ಶಲ್ಯಪರ್ವ: ಹ್ರದಪ್ರವೇಶಪರ್ವ
Contents
Toggle೨೭
ಶಕುನಿ-ಉಲ್ಲೂಕರೊಡನೆ ಭೀಮಸೇನ-ಸಹದೇವರ ಯುದ್ಧ (೧-೧೭). ಪಲಾಯನ ಮಾಡುತ್ತಿದ್ದ ಶಕುನಿಯ ಅನುಯಾಯಿಗಳನ್ನು ದುರ್ಯೋಧನನು ಯುದ್ಧಕ್ಕೆ ಹಿಂದಿರುಗುವಂತೆ ಕರೆದುದು (೧೮-೨೩). ಸಹದೇವನಿಂದ ಉಲೂಕನ ವಧೆ (೨೪-೩೦). ಸಹದೇವನಿಂದ ಶಕುನಿಯ ವಧೆ (೩೧-೬೩).
09027001 ಸಂಜಯ ಉವಾಚ
09027001a ತಸ್ಮಿನ್ ಪ್ರವೃತ್ತೇ ಸಂಗ್ರಾಮೇ ನರವಾಜಿಗಜಕ್ಷಯೇ|
09027001c ಶಕುನಿಃ ಸೌಬಲೋ ರಾಜನ್ಸಹದೇವಂ ಸಮಭ್ಯಯಾತ್||
ಸಂಜಯನು ಹೇಳಿದನು: “ರಾಜನ್! ನರ-ಕುದುರೆ-ಆನೆಗಳ ನಾಶಯುಕ್ತ ಆ ಸಂಗ್ರಾಮವು ನಡೆಯುತ್ತಿರಲು ಸೌಬಲ ಶಕುನಿಯು ಸಹದೇವನನ್ನು ಎದುರಿಸಿದನು.
09027002a ತತೋಽಸ್ಯಾಪತತಸ್ತೂರ್ಣಂ ಸಹದೇವಃ ಪ್ರತಾಪವಾನ್|
09027002c ಶರೌಘಾನ್ಪ್ರೇಷಯಾಮಾಸ ಪತಂಗಾನಿವ ಶೀಘ್ರಗಾನ್|
09027002e ಉಲೂಕಶ್ಚ ರಣೇ ಭೀಮಂ ವಿವ್ಯಾಧ ದಶಭಿಃ ಶರೈಃ||
ಕೂಡಲೇ ಪ್ರತಾಪವಾನ್ ಸಹದೇವನು ಪತಂಗಗಳಂತೆ ಶೀಘ್ರ ಶರೌಘಗಳನ್ನು ಅವನ ಮೇಲೆ ಸುರಿಸಿದನು. ರಣದಲ್ಲಿ ಉಲೂಕನು ಹತ್ತು ಶರಗಳಿಂದ ಭೀಮನನ್ನು ಹೊಡೆದನು.
09027003a ಶಕುನಿಸ್ತು ಮಹಾರಾಜ ಭೀಮಂ ವಿದ್ಧ್ವಾ ತ್ರಿಭಿಃ ಶರೈಃ|
09027003c ಸಾಯಕಾನಾಂ ನವತ್ಯಾ ವೈ ಸಹದೇವಮವಾಕಿರತ್||
ಮಹಾರಾಜ! ಶಕುನಿಯಾದರೋ ಮೂರು ಬಾಣಗಳಿಂದ ಭೀಮನನ್ನು ಹೊಡೆದು ತೊಂಬತ್ತು ಸಾಯಕಗಳಿಂದ ಸಹದೇವನನ್ನು ಮುಚ್ಚಿದನು.
09027004a ತೇ ಶೂರಾಃ ಸಮರೇ ರಾಜನ್ಸಮಾಸಾದ್ಯ ಪರಸ್ಪರಂ|
09027004c ವಿವ್ಯಧುರ್ನಿಶಿತೈರ್ಬಾಣೈಃ ಕಂಕಬರ್ಹಿಣವಾಜಿತೈಃ||
09027004e ಸ್ವರ್ಣಪುಂಖೈಃ ಶಿಲಾಧೌತೈರಾ ಕರ್ಣಾತ್ಪ್ರಹಿತೈಃ ಶರೈಃ||
ರಾಜನ್! ಆ ಶೂರರು ಪರಸ್ಪರರನ್ನು ಎದುರಿಸಿ ರಣಹದ್ದುಗಳ ರೆಕ್ಕೆಗಳನ್ನು ಹೊಂದಿದ್ದ ಸುವರ್ಣಪುಂಖಗಳುಳ್ಳ ಮಸೆಗಲ್ಲಿನಿಂದ ಹರಿತಗೊಳಿಸಲ್ಪಟ್ಟ ಮತ್ತು ಕಿವಿಯ ತುದಿಯವರೆಗೂ ಎಳೆಯಲ್ಪಟ್ಟು ಬಿಟ್ಟ ನಿಶಿತ ಬಾಣಗಳಿಂದ ಪರಸ್ಪರರನ್ನು ಹೊಡೆದರು.
09027005a ತೇಷಾಂ ಚಾಪಭುಜೋತ್ಸೃಷ್ಟಾ ಶರವೃಷ್ಟಿರ್ವಿಶಾಂ ಪತೇ|
09027005c ಆಚ್ಚಾದಯದ್ದಿಶಃ ಸರ್ವಾ ಧಾರಾಭಿರಿವ ತೋಯದಃ||
ವಿಶಾಂಪತೇ! ಮೇಘಗಳ ಜಲಧಾರೆಗಳು ಎಲ್ಲ ದಿಕ್ಕುಗಳನ್ನೂ ಮುಚ್ಚುವಂತೆ ಅವರ ಚಾಪ-ಭುಜಗಳಿಂದ ಶರವೃಷ್ಟಿಯು ಸುರಿಯುತ್ತಿತ್ತು.
09027006a ತತಃ ಕ್ರುದ್ಧೋ ರಣೇ ಭೀಮಃ ಸಹದೇವಶ್ಚ ಭಾರತ|
09027006c ಚೇರತುಃ ಕದನಂ ಸಂಖ್ಯೇ ಕುರ್ವಂತೌ ಸುಮಹಾಬಲೌ||
ಭಾರತ! ಆಗ ರಣದಲ್ಲಿ ಕ್ರುದ್ಧರಾದ ಭೀಮ-ಸಹದೇವರು ಶತ್ರುಗಳನ್ನು ಸಂಹರಿಸುತ್ತಾ ರಣರಂಗದಲ್ಲಿ ಸಂಚರಿಸುತ್ತಿದ್ದರು.
09027007a ತಾಭ್ಯಾಂ ಶರಶತೈಶ್ಚನ್ನಂ ತದ್ಬಲಂ ತವ ಭಾರತ|
09027007c ಅಂಧಕಾರಮಿವಾಕಾಶಮಭವತ್ತತ್ರ ತತ್ರ ಹ||
ಭಾರತ! ಅವರಿಬ್ಬರ ನೂರಾರು ಶರಗಳಿಂದ ಮುಚ್ಚಲ್ಪಟ್ಟ ನಿನ್ನ ಸೇನೆಯು ಅಲ್ಲಲ್ಲಿ ಅಂಧಕಾರದಿಂದ ಮುಸುಕಲ್ಪಟ್ಟ ಆಕಾಶದಂತೆ ತೋರುತ್ತಿತ್ತು.
