ನು ಕಾಯುತ್ತಿದ್ದ ಸೈನಿಕರು ಬಹಳವಾಗಿ ಭಯಗೊಂಡರು ಮತ್ತು ನಿನ್ನ ಮಕ್ಕಳೆಲ್ಲರೂ ಹತರಾದುದನ್ನು ಕೇಳಿ ಎಲ್ಲರೂ ಗಟ್ಟಿಯಾಗಿ ರೋದಿಸಿದರು.

09028063a ತತೋ ವೃದ್ಧಾ ಮಹಾರಾಜ ಯೋಷಿತಾಂ ರಕ್ಷಣೋ ನರಾಃ|

09028063c ರಾಜದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ||

ಮಹಾರಾಜ! ಆಗ ರಕ್ಷಣೆಯಲ್ಲಿದ್ದ ವೃದ್ಧರು ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಹೊರಟರು.

09028064a ತತ್ರ ವಿಕ್ರೋಶತೀನಾಂ ಚ ರುದತೀನಾಂ ಚ ಸರ್ವಶಃ|

09028064c ಪ್ರಾದುರಾಸೀನ್ಮಹಾನ್ ಶಬ್ದಃ ಶ್ರುತ್ವಾ ತದ್ಬಲಸಂಕ್ಷಯಂ||

ಸೇನೆಗಳು ನಾಶವಾದುದನ್ನು ಕೇಳಿ ರೋದಿಸುತ್ತಿದ್ದ ಅವರ ಮಹಾಧ್ವನಿಯು ಎಲ್ಲಕಡೆಗಳಿಂದಲೂ ಕೇಳಿಬರುತ್ತಿತ್ತು.

09028065a ತತಸ್ತಾ ಯೋಷಿತೋ ರಾಜನ್ಕ್ರಂದಂತ್ಯೋ ವೈ ಮುಹುರ್ಮುಹುಃ|

09028065c ಕುರರ್ಯ ಇವ ಶಬ್ದೇನ ನಾದಯಂತ್ಯೋ ಮಹೀತಲಂ||

ರಾಜನ್! ಕಡಲ ಹದ್ದುಗಳು ಕೂಗಿಕೊಳ್ಳುವಂತೆ ಪುನಃ ಪುನಃ ರೋದಿಸುತ್ತಿದ್ದ ಅವರ ಧ್ವನಿಗಳು ಭೂತಲದಲ್ಲಿಯೇ ಪ್ರತಿಧ್ವನಿಸುತ್ತಿದ್ದವು.

09028066a ಆಜಘ್ನುಃ ಕರಜೈಶ್ಚಾಪಿ ಪಾಣಿಭಿಶ್ಚ ಶಿರಾಂಸ್ಯುತ|

09028066c ಲುಲುವುಶ್ಚ ತದಾ ಕೇಶಾನ್ಕ್ರೋಶಂತ್ಯಸ್ತತ್ರ ತತ್ರ ಹ||

ಕೈಗಳಿಂದ ಪರಚಿಕೊಳ್ಳುತ್ತಿದ್ದರು. ಕೈಗಳಿಂದ ತಲೆಗಳನ್ನು ಬಡಿದುಕೊಳ್ಳುತ್ತಿದ್ದರು. ತಲೆಗೂದಲನ್ನು ಕಿತ್ತುಕೊಳ್ಳುತ್ತಾ ಅಲ್ಲಲ್ಲಿ ವಿಲಪಿಸುತ್ತಿದ್ದರು.