09027008a ಅಶ್ವೈರ್ವಿಪರಿಧಾವದ್ಭಿಃ ಶರಚ್ಚನ್ನೈರ್ವಿಶಾಂ ಪತೇ|
09027008c ತತ್ರ ತತ್ರ ಕೃತೋ ಮಾರ್ಗೋ ವಿಕರ್ಷದ್ಭಿರ್ಹತಾನ್ಬಹೂನ್||
ವಿಶಾಂಪತೇ! ಬಾಣಗಳಿಂದ ಆಚ್ಛಾದಿತರಾಗಿ ಸತ್ತುಹೋಗಿದ್ದ ಸವಾರರನ್ನು ಎಳೆದುಕೊಂಡು ಹೋಗುತ್ತಿದ್ದ ಅನೇಕ ಕುದುರೆಗಳಿಂದ ಅನೇಕ ಕಡೆಗಳಲ್ಲಿ ಮಾರ್ಗಗಳು ಮುಚ್ಚಿಹೋಗಿದ್ದವು.
09027009a ನಿಹತಾನಾಂ ಹಯಾನಾಂ ಚ ಸಹೈವ ಹಯಯೋಧಿಭಿಃ|
09027009c ವರ್ಮಭಿರ್ವಿನಿಕೃತ್ತೈಶ್ಚ ಪ್ರಾಸೈಶ್ಚಿನ್ನೈಶ್ಚ ಮಾರಿಷ||
09027009e ಸಂಚನ್ನಾ ಪೃಥಿವೀ ಜಜ್ಞೇ ಕುಸುಮೈಃ ಶಬಲಾ ಇವ||
ಮಾರಿಷ! ಸತ್ತುಹೋದ ಕುದುರೆಗಳಿಂದಲೂ, ಸತ್ತುಹೋದ ಯೋಧರನ್ನು ಹೊತ್ತಿದ್ದ ಕುದುರೆಗಳಿಂದಲೂ, ಕತ್ತರಿಸಲ್ಪಟ್ಟ ಕವಚಗಳಿಂದಲೂ, ತುಂಡಾದ ಪ್ರಾಸಗಳಿಂದಲೂ ಆಚ್ಛಾಧಿತ ಭೂಮಿಯು ಕುಸುಮಗಳಿಂದ ತುಂಬಿದಂತೆ ತೋರುತ್ತಿತ್ತು.
09027010a ಯೋಧಾಸ್ತತ್ರ ಮಹಾರಾಜ ಸಮಾಸಾದ್ಯ ಪರಸ್ಪರಂ|
09027010c ವ್ಯಚರಂತ ರಣೇ ಕ್ರುದ್ಧಾ ವಿನಿಘ್ನಂತಃ ಪರಸ್ಪರಂ||
ಮಹಾರಾಜ! ಪರಸ್ಪರರನ್ನು ಎದುರಿಸಿ ಕ್ರುದ್ಧರಾಗಿ ಯೋಧರು ಪರಸ್ಪರರನ್ನು ಸಂಹರಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದರು.
09027011a ಉದ್ವೃತ್ತನಯನೈ ರೋಷಾತ್ಸಂದಷ್ಟೌಷ್ಠಪುಟೈರ್ಮುಖೈಃ|
09027011c ಸಕುಂಡಲೈರ್ಮಹೀ ಚನ್ನಾ ಪದ್ಮಕಿಂಜ್ವಲ್ಕಸಂನಿಭೈಃ||
ಕಮಲದ ಕೇಸರಗಳಂತೆ ರೋಷದಿಂದ ಮೇಲೆದ್ದಿದ್ದ ಕಣ್ಣುಗಳುಳ್ಳ ಮುಖಗಳಿಂದ ಮತ್ತು ಕುಂಡಲಗಳೊಂದಿಗಿನ ಮುಖಗಳಿಂದ ಆ ರಣಾಂಗಣವು ತುಂಬಿಹೋಗಿತ್ತು.
09027012a ಭುಜೈಶ್ಚಿನ್ನೈರ್ಮಹಾರಾಜ ನಾಗರಾಜಕರೋಪಮೈಃ|
09027012c ಸಾಂಗದೈಃ ಸತನುತ್ರೈಶ್ಚ ಸಾಸಿಪ್ರಾಸಪರಶ್ವಧೈಃ||
09027013a ಕಬಂಧೈರುತ್ಥಿತೈಶ್ಚಿನ್ನೈರ್ನೃತ್ಯದ್ಭಿಶ್ಚಾಪರೈರ್ಯುಧಿ|
09027013c ಕ್ರವ್ಯಾದಗಣಸಂಕೀರ್ಣಾ ಘೋರಾಭೂತ್ಪೃಥಿವೀ ವಿಭೋ||
ವಿಭೋ! ಮಹಾರಾಜ! ತುಂಡಾದ ಆನೆಯ ಸೊಂಡಿಲಿನಂತಿರುವ, ಅಂಗದಗಳಿಂದ ಅಲಂಕೃತಗೊಂಡಿದ್ದ, ಕವಚಗಳನ್ನು ತೊಟ್ಟಿದ್ದ, ಖಡ್ಗ- ಪ್ರಾಸ-ಪರಶಾಯುಧಗಳನ್ನು ಹಿಡಿದಿದ್ದ ಭುಜಗಳಿಂದಲೂ, ಛಿನ್ನ-ಭಿನ್ನವಾಗಿ ಮೇಲೆದ್ದು ಕುಣಿದಾಡುತ್ತಿದ್ದ ಕಬಂಧಗಳಿಂದಲೂ, ಹದ್ದುಗಳ ಹಿಂಡಿನಿಂದಲೂ ತುಂಬಿದ್ದ ಆ ರಣಭೂಮಿಯು ಘೋರವಾಗಿತ್ತು.
09027014a ಅಲ್ಪಾವಶಿಷ್ಟೇ ಸೈನ್ಯೇ ತು ಕೌರವೇಯಾನ್ಮಹಾಹವೇ|
09027014c ಪ್ರಹೃಷ್ಟಾಃ ಪಾಂಡವಾ ಭೂತ್ವಾ ನಿನ್ಯಿರೇ ಯಮಸಾದನಂ||
ಮಹಾಯುದ್ಧದಲ್ಲಿ ಸ್ವಲ್ಪವೇ ಉಳಿದಿದ್ದ ಕೌರವ ಸೇನೆಯನ್ನು ಪಾಂಡವರು ಸಂತೋಷದಿಂದ ಯಮಾಲಯಕ್ಕೆ ಕಳುಹಿಸಿದರು.
09027015a ಏತಸ್ಮಿನ್ನಂತರೇ ಶೂರಃ ಸೌಬಲೇಯಃ ಪ್ರತಾಪವಾನ್|
09027015c ಪ್ರಾಸೇನ ಸಹದೇವಸ್ಯ ಶಿರಸಿ ಪ್ರಾಹರದ್ಭೃಶಂ||
09027015e ಸ ವಿಹ್ವಲೋ ಮಹಾರಾಜ ರಥೋಪಸ್ಥ ಉಪಾವಿಶತ್||
ಮಹಾರಾಜ! ಇದರ ಮಧ್ಯೆ ಶೂರ ಪ್ರತಾಪವಾನ್ ಸೌಬಲೇಯನು ಪ್ರಾಸದಿಂದ ಸಹದೇವನ ತಲೆಗೆ ಜೋರಾಗಿ ಹೊಡೆದನು. ಅವನು ವಿಹ್ವಲನಾಗಿ ರಥದಲ್ಲಿಯೇ ಕುಳಿತುಕೊಂಡನು.
09027016a ಸಹದೇವಂ ತಥಾ ದೃಷ್ಟ್ವಾ ಭೀಮಸೇನಃ ಪ್ರತಾಪವಾನ್|
09027016c ಸರ್ವಸೈನ್ಯಾನಿ ಸಂಕ್ರುದ್ಧೋ ವಾರಯಾಮಾಸ ಭಾರತ||
ಭಾರತ! ಹಾಗಾದ ಸಹದೇವನನ್ನು ನೋಡಿ ಸಂಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಎಲ್ಲ ಸೇನೆಗಳನ್ನು ತಡೆದನು.
09027017a ನಿರ್ಬಿಭೇದ ಚ ನಾರಾಚೈಃ ಶತಶೋಽಥ ಸಹಸ್ರಶಃ|
09027017c ವಿನಿರ್ಭಿದ್ಯಾಕರೋಚ್ಚೈವ ಸಿಂಹನಾದಮರಿಂದಮ||
ನೂರಾರು ಸಹಸ್ರಾರು ನಾರಾಚಗಳಿಂದ ಭೇದಿಸಿ, ನಾಶಗೊಳಿಸಿ ಆ ಅರಿಂದಮನು ಸಿಂಹನಾದಗೈದನು.
09027018a ತೇನ ಶಬ್ದೇನ ವಿತ್ರಸ್ತಾಃ ಸರ್ವೇ ಸಹಯವಾರಣಾಃ|
09027018c ಪ್ರಾದ್ರವನ್ಸಹಸಾ ಭೀತಾಃ ಶಕುನೇಶ್ಚ ಪದಾನುಗಾಃ||
ಆ ಶಬ್ಧದಿಂದ ನಡುಗಿದ ಶಕುನಿಯ ಅನುಯಾಯಿಗಳೆಲ್ಲರೂ ಭೀತರಾಗಿ ಕುದುರೆ-ಆನೆಗಳೊಡನೆ ಬೇಗನೆ ಓಡಿ ಹೋದರು.
09027019a ಪ್ರಭಗ್ನಾನಥ ತಾನ್ದೃಷ್ಟ್ವಾ ರಾಜಾ ದುರ್ಯೋಧನೋಽಬ್ರವೀತ್|
09027019c ನಿವರ್ತಧ್ವಮಧರ್ಮಜ್ಞಾ ಯುಧ್ಯಧ್ವಂ ಕಿಂ ಸೃತೇನ ವಃ||
ಭಗ್ನರಾಗಿ ಓಡಿಹೋಗುತ್ತಿದ್ದ ಅವರನ್ನು ನೋಡಿ ರಾಜಾ ದುರ್ಯೋಧನನು ಹೇಳಿದನು: “ಅಧರ್ಮಜ್ಞರೇ! ಹಿಂದುರಿಗಿ ಬಂದು ಯುದ್ಧಮಾಡಿರಿ! ಓಡಿ ಹೋಗುವುದರಿಂದ ಏನಾಗಲಿಕ್ಕಿದೆ?
09027020a ಇಹ ಕೀರ್ತಿಂ ಸಮಾಧಾಯ ಪ್ರೇತ್ಯ ಲೋಕಾನ್ಸಮಶ್ನುತೇ|
09027020c ಪ್ರಾಣಾನ್ಜಹಾತಿ ಯೋ ವೀರೋ ಯುಧಿ ಪೃಷ್ಠಮದರ್ಶಯನ್||
ರಣದಲ್ಲಿ ಬೆನ್ನುತೋರಿಸದೇ ಯುದ್ಧಮಾಡುತ್ತಾ ಪ್ರಾಣಬಿಡುವ ವೀರನು ಇಲ್ಲಿ ಕೀರ್ತಿಯನ್ನೂ ಮರಣದ ನಂತರ ಉತ್ತಮ ಲೋಕಗಳನ್ನೂ ಹೊಂದುತ್ತಾನೆ.”
09027021a ಏವಮುಕ್ತಾಸ್ತು ತೇ ರಾಜ್ಞಾ ಸೌಬಲಸ್ಯ ಪದಾನುಗಾಃ|
09027021c ಪಾಂಡವಾನಭ್ಯವರ್ತಂತ ಮೃತ್ಯುಂ ಕೃತ್ವಾ ನಿವರ್ತನಂ||
ರಾಜನು ಹೀಗೆ ಹೇಳಲು ಸೌಬಲನ ಪದಾನುಗರು ಮೃತ್ಯುವಿಗೇ ಹಿಂದಿರುಗುವಂತೆ ಪಾಂಡವರ ಮೇಲೆ ಎರಗಿದರು.
09027022a ದ್ರವದ್ಭಿಸ್ತತ್ರ ರಾಜೇಂದ್ರ ಕೃತಃ ಶಬ್ದೋಽತಿದಾರುಣಃ|
09027022c ಕ್ಷುಬ್ಧಸಾಗರಸಂಕಾಶಃ ಕ್ಷುಭಿತಃ ಸರ್ವತೋಽಭವತ್||
ರಾಜೇಂದ್ರ! ಓಡಿಬಂದು ಎರಗುತ್ತಿದ್ದ ಅವರು ಅತಿ ದಾರುಣ ಶಬ್ಧಮಾಡುತ್ತಿದ್ದರು. ಅಲ್ಲೋಲಕಲ್ಲೋಲಗೊಂಡ ಸಾಗರದಂತೆ ಎಲ್ಲ ಕಡೆ ಕ್ಷೋಭೆಯುಂಟಾಗುತ್ತಿತ್ತು.
09027023a ತಾಂಸ್ತದಾಪತತೋ ದೃಷ್ಟ್ವಾ ಸೌಬಲಸ್ಯ ಪದಾನುಗಾನ್|
09027023c ಪ್ರತ್ಯುದ್ಯಯುರ್ಮಹಾರಾಜ ಪಾಂಡವಾ ವಿಜಯೇ ವೃತಾಃ||
ಮಹಾರಾಜ! ಸೌಬಲನ ಪದಾನುಗರು ಮೇಲೆ ಬೀಳುತ್ತಿರುವುದನ್ನು ನೋಡಿ ವಿಜಯದಲ್ಲಿ ನಡೆಯುತ್ತಿದ್ದ ಪಾಂಡವರು ಅವರನ್ನು ಎದುರಿಸಿ ಯುದ್ಧಮಾಡಿದರು.
09027024a ಪ್ರತ್ಯಾಶ್ವಸ್ಯ ಚ ದುರ್ಧರ್ಷಃ ಸಹದೇವೋ ವಿಶಾಂ ಪತೇ|
09027024c ಶಕುನಿಂ ದಶಭಿರ್ವಿದ್ಧ್ವಾ ಹಯಾಂಶ್ಚಾಸ್ಯ ತ್ರಿಭಿಃ ಶರೈಃ||
09027024e ಧನುಶ್ಚಿಚ್ಚೇದ ಚ ಶರೈಃ ಸೌಬಲಸ್ಯ ಹಸನ್ನಿವ||
ವಿಶಾಂಪತೇ! ಪುನಃ ಚೇತರಿಸಿಕೊಂಡಿದ್ದ ದುರ್ಧರ್ಷ ಸಹದೇವನು ಶಕುನಿಯನ್ನು ಹತ್ತು ಮತ್ತು ಅವನ ಕುದುರೆಗಳನ್ನು ಮೂರು ಶರಗಳಿಂದ ಹೊಡೆದನು. ಹಾಗೂ ನಸುನಗುತ್ತಾ ಶರಗಳಿಂದ ಶಕುನಿಯ ಧನುಸ್ಸನ್ನು ಕತ್ತರಿಸಿದನು.