09028067a ಹಾಹಾಕಾರವಿನಾದಿನ್ಯೋ ವಿನಿಘ್ನಂತ್ಯ ಉರಾಂಸಿ ಚ|

09028067c ಕ್ರೋಶಂತ್ಯಸ್ತತ್ರ ರುರುದುಃ ಕ್ರಂದಮಾನಾ ವಿಶಾಂ ಪತೇ||

ವಿಶಾಂಪತೇ! ಎದೆಗಳನ್ನು ಬಡಿದುಕೊಂಡು ಹಾಹಾಕಾರಮಾಡುತ್ತಿದ್ದರು. ಶೋಕತಪ್ತರಾಗಿ ಕರೆಕರೆದು ಕೂಗಿಕೊಳ್ಳುತ್ತಿದ್ದರು.

09028068a ತತೋ ದುರ್ಯೋಧನಾಮಾತ್ಯಾಃ ಸಾಶ್ರುಕಂಠಾ ಭೃಶಾತುರಾಃ|

09028068c ರಾಜದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ||

ಆಗ ದುರ್ಯೋಧನನ ಅಮಾತ್ಯರು ಆ ಅಶೃಕಂಠ ಅತಿ ಆತುರ ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ನಡೆದರು.

09028069a ವೇತ್ರಜರ್ಝರಹಸ್ತಾಶ್ಚ ದ್ವಾರಾಧ್ಯಕ್ಷಾ ವಿಶಾಂ ಪತೇ|

09028069c ಶಯನೀಯಾನಿ ಶುಭ್ರಾಣಿ ಸ್ಪರ್ಧ್ಯಾಸ್ತರಣವಂತಿ ಚ||

09028069e ಸಮಾದಾಯ ಯಯುಸ್ತೂರ್ಣಂ ನಗರಂ ದಾರರಕ್ಷಿಣಃ||

ವಿಶಾಂಪತೇ! ಹಾಗೆಯೇ ದಂಡಧಾರಿ ದ್ವಾರಪಾಲಕರೂ ರಾಜಪತ್ನಿಯರ ರಕ್ಷಕರೂ ಶುಭ್ರ ಅಮೂಲ್ಯ ಹಾಸಿಗೆಗಳನ್ನೂ ಎತ್ತಿಕೊಂಡು ಬಹುಬೇಗ ನಗರವನ್ನು ಸೇರಿದರು.

09028070a ಆಸ್ಥಾಯಾಶ್ವತರೀಯುಕ್ತಾನ್ಸ್ಯಂದನಾನಪರೇ ಜನಾಃ|

09028070c ಸ್ವಾನ್ಸ್ವಾನ್ದಾರಾನುಪಾದಾಯ ಪ್ರಯಯುರ್ನಗರಂ ಪ್ರತಿ||

ಇತರರು ಹೇಸರಗತ್ತೆಗಳಿಗೆ ಕಟ್ಟಿದ ರಥಗಳಲ್ಲಿ ತಮ್ಮ ತಮ್ಮ ಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಹೊರಟರು.

09028071a ಅದೃಷ್ಟಪೂರ್ವಾ ಯಾ ನಾರ್ಯೋ ಭಾಸ್ಕರೇಣಾಪಿ ವೇಶ್ಮಸು|

09028071c ದದೃಶುಸ್ತಾ ಮಹಾರಾಜ ಜನಾ ಯಾಂತೀಃ ಪುರಂ ಪ್ರತಿ||

ಮಹಾರಾಜ! ಹಿಂದೆ ಸೂರ್ಯನ ಕಣ್ಣಿಗೂ ಬೀಳದಿದ್ದ ಅಂತಃಪುರದ ಸ್ತ್ರೀಯರು ಈಗ ಪುರದ ಕಡೆ ಹೋಗುತ್ತಿರುವಾಗ ಸಾಮಾನ್ಯ ಜನರಿಗೂ ಕಾಣುತ್ತಿದ್ದರು.