09027025a ಅಥಾನ್ಯದ್ಧನುರಾದಾಯ ಶಕುನಿರ್ಯುದ್ಧದುರ್ಮದಃ|
09027025c ವಿವ್ಯಾಧ ನಕುಲಂ ಷಷ್ಟ್ಯಾ ಭೀಮಸೇನಂ ಚ ಸಪ್ತಭಿಃ||
ಆಗ ಯುದ್ಧದುರ್ಮದ ಶಕುನಿಯು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಕುಲನನ್ನು ಆರು ಮತ್ತು ಭೀಮಸೇನನನ್ನು ಏಳು ಬಾಣಗಳಿಂದ ಹೊಡೆದನು.
09027026a ಉಲೂಕೋಽಪಿ ಮಹಾರಾಜ ಭೀಮಂ ವಿವ್ಯಾಧ ಸಪ್ತಭಿಃ|
09027026c ಸಹದೇವಂ ಚ ಸಪ್ತತ್ಯಾ ಪರೀಪ್ಸನ್ ಪಿತರಂ ರಣೇ||
ಮಹಾರಾಜ! ಉಲೂಕನು ಕೂಡ ಏಳು ಬಾಣಗಳಿಂದ ಭೀಮನನ್ನು ಮತ್ತು ಏಳರಿಂದ ಸಹದೇವನನ್ನು ಹೊಡೆದು ರಣದಲ್ಲಿ ತನ್ನ ತಂದೆಗೆ ಸಂತಸವನ್ನಿತ್ತನು.
09027027a ತಂ ಭೀಮಸೇನಃ ಸಮರೇ ವಿವ್ಯಾಧ ನಿಶಿತೈಃ ಶರೈಃ|
09027027c ಶಕುನಿಂ ಚ ಚತುಃಷಷ್ಟ್ಯಾ ಪಾರ್ಶ್ವಸ್ಥಾಂಶ್ಚ ತ್ರಿಭಿಸ್ತ್ರಿಭಿಃ||
ಸಮರದಲ್ಲಿ ಭೀಮಸೇನನು ಶಕುನಿಯನ್ನು ಅರವತ್ನಾಲ್ಕು ನಿಶಿತ ಶರಗಳಿಂದ ಮತ್ತು ಅವನ ಪಾರ್ಶ್ವಸಾರಥಿಗಳನ್ನು ಮೂರು ಮೂರು ಬಾಣಗಳಿಂದ ಹೊಡೆದನು.
09027028a ತೇ ಹನ್ಯಮಾನಾ ಭೀಮೇನ ನಾರಾಚೈಸ್ತೈಲಪಾಯಿತೈಃ|
09027028c ಸಹದೇವಂ ರಣೇ ಕ್ರುದ್ಧಾಶ್ಚಾದಯನ್ ಶರವೃಷ್ಟಿಭಿಃ||
09027028e ಪರ್ವತಂ ವಾರಿಧಾರಾಭಿಃ ಸವಿದ್ಯುತ ಇವಾಂಬುದಾಃ||
ಎಣ್ಣೆಯಿಂದ ತೋಯಿಸಿದ ಭೀಮನ ನಾರಾಚಗಳಿಂದ ಹೊಡೆಯಲ್ಪಟ್ಟ ಅವರು ಕ್ರುದ್ಧರಾಗಿ ಮಿಂಚಿನಿಂದ ಕೂಡಿದ ಮೋಡಗಳು ಮಳೆಯಿಂದ ಪರ್ವತವನ್ನು ಹೇಗೋ ಹಾಗೆ ರಣದಲ್ಲಿ ಸಹದೇವನನ್ನು ಶರವೃಷ್ಟಿಗಳಿಂದ ಮುಚ್ಚಿಬಿಟ್ಟರು.
09027029a ತತೋಽಸ್ಯಾಪತತಃ ಶೂರಃ ಸಹದೇವಃ ಪ್ರತಾಪವಾನ್|
09027029c ಉಲೂಕಸ್ಯ ಮಹಾರಾಜ ಭಲ್ಲೇನಾಪಾಹರಚ್ಚಿರಃ||
ಮಹಾರಾಜ! ಆಗ ಪ್ರತಾಪವಾನ್ ಶೂರ ಸಹದೇವನು ತನ್ನ ಮೇಲೆ ಆಕ್ರಮಣಿಸುತ್ತಿದ್ದ ಉಲೂಕನ ಶಿರವನ್ನು ಭಲ್ಲದಿಂದ ತುಂಡರಿಸಿದನು.
09027030a ಸ ಜಗಾಮ ರಥಾದ್ಭೂಮಿಂ ಸಹದೇವೇನ ಪಾತಿತಃ|
09027030c ರುಧಿರಾಪ್ಲುತಸರ್ವಾಂಗೋ ನಂದಯನ್ಪಾಂಡವಾನ್ಯುಧಿ||
ಯುದ್ಧದಲ್ಲಿ ಪಾಂಡವರಿಗೆ ಸಂತಸವನ್ನು ನೀಡುತ್ತಾ ಸಹದೇವನಿಂದ ಕೆಳಗುರುಳಿಸಲ್ಪಟ್ಟ ಉಲೂಕನು ಸರ್ವಾಂಗಗಳೂ ರಕ್ತದಿಂದ ತೋಯಿಸಲ್ಪಟ್ಟು ರಥದಿಂದ ನೆಲಕ್ಕುರುಳಿ ಬಿದ್ದನು.
09027031a ಪುತ್ರಂ ತು ನಿಹತಂ ದೃಷ್ಟ್ವಾ ಶಕುನಿಸ್ತತ್ರ ಭಾರತ|
09027031c ಸಾಶ್ರುಕಂಠೋ ವಿನಿಃಶ್ವಸ್ಯ ಕ್ಷತ್ತುರ್ವಾಕ್ಯಮನುಸ್ಮರನ್||
ಭಾರತ! ಪುತ್ರನು ಹತನಾದುದನ್ನು ನೋಡಿ ಶಕುನಿಯು ಅಲ್ಲಿ ಕಣ್ಣೀರುತುಂಬಿದ ಕಂಠವುಳ್ಳವನಾಗಿ, ನಿಟ್ಟುಸಿರುಬಿಡುತ್ತಾ ಕ್ಷತ್ತ ವಿದುರನ ಮಾತನ್ನು ಸ್ಮರಿಸಿಕೊಂಡನು.
09027032a ಚಿಂತಯಿತ್ವಾ ಮುಹೂರ್ತಂ ಸ ಬಾಷ್ಪಪೂರ್ಣೇಕ್ಷಣಃ ಶ್ವಸನ್|
09027032c ಸಹದೇವಂ ಸಮಾಸಾದ್ಯ ತ್ರಿಭಿರ್ವಿವ್ಯಾಧ ಸಾಯಕೈಃ||
ಕಣ್ಣುಗಳು ಕಣ್ಣೀರಿನಿಂದ ತುಂಬಿ, ನಿಟ್ಟುಸಿರುಬಿಡುತ್ತಾ ಅವನು ಮುಹೂರ್ತಕಾಲ ಯೋಚಿಸಿದನು. ನಂತರ ಸಹದೇವನ ಬಳಿಸಾರಿ ಅವನನ್ನು ಮೂರು ಸಾಯಕಗಳಿಂದ ಹೊಡೆದನು.
09027033a ತಾನಪಾಸ್ಯ ಶರಾನ್ಮುಕ್ತಾನ್ ಶರಸಂಘೈಃ ಪ್ರತಾಪವಾನ್|
09027033c ಸಹದೇವೋ ಮಹಾರಾಜ ಧನುಶ್ಚಿಚ್ಚೇದ ಸಂಯುಗೇ||
ಮಹಾರಾಜ! ಪ್ರತಾಪವಾನ್ ಸಹದೇವನು ಅವನು ಪ್ರಯೋಗಿಸಿದ ಬಾಣಗಳನ್ನು ಶರಸಂಘಗಳಿಂದ ನಿರಸನಗೊಳಿಸಿ ಸಂಯುಗದಲ್ಲಿ ಅವನ ಧನುಸ್ಸನ್ನು ತುಂಡರಿಸಿದನು.
09027034a ಚಿನ್ನೇ ಧನುಷಿ ರಾಜೇಂದ್ರ ಶಕುನಿಃ ಸೌಬಲಸ್ತದಾ|
09027034c ಪ್ರಗೃಹ್ಯ ವಿಪುಲಂ ಖಡ್ಗಂ ಸಹದೇವಾಯ ಪ್ರಾಹಿಣೋತ್||
ರಾಜೇಂದ್ರ! ಧನುಸ್ಸು ತುಂಡಾಗಲು ಸೌಬಲ ಶಕುನಿಯು ಭಾರವಾದ ಖಡ್ಗವನ್ನು ಹಿಡಿದು ಸಹದೇವನ ಮೇಲೆ ಪ್ರಯೋಗಿಸಿದನು.
09027035a ತಮಾಪತಂತಂ ಸಹಸಾ ಘೋರರೂಪಂ ವಿಶಾಂ ಪತೇ|
09027035c ದ್ವಿಧಾ ಚಿಚ್ಚೇದ ಸಮರೇ ಸೌಬಲಸ್ಯ ಹಸನ್ನಿವ||
ವಿಶಾಂಪತೇ! ಸಮರದಲ್ಲಿ ರಭಸದಿಂದ ಮೇಲೆ ಬೀಳುತ್ತಿದ್ದ ಸೌಬಲನ ಘೋರರೂಪೀ ಖಡ್ಗವನ್ನು ಅವನು ನಸುನಗುತ್ತಾ ಎರಡಾಗಿ ಕತ್ತರಿಸಿದನು.
09027036a ಅಸಿಂ ದೃಷ್ಟ್ವಾ ದ್ವಿಧಾ ಚಿನ್ನಂ ಪ್ರಗೃಹ್ಯ ಮಹತೀಂ ಗದಾಂ|
09027036c ಪ್ರಾಹಿಣೋತ್ಸಹದೇವಾಯ ಸಾ ಮೋಘಾ ನ್ಯಪತದ್ಭುವಿ||
ಖಡ್ಗವು ಎರಡಾಗಿ ತುಂಡಾದುದನ್ನು ನೋಡಿ ಅವನು ಭಾರ ಗದೆಯೊಂದನ್ನು ಹಿಡಿದು ಸಹದೇವನ ಮೇಲೆ ಪ್ರಯೋಗಿಸಲು ಅದು ನಿಷ್ಪಲವಾಗಿ ನೆಲದ ಮೇಲೆ ಬಿದ್ದಿತು.
09027037a ತತಃ ಶಕ್ತಿಂ ಮಹಾಘೋರಾಂ ಕಾಲರಾತ್ರಿಮಿವೋದ್ಯತಾಂ|
09027037c ಪ್ರೇಷಯಾಮಾಸ ಸಂಕ್ರುದ್ಧಃ ಪಾಂಡವಂ ಪ್ರತಿ ಸೌಬಲಃ||
ಆಗ ಸಂಕ್ರುದ್ಧ ಸೌಬಲನು ಪಾಂಡವನ ಮೇಲೆ ಮೇಲೆದ್ದುಬಂದ ಕಾಲರಾತ್ರಿಯಂತೆ ಇದ್ದ ಮಹಾಘೋರ ಶಕ್ತಿಯನ್ನು ಪ್ರಯೋಗಿಸಿದನು.
09027038a ತಾಮಾಪತಂತೀಂ ಸಹಸಾ ಶರೈಃ ಕಾಂಚನಭೂಷಣೈಃ|
09027038c ತ್ರಿಧಾ ಚಿಚ್ಚೇದ ಸಮರೇ ಸಹದೇವೋ ಹಸನ್ನಿವ||
ರಭಸದಿಂದ ಬರುತ್ತಿದ್ದ ಅದನ್ನು ಸಮರದಲ್ಲಿ ಸಹದೇವನು ನಸುನಗುತ್ತಾ ಕಾಂಚನಭೂಷಣ ಶರಗಳಿಂದ ಮೂರಾಗಿ ಕತ್ತರಿಸಿದನು.
09027039a ಸಾ ಪಪಾತ ತ್ರಿಧಾ ಚಿನ್ನಾ ಭೂಮೌ ಕನಕಭೂಷಣಾ|
09027039c ಶೀರ್ಯಮಾಣಾ ಯಥಾ ದೀಪ್ತಾ ಗಗನಾದ್ವೈ ಶತಹ್ರದಾ||
ಉರಿಯುತ್ತಿರುವ ಮಿಂಚು ಗಗನವನ್ನು ಸೀಳಿ ಬರುವಂತೆ ಆ ಕನಕಭೂಷಣ ಶಕ್ತಿಯು ಮೂರು ಭಾಗಗಳಾಗಿ ಕೆಳಗೆ ಬಿದ್ದಿತು.
09027040a ಶಕ್ತಿಂ ವಿನಿಹತಾಂ ದೃಷ್ಟ್ವಾ ಸೌಬಲಂ ಚ ಭಯಾರ್ದಿತಂ|
09027040c ದುದ್ರುವುಸ್ತಾವಕಾಃ ಸರ್ವೇ ಭಯೇ ಜಾತೇ ಸಸೌಬಲಾಃ||
ಶಕ್ತಿಯು ನಾಶವಾದುದನ್ನು ಮತ್ತು ಭಯಾರ್ದಿತ ಸೌಬಲನನ್ನು ನೋಡಿ ನಿನ್ನಕಡೆಯವರೆಲ್ಲರೂ ಭಯಪಟ್ಟು, ಶಕುನಿಯ ಸೇನೆಯೊಂದಿಗೆ ಪಲಾಯನಗೈದರು.