09028072a ತಾಃ ಸ್ತ್ರಿಯೋ ಭರತಶ್ರೇಷ್ಠ ಸೌಕುಮಾರ್ಯಸಮನ್ವಿತಾಃ|

09028072c ಪ್ರಯಯುರ್ನಗರಂ ತೂರ್ಣಂ ಹತಸ್ವಜನಬಾಂಧವಾಃ||

ಭರತಶ್ರೇಷ್ಠ! ಸ್ವಜನರನ್ನೂ ಬಾಂಧವರನ್ನೂ ಕಳೆದುಕೊಂಡ ಆ ಸುಕುಮಾರ ಸ್ತ್ರೀಯರು ಬೇಗ ಬೇಗನೇ ನಗರದ ಕಡೆ ಪ್ರಯಾಣಿಸಿದರು.

09028073a ಆ ಗೋಪಾಲಾವಿಪಾಲೇಭ್ಯೋ ದ್ರವಂತೋ ನಗರಂ ಪ್ರತಿ|

09028073c ಯಯುರ್ಮನುಷ್ಯಾಃ ಸಂಭ್ರಾಂತಾ ಭೀಮಸೇನಭಯಾರ್ದಿತಾಃ||

ಭೀಮಸೇನನ ಭಯದಿಂದ ಪೀಡಿತರಾದ ಗೊಲ್ಲ-ಕುರುಬರೂ ಕೂಡ ಸಂಭ್ರಾಂತರಾಗಿ ನಗರದ ಕಡೆ ಓಡಿಹೋಗುತ್ತಿದ್ದರು.

09028074a ಅಪಿ ಚೈಷಾಂ ಭಯಂ ತೀವ್ರಂ ಪಾರ್ಥೇಭ್ಯೋಽಭೂತ್ಸುದಾರುಣಂ|

09028074c ಪ್ರೇಕ್ಷಮಾಣಾಸ್ತದಾನ್ಯೋನ್ಯಮಾಧಾವನ್ನಗರಂ ಪ್ರತಿ||

ಪಾರ್ಥರ ತೀವ್ರ ದಾರುಣ ಭಯದಿಂದಾಗಿ ಅವರು ಅನ್ಯೋನ್ಯರನ್ನು ನೋಡುತ್ತಾ ನಗರದ ಕಡೆ ಓಡಿ ಹೋಗುತ್ತಿದ್ದರು.

09028075a ತಸ್ಮಿಂಸ್ತದಾ ವರ್ತಮಾನೇ ವಿದ್ರವೇ ಭೃಶದಾರುಣೇ|

09028075c ಯುಯುತ್ಸುಃ ಶೋಕಸಮ್ಮೂಢಃ ಪ್ರಾಪ್ತಕಾಲಮಚಿಂತಯತ್||

ಹಾಗೆ ದಾರುಣ ಪಲಾಯನವು ನಡೆಯುತ್ತಿರಲು ಶೋಕಸಮ್ಮೂಢನಾದ ಯುಯುತ್ಸುವು ಆಗ ಮಾಡಬೇಕಾದುದರ ಕುರಿತು ಯೋಚಿಸಿದನು.

09028076a ಜಿತೋ ದುರ್ಯೋಧನಃ ಸಂಖ್ಯೇ ಪಾಂಡವೈರ್ಭೀಮವಿಕ್ರಮೈಃ|

09028076c ಏಕಾದಶಚಮೂಭರ್ತಾ ಭ್ರಾತರಶ್ಚಾಸ್ಯ ಸೂದಿತಾಃ||

09028076e ಹತಾಶ್ಚ ಕುರವಃ ಸರ್ವೇ ಭೀಷ್ಮದ್ರೋಣಪುರಃಸರಾಃ||

“ಹನ್ನೊಂದು ಅಕ್ಷೌಹಿಣೀ ಸೇನೆಗಳ ಒಡೆಯ ದುರ್ಯೋಧನನು ರಣದಲ್ಲಿ ಪಾಂಡವರ ಭೀಮವಿಕ್ರಮದಿಂದ ಗೆಲ್ಲಲ್ಪಟ್ಟಿದ್ದಾನೆ. ಅವನ ಸಹೋದರರೂ ಸಂಹರಿಸಲ್ಪಟ್ಟಿದ್ದಾರೆ. ಭೀಷ್ಮ-ದ್ರೋಣರೇ ಮೊದಲಾದ ಕುರುಗಳು ಎಲ್ಲರೂ ಹತರಾಗಿದ್ದಾರೆ.