09027041a ಅಥೋತ್ಕ್ರುಷ್ಟಂ ಮಹದ್ಧ್ಯಾಸೀಪಾಂಡವೈರ್ಜಿತಕಾಶಿಭಿಃ|
09027041c ಧಾರ್ತರಾಷ್ಟ್ರಾಸ್ತತಃ ಸರ್ವೇ ಪ್ರಾಯಶೋ ವಿಮುಖಾಭವನ್||
ಆಗ ವಿಜಯೋಲ್ಲಾಸಿ ಪಾಂಡವರ ಕೂಗು ಜೋರಾಗಿದ್ದಿತು. ದುರ್ಯೋಧನನ ಕಡೆಯ ಪ್ರಾಯಶಃ ಎಲ್ಲರೂ ವಿಮುಖರಾಗಿದ್ದರು.
09027042a ತಾನ್ವೈ ವಿಮನಸೋ ದೃಷ್ಟ್ವಾ ಮಾದ್ರೀಪುತ್ರಃ ಪ್ರತಾಪವಾನ್|
09027042c ಶರೈರನೇಕಸಾಹಸ್ರೈರ್ವಾರಯಾಮಾಸ ಸಂಯುಗೇ||
ಸಂಯುಗದಲ್ಲಿ ಅವರು ವಿಮನಸ್ಕರಾದುದನ್ನು ನೋಡಿ ಪ್ರತಾಪವಾನ್ ಮಾದ್ರೀಪುತ್ರನು ಅನೇಕ ಸಹಸ್ರ ಶರಗಳಿಂದ ಅವರನ್ನು ತಡೆದು ನಿಲ್ಲಿಸಿದನು.
09027043a ತತೋ ಗಾಂಧಾರಕೈರ್ಗುಪ್ತಂ ಪೃಷ್ಠೈರಶ್ವೈರ್ಜಯೇ ಧೃತಂ|
09027043c ಆಸಸಾದ ರಣೇ ಯಾಂತಂ ಸಹದೇವೋಽಥ ಸೌಬಲಂ||
ಅನಂತರ ಗಾಂಧಾರರ ಅಶ್ವಸೇನೆಯಿಂದ ರಕ್ಷಿಸಲ್ಪಟ್ಟು ರಣದಲ್ಲಿ ಎದುರಾಗಿ ಬಂದ ಜಯದಲ್ಲಿ ದೃಢನಾಗಿದ್ದ ಸೌಬಲನನ್ನು ಸಹದೇವನು ಆಕ್ರಮಣಿಸಿದನು.
09027044a ಸ್ವಮಂಶಮವಶಿಷ್ಟಂ ಸ ಸಂಸ್ಮೃತ್ಯ ಶಕುನಿಂ ನೃಪ|
09027044c ರಥೇನ ಕಾಂಚನಾಂಗೇನ ಸಹದೇವಃ ಸಮಭ್ಯಯಾತ್||
09027044e ಅಧಿಜ್ಯಂ ಬಲವತ್ಕೃತ್ವಾ ವ್ಯಾಕ್ಷಿಪನ್ಸುಮಹದ್ಧನುಃ||
ನೃಪ! ಅಳಿದುಳಿದಿರುವ ಶಕುನಿಯು ತನ್ನ ಪಾಲಿಗೆ ಸೇರಿದವನೆಂದು ನೆನಪಿಸಿಕೊಂಡು ಸಹದೇವನು ಕಾಂಚನ ರಥದ ಮೇಲೆ ಕುಳಿತು ಧನುಸ್ಸಿಗೆ ಶಿಂಜನಿಯನ್ನು ಬಲವಾಗಿ ಬಿಗಿದು ಕಟ್ಟಿ, ಸೆಳೆದು ಟೇಂಕರಿಸಿ ಅವನನ್ನು ಆಕ್ರಮಣಿಸಿದನು.
09027045a ಸ ಸೌಬಲಮಭಿದ್ರುತ್ಯ ಗೃಧ್ರಪತ್ರೈಃ ಶಿಲಾಶಿತೈಃ|
09027045c ಭೃಶಮಭ್ಯಹನತ್ಕ್ರುದ್ಧಸ್ತೋತ್ತ್ರೈರಿವ ಮಹಾದ್ವಿಪಂ||
ಅವನು ಕ್ರುದ್ಧನಾಗಿ ಶಿಲಾಶಿತ ಹದ್ದಿನ ಗರಿಗಳ ಬಾಣಗಳಿಂದ ಸೌಬಲನನ್ನು ಅಂಕುಶದಿಂದ ಮಹಾಗಜವನ್ನು ತಿವಿಯುವಂತೆ ಹೊಡೆದು ನೋಯಿಸಿದನು.
09027046a ಉವಾಚ ಚೈನಂ ಮೇಧಾವೀ ನಿಗೃಹ್ಯ ಸ್ಮಾರಯನ್ನಿವ|
09027046c ಕ್ಷತ್ರಧರ್ಮೇ ಸ್ಥಿತೋ ಭೂತ್ವಾ ಯುಧ್ಯಸ್ವ ಪುರುಷೋ ಭವ||
ಮೇಧಾವೀ ಸಹದೇವನು ಅವನಿಗೆ ಹಿಂದಿನದನ್ನು ಸ್ಮರಿಸಿಕೊಡುವಂತೆ ಹೀಗೆ ಹೇಳಿದನು: “ಕ್ಷತ್ರಧರ್ಮದಲ್ಲಿ ಸ್ಥಿರನಾಗಿದ್ದುಕೊಂಡು ಯುದ್ಧಮಾಡಿ ಪುರುಷನಾಗು!
09027047a ಯತ್ತದಾ ಹೃಷ್ಯಸೇ ಮೂಢ ಗ್ಲಹನ್ನಕ್ಷೈಃ ಸಭಾತಲೇ|
09027047c ಫಲಮದ್ಯ ಪ್ರಪದ್ಯಸ್ವ ಕರ್ಮಣಸ್ತಸ್ಯ ದುರ್ಮತೇ||
ದುರ್ಮತೇ! ಮೂಢ! ಸಭಾತಲದಲ್ಲಿ ದಾಳಗಳನ್ನೆಸೆದು ಹೇಗೆ ನಗುತ್ತಿದ್ದೆಯೋ ಆ ಪಾಪಕರ್ಮದ ಫಲವೇನೆನ್ನುವುದನ್ನು ಈಗ ನೋಡು!
09027048a ನಿಹತಾಸ್ತೇ ದುರಾತ್ಮಾನೋ ಯೇಽಸ್ಮಾನವಹಸನ್ಪುರಾ|
09027048c ದುರ್ಯೋಧನಃ ಕುಲಾಂಗಾರಃ ಶಿಷ್ಟಸ್ತ್ವಂ ತಸ್ಯ ಮಾತುಲಃ||
ಹಿಂದೆ ನಮ್ಮನ್ನು ನೋಡಿ ನಗುತ್ತಿದ್ದ ದುರಾತ್ಮರು ಹತರಾದರು. ಕುಲಕ್ಕೆ ಅಗ್ನಿಪ್ರಾಯ ದುರ್ಯೋಧನ ಮತ್ತು ಅವನ ಮಾವನಾದ ನೀನು ಉಳಿದುಕೊಂಡಿರುವಿರಿ.
09027049a ಅದ್ಯ ತೇ ವಿಹನಿಷ್ಯಾಮಿ ಕ್ಷುರೇಣೋನ್ಮಥಿತಂ ಶಿರಃ|
09027049c ವೃಕ್ಷಾತ್ಫಲಮಿವೋದ್ಧೃತ್ಯ ಲಗುಡೇನ ಪ್ರಮಾಥಿನಾ||
ದೊಣ್ಣೆಯನ್ನು ಎಸೆದು ಮರದಿಂದ ಹಣ್ಣನ್ನು ಕೆಡಹುವಂತೆ ನಾನು ಇಂದು ಕ್ಷುರದಿಂದ ನಿನ್ನ ತಲೆಯನ್ನು ಕತ್ತರಿಸಿ ಕೆಡುಹಿ ಸಂಹರಿಸುತ್ತೇನೆ.”
09027050a ಏವಮುಕ್ತ್ವಾ ಮಹಾರಾಜ ಸಹದೇವೋ ಮಹಾಬಲಃ|
09027050c ಸಂಕ್ರುದ್ಧೋ ನರಶಾರ್ದೂಲೋ ವೇಗೇನಾಭಿಜಗಾಮ ಹ||
ಮಹಾರಾಜ! ಹೀಗೆ ಹೇಳಿ ಸಂಕ್ರುದ್ಧನಾದ ಮಹಾಬಲ ನರಶಾರ್ದೂಲ ಸಹದೇವನು ವೇಗದಿಂದ ಅವನನ್ನು ಆಕ್ರಮಣಿಸಿದನು.
09027051a ಅಭಿಗಮ್ಯ ತು ದುರ್ಧರ್ಷಃ ಸಹದೇವೋ ಯುಧಾಂ ಪತಿಃ|
09027051c ವಿಕೃಷ್ಯ ಬಲವಚ್ಚಾಪಂ ಕ್ರೋಧೇನ ಪ್ರಹಸನ್ನಿವ||
ಯುಧಾಂಪತಿ ದುರ್ಧರ್ಷ ಸಹದೇವನು ಅವನ ಬಳಿಸಾರಿ ಕ್ರೋಧದಿಂದ ಗಹಗಹಿಸಿ ನಗುತ್ತಿರುವನಂತೆ ಬಲವತ್ತಾಗಿ ಬಿಲ್ಲನ್ನು ಸೆಳೆದನು.
09027052a ಶಕುನಿಂ ದಶಭಿರ್ವಿದ್ಧ್ವಾ ಚತುರ್ಭಿಶ್ಚಾಸ್ಯ ವಾಜಿನಃ|
09027052c ಚತ್ರಂ ಧ್ವಜಂ ಧನುಶ್ಚಾಸ್ಯ ಚಿತ್ತ್ವಾ ಸಿಂಹ ಇವಾನದತ್||
ಹತ್ತು ಬಾಣಗಳಿಂದ ಶಕುನಿಯನ್ನೂ, ನಾಲ್ಕರಿಂದ ಅವನ ಕುದುರೆ-ಚತ್ರ-ಧ್ವಜ-ಧನುಸ್ಸುಗಳನ್ನೂ ಕತ್ತರಿಸಿ ಸಿಂಹದಂತೆ ಗರ್ಜಿಸಿದನು.
09027053a ಚಿನ್ನಧ್ವಜಧನುಶ್ಚತ್ರಃ ಸಹದೇವೇನ ಸೌಬಲಃ|
09027053c ತತೋ ವಿದ್ಧಶ್ಚ ಬಹುಭಿಃ ಸರ್ವಮರ್ಮಸು ಸಾಯಕೈಃ||
ಸಹದೇವನು ಧ್ವಜ-ಧನುಸ್ಸು-ಚತ್ರಗಳನ್ನು ತುಂಡರಿಸಲು ಸೌಬಲನು ಅನೇಕ ಸಾಯಕಗಳಿಂದ ಅವನ ಸರ್ವಮರ್ಮಗಳಿಗೆ ಹೊಡೆದನು.
09027054a ತತೋ ಭೂಯೋ ಮಹಾರಾಜ ಸಹದೇವಃ ಪ್ರತಾಪವಾನ್|
09027054c ಶಕುನೇಃ ಪ್ರೇಷಯಾಮಾಸ ಶರವೃಷ್ಟಿಂ ದುರಾಸದಾಂ||
ಮಹಾರಾಜ! ಅನಂತರ ಪ್ರತಾಪವಾನ್ ಸಹದೇವನು ಇನ್ನೊಮ್ಮೆ ದುರಾಸದ ಶರವೃಷ್ಟಿಯನ್ನು ಶಕುನಿಯ ಮೇಲೆ ಪ್ರಹರಿಸಿದನು.
09027055a ತತಸ್ತು ಕ್ರುದ್ಧಃ ಸುಬಲಸ್ಯ ಪುತ್ರೋ
ಮಾದ್ರೀಸುತಂ ಸಹದೇವಂ ವಿಮರ್ದೇ|
09027055c ಪ್ರಾಸೇನ ಜಾಂಬೂನದಭೂಷಣೇನ
ಜಿಘಾಂಸುರೇಕೋಽಭಿಪಪಾತ ಶೀಘ್ರಂ||
ಆಗ ಕ್ರುದ್ಧನಾದ ಸುಬಲನ ಪುತ್ರನು ಏಕಾಕಿಯಾಗಿ ಮಾದ್ರೀಪುತ್ರ ಸಹದೇವನನ್ನು ಸಂಹರಿಸಲು ಶೀಘ್ರವಾಗಿ ಸುವರ್ಣಭೂಷಿತ ಪ್ರಾಸದಿಂದ ಅವನ ಮೇಲೆ ಎರಗಿದನು.
09027056a ಮಾದ್ರೀಸುತಸ್ತಸ್ಯ ಸಮುದ್ಯತಂ ತಂ
ಪ್ರಾಸಂ ಸುವೃತ್ತೌ ಚ ಭುಜೌ ರಣಾಗ್ರೇ|
09027056c ಭಲ್ಲೈಸ್ತ್ರಿಭಿರ್ಯುಗಪತ್ಸಂಚಕರ್ತ
ನನಾದ ಚೋಚ್ಚೈಸ್ತರಸಾಜಿಮಧ್ಯೇ||
ಆಗ ಮಾದ್ರೀಸುತನು ಒಡನೆಯೇ ರಣಾಗ್ರದಲ್ಲಿ ಪ್ರಾಸವನ್ನು ಮೇಲೆತ್ತಿ ಹಿಡಿದಿದ್ದ ಅವನ ದುಂಡಾದ ಭುಜಗಳೆರಡನ್ನೂ ಭಲ್ಲದಿಂದ ಒಂದೇ ಬಾರಿಗೆ ಕತ್ತರಿಸಿ ಉಚ್ಛ ಸ್ವರದಲ್ಲಿ ಗರ್ಜಿಸಿದನು.
09027057a ತಸ್ಯಾಶುಕಾರೀ ಸುಸಮಾಹಿತೇನ
ಸುವರ್ಣಪುಂಖೇನ ದೃಢಾಯಸೇನ|
09027057c ಭಲ್ಲೇನ ಸರ್ವಾವರಣಾತಿಗೇನ
ಶಿರಃ ಶರೀರಾತ್ಪ್ರಮಮಾಥ ಭೂಯಃ||
ಆಗ ಶೀಘ್ರವಾಗಿ ಕೆಲಸಮಾಡಿ ಮುಗಿಸುವ ಸಹದೇವನು ಸಮಾಹಿತನಾಗಿ ಸುವರ್ಣಪುಂಖಗಳುಳ್ಳ ಸರ್ವ ಆವರಣಗಳನ್ನೂ ಅತಿಕ್ರಮಿಸಿ ಹೋಗಬಲ್ಲ ದೃಢವಾದ ಉಕ್ಕಿನ ಭಲ್ಲದಿಂದ ಶಕುನಿಯ ಶಿರವನ್ನು ಶರೀರದಿಂದ ಕೆಳಕ್ಕೆ ಕೆಡಹಿದನು.