09028077a ಅಹಮೇಕೋ ವಿಮುಕ್ತಸ್ತು ಭಾಗ್ಯಯೋಗಾದ್ಯದೃಚ್ಚಯಾ|

09028077c ವಿದ್ರುತಾನಿ ಚ ಸರ್ವಾಣಿ ಶಿಬಿರಾಣಿ ಸಮಂತತಃ||

ಭಾಗ್ಯ-ಯೋಗಗಳ ಇಚ್ಛೆಯಂತೆ ನಾನೊಬ್ಬನೇ ತಪ್ಪಿಸಿಕೊಂಡಿದ್ದೇನೆ. ಶಿಬಿರಗಳಲ್ಲಿದ್ದವರೆಲ್ಲರೂ ದಿಕ್ಕಾಪಾಲಾಗಿ ಓಡಿಹೋಗುತ್ತಿದ್ದಾರೆ.

09028078a ದುರ್ಯೋಧನಸ್ಯ ಸಚಿವಾ ಯೇ ಕೇ ಚಿದವಶೇಷಿತಾಃ|

09028078c ರಾಜದಾರಾನುಪಾದಾಯ ವ್ಯಧಾವನ್ನಗರಂ ಪ್ರತಿ||

ದುರ್ಯೋಧನನ ಅಳಿದುಳಿದ ಕೆಲವೇ ಸಚಿವರು ರಾಜಪತ್ನಿಯರನ್ನು ಕರೆದುಕೊಂಡು ನಗರದ ಕಡೆ ಓಡಿ ಹೋಗುತ್ತಿದ್ದಾರೆ.

09028079a ಪ್ರಾಪ್ತಕಾಲಮಹಂ ಮನ್ಯೇ ಪ್ರವೇಶಂ ತೈಃ ಸಹಾಭಿಭೋ|

09028079c ಯುಧಿಷ್ಠಿರಮನುಜ್ಞಾಪ್ಯ ಭೀಮಸೇನಂ ತಥೈವ ಚ||

ವಿಭು ಯುಧಿಷ್ಠಿರನ ಮತ್ತು ಭೀಮಸೇನನ ಅನುಮತಿಯನ್ನು ಪಡೆದು ನಾನೂ ಕೂಡ ಅವರೊಡನೆ ನಗರಪ್ರವೇಶಮಾಡುವ ಕಾಲ ಬಂದೊದಗಿದೆಯೆಂದು ನನಗನ್ನಿಸುತ್ತದೆ.”

09028080a ಏತಮರ್ಥಂ ಮಹಾಬಾಹುರುಭಯೋಃ ಸ ನ್ಯವೇದಯತ್|

09028080c ತಸ್ಯ ಪ್ರೀತೋಽಭವದ್ರಾಜಾ ನಿತ್ಯಂ ಕರುಣವೇದಿತಾ||

09028080e ಪರಿಷ್ವಜ್ಯ ಮಹಾಬಾಹುರ್ವೈಶ್ಯಾಪುತ್ರಂ ವ್ಯಸರ್ಜಯತ್||

ಹೀಗೆ ಯೋಚಿಸಿದುದನ್ನು ಆ ಮಹಾಬಾಹುವು ಅವರಿಬ್ಬರಿಗೂ ನಿವೇದಿಸಿದನು. ನಿತ್ಯವೂ ಕರುಣಾಮಯಿಯಾದ ಮಹಾಬಾಹು ರಾಜನು ಪ್ರೀತನಾಗಿ ವೈಶ್ಯಾಪುತ್ರನನ್ನು ಆಲಂಗಿಸಿ ಬೀಳ್ಕೊಟ್ಟನು.

09028081a ತತಃ ಸ ರಥಮಾಸ್ಥಾಯ ದ್ರುತಮಶ್ವಾನಚೋದಯತ್|

09028081c ಅಸಂಭಾವಿತವಾಂಶ್ಚಾಪಿ ರಾಜದಾರಾನ್ಪುರಂ ಪ್ರತಿ||

ಕೂಡಲೇ ಅವನು ರಾಜಪತ್ನಿಯರನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಪುರದ ಕಡೆ ಕುದುರೆಗಳನ್ನು ಓಡಿಸಿದನು.

09028082a ತೈಶ್ಚೈವ ಸಹಿತಃ ಕ್ಷಿಪ್ರಮಸ್ತಂ ಗಚ್ಚತಿ ಭಾಸ್ಕರೇ|

09028082c ಪ್ರವಿಷ್ಟೋ ಹಾಸ್ತಿನಪುರಂ ಬಾಷ್ಪಕಂಠೋಽಶ್ರುಲೋಚನಃ||

ಸೂರ್ಯನು ಅಸ್ತಂಗತನಾಗುತ್ತಿರಲಾಗಿ ಕ್ಷಿಪ್ರವಾಗಿ ಆ ಬಾಷ್ಪಕಂಠ ಅಶ್ರುಲೋಚನನು ಅವರೊಂದಿಗೆ ಹಸ್ತಿನಾಪುರವನ್ನು ಪ್ರವೇಶಿಸಿದನು.

09028083a ಅಪಶ್ಯತ ಮಹಾಪ್ರಾಜ್ಞಂ ವಿದುರಂ ಸಾಶ್ರುಲೋಚನಂ|

09028083c ರಾಜ್ಞಃ ಸಮೀಪಾನ್ನಿಷ್ಕ್ರಾಂತಂ ಶೋಕೋಪಹತಚೇತಸಂ||

ಅಲ್ಲಿ ಅವನು ರಾಜನ ಸಮೀಪದಲ್ಲಿ ಶೋಕದಿಂದ ಹತಚೇತನನಾಗಿ ಕಣ್ಣೀರುತುಂಬಿದ ಮಹಾಪ್ರಾಜ್ಞ ವಿದುರನನ್ನು ಕಂಡನು.

09028084a ತಮಬ್ರವೀತ್ಸತ್ಯಧೃತಿಃ ಪ್ರಣತಂ ತ್ವಗ್ರತಃ ಸ್ಥಿತಂ|

09028084c ಅಸ್ಮಿನ್ಕುರುಕ್ಷಯೇ ವೃತ್ತೇ ದಿಷ್ಟ್ಯಾ ತ್ವಂ ಪುತ್ರ ಜೀವಸಿ||

ನಮಸ್ಕರಿಸಿ ಎದುರು ನಿಂತಿದ್ದ ಅವನಿಗೆ ಸತ್ಯಧೃತಿ ವಿದುರನು ಹೇಳಿದನು: “ನಡೆದುಹೋದ ಈ ಕುರುಕ್ಷಯದಲ್ಲಿ ಮಗನೇ ನೀನು ಜೀವಿಸಿರುವುದು ಅದೃಷ್ಟವೇ ಸರಿ!

09028085a ವಿನಾ ರಾಜ್ಞಃ ಪ್ರವೇಶಾದ್ವೈ ಕಿಮಸಿ ತ್ವಮಿಹಾಗತಃ|

09028085c ಏತನ್ಮೇ ಕಾರಣಂ ಸರ್ವಂ ವಿಸ್ತರೇಣ ನಿವೇದಯ||

ಆದರೆ ರಾಜಾ ಯುಧಿಷ್ಠಿರನು ರಾಜ್ಯಪ್ರವೇಶಮಾಡದೇ ನೀನೇಕೆ ಇಲ್ಲಿಗೆ ಆಗಮಿಸಿರುವೆ? ಇದರ ಕಾರಣವೆಲ್ಲವನ್ನೂ ವಿಸ್ತಾರವಾಗಿ ಹೇಳು!”