09027058a ಶರೇಣ ಕಾರ್ತಸ್ವರಭೂಷಿತೇನ
ದಿವಾಕರಾಭೇನ ಸುಸಂಶಿತೇನ|
09027058c ಹೃತೋತ್ತಮಾಂಗೋ ಯುಧಿ ಪಾಂಡವೇನ
ಪಪಾತ ಭೂಮೌ ಸುಬಲಸ್ಯ ಪುತ್ರಃ||
ಚೆನ್ನಾಗಿ ಪ್ರಯೋಗಿಸಲ್ಪಟ್ಟ ಪಾಂಡವನ ಆ ಸುವರ್ಣಭೂಷಿತ ದಿವಾಕರನ ಪ್ರಭೆಯುಳ್ಳ ಶರದಿಂದ ಶಿರವನ್ನು ಕಳೆದುಕೊಂಡ ಸುಬಲನ ಪುತ್ರನು ರಣರಂಗದ ಮೇಲೆ ಬಿದ್ದನು.
09027059a ಸ ತಚ್ಚಿರೋ ವೇಗವತಾ ಶರೇಣ
ಸುವರ್ಣಪುಂಖೇನ ಶಿಲಾಶಿತೇನ|
09027059c ಪ್ರಾವೇರಯತ್ಕುಪಿತಃ ಪಾಂಡುಪುತ್ರೋ
ಯತ್ತತ್ಕುರೂಣಾಮನಯಸ್ಯ ಮೂಲಂ||
ಹೀಗೆ ಕುಪಿತ ಪಾಂಡುಪುತ್ರನು ಕುರುಗಳ ಅನ್ಯಾಯಕ್ಕೆ ಮೂಲನಾದ ಅವನ ಶಿರವನ್ನು ವೇಗವಾದ ಸುವರ್ಣಪುಂಖಗಳುಳ್ಳ ಶಿಲಾಶಿತ ಶರದಿಂದ ಕತ್ತರಿಸಿದನು.
09027060a ಹೃತೋತ್ತಮಾಂಗಂ ಶಕುನಿಂ ಸಮೀಕ್ಷ್ಯ
ಭೂಮೌ ಶಯಾನಂ ರುಧಿರಾರ್ದ್ರಗಾತ್ರಂ|
09027060c ಯೋಧಾಸ್ತ್ವದೀಯಾ ಭಯನಷ್ಟಸತ್ತ್ವಾ
ದಿಶಃ ಪ್ರಜಗ್ಮುಃ ಪ್ರಗೃಹೀತಶಸ್ತ್ರಾಃ||
ಶಿರವನ್ನು ಕಳೆದುಕೊಂಡು ಅಂಗಾಂಗಗಳು ರಕ್ತದಿಂದ ತೋಯ್ದುಹೋಗಿ ನೆಲದಮೇಲೆ ಮಲಗಿದ ಶಕುನಿಯನ್ನು ನೋಡಿ ನಿನ್ನ ಕಡೆಯ ಯೋಧರು ಭಯದಿಂದ ಸತ್ತ್ವವನ್ನೇ ಕಳೆದುಕೊಂಡು ಶಸ್ತ್ರಪಾಣಿಗಳಾಗಿಯೇ ದಿಕ್ಕುಪಾಲರಾದರು.
09027061a ವಿಪ್ರದ್ರುತಾಃ ಶುಷ್ಕಮುಖಾ ವಿಸಂಜ್ಞಾ
ಗಾಂಡೀವಘೋಷೇಣ ಸಮಾಹತಾಶ್ಚ|
09027061c ಭಯಾರ್ದಿತಾ ಭಗ್ನರಥಾಶ್ವನಾಗಾಃ
ಪದಾತಯಶ್ಚೈವ ಸಧಾರ್ತರಾಷ್ಟ್ರಾಃ||
ಮುಖವೊಣಗಿ, ಸಂಜ್ಞೆಗಳನ್ನು ಕಳೆದುಕೊಂಡಿದ್ದ, ಗಾಂಡೀವಘೋಷದಿಂದ ಮೃತಪ್ರಾಯರಾದವರಂತೆ ಭಯಾರ್ದಿತರಾಗಿದ್ದ, ರಥ-ಅಶ್ವ-ಗಜಗಳನ್ನು ಕಳೆದುಕೊಂಡಿದ್ದ ಅವರು ಧಾರ್ತರಾಷ್ಟ್ರನೊಂದಿಗೆ ಪದಾತಿಗಳಾಗಿಯೇ ಓಡಿ ಹೋಗುತ್ತಿದ್ದರು.
09027062a ತತೋ ರಥಾಚ್ಚಕುನಿಂ ಪಾತಯಿತ್ವಾ
ಮುದಾನ್ವಿತಾ ಭಾರತ ಪಾಂಡವೇಯಾಃ|
09027062c ಶಂಖಾನ್ಪ್ರದಧ್ಮುಃ ಸಮರೇ ಪ್ರಹೃಷ್ಟಾಃ
ಸಕೇಶವಾಃ ಸೈನಿಕಾನ್ ಹರ್ಷಯಂತಃ||
ಭಾರತ! ಹಾಗೆ ರಥದಿಂದ ಶಕುನಿಯನ್ನು ಕೆಳಗುರುಳಿಸಿ ಮುದಾನ್ವಿತ ಪಾಂಡವೇಯರು ಕೇಶವ ಮತ್ತು ಸೈನಿಕರೊಂದಿಗೆ ಪ್ರಹೃಷ್ಟರಾಗಿ ಶಂಖಗಳನ್ನೂದಿ ಹರ್ಷಿತರಾದರು.
09027063a ತಂ ಚಾಪಿ ಸರ್ವೇ ಪ್ರತಿಪೂಜಯಂತೋ
ಹೃಷ್ಟಾ ಬ್ರುವಾಣಾಃ ಸಹದೇವಮಾಜೌ|
09027063c ದಿಷ್ಟ್ಯಾ ಹತೋ ನೈಕೃತಿಕೋ ದುರಾತ್ಮಾ
ಸಹಾತ್ಮಜೋ ವೀರ ರಣೇ ತ್ವಯೇತಿ||
ಅವರೆಲ್ಲರೂ ಸಹದೇವನನ್ನು ಪ್ರಶಂಸಿಸುತ್ತಾ ಹೃಷ್ಟರಾಗಿ “ವೀರ! ಒಳ್ಳೆಯದಾಯಿತು! ನೀನು ವಂಚಕ ದುರಾತ್ಮ ಶಕುನಿಯನ್ನು ಅವನ ಪುತ್ರನೊಂದಿಗೆ ರಣದಲ್ಲಿ ಸಂಹರಿಸಿದೆ!” ಎಂದರು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಹ್ರದಪ್ರವೇಶಪರ್ವಣಿ ಶಕುನ್ಯುಲೂಕವಧೇ ಸಪ್ತವಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಹ್ರದಪವೇಶಪರ್ವದಲ್ಲಿ ಶಕುನ್ಯುಲೂಕವಧ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.