09028086 ಯುಯುತ್ಸುರುವಾಚ

09028086a ನಿಹತೇ ಶಕುನೌ ತಾತ ಸಜ್ಞಾತಿಸುತಬಾಂಧವೇ|

09028086c ಹತಶೇಷಪರೀವಾರೋ ರಾಜಾ ದುರ್ಯೋಧನಸ್ತತಃ||

09028086e ಸ್ವಕಂ ಸ ಹಯಮುತ್ಸೃಜ್ಯ ಪ್ರಾಙ್ಮುಖಃ ಪ್ರಾದ್ರವದ್ಭಯಾತ್||

ಯುಯುತ್ಸುವು ಹೇಳಿದನು: “ಅಯ್ಯಾ! ಜ್ಞಾತಿ-ಸುತ-ಬಾಂಧವರೊಡನೆ ಶಕುನಿಯು ಹತನಾಗಲು ಮತ್ತು ಅಳಿದುಳಿದ ಪರಿವಾರದವರೂ ಹತರಾಗಲು ರಾಜಾ ದುರ್ಯೋಧನನು ತನ್ನ ಕುದುರೆಯನ್ನು ತೊರೆದು ಭಯದಿಂದ ಪೂರ್ವಾಭಿಮುಖವಾಗಿ ಹೊರಟುಹೋದನು.

09028087a ಅಪಕ್ರಾಂತೇ ತು ನೃಪತೌ ಸ್ಕಂಧಾವಾರನಿವೇಶನಾತ್|

09028087c ಭಯವ್ಯಾಕುಲಿತಂ ಸರ್ವಂ ಪ್ರಾದ್ರವನ್ನಗರಂ ಪ್ರತಿ||

ನೃಪತಿಯು ಪಲಾಯನಮಾಡಲಾಗಿ ಸೇನಾಶಿಬಿರದಿಂದ ಭಯವ್ಯಾಕುಲಿತರು ಎಲ್ಲರೂ ನಗರದ ಕಡೆ ಓಡಿಬಂದರು.

09028088a ತತೋ ರಾಜ್ಞಃ ಕಲತ್ರಾಣಿ ಭ್ರಾತೄಣಾಂ ಚಾಸ್ಯ ಸರ್ವಶಃ|

09028088c ವಾಹನೇಷು ಸಮಾರೋಪ್ಯ ಸ್ತ್ರ್ಯಧ್ಯಕ್ಷಾಃ ಪ್ರಾದ್ರವನ್ಭಯಾತ್||

ಆಗ ಶಿಬಿರಾಧ್ಯಕ್ಷರು ಭಯದಿಂದ ರಾಜನ ಮತ್ತು ಅವನ ಸಹೋದರರ ಪತ್ನಿಯರೆಲ್ಲರನ್ನೂ ವಾಹನಗಳಲ್ಲಿ ಏರಿಸಿಕೊಂಡು ಓಡಿದರು.

09028089a ತತೋಽಹಂ ಸಮನುಜ್ಞಾಪ್ಯ ರಾಜಾನಂ ಸಹಕೇಶವಂ|

09028089c ಪ್ರವಿಷ್ಟೋ ಹಾಸ್ತಿನಪುರಂ ರಕ್ಷಽಲ್ಲೋಕಾದ್ಧಿ ವಾಚ್ಯತಾಂ||

ಆಗ ನಾನು ಕೇಶವನೊಡನೆ ರಾಜನ ಅನುಜ್ಞೆಯನ್ನು ಪಡೆದು ಅವರನ್ನು ರಕ್ಷಿಸುತ್ತಾ ಹಸ್ತಿನಾಪುರಕ್ಕೆ ಬಂದೆನು.”

09028090a ಏತಚ್ಚ್ರುತ್ವಾ ತು ವಚನಂ ವೈಶ್ಯಾಪುತ್ರೇಣ ಭಾಷಿತಂ|

09028090c ಪ್ರಾಪ್ತಕಾಲಮಿತಿ ಜ್ಞಾತ್ವಾ ವಿದುರಃ ಸರ್ವಧರ್ಮವಿತ್||

09028090e ಅಪೂಜಯದಮೇಯಾತ್ಮಾ ಯುಯುತ್ಸುಂ ವಾಕ್ಯಕೋವಿದಂ||

ವೈಶ್ಯಾಪುತ್ರನಾಡಿದ ಮಾತನ್ನು ಕೇಳಿ ಅಮೇಯಾತ್ಮ ಸರ್ವಧರ್ಮವಿದು ವಿದುರನು ಸಮಯಕ್ಕೆ ಸರಿಯಾದುದನ್ನೇ ಮಾಡಿರುವನೆಂದು ತಿಳಿದು ವಾಕ್ಯಕೋವಿದ ಯುಯುತ್ಸುವನ್ನು ಪ್ರಶಂಸಿಸಿದನು.

09028091a ಪ್ರಾಪ್ತಕಾಲಮಿದಂ ಸರ್ವಂ ಭವತೋ ಭರತಕ್ಷಯೇ|

09028091c ಅದ್ಯ ತ್ವಮಿಹ ವಿಶ್ರಾಂತಃ ಶ್ವೋಽಭಿಗಂತಾ ಯುಧಿಷ್ಠಿರಂ||

“ಭರತರ ಈ ವಿನಾಶಸಮಯದಲ್ಲಿ ನೀನು ಸಮಯೋಚಿತ ಕಾರ್ಯವನ್ನೇ ಮಾಡಿದ್ದೀಯೆ. ಇಂದು ನೀನು ಇಲ್ಲಿಯೇ ವಿಶ್ರಾಂತಿಪಡೆ. ನಾಳೆ ಯುಧಿಷ್ಠಿರನಲ್ಲಿಗೆ ಹೋಗುವಿಯಂತೆ.”

09028092a ಏತಾವದುಕ್ತ್ವಾ ವಚನಂ ವಿದುರಃ ಸರ್ವಧರ್ಮವಿತ್|

09028092c ಯುಯುತ್ಸುಂ ಸಮನುಜ್ಞಾಪ್ಯ ಪ್ರವಿವೇಶ ನೃಪಕ್ಷಯಂ||

09028092e ಯುಯುತ್ಸುರಪಿ ತಾಂ ರಾತ್ರಿಂ ಸ್ವಗೃಹೇ ನ್ಯವಸತ್ತದಾ||

ಹೀಗೆ ಮಾತನಾಡಿ ಸರ್ವಧರ್ಮವಿದು ವಿದುರನು ಯುಯುತ್ಸುವಿಗೆ ಅಪ್ಪಣೆಯನ್ನಿತ್ತು ರಾಜಭವನವನ್ನು ಪ್ರವೇಶಿಸಿದನು. ಯುಯುತ್ಸುವಾದರೂ ರಾತ್ರಿಯನ್ನು ತನ್ನ ಮನೆಯಲ್ಲಿಯೇ ಕಳೆದನು.”

ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಹ್ರದಪ್ರವೇಶೇ ಅಷ್ಠಾವಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಹ್ರದಪ್ರವೇಶ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಃ|

ಇದು ಶ್ರೀ ಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪ್ರವೇಶಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೮/೧೮, ಉಪಪರ್ವಗಳು-೭೫/೧೦೦, ಅಧ್ಯಾಯಗಳು-೧೨೪೭/೧೯೯೫, ಶ್ಲೋಕಗಳು-೪೬೭೦೧/೭೩೭೮೪

Comments are closed.